Skip to main content

ಹೊತ್ತು ಕೊಂಡೇ ಹೊತ್ತು ಮುಗಿಸುವ ಕತ್ತೆ


ವಿಸ್ಮಯ ತುಂಬಿದ ಜೀವಜಗತ್ತು

ಕತ್ತೆ ಪುರಾಣ

ಹೊತ್ತು ಕೊಂಡೇ ಹೊತ್ತು ಮುಗಿಸುವ ಕತ್ತೆ

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971553499119

   ▪ *ಕತ್ತೆಯು* ಮೃಗಗಳ ಪೈಕಿ  ಸಾಧುವಾದ ಒಂದು ಮೃಗ. ಪವಿತ್ರ ಕುರ್‌ಆನಿನಲ್ಲೂ ಈ ಪ್ರಾಣಿಯ ಬಗ್ಗೆ ಹಲವಾರು ಕಡೆ ಪರಾಮರ್ಶೆಗಳಿವೆ.
   ▪ *ಗರ್ಭಧಾರಣೆಯಾಗಿ* ಹನ್ನೊಂದು ತಿಂಗಳಾಗುವಾಗ ಮರಿ ಹಾಕುವ ಕತ್ತೆಯು ಎರಡುವರೆ ವರ್ಷವಾಗುವಾಗಲೇ ಗಂಡು ಹೆಣ್ಣು ಪರಸ್ಪರ ಲೈಂಗಿಕ ಚಟುವಟಿಕೆಯಲ್ಲಿ ತೊಡಗುತ್ತದೆ.
   ▪ *ಕತ್ತೆಯು* ಸುಮಾರು ಮೂವತ್ತರಿಂದ ನಲುವತ್ತು ವರ್ಷಗಳ ತನಕ ಬದುಕುತ್ತದೆ. ಕೆಲವೊಮ್ಮೆ ಕೆಲವೊಂದು ಕತ್ತೆಗಳು ಅದಕ್ಕಿಂತಲೂ ಹೆಚ್ಚು ಬದುಕುತ್ತವೆ ಎಂದು ಹೇಳಲಾಗುತ್ತದೆ. 
   ▪ *ಅಬೂ ಸಯ್ಯಾರಃ* (ವಾಹನದ ಪಿತಾಮಹ) ಎಂದು ಖ್ಯಾತಿ ಪಡೆದಿದ್ದ  ಉಮೈಲಃ ಬಿನ್ ಖಾಲಿದ್ ರವರ ಒಡೆತನದಲ್ಲಿ ಒಂದು ಕಪ್ಪು ಬಣ್ಣದ ಕತ್ತೆಯಿತ್ತು. ಆ ಕತ್ತೆಯನ್ನು ನಲುವತ್ತು ವರ್ಷಗಳ ತನಕ ಅವರು ಎಡೆಬಿಡದೆ ಮಕ್ಕಾದ ಮುಝ್‌ದಲಿಫದಿಂದ ಮಿನಾದತ್ತ ಜನರನ್ನು ಬಾಡಿಗೆ ವಾಹನದಂತೆ ಕೊಂಡೊಯ್ಯಲು ಬಳಸಿದ್ದರು. ಈ ಕತ್ತೆಯ ಆರೋಗ್ಯ ಮತ್ತು ಆಯುಷ್ಯ ಕಂಡು ಅಂದಿನ ಜನರಿಗೆ ಅವರಲ್ಲಿ ಬಹಳ ಅಸೂಯೆಯಿತ್ತು. *“ಇಷ್ಟೊಂದು ಆರೋಗ್ಯ ಮತ್ತು ಆಯುಷ್ಯವಿರುವ ಕತ್ತೆ ಬೇರೆ ಇರಬಹುದಾ..?”* ಎಂದು ಖ್ಯಾತ ತತ್ವಜ್ಞಾನಿ ಜಾಹಿಳ್‌ರವರು ಕೂಡ ತನ್ನ  ಪ್ರಸಿದ್ಧ ಗ್ರಂಥವಾದ ಕಿತಾಬುಲ್ ಹಯವಾನ್‌ನಲ್ಲಿ ಅಚ್ಚರಿ ಪ್ರಕಟಿಸಿದ್ದಾರೆ.
   ▪ *ಕತ್ತೆಗಳಲ್ಲಿ* ಕೆಲವು ಸರಂಜಾಮುಗಳನ್ನು ಹೊತ್ತುಕೊಂಡು ಹೋಗುವುದರಲ್ಲಿ ನಿಪುಣರಾಗಿದ್ದರೆ ಮತ್ತೆ ಕೆಲವು ಕುದುರೆಯಂತೆ ಓಡುವುದರಲ್ಲಿ ನಿಪುಣರಾಗಿರುತ್ತದೆ.
   ▪ *ಈ ಮೃಗಕ್ಕೆ* ಒಂದು ದಾರಿಯಾಗಿ ಒಂದು ಕಡೆ ಒಮ್ಮೆ ತನ್ನ ಯಜಮಾನನೊಂದಿಗೆ ಹೋದರೆ ನಂತರದ ಎರಡನೇ ಸಲ ಯಜಮಾನನ ನಿರ್ದೇಶ, ಸಲಹೆ ಬೇಕೆಂದೇನಿಲ್ಲ. ಅದುವೇ ಯಾವುದೇ ಮಾರ್ಗದರ್ಶನವಿಲ್ಲದೆ ಎಷ್ಟೋ ಮೈಲುಗಳಷ್ಟು ದೂರ ದಾರಿತಪ್ಪದೆ ಸರಿಯಾಗಿ ನಿಗದಿತ ಸ್ಥಳಕ್ಕೆ ತಲುಪುತ್ತದೆ. ಹೋಗುವ ಸಮಯ ತನ್ನ ಎಡ ಮತ್ತು ಬಲಭಾಗವನ್ನು ಸರಿಯಾಗಿ ನೋಡಿ ದಾರಿ ತಪ್ಪದಂತೆ ಜಾಗ್ರತೆ ವಹಿಸುತ್ತದೆ. ದಾರಿ ತಪ್ಪದೆ ಸರಿಯಾದ ದಿಶೆಯಲ್ಲಿ ಇರುವಾಗ ಕೆಲವೊಮ್ಮೆ ತನ್ನ ಬಾಲ, ತಲೆ ಮತ್ತು ಎರಡು ಕಿವಿಗಳನ್ನು ಅಲುಗಾಡಿಸಿ *"ದಾರಿ ತಪ್ಪಲಿಲ್ಲ. ಸರಿಯಾದ ದಿಶೆಯಲ್ಲಿದ್ದೇವೆ"* ಎಂಬ ಸೂಚನೆ ಮಾಲಿಕನಿಗೆ ಆಗಾಗ್ಗೆ ಕೊಡುತ್ತದೆ. ಹತ್ತು ಹದಿನೈದು ಮೈಲಿ ದೂರದವರೆಗೂ ಯಾವುದೇ ಗಲಿಬಿಲಿಯಾಗದೆ ಸರಿಯಾಗಿ ಹೋಗುತ್ತದೆ. ಶಾರೀರಿಕವಾಗಿ ಕತ್ತೆಯು ಸ್ವಲ್ಪ ಬಲಹೀನನಾದರೂ ಶ್ರವಣಶಕ್ತಿ ಮತ್ತು ನೆನಪು ಶಕ್ತಿಯಲ್ಲಿ ಇದಕ್ಕೆ ಸಮಾನವಾದ ಮೃಗ ಈ ಪ್ರಪಂಚದಲ್ಲಿ ಬೇರೆ ಇದೆಯೇ ಎಂಬ ಗುಮಾನಿಯಿದೆ.
   ▪ *ಬಾಯಾರಿಕೆಯಿಂದ* ಬಳಲುತ್ತಿರುವ ಹಂದಿಯನ್ನು ಕತ್ತೆಯ ಮೇಲೆ ಹತ್ತಿಸಿದಾಗ ಕತ್ತೆಯು ನೀರು ಕುಡಿದರೆ, ಆ ಹಂದಿ ಸಾಯುತ್ತದೆ. ಇದು ಪರೀಕ್ಷಿಸಿ ನೋಡಿದ ಒಂದು ಅದ್ಭುತ ಸಂಗತಿಯಾಗಿದೆ. ವಿಶ್ವವಿಖ್ಯಾತ ತತ್ವಜ್ಞಾನಿ *ಬಲೀನಾಸ್* ತನ್ನ "ಅಲ್ ಖವಾಸ್ಸ್" ಎಂಬ ಗ್ರಂಥದಲ್ಲಿ ಈ ಸಂಗತಿಯನ್ನು ಉಲ್ಲೇಖಿಸಿದ್ದಾರೆ.
    ▪  *ಕತ್ತೆಯು* ಸಿಂಹ ಗರ್ಜನೆ ಕೇಳಿದಾಕ್ಷಣ ಮೂರ್ಛೆತಪ್ಪಿ ಬೀಳುತ್ತದೆ. ಮಾತ್ರವಲ್ಲ ಭಯದ ಕಠೋರತೆಯಿಂದ ಕೆಲವೊಮ್ಮೆ ತಾನಾಗಿಯೇ ನೆಲಕ್ಕೆ ಅಥವಾ ಬಂಡೆಗೆ ತಲೆ ಬಡಿದು ಸಾಯಲು ಕೂಡ ನೋಡುತ್ತದೆ.
   ▪ *ಬಹಳ* ಪ್ರಾಚೀನ ಕಾಲದಿಂದಲೇ ಜನರು ಕತ್ತೆಯನ್ನು ಸರಂಜಾಮು ಮತ್ತು ಸರಕುಗಳನ್ನು  ಕೊಂಡೊಯ್ಯಲು ಉಪಯೋಗಿಸುತ್ತಿದ್ದರು. ಅಲ್ಲದೆ ಈ ಸಾಧು ಮೃಗವನ್ನು ಪುರಾತನ ಕಾಲದಿಂದಲೇ ಯಾವಾಗಲೂ ಬಹಳ ಕೆಳಮಟ್ಟದಿಂದಲೇ ಕಾಣಲಾಗುತ್ತಿತ್ತು. ಕೆಳದರ್ಜೆಗೆ ಹೋಲಿಕೆ ಮಾಡಿ ಉದಾಹರಣೆಗೆ ಕೊಡುವುದೂ ಕತ್ತೆಯನ್ನಾಗಿರುತ್ತದೆ. ಒಬ್ಬನನ್ನು ದೂಷಿಸುವಾಗಲೂ ಈ ಆಧುನಿಕ ಯುಗದಲ್ಲೂ ಕೂಡ ಅರಬಿಗಳಿಂದ ಹಿಡಿದು ಕನ್ನಡಿಗರ ತನಕ, ಅಧ್ಯಾಪಕರಿಂದ ಹಿಡಿದು ಮನೆ ಗೃಹಿಣಿಯ ತನಕ ಎಲ್ಲರೂ ಕತ್ತೆಯ ಹೆಸರನ್ನೇ ಬಳಸುತ್ತಾರೆ. ಅಂತೆಯೇ ಹಳೆಯ ಕಾಲದಿಂದ ಮೊದಲ್ಗೊಂಡು ಅಬ್ಬಾಸಿಯ್ಯಾ ಆಡಳಿತಾವಧಿಯ ತನಕ ಯಾರಾದರೊಬ್ಬ ಆಡಳಿತಾಧಿಕಾರಿ ಯಾವುದಾದರೊಂದು ಹಗರಣ ಅಥವಾ ಭ್ರಷ್ಟಾಚಾರದಲ್ಲಿ ಭಾಗಿಯಾದರೆ ಶಿಕ್ಷೆಯೆಂಬಂತೆ ಅವನನ್ನು ಕತ್ತೆಯ ಮೇಲೆ ಕುಳ್ಳಿರಿಸಿ ಜನರೆಡೆಯಲ್ಲಿ ಮೆರವಣಿಗೆ ಮಾಡಿ ಕೊಂಡು ಹೋಗುತ್ತಿರುವುದು ವಾಡಿಕೆಯಾಗಿತ್ತು.
      ▪ "ನೀವು ಕತ್ತೆಯ ಕಿರುಚಾಟ ಕೇಳಿದರೆ ಅಲ್ಲಾಹನಲ್ಲಿ ಶೈತಾನನಿಂದ ರಕ್ಷಣೆಯನ್ನು ಕೇಳಿರಿ. ಯಾಕೆಂದರೆ, ಅದು ಕಿರುಚುವುದು ಯಾವುದೋ ಪಿಶಾಚಿಯನ್ನು ಕಂಡ ಕಾರಣದಿಂದಾಗಿರುತ್ತದೆ. ಅಂತೆಯೇ ನೀವು ಕೋಳಿಯ ಕೂಗನ್ನು ಕೇಳಿದರೆ ಅಲ್ಲಾಹನಲ್ಲಿ ಅವನ ಅನುಗ್ರಹವನ್ನು ಕೇಳಿರಿ. ಯಾಕೆಂದರೆ ಅದರ ಕೂಗು ಯಾವುದೋ ಮಲಕನ್ನು ಕಂಡದ್ದರಿಂದಾಗಿರುತ್ತದೆ." ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸನ್ನು ಇಮಾಮ್ ಬುಖಾರಿ ವರದಿ ಮಾಡಿದ್ದಾರೆ.
   ▪ "ಸ್ವರದಲ್ಲಿ ಬಹಳ ಕೆಟ್ಟ ಸ್ವರ (ಕಿರುಚಾಟ) ಕತ್ತೆಯದ್ದಾಗಿದೆ." ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ.
   ▪ *ಕತ್ತೆಯು* ಕೆಲವೊಮ್ಮೆ ಒಂದೇ ಕಿರುಚನ್ನು ತನ್ನ ಚಾತುರ್ಯದಿಂದ ಹತ್ತು ರಾಗಗಳಲ್ಲಿ ಮಾಡಿ ಕಿರುಚುತ್ತದೆ.
   ▪ *"ಕುದುರೆಯು* ಶ್ರೀಮಂತರ ಸಂಚಾರ ವಾಹನವಾದರೆ ಕತ್ತೆಯು ಬಡವರ ಸಂಚಾರ ವಾಹನವಾಗಿದೆ. ಕತ್ತೆಯ ಮೇಲೆ ಕುಳಿತು ಸಂಚಾರ ಮಾಡುವವನಿಗೆ ಅಹಂಕಾರವೆಂಬುದು ಇರಲಾರದು" ಎಂದು ಪ್ರವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸನ್ನು ಸಹಾಬೀಶ್ರೇಷ್ಠ ಹಝ್ರತ್ ಅಬೂಹುರೈರ (ರ) ರವರಿಂದ ಇಮಾಮ್ ಬೈಹಖೀ ವರದಿ ಮಾಡಿದ್ದಾರೆ. ಅಂತೆಯೇ *"ಎತ್ತರ ಕಡಿಮೆಯಿದ್ದು ಗಿಡ್ಡದಾದ ಕಪ್ಪು ಬಣ್ಣದ ಕತ್ತೆಯು ಮನೆಗೆ ಅಪಶಕುನವೆಂದು"* ಪ್ರವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸನ್ನು ಇಬ್‌ನು ಉಮರ್ (ರ) ರವರಿಂದ ಇಬ್‌ನು ಅದಿಯ್ ತನ್ನ "ಅಲ್ ಕಾಮಿಲ್" ಎಂಬ ಗ್ರಂಥದಲ್ಲಿ ವರದಿ ಮಾಡಿದ್ದಾರೆ.
   ▪ *ಪವಿತ್ರ* ಕುರ್‌ಆನಿನಲ್ಲಿ "ಅಲ್ ಬಕರಃ" ಅಧ್ಯಾಯದಲ್ಲಿ ಉಲ್ಲೇಖಿಸಲ್ಪಟ್ಟ ಉಝೈರ್ (ಅ) ರವರ ಕತ್ತೆಯು ಸ್ವರ್ಗ ಪ್ರವೇಶಿಸಲು ವಿಶೇಷ ಆಹ್ವಾನ ಮತ್ತು ಪರವಾನಿಗೆ ದೊರೆತ ಕೆಲವು ಪ್ರಾಣಿಗಳಲ್ಲಿ ಒಂದಾಗಿದೆ.
   ▪ *ಇಸ್ರೇಲೀ* ಸಂತತಿಗಳು (ಬನೂ ಇಸ್ರಾಯೀಲ್) ಅಕ್ರಮ ಮತ್ತು ಅನಾಚಾರದಲ್ಲಿ ಮುಳುಗಿದಾಗ ಬುಖ್ತುನಸರ್ ಎಂಬ ದುಷ್ಟನಾದ ಚಕ್ರವರ್ತಿಯ ದೌರ್ಜನ್ಯದ ಮೂಲಕ ಅಲ್ಲಾಹನು ಒಂದು ಪ್ರದೇಶ ಮತ್ತು ಅಲ್ಲಿನ ಜನತೆಯನ್ನು ಸಂಪೂರ್ಣವಾಗಿ ನಾಶ ಮಾಡಿದನು. ಬುಖ್ತುನಸರನ ದೌರ್ಜನ್ಯದಿಂದ ನಾಶವಾದ ಪಾಳುಬಿದ್ದ ಆ ಭೂಮಿಯಲ್ಲಿ ಒಂದು ದಿನ ಆ ಕಾಲದ ಉಝೈರ್ ಎಂಬ ಸದಾಚಾರಿಯಾದ ಒಬ್ಬ ವ್ಯಕ್ತಿಯು ತನ್ನ ಕತ್ತೆಯ ಮೇಲೆ ಕುಳಿತು ಪಾಳುಬಿದ್ದ ಪ್ರದೇಶವನ್ನು ಸುತ್ತಿ ನೋಡಲು ಹೊರಟರು.
   ▪ *ಅಂತೆಯೇ* ಬೈತುಲ್ ಮುಖದ್ದಸಿನ ಪರಿಸರ ಪ್ರದೇಶದಲ್ಲಿ ಮನುಷ್ಯರು ಯಾರೂ ಇಲ್ಲದ ಒಂದು ನಿರ್ಜನ ಪ್ರದೇಶ ತಲುಪಿದಾಗ ಬಹಳ ಸುಸ್ತಾಗಿದ್ದ ಅವರು ಅಲ್ಲಿದ್ದ ಕೆಲವು ಮರಗಳಿಂದ ಅತ್ತಿಹಣ್ಣು ಮತ್ತು ದ್ರಾಕ್ಷಿಹಣ್ಣನ್ನು ಕಿತ್ತು ತೆಗೆದು ಅದರಿಂದ ಅತ್ತಿಯನ್ನು ತಿಂದು ದ್ರಾಕ್ಷಿಯನ್ನು ರಸ (Juice) ಮಾಡಿ ಕುಡಿದರು. ನಂತರ ಬಾಕಿ ಉಳಿದದ್ದನ್ನು ಒಂದು ಬೋಗುಣಿಯಲ್ಲಿ ಹಾಕಿ ಅಲ್ಲಿ ಹತ್ತಿರ ಒಂದು ಕಡೆ ಇಟ್ಟು ತನ್ನ ಕತ್ತೆಯನ್ನು ಒಂದು ಪಾಳುಬಿದ್ದ ಮನೆಯಂಗಳದಲ್ಲಿ ಒಂದು ಕಂಬಕ್ಕೆ ಕಟ್ಟಿಹಾಕಿ ಅಲ್ಲೇ ಒಂದು ಕುಸಿದು ಬಿದ್ದ ಮನೆಯ ಜಗಲಿಯಲ್ಲಿ ಮಲಗಿದರು.
   ▪ *ಇತ್ತ* ಬುಖ್‌ತ್‌ನಸರನ ದಬ್ಬಾಳಿಕೆಯಲ್ಲಿ ಜೀವ ಕಳೆದುಕೊಂಡು ಮಣ್ಣಾಗಲು ಕಾಯುತ್ತಿರುವ ಕೆಲವರ ಅಸ್ಥಿಪಂಜರವು ಅಲ್ಲಿ ಮನೆಯೊಳಗೆ ರಾಶಿ ಬಿದ್ದಿದ್ದವು. ಇದನ್ನೆಲ್ಲಾ ಕಂಡ ಉಝೈರ್ (ರ) ಅಧ್ಬುತಗೊಂಡು ತನ್ನ ಮನದಲ್ಲೇ ಹೇಳಿದರು. *"ಸಂಪೂರ್ಣ ಕುಸಿದುಬಿದ್ದು ಸರ್ವ ನಾಶವಾದ ಒಂದು ಗ್ರಾಮಕ್ಕೆ ಅಲ್ಲಾಹನು ಪುನರ್ಜನ್ಮ ಕೊಡುವುದು ಹೇಗೆ..?"*
   ▪ *ಇದು ಕೇಳಿದ* ಅಲ್ಲಾಹನು ಜಗಲಿಯಲ್ಲಿ ಮಲಗಿ ನಿದ್ದೆಗೆ ಜಾರುತ್ತಿದ್ದ ಉಝೈರ್(ರ)ರನ್ನು ಮರಣಕ್ಕೆ ಅಧೀನ ಪಡಿಸಿದನು. ನೂರು ವರ್ಷಗಳ ಕಾಲ ಮೃತ್ಯುವಾಗಿದ್ದ ಅವರನ್ನು ಮತ್ತು ಅವರ ಕತ್ತೆಯನ್ನು ಅಲ್ಲಾಹನು ಮನುಷ್ಯ, ಮೃಗ, ಪಕ್ಷಿಗಳ ಕಣ್ಣಿನಿಂದ ಅವುಗಳಿಗೆ ಕಾಣದಂತೆ ರಕ್ಷಣೆ ನೀಡಿದನು. ನೂರು ವರ್ಷಗಳ ಬಳಿಕ ಅವರನ್ನು ಪುನಃ ಬದುಕಿಸಿ ಅಲ್ಲಾಹನು ಅವರಲ್ಲಿ ಕೇಳಿದನು. "ತಾವು ನಿದ್ದೆಯಲ್ಲಿ ಎಷ್ಟು ಸಮಯ ಕಳೆದಿರುವಿರಿ..?" "ಒಂದು ದಿನ ಅಥವಾ ಕೆಲವು ತಾಸುಗಳು ಕಳೆದಿರುವೆನು" ಎಂದು ಅವರು ಉತ್ತರಿಸಿದರು.
   ▪ *ಅಲ್ಲಾಹನು* ಹೇಳಿದನು. "ತಾವು ನೂರು ವರ್ಷ ನಿರ್ಜೀವ ಅವಸ್ಥೆಯಲ್ಲಿ ನಿದ್ದೆಯಲ್ಲಿ ಕಳೆದಿರುವಿರಿ. ತಾವು ಅಂದು ತಮ್ಮೊಂದಿಗೆ ಇಟ್ಟುಕೊಂಡಿಟ್ಟ ಆಹಾರ ಪಾನೀಯಗಳತ್ತ ನೋಡಿ. ಅದು ಹಾಳಾಗದೆ ಹಾಗೆಯೇ ಇದೆ. ನಿಮ್ಮ ಕತ್ತೆಯನ್ನು ನೋಡಿ. ಅದರ ಅಸ್ಥಿಪಂಜರ ಶಿಥಿಲವಾಗಿ ಹೋಗುತ್ತಲಿದೆ. ನಾನು ನಿಮ್ಮನ್ನು ಜನರಿಗೆ ಒಂದು ದೃಷ್ಟಾಂತವನ್ನಾಗಿ ಮಾಡಲು ಹೀಗೆ ಮಾಡಿದೆನು."
   ▪ *ಪುನರ್ಜೀವ* ಪಡೆದ ಉಝೈರ್ (ರ) ರವರು ನೊಡುತ್ತಿಂದಂತೆಯೇ ಸತ್ತು ಮಣ್ಣಾಗಲು ತಯಾರಾಗುತ್ತಿದ್ದ ತನ್ನ ಕತ್ತೆಯ ಎಲುಬುಗಳು ಪರಸ್ಪರ ಜೋಡನೆಯಾಗಿ, ಅದಕ್ಕೆ ಮಾಂಸ ಸೇರಿಕೊಂಡು, ಚರ್ಮದ ಹೊದಿಕೆಯಾಗಿ, ಚರ್ಮದಲ್ಲಿ ರೋಮಗಳ ಮೊಳಕೆಯಾಯಿತು. ಕೊನೆಗೆ ಅಲ್ಲಾಹನು ಕಳುಹಿಸಿದ ಮಲಕ್ ಮುಖಾಂತರ ಜೀವ ಕೊಡಲಾಯಿತು.
    ▪ *ನಂತರ* ಪುನರ್ಜೀವ ಪಡೆದ ಈ ಅದ್ಭುತ ಕತ್ತೆಯ ಮೇಲೆ ಕುಳಿತು ಉಝೈರರು ತನ್ನ ಮನೆಯತ್ತ ತೆರಳಿದರು. ಮನೆ ತಲುಪಿದಾಗ ಮನೆಯ ಜಗಲಿಯಲ್ಲಿ ನೂರ ಇಪ್ಪತ್ತು ವರ್ಷ ಪ್ರಾಯದ ಒಬ್ಬರು ಮಹಿಳೆ ಕುಳಿತಿದ್ದರು. ಆ ಮಹಿಳೆಯಲ್ಲಿ ಉಝೈರರು ಕೇಳಿದರು. "ಇದು ಉಝೈರರ ಮನೆಯಲ್ಲವೇ..?" "ಹೌದು.. ಉಝೈರರ ಮನೆ. ಆದರೆ ಉಝೈರ್ ಈಗ ಇಲ್ಲ. ಅವರು ಊರು ಬಿಟ್ಟು ನಮ್ಮನ್ನಗಲಿ ಸುಮಾರು ನೂರು ವರ್ಷವಾಯಿತು. ಅವರ ಪತ್ತೆಯೇ ಇಲ್ಲ." ಎಂದು ಮಹಿಳೆ ಉತ್ತರಿಸಿದರು.
   ▪ *ಇದನ್ನು  ಕೇಳಿದ* ಉಝೈರರು ಹೇಳಿದರು. "ಆ ಉಝೈರ್ ನಾನೆ."  ನಂತರ ಉಝೈರರು ನಡೆದ ಸಂಗತಿಯನ್ನು ಮಹಿಳೆಗೆ ವಿವರಿಸಿದರು. ಆಗ ವೃದ್ಧ ಮಹಿಳೆಯ ಹೇಳಿದರು. "ನೀವು ಉಝೈರ್ ಎಂದು ನನಗೆ ಖಾತ್ರಿ ಆಗಬೇಕಾದರೆ ನೀವೊಂದು ಕೆಲಸ ಮಾಡಬೇಕು. ಅದೇನೆಂದರೆ, ನನಗೀಗ ಕಣ್ಣಿಗೆ ದೃಷ್ಟಿಯಿಲ್ಲ. ನಿಮ್ನನ್ನು ನೋಡಿ ತಿಳಿಯಬೇಕಾದರೆ ದೃಷ್ಟಿ ಬೇಕು. ಅದಲ್ಲದೆ ನಮ್ಮ ಉಝೈರ್ ಪ್ರಾರ್ಥನೆಗೆ ಉತ್ತರ ದೊರಕುವವರೂ ಆಗಿದ್ದರು. ಸಂಕಷ್ಟ ಸಮಯದಲ್ಲಿ ಅವರು ಪ್ರಾರ್ಥಿಸಿದರೆ ಕೂಡಲೇ ಪರಿಹಾರವಾಗುತ್ತಿತ್ತು. ನೀವು ನಿಜವಾದ ಉಝೈರ್ ಆಗಿದ್ದರೆ ನನಗೆ ದೃಷ್ಟಿ ದೊರಕಲು ದುಆ ಮಾಡಿ. ಆಗ ವಾಸ್ತವವು ತಿಳಿಯುತ್ತದೆ."
   ▪ *ಉಝೈರ್‌ರವರು* ಮಹಿಳೆಗೆ ದೃಷ್ಟಿ ಸಿಗಲು ಅವರ ಕಣ್ಣಿನ ಮೇಲೆ ತನ್ನ ಪವಿತ್ರ ಕೈಯಿಂದ ಸವರಿ ಅಲ್ಲಾಹನಲ್ಲಿ ಪ್ರಾರ್ಥಿಸಿದರು. ಸುಬ್‌ಹಾನಲ್ಲಾಹ್!  ಪ್ರಾರ್ಥಿಸಿದ ಕೂಡಲೇ ವೃದ್ದೆಗೆ ದೃಷ್ಟಿ ಬಂತು. ಮಹಿಳೆಗೆ ಪವಾಡದಲ್ಲಿ ದೊರೆತ ದೃಷ್ಟಿಯಿಂದ ಉಝೈರ್ ರನ್ನು ನೋಡಿದಾಗ ನಿಜವಾದ ಉಝೈರೆಂದು ಖಾತ್ರಿಯಾಯಿತು.
   ▪ *ಈ ಮಹಿಳೆ* ನಿಜವಾಗಿ ಉಝೈರ್ (ರ) ರವರ ದಾಸಿಯಾಗಿದ್ದರು. ಅವರು ಮನೆಯಿಂದ ಹೊರಡುವಾಗ ಈ ವೃದ್ದೆ ಇಪ್ಪತ್ತು ವರ್ಷದ ತರುಣಿಯಾಗಿದ್ದರು. ಉಝೈರ್‌ರವರು ಮರಳಿ ಬರುವಾಗ ನೂರ ಇಪ್ಪತ್ತು ವರ್ಷ ಪ್ರಾಯ ತಲುಪಿ ಮುದುಕಿಯಾಗಿದ್ದಳು.
   ▪ *ನಂತರ* ಉಝೈರ್ (ರ) ರವರು ತನ್ನ ಕುಟುಂಬ ಸದಸ್ಯರಾಗಿ ಸಂಪರ್ಕಿಸುವ ಚರಿತ್ರೆ ಬಹಳ ದೀರ್ಘವಾಗಿರುವುದರಿಂದ ಓದುಗರ ಗಮನ ಅತ್ತ ಸೆಳೆಯ ಬಯಸುವುದಿಲ್ಲ. ಒಟ್ಟಿನಲ್ಲಿ ಇಲ್ಲಿ ಪರಾಮರ್ಶಿಸಿದ ಕತ್ತೆಯು ಸ್ವರ್ಗ ಪ್ರವೇಸುವುದೆಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. ಇಲ್ಲಿ ಪರಾಮರ್ಶಿಸಲ್ಪಟ್ಟ ಉಝೈರ್ ಪ್ರವಾದಿಯೋ ಅಥವಾ ಅಲ್ಲಾಹನ ವಲಿಯ್ಯೋ ಎಂಬ ವಿಷಯದಲ್ಲಿ ಉಲಮಾಗಳ ಎಡೆಯಲ್ಲಿ ಭಿನ್ನಾಭಿಪ್ರಾಯವಿದೆ.
   ▪ *ಈ ಚರಿತ್ರೆ* ಯಾವುದೇ ಕಾಲಹರಣದ ಕತೆಯಲ್ಲ. ಪವಿತ್ರ ಕುರ್‌ಆನಿನ "ಅಲ್ ಬಖರಾ" ಅಧ್ಯಾಯದಲ್ಲಿ ಈ ವಿಷಯವಾಗಿ ಬಂದ ಕುರ್‌ಆನ್ ಸೂಕ್ತದ ವ್ಯಾಖ್ಯಾನದಲ್ಲಿ ಉಲಮಾಗಳು ನೀಡಿದ ಉಲ್ಲೇಖಗಳಾಗಿವೆ.
   ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮ್‌ರಲ್ಲಿ ಹಲವಾರು ಕತ್ತೆಗಳಿದ್ದವು.

*ಪ್ರವಾದಿ ವಫಾತಿನ ದುಃಖ ವಾರ್ತೆ ತಿಳಿದಾಗ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ ಕತ್ತೆ!!!*

   ▪  *ಗತಕಾಲದ* ಪ್ರವಾದಿಗಳಲ್ಲಿ ಹೆಚ್ಚಿನವರೂ ಕತ್ತೆ ಸವಾರಿ ಮಾಡಿದ್ದರೆಂದು ಇಮಾಮ್ ಬೈಹಖೀ ತನ್ನ *"ಶುಅ್‌ಬುಲ್ ಈಮಾನ್"* ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
   ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿಯೂ ಹಲವಾರು ಕತ್ತೆಗಳಿದ್ದವು. ಮಾತ್ರವಲ್ಲ ಅದರಲ್ಲಿ ಸಂಚಾರ ಕೂಡ ಮಾಡುತ್ತಿದ್ದರು. *"ಉಫೈರ್"* ಎಂಬ ಹೆಸರಿನ ಒಂದು ಕತ್ತೆಯನ್ನು ಈಜಿಪ್ತಿನ ಅಂದಿನ ರಾಜನಾಗಿದ್ದ *"ಮುಖವ್‌ಖಿಸ್"* ಚಕ್ರವರ್ತಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮರಿಗೆ ಉಡುಗೊರೆಯಾಗಿ ಕೊಟ್ಟಿದ್ದರು.
   ▪ *ಪ್ರವಾದಿ* ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ವಿಶ್ವದ ಹಲವಾರು ಕಡೆ ಆಡಳಿತದಲ್ಲಿರುವ ಅಧಿಕಾರಿಗಳಿಗೆ ಇಸ್ಲಾಮಿಗೆ ಬರಲು ಆಹ್ವಾನ ಕೊಟ್ಟು ಪತ್ರ ಬರೆದು ಕಳುಹಿಸಿದ್ದರು. ಅಂತೆಯೇ ಈಜಿಪ್ಟಿನ ಅಂದಿನ ಅಧಿಕಾರಿ  ಮುಖವ್‌ಖಿಸಿಗೂ ಪತ್ರ ಬರೆದು ಸಹಾಬಿಯಾದ *ಹಾತಿಬ್ ಬಿನ್ ಅಬೂ ಬಲ್‌ತ‌ಅ* (ರ) ರಲ್ಲಿ ಕಳುಹಿಸಿದ್ದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪತ್ರ ನೋಡಿದ ಮುಖವ್‌ಖಿಸ್ ಬಹಳ ಸಂತೋಷಗೊಂಡರು. ನಂತರ ಪತ್ರ ಕೊಂಡು ಹೋದವರು ವಾಪಾಸು ಮದೀನಕ್ಕೆ ಹಿಂತಿರುಗಿ ಬರುವಾಗ ಅದಕ್ಕೆ ಒಂದು ಉತ್ತರ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಉಡುಗೊರೆಯಾಗಿ ಈಜಿಪ್ತಿನ ಹಲವಾರು ಬೆಲೆಬಾಳುವ ಉಡುಪುಗಳು, ಬಂಗಾರದ ನಾಣ್ಯಗಳು, ಶ್ರೀಗಂಧದ ತುಂಡುಗಳು, ಸುಗಂಧ ವಸ್ತುಗಳು, ಬಹಳ ಹೆಸರುವಾಸಿಯಾದ ಮಿಸ್‌ರಿನ ಹಲವು ಬಾಟಲಿ ಜೇನುತುಪ್ಪಗಳು, ಒಬ್ಬ ನುರಿತ ವೈದ್ಯ, *"ದುಲ್‌ದುಲ್"* ಎಂಬ ಹೆಸರಿನ ಒಂದು ಹೇಸರಗತ್ತೆ, ಅಂತೆಯೇ *"ಉಫೈರ್"* ಎಂಬ ಹೆಸರಿನ ಒಂದು ಕತ್ತೆ ಮಾತ್ರವಲ್ಲ; ತನ್ನ ಅಧೀನದಲ್ಲಿದ್ದ ಖಿಬ್‌ತೀ ತಲೆಮಾರಿನ ಎರಡು ದಾಸಿಯರನ್ನೂ ಇನ್ನಿತರ ಹಲವಾರು ವಸ್ತುಗಳನ್ನು ಕೂಡ ಕಳುಹಿಸಿದ್ದರು.
   ▪ *ದಾರಿಮಧ್ಯೆ* ಹಾತಿಬ್ (ರ) ರವರು ಈ ಎರಡು ಮಹಿಳೆಯರಿಗೂ ಇಸ್ಲಾಮಿನ ಬಗ್ಗೆ ಮನವರಿಕೆ ಮಾಡಿಕೊಟ್ಟ ಕಾರಣ ಅವರಿಬ್ಬರೂ ಮದೀನಾಕ್ಕೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸನ್ನಿಧಿಗೆ ತಲುಪುವ ಮೊದಲೇ ಇಸ್ಲಾಮ್ ಧರ್ಮ ಸ್ವೀಕಾರ ಮಾಡಿದ್ದರು.
   ▪ *ಈ* ಕಳುಹಿಸಲ್ಪಟ್ಟ ಎಲ್ಲಾ ಉಡುಗೊರೆಗಳನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಸಹಾಬಿಗಳಿಗೂ ಪಾಲುಮಾಡಿ ಕೊಟ್ಟಿದ್ದರು. ಆದರೆ ಹೇಸರಗತ್ತೆ ಮತ್ತು ಕತ್ತೆಯನ್ನು ತನ್ನ ಉಪಯೋಗಕ್ಕೆ ಇಟ್ಟಿದ್ದರು. ಅಂತೆಯೇ ಖಿಬ್‌ತೀ ವಂಶದ ಶಮ್‌ಊನರ ಇಬ್ಬರು ಹೆಣ್ಣು ಮಕ್ಕಳಾದ ದಾಸಿಯರಲ್ಲಿ *"ಸೀರೀನ್ ಬಿಂತ್ ಶಮ್‌ಊನ್"* ಎಂಬ ದಾಸಿಯನ್ನು ತನ್ನ ಕೀರ್ತನೆಗಳನ್ನು ಪದ್ಯಮಾಡಿ ಹಾಡುತ್ತಿದ್ದ ಸಹಾಬೀಶ್ರೇಷ್ಠ ಹಝ್ರತ್ ಹಸ್ಸಾನ್ ಬಿನ್ ಸಾಬಿತ್ (ರ) ರಿಗೆ ಕೊಟ್ಟಿದ್ದರು. ಮತ್ತೊಂದು ದಾಸಿಯಾದ *ಮಾರಿಯತುಲ್ ಖಿಬ್‌ತಿಯ್ಯಃ ಬಿಂತ್ ಶಮ್‌ಊನ್‌"* ರನ್ನು ತಾವು ಇಟ್ಟು ಕೊಂಡಿದ್ದರು. ಆ ಭಾಗ್ಯವಂತೆ ಮಹಿಳೆಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಹುಟ್ಟಿದ ಮಗುವಾಗಿತ್ತು ಹುಟ್ಟಿ ಒಂದುವರೆ ವರ್ಷ ಪ್ರಾಯವಾಗುವಾಗ ಇಹಲೋಕ ತ್ಯಜಿಸಿದ ಇಬ್ರಾಹೀಮ್ ಎಂಬ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪುತ್ರ. ಪುಟ್ಟ ಕಂದನ ಮರಣವಾದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಬೇಸರ ತಡೆಯಲಾಗದೆ ಕಣ್ಣೀರು ಸುರಿಸುತ್ತಾ ಹೇಳಿದರು. *"ನನ್ನ ಕಂದ ಇಬ್ರಾಹಿಮ್‌ನಿಗೆ ಸ್ವರ್ಗದಲ್ಲಿ ಮೊಲೆಯುಣಿಸಲು ದಾದಿಯರು ಕಾಯುತ್ತಿದ್ದಾರೆ."!*
   ▪ *ಮಾರಿಯತುಲ್* ಖಿಬ್‌ತಿಯ್ಯಃ (ರ) ರವರು ದಾಸಿಯಾದ್ದರಿಂದ ಉಮ್ಮಹಾತುಲ್ ಮುಅ್‌ಮಿನೀನರ ಪಟ್ಟಿಯಲ್ಲಿ ಒಳಪಡುವುದಿಲ್ಲ ಎಂದು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತೇನೆ. ಬೇರೊಂದು ಗಮನಾರ್ಹ ಸಂಗತಿಯೆಂದರೆ, ಇಷ್ಟೆಲ್ಲಾ ಉಡುಗೊರೆಗಳನ್ನು ಕೊಟ್ಟು ಕಳುಹಿಸಿದ ಮುಖವ್‌ಖಿಸ್ ಮಾತ್ರ ಇಸ್ಲಾಮ್ ಧರ್ಮ ಸ್ವೀಕಾರ ಮಾಡಲಿಲ್ಲ.!!!
   ▪ *ಮುಖವ್‌ಖಿಸ್* ಕಳುಹಿಸಿದ ವೈದ್ಯನು ಮದೀನದಲ್ಲಿ ಒಂದು ಚಿಕಿತ್ಸಾಲಯ ತೆರೆದು (Open) ರೋಗಿಗಳಾರೂ ಚಿಕಿತ್ಸೆಗೆ ತನ್ನನ್ನು ಸಮೀಪಿಸದಿದ್ದಾಗ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ ಅದರ ರಹಸ್ಯವೇನೆಂದು ಕೇಳಿದನು. *"ಇಲ್ಲಿ ಮುಸ್ಲಿಮರಲ್ಲಿ ಯಾರೂ ಹೊಟ್ಟೆ ತುಂಬಾ ತಿನ್ನುವುದಿಲ್ಲ. ಬದುಕುವುದು ತಿನ್ನಲಿಕ್ಕೆ ಬೇಕಾಗಿಯಲ್ಲ. ಇಲ್ಲಿ ತಿನ್ನುವುದು ಬದುಕಲಿಕ್ಕಾಗಿ. ಯಾರೂ ಹೊಟ್ಟೆ ತುಂಬ ತಿನ್ನದ ಕಾರಣ ಇಲ್ಲಿ ಯಾರಿಗೂ ಖಾಯಿಲೆ ಇಲ್ಲ."* ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತರ ಕೊಟ್ಟರು. ನಂತರ ಅವರು ಈಜಿಪ್ಟಿಗೆ ಮರಳಿದರು.
   ▪ *ಅಂತೆಯೇ* ರೋಮ್ ಸಾಮ್ರಾಜ್ಯದ ಆಡಳಿತದಲ್ಲಿದ್ದ ಜೋರ್ಡಾನಿನ ಅಧಿಕಾರಿಯಾಗಿದ್ದ *ಫರ್‌ವಃ ಬಿನ್ ಅಮ್‌ರ್ ಅಲ್ ಜುಝಾಮೀ* ಎಂಬವರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಪತ್ರ ತಲುಪುವ ಮೊದಲೇ ಇಸ್ಲಾಮ್ ಸ್ವೀಕರಿಸಿ ಆ ವಾರ್ತೆಯನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ತಿಳಿಸಲು *ಮಸ್‌ಊದ್ ಬಿನ್ ಸಯೀದ್* ಎಂಬ ತನ್ನ ದೂತನಲ್ಲಿ ಪತ್ರ ಬರೆದು ಕಳುಹಿಸಿದ್ದರು. ಆ ದೂತನಲ್ಲಿ ಬಗೆಬಗೆಯ ಜೋರ್ಡಾನಿನ ಬೆಲೆಬಾಳುವ ವಸ್ತುಗಳು, ಮೇಲಂಗಿಗಳು, ನಿಲುವಂಗಿಗಳು, ಹಾಗೆಯೇ ಬಯ್‌ಲಾಅ ಎಂಬ ಬಿಳಿ ಬಣ್ಣದ ಹೇಸರಗತ್ತೆ ಅಂತೆಯೇ ಒಂದು ಕಂದು ಬಣ್ಣದ ಕತ್ತೆಯನ್ನೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮರಿಗೆ ಉಡುಗೊರೆಯಾಗಿ ಕಳುಹಿಸಿದ್ದರು. ಪತ್ರ ಮತ್ತು ಉಡುಗೊರೆಯಾಗಿ ಬಂದ ದೂತನಿಂದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅದನ್ನು ಬಹಳ ಸಂತೋಷದಿಂದ ಸ್ವೀಕರಿಸಿ ಅವರಿಗೆ ವಾಪಸ್ಸು ಹಿಂತಿರುಗಿ ಜೋರ್ಡಾನಿಗೆ ಹೋಗುವಾಗ ಅಂದಿನ ಹಣವಾದ ಹನ್ನೆರಡುವರೆ *ಊಖಿಯಃ* ಅಂದರೆ ಇಂದಿನ ಸುಮಾರು ಐನೂರು ದಿರ್‌ಹಮ್ (ಹತ್ತು ಸಾವಿರ ರೂಪಾಯಿ) ಟಿಪ್ಸ್ ಆಗಿ ಕೊಟ್ಟಿದ್ದರು.! ಮಿತ್ರರೊಂದಿಗೆ ಹೋಟೇಲುಗಳಿಗೆ ಹೋಗಿ ಹೊಟ್ಟೆ ತುಂಬಾ ತಿಂದು ದೊಡ್ಡ ಮಟ್ಟದ ಬಿಲ್ ಪಾವತಿ ಮಾಡುವಾಗ ಆಹಾರ ಸರಬರಾಜು ಮಾಡಿದ ಬಡಪಾಯಿಗಳತ್ತ ಕಣ್ಣೆತ್ತಿ ನೋಡದ ಜಿಪುಣರಿಗೆ ಈ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮರು ಕೊಟ್ಟ ಟಿಪ್ಸ್ ಒಂದು ಮಾದರಿಯಾಗಲಿ.
   ▪ *ಇತ್ತ ಫರ್‌ವಃ* ಬಿನ್ ಅಮ್‌ರ್ (ರ) ರವರು ಇಸ್ಲಾಮ್ ಸ್ವೀಕಾರ ಮಾಡಿದ್ದನ್ನು ತಿಳಿದ ರೋಮ್ ಅಧಿಕಾರಿಗಳು ಅವರನ್ನು ಇಸ್ಲಾಮ್ ಸ್ವೀಕರಿಸಿ ಕೆಲವೇ ದಿನಗಳಲ್ಲಿ ಜೀವಂತ ಶಿಲುಬೆಗೆ ಏರಿಸಿ ಕೊಂದರು.
   ▪ *ಖೈಬರ್* ಯುದ್ಧದಲ್ಲಿ ಮುಸ್ಲಿಮರು ವಿಜಯ ಪತಾಕೆ ಹಾರಿಸಿದ ನಂತರ ಶತ್ರುಗಳು ಯುದ್ದ ರಣಾಂಗಣದಲ್ಲಿ ಬಿಟ್ಟುಹೋದ ಕೆಲವು ವಸ್ತುಗಳಲ್ಲಿ ಒಂದು ಕತ್ತೆಯೂ ಇತ್ತು. ಈ ಕತ್ತೆಯು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ಕತ್ತೆಯೊಂದಿಗೆ ಮಾತುಕತೆ ನಡೆಸಿ ಅದರ ಪರಿಚಯ ಕೇಳಿದಾಗ ಕತ್ತೆ ಹೇಳಿತು. "ನನ್ನ ಅಜ್ಜನ ಸಂತಾನದಲ್ಲಿ ಅಲ್ಲಾಹನು ಅರುವತ್ತು ಕತ್ತೆಗಳನ್ನು ಸೃಷ್ಟಿಸಿರುವನು. ನಮ್ಮ ಸಂತಾನದ ಈ ಮೊದಲು ಕಳೆದುಹೋದ ಕತ್ತೆಗಳ ಪಾರಂಪರ್ಯದ ವಿಶೇಷತೆಯೆಂದರೆ, ಅವುಗಳ ಮೇಲೆ ಸಂಚಾರ ಮಾಡಿದ್ದು ಪ್ರವಾದಿಗಳು ಮಾತ್ರ. ಈಗ ನಮ್ಮ ತಲೆಮಾರಿನಲ್ಲಿ ಬಾಕಿ ಉಳಿದಿರುವುದು ನಾನೊಬ್ಬನೇ. ಅಂತೆಯೇ ಪ್ರವಾದಿಗಳ ಸರಪಳಿಯಲ್ಲಿ ಕೊನೆಯವರಾಗಿ ಬಾಕಿ ಇರುವುದು ನೀವು ಮಾತ್ರ. ಆದ್ದರಿಂದ ನನ್ನ ಹೆಗಲು ನಿಮಗಾಗಿ ಕಾಯುತ್ತಿದೆ. ಈ ಮೊದಲು ನಾನು ಒಬ್ಬ ಕನಿಕರವಿಲ್ಲದ ಯಹೂದಿಯ ಅಧೀನದಲ್ಲಿದ್ದೆ. ಅವನು ನನ್ನ ಹೊಟ್ಟೆಗೆ ಸರಿಯಾಗಿ ತಿನ್ನಲು ಕೊಡದೆ ಬಹಳ ಕಷ್ಟದ ಕಠಿಣ ಕೆಲಸಗಳನ್ನು ಮಾಡಿಸುತ್ತಿದ್ದ. ಆ ಕಾರಣಗಳಿಂದ ನಾನು ಮನಃಪೂರ್ವಕವಾಗಿ ಅವನೊಂದಿಗೆ ಹೋಗದೆ ಇಲ್ಲಿ ಕುಳಿತದ್ದು."
   ▪ *ಕತ್ತೆಯಿಂದ ಈ* ಅರ್ಥವತ್ತಾದ ಮಾತು ಕೇಳಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು. "ನಾನು ನಿನಗೆ *ಯಾಫೂರ್* ಎಂದು ನಾಮಕರಣ ಮಾಡಿದ್ದೇನೆ. ನೀನು ಈಗ ಸಂಗಾತಿಯಾಗಿ ಹೆಣ್ಣು ಕತ್ತೆಯನ್ನು ಬಯಸುತ್ತಿಯಾ..?" ಕೂಡಲೇ ಕತ್ತೆ ಹೇಳಿತು. "ಇಲ್ಲ.. ಇಲ್ಲ... ನನಗೆ ಸಂಗಾತಿ ಬೇಡ."
   ▪ *ನಂತರ* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನಗೆ ಅಗತ್ಯಕ್ಕೆ ಬೇಕಾದಾಗಲೆಲ್ಲ ಈ ಕತ್ತೆಯ ಮೇಲೆ ಕುಳಿತು ಸಂಚಾರ ಮಾಡುತ್ತಿದ್ದರು. ಅಂತೆಯೇ ಸಹಾಬಿಗಳ ಅಗತ್ಯ ಬರುವಾಗ ಅವರ ಮನೆಗೆ ಇದನ್ನು ಒಂಟಿಯಾಗಿಯೇ ಕಳುಹಿಸುತ್ತಿದ್ದರು. ಮನೆ ತಲುಪಿದರೆ ಈ ಕತ್ತೆಯು ತನ್ನ ತಲೆಯಿಂದ ಬಾಗಿಲಿಗೆ ಬಡಿದು ಶಬ್ದ ಮಾಡುತ್ತಿತ್ತು. ಮನೆಯವರು ಹೊರಬಂದು ನೋಡುವಾಗ ಈ ಕತ್ತೆಯನ್ನು ಕಂಡರೆ "ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮರ ಕತ್ತೆ ಬಂದಿದೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಿಗೆ ಏನೋ ಅಗತ್ಯ ಇರಬೇಕು" ಎಂದು ಹೇಳಿ ಮನೆಯ ಯಜಮಾನ ಕತ್ತೆಯೊಂದಿಗೆ ಪ್ರವಾದಿಯವರ ಮನೆಗೆ ಬರುತ್ತಿದ್ದರು.
   ▪ *ಬಹಳ* ಅಚ್ಚರಿಯೆಂಬಂತೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ವಫಾತ್ ಆದಾಗ ದುಃಖ ತಾಳಲಾರದೆ ಈ ಕತ್ತೆಯು ಅಬುಲ್ ಹಯ್‌ಸಮ್ ಬಿನ್ ಅತ್ತಯ್ಯಹಾನ್ (ರ) ಎಂಬ ಸಹಾಬಿಯ ಒಂದು ಬಾವಿಗೆ ಹಾರಿ ತನ್ನ ಜೀವವನ್ನು ತೆಗೆದು ಕೊಂಡಿತು.!!
   ▪ *ಈ ರೋಮಾಂಚಕಾರಿ* ಘಟನೆಯನ್ನು ಹಿಜ್‌ರಾ ಐದನೇ ಶತಮಾನದ ಪ್ರಖ್ಯಾತ ಪಂಡಿತ ಇಮಾಮ್ ಬಿನ್ ಅಸಾಕಿರ್ ತನ್ನ ತಾರೀಖ್ ದಿಮಷ್ಕ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

*ಸರಕು ಹೊತ್ತುಕೊಂಡು ಬರುತ್ತಿದ್ದ ಇಬ್‌ಲೀಸನ ಕತ್ತೆ!*

 ▪ *ಯಾವಾಗಲೂ* ಸಂಚಾರದಲ್ಲೇ ಇದ್ದ ಪ್ರವಾದಿ ಈಸಾ (ಅ) ರಲ್ಲಿ ಒಮ್ಮೆ ಒಬ್ಬರು ಕೇಳಿದರಂತೆ. *"ಪ್ರವಾದಿಯವರೇ.., ದಿನಾಲೂ ಸಂಚಾರದಲ್ಲಿರುವ ನಿಮಗೆ ಒಂದು ಕತ್ತೆಯನ್ನು ಖರೀದಿಸಿ ಅದರಲ್ಲಿ ಸಂಚರಿಸುವುದಲ್ಲವೇ ಒಳಿತು...?"*  ಆಗ ಅವರು *"ಒಂದು ಕತ್ತೆ ಖರೀದಿಸಿ ಅದರಲ್ಲಿ ಸಂಚಾರ ಮಾಡುವಾಗ ಆ ಕತ್ತೆಯ ಪೋಷಣೆ ಮತ್ತು ಸಾಕಣೆಗೆ ಬೇಕಾಗುವ ಸಮಯವನ್ನು ನಾನು ಅಲ್ಲಾಹನಿಗೆ ಆರಾಧನೆ ಮಾಡಿ ವ್ಯಯ ಮಾಡುವುದು ನನಗೆ ಇಷ್ಟ. ಈಗ ನಾನು ಕತ್ತೆ ಖರೀದಿಸುವ ಬಗ್ಗೆ ಆಲೋಚಿಸಿಲ್ಲ."* ಎಂದು ಉತ್ತರ ಕೊಟ್ಟರು. ಅಂದರೆ ಸ್ವಂತ ವಾಹನವಿದ್ದರೆ ಅದರ ಪರಿಪಾಲನೆ ಮತ್ತು ಪೋಷಣೆ ಮಾಡುತ್ತಾ ಇರಬೇಕು. ಅದು ತನ್ನ ಆರಾಧನೆಗೆ ತೊಂದರೆಯಾಗುತ್ತದೆ. ಆ ತಲೆಬಿಸಿಗಿಂತ ಸಾರ್ವಜನಿಕ ಬಾಡಿಗೆ ಕತ್ತೆಯಲ್ಲಿ ಕುಳಿತು ಹೋಗುವುದು ತನಗೆ ಲೇಸು ಎಂದಾಗಿರುತ್ತದೆ ಈಸಾ (ಅ) ಕೊಟ್ಟ ಉತ್ತರದ ಸಾರಾಂಶ.
   ▪ *ಈ ಘಟನೆಯನ್ನು* ಇಮಾಮ್ ಅಬೂ ಶೈಬಾ ತನ್ನ *"ಮುಸನ್ನಫ್"* ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
   ▪ *ಕ್ರೂರ* ಮೃಗವಲ್ಲದ ಯಾವುದೇ ಪ್ರಾಣಿಗೆ ಹೊಡೆಯುವುದು ಮತ್ತು ತೊಂದರೆ ಕೊಡುವುದನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಖಂಡಿಸಿದ್ದಾರೆ. ಅದು ಇಸ್ಲಾಮಿನಲ್ಲಿ ನಿಷಿದ್ಧವಾಗಿದೆ.
   ▪ *ಒಮ್ಮೆ ಪ್ರವಾದಿ* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಒಂದು ದಾರಿಯಾಗಿ ಹೋಗುತ್ತಿರುವಾಗ ಒಂದು ಕತ್ತೆಯ ಮುಖಕ್ಕೆ ಬೆಂಕಿಯಿಟ್ಟು ಗುರುತು ಮಾಡಲಾಗಿತ್ತು. ಪ್ರಾಚೀನ ಕಾಲದಲ್ಲಿ ಅವರವರ ಮೃಗಗಳನ್ನು ತಿಳಿಯಲು ಸಂಕೇತವಾಗಿ ಕಬ್ಬಿಣ ಬಿಸಿಮಾಡಿ ಪ್ರಾಣಿಯ ದೇಹದ ಯಾವುದಾರೊಂದು ಭಾಗಕ್ಕೆ ಇಡುವುದು ಸಾಮಾನ್ಯವಾಗಿತ್ತು. ವೃಣ ಒಣಗಿದರೂ ಬೆಂಕಿಯ ಗಾಯವಾದ್ದರಿಂದ ಅದರ ಗುರುತು ಅಲ್ಲೇ ಇರುತ್ತದೆ. ಅವರಿಗೆ ಅವರ ಮೃಗವನ್ನು ಸುಲಭವಾಗಿ ತಿಳಿಯಲು ಮತ್ತು ಅಕಸ್ಮಾತ್ ಕದ್ದು  ಹೋದರೆ ಗುರುತು ಹಿಡಿಯಲು ಈ ತರ ಸುಟ್ಟು ಗಾಯ ಮಾಡುತ್ತಿದ್ದರು. ಕೆಲವರಂತೂ ಅದರ ಕಿವಿಯ ಒಂದು  ತುಂಡನ್ನು ಕತ್ತರಿಸಿ ತೆಗೆಯುತ್ತಿದ್ದರು. ಕಾರುಣ್ಯದ ಒರತೆಯಾಗಿರುವ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಇದನ್ನು ಕಂಡಾಗ ಮನನೊಂದು ಹೇಳಿದರು. *"ಈ ಮಾಡಿದ ಕೃತ್ಯ ಬಹಳ ದೊಡ್ಡ ಅನ್ಯಾಯವಾಗಿದೆ. ಯಾವತ್ತೂ ಈ ತರ ಮಾಡಬಾರದು. ಈ ಮಾಡಿದವನ ಮೇಲೆ ಅಲ್ಲಾಹನ ಶಾಪವಿದೆ."*
   ▪ *ಒಮ್ಮೆ ಪ್ರವಾದಿ* ಈಸಾ (ಅ) ರವರು ಒಂದು ದಾರಿಯಾಗಿ ಹೋಗುತ್ತಿರುವಾಗ ಇಬ್‌ಲೀಸನು ಐದು ಕತ್ತೆಗಳನ್ನು ಅದರ ಬೆನ್ನಿನ ಮೇಲೆ ಒಂದೊಂದು ಮೂಟೆಯನ್ನು ಇಟ್ಟು ಓಡಿಸಿಕೊಂಡು ಬರುತ್ತಿದ್ದ. ಹಝ್ರತ್ ಈಸಾ (ಅ) ಕೇಳಿದರು. *"ಇದೇನು ಸರಂಜಾಮು..? ಯಾವ ಕಡೆ ಹೋಗತ್ತಿರುವಿ...? ಏನು ಬಹಳ ತರಾತುರಿ..?"*
   ▪ *"ಇದು* ಇವತ್ತಿನ ನನ್ನ ಮಾರಾಟ ಸರಕುಗಳು. ಇದಕ್ಕೆ ಈಗಿನ ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆ ಮತ್ತು ಗಿರಾಕಿಗಳಿದ್ದಾರೆ. ಮಾತ್ರವಲ್ಲ ಕ್ಷಣಗಳೊಳಗೆ ಇದು ಮಾರಲ್ಪಡುತ್ತದೆ. ಇದರಲ್ಲಿ ಮೊದಲ ಕತ್ತೆಯ ಹೆಗಲಲ್ಲಿ ಇರುವುದು ಅಕ್ರಮ. ಅದನ್ನು ದೊಡ್ಡ ದೊಡ್ಡ ಚಕ್ರವರ್ತಿಗಳು ಖರೀದಿಸುತ್ತಾರೆ. ಎರಡನೆಯದ್ದು ಅಹಂಕಾರ. ದೊಡ್ಡ ದೊಡ್ಡ ಅಧಿಕಾರಿಗಳು, ನಾಯಕರುಗಳು ಇದರ  ನನ್ನ ಮಾಮೂಲಿ ಗಿರಾಕಿಗಳು. ಮೂರನೆಯ ಕತ್ತೆಯ ಬೆನ್ನಿನ ಮೇಲೆ ಇರುವ ಮೂಟೆ ಅಸೂಯೆ. ಇದನ್ನು ಪಂಡಿತರು ಸಾಲು ನಿಂತು ಖರೀದಿಸುತ್ತಾರೆ. ನಾಲ್ಕನೇ ಕಟ್ಟು ವಂಚನೆ.  ವ್ಯಾಪಾರಿಗಳು ಇದರ ಗ್ರಾಹಕರು. ಐದನೆಯ ಕತ್ತೆಯ ಹೆಗಲಲ್ಲಿ ಇರುವುದು ಮೋಸ. ಇದರ ಗಿರಾಕಿಗಳು ಯಾರೆಂದು ಹೇಳಬೇಕಾಗಿಲ್ಲ. ಸ್ತ್ರೀಯರು ಕಾದು ನಿಂತು ಖರೀದಿ ಮಾಡುತ್ತಾರೆ." ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ.
   ▪ *ಇಸ್ಲಾಮಿನ* ಎರಡನೇ ಖಲೀಫಾ ಹಝ್ರತ್ ಉಮರ್ (ರ) ರ ಖಿಲಾಫತಿನ ಸಮಯ. *ನಬಾತತ್ ಬಿನ್ ಯಝೀದ್ ಅಲ್ ನಖಿಯೀ* (ರ) ರವರು ಒಮ್ಮೆ ಇಸ್ಲಾಮಿನ ಪ್ರಚಾರಾರ್ಥ ಯಮನಿಗೆ ಹೋಗಿದ್ದರು. ಮರಳಿ ಬರುವಾಗ ಅವರ ಸಂಚಾರ ಕತ್ತೆ ದಾರಿಮಧ್ಯೆ ಮರುಭೂಮಿಯಲ್ಲಿ ಸಾವನ್ನಪ್ಪಿತು. ಬಹಳ ಸಂಕಷ್ಟಕ್ಕೀಡಾದ ಮಹಾನುಭಾವರು ಕೂಡಲೇ ಅಲ್ಲೇ ಒಂದು ಕಡೆ ಹೋಗಿ ವುಳೂ ಮಾಡಿ ಎರಡು ರಕಅತ್ ನಮಾಝ್ ಮಾಡಿ ಅಲ್ಲಾಹನಲ್ಲಿ ಕೈಯೆತ್ತಿ ಪ್ರಾರ್ಥಿಸಿದರು. *"ಅಲ್ಲಾಹ್..., ನಾನು ನಿನಗೆ ಬೇಕಾಗಿ ನಿನ್ನ ಪ್ರೀತಿ ಮತ್ತು ಸಂತೃಪ್ತಿ ಬಯಸಿ ಈ ಮರುಭೂಮಿಯಲ್ಲಿ ಈಗ ಸಂಚಾರ ಮಾಡುತ್ತಿದ್ದೇನೆ. ಮರಣ ಹೊಂದಿದವರನ್ನು ಪುನಃ ಜನ್ಮ ಕೊಟ್ಟು ಬದುಕಿಸುವ ತಾಕತ್ತು ಮತ್ತು ಶಕ್ತಿ ನಿನಗಿದೆಯೆಂದು ನನಗೆ ಗೊತ್ತಿದೆ. ಯಾವತ್ತೂ ನನ್ನನ್ನು ಈ ದಾರಿಮಧ್ಯೆ ಒಮ್ಮೆಯೂ ತೊಂದರೆಗೀಡು ಮಾಡಬಾರದು. ಆದ್ದರಿಂದ ನನ್ನ ಸತ್ತ ಕತ್ತೆಯನ್ನು ನನಗೆ ಈಗಲೇ ಜೀವಕೊಟ್ಟು ಬದುಕಿಸಿ ಕೊಡಬೇಕು."*
   ▪ *ಸುಬ್‌ಹಾನಲ್ಲಾಹ್!* ಇಷ್ಟು ಹೇಳಿದ್ದೇ ತಡ ಸತ್ತ ಕತ್ತೆಯು ಎದ್ದು ನಿಂತು ನಡೆಯಲು ಆರಂಭಿಸಿತು. ಪ್ರಖ್ಯಾತ ತಾಬಿಈ ಪಂಡಿತರಾದ ಇಮಾಮ್ ಶಅಬಿಯ್ಯ್ (ರ) ಹೇಳುತ್ತಾರೆ. "ಕೆಲವು ವರ್ಷಗಳ ಬಳಿಕ ಆ ಕತ್ತೆಯನ್ನು ಇರಾಕಿನ ಕೂಫಾದಲ್ಲಿ ಒಂದು ಮಾರುಕಟ್ಟೆಯಲ್ಲಿ ಮಾರಟಕ್ಕೆ ಇಟ್ಟದ್ದನ್ನು ನಾನು ಕಂಡೆನು. ಆಗ ಒಬ್ಬರು ಬಂದು ಈ ವ್ಯಕ್ತಿಯಲ್ಲಿ ಕೇಳಿದರು. *"ನೀವು ಅಲ್ಲಾಹನು ಪುನರ್ಜನ್ಮ ಕೊಟ್ಟು ಬದುಕಿಸಿದ ಬರಕತ್ತಿನ ಕತ್ತೆಯನ್ನು ಮಾರುವುದಾ...?"* ಅದಕ್ಕೆ ಅವರು *"ಮಾರದೆ ಮತ್ತೇನು ಮಾಡುವುದು"* ಎಂಬ ತೃಪ್ತಿಕರವಲ್ಲದ ಉತ್ತರ ಕೊಟ್ಟು ಹೆಗಲು ತಪ್ಪಿಸಿ ಕೊಂಡರು. ಬಹುಶಃ ಅವರಿಗೆ ಏನೋ ಆರ್ಥಿಕ ಸಂಕಷ್ಟ ಎದುರಾಗಿರಬಹುದೆಂದು ಇಲ್ಲಿ ಊಹಿಸಬಹುದಾಗಿದೆ.
   ▪ *ಒಮ್ಮೆ* ಒಬ್ಬ ಗ್ರಾಮವಾಸಿ ಅಅ್‌ರಾಬಿಯು ದೈನಂದಿನ ಕಸಬು ಮುಗಿಸಿ ಸಂಜೆಯ ವೇಳೆ ತನ್ನ ಕತ್ತೆಯನ್ನು ಕೊರಳಿಗೆ ಹಗ್ಗ ಹಾಕಿ ಪದ್ಯ ಹಾಡುತ್ತಾ ಬಹಳ ನಿಧಾನವಾಗಿ ತನ್ನ ಮನೆಯತ್ತ ಕೊಂಡೊಯ್ಯುತ್ತಿದ್ದ.
   ▪ *ಇತ್ತ ಈತನ* ಚಲನ ವಲನಗಳನ್ನು ದೂರದಿಂದಲೇ ಗಮನಿಸುತ್ತಿದ್ದ ಮೂರು ಮಂದಿಯ ಒಂದು ದರೋಡೆಕೋರರ ಸಂಘವು ಈತನ ಈ ಕತ್ತೆಯನ್ನು ಹೇಗಾದರು ಮಾಡಿ ಕದಿಯಬೇಕೆಂಬ ತೀರ್ಮಾನಕ್ಕೆ ಬಂದರು. ಅಂತೆಯೇ ಅವನನ್ನು  ಹಿಂಬಾಲಿಸಿ ನಡೆದರು.
   ▪ *ಈ ಮಧ್ಯೆ ಈ* ಮೂವರಲ್ಲಿ ಒಬ್ಬ ಹೇಳಿದ. *"ನಾನೊಂದು ಒಳ್ಳೆಯ ಉಪಾಯ ಹೇಳುತ್ತೇನೆ. ನೀವಿಬ್ಬರೂ ಅದನ್ನು ಒಪ್ಪುವುದಾದರೆ ನಾವದರಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗುತ್ತೇವೆ"*
   ▪ *"ಹಾಗಾದರೆ* ನಿನ್ನ ಮನಸ್ಸಿಗೆ ಬಂದ ಉಪಾಯವನ್ನು ನಮ್ಮಲ್ಲಿ ಹೇಳು. ನಮಗದು ತೃಪ್ತಿ ಎಂದಾದರೆ ಹಾಗೆ ಮಾಡುವ." ಎಂದು ಮತ್ತಿಬ್ಬರು ಉತ್ತರಿಸಿದರು.
   ▪ *"ನಾನು* ಈಗ ಮೆಲ್ಲನೆ ಕತ್ತೆಯ ಕೊರಳಿನಿಂದ ಅದರ ಹಗ್ಗವನ್ನು ಕಳಚಿ ನನ್ನ ಕೊರಳಿಗೆ ಹಾಕುತ್ತೇನೆ. ನನ್ನ ಕೊರಳಿಗೆ ಹಾಕದಿದ್ದರೆ ಎಳೆದುಕೊಂಡು ಹೊಗುತ್ತಿರುವ ಹಗ್ಗಕ್ಕೆ ಭಾರ ಕಡಿಮೆಯಾದರೆ ಆತ ತಿರುಗಿ ನೋಡಿಯಾನು. ನೀವಿಬ್ಬರೂ ನಾನು ಹಗ್ಗ ಕಳಚಿದ ಕೂಡಲೇ ಆ ಕತ್ತೆಯನ್ನು ಬೇರೊಂದು ಹಗ್ಗಹಾಕಿ ನಮ್ಮ ಕಳ್ಳಸಾಮಾನು ದಾಸ್ತಾನು ಶಾಲೆಗೆ ಕೊಂಡು ಹೋಗಬೇಕು" ಎಂದನು.
   ▪ *ಇವನ ಈ* ಉಪಾಯ ಅವರಿಬ್ಬರಿಗೆ ಚೆನ್ನಾಗಿ ಕಂಡಿತು. ಅವರು ಅವನಲ್ಲಿ ಹೇಳಿದರು. *"ಶಹಭಾಸ್... ಒಳ್ಳೆಯ ಉಪಾಯ. ಹಾಗಾದರೆ ನೀನು ಹಾಗೆ ಮಾಡು."
   ▪ *ಆತ ಕೂಡಲೇ* ಕತ್ತೆಯ ಕೊರಳಿನ ಹಗ್ಗವನ್ನು ಕಳಚಿ ತನ್ನ ಕೊರಳಿಗೆ ಹಾಕಿದ. ಇತ್ತ ಮತ್ತಿಬ್ಬರು ಬೇರೊಂದು ಹಗ್ಗಹಾಕಿ ಆ ಕತ್ತೆಯನ್ನು ಬೇರೊಂದು ಮಾರ್ಗವಾಗಿ ಕಳ್ಳ ಸಾಮಗ್ರಿ ದಾಸ್ತಾನು ಮನೆಗೆ ಕೊಂಡುಹೋದರು.
   ▪ *ಇತ್ತ ಅಅ್‌ರಾಬಿಯು ಮನೆ ತಲುಪಿ ಹಿಂತಿರುಗಿ ನೋಡಿದಾಗ ಕಂಡ ದೃಶ್ಯ ಭಯಾನಕವಾಗಿತ್ತು. ತನ್ನ ಕತ್ತೆಗೆ ಬದಲು ದೃಡಕಾಯ ಶರೀರವಿರುವ ಪರಿಚಯವಿಲ್ಲದ ಒಬ್ಬ ಮನುಷ್ಯ.! ಅಅ್‌ರಾಬಿ ಮಾತನಾಡಲಾಗದೆ ಒಂದು ನಿಮಿಷ ಮೂಕವಿಸ್ಮಿತನಾದ. ಆತನಿಗೆ ಬಾಯಿಯಿಂದ ಮಾತುಗಳೇ ಬಾರದಂತಾಯಿತು. ಅ‌ಅ್‌ರಾಬಿಯ ಆಶ್ಚರ್ಯದ ಮನೋಭಾವ ಕಂಡ ದರೋಡೆಕಾರ ಹೇಳಿದ. *"ಯಜಮಾನರೇ.., ಗಾಬರಿ ಪಡಬೇಡಿ. ನಾನು ಇದರ ವಾಸ್ತವಿಕತೆಯನ್ನು ನಿಮಗೆ ವಿವರಿಸುತ್ತೇನೆ. ನಾನು ನಿಮ್ಮ ಚಾಕರಿ ಕತ್ತೆಯೇ ಆಗಿದ್ದೇನೆ. ನಿಜರೂಪವೇನೆಂದರೆ, ನಾನು ಮೊದಲು ಮನುಷ್ಯನಾಗಿದ್ದೆ. ಒಂದು ದಿನ ನನ್ನ ತಾಯಿ ನನ್ನಲ್ಲಿ ಒಂದು ಕೆಲಸವನ್ನು ಮಾಡಲು ಹೇಳಿದಾಗ ನಾನದನ್ನು ಮಾಡದೆ ಕೊನೆಗೆ ನಮ್ಮಿಬ್ಬರೆಡೆಯಲ್ಲಿ ಜಗಳವಾಯಿತು.  ಕೊನೆಗೆ ನಾನು ಅಲ್ಲಿದ್ದ ಒಂದು ಕಬ್ಬಿಣದ ಸಲಾಕೆಯಿಂದ ಅವರ ತಲೆಗೆ ಒಂದು ಮಾರಕ ಹೊಡೆತ ಹೊಡೆದೆ. ಈ ಹೊಡೆತದ ನೋವು ತಡೆಯಲಾಗದೆ ನನ್ನ ತಾಯಿ ನನ್ನಲ್ಲಿ *"ನಿನ್ನನ್ನು ಅಲ್ಲಾಹನು ಕತ್ತೆಯಾಗಿ ರೂಪ ಪರಿವರ್ತನೆ ಮಾಡಲಿ"* ಎಂದು ಶಪಿಸಿದರು. ಆ ಶಾಪದ ಕಾರಣದಿಂದ ನಾನು ಈ ತರ ಆದೆನು. ಇಷ್ಟರ ತನಕ ನಾನು ನಿಮ್ಮ ಹತ್ತಿರ ಕೆಲಸ ಮಾಡುತ್ತಿದ್ದದ್ದು ನಿಜವಾದ ಕತ್ತೆಯಾಗಿ ಆಗಿರಲಿಲ್ಲ. ಅದು ನನ್ನ ತಾಯಿಯ ಶಾಪದ ಫಲವಾಗಿತ್ತು. ಈಗ ನಾನು ಪುನಃ ಮನುಷ್ಯನಾಗಿ ಜನ್ಮ ತಾಳಿದೆ. ನಿಮಗೆ ಇಷ್ಟವೆಂದಾದರೆ ನನ್ನನ್ನು ಇಟ್ಟುಕೊಳ್ಳಿ. ನನಗೆ ಸಾಧ್ಯವಾದ ಕೆಲಸವನ್ನು ನಾನು ಮಾಡುತ್ತೇನೆ. ಸಾಧಾರಣ ಮನುಷ್ಯರಿಗೆ ಕೊಡುವ ಸವಲತ್ತು ನನಗೆ ಕೊಟ್ಟರೆ ಸಾಕು. ಅಲ್ಲದೆ ನಾನು ಇದೇ ಜನ್ಮದಲ್ಲಿ ಹೀಗೆಯೇ ಇರಬೇಕೆಂದಿಲ್ಲ. ಕೆಲವೊಮ್ಮೆ ನಾಳೆಯೇ ಕತ್ತೆಯಾಗಿ ಮಾರ್ಪಡುವೆನು."
   ▪ *ಸಿಟ್ಟು* ನೆತ್ತಿಗೇರಿದ ಅಅ್‌ರಾಬಿ *"ಉಫ್.. ತಾಯಿಯ ಶಾಪವಿರುವ ನೀನು ಒಂದು ನಿಮಿಷವೂ ಇಲ್ಲಿ ನಿಲ್ಲಬಾರದು. ನೀನು ಈ ತನಕ ಕತ್ತೆಯಾಗಿ ನನ್ನ ಬಳಿ ಇದ್ದದ್ದನ್ನು  ಆಲೋಚಿಸುವಾಗ ನನಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗುತ್ತದೆ. ನಿನ್ನಂತಹಾ ಶಾಪಗ್ರಸ್ತರು ಇಲ್ಲಿ ನಿಂತರೆ ನನಗೆ ಭೀಕರ ಅನಾಹುತ ಬರಬಹುದು. ಆದ್ದರಿಂದ ಈಗಲೇ ಇಲ್ಲಿಂದ ಹೊರಡು."* ಎಂದು ಹೇಳಿ ಅಲ್ಲಿಂದ ಓಡಿಸಿದ.
   ▪ *ಮನೆ ತಲುಪಿದ* ಆತ ತನ್ನ ಇತರ ಇಬ್ಬರು ಸಂಗಡಿಗರೊಂದಿಗೆ ಕೂಡಿ ರಾತ್ರಿ ನಡೆಸಿದ ಚರ್ಚೆಯಲ್ಲಿ ಕದ್ದ ಕತ್ತೆಯನ್ನು ನಾಳೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ತೀರ್ಮಾನಕ್ಕೆ ಬಂದರು. ಅಂತೆಯೇ ಮಾರನೆಯ ದಿನ ಸಂತೆಗೆ ಕೊಂಡು ಹೋಗಿ ಮಾರಾಟಕ್ಕೆ ಇಟ್ಟರು.
   ▪ *ತನ್ಮಧ್ಯೆ* ಬಡಪಾಯಿ ಅಅ್‌ರಾಬಿಯ ನಷ್ಟವಾದ ಶಾಪಗ್ರಸ್ತ ಕತ್ತೆಗೆ ಬದಲು ಒಂದು ಒಳ್ಳೆಯ ಬರಕತ್ತಿರುವ ಕತ್ತೆಯನ್ನು ಖರೀದಿಸಬೇಕೆಂಬ ಇರಾದೆಯಲ್ಲಿ ಅದೇ ಜಾನುವಾರು ಮಾರುಕಟ್ಟೆಗೆ ಹೋದ. ಕಿಕ್ಕಿರಿದ ಜನ ಜಂಗುಳಿಯಲ್ಲಿ ಬಿರುಸಿನ ವ್ಯಾಪಾರ ನಡೆಯುತ್ತಿತ್ತು. ಹಾಗೆಯೇ ಅಅ್‌ರಾಬಿ ಸಂತೆಯಲ್ಲಿ ಸುತ್ತಾಡುತ್ತಿರುವಾಗ ಒಂದು ಕಡೆ ತಲುಪಿದಾಗ ದರೋಡೆಕೋರರು ಅಅ್‌ರಾಬಿಯಿಂದ ದೋಚಿದ ಕತ್ತೆಯನ್ನು ಮಾರಾಟಕ್ಕೆ ಇಟ್ಟಿದ್ದರು. ಈ ಕತ್ತೆಯು ತನ್ನ ಹಲವಾರು ವರ್ಷಗಳ ಯಜಮಾನನನ್ನು  ಕಂಡಾಗ ಅವನತ್ತ ತಲೆಯೆತ್ತಿ ಬಹಳ ಎತ್ತರದ ದನಿಯಲ್ಲಿ ಬೇಸರದಿಂದ ಕಿರುಚಲು ಆರಂಭಿಸಿತು. ಕೂಗಾಟವೇ ಕೂಗಾಟ.. ಸಾಧು ಕತ್ತೆಗೆ ತನ್ನ ಯಜಮಾನನನ್ನು ಕಂಡಾಗ ಉಕ್ಕಿ ಹರಿದು ಬಂದ ಬೇಸರ ಮತ್ತು ಪ್ರೀತಿಯ ಸಂಕೇತವಾಗಿತ್ತು ಅದು.
   ▪ *ಆದರೆ* ಅಅ್‌ರಾಬಿಗೆ ಇದನ್ನು ನೋಡಿದಾಗ ಯಾವುದೇ ಕನಿಕರ ಬರಲಿಲ್ಲ. ಅಅ್‌ರಾಬಿ *"ನೀನು ನಿನ್ನೆ ಮನುಷ್ಯನಾಗಿದ್ದು ಇವತ್ತು ಪುನಃ ಕತ್ತೆಯಾಗಿದೆಯಾ..? ಹರಾಮಿ.. ಖದೀಮ... ನೀನಿನ್ನು ಇನ್ನೊಂದು ಜನ್ಮದಲ್ಲಿ ಬಂಗಾರದ ಕತ್ತೆಯಾಗಿ ಜನ್ಮ ತಾಳುವುದಾದರೂ ನನಗೆ ಬೇಡ. ತಾಯಿಯ ಶಾಪಕ್ಕೆ ಬಲಿಯಾದ ನಿನ್ನ ಸಹವಾಸವೇ ನನಗೆ ಬೇಡ."* ಎಂದು ಹೇಳಿ ಬೇರೊಂದು ಕತ್ತೆಯನ್ನು ಖರೀದಿಸಿ ಅಲ್ಲಿಂದ ಮನೆಗೆ ಹೋದ.
   ▪ *ಈ ಘಟನೆಯನ್ನು* ಖ್ಯಾತ ಪಂಡಿತ ಅಲ್ಲಾಮಾಃ  ಬಿನ್ ಜವ್‌ಝೀಯವರು ತನ್ನ ಅಲ್ ಅಝ್‌ಕಿಯಾಃ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.

   ▪ *ಒಮ್ಮೆ* ಯಮನಿನಿಂದ ಪ್ರವಾದಿ ಮುಹಮ್ಮದ್ (ಸ) ರನ್ನು ಸಂದರ್ಶಿಸಲು ಒಂದು ನಿಯೋಗವು ಬಂದಿತ್ತು. ಇಸ್ಲಾಮ್ ಧರ್ಮ ಸ್ವೀಕಾರ ಮಾಡಿದ ಸಂತೋಷ ವಾರ್ತೆಯನ್ನು ಪ್ರವಾದಿಯವರೊಂದಿಗೆ ಹಂಚಿ ಅವರನ್ನು ಮುಖಃತಾ ಸಂದರ್ಶಿಸಿ ಹೋಗುವ ಉದ್ದೇಶವಾಗಿತ್ತು ಅವರದ್ದು. ಅಂತೆಯೇ ಈ ನಿಯೋಗದಲ್ಲಿದ್ದ *ಝುರಾರಃ ಬಿನ್ ಅಮ್‌ರ್* ಎಂಬವರು ಪ್ರವಾದಿಯವರನ್ನು ಬೇಟಿಯಾದ ಕೂಡಲೇ ಹೇಳಿದರು. *"ಪ್ರವಾದಿಯವರೇ.., ನಾನು ಬರುವಾಗ ದಾರಿಮಧ್ಯೆ ಒಂದು ಕಡೆ ತಂಗಿದಾಗ ರಾತ್ರಿ ನಿದ್ದೆಯಲ್ಲಿ ನನಗೆ ಒಂದು ಭಯಾನಕ ಕನಸು ಬಿತ್ತು. ಅದೇನೆಂದರೆ, ನಮ್ಮ ಯಮನಿನಲ್ಲಿರುವ ಮನೆಯಲ್ಲಿರುವ ಕತ್ತೆಯೊಂದು ಮರಿ ಹಾಕಿದ್ದು, ಮರಿಯಾದರೆ ಸಾಧಾರಣ ಕತ್ತೆಗಿಂತ ವಿಭಿನ್ನವಾಗಿ ಅದರ ಚರ್ಮದಲ್ಲಿ ಬಿಳಿ ಮಚ್ಚೆಗಳಿವೆ. ಒಟ್ಟಿನಲ್ಲಿ ಈ ಕನಸು ಬಿದ್ದ ನಂತರ ನಾನು ಬಹಳ ಗೊಂದಲಕ್ಕೀಡಾಗಿದ್ದೇನೆ."*
   ▪ *ಪ್ರವಾದಿಯವರು* ಅವರಲ್ಲಿ ಕೇಳಿದರು. *"ನಿಮ್ಮ ಮನೆಯಲ್ಲಿ ನಿಮ್ಮ ದಾಸಿ ಗರ್ಭಿಣಿಯಾ...?"* ಝುರಾರಃ (ರ) ಹೇಳಿದರು. *"ಹೌದು ಪ್ರವಾದಿಯವರೇ.."* ಪ್ರವಾದಿ ಮುಹಮ್ಮದ್ (ಸ) ಹೇಳಿದರು. *"ಅವಳು ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ."*
   ▪ *"ಹಾಗಾದರೆ ಬಿಳಿ ಮಚ್ಚೆ ಏನು...?"* ಪ್ರವಾದಿಯವರಲ್ಲಿ ಝುರಾರಃ (ರ) ರವರ ಎರಡನೇ ಮತ್ತೊಂದು ಪ್ರಶ್ನೆಯಾಗಿತ್ತು. ಕೂಡಲೇ ಪ್ರವಾದಿಯವರು ಅವರನ್ನು ಹತ್ತಿರ ಕುಳ್ಳಿರಿಸಿ ಇತರರಿಗೆ ಕೇಳದಂತೆ ಅವರಲ್ಲಿ ಕೇಳಿದರು. *"ನಿಮ್ಮ ಶರೀರದ ಒಂದು ಕಡೆ ನೀವು ಯಾರಿಗೂ ಈ ತನಕ ತೋರಿಸದ ಅಥವಾ ತಿಳಿಸದ ಪಾಂಡುರೋಗದ ಮಚ್ಚೆ ಇದೆಯಾ..?"*  "ಹೌದು ಇದೆ." ಎಂದು ಝುರಾರಃ (ರ) ಉತ್ತರಿಸಿದರು. *"ಆ ಮಚ್ಚೆ ನಿಮ್ಮ ಹುಟ್ಟಿದ ಮಗನಿಗೂ ಇದೆ"* ಎಂದು ಹೇಳಿದರು ಪ್ರವಾದಿಯವರು.
   ▪ *ಕತ್ತೆ* ಮಾಂಸ ತಿನ್ನುವುದರ ಬಗ್ಗೆ ಹಲವಾರು ಅಭಿಪ್ರಾಯಗಳಿದ್ದರೂ ಬಲವಾದ ಅಭಿಪ್ರಾಯ ಪ್ರಕಾರ ನಿಷಿದ್ಧವಾಗಿದೆ. *ಗಾಲಿಬ್ ಬಿನ್ ಅಬ್‌ಹುರ್* ಎಂಬ ಸಹಾಬಿಯಿಂದ ವರದಿಯಾದ ಒಂದು ಹದೀಸಿನಲ್ಲಿ ಪ್ರವಾದಿಯವರು ಕತ್ತೆಯ ಮಾಂಸ ತಿನ್ನಲು ಅನುಮತಿ ಕೊಟ್ಟದ್ದು, ತಿನ್ನಲು ಏನೂ ಇಲ್ಲದೆ ಆಹಾರಕ್ಕೆ ಕ್ಷಾಮ ಬಂದ ಘಟ್ಟದಲ್ಲಾಗಿತ್ತು ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. ಅಂತೆಯೇ ಇಸ್ಲಾಮಿನ ಪ್ರಾರಂಭದಲ್ಲಿ ಕತ್ತೆ ಮಾಂಸ ಭಕ್ಷ್ಯ ಯೋಗ್ಯವಾಗಿತ್ತೆಂದೂ ನಂತರ ಅದರ ವಿಧಿ ಬದಲಾವಣೆ ಆಯಿತೆಂದು ಹಾಫಿಲ್ ಇಮಾಮ್ ಮುಂಝಿರೀ ವ್ಯಕ್ತ ಪಡಿಸಿದ್ದಾರೆ.
   ▪ *ಕತ್ತೆಯ* ಮಾಂಸವು ಮಾಂಸಗಳ ಪೈಕಿ ರುಚಿಯಿಲ್ಲದ ಒಂದಾಗಿದೆ. ಮಾತ್ರವಲ್ಲ ಕೆಟ್ಟ ವಾಸನೆಯಿಂದ ಕೂಡಿದ ಇದರ ಮಾಂಸ ತಿಂದರೆ ವಾಕರಿಕೆ ಶುರುವಾಗುತ್ತದೆ.
   ▪ *ಆದರೆ* ಕಾಡು ಕತ್ತೆಯ (ZEBRA) ಮಾಂಸ ಭಕ್ಷ್ಯಯೋಗ್ಯವಾಗಿದೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ.
    ▪ *ಒಮ್ಮೆ* ಪ್ರವಾದಿಯವರು ಮಕ್ಕಾ ಮತ್ತು ಮದೀನದ ಮಧ್ಯೆ  ಒಂದು ಕಡೆ ಇರುವಾಗ ಸಹಾಬಿಯಾದ *ಸ್ವ‌ಅ್‌ಬ್ ಬಿನ್ ಅಲ್  ಜಸ್ಸಾಮಃ* (ರ) ರವರು ಒಂದು ಕಾಡುಕತ್ತೆಯ ಮಾಂಸವನ್ನು ಪ್ರವಾದಿಯವರಿಗೆ ತಂದು ಕೊಟ್ಟರು. ಅದನ್ನು ಪ್ರವಾದಿಯವರು ಮತ್ತು ಅನುಚರರು ತಿಂದರೆಂದು ಬೈಹಖೀ ವರದಿ ಮಾಡಿದ ಹದೀಸಿನಲ್ಲಿದೆ.
    ▪ *ಕಾಡು ಕತ್ತೆಯು* ಸಾಕು ಕತ್ತೆಗಿಂತ ಬಲಿಷ್ಠವಾಗಿದೆ. ಅದು ಸುಮಾರು ಇನ್ನೂರರಿಂದ ಮುನ್ನೂರು ವರ್ಷಗಳ ತನಕ ಬದುಕುತ್ತದೆ. ಕೆಲವು ಕಾಡು ಕತ್ತೆಗಳು ಎಂಟುನೂರು ವರ್ಷಗಳ ತನಕವೂ ಬದುಕುತ್ತದೆ ಎಂದು ಹೇಳಲಾಗುತ್ತದೆ. ಕಾಡುಕತ್ತೆಯ ಚರ್ಮ ಬಿಳಿಯಾದರೆ ಅದರ ಮೇಲೆ ಕಪ್ಪುಗೆರೆಗಳೂ ಚರ್ಮ ಕಪ್ಪಾದರೆ ಬಳಿ ಗೆರೆಗಳೂ ಇರುತ್ತದೆ. ಇಂಗಿಷ್‌ನಲ್ಲಿ ಝೀಬ್ರಾ (ZEBRA) ಎಂದು ಕರೆಯಲ್ಪಡುವ ಸಸ್ಯಾಹಾರಿಯಾದ ಈ ಮೃಗದ ಮಾಂಸ ಭಕ್ಷಯೊಗ್ಯವೆಂದು ನಮ್ಮಲ್ಲಿ ತಿಳಿದವರು ಬಹಳ ಕಡಿಮೆ. ‌
   ▪ *ಕಾಡುಕತ್ತೆಯ* ಬದುಕು ಬಹಳ ವಿಚಿತ್ರವಾಗಿದೆ. ಬಹಳ ಕಾಮೋದ್ರೇಕಗೊಳ್ಳುವ ಈ ಪ್ರಾಣಿಯಲ್ಲಿ ಹೆಣ್ಣು ಕಾಡುಕತ್ತೆಯು ಗಂಡು ಮರಿಗೆ ಜನ್ಮ ನೀಡಿದರೆ ಹುಟ್ಟಿಸಿದ ಗಂಡು ಕಾಡುಕತ್ತೆಯು ತನ್ನ ಮರಿಯನ್ನು ಮುಂದಕ್ಕೆ ದೊಡ್ಡವನಾಗುವಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದೆಂಬ ದುರುದ್ದೇಶದಲ್ಲಿ ಅದರ ವೃಷಣವನ್ನು ತನ್ನ ಬಾಯಿಯಿಂದ ಕಚ್ಚಿ ನೀರು ಮಾಡುತ್ತದೆ. ಆದ್ದರಿಂದ ಇದನ್ನರಿತ ತಾಯಿ ಕಾಡುಕತ್ತೆಯು ಮರಿಹಾಕುವ ಸಮಯವಾಗುವಾಗ ಕಾಡಿನಲ್ಲಿ ಬಹಳ ರಹಸ್ಯವಾದ ಒಂದು ಜಾಗವನ್ನು ಆಯ್ಕೆ ಮಾಡುತ್ತದೆ. ಮರಿಹಾಕಿ ಮರಿಯ ಕೈಕಾಲುಗಳೆಲ್ಲ ಗಟ್ಟಿಯಾಗುವ ತನಕ ಗಂಡು ಕಾಡುಕತ್ತೆಯ ಭಯದಿಂದ ಅಲ್ಲೇ ಇರುತ್ತದೆ. ನಂತರ ಮರಿಯೊಂದಿಗೆ ಹೊರಬರುತ್ತದೆ. ಅದರೆಡೆಯಲ್ಲಿ ಮರಿಯು ಗೂಡಿನಿಂದ ಹೊರಬರಲು ಯತ್ನ ನಡೆಸಿದರೆ ಬರಲಿರುವ ಅಪಾಯಕ್ಕೆ ಹೆದರಿ ತನ್ನ ಮರಿಯ ಕಾಲಿಗೆ ಪುಟ್ಟ ಗಾಯಮಾಡಿ ಹೊರಗೆ ಹೋಗದಂತೆ ಮಾಡುತ್ತದೆ. ಆ ಕಾರಣದಿಂದ ಕಾಡುಕತ್ತೆಯಲ್ಲಿ ಸಂತಾನೋತ್ಪತ್ತಿ ಮಾಡುವ ಗಂಡು ಕತ್ತೆಗಳು ಬಹಳ ಕಡಿಮೆಯೆಂದು ಹೇಳಲಾಗುತ್ತದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ, ಹೆತ್ತ ತಾಯಿಗೆ ಮತ್ತು ತಂದೆಗೆ ತಮ್ಮ ಮಗುವಿನಲ್ಲಿರುವ ಪ್ರೀತಿ ಎಷ್ಟೆಂದು ಇಲ್ಲಿ ಊಹಿಸಬಹುದಾಗಿದೆ.
   ▪ *ಇಂದಿನ* ಆಧುನಿಕ ಜಗತ್ತಿನಲ್ಲಿ ಮುಖ್ಯ ನಗರಗಳಲ್ಲಿ ವಾಹನ ಸಂಚಾರ ರಸ್ತೆಯಲ್ಲಿ ಜನರಿಗೆ ರಸ್ತೆ ದಾಟಲು ಬಿಳಿ ಬಣ್ಣದ ಗೆರೆಗಳಿಂದ ಮಾಡಿರುವ ಅಡ್ಡದಾರಿ ಗುರುತನ್ನು *ಝೀಬ್ರಾ ಕ್ರಾಸಿಂಗ್* ಎಂದು ಕರೆಯುತ್ತಾರೆಂದು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತೇನೆ.
   ▪ *ಕತ್ತೆಯ* ಕಿವಿಯ ಕೊಳಕು ತೆಗೆದು ನೀರಲ್ಲಿ ಮಿಶ್ರಣ ಮಾಡಿ ಕುಡಿದರೆ ಎಷ್ಟೋ ದಿನಗಳ ತನಕ ಗಾಡ ನಿದ್ದೆಯಲ್ಲಾಗುವನು. ಕೆಲವೊಮ್ಮೆ ನಿದ್ದೆಗೆ ಬದಲಾಗಿ ಎಚ್ಚರವಾಗದೆಯೇ ಹಾಗೆಯೇ ಕೋಮೋ ಅವಸ್ಥೆಯಲ್ಲಾಗುವನು.
   ▪ *ಅದರ* ಬಾಲದ ತುದಿಗೆ ಒಂದು ಕಲ್ಲನ್ನು ಕಟ್ಟಿದರೆ ಆ ಕಲ್ಲು ಅಲ್ಲಿ ಇರುವ ತನಕ ಅಥವಾ ಅದರ ಗುದದ್ವಾರಕ್ಕೆ ಎಣ್ಣೆ ಸವರಿದರೆ ಅಂತೆಯೇ ಅದರ ಎರಡು ಕಿವಿಗಳನ್ನು ಏನಾದರು ಇಟ್ಟು ಮುಚ್ಚಿದರೆ ಕತ್ತೆಯು ಕಿರುಚುವುದಿಲ್ಲ.
    ▪ *ಕತ್ತೆಯ* ಕಿರುಚೆಂದರೆ ನಾಯಿಗೆ ಬಹಳ ಅಸಹ್ಯ. ಈ ಬೇಸರದ ಕೂಗು ಕೇಳಿದರೆ ನಾಯಿ ತನ್ನ ಬೆನ್ನನ್ನು ಮೇಲೆ ಮಾಡಿ ನಿರಂತರ ಬೊಗಳುತ್ತದೆ. ಆದ್ದರಿಂದ ಯಾವತ್ತೂ ಒಂದು ಮನೆಯಲ್ಲಿ ನಾಯಿ ಮತ್ತು ಕತ್ತೆಯನ್ನು ಸಾಕಲು ಸಾಧ್ಯವಿಲ್ಲ.
   ▪ *ಧನುರ್ವಾಯು* ಖಾಯಿಲೆ ಇರುವವನು ಕತ್ತೆಯ ಮಾಂಸವನ್ನು ಬೇಯಿಸಿದ ನೀರಲ್ಲಿ ಕುಳಿತು ಕೊಳ್ಳುವ ಅಭ್ಯಾಸ ಮಾಡಿದರೆ ಅದು ಕ್ರಮೇಣ ವಾಸಿಯಾಗುತ್ತದೆ.
   ▪ *ಆಗಾಗ್ಗೆ* ಮೂರ್ಛೆ ತಪ್ಪುವ ಖಾಯಿಲೆ ಇರುವವನು ಅಂತೆಯೇ ಅಪಸ್ಮಾರದ ತೊಂದರೆ ಇರುವವನು ಇದರ ಕಾಲಿನ ಗೊರಸಿನಿಂದ ಉಂಗುರ ಅಥವಾ ಇದರ ಹಣೆಯ ಭಾಗದ ಚರ್ಮದಿಂದ ಸೊಂಟಪಟ್ಟಿ ಮಾಡಿ ಧರಿಸಿದರೆ ಈ ತೊಂದರೆಯು ವಾಸಿಯಾಗುತ್ತದೆ.
   ▪ *ಚೇಳು* ಕಡಿದ ತೊಂದರೆಯಿಂದ ವಿಪರೀತ ಸಿಡಿತ ಇರುವುದಾದರೆ ಕತ್ತೆಯ ಮೇಲೆ ಕುಳಿತು ಸವಾರಿ ಮಾಡಬೇಕು. ಆದರೆ ಸವಾರಿಯು ಸಾಧಾರಣ ಸವಾರಿಗಿಂತ ವಿಪರೀತವಾಗಿ ಕತ್ತೆಯ ಬಾಲದ ಭಾಗಕ್ಕೆ ಮುಖ ಮಾಡಿ ತದ್ವಿರುದ್ಧವಾಗಿ ಕುಳಿತು ಕೊಳ್ಳಬೇಕು. ಹಾಗೆಯೇ ಕುಳಿತು ಸಂಚಾರ ಮಾಡಿದರೆ ಇವನ ಸಿಡಿತ ಕಡಿಮೆಯಾಗಿ ಕುದುರೆಗೆ ಸಿಡಿತ ಪ್ರಾರಂಭವಾಗುತ್ತದೆ. ಸುಬ್‌ಹಾನಲ್ಲಾಹ್! ಇದೆಂತಹಾ ವಿಸ್ಮಯ...?
   ▪ *ಕತ್ತೆಯ* ಎಲುಬಿನ ಮಜ್ಜೆಯನ್ನು ಎಣ್ಣೆಯಲ್ಲಿ ಮಿಶ್ರಣ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದ್ದವಾಗುತ್ತದೆ. ಆದರೆ ಆ ಮಜ್ಜೆಯನ್ನು ತಿಂದರೆ ನೆನಪು ಶಕ್ತಿ  ಕಡಿಮೆಯಾಗುತ್ತದೆ. ಗರ್ಭಿಣಿಯು ತಿಂದರೆ ಹುಟ್ಟುವ ಮಗುವಿಗೆ ಮಂದ ಬುದ್ದಿಯಾಗುತ್ತದೆ.
   ▪ *ಕತ್ತೆಯ* ಮತ್ತು ಕುದುರೆಯ ಸೆಗಣಿಯನ್ನು ಸುರ್ಕದೊಂದಿಗೆ ಮಿಶ್ರಣ ಮಾಡಿ ಗಾಯವಾಗಿ ರಕ್ತ ಹರಿಯುವಲ್ಲಿಗೆ ಹಚ್ಚಿದರೆ ರಕ್ತ ಬರುವುದು ನಿಲ್ಲುತ್ತದೆ.
   ▪ *ರಾತ್ರಿ* ನಿದ್ದೆಯಲ್ಲಿ ಅಂತೆಯೇ ಇತರ ಸಮಯದಲ್ಲಿ ಹೆದರುವ ಮಕ್ಕಳ ಸೊಂಟಕ್ಕೆ ಕತ್ತೆಯ ಹಣೆಯ ಭಾಗದ ಚರ್ಮವನ್ನು ಕಟ್ಟಿದರೆ ಹೆದರಿಕೆ ಬೆಟ್ಟ ಹತ್ತುತ್ತದೆ. ಅಂತೆಯೇ ಅದರ ಕಾಲಿಕವನ್ನು ಒಣಗಿಸಿ ಮೂರರ ಚಳಿಜ್ವರ ಇರುವವನ ಸೊಂಟಕ್ಕೆ ಗಟ್ಟಿಯಾಗಿ ಕಟ್ಟಿದರೆ ಜ್ವರ ಗುಣವಾಗುತ್ತದೆ. ಹಾಗೆಯೇ ಅದರ ಗೊರಸನ್ನು ಪುಡಿಮಾಡಿ ಅಪಸ್ಮಾರ ಅಥವಾ ಆಗಾಗ್ಗೆ ಮೂರ್ಛೆ ಹೋಗುವವನ ಹಣೆಗೆ ಸವರಿದರೆ ಅದು ಕ್ರಮೇಣ ಮಾಯವಾಗುತ್ತದೆ. ಗೊರಸಿನ ಪುಡಿಯನ್ನು ತೈಲ ಮಿಶ್ರಣ ಮಾಡಿ ಗಂಟಮಾಲೆ ಮತ್ತು ಪಾಂಡು ರೋಗದ ಕಲೆಗೆ ಸವರಿದರೆ ಅದೂ ಮಾಯವಾಗುತ್ತದೆ.
   ▪ *ಕತ್ತೆಯ* ಮಾಂಸವನ್ನು ಒಬ್ಬನು ತಿಂದರೆ ವಿಷ ಜಂತುಗಳು ಕಡಿದರೆ ಅವನ ಶರೀರದಲ್ಲಿ ಸುಲಭವಾಗಿ ವಿಷವು ಹತ್ತದು. ಅದರ ರಕ್ತವನ್ನು ಮೂಲವ್ಯಾಧಿ ರೋಗಿಯ ಪೃಷ್ಠಕ್ಕೆ ಹಲವು ಬಾರಿ ಸವರಿದರೆ ಖಾಯಿಲೆ ಸಂಪೂರ್ಣವಾಗಿ ಗುಣವಾಗುತ್ತದೆ.
   ▪ *ಕತ್ತೆಯ* ಸೆಗಣಿಗೆ ಸುರ್ಕ ಸುರಿಯುವಾಗ ಅದರಿಂದ ಬರುವ ವಾಸನೆಯನ್ನು ಮೂಗಿನಲ್ಲಿ ರಕ್ತ ಬರುವ ಖಾಯಿಲೆ ಇರುವವನು ಕೆಲವು ಬಾರಿ ಮೂಗಿನಲ್ಲಿ ಸೇದಿದರೆ ಅದು ಗುಣವಾಗುತ್ತದೆ.
   ▪ *ಅದರ* ಕಾಲಿಕವನ್ನು (Liver) ಸುಟ್ಟ ನಂತರ ಒಂದೆರಡು ದಿನ ಸುರ್ಕದಲ್ಲಿಟ್ಟು ಆಮೇಲೆ ಹಸಿ ಹೊಟ್ಟೆಗೆ ಅದನ್ನು ತಿಂದರೆ ಅಪಸ್ಮಾರ ರೋಗ ಗುಣವಾಗುತ್ತದೆ. ಹಾಗೆಯೇ ಕಾಲಿಕವನ್ನು ಒಣಗಿಸಿ ಪುಡಿಮಾಡಿ ಸ್ತ್ರೀಯರ ಸ್ತನಗಳಿಗೆ ಸವರಿದರೆ ಹಾಲು ಜಾಸ್ತಿಯಾಗುತ್ತದೆ.
   ▪ *ನಿರಂತರ* ಕೂಗುವ ಸಣ್ಣ ಮಕ್ಕಳಿಗೆ ಕತ್ತೆಯ ಹಾಲನ್ನು ಒಂದೆರಡು ಸಲ ಕುಡಿಸಿದರೆ ಕೂಗಿಗೆ ವಿರಾಮವಾಗುತ್ತದೆ.
   ▪ *ಚಾವಟಿ* ಏಟಿನಿಂದಾಗಿ ನೋವು ತಡೆಯಲಾಗದೆ ಸಂಕಟ ಅನುಭವಿಸುವವನನ್ನು ಕತ್ತೆಯ ತಾಜಾ ಚರ್ಮವನ್ನು ಸ್ವಲ್ಪ ಬಿಸಿಮಾಡಿ ಅದರಲ್ಲಿ ಮಲಗಿಸಿದರೆ ನೋವು ಕಡಿಮೆಯಾಗುತ್ತದೆ.
   ▪ *ಮೂತ್ರಕೋಶದಲ್ಲಿ* ಕಲ್ಲಿನ ತೊಂದರೆ ಇರುವವನು ಕತ್ತೆಯ ಸೆಗಣಿಯನ್ನು ನೀರಲ್ಲಿ ಮಿಶ್ರಣ ಮಾಡಿ ಕುಡಿದರೆ ಕಲ್ಲು ಹೋಗುತ್ತದೆ.
   ▪ *ಕಾಡು ಕತ್ತೆಯ* ಕಣ್ಣಿಗೆ ನೋಡಿದರೆ ನೋಡಿದವನ ಕಣ್ಣಿನ ಆರೋಗ್ಯ ಹೆಚ್ಚುತ್ತದೆ. ಮಾತ್ರವಲ್ಲ ಕಣ್ಣಿನಿಂದ ನೀರು ಬರುವ ತೊಂದರೆ ಇರುವುದಾದರೆ ಅದು ನಿಲ್ಲುತ್ತದೆ. ಇದೊಂದು ಫಲಕಾರಿ ಮತ್ತು ಅಧ್ಬುತ ಚಿಕಿತ್ಸೆಯಾಗಿದೆ.
   ▪ *ಅಂತೆಯೇ* ಸಂಧಿವಾತ ಖಾಯಿಲೆ ಇರುವವನು ಕಾಡು ಕತ್ತೆಯ ಮಾಂಸವನ್ನು ಒಂದೆರಡು ಸಲ ತಿಂದರೆ ಸಂಧಿವಾತದ ವಿಳಾಸವೇ ಇರಲಿಕ್ಕಿಲ್ಲ.
   ▪ *ಕಾಡುಕತ್ತೆಯ* ಕೊಬ್ಬನ್ನು ಚರ್ಮದಲ್ಲಿ ಕಾಣಲ್ಪಡುವ ಕಲೆ ಮತ್ತು ಮಚ್ಚೆಗಳಿಗೆ ಕೆಲವು ಬಾರಿ ಹಚ್ಚಿದರೆ ಅದು ಕ್ರಮೇಣ ಮಾಯವಾಗುತ್ತದೆ. ಅದು ಗುಲಾಬಿ ನೀರಿನಲ್ಲಿ ಮಿಶ್ರಣ ಮಾಡಿಯಾದರೆ ಮತ್ತೂ ಉತ್ತಮ ಫಲ ಕಾಣುತ್ತದೆ.
   ▪ *ಅದರ*  ಪಿತ್ತಕೋಶವನ್ನು ಜಜ್ಜಿ ತಲೆಗೆ ಸವರಿದರೆ ಕೂದಲು ಉದುರುವುದು ನಿಲ್ಲುತ್ತದೆ. ಅಂತೆಯೇ ಅದನ್ನು ಹಸಿಯಾಗಿಯೇ ತಿಂದರೆ ಚಾಪೆಯಲ್ಲಿ ಮೂತ್ರಶಂಕೆ ಮಾಡುವ ಅಭ್ಯಾಸವಿರುವುದಾದರೆ ಅದಕ್ಕೆ ವಿರಾಮವಾಗುತ್ತದೆ.
   ▪ *ಹಾಗೆಯೇ* ಅದರ (ಕಾಡುಕತ್ತೆಯ) ಎಲುಬಿನ ಒಳಗಿನ ಮಜ್ಜೆಯನ್ನು ನೈದಿಲೆ ಎಣ್ಣೆಯಲ್ಲಿ ಬೆರೆಸಿ ಬಿಸಿಮಾಡಿ ನಂತರ ಕೆಲವರಿಗೆ ಚರ್ಮದಲ್ಲಿ ಕಾಣಲ್ಪಡುವ ಚರ್ಮರೋಗವಾದ  *ತೊನ್ನು* ಖಾಯಿಲೆಗೆ  ಸವರಿದರೆ ಅದು ಕ್ರಮೇಣ ಮಾಯವಾಗುತ್ತದೆ. ಅಂತೆಯೇ ಚಾಪೆಯಲ್ಲಿ ಮೂತ್ರಶಂಕೆ ಮಾಡುವ ಅಭ್ಯಾಸವಿರುವವನು ಅದನ್ನು ಕೆಲವು ಬಾರಿ ತಿಂದರೆ ಖಾಯಿಲೆ ಗುಣವಾಗುತ್ತದೆ.
   ▪ *ಇದರ* ಗೊರಸಿನಿಂದ ಉಂಗುರ ಮಾಡಿ ಧರಿಸಿದರೆ ಅಪಸ್ಮಾರ ಮತ್ತು ಹುಚ್ಚು ಹಿಡಿಯುವ ಖಾಯಿಲೆ ವಾಸಿಯಾಗುವುದು.ಅಂತೆಯೇ ಗೊರಸನ್ನು ಸುಟ್ಟು ಅದರ ಹುಡಿಯನ್ನು ಕಣ್ಣಿಗೆ ಹಾಕಿದರೆ ರಾತ್ರಿ ಕಣ್ಣು ಬಲೆಕಟ್ಟುವುದು, ಬೆಳಕು ನೋಡಲಾಗದಿರುವುದು ಇತ್ಯಾದಿ ತೊಂದರೆಗಳು ನಿವಾರಣೆಯಾಗುತ್ತದೆ.
   ▪ *ತಂದೂರಿ* ರೊಟ್ಟಿ ಮಾಡುತ್ತಿರುವವನ ತಂದೂರಿ ಒಲೆಯ ಬೆಂಕಿಗೆ ಕಾಡುಕತ್ತೆಯ ಒಂದು ತುಂಡು ಒಣ ಸೆಗಣಿಯನ್ನು ಹಾಕಿದರೆ ಒಲೆಯಲ್ಲಿ ಸುಡಲ್ಪಡುತ್ತಿರುವ ಎಲ್ಲಾ ರೊಟ್ಟಿಗಳು ಕೆಳಗೆ ಬೀಳುತ್ತದೆ.!!! ಅಂತೆಯೇ ಅದರ ಸೆಗಣಿಯನ್ನು ಪುಡಿಮಾಡಿ ಮೂಗಿನಿಂದ ಸೇದಿದರೆ ಮೂಗಿನಿಂದ ರಕ್ತ ಬರುವ ಖಾಯಿಲೆ ವಾಸಿಯಾಗುತ್ತದೆ.
   ▪ *ಒಬ್ಬನಿಗೆ* ಕಾಡುಕತ್ತೆಯ ಮೇಲೆ ಸವಾರಿ ಮಾಡುವ ಕನಸು ಕಂಡರೆ ಅವನು ಒಂದು ಡೊಡ್ಡ ಪಾಪದಲ್ಲಿ ಬೀಳುವುದರ ನಿಶಾನೆಯಾಗಿದೆ.
   ▪ *ಕಾಡುಕತ್ತೆಯ* ಹಾಲು ಕುಡಿದ ಕನಸು ಕಂಡರೆ ಧರ್ಮನಿಷ್ಠೆ ಮತ್ತು ಧರ್ಮಭಕ್ತಿ ಜಾಸ್ತಿಯಾಗುವುದರ ಲಕ್ಷಣವಾಗಿದೆ. ಅಂತೆಯೇ ಅದರ ಮಾಂಸ ಲಭಿಸಿದ ಕನಸು ಬಿದ್ದರೆ ಬದುಕಿನಲ್ಲಿ ಐಶ್ವರ್ಯ, ನೆಮ್ಮದಿ, ಆರಾಮ, ಕೀರ್ತಿ ಬರುವುದರ ಲಕ್ಷಣವಾಗಿದೆ.
   ▪ *ಒಬ್ಬನಿಗೆ* ಸಾಕುಕತ್ತೆಯು ಕಾಡುಕತ್ತೆಯಂತೆ ಅಕ್ರಮ ಮಾಡುವುದು ಕಂಡರೆ ಬದುಕಿನಲ್ಲಿ ಅನಾಹುತ ಮತ್ತು ತೊಂದರೆಗಳು ಬರುವುದರ ಸಂಕೇತವಾಗಿದೆ. ಇನ್ನು ಕಾಡುಕತ್ತೆಯು ಸಾಕು ಕತ್ತೆಯಂತೆ ಬಹಳ ಸೌಮ್ಯವಾಗಿ ಒಂದು ಕಡೆ ಇರುವುದನ್ನು ಕಂಡರೆ ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷ ಬರುವುದರ ಸಂಕೇತವಾಗಿದೆ.
   ▪ *ಸಾಕು ಕತ್ತೆಯನ್ನು* ಕನಸಲ್ಲಿ ಕಾಣುವುದು ಶುಭ ಲಕ್ಷಣವಾಗಿದೆ. ಈ ಬಗ್ಗೆ ಕನಸು ವ್ಯಾಖ್ಯಾನದ ಉಲಮಾಗಳು ಹಲವಾರು ವ್ಯಾಖ್ಯಾನಗಳನ್ನು ಕೊಟ್ಟಿದ್ದಾರೆ.
ಕತ್ತೆಯ ಕನಸು ಹತ್ತಿರದಲ್ಲೇ ದೀರ್ಘವಾದ ಸಫರ್ (ಯಾತ್ರೆ) ಹೋಗಲಿರುವುದರ ನಿಶಾನೆಯಾಗಿದೆ.
ಏನೋ ತೊಂದರೆಯಲ್ಲಿ ಸಿಲುಕಿದವನಾದರೆ ಆ ತೊಂದರೆಯಿಂದ ಬಚಾವು ಆಗುವುದರ ಸಂಕೇತವಾಗಿದೆ.
ಮಕ್ಕಳಿಲ್ಲದವನಾದರೆ ಮಕ್ಕಳಾಗುವುದರ ನಿಶಾನೆಯಾಗಿದೆ.
   ▪ *ಕತ್ತೆಯನ್ನು* ಖರೀದಿಸಿದ ಅಥವಾ ಕತ್ತೆಯ ಮೇಲೆ ಸವಾರಿ ಮಾಡಿದ ಕನಸು ಬಿದ್ದರೆ ತನ್ನ ಮುಂದಿನ ಬದುಕಿನಲ್ಲಿ ಐಶ್ವರ್ಯ ಮತ್ತು ನೆಮ್ಮದಿ ಬರುವುದರ ಸಂಕೇತವಾಗಿದೆ.
   ▪ *ತನ್ನ* ಕತ್ತೆಯನ್ನು ಮಾರಾಟ ಮಾಡಿದ ಅಥವಾ ಕತ್ತೆ ಸತ್ತ ಅಂತೆಯೇ ಕತ್ತೆಯು ಕಾಣೆಯಾದ ಕನಸು ಕಂಡರೆ ಮುಂದಿನ ಬದುಕಿನಲ್ಲಿ ದಾರಿದ್ರ್ಯ ಬರುವುದರ ಲಕ್ಷಣವಾಗಿದೆ. ಕೆಲವೊಮ್ಮೆ ತನ್ನ ಮರಣದ ಸಂಕೇತವಾಗಿದೆ.
   ▪ *ಒಬ್ಬನಿಗೆ* ಕತ್ತೆಯನ್ನು ಪಲ್ಯ ಮಾಡಲು ದ್ಸಬಹ್ ಮಾಡಿದ ಕನಸು ಬಿದ್ದರೆ ಅವನ ಜೀವನೋಪಾಯದಲ್ಲಿ ಬಹಳ ಐಶ್ವರ್ಯ ಮತ್ತು ಬರಕತ್ ಬರುವುದರ ಲಕ್ಷಣವಾಗಿದೆ. ಆದರೆ ದ್ಸಬಹ್ ಮಾಡುವುದು ಬೇರೆಯವರಿಗೆ ಮಾರಾಟ ಮಾಡಲು ಬೇಕಾಗಿಯಾದರೆ, ಮುಂದಿನ ಜೀವನದಲ್ಲಿ ಸಂಕಷ್ಟ ಮತ್ತು ತೊಂದರೆಗಳು ಬರುವುದರ ನಿಶಾನೆಯಾಗಿದೆ.
    ▪ *ಕತ್ತೆಯ* ಕಿರುಚನ್ನು ಕನಸಲ್ಲಿ ಕೇಳುವುದು ಶೈತಾನ ಪಿಶಾಚಿಗಳ ಉಪದ್ರವಕ್ಕೆ ಬಲಿಯಾಗುವುದರ ಸಂಕೇತವಾಗಿದೆ.
   ▪ *ಒಬ್ಬನಿಗೆ* ಕತ್ತೆಯಾಗಿ ಸೆಣಸಾಟವಾಡುವ ಕನಸು ಕಂಡರೆ ಹತ್ತಿರದಲ್ಲೇ ಕುಟುಂಬದಲ್ಲಿ ಯಾರೋ ಮರಣ ಹೊಂದುವುದರ ನಿಶಾನೆಯಾಗಿದೆ.
   ▪ *ಕತ್ತೆಯು* ನಡೆಯುವ ಕಾಲ್ಹೆಜ್ಜೆಯ ಶಬ್ದ ಕೇಳುತ್ತದೆ. ಆದರೆ ಕತ್ತೆಯನ್ನು ಕಾಣುವುದಿಲ್ಲ ಎಂದಾದರೆ ಅದು ಆ ಕಂಡ ಊರಿನಲ್ಲಿ ಮಳೆ ಬರುವುದರ ಸಂಕೇತವಾಗಿದೆ.
   ▪ *ಒಬ್ಬನಿಗೆ* ತನ್ನ ಕತ್ತೆ ಗರ್ಭಿಣಿಯಾದ ಕನಸು ಕಂಡರೆ ಅವನ ಪತ್ನಿ ಗರ್ಭಿಣಿಯಾಗುವುದರ ನಿಶಾನೆಯಾಗಿದೆ.
   ▪ *ಕತ್ತೆಯ* ಹಾಲು ಕುಡಿದ ಕನಸು ಬಿದ್ದರೆ ಪುಟ್ಟ ಖಾಯಿಲೆ ಬಂದು ಕೆಲವೇ ದಿನಗಳಲ್ಲಿ ವಾಸಿಯಾಗುವುದರ ನಿಶಾನೆಯಾಗಿದೆ.
    *ಮುಕ್ತಾಯ...*

ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಖಝ‌್‌ವೀನಿಯ *ಅಜಾಯಿಬುಲ್   ಮಖ್‌ಲೂಖಾತ್*  ಮಲ್ ಅಬ್‌ಶೀಯಿಯ *ಮುಸ್‌ತತ್‌ರಫ್,* ಇಮಾಮ್ ಬಿನ್ ಸ‌ಅ್‌ದ್‌ರ *ತ್ವಬಕಾತ್* ಅಂತೆಯೇ ತತ್ವಜ್ಞಾನಿ ಜಾಹಿಳ್‌ರ *ಕಿತಾಬುಲ್ ಹಯವಾನ್* ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...