Skip to main content

ಮಜ್ಲಿಸ್ ಗಾಣೆಮಾರ್ ನಿಂದ ಕರುನಾಡ ಯಾತ್ರೆ...! ( ಎಂ.ಎ. ಇಸ್ಮಾಈಲ್ ಸಅದಿ ಮಾಚಾರ್ )

ಮಜ್ಲಿಸ್ ಗಾಣೆಮಾರ್ ನಿಂದ ಕರುನಾಡ ಯಾತ್ರೆ...!

     (  ಎಂ.ಎ. ಇಸ್ಮಾಈಲ್ ಸಅದಿ ಮಾಚಾರ್ )

ಯಾತ್ರೆ ಎಂಬುದು ಮನುಷ್ಯ ಬದುಕಿನಲ್ಲಿ ಅದ್ಧುತ ಅನುಭವ. ಯಾತ್ರೆಗೈಯ್ಯದವರು ತುಂಬಾ ವಿರಳ. ಅನೇಕಾರು ಅರಿವಿನಿಂದಲೂ ಬದುಕು ಬದಲಿಸುವ ಪಾಠಗಳಿಂದಲೂ ಸಮೃದ್ಧರಾಗಲು ಯಾತ್ರೆಯು ಅತ್ಯಂತ ಉಪಕಾರಿ. ಖುರ್‌ಆನ್, ಯಾತ್ರೆಯನ್ನು ಪ್ರೋತ್ಸಾಹಿಸುತ್ತಾ ಹೀಗೆಂದಿದೆ. 'ನೀವು ಭೂಮಿಯಲ್ಲಿ ಸಂಚರಿಸಿರಿ. ಸತ್ಯ ನಿಷೇಧಿಗಳ ಅಂತ್ಯ ಹೇಗಿತ್ತು ಎಂದು ನೋಡಿ'. ಖುರ್‌ಆನಿನ ಪ್ರಸ್ತುತ ನುಡಿಯಿಂದ ಪ್ರಚೋದಿತರಾದ ಹಲವಾರು ಮಂದಿ ಯಾತ್ರೆಗಿಳಿದರು. ಊರು ಕೇರಿಗಳನ್ನು ದಾಟಿ, ಕಾಡುಮೇಡುಗಳನ್ನು ಸುತ್ತಿ ಅವರ ಯಾತ್ರೆಯು ಮುಂದುವರಿಯಿತು. ಯಾತ್ರೆಯ ಬಗ್ಗೆ ಇಮಾಂ ಶಾಫಿಈ (ರ)ರವರು ಬರೆದ ಗೆರೆಗಳು ಬಹಳ ಸುಂದರ ಮತ್ತು ಯಾತ್ರೆಗೈಯಲು ಮನುಷ್ಯ ಮನಸ್ಸುಗಳನ್ನು ಬಡಿದೆಬ್ಬಿಸುವಂತವುಗಳಾಗಿವೆ. ಯಾತ್ರಾ ವಿಸ್ಮಯದ ಜಗತ್ತನೇ ನಮ್ಮ ಮುಂದೆ ತೆರೆದಿಟ್ಟ ಅಸಂಖ್ಯ ಯಾತ್ರಿಕರನ್ನು ನಮಗೆ ಚರಿತ್ರೆಗಳಲ್ಲಿ ದರ್ಶಿಸಲು ಸಾಧ್ಯ. ಪೂರ್ವಿಕ ವಿದ್ವಾಂಸರು ಜ್ಞಾನ ಹರಸಿ ನಡೆಸಿದ ಯಾತ್ರೆಗಳು ನಮ್ಮನ್ನು ತುದಿಗಾಲಲ್ಲಿ ನಿಲ್ಲಿಸುತ್ತವೆ. (ಯಾತ್ರೆಯ ಬಗ್ಗೆ ಇನ್ನಷ್ಟು ವಿವರಗಳನ್ನೂ ಅಚ್ಚರಿಗಳನ್ನೂ 'ಯಾತ್ರಾ ವಿಸ್ಮಯ' ಎಂಬ ನನ್ನ ಕೃತಿಯಲ್ಲಿ ದಾಖಲಿಸಿದ್ದೇನೆ)
ಉತ್ತರ ಭಾರತದ ಅಜ್ಜೀರ್, ಆಗ್ರಾ, ರಾಷ್ಟ್ರ ರಾಜಧಾನಿ ದೆಹಲಿ, ಭಾರತದ ವಾಣಿಜ್ಯ ನಗರ ಮುಂಬೈ, ಪಕ್ಕದ ಕೇರಳ ಮತ್ತು ತಮಿಳು ನಾಡಿನ ವಿವಿದೆಡೆಗಳನ್ನು ಸಂದರ್ಶಿಸಿದಾಗಲೂ, ಭೂಲೋಕದ ಸ್ವರ್ಗ, ಮಾಯಾನಗರಿ ದುಬೈಗೆ ಎರಡು ಬಾರಿ ಹಾರಿದಾಗಲೂ, ಸೌದಿ ಅರೇಬಿಯಾದ ಜಿದ್ದಾದಲ್ಲಿ ಇಳಿದು ಮಕ್ಕ ಮದೀನಾದ ಪುಣ್ಯ ಮಣ್ಣನ್ನು ತುಳಿದು ಸೌದಿ ಯುದ್ಧಕ್ಕೂ ಚಳಿಸಿ ಕೊನೆಗೆ ದಮಾಮಿನಿಂದ ವಿಮಾನ ಹತ್ತಿದಾಗಲೂ ಮನಸ್ಸಲ್ಲಿದ್ದುದೊಂದೇ, ಇನ್ನೂ ಯಾತ್ರೆಗೈಯ್ಯಬೇಕು, ಯಾತ್ರೆಗೆ ಇನ್ನಷ್ಟು ಸ್ಥಳಗಳು ಬಾಕಿಯಿವೆ. ಅಲ್ಲಾಹನ ಆಪ್ತದಾಸರ ಪಾದ ಸ್ಪರ್ಶದಿಂದ ಧನ್ಯಗೊಂಡ ಈಜಿಪ್ಟ್, ಇರಾಕ್, ಫೆಲಸ್ತೀನ್, ಬುಖಾರ, ಯಮನ್, ತುರ್ಕಿ, ಮುಂತಾದ ರಾಷ್ಟ್ರಗಳನ್ನು ಸುತ್ತಬೇಕೆಂಬ ಅದಮ್ಯ ಆಸೆ ಮನಸ್ಸಂತರಾಳದಲ್ಲಿ ಪಡಿಮೂಡಿನಿಂತಿದೆ. ಹಣವಿದ್ದವರು ಅದನ್ನು ಆಡಂಭರಕ್ಕಾಗಿ ವ್ಯಯಿಸಿ ಸುಮ್ಮನಿರುವುದರ ಬದಲು ಜಗತ್ತಿಡೀ ಸುತ್ತಿ ಮಹಾದ್ಭುತಗಳ ವೀಕ್ಷಣೆಗೆ ತಯಾರಾಗಬೇಕಿದೆ. ಯಾತ್ರೆಯೆಂಬುದು ಮನುಷ್ಯ ಮನಸ್ಸುಗಳಲ್ಲಿ ಬದಲಾವಣೆಯ ಗಾಳಿ ಬೀಸಲು ಅತ್ಯಂತ ಉಪಯುಕ್ತ. ಯಾತ್ರೆಗೈಯ್ಯಬೇಕೆಂಬ ಹಂಬಲದಿಂದ ಕೆಲವೆಡೆಗಳನ್ನು ಸಂದರ್ಶಿಸಿದಾಗಲೂ ನಮ್ಮದೇ ಕರ್ನಾಟಕದ ಉತ್ತರ ಭಾಗವನ್ನು ಸಂದರ್ಶಿಸಲು ಸಾಧ್ಯವಾಗಿರಲೇ ಇಲ್ಲ. ದಾರುಲ್ ಇರ್ಶಾದ್ ಮಾಣಿಯು 2009ರಲ್ಲಿ ತನ್ನ 18ನೇ ವಾರ್ಷಿಕ ಸಮ್ಮೇಳನ ಪ್ರಯುಕ್ತ 'ಕರ್ನಾಟಕ ದೃಶ್ಯ ವೈಭವ' ಸಿಡಿಯನ್ನು ಹೊರತಂದಾಗಲೇ ಪ್ರಸ್ತುತ ಕರ್ನಾಟಕ ಯಾತ್ರೆಯ ಕನಸು ಕಾಣತೊಡಗಿದ್ದೆ. ಉತ್ತರ ಕರ್ನಾಟಕದಲ್ಲಿರುವ ಪ್ರೇಕ್ಷಣೀಯ ಸ್ಥಳಗಳು, ಝಿಯಾರತ್ ಕೇಂದ್ರಗಳು ಮತ್ತು ಅಲ್ಲಿನ ಧಾರ್ಮಿಕತೆಯ ತೀರಾ ಹಿನ್ನಡೆಗಳೆಲ್ಲಾ ತಿಳಿದದ್ದೇ ಆವಾಗ. ನಂತರ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದರು ಐತಿಹಾಸಿಕ ಕರ್ನಾಟಕ ಯಾತ್ರೆಕೈಗೊಂಡಾಗಲೂ ಅದರಲ್ಲೂ ಪೂರ್ಣವಾಗಿ ಸೇರಿಕೊಳ್ಳುವ ಸೌಭಾಗ್ಯ ದೊರೆತಿರಲಿಲ್ಲ. ಹೀಗಿರಲು ಮೂರು ತಿಂಗಳ ಮುಂಚೆ *'ಮಜ್ಲಿಸ್ ಗಾಣಿಮಾರ್'* ಸೇರಿದಾಗ ಉತ್ತರ ಕರ್ನಾಟಕ ಯಾತ್ರೆಯ ಸರದಿ ಬಂದೊದಗಿತ್ತು. ಕಳೆದ ನವೆಂಬರ್ 8 ಮಂಗಳವಾರ ಸಂಜೆ 4.50ಕ್ಕೆ ಮಜ್ಲಿಸ್ ಕ್ಯಾಂಪಸ್ಸಿನೊಳಗೆ ಪ್ರವೇಶಿಸಿದಾಗ ಪ್ರಥಮವಾಗಿ ಕೇಳಿದ್ದೆ ಕರುನಾಡ ಯಾತ್ರೆಯ ಕುರಿತಾಗಿತ್ತು. ಅಧ್ಯಾಪಕ ವೃಂದ ಮತ್ತು ವಿದ್ಯಾರ್ಥಿಗಳ ಕರುನಾಡ ಯಾತ್ರೆಗೆ ಅಂತಿಮ ಸಿದ್ಧತೆ ನಡೆಯುತ್ತಿತ್ತು. ಅಲ್ಲಾಹನ ಅನುಗ್ರಹದಿಂದ ನಾನೂ ಆ ಯಾತ್ರೆಯಲ್ಲಿ ಜೊತೆಗಾರನಾದೆ.

20.11.2016 ಆದಿತ್ಯವಾರ ಬೆಳಿಗ್ಗೆ 4 ಗಂಟೆಗೆ 60 ಜನರನ್ನೊಳಗೊಂಡ *'ಮಜ್ಲಿಸ್ ಟೀಂ'* ಕರುನಾಡ ಯಾತ್ರೆಗಾಗಿ 'ಸೆಲೀನ' ಬಸ್ ಮೂಲಕ ಮಜ್ಲಿಸ್ ಕ್ಯಾಂಪಸ್ಸಿನಿಂದ ಹೊರಟಿತ್ತು. ಅತ್ಯಂತ ಆವೇಶ ಮತ್ತು ಉತ್ಸಾಹ ಎಲ್ಲರ ಮುಖದಲ್ಲಿ. ವಿಶಾಲವಾದ ಕರ್ನಾಟಕದ ವೈಭವಗಳನ್ನು   ಕಣ್ಣಾರೆಕಂಡು ಮನತಣಿಸುವ, ಆಧ್ಯಾತ್ಮಿಕ ತಾಣಗಳ ಮೂಲಕ ಪ್ರಕಾಶ ಪಡೆಯುವ ತವಕದಿಂದ ನಮ್ಮ ಯಾತ್ರೆಯು ಆರಂಭವಾಗಿತ್ತು. ಕರ್ನಾಟಕವು ಅನೇಕಾರು ಆಕಷರ್ಣಿಯ ಸ್ಥಳಗಳಿಂದ ಧನ್ಯಗೊಂಡ ಊರು. ಎಲ್ಲರೂ ಈ ಕಡೆ ಆಕರ್ಷಿತರಾಗುತ್ತಾರೆ. ಇಲ್ಲಿನ ನೆಲ-ಜಲದ ಬಗ್ಗೆ ಹಲವಾರು ಪ್ರಮುಖರು ಹಾಡಿ ಹೊಗಲಿದ್ದಾರೆ. ಕರ್ನಾಟಕ ಸರಕಾರ ಪ್ರವಾಸೋಧ್ಯಮ ಇಲಾಖೆಯು ಕರ್ನಾಟಕದ ಬಗ್ಗೆ *'ಒಂದು ರಾಜ್ಯ ಹಲವು ಜಗತ್ತು'* ಎಂಬ ಅರ್ಥಪೂರ್ಣವಾದ ಘೋಷಣೆಯನ್ನೇ ಬಳಸಿ ಕೊಂಡಿದೆ. ಶಾಂತಿ ಸೌಹಾರ್ದಕ್ಕೆ ಹೆಸರು ವಾಸಿಯಾದ, ವಿವಿಧ ಜಾತಿ ಮತಗಳು, ಪಥಪಂಗಡಗಳು ವಾಸಿಸುವ ಶ್ರೇಷ್ಠ ನಾಡು. ರಾಷ್ಟ್ರ ಕವಿ ಕುವೆಂಪುರವರು ಹೇಳಿದಂತೆ *'ಸರ್ವ ಜನಾಂಗದ ಶಾಂತಿಯ ತೋಟ ರಸಿಕರ ಕಂಗಳ ಸೆಳೆಯುವ ನೋಟ ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುಧ್ಯಾನ'*. ಹಲವು ವಿದ್ಯಾವಂತರಿಗೆ, ಸಾಹಿತಿಗಳಿಗೆ, ಕವಿಗಳಿಗೆ ಜನ್ಮ ನೀಡಿದ ಊರು ಕರ್ನಾಟಕ. ಇದರ ಮಹಿಮೆಯನ್ನು ವರ್ಣಿಸಿದ ಕವಿಗಳ ಅಸಂಖ್ಯ ಸಾಲುಗಳನ್ನು ಕಾಣಲು ಸಾಧ್ಯ.
*'ಇಡೀ ಜಗತ್ತಿನಲ್ಲಿ ಎಲ್ಲಾದರೂ ಯಾರಾದರೂ ಹುಟ್ಟ ಬಯಸುವುದಾದರೆ ಅವರು ಕರ್ನಾಟಕದಲ್ಲಿ ಹುಟ್ಟಲಿ'* ಎಂದು ಕವಿಗಳು ಹೇಳಿದ ಪ್ರಕೃತಿ  ರಮಣೀಯತೆಯಿಂದ ಸೌಂದರ್ಯದ ಮಕುಟ ಧರಿಸಿದ ರಾಜ್ಯ ಕರ್ನಾಟಕ. ಕವಿ ಸಿದ್ದಯ ಪುರಾಣಿಕರವರು ಇದನ್ನು ಅತ್ಯಂತ ಹೃದಯ ಸ್ಪರ್ಶಿಯಾಗಿ ಈ ರೀತಿ ವಿವರಿಸುತ್ತಾರೆ. *'ಭಾರತವೊಂದು ಪುಟ್ಟ ಬ್ರಹ್ಮಾಂಡವಾದೊಡೆ ಕರ್ನಾಟಕವೊಂದು ಪುಟ್ಟ ಭಾರತ ನೋಡ ಇಲ್ಲಿಲ್ಲದುದು ಇನ್ನೆಲ್ಲಿದೆ ತೋರ ಇಲ್ಲಿಯ ಮಣ್ಣು ಹೊನ್ನು ಇಲ್ಲಿಯ ನೀರು ಸುಧೆ ಇಲ್ಲಿ ಜನ್ಮವನ್ನು ಬೇಡಿಕೊಂಡರೆ ಎಲ್ಲವನ್ನೂ ಬೇಡಿಕೊಂಡಂತೆ'*. ಸುಮಾರು ಎರಡು ಸಾವಿರ ವರ್ಷಗಳಿಗಿಂತಲೂ ಹೆಚ್ಚಿನ ಭವ್ಯ ಸಾಂಸ್ಕೃತಿಕ ಪರಂಪರೆಯಿರುವ ಕರ್ನಾಟಕವು ಭಾರತ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಪಡೆದಿದೆ. ನವೆಂಬರ್ 1, 1954 ಕರ್ನಾಟಕಕ್ಕೆ ಅತ್ಯಂತ ಮಹತ್ವ ಪೂರ್ಣವಾದ ದಿನ. ಕಾರಣ ವಿವಿಧ ಪ್ರದೇಶಗಳಲ್ಲಿ ಹರಿಹಂಚಾಗಿ ಹೋಗಿದ್ದ ನೆಲ, ಚದುರಿಹೋಗಿದ್ದ ಜನ ತನ್ನದೇ ಆದ ಭೌಗೋಳಿಕ ಮೇರೆಗಳನ್ನು ಪಡೆದು ಅಂದು ಒಂದು ಗೂಡಿತು. ಕರ್ನಾಟಕವು ಹಲವು ವಿಷಯಗಳಲ್ಲಿ ತನ್ನದೇ ಆದ ವೈಶಿಷ್ಟ್ಯತೆಯಿಂದ ಭಾರತೀಯ ಸಂಸ್ಕೃತಿ ಹಾಗೂ ಇತಿಹಾಸವನ್ನು ಉಜ್ವಲಗೊಳಿಸಿದೆ.
ಹೀಗೆ ವರ್ಣನಾತೀತವಾದ ಸೌಂದರ್ಯವನ್ನು ತನ್ನೊಳಗಿಸಿಕೊಂಡಿರುವ ಕರ್ನಾಟಕದ ಉತ್ತರದತ್ತ ನಾವು ಐದು ದಿನದ ಯಾತ್ರೆ ಗೈಯ್ಯುತ್ತಿದ್ದೇವೆ. ಮಜ್ಲಿಸ್‌ನಿಂದ ಮುಂದುವರಿದ ನಾವು ಬಜ್ಪೆ ಬಟ್ರಕರೆಯ ಮಿನಾರ ಮಸ್ಜಿದ್‌ನಲ್ಲಿ ಸುಬುಹಿ ನಮಾಝ್‌ಗಾಗಿ ಇಳಿದೆವು. ಅಲ್ಲಿ ಸುಬುಹಿ ನಮಾಝ್ ಮುಗಿಸಿ ಕುಂದಾಪುರದ ಪ್ರಸಿದ್ಧ ಝಿಯಾರತ್ ಕೇಂದ್ರ *ಯೂಸುಫ್ ವಲಿಯ್ಯುಲ್ಲಾಹಿ*ರವರ ಸನ್ನಿಧಾನಕ್ಕೆ ಬೆಳಗ್ಗಿನ 8 ಗಂಟೆಗೆ ತಲುಪಿದೆವು. ಅಲ್ಲಿ ಝಿಯಾರತ್ ಮತ್ತು  ಉಪಹಾರ ಮುಗಿಸಿ 9.15ಕ್ಕೆ ಹೊರಟ ನಮ್ಮ ಯಾತ್ರೆಯು ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗ ಜಿಲ್ಲೆಯ ಜೋಗಕ್ಕೆ ತಲುಪಿತ್ತು.
ಶಿವಮೊಗ್ಗ ಜಿಲ್ಲೆಯ *ಜೋಗ ಜಲಪಾತವು* ಯಾರನ್ನೂ ಆಕರ್ಷಿಸುವಂತದ್ದು. ಶರಾವತಿ ನದಿಯ ನೀರು ಸುಮಾರು 250 ಮೀಟರ್ ಎತ್ತರದಿಂದ ದುಮ್ಮಿಕ್ಕುವ ಮೂಲಕ ವಿಶ್ವದ ಅತೀ ಎತ್ತರದ ಜಲಪಾತ ಎಂಬ ಖ್ಯಾತಿ ಇದಕ್ಕಿದೆ. ಇದು ರಾಜ, ರಾಣಿ, ರೋವರ್, ರಾಕೆಟ್‌ಗಳೆಂಬ ಹೆಸರುಗಳಲ್ಲಿ ಗುರುತಿಸಲ್ಪಡುವ ನಾಲ್ಕು ಜಲಧಾರೆಗಳನ್ನು ಹೊಂದಿದ್ದು ನೋಡಿ ಆಸ್ವಾದಿಸಲೂ ಅಲ್ಲಾಹನ ಸೃಷಿವೈಭವದ ಬಗ್ಗೆ ಚಿಂತಿಸಲೂ ಸೂಕ್ತ ಪರಿಸರ. ಆಸುಪಾಸಿನಲ್ಲೇ ಲಿಂಗನ ಮಕ್ಕಿ ಅಣೆಕಟ್ಟು ಶರಾವತಿ ವಿದ್ಯುತ್ ಸ್ಥಾವರಗಳಿವೆ. ಬೆಳಕನ್ನು ನಂದಿಸಲು ಉಪಯೋಗಿಸುವ ನೀರನ್ನು ಬಳಸಿ ಬೆಳಕನ್ನೇ ಉತ್ಪಾದಿಸುವ ಸೃಷ್ಟಿ ವೈಚಿತ್ರ್ಯ ಯಾರನ್ನೂ ಅಚ್ಚರಿಗೊಳಿಸಬಹುದು.
ಜೋಗದಿಂದ 2.45ಕ್ಕೆ ಹೊರಟ ನಮ್ಮ ಯಾತ್ರೆಯು 5 ಗಂಟೆಯಾಗುವಾಗ ಹಾನಗಲ್‌ನತ್ತ ತಲುಪಿತ್ತು. ಅಲ್ಲಿನ ಪ್ರಸಿದ್ಧ ಝಿಯಾರತ್ ಕೇಂದ್ರವಾದ *ಸಯ್ಯಿದ್ ಮಖ್ಬೂಲ್ ಶಾ ಕಾಶ್ಮೀರಿ*ಯವರ ಪುಣ್ಯ ಸನ್ನಿಧಾನತ್ತ ಹೋದೆವು. ಸಮೀಪವೇ ಇರುವ ಮಸೀದಿಯಲ್ಲಿ ಳುಹ್ರ್ ಅಸರ್, ಮಗ್ರಿಬ್, ಇಶಾ ನಮಾಝ್‌ಗಳನ್ನು ಜಂಅ ಮಾಡಿ ನಿರ್ವಹಿಸಿದೆವು. ಮಕ್ಬೂಲ್ ಶಾರ ದರ್ಬಾರಿನಲ್ಲಿ ಮನಸ್ಸು ತುಂಬುವಷ್ಟು ಝಿಯಾರತ್ ನಡೆಸಿದೆವು. ಅಲ್ಲಿನ ಅಂಗಡಿ ಮುಂಗಟ್ಟುಗಳಲ್ಲೂ, ವಾಹನಗಳಲ್ಲೂ ಮುಖ್ಬೂಲ್ ಶಾರ ಹೆಸರು ಬರೆದಿಟ್ಟಿರುವುದನ್ನು ವಿಶೇಷವಾಗಿ ಗಮನಿಸಿದೆವು. ಅಷ್ಟು ಮಾತ್ರಕ್ಕೂ ಅಲ್ಲಿನ ಜನತೆಯ ಮನದಾಳದಲ್ಲಿ ನೆಲೆಯೂರಿರುವ ಸಂತ ಪುರುಷರವರು.
ಅಲ್ಲಿಂದ ಹೊರಟು 7.40ಕ್ಕೆ ಬಂಕಾಪುರ ಎಂಬಲ್ಲಿಗೆ ತಲುಪಿ 8.30ಕ್ಕೆ ಹಾವೇರಿ ಜಿಲ್ಲೆಯ *ರಿಫಾಈ ಭಾಷಾ* ದರ್ಗಾದಲ್ಲಿ ಝಿಯಾರತ್‌ಗೆ ಇಳಿದೆವು. ರಾತ್ರಿ 9ಕ್ಕೆ ಹಾವೇರಿ ಜಿಲ್ಲೆಯ ಹೃದಯ ಭಾಗವಾದ ಸವಣೂರಿನಲ್ಲಿ ತಲೆಯೆತ್ತಿ ನಿಂತಿರುವ *'ಮುಈನುಸ್ಸುನ್ನಾ ಮೋರೆಲ್ ಅಕಾಡೆಮಿ'* ಗೆ ತಲುಪಿದ್ದೆವು. ಸಂಸ್ಥೆಯ ಸಾರಥಿ *'ಕೆ.ಎಂ. ಮುಸ್ತಫಾ ನಈಮಿ ಮೊಂಟುಗೋಳಿ'* ಮತ್ತು ಅವರ ಸಹೋದ್ಯೋಗಿಗಳಾದ *ಝೈನುಲ್ ಆಬಿದೀನ್ ತಂಙಳ್ ಸಅದಿ ಕಿನ್ಯ*, *ಹಂಝ ಸಅದಿ ಕೃಷ್ಣಾಪುರ* ರವರ ಹೃದಯ ತುಂಬಿದ ಆತಿಥ್ಯ ಎಲ್ಲಿಲ್ಲದ ಸಂತೋಷವನ್ನು ನೀಡಿತ್ತು. ನಮ್ಮ ಯಾತ್ರಾ ತಂಡಕ್ಕೆ ರುಚಿಕರವಾದ ಬಿರಿಯಾನಿಯೂಟವನ್ನು ಬಡಿಸಿದ ಸಂಸ್ಥೆಯ ಸಾರಥಿಗಳಿಗೆ ಕೃತಜ್ಞತೆಯರ್ಪಿಸುತ್ತಾ ರಾತ್ರಿ 1ಕ್ಕೆ ಅಲ್ಲಿಂದ ಹೊರಟು ಲಕ್ಷ್ಮೇಶ್ವರಕ್ಕೆ ತಲುಪಿದೆವು. ಅಲ್ಲಿ ಇಹ್ಸಾನ್ ದಾಇ *ಝುಬೈರ್ ಸಖಾಫಿ ಕೆಮ್ಮಾರ*ರವರು ನಮಗೆ ತುಂಬು ಸಹಕಾರವನ್ನು ನೀಡಿದರು. ಏರ್ವಾಡಿಯನ್ನು ನೆನಪಿಸುವ ಪರಿಸರವಿರುವ ಝಿಯಾರತ್ ಕೇಂದ್ರ ಅಲ್ಲಿನದ್ದು. ಮಧ್ಯರಾತ್ರಿ ಲಕ್ಷೇಶ್ವರದಲ್ಲಿ *ಸಯ್ಯಿದ್ ಸುಲೈಮಾನ್ ಶಾ ಖಾದಿರಿ* (ರ)ರವರ ಝಿಯಾರತ್ ನಡೆಸಿ  ಹೊರಟ ನಾವು ಗದಗ ಜಿಲ್ಲೆಯ ನರಗುಂದ್ ಎಂಬಲ್ಲಿಗೆ ಬೆಳಿಗ್ಗೆ 5.30ಕ್ಕೆ ತಲುಪಿದ್ದೆವು. ರಸ್ತೆ ಬದಿಯಲ್ಲಿರುವ ಮಸೀದಿಯೊಂದರಲ್ಲಿ ನಮಾಝ್ ಮುಗಿಸಿ ಅಲ್ಲೇ ಬೆಳಗ್ಗಿನ ಉಪಹಾರ ತಯಾರು ಮಾಡಿ, ರಸ್ತೆ ಬದಿಯಲ್ಲೇ ಕುಳಿತು ಉಪಹಾರ ಮುಗಿಸಿ ಅಲ್ಲಿಂದ ಹೊರಡಲಣಿಯಾದೆವು.
ನಮ್ಮ ಯಾತ್ರೆಯ ಎರಡನೇ ದಿನವಾಗಿತ್ತದು. ನವೆಂಬರ್ 21 ಸೋಮವಾರ ಬೆಳಿಗ್ಗೆ ನರಗುಂದದಿಂದ ಹೊರಟು 9 ಗಂಟೆಯಾಗುವಾಗ ಬಾಗಲಕೋಟೆ ಜಿಲ್ಲೆಯ ಕೇರೂರ್‌ಗೆ ತಲುಪಿದ್ದೆವು. *ಮುಸ್ತಫ ಅಂಜದಿ ಸಾಲೆತ್ತೂರ್*‌ರವರ ಪ್ರಭೋಧನೆಯಿಂದ ಬೆಳಕು ಕಾಣುತ್ತಿರುವ ನಾಡದು. ಅಲ್ಲಿನ ಈಜುಕೊಳದಲ್ಲಿ ಸ್ನಾನ ಮಾಡಿ ದಣಿವಾರಿಸಿಕೊಂಡೆವು. ಅದೊಂದು ಅದ್ಭುತ ಅನುಭವವಾಗಿತ್ತು. ದಿವಸಗಳ ಮುಂಚೆ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ ಪೈರೋಝ್ ಎಂಬ ಮಗುವಿನ ಹೆಸರಲ್ಲಿ ಅವನ ಕುಟುಂಬಿಕರ ಸಮ್ಮುಖ ಅಲ್ಲಿನ ಮಸೀದಿಯಲ್ಲಿ ದ್ಸಿಕ್ರ್ ಮಜ್ಲಿಸನ್ನು ನಡೆಸಿದೆವು. ಮಗುವಿನ ಹೆಸರಲ್ಲಿ ಅವರು ನೀಡಿದ ಸ್ವದಖ ನಮ್ಮ ಮಧ್ಯಾಹ್ನದ ಊಟವಾಗಿತ್ತು.
ಕೆರೂರ್‌ನಿಂದ 1.50ಕ್ಕೆ ಹೊರಟ ನಮ್ಮ ನಂತರದ ಚಿತ್ತ ಬಿಜಾಪುರವಾಗಿತ್ತು. *ಬಿಜಾಪುರ* ಎನ್ನುವಾಗಲೇ ಮೈಮನಪುಳಕಿತವಾಗುತ್ತದೆ. ಅಲ್ಲಿನ ಪ್ರತಿಯೊಂದು ಕಲ್ಲು ಮಣ್ಣಿನಲ್ಲೂ ಭವ್ಯ ಚರಿತ್ರೆಯಿದೆ. ಅವು ಮುಸ್ಲಿಂ ಅರಸರ ಕಲಾ ಪ್ರೇಮವನ್ನು ಎತ್ತಿ ಹೇಳುತ್ತದೆ. ಈ ನಾಡಿಗೆ ಮುಸ್ಲಿಂ ಅರಸರು ನೀಡಿದ ಕೊಡುಗೆಯೇನೆಂದು ಕೇಳುವವರಿಗೆ ಅಲ್ಲಿ ಉತ್ತರವಿದೆ. ಅಲ್ಲಿನ ಗೋಲಗುಂಬಝ್ ಸಹಿತವಿರುವ ಕಟ್ಟಡಗಳನ್ನು ನೋಡಲು ದೇಶವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಾರೆ. ಬಿಜಾಪುರವೆಂಬ ನಗರವನ್ನು ಐತಿಹಾಸಿಕ ಕಟ್ಟಡಗಳು ಆವರಿಸಿ ನಿಂತಿವೆ. ಗುಮ್ಮಟಗಳು, ಕಮಾನುಗಳು, ಹೆಬ್ಬಾಗಿಲುಗಳು, ಕೋಟೆಗಳಿಂದೆಲ್ಲಾ ತುಂಬಿಕೊಂಡು ಕಂಗೊಳಿಸುತ್ತಿರುವ ನಗರವದು.
ಬಿಜಾಪುರದ ಸರ್ವ ಕಮಾನು ಕಟ್ಟಡಗಳಿಗೆ ರಾಜನಾಗಿ ನಿಂತಿರುವುದು *ಗೋಲಗುಂಬಝ್*. ಭಾರತದ ಅತಿದೊಡ್ಡ, ಜಗತ್ತಿನಲ್ಲೇ ಎರಡನೇ ಅತಿದೊಡ್ಡ ಗುಮ್ಮಟವದು. 200 ಅಡಿ ಎತ್ತರ ಮತ್ತು 18000 ಚದರ ಅಡಿ ವಿಸ್ತಾರವಿರುವ ಭವ್ಯ ಸೌಧ.
ಮಧ್ಯಾಹ್ನ 2.40ಕ್ಕೆ ಗೋಲಗುಂಬಝ್ ಪಕ್ಕದಲ್ಲಿರುವ *ಹಾಶಿಂ ಪೀರ್ ದರ್ಗಾ* ಝಿಯಾರತ್ ನಡೆಸಿ ಮಧ್ಯಾಹ್ನ ದೂಟ ಮುಗಿಸಿ ಸಂಜೆ 4.15ಆಗುವಾಗ ನಾವು ಗೋಲಗುಂಬಝ್ ತಲುಪಿದ್ದೆವು. ಗೋಲಗುಂಬಝ್‌ನ ಸುತ್ತಲ ವರಾಂಡದಲ್ಲಿ ಒಂದು ಧ್ವನಿ ಏಳು ಬಾರಿ ಪ್ರತಿನಿಧಿಸುತ್ತದೆ ಎನ್ನುವುದು ವಿಸ್ಮಯ. ಅದೇ ರೀತಿ ಪ್ರಸ್ತುತ ಭವ್ಯ ಸೌಧವು ಯಾವೊಂದು ಕಂಬದ ಆಧಾರವಿಲ್ಲದೆ ನೆಲೆ ನಿಂತಿದೆ ಎಂಬುದು ಮತ್ತೂ ಆಶ್ಚರ್ಯ. 1629-1659 ಕಾಲಾವಧಿಯಲ್ಲಿ ಮುಹಮ್ಮದ್ ಆದಿಲ್ ಶಾ ಇದನ್ನು ಕಟ್ಟಿಸಿದರು.
ಗುಮ್ಮಟದ ಕೆಳಭಾಗದಲ್ಲಿ ಅದನ್ನು ಕಟ್ಟಿಸಿದ ಮುಹಮ್ಮದ್ ಆದಿಲ್ ಶಾ ಮತ್ತು ಪತ್ನಿ ಮಕ್ಕಳ ಗೋರಿಗಳಿವೆ. ಆದರೆ ಯಾರೂ ಅದರತ್ತ ಸುಳಿಯುತ್ತಿಲ್ಲ. ಬದಲು ಎಲ್ಲರೂ ಕೇಕೆ, ಶಿಲ್ಲೆ ಹೊಡೆಯುತ್ತಾ ಒಂದು ಶಬ್ಧ ಏಳು ಬಾರಿ ಪ್ರತಿ ಧ್ವನಿಸುವುದನ್ನು ಪರೀಕ್ಷಿಸುವ ತವಕದಲ್ಲಿದ್ದರು. ಆದರೆ ಯಾತ್ರೆಯುದ್ಧಕ್ಕೂ ನಾವು ಸಂದರ್ಶಿಸಿದ ಮಹಾತ್ಮರ ಖಬ್ರ್‌ಗಳ ಬಳಿ ಜನಜಂಗುಳಿಯಿತ್ತು. ಜನರು ಅಲ್ಲಿ ಝಿಯಾರತ್ ನಡೆಸುತ್ತಿದ್ದರು. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳುತ್ತಿದ್ದರು. ಇಹದ ಗೊಡವೆಯಲ್ಲಿ ಬದುಕಿದ ರಾಜ ಮಹಾರಾಜರುಗಳ ಬಳಿ ಅವರ ಮರಣಾನಂತರ ಯಾರೂ ಸುಳಿಯುತ್ತಿಲ್ಲ. ಆದರೆ ಇಹವನ್ನು ತ್ಯಜಿಸಿ ಬಡ ಫಕೀರರಾಗಿ ಬದುಕಿ ಮರಣಹೊಂದಿದ ಸಂತ ಪುರುಷರ ಬಳಿ ರಾಜ ಪ್ರಜೆ ಎಂಬ ಬೇಧವಿಲ್ಲದೆ ಎಲ್ಲರೂ ಬರುತ್ತಿದ್ದಾರೆ.
ಗೋಳಗುಂಬಝನ್ನು ಮನದಣಿಯೆ ಕಂಡು 5.30ಕ್ಕೆ ನಾವು ಬಿಜಾಪುರದ *ಜಾಮಿಯ ಮಸೀದಿಗೆ* ತಲುಪಿದೆವು. ಳುಹ್ರ್ ಅಸರ್ ಅಲ್ಲಿ ಒಟ್ಟಾಗಿ ನಿರ್ವಹಿಸಿದೆವು. ಭವ್ಯವಾದ ಮಸೀದಿಯದು 1,16300 ಚದರ ಅಡಿ ವಿಸ್ತೀರ್ಣವಿರುವ ಮಸೀದಿಯ ಎಲ್ಲವೂ ಅತಿ ಸುಂದರ. ಗಂಭೀರ ಪ್ರವೇಶ ದ್ವಾರ, ಭವ್ಯ ಕಮಾನುಗಳು, ಚಂದದ ಮಿಹ್ರಾಬ್, ಮರದ ಕೆತ್ತನೆಗಳು, ಸ್ವರ್ಣ ಲಿಪಿಯಲ್ಲಿ ಬರೆದ ಖುರ್‌ಆನ್ ವಾಕ್ಯಗಳು ನಮ್ಮನ್ನು ಆಕರ್ಶಿಸುತ್ತವೆ. 1565ರಲ್ಲಿ ಸುಲ್ತಾನ್ ಮುಹಮ್ಮದ್ ಆದಿಲ್ ಶಾಹ್‌ರಿಂದ ಪ್ರಸ್ತುತ ಮಸೀದಿ ನಿರ್ಮಾಣವಾಗಿತ್ತು. ನಾಲ್ಕು ಸಾವಿರ ಜನ ನಮಾಝ್ ಮಾಡಬಲ್ಲ ಬೃಹತ್ ಮಸೀದಿಯದು.
ಜಾಮಿಯಾ ಮಸೀದಿಯಿಂದ ಹೊರಟ ನಾವು 6.15ರ ಹೊತ್ತಿಗೆ *ಇಬ್ರಾಹೀಂ ರೋಝಾ*ದತ್ತ ತಲುಪಿದೆವು. ಆದರೆ ಆ ವೇಳೆಗೆ ಪ್ರವೇಶನ ಸಮಯವು ಮುಗಿದಿತ್ತು. ನಾವು ಹೊರಗಿನಿಂದಲೇ ಅದನ್ನು ನೋಡಬೇಕಾಯಿತು. ದಕ್ಷಿಣದ ತಾಜ್‌ಮಹಲ್ ಎಂದು ಖ್ಯಾತಿವೆತ್ತ ಇಬ್ರಾಹೀಂ ರೋಝಾದ ಬಗ್ಗೆ, ಅದನ್ನೇನಾದರೂ ಅಮೃತಶಿಲೆಯಲ್ಲಿ ಕಟ್ಟಿಸಿದ್ದರೆ ತಾಜ್‌ಮಹಲನ್ನು ಮೀರಿಸುತ್ತಿತ್ತು ಎಂದು ಅನೇಕರು ಕೊಂಡಾಡಿದ್ದಾರೆ. ಪ್ರವೇಶದ್ವಾರದ ಇಕ್ಕೆಲಗಳಲ್ಲಿ ಎರಡು ತಾಜ್‌ಮಹಲ್‌ಗಳು ನಿಂತಿರುವಂತೆ ತೋಚುವ ಕಟ್ಟಡವದು. ಇಬ್ರಾಹೀಂ ದೊರೆ ತನ್ನ ಪತ್ನಿ ತಾಜ್‌ಗಳೊಂದಿಗಿನ ಅಗಾಧ ಪ್ರೀತಿಯ ಕಾರಣದಿಂದ ಅದನ್ನು ಕಟ್ಟಿಸಿದ್ದ. ಪತ್ನಿಯ ಜೀವನ ಕಾಲದಲ್ಲೇ *ತಾಜ್‌ರೋಜಾ* ಕಟ್ಟಿಸ ತೊಡಗಿದ್ದ. ಆದರೆ ಪತ್ನಿಗಿಂತ ಮೊದಲು ಅವನೇ ಮರಣ ಹೊಂದಿದ್ದರಿಂದ ತಾಜ್‌ರೋಝ ಇಬ್ರಾಹೀಂ ರೋಝಾವಾಗಿ ಮಾರ್ಪಟ್ಟಿತ್ತು. 1580ರಿಂದ 1627ರ ತನಕ ರಾಜ್ಯವದಾಳಿದ  ಆದಿಲ್ ಶಾಹಿ ದೊರೆ ಎರಡನೇ ಇಬ್ರಾಹೀಂ ಶಾನ ಸಮಾಧಿ ಅದರಲ್ಲಿರುವ ಕಾರಣ ಅದು ಇಬ್ರಾಹೀಂ ರೋಝಾ ಎಂದು ಕರೆಯಲ್ಪಟ್ಟಿತು.
ಇಬ್ರಾಹೀಂ ರೋಝಾದಿಂದ ಹೊರಟ ನಾವು 6.40 ಆಗುವ ವೇಳೆ *ಜೋಡುಗುಮ್ಮಟ*ದ ಬಳಿಯಿದ್ದೆವು. ಅಲ್ಲಿರುವ ಎರಡು ಭವ್ಯ ಗುಂಬಝ್‌ಗಳು ಯಾರನ್ನೂ ಆಕರ್ಶಿಸುವಂತದ್ದು. ಅಲ್ಲಿಂದ *ಸಯ್ಯಿದ್ ಮೀರಾನ್ ಶಾಹ್* ಎಂಬವರ ದರ್ಗಾವನ್ನು ಸಂದರ್ಶಿಸಿದೆವು. ಜೋಡುಗುಮ್ಮಟದಿಂದ ಮುಂದುವರಿದ ನಮ್ಮ ಯಾತ್ರೆಯು 7.15ರ ಹೊತ್ತಿಗೆ ಬಿಜಾಪುರಕ್ಕೆ ಅಭಿಮಾನವಾಗಿ ನಿಂತಿರುವ ಹನಫೀ ವಿದ್ವಾಂಸ *ತನ್ವೀರ್ ಹಾಶಿಮಿ*ಯವರ ಸಂಸ್ಥೆಯತ್ತ ತಲುಪಿತು. ಅಲ್ಲಿ ರಾತ್ರಿಯೂಟ ತಯಾರಿಸಿ ನಮಾಝ್ ಮಾಡಿ ಹೊರಡೋಣ ಎಂದು ಹೋಗಿದ್ದ ನಮಗೆ ಅನಿರೀಕ್ಷಿತವಾದ ಆತಿಥ್ಯ ದೊರಕಿತ್ತು. ಮಸೀದಿಯಲ್ಲಿ *ತಿಝ್‌ಕಾರೇ ಅಲಿಯ್ಯ್* ಎಂಬ ಕಾರ್ಯಕ್ರಮ ನಡೆಯುತ್ತಿತ್ತು. ನಮ್ಮನ್ನು ಅತ್ತ ಕರೆದ ಹಾಶಿಮಿಯವರು ಮಕ್ಕಳಿಂದ ಬುರ್ದಾ, ಸಲಾಂ ಬೈತ್‌ಗಳನ್ನೆಲ್ಲಾ ಹೇಳಿಸಿ ಪ್ರಸ್ತುತ ಕಾರ್ಯಕ್ರಮದಲ್ಲಿ ನಮ್ಮನ್ನು ಅತಿಥಿಗಳನ್ನಾಗಿಸಿ ಉಜ್ವಲ ಸ್ವಾಗತ ಕೋರಿದ್ದರು. ಬಳಿಕ ರಾತ್ರಿಯೂಟ ಸ್ವಾದಿಷ್ಟವಾದ ಬಿರಿಯಾಣಿಯನ್ನು ನೀಡಿ ನಮ್ಮ ಹೊಟ್ಟೆ ತಣಿಸಿದ್ದರು.
ತನ್ವೀರ್ ಹಾಶಿಮಿಯವರ ಸಂಸ್ಥೆಯಿಂದ ರಾತ್ರಿ 10.30ಕ್ಕೆ ಹೊರಟ ನಾವು *ಗುಲ್ಬರ್ಗಾ* ಗುರಿಯಾಗಿಸಿ ಸಾಗಿದ್ದೆವು. ರಾತ್ರಿ 2ಕ್ಕೆ ನಾವು ಗುಲ್ಬರ್ಗಾ ತಲುಪಿದ್ದೆವು. ರಾತ್ರಿ ಬಸ್ಸಲ್ಲೇ ಮಲಗಿದ ನಾವು ಯಾತ್ರೆಯ ಮೂರನೇ ದಿನ ಅಥವಾ 22 ಮಂಗಳವಾದದಂದು ಬೆಳಗ್ಗಿನ ಜಮಾಅತ್‌ಗಾಗಿ ಗುಲ್ಬರ್ಗಾದ ಆಧ್ಯಾತ್ಮಿಕ ತಾಣ *ಬಂದೇ ನವಾಝ್ ದರ್ಗಾ* ದತ್ತ ಸಾಗಿದೆವು. ನಮಾಝ್ ಸ್ನಾನವೆನ್ನೆಲ್ಲಾ ಮುಗಿಸಿದ ನಮಗೆ ಇನ್ನು ಝಿಯಾರತ್ ನಡೆಸಬೇಕಿದೆ. ಎ.ಪಿ. ಉಸ್ತಾದರು ಕರ್ನಾಟಕ ಯಾತ್ರೆಯನ್ನು ಆರಂಭಿಸಿದ್ದ ಪ್ರಸಿದ್ಧ ಆಧ್ಯಾತ್ಮಿಕ ತಾಣ. ಗುಂಬಝ್‌ನಗರ ಗುಲ್ಬರ್ಗಕ್ಕೆ ಮುಕುಟ ಮಣಿಯಂತಿರುವ ಕೇಂದ್ರ. ಉತ್ತರ ಭಾರತದ ಅಜ್ಮೀರ್ ಶರೀಫನ್ನು ನೆನಪಿಸುವ ಸ್ವಚ್ಚ ಪರಿಸರ. ಉತ್ತರ ಕರ್ನಾಟಕದ ಅನೇಕ ದರ್ಗಾಗಳಲ್ಲಿರುವಂತಹ ಅನಾಚಾರಗಳೇನೂ ಇಲ್ಲಿ ಕಂಡು ಬರುತ್ತಿಲ್ಲ. ಆಧ್ಯಾತ್ಮಿಕ ಅನುಭೂತಿಯನ್ನು ನೀಡುವ ಪ್ರಶಾಂತ ಸುಂದರ ವಠಾರ. ನಾವು ಮಹಾತ್ಮರ ಸನ್ನಿಧಿಯಲ್ಲಿ ಝಿಯಾರತ್‌ಗೆ ನಿಂತೆವು. ಅಲ್ಲೇ ದರ್ಗಾದ ಮುಖ್ಯಸ್ಥರ ಹಸ್ತದಿಂದ ಮಕ್ಕಳ ಕೈಬರಹ ಮಾಸಿಕವನ್ನು ಬಿಡುಗಡೆಗೊಳಿಸಿದೆವು. ಜೊತೆಗೆ ಉತ್ತರ ಕರ್ನಾಟಕದಲ್ಲಿ ದೀನೀ ದಅವತ್ತಿನ ಅಗತ್ಯತೆಯನ್ನು ಕಂಡ ನಮ್ಮ ಯಾತ್ರಾ ತಂಡದ ನಾಯಕ ಮಜ್ಲಿಸ್ ಸಾರಥಿ *ಹಾಫಿಳ್ ಅಬ್ದುಲ್ ಮಜೀದ್ ಫಾಳಿಲ್ ಕಾಮಿಲ್ ಸಖಾಫಿ*ಯವರು ಖಾಜಾ ಬಂದೇ ನವಾಝ್‌ ರವರ ಸನ್ನಿಧಿಯಲ್ಲಿ *ಮಜ್ಲಿಸ್ ಗಾರ್ಡನ್* ಎಂಬ ಬೃಹತ್ತಾದ ಪದ್ಧತಿಯೊಂದನ್ನು ಘೋಷಿಸಿದರು. ಅದರ ಪ್ರಥಮ ಹಂತವೆಂಬಂತೆ ನೋರ್ತ್ ಕರ್ನಾಟಕದ 33 ಸ್ಥಳಗಳಲ್ಲಿ *ತಅಲೀಮೇ ವಿಲ್ಲಾ* ಗಳನ್ನು ಸ್ಥಾಪಿಸುವುದಾಗಿ ಮಹಾತ್ಮರನ್ನು ಸಾಕ್ಷಿಯಾಗಿಸುತ್ತಾ ಘೋಷಿಸಿದರು. ಆ ಮೂಲಕ ನಮ್ಮ ಯಾತ್ರೆಯು ಉತ್ತರ ಕರ್ನಾಟಕದಾದ್ಯಂತ ಅತ್ಯಗತ್ಯ ದೀನೀ ಜ್ಞಾನವನ್ನು ಪಸರಿಸಲಿಕ್ಕೆ ಕಾರಣವಾದ ಅತ್ಯಂತ ಧನ್ಯ ಯಾತ್ರೆಯಾಗಿ ಮಾರ್ಪಾಡುಗೊಂಡ ಖುಷಿಯೊಂದಿಗೆ ನಾವು ಅಲ್ಲಿಂದ ಹೊರಡಲಣಿಯಾದೆವು.ನಮ್ಮ ಯಾತ್ರಾ ತಂಡದಲ್ಲಿ ಸಂಸ್ಥೆಯ ಮುದರ್ರಿಸರಾದ *ಅಬೂಬಕರ್ ಸಿದ್ದೀಕ್ ಸಖಾಫಿ ಕಾಯಾರ್,ಫಿರೋಝುದ್ದೀನ್ ಮುಈನಿ ಅಸ್ಸಅದಿ,ಅಧ್ಯಾಪಕರಾದ ಸ್ವಾದಿಖ್ ಮಾಸ್ಟರ್ ಸುಳ್ಯ,ಸವಾ ದ್ ಮಾಸ್ಟರ್ ಉದ್ದಬೆಟ್ಟು,ಝೈನುದ್ದೀನ್ ಇರಾ* ಜೊತೆಗಿದ್ದುದು ನವೋಲ್ಲಾಸವನ್ನು ನೀಡಿತ್ತು.
ಇನ್ನು ನಮ್ಮ ಪಯಣ ಗುಲ್ಬರ್ಗಾದ ವಿಶಿಷ್ಟ ತಾಣವಾದ ಕೋಟೆಯತ್ತ ಸಾಗಿತು. ಸುಮಾರು 20 ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ 3ಕಿ.ಮೀ ಸುತ್ತಳತೆಯಲ್ಲಿ ಹರಡಿಕೊಂಡಿರುವ ಈ ಕೋಟೆಯನ್ನು ಅಲಾವುದ್ದೀನ್ ಬಹಮನಿಶಾ ನಿರ್ಮಿಸಿದ್ದರು. ಪ್ರಸ್ತುತ ಕೋಟೆಯ ಸಮೀಪ ಅದ್ಭುತವಾದ ಮಸೀದಿಯಿದೆ. *ಖಿಲಾಹುಶ್ಶಾಂ* ಹೆಸರಿನ ಜುಮಾ ಮಸೀದಿಯದು. ವಿದ್ಯುತ್ ದೀಪ,ಫೇನ್, ಮೈಕುಗಳಿಲ್ಲದೆ ಬೆಳಕು, ಗಾಳಿ ಮತ್ತು ಧ್ವನಿವರ್ಧಕ ವ್ಯವಸ್ಥೆಗಳಿರುವ ಅದ್ಭುತಗಳ ಆಗರವಾದ ಮಸೀದಿ. ಹೊರಗೆ ಬಿಸಿಲ ತಾಪವೇರಿದಂತೆ ಒಳಗೆ ತಂಪೇರುವ ಅಚ್ಚರಿ. ಮಸೀದಿಯೊಳಗೆ ನೈಸರ್ಗಿಕ ಗಾಳಿ, ಬೆಳಕು ಬರುವ ವ್ಯವಸ್ಥೆ ಮಾಡಲಾಗಿದೆ. ಮಸೀದಿಯ ಮಿಹ್ರಾಬ್‌ನಲ್ಲಿ ನಿಂತು ಫಾತಿಹಾ ಓದಿದರೆ ಅಷ್ಟು ದೊಡ್ಡ ಮಸೀದಿಯ ಕೊನೆಯ ಸಾಲಿನಲ್ಲಿರುವವರಿಗೆ ಕೇಳಿಸುತ್ತದೆ. ಏಳು ಶತಮಾನಗಳ ಮುಂಚೆ ನಿರ್ಮಿಸಿದ ಈ ಮಸೀದಿಯ ವೈಶಿಷ್ಟತೆಯನ್ನು ಕಂಡು ಅಚ್ಚರಿ ಪಡದವರೇ ಇಲ್ಲ.
ಜಗತ್ತಿನ ನಾಲ್ಕು ಪ್ರಸಿದ್ಧ ಮಸೀದಿಗಳ ಮಾದರಿಗಳನ್ನು ಒಳಗೊಳ್ಳುವಂತೆ ಇದನ್ನು ನಿರ್ಮಾಣ ಮಾಡಲಾಗಿದೆ.ಎದುರು ಭಾಗದ ಸುಂದರ ಪ್ರವೇಶ ದ್ವಾರ *ಸ್ಪೈನಿನ ಕೋರ್ಡೋವ ಮಸೀದಿ*ಯಂತಿದ್ದರೆ ಸುಂದರವಾದ ಕಲಾತ್ಮಕ ಹೂವುಗಳಿಂದ ತುಂಬಿಕೊಂಡು *ತುರ್ಕಿಯ ಇಸ್ತಾಂಬೂಲ್ ಮಸೀದಿ*ಯಂತಿದೆ. ಮಸೀದಿ ತುಂಬಾ ಮಿನಾರ‌ಗಳು, ಗುಂಬಝ್‌ಗಳಿದ್ದು ಒಂದು ಕಡೆಯಿಂದ ನೋಡಿದಾಗ *ಮಸ್ಜಿದುಲ್ ಅಖ್ಸಾ*ದಂತೆ ಕಂಡು ಬಂದರೆ ಇನ್ನೊಂದು ಕಡೆಯಿಂದ ನೋಡುವಾಗ *ಮದೀನಾದ ಮಸ್ಜಿದುನ್ನಬವಿ*ಯಂತೆ ಗೋಚರಿಸುತ್ತದೆ. 1347ರಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತ್ತು. ಒಳಮಸೀದಿಯ ಗೋಡೆಯಲ್ಲಿ 150 ಹೂವುಗಳನ್ನು ಚಿತ್ರಿಸಲಾಗಿದ್ದು ಒಂದು ಮತ್ತೊಂದರಂತಿಲ್ಲ ಎಂಬುದು ಅತ್ಯಂತ ಅಚ್ಚರಿ ನೀಡುತ್ತಿದೆ. ಹೀಗೆ ಇನ್ನೂ ಹಲವಾರು ವೈಶಿಷ್ಟತೆಗಳನ್ನೂ, ಅದ್ಭುತಗಳನ್ನೂ ತನ್ನೊಡಳಲ್ಲಾಗಿಸಿರುವ ಪ್ರಸ್ತುತ ಮಸೀದಿಯು ಜನರನ್ನು ತನ್ನತ್ತ ಸೆಳೆಯುತ್ತಿದೆ.
ಗುಲ್ಬರ್ಗಾದ ವಿಹಂಗಮ ನೋಟವನ್ನು ಕಂಡು 3.40ಕ್ಕೆ ಅಲ್ಲಿಂದ ಹೊರಟ ನಾವು ಕನ್ನಡ ನಾಡಿನ ತುತ್ತ ತುದಿಯಾದ *ಬೀದರ್*‌ನತ್ತ ಪ್ರಯಾಣ ಬೆಳೆಸಿದೆವು. ಸಂಜೆ 7.30ಕ್ಕೆ ಬೀದರ್‌ನ ಆಧ್ಯಾತ್ಮಿಕ ಕೇಂದ್ರ ಮಹಾತ್ಮರಾದ *ಅಬುಲ್ ಫೈಳ್  (ರ)ರವರ ದರ್ಗಾ*ದತ್ತ ತಲುಪಿದೆವು. ಅಲ್ಲಿ ಝಿಯಾರತ್ ಮುಗಿಸಿದ ನಾವು ರಾತ್ರಿಯೂಟಕ್ಕಾಗಿ ಅಲ್ಲೇ ಸ್ವಲ್ಪ ನೇರ ತಂಗಿದೆವು. ಇದರೆಡೆಯಲ್ಲಿ ಅಬುಲ್ ಫೈಳ್ ದರ್ಗಾದ ಕವಾಟದ ಬಳಿ ಬುರ್ದಾದ ಕೊನೆಯ ಗೆರೆಗಳನ್ನು ಅಲ್ಲಿನ ಕೆಲವರನ್ನು ಒಟ್ಟು ಸೇರಿಸಿ ಹೇಳಿದ್ದು ಎಲ್ಲರಿಗೂ ಮುದ ನೀಡಿತ್ತು.  ಅಲ್ಲಿ ಕೆಲವರನ್ನು ಮಾತನಾಡಿಸಿದಾಗ ಅವರಿಗೆ ಸುನ್ನಿಯ್ಯತ್ ಅತ್ಯಂತ ತೀವ್ರ ರೀತಿಯಲ್ಲಿದೆ. ನೂತನವಾದಿಗಳನ್ನು ಕಂಡರಾಗದು ಅವರಿಗೆ. ಆದರೆ *ನೀವು ನಮಾಝ್ ಮಾಡುತ್ತೀರಾ..?* ಎಂಬ ಪ್ರಶ್ನೆಗೆ ಇಲ್ಲ ಎನ್ನುವುದೇ ಅವರ ಉತ್ತರ. ಅಅಳಂಕಾನ್ ಎಂಬ ಯುವಕನೊಂದಿಗೆ ಮಾತನಾಡಿದಾಗ, ಅವನು ಹೈದರಾಬಾದ್‌ನ ನಿಝಾಮಿಯಾದಲ್ಲಿ ಕಲಿತಿದ್ದ. ಆದರೆ ಆವನಿಗೂ ನಮಾಝ್ ಒಂದು ವಿಷಯವೇ ಅಲ್ಲ. ಅವನ ಹಿಂದೆ ಯುವಕರ ಒಂದು ದಂಡೇ ಇದೆ. ಇನ್ನು ಮುಂದೆ ನಮಾಝ್ ಬಿಡಬಾರದು ಎಂದಾಗ ಆಯ್ತು ಎನ್ನುತ್ತಾ ಅವನು ಮುಂದೆ ನಡೆದಿದ್ದ. ಆಧ್ಯಾತ್ಮಿಕ ತಾಣಗಳಿಂದೆಲ್ಲಾ ತುಂಬಿ ನಿಂತಿದ್ದರೂ ಒಂದು ಜನಾಂಗವಿಡೀ ನಮಾಝ್ ಉಪವಾಸ ಮುಂತಾದ ಕಡ್ಡಾಯ ಕರ್ಮದಿಂದ ದೂರ ನಿಂತು ಅಂಧ ವಿಶ್ವಾಸಕ್ಕೆ ಜೋತು ಬೀಳುತ್ತಿರುವುದನ್ನು ಕಣ್ಣಾರೆ ಕಂಡಾಗ ಸಹಿಸಲಾಗದ ನೋವುಂಟಾಗುತ್ತಿದೆ. ಪ್ರಬೋಧಕರಿಗೆ ವಿಶಾಲವಾದ ಅವಕಾಶಗಳು ತೆರೆದಿಟ್ಟಿರುವ ಪ್ರಸ್ತುತ ಊರುಕೇರಿಗಳಿಗೆ ಆತ್ಮಾರ್ಥತೆಯಿಂದ ತೆರಳುವ ಯುವ ದಾಇಗಳ ದಂಡೇ ಅಗತ್ಯವಿದೆ.
ರಾತ್ರಿ 11.30ರ ವೇಳೆಗೆ ಬೀದರ್ ನಿಂದ ಹೊರಟ ನಾವು ಬೆಳಿಗ್ಗೆ 5.45ಕ್ಕೆ ರಾಯಚೂರ್ ಜಿಲ್ಲೆಯ ಮುದುಗಲ್ ಎಂಬಲ್ಲಿ ಸುಬುಹಿನಮಾಝ್ ಮಾಡಿದೆವು. ಈ ದಿನ 23 ಬುಧವಾರ ನಮ್ಮ ಯಾತ್ರೆಯ ನಾಲ್ಕನೇ ದಿನ. ನಾವು ಬೆಳಿಗ್ಗೆ 7.45ಕ್ಕೆ *ಇಳಕ್ಕಲ್* ಮಖಾಂಗೆ ಮಟ್ಟದ್ದೆವು. ಮುನ್ನಾದಿನ ಬಿಜಾಪುರದ ತನ್ವೀರ್ ಹಾಶಿಮಿಯವರ ಸಂಸ್ಥೆಯಲ್ಲಿ ನಮ್ಮನ್ನು ಭೇಟಿಯಾಗಿದ್ದ ಇಳಕ್ಕಲ್‌ನ ಕೆಲವು ಎಸ್ಸೆಸ್ಸೆಫ್ ಕಾರ್ಯಕರ್ತರು ಮತ್ತು *ಅಲ್‌ಅನ್ಸಾರ್, ಮೊಯಿಲಾಂಜಿ,ಇಶಾರ* ಪತ್ರಿಕೆಯ ಓದುಗರು ನಮ್ಮೊಂದಿಗೆ ಇಳಕ್ಕಲ್‌ಗೆ ಬರಲೇ ಬೇಕೆಂದು ಹಟ ಹಿಡಿದ್ದರು. ಅವರು ಇಳಕ್ಕಲ್‌ನಲ್ಲಿ ಬೆಳಗ್ಗಿನ ಉಪಹಾರ ತಯಾರುಗೊಳಿಸಿ ನಮ್ಮನ್ನು ಕಾಯುತ್ತಿದ್ದರು. ಅಲ್ಲಿ ಸಣ್ಣ ಒಂದು ಮಜ್ಲಿಸ್ ಆಯೋಜಿಸಿ ನಾವು ದುಆ ನಡೆಸಿದ್ದೆವು. ಇಳಕ್ಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ನಿಂತಿರುವ *ಹಝ್ರತ್ ಮುರ್ತುಜಾ ಶಾ ಖಾದ್ರಿ*ಯವರ ಬಹಳ ಎತ್ತರದ ದರ್ಗಾ ಕಟ್ಟಡ. ಅದು ಬಿಜಾಪುರ ಸುಲ್ತಾನ‌ರ  ವಾಸ್ತು ವೈಭವವನ್ನು ಎತ್ತಿ ತೋರಿಸುವಂತಿತ್ತು. ಅಲ್ಲಿ ಝಿಯಾರತ್ ಮುಗಿಸಿ ಕಾರ್ಯಕರ್ತರ ಭವ್ಯ ಸ್ವಾಗತಕ್ಕೆ ಕೃತಜ್ಞತೆ ಹೇಳಿ ಹೊರಟ ನಾವು 2.30ಕ್ಕೆ *ತುಂಗ ಭದ್ರಾ ಡ್ಯಾಂ* ಬಳಿ ತಲುಪಿದ್ದೆವು. ಡ್ಯಾಂನ ದೃಶ್ಯವನ್ನು ಸವಿದು 1.20ಕ್ಕೆ ಅಲ್ಲಿಂದ ಹೊರಟು ದಾವಣಗೆರೆಯ ಹರಿಹರದತ್ತ ಸಾಗಿದೆವು. ಸಂಜೆ 5 ಗಂಟೆಯಾದಾಗ ನಾವು ಹರಿಹರದಲ್ಲಿದ್ದೆವು. ಎಸ್ಸೆಸ್ಸೆಫ್ ಇಹ್ಸಾನ್ ದಾಇಗಳಾದ *ಕೆಕೆ ಅಶ್ರಫ್ ಸಖಾಫಿ ಸುರಿಬೈಲ್, ಶರೀಫ್ ಸಖಾಫಿ ಬಾಳೆಪುಣಿ, ಮುನೀರ್ ಸಖಾಫಿ ಅಡ್ಡೂರು, ಯಾಸೀನ್ ಸಖಾಫಿ ಅಡ್ಡೂರ್* ನಮ್ಮನ್ನು ಕಾಯುತ್ತಿದ್ದರು. ಅವರು ನೀಡಿದ ಉಜ್ವಲ ಸ್ವಾಗತವನ್ನು ಮರೆಯುವಂತಿಲ್ಲ. ಅಲ್ಲಿ ಸ್ನಾನ ಊಟ ನಮಾಝ್‌ಗಳನ್ನೆಲ್ಲಾ ಮುಗಿಸಿ ಮದ್ರಸಾ ಮಕ್ಕಳಿಗೆ ಹೃಸ್ವ ತರಗತಿಗಳನ್ನು ನಡೆಸಿ ಕೆಲವು ಯುವಕರಿಗೆ ದಅವತ್ತನ್ನೂ ನಡೆಸಿ ದುಆ ನಡೆಸಿ ರಾತ್ರಿಯೇ ಅಲ್ಲಿಂದ ಹೊರಟೆವು.
ನಂತರ ನಮ್ಮ ಯಾತ್ರೆಯು ಶಿವಮೊಗ್ಗ ಜಿಲ್ಲೆಯ ಕುಂದೂರ್ ಎಂಬಲ್ಲಿಗೆ. ನಮ್ಮ ಮುತಲ್ಲಿಮನೊಬ್ಬನ ಮನೆಯಲ್ಲಿ ರಾತ್ರಿಯ ಆತಿಥ್ಯ.. ನಾವು ಅಲ್ಲಿಗೆ ತಲುಪುವಾಗ ಗಂಟೆ ಸರಿ ಸುಮಾರು ನಡುರಾತ್ರಿ 2 ಗಂಟೆಯಾಗಿದ್ದರೂ ಅವರ ಕುಟಂಬಿಕರೆಲ್ಲಾ ಊಟ ನಿದ್ದೆ ಒಟ್ಟು ನಮ್ಮನ್ನು ಕಾಯುತ್ತಿದ್ದ ದೃಶ್ಯ ಕಂಡು ಅದ್ಭುತವಾಯಿತು. ಈ ರೀತಿ ಮುತಅಲ್ಲಿಮರನ್ನು ಪ್ರೀತಿಸುವ ಜನರು ಇಂದೂ ಇದ್ದಾರಲ್ಲಾ...! ಅವರ ಸ್ನೇಹ ಮಿಶ್ರಿತವಾದ ಅದ್ಭುತ ಆತಿಥ್ಯವು ನಮ್ಮ ಮನಸ್ಸಲ್ಲಿ ಮಾಯದ ಅನುಭವವಾಗಿ ಮಾರ್ಪಟ್ಟಿತ್ತು. ಅಲ್ಲಿಂದ ರಾತ್ರಿ 3.30ಕ್ಕೆ ಹೊರಟ ನಾವು ಬೆಳಿಗ್ಗೆ 6 ಕ್ಕೆ ಮೈಸೂರು ತಲುಪಿದ್ದೆವು. ಅದು 24 ನವೆಂಬರ್ ಗುರುವಾರ. ನಮ್ಮ ಯಾತ್ರೆಯ ಐದನೇ ದಿನ.ಅಲ್ಲಿರುವ ಪ್ರೇಕ್ಷಣೀಯ ಸ್ಥಳಗಳನ್ನೆಲ್ಲಾ ವೀಕ್ಷಿಸಿ ರಾತ್ರಿ 8ಕ್ಕೆ ಅಲ್ಲಿಂದ ಹೊರಟು 11.30ಕ್ಕೆ ಕೊಂಡಂಗೇರಿ ಮುತಅಲ್ಲಿಮನೊಬ್ಬನ ಮನೆಯಲ್ಲಿ ರಾತ್ರಿಯೂಟ ಮುಗಿಸಿ ಬೆಳಗ್ಗೆ ಕೊಡಗಿನ ಪ್ರಸಿದ್ದ ಆಧ್ಯಾತ್ಮಿಕ ತಾಣ *ಎಮ್ಮೆಮ್ಮಾಡಿ*ಗೆ ತಲುಪಿದ್ದೆವು. ಯಾತ್ರೆಯ ಆರನೇ ದಿನವಾದ 25ನೇ ತಾರೀಕಿನಂದು ಸೂಫೀಶಹೀದ್ (ರ)ರವರ ದರ್ಗಾದಲ್ಲಿ ಕೊನೆಯ ಝಿಯಾರತ್ ನಡೆಸಿದೆವು. ಅಲ್ಲಿ ನಮ್ಮನ್ನು ಎಲ್ಲಾ ರೀತಿಯಲ್ಲೂ ಸ್ವೀಕರಿಸಿದ ಯತೀಂ ಖಾನಾ ಮ್ಯಾನೇಜರ್ *ಇಮ್ರಾನ್ ಮುಈನಿ ಅಸ್ಸಅದಿ ಬಾಳೆಹೊನ್ನೂರು*ರವರ ವಿಶೇಷ ಸಹಕಾರಕ್ಕೆ ಕೃತಜ್ಞತೆ ಹೇಳುತ್ತಾ ನಮ್ಮ ಪ್ರಯಾಣವು ಮುಂದುವರಿಯಿತು. ಸುಮಾರು 17 ಜಿಲ್ಲೆಗಳನ್ನು ದಾಟಿದ ನಮ್ಮ ಯಾತ್ರೆಯು ಶುಕ್ರವಾರ ಮಧ್ಯಾಹ್ನ 12.30ರ ಹೊತ್ತಿಗೆ ಮಜ್ಲಿಸ್ ಕ್ಯಾಂಪಸ್‌ನೊಳಗೆ ತಲುಪಿತ್ತು.
ಆರು ದಿನಗಳ ದೀರ್ಘಯಾತ್ರೆ, ರಾತ್ರಿ ಎಲ್ಲಿಯೂ ವಿಶ್ರಮವಿಲ್ಲ, ನಿರಂತರ ಯಾತ್ರೆ, ಆದರೂ ಯಾರಿಗೂ ಎಲ್ಲೂ ಆಯಾಸವಾಗಿಲ್ಲ ಎಂಬುದು ನಮ್ಮ ಯಾತ್ರೆಯ ವಿಶೇಷತೆ. ಯಾತ್ರೆಯುದ್ದಕ್ಕೂ ನಡೆದ ತರಗತಿಗಳು, ಮಕ್ಕಳ ಸ್ಪರ್ಧೆಗಳು, ದ್ಸಿಕ್ರ್, ಸ್ವಲಾತ್, ಮದ್ಹ್ ಬೈತ್ ಗಳು ಎಲ್ಲರಲ್ಲೂ ಹೊಸ ಹುರುಪನ್ನು ತುಂಬಿತ್ತು. ಜೊತೆಗೆ ಗುಲ್ಬರ್ಗಾ, ಬಿಜಾಪುರದ ಹಚ್ಚ ಹಸಿರಿನಿಂದ ಕಂಗೊಳಿಸುವ ಸ್ಥಳಗಳಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ಮೂಲಕ ಯಾತ್ರೆಯನ್ನು ಅಧ್ಯಯನ ಯಾತ್ರೆಯನ್ನಾಗಿ ಮಾರ್ಪಡಿಸಲು ಸಾಧ್ಯವಾಯಿತು. ಕಲಿಕೆ ಮತ್ತು ವಿನೋಧಗಳ ಸಮ್ಮಿಶ್ರವಾಗಿದ್ದ ನಮ್ಮ ಕರ್ನಾಟಕ ಯಾತ್ರೆಯು ಮನದಾಳದಿಂದ ಎಂದೂ ಮಾಯದೆ ಅಚ್ಚಳಿಯದೆ ಉಳಿಯುವಂತಾಯಿತು. ವಿದ್ಯಾರ್ಥಿಗಳೆಲ್ಲರನ್ನೂ ಜೊತೆ ಸೇರಿಸಿ ಸಂಸ್ಥೆಯ ಶಿಕ್ಷಕ ವೃಂದವು ನಡೆಸಿದ ಪ್ರಸ್ತುತ ಕರುನಾಡ ಯಾತ್ರೆಯು ಮಜ್ಲಿಸ್ ಇತಿಹಾಸದಲ್ಲಿ  ಅವಿಸ್ಮರಣೀಯ ಯಾತ್ರೆಯಾಗಿತ್ತು. ನಮ್ಮಲ್ಲಿನ ಪ್ರತಿಯೊಬ್ಬರ ಪಾಲಿಗೂ ಅವರ್ಣನೀಯ ಅನುಭೂತಿಯನ್ನು ನೀಡಿತ್ತು. ಅಲ್ಲಾಹು ಸ್ವೀಕರಿಸಲಿ. ಆಮೀನ್.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...