ಉಳ್ಳಾಲದಲ್ಲಿ ಧಾರ್ಮಿಕ ಅರಿವನ್ನು ಪಸರಿಸುವಲ್ಲಿ ಅನನ್ಯ ಕೊಡುಗೆ ನೀಡಿದ, ವಿಶೇಷವಾಗಿ ಅಳೇಕಲದಲ್ಲಿ 4 ದಶಕಗಳಿಂದ ಧಾರ್ಮಿಕ ರಂಗದ ನೇತ್ರತ್ವವನ್ನು ವಹಿಸಿ ಗಮನಾರ್ಹ ಸೇವೆ ನೀಡುತ್ತಿರುವ ಪಟ್ಟಾಂಬಿ ಉಸ್ತಾದರ ಬದುಕಿನ ಕಡೆ ಹ್ರಸ್ವ ನೋಟ ಬೀರೋಣ.
ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ರವರ ಪ್ರಮುಖ ಶಿಷ್ಯ, ಸರಳತೆ, ವಿನಯ, ಪ್ರೀತಿ, ಕರುಣೆ ಮೇಲೈಸಿದ ಅಪರೂಪದ ವಿದ್ವಾಂಸ ಪಟ್ಟಾಂಬಿ ಉಸ್ತಾದ್. ಅಬೂಝಿಯಾದ್ ಮುಹಮ್ಮದ್ ಮದನಿ ಪಟ್ಟಾಂಬಿ ಉಸ್ತಾದ್ ಎಂದು ಅವರ ಹೆಸರನ್ನು ಪೂರ್ತಿಯಾಗಿ ಹೇಳಲಾಗುತ್ತದೆ. ಉಸ್ತಾದರ ನೈಜ ನಾಮ ಮುಹಮ್ಮದ್ ಎಂದಾಗಿದೆ. ಪ್ರೀತಿಯಿಂದ ಮಗನ ಹೆಸರು ಸೇರಿಸಿ ಅಬೂ ಝಿಯಾದ್ ಎಂದು ತನ್ನ ಹೆಸರಿನ ಮುಂದೆ ಸೇರಿಸಿ ಬರೆಯುತ್ತಾರೆ. ಉಳ್ಳಾಲದಲ್ಲಿ ಪಟ್ಟಾಂಬಿ ಉಸ್ತಾದ್ ಎಂದೇ ಚಿರಪರಿಚಿತ. ಮದನಿ ಎಂಬುವುದು ನಮಗೆ ತಿಳಿದಿರುವಂತೆ ಉಳ್ಳಾಲ ಸಯ್ಯಿದ್ ಮದನಿ ಅರೆಬಿಕ್ ಕಾಲೇಜಿನಲ್ಲಿ ಕಲಿತು ಪಡೆದ ಬಿರುದಿನ ಹೆಸರಾಗಿದೆ. 1952 ಮಾರ್ಚ್ ನಾಲ್ಕರಂದು ಪಾಲೋಳಿ ಮಹ್ಮೂದ್ ಮತ್ತು ಕೋಲ್ಕಾಟ್ ಫಾತಿಮ ಎಂಬವರ ಮಗನಾಗಿ ಜನಿಸಿದರು. ತಂದೆ ತಾಯಿಗೆ ಉಸ್ತಾದ್ ಸೇರಿ ಇಬ್ಬರು ಗಂಡು ಮಕ್ಕಳು. ಉಸ್ತಾದರು ಹಿರಿಯವರು. ಉಸ್ತಾದರ ತಮ್ಮ ಐದು ವರ್ಷಗಳ ಮುಂಚೆ ಮರಣ ಹೊಂದಿರುವರು. ಮಲಪ್ಪುರಂ ಜಿಲ್ಲೆಯ ಪುಣಪ್ಪ ಶಾಲೆಯಲ್ಲಿ 8 ನೇ ತರಗತಿ ತನಕ ಲೌಕಿಕ ಶಿಕ್ಷಣ ಪಡೆದರು. ತನ್ನ ತಂದೆಯ ಸಹೋದರಿಯ ಊರಾದ ಅರಿಪ್ರ ಎಂಬಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಈಗ ನಾವು ಕಾಣುವ ಮದ್ರಸ ವ್ಯವಸ್ಥೆ ಅಂದು ಇರಲಿಲ್ಲ. ಅಂದು ಓತುಪಳ್ಳಿ ಎಂದು ಕರೆಯುತ್ತಿದ್ದರು. ಗುರುಗಳು ಹಲಗೆಯಲ್ಲಿ ಬರೆದು ಅದನ್ನು ಮಕ್ಕಳಿಗೆ ಕಲಿಸುತ್ತಿದ್ದರು. ಪಟ್ಟಾಂಬಿ ಉಸ್ತಾದರು ಕೂಡಾ ಇದೇ ಓತುಪಳ್ಳಿಯಲ್ಲಿ ಕಲಿತಿದ್ದರು. ಪಟ್ಟಾಂಬಿ ಉಸ್ತಾದರ ತಾಯಿ ಉಸ್ತಾದರ ಕಿರು ಪ್ರಾಯದಲ್ಲೇ ವಫಾತಾದ ಕಾರಣ ತಂದೆಯ ಸಹೋದರಿ ಉಸ್ತಾದರನ್ನು ಅಕ್ಕರೆಯಿಂದ ಬೆಳೆಸಿದ್ದರು. ಸಹೋದರಿಗೆ ಅವರ ದಾಂಪತ್ಯ ಜೀವನದಲ್ಲಿ ಮಕ್ಕಳಿರಲಿಲ್ಲ. ಹೀಗಾಗಿ ಉಸ್ತಾದರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನಂತರ ಧಾರ್ಮಿಕ ಶಿಕ್ಷಣಕ್ಕಾಗಿ ಮಾನು ಹಾಜಿ ಉಸ್ತಾದರ ಮಲಪ್ಪುರಂ ಜಿಲ್ಲೆಯ ಪುಝಕ್ಕಾಟ್ಟಿರಿ ದರ್ಸಿನಲ್ಲಿ ಮುತಅಲ್ಲಿಮಾಗಿ ಕಲಿಕೆ ಪ್ರಾರಂಭಿಸಿದರು. ನಂತರ ಕಾಚ್ಚಿರಿಕ್ಕಾಡಿನಲ್ಲಿ ಹಂಝ ಉಸ್ತಾದ್ ಹಾಗು ವೆಲ್ಲೂರಿನ ಪ್ರಸಿದ್ಧ ಮುದರ್ರಿಸರಾಗಿದ್ದ ಕುಟ್ಟಿ ಮುಸ್ಲಿಯಾರ್ ರವರ ಮಗ ಖಾಸಿಂ ಉಸ್ತಾದರಿಂದ ದರ್ಸ್ ಶಿಕ್ಷಣವನ್ನು ಪಡೆದರು. ನಂತರ 1968 ರಲ್ಲಿ ಉಳ್ಳಾಲದಲ್ಲಿ ಅಂದು ತಾಜುಲ್ ಉಲಮಾ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ನೇತ್ರತ್ವ ನೀಡುತ್ತಿದ್ದ ಕಂಝುಲ್ ಉಲೂಂ ದರ್ಸಿನಲ್ಲಿ ಸೇರಿ ಕೊಂಡರು. ಅಂದು ಅದು ದೊಡ್ಡ ದೊಡ್ಡ ಮುತಅಲ್ಲಿಮರು ಕಲಿಯುತ್ತಿದ್ದ ಪ್ರಸಿದ್ಧ ದರ್ಸಾಗಿತ್ತು. ಕರ್ನಾಟಕ ಕೇರಳದ ಧಾರಾಳ ಮುತಅಲ್ಲಿಮರು ಇಲ್ಲಿ ಕಲಿಯುತ್ತಿದ್ದರು. ಪಟ್ಟಾಂಬಿ ಉಸ್ತಾದರು ಪ್ರಾಯದಲ್ಲಿ ಕಿರಿಯವರಾದುದರಿಂದ ತಾಜುಲ್ ಉಲಮಾ ಖದ್ದಸಲ್ಲಾಹು ಸಿರ್ರಹುಲ್ ಅಝೀಝ್ ರವರು ಹೇಳಿದರು. ನೀನು ಯಾಕೆ ಇಲ್ಲಿ ಬಂದೆ, ಇಲ್ಲಿ ಬೇಡ, ಮುಂದಿನ ವಾರ ಒಬ್ಬರು ದರ್ಸ್ ಪ್ರಾರಂಭಿಸಲಿದ್ದಾರೆ ಅವರ ದರ್ಸಿನಲ್ಲಿ ಸೇರಿಕೋ ಎಂದರು. ತೀವ್ರ ಬೇಸರದೊಂದಿಗೆ ಪಟ್ಟಾಂಬಿ ಉಸ್ತಾದರು ಸಯ್ಯಿದ್ ಮದನಿ ತಂಙಲ್ ರವರ ಹೆಸರಿನಲ್ಲಿ ಮದನಿ ತಂಙಲ್ ರವರ ಸನ್ನಿಧಿಯಲ್ಲಿ ಯಾಸೀನ್ ನೇರ್ಚೆ ಮಾಡಿ ಓದಿ ದುಆ ಮಾಡಿದರು. ಮದನಿ ತಂಙಲೇ, ನಾನು ಉಳ್ಳಾಲ ದರ್ಸನ್ನು ಸಂಕಲ್ಪ ಮಾಡಿ ಬಂದಿದ್ದೇನೆ. ನಾನು ಬೇರೆಲ್ಲಿಗೂ ಹೋಗುವುದಿಲ್ಲ. ಇಲ್ಲಿಯೇ ನಿಲ್ಲುವಂತೆ ಮಾಡಬೇಕು ಎಂದು ದುಆ ಮಾಡಿದರು. ತುಸು ಹೊತ್ತಿನ ಬಳಿಕ ತಾಜುಲ್ ಉಲಮಾ ಖ.ಸಿ ಮತ್ತೆ ಕರೆದು ಹೇಳಿದರು. ಈಗ ಎಲ್ಲಿಗೂ ಹೋಗುವುದು ಬೇಡ. ಇಲ್ಲಿಯೇ ನಿಲ್ಲು ಅಂದರು. ಖುಷಿಯೊಂದಿಗೆ ಉಳ್ಳಾಲ ದರ್ಸಿನಲ್ಲಿ ಕಲಿಕೆ ಮುಂದುವರಿಯಿತು. 1971 ರಲ್ಲಿ ಕಂಝುಲ್ ಉಲೂಂ ದರ್ಸ್ ಸಯ್ಯಿದ್ ಮದನಿ ಅರೆಬಿಕ್ ಕಾಲೇಜಾಗಿ ಪರಿವರ್ತನೆಯಾಯಿತು. 1974 ರಲ್ಲಿ ಮದನಿ ಬಿರುದಿನೊಂದಿಗೆ ಪಟ್ಟಾಂಬಿ ಉಸ್ತಾದರ ಸಹಿತ ಮೊದಲ ಹನ್ನೆರಡು ಮಂದಿಯ ಬ್ಯಾಚ್ ಸನದುದಾರಿಗಳಾದರು. ಉಳ್ಳಾಲದಲ್ಲಿ ಕಲಿಯುತ್ತಿದ್ದ ಸಮಯ ಅಳೇಕಲದಲ್ಲಿ ರಾತ್ರಿ ಮದ್ರಸ ಸೇವೆ ಮಾಡುತ್ತಿದ್ದರು. ಮದನಿ ಬಿರುದು ಪಡೆದ ಬಳಿಕ ಒಂದುದಿನ ತಾಜುಲ್ ಉಲಮಾ ಉಳ್ಳಾಲ ತಂಙಲ್ ರವರು ಪಟ್ಟಾಂಬಿ ಉಸ್ತಾದರನ್ನು ಕರೆದು ಹೇಳಿದರು. ನಾಳೆ ರೆಡಿಯಾಗಬೇಕು. ಕಾಸರಗೋಡು ಬಾವಿಕ್ಕರ ಎಂಬಲ್ಲಿ ಖತೀಬರಾಗಿ ಸೇವೆಗೆ ಹೋಗಬೇಕು. ಅಲ್ಲಿಯವರೊಂದಿಗೆ ನಾನು ಮಾತನಾಡಿದ್ದೇನೆ. ಅಳೇಕಲ ಮದ್ರಸಕ್ಕೆ ಬೇರೆ ವ್ಯವಸ್ಥೆ ನಾನು ಮಾಡುತ್ತೇನೆ ಅಂದರು. ಹೀಗೆ ಪಟ್ಟಾಂಬಿ ಉಸ್ತಾದರ ಸೇವೆ ಪ್ರಾರಂಭವಾಯಿತು. ಐದು ವರೆ ವರ್ಷಗಳ ಕಾಲ ಬಾವಿಕ್ಕರ ಎಂಬಲ್ಲಿ ಸೇವೆ ಮಾಡಿದರು. ಮತ್ತೆ ಎರಡು ವರ್ಷ ಕಲ್ಲಾಪಿನಲ್ಲಿ ಸೇವೆ ಮಾಡಿದರು. ಬಳಿಕ ಪ್ರಾರಂಭದಲ್ಲಿ ಸೇವೆ ಮಾಡಿದ್ದ ಬಾವಿಕ್ಕರ ಗೆ ಸಮೀಪದ ಊರಾದ ಮಲ್ಲಂ ಎಂಬಲ್ಲಿ ಎರಡು ವರ್ಷ ಸೇವೆ ಮಾಡಿದರು. ನಂತರ ಎರಡು ವರ್ಷಗಳ ಕಾಲ ಉಳ್ಳಾಲದಲ್ಲಿಯೇ ಉಳಿದರು. ತನ್ನ ಮಾವ ಹಾಜಿ ಪುತುಬಾವ ಮುಕ್ರಿಗ ದರ್ಗಾಕ್ಕೆ ಬರುವ ಸಂದರ್ಶಕರಿಗೆ ದುಆಗೆ ನೇತ್ರತ್ವ ನೀಡುತ್ತಿದ್ದರು. ಅವರು ಮಧ್ಯಾಹ್ನದ ಸಮಯ ಬರುತ್ತಿದ್ದರು. ಅವರು ಬರುವ ತನಕ ಅಂದರೆ ಬೆಳಿಗ್ಗೆ ಯಿಂದ ಮಧ್ಯಾಹ್ನದ ತನಕ ಅವರ ಬದಲಿಗೆ ಆ ಸಮಯದಲ್ಲಿ ಪಟ್ಟಾಂಬಿ ಉಸ್ತಾದರು ದುಆಗೆ ನೇತ್ರತ್ವ ನೀಡುತ್ತಿದ್ದರು. ಮಧ್ಯಾಹ್ನದ ನಂತರ ಉಳ್ಳಾಲ ದರ್ಗಾಕ್ಕೆ ಬರುವ ದಾರಿಯಲ್ಲಿ ಪೇಟೆ ಸಮೀಪ ತನ್ನ ಪತ್ನಿಯ ಸಹೋದರಿಯ ಮನೆಯ ಒಂದು ಭಾಗದಲ್ಲಿ ಸರಕು ಅಂಗಡಿಯಲ್ಲಿ ಎರಡು ವರೆ ವರ್ಷಗಳ ಕಾಲ ಕೆಲಸ ಮಾಡಿದರು. ಹೀಗಿರಲು ಒಂದು ದಿನ ಮತ್ತೆ ತಾಜುಲ್ ಉಲಮಾ ಉಳ್ಳಾಲ ತಂಙಲ್ ಖ.ಸಿ ಹೇಳಿದರು. ಮರು ಮಾತಾಡಬೇಡ, ಅಳೇಕಲದಲ್ಲಿ ಜುಮುಅಃ ನಾನು ಆರಂಭಿಸುತ್ತಿದ್ದೇನೆ. ಇಂದೇ ಅಳೇಕಲಕ್ಕೆ ಹೋಗಬೇಕು. ಇಂದಿನಿಂದ ನೀನೇ ಮುಂದುವರಿಯಬೇಕು. ಪಟ್ಟಾಂಬಿ ಉಸ್ತಾದರು ಇತ್ತ ವ್ಯಾಪಾರ, ಅತ್ತ ತಾಜುಲ್ ಉಲಮಾ ಖ.ಸಿ ಅಳೇಕಲಕ್ಕೆ ಹೋಗಲು ಹೇಳಿದ್ದು. ಏನು ಮಾಡುವುದೆಂದು ಆಲೋಚನೆಯಲ್ಲಿರುವಾಗ ವ್ಯಾಪಾರದ ವಿಷಯ ಬಿಟ್ಟುಬಿಡು. ಅದೆಲ್ಲಾ ನಾನು ಸರಿ ಮಾಡುತ್ತೇನೆಂದು ತಾಜುಲ್ ಉಲಮಾ ಖ.ಸಿ ರವರು ಹೇಳಿದರು. ಹೀಗೆ ಹಿಜ್ರಾ 1406 ರಜಬ್ ತಿಂಗಳಲ್ಲಿ ಅಳೇಕಲದಲ್ಲಿ ಸೇವೆಗೆ ಸೇರಿಕೊಂಡರು. ಈಗ ಹಿಜ್ರಾ 1446. ಹಿಜ್ರಾ ಕ್ಯಾಲೆಂಡರ್ ಪ್ರಕಾರ ಉಸ್ತಾದರು ಅಳೇಕಲಕ್ಕೆ ಬಂದು 40 ವರ್ಷ ತುಂಬಿತು. ಇಸವಿ ಪ್ರಕಾರ 1986 ಮಾರ್ಚ್ ತಿಂಗಳಲ್ಲಾಗಿದೆ ಸೇವೆಗೆ ಸೇರಿದ್ದು. ಆವಾಗ ಈಗ ಕಾಣುವಂತಹ ಮಸೀದಿ ಮದ್ರಸ ಇರಲಿಲ್ಲ. ಹಳೇ ಕಾಲದ ಮರದಿಂದ ನಿರ್ಮಿಸಲ್ಪಟ್ಟ ಮಸೀದಿಯಾಗಿತ್ತು. ಮದನಿ ಶಾಲೆಯಲ್ಲಿ ಮದ್ರಸ ನಡೆಯುತ್ತಿತ್ತು. ಇಲ್ಲಿಂದ ಪಟ್ಟಾಂಬಿ ಉಸ್ತಾದರ ದೈತ್ಯ ಯಾತ್ರೆ ಆರಂಭ. ಸುದೀರ್ಘ 40 ವರ್ಷಗಳ ಪ್ರಬೋಧನೆ, ನಿರಾಶೆಪಡಿಸದ ಉಸ್ತಾದರ ಮಾತುಗಳು, ಪ್ರಾರ್ಥನೆಗಳು. ಸಭೆ ಸಮಾರಂಭ, ಇತರೆ ಎಲ್ಲದಕ್ಕೂ ಉಸ್ತಾದರೇ ನೇತ್ರತ್ವ. ತನ್ನ ಅರಿವಿನ ಭಂಡಾರದಿಂದ ಅದೆಷ್ಟೋ ವಿದ್ಯಾರ್ಥಿಗಳಿಗೆ ಧಾರ್ಮಿಕ ಜ್ಞಾನ ಪಸರಿಸಿದ ವಿದ್ವತ್ ಪ್ರಭೆ. ಸುನ್ನತ್ ಜಮಾಅತಿಗೆ ಶಕ್ತಿ ತುಂಬಿದ ವಿದ್ವಾಂಸ. ಮಕ್ಕಳೊಂದಿಗೆ ಅಪಾರ ಪ್ರೀತಿ. ಸರಳ, ಸೌಮ್ಯ, ವಿನಯದಿಂದ ಕೂಡಿದ ಜೀವನ.
ವಿವಾಹ : ಪಟ್ಟಾಂಬಿ ಉಸ್ತಾದರು ಉಳ್ಳಾಲದಲ್ಲಿ ವಿದ್ಯಾರ್ಥಿಯಾಗಿ ಕಲಿಯುತ್ತಿದ್ದ ಸಂದರ್ಭ. ಮೇಲೆ ತಿಳಿಸಿದಂತೆ ತನ್ನ ಮಾವ ಹಾಜಿ ಪುತುಬಾವ ಮುಕ್ರಿಗ ಸಯ್ಯಿದ್ ಮದನಿ ದರ್ಗಾದಲ್ಲಿ ಝಿಯಾರತ್ ಬಯಸಿ ಬರುವವರಿಗೆ ದುಆ ನೆರವೇರಿಸಿ ಕೊಡುತ್ತಿದ್ದರು. ಅವರಿಗೆ ಪಟ್ಟಾಂಬಿ ಉಸ್ತಾದರೆಂದರೆ ಎಲ್ಲಿಲ್ಲದ ಪ್ರೀತಿ. ಗೌರವ. ಪಟ್ಟಾಂಬಿ ಉಸ್ತಾದರನ್ನು ಇತರ ವಿದ್ಯಾರ್ಥಿಗಳಿಗಿಂತ ವ್ಯತ್ಯಸ್ಥವಾಗಿ ಕಾಣುತ್ತಿದ್ದರು. ಅವರ ಕುಟುಂಬದ ಓರ್ವ ಸದಸ್ಯನಂತೆ ಪಟ್ಟಾಂಬಿ ಉಸ್ತಾದರೊಂದಿಗೆ ವರ್ತಿಸುತ್ತಿದ್ದರು. ಉಸ್ತಾದರು ಸಹ ಅವರನ್ನು ಅಪಾರ ಗೌರವ ಮನೋಭಾವದಿಂದ ಕಾಣುತ್ತಿದ್ದರು. ಮಾತ್ರವಲ್ಲ ಹಾಜಿ ಪುತುಬಾವ ಮುಕ್ರಿಗ ರವರ ಹಳೆಯ ಮನೆಯಲ್ಲಿ ಅವರ ಮಕ್ಕಳಿಗೆ ಮತ್ತು ಇತರ ಮಕ್ಕಳಿಗೆ ಪಟ್ಟಾಂಬಿ ಉಸ್ತಾದರು ಟ್ಯೂಷನ್ ಕೂಡಾ ತೆಗೆಯುತ್ತಿದ್ದರು. ಹಾಜಿ ಪುತುಬಾವ ಮುಕ್ರಿಗರವರ ಕುಟುಂಬಕ್ಕೂ ಪಟ್ಟಾಂಬಿ ಉಸ್ತಾದರ ನಡವಳಿಕೆ, ಸ್ವಭಾವ ಹಿಡಿಸಿತು. ಈ ಎಲ್ಲಾ ಕಾರಣಗಳಿಂದ ಉಸ್ತಾದರ ವಿವಾಹವು ಹಾಜಿ ಪುತುಬಾವ ಮುಕ್ರಿಗ ರವರ ಪುತ್ರಿಯೊಂದಿಗೆ ನಡೆಯಿತು. ಮೂರು ಗಂಡು ಮಕ್ಕಳು, ಓರ್ವ ಪುತ್ರಿ ಸೇರಿ ಉಸ್ತಾದರಿಗೆ ನಾಲ್ಕು ಮಕ್ಕಳು.
ಸುನ್ನತ್ ಜಮಾಅತಿಗೆ ಶಕ್ತಿ ತುಂಬಿದ ವಿದ್ವಾಂಸರಾಗಿದ್ದರು ಪಟ್ಟಾಂಬಿ ಉಸ್ತಾದ್, ಯುವ ಪ್ರಾಯದಲ್ಲಿ ಉಳ್ಳಾಲದಲ್ಲಿ ಪ್ರಪ್ರಥಮವಾಗಿ ಸುನ್ನೀ ಸಂಘಟನೆಯನ್ನು ಸ್ಥಾಪಿಸಿ ಕಟ್ಟಿ ಬೆಳೆಸಿದವರು. ಉಸ್ತಾದರ ನೇತ್ರತ್ವದಲ್ಲಿ ಹೊರ ತಂದ ರಬೀವುಲ್ ಅವ್ವಲ್ ಪುರವಣಿಯನ್ನು ಉಳ್ಳಾಲ ಹಝ್ರತ್ ಮೈದಾನದಲ್ಲಿ ನಡೆದ ಐತಿಹಾಸಿಕ ಸುನ್ನೀ ಸಮ್ಮೇಳನದಲ್ಲಿ ತಾಜುಲ್ ಉಲಮಾ ಖ.ಸಿ ಪ್ರಕಾಶನಗೈದಿದ್ದರು. ಸಯ್ಯಿದ್ ಮದನಿ ದರ್ಗಾ ಆಶ್ರಯದಲ್ಲಿ ಮಾಸಂಪ್ರತಿ ನಡೆಯುವ ದ್ಸಿಕ್ರ್ ಮಜ್ಲಿಸಿನ ಪ್ರಾರಂಭದಲ್ಲಿ ಪ್ರಾಸ್ತಾವಿಕ ಮಾತು ಇತ್ತೀಚಿನವರೆಗೆ ಉಸ್ತಾದರೇ ಮಾಡುತ್ತಿದ್ದರು.
ಯಾವುದೇ ಜೀವಿಗೂ ನೋಯಿಸದ ವ್ಯಕ್ತಿತ್ವ ಉಸ್ತಾದರದ್ದಾಗಿತ್ತು. ಸಂಜೆ ಹೊತ್ತು ಉಸ್ತಾದರು ಅಳೇಕಲದ ಕೊಳದಲ್ಲಿರುವ ಮೀನುಗಳಿಗೆ ಆಹಾರ ನೀಡುವುದನ್ನು ನಿಂತು ನೋಡುವುದೇ ಮನಸ್ಸಿಗೆ ಆನಂದ. ಪ್ರತೀ ದಿನ ತಪ್ಪದೇ ಉಸ್ತಾದರು ಮೀನುಗಳಿಗೆ ಆಹಾರ ನೀಡುವರು. ಸಂಜೆ ಹೊತ್ತು ಮೀನುಗಳು ಉಸ್ತಾದರ ಆಹಾರಕ್ಕಾಗಿ ಕಾಯುತ್ತಿರುವಂತೆ ನೋಡುಗರಿಗೆ ಭಾಸವಾಗುತ್ತದೆ.
ಒಟ್ಟಿನಲ್ಲಿ ಉಸ್ತಾದರು ಮಾದರೀ ವಿದ್ವಾಂಸ, ಊರವರ ಅಚ್ಚುಮೆಚ್ಚಿನ, ಮಕ್ಕಳ ಪ್ರೀತಿಯ ಉಸ್ತಾದ್, ಉಸ್ತಾದರಿಗೆ ಪ್ರಾಯ 72 ವರ್ಷ ತುಂಬಿದೆ. ಸಾಮಾನ್ಯವಾಗಿ ವಯಸ್ಸು ಕಾಲದಲ್ಲಿ ಕಾಡುವ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಇವೆ. ಅಲ್ಲಾಹನು ಉಸ್ತಾದರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ನೀಡಲಿ. ಇನ್ನೂ ದೀರ್ಘ ಸಮಯ ಅಳೇಕಲದ ನೇತ್ರತ್ವ ವಹಿಸಲು ತೌಫೀಖ್ ನೀಡಲಿ. ಉಸ್ತಾದರನ್ನು ಅನುಸರಿಸಿ, ಅವರ ಮಾದರಿ ಸ್ವೀಕರಿಸಿ ಜೀವಿಸಲು ಅಲ್ಲಾಹನು ನಮಗೆ ತೌಫೀಖ್ ನೀಡಲಿ. ಆಮೀನ್.
Comments