-- ಅಶ್ರಫ್ ನಾವೂರು, ಕೆ.ಜಿ.ಎನ್ ಮಿತ್ತೂರು
ಕಾಲದ ಗರ್ಭಾವಸ್ಥೆಯಲ್ಲಿರುವ ಕೆಲವೊಂದು ಅನರ್ಘ್ಯ ಮಾಹಿತಿಗಳ ಅಧ್ಯಯನ ಕೈಗೊಳ್ಳಬೇಕು. ನೂರಾರು ಇತಿಹಾಸಗಳು ಜಡ್ಡುಗಟ್ಟಿ ಹೋಗಿದೆ. ಅವುಗಳ ಕಲಿಕೆ ನಮ್ಮ ಬದುಕಿನಲ್ಲಿ ಬೆಳಕು ಚೆಲ್ಲುವುದರೊಂದಿಗೆ ಪ್ರೇರಣೆ ನೀಡುವುದು ಕೂಡಾ. ಅಂತೆಯೇ ಇಲ್ಲೊಂದು ವಿಚಾರ.
ಹೆಣ್ಣು, ಅಂದಿನಿಂದಲೇ ಜನರ ಅವಹೇಳನೆಗೆ ತುತ್ತಾದವಳು. ಇಂದೂ ಕೂಡಾ ಕೆಲ ಸಂಪ್ರದಾಯಗಳು ಅವಳ ಶಾಪಕ್ಕೆ ಬಲಿಯಾಗುತ್ತಿದೆ. ಏನೇ ಮಾಡಿದರೂ ಅವರ ಸಾಧನೆಗೇನೂ ಕೊರತೆಯಿಲ್ಲ. ಸಮಾಜದ ಕಣ್ಣಿಗೆ ವೈರುಧ್ಯವಾಗಿ, ಸರ್ವರಿಗೂ ಬೆರಗು ಹುಟ್ಟಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿ ಮುಂದಿನ ತಲೆಮಾರಿಗೆ ಕೊಡುಗೆಯಾಗಿಸಿದ ಮಹಾತ್ಮೆ ಫಾತಿಮಾ ಅಲ್-ಫಿಹ್ರಿ.
#ಜನನ-ಬಾಲ್ಯ
--------------
ಎಂಟನೇ ಶತಮಾನದ ಪ್ರಾರಂಭ, ಅಬ್ಬಾಸಿಯ್ಯಾ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟ ಇಂದಿನ 'ಟುನೀಶಿಯಾ' (ಖೈರುನ್)ದಲ್ಲಿ ಫಾತಿಮಾ ಬಿಂತ್ ಅಲ್-ಫಿಹ್ರಿ ಅಲ್-ಖುರೈಶಿಯ್ಯ್‌ರ' ಜನನ. ಈ ನಗರವನ್ನು 670 ರಲ್ಲಿ ಸ್ಥಾಪಿಸಿದ ಕೀರ್ತಿ ಉಮವಿಯ್ಯಾ ರಾಜವಂಶಕ್ಕೆ ಸಲ್ಲುತ್ತದೆ. ಖೈರುವಾನ್ ನಗರ ಇಸ್ಲಾಮಿಕ್ ವಿಜ್ಞಾನದ ಉತ್ತುಂಗದಲ್ಲಿತ್ತು. ಫಾತಿಮಾ ಅಲ್-ಫಿಹ್ರಿಯ ಮೂಲ ಖುರೈಶಿ ಪಂಗಡದವರು. ಅಂದು ಸ್ಪೇನಿನ ಇಸ್ಲಾಮಿಕ್ ಆಡಳಿತಕ್ಕೊಳಪಟ್ಟ ಟುನೀಶಿಯಾ ಶತ್ರುಗಳ ಕೈವಶವಾಗುತ್ತದೆ. ಒಂದೋ ಮತಾಂತರವಾಗಬೇಕು ಇಲ್ಲದಿದ್ದಲ್ಲಿ ನಾಡ ಬಿಡಬೇಕೆಂಬ ಶತ್ರುಗಳ ಆರ್ಡರ್ ಬಂದಾಗ ನಾಡು ತ್ಯಜಿಸಿ ಮೊರೋಕ್ಕೋದ ಫೆಸ್ ನಗರಕ್ಕೆ ವಲಸೆ ಬಂದವರೆ ಫಾತಿಮಾ ಅಲ್-ಫಿಹ್ರಿ.
ಗಮನಾರ್ಹ ಸಂಗತಿ ಎಂದರೆ ಪ್ರವಾದಿ ಮಹಮ್ಮದ್ (ಸ) ರ ಹನ್ನೊಂದನೇ ಮುತ್ತಾತ 'ಫಿಹ್ರ್'. ಅವರ ಸಂತಾನ ಪರಂಪರೆಯಲ್ಲಿ ಜನ್ಮತಾಳಿದ ಮಹಾ ವನಿತೆಯಾಗಿದ್ದಾರೆ ಫಾತಿಮಾ ಅಲ್-ಫಿಹ್ರಿ. ಆದ್ದರಿಂದ ಹೆಸರಿನೊಂದಿಗೆ 'ಅಲ್-ಫಿಹ್ರಿ' ಎಂದು ಪ್ರಸಿದ್ಧಿಯಾಯಿತು.
ಕ್ರಿ.ಶ 1325 ಅಲ್ ಖರವಿಯ್ಯೂನ್ ಇದರ ಬೃಹತ್ ಗ್ರಂಥಾಲಯ ಬೆಂಕಿಗಾಹುತಿಯಾಗುತ್ತದೆ. ಆದ್ದರಿಂದ ಫಿಹ್ರಿ ಹಾಗೂ ಖರವಿಯ್ಯೂನ್ ಯುನಿವರ್ಸಿಟಿಯ ಕೆಲ ಅಮೂಲ್ಯ ಮಾಹಿತಿಗಳು ನಷ್ಟ ಹೊಂದಿದವು.
#ಯಾಕಾಗಿ ಮಸೀದಿ ನಿರ್ಮಾಣ..!?
---------------------------------------
ಫಾತಿಮಾ ಅಲ್-ಫಿಹ್ರಿ ಅಚಲ ಧಾರ್ಮಿಕ ನಂಬಿಕೆ ಇಟ್ಟಿದ್ದ ಮಹಿಳೆ. ಶ್ರೀಮಂತ ಉದ್ಯಮಿಯಾದ ತನ್ನ ತಂದೆ ಮುಹಮ್ಮದ್ ಅಲ್-ಫಿಹ್ರಿ ಹಾಗೂ ಪತಿ ತೀರಿಕೊಂಡಾಗ ಅನುವಂಶೀಯವಾಗ ಅಪಾರ ಪ್ರಮಾಣದ ಸಂಪತ್ತು ಫಾತಿಮಾ ಹಾಗೂ ಸಹೋದರಿ ಮರ್ಯಂರ ಕೈ ಸೇರುತ್ತದೆ. ಅಂದು ಫೆಸ್ ನಗರದಲ್ಲಿ ಮಸೀದಿ ಇರಲಿಲ್ಲ. ವಲಸೆ ಬಂದವರ ಸ್ಮರಣೆಗಾಗಿ ಹಾಗೂ ತುರ್ತಾಗಿ ಅಗತ್ಯವಿರುವುದರಿಂದ ಫಾತಿಮಾ ಆ ಸೊತ್ತಿನಿಂದ ಮುಸ್ಲಿಂ ಸಮುದಾಯಕ್ಕಾಗಿ ನೂತನ ಮಸೀದಿಯನ್ನು ಸ್ಥಾಪಿಸುತ್ತಾರೆ. ಇಂದಿನ 'ಪಳ್ಳಿದರ್ಸ್¹'ನಂತೆ ಆರಂಭಗೊಂಡು ಬಳಿಕ ಅಭಿವೃದ್ಧಿಯಾಗಿ ಉಛ್ಪ್ರಾಯ ಸ್ಥಿತಿಗೆ ತಲುಪುತ್ತದೆ. ಇದೇ ಮುಂದೆ ವಿಶ್ವದೆಲ್ಲೆಡೆ ಪ್ರಸಿದ್ಧಿಯಾಗುತ್ತದೆ.
#ಮಸೀದಿ ನಿರ್ಮಾಣ ಪ್ರಕ್ರಿಯೆ
---------------------------------
ಫಾತಿಮಾ ಅಲ್-ಫಿಹ್ರಿ ಅಲ್ ಖರವಿಯ್ಯೂನ್ ನಿರ್ಮಾಣವನ್ನು ಸ್ವತಃ ಮುತುವರ್ಜಿ ವಹಿಸುತ್ತಿದ್ದರು. ಕಳ್ಳು ಮುಳ್ಳುಗಳನ್ನೆಲ್ಲಾ ತಾನೇ ಬದಿಗಿರಿಸಿ, ಭೂಮಿಯನ್ನು ಅಗೆದು, ಗೋಡೆ ಕಟ್ಟುವುದರಲ್ಲೂ ನಿರ್ಮಾಪಕರಿಗೆ ಸಹಾಯ ಮಾಡಿ ಒಡನಾಡುತ್ತಿದ್ದರು. ಬರೋಬ್ಬರಿ ಹದಿನೆಂಟು ವರ್ಷಗಳು ಈ ಅಲ್ ಖರವಿಯ್ಯೂನ್ ಮಸೀದಿ ನಿರ್ಮಾಣಕ್ಕೆ ಬೇಕಾಗುತ್ತದೆ. ಇದನ್ನು ಇತಿಹಾಸಕಾರ ಅಬ್ದುಲ್ ಹಾದಿ ತಾಜಿ ತನ್ನ ಗ್ರಂಥದಲ್ಲಿ ಉಲ್ಲೇಖಿಸುತ್ತಾರೆ.
'ಹವಾರಾ' ಬುಡಕಟ್ಟಿನ ವ್ಯಕ್ತಿಯೊಬ್ಬರಿಂದ ಭೂಮಿಯನ್ನು ಖರೀದಿ ಮಾಡಿದ ಫಾತಿಮಾ ಹಿಜ್‌ರಾ 254 ನೇ ವರ್ಷ (859)ದ ರಂಝಾನ್ ತಿಂಗಳಲ್ಲಿ ಈ ಮಸೀದಿಯ ಕೆಲಸ ಕಾರ್ಯಕ್ಕಾಗಿ ಮುಹೂರ್ತವಿಟ್ಟರು. ವಿಶೇಷವೆಂದರೆ ಮಸೀದಿ ಮತ್ತು ವಿಶ್ವವಿದ್ಯಾನಿಲಯದ ಕೆಲಸ ಸಂಪೂರ್ಣಗೊಳ್ಳುವವರೆಗೆ ಉಪವಾಸಿಯಾಗಿದ್ದರು ಫಾತಿಮಾ ಅಲ್-ಫಿಹ್ರಿ. ಯಾರ ಅಪವಾದಗಳಿಗೂ ಜಗ್ಗದೆ ಧೃಡತೆಯಿಂದ ಕಾಯಕ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ
#ಸಹೋದರಿಯರ ಸಾಧನೆಗೆ ಸಲಾಂ..!
--------------
ಫಾತಿಮಾ ಅಲ್-ಫಿಹ್ರಿ ಹಾಗೂ ಸಹೋದರಿ ಮರಿಯಂ ಸುಶಿಕ್ಷತರಾಗಿದ್ದರು. ಜೀವನ ಸಾಗಿಸುವ ಸಲುವಾಗಿ ವಿವಾಹಿತರಾಗುತ್ತಾರೆ. ಮದುವೆಯಾದ ಹೃಸ್ವ ಅವಧಿಯಲ್ಲಿ ತಂದೆ ಹಾಗೂ ಪತಿ ಇಬ್ಬರೂ ನಿಧನರಾಗುತ್ತಾರೆ. ಬೇಸತ್ತ ಸಹೋದರಿಯರು ಯಾವುದಕ್ಕೂ ಅಂಜದೆ ಇಸ್ಲಾಮಿಕ್ ನ್ಯಾಯಶಾಸ್ತ್ರ, ಕರ್ಮಶಾಸ್ತ್ರ ಹಾಗೂ ಹದೀಸ್‌ಗಳನ್ನು ನಿರಂತರ ಅಧ್ಯಯನ ಮಾಡಿದರು. ಬಳಿಕ ಫಾತಿಮಾ ಕ್ರಿ.ಶ 859 ರಲ್ಲಿ ತನ್ನ ಸ್ವಂತ ಖರ್ಚಿನಿಂದ ಅಲ್-ಖರಾವಿಯ್ಯೀನ್ ಮಸೀದಿಯನ್ನು ಸ್ಥಾಪಿಸುತ್ತಾರೆ. ಬಳಿಕ ಗ್ರಂಥಾಲಯ ಹಾಗೂ ವಿಶ್ವವಿದ್ಯಾಲಯವನ್ನು ಫೆಸ್ ನಗರದಲ್ಲಿ ಸ್ಥಾಪಿಸಿ ಸರ್ವರ ಪ್ರಶಂಸೆಗೆ ಪಾತ್ರರಾಗುತ್ತಾರೆ.
ಫೆಸ್ ನಗರದಲ್ಲಿ ದಕ್ಷಿಣ ಸ್ಪೇನ್‌ನಿಂದ ಬಂದ ನಿರಾಶ್ರಿತರಿಗೆ ಹಾಗೂ ತನ್ನ ಜನತೆಗೆ ಮಸೀದಿಯಲ್ಲಿ ಸ್ಥಳಾವಕಾಶ ಸಾಕಾಗುವುದಿಲ್ಲ ಎಂದು ಮನಗಂಡ ಮರಿಯಂ ಸುಂದರವಾದ ಅಂದಲೂಸಿಯನ್ ಮಸೀದಿಯನ್ನು ಕ್ರಿ. ಶ. 859 ರಲ್ಲಿ ಕುಟುಂಬದ ಸಹಾಯದೊಂದಿಗೆ ನದಿ ತೀರದಲ್ಲಿ ನಿರ್ಮಿಸುತ್ತಾರೆ. ಇದು ವಲಸಿಗರಿಗೆ ಹಾಗೂ ಊರವರಿಗೆ ಆಶ್ರಯವಾಗುತ್ತದೆ.
ಜೊತೆಗೆ ತನ್ನ ಸಮುದಾಯದ ಕೀರ್ತಿ ಎಲ್ಲೆಡೆ ಹಬ್ಬುತ್ತದೆ. ಪಿತ್ರಾರ್ಜಿತವಾಗಿ ದೊರೆತ ಹಣವನ್ನು ಫಾತಿಮಾ ಕ್ರಿ.ಶ 845 ರಲ್ಲಿ ಯಹ್ಯಾ ಬಿನು ಮುಹಮ್ಮದರ ನಿರ್ದೇಶನದಲ್ಲಿ ನಿರ್ಮಿಸಲಾದ ಮಸೀದಿಯನ್ನು ಖರೀದಿಸಿ, ಅದರ ಪುನರ್ನಿರ್ಮಾಣ ಮಾಡಿ ಆಸುಪಾಸಿನ ಪ್ರದೇಶಗಳನ್ನು ಅಭಿವೃದ್ಧಿ ಮಾಡಿದರು. ಪ್ರವರ್ಧಮಾನದತ್ತ ಮುಖ ಮಾಡಿದ ಮಸೀದಿಯಲ್ಲಿ ಅಧ್ಯಯನ ಮಾಡಲು ಜನರ ದಂಡೇ ಬರುತ್ತದೆ. ಬಂದ ವ್ಯಕ್ತಿಗಳು ಅಭ್ಯಸಿಸಿ ಹೋದ ಬಳಿಕ ಅಲ್ ಖರವಿಯ್ಯೂನ್ ವ್ಯಾಪಕ ಪ್ರಚಾರವಾಗಿ ಲೋಕದಾದ್ಯಂತ ತಲುಪುತ್ತದೆ. ಈ ರೀತಿ ವಿದ್ಯಾದಾನ ಮಾಡಿದ ಕೀರ್ತಿ ಫಾತಿಮಾರಿಗೆ ಸಲ್ಲುತ್ತದೆ. ಇಂದಿಗೂ ಆ ಫಿಹ್ರಿ ಸಹೋದರಿಯರ ಸಾಧನೆ ಸ್ಮರಿಸುತ್ತಿರುವುದು ಅಭಿನಂದನಾರ್ಹ.
#ಅಲ್--ಖರವಿಯ್ಯೂನ್
----------------------
ಯುನೆಸ್ಕೋ ಹಾಗೂ ಗಿನ್ನಿಸ್ ಬುಕ್ಸ್ ಆಫ್ ರೆಕಾರ್ಡ್ಸ್ ಸಹಿತ ಇತರ ದಾಖಲೆಗಳ ಪ್ರಕಾರ ವಿಶ್ವದ ಮೊತ್ತ ಮೊದಲ ಯುನಿವರ್ಸಿಟಿ ಅಲ್-ಖರಾವಿಯ್ಯೀನ್. ಒಂಭತ್ತನೇ ಶತಮಾನದಲ್ಲಿ ನಡೆಯುವ ಸಾಮಾಜಿಕ ಅಸಮಾನತೆಯ ವಿರುದ್ಧ, ಮಹಿಳೆಯರ ಶಿಕ್ಷಣ ಕಡೆಗೆ ಹೆಚ್ಚು ಒತ್ತು ನೀಡಿ ಜನರ ಸರ್ವತೋಮುಖ ಅಭಿವೃದ್ಧಿಗೆ ಪಾತ್ರವಾಯಿತು.
ಅಲ್-ಖರವಿಯ್ಯೀನ್ ವಿಶ್ವವಿದ್ಯಾಲಯವು ಮೊದಲು ಪವಿತ್ರ ಖುರ್‌ಆನ್ ಹಾಗೂ ಧಾರ್ಮಿಕ ವಿಷಯಗಳು ಅಧ್ಯಯನ ಮಾಡಲು ಮಾತ್ರ ಸೀಮಿತವಾಗಿದ್ದವು. ಬಳಿಕ ಭಾಷೆ, ಸಾಹಿತ್ಯ, ತರ್ಕಶಾಸ್ತ್ರ, ತತ್ವಶಾಸ್ತ್ರ, ಖಗೋಳ ಶಾಸ್ತ್ರ, ಔಷಧ ಹಾಗೂ ಇಸ್ಲಾಮಿಕ್ ನ್ಯಾಯಶಾಸ್ತ್ರ ಕ್ಷೇತ್ರಗಳಲ್ಲಿ ಅರಿವನ್ನು ನೀಡಿ ಉತ್ತಮ ಪ್ರಜೆಗಳನ್ನು ಸಮಾಜಕ್ಕರ್ಪಿಸಿದೆ. ಈ ವಿಶ್ವವಿದ್ಯಾಲಯದಲ್ಲಿ ಬೃಹದಾಕಾರದ ಗ್ರಂಥಾಲಯವಿದೆ. ಒಂಭತ್ತನೇ ಶತಮಾನದಲ್ಲಿ 'ಕೂಫಿ' ಲಿಪಿಯಲ್ಲಿ ಬರೆದ ಪವಿತ್ರ ಖುರ್‌ಆನನ್ನು ಇಲ್ಲಿ ಸಂರಕ್ಷಿಸಿ ಇಡಲಾಗಿದೆ.
#ಇವರು 'ಅಲ್-ಖರವಿಯ್ಯೂನ್'ನ ಪ್ರೊಡೆಕ್ಟ್‌ಗಳು
----------------------------------
ಮುಸ್ಲಿಮರು ಮಾತ್ರವಲ್ಲದೆ ಯಹೂದಿ- ಕ್ರಿಶ್ಚಿಯನ್ನರು ಕೂಡಾ ಈ ಬೃಹತ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಹಲವಾರು ಪದವೀಧರ, ಕವಿ, ಲೇಖಕರು, ನ್ಯಾಯಶಾಸ್ತ್ರಜ್ಞರು, ಗಣಿತಜ್ಞರು ಹಾಗೂ ಮಹಾನ್ ವ್ಯಕ್ತಿಗಳು ರೂಪುಗೊಂಡವು.
ವೈದ್ಯ ಹಾಗೂ ತತ್ವಶಾಸ್ತ್ರಜ್ಞ ಇಬ್ನ್ ರುಶ್ದ್, ಮೂಸಾ ಇಬ್ನ್ ಮೈಮೂನ್, ಫಿಲಾಸಫಿಸ್ಟ್ ಇಬ್ನು ಹಸ್ಮ್, ಭೂಗೋಳಶಾಸ್ತ್ರಜ್ಞ ಹಸನ್ ಅಲ್-ವಸ್ಸನ್, ವೈದ್ಯಕೀಯ ನಿಪುಣ ಇಬ್ನ್ ಬೇಜಾ, ಡಚ್ ಪೌರ್ವಾತ್ಯ ಬರಹಗಾರ ಮತ್ತು ಗಣಿತಜ್ಞ ಜಾಕೋಬ್ ವ್ಯಾನ್ ಗೂಲ್, ಪ್ರವಾಸಿ ಲಿಯೋ ಆಫ್ರಿಕಾನಸ್, ವ್ಯಾಕರಣತಜ್ಞ ಇಬ್ನ್ ಬೆನ್ ಅಜ್ರ್ ಹಾಗೂ ಯಹೂದಿ ನಾಯಕ ಮೋಸ್ಸಸ್ ಬೆನ್ ಮೈಮೂನ್ ಸಹಿತ ಇನ್ನಿತರ ಪ್ರಮುಖರು ಈ ಯುನಿವರ್ಸಿಟಿಯಲ್ಲಿ ಅಧ್ಯಯನ ಮಾಡಿದ್ದಾರೆ.
ಪ್ರಪಂಚದಲ್ಲಿ ತಮ್ಮ ಛಾಪು ಮೂಡಿಸಿರುವ ಪ್ರಸಿದ್ಧ ಮುಸ್ಲಿಂ ಚಿಂತಕರಾದ ಇಬ್ನ್ ಖಲ್ದೂನ್, ಇಬ್ನು ರುಶ್ದ್ ಹಾಗೂ ಪ್ರಸಿದ್ಧ ಭೂಗೋಳ ತಜ್ಞರಾದ ಮುಹಮ್ಮದ್ ಅಲ್-ಇದ್ರಿಸ್, ಜ್ಯೋತಿಷ್ಯ ಶಾಸ್ತ್ರಜ್ಞರಾದ ನೂರುದ್ದೀನ್ ಅಲ್ ಬಿಟ್ರೂಜಿ ಮುಂತಾದವರ ಕಾರ್ಯ ಸಾಧನೆಯಿಂದಲೂ ಅಲ್ ಖರಾವಿಯ್ಯೀನ್ ವಿಶ್ವವಿದ್ಯಾಲಯ ಪ್ರಸಿದ್ಧಿ ಪಡೆಯಿತು
#ಪ್ರೇರಣೆ
------------
ಈಜಿಪ್ಟಿನ ಅಲ್-ಅಝ್‌ಹರ್ ಯುನಿವರ್ಸಿಟಿ (970), ಇಟಲಿಯ ಬೊಲೋಗ್ನ ಯುನಿವರ್ಸಿಟಿ (1088) ಸಹಿತ ಇತರೆ ಪ್ರತಿಷ್ಠಿತ ವಿಶ್ವವಿದ್ಯಾಲಯವಾದ ಲಂಡನಿನ ಆಕ್ಸ್‌ಫರ್ಡ್ ವಿವಿ (1096), ಸ್ಪೇನಿನ ಸಲಮಂಕಾ ವಿವಿ(1134), ಫ್ರಾನ್ಸಿನ ಪ್ಯಾರಿಸ್ ವಿವಿ (1160), ಕ್ಯಾಂಬ್ರಿಡ್ಜ್ ವಿವಿ (1209) ಹಾರ್ವಡ್ ವಿವಿ (1963) ಮುಂತಾದ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಚೋದನೆಯಾಯಿತು ಅಲ್-ಖರಾವಿಯ್ಯೀನ್. ಇಂದು ಪದವಿ ಸಮಯದಲ್ಲಿ ಧರಿಸುವ ಸಮವಸ್ತ್ರವೂ ಅಂದೇ ಆರಂಭಿಸಿದ್ದು ಶ್ಲಾಘನೀಯ.
#ಹಳೆಯ ವಿವಿಗಳು
------------------
- ವಿಶ್ವದ ಅತೀ ಪ್ರಾಚೀನ ವಿಶ್ವವಿದ್ಯಾಲಯ ಒಂಭತ್ತನೇ ಶತಮಾನದಲ್ಲಿ ನಿರ್ಮಿಸಲಾದ ಆಫ್ರಿಕಾದ ಅಲ್-ಖರಾವಿಯ್ಯೀನ್ ಯುನಿವರ್ಸಿಟಿ. ಇದು ಮೊರೋಕ್ಕೋದ ಫೆಸ್ ನಗರದಲ್ಲಿದೆ.
- 'ಯುರೋಪ್' ಖಂಡದಲ್ಲಿ 1088 ರಲ್ಲಿ ಬೊಲೋಗ್ನ ಯುನಿವರ್ಸಿಟಿ ಸ್ಥಾಪಿಸಲ್ಪಟ್ಟವು.
- ಏಷ್ಯಾದಲ್ಲಿ 'ಸ್ಯಾಂಟೋ ಥೋಮಸ್' ಎಂದು ಪ್ರಥಮ ವಿಶ್ವವಿದ್ಯಾಲಯವನ್ನು ಕ್ರಿ.ಶ 1611 ರಲ್ಲಿ ಸ್ಥಾಪಿಸಲಾಯಿತು. ಇದನ್ನು Miguel de Benavides ರ ನಿರ್ದೇಶನದ ಮೇರೆಗೆ ಸ್ಥಾಪಿಸಲಾಯಿತು.
- 'ಯು.ಎಸ್.ಎ' ನಲ್ಲಿ 1636 ರಲ್ಲಿ ಹಾರ್ವಡ್ ಯುನಿವರ್ಸಿಟಿ ಸ್ಥಾಪಿಸಲಾಯಿತು.
- 1850 ರಲ್ಲಿ 'ಆಸ್ಟ್ರೇಲಿಯಾದ' ಸಿಡ್ನಿಯಲ್ಲಿ ವಿಶ್ವವಿದ್ಯಾಲಯವನ್ನು ನಿರ್ಮಿಸಲಾಯಿತು.
ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಫಾತಿಮಾ ಅಲ್-ಫಿಹ್ರಿ ಮಾಡಿದ ಸೇವೆಗೆ ಇಡೀ ಜಗತ್ತು ಕೃತಜ್ಞತೆಯನ್ನು ಸಲ್ಲಿಸುತ್ತಿದೆ. ವಿಜ್ಞಾನ ಕ್ಷೇತ್ರದಲ್ಲಿ ಈಗಲೂ ಕಂಗೊಳಿಸುತ್ತಿರುವ ಅಲ್- ಖರವಿಯ್ಯೀನ್ ವಿಶ್ವವಿದ್ಯಾಲಯವು ಅದರ ಸಂಸ್ಥಾಪಕಿ ಅಲ್-ಫಿಹ್ರಿಯವರ ಸಾಧನೆಗೆ ಹಿಡಿದ ಕೈಗನ್ನಡಿ.
ಇಂತಹಾ ಸಾಧಕಿಗೆ ನಮ್ಮದೊಂದು ಸೆಲ್ಯೂಟ್ ಇರಲಿ..!
-------------------
1) ಪಳ್ಳಿದರ್ಸ್-- ಹಳೇ ಕಾಲದಲ್ಲಿ ಗುರುಗಳಿಂದ ಶಿಷ್ಯಂದಿರರು ಮಸೀದಿಯಲ್ಲಿ ಕುಳಿತು ಕಲಿಯುವ ಸಂಪ್ರದಾಯ.




Comments