ನೀರು ಅಲ್ಲಾಹನ ಅತ್ಯಮೂಲ್ಯವಾದ ಅನುಗ್ರಹಗಳಲ್ಲೊಂದಾಗಿದೆ. ಜೀವ ನೆಲೆ ನಿಲ್ಲುವಿಕೆ ಮತ್ತು ಕ್ರಷಿ, ಮರ ಸಸ್ಯಗಳ ಬೆಳೆಯುವಿಕೆಗೆ ಪ್ರಮುಖವಾಗಿ ಬೇಕಾಗಿರುವ ನೀರಿನ ಕುರಿತು ಕುರಾನಿನಲ್ಲಿ ಹಲವಾರು ಕಡೆ ಪರಾಮರ್ಶಿಸಲಾಗಿದೆ.
وَهُوَ الَّذِي يُرْسِلُ الرِّيَاحَ بُشْرًا بَيْنَ يَدَيْ رَحْمَتِهِ ۖ حَتَّىٰ إِذَا أَقَلَّتْ سَحَابًا ثِقَالًا سُقْنَاهُ لِبَلَدٍ مَيِّتٍ فَأَنْزَلْنَا بِهِ الْمَاءَ فَأَخْرَجْنَا بِهِ مِنْ كُلِّ الثَّمَرَاتِ ۚ كَذَٰلِكَ نُخْرِجُ الْمَوْتَىٰ لَعَلَّكُمْ تَذَكَّرُونَ
ಅವನು (ಅಲ್ಲಾಹನೇ) ತನ್ನ ಅನುಗ್ರಹಕ್ಕೆ (ಮಳೆಗೆ) ಮುಂಚಿತವಾಗಿ, ಸಂತೋಷವಾರ್ತೆಯಾಗಿ ಗಾಳಿಯನ್ನು ಕಳುಹಿಸುವವನು. ಕೊನೆಗೆ ಅವು (ನೀರಿನಿಂದ) ಭಾರವಾದ ಮೋಡಗಳನ್ನು ಹೊತ್ತು ತಂದಾಗ ನಾವು ಅವುಗಳನ್ನು ನಿರ್ಜೀವ ನಾಡಿನೆಡೆಗೆ ಒಯ್ಯುತ್ತೇವೆ ಮತ್ತು ಅವುಗಳಿಂದ ನೀರನ್ನು ಸುರಿಸುತ್ತೇವೆ ಹಾಗೂ ಅದರ ಮೂಲಕ ನಾವು ಎಲ್ಲ ವಿಧದ ಫಸಲುಗಳನ್ನು ಹೊರತರುತ್ತೇವೆ – ಇದೇ ರೀತಿ ನಾವು ಮೃತರನ್ನು ಹೊರ ತರಲಿದ್ದೇವೆ – ನೀವು ಚಿಂತಿಸಲು.
أَلَمْ تَرَ أَنَّ اللَّهَ أَنْزَلَ مِنَ السَّمَاءِ مَاءً فَتُصْبِحُ الْأَرْضُ مُخْضَرَّةً ۗ إِنَّ اللَّهَ لَطِيفٌ خَبِيرٌ
ನೀವು ಕಾಣಲಿಲ್ಲವೇ, ಅಲ್ಲಾಹನು ಆಕಾಶದಿಂದ ನೀರನ್ನು ಇಳಿಸಿದನು. ಅದರಿಂದ ಭೂಮಿಯು ಅರಳಿ ಹಸಿರಾಯಿತು. ಖಂಡಿತವಾಗಿಯೂ ಅಲ್ಲಾಹನು ಕ್ರಪಾಳುವೂ, ತಜ್ಞನೂ ಆಗಿದ್ದಾನೆ.
ನೀರಿನ ಕುರಿತು ಮೇಲೆ ಎರಡು ಆಯತುಗಳನ್ನು ತಿಳಿಸಿದೆ. ಹೀಗೆ ಕುರಾನಿನಲ್ಲಿ ಒಟ್ಟು 63 ಬಾರಿ ನೀರಿನ ಬಗ್ಗೆ ಪರಾಮರ್ಶೆ ಇದೆ. 23 ವಿಧದ ನೀರನ್ನು ಪರಿಚಯಿಸುತ್ತದೆ. ಪ್ರತಿಯೊಂದಕ್ಕೂ ಅದರದ್ದೇ ಆದ ಗುಣಗಳಿವೆ. ನೀರಿನ ಮಹತ್ವವೇನು ಎಂಬುದು ಇದರಿಂದಲೇ ನಮಗೆ ತಿಳಿಯುತ್ತದೆ. ಮತ್ತೊಂದು ಆಯತಿನಲ್ಲಿ ಅಲ್ಲಾಹನು ತಿಳಿಸುತ್ತಾನೆ.
وَجَعَلْنَا مِنَ الْمَاءِ كُلَّ شَيْءٍ حَي
(ಪ್ರತಿಯೊಂದು ಜೀವಂತ ವಸ್ತುವನ್ನೂ ನಾವು ನೀರಿನಿಂದ ಸೃಷ್ಟಿಸಿರುವೆವು
ಪ್ರತಿಯೊಂದು ಜೀವಿಗೂ ತನ್ನ ಅಗತ್ಯತೆಗಳನ್ನು ನೆರವೇರಿಸಲು ಮತ್ತು ಜೀವಂತವಾಗಿರಲು ನೀರು ಅತ್ಯಾವಶ್ಯಕ. ಶರೀರದ ದಾಹವನ್ನು ನೀಗಿಸಲು, ಶರೀರದ ಶುಚಿತ್ವವನ್ನು ಪೂರೈಸಲು, ಬೆವರು, ಮೂತ್ರ ವಿಸರ್ಜನೆ, ಮೂತ್ರ ಉತ್ಪಾದನೆ ಮೂಲಕ ಶರೀರದ ತ್ಯಾಜ್ಯವನ್ನು ತೊಡೆದು ಹಾಕಲು, ಮಲ ಬದ್ಧತೆಯನ್ನು ತಡೆಯಲು, ಸುಲಭವಾದ ಜೀರ್ಣಕ್ರಿಯೆ ನಡೆಯಲು ನೀರು ಪ್ರಮುಖ ಪಾತ್ರ ವಹಿಸುತ್ತದೆ. ಟೋಟಲೀ ಮನುಷ್ಯನ ಮತ್ತು ಇತರ ಜೀವಿಗಳ ಜೀವಂತಿಕೆಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಸಸಿ ಗಿಡ, ಮರಗಳ ಬೆಳೆಯುವಿಕೆಗೂ, ಈ ಮೂಲಕ ಪರಿಸರದ ಸ್ವಚ್ಛತೆಗೂ ಸೌಂದರ್ಯಕ್ಕೂ ನೀರಿನ ಅಗತ್ಯದೆ ಇದೆ ಎಂಬುವುದರಲ್ಲಿ ಎರಡು ಮಾತಿಲ್ಲ.
ನೀರು ಕೆಲವೊಮ್ಮೆ ಅನುಗ್ರಹವಾಗಿಯೂ, ಕೆಲವೊಮ್ಮೆ ಶಾಪವಾಗಿಯೂ ಬರುತ್ತದೆ.
ಆಹಾರ, ಪಾನೀಯಗಳಾಗಿ ಉಪಯೋಗಿಸುವಾಗ, ಸಸಿ, ಮರಗಿಡಗಳನ್ನು ಬೆಳೆಸಿ ಭೂಮಿಯನ್ನು ಹಸಿರಾಗಿಸುವಾಗ, ಕ್ರಷಿಗಳನ್ನು ಮಾಡುವಾಗ ಇಹದಲ್ಲಿ ನೀರನ್ನು ಅನುಗ್ರಹವಾಗಿ ಪರಿಗಣಿಸುತ್ತೇವೆ. ಪರಲೋಕದಲ್ಲಿ ಸ್ವರ್ಗ ಪ್ರಾಪ್ತಿಯಾದ ಸತ್ಯವಿಶ್ವಾಸಿಗಳು ಹೌಲುಲ್ ಕೌಸರ್ ನೀರನ್ನು ಕುಡಿಯುವರು. ಬಳಿಕ ಅವರಿಗೆ ದಾಹ ಉಂಟಾಗಲಾರದು. ಇದು ಪರಲೋಕದ ಅನುಗ್ರಹವಾಗಿದೆ.
ಅಲ್ಲಾಹನು ಮಳೆ ಬರಿಸದೆ ನೀರನ್ನು ತಡೆದಿಟ್ಟರೆ ನಾಡಿನಲ್ಲಿ ಬರಗಾಲವು ತಲೆದೋರಿ ಆಹಾರ ಪಾನೀಯವಿಲ್ಲದೆ ಜೀವಿಗಳು ವಿನಾಶದ ಅಂಚಿಗೆ ತಲುಪುತ್ತದೆ. ಅದೇ ಸಂದರ್ಭದಲ್ಲಿ ಮಿತಿಮೀರಿದ ಗಾಳಿ ಮಳೆಯಿಂದಲೂ ಸಾವು ನೋವು, ನಾಶ ನಷ್ಟವೂ ಉಂಟಾಗುತ್ತದೆ. ನೂಹ್ ನೆಬಿ ಅಲೈಹಿಸ್ಸಲಾಮ್ ರವರ ಸತ್ಯ ನಿಷೇಧಿಗಳಾದ ಸಮೂಹಕ್ಕೆ ಶಿಕ್ಷೆಯ ರೂಪದಲ್ಲಿ ಪ್ರಬಲ ತೂಫಾನ್ ಅಲ್ಲಾಹನು ನೀಡಿದಂತೆ. ಅಲ್ಲಾಹನು ನೂಹ್ ನೆಬಿ ಅಲೈಹಿಸ್ಸಲಾಮ್ ರವರ ಧಿಕ್ಕಾರಿಗಳಾದ ಸಮೂಹವನ್ನು ಯಾವನೇ ಒಬ್ಬನು ರಕ್ಷೆ ಹೊಂದದ ರೀತಿಯಲ್ಲಿ ನೀರಿನಲ್ಲಿ ಮುಳುಗಿಸಿ ಸಾಯಿಸಿದನು. ಅವರಲ್ಲಿ ಯಾರಿಗೂ ನೀರಿನಿಂದ ಸ್ವತಃ ರಕ್ಷಣೆ ಪಡೆಯಲು ಸಾಧ್ಯವಾಗಲಿಲ್ಲ. ಇದು ನೀರಿನ ಮೂಲಕ ಇಹದಲ್ಲುಂಟಾಗುವ ನಾಶ ನಷ್ಟವೂ ಶಿಕ್ಷೆಯೂ ಆಗಿದೆ. ನರಕಾವಕಾಶಿಗಳಿಗೆ ಹಮೀಂ ಎಂಬ ಹೆಸರಿನ ಕೊತ ಕೊತ ಕುದಿಯುವ ವಿಶೇಷವಾದ ನೀರನ್ನು ಕುಡಿಸಲಾಗುತ್ತದೆ. ಆ ನೀರಿನ ನಿಮಿತ್ತ ಅವರ ಕರುಳು ಬಳ್ಳಿಗಳು ಕರಗಿ ಉದುರಿ ಹೋಗುತ್ತದೆ. ಇದು ಪರಲೋಕದ ನೀರಿನ ಮೂಲಕ ಉಂಟಾಗುವ ಶಿಕ್ಷೆಯಾಗಿದೆ.
ಸಾಮಾನ್ಯವಾಗಿ ನಮ್ಮೂರಿನಲ್ಲಿ ಎಪ್ರಿಲ್, ಮೇ ತಿಂಗಳುಗಳಲ್ಲಿ ಕಠಿಣವಾದ ಬಿಸಿಲಿನ ಬೇಗೆಯ ಜೊತೆ ಜೊತೆಗೆ ನೀರಿಗಾಗಿ ಹಾಹಾಕಾರ, ಅಲೆದಾಟ ಉಂಟಾಗುತ್ತದೆ. ಬಾವಿ, ನದಿ ಸರೋವರಗಳ ನೀರು ಬತ್ತಲ್ಪಡುತ್ತದೆ. ಕೆಲವೊಂದು ಕಡೆ ಧಾರಾಳವಾಗಿ ನೀರಿರುವ ಊರಿನಿಂದ ನೀರಿಗೆ ಬರಗಾಲ ಉಂಟಾದ ಊರಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆಯಾದರೂ ಅವರ ದಿನದ ಅಗತ್ಯಕ್ಕೆ ಅದು ಸಾಕಾಗುವುದಿಲ್ಲ. ಕೆಲವೊಂದು ಊರಿನಲ್ಲಿ ನೀರಿಗಾಗಿ ಕಿಲೋ ಮೀಟರುಗಳಷ್ಟು ಪಯಣಿಸುವ ದುಸ್ಥಿತಿ ತಲೆದೋರಿರುತ್ತದೆ. ಕ್ರತಕವಾಗಿ ನೀರನ್ನು ಉತ್ಪಾದಿಸಲೂ ಸಾಧ್ಯವಿಲ್ಲ. ಈ ಸಂದರ್ಭದಲ್ಲಿ ಅಲ್ಲಾಹನ ರಹ್ಮತಿನ ಮಳೆಗಾಗಿ ಪ್ರಾರ್ಥಿಸುವುದನ್ನು ಇಸ್ಲಾಂ ಕಲ್ಪಿಸುತ್ತದೆ.
ಮಳೆಗಾಗಿ ಮಾಡುವ ದುಆ
اللَّهُمَّ أَغِثْنَا
ಮಳೆ ಸುರಿಯುವಾಗ
اللَّهُمَّ صَيِّبَاً نَافِعَاً
ಎಂದು ದುಆ ಮಾಡಬೇಕು.
ಮತ್ತು ನೀರನ್ನು ಸಾಧ್ಯವಾದಷ್ಟು ಮಿತವಾಗಿ ಬಳಸಿ ನೀರು ಪೋಲಾಗಿಸುವುದನ್ನು ತಡೆಯಬೇಕು. ಅಗತ್ಯತೆಕ್ಕಿಂತ ಹೆಚ್ಚಾಗಿ ಪೋಲು ಮಾಡುವುದು, ಭೂಮಿಯಲ್ಲಿ ದುರ್ಬಲತೆ ಸ್ರಷ್ಟಿಸುವುದು, ಹಾಳಾಗಿಸುವುದು ಇದನ್ನು ಇಸ್ಲಾಂ ಕಠಿಣವಾಗಿ ವಿರೋಧಿಸುತ್ತದೆ. ನೀರನ್ನು ಬೇರೆ ಬೇರೆ ರೀತಿಯಲ್ಲಿ ಮಲಿನ ಮಾಡುವುದು, ಪೋಲು ಮಾಡುವುದು ಭೂಮಿಯಲ್ಲಿ ದುರ್ಬಲತೆ ಸ್ರಷ್ಟಿಸುವ ಒಂದು ರೂಪವಾಗಿದೆ. ಆಹಾರ ಪಾನೀಯ, ವಸ್ತ್ರಗಳಲ್ಲಿ ಮನುಷ್ಯರನ್ನು ತೊಂದರೆಗೀಡಾಗಿಸುವುದು ಇಸ್ಲಾಮಿನಲ್ಲಿ ಕಠಿಣವಾಗಿ ವಿರೋಧಿಸಲ್ಪಟ್ಟ ಕಾರ್ಯವಾಗಿದೆ. ಕೆರೆ, ಬಾವಿ, ಕೊಲ ಮುಂತಾದ ಕಟ್ಟಿನಿಂತ ನೀರಿನಲ್ಲಿ ಮೂತ್ರಿಸಬಾರದು ಎಂದು ನೆಬಿ ಸ.ಅ ರವರು ಹೇಳಿದರು. ಖಂಡಿತವಾಗಿಯೂ ವುಲೂ ನಿರ್ವಹಿಸುವಾಗ ವಲಹಾನ್ ಎಂಬ ಶೈತಾನಿನ ಉಪಟಳವಿರುತ್ತದೆ. ನೀರಿನಲ್ಲಿ ವಸ್ವಾಸ್ ಉಂಟುಮಾಡುವುದರಿಂದ ಜಾಗ್ರತರಾಗಿರಿ ಎಂದು ಮತ್ತೊಂದು ಹದೀಸಿನಲ್ಲಿ ಕಾಣಬಹುದು. ವುಲೂ ಮುಂತಾದ ಇಬಾದತುಗಳನ್ನು ನಿರ್ವಹಿಸುವಾಗ ಎಷ್ಟು ಸಲ ತೊಳೆದರೂ ಸರಿಯಾಗಿಲ್ಲ ಎಂಬ ರೀತಿಯಲ್ಲಿ ತೀವ್ರ ವಸ್ವಾಸ್ ರೋಗವಿರುವ ತುಂಬಾ ಜನರಿದ್ದಾರೆ. ಇವರಿಂದ ಮಿತಿಮೀರಿ ನೀರು ಪೋಲಾಗುತ್ತದೆ. ಒಮ್ಮೆ ಸಅದ್ ರ.ಅ ವುಲೂ ನಿರ್ವಹಿಸುತ್ತಿದ್ದಾಗ ವುಲೂವಿನಲ್ಲಿ ಇಸ್ರಾಫ್ ( ಅಗತ್ಯತೆಕ್ಕಿಂತ ಹಚ್ಚು ಪೋಲು ) ಮಾಡದಿರು ಎಂದು ನೆಬಿ ಸ. ಅ ರವರು ಹೇಳಿದರು. ಸಅದ್ ರ.ಅ ಕೇಳಿದರು. ನೀರಿನಲ್ಲಿ ಇಸ್ರಾಫ್ ಇದೆಯೇ?!!
ನೆಬಿ ಸ.ಅ ರವರು ಹೇಳಿದರು. ಇದೆ. ಹರಿಯುತ್ತಿರುವ ನದಿಯಲ್ಲಿ ನೀನು ವುಲೂ ನಿರ್ವಹಿಸುವುದಾದರೂ ಇಸ್ರಾಫ್ ಇದೆ.
ವುಲೂಅ್ ನಿರ್ವಹಿಸುವಾಗ ಮೂರಕ್ಕಿಂತ ಹೆಚ್ಚು ಬಾರಿ ವುಲೂಇನ ಅಂಗಾಂಗಗಳನ್ನು ತೊಳೆಯುವುದು, ಸವರುವುದು ಕರಾಹತ್ ಆಗಿದೆ. ಅದು ಸಮುದ್ರದ ನೀರಿನಲ್ಲಿ ವುಲೂನಿರ್ವಹಿಸುವುದಾದರೂ ಸರಿ ಎಂದು ಕರ್ಮಶಾಸ್ತ್ರ ವಿದ್ವಾಂಸರು ಕಲಿಸುತ್ತಾರೆ.
ಇವೆಲ್ಲವು ನೀರಿನ ಬಳಕೆಯಲ್ಲಿ ಜಾಗ್ರತೆ ಪಾಲಿಸಬೇಕು ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
💧 *ಮಿತಿಮೀರಿದ ನೀರಿನ ಬಳಕೆಯನ್ನು ಕೈ ಬಿಡೋಣ.*
💧 *ಮಿತವಾಗಿ ನೀರನ್ನು ಬಳಸೋಣ*
💧 *ನೀರಿಲ್ಲದವರಿಗೆ ಹಂಚೋಣ*
💧 *ಚಿಕ್ಕ ಪುಟ್ಟ ಪಕ್ಷಿಗಳ ದಾಹವನ್ನು ನೀಗಿಸಲು ವ್ಯವಸ್ಥೆ ಮಾಡೋಣ*
💧 *ಈ ಮೂಲಕ ಪ್ರಕ್ರತಿಯ ಸೌಂದರ್ಯವನ್ನು ಕಾಪಾಡೋಣ*
💧💧💧💧💧💧💧💧
Comments