ಅಪ್ಪ ಅಂದರೆ ಬೆಳಕು-ಅಪ್ಪನಿಂದಲೇ ಬದುಕು
ಅದೇನೋ ಗೊತ್ತಿಲ್ಲ, ಈ ಅಪ್ಪ ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಕಣ್ಣಲ್ಲಿ ಹೀರೋ ಆಗಿಯೇ ಉಳಿದುಬಿಟ್ಟಿದ್ದಾರೆ! ಬದುಕಿನ ಪಯಣದ ಲೆಕ್ಕವಿಲ್ಲದಷ್ಟು ತಿರುವಿನಲ್ಲಿ ಸಿಕ್ಕ ಸಾವಿರಾರು ಜನರೂ ಅಪ್ಪನ ಸಮಕ್ಕೆ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ನಮ್ಮ ಬದುಕನ್ನು ಅಪ್ಪ ಆವರಿಸಿಬಿಟ್ಟಿದ್ದಾರೆ!
ಮನೆ ಜನರ ತುತ್ತಿನ ಚೀಲ ತುಂಬುವವನು, ತನ್ನ ಬೆವರಿನಿಂದ ಮನೆಜನರಲ್ಲಿ ನಗು ಮೂಡಿಸುವವನು ಈ ಅಪ್ಪ.
ಅಪ್ಪ ಜೊತೆಯಲ್ಲಿದ್ದರೆ ಅದೇನೋ ಹೇಳತೀರದ ಧೈರ್ಯ.
ತಲೆಹರಟೆ ಮಕ್ಕಳನ್ನೆಲ್ಲ ಕೊಂಚವಾದರೂ ಹದ್ದುಬಸ್ತಿನಲ್ಲಿಡುವುದಕ್ಕಾಗಿ ಸುಖಾಸುಮ್ಮನೆ ಯಜಮಾನ ಎಂಬ ಹಣೆಪಟ್ಟಿಕಟ್ಟಿಕೊಂಡು, ದರ್ಪದ ನಾಟಕ ಆಡುವವನು -ಅಪ್ಪ.
ಮನಸ್ಸಲ್ಲಿ ಅವಿತಿಟ್ಟುಕೊಂಡ ಅವ್ಯಕ್ತ ಅಕ್ಕರೆಯನ್ನು, ಪ್ರೀತಿಯನ್ನೂ ಮಾತಿನಲ್ಲಿ ಹೇಳದೆ ಮೌನವಾಗಿಯೇ ಇದ್ದುಬಿಡುವವನು -ಅಪ್ಪ. ನಿಜಕ್ಕೂ ಈ ಅಪ್ಪ ಎಂಬ ಯಜಮಾನನ ಮನಸ್ಸಿನಲ್ಲಿರುವ ಮಗುವಿನಂಥ ಮುಗ್ಧ ಮನಸ್ಸನ್ನು ಅರಿತವರೆಷ್ಟು ಜನ?
ಅಪ್ಪನ ಬಗ್ಗೆ ಇಂಗ್ಲಿಷಿನಲ್ಲಿ ಸುಂದರವಾದ ಒಂದು ಮಾತಿದೆ *"To* *the* *world* *you* *are* *a* *dad.* *To* *our* *family* *you* *are* *the* *world"*. ಅಂದ್ರೆ *ಈ ಜಗತ್ತಿಗೆ ನೀನೊಬ್ಬ ತಂದೆಯಾಗಿ ಕಾಣಿಸಬಹುದು, ಆದ್ರೆ ನಮ್ಮ ಕುಟುಂಬಕ್ಕೆ ನೀನೆ ಒಂದು ಜಗತ್ತು*.
*ತಾಯಿ ಇಲ್ಲದಿದ್ದರೆ ಇನ್ನೊಬ್ಬರನ್ನು ಅಮ್ಮ ಅಂತ ಕರಿಯಬಹುದು ಆದ್ರೆ ಅದೇ ತಂದೆ ಇಲ್ಲದಿದ್ರೆ ಯಾರನ್ನೂ ಕೂಡ ಅಪ್ಪ ಅಂತ ಕರೆಯಲು ಸಾಧ್ಯವಿಲ್ಲ ಅಲ್ವಾ?* ಅಪ್ಪ ಅನ್ನೋ ಆ ಎರಡಕ್ಷರದಲ್ಲಿ ಗತ್ತು ಇದ್ದರೂ ಅವರಲ್ಲೂ ಪ್ರೀತಿ , ಕಾಳಜಿ , ಮಮತೆ ,ಸ್ನೇಹ ಇವೆಲ್ಲವು ಇವೆ.
*ಕಷ್ಟ ಅನ್ನೋ ಗಾಳಿ ಮಳೆಗೆ*
*ಎದೆಯ ಕೊಟ್ಟು ನಿಲ್ಲುವ ಪರ್ವತ -ಅಪ್ಪ*!
*ಎಲ್ಲಾ ನೋವು ನಲಿವಿನಲ್ಲೂ ನಮ್ಮ ಜೊತೆಗೆ ಬೆರೆಯುವ ಸ್ನೇಹಿತ- ಅಪ್ಪ*!
*ತಪ್ಪು ಮಾಡಿದಾಗ ನಮ್ಮ ಗುರುವಾಗಿ -ಗದರಿ*
*ನೊಂದು ಕೂತಾಗ ತಾಯಾಗಿ ನಮ್ಮ ತಲೆಯ -ಸವರಿ*
ಸದಾ ಬೆನ್ನ ಹಿಂದೆ ಇದ್ದ ಅಪ್ಪ ಅನ್ನೋ *-ಅಸ್ತ್ರ*,
ಕೊನೆಗೆ ಮರಳಿ ಬಾರದ ಊರಿಗೆ ತೆರಳುವಾಗ ಅಪ್ಪ ಎಂಬುದು ಬರಿಯ ನೆನಪು *-ಮಾತ್ರ*!
*ಕಷ್ಟ ಬಂದಾಗ ಅಮ್ಮ ಅತ್ತು ಬಿಡಬಹುದು ಆದರೆ ಅಪ್ಪ? ತನ್ನೆಲ್ಲಾ ನೋವನ್ನು ತನ್ನ ಮನದೊಳಗೆ ಅದುಮಿಟ್ಟುಕೊಂಡು ಕೊನೆಗೊಂದು ದಿನ ಹೃದಯದ ಸಮಸ್ಯೆಯಿಂದ ಸೊರಗಿ ಹೋಗಬಹುದು.*.
ಅದಕ್ಕೆ ಹೇಳೋದು ಅಪ್ಪ ಇದ್ದಾಗ ಅಪ್ಪನ ಬೆಲೆಯನ್ನು ತಿಳಿದು ಅವರ ಆ ಮನಸ್ಸಿಗೆ ನೋವು ಕೊಡದೆ ಚೆನ್ನಾಗಿ ನೋಡಿಕೊಳ್ಳಬೇಕು ಅಲ್ವಾ?
ಎಷ್ಟಾದರೂ ಅಪ್ಪನ ಆ ಪ್ರೀತಿ,ಕಾಳಜಿ ತಿಳಿಯಬೇಕಾದರೆ *ಅಪ್ಪ ಒಂದಲ್ಲ ಒಂದು ದಿನ ನಮ್ಮನ್ನು ಬಿಟ್ಟು ಹೋಗಲೇಬೇಕು.*
ಎಷ್ಟೇ ಆಗಲಿ ಅಪ್ಪ ಎಂಬ ಆ ಜೀವಕೆ ಅವರೇ ಸರಿಸಾಟಿ.ತನ್ನ ನಂಬಿ ಜೊತೆಗೆ ಇದ್ದವರಿಗೆ ಅಭಯ ಕೇಂದ್ರವಾಗಿ ಸದಾ ತಮ್ಮವರ ಹಿತವನ್ನು ಬಯಸುತ ತನ್ನ ನೋವನ್ನು ಎದೆಯೊಳಗೆ ಇರಿಸಿ ತಾನೊಬ್ಬ ಖುಶಿ ಜೀವಿ ಎಂದು ಪ್ರಪಂಚಕ್ಕೆ ತಿಳಿಸುವ ಅಪ್ಪನ ಆ ವ್ಯಕ್ತಿತ್ವಕ್ಕೆ *ನನ್ನದೊಂದು ಸಲಾಂ*
*✒ಮೊಹಮ್ಮದ್ ಆರೀಫ್ ಎಂ.ಎಸ್.*
*ಗೋಳಿತ್ತಡಿ*
Comments