ವಿಜ್ಞಾನ ಲೋಕದ ವಿಸ್ಮಯ ಸಜಿಪ ಉಸ್ತಾದ್..
ಮೂಲ: ಬಶೀರ್ ನದ್ವಿ ಕೋಟ್ಟಿಲ
ಅನು: ಅಶ್ರಫ್ ನಾವೂರು, ಕೆ.ಜಿ.ಎನ್ ಮಿತ್ತೂರು
ವರ್ಣಭೇದದ ಜೊತೆ ಅಸ್ಪ್ರಶ್ಯರು, ಕೀಲ್ಜಾತಿಗಳಾದ ಶೂದ್ರ ಪಂಗಡದ 'ಥೀಂಡಾ' ಜಾತಿಯಲ್ಲಿ ಜನ್ಮತಾಳಿ, ಬೆಳೆದು, ಸತ್ಯವಚನ¹ ಹೇಳಿ ಮಾನವೀಯತೆಯಲ್ಲಿ ಅಚ್ಚರಿ ಮೂಡಿಸಿ, ವೈಜ್ಞಾನಿಕ ಲೋಕದ ಬೆಳ್ಳಿ ತಾರೆಯಾಗಿ ಜ್ವಲಿಸಿ, ಆಧ್ಯಾತ್ಮಿಕ ಸರಣಿಯಲ್ಲಿ ಮುರಬ್ಬಿಯಾಗಿ ಪರಿವರ್ತಿತವಾದ ಪುಣ್ಯ ಜನ್ಮ..
ಅಲ್-ಆಲಿಮುಲ್ ಅಲ್ಲಾಮಾ ವಹೀದುಝ್ಝಮಾನ್ ಮುತ್ತಬಿಉಸ್ಸುನ್ನಃ ಚೆರುವತ್ತೂರು ಅಬ್ದುಲ್ಲಾ ಮುಸ್ಲಿಯಾರ್ ಅಲ್- ಬಾಖವಿ ರಹಿಮವುಲ್ಲಾಹ್.
ಆಡು ಮೇಯಿಸುವವನಾಗಿ ಬೆಳೆದು,
ಜಾನುವಾರು ವ್ಯಾಪಾರಿಗಳೊಂದಿಗೆ ಕೇರಳಕ್ಕೆ ತಲುಪಿ ಇಸ್ಲಾಂ ಸ್ವೀಕರಿಸಿ, ಪಳ್ಳಿದರ್ಸ್ಗಳಲ್ಲಿ ಅಧ್ಯಯನ ಮಾಡಿ, ಬಗ್ದಾದ್ ಸಹಿತ ಅನೇಕ ಚಾರಿತ್ರಿಕ ಹಿನ್ನಲೆಯಿರುವ ನಗರಗಳಿಗೆ ಕಾಲ್ನಡಿಗೆಯ ಮೂಲಕ ಸಂಚರಿಸಿ, ಪುಣ್ಯ ನಾಡು ಮಕ್ಕಾ, ಮದೀನಾಗೆ ತಲುಪಿ ಹಜ್ಜ್ ನಿರ್ವಹಿಸಿ, ಹರಮಿನಲ್ಲಿ ವಾಸಿಸಿ ಆಧ್ಯಾತ್ಮಿಕ ಅನುಭೂತಿ ಪಡೆಯಲು ಮುನ್ನುಗ್ಗಿ, ದೀರ್ಘ ಕಾಲ ದರ್ಸ್ ನಡೆಸಿ ಹಲವಾರು ಶಿಷ್ಯರನ್ನು ಸಮಾಜಕ್ಕರ್ಪಿಸಿದ ಇತಿಹಾಸದಲ್ಲಿ ಅಪೂರ್ವ ವ್ಯಕ್ತಿತ್ವವಾಗಿದ್ದಾರೆ ಚೆರುವತ್ತೂರು ಅಬ್ದುಲ್ಲಾ ಮುಸ್ಲಿಯಾರ್ (ಸಜಿಪ ಉಸ್ತಾದ್).
*ಬಾಲ್ಯಕಾಲ*
ಜನನ, ಮಂಗಳೂರಿನ ಕಿನ್ಯಾ ಸಮೀಪದ ಪನೀರ್ ಎಂಬ ಗ್ರಾಮದಲ್ಲಿ.
*ಬದಲಾವಣೆಯ ಅಭೂತಪೂರ್ವ ಕ್ಷಣ*
ಅಂದು ಕ್ರಿ.ಶ 1935. ಮಂಗಳೂರಿನಿಂದ ಚೆರುವತ್ತೂರಿಗೆ ಜಾನುವಾರುಗಳನ್ನು ಸಾಗಿಸುವ ಅಹ್ಮದ್ ಹಾಜಿ ಹಾಗೂ ಕುಂಙಹ್ಮದ್ ಹಾಜಿ ಅವರಿಗೆ ನಡೆಯುವ ದಾರಿಯಲ್ಲಿ ಸಣ್ಣ ಬಾಲಕನನ್ನು ಕಾಣಲು ಸಾಧ್ಯವಾಗುತ್ತದೆ. ಸರಿಸುಮಾರು ಹನ್ನೆರಡು ವಯಸ್ಸಿನ ತರುಣ. ಕಪ್ಪು ವರ್ಣ.
ಆ ಯುವಕನ್ನು ಯಾತ್ರೆಯಲ್ಲಿ ಸೇರಿಸಿಕೊಂಡರು. ಹಾಜಿಗಳೊಂದಿಗೆ ಚೆರುವತ್ತೂರಿನ ತುರುತ್ತಿಗೆ ತಲುಪಿದ ಅವರು ಅಲ್ಲಿ ಕುರಬನಾಗಿ ಕೆಲಸ ಮಾಡಿ, ತರುವಾಯ ಪವಿತ್ರ ಇಸ್ಲಾಂ ಸ್ವೀಕರಿಸಬೇಕೆಂಬ ಬಯಕೆ ವ್ಯಕ್ತಪಡಿಸಿದರು. ಅಂದಿನ ಶ್ರೇಷ್ಠ ವಿದ್ವಾಂಸರ ಕುಲಪತಿ, ಮುಹಖ್ಖಿಖ್ ಆದ 'ತರಕ್ಕಂಡಿ ಓರು' (ಅಲ್ಲಾಮ ಆಯಂಚೇರಿ ಅಬ್ದುರ್ರಹ್ಮಾನ್ ಮುಸ್ಲಿಯಾರ್ ನ.ಮ)ರ ನಿರ್ದೇಶನ ಪ್ರಕಾರ 'ಕೀಯನ್ ಓರ್' (ಶಂಸುಲ್ ಉಲಮಾ ಕೀಯನ್ ಕುಂಙಿ ಅಬ್ದುಲ್ಲಾ ಮುಸ್ಲಿಯಾರ್ ನ.ಮ) ಈ ಯುವಕನಿಗೆ ಶಹಾದತ್ ಕಲಿಮ ಹೇಳಿಕೊಟ್ಟು 'ಅಬ್ದುಲ್ಲಾ' ಎಂದು ಹೆಸರಿಟ್ಟರು. ಆ ಸಮಯದಲ್ಲಿ ತರಕ್ಕೇಂಡಿ ಓರ್ 'ನೀನು ಇನ್ನು ಎಲ್ಲಿಗೂ ಹೋಗಬೇಕೆಂದಿಲ್ಲ, ನಿನ್ನಲ್ಲಿಗೆ ಜನರು ಬರುತ್ತಾರೆ' ಎಂದು ನುಡಿದರು.
ಆ ಭವಿಷ್ಯವಾಣಿಯ ಸಾಕ್ಷಾತ್ಕರಣಕ್ಕೆ ನಂತರದ ಇತಿಹಾಸವೇ ಸಾಕ್ಷಿ.
ಅನಾರೋಗ್ಯ ಪೀಡಿತರಾದ ತನ್ನ ಅತ್ಯಂತ ಹತ್ತಿರದವರನ್ನು ಭೇಟಿ ಮಾಡಲು ಅಥವಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಸಾಧ್ಯವಾದಾಗ ಸ್ವತಃ ಮಯ್ಯಿತ್ ಮಹಾನರನ್ನು ಅರಸಿ ಬಂದ ಚರಿತ್ರೆ ಕೂಡಾ ಇದೆ.
*ಅಧ್ಯಯನ ಹಾಗೂ ದರ್ಸ್ ಜೀವನ*
ಇಸ್ಲಾಂ ಸ್ವೀಕರಿಸಿದ ಬಳಿಕ ಪ್ರಥಮವಾಗಿ ಪವಿತ್ರ ಖುರ್ಆನ್ 'ಕೋಟ್ಟಿಲ ಇಬ್ರಾಹೀಂ ಮುಸ್ಲಿಯಾರ್'ರಿಂದ ಕಲಿತರು. ಮೂರು ತಿಂಗಳು ಪೊನ್ನಾನಿ ಮಊನದಲ್ಲಿ ವಾಸಿಸಿದರು. ತುರುತ್ತಿಯಲ್ಲಿ 'ಮಳಪ್ಪಿಲ್ ಅಬ್ದುಲ್ಲಾ ಮುಸ್ಲಿಯಾರ್' ಬಳಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. ಐದನೇ ತರಗತಿ ವರೆಗೆ ಶಾಲೆಗೆ ಹೋದರು. ವೆಳಿಯತ್ತ್ ಮುಹಮ್ಮದ್ ಮುಸ್ಲಿಯಾರ್ ರಿಂದ ಅಲ್ಪ ಕಾಲ ಅಧ್ಯಯನ ಮಾಡಿದರು. ಮುಂದುವರಿದು ತುರುತ್ತಿಯಲ್ಲಿ 'ಕೀಯನ ಓರ'ಯವರ ಬಳಿ ಶಾಫೀ ಕರ್ಮಶಾಸ್ತ್ರದ ವಿಶ್ವ ಪ್ರಸಿದ್ಧ ಗ್ರಂಥ ಫತ್ಹುಲ್ ಮುಈನ್ ಸಹಿತ ಇನ್ನಿತರ ಗ್ರಂಥಗಳನ್ನು ಅವರ ಗರಡಿಯಲ್ಲಿ ಅಧ್ಯಯನ ಮಾಡಿದ ಬಳಿಕ ಉಳ್ಳಾಲ ತಂಙಳ್ (ತಾಜುಲ್ ಉಲಮಾ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್-ಬುಖಾರಿ ಖ.ಸಿ)ರ ದರ್ಸಿಗೆ ಸೇರಿದರು.
*ದ್ವೀಪದೊಳಗಿನ 'ತುರುತ್ತಿ'*
ಈ ಕಾಲಾವಧಿಯಲ್ಲಿ ಮಹಾನರು ತುರುತ್ತಿಯೊಂದಿಗೆ ಒಡನಾಟ ಬೆಳೆಸಿದರು. ಆ ಊರು ಹಾಗೂ ಊರಿನವರು ಮಾಡಿದ ಸಹಾಯ ದೊಡ್ಡ ನಿಧಿಯಾಗಿ ಕಾಪಿಟ್ಟರು. 1935 ರಿಂದ ತುರುತ್ತಿ ಜುಮಾ ಮಸೀದಿಯಲ್ಲಿ ಎಲ್ಲಾ ತಿಂಗಳ ಪ್ರಥಮ ಶುಕ್ರವಾರದ ಫಂಡ್ ಕಲೆಕ್ಷನ್ ಮಹಾನುಭಾವರಿಗಾಗಿ ನಡೆಯುತ್ತಿತ್ತು. ಈ ದಿನಚರಿ ನಿರಂತರವಾಗಿ ಮುಂದುವರಿದವು.
ತಾಜುಲ್ ಉಲಮಾರೊಂದಿಗೆ ಆರು ವರ್ಷ ಪ್ರಮುಖ ಕಿತಾಬ್ಗಳನ್ನು ಅಧ್ಯಯನ ಮಾಡಿದರು. ಅಂದು ಉಳ್ಳಾಳದಲ್ಲಾಗಿದೆ ದರ್ಸ್. ಮದನಿ ಕಾಲೇಜಾಗಿ ಅಭಿವೃದ್ಧಿಯಾಗಿರಲಿಲ್ಲ. ಈ ಕಾಲಾವಧಿಯಲ್ಲಿ
'ಖಾಝಿ ಕುಂಬೋಳ್ ಯು.ಕೆ ಆಟಕ್ಕೋಯ ತಂಙಳ್ ಹಾಗೂ ತಾಝಕ್ಕೋಡ್ ಅಬ್ದುಲ್ಲಾ ಮುಸ್ಲಿಯಾರ್' ಸಹಪಾಠಿಗಳಾಗಿದ್ದರು. ತಹ್ಸೀಲ್²ಗಾಗಿ ತಂಙಳ್ ಹಾಗೂ ಮಹಾನರು ವೆಲ್ಲೂರಿನ ದಾರಿ ಹಿಡಿದರು. ಅಂದು ತಾಝಕ್ಕೋಡ್ ತನ್ನ ಆಪ್ತ ಗೆಳೆಯನಿಗೆ ಪದ್ಯ ರೂಪದಲ್ಲಿ ಬರೆದ ಪತ್ರದ ಪ್ರತಿಯೊಂದು ಸಾಲು ಅವರ ಸಂಬಂಧದ ಆಳವನ್ನು ಚಿತ್ರಿಸುತ್ತದೆ. ಅದರ ಪ್ರಾರಂಭ ಈ ರೀತಿಯಾಗಿತ್ತು.
مِنَ الْفَقِيرِ أَسِيرِ الذَّنْبِ عَبْدِ هَوَى ؛ لَكِنْ سُمَاهُ بِعَبْدِ اللهِ يَدْعُونَا
إِلىَ الشَّرِيكَيْنِ آڑَكُويَ سَيِّدِنَا ؛ يُوكے كَذَا اچْ عَبْدُ اللهِ مَوْلَانَا
'ಶೈಖ್ ಆದಂ ಹಝ್ರತ್, ಶೈಖ್ ಹಸನ್ ಹಝ್ರತ್'ರಂತಹ ಗುರುಗಳೊಂದಿಗೆ ನಿಕಟ ಸಂಪರ್ಕ ಬೆಳೆಸಿದರು. 'ಶೈಖ್ ಸಿ. ಎಂ ಮಡವೂರ್' ಉಪ್ಪಾಪ ಸಹಿತ ಅಲ್ಲಿ ವಿದ್ಯಾರ್ಥಿಗಳಾಗಿದ್ದರು. ಬಾಖಿಯಾತಿನ ಗೋಡೆಗಳು ಹಾಗೂ ಮರಳ ಕಣಗಳು ಎರಡು ವರ್ಷದ ಪಠಣ ಪೂರ್ತಿಯಾಗಿ ಸನದ್ ಹಾಗೂ ಕೋಟ್ ಸ್ವೀಕರಿಸಿ ಹೊರಡುವಾಗ ತಕ್ಬೀರ್ ಮೊಳಗಿಸಿ ಸಂತೋಷ ಭರಿತವಾಗಿ, ಹರ್ಷೋದ್ಗಾರಗಳಿಂದ ತುಂಬಿದ್ದವು.
*ಸಂಚಾರ ಹಾಗೂ ಹಜ್ಜ್*
ಇಸ್ಲಾಂ ಸ್ವೀಕರಿಸಿದ ಬಳಿಕ ಶೈಖ್ರ ಸಂಪೂರ್ಣ ಚಿಂತೆ ಆಧ್ಯಾತ್ಮಿಕ ಲೋಕವೇ ಆಗಿತ್ತು. ಕೇರಳದ ಕರಾವಳಿ ಪ್ರದೇಶಗಳ ಮೂಲಕ ಕಾಲ್ನಡಿಗೆಯಲ್ಲಿ ಸಂಚರಿಸಿ, ರಾಷ್ಟ್ರವನ್ನು ದಾಟಿ ಪಾಕಿಸ್ತಾನದ ಹಾದಿಯಲ್ಲಿ ಇರಾನಿನ ಮೂಲಕ ಇರಾಖಿಗೆ ತಲುಪಿದರು. ಈ ಸಂಚಾರದಲ್ಲಿ ಅನೇಕ ವಿದ್ವಾಂಸರನ್ನು ಭೇಟಿಯಾಗಿ ಅವರ ಒಡನಾಟ ಬೆಳೆಸುತ್ತಿದ್ದರು. ನೂರಾರು ಔಲಿಯಾಗಳ ಮಝಾರವನ್ನು ಝಿಯಾರತ್ ಮಾಡಿದರು.
'ಕೊಟ್ಟಾಯಂ ಙೆಂಡಾಡಿ ಶೈಖ್ರ ಶೈಖ್'ರವರು ಬಗ್ದಾದ್ನಲ್ಲಿ ಸಂದರ್ಶಿಸಿ, ಶಿಷ್ಯನಿಗೆ ಸಲಾಂ ಹೇಳಿ ಕಳುಹಿಸಿದರು ಊರಿಗೆ ಮರಳಿದ ಮಹಾನ್ ಕೊಟ್ಟಾಯಂ ಙೆಂಡಾಡಿ ಶೈಖ್ರನ್ನು ಭೇಟಿ ಮಾಡಿ ಸಲಾಂ ತಲುಪಿಸಿದ್ದು ಸರ್ವರಿಗೂ ತಿಳಿದಿರುವ ವಿಚಾರ.
ಅಲ್ಲಿಂದ ಮಕ್ಕಾ, ಮದೀನಾ ಸಂದರ್ಶಿಸಿದರು. ಎರಡೂ ಹರಮಿನಲ್ಲೂ ಒಂದು ವರ್ಷದ ಸುದೀರ್ಘ ಕಾಲ ಆರಾಧನೆಯಲ್ಲಿ ನಿರತರಾದರು. ವರ್ಷದಲ್ಲಿ ಒಂದು ಬಾರಿ ನಡೆಯುವ 'ಕಅಬಾ ಶುಚಿಗೊಳಿಸುವಿಕೆ' ಸಂಭ್ರಮದಲ್ಲಿ ಪಾಲ್ಗೊಳ್ಳುವ ಭಾಗ್ಯ ಒಲಿದು ಬಂದವು. ಖಂಡಿತಾ ಇದು ಅಲ್ಲಾಹು ತನ್ನ ಇಷ್ಟದಾಸರಿಗೆ ನೀಡುವ ಕೊಡುಗೆಯಾಗಿದೆ. ಹರಮೈನ್ನಲ್ಲಿ ವಿಶ್ವ ವಿಖ್ಯಾತರಾದ ಹಲವರನ್ನು ದರ್ಶಿಸಿ, ಒಡನಾಟ ಬೆಳೆಸಿ ಅವರಿಂದ ಇಜಾಝತ್, ಸನದ್ ಪಡೆದುಕೊಂಡರು.
ಮಹಾನರ ಶಿಷ್ಯ ಶೈಖುನಾ ಮಾಣಿ ಉಸ್ತಾದ್ ಹೇಳುತ್ತಾರೆ; 'ಒಮ್ಮೆ ಮಹಾನುಭಾವರು ನಾಗೂರು ಝಿಯಾರತಿಗೆ ತೆರಳಿದ ಸಮಯದಲ್ಲಿ ಹಣವೂ ವಸ್ತ್ರವೂ ಇಡುವ ಥೈಲಿಯೊಂದು ನಷ್ಟವಾಯಿತು. ಅದನ್ನು ಓರ್ವ ಮಲಯಾಳಿ, ಸ್ನೇಹಿತರಂತೆ ನಟಿಸಿ ಕಳ್ಳತನ ಮಾಡಿದ್ದ. ಉಳಿದಿರುವುದು ಉಸ್ತಾದ್ ಧರಿಸಿದ ಲುಂಗಿ, ಪೇಟ ಹಾಗೂ ಬನಿಯನ್ ಮಾತ್ರ. ಶರ್ಟ್ ಸಹಿತ ಆ ಪುಟ್ಟ ಚೀಲೆಯಲ್ಲಿತ್ತು. ತುಂಬಾ ಅಸಮಾಧಾನ ವ್ಯಕ್ತಪಡಿಸಿದ ಉಸ್ತಾದ್ ಹೇಗೋ ನೇರವಾಗಿ ಬಾಂಬೆಗೆ ತಲುಪಿದರು. ಅಲ್ಲಿ ಕುಂಬಳೆ ಕಲ್ಮಟ್ಟ ಹಾಜಿ ಎಂಬವರು ಉಸ್ತಾದರನ್ನು ಭೇಟಿಯಾದರು. ಅವರು, ಉಸ್ತಾದರನ್ನು ಪ್ರೀತಿಸುತ್ತಿದ್ದ ಪರಿಚಿತ ವ್ಯಕ್ತಿ. ತಕ್ಷಣ ಅವರ ಕೋಣೆಗೆ ಕರೆದುಕೊಂಡು ಆಹಾರ ನೀಡಿದರು. ದರ್ಜಿಯ ಬಳಿ ಹೋಗಿ ಹೊಸ ಬಟ್ಟೆ ಹೊಲಿಸಿದರು. ಅಲ್ಲಿ ಕೆಲಕಾಲ ವಾಸಿಸಿ, ದಣಿವು ನೀಗಿದಾಗ ಪುನಃ ಪಯಣ ಮುಂದುವರೆಯಿತು. ಉಸ್ತಾದ್ ಕಾಲ್ನಡಿಗೆಯ ಮೂಲಕ ಹಜ್ಜಿಗೆ ಹೋದದ್ದು ಇದೇ ಯಾತ್ರೆಯಲ್ಲಾಗಿದೆ.'
ಆತ್ಮೀಯ ಶಿಷ್ಯ ಪುದಿಯಾಪ್ಪಿಳ ಮುಹಮ್ಮದ್ ಫೈಝಿ ಉಸ್ತಾದರು ಹೇಳುತ್ತಾರೆ; 'ನಾನು ಒಮ್ಮೆ ಹಜ್ಜ್ ಯಾತ್ರೆಯ ಕುರಿತು ಕೇಳಿದೆ. ಆ ಸಮಯದಲ್ಲಿ ಉಸ್ತಾದ್ ಹೇಳಿದರು; ಸಂಚಾರದಲ್ಲಿ ಹಜ್ಜಿನ ಉದ್ದೇಶ ಇರಲಿಲ್ಲ. ಝಿಯಾರತ್ ಹೋದದ್ದಾಗಿದೆ. ಸುದೀರ್ಘ ಸಂಚಾರದ ವೇಳೆ ಅಲ್ಲಿಗೆ ತಲುಪಿದ್ದಾಗಿದೆ ಎಂದರು. ಹಜ್ಜ್ ಯಾತ್ರೆಯ ವಿಸ್ಮಯಕಾರಿ ಅನುಭವ, ನೆನಪು ಉಸ್ತಾದರಿಗೆ ಮಾತ್ರ ಗೊತ್ತು. ಅಪರೂಪವಾಗಿ ಕೆಲ ಸಮಯಗಳಲ್ಲಿ ಶಿಷ್ಯರೊಂದಿಗೆ ಹೇಳಿದ ಕೆಲ ಘಟನೆಗಳು ಮಾತ್ರ ಪ್ರಕಟವಾಗಿರುವುದು. ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿ ನರಭಕ್ಷಕರ ಕೈಗೆ ಬಿದ್ದು ಸಾವನ್ನು ಎದುರಿಸಿದ ಕ್ಷಣಗಳು, ಸುತ್ತಲೂ ಹರಡಿರುವ ಮಾನವ ಮೂಳೆಗಳು, ಮೂಳೆಗಳು ಮತ್ತು ತಲೆಬುರುಡೆಗಳ ಭಯಾನಕ ದೃಶ್ಯ.!!
ಹೆದರದೆ; ಎಲ್ಲ ಕಾರ್ಯಗಳಲ್ಲೂ ಅಲ್ಲಾಹನಿಗೆ ತವಕ್ಕುಲ್ ಮಾಡಿದರು. ಉಸ್ತಾದ್, ಅಲ್ಲಿಂದ ತಂತ್ರಪೂರ್ವಕವಾಗಿ ತಪ್ಪಿಸಿಕೊಂಡರು.
ಮರುಭೂಮಿಯಲ್ಲಿ ಆಹಾರ, ನೀರು ಇಲ್ಲದಿರುವಾಗ
ಅಪರಿಚಿತರ ಗುಂಪು ಬಂದು ಉಸ್ತಾದರಿಗೆ ರುಚಿಕರವಾದ ಆಹಾರ ಮತ್ತು ಪಾನೀಯಗಳನ್ನು ನೀಡಿತು. ಆ ಸಂಘ ಬದ್ರ್ ಮಹಾತ್ಮರು (ಬದ್ರೀಂಙಳ್) ಆಗಿದ್ದರು ಎಂದು ಉಸ್ತಾದರ ನಂತರದ ಮಾತಿನಿಂದ ಸ್ಪಷ್ಟವಾಗುತ್ತದೆ.
ಪಾಕಿಸ್ತಾನದ ಕರಾಚಿಯಲ್ಲಿರುವ ಮಸೀದಿಯಲ್ಲಿ ಖುರ್ಆನ್ ಪಠಿಸುವ ಸಮಯದಲ್ಲಿ ಒಬ್ಬ ವ್ಯಕ್ತಿಯು ಉಸ್ತಾದರ ಬಳಿ ಬಂದು ಪ್ರೀತಿಯಿಂದ ಅವರನ್ನು ಆಹ್ವಾನಿಸಿ ಮನೆಗೆ ಕರೆದೊಯ್ದರು. ಇದು ಪಾಕಿಸ್ತಾನದ ಮೊದಲ ಗವರ್ನರ್ ಜನರಲ್ 'ಖಾಜಾ ನಝೀಮುದ್ದೀನ್' ಆಗಿದ್ದರು. ಅವರು ಉಸ್ತಾದ್ಗೆ ಅಲ್ಲಿಯೇ ಇರಲು ಎಲ್ಲಾ ವ್ಯವಸ್ಥೆಗಳನ್ನು ಮಾಡಿದರು. ಅಲ್ಲಿ ಉರ್ದು ಭಾಷೆಯನ್ನು ಕಲಿತರು.
ಈ ಸಂಚಾರ ಝಿಯಾರತ್, ಹಜ್ಜ್ ಎಲ್ಲವೂ ಇಸ್ಲಾಂ ಸ್ವೀಕರಿಸಿ ತುರುತ್ತಿಯಲ್ಲಿ ವಾಸಿಸುವ ಅವಧಿಯಲ್ಲಿ ನಡೆದವು.
*ಸಜಿಪ ಉಸ್ತಾದ್*
ವೆಲ್ಲೂರಿನಿಂದ ಬಂದ ಶಿಷ್ಯನನ್ನು ತಾಜುಲ್ ಉಲಮಾ ಸ್ವತಃ ಮಂಗಳೂರು ಸಮೀಪದ ಸಜಿಪಾಗೆ ಕಳುಹಿಸಿದರು. ಅವರು ಸುದೀರ್ಘ ವಾದ ಇಪ್ಪತ್ತು ವರ್ಷಗಳ ಕಾಲ ಅಲ್ಲಿ ಸೇವೆಗೈದರು. (ಬೇರೆಡೆ ಕೆಲಸ ನಿರ್ವಹಿಸಲಾಗಿಲ್ಲ) ಕಿರಿಯರು ಮತ್ತು ಹಿರಿಯರನ್ನೊಳಗೊಂಡ ಸರ್ವರೂ ಶೈಖುನಾರನ್ನು ಗೌರವಯುತವಾಗಿ ಸಜಿಪ ಉಸ್ತಾದ್ ಎಂದು ಕರೆದರು.
- ಶೈಖುನಾ ಮಾಣಿ ಉಸ್ತಾದ್ ನೆನಪಿಸುತ್ತಾರೆ;
'ನಾನು ಮಂಜನಾಡಿಯಲ್ಲಿ ಓದುತ್ತಿದ್ದ ಸಮಯದಲ್ಲಿ ಸಜಿಪ ಉಸ್ತಾದ್ ಬಗ್ಗೆ ಕೇಳಿದ್ದರೂ ಕಂಡಿರಲಿಲ್ಲ. ದೀನಿಗೆ ಹಾದು ಬಂದು, ವೆಲ್ಲೂರಿಗೆ ಹೋಗಿ ತಹ್ಸೀಲಾಗಿ, ಕಾಲ್ನಡಿಗೆಯಿಂದ ಹಜ್ಜಿಗೆ ಹೋದ ಮಹಾಪುರುಷನನ್ನು ನೋಡಬೇಕೆಂಬ ಮಹದಾಸೆ ಹೃದಯದಲ್ಲಿ ಟಿಸಿಲೊಡೆಯತೊಡಗಿತು. ನನ್ನ ಕೆಲವು ಸ್ನೇಹಿತರೊಂದಿಗೆ ಸಜಿಪಾಗೆ ಹೋದೆ. ಮಹಾನರನ್ನು ವೈಯಕ್ತಿಕವಾಗಿ ಭೇಟಿಯಾಗಿ ನೇರವಾಗಿ ಮಾತನಾಡಿದೆ. ಅವರ ಮಾತು, ಕ್ರಿಯೆ ಮತ್ತು ನಮ್ರತೆಯನ್ನು ನೋಡಿ ಆಕರ್ಷಿತನಾಗಿ ಅವರ ಶಿಷ್ಯತ್ವವನ್ನು ಸ್ವೀಕರಿಸಲು ಬಯಸಿದೆ. ಅಲ್ಲಾಹನ ಅನುಗ್ರಹದಿಂದ ಅದು ಯಶಸ್ವಿಯಾಯಿತು. ಮಹಾನರ ಬಳಿ ಶಿಷ್ಯನಾಗಿ ಒಂದು ವರ್ಷ ಅಧ್ಯಯನ ಮಾಡಲು ಅಲ್ಲಾಹನು ಅನುಗ್ರಹಿಸಿದ.'
ಆ ದರ್ಸಿನ ಘನತೆ ಕೇಳುವಿರಾ..?
ಗ್ರಂಥಗಳನ್ನು ಹೇಳಿಕೊಡುವ ಉಸ್ತಾದರ ಹಾಗೂ ಅಭ್ಯಸಿಸುವ ವಿದ್ಯಾರ್ಥಿಗಳ ಪರಿಸ್ಥಿತಿಗಳನ್ನು ತಿಳಿದುಕೊಳ್ಳಲು ಬಯಸುವಿರಾ..!?
ಕಣ್ಣು ಮತ್ತು ಕಿವಿಯನ್ನು ತಡವಿ ತಾಳ್ಮೆಯಿಂದ ಕಾಯಿರಿ,
ಮಾಣಿ ಉಸ್ತಾದ್ ನಮ್ಮನ್ನು ಆ ತರಗತಿಗೆ ಕೊಂಡು ಹೋಗುತ್ತಿದ್ದಾರೆ.
'ಎಷ್ಟೇ ಸಂಕಷ್ಟ ಮತ್ತು ಕಷ್ಟಗಳಿದ್ದರೂ ತರಗತಿಗೆ ವಿರಾಮ ಹಾಕಲಿಲ್ಲ. ಅಲ್ಲಾಹನಿಗೆ ತುಂಬಾ ಭಯಪಡುತ್ತಿದ್ದರು. ತಫ್ಸೀರ್³ ಓದಿಸುವಾಗ ಭಯಭಕ್ತಿಯಿಂದ ಇದ್ದು, ಶಿಕ್ಷೆಯ ಸೂಕ್ತಗಳು ಬಂದರೆ ಹೆದರೆ ಕಣ್ಣೀರಿಳಿಸುತ್ತಿದ್ದರು. ಹಲವಾರು ಸಮಯದಲ್ಲಿ ಕಣ್ಣೀರಿಳಿಸಿ ನಿಯಂತ್ರಣ ತಪ್ಪಿ ಹೋಗುತ್ತಿದ್ದವು. ಪುಣ್ಯ ಪ್ರವಾದಿ ﷺ ರೊಂದಿಗೆ ಗಾಢ ಸ್ನೇಹ ಬೆಳೆಸಿದ್ದರು. ಹದೀಸ್ ಹೇಳಿಕೊಡುವ ಸಮಯದಲ್ಲಿ ಹಬೀಬರಿಗೆ ಯಾವುದಾದರೆ ಸಂಕಷ್ಟ ಬಂದೆರಗುವ ಘಟನೆ ಬಂದರೆ ಕಣ್ಣೀರಲ್ಲಿ ಮುಳುಗುತ್ತಿದ್ದರು.'
*ಸೂಕ್ಷ್ಮತೆ*
ಸಜಿಪ ಉಸ್ತಾದ್, ಜೀವನದ ಪ್ರತಿಯೊಂದು ಸಂದರ್ಭದಲ್ಲೂ ಅತ್ಯಂತ ಸೂಕ್ಷ್ಮತೆಯನ್ನು ವಹಿಸಿದ್ದರು. ನಿಶ್ಚಲವಾದ ನೀರಿನಲ್ಲಿ ಅಂಗಸ್ನಾನ ಮಾಡಲು ಕರಾಹತ್ ಎಂಬ ಅಭಿಪ್ರಾಯ ಪರಿಗಣಿಸಿ ಹೌಳಿನಲ್ಲಿ ಉಸ್ತಾದ್ ಅಂಗಸ್ನಾನ ಮಾಡಲಿಲ್ಲ. ಸ್ವತಃ ಅವರೇ ಬಾವಿಯಿಂದ ನೀರನ್ನು ಮೇಲಕ್ಕೆತ್ತಿ ಅಂಗಸ್ನಾನ ಮಾಡುತ್ತಿದ್ದರು. ಯಾರಾದರೂ ಬಾವಿಯಿಂದ ನೀರು ಸೇದಲು ಉಸ್ತಾದರಿಗೆ ಸಹಾಯ ಮಾಡಲು ಹೋದರೆ ಗೌರವಪೂರ್ವಕವಾಗಿ ತಿರಸ್ಕರಿಸುತ್ತಿದ್ದಿರು.
*ಎಂ.ಎ ಉಸ್ತಾದರ ಮಾತುಗಳು*
'ಅವನ ಮರಣಶಯ್ಯೆಯಲ್ಲೂ ಸಹ ಇಸ್ಲಾಮಿನ ನಿಯಮಗಳು, ಸುನ್ನತ್ಗಳನ್ನು ಅನುಸರಿಸಿದರು ಮತ್ತು ಒಂದೇ ಒಂದು ಕರಾಹತ್ ಬರದಂತೆ ಸೂಕ್ಷ್ಮತೆ ಪಾಲಿಸಿದರು'
ಫೋಟೋ ನಿಷೇಧವೆಂಬ ಕರ್ಮಶಾಸ್ತ್ರದ ದೃಷ್ಟಿಕೋನವನ್ನು ಅವರು ಪರಿಗಣಿಸಿದರು. ಆದ್ದರಿಂದ, ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದರು.
ಮುಂದುವರಿದು ಹೇಳುತ್ತಾರೆ: 'ನಾವು ಕಾಸರಗೋಡಿನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಜೊತೆಯಾಗಿ ಇದ್ದೆವು. ಮಹಾನುಭಾವರ ಸಮ್ಮುಖದಲ್ಲಿ ಯಾರೂ ಫೋಟೋ ತೆಗೆಯಲು ಧೈರ್ಯ ಮಾಡಲಿಲ್ಲ.'
*ತವಕ್ಕುಲ್*
ಅವರು ಯಾವುದೇ ವಿಷಯಕ್ಕೆ ಅಂಜದ, ಅಲುಗಾಡದ ತವಕ್ಕುಲ್ನ ಒಡೆಯರಾಗಿದ್ದಾರೆ.ಯಾರೂ ಕೂಡ ವಿಚಲಿತರಾಗುವ ಸಮಯದಲ್ಲಿ ಕಲ್ಲು ಬಂಡೆಯಂತೆ ಸ್ಥಿರವಾಗಿ ನಿಂತರು. ಅದನ್ನು ಅರಿತುಕೊಳ್ಳಲು ಹಜ್ಜ್ ಯಾತ್ರೆ ಹಾಗೂ ಅನಾರೋಗ್ಯ ಪೀಡಿತರಾಗಿದ್ದ ಸಮಯವೇ ಸಾಕ್ಷಿ.
*ರೋಗಶಯ್ಯೆಯಲ್ಲಿ*
ಸಜಿಪಾದಲ್ಲಿ ದರ್ಸ್ ಉತ್ತಮವಾಗಿ ಪ್ರಗತಿಯಲ್ಲಿರುವಾಗ ಉಸ್ತಾದ್ ಅನಾರೋಗ್ಯಕ್ಕೆ ಒಳಗಾದರು. ಚಿಕಿತ್ಸೆಗಳು ಮತ್ತು ಔಷಧಿಗಳು ಫಲಿಸಲಿಲ್ಲ. ಸುದೀರ್ಘ ಹದಿನೆಂಟು ವರ್ಷಗಳ ಕಾಲ ಹಾಸಿಗೆ ಹಿಡಿದರು. ಈ ಸಮಯದಲ್ಲಿ ಅವರು ತಮ್ಮ ಅನಾರೋಗ್ಯದ ಕುರಿತೋ ಅಥವಾ ದೈಹಿಕ ನೋವಿನ ಒಂದು ಮಾತನ್ನೂ ಆಡಲಿಲ್ಲ. ಜೀವನ ವೆಚ್ಚ ಮತ್ತು ಕುಟುಂಬದ ಹೊರೆಗಳನ್ನು ನಿಲ್ಲಿಸಿ ದೈನ್ಯತೆ ಮತ್ತು ಹತಾಶೆ ಕೂಡಾ ವ್ಯಕ್ತಪಡಿಸಲಿಲ್ಲ.
إِنَّمَا أَشْكُو بَثِّي وَحُزْنِي إِلىَ الله
'ನಾನು ನನ್ನ ದುಃಖ ಹಾಗೂ ಸಂಕಷ್ಟವನ್ನು ವ್ಯಕ್ತಪಡಿಸುವುದು ಅಲ್ಲಾಹನಿಗೆ ಮಾತ್ರವಾಗಿದೆ' ಎಂಬ ಯಅಕೂಬ್ ನಬಿ(ಅ)ರನ್ನು ಹಿಂಬಾಲಿಸಿಯಾಗಿತ್ತು ಆ ಜೀವನ.
وَمَنْ يَتَوَكَّلْ عَلَى اللهِ فَهُوَ حَسْبُهُ
'ಅಲ್ಲಾಹನೊಂದಿಗೆ ಸರ್ವವನ್ನೂ ಅರ್ಪಿಸುವಾತನಿಗೆ ಅಲ್ಲಾಹು ಸಾಕು' ಎಂಬ ಪುಣ್ಯ ವಚನದ ಸಂಪೂರ್ಣ ಸಾಕ್ಷಾತ್ಕಾಕರಣವಾಗಿದೆ ಮಹಾನರ ಸರ್ವ ಕಾರ್ಯಗಳು. ಅಗತ್ಯವಿರುವ ಎಲ್ಲವನ್ನೂ ಆತ ಸಿದ್ಧಪಡಿಸಿದ. ಸತತ 30 ವರ್ಷ ರೋಗ ಭಾಧಿತನಾಗಿ ಮಲಗಿದ ಸ್ವಹಾಬಿ ಇಮ್ರಾನ್ ಬಿನ್ ಉನೈಸ್(ರ) ರ ಜೀವನವನ್ನು ಸ್ಮರಿಸಿಯಾಗಿತ್ತು ಅವರ ತ್ಯಾಗಪೂರ್ಣ ಜೀವನ.
ಇಷ್ಟು ದಿನ ಅನಾರೋಗ್ಯದಿಂದ ಬಳಲುತ್ತಿದ್ದರೂ ಅವರ ಮುಖದಲ್ಲಿನ ಪ್ರಸನ್ನತೆ, ನಗು ಮಾಯಲಿಲ್ಲ. ದುಃಖದ, ಸಂಕಟದ ಕಾರ್ಮೋಡಗಳು ಕವಿದಿರಲಿಲ್ಲ.
ಅದು ನೀಲಾಕಾಶದಂತೆ ಸ್ಪಷ್ಟವಾಗಿತ್ತು. ತಿಳಿನೀರಿನ ಹಾಗೆ ಸ್ವಚ್ಛಂದವಾಗಿ ಸಾಗುತ್ತಿತ್ತು.
ಇನ್ನೊಂದು ವಿಷಯದಲ್ಲಿ ಇಬ್ಬರೂ ಸಮಾನರಾಗಿದ್ದರು.
ಅದನ್ನೂ ಹೇಳದೆ ಈ ಲೇಖನ ಪೂರ್ಣಗೊಳ್ಳುವುದಿಲ್ಲ.
ಇಂಮ್ರಾನ್ ಬಿನ್ ಅಲಿ ಮುಆವಿಯಾ ರಳಿಯಲ್ಲಾಹು ಅನ್ಹುರಿಗೆ ಒಮ್ಮೆ ಸಹೋದರರು ಜಗಳವಾಡುವ ಸಮಯ ಹಿಡಿಸಲಿಲ್ಲ. ಅದರಿಂದ ದೂರವಿದ್ದುಕೊಂಡರು. ಆ ವಿಭಜನೆಯಿಂದ ಅವರಿಗೆ ತೀವ್ರ ದುಃಖವಾಯಿತು. ಅಂತೆಯೇ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ವಿದ್ವಾಂಸರಲ್ಲಿ ಒಡಕು ಉಂಟಾದಾಗ ಮಹಾನುಭಾವರು ಕೂಡಾ ಬಹಳವಾಗಿ ನೊಂದರು. ಉಮ್ಮತ್ತ್ ಪರಸ್ಪರ ಕಚ್ಚಾಡುವ ದೃಶ್ಯ ನೋಡಿದಾಗ ಹೃದಯ ಭಾರವಾಯಿತು.
ಸುಬ್ಹನಲ್ಲಾಹ್..!
ಇತಿಹಾಸದ ಕೆಲವು ಪುಟಗಳು ಎಷ್ಟು ಅದ್ಭುತವಾಗಿವೆ..!
*ಐದು ಪೈಸೆಯ ಪ್ರತಿಜ್ಞೆ (ನೇರ್ಚೆ)*
ಒಮ್ಮೆ ಪ್ರಯಾಣದ ಮಧ್ಯದಲ್ಲಿ, ಮಂಗಳೂರು ಪ್ರದೇಶದ ಒಂದು ಸ್ಥಳವನ್ನು ತಲುಪಿದಾಗ, ಉಸ್ತಾದ್ ವಾಹನದಲ್ಲಿ ಭಾರೀ ಅಳುತ್ತಾರೆ. ಯಾಕೆ ಅಳುತ್ತಿದ್ದೀರಿ ಎಂದು ಜೊತೆಗಿದ್ದವರು ಪ್ರಶ್ನಿಸಿದಾಗ ನೀಡಿದ ಉತ್ತರ ರೋಚಕವಾಗಿದೆ.
ಉಸ್ತಾದ್, 'ಇಸ್ಲಾಂಗೆ ಬರುವ ಮೊದಲು ಬಾಲ್ಯದ ದಿನಗಳಲ್ಲಿ ಮಂಗಳೂರು ಭಾಗದ ಅಧಿಕಾರಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದೆ. ಒಮ್ಮೆ ಜ್ವರ ಬಂದು ಕೆಲಸ ಮಾಡಲು ವಿಘ್ನವಾಯಿತು. ನಿಖರವಾಗಿ ಕೆಲಸ ಮಾಡದ ಕಾರಣ ತನ್ನ ಉದ್ಯೋಗದಾತ ಖಂಡಿಸುತ್ತಾನೆ ಎಂದು ಹೆದರಿದ್ದೆ. ಏನೂ ಸಂಭವಿಸಕೂಡದು ಎಂದು ಉಳ್ಳಾಲ ದರ್ಗಾಕ್ಕೆ ಐದು ಪೈಸೆ ನೇರ್ಚೆ ಮಾಡಿದೆ. ಪ್ರತಿಜ್ಞೆಯ ಪರಿಣಾಮವಾಗಿ ಉದ್ಯೋಗದಾತನಿಂದ ಯಾವುದೇ ಮಹತ್ವದ ಪ್ರತಿಕ್ರಿಯೆ ಕಂಡುಬಂದಿಲ್ಲ. ಕೆಲ ಕಾಲದ ಬಳಿಕ, ಕುದುರೆಯ ಮೇಲೆ ಒಬ್ಬ ವ್ಯಕ್ತಿಯು ಅದೇ ಸ್ಥಳಕ್ಕೆ ಬಂದು ನಾನು ನೇರ್ಚೆ ಮಾಡಿದ ಐದು ಪೈಸೆಗಳನ್ನು ಆ ವ್ಯಕ್ತಿಗೆ ಕೊಡುವಂತೆ ಕೇಳಿಕೊಂಡರು. ಕೈಯಲ್ಲಿ ಭದ್ರವಾಗಿ ಇಟ್ಟಿದ್ದ ಐದು ಪೈಸೆಗಳನ್ನು ಕುದುರೆಯೊಂದಿಗೆ ಬಂದ ವ್ಯಕ್ತಿಗೆ ನೀಡಲಾಯಿತು. ಅದು ಈ ಪ್ರದೇಶದಲ್ಲಿ ನಡೆದ ಘಟನೆಯಾಗಿದೆ. ಆ ದಿನದ ಘಟನೆಗಳನ್ನು ನೆನಪಿಸಿಯಾಗಿದೆ ಈ ಕೂಗು..!!' ಎಂದರು.
*ಗುರು-ಶಿಷ್ಯರ ನಡುವಿನ ಸಂಬಂಧ*
ವೆಲ್ಲೂರಿನಲ್ಲಿ ಅಧ್ಯಯನದ ಅವಧಿಯಲ್ಲಿ ಮಹಾನರ ಕಲಿಕೆ ಅಲ್ಲಿನ ಗುರುವರ್ಯರೊಂದಿಗೆ ವಾತ್ಸಲ್ಯ, ವಿಶೇಷ ಪ್ರೀತಿಯನ್ನು ಬೆಳೆಸಿಯಾಗಿತ್ತು. ಶೇಖ್ ಹಸನ್ ಹಝ್ರತ್ ಅವರೊಂದಿಗಿನ ಸಂಬಂಧ ಅಭೇಧ್ಯವಾದುದು. ಅನಾರೋಗ್ಯ ಪೀಡಿತರಾದ ಹಝ್ರತ್ರರನ್ನು ಮಂಗಳೂರಿಗೆ ದಾಖಲಿಸುವಾಗ ಅವರನ್ನು ನೇರವಾಗಿ ಭೇಟಿ ಮಾಡಲು ಅಥವಾ ಆ ಮುಖವನ್ನು ನೋಡಲು ಸಾಧ್ಯವಾಗದ ಕಾರಣ ಉಸ್ತಾದ್ ತುಂಬಾ ನೊಂದಿದ್ದರು. ನಾನು ಹಾಸಿಗೆಯಲ್ಲಿದ್ದೇನೆ.
ಏನ್ ಮಾಡೋದು..!? ಕೆಲವೇ ದಿನಗಳಲ್ಲಿ ಹಝ್ರತ್ರ ವಿಯೋಗದ ಸುದ್ದಿ ಕೂಡ ತಲುಪಿತು. ಉಸ್ತಾದರ ದುಃಖ ದುಪ್ಪಟ್ಟಾಗಿ, ಮನಸ್ಸು ಭಾರವಾಯಿತು.
ಸುಬ್ಹಾನಲ್ಲಾಃ
ಹಝ್ರತ್ರ ಮಯ್ಯಿತೊಂದಿಗೆ ಬರುವ ಆಂಬುಲೆನ್ಸ್ ಚೆರುವತ್ತೂರ್ ಹೆದ್ದಾರಿಯಲ್ಲಿರುವ ಉಸ್ತಾದರ ಮನೆ ಬಳಿ ತಲುಪಿದಾಗ ಆಂಬುಲೆನ್ಸ್ ನಿಂತಿತು. ಎಷ್ಟೇ ಪ್ರಯತ್ನಿಸಿದರೂ ಅದು ಸ್ಟಾರ್ಟ್ ಆಗಲಿಲ್ಲ. ಈ ಮಧ್ಯೆ ಇತರರ ಸಹಾಯದಿಂದ ಉಸ್ತಾದ್ ಆಂಬುಲೆನ್ಸ್ ಬಳಿ ತಲುಪಿ ಅಂತಿಮವಾಗಿ ಹಝ್ರತ್ರ ನಗು ಮುಖವನ್ನು ನೋಡಿದರು.
ಸುಬ್ಹಾನಲ್ಲಾಹ್ಃ..!
ವಾಹ್ಹ್ ವೆರಿ ವಾಹ್!!
ಈ ಮಲಯಾಳಂ ರಾಜ್ಯದಲ್ಲಿ ಇಂತಹ ಗುರು ಹಾಗೂ ಶಿಷ್ಯರಿದ್ದರು ಎಂದಾದರೂ ನೀವು ಕೇಳಿದ್ದೀರಾ..?
*ವ್ಯಕ್ತಿತ್ವಗಳು*
ಅರೇಬಿಕ್, ಮಲಯಾಳಂ, ತುಳು, ಕನ್ನಡ
ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅಗತ್ಯ ಬಂದರೆ ಇಂಗ್ಲಿಷ್ ಕೂಡಾ ಬರುತ್ತಿದ್ದವು. ಧಾರ್ಮಿಕ ವಿಷಯದಲ್ಲಿ ಯಾರೊಂದಿಗೂ ರಾಜಿ ಇಲ್ಲ. ಒಮ್ಮೆ ಉಳ್ಳಾಲದಲ್ಲಿ ಯಾರೋ ಫೋಟೋ ತೆಗೆದಾಗ ಕೋಪದಿಂದ ಅಲ್ಲಿಂದ ತೆರಳಿ ಹೋಗುವ ಸಮಯದಲ್ಲಿ ಹಾದಿಯಲ್ಲಿದ್ದ 'ವಡಗರ ಮುಹಮ್ಮದಾಜಿ ತಂಙಳ್' ಹೇಳಿದರಷ್ಟೆ- 'ನಮ್ಮ ನಡುವೆ ಮುಂಕರತ್⁴ ಗಳನ್ನು ವಿರೋಧಿಸುವವರು ಓರ್ವರೇ ಇರುವುದು.'
ಬದ್ರೀಂಙಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು. ಪ್ರತಿ ವರ್ಷ ಶಅಬಾನ್ ೨೨ ಗೆ ಬದ್ರ್ ಮಹಾತ್ಮರ ಹೆಸರಿನಲ್ಲಿ ಬೃಹತ್ ಮಜ್ಲಿಸ್ ನಡೆಸುತ್ತಿದ್ದರು. ಸ್ವತಃ ಮನೆಗೆ 'ಬದ್ರಿಯ್ಯಾ' ಎಂದು ನಾಮಕರಣ ಮಾಡಿದ್ದರು. ಊರಿನವರು, ನೆರೆಹೊರೆಯವರು ಉಸ್ತಾದರ ಕುಟುಂಬವನ್ನು ಇಂದೂ ಕೂಡಾ ಬದರಿಯನ್ನರು/ಬದರಿಯ್ಯ್ ಮನೆಯವರು ಎಂದು ಕರೆಯುತ್ತಾರೆ. ಅತಿಥಿಗಳನ್ನು ಸ್ವೀಕರಿಸಿ, ಸತ್ಕರಿಸುವಲ್ಲಿ ಉಸ್ತಾದ್ ಉತ್ಸಾಹಿಯಾಗಿದ್ದರು. ಟೀ ಮತ್ತು ಕುಂಸ್⁵ ನೀಡದೆ ಯಾರನ್ನೂ ಬಿಡುತ್ತಿರಲಿಲ್ಲ. ಮನೆಯಲ್ಲಿನ ವಿವಾಹಕ್ಕೆ ಆಡಿನ ಮಾಂಸವನ್ನು ಸಿದ್ಧಪಡಿಸುತ್ತಿದ್ದರು. ಉಸ್ತಾದ್, ಅತಿಥಿಗಳನ್ನು ಇಷ್ಟೊಂದು ಪರಿಗಣಿಸಿದ್ದರು.
*ಕುಟುಂಬ*
ಮಲಪ್ಪಿಲ್ನ ಅಬ್ದುಲ್ಲಾ ಮುಸ್ಲಿಯಾರರ ಮಗಳು ಆಸಿಯುಮ್ಮ ಉಸ್ತಾದರ ಸಹಧರ್ಮಿಣಿ. ಶೈಖುನಾರಿಗೆ ಮೂರು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳೊಂದಿಗೆ ಏಳು ಮಕ್ಕಳು. ಮುಹಮ್ಮದಲಿ, ಮುಹಮ್ಮದ್ ಹಸನ್ ಮತ್ತು ಮುಹಮ್ಮದ್ ಹುಸೈನ್, ಮೈಮೂನಾ, ಖದೀಜಾ, ಸಫಿಯಾ, ಬೀ ಫಾತಿಮಾ. ಉಸ್ತಾದರ ಶಿಷ್ಯ ಹಾಗೂ ಪ್ರಮುಖ ವಿದ್ವಾಂಸರಾದ ಮುಹಮ್ಮದ್ ಫೈಝಿ ಮೈಮೂನಾರನ್ನು ವಿವಾಹವಾದರು.
*ಉಸ್ತಾದರ ಅಂತಿಮ ಘಟ್ಟಗಳು*
ಕಿಡ್ನಿ ಕಾಯಿಲೆಯಿಂದ ಅಂತಿಮ ಕಾಲದಲ್ಲಿ ಉಸ್ತಾದರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸುತ್ತಾರೆ. ರೋಗ ಕ್ಷೀಣಿಸಿದವು. ಆ ಸಮಯದಲ್ಲಿ, ಅವರ ಸ್ನೇಹಿತರೊಬ್ಬರು ಆಸ್ಪತ್ರೆಯಲ್ಲಿ ಅತ್ತರ್ ಸುಗಂಧವನ್ನು ಹಚ್ಚಲು ಆಸ್ಪತ್ರೆಗೆ ಹೋದಾಗ, ಇವತ್ತು ಬೇಡ ನಾಲ್ಕನೇ ದಿವಸ ಸಾಕು ಎಂದು ಹೇಳಿ ಅದೇ ನಾಲ್ಕನೇ ದಿವಸ 1994ರ ಸೆಪ್ಟೆಂಬರ್ 3, ಶನಿವಾರ,
ಹಿಜ್ರಾ 1415 ರಬೀಉಲ್ ಅವ್ವಲ್ 24 ಭಾನುವಾರ ರಾತ್ರಿಯಂದು ಈ ಲೋಕಕ್ಕೆ ವಿದಾಯ ಹೇಳಿದರು. ಉಸ್ತಾದರು 71 ವರ್ಷಗಳ ಕಾಲ ಬದುಕಿದರು. ರೇಡಿಯೊ ಸುದ್ದಿಗಳ ಮೂಲಕ ಮರಣವಾರ್ತೆ ತಿಳಿದ ಸಾವಿರಾರು ಜನರು ಅಲ್ಲಿಗೆ ಬಂದು ಸೇರುತ್ತಾರೆ. ಸೈಯದ್ ಅಬ್ದುರ್ರಹ್ಮಾನ್ ಕುಂಙಿಕೋಯ ತಂಙಳರ ನೇತೃತ್ವದಲ್ಲಿ ಮ್ಯಯ್ಯಿತ್ ನಮಾಝ್ ಹಾಗೂ ಜನಾಝ ಸಂಸ್ಕರಣೆ ನಡೆದವು.
ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿರುವ ಚೆರುವತ್ತೂರ್ ಜುಮ್ಮಾ ಮಸೀದಿಯ ಪ್ರಾಂಗಣದಲ್ಲಿ ಸಂಧ್ಯಾ ವೇಳೆ ಧಫನ ಮಾಡಲಾಯಿತು.
ಒಂದು ತಲೆಮಾರಿನ ಪರಿಚಯಸ್ಥರು ಮತ್ತು ನಿಕಟ ಬಂಧಿಗಳು ಕಣ್ಮರೆಯಾಗಿದ್ದಾರೆ.
ಬಾಕಿಯುಳಿದ ಮಹಾತ್ಮರನ್ನು ದರ್ಶಿಸಿರಿ, ನೋಡಿದವರನ್ನು ನೋಡುವ ಭಾಗ್ಯವನ್ನಾದರೂ ಪಡೆಯಿರಿ.
ಅದು ನಮ್ಮ ಮುಂದಿರುವ ಏಕೈಕ ಮಾರ್ಗವಾಗಿದೆ. ಇನ್ನು ನಮಗೆ ಕೆಲವು ಅನರ್ಘ್ಯ ಮುತ್ತುಗಳು ಮಾತ್ರ ಬಾಕಿಯಾಗಿರುವುದು. ಉಸ್ತಾದರ ಶಿಷ್ಯ ಪುದಿಯಾಪ್ಪುಳ ಮುಹಮ್ಮದ್ ಫೈಝಿ, ಕರ್ನಾಟಕದ ಜಂಇಯತ್ ಉಲಮಾದ ಅಧ್ಯಕ್ಷ ಖಾಝಿ ಝೈನುಲ್ ಉಲಾಮಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಹಫಿಲಹುಲ್ಲಾ, ಕಂಕನಾಡಿ ಇಸ್ಮಾಯೀಲ್ ಮುಸ್ಲಿಯಾರ್ ಹಫಿಲಹುಲ್ಲಾ ಇವರನ್ನೆಲ್ಲಾ ಹೋಗಿ ನೋಡಲು ಸಮಯ ಕಂಡುಕೊಳ್ಳಬೇಕಾಗಿದೆ.
-------------------------------------------------
1) ಸತ್ಯವಚನ- ಶಹಾದತ್ ಕಲಿಮ
2) ತಹ್ಸೀಲ್- ಅಂದಿನ ಕಾಲದ ಪದವಿಗಾಗಿ ಕಾಲೇಜಿಗೆ ಹೋಗುವುದನ್ನು ತಹ್ಸೀಲ್ಗಾಗಿ ಹೋಗುವುದು ಎನ್ನುತ್ತಾರೆ. ಇದು ಹಳೆಯ ಉಸ್ತಾದರ ಭಾಷೆಯಾಗಿದೆ. (MFB)
3) ತಫ್ಸೀರ್- ಖುರ್ಆನ್ ವ್ಯಾಖ್ಯಾನ
4) ಮುಂಕರತ್- ತಪ್ಪುಗಳು
5) ಕುಂಸ್- ಒಂದು ಬಗೆಯ ತಿಂಡಿ.
Sajipa Usthad Cheruvattur Maqam
#SajipaUsthad #Cheruvattur #KeralaMaqam #CheruvatturMaqam #SajipaUsthadMaqam

Comments
ಮಹಾನರ ಬಗ್ಗೆ ಕೇಳುವಾಗ ಅರಿಯದೆ ಕಣ್ಣುನೀರು ಬರುತ್ತದೆ
ಅಲ್ಲಾಹು ಅವರ ಬರಕತ್ನಿಂದ ನಮ್ಮ ತಪ್ಪುಗಳನ್ನು ಮನ್ನಿಸಲಿ ಆಮೀನ್