Skip to main content

ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯೋತ್ಸವ

ಇಂದು ನಾವು 72 ನೇ ಸ್ವಾತಂತ್ರ್ಯೋತ್ಸವ ದಿನದಲ್ಲಿ ಒಟ್ಟುಗೂಡಿದ್ದೇವೆ. ಪ್ರಪ್ರಥಮವಾಗಿ ಇಲ್ಲಿ ನೆರೆದಂತಹ ಸರ್ವರಿಗೂ 72 ನೇ ಸ್ವಾತಂತ್ರ್ಯೋತ್ಸವದ ಸುಮಧುರ ಶುಭಾಷಯಗಳನ್ನು ಕೋರುತ್ತಿದ್ದೇನೆ. ಕೇವಲ ಭಿಕ್ಷೆ ಬೇಡಲು ಮನೆ ಬಾಗಿಲಿಗೆ ಬಂದಂತಹ ಭಿಕ್ಷುಕನು ಮನೆಯ ಒಡೆಯನಾದಂತೆ ಕೇವಲ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದು ತಳವೂರಿದಂತಹ ಬ್ರಿಟಿಷರು ತಮ್ಮ ಜಾಣತನ, ದಬ್ಬಾಳಿಕೆ ಹಾಗು ಆಕ್ರಮಣಗಳ ಮೂಲಕ ಇಡೀ ಭಾರತದ ದೊರೆಗಳಾಗಿ ಆಧಿಪತ್ಯವನ್ನು, ಒಡೆತನವನ್ನು ಸ್ಥಾಪಿಸಿದ್ದರು. ಬ್ರಿಟಿಷರ ಚಿತ್ರಹಿಂಸೆ, ದೌರ್ಜನ್ಯ ಹಾಗು ಆಕ್ರಮಣಕ್ಕೆ ಒಳಗಾದ ಇಡೀ ಭಾರತದ ಮುಸಲ್ಮಾನರು, ಹಿಂದೂಗಳು, ಕ್ರೈಸ್ತರು, ಸಿಖ್ಖರು, ಬೌದ್ಧರು ಎಲ್ಲರೂ ಒಟ್ಟಾಗಿ ರಕ್ತಹರಿಸಿ ಹೋರಾಡಿದ ಜಗತ್ತು ಕಂಡ ಅತ್ಯಂತ ದೊಡ್ಡ ರಕ್ತಮಯ ಸಂಘರ್ಷಗಳ ಹೋರಾಟದ ಫಲವಾಗಿದೆ ಸ್ವಾತಂತ್ರ್ಯ. ಇದನ್ನು ಭಾರತಾಂಬೆಯ ಮಕ್ಕಳಾದ ನಾವೆಲ್ಲರೂ ಸ್ವಾತಂತ್ರ್ಯ ಎಂಬ ಪ್ರೀತಿಯ ಹೆಸರಿನಿಂದ ತುಂಬಾ ಅಭಿಮಾನದಿಂದ ಕರೆಯುತ್ತೇವೆ. ಈ ಒಂದು ದಿನದಲ್ಲಿ ದೆಹಲಿಯ ಕೆಂಪುಕೋಟೆಯ ಮೇಲೇರಿ ಬಾನಿನಲ್ಲಿ ಹಾರಾಡುವ ತ್ರಿವರ್ಣ ಧ್ವಜದ ಅಡಿಯಲ್ಲಿ ನಿಂತು ರಾಷ್ಟ್ರದ ನಾಯಕರು, ರಾಷ್ಟ್ರದ ನೇತಾರರು ರಾಷ್ಟ್ರದ ಸುಂದರವಾದ ಆಶಯಾದರ್ಶಗಳನ್ನು, ವಿವಿಧತೆಯಲ್ಲಿ ಏಕತೆಯನ್ನು ಪ್ರತಿಪಾದಿಸುವ ರಾಷ್ಟ್ರದ ಸುಂದರವಾದ ಸಾಹೋದರ್ಯತೆಯ ಸಂದೇಶವನ್ನು ನೀಡುತ್ತಾರೆ. ರಾಜ್ಯದ ರಾಜಧಾನಿಗಳಲ್ಲಿಯೂ, ಜಿಲ್ಲಾ ಕೇಂದ್ರಗಳಲ್ಲಿಯೂ, ಶಾಲಾ ಕಾಲೇಜು, ಮದ್ರಸ, ಸರಕಾರೀ ಹಾಗು ಖಾಸಗಿ ಸಂಸ್ಥೆಗಳಲ್ಲಿ ಇಂದು ಭಾರತೀಯರೆಲ್ಲರೂ ಸ್ವಾತಂತ್ರ್ಯವನ್ನು ಆಚರಿಸುತ್ತಾರೆ. 
ಕೇವಲ ಯಾವುದಾದರೊಂದು ಧರ್ಮದ ನಾಯಕರೋ, ಯಾವುದಾದರೊಂದು ಧರ್ಮದ ಅನುಯಾಯಿಗಳೋ ಮಾತ್ರವಲ್ಲ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದು,  ಬದಲಾಗಿ  ಇಡೀ ಭಾರತದ ಸರ್ವ ಧರ್ಮದ ನಾಯಕರುಗಳು, ಸರ್ವ ಧರ್ಮದ ಅನುಯಾಯಿಗಳು ಸಕ್ರಿಯವಾಗಿ ಸ್ವಾತಂತ್ರ್ಯ ಸಮರ ಹೋರಾಟದಲ್ಲಿ ಧುಮುಕಿದ ಕಾರಣದಿಂದಾಗಿದೆ ನಮ್ನ ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕಿದ್ದು.  ಆದರೆ  ಖೇದಕರವಾದ ಸಂಗತಿ ಏನೆಂದರೆ  ಸ್ವಾತಂತ್ರ್ಯ ಸಮರ ಹೋರಾಟದಲ್ಲಿ ಮುಂಚೂಣಿ ನಾಯಕರುಗಳಾಗಿದ್ದ ಕೆಲವು ಮುಸ್ಲಿಂ ಸ್ವಾತಂತ್ರ್ಯ ಸಮರ ಸೇನಾನಿಗಳನ್ನು ದೇಶ ವಿರೋಧಿಗಳಾಗಿಯೂ, ಮತಾಂಧರಾಗಿಯೂ ಚಿತ್ರೀಕರಿಸುತ್ತಾ, ಕೆಲವರನ್ನು ಅವಗಣಿಸುತ್ತಾ ಸ್ವಾತಂತ್ರ್ಯ ಸಮರ ಚರಿತ್ರೆಯನ್ನು ಹಸಿ ಹಸಿಯಾಗಿ ತಿರುವಿದಂತಹ, ಬದಲಾಯಿಸಿದಂತಹದ್ದನ್ನು  ನಮಗೆ ಕಾಣಲಿಕ್ಕೆ ಸಾಧ್ಯವಾಗುತ್ತದೆ.  ಮುಸ್ಲಿಂ ನಾಯಕರುಗಳು ಯಾರೂ ಸ್ವಾತಂತ್ರ್ಯ  ಸಮರ ಹೋರಾಟದಲ್ಲಿ  ಭಾಗವಹಿಸಲೇ ಇಲ್ಲ  ಎಂಬ  ರೀತಿಯಲ್ಲಿ ಅವರನ್ನು ದೇಶ ವಿರೋಧಿಗಳಾಗಿ ಚಿತ್ರೀಕರಿಸುವ ಪ್ರಯತ್ನಗಳು ಇಲ್ಲಿ ನಡೆಯುತ್ತಿದೆ.  ಆದರೆ  ಅಸಂಖ್ಯಾತ ಮುಸ್ಲಿಂ ಸ್ವಾತಂತ್ರ್ಯ  ಸಮರ ಸೇನಾನಿಗಳ ತ್ಯಾಗೋಜ್ವಲವಾದ  ಹೋರಾಟದ ಬದುಕಿನ ಚರಿತ್ರೆಗಳನ್ನು ಗಮನಿಸಿದರೆ  ಇಂದಿಗೂ ಸತ್ಯವಾದ ಚರಿತ್ರೆ ಪುಟಗಳಲ್ಲಿ ರಾರಾಜಿಸುತ್ತಿದೆ. 
  ರಾಷ್ಟ್ರ ಪಿತ ಮಹಾತ್ಮಾ ಗಾಂಧೀಜಿಯ ಜೊತೆ ಸ್ವಾತಂತ್ರ್ಯ ಸಮರ ಹೋರಾಟದಲ್ಲಿ ಸಕ್ರಿಯವಾಗಿ ಜೊತೆ ಜೊತೆಯಾಗಿದ್ದವರಾಗಿದ್ದರು ಮೌಲಾನಾ ಮುಹಮ್ಮದ್ ಅಲಿ ಜೌಹರ್.
ಹೋರಾಟದ ಸಂದರ್ಭದಲ್ಲಿ ಮೌಲಾನಾ ಮುಹಮ್ಮದ್ ಅಲಿ ಜೌಹರ್ ಹಲವಾರು ತೊಂದರೆಗಳನ್ನು, ಪೀಡನೆಗಳನ್ನು ಕಷ್ಟಗಳನ್ನು ಅನುಭವಿಸಿ ಸಹಿಸಿ ರಾಷ್ಟ್ರದ ನೆಲೆ ನಿಲ್ಲುವಿಕೆಗೆ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ತನ್ನ ಸರ್ವವನ್ನೂ ತ್ಯಾಗ ಮಾಡಿದ್ದರು.  ಲಂಡನ್ನಿನಲ್ಲಿ ನಡೆದಂತಹ ದುಂಡು ಮೇಜಿನ ಸಭೆಯಲ್ಲಿ ಮೌಲಾನಾ ಮುಹಮ್ಮದ್ ಅಲಿ ಜೌಹರ್ ರವರು ಘರ್ಜಿಸಿದಂತಹ ಆ ಧೀರ ಘರ್ಜನೆಯ ಸಾಲುಗಳನ್ನು ಓದುವಾಗ, ಕೇಳುವಾಗ ಪ್ರತಿಯೊಬ್ಬ ಭಾರತೀಯನ ಮೈ ರೋಂಮಾಂಚನಗೊಳ್ಳುತ್ತದೆ.
ಮೌಲಾನಾ ಮುಹಮ್ಮದ್ ಅಲಿ ಜೌಹರ್ ಲಂಡನ್ನಿನಲ್ಲಿ ನಡೆದ ದುಂಡು ಮೇಜಿನ ಸಭೆಯಲ್ಲಿ ಹೇಳಿದರು. ಸ್ವಾತಂತ್ರ್ಯವು ನನ್ನ ಹಸ್ತದಲ್ಲಿ ಸಿಗದೇ ನಾನು ನನ್ನ ದೇಶಕ್ಕೆ ಮರಳಲಾರೆ. ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಗದೆ ನಾನು ದೇಶಕ್ಕೆ ಹಿಂದಿರುಗುವುದಿಲ್ಲ. ಪರಕೀಯರ ಕಪಿ ಮುಷ್ಟಿಯಲ್ಲಿ ಭಾರತ ದೇಶವು ದಾಸ್ಯತನದಲ್ಲಿರುವ ಕಾಲದ ತನಕ ನಾನು ಭಾರತ ದೇಶದಲ್ಲಿ ಮರಣ ಹೊಂದಲು ನಾನು ಬಯಸುವುದಿಲ್ಲ. ದಾಸ್ಯತನದಲ್ಲಿರುವ ಭಾರತ ದೇಶಕ್ಕಿಂತಲೂ ಸ್ವತಂತ್ರವಾದ ವಿದೇಶವಾಗಿದೆ ಉತ್ತಮ. ಎರಡರಲ್ಲೊಂದು ತೀರ್ಮಾನ ಈ ಸಭೆಯಲ್ಲಿ ಆಗಬೇಕು. ನನ್ನ ದೇಶಕ್ಕೆ ವಿಮೋಚನೆಯನ್ನು ನೀಡಿರಿ. ನನ್ನ ದೇಶಕ್ಕೆ ಸ್ವಾತಂತ್ರ್ಯವನ್ನು ನೀಡಿರಿ.ಇಲ್ಲದಿದ್ದರೆ ಮರಣಹೊಂದಲು ಖಬರಿಗಾಗಿ ಆರು ಅಡಿ ಮಣ್ಣನ್ವು ನೀಡಿರಿ ಎಂದಾಗಿತ್ತು ಅವರ ಧೀರ ಘರ್ಜನೆ.
ಅದೇ ರೀತಿ ಅವರ ಸಹೋದರನಾದ ಮೌಲಾನಾ ಶೌಕತ್ ಅಲಿ ಜೌಹರ್ ಕೂಡಾ ಸ್ವಾತಂತ್ರ್ಯ ಸಮರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಖಿಲಾಫತ್ ಪ್ರಸ್ಥಾನದ ನಾಯಕನಾಗಿ ತನ್ನ ಅಂತ್ಯ ಶ್ವಾಸದವರೆಗೆ ಬ್ರಿಟಿಷ್ ರಾಕ್ಷಸರ ವಿರುದ್ಧ ಹೋರಾಡಿದ್ದರು.
ಪ್ರೀತಿಯ ಸಹೋದರರೇ ಬ್ರಿಟಿಷರ ಬೆಂಕಿ ಉಗುಳುವ ಫಿರಂಗಿ ತೋಪುಗಳ ಮುಂದೆ ಎದೆಯೊಡ್ಡಿ ಧೀರನಾಗಿ ನಿಂತು ವೀರಾವೇಶದಿಂದ ಹೋರಾಡಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹಝ್ರತ್ ಟಿಪ್ಪು ಸುಲ್ತಾನ್ ಖ.ಸಿ ರವರನ್ನು ಸ್ಮರಿಸದೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲು ನಮಗೆ ಸಾಧ್ಯವಿಲ್ಲ.  ಅಷ್ಟೊಂದು ಹೋರಾಟಗಳನ್ನು ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ಖ.ಸಿ ರವರು ಮಾಡಿದ್ದರು. ಆದರೆ ಕೆಲವೊಂದು ವಿಕ್ರತ ಮನಸ್ಸಿನ ಕುಬುದ್ಧಿಗಳು ಟಿಪ್ಪು ಸುಲ್ತಾನ್ ಖ.ಸಿ ರವರನ್ನು ದೇಶ ವಿರೋಧಿಯಾಗಿಯೂ ಮತಾಂಧನಾಗಿಯೂ ಚಿತ್ರೀಕರಿಸುತ್ತಿದ್ದಾರೆ. ಆದರೆ ಅವರ ಬದುಕಿನ ಪ್ರತಿಯೊಂದು ಮಜಲುಗಳನ್ನು ಗಮನಿಸಿದರೆ ಅವರು ಪರ ಧರ್ಮ ಸಹಿಷ್ಣು ಆಗಿಯೂ, ದೇಶ ಸ್ನೇಹಿಯಾಗಿಯೂ ಇದ್ದರು ಎಂದು ತಿಳಿಯುತ್ತದೆ. ತನ್ನ ಸ್ವಂತ ಮಂತ್ರಿ ಕೂಡಾ ಒಬ್ಬ ಹಿಂದೂ ಧರ್ಮಾನುಯಾಯಿ ಆಗಿದ್ದನು, ಮಾತ್ರವಲ್ಲ ಹಲವಾರು ದೇವಸ್ಥಾನಗಳ ನಿರ್ಮಾಣಕ್ಕೆ ಸ್ವತಃ ನೇತ್ರತ್ವ ನೀಡಿದ್ದರು. ಮೈಸೂರಿನಲ್ಲಿ ಹಲವು ಚರ್ಚ್ ನಿರ್ಮಾಣ ಕೂಡಾ ಟಿಪ್ಪುಸುಲ್ತಾನ್ ಖ.ಸಿ ಮಾಡಿಸಿದ್ದರು. ಇದರಿಂದ ನಮಗೆ ಟಿಪ್ಪು ಸುಲ್ತಾನ್ ಖ.ಸಿ ಪರ ಧರ್ಮ ಸಹಿಷ್ಣುತೆಗೆ, ಪರ ಧರ್ಮ ಸೌಹಾರ್ದತೆಗೆ ಎಷ್ಟೊಂದು ಒತ್ತು ಕೊಟ್ಟಿದ್ದರು ಎಂದು ತಿಳಿಯುತ್ತದೆ.
ಇದನ್ವು ಪ್ರಸಿದ್ಧ ಚರಿತ್ರೆಕಾರ ಕೆ ಎನ್ ಪನಿಕ್ಕರ್ ತನ್ನ ಗ್ರಂಥದಲ್ಲಿ ಉದ್ಧರಿಸುತ್ತಾರೆ.
             ಅದೇ ರೀತಿ ಟಿಪ್ಪು ಸುಲ್ತಾನ್ ಖ.ಸಿ ರವರು ಬ್ರಿಟಿಷರ ವಿರುದ್ಧ ಹೋರಾಡಿದ ತನ್ನ ಸ್ವಾತಂತ್ರ್ಯ ಸಮರ ಹೋರಾಟದ ಕಿಚ್ಚಿನ ಚರಿತ್ರೆಗಳನ್ನು ಅಧ್ಯಯನ ಮಾಡಿದರೆ ಅವರನ್ನು ದೇಶ ವಿರೋಧಿಯನ್ನಾಗಿ ಚಿತ್ರೀಕರಿಸುವ ಕೆಲವರ ಕುತಂತ್ರಗಳು ಕೂಡಾ ಠುಸ್ಸಾಗುತ್ತದೆ.
ಕಬ್ಬಿಣದ ಕವಚವಿರುವ ರಾಕೆಟ್ ಗಳನ್ನು ಪ್ರಪ್ರಥಮವಾಗಿ ಯುದ್ಧದಲ್ಲಿ ಉಪಯೋಗಿಸಿದ್ದು ಟಿಪ್ಪು ಸುಲ್ತಾನ್ ಖ.ಸಿ ರವರಾಗಿದ್ದರು. ಆ ರಾಕೆಟ್ ಗಳನ್ನು ಪ್ರಪ್ರಥಮವಾಗಿ ಬಳಸಿದ್ದು ಬ್ರಿಟಿಷರೊಂದಿಗೆ ನಡೆದ ಗುಂಟೂರ್ ಯುದ್ಧದಲ್ಲಿ ಆಗಿದೆ ಎಂದು ಹೇಳುವಾಗ ಆ ಧೀರ ದೇಶಾಭಿಮಾನಿಯಾದ ಟಿಪ್ಪು ಸುಲ್ತಾನ್ ಖ.ಸಿ ರವರು ಬ್ರಿಟಿಷರೊಂದಿಗೆ ಯಾವ ಮಟ್ಟದಲ್ಲಿ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು, ಯಾವ ಮಟ್ಟದಲ್ಲಿ ದೇಶವನ್ನು ಸ್ನೇಹಿಸುತ್ತಿದ್ದರು ಎಂದು ಹಗಲು ಬೆಳಕಿನಷ್ಟು ನಮಗೆ ಮನಗಾಣಲಿಕ್ಕೆ ಸಾಧ್ಯವಾಗುತ್ತದೆ. ತನ್ನ ಪ್ರೀತಿಯ ತಂದೆ ಹೈದರಾಲಿಯೊಂದಿಗೆ ಸೇರಿ ಧೀರನಾಗಿ ನಿಂತು ಬಿಳಿಯರ ವಿರುದ್ಧ  ವೀರಾವೇಶದಿಂದ ಹೋರಾಡಿದ ಟಿಪ್ಪು ಸುಲ್ತಾನ್ ಖ.ಸಿ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು.
ಮಲಬಾರ್ ಪ್ರದೇಶದ ಚರಿತ್ರೆಯನ್ನು ನೋಡುವುದಾದರೆ ತಮ್ಮ ಸಂಪೂರ್ಣ ಬದುಕನ್ನು ದೇಶಕ್ಕಾಗಿ ಸಮರ್ಪಿಸಿದ ಹಲವಾರು ಪ್ರತಿಭೆಗಳ ಕುರಿತು ಹೇಳಲಿಕ್ಕಿದೆ. 
ಮಲಬಾರಿನ ಮದೀನ ಎಂದೇ ಪ್ರಸಿದ್ಧವಾದ ಮಂಬುರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಸಯ್ಯಿದ್ ಅಲವಿ ತಂಗಲ್ ರ.ಅ ಇವರಲ್ಲಿ ಪ್ರಮುಖರಾಗಿದ್ದಾರೆ. ಸಯ್ಯಿದ್ ಅಲವಿ ತಂಗಲ್ ರ.ಅ ರವರ ಶಿಷ್ಯರಾದ ಮಹಾನರಾದ ಉಮರ್ ಖಾಲಿ ರ.ಅ ರವರೂ ಕೂಡಾ ಬ್ರಿಟಿಷರ ವಿರುದ್ಧ ಶಬ್ದವೆತ್ತಿದ್ದರು. ಹೀಗೇ ಹೇಳುತ್ತಾ ಹೋದರೆ ಹಲವಾರು ಮುಸ್ಲಿಂ ಸ್ವಾತಂತ್ರ್ಯ ಸಮರಸೇನಾನಿಗಳ ಕುರಿತು ಹೇಳಲಿಕ್ಕಿದೆ. ಸಮಯದ ಅಭಾವದ ಕಾರಣ ಹೆಚ್ಚೇನೂ ಹೇಳಲಿಕ್ಕೆ ಬಯಸುವುದಿಲ್ಲ. 
ಒಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ, ಜವಾಹರ್ ಲಾಲ್ ನೆಹರೂ, ಸರ್ದಾರ್ ವಲ್ಲಭಬಾಯಿ ಪಟೇಲ್, ಭಗತ್ಸಿಂಗ್ ಮುಂತಾದ ನಾಯಕರನ್ನು ಸ್ಮರಿಸಲ್ಪಡುವ ಹಾಗೆ ಮುಸ್ಲಿಂ ಸ್ವಾತಂತ್ರ್ಯ ಸಮರ ಸೇನಾನಿಗಳನ್ನು ಕೂಡಾ ಸ್ವಾತಂತ್ರ್ಯ ದಿನದಂದು ಸ್ಮರಿಸಬೇಕಾಗಿದೆ.

By ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...