ಇದರಿಂದ ಕುಪಿತನಾದ ಜಡ್ಜ್ ಮಹಾನರಿಗೆ ಜೈಲುವಾಸ ವಿಧಿಸಿದನು. ನ್ಯಾಯಾಲಯದ ಆದೇಶದ ಪ್ರಕಾರ ಮಹಾನರನ್ನು ಜೈಲಿನಲ್ಲಿ ಇರಿಸಲಾಗಿತ್ತು.
ಆದರೆ ವಿಲಾಯತಿನ ಪದವಿಗೇರಿದ ಮಹಾನರು ಅಲ್ಲಾಹನು ನೀಡಿದ ಕರಾಮತ್ತಿನಿಂದಾಗಿ ಬ್ರಿಟಿಷರು ಬಂಧಿಸಿ ಜೈಲಿನ ಸೆಲ್ ಒಂದರಲ್ಲಿ ಕೂಡಿ ಹಾಕಿದ್ದರೂ ಸಹ ಅಲ್ಪ ಹೊತ್ತಿನಲ್ಲೇ ಜೈಲಿನ ಹೊರಗಡೆ ಇದ್ದರು. ಇದನ್ನು ಕಂಡ ಜೈಲಿನ ವಾರ್ಡನ್ ಮಹಾನರನ್ನಿರಿಸಿದ್ದ ಸೆಲ್ಲಿನತ್ತ ಧಾವಿಸಿ ಹೋಗಿ ನೋಡಿದಾಗ ಸೆಲ್ಲಿನ ಬಾಗಿಲು ಭದ್ರವಾಗಿ ಮುಚ್ಚಿ ಹಾಕಲಾಗಿದ್ದ ಬೀಗವೂ ಹಾಗೆಯೇ ಇತ್ತು.
ಆದರೆ ಮಹಾನರು ಪವಾಡ ಸದೃಶ ರೀತಿಯಲ್ಲಿ ಹೊರ ಬಂದಿರುವುದನ್ನು ಕಂಡು ದಂಗಾದ ವಾರ್ಡನ್‌ಗೆ ಮಹಾನರು ಸಾಮಾನ್ಯರಲ್ಲ ಎಂಬುದು ಮನದಟ್ಟಾದ ಕಾರಣ ತಕ್ಷಣ ಅವರ ಸಮೀಪ ತೆರಳಿ ಅವರ ಕಾಲಿಗೆ ಬಿದ್ದು ದಯವಿಟ್ಟು ತಾವು ಜೈಲಿಗೆ ಬರಬೇಕು ಇಲ್ಲದಿದ್ದರೆ ತನ್ನ ಕೆಲಸದ ಜೊತೆಗೆ ತಲೆಯೂ ಹೋದೀತು ಎಂದು ಅಂಗಲಾಚಿ ಬೇಡಿದ್ದರಿಂದ ಮಹಾನರು ಮತ್ತೆ ಜೈಲಿಗೆ ತೆರಳಿದ್ದರು.
ಜೈಲಿನ ವಾರ್ಡನ್ ಈ ವಿಷಯವನ್ನು ಕಲೆಕ್ಟರ್‌ನ ಗಮನಕ್ಕೆ ತಂದಾಗ ಕಲೆಕ್ಟರ್, ಉಮರ್ ಖಾಝಿ (ರ) ಯವರಿಗೆ ಒಂದು ಕ್ಷಮಾಪಣಾ ಪತ್ರ ಬರೆದು ಕೊಡುವಂತೆ ಹೇಳಿದರು. ಮಹಾನರು ಅದನ್ನು ನಿರಾಕರಿಸಿದಾಗ ಕೊನೆಗೆ ಕುತುಬುಝ್ಝಮಾನ್ ಮಂಬುರಂ ಸಯ್ಯಿದಲವಿ (ರ) ತಂಙಳರ ಮಧ್ಯಸ್ಥಿಕೆಯಲ್ಲಿ ಮಹಾನರನ್ನು ಯಾವುದೇ ಷರತ್ತಿಲ್ಲದೆ ಬಿಡುಗಡೆಗೊಳಿಸಲಾಯಿತು.
ಹೀಗೆ ಬ್ರಿಟಿಷ್ ಸಾಮ್ರಾಜ್ಯದ ಅನೀತಿಗಳ ವಿರುದ್ಧ ಧೀರ ಹೋರಾಟ ನಡೆಸುತ್ತಾ ಅವರನ್ನು ಸಿಂಹ ಸ್ವಪ್ನದಂತೆ ಕಾಡಿದ್ದ, ಸಮರ ಸೇನಾನಿಯೂ ಧೀರ ಹೋರಾಟಗಾರರೂ ಆಗಿದ್ದ ಶೈಖುನಾರ ಅಂತರಂಗ ಬಹಳ ಮೃದುವಾಗಿತ್ತು.
ಅಂತಹ ಕೆಚ್ಚೆದೆಯ ಆ ಹೋರಾಟಗಾರ ಆಂತರಂಗಿಕವಾಗಿ ತಾಯ ಗರ್ಭದಲ್ಲಿ ಬೆಚ್ಚಗೆ ಸ್ವರ್ಗ ಸುಖ ಅನುಭವಿಸುವ ಮಗುವಿನಂತೆ ಮದೀನಾ ಮುನವ್ವರದ ಒಲವಿನ ಅನುರಾಗದ ಅಲೆಗಳ ಸಿಂಚನದಲ್ಲಿ ಮಿಂದು ಮಿಡಿಯುತ್ತಾ ಮದೀನಾದಲ್ಲಿ ವಿರಾಜಮಾನರಾಗಿರುವ ವಿಶ್ವಾಸೀ ಹೃದಯದ ಉಜ್ವಲ ತಾರೆಯ ಒಲವಿನಪ್ಪುಗೆಗಾಗಿ ಕಾತರದಿಂದ ಕನವರಿಸುತ್ತಾ ಕಾಯುತ್ತಿದ್ದರು.
ಅಂತರಾಳದಲ್ಲಿ ಅಡಗಿರುವ ಮದೀನಾವೆಂಬ ನಯನ ಮನೋಹರವೂ, ಮನಮೋಹಕವೂ ಆದ ಸ್ವರ್ಗದ ತುಣುಕಿನ ಭಾವನಾತ್ಮಕವಾದ ಸೆಳೆತವನ್ನು ಹತ್ತಿಕ್ಕಲಾಗದೆ ಅದೊಂದು ದಿನ ಮದೀನಾದತ್ತ ಹೊರಟೇ ಬಿಟ್ಟರು.
ಹಾಗೆ ಶೈಖುನಾ ಮದೀನಾ ತಲುಪಿದಾಗ ರೌಳಾ ಶರೀಫಿನ ಸುತ್ತಮುತ್ತ ಜನಜಂಗುಳಿ ನೆರೆದಿತ್ತು.
ರೌಳಾ ಶರೀಫಿನ ಮುಂದೆ ನೆರೆದಿದ್ದ ಆಶಿಕೀನ್‌ಗಳೆಲ್ಲರೂ ಸೃಷ್ಟಿಕರ್ತನ ಪ್ರೀತಿ ಪಾತ್ರರಿಗೆ ಸಲಾಮ್ ಹೇಳುವ ತವಕದಿಂದ ಮುನ್ನಡೆಯುತ್ತಿದ್ದರೆ ವೆಳಿಯಂಗೋಡು ಉಮರ್ ಖಾಝಿ (ರ) ಎಂಬ ಈ ಕಥಾನಾಯಕ ಮಾತ್ರ ತನ್ನ ಹೃನ್ಮನಗಳಲ್ಲಿ ಹುದುಗಿದ್ದ ಮದೀನಾ ಮುನವ್ವರದ ಒಲವಿನ ಅನುರಾಗದ ಅನುಬಂಧಗಳನ್ನು ಆಸ್ವಾದಿಸುತ್ತಾ ಮದೀನಾದ ಆ ಮಹಾನ್ ಚೇತನದೊಂದಿಗಿನ ಉಲ್ಲಾಸದ ಸಲ್ಲಾಪಕ್ಕೆ ಕನವರಿಸುತ್ತಾ ಆ ಜನಜಂಗುಳಿಯ ನಡುವೆ ಮೈಮರೆತು ನಿಂತಿದ್ದರು.
ಬಹಳ ಹೊತ್ತಾದರೂ ಅಲ್ಲಿಂದ ಕದಲದೆ ನಿಂತಲ್ಲೆ ನಿಂತಿರುವುದನ್ನು ಕಂಡ ಕಾವಲುಗಾರ ಅಲ್ಲಿಂದ ತೆರಳುವಂತೆ ಸೂಚಿಸಿದ. ಆದರೆ ರೌಳಾ ಶರೀಫಿನ ಅನುರಾಗದ ಅನುಬಂಧದ ಮಧುರಾನುಭೂತಿಯಲ್ಲಿ ಮೈಮರೆತಿದ್ದ ಶೈಖುನಾ ಅಲ್ಲಿಂದ ಕದಲಲಿಲ್ಲ.
ಸಹನೆಗೆಟ್ಟ ಆ ಕಾವಲುಗಾರ ಬಲ ಪ್ರಯೋಗದಿಂದ ಅವರನ್ನು ಅಲ್ಲಿಂದ ಆಚೆ ಎಳೆದೊಯ್ದನು.
ಹೂವಿನ ಮಕರಂದವ ಹೀರುವ ದುಂಬಿಯನ್ನು ಎಷ್ಟು ದೂರ ಅಟ್ಟಿದರೂ ಶರವೇಗದಿಂದ ಆ ದುಂಬಿ ಮತ್ತೆ ಹೂವಿನತ್ತ ಧಾವಿಸಿ ಬರುವಂತೆ ಶೈಖುನಾ ಪುನಃ ರೌಳಾ ಶರೀಫಿನ ಮುಂದೆ ಬಂದು ನಿಂತರು.
ಇದನ್ನು ಕಂಡು ಕುಪಿತನಾದ ಕಾವಲುಗಾರ ಬಲಪ್ರಯೋಗದಿಂದ ಮತ್ತೊಮ್ಮೆ ಅವರನ್ನು ಅಲ್ಲಿಂದ ಎಳೆದೊಯ್ದ.
ನೀಲಾಕಾಶದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಬಾನಾಡಿಯಂತೆ ರೌಳಾ ಶರೀಫೆಂಬ ಪ್ರೇಮ ಸಾಗರದ ಒಲವಿನ ಅನುರಾಗದ ಅಲೆಗಳ ಆಲಿಂಗನದಲ್ಲಿ ಮೈಮರೆತಿದ್ದ ಶೈಖುನಾ ಕಂಬನಿ ತುಳುಕುವ ಕಂಗಳಿಂದ ಭಾವಪರವಶರಾಗಿ ಎದೆ ತುಂಬಿ ಹಾಡಿದರು...
(ಮಹಾನರು ಅಂದು ರೌಳಾ ಶರೀಫಿನ ಮುಂದೆ ಹಾಡಿದ ಬೈತಿನ ಕೆಲವು ಸಾಲುಗಳು)
يا أكرم الكرما على اعتابكم
عمر الفقير المرتجي لجنابكم
يرجو العطاء على البكاء ببابكم
والدمع من عينيه سال سجيما
صلوا عليه وسلموا تسليما
ما جف دفع سال من عينين
لكنه يجري على الخدين*
من حب قلبي سيد الكونين
حيا وميتا في التراب رميما
صلوا عليه وسلموا تسليما
"ಉನ್ನತರಲ್ಲಿ ಅತ್ಯುನ್ನತರಾದ ಮುತ್ತು ನಬಿಯವರೇ ﷺِ...
ತಮ್ಮ ರೌಳಾದ ಬಾಗಿಲ ಸನಿಹಕ್ಕೆ ಫಖೀರನಾದ ಉಮರ್ ತಲುಪಿದ್ದಾನೆ. ಹುಟ್ಟಿನಿಂದಲೇ ಅಂತರಾಳದಲ್ಲಿ ಅಡಗಿದ್ದ ಹಂಬಲವಾಗಿತ್ತು ಇದು ನಬಿಯವರೇ ﷺِ
ಅಮಾಯಕನಾದ ಈ ಉಮರ್ ತಮ್ಮ ಬಳಿ ಯಾಚಿಸುತ್ತಿರುವನು... ನನ್ನ ಕಂಗಳನ್ನೊಮ್ಮೆ ನೋಡಿರಿ.. ಹಬೀಬಿ ﷺِ ಈ ಕಂಗಳಿಂದ ವರ್ಷ ಧಾರೆಯಂತೆ ಹರಿಯುತ್ತಿರುವ ರಕ್ತದ ಹನಿಗಳಂತಹ ಕಂಬನಿಯಿದು ನಬಿಯವರೇ.. ﷺِ
ನಬಿಯೇ ﷺِ ಭಾವರಹಿತವಾದ ಕಂಬನಿಯ ಹನಿಗಳಿದಲ್ಲ. ತಮ್ಮೊಂದಿಗಿನ ಸ್ನೇಹ ಮತ್ತು ಪ್ರೇಮದ ಬಾಂಧವ್ಯವಿದು ನಬಿಯವರೇ ﷺِ
ತಾವು ವಿಶ್ರಮಿಸುತ್ತಿರುವ ರೌಳಾ ಶರೀಫನ್ನು ಕಂಡು ಕಣ್ತುಂಬಿಕೊಳ್ಳದೆ ಈ ಕಂಗಳು ಕಂಬನಿ ಹರಿಸುವುದನ್ನು ನಿಲ್ಲಿಸದು ನಬಿಯೇ ﷺِ
ಎಂದು ಮನಸ್ಸಿನಂತರಾಳದ ಹಾವ ಭಾವಗಳಿಗೆ ಜೀವ ತುಂಬಿ ಭಾವ ಪರವಶತೆಯಿಂದ ಕಂಬನಿ ಮಿಡಿಯುತ್ತಾ ಸುಶ್ರಾವ್ಯವಾಗಿ ಹಾಡುವಾಗ ಆ ಪ್ರೇಮ ಬಾಂಧವ್ಯದ ಮಧುರ ನಿನಾದಕ್ಕೆ ಅಲ್ಲಿ ನೆರೆದಿದ್ದ ಜನಸಾಮಾನ್ಯರ ಕಣ್ಣಾಲಿಗಳೂ ತುಂಬಿ ಬಂದವು.
ಗಿಜಿಗಿಡುತ್ತಿದ್ದ ಜನಸಂದಣಿ ನಿಶ್ಶಬ್ದವಾಗಿ ನೀರವ ಮೌನದಿಂದ ತದೇಕಚಿತ್ತರಾಗಿ ಶೈಖುನಾರ ಹಾಡಿಗೆ ತಲೆದೂಗುತ್ತಿರುವಾಗ ನಿಷ್ಕಳಂಕವಾದ ಆ ಭಾವಜೀವಿಯ ಪ್ರೇಮ ಬಾಂಧವ್ಯಕ್ಕೆ ಭಾಜನರಾದ ಆ ಉಜ್ವಲ ತಾರೆ ﷺِ ರೌಳಾ ಶರೀಫಿನೊಳಗಿಂದ ಮೌನವಾಗಿ ಆಲಿಸಿ ತಲೆದೂಗಿದರು. ಮಾತ್ರವಲ್ಲ, ಅಲ್ಲೊಂದು ವಿಸ್ಮಯಕಾರಿ ಘಟನೆ ನಡೆಯಿತು.
ಏನದ್ಭುತ...!
ಕಬ್ಬಿಣದ ಸಂಕೇೂಲೆಗಳಿಂದ ಭದ್ರಪಡಿಸಲಾಗಿದ್ದ ರೌಳಾದ ಬಾಗಿಲು ತೆರೆಯಿತು. ನೆರೆದ ಜನಸ್ತೇೂಮಕ್ಕೆ ರೇೂಮಾಂಚನ.
ಮದೀನಾದ ಉಜ್ವಲ ತಾರೆಯೊಂದಿಗಿನ ಈ ಭಾವಜೀವಿಯ ಬಾಂಧವ್ಯವ ಕಂಡು ಹೆದರಿ ಕಂಪಿಸಿದ ನಿಯಮಪಾಲಕರು ಅತ್ತಿತ್ತ ಸರಿದರು.
ಎಲ್ಲರೂ ತದೇಕ ಚಿತ್ತದಿಂದ ಆನಂದಾಶ್ಚರ್ಯಚಕಿತರಾಗಿ ನೇೂಡುತ್ತಿದ್ದಂತೆ ಶೈಖುನಾ ಉಮರ್ ಖಾಝಿ (ರ) ರೌಳಾದ ಒಳಗೆ ಪ್ರವೇಶಿಸಿದರು..
ಮುತ್ತು ಹಬೀಬ್ ﷺِ ರವರ ಖಬರ್ ಶರೀಫನ್ನು ಕಂಡು ಕಣ್ತುಂಬಿಕೊಂಡು ಕಂಬನಿ ಮಿಡಿಯುತ್ತಾ ತೃಪ್ತಿಯಾಗುವ ತನಕ ಝಿಯಾರತ್ ಮಾಡಿ ಹೊರಗಿಳಿದಾಗ ಅರಬಿಗಳು ಅನರಬಿಗಳೆಲ್ಲರೂ ಶೈಖುನಾರನ್ನು ಆಲಿಂಗಿಸುತ್ತಾ ಹಾಡಿ ಹೊಗಳಿ ಕೊಂಡಾಡಿದರು.
ಅಲ್ಲಿಂದ ಬೀಳ್ಕೊಂಡ ಶೈಖುನಾ ಉಮರ್ ಖಾಝಿ (ರ) ಮತ್ತೆ ತಾಯಿನಾಡಿಗೆ ಹಿಂದಿರುಗಿದರು.
ತಾಯಿನಾಡಿಗೆ ಮರಳಿದ ನಂತರವೂ ಬ್ರಿಟೀಷರ ವಿರುದ್ಧದ ಹೇೂರಾಟವನ್ನು ಮುಂದುವರೆಸಿದರು.
ಕುತುಬುಝ್ಝಮಾನರಾದ ಮಂಬುರಂ ತಂಙಳ (ಖ.ಸಿ)ರವರ ಬಳಿ ವ್ಯಾಸಂಗ ಮಾಡುತ್ತಿದ್ದಾಗ ವೆಳಿಯಂಗೋಡು ಉಮರ್ ಖಾಝಿ (ರ) ರವರ ಸಹಪಾಠಿಯಾಗಿದ್ದ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಒಂದು ಮಸೀದಿ ನಿರ್ಮಿಸಬೇಕೆಂಬ ಆಕಾಂಕ್ಷೆಯಿಂದ ಸಹೃದಯ ದಾನಿಗಳಿಂದ ಸಹಾಯ ಧನ ಸಂಗ್ರಹಿಸಿ, ಉಮರ್ ಖಾಝಿ (ರ)ರವರಿಗೆ ಆ ಹಣವನ್ನು ನೀಡಿ ಮಸೀದಿ ನಿರ್ಮಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಿದರು.
ದಿನಗಳು ಉರುಳುತ್ತಿದ್ದವು. ಆದರೆ ಉಮರ್ ಖಾಝಿ (ರ)ರವರು ಸುತ್ತಮುತ್ತಲ ಪ್ರದೇಶದಲ್ಲೆಲ್ಲೂ ಮಸೀದಿ ನಿರ್ಮಿಸುತ್ತಿರುವ ಬಗ್ಗೆ ಮಾಹಿತಿ ಲಭಿಸದ ಕಾರಣ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಒಂದು ದಿನ ಕುತುಬುಝ್ಝಮಾನರಾದ ಮಂಬುರಂ ತಂಙಳ (ಖ.ಸಿ)ರವರ ಬಳಿ ಈ ಬಗ್ಗೆ ಹೇಳಿದಾಗ ಮಂಬುರಂ ತಂಙಳ (ಖ.ಸಿ) ರವರು ಈ ಬಗ್ಗೆ ಮರು ಮಾತನಾಡದೆ ನೀವು ಈ ಬಾರಿ ಹಜ್ ನಿರ್ವಹಿಸಲು ಹೋಗಿರಿ ಎಂದರು.
ತಂಙಳರ ಸೂಚನೆಯಂತೆ ಬೈತಾರ್ ಮುಸ್ಲಿಯಾರ್ (ಖ.ಸಿ)ರವರು ಆ ವರ್ಷ ಒಂದು ಹಜ್ ಯಾತ್ರಾ ತಂಡದೊಂದಿಗೆ ಯಾತ್ರೆ ಹೊರಟರು. ಹಜ್ ಯಾತ್ರಾ ತಂಡವು ಸೌದಿ ಅರೇಬಿಯಾದ ತ್ವಾಯಿಫ್ ಎಂಬ ಸ್ಥಳಕ್ಕೆ ತಲುಪಿದಾಗ ಬೈತಾರ್ ಮುಸ್ಲಿಯಾರ್ (ಖ.ಸಿ) ರವರು ಆಕಸ್ಮಿಕವಾಗಿ ಆ ಯಾತ್ರಾ ತಂಡದಿಂದ ಬೇರ್ಪಟ್ಟರು.
Comments