ಹೆಣ್ಣಿಗೇನು ಕೆಲಸವಿದೆ? ಎಂದು ಕೇಳುವವರಿಗಾಗಿ.... ಮೂಲ ಲೇಖಕರು: *✍🏻ಸಿದ್ದೀಖ್ ಕೆ.ಎಂ. ಮೊಂಟುಗೋಳಿ* 🔅ವಾಟ್ಸಪ್'ನಲ್ಲಿ ಟೈಪ್ ಮಾಡಿರುವುದು: *✍🏻ಅಬೂಅಫೀಫ ಬಡಕಬೈಲ್*
ಹೆಣ್ಣಿಗೇನು ಕೆಲಸವಿದೆ?
ಎಂದು ಕೇಳುವವರಿಗಾಗಿ....
( *ಖ್ಯಾತ ಲೇಖಕ ಸಿದ್ದೀಖ್ ಕೆ.ಎಂ ಮೋಂಟುಗೋಳಿ* ಅವರು 2015ರ ಮೊಯಿಲಾಂಜಿಯಲ್ಲಿ ಬರೆದ ಈ ಲೇಖನವನ್ನು ವಾಟ್ಸಪಿನಲ್ಲಿ ಟೈಪಿಸುತ್ತಿದ್ದೇನೆ)
🔅ಮೂಲ ಲೇಖಕರು:
*✍🏻ಸಿದ್ದೀಖ್ ಕೆ.ಎಂ. ಮೊಂಟುಗೋಳಿ*
🔅ವಾಟ್ಸಪ್'ನಲ್ಲಿ ಟೈಪ್ ಮಾಡಿರುವುದು:
*✍🏻ಅಬೂಅಫೀಫ ಬಡಕಬೈಲ್*
ಅದ್ಯಾವಾಗ ನಿದ್ದೆ ಹತ್ತಿತ್ತೋ. ಮುಂಜಾನೆಯ ಆದ್ಸಾನ್ ಕೇಳಿ ಬೆಚ್ಚಿ ಬಿದ್ದ ಅವಳು ಲಗುಬಗನೆ ಎದ್ದವಳೇ ಕಿಚನ್'ಗೆ ಧಾವಿಸಿದಳು. ಹಾಳು ನಿದ್ದೆ! ಅದ್ಸಾನ್'ಗೆ ಅರ್ಧಗಂಟೆ ಮುಂಚೆ ಏಳುವಂತೆ ಅಲರಾಂ ಇಟ್ಟಿದ್ದರೂ ಎಚ್ಚರವಾಗಲಿಲ್ಲ. ಬಾಂಗಿನ ತುಸು ಮುಂಚೆಯೇ ಏಳುವ ಅತ್ತೆಗೆ ವುಳು ಮಾಡಲು ನೀರು ಕಾಯಿಸಿ ಕೊಡುವುದು ತಡವಾಗಿ ಬಿಟ್ಟಿತ್ತು. ಹಾಗೂ ಹೀಗೂ ಬಿಸಿ ನೀರು ಕೊಟ್ಟು ಅತ್ತೆಯನ್ನು ಸಂತೈಸಿ ಬಂದವಳೇ ತಾನು ಮೈ ನಡುಗುವ ತಣ್ಣೀರಲ್ಲಿ ದೇಹ ಶುದ್ಧಿ ಮಾಡಿ ಲಗುಬಗೆಯಿದಲೇ ನಮಾಝ್ ಮುಗಿಸಿ ಅಡುಗೆ ಕೋಣೆಗೆ ಓಡಿದಳು. ಅತ್ತೆಗೆ ನಮಾಝ್ ಮುಗಿಯುವಷ್ಟರಲ್ಲಿ ಬ್ಲಾಕ್ ಟೀ ರೆಡಿ ಇರಬೇಕು. ಚಹಾ ರೆಡಿ ಮಾಡಿ ತಂದು ಅತ್ತೆಯ ನಮಾಝ್'ನ ಚಾಪೆಯೆದುರು ಇಟ್ಟು ಬರಬೇಕಾದರೆ, ಇನ್ನೂ ವರ್ಷ ತುಂಬಿರದ ಪುಟ್ಟ ಮಗುವಿನ ಅಳು ಕೇಳಿಸಿ, ಅತ್ತ ಸಾಗಿ ಎದೆ ಹಾಲುಣಿಸಿ ಮೆಲ್ಲಗೆ ಮಲಗಿಸಿ ಮೈ ತಟ್ಟಿ ಅಲ್ಲಿಂದ ಅಡುಗೆ ಕೋಣೆಗೆ ಓಡಿದಳು. ಆರುವರೆ ಹೊತ್ತಿಗೆ ಇಬ್ಬರು ಮಕ್ಕಳು ಮದ್ರಸಕ್ಕೆ ಹೋಗಬೇಕು. ಅವರಿಗೆ ಸ್ನಾನ ಮಾಡಿಸಿ , ಡ್ರೆಸ್ಸು ಹಾಕಿಸಿ, ಚಹಾ-ಸ್ನ್ಯಾಕ್ಸು ಕೊಟ್ಟು ಕಳುಹಿಸಬೇಕು. ಪಾಪ, ಅವು ಒಂದು ತಾಸು ಬಿಟ್ಟು ಮನೆಗೆ ಮರಳಿದರೆ ಮತ್ತೆ ಅರ್ಧ ಗಂಟೆಯಲ್ಲೇ ಸ್ಕೂಲಿಗೆ ಹೊರಡಬೇಕು. ಆ ನಡುವೆ ನಾಸ್ತ , ಟಿಫಿನ್ನು ರೆಡಿಯಿರಬೇಕು.
ಸೂರ್ಯೋದಯಕ್ಕೆ ಸಮಯವಾಗಿ ನಮಾಝ್ ಖಳಾ ಆಗಲು ಹತ್ತಿರವಾದಂತೆ ಕಂಡು ಪತಿರಾಯನನ್ನು ಮೂರನೇ ಬಾರಿ ಎಬ್ಬಿಸಲು ಪ್ರಯತ್ನಿಸಿದಳು. ಗೊರಕೆ ಹೊಡೆಯುತ್ತಲೂ , ಅತ್ತಿತ್ತ ಉರುಳಾಡುತ್ತಲೂ ಇದ್ದ ಆತನನ್ನೊಮ್ಮೆ ಎಬ್ಬಿಸಿ ಬಾತ್'ರೂಮಿನ ಒಳಕ್ಕೆ ಸಾಗಿಸಲು ಬಹಳ ಸಾಹಸ ಪಡಬೇಕಾಯಿತು. ಅಬ್ಬಾ ಎಂದು ನಿಟ್ಟುಸಿರು ಬಿಟ್ಟು ಮತ್ತೆ ಕಿಚನ್'ಗೆ ಹೊಕ್ಕು ಸ್ಟೌ ಮೇಲೆ ಕಾವಲಿ ಇಟ್ಟು ಎಣ್ಣೆ ಒರೆಸುವಷ್ಟರಲ್ಲಿ ಬಾತ್'ರೂಮಿನಿಂದ ದೊಡ್ಡದೊಂದು ಕೂಗು-"ಲೇ...
ತಲೆ ಒರೆಸುವ ಬೈರಾಸ್ ಕೊಡೇ..."
ಕಾವಲಿಗೆ ದೋಸೆ ಹಿಟ್ಟು ಸುರಿದು ಬೈರಾಸನ್ನು ಪತಿರಾಯನ ಕೈಗಿಟ್ಟು ಓಡಿದಳು -ದೋಸೆ ಕರಿದು ಹೋಗಬಾರದಲ್ಲಾ!
ಮಕ್ಕಳನ್ನು ಎಬ್ಬಿಸಿ ಬಾತ್'ರೂಂಗೆ ಕಳಿಸಿದಳು.
ಬ್ರಶ್ಶಿಗೆ ಪೇಸ್ಟು ಹಚ್ಚಿ ಕೊಟ್ಟು ಹಲ್ಲುಜ್ಜಲು ಹೇಳಿದಳು . ಒಮ್ಮೆ ಅಡುಗೆ ಕೋಣೆಗೆ, ಇನ್ನೊಮ್ಮೆ ಸ್ನಾನದ ಕೋಣೆಗೆ, ಮತ್ತೊಮ್ಮೆ ಇನ್ನೊಂದು ಕೋಣೆಗೆ... ಕಾಲಿಗೆ ಚಕ್ರ ಜೋಡಿಸಿಕೊಂಡವಳಂತೆ, ಮೈಯೆಲ್ಲಾ ಕೈಯಾಗಿ ದುಡಿದು ಎಲ್ಲಾ ಕೆಲಸಗಳನ್ನು ಪೂರೈಸಿ ಮಕ್ಕಳನ್ನು ಮದ್ರಸಕ್ಕೆ ಕಳಿಸಿದಳು. ಮಡದಿ ಬೆಳಗ್ಗೆದ್ದು ಬಿಸಿ ಮಾಡಿಟ್ಟಿದ್ದ ನೀರಿನಲ್ಲಿ ಅಭಿಷೇಕ ಮುಗಿಸಿ ಬಂದ ಪತಿರಾಯನಿಗೆ ಚಹಾ-ನಾಸ್ತ ಟೇಬಲಲ್ಲಿಟ್ಟು ಮೂರ್ನಾಲ್ಕು ಬಾರಿ ಕೂಗಿ ಕರೆಯಬೇಕು . ಹಾಗೆ ಬಂದು, ತಿಂದು, ತೇಗಿ ಎದ್ದು ಹೋಗಿ ಕೈ ತೊಳೆದ . ತಾನು ಟೇಬಲಲ್ಲಿಟ್ಟು ಮೂರ್ನಾಲ್ಕು ಬಾರಿ ಕೂಗುವ ತನಕ ಬಾರದ್ದರಿಂದಾಗಿ ತುಸು ತಣ್ಣಗಾಗಿದ್ದ ಚಹಾವನ್ನು ಆತ ಏನೇನೋ ಗೊಣಗುತ್ತಾ ಬಿಟ್ಟು ಹೋಗಿದ್ದನ್ನು ಕಂಡು, ಅದನ್ನೆತ್ತಿಕೊಂಡು ಹೋಗಿ ಬಿಸಿ ಮಾಡಿ ಮತ್ತೆ ಅವನ ಮುಂದಿಟ್ಟಳು. ಒಳಗೆ ಹೋಗಿ ಆತ ಕಚೇರಿಗೆ ಕೊಂಡೊಯ್ಯಲು ಬೇಕಾಗಿದ್ದ ಟಿಫಿನ್ ಸಿದ್ದಪಡಿಸಿ, ಆಗಲೇ ಬರಲಿದ್ದ ಮಕ್ಕಳಿಗೆ ನಾಸ್ತ ಬಡಿಸಿಟ್ಟು, ಅವರ ಟಿಫಿನನ್ನು ಸಜ್ಜುಗೊಳಿಸುವ ತರಾತುರಿಯಲ್ಲಿದ್ದಳು.
ಅಷ್ಟರಲ್ಲಿ ಕೋಣೆಯಿಂದ ದೊಡ್ಡದೊಂದು ಧ್ವನಿ -"ಸಮೀರಾ... ನನ್ನ ಡ್ರೆಸ್ ಎಲ್ಲಿ? ಬೆಲ್ಟ್ ಎಲ್ಲಿ? ಲ್ಯಾಪ್'ಟ್ಯಾಪ್'ನ ಚಾರ್ಜರ್ ಎಲ್ಲಿ? ಥೂ ನಿನ್ನ... ಯಾವಾಗ ನೋಡಿದರೂ ಹಾಗೇನೇ ಇಲ್ಲಿ, ಇಟ್ಟದ್ದು ಯಾವುದೂ ಸಿಗುವುದಿಲ್ಲ. ಕರ್ಮ..."
ಓಡೋಡಿ ಬಂದ ಅವಳು ಅವನ್ನೆಲ್ಲ ತೆಗೆದುಕೊಟ್ಟಳು. ನಿನ್ನೆ ರಾತ್ರಿ ಆತ ಬಂದು ಎಲ್ಲೆಲ್ಲೋ ಬಿಸಾಕಿದ್ದ ಅವನ ಆಯೆಲ್ಲಾ ವಸ್ತುಗಳನ್ನು ಅವಳೇ ಎತ್ತಿಕೊಂಡು ಅವನ ಕಣ್ಣೆದುರಿಗೆ ಕಾಣುವಂತೆಯೇ ಅಲೆಮಾರಿನಲ್ಲಿಟ್ಟಿದ್ದರೂ ಕಣ್ಣೆತ್ತಿ ನೋಡುವಷ್ಟು ವ್ಯವಧಾನ ಅವನಿಗಿರಬೇಕಾಲ್ಲ?
ಮದ್ರಸಾದಿಂದ ಮರಳಿದ ಮಕ್ಕಳಿಗೆ ಬಾಯಲ್ಲಿ, ಮೂಗಲ್ಲಿ ತಿಂಡಿ ತುರುಕಿಸಿ ಕೈ ಮುಖ ತೊಳೆಸಿ ರಸ್ತೆ ಬದಿ ತನಕ ಬರವ ಸ್ಕೂಲ್ ಬಸ್'ನತ್ತ ಅವರನ್ನು ಕೈ ಹಿಡಿದುಕೊಂಡು ನಡೆಸಿದಳು. ಬಸ್ಸು ಹತ್ತಿಸಿ ಆಕೆ ಬರುವಾಗ ಆಫೀಸಿಗೆ ಹೊರಡಲನುವಾಗಿದ್ದ ಮದುಮಗನ ಮುಖ ಕೆಂಪಾಗಿತ್ತು. "ಶೂವನ್ನು ಸ್ವಲ್ಪ ಪಾಲಿಶ್ ಮಾಡಿ ಇಡಬಾರದಾ? ನಿನಗೆ ಏನಿದೆ ಬೇರೆ ಕೆಲಸ? ಎನ್ನುವ ಆತನ ನಿತ್ಯ ಪಲ್ಲವಿಯನ್ನು ಕೇಳಿಸಿಯೇ ಇಲ್ಲ ಎಂಬಂತೆ ಓಡೋಡಿ ಹೋಗಿ ಒಂದೇ ನಿಮಿಷದಲ್ಲಿ ಶೂ ಪಾಲೀಶ್ ಮಾಡಿಯೂ ಕೊಟ್ಟು ಗಂಡನನ್ನು ಬೀಳ್ಕೊಟ್ಟಳು . ನಮಾಝಿನ ಚಾಪೆಯಲ್ಲಿ ಆರಾಮವಾಗಿ ನಿದ್ದೆ ಹೋಗಿದ್ದ ಅತ್ತೆಯನ್ನು ಕರೆದು ಚಹಾ-ನಾಸ್ತ ತಂದಿಟ್ಟು ಅಂಗಳಕ್ಕಿಳಿದಳು. ಮನೆಯೆದುರಿನ ವರಾಂಡದ ಕಸ ಗುಡಿಸಿ, ಒಳಗೆಲ್ಲ ಪೊರಕೆ ಹಾಯಿಸಿ, ನೆಲ ಒರೆಸಿ ಮನೆಯನ್ನು ಒಂದು ಮಟ್ಟಕ್ಕೆ ತಂದಳು. ಇನ್ನು ತಡವಾದರೆ ಬಿಸಿಲಿಗೆ ನಿಲ್ಲಲು ಕಷ್ಟವಾಗುತ್ತದೆ ಎಂದುಕೊಂಡು ತನ್ನ, ಅವನ,ಅವನಮ್ಮನ, ಮಕ್ಕಳ ಡ್ರೆಶ್'ಗಳ ರಾಶಿಯನ್ನೆತ್ತಿಕೊಂಡು ಹೊರ ನಡೆದಳು. ಒಗೆದು ಒಣಗಲು ಹಾಕಿ ಒಳಬರುವಷ್ಟರಲ್ಲಿ ತಲೆ ವಿಪರೀತ ನೋಯುತ್ತಿತ್ತು. ಸೊಂಟ ಬೇನೆ, ಕಾಲು ಸೆಳೆತ ಎಂದಿನಂತೆ ಹಾಜರಾಗಿತ್ತು . ತುಸು ಅಮೃತಾಂಜನ ಹಚ್ಚಿಕೊಂಡಳು. ಗಂಟೆ ಆಗಲೇ ಹನ್ನೊಂದು ಕಳೆದಿದ್ದರೂ ಚಾ ಕುಡಿದಿಲ್ಲವೆಂಬುವುದು ಅವಳ ಗಮನಕ್ಕೆ ಬಂದದ್ದು ಆಗಲೆ. ನೀನು ಕುಡಿದೆಯಾ ಅಂತ ಕೇಳಲು ಯಾರಿದ್ದಾರೆ ಅವಳಿಗೆ?
ಆದೂ ಇದೂ ಕೆಲಸಗಳ ಮಧ್ಯೆ ಎಲ್ಲರೂ ಬಟ್ಟಲಲ್ಲಿ ಉಳಿಸಿದ್ದ ಒಂದಷ್ಟು ತಿಂಡಿಯನ್ನು ನುಂಗಿಕೊಂಡು ತಣ್ಣಗಿದ್ದ ಚಹಾವನ್ನೇ ಗಂಟಲಿಗಿಳಿಸಿಕೊಳ್ಳಬೇಕಾದರೆ ಅತ್ತೆ ಹಾಜರ್. ಈಗ ಚಾ ಕುಡೀತಿದ್ದಿಯಾ? ಈ ತನಕ ಏನ್ಮಾಡ್ತಿದ್ದಿಯಾ? ಅಲ್ಲ, ಏನು ಕೆಲಸವಿದೆಯೋ ಇದಕ್ಕೆಲ್ಲ? ನನ್ನ ತಲೆ ಜಿಡುಕಟ್ಟಿದೆ. ಸ್ವಲ್ಪ ನೀರು ಕಾಯಿಸಿಕೊಡು,ಸ್ಥಾನಕ್ಕೆ. ಅದನ್ನೂ ಮಾಡಿದ್ದಾಯಿತು. ಅಷ್ಟರಲ್ಲಿ ಗಡಿಯಾರ ಹನ್ನೆರಡು ಬಾರಿಸಿದ ಸದ್ದಿಗೆ ಬೆಚ್ಚಿಬಿದ್ದಳು ಅವಳು. ಇನ್ನೂ ಮಧ್ಯಾಹ್ನದ ಊಟಕ್ಕೆ ರೆಡಿಯಾಗಿಲ್ಲ. ಅತ್ತೆ ಅಭ್ಯಂಜನ ಮುಗಿಸಿ ನಮಾಝ್ ಮಾಡಿ ಬರುವಷ್ಟರಲ್ಲಿ ಊಟ ತಟ್ಟೆಗೆ ಹಾಕದಿದ್ದರೆ ಮತ್ತೆ ಹಳೇ ಡೈಲಾಗ್ ಕೇಳಿಸಿಕೊಳ್ಳಬೇಕಾಗುತ್ತದೆ. "ಇನ್ನೂ ಊಟ ಹಾಕಿಲ್ಲ. ಅಲ್ಲ, ಏನು ಕೆಲಸವಿದೆಯೋ ಈ ಹೆಣ್ಮಕ್ಕಳಿಗೆ!"
ಅತ್ತೆಗೆ ಬಾಯಿಗೆ ಹಿಡಿಸುವಂತಹ ಮೀನಿನ ಸಾರು, ಪ್ರೈ, ಕರಿದ ಒಣಮೀನು, ಹಪ್ಪಳ... ಎಲ್ಲವನ್ನು ಬಡಿಸಿಟ್ಟಳು. ಆಗಲೆ ಎಚ್ಚರವಾಗಿದ್ದ ಮಗುವಿನ ಬಳಿ ತೆರಳಿ ಹೇಸಿಗೆಯನ್ನೆಲ್ಲ ಒರೆಸಿ ಮಗುವನ್ನು ಸ್ನಾನ ಮಾಡಿಸಿ ತೊಟ್ಟಿಲಲ್ಲಿ ಹಾಕಿದಳು. ಬಾತ್'ರೂಂ ಕ್ಲೀನ್ ಮಾಡಿ ತಾನೂ ಮಿಂದು ಹೊರಬಂದಾಗ ಒಂದು ಬಗೆಯ ನಿರಾಳತೆ. ಹೊಟ್ಟೆ ಹಸಿಯುತ್ತಿದ್ದರೂ ಅದಕ್ಕಿಂತ ತೀವ್ರವಾಗಿದ್ದ ಆಯಾಸವನ್ನು ಪರಿಹರಿಸಲು ಹತ್ತು ನಿಮಿಷ ಮಲಗಿ ಬಿಡೋಣವೆಂದು ಮಂಚಕ್ಕೆ ಬೀಳುವಷ್ಟರಲ್ಲಿ ಫೋನ್ ರಿಂಗ್. ""ನಿನ್ನ ಕರ್ಮ. ಎಟಿಎಂ ಕಾರ್ಡ್ ಬಿಟ್ಟು ಬಂದಿದ್ದೇನೆ. ನಿನಗೇನು ಸ್ವಲ್ಪ ನೆನಪು ಮಾಡಿ ಕೊಡಬಾರದಿತ್ತಾ? ನಿಮಗೇನು ಗೊತ್ತಾಗುತ್ತೆ ನಮ್ಮ ಕಷ್ಟ. ತಂದು ಹಾಕ್ತೀವೆ.ತಿಂದು ಮಲಗೋದು. ಬೇರೇನಿದೆ ನಿಮಗಲ್ಲಿ ಕೆಲಸ?" ಎಟಿಎಂ ಮರೆತು ಹೋಗಿದ್ದ ಕೋಪ ತಾಣವನ್ನು ಕೂಡಾ ಫೋನ್ ಮೂಲಕ ಅವಳ ಮೇಲೆಯೇ ಸುರಿದು ಕೃತರ್ಥನಾದ ಗಂಡಗುಂಡ.
ಗಂಟೆ ಮೂರು.ಹೊಟ್ಟೆ ಹಸಿವು ಜೋರು. ಒಂದೇ ತಟ್ಟಿಗೆ ಅನ್ನ , ಸಾರು, ಉಪ್ಪಿನಕಾಯಿ ಗಳನ್ನು ಸುರಿದು ಗಬಗಬನೆ ಉಂಡಳು. ಆರಾಮವಾಗಿ ಕುಳಿತು ತಿನ್ನಲು ಟೈಮೆಲ್ಲಿ.
ಮಕ್ಕಳು ಶಾಲೆಯಿಂದ ಬರುವ ಟೈಮಾಯ್ತು. ಬಂದರು. ಅವರ ಬ್ಯಾಗ್ ತೆಗೆದು, ಡ್ರೆಸ್ ಬದಲಿಸಿ? ಮೈ ಕೈ ತೊಳೆಸಿ, ಊಟ ಹಾಕುವಷ್ಟರಲ್ಲಿ ಅತ್ತೆಯ ಟೀ ಬ್ರೇಕ್. ಅದೂ ಮಾಡಿಕೋಟ್ಟು, ಒಣ ಹಾಕಿದ ಡ್ರೆಸ್ಸುಗಳನ್ನು ತೆಗೆದು ಇಸ್ತ್ರಿ ಹಾಕಬೇಕು. ಮಕ್ಕಳ ಹೋಂ ವರ್ಕ್ ಮಾಡಿಸಬೇಕು. ಶಾಲಾ ಡೈರಿ ಪರೀಕ್ಷಿಸಬೇಕು. ಹಾಗೂ ಹೀಗೂ ಎಲ್ಲವನ್ನೂ ಮಾಡಿ ಮುಗಿಸಿ ಏಳು ಗಂಟೆ ಆಗುವ ಹೋತ್ತಿಗೆ ಪತಿ ಪ್ರತ್ಯಕ್ಷ. ಒಳ ನುಗ್ಗುತ್ತಲೇ "ಎಲ್ಲಿ ಹೋಗಿದ್ದಿಯಾ? ಸೀಟ್ ಔಟ್'ನಲ್ಲಿ ಕಾಗೆ ಗಲೀಜು ಮಾಡಿದ್ದು ಕಣ್ಣು ಕಾಣಲ್ವಾ ನಿನಗೆ? ದಿನವಿಡೀ ಏನಿದೆ ನಿನಗೆ ಕೆಲಸ? "
ಹೋಗಿ ಜಗುಲಿಯನ್ನು ಶುಚಿಗೊಳಿಸಿ ಬಂದು ,ಗಂಡನಿಗೆ ಚಹಾ ಇಟ್ಟಳು. ಅವನು ಅಲ್ಲಲ್ಲಿ ಖಳಚಿಟ್ಟ ವಸ್ತ್ರ,ಪರ್ಸು ವಗೈರಗಳನ್ನು ಎತ್ತಿಕೂಂಡು ಹೋಗಿ ಒಂದೆಡೆ ತೆಗೆದಿಟ್ಟಳು. ಮೊದಲೇ ಅವಳು ಬಿಸಿ ಕಾಯಿಸಿಟ್ಟಿದ್ದ ನೀರನ್ನು ಮೈ ಗೆ ಸುರಿಯಲೆಂದು ಬಾತ್'ರೂಂಗೆ ಹೊಕ್ಕ ಆತ ಅಲ್ಲಿಂದಲೇ ಏಲಂ ಕೂರಲು ಶುರು ಮಾಡಿದ್ದ -"ಸೋಪು... ಬೈರಾಸು..."
ಅವನ್ನೆಲ್ಲ ಒದಗಿಸಿ ಬಂದು ರಾತ್ರಿಯೂಟವನ್ನು ಸಿದ್ದಪಡಿಸ ಹತ್ತಿದಳು. ಸ್ನಾನ ಮುಗಿಸಿ ಒಳಬಂದು ಮಗುವನ್ನು ಎತ್ತಲು ಹೋದ ಆತ ಅಲ್ಲಿಂದ ಮತ್ತೆ ಅನೌನ್ಸ್'ಮೆಂಟ್ ಶುರು ಮಾಡಿದ-"ಸಮೀರಾ ! ಇಲ್ಲಿ ಬಂದು ನೋಡು. ಮಗು ಗಲೀಜಿ ಮಾಡಿದ್ರೂ ನಿನಗೆ ಕ್ಲೀನ್ ಮಾಡಲು ಪುರುಸೊತ್ತು ಸಿಕ್ಕಿಲ್ಲ. ದಿನವಿಡೀ ನಿನಗೇನಿದೆ ಇಲ್ಲಿ ಕೆಲಸ?"
ಗುಂಡನಿಗೆ ಚಪಾತಿ-ಪಲ್ಯ, ಅತ್ತೆಗೆ ಗಂಜಿ-ಮೀನು ಸುಕ್ಕ, ಮಕ್ಕಳಿಗೆ ಅನ್ನ , ಮೀನು,ಹಪ್ಪಳ. ತನಗೆ? ಯಾವುದು ಉಳಿಯುತ್ತೋ ,ಅದು! ತಿನ್ನದಿದ್ದರೆ ಉಳಿದದ್ದು ಮರುದಿನಕ್ಕೆ ಹಾಳಾಗುತ್ತದೆ ಎಸೆಯುವುದನ್ನು ಕಂಡರೆ ಅತ್ತೆಯೂ ಜೋರು ಮಾಡುತ್ತಾರೆ. "ಗಂಡಸರ ಕಷ್ಟ ಹೆಂಗಸರಿಗೇನು ಗೊತ್ತು? ಬೇಕಾದಷ್ಟು ತಿಂದು ಮತ್ತೆ ಎಸೆದು ಬಿಡುವುದು! ದುಡಿವರಿಗೆ ತಾನೇ ಕಷ್ಟ ಗೊತ್ತಾಗೋದು?" ಎಸೆಯಬಾರದೆಂದರೆ ತಾನು ತಿನ್ನಲೇಬೇಕು. ಗಂಡನಿಗೆ ಹಳಸಿದ್ದು ಕಂಡರಾಗದು. ಅತ್ತೆಗಂತೂ ಗ್ಯಾಸ್ ಟ್ರಬಲ್. ಹಳಸಿದ ಅನ್ನಕ್ಕೂ ತಾನೊಬ್ಬಳೇ ಕಸ್ಟಮರ್!
ಅವರವರ ಅಭಿರುಚಿಗೆ ತಕ್ಕ ಆಹಾರ ಬಡಿಸಿಕೊಟ್ಟಳು. ಎಲ್ಲರೂ ತಿಂದು ತೇಗಿ ಹೋಗಿ ಮಂಚಕ್ಕೆ ಬಿದ್ದರು.
ಗಂಟೆ ಹತ್ತು.
ಅವಳು ಪಾತ್ರೆ ಪಗಡಿಗಳನ್ನು ತೊಳೆದಳು. ಮರುದಿನದ ನಾಸ್ತಕ್ಕಾಗಿ ಅಕ್ಕಿ ನೆನದಿಟ್ಪಳು. ಮಕ್ಕಳ, ಗಂಡನ ಮರುದಿನದ ಡ್ರೆಸ್ಸುಗಳನ್ನು ಸಿದ್ಧ ಪಡಿಸಿಟ್ಟಳು. ನಡುನಡುವೆ ನಿದ್ದೆ ಬಾರದೆ ಅಳುವ ಮಗುವನ್ನು ನೋಡಿಕೊಂಡಳು. ಅಂತೂ ಗಂಟೆ ಹನ್ನೆರಡು. ದೇಹವನ್ನು ಮಂಚದ ಮೇಲೆ ಹಾಸಿದಳು. ಇಡೀ ದಿನ ಬಳಲಿ ಬೆಂಡಾದ ದೇಹಕ್ಕೆ ನಿದ್ದೆ ಆವರಿಸಲು ಹೆಚ್ಚು ಸಮಯ ಬೇಕಾಗಿರಲಿಲ್ಲ. ಸ್ವಲ್ಪ ಹೊತ್ತಿನಲ್ಲೇ ಗಂಡನ ಗೊಣಗಾಟ ಶುರು. "ಹೇ ಕೋಣದ ಹಾಗೆ ಮಲಗಿದ್ದಿಯಾ! ಮಗು ಅಳುವುದು ಕೇಳಿಸುತ್ತಿಲ್ವಾ? ಅದನ್ನೊಮ್ಮೆ ಮಲಗಿಸಿ ಬಿಡಬಾರದ? ನಿನ್ನಿಂದಾಗಿ ನನಗಿಲ್ಲಿ ನಿದ್ದೆಯಿಲ್ಲ. ನಿನಗೆ ಹಗಲಾದರೂ ನಿದ್ದೆ ಮಾಡಬಾರದ? ಹಗಲು ಬೇರೇನಿದೆ ನಿನಗೆ ಕೆಲಸ?
ಹಾಗು ಹೀಗೂ ರಾತ್ರಿ ಕಳೆದು ಮುಂಜಾನೆ ಕೋಳಿ ಕೂಗುವ ಹೊತ್ತಿಗೆ ಮತ್ತೆ ಏಳುತ್ತಾಳೆ ಆ ಮನೆ ಮಡದಿ. ನಂತರ? ಮತ್ತೆ ಆರಂಭದಿಂದ ಓದಿ....
ಇದು ಹೆಣೊಬ್ಬಳ ಒಂದು ದಿನ! ಒಬ್ಬಳದ್ದಲ್ಲ. ಬಹುತೇಕ ಮಹಿಳೆಯರ ದಿನಚರಿ ಹೆಚ್ಚು ಕಮ್ಮಿ ಹೀಗೆ ಇರುತ್ತದೆ. ಅರ್ಜಿ ಪತ್ರಗಳಲ್ಲಿ ಅವಳ ಹೆಸರಿನ ಮುಂದೆ ಉದ್ಯೋಗ ಎನ್ನುವ ಕಾಲಂನಲ್ಲಿ ಇಲ್ಲ ಎಂದೋ,ಹೌಸ್ ವೈಫ್ ಎಂದೋ ಬರೆಯಲಾಗುತ್ತದೆ.ದಿನವಿಡೀ ಗಾಣದೆತ್ತಿನಂತೆ ದುಡಿದರೂ ಅದು ಉದ್ಯೋಗ ಎನಿಸುವುದಿಲ್ಲ. ಕೂಲಿಗೆ ಅರ್ಥವಾಗುವುದಿಲ್ಲ. ನಿನಗೇನಿದೆ ಕೆಲಸ? ಎನ್ನುವ ಪ್ರಶ್ನೆ ತಪ್ಪುವುದಿಲ್ಲ! ಅವಳು ತಿಂದಳೋ ,ಕುಡಿದಳೋ ಕೇಳುವವರಿಲ್ಲ. ಅವಳಿಗೆ ಸೌಕರ್ಯ ಹೆಚ್ಚಿಸಲು, ಕೆಲಸದೊತ್ತಡ ಕಡಿಮೆ ಮಾಡಲು ಹೋರಾಡುವವರಿಲ್ಲ. ನ್ಯಾಯವೊದಗಿಸಲು ಪ್ರತಿಭಟಿಸುವವರಿಲ್ಲ. ಪೂರೈಸಲು ಅವಳಿಗೆ ಹಕ್ಕುಗಳೇ ಇಲ್ಲ. ಅವಳ ಕರ್ತವ್ಯದಲ್ಲಿ ಏನಾದರೂ ಹೆಚ್ಚು ಕಮ್ಮಿಯಾದರೆ ಕ್ಷಮಿಸುವವರಿಲ್ಲ. ಅವಳ ಇಷ್ಟಾನಿಷ್ಪಗಳು, ಸುಖದುಃಖಗಳು ಗ್ರಹಿಸಿಕೊಳ್ಳುವವರಿಲ್ಲದೆ ಅವಳೊಳಗೇ ಉರಿದು ಬೂದಿಯಾಗಿ ಹೋಗುತ್ತದೆ.
ನಿಜಕ್ಕೂ ಹೆಣ್ಣೆಂದರೆ ಆಳಾ? ಗಂಡೆಂದರೆ ಅರಸನಾ? ಅದೇಕೋ, ಅಂತಹುದೊಂದು ಭ್ರಮೆ ಪುರುಷ ಸಮಾಜದಲ್ಲಿ ಬೆಳೆದು ಬಿಟ್ಟಿದೆ. ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯಕ್ಕೆ ಹೊಂದಿಕೊಂಡು ಸಮಾಜದಲ್ಲಿ ಪುರುಷನಿಗೆ ಹೆಚ್ಚಿಗಿಂತ ಹೆಚ್ಚಿನ ಹೊಣೆಗಾರಿಕೆಗಳನ್ನು ನೀಡಲಾಗಿದೆ. ಪ್ರಕೃತಿದತ್ಥವಾಗಿಯೇ ಆತ ಆಕೆಗಿಂತ ಸಮರ್ಥನಾಗಿರುವುದರಿಂದ ನಾಯಕತ್ವವನ್ನು ಅವನಿಗೆ ವಹಿಸಲಾಗಿದೆ. ಭಾರದ ಕೆಲಸಗಳನ್ನೆಲ್ಲಾ ಅವನಲ್ಲೇ ಹೊರಿಸಲಾಗಿದೆ. ಇಬ್ಬರೂ ಡ್ರೈವರ್'ಗಳಾಗಿ ಗಾಡಿ ದಿಕ್ಕಾಪಾಲಾಗುವುದನ್ನು ತಪ್ಪಿಸುವುದಕ್ಕಾಗಿ ಆತನನ್ನು ಚಾಲಕ ಸೀಟಿನಲ್ಲಿ ಕೂರಿಸಲಾಗಿದೆ. ಇದೆಲ್ಲ ಸರಿ,ಹಾಗಂತ,ಅವಳನ್ನು ತುಳಿಯಬೇಕೆಂದು, ಅಳಿನಂತೆ ಕಾಣಬೇಕೆಂದು ಎಲ್ಲಿ ಬಂತು?
ಗಂಡ ಹೊರಗೆ ದುಡಿದು ತಂದು ಹಾಕುವಾಗ ಹೆಂಡತಿ ಮನೆಯ ಕೆಲಸಗಳನ್ನು ನಿರ್ವಹಿಸಬೇಕು. ಇಬ್ಬರ ವೃತ್ತಿಯಲ್ಲೂ ಪರಸ್ಪರ ಸಹಕರಿಸಬೇಕು. ಆತ ಹೊರಗೆ ಹೋಗಲು ಬೇಕಾದ ಡ್ರೆಸ್ಸುಗಳನ್ನು ನೀಟು ಮಾಡಿಕೊಡುವ ,ಇತರ ಅಗತ್ಯಗಳನ್ನೆಲ್ಲ ಒದಗಿಸಿಕೊಡುವ ಕೆಲಸ ಅವಳು ಮಾಡುವಾಗ ,ಅವಳ ಕೆಲಸದಲ್ಲಿ ಒಂದಷ್ಟು ಕೈ ಸಹಾಯ ಅವನೂ ಮಾಡಬಾರದೇಕೆ? ಅಷ್ಟಕ್ಕೂ ಅವನ ವಸ್ತ್ರಗಳನ್ನು ಒಗೆದು ಕೊಡಬೇಕಾದದ್ದು ಅವಳ ಕರ್ತವ್ಯವಲ್ಲ. ಅಷ್ಟೆಲ್ಲ ಏಕೆ, ಅವನ ಮಗುವಿಗೆ ಮೊಲೆ ಹಾಲುಣ್ಣಿಸಬೇಕಾದ ಜವಾಬ್ದಾರಿಯನ್ನು ಕೂಡ ಅವಳ ಮೇಲೆ ಇಸ್ಲಾಮ್ ಹೊರಿಸುವುದಿಲ್ಲ. ಅವನ ಮಗುವಿಗೆ ಮೊಲೆ ಹಾಲುಣ್ಣಿಸಬೇಕಾದ ಜವಾಬ್ದಾರಿಯನ್ನು ಕೂಡಾ ಅವಳ ಮೇಲೆ ಇಸ್ಲಾಮ್ ಹೊರಿಸುವುದಿಲ್ಲ. ಅದಕ್ಕೆ ಅವನೇ ವ್ಯವಸ್ಥೆ ಮಾಡಬೇಕು. ಪತ್ನಿ ಅದಕ್ಕಾಗಿ ಅವನಲ್ಲಿ ಸಂಬಳ ಕೇಳಿದರೆ ಕೊಡಬೇಕು! ಅವಳಿಗೆ ನಾವೇನು ಊಟ ಹಾಕುದಿಲ್ಲವೆ? ಡ್ರೆಸ್ಸು ಕೊಡಿಸುವುದಿಲ್ಲವೇ? ಅಂತೇನೂ ಕೇಳುವಂತೆಯೂ ಇಲ್ಲ. ಪತ್ನಿಗೆ ಆಹಾರ , ವಸ್ತ್ರ, ವಸತಿಗಳನ್ನು ಒದಗಿಸಬೇಕಾದ್ದು ಪತಿಗೆ ಧರ್ಮ ಹೊರಿಸುವ ಕಡ್ಡಾಯ ಕರ್ತವ್ಯ.
ಧರ್ಮಶಾಸ್ತ್ರ ಹೀಗಿದ್ದೂ ಪತ್ನಿಯರೇನೂ ಮಗುವಿಗೆ ಹಾಲುಣ್ಣಿಸಿದಕ್ಕೆ , ಪತಿಯ ಸೇವೆ ಮಾಡಿದ್ದಕ್ಕೆ ಪ್ರತಿಫಲ ಕೇಳುವುದಿಲ್ಲ. ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸಹಕರಿಸಿ ಸಾಗಬೇಕೆಂದು ಬಯಸುತ್ತಾರೆ. ದಾಂಪತ್ಯ ಎನ್ನುವುದು ಅದಕ್ಕೆ. ಅದೇ ಸಹಕಾರ ಮನೋಭಾವವನ್ನು ಗಂಡು ಕೂಡ ನೀಡಿದರೆ ಅವಳಿಗೆಷ್ಟು ಖುಷಿಯಾಗಬಹುದು! ಪತ್ನಿಯನ್ನು ಖುಷಿಪಡಿಸುವುದೂ ಒಂದು ಪುಣ್ಯ ಕರ್ಮ. ಪತ್ನಿಯ ಬಾಯಿಗೆ ಸಿಹಿಯುಣ್ಣಿಸುವುದೂ ಒಂದು ದಾನ ಎಂದಿದ್ದಾರೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು. ತಮ್ಮ ಪತ್ನಿಯರಿಗೆ ಯಾರು ಒಳ್ಳೆಯವರೋ ,ಅವರೇ ನಿಮ್ಮ ಪೈಕಿ ಉತ್ತಮರು ಎಂದು ತಿಳಿಸಿಕೊಟ್ಟ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು , ಖುದ್ದು ತಮ್ಮ ಪತ್ನಿಯರಿಗೆ ಎಷ್ಟೊಂದು ಒಳ್ಳೆಯವರಾಗಿದ್ದರು ಎಂದು ಪತ್ನಿ ಆಇಶಾ (ರ) ಹೇಳುತ್ತಾರೆ. ಅಡುಗೆ ಮನೆಯಲ್ಲಿ ರೊಟ್ಟಿಗೆ ಹಿಟ್ಟು ಕಲಸಿ ಕೊಡುವ, ತನ್ನ ಚಪ್ಪಲಿಯನ್ನು ತಾನೇ ಹೊಲಿದುಕೊಳ್ಳುವ , ರಿಲ್ಯಾಕ್ಸೇಶನ್'ಗಾಗಿ ಪತ್ನಿಯ ಜತೆ ಓಟದ ಸ್ಪರ್ಧೆ ನಡೆಸುವ, ಜಗತ್ತು ಕಂಡ ಪರಮ ಶ್ರೇಷ್ಠ ಪತಿಯನ್ನು ಪರಿಚಯ ಮಾಡಿಕೊಡುತ್ತಾರೆ ಆಇಶಾ(ರ). ಖಂಡಿತ ರಸೂಲುಲ್ಲಾಹಿಯವರಲ್ಲಿ ನಿಮಗೆ ಅತ್ಯುತ್ತಮ ಮಾದರಿಯಿದೆ ಎನ್ನುತ್ತದೆ ಖುರ್ಆನ್. ಹೌದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಲ್ಲಿ ಗಂಡಂದಿರಿಗೆ ಮಾದರಿಯಿದೆ. ಸಮಯವಿದ್ದಾಗ ತನ್ನ ವಸ್ತ್ರಗಳನ್ನು ತಾನೇ ಒಗೆಯಬಹುದು. ಬೇಡ, ಆಕೆ ಒಗೆದಿಟ್ಟದ್ದಕ್ಕೆ ಇಸ್ತ್ರಿಯಾದರೂ ಹಾಕಬಾರದಾ? ಆಕೆ ಅಡುಗೆ ಕೋಣೆಯಲ್ಲಿ ಬ್ಯುಝಿಯಾಗಿರುವಾಗ ಈರುಳ್ಳಿ, ಟೊಮೇಟೋ, ಕಾಯಿಮೆಣಸುಗಳನ್ನು ಹೆಚ್ಚಿಕೊಡುವಂತಹ ಸರಳ ಕೆಲಸವನ್ನಾದರೂ ಮಾಡಬಾರದಾ? ತಾನುಂಡ ತಟ್ಟೆಗಳನ್ನು ತೊಳೆದಿಡಬಾರದಾ? ಪತ್ನಿ ತನ್ನ ತಾಯಿ-ಮಕ್ಕಳ ಆರೈಕೆಯಲ್ಲಿ ಬಿಝಿಯಾಗಿರುವಾಗ ಮನೆ ಎದುರಿನ ಕಸ ಗುಡಿಸಲು ಸಮಯವಿರುವ ಗಂಡ ಮುಂದಾದರೆ ಪುರುಷತ್ವಕ್ಕೇನು ಕೊರತೆಯಾಗುತ್ತಾ? ಕಿಬ್ಬೊಟ್ಟೆಯ ಕೊಬ್ಬು ಕರಗಲು ಅತ್ಯುತ್ತಮ ವ್ಯಾಯಾಮ ದೊರೆಯುವುದರ ಜೊತೆ ಪತ್ನಿಗೆ ಎಷ್ಟೊಂದು ಖುಷಿಯಾಗಬಹುದು! ತನ್ನ ಕಷ್ಟ ತುಸು ಕಡಿಮೆಯಾಗುವುದರ ಜೊತೆ ಪಾಪ ತನ್ನ ಪತಿ ತನ್ನನ್ನು ಎಷ್ಟೊಂದು ಪ್ರಿತಿಸುತ್ತಾರೆ ಎಂಬ ಭಾವನೆ ಬಂದು ಪತ್ನಿಗೆ ಪತಿಯಲ್ಲಿ ಪ್ರೀತಿ ವೃದ್ಧಿಸಲೂ ಈ ಪುಟ್ಟ ಸರಕಾರಗಳು ಸಹಾಯಕ . ಗಂಡ ಎಂಬ ಗತ್ತಿನೊಂದಿಗೆ ಮನೆಯಲ್ಲಿ ಯಾವ ಕೆಲಸವನ್ನೂ ಮಾಡದೆ ದಂಡ-ಪಿಂಡ ವಾಗಬಾರದು ಗಂಡ.
ದಾಂಪತ್ಯದಲ್ಲಿ ಹೊಂದಾಣಿಕೆ ಬಹಳ ಮುಖ್ಯ ಎನ್ನುತ್ತಾರೆ. ಎರಡು ಮಾತಿಲ್ಲ. ಆದರೆ ಹೊಂದಾಣಿಕೆ ಎಂದರೇನು? ಗಂಡನಿಗೆ ಹೆಂಡತಿ ಹೊಂದಿಕೊಳ್ಳುದಷ್ಟೆನಾ? ಹಾಗೆಂದೇ ಹಲವು ಗಂಡಸರ ದೃಢ ನಂಬಿಕೆ. ಅವಳು ಎಳ್ಳಷ್ಟೂ ಹೊಂದಿಕೊಳ್ಳುವುದಿಲ್ಲವೆಂದು ಆರೋಪಿಸುವವರಿದ್ದಾರೆ. ಅವಳಿಗೆ ತಾನೂ ಹೊಂದಿಕೊಳ್ಳಬೇಕೆಂಬ ಪ್ರಜ್ಞೆ ಇರುವುದಿಲ್ಲ. ಹೊಂದಾಣಿಕೆಯೆನ್ನುವುದು ಪರಸ್ಪರ ಹೊಂದಿಕೊಳ್ಳುವುದು, ಅಡ್ಜಸ್ಟ್ ಮೆಂಟ್ ಮಾಡುವುದೇ ಹೊರತು ಅವಳಿಂದ ಮಾತ್ರ ಹೊಂದಿಕೆಯನ್ನು ಬಯಸುವುದಲ್ಲ. ದಾಂಪತ್ಯದಲ್ಲಿ ಸರಸ-ವಿರಸಗಳು ಸಹಜ. ಅವೆರಡಲ್ಲೂ ಹೊಂದಿಕೊಂಡು ಸಮರಸ ಕಾಪಾಡಿಕೊಳ್ಳುವುದೇ ಜೀವನ.
ಹೆಣ್ಣಿನ ಬಗೆಗಿನ ನಮ್ಮ ಮನೋಭಾವದಲ್ಲಿ ಬದಲಾವಣೆ ಬೇಕಾಗಿದೆ. ತಂದೆಯೊಬ್ಬ ವಸ್ತ್ರ ಒಗೆಯುವುದನ್ನು ಕಂಡ ಹೊರಗಿನ ಪುಟ್ಟ ಹುಡುಗನೊಬ್ಬ ನೀವೇನು ತಾಯಿಯಾ? ಎಂದು ಕೇಳಿದ್ದನಂತೆ. ಮನೆಗೆಲಸಗಳೆಲ್ಲಾ ಮಹಿಳೆಯರಿಗೆ ಸೇರಿದ್ದೆಂಬ ಭಾವನೆ ಚಿಕ್ಕಂದಿನಲ್ಲೇ ಮಕ್ಕಳಲ್ಲಿ ಮೂಡಿ ಬಂದರೆ , ಮತ್ತೆ ಅವರೆಂದಾದರೂ ಆ ಕೆಲಸಕ್ಕೆ ನಿಂತಾರೆಯೇ? ಪತ್ನಿ ತನ್ನ ಸೇವಕಳು ಎಂಬುದರ ಬದಲು ನಾವಿಬ್ಬರೂ ಪರಸ್ಪರ ಸ್ನೇಹಿತರು, ಸಹಕಾರಿಗಳು ಎಂಬ ಮನೋಭಾವ ಬೆಳೆಸಬೇಕು. ಅವಳಿಗೆ ನನ್ನ ಮೇಲೆ ಹಕ್ಕು- ಕರ್ತವ್ಯಗಳಿರುವಂತೆ ತನಗೂ ಅವಳ ಮೇಲೆ ಹಕ್ಕು -ಕರ್ತವ್ಯಗಳಿವೆ ಎಂಬ ಅರಿವಿರಬೇಕು. ಹೆಂಡತಿಯನ್ನು ದುರುಗುಟ್ಟಿಯೇ ನೋಡಬೇಕು. ಪಟಾಕಿ ಸದ್ದಿನಲ್ಲೇ ಮಾತನಾಡಬೇಕು ಎಂದುಕೊಂಡ ಕೆಲವು ಗಂಡಗುಂಡಗಳಿರುತ್ತಾರೆ. ಪತ್ನಿಯೊಂದಿಗೆ ಸಾಫ್ಟ್ ಆಗಿ ಮಾತನಾಡಿದರೆ ಯಾರಲ್ಲೋ ಬೇರೆ ಹುಡುಗಿಯರಲ್ಲಿರಬೇಕು ಎಂದು ತಮಾಷೆ ಮಾಡುವವರೂ ಇಲ್ಲದ್ದಿಲ್ಲ. ಆ ಮಟ್ಟದ ಬಾಸಿಸಂ ಗೂಂಡಾಗಿರಿಸಂಗಳು ಬೆಳೆದು ಬಿಟ್ಟಿದೆ. ಪ್ರೀತಿ ಪ್ರೇಮಾನುರಾಗಗಳ ಬುನಾದಿಯಲ್ಲಿ ಏಳಬೇಕಾದ ದಾಂಪತ್ಯಭವನಕ್ಕೆ ಇಂತಹ ಕಲ್ಲು ಮುಳ್ಳುಗಳು ಶೋಭೆಯಲ್ಲ. ಪ್ರೀತಿಸಿ ಒಲಿಸಬೇಕಾದ ,ಆ ಮೂಲಕ ಪ್ರೀತಿಯನ್ನು ಗಳಿಸಬೇಕಾದ ಆ ಮರಣಾಂತ ಉಳಿಸಬೇಕಾದ ಸಂಬಂಧವಿದು.
ಮಹಿಳೆಯರ ಬದುಕಿನ ಕಷ್ಟದ ಕಥೆಯನ್ನಿಲ್ಲಿ ಬಿಚ್ಚಿಟ್ಟಿದ್ದೇನೆ. ಅವರ ಅನುಪಮ ಸಹನೆ ,ಅದ್ವಿತೀಯ ಸೇವೆ, ಅವರ್ಣನೀಯ ಸ್ನೇಹಗಳಿಗೆ ನನ್ನದೊಂದು ಹ್ಯಾಟ್ಸಾಪ್ .
ಎಲ್ಲ ಹೆಣ್ಣುಗಳೂ ಹೀಗೆ ಕ್ಷಮಯಾಧರಿತ್ರಿಯರೆಂದಲ್ಲ. ಪತಿ ಪೀಡಕ ಪತ್ನಿಯರು ಇಲ್ಲವೆಂದಲ್ಲ. ಈಗಿನ ಕಾಲದಲ್ಲಿಯೂ ಹಾಗೆಲ್ಲ ಪತಿಗೆ ವಿಧೇಯರಾಗಿ ಸೇವಾಮಗ್ನರಾಗುವ ಮಹಿಳೆಯರು ಎಲ್ಲಿದ್ದಾರೆಂದು ಕೇಳುವವರೂ ಇರಬಾರದೆಂದಿಲ್ಲ. ಹೆಣ್ಣೇ ಎಲ್ಲಾ ಅನಾಹುತಗಳ ಮೂಲವೆಂದು ಆರೋಪಿಸುವವರಲ್ಲೂ ಸತ್ಯವಿಲ್ಲದಿಲ್ಲ. ಮದೆವೆಯಾಗಿ ಹೋದ ಮನೆಯ ತಿಂಡಿ ಸರಿಯಿಲ್ಲವೆಂದು ಜಗಳವಾಡಿ ತವರಿಗೆ ಹೊರಡುವ, ಕಟ್ಟಿಕೊಂಡವನನ್ನು ಅವನ ಅಪ್ಪ ಅಮ್ಮನಿಂದ ಬೇರೆ ಮಾಡಿಸಿ ಅವರಿಗೆ ವೃದ್ದಾಶ್ರಮದ ದಾರಿ ತೋರಿಸುವ, ಅವನನ್ನು ಕುಟುಂಬದಿಂದ ಬೇರ್ಪಡಿಸಿ ದೂರ ವಾಗುವ ಜಗಳಗಂಟಿಯರು, ಸಂಕುಚಿತ ಮನಸ್ಕರು , ಸ್ವಾರ್ಥಿ ಹೆಂಗಸರು ಇದ್ದೇ ಇದ್ದಾರೆ. ಆದರೆ ಎಲ್ಲರನ್ನೂ ಅದೇ ದೃಷ್ಟಿಯಿಂದ ಕಾಣುವುದು ಸಲ್ಲ. ಪತಿಗೆ ವಿಧೇಯರಾಗಿ ತನ್ನ ಬದುಕನ್ನು ಪತಿ, ಮಕ್ಕಳು, ಮತ್ತವನ ಕುಟುಂಬದವರಿಗೆ ಸಮರ್ಪಿಸುವ ಸಜ್ಜನ ಸಹೋದರಿಯರು ಸಾಕಷ್ಟಿದ್ದಾರೆ .ಖಂಡಿತವಾಗಿಯೂ ಅವರು ಅನುಕಂಪಕ್ಕೆ ಅರ್ಹರು. ಅಂತಹ ಪತ್ನಿಯರನ್ನು ಪಡೆದ ಪುರುಷರು ಭಾಗ್ಯವಂತರು. ಅಂತಹ ಗೃಹಿಣಿಯರಿದ್ದು ಅವರ ಸಜ್ಜನಿಕೆ, ಸಂಕಷ್ಟ, ಸಂಕಟಗಳನ್ನು ಅರ್ಥ ಮಾಡಿಕೊಳ್ಳದೆ ,ದಾದಗಿರಿ ,ಪೋಲಿಸ್'ಗಿರಿ ತೋರಿಸುವ ಪತಿಮಹಾಶಯರು ಭಾಗ್ಯಹೀನರು. ಅಂತಹ ಪುರುಷ ಮೇಧಾವಿಗಳ ಕಣ್ಣು ತೆರೆಯಲೆಂಬ ಹಾರೈಕೆಯೊಂದಿಗೆ...
Comments