ಶತಮಾನ ಕಂಡ ಶ್ರೇಷ್ಟ ವ್ಯಕ್ತಿತ್ವ, ಜ್ಞಾನ ತರಂಗಗಳನ್ನೆಬ್ಬಿಸಿದ ಸಮುದ್ಧಾರಕ, ಆ ಪಾವನ ಬದುಕೇ ಮಾರ್ಗದರ್ಶಿ, ಆ ಚಿಂತನೆಗಳೇ ನೂರಾರು ವಿದ್ವಾಂಸರ ಹುಟ್ಟು. ಅವರೊಬ್ಬ ಕೇವಲ ವಿದ್ವಾಂಸ ಮಾತ್ರವಲ್ಲ. ಕನ್ನಡ ಮಣ್ಣಿಗೆ ಸಮನ್ವಯ ಶಿಕ್ಷಣ ಪರಿಚಯಿಸಿದ ಶಿಕ್ಷಣ ತಜ್ಞ. ಅನಾಥರ ಪೋಷಕ. ನವ ಚಿಂತನೆಯ ಹರಿಕಾರ. ಸೌಮ್ಯತನದಿಂದ ಸದ್ದು ಮಾಡಿದ ಗುರು. ವಿನಯದಿಂದಲೇ ವಿಜಯಕ್ಕೇರಿದ ಧೀಮಂತ ಪುರುಷ. ಸಾಮಾನ್ಯನಿಗೂ ಸಾಧ್ಯವಿಲ್ಲದ ಸಾಧನೆಯನ್ನು ಮಾಡಿ ತೋರಿಸಿದ ಯಶಸ್ವೀ ನಾಯಕ. ಹಲವಾರು ಪ್ರಥಮಗಳಿಗೆ ಮುನ್ನುಡಿ ಬರೆದ ಸರದಾರ. ಸುನ್ನೀ ಸಮಾಜದ ಧೀರ ಶಕ್ತಿ. ದಾರುಲ್ ಇರ್ಷಾದ್ ಎಂಬ ಸುಜ್ಞಾನ ಸೌಧದ ಸಾರಥಿ. ಅವರಿಗೆ ಪರ್ಯಾಯ ವ್ಯಕ್ತಿಯಿಲ್ಲ. ಅವರಿಗೆ ಅವರೇ ಸಾಟಿ..!!
ಸುನ್ನೀ ಜಗತ್ತನ್ನು ತನ್ನ ಜ್ಞಾನ ಪ್ರಭೆಯಿಂದ ಪ್ರಭರಗೊಳಿಸಿದ ಶತಮಾನದ ಪ್ರಭೆ. ಝೈನುಲ್ ಉಲಮಾರ ಬದುಕಿಗೊಂದು ಅಕ್ಷರದ ಮೆಲುಕು.
ಪಕ್ಕದ ಕೇರಳದಲ್ಲಿ ಬಹುಮುಖ ವಿದ್ಯಾಕೇಂದ್ರಗಳು ತಲೆಯೆತ್ತಿ ಹಲವು ದಶಕಗಳೇ ಕಳೆದರೂ ಕರ್ನಾಟಕದಲ್ಲಿ ಮಾತ್ರ ವಿದ್ಯಾಕೇಂದ್ರಗಳು ಮದ್ರಸಾ ಹಾಗೂ ಪಳ್ಳಿದರ್ಸ್‌ಗೆ ಸೀಮಿತವಾಗಿದ್ದವು. ಗಣನೀಯವಾಗಿ ಹೆಚ್ಚುತ್ತಿರುವ ಲೌಕಿಕ ವ್ಯಾಮೋಹದಿಂದ ಸಾಕಷ್ಟು ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳನ್ನು ನೆಚ್ಚಿಕೊಂಡು ಧಾರ್ಮಿಕ ಶಿಕ್ಷಣಕ್ಕೆ ಬೆನ್ನು ತೂರಿಸುತ್ತಿದ್ದರು. ಇನ್ನೊಂದೆಡೆ ಧಾರ್ಮಿಕ ಶಿಕ್ಷಣಕ್ಕೆ ಮಾತ್ರ ಒಲವು ತೋರಿ ಲೌಕಿಕ ಜ್ಞಾನ ತೀರಾ ಇಲ್ಲದೆ ನಿರ್ಲಕ್ಷ್ಯಕ್ಕೊಳಗಾಗುವ ಅಪಾಯವಿತ್ತು. ಮತ್ತೊಂದೆಡೆ ಶಿಕ್ಷಣವೂ ಇಲ್ಲದೆ, ಸೂಕ್ತ ಪೋಷಣೆಯೂ ಸಿಗದೆ ಬೀದಿ ಸಂಸ್ಕೃತಿಗೆ ಪಾಲಾಗುತ್ತಿದ್ದರು. ಇದೆಲ್ಲವನ್ನೂ ಮನಗಂಡು 1990 ಮಾರ್ಚ್ 11 ಸ್ವಗ್ರಹದಲ್ಲಿ ನಡೆಸಿಕೊಂಡು ಬರುತ್ತಿದ್ದ 'ಜಲಾಲಿಯ್ಯ ರಾತೀಬ್' ಎಂಬ ಆಧ್ಯಾತ್ಮಿಕ ಮಜ್ಲಿಸ್‌ನಲ್ಲಿ ದಾರುಲ್ ಇರ್ಷಾದ್‌ಗೆ ಹೊಸ ರೂಪು ನೀಡಿ, ಶೈಕ್ಷಣಿಕ ಕ್ರಾಂತಿಗೆ ಮುನ್ನುಡಿ ಬರೆಯಲಾಯಿತು.
ಅರಿವಿನ ಅಕ್ಷಯ ನಿಧಿ, ಹಿರಿಯ ವಿದ್ವಾಂಸ, ಅಪಾರ ಪಾಂಡಿತ್ಯ ಹಾಗೂ ವಿದ್ವಾಂಸರ ಸೌಂದರ್ಯವೆಂದು ಖ್ಯಾತಿವೆತ್ತ ಉಸ್ತಾದ್, ಮಾಣಿ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಚ್ಚಂಪಾಡಿ ಉಸ್ತಾದ್) ಕರುನಾಡ ಜನತೆಗೆ ಸುಪರಿಚಿತ ನಾಮ. ವಿನಯದ ತುಂಬು ಕೊಡವಾದ ಉಸ್ತಾದ್ ಮೂರು ದಶಕಗಳ ಮುನ್ನ ಸಣ್ಣದೊಂದು ವಿದ್ಯಾಕೇಂದ್ರಕ್ಕೆ ಅಡಿಗಲ್ಲು ಹಾಕಿದರು. ಅದು ಉಮ್ಮುಲ್ ಮಆಹಿದ್ (ಸಂಸ್ಥೆಗಳ ತಾಯಿ) ಎಂದು ವಿಶೇಷ ನಾಮದೊಂದಿಗೆ ಕರ್ನಾಟಕದಾದ್ಯಂತ ಹರಡಿತು. ಅದನ್ನು ಕಟ್ಟಿ ಬೆಳೆಸಿದ ಕೀರ್ತಿ ಶೈಖುನಾರಿಗೆ ಸಲ್ಲುತ್ತದೆ. ಶೈಖುನಾ ಕಳೆದ ಆರು ದಶಕಗಳಿಂದ ದರ್ಸ್ ರಂಗದಲ್ಲಿ ಕಾರ್ಯೋನ್ಮತರಾದವರು. ಅದಲ್ಲದೆ ಹಲವು ಶಿಷ್ಯರನ್ನು ಸಮಾಜಕ್ಕರ್ಪಿಸಿ ಧನ್ಯರಾದ ಶ್ರೇಷ್ಠ ವ್ಯಕ್ತಿತ್ವ.
ಕಳೆದೆರಡ್ಮೂರು ದಶಕದ ಆದಿ ಅಂತ್ಯಗಳಲ್ಲಿ ಯತೀಂ ಖಾನಗಳು ಹುಟ್ಟಿ ಬೆಳೆಯುತ್ತಿದ್ದ ಸಂದರ್ಭದಲ್ಲಿ ತಂದೆ ತಾಯಂದಿರಿದ್ದರೂ ಅನಾಥತ್ವದ ಛಾಯೆಯಿರುವ ಮಕ್ಕಳನ್ನು ಒಂದುಗೂಡಿಸಿ 'ದಾರುಲ್ ಮಸಾಕೀನ್' ಎಂಬ ಸಂಸ್ಥೆಯನ್ನು ಕನ್ನಡಿಗರಿಗರ್ಪಿಸಿದ್ದು ಜೊತೆಗೆ ಗುಣಮಟ್ಟ ರೆಗ್ಯುಲರ್ ದಅವಾ ಕಾಲೇಜು ಕೂಡಾ ಪ್ರಾರಂಭಿಸಿದರು.
ಹೀಗೆ ಕನ್ನಡ ಮಣ್ಣಿನಲ್ಲಿ ಹಲವು ಮುನ್ನುಡಿಗಳ ಸರಮಾಲೆಯನ್ನೇ ಬರೆದ ಸರದಾರನಿಗೆ ಕೊಲ್ಲಿ ರಾಷ್ಟ್ರಗಳಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಕಲ್ಚರ್ ಫೌಂಡೇಶನ್ (KCF) ಪ್ರಪ್ರಥಮ ತಾಜುಲ್ ಉಲಮಾ ಅವಾರ್ಡ್‌ಗೆ ಆರಿಸಿದ್ದು ಶೈಖುನಾ ಮಾಣಿ ಉಸ್ತಾದರ ಅರ್ಹತೆಗೆ ಸಂದ ಗೌರವವೇ ಸರಿ.
ಬಾಲ್ಯ ಜೀವನ:
ಅಂದು 1945 ಮೇ ತಿಂಗಳ ಒಂದು ಶುಕ್ರವಾರದ ಸುಪ್ರಭಾತ ಸಮಯ, ತಾಯಿ ಪೆರುವಾಯಿ ಮುಹ್ಯುದ್ದೀನರ ಪುತ್ರಿ ಆಸಿಯಮ್ಮ ಬಂಟ್ವಾಳ ತಾಲೂಕಿನ ಬಡೋಳಿ ಸಮೀಪದಲ್ಲಿ ಪಂಡಿತ ಶ್ರೇಷ್ಟರಿಗೆ ಜನ್ಮ ನೀಡಿದರು. ತಂದೆ ಪರ್ತಿಪ್ಪಾಡಿ ಅಬ್ದುಲ್ಲಾ ವಿದ್ವಾಂಸನಲ್ಲದಿದ್ದರೂ ಜ್ಞಾನವನ್ನು ಪ್ರೀತಿಸುವ ಸಾಮಾನ್ಯ ವ್ಯಕ್ತಿ. ಮನೆಯಲ್ಲಿ ತಿಂಗಳಿಗೊಮ್ಮೆ ಮಜ್ಲಿಸ್‌ಗಳನ್ನು ಏರ್ಪಡಿಸುತ್ತಿದ್ದರು. ರಮಳಾನ್, ರಬೀಉಲ್ ಅವ್ವಲ್ ನಂತಹ ಪವಿತ್ರ ಮಾಸಗಳಲ್ಲಿ ಬೃಹತ್ ಮೌಲಿದ್ ಕಾರ್ಯಕ್ರಮ ನಡೆಸುತ್ತಿದ್ದದ್ದು ಮಗುವಿಗೆ ಹೆಚ್ಚು ಆಧ್ಯಾತ್ಮಿಕತೆಗೆ ಒತ್ತು ನೀಡಿದವು.
ಹೆತ್ತವರಿಗೆ ಹೆಚ್ಚಿನ ಶಿಕ್ಷಣವಿರಲಿಲ್ಲ. ಆದರೂ ವಿದ್ವಾಂಸರೊಂದಿಗೆ ವಿಶೇಷ ಕಾಳಜಿ. ಅಂದಿನ ಖ್ಯಾತ ವಿದ್ವಾಂಸ ಸಯ್ಯಿದ್ ಪೂಕುಂಞಿ ತಂಙಳ್ ಮಗುವಿಗೆ 'ಅಬ್ದುಲ್ ಹಮೀದ್' ಎಂದು ಹೆಸರಿಡಲು ಸೂಚಿಸಿ ವಿದ್ವಾಂಸನಾಗಿ ಬೆಳೆಸುವಂತೆ ಸಲಹೆ ನೀಡಿದರು. ಮಹಾನುಭಾವರ ಮಾತಿನ ಅನ್ವರ್ಥವೆಂಬಂತೆ ಇಂದು ಶೈಖುನಾ ನಮ್ಮ ಮುಂದೆ ಜ್ವಲಿಸಿ ನಿಂತಿದ್ದಾರೆ.
ಶೈಖುನಾರಿಗೆ ವಿದ್ಯಾರ್ಥಿ ಜೀವನದಲ್ಲಿ ಆರ್ಥಿಕತೆ ಪ್ರಮುಖ ಸಮಸ್ಯೆಯಾಗಿತ್ತು. ಮನೆಯಲ್ಲಿ ಪರಿಸ್ಥಿತಿ ಸ್ವಲ್ಪ ಜಟಿಲವಾಗಿತ್ತು. ಪ್ರತೀ ಶುಕ್ರವಾರ ಮತ ಪ್ರವಚನಕ್ಕೆ ಹೋಗಿ ಸಿಕ್ಕಿದ ಪುಡಿಗಾಸಿನಿಂದ ಅಗತ್ಯ ಗ್ರಂಥಗಳನ್ನು ಖರೀದಿಸುತ್ತಿದ್ದರು. ಊರಿಗೆ ಬಂದರೆ ಹಿಂದಿರುಗಲು ಹಣವಿರುತ್ತಿರಲಿಲ್ಲ.! ಆಗ ತಾಯಿ ತನ್ನ ಬೆಳ್ಳಿಯ ಸೊಂಟಪಟ್ಟಿಯನ್ನು ಹಿಂದೂ ಸಹೋದರನ ಮನೆಯಲ್ಲಿ ಅಡವಿಟ್ಟು ಉಸ್ತಾದರಿಗೆ ಹಣ ಪೂರೈಸುತ್ತಿದ್ದರು. ಹೀಗೆ ಹಲವು ಬಾರಿ ಅಡವಿಟ್ಟ ಚರಿತ್ರೆಯಿದೆ. ಅದನ್ನು ತಂದೆ ಕೂಲಿ ಕೆಲಸದಿಂದ ತೀರಿಸುತ್ತಿದ್ದರು. ಇದು ಉಸ್ತಾದರ ಕಲಿಕೆಗಲ್ಲದೆ ಇನ್ನಾವುದಕ್ಕೂ ಅಡವಿಡಲಿಲ್ಲವೆನ್ನುವುದು ಗಮನಾರ್ಹ.
ದರ್ಸ್ ಜೀವನ;
ಹುಟ್ಟೂರು ಬುಡೋಳಿಯಿಂದ ಮಾಣಿ ಸಮೀಪದ ಹಳೀರಕ್ಕೆ ಕುಟುಂಬ ವರ್ಗಾವಣೆಗೊಂಡವು. ಅಂದು ಶೈಖುನಾ ಆರು ತಿಂಗಳ ಪುಟ್ಟ ಮಗು. ಉತ್ತಮ ವಾತಾವರಣದಲ್ಲಿ ತಾಯಿ ಮಗನನ್ನು ಬೆಳೆಸುತ್ತಾರೆ. ಬಳಿಕ ಮಾಣಿ ಸರ್ಕಾರಿ ಶಾಲೆಗೆ ಸೇರಿದರು. ಮಾಣಿಯ ಆಜು ಬಾಜಿನಲ್ಲಿ ಮದ್ರಸಾ ಇರಲಿಲ್ಲ. ಶಾಲಾ ರಜಾ ದಿನಗಳಲ್ಲಿ ಸೂರಿಕುಮೇರು ಮಸೀದಿಯ ಅಧ್ಯಾಪಕರಾಗಿದ್ದ ಬೋಳಂತೂರು ಅಬ್ದುಲ್ಲಾ ಮುಸ್ಲಿಯಾರರ ಬಳಿ ಕಲಿಯುತ್ತಿದ್ದರು. ಧಾರ್ಮಿಕ ವಿದ್ಯಾಭ್ಯಾಸದಲ್ಲಿ ತುಂಬು ಉತ್ಸಾಹ ಮನಗಂಡ ಶಿಷ್ಯನನ್ನು ಏಳನೇ ತರಗತಿಯ ಬಳಿಕ ಮನೆಯಿಂದ ಆರೇಳು ಕಿಲೋಮೀಟರ್ ದೂರವಿರುವ ಮಿತ್ತೂರಿನ ಹಳೇ ಜುಮಾ ಮಸೀದಿಯ ಅಧೀನದಲ್ಲಿದ್ದ 'ನೂರುಲ್ ಇಸ್ಲಾಂ' ಮದ್ರಸಾಗೆ ಸೇರಿಸಿದರು.
ಅಂದು 'ಅಬ್ಬು ಮುಕ್ರಿಕ' ಎಂಬ ನಾಮದಿಂದ ಅರಿಯಲ್ಪಟ್ಟ ಮರ್ಹೂಂ ಕೋಯಮ್ಮ ಹಾಜಿ ಪ್ರಧಾನ ಗುರು. ನೂರುಲ್ ಇಸ್ಲಾಮಿನಲ್ಲಿ ಎರಡು ವರ್ಷ ಪಠಣ ಪೂರ್ತಿಗೊಳಿಸಿದಾಗ ಅಲ್ಲಿ 'ಅಶ್‌ರತುಲ್ ಕಿತಾಬ್ (ಪತ್ತ್ ಕಿತಾಬ್)' ಸಂಪೂರ್ಣವಾಗಿ ಪಠಿಸಿದರು. ಅಲ್ಲಿಯ ಪಠಣ ಪೂರ್ಣಗೊಂಡ ಬಳಿಕ ಜ್ಞಾನದ ಜಿಜ್ಞಾಸೆ ತೀರಿಸಲೋಸ್ಕರ ಮಂಜನಾಡಿ ಸಿ.ಪಿ ಮುಹಮ್ಮದ್ ಕುಂಞಿ (ಸಿ.ಪಿ ಉಸ್ತಾದ್) ಯ ಬಳಿಗೆ ತೆರಳುತ್ತಾರೆ. ಅಂದು ಶೈಖುನಾ ಹದಿನಾರು ವಯಸ್ಸಿನ ಬಾಲಕ. ಭಾರೀ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಮೂರು ಹೊತ್ತು ಊಟ ಮಾಡಲು ಪ್ರತ್ಯೇಕ ಮೂರು ಮನೆಗೆ ಹೋಗಬೇಕಿತ್ತು. ಸರಿಸುಮಾರು ದಿನಂಪ್ರತಿ ಐದಾರು ಕಿಲೋಮೀಟರ್ ನಡೆದಾಡುತ್ತಿದ್ದರು. ಅದಲ್ಲದೆ ಕೈಯಲ್ಲಿ ಕಾಸೂ ಇಲ್ಲ, ಟಾರ್ಚೂ ಇಲ್ಲ. ಸ್ನೇಹಿತನ ಟಾರ್ಚ್ ಬೆಳಕಿನಿಂದ ರಾತ್ರಿ ಹೊತ್ತಿನ ಊಟಕ್ಕಾಗಿ ಹೋಗುತ್ತಿದ್ದದ್ದು ಶೈಖುನಾ ಇಂದೂ ಸ್ಮರಿಸುತ್ತಾರೆ. ಇನ್ನು ನಿದ್ದೆ ಮಾಡಲೋ ತಲೆದಿಂಬು, ಹಾಸಿಗೆಯಿಲ್ಲ. ಹರುಕು ಮುರುಕಾದ ಚಾಪೆಯಲ್ಲೇ ಐದು ವರ್ಷದ ಜೀವನ.
ಸಿ.ಪಿ ಉಸ್ತಾದರ 'ಬಸ್ತಾನುಲ್ ಊಲುಂ' ದರ್ಸಿಗೆ ಸೇರಿದ ಉಸ್ತಾದರ ಜ್ಞಾನದಾಹ ನಿಲ್ಲದೆ, ವರ್ಧಿಸಿದವು. ಇದು ಶೈಖುನಾರ ಜೀವನದಲ್ಲಿ ಹೊಸ ತಿರುವು ಪಡೆದವು. ಕಾಕತಾಳೀಯವಾಗಿ ಪಿತೃ ವಿಯೋಗದಿಂದ ಮಂಜನಾಡಿಯ ಐದು ವರ್ಷದ ಜ್ಞಾನ ಪಯಣಕ್ಕೆ ತೆರೆ ಬಿದ್ದವು. ದರ್ಸ್ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾದವು. ಕುಟುಂಬದ ಹೊರೆ ಬಿದ್ದ ಪರಿಣಾಮವಾಗಿ ಮಂಜನಾಡಿಯಲ್ಲಿ ದರ್ಸ್ ಬಿಡಬೇಕಾಯಿತು. ಆದರೂ ಜ್ಞಾನದಾಹ ನೀಗಲಿಲ್ಲ!
ಮನೆಗೆ ಆಗಾಗ್ಗೆ ಬರಬೇಕಾದುದರಿಂದಲೂ ತಮ್ಮನ ಆರೋಗ್ಯವೂ ಸರಿಯಿರಲಿಲ್ಲ ಇದಕ್ಕಾಗಿ ಉಸ್ತಾದರೊಂದಿಗೆ ಸಮ್ಮತಿ ಕೇಳಿ, ಮಂಜನಾಡಿಯಲ್ಲಿ ದರ್ಸ್ ತ್ಯಜಿಸಿದರು. ಹತ್ತಿರದಲ್ಲಿ ಅನ್ವೇಷಿಸಿದಾಗ ಸಜಿಪದಲ್ಲಿ ದರ್ಸ್ ನಡೆಯುತ್ತಿದೆ ಎನ್ನುವಾಗ ಅಲ್ಲಿ ಸೇರಿದರು. ಅಂದು ಸೂಫಿವರ್ಯರಾಗಿದ್ದ ಚೆರ್ವತ್ತೂರು ಅಬ್ದುಲ್ಲಾ ಮುಸ್ಲಿಯಾರ್ (ಸಜಿಪ ಉಸ್ತಾದ್) ಅಲ್ಲಿನ ಮುದರ್ರಿಸ್. ಇದಕ್ಕೂ ಮುನ್ನ ಮಂಜನಾಡಿಯಲ್ಲಿ ಕಲಿಯುತ್ತಿದ್ದಾಗ ಸಜಿಪ ಉಸ್ತಾದರ ಭೇಟಿಯಿಂದ ಆಕರ್ಷಿತರಾಗಿದ್ದರು. ಅಲ್ಲಿ ಸಿ.ಪಿ ಉಸ್ತಾದರಿಗೆ ಪತ್ರ ಬರೆದು ತನ್ನ ಇಂಗಿತ ಹೇಳಿದಾಗ ಅವರು 'ಹ್ಹೋ ಅಬ್ದುಲ್ಲಾರ ದರ್ಸಿನಲ್ಲೋ..!' ಎಂದು ಹೇಳಿದರು. ಸಜಿಪದಲ್ಲಿ ಒಂದು ವರ್ಷ ಅಧ್ಯಯನ ಮಾಡುತ್ತಾರೆ. ಬಳಿಕ ಮಂಗಳೂರು ಖಾಝಿಯಾಗಿದ್ದ ಕೋಟ ಅಬ್ದುಲ್ ಖಾದಿರ್ ಮುಸ್ಲಿಯಾರರ ಬಳಿ. ಅಲ್ಲಿ ಎರಡು ವರ್ಷದ ಅಧ್ಯಯನದ ಬಳಿಕ ಉಳ್ಳಾಲಕ್ಕೆ ಜ್ಞಾನ ನೌಕೆ ತಿರುಗುತ್ತದೆ.
ಅಂದು ಕರಾವಳಿ ಭಾಗದ ಉಳ್ಳಾಲದಲ್ಲಿ ತಾಜುಲ್ ಉಲಮಾ ಉಳ್ಳಾಲ ತಂಙಳರ ನೇತೃತ್ವದ ಪ್ರಖ್ಯಾತ ದರ್ಸ್‌ಗೆ ಉಸ್ತಾದ್ ಸೇರ್ಪಡೆಯಾಗುತ್ತಾರೆ. ಕಂಝುಲ್ ಊಲೂಂ ಎಂಬ ಹೆಸರಿನಲ್ಲಿ ಸುಪ್ರಸಿದ್ಧಗೊಂಡ ದರ್ಸ್, ಕಾಲೇಜಾಗಿ ವಿಸ್ತರಿಸಲಿಲ್ಲ. ಅಲ್ಲಿ ಮೂರು ವರ್ಷಗಳ ಅಧ್ಯಯನ.
ವಿದ್ಯಾರ್ಥಿಯಾಗಿಯೂ ಖತೀಬ್ಆಗಿಯೂ;
ಶುಕ್ರವಾರ ಪ್ರವಚನದಿಂದ ಸಿಗುತ್ತಿದ್ದ ಒಂದು ರುಪಾಯಿ ಒಂದು ವಾರದ ಖರ್ಚಿಗೆ ಬರುತ್ತಿತ್ತು. ಕೆಲವೊಮ್ಮೆ ಹಣ ಸಿಗುತ್ತಿರಲಿಲ್ಲ. ಶೈಖುನಾ ಉಳ್ಳಾಲದಲ್ಲಿ ಕಲಿಯುತ್ತಿದ್ದ ಸಮಯದಲ್ಲೇ ಮನೆ ಬೀಳುವಷ್ಟರ ಮಟ್ಟಿಗೆ ತಲುಪಿದ್ದವು. ದುಡಿಯಲು ಜನವಿಲ್ಲ. ಕೊನೆಗೆ ಫಜೀರಿನಲ್ಲಿ ಖತೀಬ್ ಆಗಿ ನಿಲ್ಲುವೆ ಎಂದಾಗ ತಾಜುಲ್ ಉಲಮಾ ಸಮ್ಮತಿಸಿದರು. ಹಾಗೆಯೇ ವಿದ್ಯಾರ್ಥಿಯಾಗಿದ್ದುಕೊಂಡೇ ಅಲ್ಲಿ ಖತೀಬ್ ಹುದ್ದೆ ವಹಿಸಿಕೊಂಡರು. ಶೈಖುನಾರ ನಡೆ ನುಡಿ ಜನರ ಮನ ಸೂರೆಗೊಂಡವು. ಶೈಖುನಾ ವಿಷಯ ಪ್ರಸ್ತಾಪಿಸಿದಾಗ ಖುದ್ದಾಗಿ ನಾಡಿನ ಜನತೆ ಬಂದು ಉಸ್ತಾದರ ಮನೆ ಗಟ್ಟಿಗೊಳಿಸಿದರು. ಗಮನಾರ್ಹವೆಂದರೆ ಇದಕ್ಕೆ ಪಕ್ಕಾಸು ನೀಡಿದ್ದು ಮಾತ್ರ ಹಿಂದೂ ಸಹೋದರ. ಅಷ್ಟೊಂದು ಜನತೆಯ ನಡುವೆ ಶೈಖುನಾ ಹಾಸು ಹೊಕ್ಕಾಗಿದ್ದರು ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ.
ಉಳ್ಳಾಲದಲ್ಲಿ ಕಲಿಕೆ ಪೂರ್ತಿಗೊಳಿಸಿ ತಾಜುಲ್ ಉಲಮಾರ ನಿರ್ದೇಶನದ ಮೇರೆಗೆ ಉತ್ತರ ಪ್ರದೇಶದ ದಯೂಬಂದಿನ 'ದಾರುಲ್ ಊಲುಂ' ದರ್ಸಿಗೆ 1969 ರಲ್ಲಿ ಸೇರಿದರು. ಎಪ್ಪತ್ತರಲ್ಲಿ 'ಅಲ್-ಖಾಸಿಮೀ' ಎಂಬ ಪದವೀಧರರಾಗಿ ಹೊರ ಬರುತ್ತಾರೆ.
ಅಧ್ಯಾಪನೆ ವೃತ್ತಿ ಆರಂಭ;
ಬಿರುದುದಾರಿಯಾದ ಉಸ್ತಾದ್ ಮಂಗಳೂರು ಸಮೀಪದ ಸೂರಿಂಜೆಯಲ್ಲಿ ಮೂವತ್ತು ಮುತಅಲ್ಲಿಮರನ್ನು ಸೇರಿಸಿ ಅಧ್ಯಾಪನೆ ವೃತ್ತಿಗೆ ಮುಹೂರ್ತವಿಟ್ಟರು. ಶೈಖುನಾ ತಾಜುಲ್ ಉಲಮಾ ದರ್ಸ್ ಉದ್ಘಾಟಿಸಿ, ಪ್ರಾರ್ಥಿಸಿ ಕೊಟ್ಟರು. ಸೂರಿಂಜೆಯಲ್ಲಿ ಎರಡು ವರ್ಷವಾಗುವಾಗ ತಾಯಿಯ ಆರೋಗ್ಯ ಹದೆಗಟ್ಟಿತು. ಪರಿಣಾಮವಾಗಿ ಅಲ್ಲಿಂದ ಬಿಡಬೇಕಾದ ಪರಿಸ್ಥಿತಿ ಎದುರಾದವು. ಅಲ್ಲಿ ಬೇಕಲ್ ಉಸ್ತಾದರನ್ನು ನೇಮಿಸಿ ಮನೆ ಹತ್ತಿರದ ಪಾಣೆಮಂಗಳೂರಿನ ಆಲಡ್ಕ ಮಸೀದಿಯಲ್ಲಿ ದರ್ಸ್ ನಡೆಸಿದರು. ಇಲ್ಲಿಯೂ ಎರಡು ವರ್ಷ.
ಕಾರಣಾಂತರಗಳಿಂದ ಪಾಣೆಮಂಗಳೂರಿನಿಂದ ತ್ಯಜಿಸಿ ಕಾಸರಗೋಡು ಜಿಲ್ಲೆಯ ಮಚ್ಚಂಪಾಡಿಗೆ ಸ್ಥಳಾಂತರಿಸಿದರು. ಅಲ್ಲಿಯೂ ಶೈಖುನಾ ತಾಜುಲ್ ಉಲಮಾ ದರ್ಸ್ ಉದ್ಘಾಟಿಸಿದರು. ದೀರ್ಘ ಕಾಲು ಶತಮಾನಗಳ ಕಾಲ ಮಚ್ಚಂಪಾಡಿಯಲ್ಲೇ ಅಧ್ಯಾಪನೆ ನಡೆಸಿ ನಾಡಿನ ಜನತೆಯ ಪ್ರೀತಿಗೆ ಪಾತ್ರರಾದರು. ಬಳಿಕ 'ಮಚ್ಚಂಪಾಡಿ ಉಸ್ತಾದ್' ಎಂದು ಸುಪರಿಚಿತರಾದರು.
'ದಾರುಲ್ ಇರ್ಶಾದ್'ಗೆ ಅಡಿಗಲ್ಲು;
ಶಿಕ್ಷಣ ಕ್ರಾಂತಿಯ ಹರಿಕಾರ ಶೈಖುನಾರ ಮಾತಿನಲ್ಲೇ ದಾರುಲ್ ಇರ್ಶಾದಿನ ಹುಟ್ಟನ್ನು ಕೇಳೋಣ,
'ದಾರುಲ್ ಇರ್ಶಾದ್ ಸಮಾಜದ ಆಸ್ತಿಯೇ ಹೊರತು ನನ್ನದೋ ಅಥವಾ ನನ್ನ ಮಕ್ಕಳದಲ್ಲ. ಶಿಷ್ಯ ಸಂಘಟನೆ ‘ಜಂಇಯ್ಯತ್ತುಲ್ ಇರ್ಶಾದಿಯಾ’ದ ಸಭೆಯೊಂದು ವರ್ಷಂಪ್ರತಿ ನನ್ನ ಮನೆಯಲ್ಲಿ ಶಿಷ್ಯರೆಲ್ಲರನ್ನು ಒಟ್ಟುಗೂಡಿಸಿ ಮಾಡುವ ಜಲಾಲಿಯ್ಯ ರಾತೀಬಿನ ಬಳಿಕ ನಡೆಯುತ್ತಿತ್ತು. ಕಾಕತಾಳೀಯವೆಂಬಂತೆ ನನ್ನ ಬಳಿಯಿದ್ದ ಗ್ರಂಥಗಳನ್ನೆಲ್ಲಾ ಸಂಗ್ರಹಿಸಿ ಗ್ರಂಥಾಲಯ ಮಾಡುವ ಯೋಜನೆಯ ಮುಂದಿಟ್ಟರು. ಎಲ್ಲರೂ ಎಗ್ರಿ ಮಾಡಿ ಒಂದು ರಶೀದಿ ತಯಾರಿಸಿ ಅಜ್ಮೀರ್ ಖಾಜಾರ ಸನ್ನಿಧಿಗೆ ತೆರಳಿದೆವು. ಸರ್ವ ಕಾರ್ಯವೂ ಖಾಜಾರ ದರ್ಬಾರಿನಲ್ಲಿಯೇ ನಡೆಯಲಿ ಎಂಬುದು ನನ್ನ ಮಹದಾಸೆ. ಖಾಜಾರ ಸನ್ನಿಧಿಯಲ್ಲಿ ಓರ್ವ ವಿದೇಶಿಯ ಭೇಟಿಯಾಯಿತು, ಆತನಿಗೆ ಕತ್ತರಿಗೆ ಹೋಗಬೇಕಿತ್ತಂತೆ. ವಿಷಯ ಹೇಳಿ, ನಮ್ಮ ಸಂಸ್ಥೆಯ ಪ್ರಥಮ ಹಣ ತಾವು ನೀಡಬೇಕು ಎಂದೆ. ‘ನನ್ನ ಬಳಿ ಯಾವ ಹಣವೂ ಇಲ್ಲ ₹50 ಮಾತ್ರ ಇರುವುದು ಎಂದು ಹೇಳಿ ರಶೀದಿ ಪಡೆದುಕೊಂಡರು. ನಿಮಗೆ ಹಣ ಸಿಗಬಹುದು, ಇದು ಬರ್ಕತಿನ ಹಣ ಕೂಡಾ ಅಂದರು. ಖಾಜಾರ ಬಳಿ ಎಲ್ಲವನ್ನೂ ಹೇಳಿ ಮುಂಬೈಗೆ ಬಂದೆ. ಅಲ್ಲಿ ಸುಮಾರು ಐವತ್ತು ಸಾವಿರದಷ್ಟು ಹಣ ಕ್ರೋಢೀಕರಿಸಲು ಸಾಧ್ಯವಾಯಿತು..' ಶೈಖುನಾ ಮಚ್ಚಂಪಾಡಿಯಲ್ಲಿರುವ ಸಮಯ. ಅಂದು ವಿದ್ಯಾರ್ಥಿಗಳು ರಜಾ ಸಮಯಗಳಲ್ಲಿ ಮಚ್ಚಂಪಾಡಿಯಿಂದ ಬಂದು ಶೈಖುನಾರ ಸ್ವಗ್ರಹದ ಬಳಿಯಿರುವ ಆಳೆತ್ತರದ ಗುಡ್ಡೆಯನ್ನು ಜೆಸಿಬಿಯ ಸಹಾಯವಿಲ್ಲದೆ ನೆಲಸಮ ಗೊಳಿಸಿ ಸಂಸ್ಥೆ ಸ್ಥಾಪಿಸಲು ಮುಹೂರ್ತವಿಟ್ಟರು. ಇದಕ್ಕೆ ಶೈಖುನಾರೇ ಸಾಕ್ಷಿ. ಹಲವು ಸಮಯಗಳಲ್ಲಿ ಶೈಖುನಾ ಇದನ್ನು ಸ್ಮರಿಸುವುದಿದೆ. ನಮ್ಮ ಮನೋದಾರ್ಢ್ಯವು ಎಂತಹಾ ಪರ್ವತವನ್ನು ಪುಡಿ ಮಾಡಲು ಸಾಧ್ಯವಿದೆ ಎನ್ನುದಕ್ಕೆ ಇದು ಸ್ಪಷ್ಟ ನಿದರ್ಶನ.
೧೯೯೧ ಮಾರ್ಚ್ 11ರಂದು ಸಂಸ್ಥೆಯ ಜನನ. ಶೈಖುನಾರ ಶಿಷ್ಯ ಸಂಘಟನೆಯಾದ 'ಇರ್ಶಾದುತ್ತುಲಬಾ' ದ ಮೊದಲ ಪದ ಸೇರಿಸಿ ದಾರುಲ್ ಇರ್ಶಾದ್ ಎಂದು ನಾಮಕರಣ ಮಾಡಲಾಯಿತು. ಸಂಸ್ಥೆಯ ವರಮಾನವೆಂಬಂತೆ ತಿಂಗಳಿಗೆ ನೂರು ರುಪಾಯಿ ನೀಡುವ ಸದಸ್ಯತ್ವ ಅಭಿಯಾನಕ್ಕೆ ಶೈಖುನಾ ತಾಜುಲ್ ಉಲಮಾ ಚಾಲನೆ ನೀಡಿದರು. ಇದರ ಮೊದಲ ಮೆಂಬರ್ ಪೊಸೋಟ್ ತಂಙಳ್. ಮಹಾತ್ಮರ ಪಾದಸ್ಪರ್ಶದ ಅನುಗ್ರಹವೆಂಬಂತೆ ಬೆರಳೆಣಿಕೆಯಷ್ಟು ಮುತಅಲ್ಲಿಮರಿಂದ ಪ್ರಾರಂಭಗೊಂಡ ದಾರುಲ್ ಇರ್ಶಾದ್ ಇಂದು ಅನಂತವಾಗಿ ಬೆಳೆದದ್ದು ನಿಜಕ್ಕೂ ಅದ್ಭುತ..!
ಶೈಖುನಾರಿಗೆ ಔಲಿಯಾಗಳೊಂದಿಗೆ ಸದಾ ಸಂಪರ್ಕವಿಟ್ಟುಕೊಂಡಿದ್ದರು. ಅದರಲ್ಲೂ ಸಾಣೂರು ಶಾಹುಲ್ ಹಮೀದ್, ಏರ್ವಾಡಿ ಶುಹಾದಾಗಳು ಹಾಗೂ ಅಜ್ಮೀರ್ ಖಾಜಾರೊಂದಿಗೆ ವಿಶೇಷ ನಂಟು. ಮಿತ್ತೂರಿನಲ್ಲಿ ಸ್ಥಾಪಿಸಲ್ಪಟ್ಟ ವಿದ್ಯಾಸಮುಚ್ಚಯಕ್ಕೆ 'ಖಾಜಾ ಗರೀಬ್ ನವಾಝ್ ದಅವಾ ಕಾಲೇಜ್' ಎಂದು ನಾಮಕರಣ ಮಾಡಿದ್ದಾರೆ. ಅದಲ್ಲದೆ ಬಿಡುವಿಲ್ಲದೆ ವರ್ಷಂಪ್ರತಿ ಅಜ್ಮೀರ್ ಮೌಲಿದ್ ಹಾಗೂ ಏರ್ವಾಡಿ ಶುಹದಾ ನೇರ್ಚೆ ನಡೆದುಕೊಂಡು ಬರುತ್ತಿರುವುದು ನಿಜಕ್ಕೂ ಅದ್ಭುತ. ಇನ್ನು ದಾರುಲ್ ಇರ್ಷಾದಿನಲ್ಲಿ ಕಲಿತವರಿಗೆ 'ಮುಈನಿ' ಬಿರುದಾಂಕಿತವಾಗುವುದು ಕೂಡಾ ಖ್ವಾಜಾ ಮುಈನುದ್ದೀನ್ ಜಿಸ್ತೀ (ರ) ರ ಪುಣ್ಯನಾಮದ ಸ್ಮರಣಾರ್ಥ.
ಸಮಯ ನಿಷ್ಠೆ;
ಸಮಯವನ್ನು ನೀನು ಕೊಲ್ಲಬೇಕು, ಇಲ್ಲದಿದ್ದರೆ ನಿನ್ನನ್ನು ಕೊಲ್ಲುತ್ತದೆ ಎಂಬ ಮಾತನ್ನು ಅಕ್ಷರಶಃ ಪಾಲಿಸಿದವರು ಶೈಖುನಾ ಝೈನುನ್ ಉಲಮಾ. ಯಾವುದೇ ಕಾರ್ಯಕ್ರಮಕ್ಕೂ ಹೋಗುವುದಾದರೆ ಒಂದೈದು ನಿಮಿಷ ಮುಂಚೆಯೇ ಹಾಜರಿರುತ್ತಾರೆ. ಸಮಯ ಪಾಲಿಸಬೇಕೆಂಬ ಮೌನ ಪಾಲಿಸಿಯೂ ಇದರಲ್ಲಿ ಅಡಗಿದೆ.
ಶೈಖುನಾರ ಪಾಲಿಸಿ;
ಕಾಕತಾಳೀಯವಾಗಿ ಯಾರಾದರೂ ದಣಿದು ಬಂದು, ಮನೆಗೆ ಭೇಟಿ ನೀಡಿದರೆ ಸತ್ಕರಿಸದೆ ಹಿಂದಿರುಗಿಸುವ ಜಾಯಮಾನ ಉಸ್ತಾದರದ್ದಲ್ಲ. ವಿನಯದ ಪ್ರತೀಕವಾದ ಉಸ್ತಾದರನ್ನು ಭೇಟಿ ಮಾಡಿದರೆ ಹಸನ್ಮುಖಿಯಾಗಿ ಸ್ವೀಕರಿಸುವರು. ಯಾರನ್ನೂ ನೋಯಿಸದೆ ಎಲ್ಲರೊಂದಿಗೂ ನಮ್ಯ ರೀತಿಯಲ್ಲಿ ವರ್ತಿಸುವ ಉಸ್ತಾದರ ಸಭ್ಯತೆ ಮೆಚ್ಚಬೇಕಾದದ್ದು. ಒಳಿತಲ್ಲದೆ ಬೇರೇನೂ ಶೈಖುನಾರ ಕುರಿತು ಇತರರಿಗೆ ಹೇಳಳಿಕ್ಕಿಲ್ಲ. ಅದೇ ಪಾದವ ಅನುಸರಿಸಿ ಈ ವೃದ್ಧಾಪ್ಯ ಕಾಲದಲ್ಲೂ ಮಾಡುವುದಂತೂ ನಿಜಕ್ಕೂ ಅದ್ಭುತ..!
ಆಧ್ಯಾತ್ಮಿಕ ರಂಗದಲ್ಲಿ ಮಹೋನ್ನತ ನಾಯಕರಾದ ತಾಜುಲ್ ಉಲಮಾ ಉಳ್ಳಾಲ ತಂಙಳ್, ಚೆರ್ವತ್ತೂರು ಅಬ್ದುಲ್ಲಾ ಮುಸ್ಲಿಯಾರ್, ಕಕ್ಕಡಿಪುರ ಅಬೂಬಕರ್ ಮುಸ್ಲಿಯಾರರಂತಹ ಸೂಫೀವರ್ಯರಿಂದ ಇಜಾಝತ್ ಪಡೆದುಕೊಂಡಿದ್ದಾರೆ. ಶೈಖುನಾ ದೇಶ ವಿದೇಶಗಳಲ್ಲಿ ಹಲವಾರು ಮಹಾನ್ ಔಲಿಯಾಗಳ ಝಿಯಾರತ್ ಮಾಡಿದ್ದಾರೆ. ಇದೇ ಉಸ್ತಾದರ ಔನ್ನತ್ಯಕ್ಕೆ ನಿಮಿತ್ತವಾದವು.
ದೈನಂದಿನ ದಿನಚರಿ;
ಸುಪ್ರಭಾತದ ಮುಂಚೆಯೇ ಶೈಖುನಾರ ದಿನ ಆರಂಭಗೊಳ್ಳುತ್ತದೆ. ಸುಬ್‌ಹಿ ನಮಾಝಿನ ಬಳಿಕ ಎಲ್ಲಾ ಔಲಿಯಾ ಮಹಾನುಭಾವರ ಹೆಸರಿನಲ್ಲಿ ಯಾಸೀನ್ ಪಾರಾಯಣ. ಇನ್ನು ಅಸ್ಮಾಉಲ್ ಹುಸ್ನಾ, ವಿರ್ದುಲ್ಲತೀಫ್, ಹಿಝ್‌ಬುಲ್ ಬಹ್‌ರ್, ಹಿಝ್ಬುನ್ನಸ್‌ರ್, ದಲಾಇಲುಲ್ ಖೈರಾತ್ ಹಾಗೂ ಇನ್ನಿತಿರ ದ್ಸಿಕ್ರ್ ಔರಾದ್‌ಗಳು ಇದರ ಪಟ್ಟಿ ಉದ್ದವಿದೆ. ಮಧ್ಯಾಹ್ನ- ಸಂಜೆಯ ಕಾಲಾವಧಿಯಲ್ಲಿ ಬದ್ರ್ ಮಹಾತ್ಮರ ಸ್ಮರಣೆ. ಪ್ರತೀ ಐದು ವಕ್ತ್ ನಮಾಝಿನ ಬಳಿಕ ಒಂದದಿನೈದು ನಿಮಿಷ ದ್ಸಿಕ್ರ್. ಯಾವ ಕಡೆಯಲ್ಲೂ ಇರಲಿ, ಕಾರಲ್ಲಾದರೂ ಸರಿ. ಮಗ್ರಿಬ್ ನಮಾಝಿನ ಬಳಿಕ ಸಬ್‌ಉಲ್ ಮುಂಜಿಯಾತ್ ಎಂದು ಎನಿಸಿಕೊಂಡ ಸೂರತ್‌ಗಳ ಪಾರಾಯಣ. ಇಶಾ ನಮಾಝಿನ ಬಳಿಕ ಹದ್ದಾದ್ ಹಾಗೂ ವಿತ್ರ್ ನಮಾಝ್. ಮತ್ತೆ ತಹಜ್ಜುದ್. ದಿನವಿಡೀ ದ್ಸಿಕ್ರ್ ಹೇಳುವುದು ಇದು ಬಿಟ್ಟರೆ ಗ್ರಂಥ ಅಧ್ಯಯನ ಮಾಡುವುದು ಶೈಖುನಾರಿಗೆ ಅಪ್ಯಾಯಮಾನವಾದ ಸಂಗತಿ. ಬೇಗ ನಿದ್ದೆ ಮಾಡಿ ಬೇಗನೆ ಏಳುವುದು ಶೈಖುನಾರ ರೂಢಿ. ಈಗೀಗ ಮಹಾಮನೀಷಿಗೆ ನಿದ್ದೆ ಹತ್ತಲ್ಲವಂತೆ! ಅಂದರೆ ರಾತ್ರಿಯೂ ಆ ನಾಲಗೆ ಜಪಿಸುತ್ತಿರಬಹುದು..!
ಕುಟುಂಬ;
ಸಜಿಪದ ಆಸಿಯಮ್ಮ ಹಾಗೂ ಕಿಲ್ಲೂರಿನ ನಫೀಸಾರನ್ನು ವರಿಸಿರುವ ಶೈಖುನಾರಿಗೆ ಒಟ್ಟು ಏಳು ಗಂಡು ಹಾಗೂ ಮೂರು ಹೆಣ್ಮಕ್ಕಳು. ಪತ್ನಿ ಆಸಿಯಮ್ಮ ಇತ್ತೀಚಿಗೆ ತೀರಿಕೊಂಡರು. ಗಂಡು ಮಕ್ಕಳೆಲ್ಲರನ್ನೂ ಉತ್ತಮ ರೀತಿಯಲ್ಲಿ ಬೆಳೆಸಿ ವಿದ್ವಾಂಸರನ್ನಾಗಿ ಮಾಡುವ ಜೊತೆಗೆ ಹೆಣ್ಮಕ್ಕಳೆಲ್ಲರನ್ನೂ ವಿದ್ವಾಂಸರಿಗೆ ವರಿಸಿ ಕೊಟ್ಟಿದ್ದಾರೆ. ಆಸಿಯಮ್ಮ ಎಂಬವರಿಂದ ಅಶ್ರಫ್ ಮುಸ್ಲಿಯಾರ್, ಸಲೀಂ ಮದನಿ, ಜಮೀಲಾ, ಇಲ್ಯಾಸ್ ಅಮ್ಜದಿ, ದಾವೂದ್ ಹಾಗೂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಅದೇ ರೀತಿ ನಫೀಸಾರಿಂದ ಝೈನಬಾ, ತಾಹಿರಾ, ಶರೀಫ್ ಸಖಾಫಿ ಹಾಗೂ ಸ್ವದಖತುಲ್ಲಾ ನದ್ವಿಗೆ ಜನ್ಮ ನೀಡಿದ್ದಾರೆ. ಸಲೀಂ ಮದನಿ ದಾರುಲ್ ಅಮಾನ್ ಎಲ್ಲೂರಿನಲ್ಲಿ ಸಂಸ್ಥೆ ಆರಂಭಿಸಿದರೆ, ಶರೀಫ್ ಸಖಾಫಿ ದಾರುಲ್ ಇರ್ಷಾದಿನ ಮೇನೇಜಿಂಗ್ ಡೈರೆಕ್ಟರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಖಾಝಿಯಾಗಿ ಝೈನುಲ್ ಉಲಮಾ;
ತಾಜುಲ್ ಫುಖಹಾ ಬೇಕಲ್ ಉಸ್ತಾದರ ಬಳಿಕ ಶೈಖುನಾ ನವೆಂಬರ್ ೧೯, 2020 ರಲ್ಲಿ ಉಡುಪಿ ಜಿಲ್ಲಾ ಖಾಝಿಯಾಗಿಯೂ ಬಳಿಕ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ದಕ್ಷಿಣ ಕನ್ನಡದ ಕೆಲವು ಮೊಹಲ್ಲಾಗಳಲ್ಲಿ ಖಾಝಿಯಾಗಿ ಆಯ್ಕೆಯಾದರು. ಸರಳ ಶೈಲಿಯಲ್ಲಿ ಬದುಕು ಸವೆಸಿದ ಶೈಖುನಾ ಸರ್ವ ವಿಷಯದಲ್ಲೂ ಮಿತವ್ಯಯ ಪಾಲಿಸಿದರು. ದರ್ಸ್ ರಂಗದಲ್ಲಿ ನಾಲ್ಕುವರೆ ದಶಕಗಳ ಪೂರ್ತೀಕರಿಸಿದ ಸಮಯದಲ್ಲಿ ಶೈಖುನಾರ ಸಮಾಜ ಸೇವೆ ಪರಿಗಣಿಸಿ 2015 ಎಪ್ರಿಲ್ 5 ರಂದು ಸುಲ್ತಾನುಲ್ ಉಲಮಾ ಶೈಖುನಾರಿಗೆ ಝೈನುಲ್ ಉಲಮಾ (ವಿದ್ವಾಂಸರ ಸೌಂದರ್ಯ) ಎಂಬ ನಾಮವನ್ನು ಘೋಷಿಸಿದರು. ಇದಲ್ಲದೆ ಇಮಾಂ ಬೂಸೂರೀ, ತಾಜುಲ್ ಉಲಮಾ ಅವಾರ್ಡ್ ಇಂತಹ ಅನೇಕಾರು ಪ್ರಶಸ್ತಿ ಶೈಖುನಾರಿಗೆ ಪ್ರಾಪ್ತಿಯಾಗಿದೆ.
ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾಗಿ, ದಾರುಲ್ ಇರ್ಷಾದಿನ ಶಿಲ್ಪಿಯಾಗಿ, ಹಲವಾರು ಜಿಲ್ಲೆ ಮೊಹಲ್ಲಾ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನಷ್ಟು ಕಾಲ ನಮಗೆ ನೇತೃತ್ವ ನೀಡಲು ಅಲ್ಲಾಹು ಅನುಗ್ರಹಿಸಲಿ.
--ಆಮೀನ್.

Comments