Skip to main content

ಒಮಾನ್ ಚರಿತ್ರೆ ಭೂಮಿ ಸಲಾಲ

ಒಮಾನ್, ಚರಿತ್ರೆ ಭೂಮಿ

*✍ಮಾಚಾರ್ ಸಅದಿ*

ಚರಿತ್ರೆಗಳಿಂದ ತುಂಬಿ ನಿಂತ ಒಮಾನ್ ಯಾರನ್ನೂ ಆಶ್ಚರ್ಯ ಚಕಿತರಾಗಿಸುತ್ತದೆ. ವರ್ಣಿಸಿದಷ್ಟು ಮುಗಿಯದ ಅನೇಕಾರು ಐತಿಹಾಸಿಕ ಸ್ಥಳಗಳೂ, ಸಾತ್ವಿಕರ ಝಿಯಾರತ್ ಕೇಂದ್ರಗಳೂ ಒಮಾನ್ ಭೂಮಿಯಲ್ಲಿವೆ. ಪರ್ವತಗಳಿಂದ ಆವೃತವಾದ ನಾಡದು. ಎಲ್ಲಿ ನೋಡಿದರೂ ಪರ್ವತಗಳ ದೀರ್ಘ ಸಾಲುಗಳೇ ದೃಶ್ಯವಾಗುತ್ತದೆ. ನಾಲ್ಕು ಗವರ್ನರೇಟ್ಗಳು ಮಾತ್ರವಿದ್ದ ಒಮಾನ್ 2011 ಅಕ್ಟೋಬರ್ನಲ್ಲಿ ಹನ್ನೊಂದು ಗವರ್ನರೇಟ್ಗಳಾಗಿ ವಿಭಜಣೆಯಾಯಿತು. *ಮಸ್ಕತ್, ಒಮಾನಿನ ರಾಜಧಾನಿ.* 3500 ಚ.ಕಿ.ಮೀಟರ್ ವಿಸ್ತೀರ್ಣವಿರುವ ಮಸ್ಕತ್ನಲ್ಲಿ ಸುಮಾರು 1,382035 ಜನ ಸಂಖ್ಯೆಯಿದೆ.

*ಮಾಝಿನಿಬ್ನು ಗಳೂಬಾ(ರ)* ಎಂಬ ಸ್ವಹಾಬಿ ಪ್ರಮುಖರ ಕಾರಣದಿಂದ ಒಮಾನಿನಾದ್ಯಂತ ಇಸ್ಲಾಮಿನ ಬೆಳಕು ಹರಡಿತ್ತು. ಅವರ ಮೂಲಕ ಪ್ರವಾದಿಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಾರ್ಥನೆಯ ಸಮೃದ್ಧಿಯು ಒಮಾನ್ ದೇಶಕ್ಕೆ ಮತ್ತು ಅಲ್ಲಿನ ನಿವಾಸಿಗಳಿಗೆ ಲಭಿಸಿತ್ತು. ನಾನು ಒಮಾನಿಗೆ ತಲುಪಿದ ದಿನ ಶುಕ್ರವಾರವಾಗಿತ್ತು. ಅಂದು *ಬರ್ಕಾದಲ್ಲಿರುವ* ಮಸ್ಜಿದ್ ಒಂದರಲ್ಲಿ ಜುಮುಅಕ್ಕೆ ಸೇರಿದ್ದೆ. ಜುಮುಅ ಖುತುಬಾದಲ್ಲಿ ಒಮಾನಿನ ಖತೀಬರು ತನ್ನ ರಾಷ್ಟ್ರದ ಮಹತ್ವವನ್ನು ವಿವರಿಸಿದ್ದರು. ಅಲ್ಲದೆ ಒಮಾನಿನ ಬಗ್ಗೆ ಪ್ರವಾದಿಯವರು ಹೇಳಿದ ಹದೀಸೊಂದನ್ನು ವಿವರಿಸಿದ್ದರು. ಜುಮುಅದ ಬಳಿಕ ಅವರೊಂದಿಗೆ ಈ ಹದೀಸಿನ ಬಗ್ಗೆ ಅನ್ವೇಶಿಸಿದ್ದೆ. ಅವರು ಹೇಳಿದ ಹದೀಸ್ ಈ ರೀತಿಯಿತ್ತು. *ಲವ್ ಅನ್ನ ಅಹ್ಲ ಒಮಾನ್ ಅತಯ್ತ ಮಾಸಬ್ಬೂಕ ವಲಾ ಳರಬೂಕ* ನೀನು ಒಮಾನಿಗರ ಬಳಿ ಹೋದರೆ ಅವರು ನಿನ್ನನ್ನು ನಿಂದಿಸಲಾರರು, ನಿನಗೆ ಏಟು ಕೊಡಲಾರರು. ನಂತರ ಗ್ರಂಥಗಳಲ್ಲಿ ಹುಡುಕಾಡಿದಾಗ ಪ್ರಸ್ತುತ ಹದೀಸ್ ಲಭಿಸಿತ್ತು.

 ಒಮಾನ್ ರಾಷ್ಟ್ರದ ಸಮೃದ್ಧಿಯನ್ನು ಈ ಹದೀಸಿನಲ್ಲಿ ಪ್ರವಾದಿಯವರು ಎತ್ತಿ ಹೇಳಿದ್ದರು. ಒಮಾನ್ ದೇಶದುದ್ದಕ್ಕೂ ನೋಡಲೇ ಬೇಕಾದ ಹಲವು ಉತ್ತಮ ದೃಶ್ಯಗಳಿವೆ.ಸಂದರ್ಶಿಸಬೇಕಾದ ಹಲವಾರು ಪುಣ್ಯ ಸ್ಥಳಗಳಿವೆ. ಆ ಪೈಕಿ ನಾನು ಸಂದರ್ಶಿಸಿದ ಕೆಲವನ್ನು ವಿವರಿಸುವ ಸಣ್ಣ ಪ್ರಯತ್ನವಿದು.

*ಸಲಾಲ :* ಒಮಾನಿಗೆ ಕೀರ್ತಿ ತಂದ ಅತ್ಯಂತ ಮನಮೋಹಕ ಪ್ರದೇಶ. ಅರಬಿಯಲ್ಲಿ ಹೇಳುವ *'ಳಿಫಾರ್' (ದೋಫಾರ್)* ಗವರ್ನರೇಟಿನ ರಾಜಧಾನಿ ಸಲಾಲ. 99300 ಚ.ಕಿ.ಮೀಟರ್ ವಿಸ್ತೀರ್ಣವಿದೆ. 413437 ರಷ್ಟು ಜನ ಸಂಖ್ಯೆಯಿದೆ. ನಮ್ಮೂರು ಬಿಟ್ಟರೆ ಗಲ್ಫ್ ರಾಷ್ಟ್ರಗಳಲ್ಲಿ ಹಚ್ಚ ಹಸುರು ಕಾಣಬೇಕಾದರೆ ಸಲಾಲಕ್ಕೆ ಹೋಗಬೇಕು. ನಾಲ್ದೆಸೆಗಳಿಂದಲೂ ಹಸಿರಿನ ರಮಣೀಯ ದೃಶ್ಯ. ಒಮಾನಿನುದ್ದಕ್ಕೂ ಅಲ್ಲಿನ ಆಡಳಿತ ವರ್ಗವು ಕೃತಕ ಹಸಿರನ್ನು ನಿರ್ಮಿಸಿ ಊರನ್ನು ಸುಂದರಗೊಳಿಸಿದೆಯಾದರೂ ಸಲಾಲಕ್ಕೆ ಸುತ್ತಲೂ ಪ್ರಕೃತಿದತ್ತವಾದ ಹಸಿರು ನೋಡುಗರ ಕಣ್ಮನ ತಣಿಸುತ್ತದೆ. ಸುಗಂಧ ಹೊಗೆ ಹೊರಸೂಸುವ ಲೋಬಾನದ *(ಕುಂದಿರಿಕ್ಕ)* ಊರು ಒಮಾನ್. ಅದರಲ್ಲೂ ಸಲಾಲ ಒಳಗೊಳ್ಳುವ *ದೋಫಾರ್* ಪ್ರಾಂತ್ಯದಲ್ಲಿ ಇದು ಅತೀ ಹೆಚ್ಚಾಗಿ ಕಂಡುಬರುತ್ತದೆ. ದೋಫಾರಿನ ಲೋಬಾನವು ಜಗತ್ತಿನ ವಿವಿಧ ಮಾರ್ಕೆಟ್ಗಳಲ್ಲಿ ಶ್ರೇಷ್ಟ ಸ್ಥಾನವನ್ನು ಪಡೆದಿದೆ. 

*ಇಂರಾನ್ ನಬಿ(ಅ) :* ಸಲಾಲ ಪಟ್ಟಣದ ಹೃದಯ ಭಾಗದಲ್ಲಿ ಇಂರಾನ್ ನಬಿಯವರ ಮಖ್ಬರವಿದೆ. ಅದರಲ್ಲಿರುವ ಮಸ್ಜಿದ್ ಮತ್ತು ಮಖ್ಬರವನ್ನು ಅಂದವಾಗಿ ಪರಿಪಾಲಿಸಲಾಗುತ್ತದೆ. ಉದ್ದವಿರುವ ಕಟ್ಟಡದೊಳಗೆ ಅಸಾಮಾನ್ಯ ದೈರ್ಘವಿರುವ ಮಖ್ಬರವದು. ಮಸ್ಕತ್ನಿಂದ ಸಲಾಲಕ್ಕೆ ಹನ್ನೆರಡು ಗಂಟೆ ಪ್ರಯಾಣ ಮಾಡಿ ಸಲಾಲದಲ್ಲಿ ಪ್ರಥಮವಾಗಿ ನಾನು ಸಂದರ್ಶಿಸಿದ ಮಖಾಂ ಶರೀಫದು. 28/8/2017 ಬೆಳಿಗ್ಗೆ 9:45ಕ್ಕೆ ಇಂರಾನ್ ನಬಿಯವರ ಖಬ್ರ್ ಸಮೀಪವಿದ್ದೆ. ಅವರ ಮಖಾಂ  ಮತ್ತು ಮಸ್ಜಿದಿರುವ ಕಾಂಪೌಂಡನ್ನು ಹಸಿರು ಹುಲ್ಲುಗಳಿಂದ ತುಂಬಿಸಿದ್ದು ಮನೋಹರವಾಗಿ ಗೋಚರಿಸುತ್ತದೆ. 

*ಸ್ವಾಲಿಹ್ ನಬಿ(ಅ)ರ ಒಂಟೆ :* ಮಹಾನರಾದ ಸ್ವಾಲಿಹ್ ನಬಿ(ಅ)ರ ಒಂಟೆಗೆ ಸಂಬಂಧ ಪಟ್ಟ ಕೆಲವು ಅವಶಿಷ್ಟಿಗಳು ಸಲಾಲ ಪಟ್ಟಣದಲ್ಲಿವೆ. ಒಂದು ಕಟ್ಟಡದೊಳಗೆ ಸಂರಕ್ಷಿಸಲ್ಪಟ್ಟಿರುವ ಬಂಡೆ ಕಲ್ಲಿನಲ್ಲಿ ಹೀಗೆ ಕೆಲವು ಗುರುತುಗಳಿವೆ. ಅದು *ಸಮೂದ್ ಗೋತ್ರಕ್ಕೆ* ಪುರಾವೆಯಾಗಿ ನಿಯೋಗಿಸಲ್ಪಟ್ಟ, ಸ್ವಾಲಿಹ್ ನಬಿ(ಅ) ರವರು ಬಂಡೆ ಕಲ್ಲಿನಿಂದ ಹೊರಡಿಸಿದ ಒಂಟೆಯ ಗುರುತುಗಳೆಂಬುದು ಪರಂಪರಾಗತ ವಿಶ್ವಾಸವೆಂದು ಅಲ್ಲೇ ಹೊರಗಿರುವ ಬೋರ್ಡಿನಲ್ಲಿ ಕಾಣಬಹುದು.

*ಚೇರಮಾನ್ ಪೆರುಮಾಳ್ :* ಕೇರಳದಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪುಣ್ಯ ಸನ್ನಿಧಾನಕ್ಕೆ ಸಾಗಿ ಇಸ್ಲಾಂ ಸ್ವೀಕರಿಸಿದ ಚೇರಮಾನ್ ಪೆರುಮಾಳರ ಮಖಾಂ ಸಲಾಲದಲ್ಲಿದೆ. *ಅಲ್ ಬಲೀದ್ ಆರ್ಕಿಯೋಳಜಿಕಲ್ ಪಾರ್ಕಿನಿಂದ* ಸ್ವಲ್ಪ ದೂರದಲ್ಲಿ ಈ ಮಖಾಂ ಇದೆ. ಜೊತೆಗೆ ಇನ್ನೊಂದು ಖಬ್ರೂ ಅಲ್ಲಿದೆ. ಅದು ಉಮರ್ (ರ)ರವರ ಆಡಳಿತ ಕಾಲದಲ್ಲಿ ಕೇರಳಕ್ಕೆ ಬಂದ *ಮುಗೀರತಿಬ್ನು ಶುಅ್ಬ (ರ)* ರವರ ಮುಖಾಂತರ ಅಂದಿನ ಮಲಬಾರ್ ಆಡಳಿತಾಧಿಕಾರಿ *ಸಾಮೂದಿರಿ ರಾಜ* ಇಸ್ಲಾಂ ಸ್ವೀಕರಿಸಿ *ಅಬ್ದುರ್ರಹ್ಮಾನ್* ಎಂಬ ಹೆಸರು ಸ್ವೀಕರಿಸಿದ್ದಾಗಿಯೂ, ಮಕ್ಕಾಕ್ಕೆ ಹೋದದ್ದಾಗಿಯೂ ಚರಿತ್ರೆಯಿದೆ. ಅವರು ಮರಳಿ ಬರುವಾಗ *ದೋಫಾರ್ನಲ್ಲಿ* ಮರಣ ಹೊಂದಿದ್ದು ಅವರನ್ನು ಚೇರಮಾನರ ಸಮೀಪವೇ ದಫನ ಮಾಡಲಾಗಿದೆಯೆಂಬ ನಂಬಿಕೆಯೂ ಇದೆ. ಚೇರಮಾನ್ ಪೆರುಮಾಳ್ರವರು *ಅಬೂಬಕರ್ ತಾಜುದ್ದೀನ್* ಎಂಬ ಹೆಸರು ಸ್ವೀಕರಿಸಿದ್ದರು. *ಅಬೂಬಕರ್ ತಾಜುದ್ದೀನ್ ಮತ್ತು ಅಬ್ದುರ್ರಹ್ಮಾನುಸ್ಸಾಮಿರಿ* ಯವರ ಖಬ್ರುಗಳು ಒಂದೇ ಖಬ್ರಿನಂತೆ ಜೊತೆಯಾಗಿಯೇ ಉದ್ದಕ್ಕಿದೆ.

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲರ ಕಾಲದಲ್ಲಿ ಅರಬ್ ಲೋಕದಿಂದ ಭಾರತದ *ಸಿಲೋನಿಗೆ ಆದಂ ಪರ್ವತವನ್ನು* ಸಂದರ್ಶಿಸಲು ಬಂದಿದ್ದ ಅರಬ್ ಸಂಘವು ಕೊಡುಂಙಲ್ಲೂರಿನಲ್ಲಿ ಹಡಗಿಳಿದಿದ್ದರು. ಅವರ ಜೊತೆ ಮಾತಿಗಿಳಿದ ಚೇರಮಾನ್ರೊಂದಿಗೆ ಮಕ್ಕಾದ ವಿಶೇಷತೆಗಳನ್ನೂ ಅಲ್ಲಿ ಅಗಮಿಸಿದ ಪ್ರವಾದಿವರ್ಯರ ಬಗ್ಗೆಯೂ ಅವರು ವಿವರಿಸಿದಾಗ ಚೇರಮಾನ್ ಪೆರುಮಾಳ್ರವರು ಪ್ರವಾದಿಯವರ ಅಮಾನುಷಿಕತೆಯ ಬಗ್ಗೆ ಕೇಳಿದ್ದರು. ಅವರು ಅತಿಮಾನುಷಿಕತೆ (ಮುಅ್ ಜಿಝಾತ್) ವಿವರಿಸುವ ಪೈಕಿ  *ಚಂದ್ರನನ್ನು ಎರಡು ಸೀಳಾಗಿಸಿ ಅಬೂಖುಬೈಸ್ ಮತ್ತು ಖುಅಯ್ಕಿಆನ್* ಪರ್ವತದ ಮೇಲೆ ಬೀಳಿಸಿದ್ದನ್ನು ಕೆಳಿದಾಗ ಪೆರುಮಾಳ್ ಅಚ್ಚರಿಗೊಳ್ಳುತ್ತಾರೆ. ತಾನು ಅದನ್ನು ಕಂಡದ್ದಾಗಿಯೂ ಅಂದಿನ ದಿನಾಂಕ ಬರೆದಿಟ್ಟದ್ದಾಗಿಯೂ ಹೇಳುತ್ತಾರೆ. ದಿನಾಂಕ ನೋಡಿದಾಗ ಅರಬಿಗಳು ಹೆಳಿದ್ದು ಮತ್ತು ಇದು ಸರಿಯೆಂದು ಕಂಡಿತ್ತು. ''ಸಿಲೋನಿನಿಂದ ಮರಳಿ ಬರುವಾಗ ನೀವು ಇಲ್ಲಿ ಬರಬೇಕು. ನಿಮ್ಮೊಂದಿಗೆ ನಾನೂ ಕೂಡಾ ಬರುತ್ತೇನೆ'' ಅನ್ನುತ್ತಾರೆ. ಹಾಗೆ ಚೇರಮಾನ್ ಪೆರುಮಾಳ್ ದಿವಸಗಳ ಬಳಿಕ ಅರಬಿಗಳೊಂದಿಗೆ ಮಕ್ಕಾಕ್ಕೆ ಸಾಗುತ್ತಾರೆ. ಇದು ಹಿಜ್ರಾಕ್ಕೆ ಐದು ವರ್ಷ ಮೊದಲಾಗಿತ್ತು. ಪ್ರವಾದಿಯವರ ಸನ್ನಿಧಾನಕ್ಕೆ ಸಾಗಿ ಇಸ್ಲಾಂ ಸ್ವೀಕರಿಸಿ

*ತಾಜುದ್ದೀನ್* ಎಂಬ ಹೆಸರು ಪಡೆಯುತ್ತಾರೆ. 

ಭಾರತದ ರಾಜರೊಬ್ಬರು ಹೀಗೆ ಪ್ರವಾದಿಯವರ ಬಳಿ ತೆರಳಿದ್ದು ಹದೀಸಿನಲ್ಲಿ ಕೂಡಾ ಇದೆ. *ಅಬೂ ಸಈದುಲ್ ಖುದ್ರಿ (ರ)* ರವರಿಂದ *ಹಾಕಿಂ (ರ)* ತನ್ನ *ಮುಸ್ತದ್ರಕ್ನಲ್ಲಿ* ವರದಿ ಮಾಡುತ್ತಾರೆ. 'ಭಾರತದ ರಾಜರೊಬ್ಬರು ಪ್ರವಾದಿಯವರಿಗೆ ಚೀಲವೊಂದನ್ನು ಹದ್ಯಾ ನೀಡಿದರು. ಅದರಲ್ಲಿ ಶುಂಠಿಯಿತ್ತು. ಪ್ರವಾದಿಯವರು ಅದನ್ನು ತುಂಡರಿಸಿ ಸ್ವಹಾಬಿಗಳಿಗೆ ನೀಡಿದರು. ಒಂದು ತುಂಡು ನನಗೂ ಲಭಿಸಿತು'.

ಪ್ರಸ್ತುತ ರಾಜರು *ಮಾಲಿಕಿಬ್ನ್ ದೀನಾರ್ (ರ)* ಮತ್ತು ಸಹಚರರೊಂದಿಗೆ ಮರಳಿ ಬರುವಾಗ ಅವರಿಗೆ *'ಳಿಫಾರ್'* ಎಂಬಲ್ಲಿ ರೋಗ ತಗಲುತ್ತದೆ. ಅವರು ಅಲ್ಲೇ ಕೊನೆಯುಸಿರೆಳೆಯುತ್ತಾರೆ. *(ಫವಾಇದುಶತ್ತಾ - ಕೈಪಟ್ಟೆ ಉಸ್ತಾದ್ 205)* ಳಿಫಾರ್ ಎಂಬುದು ಒಮಾನಿನ ಒಂದು ಪ್ರಾಂತ್ಯ. ಅದರ ರಾಜಧಾನಿಯೇ *ಸಲಾಲ.* ಅಲ್ಲೇ ಪೆರುಮಾಳರ ಮಖ್ಬರವಿರುವುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕಂಡು ಮುಸ್ಲಿಮರಾದ ಕೇರಳದ ರಾಜ ಚೇರಮಾನ್ ಪೆರುಮಳ್ ಅಲ್ಲ, ಅವರ ಹೆಸರು *ಶಖ್ರೂತ್ ಪೆರುಮಾಳ್ (ಬಾನಪ್ಪಳ್ಳಿ ಪೆರುಮಾಳ್)* ಎಂದೂ ಅವರ ಖಬ್ರ್ *ಯಮನಿನ ಶಹರ್ ಮುಖಲ್ಲ* ಎಂಬಲ್ಲಿರುವುದೆಂದೂ ಚರಿತ್ರೆಯಿದೆ. *ಝೈನುದ್ದೀನುಲ್ ಮಖ್ದೂಂ (ರ)* ರವರು ತನ್ನ *ತುಹ್ಫತುಲ್ ಮುಜಾಹಿದೀನ್*  ನಲ್ಲಿ ಈ ಅಭಿಪ್ರಾಯ ತಾಳಿದ್ದಾರೆ. ಅದಕ್ಕೆ ಟಿಪ್ಪಣಿ ಬರೆದ ವಿಖ್ಯಾತ ಚರಿತ್ರೆ ಪಂಡಿತ *ನೆಲ್ಲಿಕುತ್ ಮುಹಮ್ಮದ್ ಮುಸ್ಲಿಯಾರ್* ರವರು ಅದನ್ನು ಸಮರ್ಥಿಸಿದ್ದಾರೆ. ಆದರೆ ಪರಂಪರಾಗತ ನಂಬಿಕೆ ಮತ್ತು ಅಲ್ಲಿರುವ ಕೆಲವು ಒಮಾನಿಗಳ ಹೇಳಿಕೆ ಪ್ರಕಾರ ಸಲಾಲದಲ್ಲಿರುವುದು ಪ್ರಸ್ತುತ *ಸ್ವಹಾಬಿ ತಾಜುದ್ದೀನುಲ್ ಹಿಂದಿಯ* ಖಬ್ರ್ ಎಂದಾಗಿದೆ. ಹಾಗೆಯೇ ವಿಶ್ವಾಸವರ್ಪಿಸಿ ಜನರು ಅಲ್ಲಿ ಝಿಯಾರತ್ ನಡೆಸುತ್ತಿದ್ದಾರೆ. 

ಚೇರಮಾನ್ ಪೆರುಮಾಳರ ಮಖ್ಬರ ಪರಿಸರವು ಕೇರಳವನ್ನೇ ನೆನಪಿಸುವಂತಿದೆ. ಬಾಳೆ ತೋಟಗಳು, ತೆಂಗಿನ ಮರಗಳು, ಪಪ್ಪಾಯ ಮರ, ವೀಲ್ಯೆದೆಳೆ ಸಸಿಯಿಂದ ಹಿಡಿದು ಕೇರಳದಲ್ಲಿ ಬೆಳೆಯುವ ಎಲ್ಲಾ ತರಕಾರಿ, ಹಣ್ಣು ಹಂಪಲುಗಳೂ ಅಲ್ಲಿವೆ. ಎಲ್ಲೆಡೆಯೂ ಹಸಿರಿನಿಂದ ಆವೃತವಾದ ನಯನ ಮನೋಹರ ಪ್ರದೇಶವದು.ಅತ್ತ ಸಾಗುವ ರಸ್ತೆ ಬದಿಗಳಲ್ಲಿ ನಮ್ಮೂರಿನಲ್ಲಿರುವಂತೆ ಸಣ್ಣ ಸಣ್ಣ ಗೂಡಂಗಡಿಗಳು.ಅಲ್ಲಿ ಸೀಯಾಳ, ಪಪ್ಪಾಯಿಗಳ ಮಾರಾಟವೂ ನಡೆಯುತ್ತದೆ. ತಾನು ಮರಣ ಹೊಂದಿ ಮಲಗುವ ಊರನ್ನು ತನ್ನೂರಿನಂತೆ (ಕೇರಳ) ಮಾಡಬೇಕೆಂದು ಪೆರುಮಾಳ್ ರವರು ಪ್ರಾರ್ಥಿಸಿದ ಫಲವಾಗಿ ಸಲಾಲವು ಕೇರಳದಂತೆ ಆಗಿ ಬಿಟ್ಟಿದೆ ಎನ್ನುವವರಿದ್ದಾರೆ. ಅದೇ ರೀತಿ ಮಳೆ ಸಿಗದ ಸಂದರ್ಭದಲ್ಲಿ ಪೂರ್ವಕಾಲ ಅರಬಿಗಳು ಅವರ ಖಬ್ರ್ ಬಳಿ ಪ್ರಾರ್ಥಿಸಿ ಹಿಂದಿರುಗುವುದಕ್ಕಿಂತ ಮೊದಲಾಗಿ ಮಳೆಯಾಗುತ್ತಿತ್ತು ಎಂಬ ಚರಿತ್ರೆಯೂ ಇದೆ. ಸಲಾಲದಲ್ಲೇ ಸಮುದ್ರ ಕಿನಾರೆ ಯಲ್ಲೊಂದು ಮಖ್ಬರ ನಾವು ಸಂದರ್ಶಿಸಿದೆವು. ಅದು *ಯೂನುಸ್ ನಬಿ(ಅ.ಸ)* ರ ಮಖ್ಬರ ಎಂದೂ ಅಲ್ಲದೆ ಅವರನ್ನು ಮೀನು ತನ್ನ ಉದರದಿಂದ ಹೊರಗೆ ತಳ್ಳಿದ ಸ್ಥಳ ಅಲ್ಲಿದೆ ಎಂದು ಖಚಿತವಲ್ಲದ ಮಾಹಿತಿ ಯಾರೋ ನೀಡಿದ್ದರು. ಅದು ಯೂನುಸ್ ನಬಿಯಿದ್ದಲ್ಲ ಫಖೀಹುಲ್ ಮುಖದ್ದಂರ ಒಬ್ಬ ಮೊಮ್ಮಗನ ಮಖ್ಬರವೆಂದು ಒಮಾನಿಯೊಬ್ಬರು ಹೇಳಿದ್ದಾಗಿ ನಮಗೊಬ್ಬರು ವಿವರಿಸಿದ್ದರು. ಹೀಗೆ ಖಚಿತವಲ್ಲದ ಹಲವು ಚರಿತ್ರೆಗಳಿವೆ. ಅನೇಕ ಚರಿತ್ರೆಗಳು ನಿಖರ ಮಾಹಿತಿಯಿಲ್ಲದೆ ಯಾರೋ ಹೇಳಿದ್ದನ್ನು ನಂಬ ಬೇಕಾದಂತಿದೆ.

*ಹೂದ್ ನಬಿ(ಅ.ಸ) :* ಸಲಾಲ ನಗರ ಬೋರ್ಡರ್ನಿಂದ ಹೊರಗಿದೆ ಹೂದ್ ನಬಿ (ಅ.ಸ)ರ ಖಬ್ರಿರುವ ಪ್ರದೇಶ. ತಿರುವು ಮುರುವು ಇಕ್ಕಟ್ಟಾದ ರಸ್ತೆಗಳಲ್ಲಿ ಅತ್ತ ಸಾಗಬೇಕು. ರಸ್ತೆಯ ಇಕ್ಕೆಳಗಳು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಮಖಾಮಿನ ಸಮೀಪ  ಆ ರಸ್ತೆಯು ಕೊನೆಗೊಳ್ಳುತ್ತದೆ.  ಅಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಕೂಡಾ ಇದೆ. ಅಲ್ಲೇ ರಸ್ತೆ ಬದಿಯಲ್ಲಿ *'ಹೂದ್ ನಬಿಯ ಖಬ್ರ್'* ಎಂಬ ಬೋರ್ಡ್ ಸ್ಥಾಪಿಸಲಾಗಿದೆ.  ಆದ್ ಸಮುದಾಯಕ್ಕೆ ನಿಯೋಜಿಸಲಾದ ಹೂದ್ ನಬಿಯ ಬಗ್ಗೆ ಕುರ್ಆನ್ ವಿವರಿಸಿದ ಸೂಕ್ತವನ್ನು ಅಲ್ಲಿನ ಗೋಡೆಯಲ್ಲಿ ಬರೆದಿಡಲಾಗಿದೆ. ಸಲಾಲದ ಸುತ್ತ ಮುತ್ತ ಸುಮಾರು ಎಪ್ಪತ್ತು ಕಿ.ಮೀಗಳು ನಮ್ಮ *ಚಿಕ್ಕಮಗಳೂರಿನ* ಹಸಿರು ಪರಿಸರದಂತೆ, ಕೇರಳ *ವಯನಾಡಿನ* ಹಸಿರು ಪ್ರದೇಶಗಳಂತೆ ಗೋಚರವಾಗುತ್ತದೆ. ಅದನ್ನು ನೋಡುವುದೇ ಕಣ್ಣಿಗೆ ಹಬ್ಬ. ಸಲಾಲದಿಂದ ಸುಮಾರು 30 ಕಿ.ಮೀ ಸಂಚರಿಸಿದರೆ ಹೂದ್ ನಬಿ (ಅ.ಸ)ರ ಮಖ್ಬರಕ್ಕೆ ತಲುಪಬಹುದು. 

ಹೂದ್ ನಬಿ (ಅಸ.) ರವರು 464 ವರ್ಷ ಬದುಕಿದ್ದರು. ಇವರ ಹೆಸರು ಕುರ್ಆನಿನಲ್ಲಿ ಏಳು ಬಾರಿ ಬಂದಿದೆ. ಆದ್ ಸಮೂಹಕ್ಕೆ ಇವರನ್ನು ಕಳುಹಿಸಲಾಗಿತ್ತು.

ಅತ್ಯಂತ ಶಕ್ತಿ ಶಾಲಿಗಳಾದ ಸಮೂಹವಾಗಿದ್ದರು ಅವರು ಬಂಡೆಗಳನ್ನು ಕೊರೆದು ಗುಹೆ ತೋಡಿ ಅವರು ವಾಸಿಸುತ್ತಿದ್ದರು. 'ಇವರಂತಹ ಶಕ್ತಿವಂತರನ್ನು ಬೇರೆ ಸೃಷ್ಟಿಸಲ್ಪಡಲಿಲ್ಲ' ಎಂದು ಕುರ್ಆನ್ ವಿವರಿಸಿದೆ.

*ಐನುಸಹ್ನೂತ್* : ಸಲಾಲ ಅಂಬಿಯಾಗಳ, ಸಜ್ಜನರ  ಖಬ್ರ್  ಗಳಿಂದ ಧನ್ಯಗೊಂಡಂತೆ ಪ್ರಕೃತಿ ಪರವಾದ ವಿವಿಧ ಅದ್ಭುತಗಳಿಂದಲೂ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಪರ್ವತಗಳಿಂದ ನೀರು ಒರತೆಯಾಗಿ ಬಂದು ಅನೇಕ ಜಲಾಶಯಗಳು ರೂಪುಗೊಂಡಿರುವುದು ಒಮಾನಿನ ವಿವಿದೆಡೆ ಕಾಣಬಹುದು. ಆ ಪೈಕಿ ಇಂಥಹಾ ಶುದ್ಧ ಜಲಾಶಯಗಳು ಸಲಾಲದಲ್ಲಿ ಹಲವಿದೆ. ಅದಕ್ಕೆ ಅರಬಿಯಲ್ಲಿ *ಐನ್* ಎನ್ನಲಾಗುತ್ತದೆ. ಸಲಾಲದಲ್ಲೇ 360 ರಷ್ಟು ಜಲ ಪ್ರವಾಹಗಳಿವೆ ಎನ್ನಲಾಗುತ್ತದೆ. *ಖರೀಫ್ ಕಾಲ* (ಆಗಸ್ಟ್ ಸೆಪ್ಟೆಂಬರ್) ದಲ್ಲಿ ಅಲ್ಲಿ ಮಳೆಯಾಗುತ್ತದೆ. ಅದರ ನೀರು ಭೂಮಿಯಡಿಯಲ್ಲಿ ಶೇಖರಿಸಲ್ಪಟ್ಟು ಜಲ ಪ್ರವಾಹವಾಗಿ ಹೊರಬರುತ್ತದೆ. ಆ ಪೈಕಿ ಮಸ್ಕತ್ ದಾರಿಯಿಂದ ಸ್ವಲ್ಪ ದೂರದಲ್ಲಿ ಸೀಕ್ ಎಂಬಲ್ಲಿಗೆ ಹೋಗುವ ದಾರಿಯಲ್ಲಿ *ಐನ್ ಸಹ್ನೂತ್* ಇದೆ. ಹಲವು ಸಂಚಾರಿಗಳನ್ನು ಇದು ತನ್ನತ್ತ ಆಕರ್ಶಿಸುತ್ತದೆ. ಸಂಚಾರಿಗಳ ಇಷ್ಟ ಕೇಂದ್ರಗಳಿವು. ಸಲಾಲದ ಹಸಿರು ಸೌಂದರ್ಯವನ್ನು ನೆಲೆ ನಿಲ್ಲಿಸುವಲ್ಲಿ ಇಂಥಹ ಐನ್ ಗಳು ಪ್ರಮುಖ ಪಾತ್ರವಹಿಸುತ್ತದೆ.  ಐನ್ ಸಹ್ನೂತಿನಲ್ಲಿ ಅನೇಕ ಮಂದಿ ಸ್ನಾನ ಮಾಡಿ ಆನಂದಿಸುವುದನ್ನು ಕಾಣಬಹುದು.

*ಸ್ವಾಹಿಬುಲ್ ಮಿರ್ಬಾತ್ :* ಒಮಾನಿಗೆ ಗರಿ ಮೂಡಿಸಿದ ಮಹಾನರಿವರು. ಸಲಾಲದಿಂದ *ಮಿರ್ಬಾತಿಗೆ* 74 ಕಿ.ಮೀ ದೂರವಿದೆ. ಯಮನ್ ಬೋರ್ಡರದು. ಮಿರ್ಬಾತಿಗೆ ಹೋಗುವ ದಾರಿಯಲ್ಲಿ ರಸ್ತೆಯ ಇಕ್ಕೆಳಗಳಲ್ಲೂ ಒಂಟೆಗಳ ದಂಡನ್ನೇ ಕಾಣಬಹುದು. ಒಂಟೆ ಮತ್ತು ಹಸುಗಳಿಗೆ ನೀರು ಕುಡಿಯಲು ನಿರ್ಮಿಸಲಾದ ಉದ್ದ ಹೌಳ್ ಗಳೂ ದೃಶ್ಯವಾಗುತ್ತದೆ. ಒಮಾನಿನ ಮೂರು ಭಾಗವೂ ಸಮುದ್ರಗಳಿಂದ ಆವೃತವಾಗಿದೆ. ಒಂದು ಕಡೆ ಮಾತ್ರ ಭೂಮಿ. ಅದು ಸೌದಿ, ಯಮನ್, ದುಬಾಯ್ ಬೋರ್ಡರ್ಗಳು. ಹೀಗೆ ಆಕರ್ಶಕವಾಗುವ ಒಮಾನಿಗೆ ಸಮೃದ್ಧಿ ತುಂಬಿದ ಮಹಾನರ ಪೈಕಿ *ಮುಹಮ್ಮದ್ ಸ್ವಾಹಿಬುಲ್ ಮಿರ್ಬಾತ್* ಕೂಡಾ ಒಬ್ಬರು. ಅವರ ಖಬ್ರನ್ನು ಅರಬಿಗಳೇ ಪರಿಪಾಲಿಸುತ್ತಿರುವುದು. ಮಖ್ಬರದ ಮೇಲಿರುವ ಬಿಳಿ ಖುಬ್ಬಗಳು ಅಲ್ಲಿಗೆ ತಲುಪುವ ಮುನ್ನವೇ ಗೋಚರಿಸ ತೊಡಗುತ್ತದೆ. ಮುಸ್ಲಿಮರು ದಿನನಿತ್ಯ ರೂಢಿಯಾಗಿಸಿ ಹೇಳುವ *ಹದ್ದಾದ್ ರಾತೀಬಿನ* ಕರ್ತೃ *ಅಬ್ದುಲ್ಲಾಹಿಲ್ ಹದ್ದಾದ್ (ರ)* ರವರ 17ನೇ ಪಿತಾಮಹರಿವರು. *ಸ್ವಾಹಿಬುಲ್ ಮಿರ್ಬಾತ್* ಎಂಧು ಸಮೀಪ ವಾಸಿಗಳು ಇವರನ್ನು ಪ್ರೀತಿಯಿಂದ ಕರೆಯುತ್ತಾರೆ. *ಅಲೀಖಾಲಿಅ ಖಸಂ* ಎಂಬವರ ಸುಪುತ್ರರಿವರು. ಇವರ ಮೊಮ್ಮಗ *ಅಲ್ ಫಖೀಹುಲ್ ಮುಖದ್ದಂ* ಎಂದು ವಿಖ್ಯಾತರಾದವರು. ಸ್ವಾಹಿಬುಲ್ ಮಿರ್ಬಾತ್ ರವರಿಗೆ *ಅಬ್ದುಲ್ಲ, ಅಹ್ಮದ್, ಅಲವೀ, ಅಲೀ* ಎಂಬ ನಾಲ್ಕು ಮಕ್ಕಳಿದ್ದಾರೆ. ಪ್ರವಾದಿ (ಸ)ರವರ ತನಕವಿರುವ ಇವರ ಪರಂಪರೆಯನ್ನು ಅಲ್ಲಿ ಬರೆದಿಡಲಾಗಿದೆ.

*ಝುಹೈರ್ ಅಲ್ ಹೈದ್ರೂಸಿ ಮಿರ್ಬಾತ್ :* ಮಿರ್ಬಾತ್ ಪಟ್ಟಣದಿಂದ ಸ್ವಲ್ಪದೂರ ಕಡಲ ಕಿನಾರೆಯಲ್ಲಿ ಈ ಮಹಾನರ ಮಖ್ಬರವಿದೆ. ಇವರ ಮಖ್ಬರ ಖಿಬ್ಲ ದಿಶೆಯಿಂದ ವಿರುದ್ಧವಾಗಿದೆ. ಪ್ರವಾದಿ (ಸ)ರವರ ಕಾಲದಲ್ಲಿ ಇವರು ವಫಾತಾಗಿದ್ದರು. *ಬೈತುಲ್ ಮುಖದ್ದಸ್* ಖಿಬ್ಲ ಆಗಿದ್ದ ಸಂದರ್ಭ ಇವರು ಮರಣ ಹೊಂದಿದ್ದರು. ಆದ್ದರಿಂದ ಆ ಕಡೆಗೆ ತಿರುಗಿಸಿ ಅವರನ್ನು ದಫನ ಮಾಡಲಾಗಿತ್ತು. ಅವರ ಖಬ್ರ್ ಕಅ್ಬಾ ದಿಶೆ ತಪ್ಪಿ ಕಾಣಲು ಇದುವೇ ಕಾರಣವೆಂದು ಅಲ್ಲಿನ ಸ್ವದೇಶಿಗಳು ವಿವರಿಸುತ್ತಾರೆ.

*ಆಬಿರಿಬ್ನು ಹೂದ್ :* ಸಲಾಲದಿಂದ ಮಿರ್ಬಾತಿಗೆ ಹೋಗುವ ದಾರಿಯಲ್ಲಿ *ತಾಕ* ತಲುಪುವುದಕ್ಕಿಂತ ಮೊದಲು ಸಿಗುವ ಮಖ್ಬರವಿದು. ನಿರ್ಜನ ಪ್ರದೇಶದಲ್ಲಿದೆ ಹೂದ್ ನಬಿ(ಅ) ರವರ ಮಗ ಆಬಿರ್ ರವರ ಖಬ್ರ್. ಇವರ ಮಖ್ಬರಕ್ಕೆ ನಾಲ್ಕು ಖುಬ್ಬಗಳಿವೆ. ಮಖಾಮಿನಿಂದ ಸ್ವಲ್ಪದೂರಲ್ಲಿ *ಹಳೆಯ ಒಂದು ಬಾವಿ*ಯಿದೆ. ಅದರ ನೀರಿಗೆ ಪಾವಿತ್ರ್ಯತೆ ಕಲ್ಪಿಸಲಾಗುತ್ತದೆ. ಮಖ್ಬರದ ಸ್ವಲ್ಪ ದೂರದಲ್ಲೇ ಕಡಲನ್ನು ದರ್ಶಿಸಬಹುದು. 

*ಸಲಾಲದಲ್ಲೊಂದು ರಾತೀಬ್ :* ಚೇರಮಾನ್ ಪೆರುಮಾಳ್ ರವರ ದರ್ಗಾ ಸಮೀಪ ಮೂರು ಮಕ್ಕಳ ಮಖ್ಬರವಿದೆ. ಅಲ್ಲಿಗೆ ಸಂಜೆ ಹೊತ್ತಿಗೆ ತಲುಪಿದಾಗ ಅಲ್ಲಿದ್ದ ಬಂಗಾಳಿಯೊಬ್ಬ 'ಇಶಾಅ್ ಬಳಿಕ ಇಲ್ಲಿ ಅರಬಿಗಳಿಂದ ಮೌಲಿದ್ ನಡೆಯುತ್ತದೆ. ನಿಮಗೆ ಬರಬಹುದು' ಎಂದಿದ್ದ. ಅಲ್ಲದೆ ನಮಗೆ ಅತ್ತರ್ ನೀಡಿ, ಲೋಬಾನದ ಹೊಗೆ ಹಚ್ಚಿಸಿ ಬಳಿಕ ಅಲುವಾ ನೀಡಿದ್ದ. ಅಂದು ರಾತ್ರಿ ಇಶಾಅ್ ಮುಗಿಸಿ ಪ್ರಸ್ತುತ *ಮಸ್ಜಿದು ಸ್ವಾಹಿಬುಲ್ ಹಳ್ರಾ*ಕ್ಕೆ ನಾವು ಹೋದಾಗ *ಒಮಾನ್ ಅರಬಿಗಳ ರಾತೀಬ್* ಆರಂಭವಾಗಿತ್ತು. ಒಮಾನಿಗಳು ಸುತ್ತಲೂ ಹಲ್ಕಾ ಆಗಿ ನಿಂತು ನಮ್ಮೂರಿನಲ್ಲಿ ನಡೆಸುವ ಪಕ್ಕಾ *ಶಾದ್ಸುಲಿ ರಾತೀಬಿ*ನಂತಹ ಮಜ್ಲಿಸಾಗಿತ್ತದು. ಕೈ ಕೈ ಹಿಡಿದು ಸುತ್ತಲೂ ನಿಂತು ಎಲ್ಲರೂ ಅಲ್ಲಾಹನ ನಾಮಗಳನ್ನು ಉಚ್ಚರಿಸುತ್ತಿರುವಾಗ ಅದರೆಡೆಯಲ್ಲಿ ಒಬ್ಬ ಅರಬಿ ಲಯಬದ್ಧವಾಗಿ ಅರಬಿ ಹಾಡನ್ನು ಹಾಡುತ್ತಿದ್ದರು. ಸುಮಾರು ಎರಡು ಗಂಟೆಗಳ ಕಾಲ ದೀರ್ಘವಾಗಿದ್ದ ಮಜ್ಲಿಸ್, ಕೊನೆಗೆ ಎಲ್ಲಾ ಸಜ್ಜನರ ಸನ್ನಿಧಾನಕ್ಕೆ ಫಾತಿಹಾ ಓದಿ ದುಆದೊಂದಿಗೆ ಮುಕ್ತಾಯವಾಗಿತ್ತು. ಕಾವಾ ಮತ್ತು ಅಲುವಾದ ಜೊತೆಗೆ ಕೊನೆಯಲ್ಲಿ ಎಲ್ಲರಿಗೂ ಭರ್ಜರಿ ಭೋಜನದ ವ್ಯವಸ್ಥೆ ಕೂಡಾ ಇತ್ತು. 

ರಾತೀಬೀಗೆ ನೇತೃತ್ವ ಕೊಟ್ಟ *ಫಹದ್* ಎಂಬವರೊಂದಿಗೆ ಮಾತನಾಡಿದಾಗ ಅದು *ರಿಫಾಈ ರಾತೀಬ್* ಎಂದೂ ನಮ್ಮ ಶೈಖ್ *ನಾಸಿರುದ್ದೀನ್ ಅಬ್ದುಲ್ಲತೀಫ್ ನಾಸಿರುದ್ದೀನ್ ಖತೀಬಿಲ್ ಉರ್ದುನ್ನಿ (ಜೋರ್ಡಾನ್)* ಎಂದಿದ್ದರು. ಆ ಶೈಖಿನ *'ಮಿಂಬರುಲ್ ಗೈಬ್'* ಎಂಬ ಗ್ರಂಥ ನೋಡಿಯಾಗಿತ್ತು ಇವರು ರಾತೀಬ್ ನಡೆಸುತ್ತಿದ್ದದ್ದು. ಎಲ್ಲಾ ಸೋಮವಾರ ಅಸ್ತ ಮಂಗಳವಾರ ರಾತ್ರಿ ಈ ಮಸೀದಿಯಲ್ಲಿ ಮತ್ತು ಆದಿತ್ಯವಾರ *ಸಆದ* ಎಂಬಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಈ ರಾತೀಬ್ ನಡೆಯುತ್ತದೆ ಎಂದು ಅವರು ವಿವರಿಸಿದ್ದರು. 

*ಸ್ವಾಲಿಹ್ ನಬಿ(ಅ) ರವರ ದರ್ಬಾರಿನಲ್ಲಿ :* ಮುನ್ನಾದಿನದ ಝಿಯಾರತ್ ಮುಗಿಸಿ ಮರುದಿನ (29/10/2017) *ಮುಹಮ್ಮದ್ ಕುಟ್ಟಿ ಹಾಜಿ ಪಟ್ಟಾಂಬಿ* ಎಂಬವರ ಕಾರಿನಲ್ಲಿ ಝಿಯಾರತ್ತಿಗಿಳಿದಿದ್ದೆನು. ಮೊದಲ ದಿನ ಇವರ ತಮ್ಮ *ರಹ್ಮತುಲ್ಲಾಹ್ ಪಟ್ಟಾಂಬಿ*ಯವರ ಕಾರಿನಲ್ಲಿ ಚಲಿಸಿದ್ದೆವು. ಇಬ್ಬರೂ ಅಪಾರ ಅನುಭವಿಗಳು. ಅದರಲ್ಲೂ ಮುಹಮ್ಮದ್ ಕುಟ್ಟಿಯವರು ಹೆಚ್ಚು ಅನುಭವ ಮತ್ತು ಅರಿವಿನಿಂದ ಪಕ್ವಗೊಂಡವರು. 1983ರಲ್ಲಿ ಅವರು ಒಮಾನಿಗೆ ಉದ್ಯೋಗಕ್ಕೆಂದು ತೆರಳಿದ್ದರು. ಕೇರಳದಿಂದ ಒಮಾನಿಗೆ ಸಾಗುವ ಸುನ್ನತ್ ಜಮಾಅತಿನ ಹಿರಿಯ ವಿದ್ವಾಂಸರು ಮತ್ತು ಸಯ್ಯಿದರುಗಳನ್ನು ತನ್ನ ಕಾರಿನಲ್ಲೇ ಸುತ್ತಾಡಿಸುವವರು. ಕೇರಳದಲ್ಲಿನ ಸಮಸ್ತದ ಬೆಳವಣಿಗೆ, ಸಮಸ್ತ ವಿಭಜನೆಯ ಹಿನ್ನೆಲೆ, ಅದರ ಪೂರ್ವ ಚರಿತ್ರೆ ಮತ್ತು ನಂತರದ ಘಟನಾವಳಿಗಳ ಬಗ್ಗೆಯೆಲ್ಲಾ ಅತ್ಯಂತ ಹತ್ತಿರದಿಂದ ಬಲ್ಲ ವ್ಯಕ್ತಿಯವರು. ಅಲ್ಲದೆ ಸಲಾಲದುದ್ದಕ್ಕೂ ಸುನ್ನತ್ ಜಮಾಅತಿನ ಬೆಳವಣಿಗೆಯಲ್ಲಿ, ಸಂಘಟನಾ ಚಟುವಟಿಕೆಯಲ್ಲಿ ಬಹಳ ಹಿಂದಿನಿಂದಲೇ ತನ್ನನ್ನು ತೊಡಗಿಸಿಕೊಂಡವರು. 

ಸಲಾಲದಿಂದ ಬೆಳಿಗ್ಗೆ 8:30ಕ್ಕೆ ಹೊರಟ ನಾವು *ಸ್ವಾಲಿಹ್ ನಬಿ(ಅ)ರ* ಮಖ್ಬರ ಗುರಿಯಾಗಿಸಿ ಸಾಗಿದ್ದೆವು. *ಹಾಸಿಕ್* ಎಂಬ ಊರಿನ ಸಮೀಪ ಅವರ ಮಖ್ಬರವಿದೆ. ದಾರಿಯಲ್ಲಿ *ಳರೀಹು ಸ್ವಾಲಿಹುಬ್ನುಹೂದ್* ಎಂಬ ಬೋರ್ಡನ್ನು ಸ್ಥಾಪಿಸಲಾಗಿದೆ. ಅಲ್ಲಿಗೆ ಹೋಗುವ ದಾರಿಯುದ್ದಕ್ಕೂ ಮನ ಮೋಹಕ ಮತ್ತು ಅಚ್ಚರಿಯ ದೃಶ್ಯಗಳಿವೆ. *ರಸ್ತೆಯ ಒಂದು ಬದಿಯಲ್ಲಿ ಬೋರ್ಗರೆಯುವ ಸಮುದ್ರ ಇನ್ನೊಂದು ಬದಿಯಲ್ಲಿ ಬಾನೆತ್ತರದ ಪರ್ವತಗಳು* ನಡುವೆ ಸಣ್ಣ ರಸ್ತೆ ಇವು ಯಾರನ್ನೂ ಅಲ್ಲಾಹನ ಅದ್ಭುತಗಳ ಕುರಿತು ಚಿಂತಿಸುವಂತೆ ಮಾಡುತ್ತದೆ. ವಿವಿಧ ಚಿತ್ರಗಳನ್ನು ಬಿಡಿಸಿದ ರೀತಿಯಲ್ಲಿರುವ ಪರ್ವತ ಶಿಖರಗಳು ನಮ್ಮನ್ನು ಅಚ್ಚರಿಯಲ್ಲಿ ಮುಳುಗಿಸುತ್ತದೆ. ಕಪ್ಪು, ಬಿಳಿ, ಕೆಂಪು ಬಣ್ಣದ ಬೃಹತ್ ಬಂಡೆಗಳಲ್ಲಿ ಚಂದವಾಗಿ ಕೆತ್ತಿ ಬಿಡಿಸಿದಂತಹ ವಿಭಿನ್ನ ಚಿತ್ರಗಳ ಮೋಹಕ ದೃಶ್ಯ. ಮನುಷ್ಯನಿಂದ ಒಮ್ಮೆಯೂ ಇದು ಸಾಧ್ಯವಲ್ಲ. ಸಮುದ್ರದ ನೀರಿನ ಆರ್ಭಟಕ್ಕೆ ಪರ್ವತಗಳು ಆ ರೀತಿ ಕೆತ್ತಿದಂತಾಗಿರಬಹುದು. ಬಹುಷ ಅಲ್ಲೆಲ್ಲಾ ಒಂದು ಕಾಲದಲ್ಲಿ ಕಡಲು ತುಂಬಿ ನಿಂತಿದ್ದಿರಬಹುದು. ಕ್ರಮೇಣ ಸಮುದ್ರ ನೀರು ಕೆಳಗಿಳಿದು ಇಂದು ಆ ರೀತಿ ಪರ್ವತಗಳು ಸಮುದ್ರದ ಹೊರಗೆ ದೃಶ್ಯವಾದದ್ದಾಗಿರಬಹುದು. *ಸದ* ಎಂಬಲ್ಲಿಂದ ಪರ್ವತ ಮತ್ತು ಕಡಲಿನ ಈ ಅದ್ಭುತ ದೃಶ್ಯಗಳು ಗೋಚರವಾಗ ತೊಡಗುತ್ತದೆ. *'ಪರ್ವತಗಳನ್ನು ನಾವು ಭೂಮಿಯ ಆಣಿಗಳನ್ನಾಗಿಸಿದ್ದೇವೆ'*

ಎಂದು ಖುರ್ಆನ್ ಸೂರಾ ಅಮ್ಮಾದಲ್ಲಿ ಹೇಳಿದ್ದು ಒಮಾನಿನ ಪರ್ವತ ಶಿಖರಗಳ ಉದ್ದುದ್ದ ಸಾಲುಗಳನ್ನು ಕಾಣುವಾಗ ನೆನಪಿಗೆ ಬರುತ್ತದೆ.

11:30ಕ್ಕೆ ನಾವು ಸ್ವಾಲಿಹ್ ನಬಿ(ಅ)ರ ದರ್ಗಾದ ಬಳಿ ತಲುಪಿದ್ದೆವು. ಪರ್ವತದ ಮೇಲೆ ಸ್ವಾಲಿಹ್ ನಬಿ(ಅ)ರ ಉದ್ದವಾದ ಖಬ್ರ್ ಇದೆ. ಸುತ್ತಲೂ ಪರ್ವತಗಳ ಸಾಲೇ ಇವೆ. ಜನವಾಸವಿಲ್ಲದ ಸ್ಥಳವದು. ಮಖ್ಬರ ಸಮೀಪ *ಹೆಲಿಪ್ಯಾಡೊಂದಿದೆ.* ಇಂದಿನ ಒಮಾನ್ *ಸುಲ್ತಾನ್ ಖಾಬೂಸ್ ರ ತಾಯಿ* ಆಗಾಗ ಅಲ್ಲಿಗೆ ಝಿಯಾರತ್ತಿಗೆ ಬರುತ್ತಿದ್ದರಂತೆ. ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಪ್ರಸ್ತುತ ಹೆಲಿಪ್ಯಾಡನ್ನು ನಿರ್ಮಿಸಲಾಗಿತ್ತು. 

*ಸಮೂದ್ ಗೋತ್ರಕ್ಕೆ ನಿಯೋಗಿಸಲ್ಪಟ್ಟ ಪ್ರವಾದಿಯಾಗಿದ್ದರು ಸ್ವಾಲಿಹ್ ನಬಿ(ಅ).* ಸಮೂದ್ ಗೋತ್ರ ಮಹಾಶಕ್ತಿ ಶಾಲಿಗಳಾಗಿದ್ದರು. ಸ್ವಾಲಿಹ್ ನಬಿ(ಅ) ರವರು 280 ವರ್ಷ ಬದುಕಿದ್ದರು. 9 ಬಾರಿ ಖುರ್ಆನ್ ಇವರ ಹೆಸರನ್ನು ಪರಾಮರ್ಶಿಸಿದೆ. ಸ್ವಾಲಿಹ್ ನಬಿ(ಅ) ರ ದರ್ಬಾರಿನಿಂದ ಮರಳಿ ಬರುವ ದಾರಿಯಲ್ಲಿ ತಾಬಿಈಗಳ ಸಾಲಲ್ಲಿ ಸೇರಿದವರು ಎಂದು ಹೇಳಲಾಗುವ *ಶೈಖುಲ್ ಅಫೀಫ್* ಎಂಬವರ ಖಬ್ರನ್ನು ಸಂದರ್ಶಿಸಿದ್ದೆವು. ಮುಖ್ಯ ರಸ್ತೆಯಿಂದ ಬಿಟ್ಟು ನಿರ್ಜನ ಪ್ರದೇಶವೊಂದರಲ್ಲಿ ಅವರ ದರ್ಗಾ ಇದೆ. 

ಸಲಾಲದಿಂದ ಸ್ವಾಲಿಹ್ ನಬಿ(ಅ) ರ ದರ್ಗಾಕ್ಕೆ 165 ರಷ್ಟು ಕಿ.ಮೀ. ದೂರವಿದೆ. *ಹದ್ಬೀನ್ ಮತ್ತು ಹಾಸಿಕ್* ನಡುವೆಯಿರುವ *ರಅ್ಸ್ ಅಲ್ ನೂಸಿ* ಸಮೀಪವಿರುವ ಈ ಸ್ಥಳವು 'ಸದಾ' ವಿಲಾಯತ್ತಿನಲ್ಲಿದೆ. ಸದಾದಿಂದ ನಂತರ ಸಂಚಾರ ಹಾದಿಯಲ್ಲಿರುವ ದೃಶ್ಯಗಳು ನೋಡುಗರನ್ನು ವಿಸ್ಮಯದಲ್ಲಿ ಮುಳುಗಿಸುತ್ತದೆ. ಸ್ವಾಲಿಹ್ ನಬಿಯವರ ಮಖಾಂ ಪರಿಸರದಲ್ಲಿ ಸಣ್ಣ ಒಂದು ಮಸ್ಜಿದ್ ಇದೆ. ಮಖಾಮಿನ ಸಮೀಪ ಬೇರೆ ಕೆಲವು ಖಬ್ರ್ ಗಳೂ ಇವೆ. ಅಲ್ಲಿ ನಿಂತು ಸುತ್ತಲೂ ಇರುವ ಪರ್ವತ ಶಿಖರಗಳ ನೋಟವು ಆಶ್ಚರ್ಯವನ್ನುಂಟುಮಾಡುತ್ತದೆ.

*ವಾದಿ ದರ್ಬಾತ್ :* ಸಲಾಲದಲ್ಲಿರುವ ಟೂರಿಸ್ಟ್ ಕೇಂದ್ರಗಳ ಪೈಕಿ ಪ್ರಕೃತಿ ಸೌಂದರ್ಯದಿಂದ ಸಂದರ್ಶಕರ ಮನಪುಳಕಿತಗೊಳಿಸುವ ಪ್ರದೇಶವಿದು. ಹಸಿರ ಸೊಬಗಿನಿಂದ ಕಂಗೊಳಿಸುವ ಸ್ಥಳ. ವಿವಿದ ದೇಶಗಳಿಂದ ಬರುವ ಪ್ರವಾಸಿಗಳ ನೆಚ್ಚಿನ ತಾಣ. ಹಸಿರು ಹುಲ್ಲಿನ ನಡುವೆ ಕುಳಿತು ವಿಶ್ರಮಿಸುವ ಅನೇಕರನ್ನು ಅಲ್ಲಿ ಕಾಣಬಹುದು. *ತಾಖ* ಗವರ್ನರೇಟ್ನಲ್ಲಿರುವ ಸ್ಥಳವಿದು. *ತೀಖ್ ಗುಹೆಗಳಿಂದ* ಉಗಮಗೊಂಡು ಪರ್ವತ ಮತ್ತು ತಪ್ಪಲಿನಲ್ಲಿ ಹಾದು ಕಡಲಿನಲ್ಲಿ ಇದರ ಹರಿವು ಸೇರಿಕೊಳ್ಳುತ್ತದೆ. ಇಲ್ಲಿನ ಜಲದಲ್ಲಿ ಸಂರ್ಶಕರ ಉಲ್ಲಾಸಕ್ಕಾಗಿ ಬೋಟ್ ಸವಾರಿ ಕೂಡಾ ಇದೆ. *ವಾದಿ ದರ್ಬಾತ್* ಹಲವು ವೃಕ್ಷಗಳು, ಪಕ್ಷಿಗಳು ಮತ್ತು ನೀರ ತೊರೆಯಿಂದ ಸಮೃದ್ಧವಾಗಿದೆ. *ದೋಫಾರಿನ* ಅತ್ಯಂತ ದೊಡ್ಡ *ಹುಣಸೆ ಮರ*ವನ್ನು ಕೂಡಾ ಇಲ್ಲಿ ಕಾಣಬಹುದು. ಸಣ್ಣ ಸಣ್ಣ ಅಂಗಡಿಗಳು, ಜ್ಯೂಸ್ ಶಾಪ್  ಗಳೂ ಅಲ್ಲಿವೆ. ಕಬ್ಬು ಜ್ಯೂಸ್ ಕುಡಿದು ನಾವು ಅಲ್ಲಿಂದ ಮರಳಿದೆವು. 

*ಮ್ಯಾಗನೇಟ್ ಪವರ್ ರೋಡ್ :* ಒಮಾನ್, ಕಲಿತಷ್ಟು ಮುಗಿಯದ ಚರಿತ್ರೆಗಳಿರುವ ನಾಡು. ಮೊಗೆದಷ್ಟೂ ತೀರದ ನಿಗೂಢ ಚರಿತ್ರೆಗಳು ಅಲ್ಲಿವೆ. ನಮ್ಮನ್ನು ಅಚ್ಚರಿಗೊಳಿಸಿದ ಮ್ಯಾಗನೇಟ್ ಪವರ್ ರೋಡ್ ಕೂಡಾ ಅದರಲ್ಲೊಂದು. ನಮ್ಮ ಡ್ರೈವರ್ ಮುಹಮ್ಮದ್ ಕುಟ್ಟಿ ಹಾಜಿಯವರು ಪ್ರಸ್ತುತ ರಸ್ತೆಯ ನಿಖರ ಪೋಂಟ್ನಲ್ಲೇ ನಮ್ಮನ್ನು ಕೊಂಡೊಯ್ದು ನಿಲ್ಲಿಸಿದ್ದರು. ಅನೇಕ ಮಂದಿಗೆ ಅದರ ಮಾಹಿತಿಯೇ ಇರುವುದಿಲ್ಲ. ಬಿಡುವಿಲ್ಲದೆ ವಾಹನಗಳು ಸಂಚರಿಸುತ್ತಿದ್ದರೂ ನಮಗೆ ಅವರು ಅದನ್ನು ತೋರಿಸಿದ್ದರು. ಸಲಾಲದಲ್ಲೇ ಮೂರು ಸ್ಥಳದಲ್ಲಿ ಮ್ಯಾಗನೇಟ್ ಪವರ್ ರೋಡ್ ಇದೆ. ಒಂದು *ವಾದಿ ದರ್ಬಾತಿಗೆ ಹೋಗುವ ದಾರಿಯಲ್ಲಿ.* ಇನ್ನೊಂದು ಮಿರ್ಬಾತ್ನಿಂದ ಹೋಗುವಾಗ *ತವೀಅತೀರ್ ರೋಡಲ್ಲಿ*. ಮತ್ತೊಂದು *ಅಯ್ಯೂಬ್ ನಬಿ(ಅ)ರವರ ಮಖ್ಬರಕ್ಕೆ ಹೋಗುವ ರಸ್ತೆಯಲ್ಲಿ.* ವಾಹನವನ್ನು ಅಲ್ಲಿ ಇಳಿಜಾರಿನಲ್ಲಿ ನೀಟ್ರೋಲ್ ಹಾಕಿ ನಿಲ್ಲಿಸಿದರೆ ಗಾಡಿ ಮುಂದಕ್ಕೆ ಚಲಿಸದೆ ಹಿಂದೆ ಎತ್ತರಕ್ಕೆ ರಭಸವಾಗಿ ಸಾಗುವ ಅದ್ಭುತ ಪವರ್. ಇದರ ರಹಸ್ಯವೇನೆಂದು ಯಾರಿಗೂ ತಿಳಿದಿಲ್ಲ. 

*ಅಯ್ಯೂಬ್ ನಬಿ(ಅ) ಮಖಾಂ :* ಪರ್ವತಗಳ ಮೇಲಿರುವ ರಸ್ತೆಯಲ್ಲಿ ಮನಮೋಹಕ ಹಸಿರು ದೃಶ್ಯವನ್ನು ಕಾಣುತ್ತಾ ಸಾಗಿದರೆ ಅಯ್ಯೂಬ್ ನಬಿ(ಅ)ರ ಖಬ್ರ್ ಸಮೀಪ ತಲುಪುತ್ತೇವೆ. ಪ್ರಸ್ತುತ ಪರ್ವತಕ್ಕೆ *ಜಬಲ್ ಅಯ್ಯೂಬಿ* ಎಂದು ಹೆಸರು. ಸಹನೆಯ, ಕ್ಷಮೆಯ ಪರ್ಯಾಯವಾದ ಅಯ್ಯೂಬ್ ನಬಿ(ಅ)ರನ್ನು ಖುರ್ಆನ್ ಮುಕ್ತ ಕಂಠದಿಂದ ಹೊಗಲಿದೆ. ನಾಲ್ಕುಬಾರಿ ಇವರ ಹೆಸರು ಖುರ್ಆನ್ ಪರಾಮರ್ಶಿಸಿದೆ. ಬನೂ ಇಸ್ರಾಈಲ್ ಗಳಿಗೆ ಇವರನ್ನು ಪ್ರವಾದಿಯಾಗಿ ನಿಯೋಗಿಸಲಾಗಿತ್ತು ಎಂಬುದು ಪ್ರಬಲಾಭಿಪ್ರಾಯ. 93 ವರ್ಷಗಳ ಕಾಲ ಬದುಕಿದ್ದರು. 

ಅಯ್ಯೂಬ್ ನಬಿ(ಅ) ರವರ ಖಬ್ರ್ ಜೋರ್ಡಾನಿನಲ್ಲಿದೆ ಎಂಬ ವರದಿಯೂ ಇದೆ. ಆದರೆ ಇಲ್ಲೂ ಕೂಡಾ *'ಳರೀಹುನ್ನೆಬಿ ಅಯ್ಯೂಬ್'* ಎಂಬ ಬೋರ್ಡನ್ನು ರಸ್ತೆ ಬದಿಯಲ್ಲಿ ಸ್ಥಾಪಿಸಿದ್ದನ್ನು ಕಾಣಬಹುದು. ಚರಿತ್ರೆಗಳಲ್ಲಿ ಅಭಿಪ್ರಾಯ ವ್ಯತ್ಯಾಸವಿರಬಹುದು. ಅಲ್ಲದೆ ಒಮಾನಿನುದ್ದಕ್ಕೂ ಇರುವ ಪ್ರವಾದಿಗಳ, ಸಜ್ಜನರ ಖಬ್ರ್ ಬಗ್ಗೆ ನಿಖರ, ಸ್ಪಷ್ಟ ಮಾಹಿತಿ ಇರದಿದ್ದರೂ ಕೆಲವೊಮ್ಮೆ ಅಂತಹುದೇ ಹೆಸರಿನ ಬೇರೆ ಪ್ರವಾದಿಗಳ, ಸಜ್ಜನರ ಖಬ್ರ್ಗಳಾಗಿರಬಹುದು ಅವು ಎಂಬುದು ಕೆಲವರ ಹೇಳಿಕೆ. ಒಂದೇ ಹೆಸರಿನ ಹಲವು ಪ್ರವಾದಿಗಳು ಇದ್ದಿರಬಹುದು. ಚೇರಮಾನ್ ಪೆರುಮಾಳ್ರ ಖಬ್ರ್ ಬಗ್ಗೆಯೂ ಚರಿತ್ರೆಗಾರರು ಈ ರೀತಿ ಅಭಿಪ್ರಾಯ ವ್ಯತ್ಯಾಸವನ್ನು ಉಲ್ಲೇಖಿಸಿದ್ದಾರೆ. ಪ್ರವಾದಿಯವರನ್ನು ಕಂಡ ಪೆರುಮಾಳ್ರ ಖಬ್ರ್ ಸಲಾಲದಲ್ಲಲ್ಲ, ಯಮನಿನ ಶಹರ್ ಮುಖಲ್ಲಾದಲ್ಲಿ ಎಂದವರಿದ್ದಾರೆ. ಆದರೆ ಯಮನಿನ ಹಲವು ಭಾಗಗಳು ಇಂದು ಒಮಾನಿನಲ್ಲಿದೆ. ಪೆರುಮಾಳ್ರ ಖಬ್ರ್ ಯಮನಿನಲ್ಲಿ ಎಂದು ಹೇಳಿದ್ದು ಆ ಪ್ರದೇಶಗಳು ಒಮಾನಿಗೆ ಸೇರುವುದಕ್ಕಿಂತ ಮೊದಲಿನ ಚರಿತ್ರೆಯಾಗಿರಬಹುದು ಎಂದು ಹೇಳುವವರೂ ಇದ್ದಾರೆ. ಏನೇ ಆದರೂ ಅಲ್ಲೆಲ್ಲಾ ಇರುವ ಮಹಾನ್ ಸಾತ್ವಿಕರನ್ನು ಅಲ್ಲಿರುವ ಅದೇ ಹೆಸರಿನಲ್ಲಿ ಪರಂಪರಾಗತವಾಗಿ ಜನರು ವಿಶ್ವಾಸವರ್ಪಿಸುತ್ತಾ ಝಿಯಾರತ್ ನಡೆಸಿ ಬರುತ್ತಿದ್ದಾರೆ. ನಮಗೆ ಅದುವೇ ದೊಡ್ಡ ಪುರಾವೆ ಕೂಡಾ. 

ಸಲಾಲ ಪಟ್ಟಣದಿಂದ 24 ಕಿ.ಮೀ. ದೂರದಲ್ಲಿ ಅಯ್ಯೂಬ್ ನಬಿ(ಅ) ರವರ ಖಬ್ರ್ ಇದೆ. ಸ್ವರ್ಣ ವರ್ಣ ಖುಬ್ಬದ ಕೆಳಗೆ ಅವರ ಖಬ್ರನ್ನು ಕಾಣಬಹುದು. ಮಖಾಮಿನ ಪ್ರವೇಶ ದ್ವಾರದ ಸಮೀಪ ಅಯ್ಯೂಬ್ ನಬಿ(ಅ)ರದ್ದೆಂದು ಹೇಳಲಾಗುವ *ಹೆಜ್ಜೆ ಗುರುತನ್ನು* ವಿಶೇಷವಾಗಿ ಕಾಪಿಡಾಗಿದೆ. ಅಯ್ಯೂಬ್ ನಬಿ(ಅ) ರನ್ನು ಪರಾಮರ್ಶಿಸುವ ಖುರ್ಆನ್ ಭಾಗವನ್ನು  ಅಲ್ಲಿನ ಗೋಡೆಯಲ್ಲಿ ಫ್ರೈಂ ಹಾಕಿಡಲಾಗಿದೆ. ಪೂರ್ವಿಕರು ನಮಾಝ್ ಮಾಡುತ್ತಿದ್ದ *ಹಳೆಯ ಮಸ್ಜಿದ್* ಒಂದರ ಅವಶಿಷ್ಟ ಮಖಾಮಿನ ಸಮೀಪವಿದೆ. ಅದರಲ್ಲಿ *ಮಸ್ಜಿದುಲ್ ಅಖ್ಸಾ ಮತ್ತು ಕಅ್ಬಾಲಯಕ್ಕಿರುವ ಖಿಬ್ಲಾಗಳನ್ನು* ವಿಶೇಷವಾಗಿ ಗುರುತಿಸಲಾಗಿದೆ. 

*ಅದ್ಭುತ ಜಲ :* ಅಯ್ಯೂಬ್ ನಬಿ(ಅ) ರವರ ದರ್ಗಾದಿಂದ ಸ್ವಲ್ಪ ದೂರದಲ್ಲಿ ಸಣ್ಣ ಒಂದು ಕೊಳವಿದೆ. ಬಂಡೆಕಲ್ಲಿನ ಒಳಗಿಂದ ಹರಿದು ಬರುವ ತಿಳಿ ನೀರ ಪ್ರವಾಹವನ್ನು ಅಲ್ಲಿ ಶೇಖರಿಸಿಡಲಾಗಿದೆ. ನೀರು ಹರಿದು ಕೊಳದ ಹೊರಗೂ ಸಾಗುತ್ತಿದೆ. ಸುತ್ತಲೂ ಹಸಿರು ವರ್ಣದ ಸೊಬಗನ್ನು ಸವಿಯಬಹುದು. ಅಯ್ಯೂಬ್ ನಬಿ(ಅ) ರವರು ರೋಗ ಪೀಡಿತರಾಗಿದ್ದು ಪ್ರಸ್ತುತ ಜಲದಲ್ಲಿ ಮಿಂದಾಗ ಅವರ ರೋಗವು ಗುಣವಾಗಿತ್ತು ಎಂದು ನಂಬಲಾಗುತ್ತಿದೆ. ಸಂದರ್ಶಕರು ರೋಗ ಶಮನ ಉದ್ದೇಶದಿಂದ ಅದರಲ್ಲಿ ಸ್ನಾನ ಮಾಡುವ ರೂಢಿಯಿದೆ. ನಾನು ಅಲ್ಲಿಗೆ ತಲುಪುವಾಗ ಮಗ್ರಿಬ್ ಸಮಯವಾಗಿತ್ತು. ಬರಕತ್ ಆಶಿಸಿ  ಅದರಲ್ಲಿ ಮುಳುಗಿ ಸ್ನಾನ ಮಾಡಿದ್ದೆ.

*ಉವೈಸುಲ್ ಖರನಿ (ರ) :* ಅಯ್ಯೂಬ್ ನಬಿ(ಅ) ರವರ ಝಿಯಾರತ್ ಮುಗಿಸಿದ ನಾವು ಉವೈಸುಲ್ ಖರನಿ (ರ) ರವರ ಖಬ್ರ್ ಸಂದರ್ಶಿಸಿದೆವು. ಇತೀನ್ ರೌಂಡಾಪ್ ಬೋಟಿನ ಪಶ್ಚಿಮ ಭಾಗದಲ್ಲಿ ಈ ಖಬ್ರ್ ಇದೆ. ದರ್ಗಾದ ಕೆಲವು ಭಾಗಗಳು ಹುಡಿಯಾದ ರೀತಿಯಲ್ಲಿ ನಾವು ಕಂಡೆವು. ಅಲ್ಲಿರುವ ಕೆಲವು ವಹ್ಹಾಬಿ ಭೀಕರರು ರಾತ್ರಿಯ ಮರೆಯಲ್ಲಿ ಬಂದು ಅದನ್ನು ಹುಡಿ ಮಾಡುವುದು ಎಂದು ಅನ್ವೇಶಿಸಿದಾಗ ತಿಳಿಯಿತು. *'ತಾಬಿಈಗಳಲ್ಲಿ ಉತ್ತಮರು ಉವೈಸುಲ್ಖರನಿ'* ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಾಯಿಂದ ಹೊಗಲಲ್ಪಟ್ಟ ಮಹಾನ್ ಸಾತ್ವಿಕರಿವರು. ಪ್ರವಾದಿಯವರ ಕಾಲದಲ್ಲೇ ಬದುಕಿದ್ದರೂ ತಾನು ತನ್ನನ್ನು ವೃದ್ಧ ತಾಯಿಯ ಸೇವೆಗೆ ತೊಡಗಿಸಿಕೊಂಡದ್ದರಿಂದ ಅವರನ್ನು ಸಂದರ್ಶಿಸಲಾಗಿರಲಿಲ್ಲ. ಅವರನ್ನು ಕಂಡರೆ ಅವರೊಂದಿಗೆ ನೀವು ದುಆ ಮಾಡಿಸಿಕೊಳ್ಳಬೇಕೆಂದು ಪ್ರವಾದಿಯವರು ಸ್ವಹಾಬಿಗಳೊಂದಿಗೆ ಹೇಳಿದ್ದರು.

 

*ಇಬ್ರಾಹೀಮಿಬ್ನ್ಅದ್ಹಂ (ರ) :* ಈದುಲ್ ಅಳ್ಹಾದ ಮರುದಿನ ನಾವು ಮಸ್ಕತ್ತಿನ *ಸೂರ್* ಎಂಬಲ್ಲಿರುವ ಇಬ್ರಾಹೀಮಿಬ್ನ್ ಅದ್ಹಂ(ರ) ರವರ ಖಬ್ರ್ ಸಂದರ್ಶಿಸಿದ್ದೆವು. ಕೆ.ಸಿ.ಎಫ್ ಕಾರ್ಯಕರ್ತರೂ, ನಾಯಕರೂ ಜೊತೆಗಿದ್ದರು. ಮಸ್ಕತ್ನಿಂದ ಸುಮಾರು 300.ಕಿ.ಮೀ ದೂರವಿರುವ ಸ್ಥಳವದು. *'ಹಝ್ರತ್ ಸುಲ್ತಾನ್ ಇಬ್ರಾಹೀಮಿಬ್ನ್ ಅದ್ಹಂ ಅಲ್ ಬಲ್ಖಿ'* ಎಂದು ದರ್ಗಾದ ಗೋಡೆಯಲ್ಲಿ ಬರೆದಿಡಲಾಗಿದೆ. ಅಲ್ಲೇ ಕೆಳಗೆ ಅವರು ನಮಾಝ್ ಮಾಡಿದ ಸ್ಥಳ ಎನ್ನಲಾಗುವ ಸಣ್ಣ ಕಟ್ಟಡವೊಂದಿದೆ. ಸಮುದ್ರ ಸಮೀಪ ಪ್ರದೇಶವದು. ಇಬ್ರಾಹೀಮಿಬ್ನ್ಅದ್ಹಂ ರ ಖಬ್ರ್ ದ್ವೀಪವೊಂದರಲ್ಲಿ ಎಂದು ಅವರ ಚರಿತ್ರೆಯಲ್ಲಿ ಓದಿದ ನೆನಪು. ಇಂದು ಅವರ ಖಬ್ರ್ ಇರುವ ಸಮೀಪ ಸಮುದ್ರ ಕಾಣುವುದರಿಂದ ಹಿಂದೊಮ್ಮೆ ಅದು ಸುತ್ತಲೂ ನೀರಿನಿಂದ ತುಂಬಿದ ದ್ವೀಪವಾಗಿರುವ ಸಾಧ್ಯತೆಯೂ ಇದೆ. 

ಅತ್ಯಂತ ದೊಡ್ಡ ಶ್ರೀಮಂತರಾಗಿದ್ದ, ಬಲ್ಖ್ ಎಂಬ ರಾಜ್ಯದ ದೊರೆಯಾಗಿದ್ದ ಇಬ್ರಾಹೀಮರು ಪರಲೋಕ ಚಿಂತನೆ ಮತ್ತು ಅಲ್ಲಾಹನ ಸ್ನೇಹ ಮನಸ್ಸಲ್ಲಿ ಮೊಳಕೆಯೊಡೆದು ಎಲ್ಲವನ್ನೂ ತೊರೆದು ಊರು ಬಿಟ್ಟು ಮಹಾ ತ್ಯಾಗಿವರ್ಯರಾಗಿ ಮಾರ್ಪಟ್ಟಿದ್ದರು. *ರಈಸುಝ್ಝಾಹಿದೀನ್* ಎಂಬ ಅಪಾರ ನಾಮ ಅವರಿಗಿತ್ತು. ಬಹಳ ಹಿಂದೆಯೇ ಈ ಮಹಾನುಭಾವರ  ಚರಿತ್ರೆಗಳನ್ನೆಲ್ಲಾ ಕೇಳಿದ, ಓದಿದ ನೆನಪಿದೆ. ಇವರಂತಹಾ, ಸಂದರ್ಶಿಸಿದ ಇನ್ನೂ ಅನೇಕರ ಚರಿತ್ರೆಗಳನ್ನು ಸಣ್ಣ ವಯಸ್ಸಿನಿಂದಲೇ ನಿರಂತರ ಓದುತ್ತಿದ್ದೆ.  ಅಂತಹಾ ಸಜ್ಜನ ಸಾತ್ವಿಕರ ಖಬ್ರ್ ಮುಂದೆ ನೇರಾ ನೇರವಾಗಿ ನಿಂತು ಝಿಯಾರತ್ ನಡೆಸುವಾಗ ಸಿಗುವ ಸೌಭಾಗ್ಯ ಮತ್ತು ಸಂತೋಷವನ್ನು ವಿವರಿಸಲು ಪದಗಳು ಸಾಗುತ್ತಿಲ್ಲ. ಅಷ್ಟು ಮಾತ್ರಕ್ಕೂ ಆನಂದ ಮಯವದು. ಅವರ ಬರಕತ್ ನಿಂದಲಾದರೂ ನಾವು ಅಲ್ಲಾಹನ ಬಳಿ ಸ್ವೀಕೃತರಾಗಬೇಕೆಂಬ ಆಸೆ ಮಾತ್ರ. ಅದೇ ದಿನ ಕುರ್ಯಾತಿಡ್ಯಾಂ, ಉಲ್ಖೆ ಬಿದ್ದು ರೂಪುಗೊಂಡ ದೊಡ್ಡ ಹೊಂಡ, (ನೀರು ತುಂಬಿ ಕೊಂಡಿದೆ). ವಾದೀ ಬನೀ ಖಾಲಿದ್ ಕೂಡಾ ಸಂದರ್ಶಿಸಿದ್ದೆವು. 

ಒಮಾನಿನುದ್ದಕ್ಕೂ ಹದಿನೆಂಟು ದಿನಗಳು ಸಂಚರಿಸಿದಾಗ ಅಂಬಿಯಾಗಳ, ಔಲಿಯಾಗಳ ಶ್ರೇಷ್ಟ ಸನ್ನಿಧಾನವನ್ನು ಸಂದರ್ಶಿಸುವ ಮಹಾ ಸೌಭಾಗ್ಯ ದೊರಕಿದ್ದು ಬದುಕಿನ ಸುವರ್ಣ ಅವಕಾಶವಾಗಿತ್ತು. ಮರೆಯಲಾಗದ ಅಮೂಲ್ಯ ಕ್ಷಣವಾಗಿತ್ತು. ಎಲ್ಲೆಲ್ಲೂ ಬೃಹತ್ ಖುಬ್ಬಗಳಿರುವ ಎತ್ತರಿಸಿ ಕಟ್ಟಲಾದ ಖಬ್ರ್ಗಳನ್ನೇ ದರ್ಶಿಸಲು ಸಾಧ್ಯವಾಗಿತ್ತು. ದರ್ಗಾ ಸಂಪ್ರದಾಯ ನಮ್ಮೂರಿನ ಮುಸ್ಲಿಯಾರ್ಗಳ ಹೊಟ್ಟೆ ತುಂಬಲೋಸ್ಕರ ಎಂದು ಬೊಬ್ಬಿರಿಯುವ ವಹ್ಹಾಬಿ ಒಂದು ಕ್ಷಣ ನೆನಪಿಗೆ ಬಂದ. ಇಲ್ಲೆಲ್ಲಾ ಎತ್ತರಿಸಿ ಕಟ್ಟಿದ್ದು ಯಾರ ಹೊಟ್ಟೆ ತುಂಬಲೋ ವಹ್ಹಾಬಿಗೇ ಗೊತ್ತು. ಅಲ್ಲೆಲ್ಲೂ ಹಣ ಸಂಗ್ರಹ ನಡೆಯುತ್ತಿಲ್ಲ. ದರ್ಗಾದ ಪರಿಪಾಲನೆ ನಡೆಯುತ್ತದೆ. ಝಿಯಾರತ್ತೂ ನಡೆಯುತ್ತದೆ. ಜಗತ್ತಿನಾದ್ಯಂತವಿರುವ ಮಹಾತ್ಮರ ಖಬ್ರ್ ಗಳೆಲ್ಲಾ ಈ ರೀತಿಯೇ ಎತ್ತಿರಿಸಿ ಕಟ್ಟಿ ಬಹಳ ಗೌರವಾದಾರಗಳಿಂದ ಕಂಡು ಬರಲಾಗುತ್ತಿದೆ. ಒಮಾನಿನಲ್ಲೂ ಕೂಡಾ ಇದನ್ನು ದರ್ಶಿ ಸಬಹುದು. 

ಒಮಾನ್, ಅಲ್ಪಾವಧಿಯಲ್ಲಿ ಅಭಿವೃದ್ಧಿಯನ್ನು ಕಾಣುತ್ತಿರುವ ದೇಶ. ಇಂದು ಅಲ್ಲಿ ಆಡಳಿತ ನಡೆಸುತ್ತಿರುವುದು *ಸುಲ್ತಾನ್ ಖಾಬೂಸಿಬ್ನ್ ಸಈದ್* ಎಂಬವರು. ಭಾರತದ ಮುಂಬೈಯ ಪುಣೆಯಲ್ಲಿ ಇವರು ಕಲಿತಿದ್ದರು. ಭಾರತದ ರಾಷ್ಟ್ರಪತಿಯಾಗಿದ್ದ *ಶಂಕರ್ ದಯಾಳ್ ಶರ್ಮ* ಇವರ ಗುರುವಾಗಿದ್ದರಂತೆ. ಅವರು ಒಮಾನ್ ಸಂದರ್ಶಿಸಿದಾಗ ಅವರನ್ನು ಸ್ವೀಕರಿಸಲು ರಾಜ ಮತ್ತು ಪರಿವಾರವೇ ಏರ್ಪೋರ್ಟಲ್ಲಿ ಸೇರಿತ್ತು ಎಂದು ಅಲ್ಲಿನವರು ಹೇಳುತ್ತಿದ್ದರು. ಅವರ ಆಡಳಿತಕ್ಕೆ ಐವತ್ತು ವರ್ಷಗಳು ತುಂಬುತ್ತಾ ಬರುತ್ತಿದೆ. ಅವರ ಆಗಮನದ ಬಳಿಕ ನಾಡು ಸಮಗ್ರ ಅಭಿವೃದ್ಧಿ ಕಂಡಿತು. ಇವರ ತಂದೆ *ಸಈದಿಬ್ನು ತೈಮೂರ್* ರ ಕಾಲದಲ್ಲಿ ಇಂಥಹಾ ಅಭಿವೃದ್ಧಿಗಳೇನೂ ಇದ್ದಿರಲಿಲ್ಲ. ವಿಧ್ಯಾಭ್ಯಾಸ ಕೂಡಾ ಅಷ್ಟಕ್ಕಷ್ಟೇ ಇತ್ತು. ಅವೆಲ್ಲವೂ ಬದಲಾಗಿ ಇಂದು ಒಮಾನ್ ಅಭಿವೃದ್ಧಿಯ ದಿಶೆಯತ್ತ ಮುಖ ಮಾಡಿದೆ. 

ಸುಲ್ತಾನ್ ಖಾಬೂಸ್ರವರು ಒಮಾನಿನಲ್ಲಿ ಧಾರ್ಮಿಕ ಶಿಕ್ಷಣ ಕಲಿಸಿಕೊಡಲು ವಿದೇಶಗಳಿಂದ ವಿದ್ವಾಂಸರನ್ನು ಕರೆತಂದಿದ್ದರು. *ಶಿಯಾ, ಇಬಾಳಿಗಳಂತಹಾ* ನೂತನವಾದಿಗಳೂ ಆ ಪೈಕಿಯಿದ್ದರು. ಆದ್ದರಿಂದಲೇ ಇಂದು ಅವರ ಸಂಖ್ಯೆ ಅಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ *ಇಬಾಳಿ* ಎಂಬ ಹೊಸ ಮದ್ಸ್ ಹಬಿನ ಸ್ವಾಧೀನ ಹೆಚ್ಚಿದೆ. ಅವರು ಖವಾರಿಜ್ ಗಳಂತಿರುವ ಒಂದು ವಿಭಾಗ. ನಾಲ್ಕು ಮದ್ಸ್ಹಬನ್ನೂ ಇವರು ವಿರೋಧಿಸುತ್ತಾರೆ. ಕರ್ಮಗಳಲ್ಲಿ ವ್ಯತ್ಯಾಸವಿರುವಂತೆ ವಿಶ್ವಾಸದಲ್ಲೂ ಇವರಿಗೆ ವಿವಿಧ ಅಭಿಪ್ರಾಯಗಳಿವೆ. ಅನೇಕ ಮಸೀದಿಗಳೂ ಇಂದು ಅವರ ಹಿಡಿತದಲ್ಲಿದೆ. ಇಬಾಳಿ ಎಂಬ ವಿಭಾಗವು *ಒಮಾನ್* ಮತ್ತು ದಕ್ಷಿಣಾಫ್ರಿಕಾದ *ಝಂಜಬಾರ್* ಎಂಬಲ್ಲಿ ಮಾತ್ರವಿರುವುದು ಎಂದು ಹೇಳಲಾಗುತ್ತಿದೆ. ಖವಾರಿಜುಗಳು ಭೂಮಿಯಿಂದ ಹೇಳ ಹೆಸರಿಲ್ಲದೆ ಮಾಯವಾದಂತೆ ಅವರ ಅಳಿದುಳಿದ ಅವಶಿಷ್ಟವಾದ ಇವರೂ ಹತ್ತಿರ ಕಾಲದಲ್ಲೇ ಇಲ್ಲಿಂದ ನಾಮಾವಶೇಷವಾಗಲೂ ಬಹುದು. 

ಶಿಯಾಗಳ ದಂಡೂ ಒಮಾನಿನಲ್ಲಿದೆ. ವಿಭಿನ್ನ ವಿಶ್ವಾಸ ಮತ್ತು ವಿಚಿತ್ರ ಕರ್ಮಗಳಿಂದ ಇವರು ಇಸ್ಲಾಮಿಗೇ ಕಳಂಕ ತರುವವರು. ಸಲಾಲದಿಂದ ಮಸ್ಕತ್ತಿಗೆ ಮರಳುವಾಗ ದಾರಿ ಮಧ್ಯೆ ಳುಹ್ರ್ ನಮಾಝ್ ಗಿಳಿದಾಗ ಶಿಯಾಗಳ ನಮಾಝನ್ನು ಕಾಣಲು ಸಾಧ್ಯವಾಗಿತ್ತು. ಔರತ್ ಮುಚ್ಚದ ಚಡ್ಡಿ ಹಾಕಿದ ಕೆಲವರೂ ಅವರಲ್ಲಿದ್ದರು. ಅವರಲ್ಲಿ ನಮಾಝ್ ಎಂಬ ಏನೋ ಕೆಲವು ಕರ್ಮಗಳು. ಕೈಯೆತ್ತಿದ ಬಳಿಕ ಕೈಯೆರಡನ್ನೂ ಕೆಳಗೇ ಬಿಟ್ಟ ರುಕೂಇಗೆ ಮೊದಲು ಎರಡೂ ಕೈಎತ್ತಿ ಏನೋ ದುಆ, ಬಳಿಕ ರುಕೂಅ್, ನಂತರ ನೇರ ಸುಜೂದಿಗೆ ಬೀಳುವುದು. ಸುಜೂದಿನಲ್ಲಿ ಹಣೆಯ ಕೆಳಗೆ ಸಣ್ಣ ಕಲ್ಲೊಂದನ್ನಿಟ್ಟು ಅದರ ಮೇಲೆ ಸುಜೂದ್ ಗೈಯ್ಯುವುದು. ಸುಜೂದಿನಿಂದ ಎದ್ದು ಕುಳಿತು ಎರಡೂ ಕೈಯ್ಯನ್ನು ತೊಡೆಗೆ ತಟ್ಟುವುದು.  ಇಷ್ಟಾದಾಗ ಅವನ ನಮಾಝ್ ಮುಗಿದಿರುತ್ತದೆ. ಏನೋ ಅಲ್ಲಾಹನೇ ಬಲ್ಲ. ಅವರೂ ಮುಸ್ಲಿಮರಂತೆ..!?

ಒಮಾನಿನಲ್ಲಿ ಸುನ್ನಿಗಳೂ ಧಾರಾಳವಿದ್ದಾರೆ. ಅವರ ಕಾರಣದಿಂದಲೇ ಅಲ್ಲಿ ಸುನ್ನೀ ಆಚಾರ ವಿಚಾರಗಳೂ, ವಿಶ್ವಾಸಗಳೂ, ಮಹಾತ್ಮರ ಖಬ್ರ್ಗಳೂ ನೆಲೆನಿಂತಿವೆ. ಇಂದಿನ ಸುಲ್ತಾನ್ ರ ತಾಯಿ ಪಕ್ಕಾ ಸುನ್ನಿಯಾಗಿದ್ದರು. ಅಯ್ಯೂಬ್ ನಬಿಯವರ ಖಬ್ರ್ ಬಳಿ ಬಂದು ಎಷ್ಟೋ ದಿನ ಅವರು ನಿಲ್ಲುತ್ತಿದ್ದರಂತೆ. ಸ್ವಾಲಿಹ್ ನಬಿ(ಅ)ರ ಖಬ್ರ್ ಅವರಿಗೆ ಕನಸು ಬಿದ್ದು ಕಂಡುಹಿಡಿಯಲಾಗಿತ್ತು ಎನ್ನಲಾಗುತ್ತದೆ. ಸುಂದರ ವೇಷಭೂಷಣ ಮತ್ತು ಉತ್ತಮ ಸಂಸ್ಕೃತಿಯಿರುವ ಒಮಾನಿ ಅರಬಿಗಳಲ್ಲಿ ದೀನನ್ನು ಪ್ರೀತಿಸುವ , ಸುನ್ನತ್ ಜಮಾಅತನ್ನು ಕಟ್ಟಿ ಬೆಳೆಸುವ, ಒಮಾನಿಗರ ಮಹತ್ವದ ಬಗ್ಗೆ ಪ್ರವಾದಿಯವರು ಹೇಳಿದ ಮಾತಿನ  ಅಕ್ಷರ ರೂಪಗಳಾದ ಅನೇಕ ಅರಬಿಗಳೂ ಅಲ್ಲಿದ್ದಾರೆ. ಅವರ ಕಾರಣದಿಂದಲೇ ಇಂದು ಒಮಾನ್ ಸಂಘರ್ಷವಿಲ್ಲದ, ಶಾಂತಿಯ, ಸಮೃದ್ಧಿಯ,   ಸೊಬಗಿನ ಭೂಮಿಯಾಗಿ ನೆಲೆ ನಿಂತಿದೆ. ಅಲ್ಲಾಹನು ಒಮಾನ್ ಸಹಿತವಿರುವ ಅರಬ್ ರಾಷ್ಟ್ರಗಳನ್ನೂ, ಮುಸ್ಲಿಮರನ್ನೂ ಸಂರಕ್ಷಿಸಲಿ ಎಂದು ಪ್ರಾರ್ಥಿಸೋಣ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...