ಸುಮಾರು ಆರು ನೂರು ವರ್ಷಗಳ ಹಿಂದೆ ಉಳ್ಳಾಲ ಅಳೇಕಲಕ್ಕೆ ಬಂದ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ ಸಿ ರವರು ಪುಟ್ಟ ಬಾಲಕನಾಗಿದ್ದರು ಮತ್ತು ಅವರು ತಾಯಿಯೊಂದಿಗೆ ಬಂದು ಅಳೇಕಲವನ್ನು ವಾಸ್ತವ್ಯದ ಊರನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ ಸಿ ದೊಡ್ಡವರಾಗುತ್ತಿದ್ದಂತೆ ಅಳೇಕಲದಲ್ಲಿ ಇದ್ದ ಪುಟ್ಟ ಮಸೀದಿಯಲ್ಲಿ ಅಲ್ಲಾಹನ ಆರಾಧನೆ, ಧ್ಯಾನದಲ್ಲಿ ಮಗ್ನರಾಗುತ್ತಿದ್ದರು. ಅಲ್ಲಾಹನ ಇಷ್ಟದಾಸರ ಹಲವು ಸ್ವಭಾವಗಳು ಅವರು ಮೈಗೂಡಿಸಿ ಕೊಂಡಿದ್ದರು. ಮಕ್ಕಳೊಂದಿಗೆ ಅತೀವ ಪ್ರೀತಿ ತೋರುತ್ತಿದ್ದ ಅವರು ಮ್ರದು ಸ್ವಭಾವದೊಂದಿಗೆ ಸರಳವಾಗಿ ಬಾಳಿ ಬದುಕಿದ್ದರು. ಅಳೇಕಲ ಸುತ್ತ ಮುತ್ತ ಅವರ ಬಗ್ಗೆ ಆಗಲೇ ಮನೆ ಮಾತಾಗಿತ್ತು. ಹೀಗಿರಲು ಅಳೇಕಲದಲ್ಲಿದ್ದ (ಭಂಡಸಾಲೆ) ಪಾಂಡಿಗಸಾಲೆಗೆ ಕೊಡಗಿನಿಂದ ವ್ಯಾಪಾರಿಯೊಬ್ಬರು ಅಚ್ಚಿ ಚಕ್ಕರೆ ಎತ್ತಿನ ಗಾಡಿಯ ಮೂಲಕ ತಂದಾಗ ಅಳೇಕಲ ಮಸ್ಜಿದ್ ಸಮೀಪ ವಲಿಯುಲ್ಲಾಹಿ ಅಚ್ಚಿಸಾಹಿಬ್ ಖ.ಸಿ ಅದೇನೆಂದು ಕೇಳಿದರು. ಸತ್ಯ ಹೇಳಿದರೆ ಇವರಿಗೆ ಅಚ್ಚಿಚಕ್ಕರೆ ಕೊಡಬೇಕಾಗಬಹುದು ಎಂದು ಎತ್ತಿನಗಾಡಿಯಲ್ಲಿ ಮಣ್ಣಾಗಿದೆ ಇರುವುದು ಎಂದು ಸುಳ್ಳು ಹೇಳಿದನು. ಓ ಮಣ್ಣಾ! ಹಾಗಾದರೆ ಹಾಗೆಯೇ ಆಗಲಿ ಎಂದು ಮಹಾನರು ಪ್ರತಿಕ್ರಯಿಸಿದರು. ಆತನು ಸೀದಾ ಅದನ್ನು (ಭಂಡಸಾಲೆ) ಪಾಂಡಿಗಸಾಲೆಗೆ ಹೋಗಿ ಅದನ್ನು ಅದರ ವ್ಯಾಪಾರಿಗಳಿಗೆ ನೀಡಲು ತೆರೆದಾಗ ಅಚ್ಚಿಚಕ್ಕರೆ ಪೂರ್ತಿ ಮಣ್ಣಾಗಿತ್ತು. ವ್ಯಾಪಾರಿಗಳು ಇದೇನಿದು. ಅಚ್ಚಿಚಕ್ಕರೆ ಎಲ್ಲಿ? ಎತ್ತಿನಗಾಡಿ ತುಂಬಾ ಅಚ್ಚಿಚಕ್ಕರೇನೆ ತಂದಿದ್ದೇನೆ. ಆದರೆ ಇದು ಮಣ್ಣಾಗಲು ಕಾರಣವೇನು? ದಾರಿ ಮಧ್ಯೆ ಪ್ರಾಥಮಿಕ ಕಾರ್ಯಗಳನ್ನು ನಿರ್ವಹಿಸಲು ಮತ್ತು ವಿಶ್ರಾಂತಿಗಾಗಿ ನಿಲ್ಲಿಸಿದ್ದೇನೆ. ಆದರೆ ಆ ಸಮಯದಲ್ಲಿ ಬೇರೆ ಯಾರೂ ಅಚ್ಚಿಚಕ್ಕರೆ ಕದ್ದು ಮಣ್ಣು ತುಂಬಿಸಲು ಸಾಧ್ಯವಿಲ್ಲ. ನನ್ನ ನಿಗಾ ಪೂರ್ತಿ ಇದರಲ್ಲೇ ಇತ್ತು ಎಂದು ತಂದವನು ಅಳುತ್ತಾ ಹೇಳಿದನು. ಖರೀದಿಸುವ ಸಲುವಾಗಿ ಬಂದ ವ್ಯಾಪಾರಿಗಳಿಗೆ ಆಶ್ಚರ್ಯವಾಯಿತು. ಮತ್ತೆ ಇದು ಯಾಕೆ ಹೀಗಾಯಿತು? ಅಚ್ಚಿ ಚಕ್ಕರೆ ತಂದ ಮಾಲಕನಿಗೆ ವಿಷಯ ಮನದಟ್ಟಾಯಿತು. ಅಳೇಕಲದ ಮಸೀದಿ ಸಮೀಪ ಒಬ್ಬರು ಇದೇನೆಂದು ಕೇಳಿದಾಗ ಸತ್ಯ ಹೇಳಿದರೆ ಅವರಿಗೆ ಚಕ್ಕರೆ ಕೊಡಬೇಕಾಗಬಹುದು ಎಂದು ಎತ್ತಿನಗಾಡಿಯಲ್ಲಿ ಮಣ್ಣಾಗಿದೆ ಇರುವುದು ಎಂದು ಸುಳ್ಳು ಹೇಳಿದ್ದೆ. ಆಗ ವ್ಯಾಪಾರಿಗಳಿಗೂ ವಿಷಯ ಮನವರಿಕೆಯಾಯಿತು. ಅವರು ಹೇಳಿದರು. ನೀನು ಯಾರೊಂದಿಗೆ ಸುಳ್ಳು ಹೇಳಿದ್ದೀಯೋ. ಅವರು ಸಾಮಾನ್ಯ ಮನುಷ್ಯರಲ್ಲ. ಅಲ್ಲಾಹನ ಇಷ್ಟದಾಸರಲ್ಲೋರ್ವರಾಗಿದ್ದಾರೆ. ಹಲವು ಸಮಯದಿಂದ ಅಳೇಕಲದ ಮಸೀದಿಯಲ್ಲಿ ಅಲ್ಲಾಹನ ಆರಾಧನೆಯಲ್ಲಿ ಮಗ್ನರಾದವರಾಗಿದ್ದಾರೆ. ತಕ್ಷಣ ಹೋಗಿ ಅವರೊಂದಿಗೆ ಕ್ಷಮೆಯನ್ನು ಕೇಳು. ಆತ ತಕ್ಷಣ ಆ ಮಹಾನರ ಬಳಿ ಬಂದು ನಡೆದ ಸಂಗತಿಯನ್ನು ತಿಳಿಸಿ ನನಗೆ ಕ್ಷಮೆಯನ್ನು ನೀಡಿರಿ. ನಾನು ಮಾಡಿದ್ದು ತಪ್ಪಾಯಿತು ಎಂದು ಅಳುತ್ತಾ ಬೇಡಿಕೊಂಡನು. ಮಹಾನರು ಆಯಿತು ಪರವಾಗಿಲ್ಲ. ನಾನು ಕ್ಷಮಿಸಿದ್ದೇನೆ.ಈಗ ಹೋಗಿ ತೆರೆದು ನೋಡು ಎಂದರು. ಆತ ಮತ್ತೆ (ಭಂಡಸಾಲೆ) ಪಾಂಡಿಗಸಾಲೆಗೆ ಬಂದು ತೆರೆದು ನೋಡಿದಾಗ ಅದ್ಭುತ! ಅದು ಶುದ್ಧ ಅಚ್ಚಿಚಕ್ಕರೆಯಾಗಿ ಪರಿವರ್ತನೆಯಾಗಿತ್ತು. ಹಳೆ ಕಾಲದಲ್ಲಿ ಅಳೇಕಲ ಸುತ್ತಮುತ್ತ ಕಬ್ಬನ್ನು ಅಧಿಕವಾಗಿ ಬೆಳೆಯುತ್ತಿದ್ದರು. ಕಬ್ಬಿನಿಂದ ಅಚ್ಚಿಚಕ್ಕರೆಯನ್ನು (ಭಂಡಸಾಲೆ) ಪಾಂಡಿಗಸಾಲೆಯಲ್ಲಿ ತಯಾರಿಸಿ ವಿವಿಧ ಊರುಗಳಿಗೆ ರಫ್ತು ಮಾಡುತ್ತಿದ್ದರು ಎಂದೂ ಹೇಳಲಾಗುತ್ತಿದೆ. ವಲಿಯುಲ್ಲಾಹಿ ಅಚ್ಚಿ ಸಾಹಿಬ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರು ತನ್ನ ಜೋಲಿಗೆಯಲ್ಲಿ ಯಾವಾಗಲೂ ಅಚ್ಚಿಚಕ್ಕರೆ ತುಂಬಿಸಿಡುತ್ತಿದ್ದರು ಮತ್ತು ಮಕ್ಕಳಿಗೆ ಅದನ್ನು ಪ್ರೀತಿಯಿಂದ ಹಂಚುತ್ತಿದ್ದರು ಈ ಕಾರಣದಿಂದ ಮತ್ತು ಮೇಲಿನ ಘಟನೆಯಿಂದ ಮಹಾನರಿಗೆ ಅಚ್ಚಿಸಾಹಿಬ್ ಎಂಬ ಹೆಸರು ಬಂತೆಂಬುದು ಚಾಲ್ತಿಯಲ್ಲಿರುವ ಬಾಯಿ ಮಾತು.
( ಪಾಂಡಿಗಶಾಲೆ ಎಂದರೆ ಹಳೆಕಾಲದಲ್ಲಿ ವ್ಯಾಪಾರ ಸರಕುಗಳನ್ನು ತುಂಬಿಸಿಡುವ, ತಯಾರಿಸುವ ಮತ್ತು ವ್ಯಾಪಾರ ವಿನಿಮಯ ಮಾಡುವ ಜಾಗವಾಗಿತ್ತು. ಅದುವೇ ಮುಂದಕ್ಕೆ ಪಾಂಡೇಲ್ ಪಕ್ಕ ಆಯಿತು ಎಂದೂ ಹೇಳಲಾಗುತ್ತಿದೆ. ) ನಂತರದ ಕಾಲದಲ್ಲಿ ಪಾಂಡಿಗ ಶಾಲೆ ಸಯ್ಯಿದರುಗಳು ವಾಸಿಸುವ ಮನೆಯಾಗಿ ಮಾರ್ಪಟ್ಟಿತು. ಈಗಲೂ ಆ ಕಟ್ಟಡ ಪಾಂಡೇಲ್ ಪಕ್ಕದಲ್ಲಿದ್ದು ಸಯ್ಯಿದ್ ಕುಟುಂಬ ವಾಸಿಸುತ್ತಾ ಬರುತ್ತಿದೆ.
Comments