Skip to main content

ವಿಷ ಮಿಶ್ರಿತವಾದ ಆಯುಧದೊಂದಿಗೆ ಕೊಲ್ಲಲು ಬಂದ ವ್ಯಕ್ತಿಗೆ ಪ್ರೀತಿಯ ಆಸರೆ ನೀಡಿದ ಪೈಗಂಬರ್ ﷺِ


ವಿಷ ಮಿಶ್ರಿತವಾದ ಆಯುಧದೊಂದಿಗೆ ಕೊಲ್ಲಲು ಬಂದ ವ್ಯಕ್ತಿಗೆ ಪ್ರೀತಿಯ ಆಸರೆ ನೀಡಿದ  ಪೈಗಂಬರ್ ﷺِ

✍️ ಗಫೂರ್ ಬಾಯಾರ್
〰️〰️〰️〰️〰️〰️〰️

ಆ ವ್ಯಕ್ತಿಯ ಹೆಸರು ಆಜಾಝ್ ಖೈಬರ್'ನ ಧೀರ ಶೂರ ಪರಾಕ್ರಮಿಗಳ ಪೈಕಿ ಒಬ್ಬನಾಗಿದ್ದ. ನಬಿﷺِರನ್ನು ಕೊಂದು ಅರಬ್ ಸಾಮ್ರಾಜ್ಯದ ಹೀರೋ ಆಗಬೇಕೆಂಬ ದುರಾಸೆಯಿಂದ ವಿಷ ಮಿಶ್ರಿತ ಕತ್ತಿಯೊಂದನ್ನು ಸೊಂಟಪಟ್ಟಿಯಲ್ಲಿ ಅಡಗಿಸಿ ವೇಷ ಮರೆಸಿಕೊಂಡು ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ನಿವಾಸವಾಜ ಮದೀನಾದ ಮಸ್ಜಿದುನ್ನಬವಿಗೆ ಆಗಮಿಸಿದನು.

ಆಗ ನಬಿ ﷺِ ರವರು ಆರಾಧನಾ ಮಗ್ನರಾಗಿದ್ದರು. ಮಸೀದಿಯ ಬಾಗಿಲಿನಲ್ಲಿ ಕುಖ್ಯಾತ ಶೈತಾನನ್ನೂ ಬೆದರಿಸಿ ಬೆನ್ನಟ್ಟಿದ್ದ ಧೈರ್ಯಶಾಲಿ ಉಮರ್ ಬಿನ್ ಖತ್ತಾಬ್(ರ) ರವರು ಕಾವಲು ಕಾಯುತ್ತಿದ್ದರು.

ಹಾಗೆ ಮದೀನಾ ಮಸೀದಿಯ ಮುಂದೆ ಬಂದು ನಿಂತ ಆಗಂತುಕನನ್ನು ಅಡಿಯಿಂದ ಮುಡಿಯ ತನಕ ಒಮ್ಮೆ ದುರುಗುಟ್ಟಿ ನೋಡಿದ ಉಮರ್ (ರ) ರವರು ತಮ್ಮ ಕಂಚಿನ ಕಂಠದಲ್ಲಿ ಯಾರು ನೀನು? ಎಂದರು.

ನಾನು ಆಜಾಝ್.. ಖೈಬರ್‌ನಿಂದ ಬಂದಿದ್ದೇನೆ..

ಸರಿ.. 
ನಿನಗೆ ಏನು ಬೇಕು..?

ಪ್ರವಾದಿ ಮುಹಮ್ಮದ್ ﷺِ ರನ್ನು ಕಾಣಲು ಬಂದಿದ್ದೇನೆ ಎಂದುತ್ತರಿಸಿದರು ಆಜಾಝ್.

ಈಗ ನಬಿ ﷺِ ರು ಆರಾಧನಾ ನಿರತರಾಗಿದ್ದಾರೆ. ಸ್ವಲ್ಪ ಹೊತ್ತು ಕಾಯಿರಿ. 
ಎಂದರು ಉಮರ್ (ರ)

ಸರಿ ಎಂದ ಆಜಾಝ್, 
ನಬಿ ﷺِ ರವರ ನಮಾಝ್ ಮುಗಿಯುವ ತನಕ ಅಲ್ಲೇ ಕಾಯುತ್ತಾ ಕುಳಿತನು.

ನಬಿ ﷺِರವರ ನಮಾಝ್ ಮುಗಿದ ನಂತರ ಆಜಾಝ್'ಗೆ ಒಳ ಪ್ರವೇಶಿಸಲು ಉಮರ್ (ರ) ರವರು ಅನುಮತಿ ನೀಡಿದರು.

ತಮ್ಮ ಬಳಿ ಬಂದು ನಿಂತ ಆಗಂತುಕನೊಂದಿಗೆ ನಬಿ ﷺِರು ಕೇಳಿದರು 
"ನೀನು ಯಾರು.."?

ನಾನು ಆಜಾಝ್... 
ಖೈಬರ್‌ನಿಂದ ಬಂದಿದ್ದೇನೆ.

ಸರಿ ಎನ್ನುತ್ತಾ ಆಜಾಝ್'ನಿಗೆ ಕುಳಿತುಕೊಳ್ಳುವಂತೆ ಸೂಚಿಸಿದ ಮುತ್ತು ನಬಿ ﷺِ ರವರು ಅಲ್ಲೇ ಇದ್ದ ಮರದ ಪೆಟ್ಟಿಗೆಯೊಂದನ್ನು ಎಳೆದುಕೊಂಡು ಅದರ ಮೇಲೆ ಕುಳಿತುಕೊಂಡು ಕೇಳಿದರು "ನಿನ್ನ ಆಗಮನದ ಉದ್ದೇಶವೇನು..?"

ನಾನು ತಮ್ಮ ಬಗ್ಗೆ ತಿಳಿದುಕೊಂಡು ಇಸ್ಲಾಂ ಸ್ವೀಕರಿಸುವ ಸಲುವಾಗಿ ಇಲ್ಲಿಗೆ ಬಂದಿದ್ದೇನೆ...

ಹೌದೇ ಹಾಗಾದರೆ ನನ್ನ ಬಗ್ಗೆ ಹೇಗೆ ಮತ್ತು ಎಲ್ಲಿ ತಿಳಿದುಕೊಂಡೆ?

ತೌರಾತ್'ನಲ್ಲಿ ತಮ್ಮ ಬಗೆಗಿನ ಮಾಹಿತಿ ಇರುವುದನ್ನು ಓದಿ ತಿಳಿದು ಕೊಂಡಿದ್ದೇನೆ.

ಹೌದೇ, ತೌರಾತ್ತಿನಲ್ಲಿ ನನ್ನ ಬಗೆಗಿನ ಮಾಹಿತಿಗಳು ಯಾವ ರೀತಿ ಇದೆ..?

ನಬಿವರ್ಯರ ಈ ಪ್ರಶ್ನೆಗೆ ಆಜಾಝ್'ರ ಮುಖ ಬಿಳಿಚಿಕೊಂಡಿತು. ಏಕೆಂದರೆ ಆಜಾಝ್'ಗೆ ತೌರಾತಿನಲ್ಲಿ ಪೈಗಂಬರ್ ﷺِಮರ ಬಗೆಗಿನ ಮಾಹಿತಿಯ ಅರಿವಿರಲಿಲ್ಲ. ಹಾಗೂ ಏನೂ ಹೇಳದೆ ಮೌನವಾಗಿ ನಿಂತನು.

ಅದನ್ನು ಕಂಡ ನಬಿ ﷺِರವರು ಮಾತು ಮುಂದುವರೆಸುತ್ತಾ... ತೌರಾತ್ತಿನಲ್ಲಿ ನನ್ನ ಬಗ್ಗೆ ಏನು ಹೇಳುತ್ತದೆ? ಎಂದು ಕೇಳಿದರು.

ಈ ಪ್ರಶ್ನೆಯೂ ಅನಿರೀಕ್ಷಿತವಾದುದರಿಂದ ಅದಕ್ಕುತ್ತರಿಸಲಾಗದ ಆಜಾಝ್ ಮತ್ತೆ ಮೌನವಾದನು...!

ತೌರಾತಿನಲ್ಲಿ ನನ್ನ ಕುರಿತು ಎಷ್ಟು ಸಲ ಹೇಳಲಾಗಿದೆ..?

ಆಗಲೂ ಆಜಾಝ್'ರ ಉತ್ತರ ಮೌನವೇ ಆಗಿತ್ತು.

ಕೊನೆಗೆ ರಸೂಲ್ ﷺِ ರವರು ಕೇಳಿದರು, ಆಜಾಝ್, ಖೈಬರ್'ನಿಂದ ಮದೀನಕ್ಕೆ ಇಸ್ಲಾಂ ಸ್ವೀಕರಿಸುವ ಸಲುವಾಗಿ ತಾನೇ ನೀನು ಬಂದೆ?

ಇವೆಲ್ಲವನ್ನೂ ದೂರದಿಂದಲೇ ಗಮನಿಸುತ್ತಿದ್ದ ಉಮರ್ (ರ) ನಬಿ ﷺِರವರ ಬಳಿ ಬಂದು ನಿಂತರು.

ಹೌದು, ಪ್ರವಾದಿ ﷺِರವರೇ ನಾನು ಇಸ್ಲಾಂ ಸ್ವೀಕರಿಸುವ ಸಲುವಾಗಿ ಬಂದಿದ್ದೇನೆ ಎಂದನು ಆಜಾಝ್.

ಎದುರಿರುವ ವ್ಯಕ್ತಿಯ ಅಂತರಂಗದಲ್ಲಿ ಸುಪ್ತವಾಗಿ ಹುದುಗಿರುವ ಭಾವನೆಗಳನ್ನೇ ಅರಿಯುವ ಪ್ರವಾದಿﷺِರವರ ಮುಂದಿನ ಪ್ರಶ್ನೆ..

ಹಾಗಾದರೆ ವಿಷ ಮಿಶ್ರಿತವಾದ ಕತ್ತಿಯನ್ನು ನಿನ್ನ ಸೊಂಟದಲ್ಲಿ ಅಡಗಿಸಿಕೊಂಡಿರುವುದೇಕೆ?

ಬಿಲ್ಲಿನಿಂದ ಬಿಟ್ಟ ಬಾಣದಂತೆ ಪೈಗಂಬರ್  ﷺِ ರಿಂದ ಬಂದ ಈ ಪ್ರಶ್ನೆಯನ್ನು ಕೇಳಿ ಆಜಾಝ್'ರ ಜಂಘಾಬಲವೇ ಉಡುಗಿಹೋಯಿತು. 
ಏನು ಮಾಡಬೇಕೆಂದು ತೋಚದೆ ಕಕ್ಕಾಬಿಕ್ಕಿಯಾಗಿ ಹೋದನು.

ಏಕೆಂದರೆ ಆಜಾಝ್ ಯಾರೂ ಇಲ್ಲದ ಸ್ಥಳದಲ್ಲಿ ಯಾರಿಗೂ ತಿಳಿಯದಂತೆ ಸೊಂಟಪಟ್ಟಿಯೊಳಗೆ ತಾನು ಬಚ್ಚಿಟ್ಟುಕೊಂಡು ಬಂದಿರುವ ವಿಷ ಮಿಶ್ರಿತ ಕತ್ತಿಯ ಬಗೆಗೆ ಇವರಿಗೆ ತಿಳಿದಿದ್ದಾದರೂ ಹೇಗೆ ಎಂದು ಆಲೋಚಿಸುತ್ತಿರುವಾಗ...

ತಮ್ಮ ಪ್ರಾಣಕ್ಕಿಂತ ಮಿಗಿಲಾಗಿ ನಬಿ ﷺರವರನ್ನು ಪ್ರೀತಿಸುತ್ತಿದ್ದ ಉಮರ್ (ರ)ರವರು ತಮ್ಮ ಒರೆಯಲ್ಲಿದ್ದ ಖಡ್ಗವನ್ನು ತೆಗೆದು ಓ.. ಪೈಗಂಬರ್ﷺ ರವರೇ, ಇವನನ್ನು ನಾನು ಕೊಲ್ಲಲೇ..? 
ಎಂದು ಕೇಳಿದರು.

ಆಗ ನಬಿ ﷺರವರು ಬೇಡ ಉಮರ್ (ರ) ರವರೇ ತಾವು ಶಾಂತರಾಗಿ ಎಂದರು.

ರಹಸ್ಯ ಬಯಲಾದೀತೆಂದು ತನ್ನ ಹೆಂಡತಿಯನ್ನೂ ಸಹ ತವರು ಮನೆಗೆ ಕಳುಹಿಸಿದ ನಂತರವಷ್ಟೇ ಆಜಾಝ್ ವಿಷ ಮಿಶ್ರಿತವಾದ ಆಯುಧವನ್ನು ತಯಾರಿಸಿರುವುದು. ಹಾಗಾಗಿ ಆ ವಿಷಮಿಶ್ರಿತವಾದ ಆಯುಧದ ಬಗ್ಗೆ ಯಾರಿಗೂ ಗೊತ್ತೇ ಇರಲಿಲ್ಲ‌.

ಇತ್ತ ನಬಿ ﷺِರವರ ಮುಂದೆ ರಹಸ್ಯ ಬಯಲಾಗುವುದರ ಜೊತೆಗೆ ಉಮರ್ (ರ) ರವರು ಖಡ್ಗ ಹಿಡಿದು ನಿಂತಿರುವುದನ್ನು ಕಂಡಾಗ ತನ್ನ ಅಂತ್ಯ ಸಮೀಪಿಸಿತೆಂದು ಭಾವಿಸಿದ ಆಜಾಝ್ ಗತ್ಯಂತರವಿಲ್ಲದೆ ಸೊಂಟಪಟ್ಟಿಯೊಳಗೆ ಅಡಗಿಸಿಟ್ಟಿದ್ದ ಚಾಕುವನ್ನು ನಬಿ ﷺರವರ ಮುಂದಿಟ್ಟನು.

ನೀನು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಬಂದವನಾಗಿದ್ದರೆ, ನಿನಗೆ ಈ ಚಾಕುವಿನ ಅಗತ್ಯತೆಯೇನಿತ್ತು ಆಜಾಝ್? ಸತ್ಯ ಹೇಳು ನಿನ್ನ ಈ ಆಗಮನದ ಉದ್ದೇಶವೇನು? ಎಂದು ನಬಿ ﷺರು ಕೇಳಿದಾಗ...

ತಮ್ಮನ್ನು ಮತ್ತು ಅಲಿ (ರ) ರವರನ್ನು ವಧಿಸುವ ಸಲುವಾಗಿ ಖೈಬರ್‌ನ ರಾಜ ಮುರಾಹಿಬ್ ಮತ್ತು ಆತನ ಮಂತ್ರಿಯಾದ ಮುರತ್ತ್ ಇಬ್ನು ಮರ್ವಾನ್ ನನ್ನನ್ನು ಕಳುಹಿಸಿರುವುದು. ಹಾಗಾಗಿ ತಾವು ದಯವಿಟ್ಟು ನನ್ನನ್ನು ಕ್ಷಮಿಸಬೇಕು ಎಂದು ಅಲವತ್ತುಕೊಂಡನು.

ಇದನ್ನು ಕಂಡ ಉಮರ್ (ರ)ರವರು ರೋಷದಿಂದ ಕುದಿಯುತ್ತಾ  ಪ್ರವಾದಿ ﷺِ ವರ್ಯರೇ ತಾವು ಅನುಮತಿ ಕೊಟ್ಟರೆ ಇವನ ತಲೆಯನ್ನು ಹಾರಿಸುತ್ತೇನೆ ಎಂದರು.


ಬೇಡ ಉಮರ್ (ರ) 
ಹಾಗೆ ಈತನನ್ನು ಕೊಲ್ಲುವುದಾದರೆ, ಮೊದಲಿಗೆ ನನ್ನನ್ನು ಭೇಟಿಯಾದಾಗ ತಮ್ಮ ಉದ್ದೇಶವೂ ಸಹ ನನ್ನನ್ನು ಕೊಲ್ಲುವುದೇ ಆಗಿತ್ತಲ್ಲವೇ? ಎಂದರು. 

ಮುತ್ತು ನಬಿ ﷺِ ರವರ ಈ ಮಾತು ಕೇಳಿದ ಉಮರ್(ರ)ರವರು ಸಂಕೋಚದಿಂದ ತಲೆ ತಗ್ಗಿಸಿದರು.

ಹೇಳು ಆಜಾಝ್ ಖೈಬರ್‌'ನವರ ಉದ್ದೇಶವೇನು...? ತಮ್ಮನ್ನು ಹಾಗು ಆಲಿ (ರ)ರನ್ನು ಕೊಂದು  ಮದೀನಾವನ್ನು ವಶಪಡಿಸಿಕೊಳ್ಳುದಾಗಿದೆ ಅವರ ಉದ್ದೇಶ ಎಂದನು ಆಜಾಝ್.

ಸರಿ, ಈಗ ತಾವು ಮದೀನಾದಲ್ಲಿ ಇರಲು ಬಯಸುವಿರಾ? ಅಥವಾ ಖೈಬರ್‌ಗೆ ಹಿಂತಿರುಗುವಿರಾ? ಎಂದು ಕೇಳಿದರು ನಬಿ ﷺِರು.

ನಾನು ಬರುವಾಗ ತಮ್ಮನ್ನು ಕೊಲ್ಲುವುದಷ್ಟೇ ನನ್ನ ಉದ್ದೇಶವಾಗಿತ್ತು. ಆದರೆ ತಮ್ಮ ಮುಖಭಾವವನ್ನು ಕಾಣುವಾಗ ಹಾಗೂ ಯಾರಿಗೂ ತಿಳಿಯದಂತೆ ನಾನು ಬಚ್ಚಿಟ್ಟುಕೊಂಡು ಬಂದಿದ್ದ ಚಾಕುವಿನ ಬಗ್ಗೆ ತಾವು ಹೇಳಿದಾಗ ತಾವು ಅಲ್ಲಾಹನ ಪೈಗಂಬರ್ ﷺِ ಗಳೆಂಬುದು ನನಗೆ ಮನವರಿಕೆಯಾಯಿತು. ಹಾಗಾಗಿ ನಾನು ಖೈಬರ್‌ಗೆ ಹಿಂದಿರುಗದೆ ಇಸ್ಲಾಂ ಸ್ವೀಕರಿಸಿ ತಮ್ಮ ಅನುಯಾಯಿಯಾಗಿ ಇಲ್ಲೇ ಇರುತ್ತೇನೆ ಎನ್ನುತ್ತಾ "ಅಶ್ಹದು ಅಲ್ಲಾ ಇಲಾಹ ಇಲ್ಲಲ್ಲಾಹ್ ವ ಅಶ್ಹದು ಅನ್ನ ಮುಹಮ್ಮದ್ ರಸೂಲುಲ್ಲಾಹ್" ಎಂಬ ಶಹಾದತ್ ಕಲಿಮ ಪಠಿಸುತ್ತಾ ಇಸ್ಲಾಂ ಸ್ವೀಕರಿಸಿದರು.

ಆಗ ನಬಿ ﷺِರು ಕೇಳಿದರು, ಆಜಾಝ್ (ರ) ಖೈಬರ್‌ ಸೈನ್ಯದಲ್ಲಿ ತಾವು ಯಾವ ಹುದ್ದೆಯಲ್ಲಿದ್ದಿರಿ?

ನಾನು ಖೈಬರ್ ಸೇನೆಯ ಕಮಾಂಡರ್ ಆಗಿದ್ದೆ ಯಾ ರಸೂಲುಲ್ಲಾಹ್ ﷺِ ಎಂದರು ಆಜಾಝ್ (ರ).

ಇಲ್ಲಿ ನನ್ನ ಮದೀನಾದ ಸೇನೆಯಲ್ಲಿ
ಅಬೂಬಕರ್ (ರ) ಉಮರ್ (ರ) ಮತ್ತು ಅಲಿ (ರ) ಎಂಬ ಮೂವರು ಸೇನಾಫತಿಗಳಿದ್ದಾರೆ. ಈ ಮೂವರೊಂದಿಗೆ ಸೇರಿ ನಾಲ್ಕನೆಯ ಸೇನಾಫತಿ ಆಗುವೆಯಾ ಆಜಾಝ್ (ರ) ಎಂದು ಕೇಳಿದರು ನಬಿ ﷺِರು

ನಬಿ ﷺِರ ಈ ಮಾತಿಗೆ ಆನಂದಬಾಷ್ಪ ಸುರಿಸಿದ ಆಜಾಝ್ (ರ) ನಬಿವರ್ಯರೇ ﷺِ ತಾವು ಅನುಮತಿಸಿದರೆ ಖಂಡಿತವಾಗಿಯೂ ಆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತೇನೆ ಎಂದರು.

ಹೀಗೆ ಅಲ್ಲಾಹನ ಅಂತಿಮ ಸಂದೇಶವಾಹಕರಾದ ಸಯ್ಯಿದುನಾ ಮುತ್ತು ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಬಗ್ಗೆ ಅರಿಯದೆ ಹೇಳಿಕೆಯ ಮಾತು ಕೇಳಿ ಕೊಲ್ಲಲೆಂದು ಸಾಲುಗಟ್ಟಿ ಬಂದವರೆಲ್ಲರೂ ನಬಿವರ್ಯರ ﷺِ ಪ್ರಸನ್ನ ವದನವನ್ನು ಕಾಣುತ್ತಿದ್ದಂತೆ ಮನಸ್ಸು ಬದಲಾಯಿಸಿಕೊಂಡು ಇಸ್ಲಾಂ ಸ್ವೀಕರಿಸಿ ಸ್ವಹಾಬತ್ ಎಂಬ ನಕ್ಷತ್ರ ಸಮಾನವಾದ ಪದವಿಗೆ ಬಾಜನರಾದರು.

ಅಲ್ಲಾಹನ ಹಬೀಬಾದ ನಬಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರನ್ನು ಮೌಖಿಕವಾಗಿ ಕಂಡು ಅವರ ಸಮಕ್ಷಮದಲ್ಲಿ ಕುಳಿತು ಪ್ರವಚನ ಕೇಳಿದ ಮಹನೀಯರು ಮಾತ್ರವಲ್ಲ ಆ ಹಬೀಬರನ್ನು ﷺِ ಆಂತರಂಗಿಕವಾಗಿ ಪ್ರೀತಿಸುತ್ತಾ ಅವರ ಚರ್ಯೆಗಳನ್ನು ಪಾಲಿಸುವ ಪ್ರತಿಯೊಬ್ಬ ಆಶಿಖೀನ್'ನ ಹೃದಯದಲ್ಲೂ ಎಳ್ಳಷ್ಟೂ ದ್ವೇಷಾಸೂಯೆಗಳಿರಲಾರದು.

ಬದಲಾಗಿ ಪ್ರತಿಯೊಬ್ಬ ಆಶಿಖೀನ್ ಕೂಡ ಸ್ನೇಹ ಪ್ರೀತಿ ಸೌಹಾರ್ದತೆ ಸಾಮರಸ್ಯತೆ ಭ್ರಾತೃತ್ವ ಮತ್ತು ಭಾವೈಕ್ಯತೆಯ ಪ್ರತೀಕವಾಗುವುದರಲ್ಲಿ ಸಂಶಯವಿಲ್ಲ. ಇದಾಗಿದೆ ಮುತ್ತು ನಬಿ ಮುಹಮ್ಮದ್ ಮುಸ್ತಫಾ ﷺِರು ಮಾನವಕುಲಕ್ಕೆ ನೀಡಿದ ಸಂದೇಶ.

 ಸ್ವಲ್ಲೂ ಅಲನ್ನಬಿ ﷺِ
🌹🌹🌹🌹🌹🌹🌹

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...