ಉಂದುಲುಸ್: ಮುಸ್ಲಿಂ ಸ್ಪೇನ್
ಉಂದುಲುಸ್ ಬಗೆಗಿನ ಚರ್ಚೆಗಳು ಶುರುವಿಡಲು ಕಾರಣವಾದ ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಗೆ ಅಭಿನಂದನೆಗಳು. ಚರಿತ್ರೆಯಲ್ಲಿ ರಾಜಕೀಯವಾಗಿ ನಾವು ಹೇಗಿರಬೇಕು ಮತ್ತು ಹೇಗಿರಬಾರದು ಎಂಬ ಪಾಠವನ್ನು ಉಂದುಲುಸ್ ಬಹಳ ಪರಿಣಾಮಕಾರಿಯಾಗಿ ನಮಗೆ ಕಲಿಸಿ ಕೊಡುತ್ತದೆ. ಈ ಹೆಸರನ್ನು ನಾನು ಮೊದಲು ಕೇಳಿದ್ದು ಹತ್ತನೇ ತರಗತಿ ಮದರಸದ ಇತಿಹಾಸ ಪುಸ್ತಕದಲ್ಲಿ. ಕೋಡಂಬುಯ಼ ಬಾವಾ ಉಸ್ತಾದರ ತಾರೀಖುಲ್ ಇಸ್ಲಾಮ್ ಸಂಕ್ಷಿಪ್ತ ಗ್ರಂಥದ ಮೂರನೇ ಭಾಗದಲ್ಲಿ ಅವರು ಉಂದುಲುಸ್ ನ ಅಧ್ಯಾಯಗಳನ್ನು ಹೇಳುತ್ತಾರೆ. ಅಲ್ಲಿ ಬರುವ ಹೆಸರುಗಳಲ್ಲಿ ಹೆಚ್ಚಿನವು ನನ್ನ ನೆನಪಿನಲ್ಲಿ ಭದ್ರವಾಗಿದ್ದವು. ಮುಂದೆ ಮಲಯಾಳಂ ಪುಸ್ತಕ ಗಳ ಸಹವಾಸದಿಂದ ಮುಸ್ಲಿಂ ಸ್ಪೇನ್ ನ ಕುರಿತು ಹೆಚ್ಚಿಗೆ ತಿಳಿಯಲು ಸಾಧ್ಯವಾಯಿತು. ಅದರಲ್ಲೂ ಪ್ರಮುಖವಾಗಿ ಸ್ಪೈನಿಲೆ ಪ್ರತಿಭಗಳ್, ಯೂರೋಪಿಯನ್ ನವೋತ್ಥಾನವುಂ ಮುಸ್ಲಿಂಗಳುಂ (ಡಾ ಹುಸೈನ್ ರಂಡತ್ತಾಣಿ), ಸ್ಪೈನ್ ತೀರಂಙಳಿಲ್ (ಅಬ್ದುಲ್ಲ ಫೈಝಿ ವೇಲಂ), ಅರಬಿಗಳುಡೆ ಚರಿತ್ರಂ (ಡಾ ಜಮಾಲ್ ಮುಹಮ್ಮದ್), ಇಸ್ಲಾಮುಂ ಓರಿಯಂಟಲಿಸ್ಟುಗಳುಂ (ಡಾ ಹುಸೈನ್ ರಂಡತ್ತಾಣಿ) ಮೊದಲಾದ ಪುಸ್ತಕಗಳ ಓದಿನಿಂದ ನೆನಪಿನಲ್ಲುಳಿದ ಒಂದಷ್ಟು ವಿಷಯಗಳನ್ನು ಬರೆದಿರುವೆ. ಇಂದು (26 ಜನವರಿ 2019 ಶನಿವಾರ) ನಡೆಯುವ ರಾಜ್ಯ ಪ್ರತಿನಿಧಿ ಸಭೆಗೆ ಬರುವ ಕಾರ್ಯಕರ್ತರಿಗೆ ಇದು ಸಮರ್ಪಣೆ.
ಸುಮಾರು ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿ ಜಗತ್ತಿನಲ್ಲಿ ಆಧುನಿಕ ಕಾಲದ ಆರಂಭವಾಯಿತೆಂದು ಇತಿಹಾಸಕಾರರು ಹೇಳುತ್ತಾರೆ. ಮಾತ್ರವಲ್ಲದೆ ಆಧುನಿಕ ಕಾಲದ ಮೊದಲ ಜಾಗತಿಕ ಮಟ್ಟದ ಸಾಮ್ರಾಜ್ಯ ಎಂಬ ವಿಶೇಷಣವನ್ನು ಸ್ಪೈನ್ ಸಾಮ್ರಾಜ್ಯಕ್ಕೆ ಕೊಡುತ್ತಾರೆ ಕೂಡಾ. ಇದಕ್ಕೆ ಒಂದು ಕಾರಣವಿದೆ. ಸ್ಪೇನ್ ತನ್ನ ಸಾಮ್ರಾಜ್ಯ ಸ್ಥಾಪಿಸುವುದಕ್ಕೂ ಮುನ್ನ ಅಲ್ಲಿ ಮುಸ್ಲಿಮರ ಆಡಳಿತ ಜಾರಿಯಲ್ಲಿತ್ತು. ಕ್ರಿ.ಶ 711 ರಲ್ಲಿ ತಾರೀಖ್ ಬಿನ್ ಝಿಯಾದ್ ಮೊರೋಕ್ಕೋ ದಿಂದ ಜಿಬ್ರಾಲ್ಟರ್ ಜಲಸಂಧಿ ಪ್ರವೇಶಿಸುವುದರೊಂದಿಗೆ ಮುಸ್ಲಿಂ ಸ್ಪೇನ್ ನ ಉದಯವಾಯಿತು ಎನ್ನಬಹುದು. ಜಿಬ್ರಾಲ್ಟರ್ ಎಂಬ ಹೆಸರಿನ ಮೂಲ 'ಜಬಲುತ್ತಾರಿಖ್', ತಾರಿಖ್ ರ ಪರ್ವತ ಎಂದು ಅದರ ಅರ್ಥ. ಹಾಗೆ 711 ರಿಂದ 1491 ರ ವರೆಗೆ ಸುಮಾರು 780 ವರ್ಷಗಳ ಸುದೀರ್ಘ ಕಾಲದವರೆಗೆ ಸ್ಪೇನ್ ನಲ್ಲಿ ಇಸ್ಲಾಂ ನೆಲೆ ನಿಂತಿತ್ತು. ಒಂದರ್ಥದಲ್ಲಿ ಇಸ್ಲಾಮಿನ ಸುವರ್ಣಯುಗ ಅದು. ಅಂದಿನ ಸ್ಪೇನ್ ಗೆ ಮುಸ್ಲಿಂ ಇತಿಹಾಸಕಾರರು ಅಂದಲುಸ್ ಅಥವಾ ಉಂದುಲುಸ್ ಎಂದು ಹೆಸರಿಟ್ಟಿದ್ದರು. ಪ್ರವಾದಿ ನೂಹ್ (ಅ.ಸ) ರ ಕಾಲದ ಮಹಾಪ್ರಳಯದ ನಂತರ ಆ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರು ಅಂದಲುಸ್ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದರಿಂದ ಆ ಹೆಸರು ಬಂದಿತೆಂಬುದು ಊಹೆ. ಮುಸ್ಲಿಮರು ಅಲ್ಲಿಗೆ ಕಾಲಿಡುವ ಮುನ್ನ ಅಲ್ಲಿ ಕೆಲವು ಬುಡಕಟ್ಟು ಜನಾಂಗದವರು ತುಂಡು ತುಂಡು ಪ್ರದೇಶಗಳಲ್ಲಿ ನೆಲೆಸಿದ್ದರು. ಆ ಜನರು ತಮ್ಮ ಭೂಮಿಯನ್ನು ಇಸ್ಬಾನಿಯಾ ಎನ್ನುತ್ತಿದ್ದರು. ಇಸ್ಬಾನಿಯಾ ಎಂದರೆ ಪ್ರಾಚೀನ ರೋಮನ್ನರ ಒಬ್ಬ ಪ್ರಬಲ ಅರಸನ ಹೆಸರಿರಬಹುದು ಎನ್ನುತ್ತಾರೆ. ಹಾಗಾಗಿ ಕ್ರಿಸ್ತಪೂರ್ವ ಕಾಲಗಳಲ್ಲಿ ಅಲ್ಲಿ ರೋಮನ್ನರ ಪಾರುಪತ್ಯ ಬಹಳವಾಗಿ ಇತ್ತೆನ್ನಬಹುದು. ಅಂತೂ ಆ ಇಸ್ಬಾನಿಯಾ ರಾಜನ ಹೆಸರು ಮುಂದೆ ಇಸ್ಪಾನಿಯೋ ಆಗಿ ಇಂದಿನ ಸ್ಪೇನ್ ಅಥವಾ ಸ್ಪೈನ್ ಆಗಿದೆ. ಸ್ಪಾನಿಷ್ ಭಾಷೆಯನ್ನು ಸ್ಪೇನ್ ಜನರು 'ಇಸ್ಪಾನ್ಯೋಲ್' ಎನ್ನುತ್ತಾರೆ.
ಬುಡಕಟ್ಟು ಜನರ ಕೈಯಲ್ಲಿದ್ದ ಸ್ಪೇನ್ ದೇಶವನ್ನು ಜಗತ್ತಿನ ಅತಿ ಪ್ರಬಲ ಶಕ್ತಿಯಾಗಿ ಪರಿವರ್ತಿಸಿದ ಮುಸ್ಲಿಮರು ಯೂರೋಪಿಯನ್ ಸಾಮ್ರಾಜ್ಯಗಳ ಉದಯಕ್ಕೆ ಕಾರಣರಾದರು. ಇಂದಿನ ವೈಜ್ಞಾನಿಕ ವೈಭವಗಳ ಗುತ್ತಿಗೆಯನ್ನು ಯೂರೋಪಿಯನ್ನರು ಸ್ವತಃ ತಾವೇ ವಹಿಸುತ್ತಾರಾದರೂ ಅದರ ಹಿಂದಿನ ಮಹಾ ಕೈಂಕರ್ಯ ಎಂಟನೇ ಶತಮಾನದಿಂದ ಹದಿನೈದನೆಯ ಶತಮಾನದ ವರೆಗೆ ಉಂದುಲುಸ್ ಆಳಿದ ಮುಸ್ಲಿಮರದ್ದು ಎಂದರೆ ತಪ್ಪಾಗದು. ಮುಸ್ಲಿಮರ ಅಧೀನಕ್ಕೆ ಒಳಪಟ್ಟ ಮೊದಲ ಯೂರೋಪಿಯನ್ ರಾಷ್ಟ್ರ 'ಸ್ಪೇನ್'. ಮುಸ್ಲಿಂ ಸಂಸ್ಕೃತಿ ಯ ಪ್ರಭಾವ ಸ್ಪೇನ್‌ನ ಜನರಲ್ಲಿ ಆಳದಲ್ಲಿ ಬೇರೂರಿತು. ಅಸಂಖ್ಯಾತ ಕ್ರೈಸ್ತರು ತಮ್ಮ ಜ್ವಲಂತ ಸಮಸ್ಯೆಗಳಿಗೆ ಇಸ್ಲಾಮಿನಲ್ಲಿ ಪರಿಹಾರ ಕಂಡುಕೊಂಡರು. ಅವರು ತಂಡೋಪತಂಡವಾಗಿ ಇಸ್ಲಾಂ ಧರ್ಮಕ್ಕೆ ಬರಲಾರಂಭಿಸಿದರು. ಈ ಸಾಮೂಹಿಕ ಮತಾಂತರವು ಸ್ಪೇನ್ ನ ಕ್ರೈಸ್ತ ಪುರೋಹಿತರಿಗೆ ಭಾರೀ ತಲೆನೋವಾಯಿತು. ಈ ಕಾರಣದಿಂದ ಮುಸ್ಲಿಮರ ವಿರುದ್ಧ ರಹಸ್ಯ ತಂತ್ರ ನಡೆಸಲು ಅವರು ತೀರ್ಮಾನಿಸಿದರು.
ಈ ರಹಸ್ಯ ಪಿತೂರಿಗೆ ನೇತೃತ್ವ ವಹಿಸಿದ್ದು 'ಯೂಲೋಜಿಯಸ್' ಮತ್ತು 'ಅಲ್ ವಾರಸ್' ಎಂಬ ಇಬ್ಬರು ಪುರೋಹಿತರು. ಇಸ್ಲಾಂ ಧರ್ಮವನ್ನು ದೋಷಪೂರಿತವಾಗಿ ಚಿತ್ರೀಕರಿಸಲು ಅವರು ಹಲವು ಯೋಜನೆಗಳನ್ನು ರೂಪಿಸಿದರು. ಒಂದನೆಯದಾಗಿ, ಕ್ರೈಸ್ತ ಪುರೋಹಿತರ ಪ್ರತ್ಯೇಕ ಸಂಘದ ಅಧೀನದಲ್ಲಿ ಖುರ್‌ಆನ್ ಸೇರಿದಂತೆ ಇಸ್ಲಾಮಿನ ಇತರ ಗ್ರಂಥಗಳನ್ನು ಅವರು ಸ್ಪಾನಿಷ್ ಭಾಷೆಗೆ ಅನುವಾದ ಮಾಡಿದರು. ಇಸ್ಲಾಮಿನ ತತ್ವ ಸಂಹಿತೆಗಳು ಇತರರಲ್ಲಿ ಅಸಹ್ಯ ಹುಟ್ಟಿಸುವ ರೀತಿಯಲ್ಲಿ ಅವುಗಳನ್ನು ದುರ್ವ್ಯಾಖ್ಯಾನ ಮಾಡಿದರು. ಎರಡನೆಯದಾಗಿ, ತಮ್ಮದೇ ಗ್ರಂಥಗಳಲ್ಲಿ ಪ್ರವಾದಿ ಮುಹಮ್ಮದ್ ರನ್ನು ಕ್ರೂರನೆಂದು, ನಿಂದ್ಯನೆಂದೂ ನಿರೂಪಿಸಿದರು. ಕ್ರೈಸ್ತ ಧರ್ಮವನ್ನು ನಾಶಪಡಿಸಲು ಹೊರಟ ಸೈತಾನನೊಂದಿಗೆ ಪ್ರವಾದಿಯನ್ನು ಹೋಲಿಸಿದರು. ಅವರ ಹೆಚ್ಚಿನ ಗ್ರಂಥಗಳಲ್ಲಿ ಪ್ರವಾದಿಯನ್ನು ಒಬ್ಬ ಕಳ್ಳ ದೇವರೆಂದು ಬರೆದಿಟ್ಟರು. ತಮ್ಮ ವಾದಗಳನ್ನು ನ್ಯಾಯೀಕರಿಸಲು ಅವರು ಬೈಬಲ್ ನಿಂದ ಪುರಾವೆಗಳನ್ನು ಸೃಷ್ಟಿಸಿದರು. ಸ್ಪಾನಿಷ್ ಇತಿಹಾಸಕಾರ ಡೋಸಿ ಯ ಮಾತುಗಳಲ್ಲಿ ಹೇಳುವುದಾದರೆ; "ಇಸ್ಲಾಮಿನ ಸಂದೇಶವು ತಮ್ಮ ಕೈಗಳಿಗೆ ಸಿಕ್ಕಿದ ಮೇಲೂ ಕ್ರೈಸ್ತರು ಅದರ ಕುರಿತು ಪ್ರಾಮಾಣಿಕವಾಗಿ ಕಲಿಯಲು ಸಿದ್ಧರಾಗಲಿಲ್ಲ. ಆ ಧರ್ಮವನ್ನು ನೇರವಾಗಿ ಕಲಿಯುವ ಬದಲು ಪ್ರವಾದಿ ಮುಹಮ್ಮದ್ ರ ಕುರಿತು ಪ್ರಚಾರದಲ್ಲಿದ್ದ ಕಟ್ಟು ಕತೆಗಳನ್ನು ಅವರು ಕಣ್ಣು ಮುಚ್ಚಿ ನಂಬಿ ಬಿಟ್ಟರು"
ಈ ಕುಪ್ರಚಾರ ಯೂರೋಪಿನಾದ್ಯಂತ ವ್ಯಾಪಿಸಿ ಆಧುನಿಕ ಕಾಲದವರೆಗೂ ಅದು ಮುಂದುವರಿಯಿತು. ಆದರೆ ನವೋತ್ಥಾನದ ನಂತರ ಈ ನಂಬಿಕೆಗೆ ಗಣನೀಯ ಪ್ರಮಾಣದಲ್ಲಿ ಬದಲಾವಣೆ ಉಂಟಾಯಿತು. ಯೂರೋಪಿಯನ್ ವಿಶ್ವವಿದ್ಯಾಲಯಗಳಲ್ಲಿ ಓರಿಯಂಟಲಿಸ್ಟ್ ಅಧ್ಯಯನ ವಿಭಾಗ ತೆರೆದ ನಂತರ ಇಸ್ಲಾಮಿನ ಕುರಿತ ತಪ್ಪು ಗ್ರಹಿಕೆಗಳಿಗೆ ಕಡಿವಾಣ ಬಿತ್ತು. ಇಂಗ್ಲೀಷ್ ಇತಿಹಾಸಕಾರ ಆರ್ ಸ್ಕ್ವಾಬ್ ಹೀಗೆ ಹೇಳುತ್ತಾರೆ: "ಮಧ್ಯಪ್ರಾಚ್ಯದ ಕುರಿತ ಅಧ್ಯಯನದಲ್ಲಿ ಪ್ರಗತಿ ಹೊಂದಿದ ನಂತರವೇ ಯೂರೋಪಿಯನ್ನರಿಗೆ 'ಮನುಷ್ಯ' ಎಂಬ ಪದದ ಸರಿಯಾದ ಅರ್ಥ ತಿಳಿಯಲು ಸಾಧ್ಯವಾಯಿತು".
ಮುಸ್ಲಿಂ ಸ್ಪೇನ್ ಅಥವಾ ಉಂದುಲುಸ್ ಜಗತ್ತಿಗೆ ಹಲವು ಅಸಾಮಾನ್ಯ ಪ್ರತಿಭೆಗಳನ್ನು ಕೊಡುಗೆ ನೀಡಿದೆ. ತತ್ವಶಾಸ್ತ್ರ, ವೈದ್ಯಕೀಯ, ರಸಾಯನ ಶಾಸ್ತ್ರ, ಭಾಷಾ ವಿಜ್ಞಾನ, ಖಗೋಳ, ಭೂವಿಜ್ಞಾನ ಮೊದಲಾದ ವಿಷಯಗಳಲ್ಲಿ ಅನೇಕ ಪ್ರತಿಭಾವಂತ ವಿದ್ವಾಂಸರು ಉಂದುಲುಸ್ ನಲ್ಲಿ ಆಗಿ ಹೋಗಿದ್ದಾರೆ. ಕೇವಲ ಒಂದೆರಡು ಉದಾಹರಣೆ ಕೊಡುತ್ತೇನೆ; ಇಮಾಂ ಖುರ್ತುಬಿ (1214-1273) ಬಹಳ ಪ್ರಸಿದ್ಧ ವಿದ್ವಾಂಸರು. ಖುರ್‌ಆನ್ ವ್ಯಾಖ್ಯಾನಕಾರರು. ಖುರ್ತುಬಿ ಎಂದರೆ ಖುರ್ತುಬಾದವರು ಎಂದರ್ಥ. ಖುರ್ತುಬಾ ಎಂದರೆ ಕೊರಡೊಬಾ. ಅದೇ ರೀತಿ ಅರಬೀ ವ್ಯಾಕರಣ ಗ್ರಂಥ 'ಅಲ್‌ಫಿಯಾ' ದ ಕರ್ತೃ - ಇಬ್ನು ಮಾಲಿಕ್ ಉಂದುಲುಸ್ ನವರು. ಇನ್ನೂ ಅನೇಕ ವಿದ್ವಾಂಸರು ಉಂದುಲುಸ್ ನಲ್ಲಿ ಅಗ್ರಮಾನ್ಯರಾಗಿದ್ದರು. ಅಂದಿನ ಪ್ರತಿ ಊರಿನಲ್ಲಿ ಪ್ರತಿ ಗಲ್ಲಿಗಳಲ್ಲಿ ವಿದ್ವಾಂಸರಿದ್ದರು. ಪ್ರತಿ ಮನೆಯಲ್ಲಿ ಬೃಹದಾಕಾರದ ಗ್ರಂಥಾಲಯಗಳಿದ್ದವು. ಒಂದೇ ವಿಷಯದಲ್ಲಿ 50 ರಿಂದ 60 ಕಾಂಡಗಳಿರುವ ಗ್ರಂಥಗಳನ್ನು ಕೆಲವರು ಬರೆದಿದ್ದರು. ಇಬ್ನು ಹಯ್ಯಾನ್ ಎಂಬ ಇತಿಹಾಸ ತಜ್ಞ ಅಲ್ ಮುಬೀನ್ ಎಂಬ ಹೆಸರಿನಲ್ಲಿ ಸ್ಪೇನ್ ನ ಇತಿಹಾಸ ಗ್ರಂಥ ರಚಿಸಿದ್ದಾರೆ, ಅದು ಬರೋಬ್ಬರಿ 60 ಕಾಂಡಗಳನ್ನು ಹೊಂದಿದೆ. ಹೀಗೆ ಉಂಉಲುಸ್ ನ ವಿದ್ವಾಂಸರ ಮತ್ತು ಅವರ ಕೃತಿಗಳ ಅಧ್ಯಯನದಿಂದ ಇಸ್ಲಾಮಿನ ಗತವೈಭವವನ್ನು ತಿಳಿದುಕೊಳ್ಳಲು ಸಹಕಾರಿಯಾಗಬಹುದು.
ಮುಸ್ಲಿಮರ ಆಡಳಿತದಿಂದ ಸ್ಪಾನಿಷ್ ಭಾಷೆಯ ಮುಖಾಂತರ ಲ್ಯಾಟಿನ್ ಗೂ ಅಲ್ಲಿಂದ ಇಂಗ್ಲೀಷ್ ಭಾಷೆಗೂ ಹಲವು ಪದಗಳು ಆಮದಾಗಿವೆ. ಅಲ್ಕೋಹಾಲ್, ಅಲ್ಜೀಬ್ರಾ, ಅಲ್ಕೆಮಿ (ಕೆಮಿಸ್ಟ್ರಿ) ಮೊದಲಾದ ಆಧುನಿಕ ವಿಜ್ಞಾನ ಬಳಸುವ ಪಾರಿಭಾಷಿಕ ಪದಗಳಲ್ಲಿ ಹೆಚ್ಚಿನವು ಅರಬೀ ಮೂಲದ್ದು. ಪ್ರಾಚೀನ ಗ್ರೀಕರಿಂದ ಮತ್ತು ಭಾರತೀಯರಿಂದ ಕಲಿತ ವೈದ್ಯಕೀಯ ವಿದ್ಯೆಗಳನ್ನು ಗ್ರಂಥಗಳಲ್ಲಿ ಬರೆದಿಟ್ಟ ಮುಸ್ಲಿಮರು ಸ್ಪೇನ್ ಕಳೆದುಕೊಂಡಾಗ ಸಂಪೂರ್ಣ ವೈದ್ಯ ವಿಜ್ಞಾನವನ್ನು ಯೂರೋಪಿಯನ್ನರಿಗೆ ಬಿಟ್ಟು ಕೊಟ್ಟ ಹಾಗಾಯಿತು. ಶೈಕ್ಷಣಿಕವಾಗಿ ಏನೇನೂ ಮುಂದಿರದಿದ್ದ ಯೂರೋಪಿಯನ್ ದೇಶಗಳಿಂದ ವಿದ್ಯಾರ್ಥಿಗಳು ಸ್ಪೇನ್ ಗೆ ವಲಸೆ ಬಂದು ಅಲ್ಲಿ ಮುಸ್ಲಿಂ ಸುಲ್ತಾನರ ಅಧೀನದಲ್ಲಿ ವಿದ್ಯೆ ಕಲಿಯುತ್ತಿದ್ದರು. ಇತಿಹಾಸಕಾರ ರಾಬರ್ಟ್ ಬ್ರಿಫಾಲ್ಟ್ ಬರೆಯುತ್ತಾರೆ: "ಅಂದು ಯುರೋಪಿನ ದೇಶಗಳಲ್ಲೇ ಸ್ಪೇನ್ ನಲ್ಲಿ ಮಾತ್ರ ದೀಪವಿತ್ತು. ಅಸಂಖ್ಯಾತ ಯೂರೋಪಿಯನ್ ವಿದ್ಯಾರ್ಥಿಗಳು ಪತಂಗದಂತೆ ಸ್ಪೇನ್ ನತ್ತ ಹಾರಿ ಹೋಗುತ್ತಿದ್ದರು". ಮುಂದೆ ಮುಸ್ಲಿಮರ ಕೈಯಿಂದ ಸ್ಪೇನ್ ಯೂರೋಪಿಯನ್ನರು ವಶಪಡಿಸಿಕೊಂಡಾಗ ಈ ವಿದ್ಯಾರ್ಥಿಗಳ ಸೇವೆ ನಿರ್ಣಾಯಕವಾದವು. ಅದರ ಪರಿಣಾಮವನ್ನು ಜಗತ್ತು ಇಂದಿಗೂ ಅನುಭವಿಸುತ್ತಿದೆ.
~ ಸಿ ಯಂ ಹನೀಫ್ ಬೆಳ್ಳಾರೆ
Comments