ನಿಶ್ಚಯವಾಗಿಯೂ ನನ್ನನ್ನು ಬೋಧಕನಾಗಿ ನಿಯೋಗಿಸಲಾಗಿದೆ ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸಂದೇಶದ ಮಹತ್ವವನ್ನು ಅರಿತು ತನ್ನ ಬದುಕಿನಲ್ಲೂ ಬೋಧನೆಯನ್ನು ಸಂಪೂರ್ಣವಾಗಿ ಮೈಗೂಡಿಸಿದ ಗುರುವಾಗಿದ್ದಾರೆ ಎಸ್ ಎಂ ತಂಙಲ್.
ಪವಿತ್ರ ಅಹ್ಲು ಬೈತ್ ವಂಶದಲ್ಲಿ 1941 ನೇ ಇಸವಿಯಲ್ಲಿ ಅಳೇಕಲ ಪಾಂಡ್ಯಾಲ್ ಪಕ್ಕದ "ಸಯ್ಯದ್ ಆಟಕ್ಕೋಯ ತಂಙಲ್ ರವರ ಸುಪುತ್ರರಾಗಿ ಚರಿತ್ರೆ ಪ್ರಸಿದ್ದ 'ಅಜಿಲ ಮೊಗರು' ವಿನಲ್ಲಿ ಎಸ್ ಎಂ ತಂಙಲ್ ಜನಿಸಿದರು. ತನ್ನ ಶೈಶವ ಕಾಲವನ್ನು ಅಜಿಲಮೊಗರುವಿನಲ್ಲಿ ಕಳೆದರು. ನಂತರ ಅಳೇಕಲಕ್ಕೆ ಆಗಮಿಸಿದ ಎಸ್ ಎಂ ತಂಙಲ್ ಬಾಲ್ಯದಿಂದಲೇ ಅಹ್ಲು ಬೈತ್‌ನ ಶ್ರೇಷ್ಠತೆಗೆ ತಕ್ಕ ನಿಷ್ಕಳಂಕ ಧರ್ಮನಿಷ್ಠೆಯೊಂದಿಗೆ ಬಾಳಿ ಬದುಕಿದರು. ಉಳ್ಳಾಲವನ್ನು ಬೆಳಗಿಸಿದ ಆಧ್ಯಾತ್ಮಿಕ ಮಹಾ ಗುರು ತಾಜುಲ್ ಉಲಮಾ ಉಳ್ಳಾಲ ತಂಙಲ್ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ಮತ್ತು ಪ್ರಮುಖ ಸೂಫೀವರ್ಯರಾದ ಸಜಿಪ ಉಸ್ತಾದರ ಶಿಷ್ಯತ್ವದಲ್ಲಿ ಜ್ಞಾನಾರ್ಜನೆ ಮಾಡಿದರು. ಬಳಿಕ ನಾಡಿನ ಪ್ರಾಥಮಿಕ ಇಸ್ಲಾಮಿಕ್ ಶಿಕ್ಷಣ ಕೇಂದ್ರವಾದ ಮದ್ರಸದಲ್ಲಿ ಕ್ರಾಂತಿಕಾರಿ ಸೇವೆಯೊಂದಿಗೆ ತನ್ನ ಬದುಕು ಪೂರ್ತಿ ತೊಡಗಿಸಿಕೊಂಡರು. ಕಲ್ಲಾಪು, ಮಂಚಿಲ, ಮಾರ್ಗತಲೆ, ಚೊಂಬುಗುಡ್ಡೆ, ಹಳೇಕೋಟೆ ಹಾಗು ಆಸುಪಾಸಿನ ಊರುಗಳಿಗೆ ಕೇಂದ್ರವಾಗಿ ಕಾರ್ಯಾಚರಿಸುತ್ತಿದ್ದ ಅಳೇಕಲ ನಜಾತುಸ್ಸಿಬಿಯಾನ್ ಮದ್ರಸದಲ್ಲಿ ಮುಅಲ್ಲಿಮಾಗಿ, ಸದರ್ ಮುಅಲ್ಲಿಮಾಗಿ ಸೇವೆಯನ್ನು ನೀಡಿದರು. ಅಳೇಕಲ ಸುತ್ತಮುತ್ತ ಊರುಗಳ ವಿದ್ಯಾರ್ಥಿಗಳಿಗೆ ಆಶ್ರಯವಾಗಿದ್ದ ಅಳೇಕಲದ ಮದ್ರಸದಲ್ಲಿ ನಿಷ್ಠೆ, ದಕ್ಷತೆ, ಪ್ರಾಮಾಣಿಕತೆಯಿಂದ ಧಾರ್ಮಿಕ ಜ್ಞಾನ ಪಸರಿಸಿದರು. ಸೇವೆಯ ಪ್ರಾರಂಭ ಕಾಲದಲ್ಲಿ ಅಳೇಕಲ ಮಸ್ಜಿದುಲ್ ಜಾಮಿಉಲ್ ಅಮೀನ್ ಮಸೀದಿಯಲ್ಲಿ ಇಮಾಮರಾಗಿಯೂ ಸೇವೆ ಸಲ್ಲಿಸಿದ್ದರು. 1960 ರ ಕಾಲಘಟ್ಟದ ಸೀಮಿತ ವೇತನ ಹಾಗು ಸವಲತ್ತುಗಳ ಬಗ್ಗೆ ಚಿಂತಿಸದೆ ಮದ್ರಸಾ ರಂಗದಲ್ಲಿ ಘನವೆತ್ತ ಸೇವೆಯನ್ನು ಮಾಡಿದರು. ಎಸ್ ಎಂ ತಂಙಲ್ ರವರ ಸೇವಾವಧಿಯಲ್ಲಿ ಮರ್ಹೂಂ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್, ಟಿ ಎಚ್ ಇಬ್ರಾಹಿಂ ಮುಸ್ಲಿಯಾರ್ ಸಹಿತ ಪ್ರಗಲ್ಭರಾದ ಅನೇಕ ಉಲಮಾಗಳು ಮುಅಲ್ಲಿಮರುಗಳಾಗಿ ಸೇವೆಯನ್ನು ನೀಡಿದ್ದರು. ಮದ್ರಸ ರಂಗದಲ್ಲಿ ಎಸ್ ಎಂ ತಂಙಲ್ ಐದು ದಶಕಗಳನ್ನು ಪೂರೈಸಿ ಕ್ರಾಂತಿಕಾರಿ ಸೇವೆಯನ್ನು ನೀಡಿದ ನಿಮಿತ್ತ ಅಳೇಕಲ ಮೊಹಲ್ಲಾ ಆಡಳಿತ ಸಮಿತಿ ಹಮ್ಮಿಕೊಂಡ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೇಕಲ್ ಉಸ್ತಾದ್ ಈ ವಿಷಯ ತಿಳಿಸಿದ್ದರು. ಅಳೇಕಲ ಮದ್ರಸದಲ್ಲಿ ಸೇವೆ ನೀಡಿದುದರ ಕಾರಣ ನಾನು ಮುಂದಕ್ಕೆ ಅಪಾರ ಶಿಷ್ಯ ವ್ರಂದವನ್ನು ಪಡೆದೆ ಮತ್ತು ಉನ್ನತ ವಿಜಯ ಸಾಧ್ಯವಾಯಿತು ಎಂದು ಬೇಕಲ್ ಉಸ್ತಾದರು ಅಂದು ತಿಳಿಸಿದ್ದರು.
ಎಸ್ ಎಂ ತಂಙಲರಿಂದ ಪ್ರಾಥಮಿಕ ಶಿಕ್ಷಣ ಪಡೆದ ಅನೇಕರು ಇಂದು ಮದನಿ, ಸಅದಿ, ಫಾಳಿಲಿ ಸಹಿತ ವಿವಿಧ ಬಿರುದುಗಳೊಂದಿಗೆ ಉನ್ನತ ಧಾರ್ಮಿಕ ವಿದ್ವಾಂಸರುಗಳಾಗಿ ಸೇವೆ ನೀಡುತ್ತಿದ್ದಾರೆ. ಅನೇಕರು ಸಾಮುದಾಯಿಕ, ಸಾಮಾಜಿಕ ರಂಗದಲ್ಲಿ ಉನ್ನತ ಸ್ಥಾನದಲ್ಲಿ ಸೇವಾ ರಂಗದಲ್ಲಿದ್ದಾರೆ. ಇದು ಎಸ್ ಎಂ ತಂಙಲ್ ರವರ ದುಃಆ ಆಶೀರ್ವಾದದ ಫಲವಾಗಿದೆ.
ಎಸ್ ಎಂ ತಂಙಲ್ ರವರು ಸಯ್ಯಿದ್ ಎಂಬ ಗೌರವದ ಜೊತೆಗೆ ಸರಳ ಸಜ್ಜನಿಕೆ, ಆಧ್ಯಾತ್ಮಿಕತೆ, ನಿಸ್ವಾರ್ಥತೆ ಎಂಬ ಗುಣಗಳಿಂದ ಊರವರ ಪ್ರೀತಿಯ ಉಸ್ತಾದರಾಗಿದ್ದರು. ಬೆಲಿಯೋ ಉಸ್ತಾದ್ ಎಂದು ಊರವರು ಗೌರವಪೂರ್ವಕ ಕರೆಯುತ್ತಿದ್ದರು. ಏನೇ ಕಾರ್ಯಕ್ರಮಗಳಿದ್ದರೂ ತನ್ನ ನಿತ್ಯದ ಆರಾಧನಾ ಕರ್ಮಗಳಿಗೆ ತೊಡಕಾಗುತ್ತಿರಲಿಲ್ಲ. ತನ್ನ ಆಯುಸ್ಸಿನ ಕೊನೆಯ ಹಂತದಲ್ಲಿ ಆರೋಗ್ಯದ ಸಮಸ್ಯೆಯ ಮಧ್ಯೆಯೂ ನಮಾಝ್, ಕುರಾನ್ ಪಾರಾಯಣ ಹಾಗು ಇತರ ಇಬಾದತ್, ಔರಾದ್ ಗಳನ್ನು ಕೈ ಬಿಡುತ್ತಿರಲಿಲ್ಲ. ಅನಾಥರು, ಯತೀಮುಗಳಿಗೆ ಸಹಾಯ ಮಾಡುವ ವಿಷಯದಲ್ಲಿ ಉತ್ಸುಕರಾಗಿದ್ದರು. ಬಿಡುವು ಸಮಯಗಳಲ್ಲಿ ಕುಂಪಲ ನೂರಾನಿಯ್ಯಃ ಯತೀಂ ಖಾನದಲ್ಲಿ ಸೇವೆ ಮಾಡುತ್ತಿದ್ದರು. ಜನರ ಕಷ್ಟ ದುಃಖಗಳಿಗೆ ಸ್ಪಂದಿಸುವ ಮನಸ್ಸು ಅವರದಾಗಿತ್ತು. ವಿವಿಧ ಸಂಘ ಸಂಸ್ಥೆಗಳು ತಂಙಲ್ ರವರನ್ನು ಸನ್ಮಾನಿಸಿ ಗೌರವಿಸಿದೆ. ಸೇವಾ ರಂಗದಲ್ಲಿನ ನಾಲ್ಕು ದಶಕಗಳನ್ನು ಪೂರೈಸಿದಾಗ ಪ್ರೀತಿಯ ಶಿಷ್ಯಂದಿರ ಸಂಘಟನೆಯಾದ ಅಲ್ ಅಮೀನ್ ಸ್ವಲಾತ್ ಸಮಿತಿ ಮಾರ್ಗತಲೆ ಸನ್ಮಾನಿಸಿ ಗೌರವಿಸಿದೆ.
ಅಭೂತಪೂರ್ವ ಸಾಧನೆಗಳೊಂದಿಗೆ ಐದು ದಶಕಗಳು ಪೂರ್ತಿಯಾದಾಗ ಅಲ್ ಮಸ್ಜಿದುಲ್ ಜಾಮಿಉಲ್ ಅಮೀನ್ ಅಳೇಕಲ ಆಡಳಿತ ಸಮಿತಿ ಮತ್ತು ಜಮಾಅತ್ ಬಾಂಧವರು ಸೇರಿ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಂಡು ಸನ್ಮಾನಿಸಿದೆ. ತಂಙಲ್ ರವರ ಸವಿ ನೆನಪಿಗಾಗಿ ಮಸೀದಿಯ ಮುಂಭಾಗದಲ್ಲಿ ಎಸ್ ಎಂ ತಂಙಲ್ ವೇದಿಕೆ ಎಂಬ ಹೆಸರಿನಲ್ಲಿ ಸಭಾ ವೇದಿಕೆಯನ್ನು ನಿರ್ಮಿಸಿದೆ.
ತಂಙಲ್ ರವರ ಕುಟುಂಬ : ಉಪ್ಪಳ ಕುನ್ನಿಲ್ ಮಖಾಂ ಅಸ್ಸಯ್ಯಿದ್ ಅಲವೀ ವಲಿಯ್ಯುಲ್ಲಾಹ್ ರವರ ಪೌತ್ರಿ ಸಯ್ಯಿದತ್ ಝುಹ್ರಾಬಿ ಎಸ್ ಎಂ ತಂಙಲ್ ರವರ ಪ್ರಿಯ ಪತ್ನಿಯಾಗಿದ್ದಾರೆ.
ಮಕ್ಕಳು : ಸಯ್ಯಿದ್ ಖುಬೈಬ್ ತಙ್ಙಳ್ ರವರ ತಾಯಿ ಖಮರುನ್ನಿಸ ಬೀವಿ, ಮೊಗ್ರಾಲ್ ಖಾಝಿ ಮುಹಮ್ಮದ್ ಮದನಿ ತಙ್ಙಳ್ ರವರ ಅಕ್ಕನ ಮಗ ಸಯ್ಯಿದ್ ಯಹ್ಯಾ ತಙ್ಙಳ್ ರವರ ಪತ್ನಿ ಮಾಶಿತಾ ಬೀವಿ, ಮುಟ್ಟಂ ಮಖ್ದೂಮಿಯ್ಯ ಶಿಕ್ಷಣ ಸಂಸ್ಥೆಯ ಸಾರಥಿ ಸಯ್ಯಿದ್ ಬಾದ್ ಶಾ ತಙ್ಙಳ್ರವರ ಧರ್ಮ ಪತ್ನಿ ಹಫೀಝಾ ಬೀವಿ ಸೇರಿದಂತೆ ಮೂರು ಹೆಣ್ಣು ಮಕ್ಕಳು ಹಾಗೂ ಊರಿನ ಧಾರ್ಮಿಕ ಸಾಮಾಜಿಕ ಚಟುವಟಿಕೆಗಳಿಗೆ ನಾಯಕತ್ವ ನೀಡುತ್ತಿರುವ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಎಜ್ಯುಕೇಶನ್ ಟ್ರಸ್ಟ್ ಕಾರ್ಯದರ್ಶಿ ಆಗಿರುವ ಸಯ್ಯಿದ್ ಜಲಾಲ್ ತಙ್ಙಳ್, (ಸಾದಾತ್ ಅಸೋಸಿಯೇಷನ್ ಅಧ್ಯಕ್ಷ ಸಯ್ಯಿದ್ ಜವಾದ್ ತಙ್ಙಳ್ ರವರ ತಂದೆ) ಸಯ್ಯಿದ್ ಝಿಯಾದ್ ತಙ್ಙಳ್ ಬದವಿ ಮತ್ತು ಸಯ್ಯಿದ್ ಬಾಸಿತ್ ತಙ್ಙಳ್ ಹಾಗೂ ಸಯ್ಯಿದ್ ಅಬ್ದುಲ್ ಜಬ್ಬಾರ್ ತಙ್ಙಳ್, ಸಯ್ಯಿದ್ ಬದ್ರುದ್ದೀನ್ ತಙ್ಙಳ್ ಸೇರಿದಂತೆ ಐವರು ಪುತ್ರರು
ಒಟ್ಟಿನಲ್ಲಿ ಅಳೇಕಲದ ಮಹಾನ್ ಸಾಧಕರಾಗಿ, ಊರಿನವರ ಪ್ರೀತಿಯ ಬೆಲಿಯೋ ಉಸ್ತಾದ್ ಆಗಿ, ಸಾವಿರಾರು ಶಿಷ್ಯಂದಿರ ಗುರುವಾಗಿ ಸರಳತೆಯಿಂದ ಬದುಕಿ ಬಾಳಿ 2014 ಸೆಪ್ಟೆಂಬರ್ 30, ಹಿಜರಿ 1436 ದ್ಸುಲ್ ಹಜ್ ಆರರಂದು ರಾತ್ರಿ ವಫಾತಾದರು. ತನ್ನ ಖಬರ್ ಇದೇ ಜಾಗದಲ್ಲಿಯಾಗಬೇಕೆಂದು ಜಾಗವನ್ನು ತೋರಿಸಿ ಮುಂದಿನ ಸಮಿತಿ ಸಭೆಯಲ್ಲಿ ಅದರ ಸಮ್ಮತಿಯನ್ನು ಪಡೆಯಬೇಕೆಂದು ಅಂದಿನ ಅಧ್ಯಕ್ಷರಾಗಿದ್ದ ಯು ಎ ಇಸ್ಮಾಯಿಲಾಕರವರೊಂದಿಗೆ ವಫಾತಾಗುವ ಮುಂಚೆನೇ ಹೇಳಿ ಸಮ್ಮತಿ ಪಡೆದಿದ್ದರು. ವಫಾತಾಗುವ ಮುನ್ಸೂಚನೆ ಅರಿತ ರೀತಿಯಲ್ಲಿ ಅವರ ಕಾರ್ಯ ಚಟುವಟಿಕೆಗಳು ಕೊನೆಯ ಕೆಲವು ದಿನಗಳಲ್ಲಿತ್ತು. ಹಲವರೊಂದಿಗೆ ನಾನು ವಿದಾಯ ಹೇಳುತ್ತಿದ್ದೇನೆ ಅಂತ ಹೇಳಿ ಈಮಾನ್ ಸಲಾಮತಿಗಾಗಿ ದುಆ ಮಾಡಬೇಕೆಂದು ತಿಳಿಸಿದ್ದರು. ತನ್ನ ಪತ್ನಿಯೊಂದಿಗೆ ವಸಿಯ್ಯತ್ ಉಪದೇಶಗಳನ್ನು ನೀಡಿ ಇಹಲೋಕ ತ್ಯಜಿಸಿದ್ದರು.
Comments