ಜೈಲೊಳಗಿನ ಪಾದ್ರಿ ಪ್ರೇಮಿಗಳ ಆರಾಧಕನಾದ ಕಥೆ..
------------------------
ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ
ಅದು ಕ್ರಿ.ಶ ಮೂರನೇ ಶತಮಾನ. ಆ ಸಮಯಕ್ಕೆ ರೋಂ ಆಳುತ್ತಿದ್ದವ ಕ್ಲೋಡಿಯಸ್ ಚಕ್ರವರ್ತಿ. ಆತನೊಂದು ಅಸಂಬದ್ದ ತೀರ್ಮಾನಕ್ಕೆ ಬರುತ್ತಾನೆ. ರೋಂನಾದ್ಯಂತ ಹಠಾತ್ತನೆ ವಿವಾಹಕ್ಕೆ ನಿಶೇಧವನ್ನು ಹೇರುತ್ತಾನೆ. ವಿವಾಹವಾದ ತರುಣರಿಗೆ ಮತ್ತು ಯೋಧರಿಗೆ ಸೇನೆಯಲ್ಲಿ ನಿಷ್ಠೆಯಿಂದ ಸೇವೆಗೈಯ್ಯಲು ಸಾಧ್ಯವಿಲ್ಲ, ಸಂಸಾರದಿಂದಾಗಿ ಅವರ ದೈಹಿಕ ಚೈತನ್ಯ ಕುಂದಿ ಯುದ್ದದೊಂದಿಗೆ ವಿರಕ್ತಿ ಮೂಡಲು ಕಾಣವಾಗಬಹುದು ಎಂದೆಲ್ಲಾ ದಾಂಪತ್ಯ ಬದುಕಿನ ಬಗ್ಗೆ ತಕರಾರು ಎತ್ತುತ್ತಾನೆ.
ಕೆಥೋಲಿಕ್ ಬಿಷಪ್ ಆಗಿದ್ದ ಸೈಂಟ್ ವಾಲಂಟೈನ್ ಆ ಸೇನೆಯಲ್ಲಿದ್ದ. ರಾಜನ ಈ ನಿರ್ಧಾರದಿಂದ ಬೇಸತ್ತ ಅಷ್ಟೂ ತರುಣರ ಮನೀಷೆ ಮತ್ತು ಲೈಂಗಿಕ ಅಭಿಷ್ಟೆಯನ್ನು ಅರ್ಥೈಸಿದ್ದ ಸೈಂಟ್ ವಾಲಂಟೈನ್, ಪರಸ್ಪರ ಪ್ರೀತಿಸುತ್ತಿದ್ದವರನ್ನು ರಹಸ್ಯವಾಗಿ ವಿವಾಹ ಮಾಡಿಕೊಡಲಾರಂಭಿಸಿದ. ಸುದ್ದಿ ಚಕ್ರವರ್ತಿಗೆ ತಿಳಿಯಿತು. ವಾಲಂಟೈನನ್ನು ಜೈಲಿಗಟ್ಟಲಾಯಿತು. ಹಾಗೆ ಜೈಲು ಸೇರಿದ ವಾಲಂಟೈನ್ ಜೈಲು ಸಿಬ್ಬಂದಿಯ ಅಂಧೆಯಾದ ಪುತ್ರಿಯ ಸೌಂದರ್ಯಕ್ಕೆ ಪರವಶಗೊಂಡು ಪ್ರೇಮದ ಪಾಶಕ್ಕೆ ಬೀಳುತ್ತಾನೆ. ಪಾರಮ್ಯಕ್ಕೆ ತಲುಪಿದ ಪ್ರೇಮದ ತೀವ್ರತೆಯಿಂದಾಗಿ ಆಕೆಯ ಧೃಷ್ಟಿಯೇ ಮರಳಿತು ಎನ್ನುತ್ತದೆ ಚರಿತ್ರೆ. ಕಾರಾಗೃಹದಲ್ಲೂ ಬಿಡದ ವಾಲಂಟೈನನ ಪ್ರೇಮ ಕುಚೇಷ್ಟೆ ಚಕ್ರವರ್ತಿಯನ್ನು ಮತ್ತಷ್ಟು ಕೆರಳಿಸಿದವು. ಕ್ರುಧ್ದನಾದ ಕ್ಲೋಡಿಯಸ್ ಆತನನ್ನು ನೇಣಿಗೇರಿಸಲು ಆಜ್ಞಾಪಿಸುತ್ತಾನೆ. ನೇಣಿಗೆ ಕೊರಳೊಡ್ಡುವ ಮುನ್ನ ತನ್ನ ಕೊನೆಯ ಅಭೀಷ್ಟೆಯೆಂಬಂತೆ ಆತ ಆಕೆಗೆ ಒಂದು ಪತ್ರ ಬರೆದು ಜೈಲು ಸಿಬ್ಬಂದಿಯೊಂದಿಗೆ ಕೊಡುತ್ತಾನೆ. ಅದರಲ್ಲಿ ಈ ರೀತಿ ಬರೆಯಲಾಗಿತ್ತು. ‘from your valentaine’..!.
ಹಾಗೆ ಫೆಬ್ರವರಿ 14ಕ್ಕೆ ವಾಲಂಟೈನ್ ಎಂಬ ಪರಿತ್ಯಕ್ತ ಪುರೋಹಿತನನ್ನು ಗಲ್ಲಿಗೇರಿಸಲಾಗುತ್ತದೆ.
ಏನೇ ಆದರೂ ವಾಲಂಟೈನ್ ಎಂಬ ಆತ ಒಬ್ಬ ಕ್ರೈಸ್ತ ಪುರೋಹಿತನಾಗಿದ್ದನೆಂಬುದು ದಿಟ. ಆದ್ದರಿಂದಲೇ ಕ್ರೈಸ್ತ ಜಗತ್ತು ಕ್ರೂರ ಚಕ್ರವರ್ತಿಯ ವಿರುದ್ದ ಹೋರಾಡಿ ಮಡಿದ ಆತನ ಬಲಿದಾನದ ಸ್ಮರಣೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಆತನ ಪ್ರೇಮ ಕಥೆಯನ್ನು ಪಾಶ್ಚಾತ್ಯ ಜಗತ್ತು ಪರಿಶುದ್ದಗೊಳಿಸ ತೊಡಗಿತು. ನಂತರ ಅದು ಒಂದು ಫೆಸ್ಟಿವೆಲ್ ಆಗಿ ಮಾರ್ಪಟ್ಟಿತು. ವಾಲಂಟೈನ್ ಎಂಬ ಬಿಷಪ್ ಪ್ರೇಮಿಗಳ ಪಾಲಿನ ಆರಾಧಕನಾದ. ಮತ್ತು ಪ್ರೀತಿಸುವುದು, ಅದಕ್ಕಾಗಿ ತ್ಯಾಗ ಸಹಿಸುವುದು, ಮತ್ತು ಬದುಕನ್ನೇ ತರ್ಪಣವಿಡುವುದಕ್ಕೆಲ್ಲಾ ವಾಲೆಂಟೈನ್ ಆದರ್ಶ ಪ್ರಾಯನಾದ.
ವಾಲಂಟೈನ್ ಕುರಿತಾದ ಕಥೆ ಐತಿಹ್ಯವೆನ್ನಲಾಗುತ್ತದೆ. ವಾಲಂಟೈನ್‍ನ ಬಗ್ಗೆ ಹಲವು ರೀತಿಯ ಕಥೆಗಳು ಚಾಲ್ತಿಯಲ್ಲಿದೆ. ಅದರಲ್ಲೂ ಪ್ರಬಲವಾದದ್ದಾಗಿದೆ ಮೇಲೆ ವಿವರಿಸಲ್ಪಟ್ಟ ಕಥೆ. ರೋಮನ್ನರು ಇದನ್ನು ‘ಲುಬರ್‍ಕೇನಿಯಾ ಫೆಸ್ಟಿವೆಲ್’ ಎಂದು ಕರೆದರು. ಫೆಬ್ರವರಿ 14ರಂದು ನಡೆಯುವ ಪ್ರಸ್ತುತ ಆಚರಣೆಯಲ್ಲಿ ಹಲವು ಯುವಕರು ಮತ್ತು ಯುವತಿಯರು ಸಂಗಮಿಸುತ್ತಾರೆ. ಸಣ್ಣದೊಂದು ಬಾಕ್ಸ್‌ನಲ್ಲಿ ತಮ್ಮ ಹೆಸರುಗಳನ್ನು ಬರೆದು ಹಾಕಲಾಗುತ್ತದೆ. ನಂತರ ಹುಡುಗಿಯರ ಭಾಗದಿಂದ ಮತ್ತು ಹುಡುಗರ ಭಾಗದಿಂದ ಒಂದು ಬಾಕ್ಸನ್ನು ತೆರೆಯಲಾಗುತ್ತದೆ. ಆ ಎರಡು ಬಾಕ್ಸ್ ನಲ್ಲಿ ಹೆಸರಿರುವ ಇಬ್ಬರೂ ಜೋಡಿಗಳನ್ನು ಪರಸ್ಪರ ವಿವಾಹ ಮಾಡಲಾಗುತ್ತದೆ. ಇದಾಗಿತ್ತು ಪ್ರಾಚೀನ ರೋಮ್‍ನಲ್ಲಿ ನಡೆಯುತ್ತಿದ್ದ ಆಚರಣೆ.
ನಂತರ ಈ ಆಚರಣೆಯು ಅವ್ಯಾಹತವಾದ ಬಳಿಕ ವಾಲಂಟೈನ್ ಎಂಬ ಪುಣ್ಯ ಪರುಷನ ಸ್ಮರಣೆಗಾಗಿ ಇದನ್ನು ಆಚರಿಸಲು ಕ್ರೈಸ್ತ ಚರ್ಚ್‍ಗಳೇ ಖುದ್ದಾಗಿ ಮುಂದಾದವು. ಹಾಗೆ ಪಾಶ್ಚಾತ್ಯ ಸಂಸ್ಕೃತಿಗಳು ಜಗತ್ತಿನಾದ್ಯಂತ ವ್ಯಾಧಿಯಂತೆ ವಾಪಿಸುವ ಹೊತ್ತಿಗೆ ಈ ಆಚರಣೆಯು ಸಾಂಕ್ರಾಮಿಕ ರೋಗವಾಗಿ ಹಬ್ಬಿದವು. 15-17ನೇ ಶತಮಾನದಲ್ಲಿ ಯುರೋಪ್‍ನಲ್ಲಿ ಈ ಆಚರಣೆಯನ್ನು ಅತ್ಯುತ್ಸಾಹದಿಂದ ಆಚರಿಸಲಾಗುತ್ತಿತ್ತು. ಪ್ರೇಮಿಗಳು ಸಾರ್ವಜನಿಕವಾಗಿ ಅಭಾಸದಲ್ಲಿ ತೊಡಗುವುದು, ನಗ್ನವಾಗಿ ಕುಣಿದು ಕುಪ್ಪಳಿಸುವುದು, ಹೀಗೆ ಇದು ನೈತಿಕತೆಯ ಎಲ್ಲಾ ಎಲ್ಲೆಗಳನ್ನೂ ಮೀರತೊಡಗಿದವು.
ಆದರೆ ಯುರೋಪ್ ವೈಜ್ಞಾನಿಕವಾಗಿ ಮುಂದುವರಿಯತೊಡಗಿದಾಗ ಈ ಆಚರಣೆಯು ಸಭ್ಯತೆಯ ಮೇರೆ ಮೀರಿದ್ದೆಂಬ ಪ್ರಜ್ಞೆಯು ಅವರನ್ನು ಕಾಡತೊಡಗಿತು. ಆದ್ದರಿಂದ ಇದಕ್ಕೆ ನಿರ್ಬಂಧ ಹೇರಬೇಕೆಂಬ ಕೂಗುಗಳು ಕೇಳಿ ಬಂದವು. ಇದು ದೇವೋಪಾಸನಾ ತತ್ವಕ್ಕೆ ವಿರುದ್ದವೆಂದು ಕೆಲವರು ವಾದಿಸಿದರು. ತಕ್ಷಣ ಎಚ್ಚೆತ್ತ ಕ್ರೈಸ್ತ ಜಗತ್ತು ಈ ಆಚರಣೆಗೆ ಕೆಲವು ಪರಿಧಿಗಳನ್ನು ತಂದವು. ಮತ್ತೆ ಕೆಲವು ರಾಷ್ಟ್ರಗಳು ಇದನ್ನು ಸಂಪೂರ್ಣವಾಗಿ ನಿಶೇಧಿಸಿದವು. ಆದರೆ 18ನೇ ಶತಮಾನದಲ್ಲಿ ಯುರೋಪ್‍ನಲ್ಲಿ ಯುಕ್ತಿವಾದವು ಮೇಲೈಸತೊಡಗಿದಾಗ ವಾಲೈಂಟೈನ್ಸ್‌ಡೇ ಅವರ ಪ್ರತಿಷ್ಟೆಯ ಪ್ರತೀಕವಾಯಿತು. ಅದು ವ್ಯಕ್ತಿ ಸ್ವಾತಂತ್ರ್ಯದ ಭಾಗವಾಯಿತು. ಕೇವಲ ಮನೋರಂಜನೆ ಮಾತ್ರ ಇದರ ಉದ್ದೇಶವೆಂದು ಕೆಲವು ಪರಿಷ್ಕೃತವಾದಿಗಳು ವಾದಿಸಿದರು. ಪರ-ವಿರೋಧಗಳ ನಡುವೆಯೂ ಯುವ ಪೀಳಿಗೆಯ ನಡುವೆ ಈ ಆಚರಣೆ ಬಾಳಿ ಬದುಕಿದವು.
ಸಭ್ಯತೆ ಮತ್ತು ನೈತಿಕತೆಗೆ ಪ್ರಾಶಸ್ತ್ಯ ನೀಡಿದ್ದ ಇಸ್ಲಾಂ ಇಂಥದ್ದೊಂದು ಆಚರಣೆಯೊಂದಿಗೆ ಅಂತರವನ್ನು ಕಾಪಾಡುತ್ತಲೇ ಬಂದಿತ್ತು. ಇಸ್ಲಾಂ ಸಾರಿದ ನೈತಿಕ ಬೋಧನೆಗೆ ತದ್ವಿರುದ್ದವಾಗಿರುವ ಈ ಆಚರಣೆಯನ್ನು ಸಮುದಾಯದೊಳಗೆ ನುಸುಳಲು ಉಲಮಾ ಜಗತ್ತು ಬಿಡಲಿಲ್ಲ. ಅದರೆ ಉಸ್ಮಾನಿಯಾ ಖಿಲಾಫತ್ತನ್ನು ಪತನಗೊಳಿಸಿದ ಕಮಾಲ್ ಪಾಷಾ ಹಲವು ಪಾಶ್ಚಾತ್ಯ ಸಂಸ್ಕೃತಿಗಳಿಗೂ ಮುಸ್ಲಿಂ ರಾಷ್ಟ್ರಗಳ ಕದವನ್ನು ತೆರೆದುಕೊಟ್ಟ. ಹಾಗೆ ಅಕ್ರಮವಾಗಿ ಪ್ರವೇಶಿಸಿದ ಆಚರಣೆಗಳ ಪೈಕಿ ವಾಲೆಂಟೈನ್ಸ್‌ಡೇ ಕೂಡಾ ಒಂದಾಗಿತ್ತು. ಆದರೆ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಆಚರಣೆಗೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪಾಶ್ಚಾತ್ಯರ ಎಂಜಲಿಗೆ ನಿಷ್ಠೆ ಹೊಂದಿರುವ ಒಂದೆರಡು ಮುಸ್ಲಿಂ ರಾಷ್ಟ್ರಗಳಲ್ಲಿ ಮಾತ್ರ ಬೆರಳೆಣಿಕೆಯ ರೀತಿಯಲ್ಲಿ ಈ ಆಚರಣೆಯನ್ನು ಕಾಣಬಹುದಾದರೂ ಬಹುತೇಕ ಮುಸ್ಲಿಂ ರಾಷ್ಟ್ರಗಳಲ್ಲಿ ಪ್ರೇಮಿಗಳ ದಿನಕ್ಕೆ ನಿರ್ಬಂಧ ಹೇರಲಾಗಿದೆ.
ನೈತಿಕತೆ, ಸಭ್ಯತೆಯ ವಿಚಾರದಲ್ಲಿ ಯಾವುತ್ತೂ ಮುಸ್ಲಿಮರಿಗೆ ಈ ಆಚರಣೆಯೊಂದಿಗೆ ರಾಜಿಯಾಗಲು ಸಾಧ್ಯವಿಲ್ಲ. ಈ ಆಚರಣೆಯು ಸ್ತ್ರೀ-ಪುರುಷರ ನಡುವಿನ ನೈತಿಕತೆಯ ಪರದೆಯನ್ನು ಕಳಚಿ ಹಾಕುತ್ತದೆ. ಯುವ ಮನಸ್ಸುಗಳನ್ನು ಅನೈತಿಕತೆಗೆ ಪ್ರಚೋದಿಸುತ್ತದೆ. ಪಾಶ್ಚಾತ್ಯರು ತಮ್ಮ ಪುರೋಹಿತನ ಸ್ಮರಣೆಗಾಗಿ ಮಾಡುವ ಆಚರಣೆಯೊಂದು ಸಾರ್ವತ್ರಿಕವಾಗಿ ಹಬ್ಬಿ ಇಂದು ಮುಸ್ಲಿಂ ಸಮುದಾಯದೊಳಗೂ ವಕ್ಕರಿಸಿದೆ.
ಇತರ ಧರ್ಮದ ಆಚರಣೆಯನ್ನು ಯಾವತ್ತೂ ವ್ಯಂಗ್ಯವಾಡುವುದು ಸರಿಯಲ್ಲ. ಹಾಗಂತ ಅದನ್ನು ಆಚರಿಸಬೇಕೆಂದಿಲ್ಲ. ಅದನ್ನು ಲೇವಡಿ ಮಾಡುವುದು ಎಷ್ಟು ತಪ್ಪೋ ಅದನ್ನು ಅನುಕರಣೆ ಮಾಡುವುದೂ ಕೂಡಾ ಮುಸ್ಲಿಮರ ಪಾಲಿಗೆ ಅಷ್ಟೇ ತಪ್ಪು ಮತ್ತು ಅಕ್ಷಮ್ಯವಾಗಿದೆ.
*~ಟಿ.ಎಂ ಅನ್ಸಾರ್ ಸಅದಿ ತಂಬಿನಮಕ್ಕಿ*
14-02-2019 ಗುರುವಾರ...
Comments