ಅಹ್ಲು ಬೈತ್
📝 *_ಮುನೀರ್ ಸಖಾಫಿ,ಸಾಲೆತ್ತೂರು._*
ಅಹ್ಲು ಬೈತ್ ಎಂಬುವುದರ ಉದ್ದೇಶ ಎರಡು ರೂಪದಲ್ಲಿ ಇಮಾಮರು ವಿವರಿಸಿದ್ದಾರೆ.
1.ಎಲ್ಲಾ ಸತ್ಯ ವಿಶ್ವಾಸಿಗಳು.(ಅಂತ್ಯ ದಿನದ ವರೆಗೆ ಬರುವ ಎಲ್ಲಾ ವಿಶ್ವಾಸಿಗಳು ಒಳಪಡುವರು.)
2.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪಿತಾಮಹರಾದ ಅಬ್ದು ಮನಾಫ್ ಎಂಬವರ ಮಕ್ಕಳ ಪೈಕಿ ಹಾಶಿಂ ಮತ್ತು ಮುತ್ತಲಿಬ್ ಎಂಬ ಇಬ್ಬರು ಮಕ್ಕಳ ಸಂತಾನ ಪರಂಪರೆಯಲ್ಲಿರುವ ಸತ್ಯ ವಿಶ್ವಾಸಿಗಳಿಗೆ ಅಹ್ಲು ಬೈತ್ ಎನ್ನುವರು.(ಫತ್'ಹುಲ್ ಮುಈನ್ ,3)
ಈ ಎರಡನೇ ಅರ್ಥದಲ್ಲಿ ಹೇಳಿದವರಿಗೆ ಝಕಾತ್ ನೀಡುವುದು ನಿಷಿದ್ಧವಾಗಿದೆ.
ಇಮಾಮ್ ಶಾಫಿಈ (ರ) ಇದಕ್ಕೆ ಹಲವು ಪುರಾವೆಗಳನ್ನು ನೀಡಿದ್ದಾರೆ.
ಇಮಾಮ್ ಬುಖಾರಿ (ರ)ವರದಿ ಮಾಡಿದ ಹದೀಸಿನಲ್ಲಿ ಈ ರೀತಿ ಕಾಣಬಹುದು.
عن جبير بن مطعم قال مشيت أنا وعثمان بن عفان إلى رسول الله صلى الله عليه وسلم فقلنا يا رسول الله أعطيت بني المطلب وتركتنا ونحن وهم منك بمنزلة واحدة فقال رسول الله صلى الله عليه وسلم إنما بنو المطلب وبنو هاشم شيء واحد قال الليث حدثني يونس وزاد قال جبير ولم يقسم النبي صلى الله عليه وسلم لبني عبد شمس ولا لبني نوفل
(صحيح البخاري)
ಜುಬೈರ್ ಬಿನ್ ಮುತ್'ಯಿಮ್ (ರ)ಹೇಳುತ್ತಾರೆ;ನಾನು ಮತ್ತು ಉಸ್ಮಾನ್ ಬಿನ್ ಅಫ್ಫಾನ್ (ರ) ರವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಕೇಳಿದೆವು.ತಾವು ಮುತ್ತಲಿಬ್'ನ ಮಕ್ಕಳಿಗೆ ಗನೀಮತ್ (ಯುದ್ಧದಲ್ಲಿ ಲಭಿಸಿದ ಸಂಪತ್ತಿನಿಂದ ನಿಗದಿತ ಸಂಖ್ಯೆ) ನೀಡಿದ್ದೀರಿ.ನಮಗೆ ನೀಡಿಲ್ಲ.ನಾವು ಕೂಡಾ ಅವರಂತೆಯೇ ಅಲ್ಲವೇ?
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು, ಹಾಶಿಂನ ಮಕ್ಕಳು ಮತ್ತು ಮುತ್ತಲಿಬ್ ನ ಮಕ್ಕಳು ಒಂದೇ ರೀತಿಯಾಗಿದ್ದಾರೆ.
(ಬುಖಾರಿ 3311).
(ಅಬ್ದು ಮನಾಫ್ ಗೆ 4 ಮಕ್ಕಳಿದ್ದರು.
1.ಹಾಶಿಂ.
2.ಅಬ್ದ್ ಶಂಸ್
3.ಮುತ್ತಲಿಬ್
4.ನೌಫಲ್.
ಉಸ್ಮಾನ್ (ರ)ರವರು
ಈ ಪೈಕಿ ಅಬ್ದ್ ಶಂಸ್ ಎಂಬವರ ಪರಂಪರೆಯಲ್ಲಿ ಜನಿಸಿದವರಾಗಿದ್ದಾರೆ.
ಅವರ ಪರಂಪರೆಯನ್ನು ಈ ರೀತಿ ಓದಬಹುದಾಗಿದೆ.
1.ಉಸ್ಮಾನ್ (ರ)
2.ಅಫ್ಫಾನ್(ರ)
3.ಅಬುಲ್ ಆಸ್
4.ಉಮಯ್ಯತ್
5.ಅಬ್ದ್ ಶಂಸ್.
ಝಕಾತ್ ನೀಡಲ್ಪಡದ ವ್ಯಕ್ತಿಗಳಿಗೆ ಗನೀಮತ್ ನೀಡಲಾಗುತ್ತಿತ್ತು.
ಅಬ್ದು ಮನಾಫ್ ನ ಮಕ್ಕಳ ಪರಂಪರೆಯಲ್ಲಿರುವ ಅಹ್ಲು ಬೈತ್ ಗಳಿಗೆ ಝಕಾತ್ ನೀಡಲಾಗುತ್ತಿರಲಿಲ್ಲ.ಉಸ್ಮಾನ್ (ರ)ಈ ಹೇಳಿದ ಅಹ್ಲ್ ಬೈತ್ ಗೆ ಸೇರಿದವರಾಗಿರಲಿಲ್ಲ.
ಮತ್ತೊಬ್ಬರಾದ ಜುಬೈರ್ ಬಿನ್ ಮುತ್'ಯಿಮ್ (ರ)ಎಂಬವರು ಅಬ್ದು ಮನಾಫ್ ನ ನೌಫಲ್ ಎಂಬವರ ಪರಂಪರೆಯಲ್ಲಿ ಜನಿಸಿದವರು.ಅವರೂ ಕೂಡಾ ಅಹ್ಲು ಬೈತ್ ಗೆ ಸೇರಿದವರಾಗಿರಲಿಲ್ಲ.ಆದುದರಿಂದಲೇ ಈ ಇಬ್ಬರಿಗೂ ಗನೀಮತ್ ನೀಡಿಲ್ಲ.)
ಇಮಾಮ್ ಮುಸ್ಲಿಂ (ರ)ವರದಿ ಮಾಡಿದ ಹದೀಸ್ ನೋಡಿ,
قال لنا إن هذه الصدقات إنما هي أوساخ الناس وإنها لا تحل لمحمد ولا لآل محمد (مسلم)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು;ಖಂಡಿತವಾಗಿಯೂ ಇದು (ಝಕಾತ್)ಜನರ ಕೊಳೆಯಾಗಿದೆ.ಇದು ಮುಹಮ್ಮದ್ (ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ)ಮತ್ತು ಅವರ ಕುಟುಂಬಕ್ಕೂ ಅನುವದನೀಯವಲ್ಲ.
(ಮುಸ್ಲಿಂ 2531)
ಇಮಾಮ್ ತ್ವಬ್'ರಾನಿ ವರದಿ,
عن ابن عباس رضي الله عنهما
من أن رسول الله صلى الله عليه وسلم قال لابني عمه: (لا يحل لكما أهل البيت من الصدقات شيء، ولا غسالة أيدي الناس، إن لكم في خمس الخمس لما يكفيكم(طبراني في الكبير)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು.
ಓ ಅಹ್ಲು ಬೈತ್! ಜನರ ಕೊಳೆಯಾದ ಝಕಾತ್ ನಾನು ನಿಮಗೆ ಹಲಾಲ್ ಗೊಳಿಸಲಾರೆ.ನಿಮಗೆ ಐದರಲ್ಲೊಂದರ ಐದು ಭಾಗ (ಗನೀಮತ್ ನ ನಿಗದಿತ ಸಂಖ್ಯೆ) ನೀಡಲಾಗುವುದು.
(ತ್ವಬ್ ರಾನಿ11543)
*ಮೇಲೆ ಹೇಳಿದ ಹದೀಸುಗಳಿಂದ ಈ ಕೆಳಗಿನ ಕಾರ್ಯಗಳು ಸ್ಪಷ್ಟವಾಯಿತು.*
*1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುಟುಂಬಕ್ಕೆ ಝಕಾತ್ ನೀಡುವುದು ನಿಷಿದ್ಧವಾಗಿದೆ.*
*2.ಝಕಾತ್ ನೀಷೇಧ ಮಾಡಲ್ಪಟ್ಟದ್ದು ಹಾಶಿಂ ಮತ್ತು ಮುತ್ತಲಿಬ್ ನ ಸಂತಾನ ಪರಂಪರೆಯಲ್ಲಿರುವ ಮಕ್ಕಳಿಗಾಗಿದೆ.*
*3.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುಟುಂಬವೆಂಬುವುದರ ತಾತ್ಪರ್ಯ ಹಾಶಿಂ ಮತ್ತು ಮುತ್ತಲಿಬ್ ನ ಸಂತಾನ ಪರಂಪರೆಯಲ್ಲಿರುವ ಸತ್ಯ ವಿಶ್ವಾಸಿಗಳಾಗಿದ್ದಾರೆ.*
ಅಲ್ಲಾಹನು ಹೇಳುತ್ತಾನೆ,
إِنَّمَا يُرِيدُ اللَّهُ لِيُذْهِبَ عَنكُمُ الرِّجْسَ أَهْلَ الْبَيْتِ وَيُطَهِّرَكُمْ تَطْهِيرًا (الاحزاب 33)
ಓ ಅಹ್ಲ್ ಬೈತ್! ನಿಮ್ಮಿಂದ ಮಾಲಿನ್ಯ ನೀಗಿಸಲು ಮತ್ತು ನಿಮ್ಮನ್ನು ಸರಿಯಾಗಿ ಶುದ್ಧೀಕರಿಸಲು ಮಾತ್ರ ಅಲ್ಲಾಹನು ಇಛ್ಛೆಪಡುತ್ತಾನೆ.(ಅಹ್'ಝಾಬ್ 33)
ಇದರ ವ್ಯಾಖ್ಯಾನದಲ್ಲಿ ಉಮರ್ ಬಿನ್ ಅಬೀ ಸಲಮ (ರ) ಈ ರೀತಿ ವರದಿ ಮಾಡುತ್ತಾರೆ.
نزلت هذه الآية على النبي صلى الله عليه وسلم إنما يريد الله ليذهب عنكم الرجس أهل البيت ويطهركم تطهيرا في بيت أم سلمة فدعا النبي صلى الله عليه وسلم فاطمةوحسنا وحسينا فجللهم بكساء وعلي خلف ظهره فجلله بكساء ثم قال اللهم هؤلاء أهل بيتي فأذهب عنهم الرجس وطهرهم تطهيرا
(ترمذي3205)
ಉಮ್ಮು ಸಲಮ ಬೀವಿ(ರ)ಮನೆಯಲ್ಲಾಗಿದೆ ಪ್ರಸ್ತುತ ಆಯತ್ ಅವತೀರ್ಣಗೊಂಡದ್ದು.ಆಗ ಒಂದು ಕಂಬಳಿಯೊಳಗೆ ಅಲೀ(ರ)ಫಾತಿಮಾ (ರ),ಹಸನ್(ರ),ಹುಸೈನ್ (ರ) ರನ್ನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಸೇರಿಸಿ ಈ ರೀತಿ ಪ್ರಾರ್ಥಿಸಿದರು;"ಅಲ್ಲಾಹನೇ!ಇವರಾಗಿದ್ದಾರೆ ನನ್ನ ಅಹ್ಲು ಬೈತ್.ಆದುದರಿಂದ ಇವರಿಂದ ನೀನು ಮಾಲಿನ್ಯವನ್ನು ನೀಗಿಸು,ಇವರನ್ನು ನೀನು ಶುದ್ಧೀಕರಿಸು."
(ತುರ್'ಮುದ್ಸೀ 3205)
ಇಮಾಮ್ ತುರ್ಮುದಿ ವರದಿ;
يا أيها الناس إني قد تركت فيكم ما إن أخذتم به لن تضلوا ، كتاب الله وعترتي أهل بيتي
(ترمذي 3718)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ,
ಓ ಜನರೇ! ನಿಮ್ಮಿಂದ ನಾನು ಒಂದನ್ನು ತ್ಯಜಿಸಿ ಹೋಗಲಿದ್ದೇನೆ.ಅದನ್ನು ನೀವು ಬಿಗಿಯಾಗಿ ಹಿಡಿಯುವ ತನಕ ನೀವು ದಾರಿ ತಪ್ಪಲಾರಿರಿ. ಅದು ಅಲ್ಲಾಹನ ಕಿತಾಬ್(ಕುರ್'ಆನ್)ಮತ್ತು ನನ್ನ ಅಹ್ಲ್ ಬೈತ್.
(ತುರ್ಮುದ್ಸೀ 3718)
ಇಮಾಮ್ ಹಾಕಿಂ ರ ಮುಸ್ತದ್'ರಕ್ ನಲ್ಲಿ ಹೀಗಿದೆ;
يا ايها الناس اني تارك فيكم امرين لن تضلوا ان اتبعتموهما وهما كتاب الله واهل بيتي عترتي
(مستدرك 4577)
ಓ ಜನರೇ! ನಿಮ್ಮ ಬಳಿ 2 ಕಾರ್ಯಗಳನ್ನು ನಾನು ತ್ಯಜಿಸಿ ಹೋಗಲಿದ್ದೇನೆ.ಅವೆರಡನ್ನು ನೀವು ಅನುಸರಿಸುವ ಕಾಲದಲ್ಲಿ ನೀವು ದಾರಿ ತಪ್ಪಲಾರಿರಿ.ಅಲ್ಲಾಹನ ಕಿತಾಬ್ ಮತ್ತು ನನ್ನ ಅಹ್ಲು ಬೈತ್ ಆಗಿದೆ ಅದು.
(ಹಾಕಿಂ 4555)
ಇಮಾಮ್ ಅಹ್'ಮದ್ ವರದಿ ಮಾಡಿದ ಹದೀಸ್ ನೋಡಿ,
عن زيد بن ثابت قال قال رسول الله صلي الله عليه وسلم ،إني تارك فيكم خليفتين : كتاب الله، أهل بيتي ، وانهما لن يفترقا حتى يردا علي الحوض جميعا
(مسند احمد 21697)
ಝೈದ್ ಬಿನ್ ಸಾಬಿತ್ (ರ)ವರದಿ;
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು,ನಿಮ್ಮಲ್ಲಿ 2 ಪ್ರತಿನಿಧಿಗಳನ್ನು ತ್ಯಜಿಸಿ ನಾನು ಹೋಗಲಿದ್ದೇನೆ.ಅಲ್ಲಾಹನ ಗ್ರಂಥ ಮತ್ತು ನನ್ನ ಅಹ್ಲ್ ಬೈತ್ ಆಗಿದೆ ಅದು.ನನ್ನ ಹೌಳ್ ನ ಬಳಿ(ಹೌಳುಲ್ ಕೌಸರ್)ತಲುಪುವ ತನಕ ಅದು ಬಿಟ್ಟು ನಿಲ್ಲಲಾರದು.
(ಅಹ್'ಮದ್ 21697)
ಇಮಾಮ್ ಮುಸ್ಲಿಂ (ರ)ವರದಿ,
قام رسول الله صلى الله عليه وسلم يوما فينا خطيبا بماء يدعى خما بين مكة والمدينة فحمد الله وأثنى عليه ووعظ وذكر ثم قال أما بعد ألا أيها الناس فإنما أنا بشر يوشك أن يأتي رسول ربي فأجيب
وأنا تارك فيكم ثقلين أولهما كتاب الله فيه الهدى والنور فخذوا بكتاب الله واستمسكوا به فحث على كتاب الله ورغب فيه ثم قال وأهل بيتي أذكركم الله في أهل بيتي أذكركم الله في أهل بيتي أذكركم الله في أهل بيتي فقال له حصين ومن أهل بيته يا زيد ؟
أليس نساؤه من أهل بيته؟
قال نساؤه من أهل بيته ولكن أهل بيته من حرم الصدقة بعده قال ومن هم ؟
قال هم آل علي ،وآل عقيل ،وآل جعفر ،وآل عباس
قال كل هؤلاء حرم الصدقة ؟
قال نعم (مسلم )
ಝೈದ್ ಬಿನ್ ಅರ್'ಖಮ್ (ರ)ಹೇಳುತ್ತಾರೆ;
ಮಕ್ಕಾ ಮತ್ತು ಮದೀನದ ನಡುವೆ ಇರುವ 'ಕಮ್ಮ್' ಎಂಬ ಸ್ಥಳದಲ್ಲಿ ಒಂದು ಬಾವಿಯ ಸಮೀಪ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಭಾಷಣ ಮಾಡಿದರು.ಅದರಲ್ಲಿ ಹೀಗೆ ಹೇಳಿದರು,ನಿಶ್ಚಯವಾಗಿಯೂ ನಾನು ಮನುಷ್ಯನಾಗಿದ್ದೇನೆ.ನನ್ನ ಬಳಿ ದೇವ ದೂತ ಆಗಮಿಸುವ ಸಮಯವಾಗಿದೆ.ಬಂದರೆ ನಾನು ಕರೆಗೆ ಉತ್ತರಿಸುವೆ.
2 ಕಾರ್ಯ ನಿಮ್ಮ ಬಳಿ ತ್ಯಜಿಸಿ ನಾನು ಹೋಗಲಿದ್ದೇನೆ.ಒಂದು ಅಲ್ಲಾಹನ ಗ್ರಂಥ.ಅದರಲ್ಲಿ ಸನ್ಮಾರ್ಗ ಮತ್ತು ಪ್ರಕಾಶವಿದೆ.ಆದುದರಿಂದ ಅಲ್ಲಾಹನ ಗ್ರಂಥ ನೀವು ಬಿಗಿಯಾಗಿ ಹಿಡಿಯಿರಿ.ನನ್ನ ಅಹ್ಲು ಬೈತಾಗಿದೆ ಇನ್ನೊಂದು.ನನ್ನ ಅಹ್ಲ್ ಬೈತ್ ನ ವಿಷಯದಲ್ಲಿ ನಿಮಗೆ ಅಲ್ಲಾಹನನ್ನು ನಾನು ನೆನಪಿಸುತ್ತೇನೆ.
ಹೀಗೆ 3 ಸಲ ಹೇಳಿದರು.
ಇದು ಹೇಳಿದಾಗ ಹುಸೈನ್ (ರ)ರವರು ಝೈದ್ (ರ)ರೊಂದಿಗೆ ಕೇಳಿದರು;ಅಹ್ಲ್ ಬೈತ್ ಅಂದರೆ ಯಾರು?
ಪ್ರವಾದೀ ಪತ್ನಿಯರು ಅಹ್ಲ್ ಬೈತ್ ನಲ್ಲಿ ಒಳಪಡುವರೇ?
ಝೈದ್ (ರ)ಹೇಳಿದರು."ಪ್ರವಾದೀ ಪತ್ನಿಯರು ಅಹ್ಲು ಬೈತ್ ನಲ್ಲಿ ಒಳಪಡುವರು.
ಆದರೂ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಅಹ್ಲ್ ಬೈತ್ ಅವರ ವಫಾತ್ ನ ನಂತರ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆ."
ಆಗ ಹುಸೈನ್(ರ)ಕೇಳಿದರು;ಅದು ಯಾರು?
ಝೈದ್ (ರ)ಹೇಳಿದರು;"ಅವರು ಅಲೀ,ಉಖೈಲ್,ಜಅಫರ್,ಅಬ್ಬಾಸ್(ರ) ಇವರ ಸಂತಾನವಾಗಿದ್ದಾರೆ."
ಅವರು ಪುನಃ ಕೇಳಿದರು;ಇವರೆಲ್ಲರೂ ಝಕಾತ್ ತಡೆಯಲ್ಪಟ್ಟವರಾಗಿದ್ದಾರೆಯೇ?
ಝೈದ್(ರ) "ಹೌದು"ಎಂದು ಮರುತ್ತರಿಸಿದರು.
(ಮುಸ್ಲಿಂ 6378)
ಒಟ್ಟಿನಲ್ಲಿ ಮೇಲೆ ಹೇಳಿದ
ಹದೀಸಿನಿಂದ ಈ ಕಾರ್ಯಗಳು ಸ್ಪಷ್ಟವಾಯಿತು.
1.ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಅತೀ ಸಾಮಿಪ್ಯವಿರುವವರು ಅಹ್ಲು ಬೈತ್ ಆಗಿದ್ದಾರೆ.
2.ಅದರಲ್ಲಿ ಪ್ರವಾದಿ ವರ್ಯರ ಪತ್ನಿಯರು,ಮಕ್ಕಳು,ಅಳಿಯಂದಿರು ,ಸಂತಾನಗಳು ಎಲ್ಲಾ ಒಳಪಡುವರು.
3.ಅವರನ್ನೆಲ್ಲಾ ಗೌರವಿಸುವಂತೆ ಇಸ್ಲಾಂ ಆಜ್ಞಾಪಿಸಿದೆ.
4.ಅಲೀ ,ಜಅಫರ್,ಉಖೈಲ್,ಅಬ್ಬಾಸ್(ರ) ಎಂಬವರು ಹಾಗೂ ಅಂತ್ಯ ದಿನದ ವರೆಗೆ ಅವರ ಸಂತಾನ ಪರಂಪರೆಯಲ್ಲಿರುವ ಎಲ್ಲರಿಗೂ ಝಕಾತ್ ನೀಡುವುದು ನಿಷಿದ್ಧವಾಗಿದೆ.
5.ಇವರಿಗೆ ಅಹ್ಲ್ ಬೈತ್ ಎಂಬ ಉನ್ನತ ಪದವಿ ಇದೆ.
_*ಅಹ್ಲು ಬೈತ್ ಕೊನೆಗೊಂಡಿದೆಯೇ?*_
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪರಂಪರೆ ಕೊನೆಗೊಂಡಿಯೆಂದು ಕೆಲವರು ಹೇಳುವುದುಂಟು.ಅದು ಸತ್ಯಕ್ಕೆ ವಿರುದ್ಧವಾದ ವಾದವಾಗಿದೆ.
ಪ್ರವಾದೀ ಮೊಮ್ಮಗ ಹುಸೈನ್ (ರ) ಕರ್ಬಲ ಯುದ್ಧದಲ್ಲಿ ರಕ್ತಸಾಕ್ಷಿಯಾದ ವೇಳೆ ಅವರ ಮಕ್ಕಳೂ ಅದರಲ್ಲಿ ಮರಣಗೊಂಡಿದ್ದರು ಎಂದಾಗಿದೆ ಅವರ ವಾದ.
ವಾಸ್ತವದಲ್ಲಿ ಹುಸೈನ್ (ರ)ರವರ ಪುತ್ರ ಅಲಿಯ್ಯ್ ಝೈನುಲ್ ಆಬಿದೀನ್ ಎಂಬವರು ಜ್ವರ ಕಾರಣ ಕರ್ಬಲ ಯುದ್ಧದಲ್ಲಿ ಭಾಗವಹಿಸಿರಲಿಲ್ಲ.ಅವರ ನಂತರವೂ ಜೀವಿಸಿದ್ದರು.ಅವರಿಗೆ 14 ಮಕ್ಕಳಿದ್ದರು.
10 ಗಂಡು ಮಕ್ಕಳು ಮತ್ತು ನಾಲ್ಕು ಹೆಣ್ಣು ಮಕ್ಕಳು ಅವರಿಗಿದ್ದರು.ಇವರ ಮೂಲಕ ಸಯ್ಯಿದ್ ಕುಟುಂಬ ಅಂತ್ಯ ದಿನದ ವರೆಗೆ ನೆಲೆಗೊಳ್ಳುವುದು.
ಅಬೂದಾವೂದ್ (ರ)ವರದಿ ನೋಡಿ;
حدثنا أحمد بن محمد بن حنبل ثنا يعقوب بن إبراهيم بن سعد قال حدثني أبي عن الوليد بن كثير قال حدثني محمد بن عمرو بن حلحلة الدؤلي أن ابن شهاب حدثه
*أن علي بن الحسين* رضي الله عنهما حدثه أنهم حين قدموا المدينة من عند يزيد بن معاوية مقتل الحسين بن علي رضي الله عنهما لقيه المسور بن مخرمة فقال له هل لك إلي من حاجة تأمرني بها؟
قال: فقلت له :لا
قال: هل أنت معطي سيف رسول الله ﷺ؟ فإني أخاف أن يغلبك القوم عليه، وإيم الله لئن أعطيتنيه لا يخلص إليه أبدا حتى يبلغ إلى نفسي، إن علي بن أبي طالب رضي الله عنه خطب بنت أبي جهل على فاطمة رضي الله عنها ،فسمعت رسول الله ﷺ وهو يخطب الناس في ذلك على منبره هذا وأنا يومئذ محتلم فقال " إن فاطمة مني وأنا أتخوف أن تفتن في دينها "
(ابو داود 1772)
ಇಬ್ನ್ ಶಿಹಾಬ್ (ರ), ಮುಹಮ್ಮದ್ ಬಿನ್ ಅಮ್ರ್ ಬಿನ್ ಹಲ್'ಹತ್(ರ) ರೊಂದಿಗೆ ಹೇಳಿದರು;ಹುಸೈನ್ (ರ)ರವರ ಪುತ್ರ ಅಲೀ(ಝೈನುಲ್ ಆಬಿದೀನ್(ರ)ರವರು ) ಹುಸೈನ್ (ರ)ರನ್ನು ವಧಿಸಲ್ಪಟ್ಟ ನಂತರ ಯಝೀದನ ಬಳಿಯಿಂದ ಮದೀನಾಗೆ ಬಂದಾಗ ಮಿಸ್'ವರ್ ಬಿನ್ ಮಖ್'ರುಮ (ರ)ರವರು ಅವರನ್ನು ಕಂಡಾಗ ನಾನು ನಿಮಗೇನಾದರೂ ಮಾಡಿಕೊಡಬೇಕೆ? ಎಂದು ಕೇಳಿದರು.ಆಗ ಝೈನುಲ್ ಅಬಿದೀನ್ (ರ)ಹೇಳಿದರು;"ಬೇಡ".
ಮಿಸ್'ವರ್(ರ) ಕೇಳಿದರು;ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಡ್ಗ ನೀವು ನನಗೆ ನೀಡುವಿರಾ?
ಕಾರಣ ನಿಮ್ಮ ಕೈಯಿಂದ ಅಕ್ರಮವಾಗಿ ಅದನ್ನು ಜನರು ವಶಪಡಿಸುವುದನ್ನು ನಾನು ಹೆದರುತ್ತೇನೆ.
ಅಲ್ಲಾಹನಾಣೆ!ನೀವು ಅದನ್ನು ನನಗೆ ನೀಡುವುದಾದರೆ ಮರಣದ ತನಕ ನನ್ನಿಂದ ಯಾರಿಗೂ ಅದನ್ನು ಕೈವಶಪಡಿಸಲು ಸಾಧ್ಯವಿಲ್ಲ.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪ್ರೀತಿಯ ಪುತ್ರಿ ಫಾತಿಮಾ ಬೀವಿ ಇರುವಾಗಲೇ ಅಲಿಯ್ಯ್ (ರ) ರವರು ಅಬೂ ಜಹಲನ ಪುತ್ರಿಯನ್ನು ವಿವಾಹ ಆಲೋಚನೆ ನಡೆಸಿದಾಗ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಈ ಮಿಂಬರಿಗೆ ಹತ್ತಿ ಈ ರೀತಿ ಹೇಳಿದನ್ನು ನಾನು ಕೇಳಿದ್ದೇನೆ.
"ನಿಶ್ಚಯವಾಗಿಯೂ ಫಾತಿಮಾ (ರ)ನನ್ನ ಭಾಗವಾಗಿದ್ದಾಳೆ.ಅವರ ದೀನಿನ ಕಾರ್ಯದಲ್ಲಿ ಫಿತ್ನ ಉಂಟಾಗುವುದರಲ್ಲಿ ನಾನು ಹೆದರುತ್ತೇನೆ.
(ಅಬೂದಾವೂದ್ 1772)
ಹುಸೈನ್ (ರ)ರವರ ಪುತ್ರ ಝೈನುಲ್ ಅಬಿದೀನ್ (ರ)ಕರ್ಬಲ ಯುದ್ದದಲ್ಲಿ ಶಹೀದ್ ಆಗಿರಲಿಲ್ಲ.ನಂತರವೂ ಜೀವಿಸಿದ್ದರು ಎಂಬುವುದು ಇದರಿಂದ ಬಹಳ ಸ್ಪಷ್ಟವಾಯಿತು.
_*ಅಹ್ಲು ಬೈತ್ ನ ನಾಯಕ ಅಲೀ ಝೈನುಲ್ ಆಬಿದೀನ್ (ರ)*_
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಮೊಮ್ಮಗ ಹುಸೈನ್ (ರ)ರವರಿಗೆ 6 ಮಕ್ಕಳಿದ್ದರು.
ಅವರ ಹೆಸರು ಈ ಕೆಳಗಿನಂತಿದೆ.
*1*.ಅಲಿಯ್ಯ್ ಬಿನ್ ಅಲ್ ಹುಸೈನ್ ಅಲ್ ಅಕ್ಬರ್.(ರ)
*2*.ಅಲಿಯ್ಯುಲ್ ಅಸ್'ಗರ್(ರ)
*3*.ಜಅಫರ್(ರ)
*4*.ಅಬ್ದುಲ್ಲಾಹ್(ರ)
*5*.ಸಕೀನ(ರ)
*6*.ಫಾತಿಮಾ (ರ)
ಅಲಿಯ್ಯ್ ಎಂಬ ಹೆಸರಲ್ಲಿ ಹುಸೈನ್ (ರ)ರಿಗೆ ಇಬ್ಬರು ಮಕ್ಕಳಿದ್ದರು.
ಒಬ್ಬರು ಅಲಿಯ್ಯುಲ್ ಅಕ್ಬರ್ ಎಂಬ ನಾಮದಲ್ಲೂ ಮತ್ತೊಬ್ಬರು ಅಲಿಯ್ಯುಲ್ ಅಸ್'ಗರ್ ಎಂಬ ನಾಮದಲ್ಲೂ ತಿಳಿಯಲ್ಪಟ್ಟವರು.
ಕರ್ಬಲಾ ಯುದ್ದದ್ದಲ್ಲಿ ಹುಸೈನ್ (ರ)ರೊಂದಿಗೆ ಆ ಇಬ್ಬರು ಪುತ್ರರ ಪೈಕಿ ಅಲಿಯ್ಯುಲ್ ಅಕ್ಬರ್ ಎಂಬ ಹಿರಿಯ ಪುತ್ರನನ್ನು ಕೊಲ್ಲಲಾಗಿತ್ತು.
ಅಲಿಯ್ಯುಲ್ ಅಸ್'ಗರ್ ಎಂಬ ಅಲೀ ಝೈನುಲ್ ಆಬಿದೀನ್ (ರ)ರವರು ಜ್ವರ ಕಾರಣ ಮನೆಯೊಳಗಿದ್ದರು.ಅವರನ್ನು ಕೊಲ್ಲದೇ ಬಿಡಲಾಗಿತ್ತು.
ಇದನ್ನು ಇಮಾಮ್ ಇಬ್ನ್ ಸಅದ್ (ರ)ರವರು ತನ್ನ *ತ್ವಬಖಾತ್ ನ 5/211* ರಲ್ಲಿ ವಿವರಿಸಿದ್ದಾರೆ.
ಹುಸೈನ್ (ರ)ರಿಗೆ ಅಲೀ ಎಂಬ ಹೆಸರಲ್ಲಿ ಇಬ್ಬರು ಮಕ್ಕಳು ಇದ್ದ ಬಗ್ಗೆ ತಿಳುವಳಿಕೆ ಇಲ್ಲದ ಕೆಲವರು ಅಲೀ ಎಂಬ ಪುತ್ರನನ್ನು ಕರ್ಬಲಾದಲ್ಲಿ ಕೊಲ್ಲಲಾಗಿದೆಯೆಂದೂ ಅವರಿಗೆ ಮಕ್ಕಳಿರಲಿಲ್ಲವೆಂದೂ ಆದುದರಿಂದಲೇ ಪ್ರವಾದೀ ಪರಂಪರೆ ಕರ್ಬಲಾ ಯುದ್ದದ ಮೂಲಕ ಕೊನೆಗೊಂಡಿದೆಯೆಂದು ಹೇಳುತ್ತಾರೆ.ಇದು ಸತ್ಯಕ್ಕೆ ವಿರುಧ್ಧವಾಗಿದೆ.
ಪ್ರವಾದೀ ಕುಟುಂಬದ ನಾಯಕ ಅಲೀ ಝೈನುಲ್ ಆಬಿದೀನ್ (ರ)ರವರು ಕರ್ಬಲಾ ಯುದ್ಧದ ಬಳಿಕವೂ ಜೀವಿಸಿದ್ದರು.ಅವರಿಗೆ 14 ಮಕ್ಕಳಿದ್ದರೆಂದು ಮೇಲೆ ಹೇಳಲಾಗಿದೆ.
ತಾಬಿವುಗಳ ಪೈಕಿ ಪ್ರಮುಖರೂ,ಸೂಫೀ ವರ್ಯರೂ ಆಗಿದ್ದ ಅವರು ಸಜ್ಜಾದ್ (ಅತ್ಯಧಿಕ ಸುಜೂದ್ ನಿರ್ವಹಿಸುವವರು) ಝೈನುಲ್ ಆಬಿದೀನ್(ಆರಾಧಕರ ಸೌಂಧರ್ಯ)ಮುಂತಾದ ಹಲವಾರು ಗೌರವ ನಾಮಗಳಿಂದ ಕರೆಯಲ್ಪಟ್ಟವರು.
ಹಿಜರಿ 74 ನೇ ವರ್ಷದಲ್ಲಿ ಆ ಮಹಾನುಭಾವರು ಮದೀನದಲ್ಲಿ ಇಹಲೋಕ ತ್ಯಜಿಸಿದರು.ಜನ್ನತುಲ್ ಬಖೀಅದಲ್ಲಿ ಅವರನ್ನು ದಫನ ಗೊಳಿಸಲಾಯಿತು.
*(ತ್ವಬಖಾತು ಇಬ್ನಿ ಸಅದ್ 5/221)*
ಜಅಫರ್ ಬಿನ್ ಮುಹಮ್ಮದ್ (ರ)ಹೇಳುತ್ತಾರೆ;
ಹುಸೈನ್(ರ)ರನ್ನು ಕರ್ಬಲಾದಲ್ಲಿ ಕೊಲ್ಲಲ್ಪಡುವಾಗ ಅವರ ವಯಸ್ಸು 58,
ಅವರ ಪುತ್ರ ಅಲೀ ಝೈನುಲ್ ಅಬಿದೀನ್ ವಫಾತ್ ನ ವೇಳೆ ಅವರ ವಯಸ್ಸು 58,
ಅವರ ಪುತ್ರ ಮುಹಮ್ಮದ್ ಬಿನ್ ಅಲಿಯ್ಯ್ ರವರ ವಯಸ್ಸು 58,
ಅವರ ಪುತ್ರನಾದಾ ನಾನೂ ಕೂಡಾ 58 ವಯಸ್ಸಿನಲ್ಲೇ ಮರಣ ಹೊಂದುತ್ತೇನೆ.
ಸುಫ್'ಯಾನ್ (ರ)ಹೇಳುತ್ತಾರೆ.ಹೇಳಿದ ಅದೇ ರೀತಿ ಜಅಫರ್ (ರ)ರವರು 58 ನೇ ವಯಸ್ಸಿನಲ್ಲಿ ನಿಧನರಾದರು.
*(ಅಲ್ ಇಸ್ತೀಆಬ್ 1/118)*
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಪರಂಪರೆ ಅಂತ್ಯ ದಿನದ ವರೆಗೆ ನೆಲೆ ನಿಲ್ಲುವವು ಎಂದು ಪವಿತ್ರ ಖುರ್'ಆನ್ ಬಹಳ ಸ್ಪಷ್ಟವಾಗಿ ಹೇಳಿದೆ.
ಅಲ್ಲಾಹನು ಹೇಳುತ್ತಾನೆ,
انا اعطيناك الكوثر.فصل لربك وانحر.إن شانئك هو الابتر.
(الكوثر)
ಖಂಡಿತವಾಗಿಯೂ ತಮಗೆ ನಾವು ಕೌಸರ್ ನೀಡಿದ್ದೇವೆ.
ಆದುದರಿಂದ ತಮ್ಮ ಪ್ರಭುವಿಗೆ ನಮಾಝ್ ಮತ್ತು ಬಲಿ ಅರ್ಪಿಸಿರಿ.
ಖಂಡಿತವಾಗಿಯೂ ತಮ್ಮೊಂದಿಗೆ ವೈರತ್ವವಿಟ್ಟುಕೊಂಡವವನು ಮೂಲ ಕಡಿಯಲ್ಪಟ್ಟವನಾಗಿರುತ್ತಾನೆ.
(ಸೂರಾ ಅಲ್ ಕೌಸರ್ )
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಗಂಡು ಮಕ್ಕಳು ಚಿಕ್ಕ ಪ್ರಾಯದಲ್ಲೇ ಮರಣಹೊಂದಿದ್ದರಿಂದ ಶತ್ರುಗಳು ಅವರನ್ನು "ಅಬ್'ತರ್" (ಹಿಂಬಾಲಕವಿಲ್ಲದವನು) ಎನ್ನುತ್ತಿದ್ದರು.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿ ಕೊಟ್ಟ ಆಶಯ ಆದರ್ಶಗಳು ಅವರ ವಫಾತ್ ನ ಬಳಿಕ ಗಂಡು ಮಕ್ಕಳು ಇಲ್ಲದ ಕಾರಣ ನಾಮಾವಶೇಷವಾಗಬಹುದೆಂದು ಶತ್ರುಗಳು ಲೆಕ್ಕ ಹಾಕಿದ್ದರು.ಇದನ್ನು ಖಂಡಿಸಿಯಾಗಿದೆ ಖುರ್'ಆನಿನ ಸೂರಾ ಅಲ್ ಕೌಸರ್ ಅಧ್ಯಾಯ ಅವತೀರ್ಣವಾಗಿದ್ದು.
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಅಬ್'ತರ್ ಎಂದು ಅಪಹಾಸ್ಯ ಮಾಡಿದ "ಉಮಯ್ಯತ್" ಎಂಬವನೇ ಹಿಂಬಾಲಕನಿಲ್ಲದ ಅಬ್'ತರ್ ಎಂದು ಖುರ್'ಆನ್ ಹೇಳಿತು.ಹೊರತು ಅಬ್'ತರ್ ಪ್ರವಾದೀ ವರ್ಯರಲ್ಲ.
ಪ್ರವಾದೀ ಸಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ನಾವು ಕೌಸರ್ ನೀಡಿ ಅನುಗ್ರಹಿಸಿದ್ದೇವೆ ಎಂದು ಖುರ್'ಆನ್ ಹೇಳುತ್ತದೆ.
ಇಲ್ಲಿ ಕೌಸರ್ ಎಂಬುವುದಕ್ಕೆ ವಿಶಾಲವಾದ ಅರ್ಥವನ್ನು ಮುಫಸ್ಸಿರ್ ಗಳು ನೀಡಿದ್ದಾರೆ.
ಇಮಾಮ್ ರಾಝೀ(ರ)ಬರೆಯುವುದು ನೋಡಿ,
الأول: وهو المشهور والمستفيض عند السلف والخلف أنه نهر في الجنة،......
القول الثاني: أنه حوض والأخبار فيه مشهورة .......
والقول الثالث: الكوثر أولاده قالوا: لأن هذه السورة إنما نزلت رداً على من عابه عليه السلام بعدم الأولاد، فالمعنى أنه يعطيه نسلاً يبقون على مر الزمان، فانظر كم قتل من أهل البيت، ثم العالم ممتلئ منهم، ولم يبق من بني أمية في الدنيا أحد يعبأ به، ثم أنظر ،كم كان فيهم من الأكابر من العلماء كالباقر والصادق والكاظم والرضا عليهم السلام والنفس الزكية وأمثالهم.
(تفسير الكبير 32/334)
ಕೌಸರ್ ಅಂದರೆ ಸ್ವರ್ಗದಲ್ಲಿರುವ ಒಂದು ನದಿಯ ಹೆಸರು ಎಂಬುವುದು ಪ್ರಸಿದ್ಧವಾಗಿದೆ.
ಅದೇ ರೀತಿ ಹೌಳುಲ್ ಕೌಸರ್ ಎಂಬ ಅರ್ಥವನ್ನೂ ನೀಡಿದವರಿದ್ದಾರೆ.
ಮೂರನೇ ಅಭಿಪ್ರಾಯ ,ಕೌಸರ್ ಅಂದರೆ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಸಂತಾನಗಳಾಗಿವೆ.ಈ ಮೂರನೇ ವ್ಯಾಖ್ಯಾನ ಹೇಳಿದವರು ಅದಕ್ಕೆ ಹೇಳಿದ ಕಾರಣ ಈ ರೀತಿಯಾಗಿದೆ.
"ಗಂಡು ಮಕ್ಕಳು ಇಲ್ಲವೆಂದು ಹೇಳಿ ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನು ಪರಿಹಾಸ್ಯ ಮಾಡಿದವರಿಗೆ ಉತ್ತರವಾಗಿಯಾಗಿದೆ ಮೇಲಿನ ಅಧ್ಯಾಯ ಅವತೀರ್ಣಗೊಂಡದ್ದು.ಈ ಪ್ರಕಾರ ಸೂಕ್ತದ ಅರ್ಥ ,ಎಲ್ಲಾ ಕಾಲದಲ್ಲೂ ನೆಲೆನಿಲ್ಲುವ ಸಂತಾನವನ್ನು ಅಲ್ಲಾಹನು ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರಿಗೆ ನೀಡಿರುತ್ತಾನೆ ಎಂದಾಗಿದೆ".
ನೀನು ಆಲೋಚಿಸು!.
ಅಹ್ಲು ಬೈತಿನ ಎಷ್ಟೋ ಜನರನ್ನು ಕೊಲ್ಲಲ್ಪಡಲಾಗಿದೆ.ಆದರೂ ಕೂಡಾ ಇಂದು ಜಗತ್ತಿನಲ್ಲಿ ಅವರು ತುಂಬಿ ತುಳುಕುತ್ತಿದ್ದಾರೆ.ಗಂಡು ಮಕ್ಕಳಿಲ್ಲದ ಕಾರಣಕ್ಕೆ ಪರಿಹಾಸ್ಯ ಮಾಡಿದ ಉಮಯ್ಯತ್ ನ ಸಂತಾನದಲ್ಲಿ ಹೇಳಲ್ಪಡುವ ಒಬ್ಬನೇ ಒಬ್ಬ ವ್ಯಕ್ತಿ ಪ್ರಪಂಚದಲ್ಲಿ ಇಲ್ಲ.
ನೀನು ನೋಡು!
ಅಹ್ಲು ಬೈತಿನ ಎಷ್ಟೋ ಹಿರಿಯ ವ್ಯಕ್ತಿಗಳು ಉನ್ನತ ಆಲಿಂಗಳಾಗಿ ಪ್ರಪಂಚದಲ್ಲಿದ್ದರು.ಇಮಾಮ್ ಬಾಖಿರ್,ಸ್ವಾದಿಖ್,ಕಾಳಿಮ್,ರಿಲಾ (ರ)ಮುಂತಾದವರು ಅವರಲ್ಲಿ ಕೆಲವರು ಮಾತ್ರ.
(ತಫ್'ಸೀರುಲ್ ಕಬೀರ್ 32/334)
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಸಂತಾನ ಅಂತ್ಯ ದಿನದ ತನಕ ಇಲ್ಲಿ ನೆಲೆನಿಂತರೆ ಮಾತ್ರ ಈ ಅಧ್ಯಾಯಕ್ಕೆ ಇಲ್ಲಿ ಪ್ರಸಕ್ತಿ ಇರುವುದು.ಅವರ ಸಂತಾನ ಇಲ್ಲವಾದಲ್ಲಿ ಅಬ್'ತರ್ ಎಂದು ಗೇಲಿ ಮಾಡಿದವನಿಗೆ ಹೇಗೆ ತಾನೇ ಈ ಸೂಕ್ತ ಉತ್ತರವಾಗುವುದು?
ಒಟ್ಟಿನಲ್ಲಿ
ಪ್ರವಾದೀ ಸಲ್ಲಲ್ಲಾಹು ಅಲೈಹಿವಸಲ್ಲಮರ ಕುಟುಂಬವು ಪವಿತ್ರ ಕುಟುಂಬವಾಗಿದೆ.ಅವರಿಗೆ ಪಾವಿತ್ರ್ಯವಿದೆ.ಅವರ ಪರಂಪರೆಯು ಅಂತ್ಯ ದಿನದ ತನಕ ಇಲ್ಲಿ ನೆಲೆಗೊಳ್ಳುವವು ಎಂಬುವುದು ಪವಿತ್ರ ಖುರ್'ಆನ್ ,ಹದೀಸ್ ಮತ್ತು ಇಮಾಮರುಗಳ ಉದ್ಧರಣಿಗಳ ಮೂಲಕ ಸಾಬೀತಾದ ಸಂಗತಿಯಾಗಿದೆ.
ವಹ್ಹಾಬಿಗಳು ಮುಂಚೆ ಅಹ್ಲು ಬೈತ್ ಎಂಬ ಒಂದು ಕುಟುಂಬ ಇಲ್ಲ,ಸೆಯ್ಯಿದ್ ಗಳು/ಬೀವಿಗಳು ಎಂಬುವುದು ಇಲ್ಲ ಎಂದು ಹೇಳಿದವರು ಈಗೀಗ ಅವರೂ ಕೂಡಾ ಸೆಯ್ಯಿದ್ ಕುಟುಂಬವನ್ನು ಅಂಗೀಕರಿಸಿದ್ದಾರೆ.
2016 ಡಿಸೆಂಬರ್ ನಲ್ಲಿ ಮಂಗಳೂರಿನಲ್ಲಿ ತೋಕೆ ಉಸ್ತಾದ್ ಸಲಪಿಗಳೊಂದಿಗೆ ಸಂವಾದ ನಡೆಸಿದಾಗ ಸಲಪಿ ಮೌಲವಿ ಸಂವಾದದ ಮಧ್ಯೆ "ನಮ್ಮಲ್ಲೂ ತಂಙ್ಙಳ್ ಗಳಿದ್ದಾರೆ" (ಸ್ಟೇಜ್ ನಲ್ಲಿ ,ಸಲಪಿ ವಿಭಾಗದಲ್ಲಿ ಸೆಯ್ಯಿದ್ ಕುಟುಂಬದ ಒಬ್ಬರು ಸಲಪಿಯಿದ್ದರು)ಎಂದು ಹೇಳಿದ್ದು ಎಲ್ಲರಿಗೂ ತಿಳಿದಿರುವ ವಿಚಾರ.
*ಮುಗಿಯಿತು*
📝 *_ಮುನೀರ್ ಸಖಾಫಿ,ಸಾಲೆತ್ತೂರು._*
Comments
http://brtaslim.com/wp-content/uploads/2016/11/2016-11-25-AUDIO-00000272.mp3
496) Is Ahlul Bait’s people still living around the world? ಅಹ್ಲುಲ್ ಬೈತಿನ ಜನರು ಈಗಲೂ ಪ್ರಪಂಚದಲ್ಲಿದ್ದಾರೆಯೇ?
http://brtaslim.com/wp-content/uploads/2016/12/2016-11-27-AUDIO-00000290.mp3