Skip to main content

ರಮಳಾನ್ (ರಂಝಾನ್) ಬರುತಿದೆ, ನಾವೆಷ್ಟು ರೆಡಿಯಾಗಿದ್ದೇವೆ ? ಭಾಗ-1 ✍ಅನ್ಸಾರ್ ಸೈದು

ರಮಳಾನ್ (ರಂಝಾನ್) ಬರುತಿದೆ, ನಾವೆಷ್ಟು ರೆಡಿಯಾಗಿದ್ದೇವೆ ?
ಭಾಗ-1
✍ಅನ್ಸಾರ್ ಸೈದು

"ಉಪವಾಸವು ಇಸ್ಲಾಮಿನ ಪಂಚ ಸ್ಥಂಭಗಳಲ್ಲೊಂದು". ಹಿಂದಿನ ಜನಾಂಗಕ್ಕೂ ಕಡ್ಡಾಯಗೊಳಿಸಲ್ಪಟ್ಟ ಇಸ್ಲಾಮಿನ ಒಂದು ಪುರಾತನ ಆರಾಧನಾ ಕ್ರಮ. ಪಾಪಗಳಿಂದ ತುಂಬಿದ ಜೀವನವನ್ನೂ, ಹೃದಯವನ್ನು ಶುಚಿಗೊಳಿಸಲು ಅಲ್ಲಾಹನು ನೀಡಿದ ಅವಕಾಶ.
ಅಲ್ಲಾಹನು ಹೇಳುತ್ತಾನೆ: "ಓ! ಸತ್ಯ ವಿಶ್ವಾಸಿಗಳೇ, ನಿಮ್ಮ ಪೂರ್ವಿಕರ ಮೇಲೆ ಉಪವಾಸ ಕಡ್ಡಾಯಗೊಳಿಸಿದಂತೆ ನಿಮ್ಮ ಮೇಲೂ ಉಪವಾಸ ಕಡ್ಡಾಯಗೊಳಿಸಲಾಗಿದೆ‌. ಅದರ ಮೂಲಕ ನೀವೂ ಭಯ, ಭಕ್ತಿ ಉಳ್ಳವರಾಗಲಿಕ್ಕಾಗಿ".
ಪ್ರವಾದಿ ನೆಬಿ (ﷺ) ಹೇಳುತ್ತಾರೆ; " ಒಬ್ಬ ವ್ಯಕ್ತಿ ಕೆಟ್ಟ ಮಾತುಗಳನ್ನೂ, ಪಾಪ ಕೃತ್ಯಗಳನ್ನೂ ಉಪೇಕ್ಷಿಸದೇ ಕೇವಲ ಅನ್ನ ಪಾನೀಯಗಳನ್ನು ತೊರೆಯುವುದು ಅಲ್ಲಾಹನಿಗೆ ಅಗತ್ಯವಿಲ್ಲ". ಅನ್ನ ಪಾನೀಯಗಳನ್ನು ತೊರೆಯುವುದರ ಮೂಲಕ ಮಾನಸಿಕ ಹಾಗೂ ದೈಹಿಕ ನಿಯಂತ್ರಣವಾಗಿದೆ ಉಪವಾಸದ ನೈಜ ಗುಟ್ಟು ಎನ್ನುವುದನ್ನು ಈ ಹದೀಸಿನ ಮೂಲಕ ತಿಳಿಯಬಹುದಾಗಿದೆ.

*ಯಾರಿಗೆಲ್ಲ ಉಪವಾಸ ಕಡ್ಡಾಯ*
ಪ್ರಾಯ ಪೂರ್ತಿಯಾದ ಬುದ್ಧಿ ಇರುವ, ಶುದ್ಧಿ ಇರುವ ಎಲ್ಲಾ ಮುಸ್ಲಿಮರಿಗೂ ಉಪವಾಸ ಕಡ್ಡಾಯವಾಗಿದೆ.
🔹ಬುದ್ಧಿ ಇರದ ಅಂದರೆ, ಹುಚ್ಚರು ಅಥವಾ ಹಗಲಿಡೀ ಬುದ್ಧಿ ನಷ್ಟ ಹೊಂದಿದವರು. ಅದೇ ರೀತಿ,
🔹ಶುದ್ಧಿ ಇರದ ಅಂದರೆ, ಹೈಲ್, ನಿಫಾಸ್ ಇದ್ದವರು ಉಪವಾಸ ಹಿಡಿಯಬಾರದು. ಬುದ್ಧಿಮಾಂದ್ಯತೆ, ಕಾಯಿಲೆಯಿಂದ ವೃತ ಹಿಡಿಯಲು ಅಶಕ್ತತೆ ಮುಂತಾದವರಿಗೆ ರಿಯಾಯಿತಿ ಇದೆ‌ (ಖಳಾ ಪೂರೈಸಬೇಕಾಗಿಲ್ಲ). ಋತು (ಹೈಲ್) ಮತ್ತು ಹೆರಿಗೆ (ನಿಫಾಸ್) ಸ್ರಾವವಿರುವ ಮಹಿಳೆಯರಿಗೂ ವಿನಾಯಿತಿ ಇದೆ. ನಂತರ ವೃತವನ್ನು (ಸಂದಾಯ) ಖಳಾ ಪೂರೈಸಬೇಕಾಗುತ್ತದೆ. ಗರ್ಭಿಣಿ ಅಥವಾ ಮಗುವಿಗೆ ಹಾಲುಣಿಸುವ ಸ್ತ್ರೀ'ಗೆ ಮಗುವಿಗೆ ತೊಂದರೆಯಾಗುವ ಭಯವಿದ್ದರೆ ಕೂಡ ವಿನಾಯಿತಿ ಇದೆ. ಆದರೆ ಇಲ್ಲಿ ಖಳಾ ಪೂರೈಸುವುದರ ಜೊತೆಗೆ ಪ್ರತಿ ದಿನಕ್ಕೊಂದರಂತೆ ಒಂದೊಂದು ಬೊಗಸೆ/ ಒಂದು ಮುದ್ದ್ (650 ಗ್ರಾಂ) ಧಾನ್ಯವನ್ನು ದಾನ ಮಾಡಬೇಕು.

*ನಿಯ್ಯತ್*
ಎಲ್ಲಾ ಪುಣ್ಯ ಕರ್ಮಗಳು ನಿಯ್ಯತ್'ನಿಂದಾಗಿದೆ. ಅದೇ ರೀತಿ ಇಲ್ಲಿ ಕೂಡ ಉಪವಾಸಕ್ಕೆ ನಿಯ್ಯತ್ ಕಡ್ಡಾಯ ಆಗಿರುತ್ತದೆ. "ರಂಝಾನ್ ತಿಂಗಳ ನಾಳಿನ ಫರ್ಲ್ ವೃತವನ್ನು ನಾನು ಅಲ್ಲಾಹನಿಗಾಗಿ ಕೈಗೊಳ್ಳುತ್ತೇನೆ". (Ramalan Maasathinde Naalathe Farlaya Nonbine Njan Allahu Tha'alak vendi nolkunnu). ಎಂದು ಬಾಯಿಯಲ್ಲಿ ಹೇಳಿದರೆ ಮಾತ್ರ ಸಾಲದು ಮನಸ್ಸಿನಿಂದ ನಿಯ್ಯತ್ ಮಾಡಬೇಕು. ಎಲ್ಲಾ ಪುಣ್ಯ ಕರ್ಮಗಳಿಗೂ ನಿಯ್ಯತ್ ಮಾಡುವಾಗ ಮನಸ್ಸಿನಲ್ಲಿ ನೆನೆಸಿದರೆ ಮಾತ್ರ ಸಿಂಧುವಾಗುವುದು. ಅಂದರೆ, ನಿಯ್ಯತ್ ಹೃದಯದಿಂದಾಗಬೇಕು‌. ಇಮಾಂ ಶಾಫಿ ರ.ಅ ಪ್ರಕಾರ,‌ ನಿಯ್ಯತ್ ಸುಬಹಿ ಬಾಂಗಿಗೆ ಮುಂಚಿತವಾಗಿರಬೇಕು

*ವೃತ ಭಂಗವಾಗುವ (ಕೆಡುವ) ಕಾರ್ಯಗಳು*
🔹ಸಂಭೋಗ (ರಮಳಾನ್ ಉಪವಾಸಿಗನೊಬ್ಬನು ಪತ್ನಿಯೊಂದಿಗೆ ಲೈಂಗಿಕ ಸಂಬಂದವಿರಿಸಿದ್ದಲ್ಲಿ ವೃತ ಭಂಗವಾಗುವುದರ ಜೊತೆಗೆ ಕಠಿನ ಪ್ರಾಯಶ್ಚಿತ ಕೊಡ/ಮಾಡ ಬೇಕಾಗುತ್ತದೆ. ಕೇವಲ ಒಂದು ವೃತ ಕೆಡಿಸಿದ್ದಕ್ಕೆ ಸತತ ಎರಡು ತಿಂಗಳ ಕಾಲ ವೃತ ಕೈಗೊಳ್ಳಬೇಕಾಗುತ್ತದೆ. ಅದು ಅಸಾಧ್ಯವಾದಲ್ಲಿ 60 ಬಡವರಿಗೆ ತಲಾ 650 ಗ್ರಾಮಿನಂತೆ ಅನ್ನಧಾನ ಮಾಡಬೇಕು.
🔹ಉದ್ದೇಶಪೂರ್ವಕ ಸ್ಖಲನ (ಪತ್ನಿಯೊಂದಿಗಿರುವ ಚುಂಬನ, ಸ್ಪರ್ಶ ಮೂಲಕ ಸ್ಖಲನವಾದರೂ).
🔹ಮನಪೂರ್ವಕ ವಾಂತಿ ಮಾಡುವುದರಿಂದ,
🔹ಋತುಸ್ರಾವ, ಹೆರಿಗೆ,
🔹ಇಸ್ಲಾಮಿನಿಂದ ಹೊರ ಹೋಗುವುದು (ಮುರ್ತದ್ದ್),
🔹ಹುಚ್ಚು ಹಿಡಿಯುವುದು,
🔹ಹಗಲಿಡೀ ಪ್ರಜ್ಞೆ ತಪ್ಪುವುದು,
🔹ಬಾಯಿ, ಕಿವಿ, ಮೂಗು, ಮೂತ್ರ/ಗುಧ ದ್ವಾರಗಳ ಮೂಲಕ ಯಾವುದಾರೊಂದು (ಕಣ್ಣಿಗೆ ಕಾಣಿಸುವಂತಹ) ವಸ್ತು ಮನಃಪೂರ್ವಕ ಶರೀರದ ಒಳಗೆ ಸೇರುವುದು.
🔹ಕಫ ನುಂಗುವುದು.
🔹ಹೊಗೆ ಬತ್ತಿ ಸೇದುವುದು.
🔹ರಕ್ತ ಸಂಚಾರವುಳ್ಳ ನರಕ್ಕೆ, ಹೊಟ್ಟೆಗೆ, ಮೆದುಳಿಗೆ, ಮೂತ್ರ ಕೋಶಗಳಿಗೆ ಇಂಜೆಕ್ಷನ್, ಗ್ಲುಕೋಸ್ ಕೊಡುವುದರಿಂದ ವೃತ ಭಂಗವಾಗುತ್ತದೆ.
¶ *ಸೂಚನೆ:*
ಮೇಲೆ ಹೇಳಿದ ಯಾವುದೇ ಕಾರಣಕ್ಕಾದರೂ ಉಪವಾಸ ಭಂಗವಾದರೂ, ಆ ದಿನ ಉಪವಾಸಿಗನಂತೆ ಇರಬೇಕಾಗಿದೆ. ಯಾಕಂದರೆ ರಂಝಾನ್ ತಿಂಗಳು ಇತರ ತಿಂಗಳಿನಂತೆ ಅಲ್ಲದ ಕಾರಣ ಆ ತಿಂಗಳಿಗೆ ಮಹತ್ವ ಕೊಡಬೇಕಾಗಿದೆ. ವೃತ ಇಲ್ಲದಿದ್ದರೂ ವೃತ ಇರುವವರಂತೆ ಇರಬೇಕಾಗಿದೆ. ಅದಕ್ಕೆ ಅರಬಿಯಲ್ಲಿ "امساك" (ಇಮ್ಸಾಕ್) ಎನ್ನುತ್ತಾರೆ.

*ಉಪವಾಸಿಗರು ಇನ್ನೂ ಅರಿತಿರಬೇಕಾದ ಕೆಲವೊಂದು ಕಾರ್ಯಗಳು*
🔹ಹಲ್ಲುಜ್ಜುವಾಗ ಗಂಟಲಿಗೆ ಬ್ರೆಷ್ ಹಾಕಬಾರದು. ವಾಂತಿ ಆಗುವ ಸಾಧ್ಯತೆ ಇರುತ್ತದೆ.
🔹ತಲೆಗೆ ಎಣ್ಣೆ ಹಾಕುವುದು, ಕಣ್ಣಿಗೆ ಔಷಧಿ ಹಾಕುವುದರಿಂದ ವ್ರತಕ್ಕೆ ತೊಂದರೆ ಇಲ್ಲ.
🔹ಉಗುಳು ನುಂಗುವುದರಿಂದ ವೃತಕ್ಕೆ ತೊಂದರೆ ಇಲ್ಲ. ಆದರೆ ಉಗುರು ಕಚ್ಚುವವರು, ಕಫ ಮಿಶ್ರಿತ, ರಕ್ತ ಮಿಶ್ರಿತ ಉಗುಳು ನುಂಗುವುದರಿಂದ ವೃತಕ್ಕೆ ಭಂಗವಾಗುತ್ತದೆ.
🔹ಗಂಟಲಿನಿಂದ ಮೇಲೆ ಬರದೇ, ಅಥವಾ ಗಂಟಲಿನ ಕೆಳಗಡೆ ಇರುವ ಕಫವನ್ನು ನುಂಗಿದರೆ ವೃತಕ್ಕೆ ಭಂಗವಿಲ್ಲ.
🔹ರುಚಿ ನೋಡುವುದು: ನಾಲಗೆ ಮೇಲೆ ಒಂದು ವಸ್ತು ಇಟ್ಟರೆ ಅದರ 'ರುಚಿ' (ರುಚಿ ಎಂಬುದು ಕಣ್ಣಿಗೆ ಕಾಣಿಸದ ವಸ್ತು) ಒಳ ಹೋಗುತ್ತದೆ. ಇದರಿಂದ ವೃತಕ್ಕೆ ತೊಂದರೆ ಇಲ್ಲ. ಕರಾಹತ್ ಆಗಿದೆ ಆದರೆ ನಾಲಗೆ ಮೇಲೆ ಇಟ್ಟ ವಸ್ತುವನ್ನು (ದ್ರವ ವಸ್ತುವಾದರೂ) ಅದನ್ನು ತಟ್ಟನೇ ಉಗುಳಿ ಬಾಯಿ ಮುಕ್ಕಳಿಸುವುದು ಒಳ್ಳೆಯದು. ಈ ವಿಷಯದಲ್ಲಿ ಜಾಗೃತೆ ವಹಿಸುವುದು ಒಳ್ಳೆಯದು.
🔹ಮಾಂಸ ಕಂಡಗಳಿಗೆ ಚುಚ್ಚುಮದ್ದು ಕೊಡುವುದರಿಂದ ವೃತಕ್ಕೆ ತೊಂದರೆ ಇಲ್ಲ.
🔹ಸ್ಖಲನವಾಗುವ ಉದ್ದೇಶವಿಲ್ಲದೇ ವುಳೂಅ್ ಭಂಗವಾಗದ ರೀತಿಯಲ್ಲಿ ಮರೆಯ ಮೇಲೆ ಪತ್ನಿ/ಪತಿಯನ್ನು ಸ್ಪರ್ಶಿಸಿದಾಗ ಸ್ಖಲನವಾದರೂ, ಚಿಂತನೆಯ ಮೂಲಕ ಸ್ಖಲನವಾದರೂ ಹಾಗೂ ಸ್ವಪ್ನ ಸ್ಖಲನವಾದರೂ ವೃತ ಕೆಡುವುದಿಲ್ಲ. ಆದರೆ ಸೂಕ್ಷ್ಮತೆಗೆ ಬೇಕಾಗಿ ಇವುಗಳಿಂದ ದೂರವಿರುವುದೇ ಉತ್ತಮ.‌
🔹ಸ್ನಾನ ಮಾಡುವಾಗ ಬಾಯಿ, ಮೂಗು, ಕಿವಿ, ಗುದ‌ದ್ವಾರ ಮತ್ತು ಸ್ತ್ರೀಯರು ಯೋನಿ ಶುಚಿಗೊಳಿಸುವಾಗ (ಕೈ ಬೆರಳು) ನೀರು ಒಳ ಹೋಗದಂತೆ ಜಾಗೃತೆ ವಹಿಸಬೇಕು. ರಂಝಾನ್ ತಿಂಗಳಲ್ಲಿ ರಾತ್ರಿ ಅಥವಾ ಸಹರಿಗೆ ಮುಂಚೆ ಸ್ನಾನ ಮಾಡುವುದನ್ನು ರೂಢಿ ಮಾಡಿದರೆ ಸೂಕ್ಷ್ಮತೆಗೆ ಬೇಕಾಗಿ ಹಿತಕರವಾಗಲಿದೆ.

*ಅತ್ತಾಳ (ಸಹರಿ)*
ಸುಬುಹಿ ಬಾಂಗಿಗೆ (ಫಜ್ರ್) ಮುಂಚೆ ಏನಾದರೂ ಆಹಾರ ತಿನ್ನುವುದು, ಕುಡಿಯುವುದು ಪ್ರತ್ಯೇಕ ಸುನ್ನತಾಗಿದೆ. ಬಾಂಗ್ ಆಗುವಾಗ ಬಾಯಿಯಲ್ಲಿ ಏನಾದರೂ ಇದ್ದರೆ ತಕ್ಷಣ ಅದನ್ನು ಉಗುಳಬೇಕು. ಅಝಾನ್'ಗೆ ಸ್ವಲ್ಪ ಹೊತ್ತು ಮುಂಚೆಯೇ ತಿಂದು ಮುಗಿಸುವುದು ಒಳ್ಳೆಯದು. ಸಲಫಿಗಳ ಪ್ರಕಾರ ಬಾಂಗ್ ಆಗುವಾಗ ಊಟದ ತಟ್ಟೆ ಕೈಯ್ಯಲ್ಲಿದ್ದರೆ ಅದು ಮುಗಿಯುವವರೆಗೂ ತಿನ್ನಬಹುದಾಗಿದೆ ಎಂದು. ಅವರ ಫಿತ್ನಾಕ್ಕೆ ಬಲಿಯಾಗಿ ನೀವು ಯಾರದರೂ ಅದನ್ನು ಮಾಡಿದರೆ ನಿಮ್ಮ ಆ ದಿನದ ವೃತ ನಷ್ಟವಾಗುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. *ಅತ್ತಾಳ ಉಣ್ಣುವಾಗ ಅತ್ತಾಳದ ನಿಯ್ಯತ್ ಮಾಡುವುದು ಕೂಡ ಸುನ್ನತ್ತಾಗಿದೆ*. ಬಹುತೇಕರು ನಿಯ್ಯತ್ ಮಾಡುವುದನ್ನು ಮರೆತುಬಿಡುತ್ತಾರೆ.

*ಇಫ್ತಾರ್*
ಅಝಾನ್ ಸಮಯವಾದಾಗ ಉಪವಾಸವನ್ನು ತೊರೆಯುವುದು. ಇದು ಒಂದು ಶ್ರೇಷ್ಠದಾಯಕ ಕ್ರಮವಾದ್ದರಿಂದ, ಈ ಕಾರ್ಯಕ್ಕೆ ಇತರರನ್ನು ಆಹ್ವಾನಿಸಿ ಔತನವೇರ್ಡಿಸುವುದರ ಪ್ರತಿಫಲ ಪ್ರತ್ಯೇಕ ಹೇಳಬೇಕಾಗಿಲ್ಲ ತಾನೇ!. ಅದು ನೀರು ಮತ್ತು ಖರ್ಜೂರದ ಅರ್ಧ ಭಾಗವಾದರೂ ಸರಿ. ವೃತಸ್ಥರಿಗೆ ಸಿಗುವ ಅದೇ ಪ್ರತಿಫಲ ಸಿಗುತ್ತದೆ. ಅದೇ ರೀತಿ ಬಡವರಿಗೆ ರಂಝಾನ್ ತಿಂಗಳಿನಲ್ಲಿ ಆವಶ್ಯಕವಾದ ವಸ್ತುಗಳನ್ನು ನೀಡುವುದು ಕೂಡ ಬಹಳ ಪುಣ್ಯದಾಯಕ ಕಾರ್ಯವಾಗಿದೆ.
🔹ಸೂರ್ಯಾಸ್ತಮಾನ ಖಚಿತಗೊಂಡ ಕೂಡಲೇ ವೃತ ತೊರೆಯುವುದು ಸುನ್ನತ್ ಆಗಿದೆ🔹
🔘ರಂಝಾನ್ ತಿಂಗಳಲ್ಲಿ ಹೇಳಬೇಕಾದ ದ್ಸಿಕ್ರ್'ಗಳನ್ನು ಅದೇ ರೀತಿ ಇನ್ನೂ ಕೆಲವೊಂದು ವಿಚಾರಗಳನ್ನು *ಭಾಗ-2* ರಲ್ಲಿ ಬರೆಯುತ್ತೇನೆ. ಇನ್ ಷಾ ಅಲ್ಲಾಹ್.
*ಈ ಸಂದೇಶವನ್ನು ನಿಮ್ಮ ಗೆಳೆಯರಿಗೂ, ನಿಮ್ಮ ಕಟುಂಬದವರಿಗೂ ತಲುಪಿಸಿ, Share ಮಾಡಿ. ನಿಮ್ಮ ಕಾರಣದಿಂದ ಅವರಿಗೆ ಏನಾದರೂ ಅರಿವು ಸಿಕ್ಕಿದರೆ ಅದರ ಪುಣ್ಯ ನನಗೂ-ನಿಮಗೂ ಸಿಗಲಿದೆ ಎಂಬದುದರಲ್ಲಿ ಸಂಶಯವಿಲ್ಲ*. ಬರುವ ದಿನಗಳಲ್ಲಿ ಸತ್ಕರ್ಮಗಳನ್ನು ಮಾಡಲು, ಯಾವುದೇ ತಡೆಗಳಿಲ್ಲದೇ ಪೂರ್ಣ ಆಫಿಯ್ಯತ್ತಿನೊಂದಿಗೆ ಉಪವಾಸವನ್ನು ಹಿಡಿಯಲು ಅಲ್ಲಾಹು ನಮಗೆ ತೌಫೀಕ್ ನೀಡಲಿ. ಅಮೀನ್.
🔘ನಿಮ್ಮ ದುಆ'ಗಳಲ್ಲಿ ನನ್ನನ್ನೂ, ನನ್ನ ಕುಟುಂಬದವರನ್ನೂ ಸೇರಿಸಿ‌.  ಅಲ್ಲಾಹು ನಮ್ಮೆಲ್ಲರ ಸತ್ಕರ್ಮಗಳನ್ನು ಸ್ವೀಕರಿಸಲಿ. *ಆಮೀನ್ (Ameen)*

✍ ಅನ್ಸಾರ್ ಸೈದು*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...