Skip to main content

ವಿಸ್ಮಯ ತುಂಬಿದ ಜೀವಜಗತ್ತು 29 ಬೆರಗು ಹುಟ್ಟಿಸುವ ಒಂಟೆ ಪುರಾಣ

ವಿಸ್ಮಯ ತುಂಬಿದ ಜೀವಜಗತ್ತು 29

ಬೆರಗು ಹುಟ್ಟಿಸುವ ಒಂಟೆ ಪುರಾಣ
     

▪ಮರುಭೂಮಿಯ ಹಡಗು▪

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ*
📞00971 553499119

   ▪ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಹದೀಸ್ ವಚನಗಳಲ್ಲಿ ಹಲವೆಡೆ ವಿವಿಧ ಹೆಸರುಗಳಿಂದ ಉಲ್ಲೇಖಿಸಲಾದ ಒಂದು ಅದ್ಭುತ ಮೃಗವಾಗಿದೆ ಒಂಟೆ. ಸುಮಾರು ನಲುವತ್ತರಿಂದ ಐವತ್ತು ವರ್ಷಗಳ ತನಕ ಬದುಕುವ ಈ ಸಾಕು ಪ್ರಾಣಿ ಮನುಷ್ಯನ ಹತೋಟಿ ಮತ್ತು ನಿಯಂತ್ರಣಕ್ಕೆ ಬಹಳ ಸುಲಭವಾಗಿ ದೊರಕುತ್ತದೆ. ಇದರ ಕೊರಳ ಹಗ್ಗವನ್ನು ಒಂದು ಇಲಿ ಎಳೆದುಕೊಂಡು ಹೋಗುವುದಾದರೂ ಇಲಿ ಹೋಗುವಷ್ಟು ದೂರ ಇಲಿಯ ಜತೆಗೆ ಇದೂ ಹೋಗುತ್ತದೆ. ಅಂದರೆ ಅಷ್ಟಕ್ಕೂ ಸಾಧುವಾದ ಒಂದು ಮೃಗವಾಗಿದೆ ಎಂದರ್ಥ.
   ▪ಮರುಭೂಮಿಯ ವಾಹನವಾದ ಈ ಒಂಟೆಯು ಗರ್ಭಧಾರಣೆಯಾಗಿ ಹನ್ನೆರಡು-ಹದಿಮೂರು ತಿಂಗಳಲ್ಲಿ ಒಂದು ಅಥವಾ ಅಸಾಧಾರಣವಾಗಿ ಕೆಲವೊಮ್ಮೆ ಎರಡು ಮರಿಗೆ ಜನ್ಮ ನೀಡುತ್ತದೆ. ಮರುಭೂಮಿಯಲ್ಲಿ ಬದುಕುವ ಈ ಪ್ರಾಣಿಯನ್ನು ಇತರ ಪ್ರಾಣಿಗಳಿಗೆ ಹೋಲಿಸಿದರೆ ಇದಕ್ಕೆ ಹಲವಾರು ವಿಶೇಷತೆಗಳಿವೆ. ಸುಮಾರು ಹತ್ತು ಹನ್ನೆರಡು ದಿನಗಳ ತನಕ ನೀರು ಕುಡಿಯದೆಯೇ ಎಂತಹಾ ವಿಪರೀತ ಸೆಕೆಯಿರುವ ಬೇಸಿಗೆ ಕಾಲದಲ್ಲೂ ಮರುಭೂಮಿಯಲ್ಲಿ ಸಂಚಾರ ಮಾಡುವ ತಾಕತ್ತು ಮತ್ತು ಶಕ್ತಿಯನ್ನು ಅಲ್ಲಾಹನು ಇದಕ್ಕೆ ಕೊಟ್ಟಿರುತ್ತಾನೆ. ಮಾತ್ರವಲ್ಲ ಇತರ ಜೀವಿಗಳು ತಿನ್ನದ ಮರುಭೂಮಿಯಲ್ಲಿ ಚಿಗುರುವ ಎಲ್ಲಾ ಹುಲ್ಲು ಮತ್ತು ಇತರ ಸಸ್ಯಗಳನ್ನು ಇದು ತಿನ್ನುತ್ತದೆ ಎಂಬುದು ಇದರ ಮತ್ತೊಂದು ವಿಶೇಷತೆಯಾಗಿದೆ.
   ▪ಆಡು ಸಾಕಣೆ ಮನೆಗೆ ಬರಕತ್ ಆದರೆ ಒಂಟೆ ಸಾಕಣೆ ಮನೆಗೆ ಹೆಮ್ಮೆ ಮತ್ತು ಗೌರವವಾಗಿದೆ. ಮಾತ್ರವಲ್ಲ ನೀವು ಯಾವತ್ತೂ ಒಂಟೆಯನ್ನು ದೂಷಿಸಬಾರದೆಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತಾಕೀತು ಮಾಡಿದ್ದಾರೆ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಹಲವಾರು ಸಂಚಾರಗಳಲ್ಲಿ ತಮ್ಮೊಂದಿಗಿದ್ದವರು ತಾವು ಕುಳಿತಿದ್ದ ಒಂಟೆಗಳು ಕೆಲವೊಮ್ಮೆ ವೇಗವಾಗಿ ಹೋಗದ ಸಂದರ್ಭಗಳಲ್ಲಿ ಅದನ್ನು ಶಪಿಸಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವರ ಮಾತನ್ನು ಖಂಡಿಸಿದ ಹಲವಾರು ಸಹೀಹಾದ ಹದೀಸುಗಳು ವರದಿಯಾಗಿದೆ.
   ▪ಏನಾದರೂ ಅಪಘಾತ ಅಥವಾ ಇತರ ಕಾರಣಗಳಿಂದ ಗಾಯವಾಗಿ ನಿಯಂತ್ರಣವಿಲ್ಲದೆ ರಕ್ತ ಹೊರ ಬರುವುದಾದರೆ ಒಂಟೆಯ ರೋಮವನ್ನು ಸುಟ್ಟು ಅದರ ಬೂದಿಯನ್ನು ಗಾಯದ ಜಾಗಕ್ಕೆ ಇಟ್ಟರೆ ರಕ್ತ ಹರಿದು ಬರುವುದು ಕೂಡಲೇ ನಿಲ್ಲುತ್ತದೆ. 
   ▪ಮೂರ್ಛೆ ಹೋದವನಿಗೆ ಒಂಟೆಯ ಮೂತ್ರವನ್ನು ಕುಡಿಸಿದರೆ ಕೂಡಲೇ ಎಚ್ಚರವಾಗುತ್ತಾನೆ.
   ▪ಸಹಾಬೀಶ್ರೇಷ್ಠ ಹಝ್ರತ್ ಝೈದ್ ಬಿನ್ ಸಾಬಿತ್ (ರ) ಹೇಳುತ್ತಾರೆ. "ನಾವೊಮ್ಮೆ ಕೆಲವು ಮಂದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರೊಂದಿಗೆ ಮದೀನಾ ಪಟ್ಟಣದ ಒಂದು ಒಳ ದಾರಿಯಲ್ಲಿ ಹೋಗುತ್ತಿರುವಾಗ ಒಬ್ಬ ಬಡಪಾಯಿ ಗ್ರಾಮವಾಸಿಯು ಒಂದು ಒಂಟೆಯನ್ನು ಅದರ ಕೊರಳಿಗೆ ಹಗ್ಗ ಹಾಕಿಕೊಂಡು ಬರುತ್ತಿದ್ದರು. ನಮ್ಮನ್ನು ಕಂಡಾಗ ಬಹಳ ಗೌರವದಿಂದ ಒಂದು ಕಡೆ ಸರಿದು ನಿಂತು ನಮಗೆ ಸಲಾಮ್ ಹೇಳಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಸಮೇತ ನಾವೆಲ್ಲರೂ ಅವರ ಸಲಾಮಿಗೆ ಜವಾಬು ಕೊಟ್ಟೆವು. ನಂತರ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವರಲ್ಲಿ ಕುಶಲೋಪರಿ ನಡೆಸಿದರು. ಅಷ್ಟರಲ್ಲಿ ಹೊರನೋಟಕ್ಕೆ ಪಹರೆಗಾರನಂತೆ ಕಾಣುವ ಒಬ್ಬ ಅಪರಿಚಿತ ವ್ಯಕ್ತಿ ಬಂದು ಹೇಳಿದ. *"ಈ ಒಂಟೆ ನನ್ನದು. ಈ ಅಅ್‌ರಾಬಿ ಇದನ್ನು ನನ್ನ ಮನೆಯಿಂದ ಕದ್ದು ತಂದಿದ್ದಾನೆ. ಅದಕ್ಕಾಗಿ ನಾನು ಈಗ ಇವನ ಬೆನ್ನಲ್ಲಿ ಓಡಿ ಬಂದಿರುವೆನು. ಆದ್ದರಿಂದ ಈ ಒಂಟೆಯನ್ನು ನೀವು ನನಗೆ ತೆಗೆದು ಕೊಡಬೇಕು"*
   ▪ಅಷ್ಟರಲ್ಲಿ ಇತ್ತ ಒಂಟೆಯು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರತ್ತ ತಿರುಗಿ ಬಹಳ ಬೇಸರದಿಂದ ಕೂಗುತ್ತಾ ಅವರ ಹತ್ತಿರ ಬಂದು ಏನೋ ತನ್ನ ಸಂಕಟ ಹೇಳುತ್ತಿತ್ತು. ಈ ಒಂಟೆಯು ಹೇಳುವ ಗುಟ್ಟು ಮಾತನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಬಹಳ ಆಸಕ್ತಿಯಿಂದ ಕೇಳುತ್ತಿದ್ದರು. ಒಂಟೆಯ ರಹಸ್ಯ ಮಾತುಕತೆ ಮುಗಿದ ಕೂಡಲೇ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಪಹರೆಗಾರನತ್ತ ಮುಖಮಾಡಿ ಹೇಳಿದರು. *"ನೀನು ಬಂದ ದಾರಿಗೇ ಹೋಗು. ಈ ಒಂಟೆ ನಿನ್ನದಲ್ಲ. ನೀನು ಹೇಳುವುದು ಸುಳ್ಳೆಂದು ಈ ಒಂಟೆಯೇ ಈಗ ನನ್ನಲ್ಲಿ ಹೇಳಿತು."* ಇದು ಕೇಳಿದ್ದೇ ತಡ ಸುಳ್ಳು ಹೇಳಿ ಬಂದ ವ್ಯಕ್ತಿ ಅಲ್ಲಿಂದ ಕಾಲ್ಕಿತ್ತ. ನಂತರ ಒಂಟೆಯು ಅದರ ಮಾಲಿಕನೊಂದಿಗೆ ಹೋಯಿತು."
   ▪ಒಬ್ಬನು ಜುಮುಅ ದಿನದಂದು ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಪ್ರಪ್ರಥಮ ಸಮಯದಲ್ಲಿ ಜುಮುಅ ನಮಾಝಿಗೆ ಮಸೀದಿ ತಲುಪುವುದಾದರೆ ಅವನಿಗೆ ಒಂದು ಒಂಟೆಯನ್ನು ದ್ಸಬಹ್ ಮಾಡಿ ಅದರ ಮಾಂಸವನ್ನು ದಾನ ಮಾಡಿದ ಪುಣ್ಯವಿದೆಯೆಂದು ಪ್ರವಾದಿಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದ ಹದೀಸನ್ನು ಇಮಾಮ್ ಬುಖಾರಿ ಮತ್ತು ಮುಸ್ಲಿಮ್ ವರದಿ ಮಾಡಿದ್ದಾರೆ.
   ▪ಯಅ್‌ಲಾ ಬಿನ್ ಮರ‍್ರ (ರ) ಎಂಬ ಸಹಾಬಿ ಹೇಳುತ್ತಾರೆ. "ನಾವೊಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜತೆಗೆ ಹೋಗುತ್ತಿರುವಾಗ ಒಂದು ಕಡೆ ಒಂದು ಒಂಟೆಯು ತನ್ನ ಬೆನ್ನ ಮೇಲೆ ತುಂಬಾ ಹೊರೆ ಹೊತ್ತು ನಿಂತಿತ್ತು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಕಂಡ ಕೂಡಲೇ ಅವರ ಹತ್ತಿರ ಬಂದು ಏನೋ ಗುಟ್ಟು ಹೇಳಿತು. ನಂತರ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಕೇಳಿದರು. *"ಇದರ ಯಜಮಾನ ಯಾರು..?"*  ಆಗ ಒಬ್ಬರು ಬಂದು ಹೇಳಿದರು. *"ನಾನು ಪ್ರವಾದಿಯವರೇ"* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವರಲ್ಲಿ ,  *"ನೀನಿದನ್ನು ಮಾರಾಟ ಮಾಡುತ್ತಿಯಾ..?"* ಎಂದು ಕೇಳಿದರು. ಆಗ ಅವರು ಹೇಳಿದರು. *"ಮಾರಾಟ ಮಾಡುವುದಿಲ್ಲ. ನಾನು ನಿಮಗೂ ನಿಮ್ಮ ಕುಟುಂಬದವರಿಗೂ ಇದನ್ನು ಕೊಡುಗೆಯಾಗಿ ಕೊಡುತ್ತೇನೆ."* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಹೇಳಿದರು. *"ಆಗಲಿ, ಆದರೆ ನೀನು ಇದಕ್ಕೆ ಚೆನ್ನಾಗಿ ತಿನ್ನಲು ಕೊಡದೆ ಇದರಿಂದ ಬಹಳ ಕಷ್ಟದ ಕೆಲಸ ಮಾಡಿಸುತ್ತಿದ್ದಿ ಎಂದು ಈಗ ಇದು ನನ್ನಲ್ಲಿ ದೂರು ಕೊಟ್ಟಿರುತ್ತದೆ."* ಎಂದರು. ನಂತರ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಮತ್ತು ಸಹಾಬಿಗಳು ಉಡುಗೊರೆಯಾಗಿ ದೊರೆತ ಒಂಟೆಯೊಂದಿಗೆ ಸಂಚಾರ ಮುಂದುವರಿಯುತ್ತಿರುವಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತನ್ನೊಂದಿಗಿದ್ದ ಸಹಾಬಿಗಳಲ್ಲಿ ಹೇಳಿದರು." *"ಸುಮಾರು ನಲುವತ್ತು ವರ್ಷಗಳಿಂದ ಸರಿಯಾಗಿ ತಿನ್ನಲು ಕೊಡದೆ ಆ ವ್ಯಕ್ತಿ ಈ ಬಡಪಾಯಿ ಒಂಟೆಯಿಂದ ಕೆಲಸ ಮಾಡಿಸುತ್ತಿದ್ದ. ನಾಳೆ ಏನೋ ಸಮಾರಂಭಕ್ಕೆ ಇದನ್ನು ದ್ಸಬಹ್ ಮಾಡುವ ತಯಾರಿಯಲ್ಲಿದ್ದ. ಈ ಒಂಟೆ ನನ್ನಲ್ಲಿ ಈಗ ರಹಸ್ಯವಾಗಿ ದೂರು ಹೇಳಿದ್ದು ಇದನ್ನೇ. ಆದ್ದರಿಂದ ನೀವು ಇದನ್ನು  ತಾನಾಗಿ ಸಾಯುವ ತನಕ ಚೆನ್ನಾಗಿ ನೋಡಿಕೊಳ್ಳಿ."*
   ▪ ಒಂಟೆ, ಹಸು, ಆಡು ಇತ್ಯಾದಿ ಮೃಗಗಳನ್ನು ಹೊಸದಾಗಿ ಖರೀದಿಸಿ ಮನೆಗೆ ತರುವಾಗ, ಮದುವೆಯಾಗಿ ಪ್ರಪ್ರಥಮವಾಗಿ ಅವನ ಬಾಳ ಸಂಗಾತಿಯನ್ನು ಕಾಣುವಾಗ ಅವಳ ಹಣೆಯಲ್ಲಿ ಕೈಯಿಟ್ಟು ಮಾಡುವ ದುಆ ಈ ಮೃಗಗಳ ಹಣೆಯಲ್ಲಿ ಕೈಯಿಟ್ಟು ಹೇಳುವುದು ಸುನ್ನತ್ತಾಗಿದೆ.
   ▪ ಖಾಲಿದ್ ಬಿನ್ ರಾಫಿಯೀ (ರ) ಮತ್ತು ಅವರ ಸಹೋದರ ಖಲ್ಲಾದ್ ಬಿನ್ ರಾಫಿಯೀ (ರ) ಎಂಬ ಇಬ್ಬರು ಸಹಾಬಿಗಳು ಬದ್‌ರ್ ಯುದ್ಧದ ದಿನ ಬದ್‌ರ್ ಯುದ್ದದಲ್ಲಿ ಭಾಗವಹಿಸಲು ಅವರ ಮನೆಯಲ್ಲಿದ್ದ ಒಂದು ಒಂಟೆಯ ಮೇಲೆ ಕುಳಿತು ಸಂಚಾರ ಮಾಡುತ್ತಿರುವಾಗ ದುರದೃಷ್ಟವಶಾತ್ ದಾರಿಮಧ್ಯೆ ಅವರ ಒಂಟೆ ಕಂಗಾಲಾಗಿ ನಡೆಯಲಾಗದೆ ಒಂದು ಕಡೆ ಉಳಿದು ಬಿಟ್ಟಿತು. ಏನು ಮಾಡಬೇಕೆಂದು ತಿಳಿಯದೆ ಬಹಳ ಬೇಸರದಲ್ಲಿದ್ದ ಇಬ್ಬರು ಸಹೋದರರು ಕೊನೆಗೆ *"ನಮ್ಮ ಈ ಒಂಟೆ ಬಿದ್ದಲ್ಲಿಂದ ಎದ್ದು ನಮಗೆ ಇದರಲ್ಲೇ ಕುಳಿತು ಬದ್‌ರ್‌ಗೆ ತಲುಪಲು ಸಾದ್ಯವಾಗುವುದಾದರೆ ಇಂಶಾಅಲ್ಲಾಹ್... ಅಲ್ಲಿ ತಲುಪಿದ ನಂತರ ಈ ಒಂಟೆಯನ್ನು ದ್ಸಬಹ್ ಮಾಡಿ ಇದರ ಮಾಂಸವನ್ನು ದಾನ ಮಾಡುತ್ತೇವೆ"* ಎಂದು ಹರಕೆ ಮಾಡಿದರು.
   ▪ ಅಷ್ಟರಲ್ಲೇ ಅದೇ ದಾರಿಯಾಗಿ ಬದ್‌ರಿಗೆ ಹೋಗುತ್ತಿದ್ದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಇವರನ್ನು ನೋಡಿ ಇವರಲ್ಲಿ ವಿಷಯ ಏನೆಂದು ವಿಚಾರಿಸಿದರು. ನಂತರ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ತನ್ನ ಒಂಟೆಯಿಂದ ಕೆಳಗಿಳಿದು ಒಂದು ಕಡೆ ವುಳೂ ಮಾಡಿ ವುಳೂವಿನಲ್ಲಿ ಬಾಯಿ ಮುಕ್ಕಳಿಸಿದ ನೀರಿನಿಂದ ಸ್ವಲ್ಪ ನೀರಿನ್ನು ತೆಗೆದು ಬಿದ್ದು ನಡೆಯಲಾಗದಿರುವ ಒಂಟೆಯ ಬಾಯಿಗೆ ಸುರಿದರು. ಬಾಕಿ ಸ್ವಲ್ಪ ನೀರನ್ನು ಅದರ ಶರೀರದ ಇತರ ಭಾಗಕ್ಕೆ ಚಿಮುಕಿಸಿದರು. 
   ▪ಖಾಲಿದ್ ಮತ್ತು ಖಲ್ಲಾದ್ (ರ) ಹೇಳುತ್ತಾರೆ. *"ಪ್ರವಾದಿಯವರು ಹೀಗೆ ಮಾಡಿದಾಕ್ಷಣ; ಸುಬ್‌ಹಾನಲ್ಲಾಹ್! ಒಂಟೆಯು ಎದ್ದು ನಿಂತಿತು. ನಂತರ ನಾವು ಅದರಲ್ಲೇ ಕುಳಿತು ಬದ್‌ರಿಗೆ ಹೋದೆವು. ನಾವು ದಾರಿಮಧ್ಯೆ ಇಷ್ಟೆಲ್ಲಾ ಸಮಯ ವ್ಯಯ ಮಾಡಿದ್ದರೂ ನಾವು ಬದ್‌ರ್ ತಲುಪುವಾಗ ಅಲ್ಲಿಗೆ ಇತರ ಸಹಾಬಿಗಳು ಯಾರೂ ತಲುಪಿರಲಿಲ್ಲ. ನಾವೇ ಮೊದಲಿಗರಾದೆವು. ನಂತರ ನಾವು ಹರಕೆ ಮಾಡಿದಂತೆ ಒಂಟೆಯನ್ನು ದ್ಸಬಹ್ ಮಾಡಿ ಅದರ ಮಾಂಸವನ್ನು ದಾನ ಮಾಡಿದೆವು."*

   ▪ಪ್ರವಾದಿ ಆದಮ್ (ಅ) ರವರು ತನ್ನ ಪ್ರೀತಿಯ ಪುತ್ರ ಹಾಬಿಲರನ್ನು ಅವರ ಇನ್ನೊಬ್ಬ ದುಷ್ಟ ಮಗ ಖಾಬೀಲನು ಕೊಂದ ಬಳಿಕ ಅನೇಕ ವರ್ಷಗಳ ಕಾಲ ಸಂತೋಷದಿಂದ ನಗುವುದನ್ನು ಯಾರೂ ಕಂಡಿರಲಿಲ್ಲ. ಈ ಬೇಸರದ ಕಾರಣದಿಂದ ನಂತರ ತನ್ನ ಪತ್ನಿ ಹವ್ವಾ ಬೀವಿ (ರ) ರನ್ನೂ ಕೂಡ ಸಮೀಪಿಸುವ ನೆನಪಿಲ್ಲದೆ ಮನಶಾಂತಿ ಸಿಗಲು ಒಂದು ದೀರ್ಘಕಾಲ ಒಂಟೆಯನ್ನು ಮೇಯಿಸುತ್ತಾ ಅದರ ಪರಿಪಾಲನೆ ಮಾಡುತ್ತಿದ್ದರು. ಹಾಬೀಲರ ಹತ್ಯೆಯ ನಂತರ ಪ್ರವಾದಿ ಆದಮ್ (ಅ) ರವರು ಸುಮಾರು ನೂರು ವರ್ಷ ಬದುಕಿದ್ದರು. ಆದರೆ  ಈ ನೂರು ವರ್ಷದಲ್ಲಿ ಒಮ್ಮೆಯೂ ಅವರು ಸಂತೋಷದಲ್ಲಿ  ನಗುವುದನ್ನು ಯಾರೂ ಕಂಡಿರಲಿಲ್ಲ.
      ▪ಅಂತ್ಯದಿನ ಸಮೀಪಿಸಲು ಹತ್ತಿರವಾಗುತ್ತಿರುವಾಗ ಆಧುನಿಕ ಯುಗದ ಕೆಲವು ಮಹಿಳೆಯರು ಅನ್ಯ ಪುರುಷರನ್ನು ಆಕರ್ಷಿಸಲು ತಮ್ಮ ತಲೆಗೂದಲನ್ನು ಒಂಟೆಯ ಬೆನ್ನಿನ ಉಬ್ಬುಗಳಂತೆ ಮಾಡಿ ಅಲಂಕರಿಸುವರು. ಅಂತಹಾ ಮಹಿಳೆಯರು ಸ್ವರ್ಗ ಪ್ರವೇಶ ಮಾಡಲಾರರು. ಮಾತ್ರವಲ್ಲ ಅವರಿಗೆ ಸ್ವರ್ಗದ ಪರಿಮಳ ಕೂಡ ಸಿಗಲಿಕ್ಕಿಲ್ಲ ಎಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದ ಹದೀಸನ್ನು ಇಮಾಮ್ ಮುಸ್ಲಿಮ್ (ರ) ವರದಿ ಮಾಡಿದ್ದಾರೆ.
   ▪ಒಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮದೀನಾ ಪಟ್ಟಣದಲ್ಲಿ ಅನ್ಸಾರಿಗಳ ಒಂದು ತೋಟದ ಮಧ್ಯೆ ಹಾದು ಹೋಗುತ್ತಿರುವಾಗ ಒಂಟೆಯೊಂದು ಕಂಗಾಲಾಗಿ ನಿಂತಿರುವುದನ್ನು ಕಂಡರು. ಅದನ್ನು ಕಂಡಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಕಣ್ಣುಗಳಲ್ಲಿ ನೀರು ಹನಿಸಿತು. ಅವರು ಅದರ ಹತ್ತಿರ ಹೋಗಿ ಅದರ ಬೆನ್ನನ್ನು ಸವರಿ ಕೇಳಿದರು. *"ಈ ಒಂಟೆಯ ಮಾಲಿಕ ಯಾರು..?"* ಕೂಡಲೇ ತೋಟದ ಬದಿಯ ಮನೆಯಿಂದ ಒಬ್ಬರು ಹೊರ ಬಂದು *“ಪ್ರವಾದಿಯವರೇ.., ಇದರ ಮಾಲಿಕ ನಾನೇ, ಇದು ನನ್ನ ಒಂಟೆ."* ಎಂದರು.   *"ನಿನಗೆ ಈ ಒಂಟೆಯನ್ನು ಕೊಟ್ಟ ಅಲ್ಲಾಹನನ್ನು ಭಯಪಡು. ಮುಂದಕ್ಕೆ ಜಾಗ್ರತೆ ಮಾಡಿಕೊ. ನೀನು ಇದಕ್ಕೆ ಬೇಕಾದಷ್ಟು ವಿಶ್ರಾಂತಿ ಕೊಡದೆ ಬಹಳ ಕಠಿಣವಾದ ಕೆಲಸವನ್ನು ಇದರಿಂದ ಮಾಡಿಸುತ್ತಿ. ಅಲ್ಲದೆ ನೀನು ಇದಕ್ಕೆ ಸರಿಯಾಗಿ ತಿನ್ನಲು ಕೂಡ ಕೊಡುವುದಿಲ್ಲ ಎಂದು ನನ್ನಲ್ಲಿ ದೂರು ಕೊಟ್ಟಿರುತ್ತದೆ."* ಎಂದರು ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್.
   ▪ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಒಡೆತನದಲ್ಲಿ ಹಾಲು ಕೊಡುವ ಇಪ್ಪತ್ತು ಹೆಣ್ಣು ಒಂಟೆಗಳಿದ್ದವು. ಮದೀನದಿಂದ ಸಿರಿಯಾಕ್ಕೆ ಹೋಗುವ ದಾರಿಮಧ್ಯೆ ಒಂದೆಡೆ ಪ್ರತ್ಯೇಕ ಸ್ಥಳದಲ್ಲಿ ಅದನ್ನು ಪರಿಪಾಲನೆ ಮಾಡಲು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸೇವಕರಾಗಿದ್ದ ಸಹಾಬಿ ಯಸಾರ್ (ರ) ರನ್ನು ನೇಮಕ ಮಾಡಿದ್ದರು. ದಿನಾ ಎರಡು ದೊಡ್ಡ ಹಂಡೆಯಲ್ಲಿ ಹಾಲು ಕರೆದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮನೆಗೆ ತರಲಾಗುತ್ತಿತ್ತು. ಅದನ್ನು ಪ್ರವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತನ್ನ ಪತ್ನಿಯರಿಗೆ ಹಂಚುತ್ತಿದ್ದರು. ಮಾತ್ರವಲ್ಲ ಈ ಇಪ್ಪತ್ತು ಒಂಟೆಗಳನ್ನು ತಮ್ಮ ಪತ್ನಿಯರಿಗೆ ಪಾಲು ಮಾಡಿ ಕೊಟ್ಟಿದ್ದರು. 
   ▪ ಪ್ರವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಮಕ್ಕಾದಲ್ಲಿರುವ ಸಂದರ್ಭ ಒಮ್ಮೆ ನಮಾಝಿನಲ್ಲಿ ಸುಜೂದು ಮಾಡುತ್ತಿರುವಾಗ ಉಖ್‌ಬತ್ ಬಿನ್ ಅಬೀ ಮುಈತ್ ಎಂಬ ದುಷ್ಟ ವ್ಯಕ್ತಿ ಅವರ ಬೆನ್ನಿನ ಮೇಲೆ ಒಂದು ದ್ಸಬಹ್ ಮಾಡಿದ ಒಂಟೆಯ ಕರುಳನ್ನು ತಂದು ಹಾಕಿದನು. ಅದರ ಭಾರದಿಂದ ಅವರಿಗೆ ಸುಜೂದಿನಿಂದ ಎದ್ದೇಳಲಾಗದೆ ತುಂಬಾ ಸಮಯ ಸುಜೂದಿನಲ್ಲೇ ಬಾಕಿಯಾದರು. ಕೊನೆಗೆ ಪುತ್ರಿ ಫಾತಿಮಃ (ರ) ರವರು ಬಂದು ಅದನ್ನು ತೆಗೆದರು. ನಮಾಝು ಮುಗಿದ ಕೂಡಲೇ ಪ್ರವಾದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ದುಷ್ಟನ ಸಹಿತ ಅಬೂಜಹ್‌ಲ್, ಉತ್‌ಬತ್, ಶೈಬತ್, ಉಬಯ್ಯ್ ಬಿನ್ ಖಲಫ್ ಮುಂತಾದವರನ್ನು ಹೆಸರಿಸಿ ಅವರಿಗೆ ವಿರುದ್ಧವಾಗಿ ದುಆ ಮಾಡಿದರು. ಪ್ರಖ್ಯಾತ ಸ್ವಹಾಬಿ ಇಬ್ನು ಮಸ್‌ಊದ್ (ರ) ಹೇಳುತ್ತಾರೆ. *"ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹೆಸರೆತ್ತಿ ಹೇಳಿದವರೆಲ್ಲರೂ ನಂತರ ನಡೆದ ಬದ್‌ರ್ ಯುದ್ದದಲ್ಲಿ ಶವವಾಗಿ ಬಿದ್ದರು. ಮಾತ್ರವಲ್ಲ ಹತ್ತಿರವಿದ್ದ ಪಾಳುಬಿದ್ದ ಬಾವಿಗೆ ನಾವು ಅವರ ಶವವನ್ನು ಕೊಂಡು ಹೋಗಿ ಎಸೆದೆವು."*
   ▪ ಹಝ್ರತ್ ಝಿಯಾದ್ ಬಿನ್ ಜುಬೈರ್ (ರ) ರು ಹೇಳುತ್ತಾರೆ. "ನಾನೊಮ್ಮೆ ಖಲೀಫಾ ಉಮರ್ (ರ) ರ ಪುತ್ರ ಅಬ್ದುಲ್ಲಾಹಿ ಬಿನ್ ಉಮರ್ (ರ) ರೊಂದಿಗೆ ಒಂದು ಬಕ್ರೀದ್ ದಿನದಂದು ಒಂದು ದಾರಿಯಾಗಿ ಹೋಗುತ್ತಿರುವಾಗ ಒಬ್ಬರು ಒಂದು ಒಂಟೆಯನ್ನು ಮಲಗಿಸಿ ಚೂರಿ ಹಾಕುವುದನ್ನು ಕಂಡೆವು. ಕೂಡಲೇ ಬಿನ್ ಉಮರ್ (ರ) ರು ಅವರನ್ನು ಕರೆದು *"ಒಂಟೆಯನ್ನು ಯಾವಾಗಲೂ ದನ, ಆಡು, ಕುರಿಯಂತೆ ಮಲಗಿಸಿ ದ್ಸಬಹ್ ಮಾಡಬಾರದು. ಒಂಟೆಯನ್ನು ಮೂರು ಕಾಲಲ್ಲಿ ನಿಲ್ಲಿಸಿ ಎಡ ಬಾಗದ ಒಂದು ಕಾಲನ್ನು ಕಟ್ಟಿ ಹಾಕಿ ದ್ಸಬಹ್ ಮಾಡುವುದಾಗಿದೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಸುನ್ನತ್"* ಎಂದು ಹೇಳಿದರು."
   ▪ಘಯ್‌ಲಾನ್ ಬಿನ್ ಸಲಮಃ (ರ) ಎಂಬ ಸಹಾಬಿ ಹೇಳುತ್ತಾರೆ. "ನಾವೊಮ್ಮೆ ಕೆಲವು ಮಂದಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಒಂದು ಸಂಚಾರದಲ್ಲಿರುವಾಗ ದಾರಿಮಧ್ಯೆ ಒಬ್ಬರು ಬಂದು ಹೇಳಿದರು. *"ಯಾ ರಸೂಲಲ್ಲಾಹ್.., ನನ್ನ ಕುಟುಂಬದ ಆಧಾರ ಸ್ತಂಭವಾದ ಎರಡು ಒಂಟೆಗಳು ನನ್ನ ಈ ತೋಟದ ಒಳಗಿದೆ. ಆದರೆ ಕೆಲವು ದಿನಗಳಿಂದ ನನ್ನನ್ನು ತೋಟದ ಒಳಗೆ ಹೋಗಲು ಬಿಡುವುದಿಲ್ಲ. ಮದ ಮೀರಿದ ರೂಪದಲ್ಲಿ ವರ್ತಿಸುತ್ತದೆ. ಯಾರನ್ನೂ ಹತ್ತಿರ ಹೋಗಲು ಬಿಡುವುದಿಲ್ಲ."*  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ತೋಟದ ಮಾಲಿಕನಲ್ಲಿ ತೋಟದ ಬಾಗಿಲು ತೆರೆಯಲು ಹೇಳಿದರು. ಆಗ ಮಾಲಿಕ ಹೇಳಿದ. *"ಸಾಧ್ಯವಿಲ್ಲ.. ಸಾಧ್ಯವಿಲ್ಲ.. ಪ್ರವಾದಿಯವರೇ.., ಅದು ಯಾರನ್ನೂ ಒಳಗೆ ಹೋಗಲು ಬಿಡುವುದಿಲ್ಲ."* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು *"ಇರಲಿ ಬಿಡು, ನೀನು ಬಾಗಿಲು ತೆರೆ."* ಎಂದರು. ನಂತರ ಅವರು ಬಾಗಿಲು ತೆರೆದಾಗ ಎರಡು ಒಂಟೆಗಳು ಅಳುತ್ತಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಎದುರಿಗೆ ಬಂದು ಸಾಷ್ಟಾಂಗ ಮಾಡಿದವು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಅದರ ಹೆಗಲಲ್ಲಿ ಹಿಡಿದು ಅದರ ಯಜಮಾನನಿಗೆ ಕೊಟ್ಟು ಹೇಳಿದರು. *"ನೀನು ಇದನ್ನು ಉಪಯೋಗಿಸುವಷ್ಟೇ ಇದಕ್ಕೆ ನೀನು ಚೆನ್ನಾಗಿ ತಿನ್ನಲು ಕೊಡಬೇಕು"*
   ▪ಇದನ್ನು ಕಂಡ ನಾವು ಪ್ರವಾದಿಯವರಲ್ಲಿ ಕೇಳಿದೆವು. *"ಮೃಗಗಳು ನಿಮಗೆ ಸುಜೂದ್ (ಸಾಷ್ಟಾಂಗ) ಮಾಡಿತಲ್ವಾ...? ಹಾಗಾದರೆ ನಮಗೂ ನಿಮಗೆ ಸುಜೂದು ಮಾಡಲು ಒಂದು ಅವಕಾಶ ಮಾಡಿ ಕೊಟ್ಟರೆ ಬಹಳ ಒಳ್ಳೆಯದಿತ್ತು. ನೀವು ಅದ್ಯಾಕೆ ಕೊಡುವುದಿಲ್ಲ..?"*  ಆಗ ಪ್ರವಾದಿಯವರು ಹೇಳಿದರು. *"ಈ ಪ್ರಪಂಚದಲ್ಲಿ ಅಲ್ಲಾಹನಲ್ಲದ ಒಬ್ಬನಿಗೆ ಸುಜೂದು ಮಾಡಲು ಅನುಮತಿ ಅಥವಾ ಅವಕಾಶ ಇರುತ್ತಿದ್ದರೆ ಪತ್ನಿಯರಲ್ಲಿ ಅವರವರ ಪತಿಯರಿಗೆ ಸುಜೂದು ಮಾಡಲು ನಿರ್ದೇಶ ಮಾಡುತ್ತಿದ್ದೆನು."*
   ▪ಸಹಾಬಿಶ್ರೇಷ್ಠ ಹಝ್ರತ್ ಅಬ್ದುಲ್ಲಾಹಿ ಬಿನ್ ಉಮರ್ (ರ) ರು ಹೇಳುತ್ತಾರೆ. "ನಾವೊಮ್ಮೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜತೆಗೆ ಮಸೀದಿಯಲ್ಲಿರುವಾಗ ಅಅ‌್‌ರಾಬಿಯೊಬ್ಬರು ಒಂದು ಒಂಟೆಯಾಗಿ  ಬಂದು ಮಸೀದಿಯ ಬಾಗಿಲ ಸಮೀಪವೇ ಅದನ್ನು ಕಟ್ಟಿಹಾಕಿ ನಂತರ ಮಸೀದಿ ಪ್ರವೇಶಿಸಿ ಒಂದು ಕಡೆ ವಿಶ್ರಾಂತಿಗೆ ಕುಳಿತರು. ಆ ವ್ಯಕ್ತಿಯ ಚಲನವಲನಗಳಲ್ಲಿ ಸಂಶಯಗೊಂಡ ಕೆಲವು ಸಹಾಬಿಗಳು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರಲ್ಲಿ *"ಇವರು ಈ ಒಂಟೆಯನ್ನು ಎಲ್ಲಿಂದಲೋ ದೋಚಿ ತಂದಂತಿದೆ."* .ಎಂದು ಸಂಶಯ ಪ್ರಕಟಿಸಿದರು.  *"ನಿಮ್ಮಲ್ಲಿ ಅದಕ್ಕೆ ಏನಾದರೂ ಪುರಾವೆ ಇದೆಯಾ..? ನೀವು ಹೇಳುವುದಕ್ಕೆ ಪುರಾವೆಯಿದ್ದು ಅದು ನಿಜವೆಂದಾದರೆ ಈ ಒಂಟೆಯನ್ನು ಅವರಿಂದ ವಶಮಾಡಬೇಕು. ಇಲ್ಲವೆಂದಾದರೆ ಅವರನ್ನು ಅವರ ಹಾದಿಗೇ ಬಿಟ್ಟುಬಿಡಿ."* ಎಂದರು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ್.
   ▪ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ಮತ್ತು ಸಹಾಬಿಗಳ ಮಾತುಕತೆಯನ್ನು ಮಸೀದಿಯಲ್ಲಿ ಕೂಳಿತಲ್ಲಿಂದಲೇ ಕೇಳುತ್ತಿದ್ದ ಅಅ‌್‌ರಾಬಿಯ ಹೃದಯ ಬಡಿತ ಜೋರಾಗುತ್ತಲೇ ಇತ್ತು. ನಿಜವಾಗಿ ಅದರ ಮಾಲಕ ಅವರೇ ಆಗಿದ್ದರು. ಆದರೆ ತಮ್ಮದ್ದಲ್ಲವೆಂಬ ಪುರಾವೆಯೆನ್ನು ಯಾರಾದರೂ ಮಂಡಿಸಿದರೆ...? ಆದ್ದರಿಂದ ಹೆದರಿದ ಆ ವ್ಯಕ್ತಿ ತುಂಬ ಹೊತ್ತು ಅಲ್ಲೇ ಕುಳಿತರು. ಅಷ್ಟರಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು  ಆ ಅಅ್ರಾಬಿಯನ್ನು ಕರೆದು *"ಇಲ್ಲಿ ಬಾ..., ಈ ಒಂಟೆ ನೀನು ಕದ್ದು ತಂದದ್ದಾ...? ಸತ್ಯ ಹೇಳು."* ಎಂದರು. ಸುಬ್‌ಹಾನಲ್ಲಾಹ್! ತಕ್ಷಣ ಹೊರಗೆ ಕಟ್ಟಿ ಹಾಕಿದ್ದ ಒಂಟೆ ಅಲ್ಲಾಹುವಿನ ಖುದ್‌ರತ್‌ನಿಂದ ಹೇಳಿತು. *"ಇಲ್ಲ ಪ್ರವಾದಿಯವರೇ.., ನನ್ನನ್ನು ಇವರು ಕದ್ದು ತಂದದ್ದಲ್ಲ. ನನ್ನ ಮಾಲಿಕರು ಇವರೇ."*
   ▪ಇಹಲೋಕದಲ್ಲೇ ಮುಂಗಡವಾಗಿ ಸ್ವರ್ಗದ ಟಿಕೇಟು ದೊರೆತ ಪ್ರಖ್ಯಾತ ಸಹಾಬಿ ಝುಬೈರ್ ಬಿನ್ ಅಲ್ ಅವ್ವಾಮ್ (ರ),  ಸಹಾಬೀಶ್ರೇಷ್ಠ  ಹಝ್ರತ್ ಅಮ್‌ರ್ ಬಿನ್ ಅಲ್ ಆಸ್ (ರ) ಒಂಟೆಮಾಂಸದ ವ್ಯಾಪಾರಸ್ತರಾಗಿದ್ದರು. ಅಮ್‌ರ್ ಬಿನ್ ಆಸ್ (ರ) ರು ತಮ್ಮ ವ್ಯಾಪಾರದಲ್ಲಿ ದೊರೆತ ಲಾಭದಿಂದ ಕೊನೆಗೆ ಭಾರೀ ಶ್ರೀಮಂತರಾಗಿದ್ದರು. ಮಾತ್ರವಲ್ಲ ತಾನು ವಫಾತಾಗುವಾಗ ಸುಮಾರು ಐವತ್ತು ಕಿಲೋ ತೂಕದಷ್ಟು ಚಿನ್ನ ಮತ್ತು ಸಾಕಷ್ಟು ಆಸ್ತಿಪಾಸ್ತಿ ಅವರಲ್ಲಿತ್ತು.

   ▪ಒಂಟೆ ಮಾಂಸ ವ್ಯಾಪಾರಿಯಾಗಿದ್ದ  ಸಹಾಬಿವರ್ಯ ಅಮ್‌ರ್ ಬಿನ್ ಆಸಿ (ರ) ರವರು ತನ್ನ ಮರಣ ಸಮಯದಲ್ಲಿ ತನ್ನ ಬಳಿ ಇರುವವರಲ್ಲಿ ಒಂದು ವಸಿಯ್ಯತ್ ಮಾಡಿದ್ದರು. ಅದೇನೆಂದರೆ.., *"ನಾನು ಮರಣಹೊಂದಿದರೆ ನನ್ನನ್ನು ದಫನ್ ಮಾಡಿದ ಬಳಿಕ ನೀವು ನನ್ನ ಖಬರ್ ಬಳಿಯಿಂದ ತಕ್ಷಣ ಹೊರಟು ಹೋಗಬಾರದು. ನನ್ನನ್ನು ಕಬರಿನೊಳಗೆ ಇಟ್ಟ ನಂತರ ನನ್ನ ಯಜಮಾನನಾದ ಅಲ್ಲಾಹನು ಕಳುಹಿಸುವ ಅವನ ದೂತರಾದ ಮಲಕುಗಳಿಗೆ ಅವರು ನನ್ನಲ್ಲಿ ಕೇಳುವ ಪ್ರಶ್ನೆಗಳಿಗೆ ನಾನು ಉತ್ತರ ಕೊಡುವಾಗ ನಿಮ್ಮ ಹಾಜರಾತಿ ನನಗೆ ಸಮಾಧಾನ ಮತ್ತು ಧೈರ್ಯ ಆಗಬಹುದು.  ಕಡಿಮೆಯೆಂದರೆ,  ಒಂದು ಒಂಟೆಯನ್ನು ದ್ಸಬಹ್ ಮಾಡಿ ಅದನ್ನು ಮಾಂಸ ಮಾಡಿ ವಿತರಣೆ ಮಾಡಲು ಬೇಕಾಗುವಷ್ಟು ಸಮಯ ನೀವು ಆ ಕಬರಿನ ಬಳಿ ಕುಳಿತು ನನಗೆ ಬೇಕಾಗಿ ವ್ಯಯಿಸಬೇಕು."* ಇಲ್ಲಿ ಅವರು ಒಂಟೆಯ ದ್ಸಬಹ್ ಮತ್ತು ಮಾಂಸ ವಿತರಣೆಯ ಸಮಯವನ್ನು ನಿಗದಿ ಮಾಡಿದ್ದು ಗಮನಾರ್ಹ. ಒಂಟೆ ಅವರ ಬದುಕಿನಲ್ಲಿ ಬೀರಿರುವ ಪ್ರಭಾವವನ್ನು ಇದು ಸೂಚಿಸುತ್ತದೆ. ಮತ್ತು ಅವರು ಮಾಡುತ್ತಿದ್ದ ಕಸಬಿನಲ್ಲಿ ಅವರಿದ್ದ ಸಂತೋಷ ಮತ್ತು ಅಭಿಮಾನವನ್ನು ಎತ್ತಿ ತೋರಿಸುತ್ತದೆ.
   ▪ಇಸ್ಲಾಮಿನ ಮೂರನೇ ಖಲೀಫ ಹಝ್ರತ್ ಉಸ್ಮಾನ್ ಬಿನ್ ಅಲ್ ಅಫ್ಘಾನ್ (ರ) ರನ್ನು ಹತ್ಯೆ ಮಾಡಿದ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ನಂತರ ಬಂದ ಇಸ್ಲಾಮಿನ ನಾಲ್ಕನೇ ಖಲೀಫ ಹಝ್ರತ್ ಅಲಿ (ರ) ಹಿತಾಸಕ್ತಿ ವಹಿಸಲಿಲ್ಲ ಎಂಬ ಕಾರಣದಿಂದ ಸಹಾಬೀಶ್ರೇಷ್ಟ ಮುಆವಿಯಾ (ರ), ಹಝ್ರತ್ ಝುಬೈರ್ ಬಿನ್ ಅವ್ವಾಮ್ (ರ) ಮತ್ತು ಹಝ್ರತ್ ತ್ವಲ್ಹತ್ ಬಿನ್ ಉಬೈದಿಲ್ಲಾಹ್ (ರ) ನ್ನು ಒಳಗೊಂಡ ಒಂದು ಪಂಗಡ ಹಝ್ರತ್ ಅಲಿ (ರ) ಗೆ ವಿರುದ್ಧವಾಗಿ ತಿರುಗಿತ್ತು. ಅಲ್ಲಾಹುವಿನ ವಿಧಿಯೆಂಬಂತೆ ದುರದೃಷ್ಟವಶಾತ್ ಈ ಎರಡು ಮುಸ್ಲಿಮ್ ಪಂಗಡಗಳ ‌ನಡುವೆ ಹಿಜ್‌ರಾ ವರ್ಷ ಮುವತ್ತಾರರಲ್ಲಿ ಇರಾಕಿನ ಬಸರದಲ್ಲಿ ಉಂಟಾದ ಬೀಕರ  ಯುದ್ಧಕ್ಕೆ ಒಂಟೆ ಯುದ್ಧ (Camel war) ಎಂದು ಹೆಸರು ಹೇಳಲಾಗುತ್ತದೆ.
   ▪ಎರಡು ಮುಸ್ಲಿಂ ಪಂಗಡಗಳಿಂದ ತಲಾ ಐದು ಸಾವಿರ ಅಂದರೆ ಒಟ್ಟು ಹತ್ತು ಸಾವಿರ ಮಂದಿ ಬಲಿಯಾದ ಈ ಯುದ್ದಕ್ಕೆ ಉಮ್ಮುಲ್ ಮುಅ್‌ಮಿನೀನ್ ಬೀವಿ ಆಯಿಶಾ (ರ) ರವರು ಸಹಾಬಿ ಮುಆವಿಯಾ (ರ) ರವರ ಪರವಾಗಿ ಆಗಿದ್ದರೂ ಯುದ್ಧ ನಡೆಯ ಬಾರದೆಂಬ ನೆಲೆಯಲ್ಲಿ ಮಧ್ಯಸ್ಥಿಕೆ ವಹಿಸಲು ತನ್ನ ಒಂಟೆಯಲ್ಲಿ ಕುಳಿತು ಯುಧ್ಧ ಭೂಮಿಗೆ ಹೋಗಿದ್ದರು. ಆ ಕಾರಣದಿಂದ ಈ ಯುದ್ಧಕ್ಕೆ *ಒಂಟೆ ಯುದ್ಧ* ಎಂದು ಹೆಸರು ಬಂತು.
   ▪ಪ್ರವಾದಿ ಸ್ವಾಲಿಹ್ (ಅ) ರವರ ಪವಾಡದಿಂದ ಸೃಷ್ಟಿಸಲ್ಪಟ್ಟ ಒಂಟೆಯ ಬಗ್ಗೆ ಪವಿತ್ರ ಕುರ್‌ಆನಿನಲ್ಲಿ ಹಲವಾರು ಕಡೆ ಪ್ರಸ್ತಾವಿಸಲಾಗಿದೆ. ಪ್ರವಾದಿ ಸ್ವಾಲಿಹ್ (ಅ) ರ ದುಷ್ಟ ಜನಾಂಗವಾದ ಸಮೂದು ವಂಶಜರು ಒಮ್ಮೆ ಸ್ವಾಲಿಹ್ (ಅ) ರಲ್ಲಿ ಹೇಳಿದರು. *"ಸ್ವಾಲಿಹ್.., ನೀನು ಹೇಳುವುದೆಲ್ಲ ನಿಜವೋ ಸುಳ್ಳೋ ಎಂದು ನಮಗೆ ಗೊತ್ತಾಗುವುದಿಲ್ಲ. ಆದ್ದರಿಂದ ನಮಗೆ ನಿನ್ನಲ್ಲಿ ಸರಿಯಾದ ವಿಶ್ವಾಸ ಬರಲು ನೀನೊಂದು ಪವಾಡವನ್ನು ನಮಗೆ ಈಗ ತೋರಿಸಿ ಕೊಡಬೇಕು. ಅದೇನೆಂದರೆ, ಈ ಕಾಣುವ ಬಂಡೆ ಕಲ್ಲಿನಿಂದ ಒಂದು ಗರ್ಭಿಣಿಯಾದ ಹೆಣ್ಣು ಒಂಟೆಯನ್ನು  ಹೊರ ತರಬೇಕು. ಅದರಲ್ಲಿ ನೀನು ಯಶಸ್ವಿಯಾದರೆ ನಾವು ಖಂಡಿತಾ ನಿನ್ನಲ್ಲಿ ವಿಶ್ವಾಸವಿರಿಸುತ್ತೇವೆ."*
   ▪ಪ್ರವಾದಿ ಸ್ವಾಲಿಹ್ (ಅ) ರವರು ಕೂಡಲೇ ಎರಡು ರಕ‌ಅತ್ ಸುನ್ನತ್ ನಮಾಝು ಮಾಡಿ ಅಲ್ಲಾಹುವಿನಲ್ಲಿ ದುಆ ಮಾಡಿದರು. ತಕ್ಷಣ ಒಂದು ಗರ್ಭಿಣಿ ಹೆಣ್ಣು ಒಂಟೆ ಬಂಡೆ ಕಲ್ಲಿನಿಂದ ಹೊರಬಂತು. ಮಾತ್ರವಲ್ಲ ಹೊರಗೆ ಬಂದು ಕೆಲವೇ ಕ್ಷಣದಲ್ಲಿ ಒಂದು ಮರಿಗೆ ಜನ್ಮ ಕೂಡ ನೀಡಿತು. ಈ ಮಹಾ ಪವಾಡವನ್ನು ಕಂಡು ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನರು ಮಾತ್ರ ಇಸ್ಲಾಮಿಗೆ ಬಂದರಲ್ಲದೆ ಬೇರೆ ಹೇಳತಕ್ಕ ಬದಲಾವಣೆ ಯಾವುದೂ ಆ ಜನತೆಗೆ ಆಗಲಿಲ್ಲ.  ಪ್ರವಾದಿ ಸ್ವಾಲಿಹ್ (ಅ) ರವರು ತನ್ನ ಜನತೆಯಲ್ಲಿ ಹೇಳಿದರು. *"ವಿಶ್ವಾಸವಿಡುವ ವಿಷಯ ನಿಮಗೆ ಬಿಟ್ಟದ್ದು. ಆದರೆ ಈ ಒಂಟೆಯು ಅಲ್ಲಾಹುವಿನ ಒಂಟೆಯಾದ್ದರಿಂದ  ಯಾವ ಕಾರಣಕ್ಕೂ ಇದಕ್ಕೆ ನೀವು ತೊಂದರೆ ಅಥವಾ ಉಪದ್ರವ ಮಾಡಬಾರದು. ನೀವು ಇದರ ಹಾಲನ್ನು ಕರೆದು ಎಷ್ಟು ಬೇಕಾದರೂ ಕುಡಿಯಿರಿ. ತೊಂದರೆಯಿಲ್ಲ. "*
   ▪ಅಂತೆಯೇ ಈ ಅದ್ಭುತವಾದ ಒಂಟೆಯು ಯಾರಿಗೂ ಯಾವುದೇ ತೊಂದರೆ ಮಾಡದೆ ಅವರೆಡೆಯಲ್ಲಿ ಬದುಕುತ್ತಿತ್ತು. ಊರಿನ ಜನರೆಲ್ಲರೂ ನೀರು ತೆಗೆಯುತ್ತಿದ್ದ ಕೊಳದಿಂದ ಒಂದು ದಿನ ಜನರಿಗೆ ನೀರು ತೆಗೆಯುವ ಅವಕಾಶವಿದ್ದರೆ ಮಾರನೇ ದಿನ ಒಂಟೆಗೆ ನೀರು ಕುಡಿಯುವ ದಿನವೆಂದು ಸ್ವಾಲಿಹ್ (ಅ) ರವರು ನಿಗದಿ ಮಾಡಿದ್ದರು. ಒಂಟೆ ನೀರು ಕುಡಿಯುವ ದಿನದಂದು ಊರಿನ
ಜನರಿಗೆ ಆ ಕೊಳದಿಂದ ನೀರು ತೆಗೆಯುವುದು ನಿಷಿದ್ಧವಾಗಿತ್ತು. ಆದರೆ ಹಾಲು ಎಷ್ಟು ಬೇಕಾದರೂ ಕರೆದು ತೆಗೆಯಬಹುದಿತ್ತು. ಒಂಟೆಯು ತನ್ನ ದಿನದಂದು ಕೊಳದಲ್ಲಿರುವ ಎಲ್ಲಾ ನೀರನ್ನೂ ಸಂಪೂರ್ಣವಾಗಿ ಕುಡಿದು ಮುಗಿಸುತ್ತಿತ್ತು. ಊರಿನವರಿಗೆ ಒಂಟೆ ನೀರು ಕುಡಿಯುವ ದಿನದಂದು ನೀರು ತೆಗೆಯುವುದು ನಿಷಿದ್ಧವಾದರೂ ಅವರ ದಿನದಂದು ಎಷ್ಟು ನೀರು ಬೇಕಾದರೂ ಶೇಖರಣೆ ಮಾಡಿ ಇಡಬಹುದಿತ್ತು.
   ▪ ಒಟ್ಟಿನಲ್ಲಿ ಯಾರಿಗೂ ಯಾವುದೇ ತೊಂದರೆ ಮಾಡದೆ ಬೇಕಾದಷ್ಟು ಹಾಲು ಕೊಡುತ್ತಿದ್ದ ಒಂಟೆಯನ್ನು ಒಂದು ದಿನ ಸ್ವಾಲಿಹ್ (ಅ) ರವರ ಅನುಪಸ್ಥಿತಿ ನೋಡಿ ನೋಡಿ ಅವರ ಜನಾಂಗದ ಕೆಲವು ದುಷ್ಟರು ಅದನ್ನು ಕೊಂದರು. ನಂತರ ಅವರನ್ನು ಕಾಡಿದ ಭಯಾನಕ ಶಿಕ್ಷೆ ಮತ್ತು ಇತರ ವಿಷಯಗಳ ಚರಿತ್ರೆ ಬಹಳ ಸುದೀರ್ಘವಾದುದರಿಂದ ಆ ಕಡೆ ಓದುಗರ ಗಮನ ಸೆಳೆಯ ಬಯಸುವುದಿಲ್ಲ.
   ▪ಒಂಟೆಯ ಬೇರೊಂದು ವಿಷೇಶತೆಯೆಂದರೆ, ಇದು ಅಕಾಶದ ಭಾಗಕ್ಕೆ ತಲೆಮಾಡಿ ಸುಹೈಲ್ ನಕ್ಷತ್ರವನ್ನು ನೋಡಿದರೆ ನೋಡಿದ ಕೂಡಲೇ ಸಾಯುತ್ತದೆ ಎಂದು ಬಿನ್ ಝುಹಯ್‌ರ್ ರಂತಹಾ ತತ್ವಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ‌.
   ▪ಹಲವಾರು ಪ್ರೋಟೀನ್ ಮತ್ತು ವಿಟಾಮಿನ್‌ಗಳು ಅಡಕವಾಗಿರುವ ಒಂಟೆಯ ಹಾಲು ಶರೀರಕ್ಕೆ ಬಹಳ ಒಳ್ಳೆಯ ತಾಕತ್ತು ನೀಡುತ್ತದೆ. ಮಾತ್ರವಲ್ಲ ನಿತ್ಯ ಒಂಟೆಯ ಹಾಲು ಕುಡಿಯುವವನಿಗೆ ಹಲವಾರು ಖಾಯಿಲೆಗಳ ರೋಗ ನಿರೋಧಕ ಶಕ್ತಿ ಕೂಡ ಅವನ ಶರೀರದಲ್ಲಿ ಇರುತ್ತದೆ. ಅಂತೆಯೇ ಅದರ ಮಾಂಸವೂ ಬಹಳ ಪೌಷ್ಷಿಕವಾಗಿದೆ.
   ▪ಒಬ್ಬನಿಗೆ ಒಂಟೆಯ ಹಾಲು ಕರೆಯುವ ಕನಸು ಬಿದ್ದರೆ ಅವನಿಗೆ ಒಳ್ಳೆಯ ಗುಣನಡತೆಯ ಉತ್ತಮ ಸ್ವಭಾವದ ಪತ್ನಿ ದೊರೆಯುತ್ತಾಳೆ ಎಂಬುದರ ನಿಶಾನೆಯಾಗಿದೆ. ಮದುವೆಯಾದವನಾದರೆ ಸ್ವಾಲಿಹಾದ ಮಗು ಹುಟ್ಟುವುದರ ಸಂಕೇತವಾಗಿದೆ.
   ▪ಅವನ ಅಧೀನದಲ್ಲಿರುವ ಹೆಣ್ಣು ಒಂಟೆ ಸತ್ತ ಕನಸು ಕಂಡರೆ ಅವನ ಪತ್ನಿ ಹತ್ತಿರದಲ್ಲೇ ಮರಣ ಹೊಂದುವುದರ ಲಕ್ಷಣವಾಗಿದೆ. ಇನ್ನು ಆ ಒಂಟೆ ಕಾಣೆಯಾದ ಅಥವಾ ಕದ್ದು ಹೋದ ಕನಸು ಬಿದ್ದರೆ ಅವನನ್ನು ಅವನ ಹೆಂಡತಿ ಬಿಟ್ಟು ಹೋಗುವಳು ಅಥವಾ ಅವರೆಡೆಯಲ್ಲಿ ಸಂಘರ್ಷ ಉಂಟಾಗಿ ತಲಾಖ್ ಆಗುವುದರ ನಿಶಾನೆಯಾಗಿದೆ.
   ▪ಒಂಟೆಯನ್ನು ಕೊಲ್ಲುವ ಕನಸು ಬಿದ್ದರೆ ಅವನು ಏನೋ ಭಯಂಕರ ಅನಾಹುತ ಅಥವಾ ಅಪಾಯಕ್ಕೆ ಬಲಿಯಾಗುವುದರ ಸಂಕೇತವಾಗಿದೆ.
   ▪ಒಂಟೆಯ ಮೇಲೆ ಹತ್ತಿ ಸಂಚಾರ ಮಾಡುವ ಕನಸು ಕಂಡರೆ ದೀರ್ಘವಾದ ಸಫರ್ (ಯಾತ್ರೆ) ಹೋಗಲಿರುವುದರ ನಿಶಾನೆಯಾಗಿದೆ. ಕನಸು ಬಿದ್ದವನು ರೋಗಿಯಾಗಿದ್ದರೆ ಅವನ ಇಹಲೋಕದ ದಿನಗಳು ಮುಗಿಯುತ್ತಾ ಬಂತು ಎಂಬುದರ ಸಂಕೇತವಾಗಿದೆ.
   ▪ಗಂಡು ಒಂಟೆಯನ್ನು ಕನಸಿನಲ್ಲಿ ಕಂಡರೆ ಪವಿತ್ರ ಹಜ್ಜಿಗೆ ಹೋಗಲಿರುವುದರ ನಿಶಾನೆಯಾಗಿದೆ.
   ▪ಒಬ್ಬನು ಒಂಟೆಯ ಮೇಲಿನಿಂದ ಕೆಳಗೆ ಬಿದ್ದ ಕನಸು ಬಿದ್ದರೆ ಜೀವನದಲ್ಲಿ ಅವನಿಗೆ ಬಡತನ ಬರಲಿದೆ ಎಂಬುದರ ನಿಶಾನೆಯಾಗಿದೆ.
   ▪ಒಂಟೆಗಳು ಸಾಲು ಸಾಲಾಗಿ ಹೋಗುವ ಕನಸು ಬಿದ್ದರೆ ಆ ಊರಲ್ಲಿ ಭಾರೀ ಮಳೆಯಾಗುವ ಲಕ್ಷಣವಾಗಿದೆ.

   ▪ಸಂಗ್ರಹ : ಇಮಾಮ್ ದುಮೈರಿಯ ಹಯಾತುಲ್ ಹಯವಾನ್, ಇಮಾಮ್ ಅಬ್‌ಶೀಹಿಯ ಮುಸ್‌ತತ್‌ರಫ್ ಮತ್ತು ತತ್ವಜ್ಞಾನಿ ಜಾಹಿಳ್‌ರ ಕಿತಾಬುಲ್ ಹಯವಾನ್ ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...