ಒಂದು ದಿನದಲ್ಲಿ ಸಾವಿರ ರಕಅತ್ ನಮಾಝ್ ಮಾಡುತ್ತಿದ್ದ ಪ್ರವಾದಿ ಮೊಮ್ಮಗ
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
▪ *ಪ್ರವಾದಿ* ಮುಹಮ್ಮದ್ (ಸ) ರ ಎರಡನೇ ಮೊಮ್ಮಗ ಹಝ್ರತ್ ಝೈನುಲ್ ಆಬಿದೀನ್ (ರ) ರವರು (ಅಂದರೆ ಪ್ರವಾದಿಯವರ ಮಗಳು ಫಾತಿಮರ (ರ) ಮಗನಾದ ಹಝ್ರತ್ ಹುಸೈನ್ (ರ) ರವರ ಮಗ) ಒಂದು ದಿನದಲ್ಲಿ ಕನಿಷ್ಟ ಒಂದು ಸಾವಿರ ರಕಅತ್ ನಮಾಝ್ ಮಾಡುತ್ತಿದ್ದರು. ಅಲ್ಲಾಹನಲ್ಲಿರುವ ಭಯ ಮತ್ತು ಭಕ್ತಿಯ ಕಾರಣದಿಂದ ನಮಾಝಿಗೆ ಉಝು ಮಾಡಿ ಬರುವಾಗ ಅವರ ಶರೀರದ ಬಣ್ಣವೇ ಬದಲಾಗುತ್ತಿತ್ತು. ಮಾತ್ರವಲ್ಲ ನಮಾಝಿಗೆ ನಿಂತರೆ ವಿಪರೀತ ಚಳಿಯಿಂದ ನಡುಗುವಂತೆ ಭಯದಿಂದ ನಡುಗುತ್ತಿದ್ದರು. ಅಂತೆಯೇ ಯಾವಾಗಲೂ ಬೇಸರದಿಂದ ಕಣ್ಣೀರು ಸುರಿಸುತ್ತಲೇ ಇದ್ದರು. ಈ ಬಗ್ಗೆ ಅವರಲ್ಲಿ ಒಮ್ಮೆ ಯಾರೋ ಕೇಳಿದಾಗ *"ನಾನು ನನ್ನ ತಂದೆ ಮತ್ತು ಸಹೋದರನ ಸಮೇತ ನನ್ನ ಕುಟುಂಬದ ಸುಮಾರು ಇಪ್ಪತ್ತರಷ್ಷು ಮಂದಿಯನ್ನು ಒಂದೇ ಹಗಲು ಕರ್ಬಲಾ ಯುದ್ದದಲ್ಲಿ ಜೀವಂತ ಹತ್ಯೆ ಮಾಡಿದ್ದನ್ನು ಕಣ್ಣಾರೆ ಕಂಡವನಾಗಿದ್ದೇನೆ. ಪ್ರವಾದಿ ಯಅಕೂಬ್ (ಅ) ರವರು ತನ್ನ ಮಗ ಕಾಣೆಯಾದಾಗ ಬೇಸರದಿಂದ ಕಣ್ಣೀರು ಸುರಿಸಿ ಸುರಿಸಿ ಕೊನೆಗೆ ಅವರ ಕಣ್ಣೇ ಬಿಳಿಯಾಗಿತ್ತು. ನಿಜವಾಗಿ ಯೂಸುಫ್ (ಅ) ರವರ ಮರಣ ಅಥವಾ ಕೊಲೆ ಖಾತ್ರಿಯಾಗಿರಲಿಲ್ಲ. ಅದಾಗ್ಯೂ ಪ್ರವಾದಿಯೊಬ್ಬರು ಪುತ್ರನೊಬ್ಬನನ್ನು ಕಾಣೆಯಾದಾಗ ಈ ರೀತಿ ಬೇಸರದಿಂದ ಕಣ್ಣೀರು ಸುರಿಸಿದ್ದರೆ, ಒಂದೇ ದಿನದಲ್ಲಿ ಕುಟುಂಬದ ಇಷ್ಟು ಮಂದಿಯ ದಾರುಣ ಕೊಲೆಯ ಭಯಾನಕ ದೃಶ್ಯ ಕಂಡ ನಾನು ಕಣ್ಣೀರು ಸುರಿಸದೆ ಇರುವೆನಾ..?"* ಎಂದು ಉತ್ತರ ಕೊಟ್ಟರು.
▪ *ಮಹಾನುಭಾವರು* ಒಮ್ಮೆ ಒಂದು ಮನೆಯ ಒಳಗೆ ನಮಾಝು ಮಾಡುತ್ತಿರುವ ವೇಳೆ ಆ ಮನೆ ಬೆಂಕಿಗಾಹುತಿಯಾಯಿತು. ಮನೆ ಬೆಂಕಿಗಾಹುತಿಯಾಗುವುದನ್ನು ಹೊರಗಿನಿಂದ ನೋಡುತ್ತಿದ್ದ ಜನರು ಅವರಲ್ಲಿ ಬೊಬ್ಬೆ ಹಾಕಿ ಹೇಳಿದರು. *"ಮನೆ ಬೆಂಕಿಗಾಹುತಿಯಾಗುತ್ತಿದೆ. ಬೇಗ ಹೊರಬನ್ನಿ."* ಆದರೆ ಇಮಾಮರು ಅವರ ಮಾತಿಗೆ ಯಾವುದೇ ಗಮನ ಕೊಡದೆ ನಮಾಝನ್ನು ಪೂರ್ತಿ ಮಾಡಿ ಹೊರಬಂದರು. ನಂತರ ಇಮಾಮರಲ್ಲಿ ಇದರ ಬಗ್ಗೆ ಕೇಳಿದಾಗ,
*"ನಾನು ಈ ಬೆಂಕಿಗಿಂತ ಭೀಕರವಾದ ಬೇರೊಂದು ಬೆಂಕಿಯನ್ನು ನಂದಿಸಲು ಮತ್ತು ಅದರಿಂದ ಬಚಾವಾಗಲು ಬೇಕಾದ ಒಂದು ಕರ್ಮ ಮಾಡುತ್ತಿದ್ದೆ. ಆದ್ದರಿಂದ ನನಗೆ ಈ ಬೆಂಕಿಯ ಭಯ ಬರಲಿಲ್ಲ."* ಎಂದು ಉತ್ತರಿಸಿದರು.
▪ *ಒಮ್ಮೆ* ಇವರು ಮಸೀದಿಯಿಂದ ನಮಾಝು ಮಾಡಿ ಹೊರಬರುತ್ತಿರುವಾಗ ಒಬ್ಬನು ಇವರನ್ನು ಬಾಯಿಗೆ ಬಂದಂತೆ ಏನೆಲ್ಲಾ ಅವ್ಯಾಚ್ಯ ಮಾತುಗಳಿಂದ ಬೈದನು. ಇದನ್ನು ಕೇಳಿ ಕೆರಳಿದ ಜನರು ಆತನನ್ನು ತರಾಟೆಗೆ ತೆಗೆದುಕೊಂಡರು. ಆಗ ಮಹಾನುಭಾವರು ಹೇಳಿದರು. *"ಆತನನ್ನು ಏನೂ ಮಾಡಬೇಡಿ. ಹಾಗೆಯೇ ಬಿಟ್ಟು ಬಿಡಿ."*
▪ *ನಂತರ* ಈ ವಿಜ್ಞಾನದ ತೇಜಸ್ಸು ಆತನನ್ನು ಕರೆದು ತನ್ನ ಸಮೀಪದಲ್ಲೇ ಕುಳ್ಳಿರಿಸಿ ಅವನಲ್ಲಿ ಕೇಳಿದರು. *"ನಿನಗೆ ನನ್ನಿಂದ ಏನಾದರು ಸಹಾಯ ಬೇಕಿದೆಯಾ..? ಇದ್ದರೆ ಹೇಳು."*
▪ *ಇಷ್ಟೊಂದು* ಹೀನಾಯವಾಗಿ ಜನರೆಡೆಯಲ್ಲಿ ಅವ್ಯಾಚ್ಯ ಶಬ್ದದಿಂದ ಬೈದೂ ಯಾವುದೇ ಪ್ರತೀಕಾರ ಮಾಡದ ಇಮಾಮರ ಈ ಪ್ರೀತಿಯ ಇಸ್ಲಾಮಿನ ಸಹೋದರತೆಯ ಮಾತು ಕೇಳಿದಾಗ ಬಡಪಾಯಿಗೆ ನಾಚಿಕೆಯಾಯಿತು. ಆತ ಮಾತನಾಡಲಾಗದೆ ಒಂದು ನಿಮಿಷ ಮೂಕವಿಸ್ಮಿತನಾದ. ನಂತರ ಇಮಾಮರು ಆತನಿಗೆ ಒಂದು ಸಾವಿರ ದಿರ್‌ಹಮ್ ಟಿಪ್ಸ್ ಕೊಟ್ಟು ಆತನಿಗೆ ವಿದಾಯ ಹೇಳಿದರು.
▪ *ಈ ಘಟನೆಯ* ನಂತರ ಈತನು ಇಮಾಮರನ್ನು ಕಂಡರೆ *"ಇವರು ಸಾಧಾರಣ ವ್ಯಕ್ತಿಯಲ್ಲ. ಒಬ್ಬ ಪ್ರವಾದಿ ಪುತ್ರ"* ಎಂದು ಹೇಳುತ್ತಿದ್ದನು.
▪ *ಪ್ರವಾದೀ* ಕುಟುಂಬದಲ್ಲಿ ಬಹಳ ಪ್ರತಿಭಾವಂತ ವ್ಯಕ್ತಿಯಾಗಿದ್ದ ಈ ಝೈನುಲ್ ಆಬಿದೀನ್ (ರ) ರವರು ತನ್ನ ದೊಡ್ಡಪ್ಪ ಹಝ್ರತ್ ಹಸನ್ (ರ) ರವರ ಪುತ್ರಿಯಾದ ಬೀವಿ ಫಾತಿಮಾಃ ಬಿಂತ್ ಹಸನ್ (ರ) ರನ್ನು ಮದುವೆಯಾಗಿದ್ದರು. ಗಮನಾರ್ಹವೆಂದರೆ, ಇಂದು ನಾವು ಕಾಣುವ ಪ್ರವಾದಿ ಮಹಮ್ಮದ್ (ಸ) ರ ಕುಟುಂಬವಾದ *ಅಹ್‌ಲು ಬೈತ್* ನಲ್ಲಿ *ಹುಸೈನೀ* ಪರಂಪರೆ ಈ ದಂಪತಿಗಳಿಗೆ ಹುಟ್ಟಿದ ಸಂತಾನ ಸರಪಳಿಯಲ್ಲಿ ಮಾತ್ರ ಬಾಕಿ ಉಳಿದಿದೆ ಎಂಬುದು ತಿಳಿಯಬೇಕಾಗಿದೆ.
▪ *ಹಿಜ್‌ರಾ* ವರ್ಷ ಮೂವತ್ತ ಎಂಟರಲ್ಲಿ ಹುಟ್ಟಿ ಹಿಜ್‌ರಾ ತೊಂಬತ್ತನಾಲ್ಕರಲ್ಲಿ ಇಹಲೋಕ ತ್ಯಜಿಸಿದ ಈ ಆತ್ಮೀಯ ಲೋಕದ ತೇಜಸ್ಸಿನ ಮಖ್‌ಬರ ಮದೀನದ ಜನ್ನತುಲ್ ಬಖೀಅ್‌ನಲ್ಲಿ ತನ್ನ ತಂದೆಯ ಸಹೋದರ (ದೊಡ್ಡಪ್ಪ) ಹಝ್ರತ್ ಹಸನ್ (ರ) ರ ಮಖ್‌ಬರದ ಸಮೀಪವಿದೆ.
ಸಂಗ್ರಹ; ಇಮಾಮ್ ಅಲ್ ಹಾಫಿಝ್ ಬಿನ್ ಕಸೀರ್‌ರವರ *ಅಲ್ ಬಿದಾಯಃ ವನ್ನಿಹಾಯಃ* ಎಂಬ ಗ್ರಂಥ.
Comments