ಸಿರಿಯಾ ಮೂಲದ, ನೆಬಾಟ್ಯಾನ್ ಜನಾಂಗಕ್ಕೆ ಸೇರಿದ ಕ್ರೈಸ್ತನೊಬ್ಬ ಕಬ್ಬಿಣದ ವಸ್ತುವೊಂದನ್ನು ಕಳ್ಳತನ ಮಾಡಿ ಸಿಕ್ಕಿಬಿದ್ದ. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಕಳ್ಳನನ್ನು ಬಂಧಿಸುವಂತೆ ಆದೇಶ ಹೊರಡಿಸಿದ ಖಾಝಿ ಅಬೂಬಕರ್ ಇಬ್ನ್ ಮುಹಮ್ಮದುಬ್ನು ಹಝ್ಮ್ ಕೈ ಕತ್ತರಿಸುವಂತೆ ತೀರ್ಪು ಹೊರಡಿಸಿದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಕಳ್ಳ ತನ್ನ ಕೈ ಕಳೆದುಕೊಳ್ಳುವುದರಲ್ಲಿದ್ದ. ಈ ಸುದ್ದಿ ಅಲ್ಲಿನ ಪ್ರಸಿದ್ದ ವಿಧ್ವಾಂಸೆಯಾಗಿದ್ದ ಅಮ್ರಾ ಬಿನ್ತ್ ಅಬ್ದುಲ್ ರಹ್ಮಾನ್‌ರಿಗೆ ತಿಳಿಯಿತು. ಅವರು ತನ್ನ ಶಿಷ್ಯೆಯೊಬ್ಬರನ್ನು ಖಾಝಿ ಬಳಿಗೆ ಕಳುಹಿಸಿದರು. ನ್ಯಾಯಾಲಯದ ಮೆಟ್ಟಿಲೇರಿ ಬಂದ ಯುವತಿಯತ್ತ ನೆರೆದಿದ್ದ ಅಷ್ಟೂ ಮಂದಿಯ ಚಿತ್ತ ಹೊರಳಿದವು.
"ನನ್ನನ್ನು ಇಲ್ಲಿಗೆ ಅಮ್ರಾ ಕಳುಹಿಸಿರುವರು"
ಯುವತಿಯವರ ಮಾತು ಖಾಝಿಯನ್ನು ತಟ್ಟನೇ ಎಚ್ಚೆತ್ತುಕೊಳ್ಳುವಂತೆ ಮಾಡಿತು. ಅವರ ಮೊಗದಲ್ಲಿ ಗೌರವ ಮಿಶ್ರಿತ ಗಂಭೀರತೆ ಎದ್ದು ಬಂದವು. ಕಾರಣ ಅಮ್ರಾ ಬಿನ್ತ್ ಅಬ್ದುಲ್ ರಹ್ಮಾನ್ ಮದೀನಾದ ಪ್ರಸಿದ್ಧ ಹದೀಸ್ ನಿಪುಣೆಯೂ, ಕಾನೂನು ತಜ್ಞೆಯೂ ಆಗಿದ್ದರು.
"ನಗಣ್ಯ ಮೌಲ್ಯದ ವಸ್ತುವೊಂದನ್ನು ಅಪಹರಿಸಿದ ವ್ಯಕ್ತಿಯ ಕೈ ಕತ್ತರಿಸುವಂತೆ ತಾವು ತೀರ್ಪು ನೀಡಿದ್ದೀರಂತೆ"
ಹೌದು ಎಂದರು ಖಾಝಿ. ಅವರಿಗೆ ತನ್ನ ತೀರ್ಪಿನಲ್ಲಿ ಏನೋ ಎಡವಟ್ಟು ಉಂಟಾಗಿದೆಯೆಂಬ ಒಳ ಅರಿವು ಉಂಟಾಯಿತು.
"ಕಾಲು ದೀನಾರ್‌ಗಿಂತ ಕೆಳಗಿನ ಮೌಲ್ಯದ ವಸ್ತುವನ್ನು ಕಳವುಗೈದ ವ್ಯಕ್ತಿಯ ಕೈಯನ್ನು ಯಾವುದೇ ಕಾರಣಕ್ಕೂ ಮುರಿಯುವಂತಿಲ್ಲವೆಂದೂ, ಆ ವ್ಯಕ್ತಿಯನ್ನು ತಕ್ಷಣ ಬಂಧಮುಕ್ತ ಗೊಳಿಸಬೇಕೆಂದೂ ಅಮ್ರಾ ಆಜ್ಞೆ ಮಾಡಿದ್ದಾರೆ" ಎಂದರು ಶಿಷ್ಯೆ.
ನೆರೆದಿದ್ದ ಮಂದಿ ಯುವತಿಯ ಮಾತು ಕೇಳಿ ವಿಸ್ಮಿತರಾದರು. ಮದೀನಾದ ನ್ಯಾಯಾಲಯದಲ್ಲಿ ಹೊರ ಬಿದ್ದ ತೀರ್ಪಿಗೆ ಮಹಿಳೆಯೊಬ್ಬರು ಆಕ್ಷೇಪ ವ್ಯಕ್ತಪಡಿಸುವುದೇ..? ಎಂಬುದು ಅವರ ಅಚ್ಚರಿಗೆ ಕಾರಣವಾಗಿತ್ತು. ಆದರೆ ತನ್ನ ತೀರ್ಪನ್ನು ತಕ್ಷಣ ಹಿಂದೆಗೆದುಕೊಂಡ ಖಾಝಿ ಆ ವ್ಯಕ್ತಿಯನ್ನು ಬಿಡುಗಡೆಗೊಳಿಸುವಂತೆ ಆಜ್ಞಾಪಿಸಿದರು. ಕದ್ದ ವ್ಯಕ್ತಿಯ ಕೈಯನ್ನು ತುಂಡರಿಸಬೇಕೆಂಬ ಇಸ್ಲಾಮಿನ ಆಜ್ಞೆಯನ್ನು ಪೂರ್ವಾಪರ ಆಲೋಚಿಸದೆ ವಿಧಿಸಿದ್ದರು ಖಾಝಿ. ಆದರೆ ಸಂದರ್ಭದ ಮೂಸೆಯಲ್ಲಿಟ್ಟು ಅದನ್ನು ಅವಲೋಕನ ನಡೆಸದೇ ಹಾಗೇ ವಿಧಿಸಿದ್ದರಿಂದ ಆ ತೀರ್ಪು ಅಸಂಬದ್ಧವನ್ನು ಸೂಚಿಸುತ್ತಿದ್ದವು. ಸಮಸ್ಯೆಯೊಂದನ್ನು ಆಯಾ ಸಂದರ್ಭಕ್ಕನುಸರಿಸಿ ಬಗೆ ಹರಿಸಲು ಇಸ್ಲಾಮೀ ಧರ್ಮಶಾಸ್ತ್ರದ ತಳಹದಿಯಲ್ಲಿ ಬೌದ್ಧಿಕ ವಾಗ್ವಾದಗಳ ಮೂಲಕ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂಥ ನಿರ್ಣಾಯಕ ಸಂಧರ್ಭಗಳಲ್ಲಿ ನೀಡುವ ತೀರ್ಪು ದೂರಗಾಮಿ ಪರಿಣಾಮದ ಅರಿವಿನಿಂದ ಮತ್ತು ಮುಂದಾಲೋಚನೆಯಿಂದ ಕೂಡಿದ್ದಾಗಿರಬೇಕು. ಕದ್ದವರ ಕೈ ಕಡಿಯಿರಿ ಎಂಬ ಆಜ್ಞೆ ಇಸ್ಲಾಮಿನಲ್ಲಿದೆ ನಿಜ. ಆದರೆ ಕೈ ಕಡಿಯಬೇಕಾದರೆ ಎಂಥ ವಸ್ತುವನ್ನು ಕದ್ದಿರಬೇಕು, ಎಲ್ಲಿಂದ ಕಳ್ಳತನ ಮಾಡಿರಬೇಕು, ಮತ್ತು ಯಾವಾಗ ಕಳ್ಳತನ ಮಾಡಲಾಗಿದೆ ಮುಂತಾದ ಅಂಶಗಳೂ ಪ್ರಧಾನವೆನಿಸುತ್ತದೆ. ಅದು ಖುರ್‌ಆನ್, ಹದೀಸ್‌ಗಳ ಆಧಾರದಲ್ಲಿ ನಿರ್ಧರಿತಗೊಳ್ಳಬೇಕಾಗುತ್ತದೆ. ಕಳ್ಳತನ ಮಾಡಿದ ವಸ್ತುವಿನ ಮೌಲ್ಯ, ತೂಕ, ಗಾತ್ರ ಮತ್ತು, ಸ್ಥಳಕ್ಕನುಗುಣವಾಗಿ ಶಿಕ್ಷೆಯನ್ನು ವಿಧಿಸಲಾಗುತ್ತದೆ. ಆ ನಿಬಂಧನೆಗಳನ್ನು ಮಂಡಿಸಬೇಕಾದವರು ಕರ್ಮಶಾಸ್ತ್ರದಲ್ಲಿ ಆಳವಾದ ಪಾಂಡಿತ್ಯ ಹೊಂದಿರುವವರಾಗಿರಬೇಕು. ಆದ್ದರಿಂದ ಕಾನೂನು ತಜ್ಞೆಯಾಗಿದ್ದ ಅಮ್ರಾ, ಖಾಝಿಯ ತೀರ್ಪಿನಲ್ಲಿ ಅಸಮರ್ಪಕತೆ ಇರುವುದನ್ನು ಮನಗಂಡರು. ಅಮ್ರಾರ ಆಜ್ಞೆ ಬಂದ ಕೂಡಲೇ ಮರು ಮಾತನಾಡದ ಖಾಝಿ ತಾನು ತರಾತುರಿಯಲ್ಲಿ ನೀಡಿದ ತೀರ್ಪನ್ನು ತಿದ್ದಿಕೊಂಡರು. ಅವರ ಅರ್ಹತೆಯನ್ನೋ, ಅಧಿಕಾರವನ್ನೋ ಪ್ರಶ್ನಿಸಲಿಲ್ಲ. ಆ ಕಾಲಕ್ಕೆ ಮದೀನಾದಲ್ಲಿ ವಿಶ್ವವಿಖ್ಯಾತರೆನಿಸಿಕೊಂಡ ಅಸಂಖ್ಯ ವಿಧ್ವಾಂಸರಿದ್ದರೂ ಅವರ‌್ಯಾರ ಬಳಿಯೂ ಚರ್ಚಿಸದ ಖಾಝಿ ಅಮ್ರಾರ ಆಜ್ಞೆಯನ್ನು ಅಂತಿಮವಾಗಿ ಸ್ವೀಕರಿಸಿದರು. ಇದು ಅಮ್ರಾರ ಜ್ಞಾನ ಪ್ರಪಂಚದ ವ್ಯಾಪ್ತಿಯನ್ನು ಎತ್ತಿ ತೋರಿಸುತ್ತದೆ. ಸಮಸ್ಯೆಯೊಂದನ್ನು ನಿರ್ಣಾಯಕವಾಗಿ ನಿಭಾಯಿಸುವಲ್ಲಿ ಅಮ್ರಾ ತೋರಿದ ಜಾಣ್ಮೆ, ಚಾಕಚಕ್ಯತೆ ಇತಿಹಾಸದಲ್ಲೇ ದಾಖಲಿಸಲ್ಪಟ್ಟಿದೆ. ಈ ಘಟನೆಯನ್ನು ಇಮಾಂ ಮಾಲಿಕಿ(ರ)ತನ್ನ ಅಲ್ ಮುವತ್ತಾದಲ್ಲಿ ಉಲ್ಲೇಖಿಸಿದ್ದು ಇಂಥ ಸಂಧರ್ಭದಲ್ಲಿ ಇವರೂ ಇದೇ ನಿಲುವನ್ನು ಹೊಂದಿದ್ದರು. ಆಡಳಿತ, ಕಾನೂನು, ಶಿಕ್ಷಣ ಮುಂತಾದ ಸಮಾಜದ ಆಯಕಟ್ಟಿನ ಕ್ಷೇತ್ರಗಳಲ್ಲೇ ಪಳಗಿದ ಅನೇಕ ಮಹಿಳೆಯರನ್ನು ಇಸ್ಲಾಮೀ ಚರಿತ್ರೆಯಲ್ಲಿ ಕಾಣಬಹುದು.
ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಂದ ಹಿಮ್ಮೆಟ್ಟಿಸಲಾಗುತ್ತಿದೆ, ಇಸ್ಲಾಮ್‌ನದ್ದು ಪುರುಷ ಪ್ರಧಾನ ವ್ಯವಸ್ಥೆ, ಸಮಾಜದ ಉನ್ನತ ಸ್ಥರಗಳಲ್ಲಿ ಆಕೆಗೆ ಮಾನ್ಯತೆ ನೀಡಲಾಗುವುದಿಲ್ಲ ಎಂಬುದು ಇಂದು ಇಸ್ಲಾಮಿನ ವಿರುದ್ದ ಕೇಳಿ ಬರುತ್ತಿರುವ ಆಪಾದನೆಗಳಲ್ಲೊಂದು. ಆದರೆ ಇಸ್ಲಾಮಿನ ಅಮೋಘ ಅವಧಿಯೆಂದೇ ಗುರುತಿಸಲ್ಪಟ್ಟ ಪ್ರವಾದಿ(ಸ)ಮರ ಬಳಿಕದ ಮೂರು ಶತಮಾನಗಳ ಚರಿತ್ರೆಯಲ್ಲಿ ಸಮಾಜದ ಪ್ರತಿಷ್ಟಿತ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯವನ್ನು ಕಾಣಬಹುದು. ಇದು ಇಸ್ಲಾಂ ಆಕೆಗೆ ನೀಡಿದ ಮಾನ್ಯತೆಗಿರುವ ಉದಾಹರಣೆ ಎನ್ನಬಹುದು.
~ಟಿ.ಎಂ ಸಅದಿ ತಂಬಿನಮಕ್ಕಿ
24-04-2021

Comments