ಸಯ್ಯಿದ್ ಮದನಿ ತಂಙಲ್ ರವರ ವಫಾತಿನ ಬಳಿಕ ನಡೆದ ಅದ್ಭುತ ಒಂದು ಘಟನೆ. ಒಂದಭಿಪ್ರಾಯದಂತೆ ಅಳೇಕಲದ ಪೊಲ್ಕರೆಯ ಮದನಿ ತಂಙಲ್ ರವರ ಮನೆಯ ತೆಂಗಿನ ಮರಗಳಿಂದ ಕಾಯಿ ಸೀಳಲು ಬಂದ ವ್ಯಕ್ತಿ ಸೋಮಾರಿತನ, ಅಸಡ್ಡೆ ತೋರಿಸಿದಾಗ ಸನಿಹವಿದ್ದವರು ನೀನು ಏನು ಮಾಡ್ತಾ ಇರುವೆ. ಇದು ಸಯ್ಯಿದ್ ಮದನಿ ತಂಙಲ್ ರವರ ತೆಂಗಿನ ಮರಗಳು ಎಂದು ಹೇಳಿದರಂತೆ. ಅದಕ್ಕೆ ಆತ ಅದಕ್ಕೇನಂತೆ, ಅವರ ತೆಂಗಿನಕಾಯಿಗೆ ಕೊಂಬಿದೆಯೇ ಎಂದು ತಾತ್ಸಾರ ಮನೋಭಾವದಿಂದ ಮಾತನಾಡಿದನಂತೆ. ಬಳಿಕ ಮರ ಹತ್ತಿ ತೆಂಗಿನ ಕಾಯಿ ಸೀಳಲು ಅಣಿಯಾದಾಗ ಏನದ್ಭುತ, ತೆಂಗಿನ ಕಾಯಿ ಗೊನೆಯಲ್ಲಿ ಕೊಂಬು ಕಂಡು ಆತ ಆಶ್ಚರ್ಯ ಚಕಿತನಾದನು. ಮತ್ತೆ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದನು. ಮತ್ತೊಂದು ಅಭಿಪ್ರಾಯದ ಪ್ರಕಾರ ಸಯ್ಯಿದ್ ಮದನಿ ತಂಗಳರ ಅತಿಯಾಗಿ ಗೌರವಿಸುತ್ತಿದ್ದ ಓರ್ವರು ತನ್ನ ಜಾಗದಲ್ಲಿ ತೆಂಗಿನ ಕಾಯಿಯನ್ನು ನೆಡುವಾಗ ಇದು ಮುಂದಕ್ಕೆ ಫಸಲು ನೀಡಿದರೆ ಮೊದಲ ಫಸಲಿನ ತೆಂಗಿನಕಾಯಿ ಗೊನೆಯನ್ನು ಸಯ್ಯಿದ್ ಮದನಿ ತಂಙಲ್ ಖ.ಸಿ ರವರ ದರ್ಬಾರಿಗೆ ನೀಡುತ್ತೇನೆ ಎಂದು ಹರಕೆ (ನೇರ್ಚೆ) ಮಾಡಿ ನೆಟ್ಟರು. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಮದನಿ ತಂಙಲ್ ಹೆಸರಿನಲ್ಲಿ ಯಾಕೆ ಹರಕೆ ಮಾಡ್ತೀಯಾ, ಅವರಿಗೆ ಹರಕೆ ಮಾಡಿದರೆ ತೆಂಗಿನಕಾಯಿಗೆ ಕೊಂಬು ಬರುತ್ತದೆಯೇ ಎಂದು ವ್ಯಂಗ್ಯವಾಗಿ ಹೇಳಿದನಂತೆ. ತೆಂಗಿನ ಕಾಯಿ ಮೊಳಕೆಯೊಡೆಯಿತು. ಬೆಳೆಯಿತು. ಮರವಾಯಿತು. ಫಸಲು ನೀಡಿತು. ಮೊದಲ ಗೊನೆಯಲ್ಲಿ ಕೊಂಬಿರುವ ತೆಂಗಿನಕಾಯಿಗಳು ಪ್ರತ್ಯಕ್ಷವಾಯಿತು. ಅದನ್ನು ದರ್ಗಾಕ್ಕೆ ತಲುಪಿಸಲಾಯಿತು. ವ್ಯಂಗ್ಯವಾಗಿ ನುಡಿದವನಿಗೂ ಈ ವಿಷಯ ತಲುಪಿತು. ಆತ ಬಳಿಕ ಕ್ಷಮೆಯಾಚಿಸಿದನು. ಈಗಲೂ ಆ ತೆಂಗಿನಕಾಯಿಗಳು ದರ್ಗಾದಲ್ಲಿ ಕಾಣಬಹುದು.
ಸಯ್ಯಿದ್ ಮದನಿ ತಂಗಲ್ ರವರನ್ನು ತಾತ್ಸಾರ ಮನೋಭಾವದಿಂದ, ಗೇಲಿ ಮಾಡುವ ರೂಪದಲ್ಲಿ ಯಾರಾದರೂ ಪ್ರವರ್ತಿಸಿದರೆ ಅದರ ಪರಿಣಾಮ ಎದುರಿಸದೇ ಇರಲಾರ ಎಂದು ಈ ಘಟನೆಯಿಂದ ತಿಳಿಯಬಹುದು.
Comments