ಪಳ್ಳಿ ದರ್ಸ್ ಪರಂಪರೆ : ಇಸ್ಲಾಮೀ ಗುರುಕುಲ ಪದ್ದತಿ
--------------------------------------
ಬ್ಯಾರಿ ಭಾಷೆಯಲ್ಲಿ ಪಳ್ಳಿ ಎಂದರೆ ಮಸೀದಿ ಮತ್ತು ದರ್ಸ್ ಎಂದರೆ ಪಾಠಶಾಲೆ. ಪ್ರಾಥಮಿಕ ಇಸ್ಲಾಮೀ ಶಿಕ್ಷಣ ನೀಡುವ ಪಾಠಶಾಲೆಗಳಿಗೆ ದರ್ಸ್ ಅಥವಾ ಮದ್ರಸಾ ಎನ್ನುತ್ತೇವೆ.ಉನ್ನತ ಧಾರ್ಮಿಕ ಶಿಕ್ಷಣ ನೀಡುವ ಅಂದರೆ ಆಲಿಂ ಶಿಕ್ಷಣ ನೀಡುವ ಸಂಸ್ಥೆಗಳಿಗೆ ಈಗ ಶರೀಅತ್ ಕಾಲೇಜು, ಅರೆಬಿಕ್ ಕಾಲೇಜು, ದಅ್‌ವಾ ಕಾಲೇಜು ಮುಂತಾದ ಹೆಸರುಗಳಿವೆ.ಇಲ್ಲೆಲ್ಲಾ ನೀಡುವ ಶಿಕ್ಷಣಗಳು ಹೆಚ್ಚು ಕಡಿಮೆ ಒಂದೇ ರೀತಿಯದ್ದು.ಈ ರೀತಿಯ ಕಾಲೇಜ್‌ಗಳು ಆರಂಭವಾಗುವ ಮುನ್ನವೂ ನಮ್ಮಲ್ಲಿ ಉಲಮಾಗಳಿದ್ದರು. ಅವರಿಗೆ ನಿರ್ದಿಷ್ಟವಾದ ಪದವಿಗಳಿರಲಿಲ್ಲ. ಆಗ ಹೆಚ್ಚಿನೆಲ್ಲಾ ಉಲಮಾಗಳು ತಮ್ಮ ಹೆಸರಿನ ಜೊತೆಗೆ ಮುಸ್ಲಿಯಾರ್ ಎಂಬ ಬಿರುದನ್ನು ಸ್ವಯಂ ಸೇರಿಸಿಬಿಡುತ್ತಿದ್ದರು.ವಾಸ್ತವದಲ್ಲಿ ಮುಸ್ಲಿಯಾರ್ ಎನ್ನುವುದು ಕೇರಳದ ಪೊನ್ನಾಣಿಯ ಮಕ್ದೂಮಿ ಇಸ್ಲಾಮೀ ಶಿಕ್ಷಣ ಸಂಸ್ಥೆಯಲ್ಲಿ ನೀಡುವ ಬಿರುದಾಗಿತ್ತು. ಆದರೆ ಮುಸ್ಲಿಯಾರ್ ಎನ್ನುವುದು ತನ್ನ ಸಂಸ್ಥೆಯಲ್ಲಿ ವಿದ್ಯಾರ್ಜನೆಗೈದು ಉತ್ತೀರ್ಣರಾದವರಿಗೆ ನೀಡುತ್ತಿದ್ದ ಪದವಿಯಾದರೂ ಆ ಸಂಸ್ಥೆ ಅದಕ್ಕೆ ತನ್ನ ಕಾಪಿರೈಟ್ ಕ್ಲೈಮ್ ಮಾಡಲು ಹೋಗದಿದ್ದುದರಿಂದ ಅಂದಿನಿಂದ ಇಂದಿನವರೆಗೂ ನಿರ್ದಿಷ್ಟ ಇಸ್ಲಾಮಿಕ್ ಶಿಕ್ಷಣಾಲಯದ ಪದವಿ ಪಡೆಯದ ಎಲ್ಲಾ ಆಲಿಂಗಳೂ ಅದನ್ನೇ ತಮ್ಮ ಹೆಸರಿನೊಂದಿಗೆ ಸೇರಿಸುತ್ತಿದ್ದರು. ಅವರು ಮಾತ್ರವಲ್ಲದೇ ಹಳೇ ಕಾಲದಲ್ಲಿ ಉನ್ನತ ಇಸ್ಲಾಮಿ ಶಿಕ್ಷಣಾಲಯಗಳಲ್ಲಿ ಪದವಿ ಪಡೆದ ಶ್ರೇಷ್ಠ ಉಲಮಾಗಳೂ ಕೂಡಾ ತಮ್ಮ ಹೆಸರಿನ ಜೊತೆಗೆ ತಮ್ಮ ಪದವಿಯನ್ನು ಬಳಸದೇ ಮುಸ್ಲಿಯಾರ್ ಎಂದೇ ಬಳಸುತ್ತಾರೆ.ಉದಾಹರಣೆಗೆ : ಎ.ಪಿ.ಅಬೂಬಕರ್ ಮುಸ್ಲಿಯಾರ್ , ಬೇಕಲ ಇಬ್ರಾಹಿಂ ಮುಸ್ಲಿಯಾರ್,ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಅಹ್ಮದ್ ಬಾವ ಮುಸ್ಲಿಯಾರ್, ಮಿತ್ತಬೈಲ್ ಜಬ್ಬಾರ್ ಮುಸ್ಲಿಯಾರ್ ಇವರೆಲ್ಲಾ ತಮಿಳುನಾಡಿನ ವೆಲ್ಲೂರಿನಲ್ಲಿರುವ ದಕ್ಷಿಣ ಭಾರತದ ಪ್ರಾಚೀನ ಶರೀಅತ್ ಕಾಲೇಜಾದ ಬಾಖಿಯಾತುಸ್ವಾಲಿಹಾತ್‌ನಲ್ಲಿ ವ್ಯಾಸಂಗ ಮಾಡಿ ಬಾಖವಿ ಬಿರುದು ಪಡೆದವರು.ಅವರ್ಯಾರೂ ಬಾಖವಿ ಎಂಬ ತಮ್ಮ ಬಿರುದನ್ನು ತಮ್ಮ ಹೆಸರಿನ ಜೊತೆ ಹಾಕುತ್ತಿರಲಿಲ್ಲ. ಅವರೆಲ್ಲಾ ಮುಸ್ಲಿಯಾರ್ ಎಂದೇ ಸೇರಿಸಿ ಬರೆಯುತ್ತಿದ್ದರು. ಆ ನಂತರದ ತಲೆಮಾರಿನ ಉಲಮಾಗಳು ಬಾಖವಿ ಎಂದೇ ತಮ್ಮ ಬಿರುದನ್ನು ಹೆಸರಿನ ಜೊತೆ ಸೇರಿಸಿ ಬರೆಯತೊಡಗಿದರು.
ಇರಲಿ ನನ್ನ ಮುಖ್ಯ ವಿಷಯಕ್ಕೆ ಬರುತ್ತೇನೆ.ಹಿಂದಿನ ಕಾಲದ ಆಲಿಂಗಳಿಗೆ ನಿರ್ದಿಷ್ಟ ಪದವಿಯಿಲ್ಲದಿದ್ದರೂ ಮುಸ್ಲಿಯಾರ್ ಎಂದೇ ಹಾಕುತ್ತಿದ್ದರು. ಅವರೆಲ್ಲಾ ಯಾವುದಾದರೂ ಉನ್ನತ ವಿದ್ವಾಂಸರ ಶಿಷ್ಯತ್ವ ಸ್ವೀಕರಿಸಿ ಆ ವಿದ್ವಾಂಸ ಸೇವೆ ಸಲ್ಲಿಸುತ್ತಿದ್ದ ಮಸೀದಿಯಲ್ಲಿ ಉಸ್ತಾದರ ಜೊತೆಗಿದ್ದು ಶಿಕ್ಷಣ ಪಡೆಯುತ್ತಿದ್ದರು. ಅದನ್ನೇ ಪಳ್ಳಿ ದರ್ಸ್ ಎನ್ನುತ್ತಿದ್ದುದು.ಅದೊಂಥರಾ ಗುರುಕುಲ ಮಾದರಿ.ಹಾಗೆನ್ನಲು ಕಾರಣವೂ ಇದೆ. ಯಾವುದೇ ಒಬ್ಬ ಗುರುವಿನ ಶಿಷ್ಯರಾಗಿ ಒಂದು ಮಸೀದಿಯ ಪಳ್ಳಿದರ್ಸ್‌ಗೆ ಕಲಿಯಲು ಬರುವ ವಿದ್ಯಾರ್ಥಿಗಳು ಅವರ ಗುರು ಆ ಮಸೀದಿಯ ಕೆಲಸ ತೊರೆದು ಬೇರೆ ಮಸೀದಿಗೆ ಹೋದರೆ ಅವರ ಜೊತೆಯೇ ಹೋಗುತ್ತಾರೆ.ಅವರೆಲ್ಲಿ ಮತ್ತೆ ಕೆಲಸಕ್ಕೆ ಸೇರುತ್ತಾರೋ ಆ ಮಸೀದಿಗೆ ಹೋಗುತ್ತಾರೋ ಆ ಮಸೀದಿಗೆ ತನ್ನ ಅಷ್ಟೂ ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಾರೆ. ಈ ಪಳ್ಳಿದರ್ಸ್‌ನ ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯವನ್ನು ಉಚಿತವಾಗಿ ಮಸೀದಿಯಲ್ಲೇ ಕಲ್ಪಿಸಲಾಗುತ್ತದೆ. ಅವರಲ್ಲಿ ಒಬ್ಬೊಬ್ಬ ವಿದ್ಯಾರ್ಥಿಯ ಊಟದ ಜವಾಬ್ದಾರಿಯನ್ನು ಜಮಾಅತಿನ ಒಂದೊಂದು ಮನೆಯವರು ಹೊತ್ತುಕೊಳ್ಳುತ್ತಾರೆ. ಈ ಪಳ್ಳಿ ದರ್ಸ್‌ನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ರಮಝಾನ್ ತಿಂಗಳಲ್ಲಿ ವಿವಿಧ ಮಸೀದಿಗಳಿಗೆ ಕಿರುಪ್ರವಚನ ನೀಡಲು ಹೋಗುತ್ತಾರೆ.ಈಗಿನ ಎಲ್ಲಾ ಪ್ರಸಿದ್ಧ ಪ್ರವಚನಕಾರರು ತಯಾರಾಗಿದ್ದೇ ಇಂತಹ ರಮಝಾನ್ ಕಿರುಪ್ರವಚನಗಳ ಮೂಲಕ.
ಹಾಗೆ ಪ್ರವಚನ ನೀಡಿದ ವಿದ್ಯಾರ್ಥಿಗಳಿಗೆ ಊರ ಜನ ಒಂದಷ್ಟು ದುಡ್ಡು ಸಂಗ್ರಹಿಸಿ ಕೊಡುತ್ತಾರೆ.ಆ ದುಡ್ಡಿನಿಂದಲೇ ಅವರು ತಮಗೆ ಬೇಕಾದ ಬಟ್ಟೆ ಬರೆ, ಅಧ್ಯಯನ ಗ್ರಂಥಗಳು,ಟಿಪ್ಪಣಿ ಪುಸ್ತಕಗಳು, ಪೆನ್ನು ಮತ್ತಿತರ ವಸ್ತುಗಳನ್ನು ಖರೀದಿಸುತ್ತಾರೆ. ಅವರ ಗುರುಗಳನ್ನು ಜಮಾಅತಿನ ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಆಹ್ವಾನಿಸುವಾಗ ಇವರಿಗೂ ಆಹ್ವಾನ ನೀಡುತ್ತಾರೆ.ಆಗ ಇವರಿಗೂ ಮನೆಯವರು ಒಂದಷ್ಟು ಭಕ್ಷೀಸು ಕೊಡುತ್ತಾರೆ.ಅದರಿಂದ
ಅವರಿಗೆ ಬೇಕಾದ ಸೋಪ್, ಪೇಸ್ಟ್ ಮತ್ತಿತರ ದಿನಬಳಕೆಯ ವಸ್ತುಗಳನ್ನು ಖರೀದಿಸುತ್ತಾರೆ.
ಹಿಂದೆಲ್ಲಾ ಒಬ್ಬ ಗುರುವಿನ ಬಳಿ ಹತ್ತು ಹನ್ನೆರಡು ವರ್ಷಗಳ ಕಾಲ ವ್ಯಾಸಂಗ ಮಾಡಿದ ಬಳಿಕ ಅವರ ಗುರುಗಳೇ ಅವರಿಗೆ ಉದ್ಯೋಗವನ್ನೂ ಮಾಡಿ ಕೊಡುತ್ತಿದ್ದರು. ಬರ ಬರುತ್ತಾ ಧಾರ್ಮಿಕ ಶಿಕ್ಷಣದಲ್ಲಿ ಪದವಿ ನೀಡುವ ಶಿಕ್ಷಣಾಲಯಗಳು ಆರಂಭವಾದವು.ಆ ಬಳಿಕ ಹತ್ತು ವರ್ಷಗಳ ಕಾಲ ಒಬ್ಬ ಗುರುವಿನ ಬಳಿ ಕಲಿತ ಬಳಿಕ ಧಾರ್ಮಿಕ ಪದವಿ ನೀಡುವ ಶಿಕ್ಷಣ ಸಂಸ್ಥೆಗಳಿಗೆ ಹೋಗಿ ಎರಡೋ ಮೂರೋ ವರ್ಷ ಕಲಿತು ಅಲ್ಲಿಂದ ಪದವಿ ಪಡೆಯುವ ಸಂಪ್ರದಾಯ ಆರಂಭವಾಯಿತು.
ಕರ್ನಾಟಕದ ಶಾಫಿಈ ಕರ್ಮಶಾಸ್ತ್ರ ವಿಭಾಗದ ಮೊದಲ ಶರೀಅತ್ ಕಾಲೇಜು :
ಶಾಫಿಈ ಕರ್ಮಶಾಸ್ತ್ರ ವಿಭಾಗದ ಕರ್ನಾಟಕದ ಮೊದಲ ಅರೆಬಿಕ್ ಕಾಲೇಜಾದ ಸಯ್ಯದ್ ಮದನಿ ಅರೆಬಿಕ್ ಕಾಲೇಜು ಉಳ್ಳಾಲದಲ್ಲಿ ಆರಂಭವಾಯಿತು.ಉಳ್ಳಾಲದಲ್ಲಿ ನೀಡುವ ಪದವಿಗೆ ಮದನಿ ಎಂದು ಹೆಸರು ನೀಡಲಾಯಿತು.
ಉಳ್ಳಾಲದಲ್ಲಿ ಪಳ್ಳಿ ದರ್ಸ್ ಆರಂಭವಾಗಿ ಸುಮಾರು ಅರುವತ್ತೈದು ವರ್ಷಗಳೇ ಸಂದವು.ಉಳ್ಳಾಲದಲ್ಲಿ ಮೊಟ್ಟ ಮೊದಲು ತಾಜುಲ್ ಉಲಮಾ ಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿಯವರು ಕಂಝುಲ್ ಉಲೂಂ ಮದ್ರಸಾ ಎಂಬ ಪಳ್ಳಿ ದರ್ಸ್ ಆರಂಭಿಸಿದರು. ಆ ಬಳಿಕ ಅಂದರೆ 1970ರಲ್ಲಿ ಅದನ್ನು ಸಯ್ಯದ್ ಮದನಿ ಅರೆಬಿಕ್ ಕಾಲೇಜಾಗಿ ಪರಿವರ್ತಿಸಲಾಯಿತು. 1970ಕ್ಕಿಂತ ಹಿಂದೆ ತಾಜುಲ್ ಉಲಮಾರ ಬಳಿ ಉಳ್ಳಾಲದ ಪಳ್ಳಿದರ್ಸ್‌ನಲ್ಲಿ ಕಲಿತ ತಾಯಕ್ಕೋಡ್ ಅಬ್ದುಲ್ಲ ಮುಸ್ಲಿಯಾರ್ ಮತ್ತು ಉಳ್ಳಾಲ ಅಹ್ಮದ್ ಬಾವ ಮುಸ್ಲಿಯಾರರು ಆ ಬಳಿಕ ತಮಿಳುನಾಡಿನ ವೆಲ್ಲೂರಿನಲ್ಲಿರುವ ಬಾಖಿಯಾತುಸ್ವಾಲಿಹಾತ್ ಇಸ್ಲಾಮೀ ವಿದ್ಯಾಲಯದಿಂದ ಬಾಖವಿ ಪದವಿ ಪಡೆದು ಮತ್ತೆ ಉಳ್ಳಾಲಕ್ಕೆ ಮರಳಿ ಉಳ್ಳಾಲದ ಸಯ್ಯದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆಗೆ ಸೇರಿದರು.
ಉಳ್ಳಾಲಕ್ಕಿಂತಲೂ ಮುಂಚೆಯೇ ಪಳ್ಳಿ ದರ್ಸ್ ಇದ್ದದ್ದು ಮಂಜನಾಡಿ ಮಸೀದಿಯಲ್ಲಿ ಎಂದು ಹಿರಿಯರು ಹೇಳುತ್ತಾರೆ. ಮಂಜನಾಡಿಯ ಪಳ್ಳಿ ದರ್ಸ್‌ಗೆ ಸುಮಾರು ಎಂಬತ್ತು ವರ್ಷಗಳ ಇತಿಹಾಸವಿದೆ.
ಕರ್ನಾಟಕದ ಮೊದಲ ಪಳ್ಳಿದರ್ಸ್ :
ಕರ್ನಾಟಕದ ಮೊದಲ ಪಳ್ಳಿ ದರ್ಸ್ ಆರಂಭವಾಗಿದ್ದು ಉಳ್ಳಾಲ ತಾಲೂಕಿನ ಕಿನ್ಯ ಎಂಬ ಹಳ್ಳಿಯಲ್ಲಿ. ಸುಮಾರು ನೂರ ಇಪ್ಪತ್ತು ವರ್ಷಗಳ ಹಿಂದೆ ಕೇರಳ ಕರ್ನಾಟಕ ಎಂದು ವಿಭಜನೆಯಾಗುವ ಮುನ್ನ ಕಿನ್ಯದ ಬೆಲ್ತೆ ಪಳ್ಳಿಯಲ್ಲಿ ಸಾತ್ವಿಕ ಉಲಮಾರೊಬ್ಬರು ಮೊಟ್ಟ ಮೊದಲು ಪಳ್ಳಿ ದರ್ಸ್ ಆರಂಭಿಸಿದರು. ಅದರ ಹೆಸರು ಅಲ್ ಮದ್ರಸತುಲ್ ಹಿದಾಯ. ಅದಕ್ಕಿಂತ ಹಿಂದೆ ಬ್ಯಾರಿಗಳು ಉನ್ನತ ಧಾರ್ಮಿಕ ಶಿಕ್ಷಣಕ್ಕಾಗಿ ಕೇರಳವನ್ನೇ ಆಶ್ರಯಿಸುತ್ತಿದ್ದರು.ಆಗ ಕರ್ನಾಟಕ ಕೇರಳ ಎಂಬ ವಿಭಜನೆ ಇರಲಿಲ್ಲ.ಆಗ ನಮ್ಮ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಈಗಿನ ಕೇರಳದ ದೊಡ್ಡ ಭಾಗ ಮದ್ರಾಸ್ ಪ್ರೆಸಿಡೆನ್ಸಿಗೊಳಪಟ್ಟಿತ್ತು.
ಕಿನ್ಯ ಮಸೀದಿಯೂ ಬಹಳ ಪುರಾತನವಾದುದು.ಅದಕ್ಕೆ ಸುಮಾರು ಆರುನೂರು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ.ಅದರ ಪುರಾತನ ಹೆಸರು ಬೆಲ್ತೆ ಪಳ್ಳಿ ( ಬಿಳಿ ಮಸೀದಿ). ಈ ಹೆಸರೇ ಒಂದು ವಿಶೇಷ.ಈ ಹೆಸರು ಯಾಕೆ ಇಟ್ಟಿರಬಹುದೆಂಬ ನಿರ್ದಿಷ್ಟ ಕಾರಣಗಳು ನನಗೆ ಸಿಕ್ಕಿಲ್ಲ. ಕಿನ್ಯ ಮತ್ತು ಮಂಜನಾಡಿ ಮಸೀದಿಯ ಕುರಿತಂತೆ ಕಿನ್ಯದ ಮರ್ಹೂಂ ಕೆ.ಬಿ.ಮಾಸ್ಟರ್ ಕಿರು ಹೊತ್ತಗೆಯನ್ನು ಬರೆದು ಪ್ರಕಟಿಸಿದ್ದರು. ಅವರು ಕಾಲವಾಗಿ ಸುಮಾರು ಹತ್ತು ವರ್ಷಗಳಿಗೂ ಹೆಚ್ಚಾಯಿತು. ಅವರು ಬರೆದು ಪ್ರಕಟಿಸಿದ ಕೃತಿಗಾಗಿ ನಾನು ಅನೇಕ ಕಡೆ ಹುಡುಕಾಡಿದೆನಾದರೂ ನನಗದು ಸಿಗಲಿಲ್ಲ. ಇದೇ ಕಿನ್ಯದಲ್ಲಿ ಹುಸೈನ್ ಮುಸ್ಲಿಯಾರ್ ಎಂಬ ಸೂಫಿ ಸಂತರು ಸುಮಾರು ಮುನ್ನೂರು ವರ್ಷಗಳ ಹಿಂದೆ ಬಂದು ನೆಲೆಸಿ ಅಲ್ಲಿ ಇಸ್ಲಾಮಿನ ಪುನರುತ್ಥಾನ ಕಾರ್ಯ ಮಾಡಿದರು. ಕಿನ್ಯದ ಪಳ್ಳಿ ದರ್ಸ್ ಈಗಿನ ಕರ್ನಾಟಕ ಪ್ರಾಂತ್ಯದ ಮೊಟ್ಟ ಮೊದಲ ಪಳ್ಳಿ ದರ್ಸ್ ಎಂದು ಗುರುತಿಸಲ್ಪಡುತ್ತಿದೆ. ಅಲ್ ಮದ್ರಸತುಲ್ ಹಿದಾಯದ ವಿಶೇಷವೇನೆಂದರೆ ಕನ್ನಡ ನಾಡಿನ ದೊಡ್ಡ ದೊಡ್ಡ ಉಲಮಾಗಳು ಪದವಿಗೂ ಮುನ್ನ ಪಳ್ಳಿದರ್ಸ್ ವ್ಯಾಸಂಗ ಮಾಡಿದ್ದು ಕಿನ್ಯದಲ್ಲಿ ಎನ್ನುವುದು ಕಿನ್ಯಾದ ಅಲ್ ಮದ್ರಸತುಲ್ ಹಿದಾಯದ ವಿಶೇಷತೆ. ಪ್ರಸ್ತುತ ಉಡುಪಿ- ಚಿಕ್ಕಮಗಳೂರು ಸಂಯುಕ್ತ ಖಾಝಿ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್, ಮರ್ಹೂಂ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಎನ್.ಎಂ.ಉಸ್ತಾದ್‌ರಂತಹ ವಿದ್ವಾಂಸರು ಕಿನ್ಯದಲ್ಲಿ ಶಿಕ್ಷಣ ಪಡೆದಿದ್ದರು.
ಈಗಲೂ ಕೆಲವೆಡೆ ಪಳ್ಳಿ ದರ್ಸ್‌ಗಳಿವೆಯಾದರೂ ಗಣನೀಯವಾಗಿ ಕಡಿಮೆಯಾಗಿವೆ.ಈಗ ಹೆಚ್ಚಿನ ಮುತಅಲ್ಲಿಮ್‌ಗಳು (ಇಸ್ಲಾಮೀ ವಿದ್ಯಾರ್ಥಿಗಳು) ಸಮನ್ವಯ ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಪಳ್ಳಿ ದರ್ಸ್‌ಗಳಿರುವೆಡೆಯಲ್ಲಿಯೂ ಹಗಲು ಹೊತ್ತು ವಿದ್ಯಾರ್ಥಿಗಳನ್ನು ಶಾಲಾ- ಕಾಲೇಜು ಶಿಕ್ಷಣಕ್ಕೆ ಕಳುಹಿಸುವ ವ್ಯವಸ್ಥೆ ಹೆಚ್ಚೆನೆಡೆ ಇದೆ. ನನ್ನೂರು ಪಜೀರಿನಲ್ಲಿ ಪಳ್ಳಿ ದರ್ಸ್ ಇದ್ದ ಕಾಲದಲ್ಲಿ ವಿದ್ಯಾರ್ಥಿಗಳು ಹಗಲು ಹೊತ್ತು ಕಾಲೇಜಿಗೆ ಹೋಗಿ ಕಲಿಯುತ್ತಿದ್ದರು.ಅವರಲ್ಲಿ ಇಂಜಿನಿಯರಿಂಗ್, ಡಿಪ್ಲೊಮಾ_ ಐ.ಟಿ.ಐ ಮತ್ತು ಪದವಿ ಶಿಕ್ಷಣ ಪಡೆಯುವವರೂ ಇದ್ದರು.
ಪಳ್ಳಿ ದರ್ಸ್‌ನ ಪರಂಪರೆ ಕುಂಠಿತವಾದುದರ ಪರಿಣಾಮವನ್ನೂ ನಾವೀಗ ಕಾಣುತ್ತಿದ್ದೇವೆ. ಎರಡು ವರ್ಷ ಯಾವುದಾದರೂ ಪಳ್ಳಿ ದರ್ಸ್‌ನಲ್ಲಿ ಶಿಕ್ಷಣ ಪಡೆದು ಮೂರನೇ ವರ್ಷಕ್ಕೆ ಒಂದೇ ವರ್ಷದಲ್ಲಿ ಬಿರುದು ನೀಡುವ ಇಸ್ಲಾಮಿಕ್ ಕಾಲೇಜುಗಳಿಗೆ ಹೋಗಿ ಯಾವುದಾದರೊಂದು ಪದವಿ ಪಡೆದುಕೊಂಡು ಬರುವವರಿದ್ದಾರೆ.ಹತ್ತು ಹನ್ನೆರಡು ವರ್ಷಗಳ ಕಾಲ ಕಲಿತು ಆಲಿಂ ಆದವರಿಗೆ ಮೂರ್ನಾಲ್ಕು ವರ್ಷಗಳಲ್ಲಿ ಹೆಸರಿನ ಹಿಂದೆ ಸೇರಿಸಲು ಪದವಿ ಪಡಕೊಂಡು ಬರುವವರ ಶಿಕ್ಷಣದ ಗುಣಮಟ್ಟಕ್ಕೂ ಸಹಜವಾಗಿಯೇ ಅಜ ಗಜಾಂತರ ವ್ಯತ್ಯಾಸವಿರುವುದರಿಂದಲೇ ಅನೇಕ ಹಿರಿಯ ಉಲಮಾಗಳು ಇಂತಹದ್ದರ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸುವುದೂ ಇದೆ.
ಒಟ್ಟಿನಲ್ಲಿ ಪಳ್ಳಿ ದರ್ಸ್ ಎನ್ನುವುದು ಪಾರಂಪರಿಕ ಇಸ್ಲಾಮಿನ ಬಹಳ ಸುಂದರವಾದ ಶಿಕ್ಷಣ ಪದ್ಧತಿಯಾಗಿತ್ತು ಎನ್ನುವುದನ್ನು ಯಾರೂ ನಿರಾಕರಿಸಲಾಗದು.
-ಇಸ್ಮತ್ ಪಜೀರ್
Comments