ಸೌರ್ ಗುಹೆ (ಘಾರ್ ಸೌರ್):
ಮಕ್ಕಾದಲ್ಲಿ ಕುರೈಶಿಗಳ ಉಪಟಳ ವಿಪರೀತಗೊಂಡಾಗ ಅಲ್ಲಾಹನ ಆಜ್ಞೆಯಂತೆ ಪ್ರವಾದಿ ﷺ ರವರು ಮದೀನಾಕ್ಕೆ ಹಿಜ್'ರಾ ಹೋಗಲು ಸನ್ನದ್ಧರಾದರು.ಜೊತೆಯಲ್ಲಿ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರೂ ಇದ್ದಾರೆ. ಸಾಗುತ್ತಾ ಹೋದಂತೆ ದಾರಿ ಮಧ್ಯೆ ಅವರಿಗೆ ಸೌರ್ ಗುಹೆ ಸಿಗುತ್ತದೆ. ತಂಗಲು ಇದೇ ಸೂಕ್ತ ಸ್ಥಳವೆಂದು ತೀರ್ಮಾನಿಸಿದ ಅವರು ಆ ಗುಹೆಯ ಒಳ ಪ್ರವೇಶಿಸಲು ಅಣಿಯಾದರು.ಆಗ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರು ತಡೆಯುತ್ತಾ, "ಪ್ರವಾದಿ ﷺ ರವರೇ, ಮೊದಲು ನಾನು ಒಳಗೆ ಪ್ರವೇಶಿಸಿ ಏನಾದರೂ ವಿಷಜಂತುಗಳು ಇದೆಯಾ ಎಂದು ನೋಡಿ ಬರುತ್ತೇನೆ" ಎಂದರು.
ಒಳಗೆ ಪ್ರವೇಶಿಸಿದ ಅಬೂಬಕ್ಕರ್ ರದಿಯಲ್ಲಾಹು ಅನ್ಹು ರವರು ಅಲ್ಲಿದ್ದ ಕಸಕಡ್ಡಿಗಳನ್ನು ತೆಗೆದು ಶುಚಿಗೊಳಿಸಿದರು.ತರುವಾಯ ಪ್ರವಾದಿ ﷺ ರವರನ್ನು ಒಳಗೆ ಕರೆದರು. ಗುಹೆಯೊಳಗೆ ಹಲವು ದ್ವಾರಗಳಿದ್ದವು.ಅವುಗಳನ್ನು ಅಬೂಬಕ್ಕರ್ ರದಿಯಲ್ಲಾಹು ಅನ್ಹುರವರು ವಸ್ತ್ರದ ತುಂಡುಗಳಿಂದಲೂ ಇತರ ವಸ್ತ್ರಗಳಿಂದಲೂ ಮುಚ್ಚಿದರು.ಇದೀಗ ಒಂದು ದ್ವಾರ ಮಾತ್ರವೇ ಬಾಕಿ ಉಳಿದಿತ್ತು.ಸಿದ್ದೀಕ್ ರದಿಯಲ್ಲಾಹು ಅನ್ಹುರವರು ಅದನ್ನು ತಮ್ಮ ಕಾಲಿನಿಂದ ಮುಚ್ಚಿದರು.ಅದೇ ದ್ವಾರದಲ್ಲಿ ವಿಷವೇರಿದ ಸರ್ಪವೊಂದಿತ್ತು.ಅದು ಸಿದ್ದೀಕ್ ರದಿಯಲ್ಲಾಹು ಅನ್ಹುರವರ ಕಾಲಿಗೆ ಕಚ್ಚಿಬಿಟ್ಟಿತು.ಅಸಹನೀಯ ನೋವು! ಸಿದ್ದೀಕ್ ರದಿಯಲ್ಲಾಹು ಅನ್ಹುರವರು ನೋವು ತಾಳಲಾರದೆ ಕಣ್ಣೀರಿಟ್ಟರು.
ಅವರ ಮಡಿಲಲ್ಲಿ ಪ್ರವಾದಿ ﷺ ರವರು ಮಲಗಿ ನಿದ್ರಿಸುತ್ತಿದ್ದರು. ಸಿದ್ದೀಕ್ ರದಿಯಲ್ಲಾಹು ಅನ್ಹು'ರವರ ಕಣ್ಣಿನಿಂದ ಜಾರಿ ಬಿದ್ದ ಅಶ್ರು ಬಿಂದುಗಳು ಪ್ರವಾದಿ ﷺ ರವರ ಪವಿತ್ರ ಮುಖದ ಮೇಲೆ ಬಿತ್ತು. ಕಣ್ತೆರೆದು ನೋಡಿದಾಗ ಸಿದ್ದೀಕ್ ರದಿಯಲ್ಲಾಹು ಅನ್ಹು'ರವರ ಕಣ್ಣಲ್ಲಿ ನೀರು! ಯಾಕೆ ಅಳುತ್ತಿದ್ದೀರಿ? ಎಂದು ಪ್ರವಾದಿ ﷺ ರವರು ಕೇಳಿದಾಗ ನಡೆದ ಘಟನೆಯನ್ನು ವಿವರಿಸಿದರು.ತಕ್ಷಣವೇ ಪ್ರವಾದಿ ﷺ ರವರು ತಮ್ಮ ಪವಿತ್ರ ಉಗುಳನ್ನು ತೆಗೆದು ಕಾಲಿಗೆ ಸವರಿದಾಗ ನೋವು ಮಾಯವಾಯಿತು! ಅಷ್ಟಕ್ಕೂ ಆ ಹಾವು ಕಾಲನ್ನು ಕಚ್ಚಿದ್ದೇಕೆ ಗೊತ್ತೇ? ಗುಹೆಯೊಳಗಿದ್ದ ಪುಣ್ಯ ಪ್ರವಾದಿ ﷺ ರವರ ಪುಣ್ಯ ಮುಖಾರವಿಂದವನ್ನೊಮ್ಮೆ ನೋಡಬೇಕೆಂಬ ಅದಮ್ಯ ಆಸೆಯಿಂದ.
"ನಾನು ಬಹಳಷ್ಟು ದಿನಗಳಿಂದ ಆ ಪುಣ್ಯ ಪ್ರವಾದಿ ﷺ ರವರನ್ನು ನೋಡಬೇಕೆಂಬ ಆಸೆ ಹೊತ್ತಿದ್ದೇನೆ.ಆದರೆ ಇಂದು ನನ್ನ ಆಸೆ ಈಡೇರಿಸಬೇಕೆನ್ನುವಾಗ ನಿಮ್ಮ ಕಾಲು ಅದಕ್ಕೆ ತಡೆಯಾಯಿತು.ಅದಕ್ಕೆ ಕಚ್ಚಿ ಬಿಟ್ಟೆ." ಎನ್ನುತ್ತದೆ ಆ ಹಾವು.
✍ PM ಪಾಲ್ತಾಡು

Comments