ಮಕ್ಕಾದ ಪುರಾತನ ಜಲಾಶಯಗಳಲ್ಲೊಂದಾಗಿದೆ ಐನ್ ಝುಬೈದ. ಆಧುನಿಕ ತಂತ್ರಜ್ಞಾನ ಅಳವಡಿತ ನೀರಾವರಿ ಪದ್ಧತಿಯನ್ನೂ ಮೀರಿಸುವಂತಿರುವ ಈ ಪುರಾತನ ನೀರಾವರಿ ವ್ಯವಸ್ಥೆಯು ಇಂದಿಗೂ ನೋಡುಗರಲ್ಲಿ ಹುಟ್ಟಿಸುವ ವಿಸ್ಮಯ ಸಣ್ಣದ್ದಲ್ಲ. ಸರಿಸುಮಾರು ಸಾವಿರದ ಇನ್ನೂರು ವರ್ಷಗಳಷ್ಟು ಇತಿಹಾಸವಿರುವ ಈ ಜಲಾಶಯಕ್ಕೆ ಮರುಭೂಮಿಯ ರಣ ಬಿಸಿಲಿಗೆ ಬೆಂದು ಹೋದ ಅನೇಕ ಹಜ್ಜ್, ಉಮ್ರಾ ಯಾತ್ರಿಕರ ದಾಹವನ್ನು ನೀಗಿಸಿದ ಪ್ರತೀತಿಯಿದೆ. ಅಮೋಘವಾದ ನಿರ್ಮಾಣ ಶೈಲಿ, ನಿಖರವಾದ ವಿನ್ಯಾಸ, ಅತ್ಯಾಧುನಿಕ ವ್ಯವಸ್ಥೆ ಇತ್ಯಾದಿ ವಿಶೇಷತೆಗಳನ್ನು ಹೊಂದಿರುವ ಐನ್ ಝುಬೈದ ಇಂದಿಗೂ ಖಿಲಾಫತ್‌ನ ಸುವರ್ಣ ಯುಗದ ಗತ ವೈಭವವನ್ನು ಎತ್ತಿ ಹಿಡಿದಿದೆ. ಆ ನಂತರದ ಆಡಳಿತ ವರ್ಗ ತೋರಿದ ದಿವ್ಯ ನಿರ್ಲಕ್ಷ್ಯ ಹಾಗೂ ಪ್ರಾಕೃತಿಕ ವಿಕೋಪಗಳಿಂದಾದ ಹಾನಿಯಿಂದ ಇದರ ಚೈತನ್ಯ ಒಂದಷ್ಟು ಕುಂದಿರುವುದು ನಿಜ. ಆದರೂ ಕಾಲದ ಏರಿಳಿತಗಳನ್ನು ದಾಟಿ ಕಳೆದ ಶತಮಾನದವರೆಗೂ ಇದು ಸುಲಲಿತವಾಗಿ ಹರಿದಿದೆ. ಇಸ್ಲಾಮೀ ಪರಂಪರೆಯ ಶ್ರೇಷ್ಠ ಸಂಕೇತವಾಗಿರುವ ಈ ಜಲಾಶಯ ನೂರಾರು ವರ್ಷಗಳಿಂದ ಹಜ್ಜ್ ಯಾತ್ರಿಕರ ಪಾಲಿಗೆ ಚೈತನ್ಯ ಒದಗಿಸಿದೆ. ಗತಕಾಲದ ಪುರಾತನ ಸ್ಮಾರಕಗಳನ್ನು ಪುನರುಜ್ಜೀವಗೊಳಿಸುವುದಾಗಿ ಸೌದಿ ಸರ್ಕಾರ ವರ್ಷಗಳ ಹಿಂದೆಯಷ್ಟೇ ಘೋಷಿಸಿತ್ತು. ಸರಕಾರದ ಈ ನಿರ್ಧಾರದ ಬಳಿಕ ಐನ್‌ಝುಬೈದ ಮತ್ತೆ ಜನರ ಗಮನ ಸೆಳೆಯತೊಡಗಿದೆ.
ಪುರಾತನ ಕಾಲದಲ್ಲಿ ಮಕ್ಕಾದ ನೀರಿನ ಮೂಲವು ದಾರಿಗಳಲ್ಲಿನ ಬಾವಿಗಳಾಗಿದ್ದವು. ಹಜ್ಜ್, ಉಮ್ರಾ ತೀರ್ಥಾಟನೆಗೆಂದು ಬರುವ ಲಕ್ಷಾಂತರ ಮಂದಿ ಯಾತ್ರಿಕರು ತಮ್ಮ ನೀರಿನ ಅಗತ್ಯಗಳಿಗಾಗಿ ಇದೇ ಬಾವಿಯನ್ನು ಅವಲಂಬಿಸಬೇಕಾಗಿತ್ತು. ಹಜ್ಜ್‌ನ ವೇಳೆಗಳಲ್ಲಿ ಅರಫಾ, ಮಿನಾ, ಮುಝ್ದಲಿಫಾ, ಮುಂತಾದೆಡೆ ಅಗತ್ಯಕ್ಕಾಗಿನ ನೀರು ಪೂರೈಸುವುದು ದೊಡ್ಡ ಸವಾಲಾಗಿತ್ತು. ಇದೇ ಬಾವಿಯಲ್ಲಿನ ನೀರನ್ನು ಅರಫಾ ಮತ್ತು ಮಿನಾ ಇತರೆಡೆಗೆ ಯಾತ್ರಿಕರು ಒಯ್ಯಬೇಕಿತ್ತು. ವರ್ಷಗಳು ಮುಂದುವರಿಯುತ್ತಿದ್ದಂತೆ ಯಾತ್ರಾರ್ಥಿಗಳಲ್ಲಿ ಉಂಟಾದ ಹೆಚ್ಚಳವು ನೀರಿನ ತೀವ್ರ ಅಭಾವಕ್ಕೆ ಕಾರಣವಾಯಿತು. ಹಿಜ್‌ರಾ 40-60ರ ಸಮಯದಲ್ಲಿ ಅಂದಿನ ಖಲೀಫಾ ಮುಆವಿಯಾ(ರ) ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರದ ವಿಷಯದಲ್ಲಿ ಕಾರ್ಯೋನ್ಮುಖರಾದರು. ಮಕ್ಕಾಗೆ ಹೊರಗಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಲಾಶಯ, ಹಾಗೂ ಕೊಳಗಳನ್ನು ನಿರ್ಮಿಸಿ ಅದಕ್ಕೆ ಮಕ್ಕಾದ ಪರ್ವತ ಶಿಖರಗಳಿಂದ ಹರಿಯುವ ಹಾಗೂ ಇತರೆಡೆಯ ತೊರೆಗಳ ಬಾವಿಯ ನೀರನ್ನು ತಲುಪಿಸಲು ಕಾಲುವೆ, ನಾಲೆಗಳನ್ನು ನಿರ್ಮಿಸಿದರು. ಆ ಮೂಲಕ ಹೊಸ ನೀರಾವರಿ ಯೋಜನೆಗೆ ತಳಹದಿ ಹಾಕಿದರು. ಆ ಬಳಿಕ ಬಂದ ಖಲೀಫರು, ಆಡಳಿತಗಾರರು ಈ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಇದು ಕಾಲಕಾಲಕ್ಕೆ ತಕ್ಕಂತೆ ಹೊಸ ಆವಿಷ್ಕಾರವನ್ನು ಪಡೆದುಕೊಂಡವು.
ಆದರೆ ನೀರಾವರಿ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವದ ಹಾಗೂ ಬೃಹತ್ ಯೋಜನೆಯನ್ನು ಜಾರಿಗೆ ತಂದದ್ದು ಅಬ್ಬಾಸಿಯಾ ಖಲೀಫಾ ಹಾರೂನ್ ರಶೀದರ ಆಳ್ವಿಕೆಯಲ್ಲಾಗಿತ್ತು. ಅಬ್ಬಾಸಿಯಾ ಖಿಲಾಫತ್ ಸ್ಥಾಪಕರಲ್ಲೊಬ್ಬರಾದ ಅಬೂಜಅ್‌ಫರ್ ಬಿನ್ ಅಬೂ ಮನ್ಸೂರ್‌ರವರ ಪುತ್ರಿಯೂ, ಹಾರೂನ್ ರಶೀದ್‌ರವರ ಪತ್ನಿಯೂ ಆಗಿದ್ದ ಝುಬೈದಾ ಬಿನ್ತ್ ಅಬೂಜಅ್‌ಫರ್ ಈ ಬೃಹತ್ ಯೋಜನೆಯ ರೂವಾರಿಯಾಗಿದ್ದರು. ಅಗರ್ಭ ಶ್ರೀಮಂತೆ ಹಾಗೂ ಧರ್ಮ ನಿಷ್ಠೆಯಾಗಿದ್ದ ಝುಬೈದಾ ಹಜ್ಜ್ ಯಾತ್ರೆಗೆಂದು ತೆರಳಿದಾಗ ನೀರಿನ ಅಭಾವದಿಂದ ಯಾತ್ರಾರ್ಥಿಗಳು ಎದುರಿಸುತ್ತಿರುವ ಸಂಕಷ್ಟವನ್ನು ಖುದ್ದಾಗಿ ಕಂಡು ಅರ್ಥೈಸಿದರು. ಅದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ತೀರ್ಮಾನಿಸಿದರು. ಅದಕ್ಕೆ ಬೇಕಾದ ಖರ್ಚು ವೆಚ್ಚವನ್ನು ತನ್ನ ಸಂಪತ್ತಿನಿಂದಲೇ ಭರಿಸುವುದಾಗಿ ನಿರ್ಧರಿಸಿದರು. ಆ ಕಾಲದ ಬಾಗ್ದಾದ್ ಹಾಗೂ ಇತರಡೆಗಳಲ್ಲಿನ ಪ್ರಸಿದ್ಧ ಇಂಜಿನಿಯರ್ ಹಾಗೂ ನುರಿತ ನಿರ್ಮಾಣಗಾರರನ್ನು ಅರಮನೆಗೆ ಕರೆಸಿ ಯೋಜನೆಯನ್ನು ರೂಪಿಸಿದರು. ಭೂಗರ್ಭ ಶಾಸ್ತ್ರದಲ್ಲಿ ಪರಿಣಿತರಾದ ವಿಜ್ಞಾನಿಗಳನ್ನು ಕರೆಸಿ, ನಿರ್ಮಾಣವಾಗುವ ಸ್ಥಳವನ್ನು ಪರಿಶೀಲನೆ ನಡೆಸಲಾಯಿತು.
ತ್ವಾಯಿಫ್‌ಗೆ ಸನಿಹದಲ್ಲಿರುವ ವಾದಿನುಅ್‌ಮಾನ್ ಶಿಖರದ ಮೇಲೆ ಜಲ ಸಮೃದ್ಧ ಸರೋವರವೊಂದಿತ್ತು. ಆ ಕೆರೆಯಿಂದ ಮುಕ್ತವಾಗಿ ಮಕ್ಕಾ, ಮಿನಾ, ಮುಝ್ದಲಿಫಾ ಮುಂತಾದ ಸ್ಥಳಗಳಿಗೆ ನೀರು ಹರಿಸುವ ಯೋಜನೆಗೆ ಚಾಲನೆ ನೀಡಲಾಯಿತು. ಸ್ಪಷ್ಟ ಹಾಗೂ ನಿಖರವಾದ ಅಧ್ಯಯನಗಳ ಆಧಾರದಲ್ಲಿ ಕಾಮಗಾರಿ ಕೆಲಸವನ್ನು ಆರಂಭಿಸಲಾಯಿತು. ಹಿಜ್‌ರ 194ರಲ್ಲಿ ಈ ಯೋಜನೆಯ ಕಾರ್ಯಚಟುವಟಿಕೆಗಳು ನಡೆಯತೊಡಗಿದವು. ಪ್ರಸ್ತುತ ಪರ್ವತದ ತುದಿಯಿಂದ ನಾಲೆಗಳನ್ನು ನಿರ್ಮಿಸಿ ಅರಫಾದ ಜಬಲುರ್ರಹ್ಮದ ಪರಿಸರಕ್ಕೂ ಅಲ್ಲಿಂದ ಮಸಾಮಿನ್ ಕಣಿವೆಯ ಮೂಲಕ ಮುಝ್ದಲಿಫಾಗೂ, ಬಳಿಕ ಮಿನಾಗೂ ಕೊನೆಗೆ ಮಕ್ಕಾದ ಸಮೀಪವಿದ್ದ ದೊಡ್ಡ ಬಾವಿಗೂ ನೀರು ತಲುಪಿಸುವ ವಿಶಿಷ್ಟ ವಿಧಾನವನ್ನು ಈ ಯೋಜನೆಯು ಹೊಂದಿತ್ತು. ಈ ಬಾವಿ ಇಂದಿಗೂ ಅಝೀಝಿಯಾ ಭಾಗದಲ್ಲಿರುವ ಶೈಖ್ ಇಬ್ನುಬಾಝ್ ಮಸೀದಿಯ ಸನಿಹ ಬಿಅ್‌ರ್ ಝುಬೈದಾ ಎಂಬ ಹೆಸರಲ್ಲಿ ನೆಲೆನಿಂತಿದೆ.
ಈ ಕಾಲುವೆಯ ನಿರ್ಮಾಣ ಶೈಲಿ ಇಂದಿಗೂ ಅಚ್ಚರಿ ಹುಟ್ಟಿಸುತ್ತದೆ. ಪ್ರತೀ ದಿನವೂ 30000ದಿಂದ 40000ದಷ್ಟು (3000-4000ರಷ್ಟು ಟ್ಯಾಂಕರ್ ನೀರು) ಘನ ನೀರು ಈ ಕಾಲುವೆಯ ಮೂಲಕ ಹರಿಯುತ್ತಿರುವುದಾಗಿ ಈ ಕುರಿತಾದ ಚರಿತ್ರೆಗಳು ಉಲ್ಲೇಖಿಸಿವೆ. ಅಲ್ಲದೆ ಅರಫಾ ದಿನದಂದು ಇದರ ಶೇಕಡ 90ರಷ್ಟು ನೀರನ್ನು ಅರಫಾಗೆ ಹರಿಸಲಾಗುತ್ತಿತ್ತು. ಅರಫಾದ ಬಳಿಕ ಅಲ್ಲಿನ ಹರಿವನ್ನು ನಿಲ್ಲಿಸಿ ಮುಝ್ದಲಿಫಾಗೂ, ಬಳಿಕ ಮಿನಾಗೂ ಹರಿಸಲಾಗುತ್ತಿತ್ತು. ಜನರ ಹರಿವಿಗೆ ತಕ್ಕಂತೆ ನೀರನ್ನೂ ಹರಿಸುವ, ನಿಯಂತ್ರಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇದು ಹೊಂದಿತ್ತು.!
41 ಕಿಲೋಮೀಟರ್ ಉದ್ದದ ಈ ಬೃಹತ್ತಾದ ನೀರಾವರಿ ಯೋಜನೆಯನ್ನು ಸುಣ್ಣ ಹಾಗೂ ನೀರು ಸೋರಿಕೆಯಾಗದ ವಿಶೇಷ ಅಮೂಲ್ಯ ಬಂಡೆಗಳಿಂದ ನಿರ್ಮಿಸಲಾಗಿದೆ. ನೀರು ಕಲುಷಿತವಾಗದಂತೆ ಹಾಗೂ ಸುಗಮವಾದ ಹರಿವಿಗೆ ಬೇಕಾದ ನುರಿತ ಇಂಜಿನಿಯರಿಂಗ್ ವ್ಯವಸ್ಥೆಯನ್ನು ನಿರ್ಮಾಣಕ್ಕೆ ಬಳಸಲಾಗಿದೆ. ಜೊತೆಗೆ ಮಳೆಯ ನೀರನ್ನು ಶುದ್ಧ ನೀರಾಗಿ ಸಂಸ್ಕರಿಸಿ ಈ ಕಾಲುವೆಗೆ ಹರಿಯಲು ವಿನೂತನ ವ್ಯವಸ್ಥೆಗಳನ್ನೂ ಮಾಡಲಾಗಿದೆ. ಬಂಡೆಯ ಮೇಲೆ ಮತ್ತು ಬೆಟ್ಟಗಳ ಮೂಲಕ ಹರಿಯುವ ಕಾಲುವೆಯ ಭಾಗಗಳು ಯಾವುದೇ ಹಾನಿಯಾಗದೆ ಇಂದಿಗೂ ಉಳಿದಿದೆ.
ಹತ್ತು ವರ್ಷಗಳ ನಿರಂತರ ಕೆಲಸದ ತರುವಾಯ ಇದರ ನಿರ್ಮಾಣ ಪೂರ್ಣಗೊಂಡಿತ್ತು. 1200ವರ್ಷಗಳ ಕಾಲ ಈ ಕಾಲುವೆ ಸರಾಗವಾಗಿ ಹರಿದಿದ್ದು 1950ರ ವರೆಗೆ ಹಜ್ಜ್ ಯಾತ್ರಿಕರು, ಮಕ್ಕಾ ನಿವಾಸಿಗಳು ಇದರ ಶುದ್ಧಜಲವನ್ನೇ ಆಶ್ರಯಿಸಿದ್ದರು.
ಇದಲ್ಲದೆ ಇನ್ನೂ ಅನೇಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಝುಬೈದಾ ಒದಗಿಸಿದ್ದರು. ಅದಕ್ಕಾಗಿ ಹನೀನ್ ಎಂಬ ಪ್ರದೇಶವನ್ನೇ ಖರೀದಿಸಲಾಗಿತ್ತು. ಈ ಪ್ರದೇಶದಲ್ಲಿ ಮಳೆಯ ಹಾಗೂ ಪರ್ವತ ಶಿಖರಗಳಿಂದ ಹರಿದು ಬರುವ ನೀರನ್ನು ಅಣೆಕಟ್ಟು ಕಟ್ಟಿ ದೊಡ್ಡ ಜಲಾಶಯಗಳನ್ನು ನಿರ್ಮಿಸಿ ಸಂಗ್ರಹಿಸಲಾಗುತ್ತಿತ್ತು. ಅದರಿಂದ ಮಕ್ಕಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಕಾಲುವೆಯ ಮೂಲಕ ನೀರನ್ನು ಹರಿಸಲಾಗುತ್ತಿತ್ತು. ಇದೇ ರೀತಿ ಝುಬೈದಾ ಬಾಗ್ದಾದ್‌ನಿಂದ ಮಕ್ಕಾದ ದಾರಿಯುದ್ದಕ್ಕೂ ಅನೇಕ ಬಾವಿಗಳನ್ನು ತೋಡಿಸಿದ್ದರು. ಇದಕ್ಕೆ ದರ್ಬ್ ಝುಬೈದಾ ಎಂದು ಕರೆಯಲಾಗುತ್ತದೆ. ತಮ್ಮ ಸರ್ವಸಂಪತ್ತನ್ನೂ ಇದಕ್ಕಾಗಿ ವ್ಯಯಿಸಿದ ಅವರು ಕೊನೆಗೆ ತಾನು ಧರಿಸಿದ್ದ ಆಭರಣಗಳನ್ನೂ ಖರ್ಚು ಮಾಡಿದ್ದರು. ಇದರ ಕೆಲಸ ಕಾರ್ಯಗಳು ಪೂರ್ಣಗೊಂಡ ಬಳಿಕ ಅದಕ್ಕೆ ತಗುಲಿದ ಬೃಹತ್ ವೆಚ್ಚದ ಲೆಕ್ಕವನ್ನು ಅವರಿಗೆ ಮಂಡಿಸಲಾಗಿತ್ತು. ಆದರೆ ಅದನ್ನು ಯಾರಿಗೂ ತೋರಿಸದ ಝುಬೈದಾ ಹರಿದು ನೀರಿಗೆಸೆದಿದ್ದರು. ತನ್ನ ಸೇವೆಗೆ ಯಾರಿಂದಲೂ ಪ್ರಶಂಸೆಯನ್ನು ಬಯಸದ ಅವರದ್ದು ಅಲ್ಲಾಹನ ಸಂಪ್ರೀತಿಯನ್ನು ಗಳಿಸುವ ಉದ್ದೇಶ ಮಾತ್ರವಾಗಿತ್ತು.
ನವೀಕರಣ ಕಾಮಗಾರಿಗಳು
ನಂತರದ ಕಾಲದಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಅನೇಕ ಮಂದಿ ಇದನ್ನು ಅಭಿವೃದ್ಧಿ ಪಡಿಸಿದ್ದಾರೆ. ತುರ್ಕಿ ಸುಲ್ತಾನರಾದ ಸುಲೈಮಾನ್‌ರ ಪತ್ನಿ ಖಾನಂ ಸುಲ್ತಾನ್ ಹಿಜರಿ 979ರಲ್ಲಿ (ಕ್ರಿ.ಶ 1571) ಇದರ ಕಾಲುವೆಗಳನ್ನು ನವೀಕರಣಗೊಳಿಸಿ ಪೂರ್ವ ಹಂತಕ್ಕೆ ತಂದಿದ್ದರು. ಆ ಬಳಿಕ ಒಂದಷ್ಟು ಅಭಿವೃದ್ಧಿ ಕಾರ್ಯ ನಡೆದರೆ ಪ್ರಾಕೃತಿಕ ವಿಕೋಪ, ಆಡಳಿತಗಾರರ ನಿರ್ಲಕ್ಷ್ಯ ಇತ್ಯಾದಿಗಳಿಂದ ಅನೇಕ ವಿನಾಶವನ್ನು ಇದು ಎದುರಿಸಿದೆ. ಸಊದ್ ರಾಜ ಮನೆತನದ ಸಂಸ್ಥಾಪಕ ಅಬ್ದುಲ್ ಅಝೀಝ್ ಇದರ ಜೀರ್ಣೋದ್ಧಾರಕ್ಕೆ ಹೆಚ್ಚಿನ ಪರಿಗಣನೆಯನ್ನು ನೀಡಿದ್ದಾರೆ. ಇಂದಿನ ಸೌದಿ ಸರಕಾರಗಳು ಕೂಡ ಈ ಜಲಾಶಯವನ್ನು ಸಂರಕ್ಷಿಸುವ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ. ಈ ಚಾರಿತ್ರಿಕ ಸ್ಮಾರಕದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲು, ಪರಿಚಯ ಪಡಲು ಹೊಸ ತಲೆಮಾರಿನ ಜನರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಇಸ್ಲಾಮಿಕ್ ಇತಿಹಾಸದ ವೈಭವಯುತ ನಿನ್ನೆಗಳ ಸುವರ್ಣ ಪುಟಗಳು ಹೊಸ ಜಗತ್ತಿನ ಮುಂದೆ ತೆರೆದುಕೊಳ್ಳಲಿದೆ.
-ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ
Comments