Skip to main content

ತಾಜುಲ್ ಉಲಮಾ ಖ.ಸಿ ರೊಂದಿಗಿನ ಸಂದರ್ಶನ


ಇದು 1999ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ನಡೆದ ಘಟನೆ. ಇಡೀ ಜಗತ್ತೇ ನೂತನ ಸಹಸ್ರಮಾನವನ್ನು ಕಾತರದಿಂದ, ಸಂಭ್ರಮದಿಂದ ಎದುರು ನೋಡುತ್ತಿದ್ದ ಸಮಯವದು. ಕಂಪ್ಯೂಟರ್, ಇಂಟರ್ನೆಟ್, ವೆಬ್ ನಮ್ಮ ದೈನಂದಿನ ಬದುಕಿಗೆ ಲಗ್ಗೆಯಿಡಲು ಹೊಂಚುಹಾಕಿ ಹವಣಿಸುತ್ತಿದ್ದ ಕಾಲಘಟ್ಟ. ನನ್ನ ಕೆಲವೊಂದು ಆಪ್ತಮಿತ್ರರು ಜೊತೆ ಸೇರಿ, ನನ್ನನ್ನೂ ಸೇರಿಸಿಕೊಂಡು ಆಗ ತಾನೇ ಪ್ರಾಯೋಗಿಕವಾಗಿ ಪ್ರಾರಂಭಿಸಿದ್ದ ಇಂಟರ್ನೆಟ್ ಮಾಧ್ಯಮವೊಂದರ ಮೂಲಕ ಬಿತ್ತರಿಸಲು ನೂತನ ಸಹಸ್ರಮಾನದ ಸಂದೇಶಕ್ಕಾಗಿ ಜಿಲ್ಲೆಯ ವಿವಿಧ ಧರ್ಮಗಳ ಪ್ರಧಾನ ಧರ್ಮಗುರುಗಳನ್ನು ಸಂಪರ್ಕಿಸುವ ಅಭಿಯಾನವನ್ನು ಆರಂಭಿಸಿದ್ದರು. ಇಸ್ಲಾಂ ಧರ್ಮದ ಪರವಾಗಿ ಸಂದೇಶ ಕೊಡಬೇಕಾಗಿದ್ದ, ಆಗಿನ ಮಂಗಳೂರಿನ ಖಾಝಿಯಾಗಿದ್ದ ಮರಹೂಮ್ ಕೋಟ ಅಬ್ದುಲ್ ಖಾದರ್ ಮುಸ್ಲಿಯಾರ್‌ರವರು ಉಮ್ರಾ ಯಾತ್ರೆಯಲ್ಲಿದ್ದಾರೆಂದು ತಿಳಿದು ಬಂದುದರಿಂದ ಅವರ ಬದಲಿಗೆ ಉಳ್ಳಾಲದ ಖಾಝಿಯಾಗಿದ್ದ ಮರಹೂಮ್ ಸೈಯ್ಯದ್ ಅಬ್ದುಲ್ ರಹ್‌ಮಾನ್ ಬುಖಾರಿ ತಂಙಲ್ ರವರ ಸಂದೇಶ ಪಡಕೊಳ್ಳುವುದೆಂದು ತೀರ್ಮಾನಿಸಿದ್ದೆವು. ಆದರೆ, ’ಬೆಕ್ಕಿಗೆ ಗಂಟೆ ಕಟ್ಟುವವರಾರು’ ಎಂಬ ಪ್ರಶ್ನೆ ಎದುರಾಯಿತು. ಏಕೆಂದರೆ, ಸಾಮಾನ್ಯವಾಗಿ ನಮ್ಮ ನಡುವೆ ಪ್ರಚಲಿತವಿದ್ದ ವದಂತಿಯಂತೆ ಉಳ್ಳಾಲದ ಖಾಝಿಯವರು ಮಹಾ ಕೋಪಿಸ್ಠ, ಗರ್ವಿ ಮತ್ತು ಇಂತಹ ಬೇಡಿಕೆಗಳಿಗೆ ಸಾಮಾನ್ಯವಾಗಿ ಸ್ಪಂದಿಸದವರು. ಕಡೆಗೂ, ಅಳೆದೂ ತೂಗಿ ಅವರ ಭೇಟಿಗೆ ಒಂದು ಸಮಯವನ್ನು ನಿಗದಿಪಡಿಸುವ ಜವಾಬ್ದಾರಿಯನ್ನು ನನಗೆ ಹೊರಿಸಲಾಯಿತು. ಅದರಂತೆ, ನಾನು ನನಗೊಂದಿಷ್ಟು ಪರಿಚಿತರಾಗಿದ್ದ, ಅಂದು ಉಳ್ಳಾಲ ಸೈಯ್ಯದ್ ಮದನಿ ದರ್ಗಾದ ಅಧ್ಯಕ್ಷರಾಗಿದ್ದ ದಿವಂಗತ ಇಬ್ರಾಹೀಮ್ ಹಾಜಿಯವರಿಗೊಂದು ಕರೆಮಾಡಿ, ಉದ್ದೇಶ ತಿಳಿಸಿ, ಮಾನ್ಯ ತಂಙಲ್‌ರವರ ಒಂದು ಸಂದರ್ಶನಕ್ಕೆ ಅವಕಾಶ ಮಾಡಿ ಕೊಡಬೇಕೆಂದು ವಿನಂತಿಸಿದೆ. ಕೂಡಲೇ ಒಪ್ಪದ ಅವರು ಒಂದಿಷ್ಟು ಸಮಜಾಯಿಕೆಯ ನಂತರ ಮರುದಿನ ಸಂಜೆಯ (ಅಸರ್) ನಮಾಜಿಗೆ ಸರಿಯಾಗಿ ಉಳ್ಳಾಲ ದರ್ಗಾ ಮಸೀದಿಗೆ ಬರುವಂತೆ ತಿಳಿಸಿದರು. ಸಾಮಾನ್ಯವಾಗಿ ತಂಙಲ್‌ರವರು ನಮಾಜು ಮುಗಿದ ನಂತರ ಒಂದು ಹತ್ತು ನಿಮಿಷ ಮಸೀದಿಯಲ್ಲಿ ಕುಳಿತಿರುತ್ತಿದ್ದು, ಅದರೊಳಗೆ ನಮ್ಮ ಸಂದರ್ಶನ ಮುಗಿಸಬೇಕೆಂದೂ, ಬರಲು ಒಂದೈದು ನಿಮಿಷ ತಡವಾದರೂ ಅವರನ್ನು ಮತ್ತೆ ಕಾಣಲು ಅಸಾಧ್ಯವಾದ್ದರಿಂದ ಕ್ಲಪ್ತ ಸಮಯಕ್ಕೆ ಸರಿಯಾಗಿ ಬಂದು ತಲುಪಬೇಕೆಂದೂ ಎಚ್ಚರಿಸಿದ್ದರು.


ಅದರಂತೆ ಮರುದಿನ ಅಸರ್ ನಮಾಜಿಗೆ ಸುಮಾರು ಮುಕ್ಕಾಲು ಗಂಟೆ ಮುಂಚಿತವಾಗಿಯೇ ನಾವು ನಾಲ್ಕು ಜನ, ಅಂದರೆ, ಹಿರಿಯ ವಿದ್ವಾಂಸ ಮೌಲವಿ ಅಬುಲ್ ಹಸನ್, ಕೃಷಿ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ ಡಾ. ಫಝಲ್, ಪ್ರಸ್ತುತ ಗ್ಲೋಬಲ್ ಟಿ.ವಿ. ಯ ಮುಖ್ಯಸ್ಥರಾಗಿರುವ ಎನ್. ವಿ. ಪಾವ್ಲೋಸ್ ಮತ್ತು ನಾನು, ನನ್ನ ಕಾರಿನಲ್ಲೇ ಉಳ್ಳಾಲಕ್ಕೆ ಹೊರಟೆವು. ಮಂಗಳೂರಿನಿಂದ ಉಳ್ಳಾಲಕ್ಕೆ ಹೆಚ್ಚೆಂದರೆ ಹದಿನೈದು ನಿಮಿಷಗಳ ದಾರಿ. ಇನ್ನೇನು ಉಳ್ಳಾಲ ಸಂಕ ಸಮೀಪಿಸಿತೆನ್ನುವಷ್ಟರಲ್ಲಿ ದುರದೃಷ್ಟವಶಾತ್ ನಮ್ಮ ಕಾರಿನ ಚಕ್ರ ಕೈಕೊಟ್ಟಿತು. ಯಾವತ್ತೂ ಕಾರಿನ ಡಿಕ್ಕಿಯಲ್ಲಿರುತ್ತಿದ್ದ ಸ್ಟೆಪ್ನಿ ಟಯರೂ ಅಂದು ಕಾಣೆ. ಅಂತೂ, ಇಂತೂ ಟಯರು ಸರಿ ಪಡಿಸಿ ಉಳ್ಳಾಲ ಮಸೀದಿಗೆ ಬಂದು ತಲುಪಿದಾಗ ಅಸರ್ ನಮಾಜು ಮುಗಿದು ತಂಙಲ್‌ರವರು ಹೊರಟು ತಮ್ಮ ಕೋಣೆ ಸೇರಿಯಾಗಿತ್ತು. ಮಸೀದಿಯ ಬಾಗಿಲಲ್ಲೇ ನಿಂತಿದ್ದ ಇಬ್ರಾಹಿಮ್ ಹಾಜಿ ಸಾಹೇಬರು ನಮ್ಮನ್ನು ಕಂಡವರೇ ಕೆಂಡಮಂಡಲವಾಗಿ, ನಮಗೆ ಬಾಯಿ ತೆರೆಯಲೂ ಅವಕಾಶಕೊಡದೆ ಸಾಕಷ್ಟು ನಮ್ಮನ್ನು ಜಾಲಾಡಿದರು. ಅವರೊಂದಿಷ್ಟು ಸಮಾಧಾನವಾದಂತೆ ಕಂಡ ನಂತರ, ನಾವು ಬರಲು ತಡವಾದ ಕಾರಣ ತಿಳಿಸಿ, ತಂಙಲ್‌ರವರನ್ನು ಅವರ ಕೋಣೆಯಲ್ಲಿ ಕಾಣಲು ಸಾಧ್ಯವೇ ಎಂದು ವಿಚಾರಿಸಿದಾಗ ಅವರು "ನಿಮಗೆ ಗೊತ್ತಿಲ್ಲ, ಕೋಣೆಯ ಬಾಗಿಲು ತಟ್ಟಿದರೆ ಅವರು ನಿಮ್ಮನ್ನು ಸಿಗಿದು ಹಾಕಿಯಾರು" ಎಂದು ಹೇಳಿ, ಜಾಗ ಕಾಲಿಮಾಡಿ ಎಂಬಂತೆ ಕಣ್ಣಿನಲ್ಲೇ ಸಂಜ್ಞೆಯನ್ನೂ ಮಾಡಿದರು. "ಸರಿ, ನಾವು ನಮಾಜು ಮುಗಿಸಿ ಹಿಂದೆ ಹೋಗುತ್ತೇವೆ, ಇನ್ನೊಮ್ಮೆ ನಿಮ್ಮೊಡನೆ ಕೇಳಿ ಬರುತ್ತೇವೆಂದು ಹೇಳಿ" ಅವರ ಉತ್ತರಕ್ಕೂ ಕಾಯದೆ, ಮಿತ್ರ ಪಾವ್ಲೋಸರನ್ನು ಅಲ್ಲಿಯೇ ಬಿಟ್ಟು ನಾವು ಮೂವರು ಮಸೀದಿಯ ಒಳಗೆ ಹೋದೆವು. ನಮಾಜು ಮುಗಿಸಿ ಹೊರಗೆ ಬರುವಾಗ ಅಧ್ಯಕ್ಷ ಸಾಹೇಬರು ಹೋಗಿಯಾಗಿತ್ತು. ನಾನಾಗಲೇ ನಿಶ್ಚಯಿಸಿದ್ದೆ- ಏನು ಬೇಕಾದರೂ ಆಗಲಿ, ಅವರು ಬಯ್ಯಲಿ, ಹೊಡೆಯಲಿ ಅಥವಾ ಹಾಜೀ ಸಾಹೇಬರು ಹೇಳಿದಂತೆ ಸಿಗಿದೇ ಹಾಕಲಿ, ನಾನಂತೂ ಇಂದು ತಂಙಲ್‌ರವನ್ನು ಕಂಡೇ ಹೋಗುವುದೆಂದು. ನಾನಿದ್ದನ್ನು ನನ್ನ ತಂಡಕ್ಕೆ ತಿಳಿಸಿದಾಗ ಅವರು ಒಂದಿಷ್ಟು ಅರ್ಧ ಮನಸ್ಸಿನಿಂದಲೇ ಒಪ್ಪಿದರು. ಮಸೀದಿಯಿಂದ ಸುಮಾರು 20 ಅಡಿ ದೂರದಲ್ಲಿ ತಂಙಲ್‌ರವರ ವಿಶ್ರಾಂತಿ ಗೃಹ. ಅಬುಲ್ ಹಸನ್ ರವರನ್ನು ಮುಂದಿಟ್ಟು ಕೊಂಡು ಹೋಗಿ, ನಾನು ಮೆಲ್ಲನೆ ಕೋಣೆಯ ಕದ ತಟ್ಟಿದೆ. ಎರಡನೇ ಬಾರಿ ತಟ್ಟಿದಾಗ ’ಯಾರದು?’ಎಂದು ಕೇಳುತ್ತಾ ಸ್ವತಃ ತಂಙಲ್ ರವರೇ ಬಂದು ಕದ ತೆರೆದರು. ನೀವು ಯಾರು, ಏತಕ್ಕೆ ಬಂದಿದ್ದೀರಿ ಎಂದೇನೂ ವಿಚಾರಿಸದೆ ’ಬನ್ನಿ ಒಳಗೆ’ ಎಂದು ಆತ್ಮೀಯವಾಗಿಯೇ ಒಳಗೆ ಕರೆದರು. ಇದು ನಮ್ಮೆಲ್ಲರ ನಿರೀಕ್ಷೆಗೆ ವಿರುದ್ದವಾದ ಮೊದಲ ಆಶ್ಚರ್ಯ.

ನಾವು ಅವರ ಕೋಣೆಯ ಒಳಗೆ ಕಾಲಿಟ್ಟು, ಕೋಣೆಯನ್ನೊಮ್ಮೆ ಅವಲೋಕಿಸಿದಾಗ ನಾನು ಬೆರಗಾಗಿ ಹೋದೆ. ಹವಾ ನಿಯಂತ್ರಿತ ಕೋಣೆಯ ಹಂಸತೂಲಕಲ್ಪದ  ಮೇಲೆ, ಮಕ್ಮಲ್ ಬಟ್ಟೆಯಿಂದ ಹೊದೆದ ದಪ್ಪದ ಉಣ್ಣೆಯ ಹಾಸಿಗೆಯಲ್ಲಿ ವಿರಾಜಮಾನರಾಗಿ ಕೈಗೊಬ್ಬ, ಕಾಲಿಗೊಬ್ಬ ಆಳುಗಳೊಂದಿಗೆ ಸುಖದ ಸುಪ್ಪತ್ತಿಗೆಯಲ್ಲಿ ಬದುಕುತ್ತಿದ್ದಾರೆಂದು ಅವರ ವಿರೋಧಿಗಳಾದ ನನ್ನ ಕೆಲವು ಮಿತ್ರರಿಂದ ನಾನು ಕೇಳಿ ತಿಳಿದಿದ್ದಆ ತಂಙಲ್ ಎಲ್ಲಿ? ಇಲ್ಲಿ ಅತ್ಯಂತ ಸಾಮಾನ್ಯವಾದ ಒಂದು ಕೋಣೆಯ ಸಣ್ಣ ಹೊರ ಚಾವಡಿಯಲ್ಲಿ, ನೆಲದಲ್ಲಿ ಚಾಪೆ ಹಾಕಿ, ಹಾಸಿಗೆಯೂ ಅಲ್ಲದ ಒಂದು ದಪ್ಪ ಚದ್ದರ ಹಾಸಿ, ತನ್ನ ತಲೆ ಭಾಗ ಮತ್ತುಅಕ್ಕ ಪಕ್ಕ ತುಂಬಾ ಬೃಹತ್ ಗ್ರಂಥಗಳ ರಾಶಿಯನ್ನೇ ಹರಡಿ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬದುಕುತ್ತಿರುವ ಈ ಮಹಾನ್ ವಿದ್ವಾಂಸರೆಲ್ಲಿ? ಒಳಗಿನ ಕೋಣೆಯತ್ತ ನಾನು ದೃಷ್ಟಿ ಹಾಯಿಸಿದಾಗ ಅಲ್ಲೊಂದು ಮಂಚವೇನೋ ಇತ್ತು, ಆದರೆ ಅದರ ಮೇಲೆದ್ದ ಹಳೆಯ ಪೆಟ್ಟಿಗೆಗಳು, ಸಾಮಾನುಗಳ ರಾಶಿ ಆ ಮಂಚವನ್ನು ಕನಿಷ್ಠ ಒಂದು ದಶಕದಿಂದಾದರೂ ಯಾರೂ ಉಪಯೋಗಿಸಿಲ್ಲವೆಂದು ಸಾಕ್ಷಿ ಹೇಳುವಂತಿತ್ತು.

"ನಿಮಗೆ ನೆಲದಲ್ಲಿ ಚಾಪೆಯ ಮೇಲೆ ಕುಳಿತು ಕೊಳ್ಳುವ ಅಭ್ಯಾಸವಿದೆಯೋ ಅಥವಾ ಕುರ್ಚಿ ತರಿಸಲೋ" ಎಂದು ಕೇಳಿದ ತಂಙಲ್ ರವರ ಮಾತು ನನ್ನನ್ನು ಮತ್ತೆ ವಾಸ್ತವ ಲೋಕಕ್ಕೆ ಎಳೆದು ತಂದಿತು. ನಾವು ಅಭ್ಯಾಸವಿದೆಯೆಂದು ಹೇಳಿ ಅವರ ಚಾಪೆಯ ಸುತ್ತ ನೆಲದಲ್ಲಿಯೇ ಮತ್ತೊಂದು ಚಾಪೆ ಹಾಸಿ ಕುಳಿತು ಕೊಂಡೆವು. "ಈಗ ನಿಮ್ಮ ಪರಿಚಯ ಮತ್ತು ನೀವು ಇಲ್ಲಿಗೆ ಬಂದ ಉದ್ದೇಶ ಹೇಳಿ." ತಂಙಲ್ ಆದೇಶಿಸಿದರು. ಮೌಲವಿ ಅಬುಲ್ ಹಸನ್ ಪ್ರಥಮವಾಗಿ ತಮ್ಮನ್ನು ಪರಿಚಯಿಸಿ ಆ ಮೇಲೆ ಸಂಕ್ಷಿಪ್ತವಾಗಿ ನಮ್ಮ ಉಳಿದ ಮೂವರ ಪರಿಚಯ ಮಾಡಿ ಮುಗಿಸಿದರು. ಅಬುಲ್ ಹಸನ್‌ರವರು ನನ್ನ ಪರಿಚಯ ಮಾಡುವಾಗ. ನನ್ನ ದಿವಂಗತ ತಂದೆ ಮತ್ತು ತಂಙಲ್‌ರವರಿಗಿದ್ದ ಸಂಬಂಧದ ಅರಿವು ನನಗಿದ್ದ ಕಾರಣ, ನಾನು ಉದ್ದೇಶಪೂರ್ವಕವಾಗಿಯೇ ನನ್ನ ತಂದೆಯವರ ಹೆಸರನ್ನು ಅಲ್ಲಿ ಪ್ರಸ್ಥಾಪಿಸಲಿಲ್ಲ.

ಇನ್ನು ಕೆಲವೇ ದಿನಗಳಲ್ಲಿ ಹೊಸ ಸಹಸ್ರಮಾನ ಆರಂಭವಾಗಲಿರುವುದರಿಂದ ಇಂಟರ್ನೆಟ್‌ನಲ್ಲಿ, ಇತರ ಧರ್ಮಗಳ ವಿದ್ವಾಂಸರ ಜೊತೆ ಮಾನ್ಯ ತಂಙಲ್ ರವರ ಸಂದೇಶವನ್ನೂ ಬಿತ್ತರಿಸಲು ನಾವು ಉದ್ದೇಶಿಸಿ ಅವರ ಬಳಿಗೆ ಬಂದಿರುವುದಾಗಿ  ಅಬುಲ್ ಹಸನ್‌ರವರು ನಾವು ಬಂದಿರುವ ಉದ್ದೇಶ ವಿವರಿಸಿದರು. ನಮ್ಮ ಮಾತನ್ನು ಕಿವಿಗೊಟ್ಟು ಆಲಿಸಿದ ತಂಙಲ್ ರವರು- "ನೀವೆಲ್ಲಾ ಬುದ್ಧಿವಂತರು. ಹೊಸ ತಲೆಮಾರಿನವರು. ನನಗೆ ಕಂಪ್ಯೂಟರ್, ಇಂಟರ್ನೆಟ್ ಬಗ್ಗೆ ಜ್ಞಾನವಾದರೂ ಎಲ್ಲಿದೆ? ಅದರಲ್ಲೂ ಇಂಟರ್ನೆಟ್ ಅಂದರೆ ಬಾಹ್ಯಾಕಾಶದಲ್ಲಿ ನಿಲ್ಲಿಸಿರುವ ಒಂದು ಅಗೋಚರ ಪೆಟ್ಟಿಗೆಯಲ್ಲವೇ? ಲೋಕದ ಯಾವ ಮೂಲೆಯಲ್ಲಿ ಕುಳಿತು ಯಾರು,ಯಾವಾಗ ಬೇಕಾದರೂ ತೆರೆದು ಓದಬಹುದಾದ ಒಂದು ಸಾಧನವಲ್ಲವೇ? ಅದರಲ್ಲಿ ದಾಖಲಾದ ನನ್ನ ಸಂದೇಶ ನಮ್ಮದೇ ನಡುವೆಯಿರುವ ಹಲವಾರು ವಿಭಿನ್ನ ಪಂಗಡಗಳ ವಿದ್ವಾಂಸರುಗಳಿಗೆ ಒಂದು ವೇಳೆ ಅಪಥ್ಯವಾದರೆ, ಮತ್ತಷ್ಟು ಒಡಕಿಗೆ ಕಾರಣವಾಗಲಾರದೇ ಎಂದು ನನಗೆ ಭಯವಿದೆ.." ಎಂದು ಹೇಳಿ ಆ ಹಿರಿಯ ಜೀವ ಒಂದು ಕ್ಷಣ ಮೌನವಾಯಿತು. ಮತ್ತೆ ಮಾತು ಮುಂದುವರಿಸಿದ ಅವರು, ಅಬುಲ್ ಹಸನರನ್ನು ಉದ್ದೇಶಿಸಿ, "ಸರಿ ಹೇಗೂ ಬಂದಿದ್ದೀರಿ, ಬರೆದುಕೊಳ್ಳಿ" ಎಂದು ಹೇಳಿ ತನ್ನ ಸಂದೇಶ ಹೇಳಲಾರಂಭಿಸಿದರು.

(ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ ತಂಙಲ್ ರವರು ಅಂದು ಜಗತ್ತಿಗೆ ಕೊಟ್ಟ ಕಿರು ಸಂದೇಶ ನನಗೆ ನೆನಪಿರುವಷ್ಟು ಮಟ್ಟಿಗೆ ಈ ಕೆಳಗೆ ನಾನು ದಾಖಲಿಸಿದ್ದೇನೆ.)

"ಮನುಷ್ಯನು ಯಾವುದೇ ಧರ್ಮಕ್ಕೆ ಸೇರಿದವನಾಗಿರಲಿ, ಅವನು ತನ್ನ ಧರ್ಮವನ್ನು ಅರಿಯುವಷ್ಟೇ ಮುಖ್ಯವಾಗಿ ಮನುಷ್ಯ ಧರ್ಮವನ್ನೂ, ತನ್ನ ಸುತ್ತಮುತ್ತಲಿನ ಸಮಾಜವನ್ನೂ ಅರಿತಿರಬೇಕು. ಮನುಷ್ಯನು ಮನುಷ್ಯನಾಗಿ ಬದುಕುವುದು, ತನ್ನ ನೆರೆಕೆರೆಯವರೊಂದಿಗೆ ಬೆರೆತು ಶಾಂತಿ ಮತ್ತು ಸೌಹಾರ್ಧತೆಯೊಂದಿಗೆ ಬದುಕಿ ಬಾಳುವುದು ಮನುಷ್ಯ ಧರ್ಮ ಮಾತ್ರವಲ್ಲ ಕಾಲದ ಬೇಡಿಕೆಯೂ ಆಗಿದೆ. ನಾವೆಲ್ಲಾ ಒಬ್ಬ ದೇವನ ಸೃಷ್ಟಿಗಳಾದ್ದೇವೆ. ನಮ್ಮಲ್ಲಿ ಯಾರೂ ಮೇಲು-ಕೀಳೆಂಬುವುದಿಲ್ಲ. ಸತ್ಯವನ್ನು ಅರಿತು, ಸತ್ಯಮಾರ್ಗದಲ್ಲಿ ಬದುಕಿ, ಇಲ್ಲಿಂದ ತೆರಳುವವನೇ ನಿಜವಾದ ವಿಜಯಶಾಲಿ. ಹೊಸ ಸಹಸ್ರಮಾನ ಜಗತ್ತಿನ ಸಮಸ್ಥ ಮಾನವಕೋಟಿಗೆ ಶಾಂತಿ ಸಮೃದ್ಧಿಯನ್ನು ನೀಡಲಿ. ಅಲ್ಲಾಹನು ನಮ್ಮೆಲ್ಲರನ್ನೂ ಅನುಗ್ರಹಿಸಲಿ."

ತಂಙಲ್ ರವರು ಮಳಯಾಲದಲ್ಲಿ ಹೇಳಿದ್ದನ್ನುಅಬುಲ್ ಹಸನ್‌ರವರು ಕನ್ನಡದಲ್ಲಿ ಬರೆದು ಕೊಂಡರು. ಅದನ್ನುಅವರಿಂದ ಕೇಳಿ ಪಡೆದ ತಂಙಲ್‌ರವರು, ಕನ್ನಡ ಬಲ್ಲ ತನ್ನ ಶಿಷ್ಯನೊಬ್ಬನನ್ನು ಕರೆದು ಓದಿ ಕೇಳಿಸಿ, ಅದರ ಕೊನೆಯಲ್ಲಿ ತನ್ನ ಸಹಿಯನ್ನು ಹಾಕಿದರು ಮತ್ತು ಅದರ ಒಂದು ಪ್ರತಿಯನ್ನು ತಮಗೆ ತಲುಪಿಸಿಕೊಡುವಂತೆ ಕೇಳಿಕೊಂಡರು.

ಸಂದೇಶವೇನೋ ದೊರಕಿತು. ಈಗ ನಮಗೆ ಅವರ ಒಂದು ಭಾವಚಿತ್ರ ಬೇಕಾಗಿತ್ತು. ಅವರೊಡನೆ ಕೇಳಿದಾಗ ಅಲ್ಲಿಯೇ ಇದ್ದ ಕೆಲವು ಹಳೆಯ ಪೆಟ್ಟಿಗೆಗಳನ್ನು ತೋರಿಸಿ- ನೋಡಿ, ಇದಾವುದೋ ಒಂದು ಪೆಟ್ಟಿಗೆಯಲ್ಲಿ ನಾನು ಕಳೆದ ವರ್ಷ ಕೈರೋ ಸಮ್ಮೇಳನಕ್ಕೆ ಹೋದಾಗ ತೆಗೆದ ಒಂದು ಫೋಟೋ ಇದೆ. ಅದು ಚೆನ್ನಾಗಿತ್ತು. ನೀವು ಹುಡುಕಿ ತೆಗೆದು ನನಗೆ ತೋರಿಸಿರಿ’  ಎಂದು ಅವರು ಹೇಳಿದ್ದೇ ತಡ, ನಾವು ಮೂವರೂ ಅಜ್ಜನ ಪೆಟ್ಟಿಗೆಯನ್ನು ಅಧಿಕಾರಯುತವಾಗಿ ಮುತ್ತಿ ಜಪ್ತಿ ಮಾಡುವ ಮಕ್ಕಳಂತೆ ಪೆಟ್ಟಿಗೆ ತೆರೆದು ಹುಡುಕಾಡತೊಡಗಿದೆವು. ನಾನು ತೆರೆದದ್ದು ಒಂದು ಹಳೇ ಕಾಲದ ದೊಡ್ಡದಾದ ಪೆಟ್ಟಿಗೆ. ಅದರಲ್ಲಿ ತುಂಬಾ ಕಂದು, ಬಿಳಿ, ಕಾಕಿ ಬಣ್ಣದ ಕವರುಗಳು. ಆ ಕವರುಗಳಲ್ಲಿ 5, 10, 20, 50, 100 ರ ನೋಟುಗಳು. ನಾನು ಆಶ್ಚರ್ಯದಿಂದ ಕಣ್ಣಗಲಿಸಿ ಇದೇನೆಂದು ಕೇಳಿದಾಗ ತಂಙಲ್ ರವರು ಹೇಳಿದ್ದು- "ನಾನು ಮದುವೆ, ಮುಂಜಿ  ಮುಂತಾದ ಸಮಾರಂಭಗಳಿಗೆ ಹೋದಾಗ, ಜನರು ನನಗೆ ಪ್ರೀತಿಯಿಂದ ಕಾಣಿಕೆ ಕೊಡುತ್ತಾರೆ. ನಿರಾಕರಿಸಿದರೆ ಅವರು ನೊಂದುಕೊಳ್ಳುತ್ತಾರೆ. ಅದಕ್ಕಾಗಿ ನಾನದನ್ನು ತೆಗೆದು ತಂದು ಈ ಪೆಟ್ಟಿಗೆಯಲ್ಲಿ ಹಾಕಿಡುತ್ತೇನೆ."

ಕೊನೆಗೂ ಕೈರೋ ಸಮ್ಮೇಳನದ ಪ್ರತಿನಿಧಿ ಭಾವಚಿತ್ರ ನಮಗೆ ಸಿಕ್ಕಿತು. ಅವರಂದಂತೆ ನಿಜಕ್ಕೂ ಆ ಭಾವಚಿತ್ರ ಸುಂದರವಾಗಿತ್ತು. ನಮ್ಮ ಕೆಲಸ ಮುಗಿದ ಕೂ್ಡಲೇ ಆ ಚಿತ್ರ ಮತ್ತು ತಾವು ಸಹಿ ಹಾಕಿರುವ ಆ ಸಂದೇಶ ಪತ್ರದ ಪ್ರತಿಯೊಂದನ್ನು ತಮಗೆ ತಲುಪಿಸಬೇಕೆಂದು ಮತ್ತೊಮ್ಮೆ ನಮಗೆ ನೆನಪಿಸಲಿಕ್ಕೆ ಅವರು ಮರೆಯಲಿಲ್ಲ.

ನಮಗೆ ಗೊತ್ತಿಲ್ಲದೆಯೇ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಆ ಮಹಾತ್ಮರ ಜತೆ ನಾವು ಕಳೆದಿದ್ದೆವು. ಈಗ ಅಲ್ಲಿ ಗಾಂಭಿರ್ಯತೆಯ ಜಾಗದಲ್ಲಿ ಆತ್ಮೀಯತೆ ನೆಲೆಸಿತ್ತು. ಇದೀಗ ಸಂಪೂರ್ಣ ಸಂತೃಪ್ತರಾಗಿ ಹೊರಡುವ ಸಮಯ. ಹೊರಡಲು ಅವರ ಅನುಮತಿ ಯಾಚಿಸಿದಾಗ ನಮ್ಮ ಜೊತೆ ಅವರೂ ಎದ್ದು ನಿಂತರು. ಪ್ರತಿಯೊಬ್ಬರ ತಲೆ ಸವರಿ ಓದಿ ಊದಿ ಹರಸಿದರು, ನನ್ನ ಸರದಿ ಬಂದಾಗ ನಾನು ಅವರ ಕಿವಿಯಲ್ಲಿ ಮೆಲ್ಲನೆ ಉಸುರಿದೆ- "ತಂಙಲೇ, ನಾನು ಬಜಪೆಯ ಬಾವಾ ಅಬ್ದುಲ್ ಖಾದರ್‌ ಹಾಜೀಯವರ ಮಗ.." ನಾನು ಇಷ್ಟು ಹೇಳಿದ್ದೇ ತಡ ಕಣ್ಣ್ರರಳಿಸಿ ಕೇಳಿದರು- "ಏನು? ನೀನು ಬಜಪೆಯ ಕಂಟ್ರಾಕ್ಟರ್ ಬಾವಾನ ಮಗನೇ?" ಒಂದು ಕ್ಷಣ ಮೌನವಾಗಿ ಮತ್ತೆ ಮುಂದುವರಿಸಿ ಹೇಳಿದರು- "ಬಾವಾ ನನ್ನ ಆತ್ಮೀಯ ಗೆಳೆಯ. ನನಗಿಂತ ಪ್ರಾಯದಲ್ಲಿ ಸಣ್ಣವ. ನಾವಿಬ್ಬರೂ ಒಟ್ಟಿಗೆ ಕಿತಾಬು ಓದಿದವರು. ಉಳ್ಳಾಲಕ್ಕೆ ಬಂದಾಗಲೆಲ್ಲಾ ನನ್ನನ್ನು ಬಂದು ಕಾಣುತ್ತಿದ್ದ, ಖುತುಬ್ ಮಹಮ್ಮದ್ ಮುಸ್ಲಿಯಾರ್ ಬಂದಿದ್ದಾಗ ನಾನು ನಿಮ್ಮ ಮನೆಗೆ ಬಂದಿದ್ದೆ. ಅವನು ಹೋಗಿ ಹತ್ತು ವರುಷವಾಗಿರಬೇಕಲ್ಲಾ?" (ನನ್ನ ತಂದೆಯವರು ನಿಧನರಾದದ್ದು1990ನೇ ಇಸವಿಯಲ್ಲಿ) ಮಾತನಾಡುತ್ತಿದ್ದಂತೆಯೇ ಭಾವುಕರಾದರು. ನನ್ನನ್ನು ಆಲಿಂಗಿಸಿಕೊಂಡರು. ಅವರ ಮುಖ ನನ್ನ ಬಲ ಭುಜದ ಮೇಲಿತ್ತು. ನನ್ನ ಭುಜ ಒಂದಿಷ್ಟು ಒದ್ದೆಯಾದಂತೆ ಭಾಸವಾಯಿತು. ಹೌದು, ಅವರ ಕಣ್ಣುಗಳು ಹನಿಗೂಡಿದ್ದವು. ನನ್ನದು ಕೂಡಾ.

ಆ ನಂತರ ಮಾನ್ಯ ತಂಙಲ್ ರವರು ಸುಮಾರು 15 ವರ್ಷಗಳ ಕಾಲ ಬದುಕಿದ್ದರೂ ನಾನು ಮತ್ತೆಂದೂ ಅವರನ್ನು ಭೇಟಿಯಾಗುವ ಪ್ರಯತ್ನ ಮಾಡಲಿಲ್ಲ, ಏಕೆಂದರೆ, ನಾನಂದು ಹೃದಯದಲ್ಲಿ ತುಂಬಿಕೊಂಡ ಉಳ್ಳಾಲದ ನಿಜವಾದ ’ಸಂತ’ನ ಆ ಮುಗ್ಧ, ಅತ್ಮೀಯ ಚಿತ್ರವನ್ನು ಯಾವುದೇ ಕಾರಣಕ್ಕೆ ಕಳೆದು ಕೊಳ್ಳಲು ನಾನು ಸಿದ್ಧನಿರಲಿಲ್ಲ. ಮಾನ್ಯ ಗುರುವರ್ಯರೇ, ತಮ್ಮನ್ನು ನಾನು ನನ್ನ ಹೃದಯದಲ್ಲಿ ಕೊನೆಯವರೆಗೂ ಅದೇ ರೀತಿ ಉಳಿಸಿಕೊಳ್ಳುತ್ತೇನೆ. ಅಲ್ಲಾಹನು ತಮಗೆ ಸ್ವರ್ಗದಲ್ಲಿ ಅತ್ಯುನ್ನತ ಸ್ಥಾನವನ್ನು ಕರುಣಿಸಿ ಗೌರವಿಸಲಿ.


Raheem Teekay writes...

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...