ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ
_✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_
_ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ. ಶಿಲ್ಪಿಯು ಒಂದು ಕಲ್ಲನ್ನು ಹೇಗೆ ಸುಂದರವಾಗಿ ಕೆತ್ತನೆ ಮಾಡಿ ಒಂದು ಶಿಲೆಯಾಗಿ ತತ್ವ ರೂಪಿಸುತ್ತಾನೋ, ಅದೇ ರೀತಿ ಶಿಕ್ಷಕರು ವಿದ್ಯಾರ್ಥಿಯನ್ನು ತಿದ್ದಿ, ಶಿಕ್ಷಣವನ್ನು ನೀಡಿ ಒಬ್ಬ ಉತ್ತಮ ವ್ಯಕ್ತಿಯಾಗಿ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಅನನ್ಯವಾಗಿದೆ. ವಿದ್ಯಾರ್ಥಿಗಳನ್ನು ಅಜ್ಞಾನದಿಂದ ವಿಜ್ಞಾನದೆಡೆಗೆ ಸಾಗಿಸುವವರಾಗಿದ್ದಾರೆ ಶಿಕ್ಷಕರು._
_ವಿದ್ಯಾರ್ಥಿಯಾಗಿರುವವನ ಮೊದಲ ಕರ್ತವ್ಯವೆಂದರೆ ಶಿಕ್ಷಕರ ಬಗ್ಗೆ ಗೌರವ ಬೆಳೆಸಿಕೊಳ್ಳುವುದಾಗಿದೆ. ಪ್ರತಿಯೊಬ್ಬ ಶಿಕ್ಷಕರನ್ನು ಯಾವುದೇ ಭೇದ ಭಾವ ಇಲ್ಲದೆ ಸಮಾನ ರೀತಿಯಿಂದ ಗೌರವಿಸುವುದು ಕೂಡ ವಿದ್ಯಾರ್ಥಿಗಳ ಕರ್ತವ್ಯ. ಅಪಾರ ಅನುಭವದಿಂದ ಕೂಡಿದ ಅವರ ಬೋಧನೆಯಿಂದ ನಮ್ಮ ಜ್ಞಾನದ ಮಟ್ಟವನ್ನು ಹೆಚ್ಚಿಸಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಪ್ರತಿಯೊಬ್ಬ ವಿದ್ಯಾರ್ಥಿ ನೆನಪಿನಲ್ಲಿಡಬೇಕಾದ ಸಂಗತಿಯಾಗಿದೆ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಏಳಿಗೆಯನ್ನೇ ಬಯಸುತ್ತಾರೆ. ವಿವಿಧ ಜಾತಿ ಧರ್ಮಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದರೂ ಪ್ರತಿಯೊಬ್ಬರನ್ನೂ ಒಂದೆ ದೃಷ್ಟಿಕೋನದಿಂದಿರಿಸಿ ತನ್ನಲ್ಲಿರುವ ಅಪಾರ ಜ್ಞಾನವನ್ನು ವಿಧ್ಯಾರ್ಥಿಗಳಿಗೆ ದಾರೆಯೆರೆಯುತ್ತಾರೆ. ಅದೇ ರೀತಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿಯನ್ನು ತಲುಪಿದಾಗ ಪೋಷಕರಿಗಿಂತ ಹೆಚ್ಚು ಸಂಭ್ರಮ ಪಡುವವರು ಶಿಕ್ಷಕರಾಗಿದ್ದಾರೆ._
_ಹಿಂದಿನ ಕಾಲದಲ್ಲಿ ಗುರುವಿಗೆ ನೀಡುತ್ತಿದ್ದ ಗೌರವ ಇಂದು ಕಣ್ಮರೆಯಾಗುತ್ತಿದೆ. ಏಕಲವ್ಯ ತಮ್ಮ ಗುರುಗಳಾದ ದ್ರೋಣಾಚಾರ್ಯರು ಕೇಳಿದ ಗುರುದಕ್ಷಿಣೆಯನ್ನು ಒಂದು ಕ್ಷಣವೂ ಯೋಚಿಸದೆ ತನ್ನ ಹೆಬ್ಬೆರಳನ್ನೇ ಕತ್ತರಿಸಿ ಕೊಟ್ಟಿದ್ದಾನೆ. ಇಂದಿನ ಕಾಲದ ವಿದ್ಯಾರ್ಥಿಗಳು ಗುರುದಕ್ಷಿಣೆ ಕೊಡುವುದಿರಲಿ ಗುರುಗಳಿಗೆ ಗೌರವವನ್ನೇ ಕೊಡುವುದಿಲ್ಲ._
_ಇಂದಿನ ಕಾಲದಲ್ಲಿ ಶಿಕ್ಷಕರನ್ನೇ ನೋಡದೆ ಆನ್ಲೈನ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಇದರಿಂದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಬಾಂಧವ್ಯ ವಿದ್ಯಾರ್ಥಿಗಳಿಗೆ ನಷ್ಟ ಹೊಂದುತ್ತದೆ. ಅದೇ ರೀತಿ, ಹಲವಾರು ವ್ಯಸನಗಳಿಗೆ ಇಂದಿನ ಪ್ರಜ್ಞಾವಂತ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆಂಬುವುದೇ ವಿಷಾದದ ಸಂಗತಿ. ಈ ರೀತಿ ದಾರಿ ತಪ್ಪುತ್ತಿರುವ ವಿದ್ಯಾರ್ಥಿಗಳಿಗೆ ಯೋಗ್ಯ ಗುರುವಿನಿಂದ ಸರಿಯಾದ ಮಾರ್ಗದರ್ಶನ ದೊರೆಯದಿರುವುದೇ ಕಾರಣವೆನಿಸುತ್ತದೆ._
_ಭಾರತ ಕಂಡ ಅಗ್ರಗಣ್ಯ ಶಿಕ್ಷಕ, ಮಾಜಿ ರಾಷ್ಟಪತಿ, ಶಿಕ್ಷಣ ತಜ್ಣ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನುಮ ದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನಾಗಿ ಆಚರಣೆ ಗೈಯ್ಯಲಾಗುತ್ತಿದೆ. ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಸೇರಿಸಿಕೊಂಡು ನೈತಿಕತೆಯೊಂದಿಗೆ, ಶಿಸ್ತುಬದ್ಧ, ಸಂಸ್ಕಾರಯುತ, ಮೌಲ್ಯಯುತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿರುವ ಪ್ರತಿಯೊಬ್ಬ ಅಧ್ಯಾಪಕರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು._
Comments