ಸಂಚಾರಿಗಳಿಂದ ಮಾಣಿಕ್ಯವೆಂದು ಕರೆಸಿಕೊಂಡ ಸಮರ್‌ಖಂದ್.
ಭಾಗ - 4 (ಕೊನೆಯ ಭಾಗ)
ಮೂಲ: ಇಸ್ಮಾಈಲ್ ಸಅದಿ ಮಾಚಾರ್ ರವರ ಇಫಾದ ಹದೀಸ್ ಕ್ಲಾಸ್ ನಂ -1496.
ಬರಹ ರೂಪಕ್ಕೆ --ಸಲೀಂ ಇರುವಂಬಳ್ಳ.
(ಕೆ.ಜಿ.ಎನ್ ದಅ್‌ವಾ ಕಾಲೇಜು ಮಿತ್ತೂರು)
--------------------------
ಸಮರ್‌ಖಂದಿನಿಂದ ಬಂದ ಸೇವಕ ಉಮರ್‌ಬಿನ್ ಅಬ್ದುಲ್ ಅಝೀಝರಿಂದ ಪತ್ರವನ್ನು ಪಡೆದು ಸಮರ್‌ಖಂದಿನತ್ತ ನಡೆಯುತ್ತಾನೆ. ದಾರಿಯಲ್ಲಿ ಕಂಡವರೆಲ್ಲ ಇವನು ವಿದೇಶಿಗನು ಎಂದು ಹೇಳಿ ಅತಿಥಿ ಸತ್ಕಾರ ಮಾಡುತ್ತಾರೆ.
ಒಂದೊಂದು ಮಸೀದಿಗೆ ತಲುಪಿದಾಗ ಜನರೆಲ್ಲರೂ ಸೇವಕನ ಪರಿಚಯ ಕೇಳುತ್ತಾರೆ. ಮನೆಗೆ ಕರೆದುಕೊಂಡು ಹೋಗುತ್ತಾರೆ. ಹಣವನ್ನು ನೀಡುತ್ತಾರೆ. ಇಸ್ಲಾಮ್ ಧರ್ಮದ ಸೌಂದರ್ಯ, ಸ್ನೇಹ ಕೊಡುಕೊಳ್ಳುವಿಕೆಯನ್ನು ಕಂಡು ಆತ ಸಂತೋಷಗೊಳ್ಳುತ್ತಾನೆ. ಮೊದಲು ಡಮಸ್ಕಸಿಗೆ ಹೋದ ಸೇವಕನಾಗಿರಲಿಲ್ಲ ಹಿಂದಿರುಗಿ ಬರುವಾಗ. ಸೇವಕ ಸಂಪೂರ್ಣ ಬದಲಾಗಿದ್ದ. ತಿಂಗಳುಗಟ್ಟಲೆ ಯಾತ್ರೆಗೈದು
ಸೇವಕ ತನ್ನ ಊರಾದ ಸಮರ್‌ಖಂದಿಗೆ ತಲುಪುತ್ತಾನೆ.
ಈಗ ಸೇವಕನಿಗೇನೂ ಭಯವಿಲ್ಲ. ಡಮಸ್ಕಸಿಗೆ ಹೋದ ನಂತರ ನೈಜ ಜೀವನದ ಕುರಿತು ಸೇವಕನಿಗೆ ಅರಿವಾಗಿದೆ. ಆದರೆ ಜೋತಿಷ್ಯರ ಮುಂದೆ ತಾನು ಇಸ್ಲಾಮಿಗೆ ಆಕರ್ಷಿತವಾದದ್ದು ಹೇಳಲಿಲ್ಲ.
ತಿಂಗಳುಗಟ್ಟಲೆ ಯಾತ್ರೆ ಮಾಡಿ ತಿರುಗಿ ಬಂದ ಸೇವಕನನ್ನು ಕಂಡ ಜೋತಿಷ್ಯರು ಸಂತೋಷಿತರಾಗುತ್ತಾರೆ. ಮತ್ತೆ ಸೇವಕ ತಿರುಗಿ ಬರಲ್ಲ ಎಂದು ಭಾವಿಸಿಕೊಂಡಿದ್ದ ಜೋತಿಷ್ಯರು ಸೇವಕನನ್ನು ಕಂಡು ಸಂತೋಷದಿಂದ ಸ್ವೀಕರಿಸುತ್ತಾರೆ. ಉಮರ್ ಬಿನ್ ಅಬ್ದುಲ್ ಅಝೀಝ್ ರಳಿಯಲ್ಲಾಹು ಅನ್ಹು ರವರು ನೀಡಿದ ಪತ್ರದಲ್ಲಿ ಈ ರೀತಿ ಬರೆಯಲಾಗಿತ್ತು. "ಅಲ್ಲಿಯ ಗವರ್ನರ್ ಒಂದು ಜಡ್ಜನ್ನು ನಿಯೋಗಿಸಬೇಕು. ಆ ಜಡ್ಜ್ ಸಮರ್‌ಖಂದಿನ ಜೋತಿಷ್ಯರು, ಫಾದರ್ಗಳು, ನಾಯಕರನ್ನು ಹಾಗೂ ರಾಜರಾದ ಖುತೈಬತ್ ಬಿನು ಮುಸ್ಲಿಮರನ್ನು ಸೇರಿಸಿ ಅವರ ಸಮಸ್ಯೆಯನ್ನು ಕೇಳಿ ಒಂದು ತೀರ್ಪನ್ನು ಮಂಡಿಸಬೇಕು. ಅದಕ್ಕಾಗಿ ನೀತಿವಂತನಾದ ಖಾಝೀಯನ್ನು ನಿಯೋಗಿಸಬೇಕು. ಆ ವ್ಯಕ್ತಿ ಏನನ್ನು ವಿಧಿಸುತ್ತಾರೋ ಅದನ್ನು ವಿಧಿಯಾಗಿ ಅನುಸರಿಸಬೇಕೆಂದು" ಪತ್ರದಲ್ಲಿ ಬರೆಯಲಾಗಿತ್ತು.
ಹಾಗೆ ಅಲ್ಲಿಯ ಗವರ್ನರ್ ಪತ್ರದಲ್ಲಿನ ಆದೇಶದಂತೆ ಖಾಝಿಯೊಬ್ಬನನ್ನು ನೇಮಿಸುತ್ತಾರೆ. ಅದಕ್ಕಾಗಿ ಒಂದು ದಿನವನ್ನು ಗೊತ್ತುಪಡಿಸುತ್ತಾರೆ. ಎಲ್ಲಾ ಜನರಿಗೂ ವಿಧಿ ನಿರ್ಣಯವಾಗುವ ದಿನವೂ ಬರುತ್ತದೆ. ಆ ಜಡ್ಜಾಗಿದ್ದರು ಮಹಾನರಾದ ಮುಹಮ್ಮದ್ ಬಿನು ವಾಸಿಉಲ್ ಅಝ್ದೀ ರಳಿಯಲ್ಲಾಹು ಅನ್ಹು. ಹಸನುಲ್ ಬಸ್ವರೀ ರಳಿಯಲ್ಲಾಹು ಅನ್ಹು ರವರಿಂದ 'ಝೈನುಲ್ ಖುರ್ರಾಹ್' ಖಾರಿಉಗಳ ಸೌಂದರ್ಯವೆಂದು ವಿಶೇಷಿಸಲ್ಪಟ್ಟ ಮಹಾನರಿವರು. ರಾತ್ರಿಯಿಡೀ ನಮಾಝ್ ಹಾಗೂ ಆರಾಧನೆಯಲ್ಲಿ ನಿರತರಾಗುತ್ತಿದ್ದವರು.
ಖುತೈಬತ್ ಬಿನು ಮುಸ್ಲಿಮರು ಹೇಳುತ್ತಾರೆ " ಮುಹಮ್ಮದ್ ಬಿನು ವಾಸಿಉಲ್ ಅಝ್ದೀ ರಳಿಯಲ್ಲಾಹು ಅನ್ಹು ರವರ ಬೆರಳು ನನಗೆ
ಸಾವಿರ ಧೀರರ ಖಡ್ಗಕ್ಕಿಂತ ಇಷ್ಟ." ಕಾರಣ ಇವರ ಬೆರಳನ್ನು ಅಲ್ಲಾಹನಿಗೆ ಮೊರೆಯಿಟ್ಟು ಎತ್ತಿ ಕೇಳಿದರೆ ಕೂಡಲೇ ಉತ್ತರ ಲಭಿಸುತ್ತಿತ್ತು. ಅನಸ್ ಬಿನ್ ಮಾಲಿಕ್ ರಳಿಯಲ್ಲಾಹು ಅನ್ಹು ರವರಿಂದ ತರ್ಬೀಯತ್ ಸಿಕ್ಕಿದ ಮಹಾನರಿವರು. ಹಿಕ್ಮತಿನ ಮೂಲಕ ನೈಪುಣ್ಯತೆಯನ್ನು ಹೊಂದಿದ್ದರು. ಒಂದು ದಿನ ಒಬ್ಬರು ಬಂದು ಹೇಳುತ್ತಾರೆ
"ನನಗೆ ನೀವು ವಸಿಯತ್ ಮಾಡಿರಿ."
"ನೀನು ಇಹದಲ್ಲೂ ಪರದಲ್ಲೂ ರಾಜನಾಗಬೇಕೆಂದು ವಸಿಯತ್ ಮಾಡುತ್ತಿದ್ದೇನೆ" ಎಂದು ಹೇಳುತ್ತಾರೆ.
"ಅದು ಹೇಗೆ ಸಾಧ್ಯ.?" ಎಂದು ಕೇಳುತ್ತಾರೆ.
"ಇಹಲೋಕದ ಐಶ್ವರ್ಯ ಹಾಗು ಮೋಹಗಳನ್ನು ನೀವು ತ್ಯಜಿಸಿರಿ. ಹಾಗಾದರೆ ತಾವು ಇಹದಲ್ಲೂ ಪರದಲ್ಲೂ ರಾಜರಾಗುತ್ತೀರಿ" ಎಂದು ಹಿಕ್ಮತಿನ ಮೂಲಕವಿರುವ ವಸಿಯತ್ ಮಾಡುತ್ತಾರೆ. ಹೀಗೆ ಹಲವು ಹಿಕ್ಮತನ್ನು ಮಹಾನರು ಹೇಳಿದ್ದಾಗಿ ಚರಿತ್ರೆ ಗ್ರಂಥಗಳಲ್ಲಿ ಕಾಣಲು ಸಾಧ್ಯ.
ಜಡ್ಜಾಗಿ ನಿಯೋಗಿಸಲ್ಪಟ್ಟ ಮುಹಮ್ಮದ್ ಬಿನು ವಾಸಿಉಲ್ ಅಝ್ದೀ ರಳಿಯಲ್ಲಾಹು ಅನ್ಹು ರವರು ತೀರ್ಪನ್ನು ವಿಧಿಸಲು ಹೊರಡುತ್ತಾರೆ. ಜೋತಿಷ್ಯರು, ಫಾದಿರಿಗಳೆಲ್ಲರೂ ಈ ರೀತಿ ಭಾವಿಸುತ್ತಾರೆ ; ಇಷ್ಟು ವರ್ಷ ಆಡಳಿತ ನಡೆಸಿದ ಇವರ ವಿರುದ್ಧ 'ನೀವು ಇಲ್ಲಿಂದ ರಾಜ್ಯ ಬಿಟ್ಟು ಹೊರನಡೆಯಿರಿ' ಎಂಬ ವಿಧಿ ಬರಬಹುದೇ..? ಒಮ್ಮೆಯೂ ಆ ರೀತಿಯ ವಿಧಿ ಬರಲಿಕ್ಕಿಲ್ಲ. ಇವರ ಕೈ ಕೆಳಗೆ ನೀವು ಜೀವಿಸಬೇಕು ಎಂಬ ವಿಧಿ ಬರಬಹುದೇ.? ಖುತೈಬತಿಬ್ನು ಮುಸ್ಲಿಮರ ವಿರುದ್ಧ ಒಮ್ಮೆಯೂ ವಿಧಿ ಬರಲು ಸಾಧ್ಯವಿಲ್ಲ. ಕಾರಣ ಹಲವು ವರ್ಷಗಳ ಕಾಲ ಆಡಳಿತ ನಡೆಸಿದ ರಾಜರಲ್ಲವೇ ಅವರು. ಅವರ ವಿರುದ್ಧವಾಗಿ ವಿಧಿ ಬರಲು ಸಾಧ್ಯವಿಲ್ಲವೆಂದು ಜೋತಿಷ್ಯರು ಭಾವಿಸುತ್ತಾರೆ. ಆದರೆ ಅಲ್ಲಿ ನಡೆಯುವುದು ಬೇರೆಯಾಗಿತ್ತು.
ವಿಧಿ ನಿರ್ಣಯವಾಗುವ ದಿನ ಸಮೀಪಿಸುತ್ತದೆ. ಎಲ್ಲರೂ ಸೇರಿ ತೀರ್ಪಿಗಾಗಿ ಕಾದು ನೋಡುತ್ತಾರೆ. ಆದರೆ ಡಮಸ್ಕಸಿಗೆ ಹೋದ ಸೇವಕನಿಗೆ ಸಂಶಯವಿಲ್ಲ. ಇಲ್ಲಿ ಸತ್ಯವಾದ,ನೈಜ ತೀರ್ಪು ಮಂಡಣೆಯಾಗುತ್ತದೆ. ಊರಿಗೆ ಬೇಕಾದ ತೀರ್ಪು ಇಲ್ಲಿ ವಿಧಿಸಲ್ಪಡುತ್ತದೆ ಎಂದು ಸೇವಕ ಭಾವಿಸುತ್ತಾನೆ. ಮುಸ್ಲಿಮರಿಗೆ ಊರು ಅವರ ಧರ್ಮವಾಗಿದೆ. ಮುಅಝ್ಝಿನ್ ಎಲ್ಲಿ 'ಅಲ್ಲಾಹು ಅಕ್ಬರ್' ಅಂತ ಹೇಳುತ್ತಾನೋ ಅಲ್ಲಿ ಅವರಿಗೆ ನಮಾಝ್ ಮಾಡಬಹುದು. ಅವನಿಗೆ ಪ್ರತ್ಯೇಕವಾದ ಭೂಮಿ ಬೇಕೆಂದಿಲ್ಲ. ಸೇವಕ ಇಲ್ಲಿ ಸತ್ಯ ವಿಧಿಸಲ್ಪಡುತ್ತದೆ ಎಂದು ಹೇಳುತ್ತಾನೆ. ಹೀಗೆ ಎಲ್ಲರೂ ಕಾದು ಕುಳಿತಿರುವಾಗ ಖಾಳಿಯವರ ಆಗಮನವಾಗುತ್ತದೆ. ಆದರೆ ಜಡ್ಜ್ ಜನರು ಭಾವಿಸಿದಂತಿರಲಿಲ್ಲ. ತಲೆಯಲ್ಲಿ ರುಮಾಲು ಸುತ್ತಿದ ಬಡವನಂತೆ ಕಾಣುವ ಶರೀರ ದಪ್ಪಗೇನೂ ಇಲ್ಲದ ವ್ಯಕ್ತಿಯಾಗಿದ್ದರು. ಜನರು ಜಡ್ಜನ್ನು ನೋಡಿ ಆಶ್ಚರ್ಯ ಚಕಿತರಾಗುತ್ತಾರೆ.
ಅಷ್ಟು ದೊಡ್ಡ ಖುತೈಬತ್ ಬಿನು ಮಸ್ಲಿಮ್ ರಾಜರಿಗೆ ವಿಧಿಸುವ ವ್ಯಕ್ತಿ ಇವರೇ.? ಖುತೈಬತ್ ಬಿನು ಮುಸ್ಲಿಮರಿಗೆ ಜಡ್ಜನ್ನು ಸರಿಯಾಗಿ ಪರಿಚಯವಿದೆ. ನ್ಯಾಯಾಧೀಶರು ಎಲ್ಲರನ್ನೂ ಕರೆಯುತ್ತಾರೆ. ಜೋತಿಷ್ಯರು ಹಾಗು ಫಾದಿರಿಗಳು ಜಡ್ಜಿನ ಮುಂದೆ ಕುಳಿತುಕೊಳ್ಳುತ್ತಾರೆ. ಜಡ್ಜ್ ಜೋತಿಷ್ಯರೊಂದಿಗೆ ಕೇಳುತ್ತಾರೆ
"ತಮ್ಮ ಸಮಸ್ಯೆಯೇನು..?" ಆಗ ಜೋತಿಷ್ಯ ಹೇಳುತ್ತಾನೆ
"ಖುತೈಬತ್ ಬಿನು ಮಸ್ಲಿಮ್ ಎಂಬ ಈ ಸೇನಾನಿ ನಮ್ಮನ್ನು ಇಸ್ಲಾಮಿಗೆ ಕರೆಯದೆ ವಂಚನಾತ್ಮಕವಾದ ರೀತಿಯಲ್ಲಿ ಬಂದು ಆಡಳಿತ ನಡೆಸಿದ್ದಾರೆ."
ಜಡ್ಜ್ ಖುತೈಬಾ ರಳಿಯಲ್ಲಾಹು ಅನ್ಹು ರವರೊಂದಿಗೆ ಕೇಳುತ್ತಾರೆ
"ನೀವೇನು ಹೇಳುತ್ತೀರಿ.? "
ಖುತೈಬಾ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ;
"ಖಾಝೌಗೆ ಅಲ್ಲಾಹನು ಒಳಿತನ್ನು ಮಾಡಲಿ."
ಜಡ್ಜ್ ಕೇಳುತ್ತಾರೆ;
"ಆಡಳಿತ ನಡೆಸುವ ಮೊದಲು ಈ ಊರಿನ ಜನರನ್ನು ನೀವು ಇಸ್ಲಾಮ್ ಧರ್ಮಕ್ಕೆ ಕರೆದಿದ್ದೀರಾ..? ಅದಕ್ಕೆ ಸಾಧ್ಯವಿಲ್ಲದಿದ್ದಲ್ಲಿ ತೆರಿಗೆ ಕಟ್ಟಿ ಜೀವಿಸಬೇಕೆಂದು ತಾವು ಅವರೊಂದಿಗೆ ಕೇಳಿದ್ದೀರಾ..? ಅದೂ ಸಾಧ್ಯವಿಲ್ಲದಿದ್ದಾಗವಾಗಿದೆಯೋ ತಾವು ಅವರೊಂದಿಗೆ ಯುದ್ಧಕ್ಕೆ ತೆರಳಿದ್ದು..? ಈ ಮೂರು ನೀತಿಯನ್ನು ತಾವು ಸ್ವೀಕರಿಸಿದ್ದೀರಾ..?"
ಖುತೈಬತ್ ಬಿನು ಮುಸ್ಲಿಮ್ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ;
"ಇಲ್ಲ. ನಾವು ಇದ್ಯಾವುದನ್ನೂ ಅನುಸರಿಸಲಿಲ್ಲ."
ಆಗ ನ್ಯಾಯಾಧೀಶ;
"ಇದ್ಯಾವುದೂ ಇಲ್ಲದೆ ತಾವು ಈ ಊರನ್ನು ವಶಕ್ಕೆ ತೆಗೆದುಕೊಂಡಿದ್ದೀರಿ.. ಈ ರೀತಿಯಾಗಿ ಒಂದು ಊರನ್ನು ವಶಪಡಿಸಲು ಸಾಧ್ಯವಿಲ್ಲ. ನಾವು ಇಸ್ಲಾಮ್ ಧರ್ಮವನ್ನು ಪ್ರಚಾರಮಾಡಲು ಬಂದವರಾಗಿದ್ದೇವೆ. ಆದ್ದರಿಂದ ನನ್ನ ವಿಧಿ 'ಮುಸ್ಲಿಮರು ಈ ಊರು ಬಿಟ್ಟು ತೆರಳಬೇಕು. ಈ ಊರನ್ನು ಅವರಿಗೆ ಬಿಟ್ಟು ಕೊಡಬೇಕು. ನಂತರ ಅವರನ್ನು ಇಸ್ಲಾಮಿಗೆ ಕರೆಯಬೇಕಾದದ್ದು' ಇದಾಗಿದೆ ನನ್ನ ತೀರ್ಪು' ಎಂದು ಜಡ್ಜ್ ಹೇಳುತ್ತಾರೆ. ಸುಬ್'ಹಾನಲ್ಲಾಹ್ ಚರಿತ್ರೆಯಲ್ಲಿ ಒಂದು ಬಾರಿ ಮಾತ್ರ ನಡೆದ ಅತುಲ್ಯವಾದ ವಿಧಿಯಿದು.
ಮುಸ್ಲಿಮರು ಇಷ್ಟು ವರ್ಷ ಆಡಳಿತ ನಡೆಸಿದ ಊರಿನಿಂದ ಹೊರನಡೆಯಬೇಕು ಎಂದಾಗಿದೆ ಹೇಳುತ್ತಿರುವುದು. ಜೋತಿಷ್ಯರಿಗೆ, ಫಾದಿರಿಗಳಿಗೆ, ಸಮರ್'ಖಂದಿನ ಜನರಿಗೆ ಈ ವಿಧಿಯನ್ನು ನಂಬಲು ಅಸಾಧ್ಯವಾಯಿತು. ನಾವೇನು ಕೇಳುತ್ತಿರುವುದು. ಇದು ಸರಿಯೇ..? ಇನ್ನೂ ಏನಾದರು ವಿಧಿಸಲು ಬಾಕಿಯಿದೆಯೇ.?
ಇಲ್ಲ ವಿಧಿ ಅದುವೇ ಆಗಿತ್ತು.
ಈ ವಿಧಿಯಿಂದ ಹಲವರು ಇಸ್ಲಾಮಿಗೆ ಆಕರ್ಷಿತರಾದರು.
ಈ ಧರ್ಮ ಎಲ್ಲರ ಹೃದಯಕ್ಕೆ ಪ್ರಕಾಶವನ್ನು ನೀಡುತ್ತಿದೆ. ಇಸ್ಲಾಮ್ ಧರ್ಮದ ನೈಜ ಆದರ್ಶಗಳನ್ನು ಅವರು ಅನುಭವಿಸುತ್ತಾರೆ. ತಮ್ಮ ಧರ್ಮಕ್ಕೆ ಮರಳಿ ಹೋಗಲ್ಲವೆಂದು ತೀರ್ಮಾನಿಸುತ್ತಾರೆ. ಈ ಧರ್ಮ ವಿಶಾಲವಾದದ್ದು. ಸಮರ್‌ಖಂದಿನ ಧರ್ಮ ವಿನಾಶದಂಚಿನಲ್ಲಿದೆ. ಕೆಲ ಸಮಯದ ನಂತರ ಶಬ್ದವೊಂದನ್ನು ಕೇಳುತ್ತಾರೆ. ನೋಡುವಾಗ ಮುಸ್ಲಿಮರು ಊರು ಬಿಟ್ಟು ತೆರಳುತ್ತಿದ್ದಾರೆ. ಅಷ್ಟು ದೊಡ್ಡ ಅಧಿಕಾರವಿರುವ ಮುಸ್ಲಿಮರಾಗಿದೆ ಊರು ಬಿಟ್ಟು ನಡೆಯುತ್ತಿರುವುದು. ಸಮರ್'ಖಂದಿನ ಸೇವಕ ಹೇಳುತ್ತಾನೆ "ನಾನು ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದೇನೆ." ಜೋತಿಷ್ಯರು, ಫಾದಿರಿಗಳು, ಅಲ್ಲಿನ ಪ್ರಜೆಗಳು ಇಸ್ಲಾಮ್ ಧರ್ಮವನ್ನು ಸ್ವೀಕರಿಸುತ್ತಾರೆ.
ಊರ ಬಿಟ್ಟು ತೆರಳುತ್ತಿರುವ ಮುಸ್ಲಿಮರನ್ನು ಮತ್ತೆ ಅವರೆಡೆಗೆ ಕರೆಯುತ್ತಾರೆ. ಸಮರ್‌ಖಂದಿನಾದ್ಯಂತ ತಕ್ಬೀರ್ ಮೊಳಗುತ್ತದೆ. ಊರಿಡೀ ಸಂತೋಷದ ವಾತಾವರಣ ಸೃಷ್ಟಿಯಾಗುತ್ತದೆ. ಮುಸ್ಲಿಮ್ ಸೈನ್ಯ ಮರಳಿ ಊರಿಗೆ ಬರುತ್ತದೆ. ನಂತರ ಅವರೆಡೆಯಲ್ಲಿ ಬೇಧ-ಭಾವವಿಲ್ಲ. ಅವರೆಲ್ಲರೂ ಅಲ್ಲಾಹನಲ್ಲಿ ಸಹೋದರರಾಗುತ್ತಾರೆ. ಈಗ ಅವರೆಡೆಯಲ್ಲಿ ಸವರ್ಣ-ಅವರ್ಣನೆಂಬ ಭಾವನೆಯಿಲ್ಲ. ಮೇಲು ಕೀಲು, ಶ್ರೀಮಂತ-ಬಡವನೆಂಬ ಭಾವನೆಯಿಲ್ಲ. ಎಲ್ಲರೂ ಸಮಾನರೆಂಬ ಭಾವನೆಯಿಂದ ಜೀವಿಸುತ್ತಾರೆ. ಅಲ್ಲಿ ಬೆಲೆ ಇರುವುದು ತಕ್ವಾ, ಒಳಿತು, ಸತ್ಕಾರ್ಯಕ್ಕಾಗಿದೆ. ಸಮರ್‌ಖಂದ್ ರಾಜ್ಯವಿಡೀ ಮುಸ್ಲಿಮ್ ರಾಜ್ಯವಾಗಿ ಮಾರ್ಪಾಡಾಗುತ್ತದೆ. ಹೀಗೆ ಅತುಲ್ಯವಾದ ವಿಧಿಗೆ ಸಾಕ್ಷಿಯಾದ ಊರು ಸಮರ್‌ಖಂದ್. ಆ ಪ್ರಕಾಶವನ್ನು ಜಗತ್ತಿನಾದ್ಯಂದ ಸಮರ್‌ಖಂದ್ ಇಂದಿಗೂ ತೋರಿಸುತ್ತಿರುವುದು. ಇಸ್ಲಾಮ್ ಎಂದೂ ನ್ಯಾಯದ ಪರ ಇರುವ ಧರ್ಮವಾಗಿದೆ. ಈ ಸತ್ಯ, ನ್ಯಾಯವನ್ನು ಕಂಡು ಇಸ್ಲಾಮ್ ಧರ್ಮಕ್ಕೆ ಕೋಟಿಗಟ್ಟಲೆ ಜನರು ಆಕರ್ಷಿತರಾದದ್ದು. ಹೀಗೆ ಮಾದರೀ ಯೋಗ್ಯ ಜನರನ್ನಾಗಿದೆ ಇಸ್ಲಾಮ್ ಧರ್ಮದಲ್ಲಿ ಕಾಣ ಸಿಗುವುದು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿಕೊಟ್ಟ ಸಂದೇಶವನ್ನು ಅನುಸರಿಸಿ ಜೀವಿಸಲು ಹಾಗು ನೈಜ ಇಸ್ಲಾಮನ್ನು ಕಲಿಯಲು ಅಲ್ಲಾಹನು ಕರುಣಿಸಲಿ...ಆಮೀನ್
-ಮುಗಿಯಿತು...


Comments