Skip to main content

ಇಸ್ಲಾಂ ಏನು ಕಲಿಸುತ್ತದೆ? ಅದರಲ್ಲಿ ಅಡಗಿರುವ ರಹಸ್ಯಗಳೇನು!?....ಅನ್ಸಾರ್ ಸೈದು

ಇಸ್ಲಾಂ ಏನು ಕಲಿಸುತ್ತದೆ?
ಅದರಲ್ಲಿ ಅಡಗಿರುವ ರಹಸ್ಯಗಳೇನು!?

_ಪ್ರಸಕ್ತ ಸನ್ನಿವೇಶದಲ್ಲಿ ನಡೆಯುತ್ತಿರುವ ಆಗುಹೋಗುಗಳನ್ನು ಗಮನಿಸಿದಾಗ, ನನ್ನ ಕೈಯಲ್ಲಾಗುವ ರೀತಿಯಲ್ಲಿ ಬರೆಯಬೇಕೆಂದು ಮನವು ಹಂಬಲಿಸಿತು. ಇನ್ನೊಂದು ವಿಷಯ ಏನೆಂದರೆ, ಎಷ್ಟು ಬರೆದರೂ ಬರೆದು ಮುಗಿಸಲು ಸಾಧ್ಯವಿಲ್ಲ. ಕಾರಣ ಇಸ್ಲಾಂ ಅಷ್ಟೊಂದು ವಿಶಾಲವಾಗಿದೆ. ಇಲ್ಲಿ ಬರೆದದ್ದು ನೂರರಲ್ಲಿ ಐದು ಶೇಕಡಾ ಮಾತ್ರ ಅಂತ ತಿಳಿದರೆ ಸಾಕು. *ಅಲ್ಪ ಧೀರ್ಘವಾಗಿದೆ!. ಆದರೂ ಸಹನೆಯಿಂದ ಪೂರ್ತಿ ಓದಬೇಕಾಗಿ ಕೇಳಿಕೊಳ್ಳುತ್ತಾ*, ಇದನ್ನು ಸರ್ವ ಧರ್ಮದವರಿಗೂ ನಾಸ್ತಿಕವಾದಿಗಳಿಗೂ ತುಂಬು ಹೃದಯದಿಂದ ಸಮರ್ಪಿಸುತ್ತಿದ್ದೇನೆ._

✍ ಅನ್ಸಾರ್ ಸೈದು*

ಅಲ್ಲಾಹನು ಒಬ್ಬನೇ, ಅವನಲ್ಲದೇ ಬೇರೆ ದೇವನಿಲ್ಲ. ಮುಹಮ್ಮದರು (ﷺ) ಅವನ ಸಂದೇಶವಾಹಕರಾಗಿದ್ದಾರೆ. ಖುರ್'ಆನ್(القرآن‎‎), ಹದೀಸ್(حديث‎‎), ಇಜ್'ಮಾಅ್ Sharia Law (إجماع‎‎), ಖಿಯಾಸ್ Analogy (قياس‎‎) ಹೀಗೆ ನಾಲ್ಕು ಮೂಲಗಳು. ಏನು ಬೇಕು ಏನು ಬೇಡ ಎಂಬುದನ್ನು ಇಸ್ಲಾಂ ಸಂಕ್ಷಿಪ್ತವಾಗಿ ಕಲಿಸಿಕೊಟ್ಟಿದೆ. ಇದರಲ್ಲಿ ಇರುವುದು ಎಲ್ಲಾ ಮುಸಲ್ಮಾನರಿಗೂ ಅನ್ವಯಿಸುತ್ತದೆ. ಅದನ್ನು ಪಾಲಿಸುವುದು ಪ್ರತಿಯೊಬ್ಬ ಮುಸ್ಲಿಮನಿಗೂ ಕಡ್ಡಾಯವಾಗಿದೆ. ಇಸ್ಲಾಂ ಕಲಿಸುವುದನ್ನು ಕಟ್ಟುನಿಟ್ಟಾಗಿ ಪಾಲಿಸುವವನು ಮಾತ್ರ ನೈಜ ಮುಸ್ಲಿಮನಾಗುತ್ತಾನೆ‌. ಇಸ್ಲಾಮಿನ ಆಶಯ ಆದರ್ಶಗಳನ್ನು ಗಾಲಿಗೆ ತೂರುವವನು ಇಸ್ಲಾಮಿನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದರ್ಥ!. ಇಲ್ಲಿ ಇಸ್ಲಾಂ ಯಾರನ್ನು ಬಲವಂತಪಡಿಸಿಲ್ಲ. ತಪ್ಪು ಮಾಡುವವರು ಮಾಡುತ್ತಲೇ ಇರುತ್ತಾನೆ‌‌. ಅದು ಅವನ ವೈಯಕ್ತಿಕ ವಿಷಯವಾಗಿದೆ. ಅವರಿಗೆ ಏನೂ ಬೇಕಾದರೂ ಮಾಡಬಹುದು. ಆದರೆ ಮರಣದ ನಂತರ ಎರಡು ಮಹತ್ತರವಾದ ಘಟ್ಟಗಳಿವೆ. 1) ಕಬರ್ 2) ಮಹ್'ಶರ. ಅಲ್ಲಿ ಪ್ರತಿಯೊಬ್ಬನೂ ಪ್ರಶ್ನಿಸಲ್ಪಡುತ್ತಾನೆ. ಅವನವನು ಮಾಡಿದ ಪಾಪಗಳಿಗೆ ಅವನೇ ಶಿಕ್ಷೆ ಅನುಭವಿಸಬೇಕಾಗುತ್ತದೆ.  ನಂತರದ ಜೀವನವಾಗಿದೆ ಸ್ವರ್ಗ, ನರಕ. ಇಹಲೋಕದಲ್ಲಿ ಅಹಂಕಾರದಿಂದ, ತನ್ನಿಚ್ಛೆಯಂತೆ ಬೇಕಾಬಿಟ್ಟಿ ನಡೆದವನು ಅಲ್ಲಿ ಬೆರಳು ಕಚ್ಚುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದಕ್ಕೂ "ವಿಶ್ವಾಸ" ಎಂಬುದು ಮುಖ್ಯ. ಅದು ಇಲ್ಲದಿದ್ದರೆ ಕೋಣದ ಮುಂದೆ ಕಿನ್ನರಿ ಬಾರಿಸಿದಂತೆ ಆಗಬಹುದು.
-------------- -------------- --------------
*_ಭಾಗ-1_*
-------------- -------------- --------------
ಇಸ್ಲಾಮಿನ ನಿಯಮಗಳನ್ನೂ, ಇಸ್ಲಾಂ ಕೆಲವೊಂದು ವಿಷಯಗಳನ್ನು ಮಾಡಬಾರದು ಎಂದು ಹೇಳಿದ ವಿಷಯಗಳೆನ್ನೆಲ್ಲಾ ಸೂಕ್ಷ್ಮವಾಗಿ ಅರಿತರೆ, ಕಲಿತರೆ ಇಸ್ಲಾಂ ಎಷ್ಟೊಂದು ಅದ್ಭುತವಾಗಿದೆ ಎಂದು ಕುಹಕವಾಡುವವರು ಆಶ್ಚರ್ಯಪಡಬಹುದು. ಕಾರಣವೇನು ಗೊತ್ತಾ!, 1400 ವರ್ಷಗಳ ಹಿಂದೆ ಪ್ರವಾದಿ ಮುಹಮ್ಮದ್ (ﷺ) ನಮಗೆ ಕಲಿಸಿದ ಎಷ್ಟೋ ವಿಷಯಗಳನ್ನು ಶಾಸ್ತ್ರಜ್ಞರು ಇತ್ತೀಚೆಗೆ ಹೇಳುತ್ತಿದ್ದಾರೆ.  ಇನ್ನು ಉದಾಹರಣೆ ಹೇಳುವುದಾದರೆ, ಮುಂಜಿ (circumcision) ಕಾರ್ಯಕ್ರಮ, ಉಪವಾಸ (Fasting), ಟಾಯ್ಲೆಟ್'ಗೆ ಹೋಗುವ ಸಂದರ್ಭದಲ್ಲಿ ಚಪ್ಪಲಿ ಹಾಕುವುದು, ಮುಟ್ಟಿನ ಸಂದರ್ಭದಲ್ಲಿ ಭೋಗಿಸದಿರುವುದು, ನೀರು ಕುಡಿಯುವಾಗ ಕುಳಿತು ಕೊಂಡು ಒಂದೊಂದು ಗುಟುಕಾಗಿ ಕುಡಿಯಬೇಕು, ಮುಂತಾದ ಹಲವು ವಿಷಯಗಳು. ಇಸ್ಲಾಮಿನ ಯಾವುದೇ ನಿಯಮಗಳು ಕೂಡ ಹಾನಿಕರವಲ್ಲ ಎಂಬುದು ಮತ್ತಷ್ಟು ಅದ್ಭುತ!.

ಇಸ್ಲಾಂ ಕೆಲವೊಂದು ವಿಷಯಗಳನ್ನು ನಿಷೇಧಿಸಿದೆ. ಅಂದರೆ ಅದನ್ನು ಮಾಡಬಾರದು ಎಂದು ಹೇಳಿದೆ. ಅದು ಗಂಡಾದರೂ, ಹೆಣ್ಣಾದರೂ ಸರಿ. ಯಾಕೆ ಹೇಳಿದೆ ಎಂದು ಅದರೊಳಗಿರುವ ರಹಸ್ಯಗಳನ್ನು ತಿಳಿಯಲು ಪ್ರಯತ್ನಿಸಿದರೆ ನಿಮಗೆ ಖಂಡಿತವಾಗಿಯೂ ಇದು ಸರಿ ಎಂದು ಎನಿಸದಿರಲ್ಲ. ಕೆಲವೊಂದನ್ನು ಹೇಳುತ್ತೇನೆ. ಇಸ್ಲಾಂ ಮದ್ಯಪಾನ ಸೇರಿದಂತೆ ಮಾದಕ ವಸ್ತುಗಳನ್ನು ನಿಷಿದ್ದಗೊಳಿಸಿದೆ. ಅದರಲ್ಲಿ ಏನು ರಹಸ್ಯ ಇದೆ ಕೇಳಿದ್ರೆ ಬನ್ನಿ ಇಲ್ಲಿದೆ ಉತ್ತರ. ಒಬ್ಬ ದಿನಾಲು ಮದ್ಯಪಾನ ಮಾಡುವವನಾಗಿದ್ದರೆ ಅವನಿಗೆ ಮಾರಕ ರೋಗ ಬರುತ್ತದೆ ಎಂದು ವೈಜ್ಞಾನಿಕ ಲೋಕ ನಮಗೆ ಕಲಿಸುತ್ತದೆ. ನಿಜ ತಾನೇ!?.‌ ಇನ್ನು ಒಬ್ಬನಿಗೆ ಕುಡಿಯುವ ಚಟ ಅಥವಾ ಮಾದಕ ವ್ಯಸನಿ ಆಗಿದ್ದರೆ ಅವನಿಗೆ ಮಾನಸಿಕ ಸಮತೋಲನ ಇರುವುದಿಲ್ಲ. ಆ ಸಮಯದಲ್ಲಿ ಆತ ಏನು ಮಾಡುತ್ತಿದ್ದಾನೆ ಎಂಬ ಅರಿವು ಇರುವುದಿಲ್ಲ. ಏನು ಮಾಡಲು ಹಿಂಜರಿಯುವುದಿಲ್ಲ. ಕೊಲೆಗೆ ಕೊಲೆಯೂ, ಅತ್ಯಾಚಾರಕ್ಕೆ ಅತ್ಯಾಚಾರವು ನಡೆಯುತ್ತದೆ. ಎಲ್ಲವೂ ಮಾನಸಿಕ ಸ್ಥಿಮಿತ ತಪ್ಪಿ ಹೋಗಿದ್ದರಿಂದ ತಾನೇ!?. ನಿತ್ಯ ಕುಡಿಯುವ ಚಟ ಇರುವ ಮನೆಯಲ್ಲಿ ‌ನಿತ್ಯ ಗಲಾಟೆ, ಅಸಮಾಧಾನತೆ. ಅಲ್ಲೆಗಳೆಯಲು ಸಾಧ್ಯವೇ?.

ಕಳ್ಳತನ ಮಾಡಬಾರದೆಂದು ಇಸ್ಲಾಂ ಕಲಿಸುತ್ತದೆ. ಹೌದು ಕಳ್ಳತನ ‌ಮಾಡಿದರೆ, ಅನ್ಯಾಯವಾಗಿ ಇನ್ನೊಬ್ಬರ ಸೊತ್ತು  ಕಬಳಿಸಿದಂತಾಗುತ್ತದೆ. ಇನ್ನೊಬ್ಬರು ಕಷ್ಟಪಟ್ಟು ಸಂಪಾದಿಸಿದ ವಸ್ತುಗಳನ್ನು ತೆಗೆದು ಉಪಯೋಗಿಸಿದರೆ, ಅವರ ಕಣ್ಣೀರಿಗೆ ಕಳ್ಳತನ ‌ಮಾಡಿದವರು ಕಾರಣಕರ್ತರಾಗುತ್ತಾರೆ. ಎಲ್ಲದಕ್ಕೂ ‌ಮುಖ್ಯವಾಗಿ, ಇನ್ನೊಬ್ಬರ ಸೊತ್ತನ್ನು, ‌ವಸ್ತುಗಳನ್ನು ಅನ್ಯಾಯವಾಗಿ ಪಡೆಯಬಾರದು ಎಂಬ ಸ್ಪಷ್ಟ ಸಂದೇಶವನ್ನು ಇಸ್ಲಾಂ ಕೊಡುತ್ತದೆ. ಅದೇ ರೀತಿ ಬಡ್ಡಿಯನ್ನು ಇಸ್ಲಾಂ ‌ನಿಷೇಧಿಸುತ್ತದೆ. ಕಾರಣ ಅದು‌ ಇತರರ ಹಣ. ಲಾಟರಿ, ಜೂಜು ಈ ರೀತಿ ಹಲವು ವಿಷಯಗಳು ಇತರರ ಹಣವನ್ನು ಅನ್ಯಾಯವಾಗಿ ತಿನ್ನಬಾರದೆಂದು ಕಲಿಸುತ್ತದೆ. ಇದು ಸರಿ ತಾನೇ!?. ಯಾವುದೇ ಎಫೆಕ್ಟ್ ಇದರಲ್ಲಿ ಇಲ್ಲ.

ವ್ಯಭಿಚಾರವನ್ನು ಕೂಡ ಇಸ್ಲಾಂ ನಿಷೇಧಿಸುತ್ತದೆ. ತಾನು ಮದುವೆ (ನಿಕಾಹ್) ಆದ ಹೆಣ್ಣಿನೊಂದಿಗಳ್ಳದೇ ಇತರರೊಂದಿಗೆ ಸಂಬಂಧ ಬೆಳೆಸಬಾರದು ಎಂಬರ್ಥದಲ್ಲಿ. ಇಲ್ಲಿ ಇತರರು ಎಂದು ಹೇಳಿದ್ದುದರಲ್ಲಿ ವಿವಾಹಿತೆ ಇರಬಹುದು, ವೇಶ್ಯೆ ಇರಬಹುದು. ಒಂದು ಕುಟುಂಬವನ್ನೇ ಮುರಿಯುವ ಕೆಲಸ ಮಾಡುವುದಾದರೆ, ಇನ್ನೊಂದು ಮಾರಕ ರೋಗಗಳನ್ನು ಎಳೆದು ತರುತ್ತದೆ. ನೋಡಿ ಇಲ್ಲೂ ಕೂಡ ಇಸ್ಲಾಮಿನ ನಿಯಮ ಪರ್ಫೆಕ್ಟ್ ಆಗಿದೆ.

ಅದೇ ರೀತಿ ಮ್ಯೂಸಿಕನ್ನು ಕೂಡ ಇಸ್ಲಾಂ ವಿರೋಧಿಸಿದೆ. ಬಾಹ್ಯ ನೋಟದಲ್ಲಿ ಮ್ಯೂಸಿಕಲ್ಲಿ ಏನೂಶಕ್ತಿಯ ತೊಂದರೆ ಇಲ್ಲ ಎಂದೆನಿಸಿದರೂ ಹಾಡು ಎಂಬುದು ಮನುಷ್ಯನ ಮನಸ್ಸುಗಳನ್ನು ಅಲ್ಲೋಲ ಕಲ್ಲೋಲ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ನೋಡಿ ಎಷ್ಟೋ ಜನರಿಗೆ ಮ್ಯೂಸಿಕ್ ಎಂಬುದು ಒಂದು ಚಟವಾಗಿರುತ್ತದೆ. ಇಯರ್ ಫೋನ್ ಸಿಲುಕಿಸಿ ಅದರಲ್ಲೇ ಮುಳುಗಿರುತ್ತಾರೆ‌. ಇದರಿಂದಾಗಿ ಇತರ ಕೆಲಸಗಳಿಗೆ, ಓದಿನ ಕಡೆಗೆ ಏಕಾಗ್ರತೆ ಸಿಗಲು ಕಷ್ಟ. ಕಿವಿಗೂ ಅಡ್ಡ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಯುವತ್ವವೂ ಇದನ್ನೆಲ್ಲಾ ಅಷ್ಟು ಬೇಗ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಚೆನ್ನಾಗಿ ಗೊತ್ತು.

ಆತ್ಮಹತ್ಯೆಯನ್ನು ಇಸ್ಲಾಂ ನಿಷೇಧಿಸಿದೆ. ಅಲ್ಲಾಹನು ಕೊಟ್ಟ ಆಯುಷ್ಯ ಅದು ಮುಗಿಯುವವರೆಗೂ ಇರಬೇಕು. ಅದನ್ನು ಸ್ವತಃ ಕೊನೆಗೊಳಿಸಲು ಅಧಿಕಾರವಿಲ್ಲ. ಆತ್ಮಹತ್ಯೆಯಿಂದಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಏನೇ ಕಷ್ಟವಿದ್ದರೂ, ಏನೇ ತೊಂದರೆಗಳಿದ್ದರೂ ಎಲ್ಲದಕ್ಕೂ ಪರಿಹಾರವಿದೆ. ಆತ್ಮಹತ್ಯೆ ಯಾವುದಕ್ಕೂ ಪರಿಹಾರವೇ ಅಲ್ಲ. ಎಂಬ ಸಾರಾಂಶವನ್ನು ನೀಡುತ್ತವೆ.

ಹಂದಿ ತಿನ್ನಬಾರದು, ಹರಾಂ ಎಂದು ಇಸ್ಲಾಂ ಕಲಿಸುತ್ತದೆ. ಹಂದಿಯಿಂದ ಎಷ್ಟೋ ರೋಗರುಜಿನಗಳು ಹರಡುತ್ತದೆ ಎಂಬುದು ದೃಢವಾದ ವಿಷಯವಾಗಿದೆ. ಮನುಷ್ಯನ ಆರೋಗ್ಯದ ದೃಷ್ಟಿಯಲ್ಲಿ ಇದು ಎಷ್ಟು ಉಪಯುಕ್ತವಾಗಿದೆ ಅಲ್ವಾ!?

ಮಾಟ, ಮಂತ್ರಗಳನ್ನು ಇಸ್ಲಾಂ ನಿಷಿದ್ಧಗೊಳಿಸಿದೆ. ಇದರಲ್ಲಿರುವ ರಹಸ್ಯ ಏನೆಂದರೆ, ಮಾಟ ಮಂತ್ರದಿಂದ ಏನನ್ನು ಬೇಕಾದರೂ ಮಾಡಬಹುದು, ಸಾಧಿಸಬಹುದು. ಎಷ್ಟೋ ಕುಟುಂಬಗಳನ್ನು ಒಡೆದು ಹಾಕಿದ್ದೂ ಇದೆ. ಎಷ್ಟೋ ಜನರ ವ್ಯಾಪಾರ ವಹಿವಾಟುಗಳು ಬರ್ಬಾದ್ ಆಗಿದ್ದೂ ಇದೇ ‌ಕಾರಣದಿಂದಾಗಿದೆ. ಇಲ್ಲೆಲ್ಲವೂ ಇಸ್ಲಾಂ ನೀಡುವ ಸಂದೇಶಗಳೇನೆಂದರೆ, ಇನ್ನೊಬ್ಬರಿಗೆ ಅನ್ಯಾಯ ಮಾಡಬಾರದು ಎಂದಾಗಿದೆ.
-------------- -------------- --------------
*_ಭಾಗ-2_*
-------------- -------------- --------------
ಇಸ್ಲಾಮಿನ ನಿಯಮಗಳ ಸೂಕ್ಷ್ಮತೆ ಎಷ್ಟಿದೆ ಎಂದರೆ, ಗಂಡ ಮರಣ ಹೊಂದಿದರೆ, ವಿಧವೆಯಾದರೆ ನಾಲ್ಕು ತಿಂಗಳು ಹತ್ತು ದಿನ ಇದ್ದಃ (ಪ್ರಾರ್ಥನೆ, ಖುರ್'ಆನ್, ಝಿಕ್ರ್ ಪಠಿಸುತ್ತಿರಬೇಕು) ಕೂರಬೇಕು. ಇದರಲ್ಲಿ ರಹಸ್ಯವೇನೆಂದರೆ, ಗಂಡ ಮರಣ ಹೊಂದುವ ಸಮಯದಲ್ಲಿ ಅವಳು ಗರ್ಭಿಣಿ ಆಗಿದ್ದರೆ (starting stage) ನಾಲ್ಕು ತಿಂಗಳು ಹತ್ತು ದಿನಗಳು ಆದಾಗ ಗರ್ಭಿಣಿ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಒಂದು ವೇಳೆ ಗಂಡ ತೀರಿದ ತಕ್ಷಣ ಇನ್ನೊಂದು ಮದುವೆಯಾದರೆ ಇದರ ನಡುವೆ ಗರ್ಭಿನಿ ಆದರೆ ಮಗು ಯಾರದೆಂದು ಅಲ್ಲಿ ತರ್ಕ ಉಂಟಾಗಲು ಸಾಧ್ಯತೆ ಇದೆ ತಾನೇ!?. ಅದೇ ವೇಳೆ ಅವಳು ತುಂಬು ಗರ್ಭಿಣಿ ಆಗಿದ್ದಲ್ಲಿ, ಅವಳ ಪ್ರಸವ ಆದೊಡನೆ ಅವಳ ಇದ್ದಃದ ಅವಧಿಯೂ ಮುಗಿಯುತ್ತದೆ.

ಇನ್ನು ಮೂರು ತ್ವಲಾಖ್. ಇದು ಬರೀ ಬಾಯಿ ಮಾತು ಆಗಿದ್ದರೂ, ಅದು ಹೇಳಬೇಕಾದರೆ ಹಲವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಬೇಕಾಬಿಟ್ಟಿ ಹೇಳಿ ಬೇರೆ ಮದುವೆ ಆಗಬಹುದು ಎನ್ನುವುದು ಶುದ್ಧ ತಪ್ಪು. ಇಂದು ಕೆಲವರು ಮಿಸ್ ಯ್ಯೂಸ್ ಮಾಡುತ್ತಿದ್ದಾರೆ. ಇಸ್ಲಾಂ ಎಂದಿಗೂ ವಿನಾಃ ಕಾರಣ ತ್ವಲಾಖ್'ಗೆ ಪ್ರೋತ್ಸಾಹಿಸುವುದಿಲ್ಲ. ಹಾಗೆ ನೋಡಿದರೆ ಎಲ್ಲಾ ಧರ್ಮದವರೂ, ಸೆಲೆಬ್ರಿಟಿಗಳೂ ತ್ವಲಾಖ್ ಹೇಳುತ್ತಿದ್ದಾರೆ. ಪದಬಳಕೆ ಮಾತ್ರ ಇಂಗ್ಲಿಷ್ ಅಷ್ಟೇ, ಡೈವೋರ್ಸ್. ಡೈವೋರ್ಸ್ ಎಂದೇಳುವಾಗ ಚಪ್ಪಾಳೆ ತಟ್ಟುವವರು, ತ್ವಲಾಖ್ ಎಂದ ತಕ್ಷಣ ಕಿವಿ, ಕಣ್ಣು ಎಲ್ಲ ನೆಟ್ಟಗೆ ಮಾಡಿ ನೋಡುತ್ತಾರೆ. ನಾಲ್ಕು ಮದುವೆ ಆಗುವ ವಿಷಯವಾದರೂ ಸರಿ, ಅಲ್ಲಿ ಕೂಡ ಹಲವು ನಿಯಮಗಳನ್ನು ಪಾಲಿಸಲೇಬೇಕು. ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳಬೇಕು, ಪರಸ್ಪರ ನ್ಯಾಯ ಪಾಲಿಸಬೇಕು. ಇದಕ್ಕೆಲ್ಲ ಅಸಾಧ್ಯ ಎಂದಾದರೆ ಬಹುಪತ್ನಿತ್ವಕ್ಕೆ ಇಸ್ಲಾಮಿನಲ್ಲಿ ಅವಕಾಶವೇ ಇಲ್ಲ.‌ ಅಷ್ಟಕ್ಕೂ ನಾಲ್ಕು ಮದುವೆ ಯಾಕೆ ಆಗಬೇಕು ಎಂದು ನಿಮ್ಮ ‌ಮನಸ್ಸಿನಲ್ಲಿ ಮೂಡಿದ್ದರೆ, ಅದಕ್ಕೂ ಉತ್ತರ ಇಲ್ಲಿದೆ. ಒಂದು ಹೆಂಡತಿಯೊಂದಿಗೆ ಆತನಿಗೆ ಮಕ್ಕಳು ಆಗಲು ಸಾಧ್ಯ ಇಲ್ಲ ಎಂದಾದರೆ, ಇಲ್ಲವೇ ತನ್ನ ಕಾಮ ವಾಂಛೆಯನ್ನು ಈ ಹೆಂಡತಿಯಿಂದ ಪೂರೈಸಲು ಸಾಧ್ಯವಾಗದೇ ಇದ್ದರೆ, ಈ ಹೆಂಡತಿಗೆ ಮಾರಕವಾದ ರೋಗವಿದ್ದರೆ ಬೇರೆ ಮದುವೆಯಾಗಬಹುದು. ಇಲ್ಲದಿದ್ದರೆ ಅವನು ಇತರ ಮಹಿಳೆ/ವೇಶ್ಯೆಯರೊಂದಿಗೆ ಅಕ್ರಮ ಸಂಬಂಧ ಬೆಳೆಸಲು ಸಾಧ್ಯತೆ ಇದೆ. ಇಸ್ಲಾಂ ಅಕ್ರಮ ಸಂಬಂಧವನ್ನು ವಿರೋಧಿಸಿದೆ ಮೇಲೆ ತಿಳಿಸಿದ್ದೇನೆ. ಬೇರೆ ಮದುವೆ ಆಗುವುದಾದರೂ ಎಲ್ಲಾ ನಿಯಮಗಳನ್ನು ಪಾಲಿಸಲು ಶಕ್ತನಾಗಿರಬೇಕು.

ಬುರ್ಖಾ ಧರಿಸುವ ಉದ್ಧೇಶ ತನ್ನ ದೇಹದ ಭಾಗಗಳನ್ನು ಇತರರಿಂದ ಮರೆಮಾಚುವುದು. ತನ್ನನ್ನು ಇತರರೆಡೆಗೆ ಆಕರ್ಷಿಸುವುದನ್ನು ಇದರಿಂದ ತಪ್ಪಿಸಬಹುದು. ಇಂದಿನ ಆಧುನಿಕ ಯುಗದಲ್ಲಿ ಡ್ರೆಸ್ಸುಗಳು ಅರ್ಧರ್ಧವಾಗಿ ಧರಿಸಿ ಓಡಾಡುವುದರಿಂದ, ಟಿವಿ ಶೋಗಳಲ್ಲಿ ಇಂತಹುದನ್ನೇ ತೋರಿಸುವುದರಿಂದ ಹಲವಾರು ಅನಾಚಾರಗಳು ತಾಂಡಾವಾಡುತ್ತಿದೆ. ದೊಡ್ಡವರೂ ಸೇರಿದಂತೆ ಎಳೆಯ ಮಕ್ಕಳ ಮನಸ್ಸನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತಿದೆ. ಬುರ್ಖಾ ಆದರೆ ಎಲ್ಲಾ ವಿಧದಲ್ಲೂ ಸೇಫ್.

ಬುರ್ಖಾ ಬಗ್ಗೆ ಹೇಳುವಾಗ ಇದನ್ನು ಕೂಡ ಹೇಳಲೇಬೇಕಾಗುತ್ತದೆ. ಏನೆಂದರೆ ಬುರ್ಖಾ ಧರಿಸುವುದು ಕೂಡ ಅದರ ರೀತಿಯಲ್ಲೇ ಆಗಬೇಕು. ತನ್ನ ಮುಖವನ್ನು ಮುಚ್ಚದೇ, ದೇಹದ ಉಬ್ಬು ತಗ್ಗು ಕಾಣುವ ಹಾಗೆ, ಅಥವಾ ಹಿಂದೆ 'ನಡು'ವಿಗೊಂದು ಒಂದು ಕಟ್ಟು ಹಾಕಿ ಇನ್ನೊಬ್ಬರ ಕಣ್ಣಿಗೆ ಕುಕ್ಕುವ ಹಾಗೆ ಅಥವಾ ಇನ್ನೊಬ್ಬರನ್ನು ಪ್ರಚೋದಿಸುವ ತರ ಇರಬಾರದು. ಹಾಗೆ ಸಾಧ್ಯವಿಲ್ಲ ಅಂತಾದರೆ ಮತ್ತೆ ಬುರ್ಖಾ ಹಾಕಿ ಏನು ಪ್ರಯೋಜನ. ಕಾರಣ ಬುರ್ಖಾ ಧರಿಸುವ ಉದ್ಧೇಶ ದೇಹದ ಭಾಗಗಳನ್ನು ಅನ್ಯರಿಂದ ಮರೆಮಾಚುವ ಸಲುವಾಗಿದೆ. ಬುರ್ಖಾ ಹಾಕುವುದರಿಂದ ಸಂರಕ್ಷಣೆಯ ಲಾಭವೇ ಹೊರತು ಯಾವುದೇ ದುಷ್ಪರಿಣಾಮಗಳು ಇಲ್ಲ ಎಂಬುದು ಕಟು ಸತ್ಯ.

ಕೆಲವೊಂದು ವಿಷಯಗಳನ್ನು ಮಾತ್ರ ಹೇಳಿದ್ದೇನೆ. ಹೇಳಿ‌ ಮುಗಿಸಲಾರದ ವಿಷಯಗಳು ಅಡಗಿವೆ. ಇಸ್ಲಾಮಿನಲ್ಲಿ ಕಲಿಯಲು ಬೆಟ್ಟದಷ್ಟು ಇದೆ. ಮನುಷ್ಯರಿಗೆ ಉಪಯುಕ್ತವಾದ ನಿಯಮಗಳನ್ನು ಇಸ್ಲಾಂ ಕಲಿಸಿ ಕೊಟ್ಟಿದೆ. ಅದು ಪಾಲಿಸಿದರೆ ಅವನಿಗೆ ಗುಣವೇ ಹೊರತು ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂಬುದು ನಿಮಗೆ ಅರ್ಥ ಆಗಿರಬಹುದೆಂದು ಭಾವಿಸುತ್ತೇನೆ. ಇಸ್ಲಾಂ ಕಲಿಸಿದ್ದನ್ನು ಮುಸ್ಲಿಮರು ಮಾತ್ರ ಮಾಡಬೇಕೆಂದು ಯಾರು ಹೇಳಿಲ್ಲ. ಯಾರು ಬೇಕಾದರೂ ಇಸ್ಲಾಮಿನ ನಿಯಮಗಳನ್ನು ಪಾಲಿಸಬಹುದು. ಹಲವಾರು ಮುಸ್ಲಿಮೇತರರೂ ಪಾಲಿಸುತ್ತಿದ್ದಾರೆ. ಇನ್ನು ಇದನ್ನು ಪಾಲಿಸದ ಮುಸ್ಲಿಮರಲ್ಲೇ ಎಷ್ಟೋ ಜನರಿದ್ದಾರೆ. ಇಸ್ಲಾಮಿನ ಪಂಚ ಸ್ಥಂಭಗಳಲ್ಲಿ ಒಂದಾದ ಐದು ವಕ್ತ್ ನಮಾಝ್. ಇದು ಪ್ರತಿಯೊಬ್ಬನಿಗೂ ಕಡ್ಡಾಯವಾಗಿದೆ. ಅನ್ಯ ಧರ್ಮೀಯರಿಗೂ, ಮುಸ್ಲಿಮನಿಗೂ ಇರುವ ಮುಖ್ಯವಾದ ವ್ಯತ್ಯಾಸ ನಮಾಝ್ ಆಗಿದೆ. ಆದರೆ ಇದನ್ನೇ ನಿರ್ಲಕ್ಷ್ಯಿಸುವವರು ಇದ್ದಾರೆ. ಧಾರ್ಮಿಕವಾಗಿ ಹೆಚ್ಚು ಕಲಿಯದವರು ಆಗಿರಬಹುದು ಅಥವಾ ಉದಾಸಿನತೆ ಆಗಿರಬಹುದು. ಮದ್ಯಪಾನ, ಬಡ್ಡಿ, ಕೊಲೆ, ವ್ಯಭಿಚಾರ, ಮ್ಯೂಸಿಕ್ ಮುಂತಾದ ಹಲವಾರು ಕಾರ್ಯಗಳನ್ನು ಇಸ್ಲಾಂ ನಿಷೇದಿಸಿದ್ದರೂ, ಅದನ್ನೆಲ್ಲಾ ಮಾಡುವವರು ನಮ್ಮ ಸಮಾಜದಲ್ಲಿ ಎಷ್ಟೋ ಜನರಿದ್ದಾರೆ. ಅದಕ್ಕೆಲ್ಲ ಅವರೇ ಹೊಣೆ ಹೊರತು ಇಸ್ಲಾಂ ಅಲ್ಲ.

*ನಮಾಝ್ ಎಂಬುದು ಒಂದು ಅದ್ಭುತ ಪ್ರಾರ್ಥನೆಯಾಗಿದೆ. ಅದರಲ್ಲಿರುವ ಚಲನವಲನಗಳು ವೈಜ್ಞಾನಿಕವಾಗಿ ಹಲವಾರು ರಹಸ್ಯಗಳು ಅಡಗಿದೆ. ಅದಕ್ಕೆ ಬೇಕಾಗಿ ಐದು ಸಲ ನಿರ್ವಹಿಸುವ ಅಂಗ ಶುದ್ಧಿ ಶುಚಿತ್ವವನ್ನು ಸಾರುತ್ತದೆ. ನಮಾಝಿಗೆ ನಿಲ್ಲುವಾಗ ಶ್ರೀಮಂತ ಬಡವ, ಕರಿಯ ಬಿಳಿಯ ಎಂಬ ಭೇದ ಭಾವವಿಲ್ಲದೇ ಭುಜಕ್ಕೆ ಭುಜ ಕೊಟ್ಟು ಒಂದೇ ಸಾಲಿನಲ್ಲಿ ನಿಂತು ನಮಾಝ್ ಮಾಡುತ್ತಾರೆ. ನೋಡಿ ಇಸ್ಲಾಂ ಎಷ್ಟೊಂದು ಸುಂದರವಾಗಿದೆ.*

ಇನ್ನೂ ಸ್ವಲ್ಪ ಕೂಲಂಕಷವಾಗಿ ನೋಡುವುದಾದರೆ, ಉಪವಾಸ ದೇಹದ ಸಮತೋಲನವನ್ನು ಕಾಪಾಡುತ್ತದೆ. ಎಷ್ಟೋ ಜನರು ಡಯಟಿಂಗ್ (Dieting) ಎಂಬ ಹೆಸರಿನಲ್ಲಿ ಮಾಡುವುದರ ಬದಲು ವಾರಕ್ಕೆ ಎರಡು ಸಲ (ಸುನ್ನತ್) ಉಪವಾಸ ಹಿಡಿದರೆ ಮುಂದೆ ಬರುವಂತಹ ಹಲವು ರೋಗಗಳನ್ನು ತಡೆಗಟ್ಟಬಹುದು. ಟಾಯ್ಲೆಟ್'ಗೆ ಹೋಗುವಾಗ ತಲೆ ಮರೆಸಬೇಕು, ಚಪ್ಪಲಿ ಹಾಕಬೇಕೆಂದು ಎಂದು ಕಲಿಸಿದೆ. ಅದರಿಂದಾಗಿ ಹಲವಾರು ರೋಗಗಳನ್ನು ತಡೆಗಟ್ಟಬಹುದು. ನೋಡಿ ಶಾಸ್ತ್ರ ಲೋಕವು ಇತ್ತೀಚೆಗೆ ಇದನ್ನೇ ಕಲಿಸುತ್ತದೆ. ನೀರು ಕುಡಿಯುವಾಗ ಕುಳಿತು ಕುಡಿಯಬೇಕು, ಬಲ ಕೈಯಲ್ಲಿ ಕುಡಿಯಬೇಕು, ಅಲ್ಲಾಹನ ನಾಮ ಹೇಳಬೇಕು, ಮೂರು ಗುಟುಕಾಗಿ ಕುಡಿಯಬೇಕು, ಉಗುಳುವಾಗ ಎಡಭಾಗಕ್ಕೆ ಉಗುಳಬೇಕು, ವಾರಕ್ಕೆ ಒಂದು ಸಾರಿ ಉಗುರು ತೆಗೆಯಬೇಕೆಂದು, ದಾಡಿ, ಬುರ್ಖಾ,  ಹೀಗೆ ಪ್ರತಿಯೊಂದು ಪ್ರತಿಯೊಂದು ವಿಷಯಗಳನ್ನು ಕಲಿಸಿಕೊಟ್ಟಿದೆ. ನೋಡಿ ಇಸ್ಲಾಂ ಎಷ್ಟು ಪರಿಶುದ್ಧತೆಯನ್ನು ಹೊಂದಿದೆ ಎಂದು. ಮೇಲೆ ಹೇಳಿದ ಪ್ರತಿಯೊಂದನ್ನು ಸಮಾನ ಮನಸ್ಕರಾಗಿ ಯೋಚಿಸಿ. ಸತ್ಯವನ್ನು ನಿಮಗೆ ಮನದಟ್ಟು ಮಾಡಲು ಖಂಡಿತಾ ಸಾಧ್ಯವಿದೆ.
-------------- -------------- --------------
*_ಭಾಗ-3_*
-------------- -------------- --------------
ಇಸ್ಲಾಂ ಎಂದರೆ ಶಾಂತಿ ಧರ್ಮವಾಗಿದೆ. ಯಾವತ್ತೂ ಶಾಂತಿಯನ್ನೇ ಕಲಿಸುತ್ತದೆ. ನೆರೆಮನೆಯವನು ಹಸಿದಿರುವಾಗ ತನ್ನ ಹೊಟ್ಟೆ ತುಂಬಿಸಿಕೊಳ್ಳುವವನು ನೈಜ ಮುಸಲ್ಮಾನನಲ್ಲ ಎಂದು ಇಸ್ಲಾಂ ಕಲಿಸುತ್ತದೆ. ಅನಾಥ ಮಕ್ಕಳ ಮುಂದೆ ತನ್ನ ಮಕ್ಕಳನ್ನು ಮುದ್ದಿಸಬಾರದೆಂದು ಇಸ್ಲಾಂ ಕಲಿಸುತ್ತದೆ. ಅಂದರೆ ಯಾರಿಗೂ ನೋವುಂಟು ಮಾಡಬಾರದು ಎಂಬ ಸ್ಪಷ್ಟ ಸಂದೇಶವನ್ನು ನೀಡುತ್ತದೆ. ಆದರೆ ಇಂದು ಮುಸ್ಲಿಮರ ತಲೆಗೆ ಕಟ್ಟಿ ಹಾಕುವ ಭಯೋತ್ಪಾದಕ ಎಂಬ ಪಟ್ಟವೂ ಖೇದಕರವಾಗಿದೆ. ಭಯೋತ್ಪಾದಕ ಕೃತ್ಯಗಳನ್ನು ಮುಸ್ಲಿಂ ‌ನಾಮಧಾರಿಗಳು ಮಾಡಿರಬಹುದು ಎಂದರೆ ಅವರು ಇಸ್ಲಾಮಿನ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದರ್ಥ. ಒಂದು ಇರುವೆಗೂ ಕೂಡ ನೋವು ಮಾಡಬಾರದೆಂದು ಕಲಿಸುವ ಧರ್ಮವಾಗಿದೆ ಇಸ್ಲಾಂ. ರಿಫಾಯಿ ಶೈಖ್ (ರ.ಅ)ರವರು ನಮಾಝಿನ ಸಮಯವಾದಾಗ ತನ್ನ ಅಂಗಿಯನ್ನು ತೆಗೆಯಲು ಬಂದರು. ಆದರೆ ತನ್ನ ಅಂಗಿಯ ಕೈಯಲ್ಲಿ ಬೆಕ್ಕು ಮಲಗಿದ್ದನ್ನು ಕಂಡು ಅಂಗಿಯ ಕೈ ಕತ್ತರಿಸಿ ಬೆಕ್ಕಿನ ನಿದ್ದೆಗೆ ಭಂಗವಾಗದಂತೆ ನೋಡಿಕೊಂಡರು. ಇದಾಗಿದೆ ನೈಜ ಇಸ್ಲಾಂ. ಐಸಿಎಸ್ ಹೆಸರಲ್ಲಿ ತಾಂಡವಾಡುವ ಭಯೋತ್ಪಾದನಾ ಕೃತ್ಯಕ್ಕೂ, ಇಸ್ಲಾಮಿಗೂ ಯಾವುದೇ ಸಂಬಂಧವಿಲ್ಲ. *"ತನ್ನ ಧರ್ಮವನ್ನು ಪ್ರೀತಿಸುವುದರೊಂದಿಗೆ, ಇತರ ಧರ್ಮವನ್ನು ಗೌರವಿಸು"* ಎಂದಾಗಿದೆ ಇಸ್ಲಾಂ ಕಲಿಸುವುದು. ಇದಕ್ಕೆ ಕೆಲವರು ಅಪವಾದವಾಗಿರಬಹುದು. ಎಲ್ಲಾ ಐದು ಬೆರಳುಗಳು ಒಂದೇ ‌ರೀತಿ ಇಲ್ಲಾ ತಾನೆ?. ಹಾಗೆ ನೋಡಿದರೆ ಭಾರತದಲ್ಲೇ ಹಲವಾರು ವಿಧ್ವಂಸಕ ಕೃತ್ಯದಲ್ಲಿ ಮುಸ್ಲಿಮೇತರರೂ ಭಾಗಿಯಾದ ಘಟನೆಗಳಿವೆ ಎಂದ ಮಾತ್ರಕ್ಕೆ ಮುಸ್ಲಮರು ಯಾವತ್ತೂ ಅವರನ್ನು ಭಯೋತ್ಪಾದಕರೆಂದು ಕರೆದಿಲ್ಲ. ಭಯ ಉತ್ಪಾದಿಸುವ ಯಾರೇ ಆದರೂ ಅವರೆಲ್ಲ ಭಯೋತ್ಪಾದಕರೇ ಆಗಿದ್ದಾರೆ.

ಪ್ರವಾದಿ ಮುಹಮ್ಮದರು (ﷺ) 1400 ವರ್ಷಗಳ ಹಿಂದೆ ಜೀವಿಸಿದವರು. ಅವರ ಮರಣಾ ನಂತರ ಯಾರೂ ನೇರವಾಗಿ ಅವರನ್ನು ಕಂಡಿಲ್ಲ. ಅವರ ಒಂದೇ ಒಂದು ಫೋಟೋ ಕೂಡ ಇಲ್ಲ. ಆದರೆ ಕೋಟ್ಯಾಂತರ ಮುಸಲ್ಮಾನರ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತವರಾಗಿದ್ದಾರೆ. ಕಾರಣ ಪ್ರವಾದಿ ಪೈಗಂಬರರು (ﷺ) ಅಷ್ಟು ಅದ್ಭುತವಾಗಿದ್ದಾರೆ. ಅಂಧಕಾರದಲ್ಲಿ ಮುಳುಗಿದ್ದ ಜನತೆಗೆ ಬೆಳಕಾಗಿ ಬಂದವರಾಗಿದ್ದಾರೆ. ಆ ಕಾಲದಲ್ಲಿ ಹೆಣ್ಣು ಹುಟ್ಟಿದ್ದು ಅಂತಾದರೆ ತಕ್ಷಣವೇ ಹೂತುಬಿಡುವ ಅಮಾನವೀಯ ಸಂಪ್ರದಾಯ ಇತ್ತು. ಎಲ್ಲದಕ್ಕೂ ಪರಿಹಾರವಾಗಿ, ಪಾವಿತ್ರ್ಯತೆಯೊಂದಿಗಿನ ಸ್ವಾತಂತ್ರ್ಯವನ್ನು ನೀಡಿದವರಾಗಿದ್ದಾರೆ ಪ್ರವಾದಿವರ್ಯರು (ﷺ). *"ತಾಯಿಯ ಕಾಲಡಿಯಲ್ಲಿ ಸ್ವರ್ಗ"* ಎಂದು ಕಲಿಸುವ  ಧರ್ಮ ಒಂದಿದ್ದರೆ ಅದು ಇಸ್ಲಾಂ ಧರ್ಮ ಮಾತ್ರವಾಗಿದೆ. ನೋಡಿ, ಇಸ್ಲಾಂ ಮಹಿಳೆಗೆ ಕೊಟ್ಟ ಸ್ಥಾನಮಾನ!!.

ಇಂದು ಇಸ್ಲಾಮನ್ನು ದ್ವೇಶಿಸುವವರು ಎಷ್ಟು ಜನರಿದ್ದಾರೋ, ಅದಕ್ಕಿಂತಲೂ ದುಪ್ಪಟ್ಟು ಜನರು ಇಸ್ಲಾಮಿನತ್ತ ಆಕರ್ಷಿಸುತ್ತಿದ್ದಾರೆ ಎಂಬುದು ನಗ್ನ ಸತ್ಯ!. ಅದಕ್ಕೆ ಪುರಾವೆಯೇ ಇತರ ಧರ್ಮಗಳಿಗಿಂತ ಇಸ್ಲಾಂ ಇಂದು ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಯಾವ ದೈತ್ಯ ಶಕ್ತಿಗೂ ಅದನ್ನು ತಡೆ ಹಿಡಿಯಲು ಸಾಧ್ಯವೇ ಇಲ್ಲ. ಇಸ್ಲಾಮಿನ್ನು ಯಾಕೆ ಜನರು ದ್ವೇಷಿಸುತ್ತಾರೆ ಅಂದರೆ ಅದು ಅವರ ಭಯ ಅಷ್ಟೇ. ಇಸ್ಲಾಮಿನಲ್ಲಿ ಹೇಳಿದ ಹಲವಾರು ವಿಷಯಗಳನ್ನು ಇಂದು ಶಾಸ್ತ್ರ ಲೋಕವು ಕಂಡು ಹಿಡಿಯುತ್ತಿರುವಾಗ, ಇಸ್ಲಾಮಿನತ್ತ ಆಕರ್ಷಿಸುವುದು ಸಾಮಾನ್ಯವಾಗಿದೆ.

*ಇಸ್ಲಾಮಿನ ಕುರಿತು ಕೆಲವು ಗಣ್ಯ ವ್ಯಕ್ತಿಯ ಹೇಳಿಕೆಯಿಂದ,*

*ಇಸ್ಲಾಮೀ ಜೀವನ ಸಿದ್ಧಾಂತ ಮತ್ತು ಇಸ್ಲಾಮೀ ಜೀವನ ವ್ಯವಸ್ಥೆಯನ್ನು ನಾವು ಹೊಗಳುವುದು ಏಕೆ?*

1) ಅಣ್ಣಾದೊರೈಯವರು ಹೇಳುತ್ತಾರೆ
"..ಇಸ್ಲಾಮೀ ಜೀವನ ಸಿದ್ಧಾಂತವು ಮನುಷ್ಯ ಮನಸ್ಸಿನಲ್ಲಿ ಏಳುವ ಎಲ್ಲ ಸಂಶಯಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರನೀಡುತ್ತದೆ ಎಂಬುದಕ್ಕಾಗಿ ಮಾತ್ರ."

*ಇಸ್ಲಾಮಿನ ಇನ್ನೊಂದು ಗುಣ ವಿಶೇಷತೆಯೇನಂದರೆ ಯಾರು ಆ ಧರ್ಮವನ್ನು ಸ್ವೀಕರಿಸದನೋ ಅವನು ಕುಲ-ಗೋತ್ರಗಳ ಭೇದಭಾವವನ್ನು ಮರೆತೇ ಬಿಟ್ಟನು. ಮುದಗತ್ತೂರಿನಲ್ಲಿ (ತಮಿಳುನಾಡಿನ ಒಂದು ಊರು) ಪರಸ್ಪರ ಕತ್ತು ಕೊಯ್ಯುತ್ತಿದ್ದ ಜನರು ಇಸ್ಲಾಂ ಸ್ವೀಕರಿಸ ತೊಡಗಿದಾಗ ಇಸ್ಲಾಂ ಅವರನ್ನು ಅಣ್ಣ ತಮ್ಮಂದಿರಾಗಿ ಮಾರ್ಪಡಿಸಿತು.ಎಲ್ಲ ಭೇದಭಾವವೂ ಕೊನೆಗೊಂಡಿತು.ನೀಚ ಕುಲದವರು ನೀಚರಾಗಿ ಉಳಿಯಲಿಲ್ಲ.ಎಲ್ಲರೂ ಸನ್ಮಾನ್ಯರೂ ಗೌರವಾನ್ವಿತರೂ ಆಗಿ ಮಾರ್ಪಟ್ಟರು. ಎಲ್ಲರೂ ಸಮಾನ ಹಕ್ಕುಗಳನ್ನೂ ಹೊಂದಿದವರಾಗಿ ಪರಸ್ಪರ ಸಹೋದರತೆಯ ಬಂಧನದಲ್ಲಿ ಬಿಗಿಯಲ್ಪಟ್ಟಿತು*

2) ಇದೇ ರೀತಿ *ಮಹಾತ್ಮ ಗಾಂಧೀಜಿಯವರೊಮ್ಮೆ ಹೇಳಿದ್ದರು,*
"ಒಂದು ವೇಳೆ ನಾನು ಭಾರತದ ಸರ್ವಾಧಿ ಕಾರಿ ಯಾದರೆ ಒಂದು ಕಾಲದಲ್ಲಿ ಇಸ್ಲಾಮೀ ಸಾಮ್ರಾಜ್ಯದ ಖಲೀಫರಾಗಿದ್ದ ಉಮರ್ (ರ.ಅ) ರಂತೆ ಆಡಳಿತ ನಡೆಸುತ್ತೇನೆ".

*ನ್ಯಾಯ ಸ್ಥಾಪಿಸುವಲ್ಲಿ ವಿಜಯಿಯಾಗಿದ್ದ ಉಮರ್(ರ.ಅ) ರವರ ಆಡಳಿತಾವಧಿಯು ಎಲ್ಲ ವಿಧ ದಲ್ಲೂ ಮಾದರೀ ಆಡಳಿತವಾಗಿತ್ತು. ಮಕ್ಕಾನಗರದ ಸಾಮಾನ್ಯ ಆಡು ಮೇಯಿಸುವವನ ಮಗನಾಗಿದ್ದ ಉಮರ್ ರನ್ನು'ಖಲೀಫ'ರನ್ನಾಗಿ ಮಾಡಿದುದೇ ಇಸ್ಲಾಂ ಮತ್ತು ಇಸ್ಲಾಮೀ ಸಿದ್ಧಾಂತವಾಗಿತ್ತು.*

3) *ಪ್ರಸಿದ್ಧ ತತ್ವಜ್ಞಾನಿ ಹಾಗೂ ಖ್ಯಾತ ಚಿಂತಕನಾದ ಬರ್ನಾಡ್ ಷಾ ಹೇಳುವಂತೆ*, "ಆಧುನಿಕ ಲೋಕದ ಎಲ್ಲ ವಿಧ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ಅದಕ್ಕಿರುವ ಒಂದೇ ಒಂದು ಮಾರ್ಗ ಮುಹಮ್ಮದರಂತಹ (ﷺ) ಓರ್ವ ವ್ಯಕ್ತಿಯನ್ನು ಸರ್ವಾಧಿಕಾರಿಯನ್ನಾಗಿ ಮಾಡುವುದಾಗಿದೆ."

ಅದೇ ಪ್ರಕಾರ,
*"ಲೋಕದಲ್ಲಿ ಶಾಶ್ವತವಾಗಿ ಉಳಿಯುವ ಒಂದು ಧರ್ಮವಿದ್ದರೆ ಅದು ಇಸ್ಲಾಂ ಮಾತ್ರ ವಾಗಿದೆ*

4) *ಡಾ .ಹೆಚ್ ಮೈಕಲ್ ಹಾರ್ಟ್ ಹೇಳುತ್ತಾರೆ*, ಮನುಷ್ಯ ಚರಿತ್ರೆಯಲ್ಲಿ ಸಾಧನೆಗಳನ್ನು ಮಾಡಿದ ನೂರುಜನ ಗಣ್ಯರ ಕುರಿತಂತೆ ಒಂದು ಗ್ರಂಥ ರಚಿಸುತ್ತಾರೆ. ಆದರೆ *ಅವರೆಲ್ಲರ ಪೈಕಿ ಮುಹಮ್ಮದ್ (ﷺ)ಗೆ ಮೊದಲ ಸ್ಥಾನ ಕೊಡಲು ಅವರು ನಿರ್ಬಂಧಿತರಾಗುತ್ತಾರೆ. ಏಕೆಂದರೆ ಕೇವಲ ಇಪ್ಪತ್ತಮೂರು ವರ್ಷಗಳ ಅಲ್ಪ ಅವಧಿಯಲ್ಲಿ ಜೀವನದ ಎಲ್ಲ ರಂಗಗಳಲ್ಲಿಯೂ ಸ್ವಾಸ್ಥ್ಯವನ್ನು ಕಳೆದು ಕೊಂಡಂತಹ ಸಮಾಜದಲ್ಲಿ ತನ್ನ ವಿಚಾರಗಳನ್ನು ಕಾರ್ಯ ರೂಪಕ್ಕೆ ತಂದು ಒಂದು ಆದರ್ಶಪೂರ್ಣ ಜನಸಮೂಹವನ್ನು ಕಟ್ಟಿಬೆಳೆಸಿ ಅಡಿಯಿಂದ ಮುಡಿವರೆಗೆ ಪೂರ್ಣ ಪ್ರಮಾಣದಲ್ಲಿ ಬದಲಾದ ಒಂದು ರಾಷ್ಟ್ರವನ್ನು ಸ್ಥಾಪಿಸಿ ತೋರಿಸಿದ ಹೆಗ್ಗಳಿಕೆ ಇಡೀ ಮಾನವ ಇತಿಹಾಸದಲ್ಲೇ ಕೇವಲ ಮುಹಮ್ಮದ್(ﷺ)ರಿಗೆ ಮಾತ್ರ ಸೇರಿದ್ದಾಗಿದೆ.*

5) ಸನ್ಮಾನ್ಯ ಉಣ್ಣಿಕೃಷ್ಣನ್'ರವರು ಇಸ್ಲಾಮಿನ ಬಾಂಗ್'ನ ಕುರಿತು ಹೇಳುತ್ತಾರೆ‌. ಒಂದು ಬಾಂಗಿನ ಸಮಯ ಎರಡು ನಿಮಿಷಗಳು ಮಾತ್ರವಾಗಿದೆ. *ಹಿಂದೂ ದೇವಾಲಯಗಳಲ್ಲಿ ದಿನವಿಡೀ ಭಜನೆ, ಭಕ್ತಿಗಾನಗಳನ್ನು ಹಾಕುತ್ತಾರೆ. ಆದರೆ ಒಬ್ಬನೇ ಒಬ್ಬ ಮುಸ್ಲಿಂ ಕೂಡ ತನ್ನ ನಿದ್ರೆಗೆ ಅದು ಭಂಗವಾಗಿದೆ ಎಂದೋ, ಅದನ್ನು ನಿಷೇದಿಸಬೇಕೆಂದು ಹೇಳಿಕೊಂಡಿಲ್ಲ*. ಇದಾಗಿದೆ ಇಸ್ಲಾಂ.

ಬರವಣಿಗೆ ಇನ್ನೂ ಉದ್ದವಾಗುವ ಕಾರಣದಿಂದ ಕೇವಲ ಐದು ಜನರ ಹೇಳಿಕೆಗಳನ್ನು ಇಲ್ಲಿ ಕೊಟ್ಟಿದ್ದೇನೆ.

ಮುಗಿಸುವ ಮುನ್ನ,
ಇಸ್ಲಾಮಿನ ತತ್ವ ಸಿದ್ದಾಂತಗಳನ್ನು, ಇಸ್ಲಾಮಿನ ಆಶಯ ಆದರ್ಶಗಳನ್ನು ಯಾರೇ ಒಬ್ಬ ತಿಳಿಯಲು ಪ್ರಯತ್ನಿಸುತ್ತಾನೋ ಅವನಿಗೆ ಸತ್ಯ ಮನದಟ್ಟಾಗುವುದರಲ್ಲಿ ಸಂಶಯವೇ ಇಲ್ಲ. ಅವನಿಗೆ ಇಸ್ಲಾಮಿನ ಬಗೆಗಿನ ಕಲಿಕೆ ಮತ್ತಷ್ಟೂ ಕಲಿಯಬೇಕೆಂಬ ಆಸೆ ಏರುತ್ತಲೇ ಹೋಗುತ್ತದೆ. ಅಂತಹ ಎಷ್ಟೋ ದೃಷ್ಟಾಂತಗಳಿವೆ. *ಚಿಂತಿಸುವವರಿಗೆ ದೃಷ್ಟಾಂತವಿದೆ* ಎಂದು ಖುರ್'ಆನ್ ಕಲಿಸುತ್ತದೆ.

✍  *_ಅನ್ಸಾರ್ ಸೈದು_**
ಏನಾದರೂ ಪ್ರಶ್ನೆಗಳಿದ್ದಲ್ಲಿ  ಯಾವುದೇ ಅಂಜಿಕೆ ಇಲ್ಲದೇ ನೇರವಾಗಿ ಕೇಳಬಹುದು,
ansarsaidu111@gmail.com

ಇನ್ ಷಾ ಅಲ್ಲಾಹ್,
ಮತ್ತೊಮ್ಮೆ ಭೇಟಿಯಾಗೋಣ..

Share ಮಾಡಿ, ಇಸ್ಲಾಮಿನ ಕುರಿತು
ಮುಸ್ಲಿಮೇತರರಿಗೆ ಇರುವ ಸಂಶಯಗಳನ್ನು ನಿವಾರಿಸಲು ಸಹಕಾರಿಯಾಗಲಿ.

*ಸಹನೆಯಿಂದ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...