ಉರೂಸ್ ಆಚರಣೆ ಇಸ್ಲಾಮಿನಲ್ಲಿ.
ಟಿ.ಎಂ ಮುಹ್ಯಿದ್ದೀನ್ ಖಾಮಿಲ್ ಸಖಾಫಿ, ತೋಕೆ.
ನೂತನವಾದಿಗಳ ದುರ್ಗಣ್ಣಿಗೆ ತುತ್ತಾದ ಕಾರ್ಯವಾಗಿದೆ ಉರೂಸ್ .ಇಲ್ಲಸಲ್ಲದ ಅಂತೆ ಕಂತೆಗಳನ್ನು ಬಿತ್ತರಿಸಿ ಉರೂಸ್ ಕಾರ್ಯಕ್ರಮವು ಕಟ್ಟಾ ಶಿರ್ಕಾಗಿದೆಯೆಂದೂ, ಅದು ಖಬ್ ರಾರಾಧನೆಯಾಗಿದೆಯೆಂದೂ ಸ್ಥಾಪಿಸಲು ಹೇಣಗಾಡುತ್ತಿದ್ದಾರೆ.ಈ ಭರದಲ್ಲಿ ಉರೂಸ್ ಏನೆಂಬುದನ್ನೇ ತಿಳಿಯುವ ಸೌಜನ್ಯವನ್ನಾದರೂ ಈ ವಿಭಾಗ ತೋರಿಸುವುದಿಲ್ಲ ಎಂಬುವುದು ಪರಮ ಸತ್ಯ.
ಆದರಿಂದ ಉರೂಸ್ ಎಂದರೇನು?
ಅದರ ತಾತ್ಪರ್ಯವೇನು ಎಂಬುವುದನ್ನು ಪ್ರಥಮವಾಗಿ ಜನಸಾಮಾನ್ಯರು ತಿಳಿದುಕೊಳ್ಳಬೇಕಾಗಿದೆ.ಹಾಗಿದ್ದಲ್ಲಿ ಅದರ ವಾಸ್ತವಿಕತೆಯನ್ನು ಅರಿತುಕೊಳ್ಳಬಹುದು.
ನಿಶ್ಚಿತವಾದ ಸಮಯದಲ್ಲಿ ಕೆಲವು ಸುನ್ನತ್ತಾದ ಕಾರ್ಯಗಳೊಂದಿಗೆ ಸಾಮೂಹಿಕವಾಗಿ ಝಿಯಾರತ್ ನಡೆಸುವುದಕ್ಕೆ ಉರೂಸ್ ಎಂದು ಕರೆಯಲಾಗುತ್ತದೆ.ಆಂದರೆ ಮುಖ್ಯವಾಗಿ ಇಲ್ಲಿ ಮೂರು ಕಾರ್ಯಗಳನ್ನು ಒಟ್ಟಾಗಿ ಒಂದು ನಿಶ್ಚಿತ ದಿವಸಗಳಲ್ಲಿ ನಡೆಸಲಾಗುತ್ತದೆ.ಆ ಮೂರು ಕಾರ್ಯಗಳೂ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿಕೊಟ್ಟ ಸುನ್ನತ್ತಾದ ಕಾರ್ಯಗಳಾಗಿವೆ.
ಇದನ್ನು ಕೆಲವೊಂದು ಉದಾಹರಣೆಗಳಿಂದ ತಿಳಿದುಕೊಳ್ಳಬಹುದು.ಸುನ್ನಿಗಳೂ ಸೊಳಪಿಗಳು ಅಂಗೀಕರಿಸುವ ಕಾರ್ಯವಾಗಿದೆ ಮದ್ರಸಾ ಶಿಕ್ಷಣ.ಆದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿ ಇಂದಿನ ಮಾದರಿಯಲ್ಲಿರುವ ಮದ್ರಸಾಗಳು ಇದ್ದಿರಲಿಲ್ಲ.ಅಂದರೆ ನಿಶ್ಚಿತ ತರಗತಿಗಳು, ಅದರ ಪಿರೇಡ್ ಗಳು, ಪಠ್ಯ ಪುಸ್ತಕಗಳು, ಬೋರ್ಡ್ , ಗಂಟೆ ಬಾರಿಸುವುದು, ಹಾಜರಿ ಕರೆಯುವುದು , ಪರೀಕ್ಷೆ ನಡೆಸುವುದು , ಉತ್ತೀರ್ಣ - ಅನುತ್ತೀರ್ಣಗೊಳಿಸುವುದು ಮುಂತಾದ ವ್ಯವಸ್ಥೆಗಳಲ್ಲಿರುವ ಶಿಕ್ಷಣ ಪದ್ಧತಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿರಲಿಲ್ಲ.ಈ ಎಲ್ಲಾ ರೀತಿಯಲ್ಲಿರುವ ಶಿಕ್ಷಣಾ ವ್ಯವಸ್ಥೆಗೆ ಸಾಮನ್ಯವಾಗಿ ಮದ್ರಸ ಎನ್ನಲಾಗುತ್ತದೆ.ನಿಜವಾಗಿ ಇಲ್ಲಿ ನಡೆಯುವ ವ್ಯವಸ್ಥೆಗಳೂ , ಅದರ ಹೆಸರೂ ಹೊಸತಾಗಿದೆ.ಮಾತ್ರವಲ್ಲ ಒಂದೊಂದು ಮದ್ರಸಾಕ್ಕೆ ಹಯಾತುಲ್ ಇಸ್ಲಾಮ್ ಮದ್ರಸ , ರೌಳತುಲ್ ಉಲೂಂ ಮದ್ರಸ ಮುಂತಾದ
ಬೇರೆ ಬೇರೆ ಹೆಸರುಗಳಿಂದ ತಿಳಿಯಲ್ಪಡುತ್ತದೆ.
ಒಂದೊಂದು ಮದ್ರಸಾಕ್ಕೆ ಹಯಾತುಲ್ ಇಸ್ಲಾಮ್ ಮದ್ರಸ , ರೌಳತುಲ್ ಉಲೂಂ ಮದ್ರಸ ಮುಂತಾದ
ಬೇರೆ ಬೇರೆ ಹೆಸರುಗಳಿಂದ ತಿಳಿಯಲ್ಪಡುತ್ತದೆ. ಆದರೆ ಅಲ್ಲಿ ನಡೆಯುವ ಸುಪ್ರಧಾನವಾದ ಉದ್ದೇಶ ಇಲ್ಮ್ ಅಥವಾ ಧಾರ್ಮಿಕ ವಿಧ್ಯೆ ಕಲಿಸುವುದಾಗಿದೆ.ಧಾರ್ಮಿಕ ವಿಧ್ಯೆ ಕಲಿಸುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉತ್ತೇಜನ ನೀಡಿದ ಕಾರ್ಯವೂ ಅತ್ಯಂತ ಪುಣ್ಯದಾಯಕವಾದ ಸತ್ಕರ್ಮವೂ ಆಗಿದೆ.ಇದನ್ನು ಪ್ರತಿಯೊಂದು ಕಾಲಕ್ಕೆ ಅನುಯೋಜ್ಯವಾದ ವ್ಯವಸ್ಥೆಯಲ್ಲಿ ಕಲಿಸುವುದಕ್ಕೆ ಮದ್ರಸಾ ಎಂದೂ ಕರೆಯಲಾಗುತ್ತದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸಿದ ಒಂದು ಕಾರ್ಯವನ್ನು ನವೀನ ಮಾದರಿಯಲ್ಲಿ ನಡೆಸುವುದಕ್ಕೆ ಮದ್ರಸಾ ಎಂಬ ಹೊಸ ಹೆಸರನ್ನಿಡಲಾಗಿದೆ.
ಅದೇ ರೀತಿ ಯತೀಂ ಖಾನಗಳೂ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿರಲಿಲ್ಲ.ಅಂದರೆ ಒಂದು ಸಂಸ್ಥೆಯ ಅಧೀನದಲ್ಲಿ ಸಮಾಜದಲ್ಲಿರುವ ಅನಾಥ ಮಕ್ಕಳನ್ನು ಒಂದೇ ಸೂರಿನಲ್ಲಿ ಒಟ್ಟು ಸೇರಿಸಿ ಅವರಿಗೆ ಧಾರ್ಮಿಕ ಲೌಕಿಕ ಜ್ಞಾನವನ್ನು ನೀಡಿ ಅವರನ್ನು ಬೆಳೆಸುವ ಸಂಪ್ರದಾಯವು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿರಲಿಲ್ಲ.ಆದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರಿಂದ ಅದು ಅನಾಚಾರ ( ಬಿದ್ ಅತ್) ಎಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ಅನಾಥ ಮಕ್ಕಳನ್ನು ಪೋಷಿಸುವುದು ಹಾಗೂ ಸಂರಕ್ಷಿಸುವುದು ಅತ್ಯಂತ ಪುಣ್ಯ ಕಾರ್ಯವೆಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸ್ಪಷ್ಟಪಡಿಸಿದ್ದಾರೆ.ಈ ಮಾನದಂಡದಲ್ಲಿ ಯತೀಂ ಖಾನಗಳು ಸುನ್ನತ್ತಿನ ವ್ಯಾಪ್ತಿಯಲ್ಲಿ ಬರುತ್ತದೆ.
ಅದೇ ರೀತಿ ದೀನೀ ಪತ್ರಿಕೆಗಳು.ಇಂದಿನ ರೀತಿಯಲ್ಲಿರುವ ವಾರ ಪತ್ರಿಕೆಗಳು , ಪಾಕ್ಷಿಕಗಳು, ಮಾಸಿಕಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿರಲಿಲ್ಲ.ಆದರೆ ಆ ಒಂದು ಕಾರಣದಿಂದ ಅದನ್ನು ಕೆಟ್ಟ ಬಿದ್ ಅತ್(ಅನಾಚಾರ) ಎಂದು ಕರೆಯಲು ಸಾಧ್ಯವಿಲ್ಲ.ಏಕೆಂದರೆ ಈ ಪತ್ರಿಕೆಗಳ ಉದ್ದೇಶ ಧಾರ್ಮಿಕ ಜ್ಞಾನ ನೀಡುವುದಾಗಿದೆ.ಆದ್ದರಿಂದ ಅದು ಸುನ್ನತ್ತಿನ ವ್ಯಾಪ್ತಿಯಲ್ಲಿ ಒಳಪಡುತ್ತದೆ.
ಒಟ್ಟಿನಲ್ಲಿ ಮದ್ರಸಾಗಳು, ಯತೀಂ ಖಾನಗಳು, ಪತ್ರಿಕೆಗಳು , ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರೂ ಅದು ಸುನ್ನತ್ತಾದ ಸತ್ಕರ್ಮವಾಗಿದೆ.ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಪ್ರೋತ್ಸಾಹ ನೀಡಿದ ಕಾರ್ಯವೂ ಆಗಿದೆ.ಆದರೆ ನವೀನ ಮಾದರಿಯಲ್ಲಿ ನಡೆಯುವುದರಿಂದ ಹೊಸ ಹೆಸರುಗಳನ್ನು ಇಡಲಾಗಿದೆ ಅಷ್ಟೆ.
ಅದೇ ರೀತಿ ಉರೂಸ್ ಎಂಬುವುದು ಇಂದಿನ ನವೀನ ಮಾದರಿಯಲ್ಲಿ ಹಾಗೂ ಶೈಲಿಯಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರೂ ಅದರಲ್ಲಿ ನಡೆಯುವ ಮರ್ಮ ಪ್ರಧಾನವಾದ ಕಾರ್ಯಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿದ್ದದ್ದೂ ಅವರು ಪ್ರೋತ್ಸಾಹ ನೀಡಿದ್ದೂ ಆಗಿದೆ.ಏಕೆಂದರೆ ಉರೂಸ್ ನಲ್ಲಿ ನಡೆಯುವ ಸುಪ್ರಧಾನವಾದ ಕಾರ್ಯವೇನೆಂದರೆ,
1. ಸಾಮೂಹಿಕ ಝಿಯಾರತ್.
2.ಅವರಿಗಾಗಿ ಖುರ್ ಆನ ಪಾರಾಯಣ.
3. ಅವರ ಹೆಸರಿನಲ್ಲಿ ದಾನ ನೀಡುವುದು.
4.ಮತ ಪ್ರವಚನ ನಡೆಸುವುದು.
5.ಅವರ ಹೆಸರಿನಲ್ಲಿ ಅನ್ನದಾನ ಮಾಡುವುದು.
ಇದೆಲ್ಲವೂ ಪ್ರವಾದಿ ಸಲ್ಲಲ್ಲಾಹು ಅಲಿಹಿವಸಲ್ಲಮರು ಕಲಿಸಿ ಕೊಟ್ಟ ಕಾರ್ಯವಾಗಿದೆ.ಆದರೆ ಇವೆಲ್ಲವುಗಳನ್ನು ಒಂದೇ ಸಮಯದಲ್ಲಿ ನವೀನ ಮಾದರಿಯಲ್ಲಿ ನಡೆಸುವುದಕ್ಕೆ ಉರೂಸ್ ಎಂದು ಕರೆಯಲಾಗುತ್ತದೆ.ಧಾರ್ಮಿಕ ವಿಧ್ಯೆಯನ್ನು ನವೀನ ಶೈಲಿಯಲ್ಲಿ ಕಲಿಸುವ ವಿಧ್ಯಾಲಯಗಳಿಗೆ ಹೊಸತಾಗಿ ಮದ್ರಸಾ ಎಂದು ಕರೆದಂತೆ ಇದಕ್ಕೆ ಉರೂಸ್ ಎಂದು ಹೆಸರಿಸಲಾಗಿದೆ ಅಷ್ಟೆ.
ಇನ್ನು ಯಾರಾದರೂ ಉರೂಸ್ ಎಂಬುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತೇ ಎಂದು ಕೇಳುವುದಾದರೆ ಮದ್ರಸಾ, ಯತೀಂ ಖಾನ ಎಂಬುವುದು ಪ್ರವಾದಿ ಸಲ್ಲಲ್ಲಾಹು ಆಲೈಹಿ ವಸಲ್ಲಮರ ಕಾಲದಲ್ಲಿತ್ತೇ ಎಂದು ಅವರಲ್ಲಿ ಕೇಳಬೇಕಾಗುತ್ತೆ.ಇನ್ನು ಮದ್ರಸಾ ಎಂಬ ಹೆಸರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿಲ್ಲದಿದ್ದರೂ ಅಲ್ಲಿ ನಡೆಯುವ ಸುಪ್ರಧಾನವಾದ ಕಾರ್ಯ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತು ಎಂದು ಹೇಳುವುದಾದರೆ ಉರೂಸ್ ನಲ್ಲಿ ನಡೆಯುವ ಕಾರ್ಯವೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿತ್ತು ಎಂದು ಹೇಳಬಹುದಾಗಿದೆ.
ಒಟ್ಟಿನಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಪ್ರೋತ್ಸಾಹ ನೀಡಿದ ಹಾಗೂ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿದ್ದ ವಿಧ್ಯೆ ಕಲಿಸುವ ಕಾರ್ಯಕ್ಕೆ ಮದ್ರಸಾ ಎಂಬ ಹೊಸ ಹೆಸರನ್ನು ಆಯ್ದುಕೊಂಡಂತೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿಯೇ ಇದ್ದ ಕೆಲವು ಕಾರ್ಯಗಳನ್ನು ಒಟ್ಟಾಗಿ ನಡೆಸುವುದಕ್ಕೆ ಉರೂಸ್ ಎಂಬ ಹೊಸ ಹೆಸರನ್ನು ಇಡಲಾಗಿದೆ.
ಇನ್ನು ಉರೂಸ್ ನಲ್ಲಿ ನಡೆಯುವ ಮುಖ್ಯವಾದ ಕಾರ್ಯಗಳೇನೆಂದೂ ಅದಕ್ಕಿರುವ ಪುರಾವೆಯೇನೆಂದೂ ನೋಡೋಣ.
1.ವಿಶೇಷವಾದ ಸಾಮೂಹಿಕ ಝಿಯಾರತ್:
ಉರೂಸ್ ವೇಳೆ ನಡೆಯುವ ಪ್ರಮುಖ ಕಾರ್ಯವಾಗಿದೆ ಝಿಯಾರತ್.ಇದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಸುನ್ನತ್ತಾಗಿ ಕಲಿಸಿಕೊಟ್ಟ ಕಾರ್ಯವಾಗಿದೆ.ಅದರಲ್ಲಿ ಯಾರಿಗೂ ಭಿನ್ನಭಿಪ್ರಾಯವಿಲ್ಲ.ಇದನ್ನು ನಿಶ್ಚಿತವಾದ ದಿವಸಗಳಲ್ಲಿ ನಡೆಸುವುದು ಕೂಡಾ ಪ್ರವಾದಿ ಚರ್ಯೆಯಾಗಿದೆ.
ಅಬೂ ಹುರೈರ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಎಲ್ಲಾ ವರ್ಷದ ಕೊನೆಯಲ್ಲಿ ಉಹ್ದ್ ಶುಹದಾಗಳ ಖಬರ್ ಸಂದರ್ಶಿಸುತ್ತಿದ್ದರು ಹಾಗೂ ಅಸ್ಸಲಾಮು ಅಲೈಕುಮ್ ಬಿಮಾ ಸ್ವಬರ್ತುಮ್ ಫನಿ ಅಮ ಉಖ್ ಬದ್ದಾರ್ ( ಅಥ: ಎಲ್ಲಾ ಕಷ್ಟಗಳನ್ನು ಸಹಿಸಿ ನಿಮ್ಮ ಶರೀರವನ್ನು ಇಸ್ಲಾಮಿಗೆ ತ್ಯಾಗ ಮಾಡಿದ ಕಾರಣಕ್ಕಾಗಿ ನಿಮ್ಮ ಮೇಲೆ ಅಲ್ಲಾಹನ ರಕ್ಷೆ ಇರಲಿ.ಪಾರತ್ರಿಕ ಭವನವು ಅತ್ಯುತ್ತಮ ಭವನವಾಗಿದೆ.) ಎಂದು ಪ್ರಾರ್ಥಿಸುತ್ತಿದ್ದರು.ಮಾತ್ರವಲ್ಲ ಅಬೂಬಕರ್ ಸಿದ್ದೀಕ್ , ಉಮರ್ , ಹಾಗೂ ಉಸ್ಮಾನ್ ರಳಿಯಲ್ಲಾಹು ಅನ್ಹುಮ್ ಹೀಗೆ ವರ್ಷದ ಕೊನೆಯಲ್ಲಿ ಅವರ ಖಬರ್ ಸಂದರ್ಶಿಸುತ್ತಿದ್ದರು.( ಮುಸನ್ನಫ್ ಅಬ್ದಿರ್ರಝ್ಝಾಕ್ 574/3, ತಫ್ಸೀರುರ್ರಾಝಿ 47/ 19, ಇಬ್ನ್ ಕಸೀರ್ 571/2, ಇಬ್ನ್ ಜರೀರ್ 96/7, ಅದ್ದುರ್ರುಲ್ ಮಂಸೂರ್ 58/4)
ಉಹ್ದ್ ಯುಧ್ದದಲ್ಲಿ ರಕ್ತ ಸಾಕ್ಷಿಯಾದ ಶುಹದಾಗಳ ಖಬರನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹಾಗೂ ಖುಲಫಾಗಳು ಪ್ರತಿ ವರ್ಷವೂ ಸಂದರ್ಶಿಸುತ್ತಿದ್ದರೆಂದು ಈ ಹದೀಸ್ ನಿಂದ ಯಾವುದೇ ಸಂಶಯಕ್ಕೆಡೆಯಿಲ್ಲದ ರೀತಿಯಲ್ಲಿ ಸ್ಪಷ್ಟವಾಗುತ್ತದೆ.ಇದರಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಿಶ್ಚಿತವಾದ ಸಮಯದಲ್ಲಿ ಝಿಯಾರತ್ ಮಾಡುತ್ತಿದ್ದರೆಂದು ಯಾವುದೇ ಅಲ್ಪಜ್ಞಾನಿಗೂ ಕೂಡಾ ತಿಳಿಯಬಹುದು. ಉರೂಸ್ ಕೂಡಾ ಇದುವೇ ಆಗಿದೆ.ಅಂದರೆ ನಿಶ್ಚಿತವಾದ ಸಮಯದಲ್ಲಿ ಝಿಯಾರತ್ ಮಾಡುವುದು.ಆದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉಹ್ದ್ ಶುಹದಾಗಳ ಉರೂಸನ್ನು ಒಂದು ವರ್ಷಕ್ಕೊಮ್ಮೆ ಆಚರಿಸಿದರೆ ಇಂದು ಕೆಲವೊಮ್ಮೆ ಎರಡು ವರ್ಷಕ್ಕೊಮ್ಮೆ, ಮೂರು ವರ್ಷಕ್ಕೊಮ್ಮೆ , ಐದು ವರ್ಷಕೊಮ್ಮೆ ,ಹೀಗೆ ಆಚರಿಸಲಾಗುತ್ತದೆ ಅಷ್ಟೇ.ಒಂದು ಸುನ್ನತ್ತಾದ ಕಾರ್ಯವನ್ನು ನಿಶ್ಚಿತವಾದ ದಿವಸಗಳಲ್ಲಿ ನಡೆಸಬಹುದೆಂಬುವುದಕ್ಕೆ ಇನ್ನೂ ಹಲವಾರು ಪುರಾವೆಗಳಿವೆ.
ಇಬ್ನ್ ಉಮರ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ, " ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಎಲ್ಲಾ ಶನಿವಾರ ಖುಬಾ ಮಸೀದಿ ಸಂದರ್ಶಿಸುತ್ತಿದ್ದರು."
( ಮುಸ್ಲಿಂ448/1)
ಇದರ ವ್ಯಾಖ್ಯಾನದಲ್ಲಿ ಇಮಾಮ್ ನವವೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
ಸಂದರ್ಶನಕ್ಕೆ ದಿವಸಗಳನ್ನು ನಿಶ್ಚಯಿಸುವುದು ಅನುವದನೀಯ ಎಂದು ಈ ಹದೀಸಿನಲ್ಲಿದೆ.
( ಶರಹ್ ಮುಸ್ಲಿಂ 448/1)
ಇದರಿಂದ ಝಿಯಾರತ್ ಗಳನ್ನು ವಾರ್ಷಿಕವಾಗಿ ನಡೆಸುವುದು ಹದೀಸ್ ಗಳ ಮೂಲಕ ಸಾಬೀತಾದ ಕಾರ್ಯವೆಂದು ಸ್ಪಷ್ಟವಾಯಿತು.
2.ಮತ ಪ್ರವಚನ :
ಉರೂಸ್ ನ ವೇಳೆ ನಡೆಸುವ ಇನ್ನೊಂದು ಪ್ರಮುಖ ಕಾರ್ಯವೇನೆಂದರೆ ಧಾರ್ಮಿಕ ಪ್ರವಚನಗಳು.
ಇದು ಸುನ್ನತ್ ಆಗಿದೆಯೆಂಬುವುದಕ್ಕೆ ಪುರಾವೆ ಮಂಡಿಸುವ ಆವಶ್ಯಕತೆಯಿಲ್ಲ.ಏಕೆಂದರೆ ಮತ ಪ್ರವಚನಗಳ ಉದ್ದೇಶ ಇಲ್ಮ್ ಹೇಳಿ ಕೊಡುವುದು ಮಾತ್ರವಾಗಿದೆ.ಆದರಿಂದ ಇದನ್ನು ಯಾರಾದರೂ ವಿರೋಧಿಸುವರೆಂದು ನನಗೆ ಅನಿಸುತ್ತಿಲ್ಲ.
3.ವಲಿಯ್ಯರ ಹೆಸರಲ್ಲಿ ದಾನ ಮಾಡುವುದು:
ಉರೂಸಿನಲ್ಲಿ ನಡೆಸುವ ಮೂರನೇ ಕಾರ್ಯ ವಲಿಯ್ಯವರ ಹೆಸರಿನಲ್ಲಿ ಅನ್ನ ಸಂತರ್ಪಣೆ , ಸೀರಣೆ ವಿತರಣೆ ಮುಂತಾದವುಗಳ ಮೂಲಕ ದಾನ ಮಾಡುವುದು.ಇದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ತಿಳಿಸಿದ ಸುನ್ನತ್ತಾದ ಕಾರ್ಯವಾಗಿದೆ.
ಆಯಿಶ ರಳಿಯಲ್ಲಾಹು ಅನ್ಹಾ ಹೇಳುತ್ತ್ತಾರೆ,ಒಬ್ಬ ವ್ಯಕ್ತಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರಲ್ಲಿ ಕೇಳಿದರು, " ಪ್ರವಾದಿ ವರ್ಯರೇ, ನನ್ನ ತಾಯಿ ಅನಿರೀಕ್ಷಿತವಾಗಿ ಮರಣ ಹೊಂದಿದ್ದಾರೆ.ಅವರ ಹೆಸರಿನಲ್ಲಿ ದಾನ ಮಾಡಬಹುದೇ?" ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, " ಹೌದು , ಅವರ ಹೆಸರಿನಲ್ಲಿ ದಾನ ಮಾಡು"( ಬುಖಾರಿ386/1, 186/1, ಮುಸ್ಲಿಮ್ 41/2, ಅಬೂದಾವೂದ್ 42/2)
ಇಬ್ನ್ ಅಬ್ಬಾಸ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
ಸಅದ್ ಬಿನ್ ಉಬಾದತ್ ರಳಿಯಲ್ಲಾಹು ಅನ್ಹುರವರ ತಾಯಿ ತೀರಿದಾಗ ಸ ಅದ್ ರಳಿಯಲ್ಲಾಹು ಅನ್ಹು ರವರು ಊರಿನಲ್ಲಿರಲಿಲ್ಲ.ಊರಿಗೆ ಮರಳಿದ ಬಳಿಕ ಅವರು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಬಳಿ ಬಂದು ಹೇಳಿದರು. " ಪ್ರವಾದಿಯವರೇ ನನ್ನ ತಾಯಿ ಮರಣ ಹೊಂದುವಾಗ ನಾನು ಊರಿನಲ್ಲಿರಲಿಲ್ಲ.ಅವರ ಹೆಸರಿನಲ್ಲಿ ದಾನ ಮಾಡಿದರೆ ಅವರಿಗೆ ಪ್ರಯೋಜನ ಉಂಟೇ? ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು.ಹೌದು , ಪ್ರಯೋಜನವುಂಟು." ಆಗ
ಸಅದ್ ರಳಿಯಲ್ಲಾಹು ಅನ್ಹು ಹೇಳಿದರು, " ಹಣ್ಣುಗಳಿರುವ ನನ್ನ ತೋಟವನ್ನು ಅವರ ಹೆಸರಿನಲ್ಲಿ ನಾನು ದಾನ ಮಾಡಿರುತ್ತೇನೆ." ( ಬುಖಾರಿ 387/ 1)
ಅಬೂಹುರೈರ ರಳಿಯಲ್ಲಾಹು ಅನ್ಹು ಹೇಳುತ್ತಾರೆ,ಒಬ್ಬರು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಬಂದು ಹೇಳಿದರು, " ಪ್ರವಾದಿಯವರೇ ನನ್ನ ತಂದೆ ಮೃತರಾಗಿದ್ದಾರೆ.ಅವರು ಮರಣ ಹೊಂದುವಾಗ ಯಾವುದೇ ವಸಿಯ್ಯತ್ ಮಾಡಿಲ್ಲ.ಆದ್ದರಿಂದ ಅವರ ಹೆಸರಿನಲ್ಲಿ ದಾನ ಮಾಡಿದರೆ ಅವರ ಪಾಪಗಳು ಮನ್ನಿಸಲ್ಪಡಬಹುದೇ?
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, "ಹೌದು, ಮನ್ನಿಸಲ್ಪಡುವುದು." (ಮುಸ್ಲಿಮ್ 41/2)
ಒಮ್ಮೆ ಸಅದ್ ಬಿನ್ ಉಬಾದತ್ ರಳಿಯಲ್ಲಾಹು ಅನ್ಹು ಹೇಳಿದರು,
ಪ್ರವಾಸಿಯವರೇ, ನನ್ನ ತಾಯಿ ಮೃತರಾಗಿದ್ದಾರೆ.ಅವರ ಹೆಸರಿನಲ್ಲಿ ದಾನ ಮಾಡುವುದಾದರೆ ಯಾವುದಾಗಿದೆ ಅತ್ಯಂತ ಶ್ರೇಷ್ಟವಾದುದು? " ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳಿದರು, "ನೀರು ಆಗಿದೆ"
ನಂತರ ಸಅದ್ ರಳಿಯಲ್ಲಾಹು ಅನ್ಹು ಒಂದು ಬಾವಿ ತೋಡಿದರು ಹಾಗೂ ಇದರ ನೀರನ್ನು ಉಮ್ಮು ಸಅದ್ ರವರ ಹೆಸರಿನಲ್ಲಿ ದಾನ ಮಾಡಿರುತ್ತೇನೆ ಎಂದು ಹೇಳಿದರು.
(ಅಹ್ಮದ್ , ಕಿತಾಬು ರೂಹ್ .ಪುಟ 106)
ಇಮಾಮ್ ಮುಸ್ಲಿಮ್ ವರದಿ ಮಾಡಿದ ಹದೀಸನ್ನು ವ್ಯಾಖ್ಯಾನಿಸುತ್ತಾ ಇಮಾಮ್ ನವವೀ ಹೇಳುತ್ತಾರೆ,
ಮರಣ ಹೊದಿದದವರ ಹೆಸರಿನಲ್ಲಿ ದಾನ ಮಾಡುವುದು ಸುನ್ನತ್ತಾಗಿದೆಯೆಂದೂ, ಅದರ ಪ್ರತಿಫಲವು ಅವರಿಗೆ ಲಭಿಸುತ್ತದೆಯೆಂದೂ , ಅವರಿಗೆ ಅದರಿಂದ ಪ್ರಯೋಜವಿದೆಯೆಂದೂ , ಮಾತ್ರವಲ್ಲ ದಾನ ಮಾಡಿದವನಿಗೂ ಪ್ರಯೋಜವಿದೆಯೆಂದೂ ಈ ಹದೀಸ್ ನಲ್ಲಿದೆ.ಇದೆಲ್ಲವೂ ಮುಸ್ಲಿಮರ ಒಮ್ಮತವಾದ ಕಾರ್ಯವಾಗಿದೆ." ( ಶರಹ್ ಮುಸ್ಲಿಮ್ 41/ 2)
ಒಟ್ಟಿನಲ್ಲಿ ಮರಣ ಹೊಂದಿದವರ ಹೆಸರಿನಲ್ಲಿ ಹೊಂದಿದವರ ಹೆಸರಿನಲ್ಲಿ ದಾನ ಮಾಡಬಹುದೆಂದೂ ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಕಲಿಸಿದ ಹಾಗೂ ಮುಸ್ಲಿಮರಿಗೆ ಯಾವುದೇ ತರ್ಕವಿಲ್ಲದ ಕಾರ್ಯವೆಂದೂ ಸ್ಪಷ್ಟವಾಯಿತು.
4.ಖುರ್ ಆನ್ ಪಾರಾಯಣ:
ಮರಣ ಹೊಂದಿದವರಿಗಾಗಿ ಅವರ ಖಬರಿನ ಬಳಿ ಖುರ್ ಆನ್ ಪಾರಾಯಣ ಮಾಡುವುದು ಸುನ್ನತ್ತಾದ ಕಾರ್ಯವಾಗಿದೆಯೆಂಬುವುದರಲ್ಲಿ ಯಾವುದೇ ಒಬ್ಬ ವಿಧ್ವಾಂಸನಿಗೂ ಅಭಿಪ್ರಾಯ ವ್ಯತ್ಯಾಸವಿಲ್ಲದ
ಇಜ್ ಮಾಅ್ ಅಥವಾ ಒಮ್ಮತಾಭಿಯದ ಮೂಲಕ ಸಾಬಿತಾದ ಕಾರ್ಯವಾಗಿದೆ.
ಬಹು ! ಇಮಾಮ್ ಸುಯೂತಿ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ; ಮರಣ ಹೊಂದಿದವರಿಗಾಗಿ ಖುರ್ ಆನ್ ಪಾರಾಯಣ ಮಾಡುವುದು ಎಲ್ಲಾ ಕಾಲ ಹಾಗೂ ಸ್ಥಳದಲ್ಲಿ ನಡೆದು ಬಂದ ಕಾರ್ಯವಾಗಿದೆ.ಒಬ್ಬರೂ ಕೂಡಾ ಅದನ್ನು ವಿರೋಧಿಸಿಲ್ಲ.ಆದರಿಂದಲೇ ಅದು ಮುಸ್ಲಿಮ್ ಜಗತ್ತಿನ ಇಜ್ಮಾಅ್
( ಒಮ್ಮತಾಭಿಪ್ರಾಯ) ಆಗಿದೆ.
( ಮಿರ್ಖಾತ್ 382/2, ಶರಹುಸ್ಸುದೂರ್ 311)
ಹದೀಸುಗಳಲ್ಲಿ......
ಮಅ್ ಖಿಲ್ ಬಿನ್ ಯಸಾರ್ ರಳಿಯಲ್ಲಾಹು ಅನ್ಹು ವರದಿ; ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರು ಹೇಳುತ್ತಾರೆ, ನಿಮ್ಮಿಂದ ಮೃತಪಟ್ಟವರಿಗಾಗಿ ಸೂರಾ ಯಾಸೀನನ್ನು ಪಠಿಸಿರಿ.
(ಅಹ್ಮದ್ , ಇಬ್ನ್ ಮಾಜ,ಅಬೂದಾವೂದ್ ,ಇಬ್ನ್ ಅಬೀ ಶೈಬ ,ನಸಾಈ, ಇಬ್ನ್ ಹಿಬ್ಬಾನ್ )
ಈ ಹದೀಸ್ ಸ್ವಹೀಹ್ ಆಗಿದೆಯೆಂದು ಇಮಾಮ್ ಖತೀಬುಶ್ಶಿರ್ಬೀನಿ ತನ್ನ ಮುಗ್ನಿಯ 320/ 1 ಲ್ಲೂ ಇಮಾಮ್ ಇಬ್ನ್ ಹಜರ್ ತನ್ನ ತುಹ್ಫ 93/3 ರಲ್ಲೂ ಇಮಾಮ್ ಮಹಲ್ಲಿ ತನ್ನ ಕಂಝ್ಝುರ್ರಾಗಿಬೀನ್ ನ 312/1 ರಲ್ಲೂ ಸ್ಪಷ್ಟಪಡಿಸಿದ್ದಾರೆ.
ಅಬುದ್ದರ್ ದಾಅ್ ರಳಿಯಲ್ಲಾಹು ಅನ್ಹು ವರದಿ,ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹೇಳುತ್ತಾರೆ." ಯಾವುದಾದರೊಂದು ಮಯ್ಯಿತ್ ನ ತಲೆ ಭಾಗದಲ್ಲಿ ಯಾಸೀನ್ ಸೂರಾ ಪಠಿಸಿದರೆ ಅಲ್ಲಾಹನು ಅವನ ಶಿಕ್ಷೆಯನ್ನು ಲಘುಗೊಳಿಸುವನು"( ಇಬ್ನ್ ಅಬಿದ್ದುನ್ಯಾ, ದೈಲಮಿ, ಮಿರ್ಖಾತ್ 331/2)
ಸ್ವಹಾಬಿಗಳ ಚರ್ಯೆ:
ನೂತನವಾದಿಗಳ ಅಂಗೀಕೃತ ನೇತಾರ ಇಬ್ನುಲ್ ಖಯ್ಯಿಂ ಹೇಳುವುದನ್ನು ನೋಡಿ; ತಮ್ಮಲ್ಲಿ ಯಾರದರೂ ಮರಣ ಹೊಂದಿದರೆ ಸ್ವಹಾಬಿಗಳು ಅವರ ಖಬರಿನ ಬಳಿ ಖುರ್ ಆನ್ ಪಾರಯಣ ಮಾಡುತಿದ್ದರು. ( ಅರ್ರೂಹ್ 12, ಮಿರ್ಖಾತ್ 382/2)
ಬಹು! ಇಮಾಮ್ ನವವಿ ರಳಿಯಲ್ಲಾಹು ಅನ್ಹು ಹೇಳುತ್ತಾರೆ "ಸ್ವಹಾಬಿ ವರ್ಯರಾದ ಇಬ್ನ್ ಉಮರ್ ರಳಿಯಲ್ಲಾಹು ಅನ್ಹು ರವರು ಖಬರಿನ ಬಳಿ ಅಲ್ ಬಖರ ಸೂರಾದ ಆರಂಭದ ಮತ್ತು ಕೊನೆಯ ಸೂಕ್ತಗಳನ್ನು ಓದುವುದು ಸುನ್ನತ್ತಾಗಿದೆಯೆಂದು ತಿಳಿಸಿದ್ದಾರೆ.( ಅಲ್ ಅದ್ಸ್ ಕಾರ್ 164).
ಇಮಾಮರುಗಳ ಹೇಳಿಕೆಗಳು:
ಬಹು! ಇಮಾಮ್ ಅಹ್ಮದ್ ಬಿನ್ ಹಂಬಲ್ ರವರು ಹೇಳುತ್ತಾರೆ " ನೀವು ಖಬರ್ ಸಂದರ್ಶಿಸಿದರೆ ಅಲ್ಲಿ ಸೂರಾ ಫಾತಿಹ, ಮುಅವ್ವಿಝತೈನಿ, ಸೂರಾ ಇಕ್ಲಾಸ್ ಓದಿರ್ ಹಾಗೂ ಅದರ ಫಲವನ್ನು ಖಬರಿನಲ್ಲಿರುವವರಿಗೆ ಸಮರ್ಪಿಸಿರಿ"
(ಶರಹುತ್ತೀಬಿ 414/4 )
ಇಮಾಮ್ ನವವಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ " ಇಮಾಮ್ ಶಾಫಿ ರಲಿಯಲ್ಲಾಹು ಅನ್ಹು ಮತ್ತು ಅವರ ಅನುಯಾಯಿಗಳು ಖಬರಿನ ಬಳಿ ಖುರ್ ಆನ್ ಪಾರಾಯಣ ಮಾಡುವುದು ಸುನ್ನತ್ತೆಂದು ತಿಳಿಸಿದ್ದಾರೆ."
(ಅಲ್ ಅದ್ಸ್ ಕಾರ್ 170).
ಇಮಾಮ್ ನವವಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ; " ಖಬರ್ ಸಂದರ್ಶಿಸಿದವನು ಅಲ್ಲಿ ಖುರ್ ಆನ್ ಓದುವುದನ್ನು ಹೆಚ್ಚಿಸಬೇಕು"
( ಅಲ್ ಅದ್ಸ್ ಕಾರ್ 170).
ಇಮಾಮ್ ಖತೀಬುಶ್ಶಿರ್ಬೀನಿ ಹೇಳುತ್ತಾರೆ; " ಖಬರಿನ ಬಳಿ ಖುರ್ ಆನ್ ಪಠಿಸುವುದು ಸುನ್ನತ್ತಾಗಿದೆ"
( ಮುಗ್ನಿ 57/2)
ಇಮಾಮ್ ರಂಲಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ " ಖಬರಿನ ಬಳಿ ಖುರ್ ಆನ್ ಓದುವುದು ಸುನ್ನತ್ತಾಗಿದೆ "
(ನಿಹಾಯ 37/3).
ಅದೇ ರೀತಿ ಇಮಾಮ್ ಝಕರಿಯ್ಯಲ್ ಅನ್ಸ್ವಾರಿ ತನ್ನ ಮನ್ ಹಜ್ 210/ 2 ರಲ್ಲೂ
ಇಮಾಮ್ ಇಬ್ನ್ ಖುದಾಮ ತನ್ನ ಮುಗ್ನಿ 567 /2 ರಲ್ಲೂ
ಇಮಾಮ್ ಇಬ್ನ್ ಹಜರ್ ತನ್ನ ತುಹ್ಫಾ 203/3 ರಲ್ಲೂ ,
ಹೀಗೆ ಸರ್ವ ಇಮಾಮರುಗಳು ಸ್ಪಷ್ಟಪಡಿಸಿದ್ದಾರೆ.
ಸೊಳಪಿಗಳ ನೇತಾರರೇ ಅಂಗೀಕರಿಸಿದಾಗ......!
ಸರ್ವ ಸೊಳಪಿಗಳು ತಮ್ಮ ಪ್ರೀತಿಯ ನಾಯಕನಾಗಿ ಕೊಂಡಾಡುತ್ತಿರುವ ಇಬ್ನ್ ತೈಮಿಯ್ಯರವರೇ ಮರಣ ಹೊಂದಿದದವರಿಗಾಗಿ ಖುರ್ ಆನ್ ಪಾರಾಯಣ ಮಾಡುವುದು ಸುನ್ನತ್ತಾಗಿದೆಯೆಂದು ಸ್ಪಷ್ಟ ಪಡಿಸಿದ್ದಾರೆ.ಅವರು ಹೇಳುವುದನ್ನು ನೋಡಿ " ಯಾರಾದರೂ ಅಲ್ಲಾಹನ ಪ್ರತಿಫಲ ಆಗ್ರಹಿಸಿ ಖುರ್ ಆನ್ ಓದಿ ನಂತರ ಅದನ್ನು ಮೃತ ಪಟ್ಟವರಿಗೆ ಸಮರ್ಪಿಸಿದರೆ ಅದು ಅವರಿಗೆ ತಲುಪುವುದು".
( ಮಜ್ಮೂಉಲ್ ಫತಾವ 300/ 24)
ಆದ್ದರಿಂದ ಉರೂಸಿನಲ್ಲಿ ನಡೆಯುವ ಈ ಎಲ್ಲಾ ಕಾರ್ಯಗಳೂ ಸುನ್ನತ್ತಾಗಿದೆಯೆಂದು ವ್ಯಕ್ತವಾಯಿತು.ಈ ಎಲ್ಲಾ ಕಾರ್ಯಗಳಿಗೆ ಒಟ್ಟಾಗಿ ಉರೂಸ್ ಎಂದು ನಾಮಕರಣ ಮಾಡಲಾಗಿದೆಯೇ ಹೊರತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಕಲಿಸದ ಯಾವೊಂದು ಕಾರ್ಯವೂ ಅದರಲ್ಲಿಲ್ಲ.
ಈ ವಿವರಣೆಯಿಂದ ಉರೂಸ್ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲದಲ್ಲಿರಲಿಲ್ಲ, ಅದು ಅನಾಚಾರವಾಗಿದೆ ಎಂಬಿತ್ಯಾದಿ ನೂತನ ಸಿದ್ಧಾಂತಗಳು ಅರ್ಥಹೀನವೆಂದು ತಿಳಿದುಕೊಳ್ಳಬಹುದು.ಏಕೆಂದರೆ ಉರೂಸ್ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಕಾಲದಲ್ಲಿರಲಿಲ್ಲ ಎಂದು ಯಾರಾದರೂ ಹೇಳಿವುದಾದರೆ ಅದರ ಅರ್ಥ ಅಂದು ಝಿಯಾರತ್ ಇರಲಿಲ್ಲ, ಮೃತರ ಹೆಸರಿನಲ್ಲಿ ದಾನ ಮಾಡುವುದು ಇಲ್ಲ, ವಿಧ್ಯೆ ಕಲಿಸುವುದು ಇಲ್ಲ ಎಂದಾಗಿದೆ.ಇದು ಎಷ್ಟು ಮಾತ್ರ ಅಸಂಬಂದ್ಧವಾಗುದೆ ಎಂದು ನೀವೇ ಚಿಂತಿಸಿ.
ಇಲ್ಲಿಯವರೆಗಿನ ವಿವರಣೆಯಿಂದ ಈ ಕಾರ್ಯಗಳು ವ್ಯಕ್ತವಾಯಿತು.
1. ಉರೂಸ್ ಎಂದರೆ ಇಸ್ಲಾಮಿನಲ್ಲಿ ಇಲ್ಲದ ಹೊಸತಾದ ಕಾರ್ಯವಲ್ಲ.ಹೊರತು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರವರು ಕಲಿಸಿದ ಝಿಯಾರತ್ , ದಾನ ನೀಡುವುದು , ಮತ ಪ್ರವಚನ ಮುಂತಾದವುಗಳನ್ನು ಒಟ್ಟಾಗಿ ನಡೆಸುವುದಾಗಿದೆ.ಇದಕ್ಕೆ ಉರೂಸ್ ಎಂದು ನಾಮಕರಣ ಮಾಡಲಾಗಿದೆ ಎಂದಲ್ಲದೆ ಅದರಲ್ಲಿ ಹೊಸತಾದ ಯಾವುದೇ ಕಾರ್ಯ ಅದರಲ್ಲಿಲ್ಲ.
2.ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಉಹ್ದ್ ಶುಹದಾಗಳ ಉರೂಸ್ ನಡೆಸಿದ್ದರು.
3.ಸುನ್ನತ್ತಾದ ಕಾರ್ಯಗಳನ್ನು ಸಮಯ ನಿಶ್ಚಯಿಸಿ ನಡೆಸುವುದು ಅನುವದನೀಯವಾಗಿದೆ.
4.ಮರಣ ಹೊಂದಿದವರ ಹೆಸರಲ್ಲಿ ದಾನ ಮಾಡುವುದು ಶ್ರೇಷ್ಟವಾದ ಪುಣ್ಯ ಕರ್ಮವಾಗಿದೆ.
ಈ ಎಲ್ಲಾ ಪುರಾವೆಗಳಿಂದ ಖಬರಿನ ಬಳಿ ಖುರ್ ಆನ್ ಪಾರಾಯಣ ಮಾಡುವುದು ಸುನ್ನತ್ತಾದ ಸತ್ಕರ್ಮವೆಂದು ಸ್ಪಷ್ಟವಾಯಿತು.
ಖಬರ್ ಎತ್ತರಿಸುವುದು:
ಖಬರ್ ಎತ್ತರಿಸುವುದು ಮತ್ತು ಎತ್ತರಿಸಿ ಕಟ್ಟುವುದು ಬೇರೆ ಬೇರೆ ಕಾರ್ಯಗಳಾಗಿವೆ.ಉದಾಹರಣೆಗೆ ಖಬರ್ ತೋಡಿದ ಮಣ್ಣನ್ನು ಅದರ ಮೇಲೆ ಹಾಕಿದಾಗ ಅದು ಒಂದು ಅಂಗುಲಕ್ಕಿಂತಲೂ ಹೆಚ್ಚಾಯಿತು ಎಂದಿಟ್ಟು ಕೊಳ್ಳೋಣ.ಹಾಗಿದ್ದರೆ ಅದರ ಕುರಿತು ಎತ್ತರಿಸಲಾಯಿತು ಎಂದು ಮಾತ್ರ ಹೇಳಬಹುದಲ್ಲದೆ ಎತ್ತರಿಸಿ ಕಟ್ಟಲಾಯಿತು ಎಂದು ಹೇಳಲು ಸಾಧ್ಯವಿಲ್ಲ.ಏಕೆಂದರೆ ಅಲ್ಲಿ ಕಟ್ಟುವಿಕೆ ಎಂಬ ಪ್ರಕ್ರಿಯೆ ನಡೆದಿಲ್ಲ.ಆದ್ದರಿಂದ ಇವರೆಡರ ಮಧ್ಯೆಯಿರುವ ವ್ಯತ್ಯಾಸವನ್ನು ತಿಳಿದುಕೊಳ್ಳಬೇಕಾಗಿದೆ.
ಇನ್ನು ಒಬ್ಬ ಸಾಮಾನ್ಯ ಮುಸ್ಲಿಮನ ಖಬರನ್ನು ಎಷ್ಟರವರೆಗೆ ಎತ್ತರಿಸಬೇಕು ಎಂಬುವುದನ್ನು ಇಸ್ಲಾಮ್ ನಿರ್ದೇಶಿಸಿದೆ.ಫತ್ ಹುಲ್ ಮುಈನಿನಲ್ಲಿ ಹೇಳುವುದನ್ನು ನೋಡಿ. " ಖಬರನ್ನು ಒಂದು ಅಂಗುಲ ಎತ್ತರಿಸಬೇಕಾಗಿದೆ." ಫತ್ ಹುಲ್ ಮುಈನ್ , 154 )
ಈ ಆಶಯವನ್ನು ಇತರ ಎಲ್ಲಾ ಫಿಖ್ಹೀ ಗ್ರಂಥಗಳಲ್ಲೂ ಕಾಣಬಹುದು.
ಇನ್ನು ಇದಕ್ಕಿಂತ ಹೆಚ್ಚು ಎತ್ತರಿಸುವುದಾದರೆ ಅದು ಕರಾಹತ್ ಮಾತ್ರ ವಾಗಿದೆ.
ಶಿರ್ಕೋ , ಹರಾಮೋ ಅಲ್ಲ.ಬಹು ! ಇಮಾಮ್ ಅಲಿಯ್ಯುಶ್ಶಿಬ್ ರಾ ಮಲ್ಲಿಸಿ ರಳಿಯಲ್ಲಾಹು ಅನ್ಹು ಈ ಕಾರ್ಯವನ್ನು ಸ್ಪಷ್ಟಪಡಿಸಿದ್ದಾರೆ.ಹರಾಮ್ ಅಥವಾ ಶಿರ್ಕ್ ಎಂದು ಜಗತ್ತಿನ ಒಬ್ಬನೇ ಒಬ್ಬ ವಿಧ್ವಾಂಸರೂ ಹೇಳಿಲ್ಲ.ಆದರೆ ಇಸ್ಲಾಮಿನ ಕುರಿತು ಬಾಲ ಪಾಠವೂ ಇಲ್ಲದ ಸೊಳಪಿ - ಜಮ ಬಾಳಂಗೋಚಿಗಳು ಅದು ಶಿರ್ಕೆಂದು ಬೊಬ್ಬಿಡುತ್ತಿದ್ದಾರೆ.ಇವರಿಗದು ಎಲ್ಲಿಂದ ಸಿಕ್ಕಿತೋ ಅಲ್ಲಾಹನೇ ಬಲ್ಲ! ಬಹುಷ ಇಬ್ಲೀಸನ ಗ್ರಂಥದಿಂದಾಗಿರಲೂ ಬಹುದು.
ಇನ್ನು ಈ ಸೊಳಪಿಗಳಲ್ಲಿ ಎರಡು ಪ್ರಶ್ನೆಗಳು.
1.ಖಬರನ್ನು ಒಂದು ಅಂಗುಲಕ್ಕಿಂತ ಹೆಚ್ಚು ಎತ್ತರಿಸುವುದು ಹರಾಮ್ ಅಥವಾ ಶಿರ್ಕ್ ಎಂದು ಹೇಳುವ ಯಾವುದೇ ಒಂದು ಆಯತ್ ಅಥವಾ ಹದೀಸನ್ನು ತೋರಿಸಿಕೊಡಬಹುದೇ?
2.ಪೂರ್ವಿಕ ವಿಧ್ವಾಂಸರಲ್ಲಿ ಯಾರಾದರೊಬ್ಬರು ಅದು ಹರಾಮ್ ಅಥವಾ ಶಿರ್ಕ್ ಎಂದು ಹೇಳಿದ್ದಾಗಿ ತೋರಿಸಿಕೊಡಬಹುದೇ?
ಖಬರ್ ಕಟ್ಟುವುದು:
ಕಲ್ಲು , ಇಟ್ಟಿಗೆಗಳ ಮೂಲಕ ಗಾರೆ ಹಾಕಿ ಖಬರನ್ನು ಕಟ್ಟುವುದರ ವಿಧಿಯೇನೆಂಬುವುದನ್ನು ಪರಿಶೀಲಿಸುವುದಕ್ಕಿಂತ ಮುಂಚಿತವಾಗಿ ಅದರ ಹಲವು ರೂಪಗಳನ್ನು ತಿಳಿದು ಕೊಳ್ಳೋಣ.
1.ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಕಟ್ಟುವುದು.
2.ಸಾಮನ್ಯ ವ್ಯಕ್ತಿಯ ಖಬರನ್ನು ಮೌಖೂಫ್ ( ದಫನ ಮಾಡಲು ವಖಫ್ ಮಾಡಲ್ಪಟ್ಟ ಭೂಮಿ)
ಆದ ಸ್ಥಳದಲ್ಲಿ ಕಟ್ಟುವುದು.
3.ಸಾಮಾನ್ಯ ವ್ಯಕ್ತಿಯ ಖಬರನ್ನು ಮುಸಬ್ಬಲತ್ ( ಒಂದು ಊರಿನ ಜನತೆಯ ದಫನ್ ಮಾಡುತ್ತಾ ಬಂದ ಪ್ರತ್ಯೇಕ ಭೂಮಿ) ಆದ ಭೂಮಿಯಲ್ಲಿ ದಫನ್ ಮಾಡುವುದು.
4.ಮಹಾ ಪುರುಷರ ಖಬರನ್ನು ಕಟ್ಟುವುದು.
ಇದರಲ್ಲಿ ಒಂದನೆಯದರ ವಿಧಿ ಅಂದರೆ ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಕಟ್ಟುವುದು ಕರಾಹತ್ ಆಗಿದೆ.ಅದಕ್ಕಿರುವ ಕಾರಣ ಅದು ಅನಪೇಕ್ಷಿತವಾಗಿ ಸೌಂಧರ್ಯ ಹಾಗೂ ಜಂಭತನವನ್ನು ಸೂಚಿಸುತ್ತದೆ ಎಂಬುವುದಾಗಿದೆ.ಬಹು! ಇಮಾಮ್ ಶಾಫೀ ರಲಿಯಲ್ಲಾಹು ಅನ್ಹು ರವರು ಹೇಳುತ್ತಾರೆ,
" ಖಬರ್ ಕಟ್ಟುವಿಕೆ ಹಾಗೂ ಅದಕ್ಕೆ ಹುಡಿಸುಣ್ಣ ಹಾಕಿ ಬಿಲುಪುಗೊಳಿಸುವುದನ್ನು ನಾನು ಇಷ್ಟಪಡುವುದಿಲ್ಲ.ಏಕೆಂದರೆ ಅದು ಅನಪೇಕ್ಷಿತ ಸೌಂಧರ್ಯ ಹಾಗೂ ಜಂಭತನವನ್ನು ಹೋಲುತ್ತದೆ."
( ಕಿತಾಬುಲ್ ಇಮ್ಮ್ 316 /1)
ಇದೇ ಆಶಯವನ್ನು ಇತರ ಹಲವಾರು ಗ್ರಂಥಗಳಲ್ಲಿ ಕಾಣಬಹುದು.
ಬಹು ಮಾನ್ಯರಾದ ಇಮಾಮ್ ಝೈನುದ್ದೀನ್ ಮಖ್ದೂಂ ರಳಿಯಲ್ಲಾಹು ಅನ್ಹು ಹೇಳುತಾರೆ ,
" ಖಬರಿನೊಳಗೆ ಅಥವಾ ಮೇಲೆ ಕಟ್ಟುವುದು ಕರಾಹತ್ ಆಗಿದೆ. ( ಫತ್ ಹುಲ್ ಮುಈನ್ 154)
ಇಮಾಮ್ ನವವೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಖಬರಿಗೆ ಹುಡಿಸುಣ್ಣ ಹಾಕಿ ಬಿಳುಪುಗೊಳಿಸುವುದು ಮತ್ತು ಅದರ ಮೇಲೆ ಕಟ್ಟುವುದು ಕರಾಹತ್ ಆಗಿದೆ.(
ತುಹ್ಫಾ 196 /3)
ಅದೇ ರೀತಿ ನಿಹಾಯ 34/ 3 , ಶರ್ಖಾವಿ 345 / 1 , ಬುಜೈರಿಮಿ 263 / 2 , ಫತ್ ಹುಲ್ ಅಲ್ಲಾಂ 2883 / 3 , ಮುಂತಾದ ಸರ್ವ ಗ್ರಂಥಗಳಲ್ಲೂ ಕಾಣಬಹುದು.
ಈ ವಿವರಣೆಯಿಂದ ಎರಡು ಮುಖ್ಯ ಕಾರ್ಯಗಳು ಇಲ್ಲಿ ಸರಿಯಾಗಿ ತಿಳಿದು ಕೊಳ್ಳಬೇಕಾಗಿದೆ.
1.ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದರ ವಿಧಿ ಸ್ವಂತ ಭೂಮಿಯಲ್ಲಾಗಿದ್ದರೆ ಕರಾಹತ್ ಮಾತ್ರವಾಗಿದೆ.ಶಿರ್ಕೋ , ಕುಫ್ರೋ , ಹರಾಮೋ ಅಲ್ಲ.
ಆದ್ದರಿಂದ ಖಬರ್ ಎತ್ತರಿಸಿ ಕಟ್ಟುವುದು ಶಿರ್ಕ್ , ಕುಫ್ರ್ , ಹರಾಮ್ ಎಂದು ಲಾಗ ಹಾಕುವುದು ವಹ್ಹಾಬಿ ಹಾಗೂ ಜಮ ಮೌಲವಿಗಳ ಕಾಪಟ್ಯವಾಗಿದೆ.
2. ಈ ಎತ್ತರಿಸಿ ಕಟ್ಟುವಿಕೆಯು ಖಬರ್ ಆರಾಧನೆಯೆಂದು ಅವರ್ಯಾರು ಹೇಳಿಲ್ಲ.ಹಾಗಿದ್ದರೆ ಅದು ಕುಫ್ರ್ ಆಗಬೇಕಿತ್ತು.ಅವರು ಹೇಳಿದ್ದು ಕೇವಲ ಕರಾಹತ್ ಎಂದು ಮಾತ್ರವಾಗಿದೆ.ಕರಾಹತ್ ಎಂದರೆ ಶಿಕ್ಷೆ ಇಲ್ಲದ್ದೂ ಉಪೇಕ್ಷಿಸಿದರೆ ಪುಣ್ಯ ಇರುವಂತದ್ದೂ ಆಗಿದೆ. ಈ ಎತ್ತರಿಸಿ ಕಟ್ಟುವಿಕೆಯು ಕರಾಹತ್ ಆಗಲು ಅವರು ಹೇಳಿದ ಕಾರಣವೇನೆಂದರೆ ಅದು ಜಂಭತನ ಹಾಗೂ ಅನಪೇಕ್ಷಿತ ಸೌಂಧರ್ಯವನ್ನು ಸೂಚಿಸುತ್ತದೆ ಎಂಬುವುದು ಮಾತ್ರವಾಗಿದೆ.ಹೊರತು ಖಬರ್ ಆರಾಧನೆ ಎಂದು ಅಲ್ಲ.ಆದ್ದರಿಂದ ಇಲ್ಲೂ ಕೂಡಾ ಮೌಲವಿಗಳ ಕಾಪಟ್ಯವನ್ನು ಜನ ಸಾಮಾನ್ಯರು ತಿಳಿದು ಕೊಳ್ಳಬೇಕಾಗಿದೆ.ಇವಿಷ್ಟು ಸಾಮಾನ್ಯ ವ್ಯಕ್ತಿಯ ಖಬರನ್ನು ಆತನ ಸ್ವಂತ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದರ ವಿಷಯವಾಗಿದೆ.
ಇಲ್ಲಿ ವಹ್ಹಾಬೀ ಪಾದ್ರಿಗಳೊಂದಿಗೆ ಕೆಲವು ಪ್ರಶ್ನೆಗಳು...
1.
ಸಾಮಾನ್ಯ ವ್ಯಕ್ತಿಯ ಖಬರಿನ ಕುರಿತಾದರೂ ಸಹ ಸ್ವಂತ ಭೂಮಿಯಲ್ಲಿ ಅದನ್ನು ಎತ್ತರಿಸಿ ಕಟ್ಟುವುದು ಶಿರ್ಕೆಂದು ತಿಳಿಸುವ ಯಾವುದಾದರೊಂದು ಸೂಕ್ತ ಅಥವಾ ಹದೀಸನ್ನು ತಿಳಿಸಲು ಸಾಧ್ಯವಿದೆಯೇ?
2.
ಪೂರ್ವೀಕ ವಿದ್ವಾಂಸರು ಅದು ಶಿರ್ಕೆಂದು ಹೇಳಿದ್ದಾಗಿ ತೋರಿಸಬಹುದೇ?
3.
ಖಬರನ್ನು ಎತ್ತರಿಸಿ ಕಟ್ಟುವುದು ಖಬರ್ ಆರಾಧನೆ ಎಂದು ಯಾವುದಾದರೂಂದು ಸೂಕ್ತ ಅಥವಾ ಹದೀಸ್ ನಲ್ಲಿ ಇದೆಯೇ?
ಇನ್ನು ಎರಡು ಮತ್ತು ಮೂರನೇ ರೂಪದಲ್ಲಿ ತಿಳಿಸಲಾದ ಅಂದರೆ ಮೌಖೂಫ್ ಅಥವಾ ಮುಸಬ್ಬಲ್ ಆದ ಭೂಮಿಯಲ್ಲಿ ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದರ ಕುರಿತು ಪರಿಶೀಲಿಸೋಣ.
ಬಹು! ಇಮಾಮ್ ಝೈನುದ್ದೀನ್ ಮಖ್ದೂಂ ರಳಿಯಲ್ಲಾಹು ಅನ್ಹು ರವರು ಹೇಳುತ್ತಾರೆ.
ಕಟ್ಟುವಿಕೆಯು ಕರಾಹತ್ ಎಂದು ಹೇಳಿದ್ದು ಸ್ವಂತ ಭೂಮಿಯಲ್ಲಾಗಿದ್ದರೆ ಮಾತ್ರವಾಗಿದೆ.ಇನ್ನು ಮುಸಬ್ಬಲ ಅಥವಾ ಮೌಖೂಫ್ ಆದ ಭೂಮಿಯಲ್ಲಾಗಿದ್ದರೆ ಅಲ್ಲಿ ಹರಾಮ್ ಆಗಿದೆ. ಮಾತ್ರವಲ್ಲ ಅದನ್ನು ಕೆಡವುದು ಕಡ್ಡಾಯವಾಗಿದೆ.ಏಕೆಂದರೆ ಖಬರಿನಲ್ಲಿರುವ ಮಯ್ಯಿತ್ ಜೀರ್ಣಿಸಿದರೆ ಅಲ್ಲಿ ಇತರರನ್ನು ದಫನ ಮಾಡಬಹುದಾಗಿದೆ.ಆದರೆ ಖಬರ್ ಕಟ್ಟಿದರೆ ಅದು ಶಾಶ್ವತವಾಗಿ ಉಳಿಯುತ್ತದೆ.ಆಗ ಯಾವುದೇ ಅವಶ್ಯಕತೆ ಇಲ್ಲದ ಒಂದು ಕಾರ್ಯದ ಮೂಲಕ ಇತರ ಮುಸ್ಲಿಮರನ್ನು ಅಲ್ಲಿ ದಫನ ಮಾಡುವುದರಿಂದ ತಡೆಯಲಾಗುತ್ತದೆ.
( ಫತ್ ಹುಲ್ ಮುಈನ್ 155)
ಖಬರಿನಲ್ಲಿ ದಫನ್ ಮಾಡಲಾದ ಮಯ್ಯಿತ್ ಜೀರ್ಣಿಸಿದರೆ ಅದರಲ್ಲಿ ಇತರರನ್ನು ದಫನ್ ಮಾಡಬಹುದಾಗಿದೆ.ಆದರೆ ಅದರ ಮೇಲೆ ಗಾರೆ ಹಾಕಿ ಭದ್ರವಾಗಿ ಕಟ್ಟಿದರೆ ಈ ಸೌಕರ್ಯವು ನಷ್ಟ ಹೊಂದುತ್ತದೆ.ಇದರಿಂದ ಇತರ ಮುಸ್ಲಿಮರನ್ನು ಅದರಲ್ಲಿ ದಫನ್ ಮಾಡಲು ಅಸಾಧ್ಯವಾಗುತ್ತದೆ.
ಆದ್ದರಿಂದ ಎಲ್ಲರಿಗೂ ಅವಕಾಶವಿರುವ ಮೌಖೂಫ್ ಅಥವಾ ಮುಸಬ್ಬಲ್ ಆದ ಭೂಮಿಯಲ್ಲಿ ಈ ರೀತಿ ಸಾಮಾನ್ಯರ ಖಬರನ್ನು ಕಟ್ಟುವುದರಿಂದ ಇತರರ ಅವಕಾಶವನ್ನು ನಿಷೇದಿಸಲಾಗುತ್ತದೆ.ಯಾರಾದರೂ ಹಾಗೆ ಕಟ್ಟಿದರೆ ಅದನ್ನು ಕೆಡುವುದು ಕಡ್ಡಾಯವಾಗಿದೆ.ಇದಾಗಿದೆ ಇಮಾಮ್ ಝೈನುದ್ದೀನ್ ಮಖ್ದೂಂ ರವರು ತಿಳಿಸಿದುದರ ಚುಟುಕು.
ಇದೇ ವಿಷಯವನ್ನು ಇಮಾಮ್ ಇಬ್ನ್ ಹಜರ್ ರಳಿಯಲ್ಲಾಹು ಅನ್ಹು ತನ್ನ ತುಹ್ಫಾ 196/ 3 ರಲ್ಲೂ ವಿವರಿಸಿದ್ದಾರೆ.
ಒಟ್ಟಿನಲ್ಲಿ ಮೌಖೂಫ್ ಅಥವಾ ಮುಸಬ್ಬಲತ್ ಆದ ಭೂಮಿಯಲ್ಲಿ ಸಾಮಾನ್ಯ ವ್ಯಕ್ತಿಯ ಖಬರನ್ನು ಎತ್ತರಿಸಿ ಕಟ್ಟುವುದು ನಿಷಿದ್ಧವೆಂದಾಗಿದೆ ಇಮಾಮರುಗಳು ಹೇಳಿದ್ದು.ಅದಕ್ಕೆ ಅವರು ನೀಡಿದ ಕಾರಣ ಅದು ಖಬರ್ ಆರಾಧನೆ ಎಂದಲ್ಲ.ಹೊರತು ಅದರಿಂದ ಇತರರನ್ನು ಆ ಖಬರಿನಲ್ಲಿ ದಫನ ಮಾಡುವುದಕ್ಕೆ ಅಡ್ಡಿಯುಂಟಾಗುತ್ತದೆ ಎಂದಾಗಿದೆ.ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೇನೆಂದರೆ ದಫನ್ ಗಾಗಿ ವಖಫ್ ಮಾಡಲ್ಪಟ್ಟ ಅಥವಾ ಮುಸಬ್ಬಲ್ ಆದ ಭೂಮಿಯಲ್ಲಿ ಸಾಮನ್ಯರ ಖಬರನ್ನು ಎತ್ತರಿಸಿ ಕಟ್ಟುವುದು ಮಾತ್ರವಲ್ಲ ನಿಷಿದ್ಧವಾಗುವುದು, ಹೊರತು ಅಲ್ಲಿ ಮದ್ರಸಾ , ಅಂಗಡಿ ಹಾಗೂ ಇನ್ನಿತರ ಕಟ್ಟಡಗಳನ್ನೂ ಕೂಡಾ ನಿರ್ಮಿಸುವುದು ನಿಷಿದ್ಧವಾಗಿದೆ.
ಇಲ್ಲೂ ಕೂಡಾ ಸಲಪಿಗಳೊಂದಿಗೆ ಒಂದೆರಡು ಪ್ರಶ್ನೆಗಳು.
1.
ಮೌಖೂಫ್ ಅಥವಾ ಮುಸಬ್ಬಲತ್ ಆದ ಭೂಮಿಯಲ್ಲಿ ಖಬರ್ ಕಟ್ಟುವುದು ಖಬರ್ ಆರಾಧನೆ ಎಂದು ಯಾವುದೇ ಪೂರ್ವೀಕ ವಿಧ್ವಾಂಸರು ಹೇಳಿದ್ದಾರೆಯೇ?
2.
ಅದು ಶಿರ್ಕೆಂದು ತಿಳಿಸುವ ಯಾವುದಾದರೊಂದು ಸೂಕ್ತ ಅಥವಾ ಹದೀಸ್ ತೋರಿಸಿ ಕೊಡಬಹುದೇ?
ಇದುವರೆಗೆ ಸಾಮಾನ್ಯ ವ್ಯಕ್ತಿಯ ಖಬರನ್ನು ಆತನ ಸ್ವಂತ ಭೂಮಿಯಲ್ಲೂ , ಮೌಖೂಫ್ ಆದ ಅಥವಾ ಸಾರ್ವಜನಿಕ ಭೂಮಿಯಲ್ಲೂ ಕಟ್ಟುವುದರ ಕುರಿತು ತಿಳಿದು ಕೊಂಡಾಯಿತು.
ಇನ್ನು ನಾಲ್ಕನೆಯದಾಗಿ ತಿಳಿಸಿದ ಮಹಾಪುರುಷರ ಖಬರ್ ಗಳ ಕುರಿತು ಪರಿಶೀಲಿಸೋಣ.
ಸಾಮಾನ್ಯ ವ್ಯಕ್ತಿಯ ಖಬರನ್ನು ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವುದು ನಿಷಿದ್ಧವೆಂದು ಹೇಳಿದ ವಿಧ್ವಾಂಸರು ಮಹಾ ಪುರುಷರ ಖಬರನ್ನು ಎತ್ತರಿಸಿ ಕಟ್ಟಬಹುದೆಂದು ತಮ್ಮ ಗ್ರಂಥಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಮಾಮ್ ಶರ್ಖಾವೀ ರಳಿಯಲ್ಲಾಹು ಅನ್ಹು ಹೇಳುವುದನ್ನು ನೋಡಿ.
" ಸಾರ್ವಜನಿಕ ದಫನ್ ಭೂಮಿಯಲ್ಲಿ ಕಟ್ಟುವಿಕೆ ಹರಾಮ್ ಎಂಬ ನಿಯಮದಿಂದ ಅಂಬಿಯಾಗಳು , ಅವ್ ಲಿಯಾಗಳು ಮುಂತಾದ ಸಜ್ಜನರ ಖಬ್ ರ್ ಗಳನ್ನು ಹೊರತು ಪಡಿಸಲಾಗಿದೆ.
ಅದ್ದರಿಂದ ಝಿಯಾರತ್ ಜೀವಂತ ಗೊಳಿಸಲಿಕ್ಕೂ ಬರ್ಕತ್ ಗಾಗಿಯೂ ಅವರ ಖಬರ್ ಗಳನ್ನು ಎತ್ತರಿಸಿ ಕಟ್ಟಬಹುದಾಗಿದೆ.
( ಶರ್ಖಾವೀ 345 / 1)
ಇಮಾಮ್ ಬುಜೈರಿಮಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಸಜ್ಜನರ ಸಮಾಧಿಗಳನ್ನು ಕಟ್ಟುವುದು ಅನುವದನೀಯವಾಗಿದೆ.ಅದು ಖುಬ್ಬ ನಿರ್ಮಿಸಿಯಾದರೂ ತೊಂದರೆಯಿಲ್ಲ.ಅದಕ್ಕಿರುವ ಕಾರಣ ಝಿಯಾರತನ್ನು ಜೀವಂತಗೊಳಿಸುವುದು ಮತ್ತು ಬರ್ಕತ್ ಸಂಪಾದಿಸುವುದೂ ಆಗಿದೆ.
( ಇಖ್ ನಾಅ್ 263 / 2)
ಇಮಾಮ್ ಬುಜೈರಿಮಿಯವರೇ ಹೇಳುತ್ತಾರೆ,
" ಮೌಖೂಫ್ ಆದ ದಫನ್ ಭೂಮಿಯಲ್ಲಿ ಕಟ್ಟುವಿಕೆ ನಿಷಿದ್ಧವೆಂದು ಹೇಳಿದ್ದು ಸಜ್ಜನರ ಖಬ್ ರಗಳ ಕುರಿತಲ್ಲ.
( ಬುಜೈರಿಮಿ 496 / 1)
ಇದೇ ವಿಷಯವನ್ನು ಹಾಶಿಯತುಲ್ ಬರ್ಮಾವೀ , ಪುಟ 116 ರಲ್ಲೂ , ಬಾಜೂರಿ 267 / ರಲ್ಲೂ, ಫತ್ ಹುಲ ಅಲ್ಲಾಂ 288/ 3 , ಮಶಾರಿಖುಲ್ ಅನ್ವಾರ್ 32 ರಲ್ಲೂ ಕಾಣಬಹುದು.
ಇಮಾಮ್ ತೌರಬಶ್ತಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ, " ಅವ್ ಲಿಯಾಗಳ ಹಾಗೂ ಪ್ರಸಿದ್ಧರಾದ ಖಬರಿನ ಮೇಲೆ ಕಟ್ಟಡ ನಿರ್ಮಿಸುವುದನ್ನು ಸಲಫ್ ಅಥವಾ ಸ್ವಹಾಬಿಗಳು ಅನುಮತಿಸಿದ್ದರು.ಅದು ಜನರು ಅವರನ್ನು ಸಂದರ್ಶಿಸಲಿಕ್ಕೂ ಹಾಗೂ ಅವರ ಬಳಿ ಮನಶ್ಶಾಂತಿ ಪಡೆಯಲಿಕ್ಕೂ ಆಗಿದೆ.( ಮಿರ್ಖಾತ್ 372/ 2)
ಅದೇ ರೀತಿ ಫತ್ ಹುಲ್ ಅಲ್ಲಾಂ 228 / 1 ,
ಹಾಶಿಯತುಲ್ ಬಾಜೂರಿ 267 /1 , ಹಾಶಿಯತುಲ್ ಬರ್ಮಾವೀ 116 , ಹಾಶಿಯತುಲ್ ಖಲ್ ಯೂಬಿ
350 / 1 ಮುಂತಾದ ಗ್ರಂಥಗಳಲ್ಲಿ ಕಾಣಬಹುದು.
ಸಲಫ್ ಅಂದರೆ ಸ್ವಹಾಬಿಗಳು ಎಂದರ್ಥವಾಗಿದೆ.
ಆಗ ಬಹು ! ಇಮಾಂ ತೌರಬಶ್ತಿ ಯವರ ಮಾತಿನ ಪ್ರಕಾರ ಸಜ್ಜನರ ಖಬ್ ರ್ ಗಳ ಮೇಲೆ ಕಟ್ಟಡ ನಿರ್ಮಿಸುವುದು ಸ್ವಹಾಬಿಗಳೇ ಅನುಮತಿಸಿದ್ದರು ಎಂದು ತಿಳಿದು ಬರುತ್ತದೆ.
ವಸಿಯ್ಯತ್ ಮಾಡುವಾಗ ಅದು ಅನುವದನೀಯವಾದ ಕಾರ್ಯಕ್ಕಾಗಿರಬೇಕೆಂಬ ಇಮಾಮ್ ನವವೀ ರಲಿಯಲ್ಲಾಹು ಅನ್ಹು ರವರ ಮಾತನ್ನು ವಿವರಿಸುತ್ತಾ ಇಮಾಮ್ ಮುಹಮ್ಮದ್ ಶಿರ್ಬೀನಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಪಾಪಕರವಲ್ಲ ಎಂಬುವುದು ಬಡವರಿಗೆ , ಮಸೀದಿ ನಿರ್ಮಾಣಕ್ಕೆ ಹಾಗೂ ಅಂಬಿಯಾಗಳ ಖಬರನ್ನು ಕಟ್ಟುವಿಕೆಗೆ ಮಾಡುವ ವಸಿಯ್ಯತನ್ನೂ ಒಳಪಡಿಸುತ್ತದೆ.
ಬಹು ! ಇಮಾಮ್ ಅಬೂ ಮುಹಮ್ಮದ್ ರಲಿಯಲ್ಲಾಹು ಅನ್ಹು ರವರು, ವಿದ್ವಾಂಸರ ಹಾಗೂ ಸಜ್ಜನರ ಖಬರ್ ಗಳನ್ನು ಇದರಲ್ಲಿ ಒಳಪಡಿಸಿದ್ದಾರೆ.ಅರ್ಥಾತ್ ಅವರ ಖಬರ್ ಗಳನ್ನು ಕಟ್ಟುವುದು ಅನುವದನೀಯವಾಗಿದೆ.ಏಕೆಂದರೆ ಅದರಲ್ಲಿ ಅವರ ಖಬರ್ ಸಂದರ್ಶನವನ್ನು ಜೀವಂತಗೊಳಿಸುವುದು ಮತ್ತು ಬರ್ಕತ್ ಪಡೆಯುವುದು ಎಂಬ ಪುಣ್ಯ ಕಾರ್ಯವು ಅಡಗಿದೆ.( ಮುಗ್ನಿ 40/ 3)
ನೋಡಿ, ಅಂಬಿಯಾಗಳ ,
ಅವ್ ಲಿಯಾಗಳ ಹಾಗೂ ಸಜ್ಜನರ ಖಬರ್ ಗಳನ್ನು ಎತ್ತರಿಸಿ ಕಟ್ಟುವುದಕ್ಕಾಗಿ ವಸಿಯ್ಯತ್ ಮಾಡಬಹುದೆಂದೂ ಅದು ಅಲ್ಲಾಹನಿಗಾಗಿರುವ ಆರಾಧನೆಯೆಂದೂ ಪೂರ್ವಿಕ ವಿದ್ವಾಂಸರು ಅತ್ಯಂತ ಸ್ಪಷ್ಟವಾಗಿ ತಿಳಿಸಿದ್ದಾರೆ.
ಅದೇ ರೀತಿ ಇಮಾಮ್ ಇಬ್ನ್ ಹಜರ್ ರವರು ತನ್ನ
ತುಹ್ಫಾ5/7 ರಲ್ಲೂ ಸ್ಪಷ್ಟಪಡಿಸಿದ್ದನ್ನು ಕಾಣಬಹುದು.
ಇಷ್ಟರವರೆಗಿನ ವಿವರಣೆಯಿಂದ ಈ ಕೆಳಗಿನ ಅಂಶಗಳು ಸ್ಪಷ್ಟವಾಯಿತು.
1.
ಸಾಮಾನ್ಯ ವ್ಯಕ್ತಿಯ ಖಬರನ್ನು ಸ್ವಂತ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದು ಕರಾಹತ್ ಮಾತ್ರವಾಗಿದೆ.
ಅದು ಶಿರ್ಕ್ , ಕುಫ್ರ್ ಅಲ್ಲ.
2.
ಸಾಮಾನ್ಯ ವ್ಯಕ್ತಿಯ ಖಬರನ್ನು ಸಾರ್ವಜನಿಕ ದಫನ್ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದು ನಿಷಿದ್ಧವಾಗಿದೆ.
3.
ಸಾರ್ವಜನಿಕ ದಫನ ಭೂಮಿಯಲ್ಲಿ ಸಾಮಾನ್ಯನೊಬ್ಬನ ಖಬರನ್ನು ಎತ್ತರಿಸಿ ಕಟ್ಟುವುದು ಹರಾಮ್ ಆಗಲು ಕಾರಣ ಇತರರ ಅವಕಾಶಕ್ಕೆ ಅಡ್ಡಿಯುಂಟಾಗುವುದರಿಂದಾಗಿದೆ.
4.
ಸ್ವಂತ ಭೂಮಿಯಲ್ಲಿ ಕರಾಹತ್ ಆಗಲು ಕಾರಣ ಅನಪೇಕ್ಷಿತ ಸೌಂದರ್ಯ ಹಾಗೂ ಜಂಭತನವಾಗಿದೆ.
5.
ಖಬರ್ ಕಟ್ಟುವಿಕೆ ಎಂಬ ಕಾರಣಕ್ಕಾಗಿ ಅದು ನಿಷಿದ್ಧವಲ್ಲ.
6.
ಪೂರ್ವಿಕ ವಿದ್ವಾಂಸರ್ಯಾರೂ ಖಬರ್ ಎತ್ತರಿಸಿ ಕಟ್ಟುವುದು ಶಿರ್ಕ್, ಬಿದ್ ಅತ್ ಎಂದು ಹೇಳಿಲ್ಲ.
7.
ಮಹಾ ಪುರುಷರ ಖಬರನ್ನು ಸಾರ್ವಜನಿಕ ದಫನ ಭೂಮಿಯಲ್ಲಿ ಎತ್ತರಿಸಿ ಕಟ್ಟುವುದು ಅನುವದನೀಯವಾಗಿದೆ.
8.
ಮಹಾ ಪುರುಷರ ಖಬರ್ ಗಳ ಮೇಲೆ ಕಟ್ಟಡ ನಿರ್ಮಿಸುವುದನ್ನು ಸ್ವಹಾಬಿಗಳೇ ಅನುಮತಿಸಿದ್ದರು.
9.
ಖಬರ್ ಎತ್ತರಿಸಿ ಶಿರ್ಕ್ , ಬಿದ್ ಅತ್ ಎಂದು ತಿಳಿಸುವ ಒಂದೇ ಒಂದು ಆಯತ್ ನ್ ಅಥವಾ ಹದೀಸ್ ನ ತುಣುಕು ಕೂಡಾ ಇಲ್ಲ.
10.
ಈ ವಿಷಯದಲ್ಲಿ ನೂತನವಾದಿಗಳು ಪ್ರಚಾರಪಡಿಸುತ್ತಿರುವ ಕಾರ್ಯಗಳು ಶುದ್ಧ ಕಾಪಟ್ಯದಿಂದ ಕೂಡಿದೆ.
ಖುರ್ ಆನಿನ ದೃಷ್ಟಿಯಲ್ಲಿ.........
ಸಜ್ಜನರ ಖಬರ್ ಗಳನ್ನು ಎತ್ತರಿಸಿ ಕಟ್ಟುವುದು ನಿಷಿದ್ಧವೆಂದು ಪವಿತ್ರ ಖುರ್ ಆನಿನಲ್ಲಿ ಎಲ್ಲೂ ಕಾಣಲು ಸಾಧ್ಯವಿಲ್ಲವೆಂದು ಈಗಾಗಲೇ ಸ್ಪಷ್ಟಪಡಿಸಲಾಯಿತು.
ಇನ್ನು ಪವಿತ್ರ ಖುರ್ ಆನಿನಲ್ಲಿ ಇದನ್ನು ಅನುಮತಿಸಲಾಗಿದೆಯೇ ಎಂಬುವುದನ್ನು ನೋಡೋಣ. ಅಲ್ಲಾಹು ಹೇಳುತ್ತಾನೆ,
" ಅವರ ಮೇಲೆ ಆಧಿಪತ್ಯವಿರುವವರು ನಾವು ಅವರ ಗುಹೆಯ ಮೇಲೆ ಮಸೀದಿಯನ್ನು ನಿರ್ಮಿಸುತ್ತೇವೆ ಎಂದು ಹೇಳಿದರು." ( ಅಲ್ ಕಹ್ಫ್ 21)
ಗುಹೆ ನಿವಾಸಿಗಳು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಆಗಮನಕ್ಕಿಂತ ಮುಂಚೆ ದಖ್ ಯಾನೂಸ್ ಎಂಬ ಅರಸನ ಕಾಲದಲ್ಲಿ ಅಲ್ಲಾಹನನ್ನು ಮಾತ್ರ ಆರಾಧಿಸಿದ ಏಳು ಯುವಕರು) ವಾಸಿಸಿದ ಗುಹೆಯ ಮೇಲೆ ಅಂದಿನ ಮುಸ್ಲಿಮರು ಮಸೀದಿ ನಿರ್ಮಿಸಲು ತೀರ್ಮಾನಿಸಿದುದರ ಕುರಿತಾಗಿದೆ ಅಲ್ಲಾಹನು ಇಲ್ಲಿ ತಿಳಿಸಿದ್ದು ಇದರ ವ್ಯಾಖ್ಯಾನದಲ್ಲಿ ಕುರ್ ಆನ್ ವ್ಯಾಖ್ಯಾನಗಾರರು ಹೇಳುವುದನ್ನು ನೋಡಿ.
ಬಹು ! ಇಮಾಮ್ ಇಸ್ಮಾಯಿಲ್ ಹಿಖ್ಖಿ ( ರ) ರವರು ಹೇಳುತ್ತಾರೆ.
( ಅದರ ಮೇಲೆ ನಾವು ಮಸೀದಿ ನಿರ್ಮಿಸುತ್ತೇವೆ ಎಂಬುವುದರ ತಾತ್ಪರ್ಯ ) ಅವರ ಗುಹೆಯ ದ್ವಾರದ ಮೇಲೆ ಮುಸ್ಲಿಮರು ನಮಾಜು ಮಾಡಲಿಕ್ಕೂ , ಗುಹೆ ನಿವಾಸಿಗಳು ವಾಸಿಸಿದ ಸ್ಥಳದಿಂದ ಬರ್ಕತ್ ಪಡೆಯಲಿಕ್ಕೂ ನಾವು ಮಸೀದಿ ನಿರ್ಮಿಸುತ್ತೇವೆ ಎಂದಾಗಿದೆ.
( ರೂಹುಲ್ ಬಯಾನ್ 232/ 5)
ಇಮಾಮ್ ನಸಫೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
"ಮುಸ್ಲಿಮರು ನಮಾಝ್ ಮಾಡುವ ಹಾಗೂ ಗುಹೆ ನಿವಾಸಿಗಳು ವಾಸಿಸಿದ ಸ್ಥಳದ ಬರ್ಕತ್ ಪಡೆಯುವ ಮಸೀದಿಯನ್ನು ನಿರ್ಮಿಸಿದರು."( ತಪ್ಸೀರುನ್ನಸಫೀ 284/2)
ಇಮಾಮ್ ರಾಝಿ ಹೇಳುತ್ತಾರೆ,
" ನಾವು ಅದರಲ್ಲಿ ಆರಾಧಿಸುತ್ತೇವೆ ಹಾಗೂ ಗುಹೆ ನಿವಾಸಿಗಳ ಗುರುತು ಅವಶೇಷಿಸುವಂತೆ ಮಾಸುತ್ತೇವೆ ಎಂದು ಅಂದಿನ ಮುಸ್ಲಿಮರು ಹೇಳಿದರು." ( ರಾಝಿ 106/ 21)
ಅಲ್ಲಾಮಾ ಮಲ್ ಹರೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
ಅದರಲ್ಲಿ ಮುಸ್ಲಿಮರು ನಮಾಝು ಮಾಡುತ್ತಾರೆ ಹಾಗೂ ಗುಹೆ ನಿವಾಸಿಗಳಿಂದ ಬರ್ಕತ್ ಪಡೆಯುತ್ತಾರೆ".
( ತಫ್ಸೀರುಲ್ ಮಲ್ ಹರೀ 23 / 6 )
ಇಮಾಮ್ ಶಿಹಾಬ್ ರಲಿಯಲ್ಲಾಹು ಅನ್ಹು ಹೇಳುತ್ತಾರೆ ,
ಅಲ್ಲಿ ಮಸ್ಜಿದ್ ನಿರ್ಮಿಸುವುದು , ಸಜ್ಜನರ ಖಬರ್ ಗಳ ಮೇಲೆ ಕಟ್ಟಡ ನಿರ್ಮಿಸುವುದು ಅನುವದನೀಯ ಎಂಬುವುದನ್ನು ತಿಳಿಸುತ್ತದೆ" .
( ಹಾಶಿಯತುಶ್ಶಿಹಾಬ್ 87/ 6)
ಬಹು ! ಇಮಾಮ್ ಶೈಖ್ ಝಾದ ರಳಿಯಲ್ಲಾಹು ಅನ್ಹು ಹೇಳುತ್ತಾರೆ ,
ಅಂದಿನ ರಾಜರು ಗುಹೆಯ ದ್ವಾರದಲ್ಲಿ ಮಸ್ಜಿದ್ ನಿರ್ಮಿಸಿ ಅಲ್ಲಿ ಬೃಹತ್ ಸಮಾರಂಭಗಳನ್ನು ನಡೆಸಲೂ , ಪ್ರತೀ ವರ್ಷ ಅಲ್ಲಿ ಜನರು ಒಟ್ಟು ಸೇರಲೂ ಆದೇಶಿದ್ದರು."
(ಶೈಖ್ ಝಾದ 254 / 3 )
ಇಮಾಮ್ ಇಬ್ನ್ ಜರೀರ್ ಆತ್ತಿಬ್ ರೀ ರಳಿಯಲ್ಲಾಹು ಅನ್ಹು ಹೇಳುತ್ತಾರೆ,
"ಅಂದಿನ ರಾಜರು ಅವರ ಗುಹೆಯನ್ನು ನಮಾಝು ಮಾಡಲ್ಪಡುವ ಮಸೀದಿಯಾಗಿ ನಿರ್ಮಿಸಿದರಲ್ಲದೇ ಅಲ್ಲಿ ಬೃಹತ್ ಸಮಾರಂಭಗಳನ್ನು ನಡೆಸಿದರು. ಮಾತ್ರವಲ್ಲ ಪ್ರತೀ ವರ್ಷ ಜನರೆಲ್ಲರೂ ಅಲ್ಲಿ ಒಟ್ಟು ಸೇರಲೂ ಆದೇಶಿಸಿದ್ದರು."( ಜಾಮಿಉಲ್ ಬಯಾನ್ 147/ 15)
ಮಹಾ ಪುರುಷರಾಗಿದ್ದ ಗುಹೆ ನಿವಾಸಿಗಳು ವಾಸಿಸಿದ ಸ್ಥಳದಲ್ಲಿ ಅಂದಿನ ಮುಸ್ಲಿಮರು ಅವರ ಬರ್ಕತ್ ಪಡೆಯಲು ಕಟ್ಟಡ ನಿರ್ಮಿಸಿ ಅದರಲ್ಲಿ ನಮಾಜು ಮಾಡುತ್ತಿದ್ದರೆಂದು ಪವಿತ್ರ ಖುರ್ ಆನ್ ಯಾವುದೇ ಸಂಶಯಕ್ಕೆ ಎಡೆಯಿಲ್ಲದೆ ತಿಳಿಸುತ್ತದೆ.ಇದರಿಂದ ಮಹಾ ಪುರುಷರು ಸಂಪರ್ಕವಿರಿಸಿದ ಸ್ಥಳಕ್ಕೆ ಮಹತ್ವವಿದೆಯೆಂದೂ ತಿಳಿದು ಬರುತ್ತದೆ.ಮಾತ್ರವಲ್ಲ ಅಂದಿನ ಮುಸ್ಲಿಮರು ಅಲ್ಲಿ ವರ್ಷಕ್ಕೊಮ್ಮೆ ಸೇರುತ್ತಿದ್ದರು ಹಾಗೂ ಸಮಾರಂಭ ನಡೆಸುತ್ತಿದ್ದರು ಎಂಬುವುದರಿಂದ ಮಹಾ ಪುರುಷರ ದರ್ಗಾಗಳ ಬಳಿ ಉರೂಸ್ ನಡೆಸುವುದು ಉತ್ತಮ ಕಾರ್ಯವೆಂದೂ ಸ್ಪಷ್ಟವಾಗುತ್ತದೆ.
ಅದೇ ರೀತಿ ಔಲಿಯಾಗಳ ದರ್ಗಾಗಳ ಮೇಲೆ ಕಟ್ಟಡ ನಿರ್ಮಿಸುವುದು ಉತ್ತಮ ಕಾರ್ಯವೆಂದೂ ವೇದ್ಯವಾಗುತ್ತದೆ.
ಇಮಾಮ್ ನವವೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಮುಸ್ಲಿಮನಿಗೂ , ದ್ಸಿಮ್ಮಿ ( ಮುಸ್ಲಿಂ ರಾಷ್ಟ್ರದಲ್ಲಿ ಸರಕಾರಕ್ಕೆ ತೆರಿಗೆ ಕೊಟ್ಟು ಜೀವಿಸುವ ಅಮುಸ್ಲಿಮ್ ) ಗೂ ಮಸ್ಜಿದ್ಲ್ ಅಖ್ಸಾ ಹಾಗೂ ಇತರ ಮಸೀದಿಗಳ ಜೀರ್ಣೋದ್ದಾರಕ್ಕೂ ಮತ್ತು ಪ್ರವಾದಿಗಳ , ವಿದ್ವಾಂಸರ ಹಾಗೂ ಸಜ್ಜನರ ಖಬರ್ ಗಳ್ ಜೀರ್ಣೋದ್ದಾರಕ್ಕೂ ವಸಿಯ್ಯತ್ ಮಾಡಬಹುದಾಗಿದೆ.ಏಕೆಂದರೆ ಅದರಲ್ಲಿ ಝಿಯಾರತನ್ನು ಜೀವಂತಗೊಳಿಸುವುದು ಮತ್ತು ಬರ್ಕತ್ ಪಡೆಯುವುದು ಎಂಬ ಪುಣ್ಯ ಕಾರ್ಯವು ಒಳಗೊಂಡಿದೆ." ( ರೌಳ 98/6)
ಇಮಾಮ್ ಗಝ್ಝಾಲಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ಅಂಬಿಯಾಗಳ ಖಬರ್ ಗಳ ಜೀರ್ಣೋದ್ದಾರಕ್ಕಾಗಿ ವಸಿಯ್ಯತ್ ಮಾಡುವುದು ಅನುವದನೀಯವಾಗಿದೆ.
( ವಜೀಝ್ 162/ 1)
ಇನ್ನಷ್ಟು ಪುರಾವೆಗಳು .......
ಸುಫ್ಯಾನುತ್ತಮ್ಮಾರ್ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ನಾನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಖಬರ್ ಶರೀಫನ್ನು ಕಂಡಿದ್ದೇನೆ.ಅದು ಭೂಮಿಯಿಂದ ಎತ್ತರಿಸಲ್ಪಟ್ಟಿತ್ತು." (ಬುಖಾರಿ 186/1)
ಇದರ ವ್ಯಾಖ್ಯಾನದಲ್ಲಿ ಇಮಾಮ್ ಇಬ್ನ್ ಹಜರುಲ್ ಅಸ್ಕಲಾನಿ ಹೇಳುತ್ತಾರೆ,
" ಮುಸನ್ನಮ್ ಎಂದರೆ ಎತ್ತರಿಸಲ್ಪಟ್ಟಿತ್ತು ಎಂದಾಗಿದೆ".
( ಫತ್ ಹುಲ್ ಬಾರಿ 417/ 4
ಅರಬೀ ನಿಘಂಟುವಾದ ಮುಅ್ ಜಮುಲ್ ವಸೀತ್ ನಲ್ಲಿ ಸನ್ನಮ ಎಂಬುದುರ ಅರ್ಥ ವಿವರಿಸುವುದನ್ನು ನೋಡಿ,
" ಸನ್ನಮ ಎಂದರೆ ಸಮತಲಗೊಳಿಸದೆ ಒಂಟೆಯ ಡುಬ್ಬದಂತೆ ಭೂಮಿಯಿಂದ ಎತ್ತರಿಸುವುದಾಗಿದೆ."
( ಮುಅ್ ಜಮುಲ್ ವಸೀತ್ 455)
ಇದರಿಂದ ಮುಸನ್ನಮ್ ಎಂದರೆ ಕೇವಲ ಉಬ್ಬುಗೊಳಿಸಲ್ಪಟ್ಟದ್ದು ಮಾತ್ರವಲ್ಲ ಭೂಮಿಯಿಂದ ಎತ್ತರಿಸಲ್ಪಟ್ಟದ್ದೂ ಕೂಡಾ ಆಗಿದೆಯೆಂದು ವ್ಯಕ್ತವಾಯಿತು.ಆದ್ದರಿಂದ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲನರ ಖಬರ್ ಶರೀಫ್ ಭೂಮಿಯಿಂದ ಎತ್ತರಿಸಲ್ಪಟ್ಟಿತ್ತು ಎಂದು ವ್ಯಕ್ತವಾಯಿತು.
ಬಹುಮಾನ್ಯರಾದ ಖಾರಿಜತ್ ಬಿನ್ ಝೈದ್ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
"ನನಗೆ ಗೊತ್ತಿದೆ , ನಾವು ಯುವಕರಾಗಿದ್ದಾಗ ಅಂದರೆ ಉಸ್ಮಾನ್ ರಲಿಯಲ್ಲಾಹು ಅನ್ಹು ರವರ ಕಾಲದಲ್ಲಿ ಉಸ್ಮಾನ್ ಬಿನ್ ಮಳ್ ಊನ್ ರಲಿಯಲ್ಲಾಹು ಅನ್ಹುರವರ ಖಬರಿನಷ್ಟು ಜಿಗಿಯುವವನು ನಮ್ಮ ಪೈಕಿ ಅತೀ ದೊಡ್ಡ ಜಿಗಿತಗಾರನಾಗಿದ್ದನು."
( ಬುಖಾರಿ 181/1)
ಆ ಸ್ವಹಾಬಿಯ ಖಬರಿನ ಎತ್ತರಕ್ಕೆ ಜಿಗಿಯುವವನನ್ನು ಅತೀ ದೊಡ್ಡ ಜಿಗಿತಗಾರನಾಗಿ ಪರಿಗಣಿಸಬೇಕಾದರೆ ಅವರ ಖಬರ್ ಅತೀ ಎತ್ತರವಾಗಿತ್ತೆಂದು ಸ್ಪಷ್ಟವಲ್ಲವೇ?
ಇದರ ವ್ಯಾಖ್ಯಾನದಲ್ಲಿ ಇಮಾಮ್ ಅಸ್ಖಲಾನಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
ಈ ಹದೀಸಿನಿಂದ ಖಬರನ್ನು ಭೂಮಿಯಿಂದ ಎತ್ತರಿಸುವುದು ಅನುವದನೀಯವೆಂದು ತಿಳಿದು ಬರುತ್ತದೆ." ( ಫತ್ ಹುಲ್ ಬಾರಿ 365/ 4)
ಕಟ್ಟಡ ನಿರ್ಮಿಸುವುದು.......
ಸಜ್ಜನರ ಖಬರ್ ಗಳ ಸುತ್ತಲಿನಿಂದಲೂ ಝಿಯಾರತ್ ಗೆ ಬರುವವರ ಆವಶ್ಯಕತೆಗಾಗಿ ಕಟ್ಟಡ ನಿರ್ಮಿಸುವುದು ಅನುವದನೀಯವಾಗಿದೆ.ಏಕೆಂದರೆ ಖಬರ್ ಗಳ ಬಳಿ ಪ್ರಾರ್ಥಿಸಲಿಕ್ಕಾಗಿಯೂ , ಅವರ ಬರ್ಕತ್ ಪಡೆಯಲಿಕ್ಕಾಗಿಯೂ ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುತ್ತಾರೆ.ಆ ಸಂದರ್ಭದಲ್ಲಿ ಅವರಿಗೆ ಮಳೆ , ಬಿಸಿಲಿನಿಂದ ರಕ್ಷಣೆ ಸಿಗಲಿಕ್ಕಾಗಿ ಕಟ್ಟಡ ನಿರ್ಮಾಣವು ಅಗತ್ಯವೆನಿಸುತ್ತದೆ.ಇಂತಹ ಆವಶ್ಯಕತೆಗಾಗಿ ಕಟ್ಟಡ ನಿರ್ಮಿಸುವುದು ಶಿರ್ಕ್ ಬಿದ್ ಅತ್ ಆಗುವುದಿಲ್ಲ.
ಜಗತ್ತಿನಲ್ಲಿ ಯಾವುದೇ ಒಬ್ಬ ವಿದ್ವಾಂಸನೂ ಕೂಡಾ ಹಾಗೆ ಹೇಳಿಲ್ಲ.ಖುರ್ ಆನಿನಲ್ಲೋ , ಹದೀಸ್ ನಲ್ಲೋ ಇದರ ಕುರಿತು ಯಾವುದೇ ವಿರೋಧವೂ ವರದಿಯಾಗಿಲ್ಲ. ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರನ್ನೇ ದಫನ್ ಮಾಡಿದ್ದು ಕಟ್ಟಡದ ಒಳಗಡೆಯಾಗಿದೆ. ಅದೇ ರೀತಿ ಅಬೂಬಕರ್ ಸಿದ್ದೀಕ್ ರಲಿಯಲ್ಲಾಹು ಅನ್ಹು ಹಾಗೂ ಉಮರ್ ರಲಿಯಲ್ಲಾಹು ಅನ್ಹುರವರನ್ನೂ ಅದೇ ಕಟ್ಟಡದೊಳಗೆ ದಫ್ನ್ ಮಾಡಲಾಗಿದೆ.ಖಬರಿನ ಸುತ್ತಲೂ ಕಟ್ಟಡ ನಿರ್ಮಿಸುವುದು ಇಸ್ಲಾಮಿಗೆ ವಿರುದ್ಧವಾಗಿದ್ದರೆ ಅಥವಾ ಶಿರ್ಕ್ ಆಗಿದ್ದರೆ ಅವರನ್ನು ಕಟ್ಟಡದೊಳಗೆ ಸ್ವಹಾಬಿಗಳು ದಫನ್ ಮಾಡುತ್ತಿದ್ದರೇ ?
ಇನ್ನು ಕೆಲವರು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಅಲ್ಲಿ ದಫನ್ ಮಾಡಿದ್ದು ವಫಾತ್ ಆದ ಸ್ಥಳದಲ್ಲೇ ತನ್ನನ್ನು ದಫನ್ ಮಾಡಬೇಕೆಂದು ಪ್ರವಾದಿ ಹೇಳಿದ್ದರಿಂದಾಗಿದೆ ಎಂದು ಹೇಳುವುದುಂಟು.ಆದರೆ ನೂತನವಾದಿಗಳ ಸಂಬಂದಿಸಿ ಇದು ಅರ್ಥಹೀನವಾಗಿದೆ.ಏಕೆಂದರೆ ಕಟ್ಟಡ ನಿರ್ಮಿಸುವುದು ಶಿರ್ಕ್ ಆಗಿದ್ದರೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರಸ್ತುತ ಆದೇಶಕ್ಕಿಂತಲೂ ಹೆಚ್ಚು ಪ್ರಾಮುಖ್ಯತೆ ನೀಡಬೇಕಾದದ್ದು ಶಿರ್ಕಾಗುವ ಒಂದು ಕಾರ್ಯವನ್ನು ತ್ಯಜಿಸುವುದಕ್ಕಾಗಿದೆ.ಏಕೆಂದರೆ ಶಿರ್ಕ್ ಎಂಬುವುದು ಅಲ್ಲಾಹನು ಮನ್ನಿಸದ ಅತೀ ದೊಡ್ಡ ಪಾಪವೂ ಇಸ್ಲಾಮಿನಿಂದ ಭೃಷ್ಟ ಗೊಳ್ಳುವ ಕಾರ್ಯವೂ ಆಗಿದೆ.ಆದ್ದರಿಂದಲೇ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಮೇಲಿನಂತೆ ಹೇಳಿದ್ದರೂ ಅವರ ಸಂಬಂದಿಸಿ ಅಲ್ಲಿ ದಫನ್ ಮಾಡುವುದು ಶಿರ್ಕಾಗುವುದರಿಂದ ಹೊರಗಡೆ ದಫನ್ ಮಾಡಬೇಕಾಗಿತ್ತಲ್ಲವೇ ? ಅಥವಾ ಕಟ್ಟಡವನ್ನು ಕೆಡವಿ ಅದೇ ಸ್ಥಳದಲ್ಲಿ ದಫನ್ ಮಾಡಬಹುದಿತ್ತಲ್ಲವೇ ?
ಏಕೆಂದರೆ ಮರಣ ಹೊಂದಿದ ಸ್ಥಳದಲ್ಲೇ ದಫನ್ ಮಾಡಿರಿ ಎಂದಲ್ಲದೆ ಕಟ್ಟಡದ ಒಳಗಡೆ ನನ್ನನ್ನು ದಫನ್ ಮಾಡಿರಿ ಎಂದು ಹೇಳಿಲ್ಲ ತಾನೇ?
ಇನ್ನು ಅದನ್ನು ಸಮ್ಮತಿಸಿದರೂ ಕೂಡಾ ಬಹು ! ಅಬೂಬಕರ್ ಹಾಗೂ ಉಮರ ರಲಿಯಲ್ಲಾಹು ಅನ್ ಹುಮಾ ರವರನ್ನು ಅದೇ ಕಟ್ಟಡದೊಳಗೆ ದಫನ್ ಮಾಡಿದ್ದಾದರೂ ಯಾತಕ್ಕೆ? ಖಬರಿನ ಮೇಲ್ಭಾಗದಲ್ಲಿ ಕಟ್ಟಡ ಇರುವುದು ಶಿರ್ಕಾಗಿದ್ದರೆ ಅವರನ್ನು ಹೊರಗಡೆ ದಫನ್ ಮಾಡಬೇಕಿತ್ತಲ್ಲವೇ ?
ಇನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಹಾಗೂ ಆ ಎರಡು ಸ್ವಹಾಬಿಗಳನ್ನು ದಫನ್ ಮಾಡುವಾಗಲೇ ಅಲ್ಲಿ ಕಟ್ಟಡವಿತ್ತು.ದಫನ್ ಮಾಡಿದ ನಂತರ
ಅವರು ಕಟ್ಟಡ ನಿರ್ಮಿಸಲಿಲ್ಲ ಎಂದು ಹೇಳುವುದಾದರೆ ಮೊದಲು ಕಟ್ಟಡ ನಿರ್ಮಿಸಿ ನಂತರ ಸಜ್ಜನರನ್ನು ಅದರಲ್ಲಿ ದಫನ್ ಮಾಡುವುದಾದರೆ ಅದು ತೊಂದರೆಯಿಲ್ಲ ಎಂದು ಹೇಳಲು ಇವರು ಸಿದ್ಧರಿದ್ದಾರೆಯೇ?
ಒಟ್ಟಿನಲ್ಲಿ ಸೊಳಪಿಗಳ ವಾದಕ್ಕೆ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲನರ ಹಾಗೂ ಎರಡು ಪ್ರಮುಖ ಸ್ವಹಾಬಿಗಳ ಖಬರಿನ ಸುತ್ತಲೂ ಇರುವ ಕಟ್ಟಡವೇ ಕಟು ವಿರುದ್ಧವಾಗಿದೆ.
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರನ್ನು ಕಟ್ಟಡದೊಳಗೆ ದಫನ್ ಮಾಡಲಾಗಿದೆ ಎಂಬುವುದನ್ನು ತಿಳಿಸಿದ ನಂತರ ಬಹು! ಮುಹಮ್ಮದ್ ಹಬೀಬ್ ಅಶ್ಶಿಂಖೀತೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ತನ್ನ ಎರಡು ಸಂಗಡಿಗರೊಂದಿಗೆ (ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಹಾಗೂ ಸಿದ್ದೀಕ್ ರಲಿಯಲ್ಲಾಹು ಅನ್ಹು ) ತನ್ನನ್ನೂ ಅದೇ ಕಟ್ಟಡದೊಳಗೆ ದಫನ್ ಮಾಡಲು ಉಮರ್ ರಲಿಯಲ್ಲಾಹು ಅನ್ಹು ಬಹು! ಆಯಿಶ ಬೀವಿಯರೊಂದಿಗೆ ಅನುಮತಿಯನ್ನು ಕೇಳಿದ್ದರು.ಕೆಲವು ವರ್ಷಗಳ ಬಳಿಕ ಆ ಕಟ್ಟಡದಲ್ಲಿ ಲೋಪದೋಷಗಳು ಕಂಡಾಗ ತಾಬಿವುಗಳ ಒಮ್ಮತಾಭಿಪ್ರಾಯ ಪ್ರಕಾರ ಅದನ್ನು ದುರಸ್ತಿ ಗೊಳಿಸಲಾಯಿತು.ಬಹು! ಅಬೂಬಕರ್ ಸಿದ್ದೀಕ್ ರಲಿಯಲ್ಲಾಹು ಅನ್ಹು ಹಾಗೂ ಉಮರ್ ರಲಿಯಲ್ಲಾಹು ಅನ್ಹು ರವರನ್ನು ಪ್ರವಾದಿ ಸಲ್ಲಲ್ಲ್ಲಾಹು ಅಲೈಹಿ ವಸಲ್ಲಮರೊಂದಿಗೆ ಸ್ವಹಾಬಿಗಳ ಒಮ್ಮತಾಭಿಪ್ರಾಯ ಪ್ರಕಾರ ಕಟ್ಟಡದೊಳಗೆ ದಫನ್ ಮಾಡಿದ್ದರಿಂದ ಖಬರ್ ಗಳ ಸುತ್ತ ಜಂಭತನದ ಉದ್ದೇಶವಿಲ್ಲದೆ ಕಟ್ಟಡ ನಿರ್ಮಿಸುವುದು ಅನುವದನೀಯವೆಂದು ಇದರಿಂದ ಸ್ಪಷ್ಟವಾಗುತ್ತದೆ.ಏಕೆಂದರೆ ಕಟ್ಟಡದೊಳಗೆ ದಫನ್ ಮಾಡುವುದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಪ್ರತ್ಯೇಕತೆಯಾಗಿದೆ ಎಂದು ಒಮ್ಮೆಯೂ ಸ್ಥಿರಪಟ್ಟಿಲ್ಲ. ಮಾತ್ರವಲ್ಲ, ಮೊದಲೇ ಇರುವ ಕಟ್ಟಡದೊಳಗೆ ದಫನ್ ಮಾಡುವುದೂ , ದಫನ್ ಮಾಡಿದ ನಂತರ ಕಟ್ಟಡ ನಿರ್ಮಿಸುವುದೂ ಒಂದೇ ಆಗಿದೆ.ಅವುಗಳೆಡೆಯಲ್ಲಿ ತೋರಿಕೆಯಲ್ಲಿ ಅಲ್ಲದೆ ಕಾರ್ಯದಲ್ಲಿ ಯಾವುದೇ ವ್ಯತ್ಯಾಸವಿಲ್ಲ."
( ಝಾದ್ ಮುಸ್ಲಿಂ 32/2)
ಉರ್ವತ್ ರಲಿಯಲ್ಲಾಹು ಅನ್ಹು ಹೇಳುತ್ತಾರೆ,
" ವಲೀದ್ ಬಿನ್ ಅಬ್ದುಲ್ ಮಲಿಕ್ ರವರ ಕಾಲದಲ್ಲಿ ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರವರು ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟ್ಟಡದ ಗೋಡೆಯು ಕುಸಿಯಿತು.ಆಗ ಜನರು ಅದನ್ನು ಪುನನಿರ್ಮಿಸಲು ಆರಂಭಿಸಿದರು.ಅಷ್ಟರಲ್ಲಿ ( ಮಣ್ಣು ಅಗೆಯುವಾಗ) ಒಂದು ಕಾಲು ಗೋಚರಿಸಿತು.ಅವರೆಲ್ಲರೂ ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲು ಆಗಿರಬಹುದೆಂದು ಭಾವಿಸಿ ಭಯಭೀತರಾದರು.
( ಮಹಾ ಪುರುಷರ ಮೃತ ಶರೀರವು ಮಣ್ಣು ತಿನ್ನಲಾರವು ಎಂಬುದಕ್ಕೆ ಇದು ಸ್ಪಪ್ಷ್ಟ ಸಾಕ್ಷಿಯಾಗಿದೆ, ಲೇ.)
ಅದು ಯಾರ ಕಾಲಾಗಿರಬಹುದೆಂದು ಖಚಿತವಾಗಿ ಹೇಳಲು ಯಾರೂ ಮುಂದೆ ಬಂದಿಲ್ಲ.ಆಗ ಉರ್ವತ್ ರಲಿಯಲ್ಲಾಹು ಅನ್ಹು ರವರು ಹೇಳಿದರು ,
" ಅದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ ಕಾಲು ಅಲ್ಲ, ಹೊರತು ಅದು ಉಮರ್ ರಲಿಯಲ್ಲಾಹು ಅನ್ಹುರವರ ಕಾಲಾಗಿದೆ."
(ಬುಖಾರಿ 186/1)
ನೋಡಿ , ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟ್ಟಡದ ಗೋಡೆ ಕುಸಿದಾಗಲೂ ಅದನ್ನು ಅವರು ಪುನನಿರ್ಮಿಸಿದರಲ್ಲದೆ ಕೆಡವಿ ಹಾಕಲಿಲ್ಲ.ಅದು ಶಿರ್ಕಾಗಿದ್ದರೆ ಅದನ್ನು ಕೆಡವಬೇಕಿತ್ತಲ್ಲವೇ? ಆದ್ದರಿಂದ ಸ್ವಹಾಬಿಗಳು , ತಾಬಿವುಗಳು, ತಾಬಿವುತ್ತಾಬಿವುಗಳು ಹಾಗೂ ನಂತರ ಬಂದ ಇಮಾಮರುಗಳೆಲ್ಲರೂ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ಅಂತ್ಯ ವಿಶ್ರಮಗೊಳ್ಳುತ್ತಿರುವ ಕಟ್ಟಡಕ್ಕೆ ತಮ್ಮ ಒಮ್ಮತಾಭಿಪ್ರಾಯದ ಮೂಲಕ ಅನುಮತಿಯನ್ನು ನೀಡಿದ್ದರಲ್ಲದೇ ಅವರಿಂದ ಒಬ್ಬರೂ ಕೂಡಾ ಅದನ್ನು ವಿರೋಧಿಸಿಲ್ಲ.ಇನ್ನು ಕೆಲವು ಮಹಾತ್ಮರುಗಳ ದರ್ಗಾಗಳ ಕುರಿತು ತಿಳಿದು ಕೊಳ್ಳೋಣ.........
ಅಯ್ಯೂಬ್ ನೆಬಿ ಅಲೈಹಿಸ್ಸಲಾಮರ ದರ್ಗಾ:
ಇಮಾಮ್ ನವವೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ;
" ಅಯ್ಯೂಬ್ ನೆಬಿ ಅಲೈಹಿಸ್ಸಲಾಮ್ ರವರು 'ಹವರಾನ್ ' ಊರಿನವರಾಗಿದ್ದರು.ಅವರ ಸಮಾಧಿಯು 'ನವಾ' ಎಂಬ ಪ್ರದೇಶದ ಹತ್ತಿರದಲ್ಲಿರುವ ಒಂದು ಊರಿನಲ್ಲಿ ಬಹಳ ಪ್ರಸಿದ್ಧವಾಗಿದೆ.ಅದರ ಮೇಲ್ಭಾಗದಲ್ಲಿ ಕಟ್ಟಡವೂ ಮಸೀದಿಯೂ ಇದೆ.ಅದರ ಆವಶ್ಯಕತೆಗಾಗಿ ವಖಫ್ ಮಾಡಲ್ಪಟ್ಟ ಒಂದು ಜಮೀನೂ ಇದೆ.ಮಾತ್ರವಲ್ಲ ಅಲ್ಲೇ ಹರಿಯುವ ಹೊಳೆಯೂ ಇದ್ದು ಅದರಲ್ಲಿ ಅಯ್ಯೂಬ್ ನೆಬಿಯವರ ಕಾಲಿನ ಗುರುತಿರುವ ಕಲ್ಲೂ ಇದೆ.ಜನರು ಬರ್ಕತ್ ಗಾಗಿ ಆ ಹೊಳೆಯ ನೀರನ್ನು ಕುಡಿಯುತ್ತಾರೆ ಹಾಗೂ ಅದರಿಂದ ಸ್ನಾನ ಮಾಡುತ್ತಾರೆ."
( ತಹ್ ದ್ಸೀಬುಲ್ ಅಸ್ಮಾಇ ವಲ್ಲುಗಾತ್ 131/1)
ಶುಐಬ್ ನೆಬಿ ಅಲೈಹಿಸ್ಸಲಾಮರ ದರ್ಗಾ:
ಬಹು! ಶುಐಬ್ ನೆಬಿಯವರ ಚರಿತ್ರೆಯನ್ನು ವಿವರಿಸಿದ ನಂತರ ಇಮಾಮ್ ನವವೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ;
"ಅವರ ಖಬರಿನ ಮೇಲೆ (ಸುತ್ತಲಿನಿಂದಲೂ ) ಕಟ್ಟಡವಿದೆ.ಅದಕ್ಕಾಗಿ ವಖಫ್ ಮಾಡಲ್ಪಟ್ಟ ಸ್ಥಳವೂ ಇದೆ.ಮಾತ್ರವಲ್ಲ ಝಿಯಾರತ್ ಗಾಗಿಯೂ , ಬರ್ಕತ್ ಸಂಪಾದಿಸಲಿಕ್ಕಾಗಿಯೂ ದೂರದ ಊರುಗಳಿಂದ ಜನರು ಬರುತ್ತಿರುತ್ತಾರೆ."
(ತಹ್ ದ್ಸೀಬುಲ್ ಅಸ್ಮಾಇ ವಲ್ಲುಗಾತ್246/ 1)
ಸ್ವಹಾಬಿಗಳ ದರ್ಗಾ:
ಮಕ್ಕ ಮದೀನದಲ್ಲಿ ಯಾವುದೇ ದರ್ಗಾಗಳಿಲ್ಲ, ದರ್ಗಾಗಳಿರುವುದೆಲ್ಲವೂ ಕೇರಳ , ಕರ್ನಾಟಕದಲ್ಲಗಿದೆ.ಹಾಗೆ ದರ್ಗಾ ಮಾಡಬಹುದಾಗಿದ್ದರೆ ಮಕ್ಕಾ ಮದೀನಾದಲ್ಲಿ ಮಾಡಬೇಕಿತ್ತಲ್ಲವೇ ಎಂಬಿತ್ಯಾದಿ ತಲೆಬುಡವಿಲ್ಲದ ವಾದಗಳನ್ನು ಸಲಪಿ ಅಸಾಮಿಗಳು ಜನಸಾಮಾನ್ಯರ ಮುಂದೆ ಬಡಬಡಿಸುತ್ತಾರೆ.ಆದರೆ ಅಲ್ಲಿದ್ದ ಸ್ವಹಾಬಿಗಳ ಹಾಗೂ ಇತರ ಔಲಿಯಾಗಳ ದರ್ಗಾಗಳನ್ನು ಈ ವಹ್ಹಾಬಿಗಳು ಕೆಡವಿದ್ದಾರೆಂಬುವುದು ಈ ಅಮಾಯಕರಿಗೆ ಗೊತ್ತಿಲ್ಲ! ಅವರು ದರ್ಗಾ ಕೆಡವಿದರ ಕುರಿತು ಪುರಾವೆ ಸಹಿತ ಮುಂದೆ ವಿವರಿಸಲಾಗುವುದು.
ನಿಜವಾಗಿಯೂ ಮಕ್ಕಾ ಮದೀನಾಗಳಲ್ಲಿ ಹಲವು ಸ್ವಹಾಬಿಗಳ ಹಾಗೂ ವಿದ್ವಾಂಸರ ದರ್ಗಾಗಳಿತ್ತೆಂದು ವಿದ್ವಾಂಸರು ತಮ್ಮ ಗ್ರಂಥಗಳಲ್ಲಿ ದಾಖಲಿಸಿದ್ದಾರೆ.
ಅಬೂ ಉಬೈದತ್ ರಲಿಯಲ್ಲಾಹು ಅನ್ಹು ರವರ ದರ್ಗಾ :
ಬಹು! ಇಮಾಮ್ ನವವೀ ರಲಿಯಲ್ಲಾಹು ಅನ್ಹು ಹೇಳುತ್ತಾರೆ;
" ಅಬೂ ಉಬೈದತ್ ರಲಿಯಲ್ಲಾಹು ಅನ್ಹು ರವರ ಸಮಾಧಿಯು 'ಅಮ್ತಾ' ಎಂಬ ಪ್ರದೇಶದ ಬಳಿಯಿರುವ 'ಗೌರ್ ಬೈಸಾನ್' ಎಂಬ ಸ್ಥಳದಲ್ಲಾಗಿದೆ.ಅವರ ಖಬರಿನ ಮೇಲೆ ಅವರ ಪದವಿಗೆ ತಕ್ಕ ಖುಬ್ಬ ಇದೆ.ನಾನು ಅವರ ಖಬರನ್ನು ಸಂದರ್ಶಿಸಿದ್ದೇನೆ ಹಾಗೂ ಹಲವು ಅದ್ಭುತಗಳನ್ನೂ ದರ್ಶಿಸಿದ್ದೇನೆ."
(ತಹ್ ದ್ಸೀಬುಲ್ ಅಸ್ಮಾಇ ವಲ್ಲುಗಾತ್ 259/ 1)
ಹಂಝ ರಲಿಯಲ್ಲಾಹು ಅನ್ಹು ಅರವರ ದರ್ಗಾ:
ಸೆಯ್ಯಿದುಸ್ಸುಂಹೂದಿ ರಲಿಯಲ್ಲಾಹು ಅನ್ಹು ಹೇಳುತ್ತಾರೆ;
" ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರ ಚಿಕ್ಕಪ್ಪ ಹಂಝ ರಲಿಯಲ್ಲಾಹು ಅನ್ಹು ರವರ ಖಬರಿನ ಮೇಲೆ ಅತೀ ಮನೋಹರವಾದ , ಸುಭದ್ರವಾದ ಹಾಗೂ ಖುಬ್ಬ ಎತ್ತರವಾದ ಇದೆ."
( ವಫಾಉಲ್ ವಫಾ 921/3)
ತ್ವಲ್ ಹ ರಲಿಯಲ್ಲಾಹು ಅನ್ಹು ರವರ ದರ್ಗಾ:
ಬಹು! ತ್ವಲ್ ಹ ರಲಿಯಲ್ಲಾಹು ಅನ್ಹು ರವರ ಖಬರಿನ ಮೇಲೆ ಖುಬ್ಬ ಇತ್ತೆಂದು ಇಮಾಮ್ ಇಬ್ನುಲ್ ಅಸೀರ್ ತನ್ನ ಉಸ್ದುಲ್ ಗಾಬ 61/ 3 ರಲ್ಲಿ ಉಲ್ಲೇಖಿಸಿದ್ದಾರೆ.
ಅಬೂಸುಫ್ಯಾನ್ ರಲಿಯಲ್ಲಾಹು ಅನ್ಹು ರವರ ದರ್ಗಾ:
ಸ್ವಹಾಬಿ ವರ್ಯರಾದ ಅಬೂಸುಫ್ಯಾನ್ ರಳಿಯಲ್ಲಾಹು ಅನ್ಹು ರವರ ಖಬರಿನ ಮೇಲೆ ಖುಬ್ಬ ಇತ್ತೆಂದು ಸೀರತುನ್ನಬವಿಯ್ಯ 201 / 2 ರಲ್ಲಿ ಸ್ಪಷ್ಟಪಡಿಸಲಾಗಿದೆ.
ಮುಆವಿಯ ರಳಿಯಲ್ಲಾಹು ಅನ್ಹು ರವರ ದರ್ಗಾ:
ಸ್ವಹಾಬಿ ವರ್ಯರಾದ ಮುಆವಿಯ ರಲಿಯಲ್ಲಾಹು ಅನ್ಹು ರವರ ಖಬರ್ ಇರುವುದು ಡಮಸ್ಕಸ್ ನಲ್ಲಾಗಿದೆಯೆಂದೂ ಅದರ ಮೇಲ್ಭಾಗದಲ್ಲಿ ಕಟ್ಟಡವಿದೆಯೆಂದೂ , ಝಿಯಾರತ್ ಗಾಗಿ ಧಾರಾಳ ಜನರು ಅಲ್ಲಿ ಬರುತ್ತಿದ್ದಾರೆಂದೂ ಇಮಾಮ್ ಅಬೂ ಮಸ್ ಊದ್ ರಲಿಯಲ್ಲಾಹು ಅನ್ಹು ತನ್ನ ಮುರೂಜು ದ್ಸಹಬ್ 11 / 3 ರಲ್ಲಿ ಸ್ಪಷ್ಟಪಡಿಸಿದ್ದಾರೆ.
ಅಬ್ಬಾಸ್ ರಲಿಯಲ್ಲಾಹು ಅನ್ಹು ಹಾಗೂ ಹಸನ್ ರಲಿಯಲ್ಲಾಹು ಅನ್ಹು ರವರ ದರ್ಗಾ:
ಬಹು ! ಅಬ್ಬಾಸ್ ರಲಿಯಲ್ಲಾಹು ಅನ್ಹು ಹಾಗೂ ಹಸನ್ ರಲಿಯಲ್ಲಾಹು ಅನ್ಹು ರವರ ಖಬರ್ ಗಳ ಮೇಲ್ಭಾಗದಲ್ಲಿ ಕಟ್ಟಡವಿದೆಯೆಂದು ಇಮಾಮ್ ಇಮಾದುದ್ದೀನ್ ಅಲ್ ಆಮುರೀ ರಲಿಯಲ್ಲಾಹು ಅನ್ಹು ತನ್ನ ಅರ್ರಿಯಾಲುಲ್ ಮುಸ್ತತ್ವಾಬಾ, ಪುಟ 73 ರಲ್ಲಿ ಉಲ್ಲೇಖಿಸಿದ್ದಾರೆ.
ಜನ್ನತುಲ್ ಬಖೀಅದಲ್ಲಿದ್ದ ಪ್ರಮುಖ ದರ್ಗಾಗಳು:
ಜನ್ನತುಲ್ ಬಖೀಅದಲ್ಲಿ ಅಲಿಯ್ಯ್ ಬಿನ್ ಹುಸೈನ್ , ಮುಹಮ್ಮದ್ ಬಿನ್ ಅಲಿಯ್ಯುಲ್ ಬಾಖಿರ್ ,
ಜಅ್ ಫರುಸ್ಸಾದಿಖ್ , ಉಖೈಲ್ ಬಿನ್ ಅಬೀ ತ್ವಾಲಿಬ್ ರಳಿಯಲ್ಲಾಹು ಅನ್ಹುಮ್ ಮುಂತಾದವರ ಖಬರ್ ಗಳ ಮೇಲೆ ಖುಬ್ಬಗಳು ಇತ್ತೆಂದು 'ಅಲ್ ಫಜ್ರುಲ್ ಮುನೀರ್ ಗ್ರಂಥದ 128, 129 ಪುಟಗಳಲ್ಲಿ ಕಾಣಬಹುದು.
ಇಮಾಮ್ ಅಬೂ ಹನೀಫ ರಲಿಯಲ್ಲಾಹು ಅನ್ಹು ರವರ ದರ್ಗಾ:
ಬಹು! ಇಮಾಮುಲ್ ಅಅ್ ಳಮ್ ಅಬೂ ಹನೀಫಾ ರಲಿಯಲ್ಲಾಹು ಅನ್ಹುರವರ ಖಬರಿನ ಮೇಲೆ ಖುಬ್ಬ ಇದೆಯೆಂದೂ ಅಲ್ಲಿ ಝಿಯಾರತ್ ಗಾಗಿ ಜನರು ಬರುತ್ತಿದ್ದಾರೆಂದೂ ಇಮಾಮ್ ಝರ್ಕಶೀ ರಲಿಯಲ್ಲಾಹು ಅನ್ಹು ತನ್ನ ಇಅ್ ಲಾಮುಸ್ಸಾಜಿದ್ ಬಿಅಹ್ ಕಾಮಿಲ್ ಮಸಾಜಿದ್ ನ ಪುಟ 32ರಲ್ಲೂ, ಇಮಾಮ್ ಇಬ್ನ್ ಖಲ್ಲಿಖಾನ್ ತನ್ನ ವಫಯಾತುಲ್ ಅಅ್ ಯಾನ್ 414/ 5 ರಲ್ಲೂ ಸ್ಪಷ್ಟಪಡಿಸಿದ್ದಾರೆ.
ಇಮಾಮ್ ಮಾಲಿಕ್ ರಲಿಯಲ್ಲಾಹು ಅನ್ಹುರವರ ದರ್ಗಾ:
ಇಮಾಮ್ ಮಾಲಿಕ್ ರಲಿಯಲ್ಲಾಹು ಅನ್ಹು ರವರ ಖಬರ್ ಜನ್ನತುಲ್ ಬಖೀಅದಲ್ಲಾಗಿದೆಯೆಂದೂ , ಅದರ ಮೇಲ್ಭಾಗದಲ್ಲಿ ಖುಬ್ಬ ಇದೆಯೆಂದೂ ಇಮಾಮ್ ನವವಿ ರಲಿಯಲ್ಲಾಹು ಅನ್ಹು ತನ್ನ ತಹ್ ದ್ಸೀಬುಲ್ ಅಸ್ಮಾಇ ವಲ್ಲುಗಾತ್ 79/ 2 ರಲ್ಲಿ ತಿಳಿಸಿದ್ದಾರೆ.
ಇಮಾಮ್ ಶಾಫಿಈ ರಲಿಯಲ್ಲಾಹು ಅನ್ಹು ರವರ ದರ್ಗಾ:
ಇಮಾಮ್ ಶಾಫಿಈ ರಲಿಯಲ್ಲಾಹು ಅನ್ಹುರವರ ಖಬರ್ ಈಜಿಪ್ತಿನಲ್ಲಗಿದೆಯೆಂದೂ ಅದರ ಮೇಲ್ಭಾಗದಲ್ಲಿ ಅತೀ ಮನೋಹರವಾದ ಖಬ್ಬ ಇದೆಯೆಂದೂ ಇಮಾಮ್ ನವವೀ ರಲಿಯಲ್ಲಾಹು ಅನ್ಹು ತನ್ನ ಶರಹುಲ್ ಮುಹದ್ದಬ್ ನ 13/ 1 ರಲ್ಲೂ ,ನೂರುಲ್ ಅಬ್ ಸ್ವಾರ್ ನ ಪುಟ 246 ರಲ್ಲೂ ಕಾಣಬಹುದಾಗಿದೆ.
ಮಾತ್ರವಲ್ಲ ಇಂದೂ ಕೂಡಾ ಆ ದರ್ಗಾವನ್ನು ಅದೇ ರೀತಿ ಕಾಣಬಹುದಾಗಿದೆ.
ಇಮಾಮ್ ಇಬ್ನ್ ಫೂರಕ್ ರಲಿಯಲ್ಲಾಹು ಅನ್ಹು ರವರ ದರ್ಗಾ:
ಬಹು! ಇಮಾಮ್ ಅಬೂಬಕರ್ ಬಿನ್ ಫೂರಕ್ ರಲಿಯಲ್ಲಾಹು ಅನ್ಹು ರವರ ಖಬರಿನ ಮೇಲ್ಭಾಗದಲ್ಲಿ ಕಟ್ಟಡವಿತ್ತೆಂದೂ ಜನರು ಝಿಯಾರತ್ ಗಾಗಿ ಅಲ್ಲಿಗೆ ಬರುತ್ತಾರೆಂದೂ ವಫಯಾತುಲ್ ಅಅ್ ಯಾನ್ 27 /4 ರಲ್ಲಿ ಕಾಣಬಹುದಾಗಿದೆ.
ವಹ್ಹಾಬಿಗಳ ಕರಸೇವೆ!
ಮಕ್ಕಾ ಮದೀನಾದಲ್ಲಿ ಹಲವಾರು ದರ್ಗಾಗಳಿತ್ತೆಂಬುವುದನ್ನೂ , ಅಲ್ಲಿಗೆ ಜನರು ಝಿಯಾರತ್ ಗಾಗಿ ಬರುತ್ತಿದ್ದರೆಂಬುವುದನ್ನು ಈಗಾಗಲೇ ವಿವರಿಸಲಾಯಿತು.ಆದರೆ ಹಿ.12 ನೇ ಶತಮಾನದಲ್ಲಿ ಸೌದಿ ಅರೇಬಿಯಾದ ಆಡಳಿತವು ವಹ್ಹಾಬಿಗಳ ಕೈಗೆ ಸಿಕ್ಕಿದಾಗ ಅಲ್ಲಿದ್ದ ಸರ್ವ ದರ್ಗಾಗಳನ್ನು ಅವರು ಕೆಡವಿ ನೆಲಸಮಗೊಳಿಸಿದರು.ಅದನ್ನು ಸ್ವತಃ ವಹ್ಹಾಬಿಗಳೇ ಅವರ ಪುಸ್ತಕದಲ್ಲಿ ತಿಳಿಸಿದ್ದಾರೆ.ಕೇರಳ ನದ್ವತುಲ್ ಮುಜಾಹಿದೀನ್ ( ಸಲ್ಪಿ ಸಂಘಟನೆ ) ವತಿಯಿಂದ ಪ್ರಕಟಿಸಿದ
'ಇಸ್ಲಾಹೀ ಪ್ರಸ್ಥಾನ ಚರಿತ್ರತ್ತಿನ್ನೊರು ಆಮುಗಂ '
ಎಂಬ ಪುಸ್ತಕದಲ್ಲಿ ಪಿ.ಕುಟ್ಟಶ್ಶೇರಿ ಮೌಲವಿ ಹೇಳುವುದನ್ನು ನೋಡಿ,
"ಪ್ರವಾದಿಯವರ ಖಬರಿನ ಬಳಿ ಸಹಾಭ್ಯರ್ಥನೆ ನಡೆಸಬಾರದೆಂದಾಗಿದೆ ಅವರು ( ಇಬ್ನ್ ಅಬ್ದಿಲ್ ವಹ್ಹಾಬ್ ) ಪ್ರಥಮವಾಗಿ ವಾದಿಸಿದ್ದು.ನೂಲು ಮಂತ್ರಿಸಿ ಊದುವುದು , ತಾಯಿತ ಕಟ್ಟುವುದು , ಮಹಾತ್ಮರುಗಳ ಖಬರುಗಳಿಗೆ ವಿಶೇಷ ಮಹತ್ವವನ್ನು ನೀಡುವುದು ತಪ್ಪಾಗಿದೆಯೆಂದು ಅವರು ಸಮರ್ಥಿಸಿದರು(?) ಮಖ್ ಬರಗಳನ್ನು ಧ್ವಂಸಗೊಳಿಸಿದರಲ್ಲದೆ ಜನರು ಪೂಜಿಸುತ್ತಿದ್ದ ಮರಗಳನ್ನು ಕಡಿದು ಹಾಕಿದರು"
(ಪುಟ 14 )
ಡಾ! ಅಬ್ದುಲ್ ಬಾಸಿತ್ ರವರು ಹೇಳುವುದನ್ನು ನೋಡಿ,
( ವಹ್ಹಾಬಿಯಾಗಿದ್ದ )ಅಬ್ದುಲ್ ಅಝೀಝ್ ಬಿನ್ ಸಊದ್ ಹಿ.1344 ರಲ್ಲಿ ಮದೀನವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ದರ್ಗಾಗಳನ್ನು ಕೆಡವಿ ನೆಲಸಮಗೊಳಿಸಿದನು"
(ಅತ್ತಾರಿಖುಶ್ಶಾಮಿಲ್ ಲಿಲ್ ಮದೀನತಿಲ್ ಮುನವ್ವರ 297, 298/ 3)
ಬಹುಮಾನ್ಯರಾದ ಅಲ್ಲಾಮಾ ಇಬ್ರಾಹಿಂ ಅಸ್ಸಮ್ ನೂದಿ ರಲಿಯಲ್ಲಾಹು ಅನ್ಹು ಹೇಳುವುದನ್ನು ನೋಡಿ,
" ವಹ್ಹಾಬಿಗಳು ಮಕ್ಕಾದಲ್ಲಿದ್ದ ಔಲಿಯಾಗಳ ಖುಬ್ಬಗಳನ್ನು ಕೆಡವಿ ಹಾಕಿದರು".
( ಸಆದತುದ್ದಾರೈನ್ 39 / 1)
ಬಹು ! ಅಹ್ಮದ್ ಬಿನ್ ಝೈನಿ ದಹ್ಲಾನ್ ರಲಿಯಲ್ಲಾಹು ಅನ್ಹು ಹೇಳುವುದನ್ನು ನೋಡಿ,
" ವಹ್ಹಾಬಿಗಳು ಸುನ್ನೀ ಮಸೀದಿಗಳನ್ನೂ , ಸಜ್ಜನರ ದರ್ಗಾಗಳನ್ನೂ ಕೆಡವಲು ಧಾವಿಸಿದರು.ಪ್ರಥಮವಾಗಿ ಜನ್ನತುಲ್ ಮುಅಲ್ಲಾದಲ್ಲಿದ್ದ ಖುಬ್ಬಗಳನ್ನು ಧ್ವಂಸಗೊಳಿಸಿದರು.ಅಲ್ಲಿ ಹಲವಾರು ಖುಬ್ಬಗಳಿತ್ತು.ನಂತರ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲರವರು ಜನಿಸಿದ ಸ್ಥಳದಲ್ಲಿದ್ದ ಖುಬ್ಬವನ್ನೂ , ಅಬೂಬಕರ್ ಸಿದ್ದೀಖ್ ರಲಿಯಲ್ಲಾಹು ಅನ್ಹು ಹಾಗೂ ಅಲೀ ರಲಿಯಲ್ಲಾಹು ಅನ್ಹು ರವರು ಜನಿಸಿದ ಸ್ಥಳದಲ್ಲಿದ್ದ ಖುಬ್ಬಗಳನ್ನೂ ನೆಲಸಮಗೊಳಿಸಿದರು.ಅದಾದ ಬಳಿಕ ಅಲ್ಲಿದ್ದ ಸರ್ವ ದರ್ಗಾಗಳನ್ನೂ ನಾಶಗೊಳಿಸಿದರು.ದರ್ಗಾಗಳನ್ನು ಕೆಡವುವಾಗ ಅವರು ಆಹ್ಲಾದದಿಂದ ಕೇಕೆ ಹಾಕುತ್ತಿದ್ದರಲ್ಲದೆ ಚೆಂಡೆ ಬಾರಿಸಿ ಹಾಡುತ್ತಿದ್ದರು.ಖಬರ್ ಗಳನ್ನು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು."
(ಖುಲಾಸತುಲ್ ಕಲಾಂ ಫೀ ಬಯಾನಿ ಉಮರಾಯಿಲ್ ಬಲದಿಲ್ ಹರಾಮ್.ಪುಟ 278)
ವಹ್ಹಾಬಿಗಳು ನಡೆಸಿದ ಕರಸೇವೆ ಎಷ್ಟೊಂದು ಭೀಕರವಾಗಿತ್ತು ಎಂಬುದನ್ನು ನೀವು ಆಲೋಚಿಸಿ.ಸೌದಿ ಅರೇಬಿಯಾದ ಆಡಳಿತವನ್ನು ವಹ್ಹಾಬಿಗಳು ವಶಪಡಿಸಿದ್ದರಿಂದ ಅಲ್ಲಿದ್ದ ದರ್ಗಾಗಳು ನಾಶವಾಯಿತೆಂದೂ ಅದಕ್ಕಿಂತ ಮುಂಚೆ ಅಲ್ಲಿ ದರ್ಗಾಗಳೂ , ಝಿಯಾರತ್ ಗಳೂ ನಡೆಯುತ್ತಿತ್ತೆಂದೂ ಇದರಿಂದ ನಮಗೆ ತಿಳಿದು ಕೊಳ್ಳಬಹುದು.ಮಾತ್ರವಲ್ಲ ಅವರ ಅಧಿಕಾರವಿಲ್ಲದ ಈಜಿಪ್ಟ್ , ಇರಾಖ್ ಮುಂತಾದ ಮುಸ್ಲಿಂ ರಾಷ್ಟ್ರದಲ್ಲಿ ಇಂದೂ ಕೂಡಾ ಹಲವಾರು ದರ್ಗಾಗಳನ್ನು ಕಾಣಬಹುದು.
ಬಹು! ಇಮಾಮ್ ಶಾಫಿಈ , ಸೆಯ್ಯಿದತ್ ನಫೀಸತುಲ್ ಮಿಸ್ರಿಯ ,ಹಝ್ರತ್ ಹುಸೈನ್ ರಲಿಯಲ್ಲಾಹು ಅನ್ಹುರವರ ಸಹೋದರಿ ಝೈನಬಾ ಬೀವಿ , ಅಹ್ಮದುಲ್ ಬದವೀ , ರಲಿಯಲ್ಲಾಹು ಅನ್ಹುಮ್ ಮುಂತಾದವರ ದರ್ಗಾಗಳು ಇಂದೂ ಕೂಡಾ ಬಹಳ ಮನೋಹರವಾದ ಶೈಲಿಯಲ್ಲಿ ಈಜಿಪ್ತಿನಲ್ಲಿ ಕಾಣಬಹುದಾಗಿದೆ.
ಸಂಶಯಗಳು ಮತ್ತು ಉತ್ತರಗಳು
-------------------------------------
ಪ್ರಶ್ನೆ:1
--------
ಉರೂಸ್ ಆಚರಣೆ ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರ ಕಂಡು ಬರುತ್ತಿದೆ.ಇಸ್ಲಾಮಿನ ಉಗಮಸ್ಥಳವಾದ ಮಕ್ಕಾ ಮದೀನಗಳಲ್ಲಿ ಇದು ಕಂಡು ಬರುವುದಿಲ್ಲ.ಆದ್ದರಿಂದ ಇದು ಅನಾಚಾರವಲ್ಲವೇ?
ಉ:
----
ಉರೂಸ್ ಆಚರಣೆ ಕೇರಳ ಹಾಗೂ ಕರ್ನಾಟಕದಲ್ಲಿ ಮಾತ್ರ ಕಂಡು ಬರುತ್ತಿದೆ ಎಂಬುವುದು ಶುದ್ಧ ತಪ್ಪಾಗಿದೆ.ಏಕೆಂದರೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಔಲಿಯಾಗಳ ಉರೂಸ್ ಕಾರ್ಯಕ್ರಮ ನಡೆಯುತ್ತಿದೆ.ರಾಜಸ್ಥಾನದ ಅಜ್ಮೀರ್ , ದೆಹಲಿಯ ನಿಝಾಮುದ್ದೀನ್ ದರ್ಗಾ , ಉತ್ತರಪ್ರದೇಶದ ಬರೇಲ್ವಿ ಶರೀಫ್ , ತಮಿಳುನಾಡಿನ ಏರ್ವಾಡಿ , ಮುತ್ತುಪ್ಪೇಟೆ , ನಾಗೂರು ಮುಂತಾದೆಡೆಯಲ್ಲಿ ಇಂದಿಗೂ ಬಹಳ ವಿಜ್ರಂಭಣೆಯಿಂದ ಉರೂಸ್ ಕಾರ್ಯಕ್ರಮ ನಡೆಯುತ್ತಿದೆ.ಅದೇ ರೀತಿ ಈಜಿಪ್ತಿನ ಬಹು! ಅಹ್ಮದುಲ್ ಬದವೀ ರಲಿಯಲ್ಲಾಹು ಅನ್ಹುರವರ ದರ್ಗಾ ಶರೀಫ್ ನ ಉರೂಸ್ ಕಾರ್ಯಕ್ರಮವನ್ನು ಅಲ್ಲಿನ ಸರಕಾರದ ಉಸ್ತುವಾರಿಯಲ್ಲಿಯೇ ನಡೆಸಲಾಗುತ್ತದೆ.ಆದ್ದರಿಂದ ಉರೂಸ್ ಕಾರ್ಯಕ್ರಮವು ಕರ್ನಾಟಕ ಹಾಗೂ ಕೇರಳದಲ್ಲಿ ಮಾತ್ರವಿರುವ ಕಾರ್ಯವೆಂಬುವುದು ಸರಿಯಲ್ಲ.
ಇನ್ನು ಮಕ್ಕಾ ಮದೀನಾದಲ್ಲಿ ಉರೂಸ್ ಕಾರ್ಯಕ್ರಮವು ನಡೆಯುವುದಿಲ್ಲವಲ್ಲಾ ಎಂದು ಸಾಮಾನ್ಯವಾಗಿ ಕೆಲವರು ಸಂಶಯಿಸುತ್ತಾರೆ.ನಿಜವಾಗಿ ಇಂತಹವರು ಉರೂಸ್ ಎಂದರೇನು, ಸೌದಿ ಅರೇಬಿಯಾದ ಇಂದಿನ ಅವಸ್ಥೆಯೇನು ಎಂಬುವುದನ್ನು ತಿಳಿದಿರಲಿಕ್ಕಿಲ್ಲ.ಏಕೆಂದರೆ ಹಿ .12 ನೇ ಶತಮಾನದಿಂದ ಸೌದಿ ಅರೇಬಿಯಾದ ಆಡಳಿತವು ವಹ್ಹಾಬಿಗಳ ಕೈಗಳಲ್ಲಾಗಿದೆ.ಅದಕ್ಕಿಂತ ಮುಂಚೆ ಅಲ್ಲಿ ಎಷ್ಟೋ ದರ್ಗಾಗಳೂ, ಉರೂಸ್ ಗಳೂ ನಡೆಯುತ್ತಿತ್ತು.ಆದರೆ ವಹ್ಹಾಬಿಗಳು ಸೌದಿ ಅರೇಬಿಯಾದ ಆಡಳಿತವನ್ನು ವಶಪಡಿಸಿಕೊಂಡಾಗ ಅಲ್ಲಿದ್ದ ದರ್ಗಾಗಳನ್ನು ಕೆಡವಿ ಧ್ವಂಸಗೊಳಿಸಿದರು.ಸಾಮೂಹಿಕ ಝಿಯಾರತನ್ನು ವಿರೋಧಿಸಿದರು.ಈ ಕಾರ್ಯವನ್ನು ವಹ್ಹಾಬಿಗಳೇ ಸಮ್ಮತಿಸಿದ್ದಾರೆ.
ಪಿ.ಮುಹಮ್ಮದ್ ಕುಟ್ಟಶ್ಶೇರಿ ಎಂಬ ವಹ್ಹಾಬೀ ಮೌಲವಿ ಬರೆದ ಹಾಗೂ ಕೇರಳ ನದ್ವತುಲ್ ಮುಜಾಹಿದೀನ್ ಕೋಝಿಕ್ಕೋಡ್ ಪ್ರಕಟಿಸಿದ
' ಇಸ್ಲಾಹೀ ಪ್ರಸ್ಥಾನ ಚರಿತ್ರತ್ತಿನೊರು ಆಮುಗಂ ' ಎಂಬ ಪುಸ್ತಕದಲ್ಲಿ ಬರೆಯುವುದನ್ನು ನೋಡಿ,ಅವರು
( ವಹ್ಹಾಬೀ ನೇತಾರ ಇಬ್ನ್ ಅಬ್ದುಲ್ ವಹ್ಹಾಬ್ ) ಮಖ್ ಬರಗಳನ್ನು ಧ್ವಂಸಗೂಳಿಸಿದರು ಹಾಗೂ ಜನರು ಪೂಜಿಸುತ್ತಿದ್ದ ವೃಕ್ಷಗಳನ್ನು ನಾಶಪಡಿಸಿದರು".(ಪುಟ 14)
ಇದರಿಂದ ಮಕ್ಕಾ ಮದೀನಾಗಳಲ್ಲಿ ದರ್ಗಾಗಳಿತ್ತೆಂದೂ ಅಲ್ಲಿ ಝಿಯಾರತ್ ನಡೆಯುತ್ತಿತ್ತೆಂದೂ ಹಗಲು ಸೂರ್ಯನಷ್ಟು ಸ್ಪಷ್ಟವಾಗುತ್ತದೆ.
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೂ ಸ್ವಹಾಬಿಗಳೂ ಉರೂಸ್ ನಡೆಸಿರುವಾಗ ಮಕ್ಕಾ ಮದೀನಾಗಳಲ್ಲಿ ಉರೂಸ್ ಇಲ್ಲ ಎಂದು ಹೇಳುವುದು ಮೂರ್ಖತನವಾಗಿದೆ.
ಪ್ರಷ್ಣೆ :2
-----------
ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರೋ ಸ್ವಹಾಬಿಗಳೋ ಯಾರಾದರೂ ಉರೂಸ್ ಆಚರಿಸಿದ್ದಾರೆಯೇ?
ಉ
-----
ಹೌದು ಆಚರಿಸಿದ್ದಾರೆ.ಬಹು! ಉಹ್ದ್ ಶುಹದಾಗಳ ಉರೂಸನ್ನು ಪ್ರವಾದಿ ಸಲ್ಲಲ್ಲಾಹು ಅಲೈಹಿವಸಲ್ಲಮರೂ ಸ್ವಹಾಬಿಗಳು ಆಚರಿಸಿದ್ದಾರೆಂದು ಬಹು ಹಾಫಿಲ್ ಅಬ್ದುರ್ರಝ್ಝಾಕ್ ತನ್ನ ಮುಸನ್ನಫ್ ನಲ್ಲೂ ಇಮಾಮ್ ರಾಝಿ ತನ್ನ ತಫ್ಸೀರುಲ್ ಕಬೀರ್ ನಲ್ಲೂ, ಇಬ್ನ್ ಕಸೀರ್ ತನ್ನ ತಫ್ಸೀರ್ ನಲ್ಲೂ ಉಲ್ಲೇಖಿಸಿದ್ದಾರೆ.
ಪ್ರಶ್ನೆ:3
---------
ಅನ್ಯ ಪುರುಷರು ಪರಸ್ಪರ ಬೆರೆಯುವುದು ಹರಾಂ ಅಲ್ಲವೇ? ಉರೂಸ್ ನಲ್ಲಿ ಹಲವು ಅನಾಚಾರಗಳು ನಡೆಯುದಿಲ್ಲವೇ? ಆದ್ದರಿಂದ ಉರೂಸ್ ಆಚರಣೆಗಯನ್ನು ಸ್ಥಗಿತಗೊಳಿಸುವುದು ಸೂಕ್ತವಲ್ಲವೇ?
ಉ:
-----
ಅನ್ಯ ಪುರುಷರು ಪರಸ್ಪರ ಬೆರೆಯುವುದು ಹರಾಮ್ ಆಗಿದೆ.ಅದು ಉರೂಸ್ ನ ಸಂದರ್ಭದಲ್ಲೂ , ಕುಟುಂಬಸ್ಥರನ್ನು ಸಂದರ್ಶಿಸುವ ಸಂದರ್ಭದಲ್ಲೂ , ಹೆಚ್ಚೇಕೆ ತನ್ನ ಸ್ವಂತ ಮನೆಯಲ್ಲೇ ಅನ್ಯ ಪುರುಷರೊಂದಿಗೆ ಬೆರೆಯುವುದು ನಿಷಿದ್ಧವಾಗಿದೆ.
ಉರೂಸಿನ ಸಂದರ್ಭದಲ್ಲೂ ಅಲ್ಲದ ಸಂದರ್ಭದಲ್ಲೂ ಅನ್ಯರೊಂದಿಗೆ ಬೆರೆಯದೆ , ತನ್ನ ಶರೀರ ಪೂರ್ಣವಾಗಿ ಮುಚ್ಚುವ ವಸ್ತ್ರದೊಂದಿಗೆ ಮಾತ್ರವೇ ಸ್ತ್ರೀ ಹೊರಡಬೇಕೆಂದು ಸುನ್ನೀ ವಿದ್ವಾಂಸರು ಹೇಳುತ್ತಲೇ ಬಂದಿದ್ದಾರೆ ಹಾಗೂ ಬರುತ್ತಿದ್ದಾರೆ.ಈ ನಿಟ್ಟಿನಲ್ಲಿ ದರ್ಗಾ ಕಮಿಟಿಗಳೂ ಕಠಿಣವಾದ ಕ್ರಮವನ್ನು ಜರಗಿಸಬೇಕಾಗಿದೆ.
ಮಾತ್ರವಲ್ಲ ಪ್ರಮಾಣಿಕರೂ , ಶೀಲವತಿಯರೂ ಮರ್ಯಾದಸ್ಥರೂ ಆದ ಸ್ತ್ರೀಗಳೂ ಯಾವತ್ತೂ ಇಂತಹ ಕೆಡುಕುಗಳಿಗೆ ನಿಲ್ಲುವುದಿಲ್ಲ.ಅವರು ಇಸ್ಲಾಮ್ ನಿರ್ದೇಶಿಸಿದ ರೀತಿಯಲ್ಲಿಯೇ ಝಿಯಾರತ್ ನಡೆಸುತ್ತಿದ್ದಾರೆ ಎಂಬುವುದು ನಮ್ಮೆಲ್ಲರ ಅನುಭವವಾಗಿದೆ.ಕೆಲವು ಮರ್ಯಾದಸ್ಥರಲ್ಲದ ಸ್ತ್ರೀಗಳು ಮಾತ್ರ ತಮ್ಮ ದೇಹ ಸೌಂದರ್ಯವನ್ನು ತೋರಿಸಲಿಕ್ಕಾಗಿ ಕೆಟ್ಟ ಉದ್ದೇಶದಿಂದ ಹೊರಡುತ್ತಾರೆ.ಇದು ಕೇವಲ ಉರೂಸಿನ ಸಂದರ್ಭದಲ್ಲಿ ಮಾತ್ರವಲ್ಲ ,ಮದುವೆ , ಔತಣ ಮುಂತಾದ ಸಂದರ್ಭಗಳಲ್ಲೂ ಅವರು ಈ ರೀತಿಯೇ ಹೊರಡುತ್ತಾರೆ.
ಆದ್ದರಿಂದ ಕೆಲವು ಸ್ತ್ರೀಯರು ಕೆಟ್ಟ ಉದ್ದೇಶದಿಂದ ಬರುತ್ತಾರೆ ಅಥವಾ ಅನಾಚಾರವನ್ನುಂಟು ಮಾಡುತ್ತಾರೆ ಎಂಬ ಕಾರಣಕ್ಕಾಗಿ ಉರೂಸನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲ.ಹಾಗಾದರೆ ಮದುವೆ , ಔತಣ , ವೈದ್ಯರ ಬಳಿಗೆ ಹೋಗುವುದು , ಕುಟುಂಬಸ್ಥರ ಬಳಿ ಹೋಗುವುದು ಮುಂತಾದವುಗಳನ್ನೆಲ್ಲಾ ನಿಷೇಧಿಸಬೇಕಾದೀತು.ಆದುದರಿಂದ ಅನಾಚಾರಗಳು ಎಲ್ಲಿಯಾದರೂ ನಡೆಯುತ್ತಿದ್ದರೆ ಅದಕ್ಕೆ ಕಡಿವಾಣ ಹಾಕಿ ಇಸ್ಲಾಮೀ ಶಿಷ್ಟಾಚಾರದಿಂದ ಉರೂಸ್ ಹಾಗೂ ಝಿಯಾರತ್ ನಡೆಯುವಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ.
ಪ್ರಶ್ನೆ: 4
---------
ಸ್ತ್ರೀಯರು ಮಸೀದಿಗೆ ಹೋಗಬಾರದೆಂದು ಅದೂ ಹರಾಮ್ ಎಂದೂ ಹೇಳುವ ಸುನ್ನಿಗಳು ಸ್ತ್ರೀಯರನ್ನು ಉರೂಸ್ ಗೆ ಕೊಂಡುಯ್ಯುತ್ತಿದ್ದಾರೆ ಅದು ಹರಾಂ ಅಲ್ಲವೇ ?
ಉ:
ಸ್ತ್ರೀಯರು ಮಸೀದಿಗೆ ಹೋಗಬಾರದೆಂದು ಹೇಳಿದ್ದು ಇಂದಿನ ಸುನ್ನೀ ವಿದ್ವಾಂಸರಲ್ಲ.ಹೊರತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರಾಗಿದ್ದಾರೆ.ಸ್ತ್ರೀಯರು ಮಸೀದಿಗೆ ಹೋಗದೆ ಮನೆಯಲ್ಲೇ ನಮಾಝ್ ಮಾಡುವುದು ಅತ್ಯಂತ ಶ್ರೇಷ್ಟವೆಂದು ಅವರು ತಿಳಿಸಿದ್ದಾರೆ.ಆ ತಳಹದಿಯಲ್ಲಿ ಸ್ತ್ರೀಯರು ಮಸೀದಿಗೆ ಹೋಗಬಾರದೆಂದು ಸುನ್ನಿಗಳು ಹೇಳುತ್ತಾರೆ.
ಅದೇ ಸಂದರ್ಭದಲ್ಲಿ ಅಂಬಿಯಾಗಳ , ಔಲಿಯಾಗಳ ಹಾಗೂ ಸಜ್ಜನರ ಖಬರ್ ಝಿಯಾರತ್ ಸ್ತ್ರೀಯರಿಗೆ ಸುನ್ನತ್ತಾಗಿದೆಯೆಂದು ತುಹ್ಫಾ , ನಿಹಾಯ , ಮುಗ್ನೀ ಮುಂತಾದ ಸರ್ವ ಗ್ರಂಥಗಳಲ್ಲೂ ಕಾಣಬಹುದು.ಖಬರ್ ಝಿಯಾರತ್ ಮಾಡಬೇಕಾದರೆ ಖಬರಿನ ಬಳಿಗೆ ನಾವು ಹೋಗಬೇಕೇ ವಿನಃ ಖಬರ್ ಈಚೆ ಬರಲಾರದು ಎಂದು ಎಲ್ಲರಿಗೂ ತಿಳಿಯುವ ವಿಚಾರ.ಆದ್ದರಿಂದ ಸ್ತ್ರೀಯರು ಅವರ ಖಬರನ್ನು ಸಂದರ್ಶಿಸುತ್ತಾರೆ.
ಪ್ರಶ್ನೆ:5
----------
ಉರೂಸನ್ನು ವಿಜೃಂಭಣೆಯಿಂದ ಆಚರಿಸುವುದಾದರೂ ಏಕೆ? ಸರಳವಾಗಿ ನಡೆಸಬಾರದೆ?
ಉ:
------
ಇಂದು ನಡೆಯುವ ಉರೂಸುಗಳಲ್ಲಿ ನಿಷಿದ್ಧವಾದ ವಿಜೃಂಭಣೆಗಳೋ, ಆಡಂಬರಗಳೋ ಕಂಡು ಬರುವುದಿಲ್ಲ ಎಂಬುವುದು ಒಂದು ವಾಸ್ತವಿಕತೆಯಾಗಿದೆ.ಇನ್ನು ಅಲ್ಲಿ ಹಾಕುವ ಟ್ಯೂಬ್ ಗಳು,ಮೈಕ್ ಗಳೂ ಅದೆಲ್ಲವೂ ಅಗತ್ಯವೇ ಆಗಿದೆ.ಲಕ್ಷಾಂತರ ಜನರು ಸೇರುವ ಸ್ಥಳದಲ್ಲಿ ಕೇವಲ ಹತ್ತು ಟ್ಯೂಬ್ ಗಳು ಹಾಕಿದರೆ ಸಾಕೇ? ಅಥವಾ ಒಂದೆರಡು ಮೈಕ್ ಬಾಕ್ಸ್ ಗಳನ್ನು ಕಟ್ಟಿದರೆ ಸಾಕೇ? ಉರೂಸ್ ನ ಸಂದರ್ಭದಲ್ಲಿ ಸೇರುವ ಜನಸಂಖ್ಯೆಗೆ ಅನುಗುಣವಾಗಿ ಟ್ಯೂಬ್ ಗಳು ಹಾಕುವುದು ಅಗತ್ಯವಾಗಿದೆ.
ಇನ್ನು ಮಿನಿಯೇಚರ್ ಗಳು ಹಾಕುವುದಾದರೂ ಏಕೆ ಎಂದು ಕೇಳುವವರಿದ್ದಾರೆ.ಸಾಮನ್ಯವಾಗಿ ಉರೂಸ್ ಸಂದರ್ಭದಲ್ಲಿ ದರ್ಗಾಕಿಂತಲೂ ಮಿಗಿಲಾಗಿ ಮಸೀದಿಗೆ ಮಿನಿಯೇಚರ್ ಗಳನ್ನು ಹಾಕಲಾಗುತ್ತದೆ.ಇದನ್ನು ಆಡಂಬರವೆಂದೂ ನಿಷಿದ್ಧವೆಂದೂ ಹೇಳಲು ಸಾಧ್ಯವಿಲ್ಲ.ಏಕೆಂದರೆ ಅಲ್ಲಾಹನ ಮಸೀದಿಯನ್ನು ಅಲಂಕರಿಸುವುದು ಅಲ್ಲಾಹನ ಮಸೀದಿಗೆ ನೀಡುವ ಗೌರವವಾಗಿದೆ.ಅಲ್ಲಾಹು ಗೌರವಿಸಿದ ವಸ್ತುವನ್ನು ಗೌರವಿಸುವುದು ಮುಸ್ಲಿಮರ ಕರ್ತವ್ಯವಾಗಿದೆ.ಅಲ್ಲಾಹನ ಭವನವಾದ ಕ ಅಬಾ ಶರೀಫ್ ಗೆ ಅತೀ ಸುಂದರವೂ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ರತ್ನ ಕಂಬಳಿಯನ್ನು ಇಂದಿಗೂ ಹೊದಿಸಲಾಗುತ್ತದೆ.ಇದನ್ನು ಯಾವುದೇ ಒಬ್ಬ ವಿದ್ವಾಂಸನೂ ವಿರೊಧಿಸಿಲ್ಲ.ಮಾತ್ರವಲ್ಲ ವಹ್ಹಾಬಿಗಳ ಆಡಳುತವಿರುವ ಸೌದಿ ಸರಕಾರವೇ ಇದನ್ನು ನಿರ್ವಹಿಸುತ್ತಿದೆ.ಆದುದರಿಂದ ಅಲ್ಲಾಹನ ಮಸೀದಿಯನ್ನು ಗೌರವಿಸಿ ಮಿಯೇಚರ್ ಹಾಕುವುದು ಉತ್ತಮವೇ ಆಗಿದೆ.
ಅದೇ ರೀತಿ ಔಲಿಯಾಗಳ ಮಖ ಬರಗಳನ್ನು ಮಿಯೇಚರ್ ಮೂಲಕ ಅಲಂಕರಿಸುವುದು ಉತ್ತಮವೇ ಆಗಿದೆ.ಅಲ್ಲಾಹನು ಸೌಂದರ್ಯವುಳ್ಳವನೂ ಸೌಂದರ್ಯವನ್ನು ಇಷ್ಟಪಡುವವನೂ ಆಗಿದ್ದಾನೆ ಎಂದು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರು ತಿಳಿಸಿದ್ದಾರೆ.ಆದುದರಿಂದ ಅವರ ಮಖಬರಗಳಿಗೆ ಸೌಂದರ್ಯವನ್ನುಂಟು ಮಾಡುವುದು ಈ ಹದೀಸಿಗೆ ಅನುಯೋಜ್ಯವಾಗಿದೆ.
ಅಲ್ಲದೆ ಉರೂಸ್ ಕಾರ್ಯಕ್ರಮದಲ್ಲಿ ನಡೆಯುವ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಬೇರೆ ಬೇರೆ ಪ್ರದೇಶದ ವಿದ್ವಾಂಸರೂ ಸೂಫಿವರ್ಯರೂ ಬರುತ್ತಾರೆ.ಆ ಸಂದರ್ಭದಲ್ಲಿ ಮಸೀದಿ ಮತ್ತು ಪರಿಸರ ವನ್ನು ಅಲಂಕರಿಸುವುದು ಆವಶ್ಯವಾಗಿದೆ.ಸಾಮಾನ್ಯವಾಗಿ ನಮ್ಮ ಮನೆಗೆ ವಿದೂರದ ಗೌರವಾನ್ವಿತರಾದ ಅತಿಥಿಗಳು ಬರುವಾಗ ನಮ್ಮ ಮನೆಯನ್ನು ಅಲಂಕರಿಸುವುದು ಸ್ವಾಭಾವಿಕವಲ್ಲವೇ?
ಅದೇ ರೀತಿ ನಮ್ಮ ಊರಿಗೆ ವಿದೂರದ ವಿದ್ವಾಂಸರು ಅತಿಥಿಗಳಾಗಿ ಬರುವಾಗ ಮಸೀದಿ ಹಾಗೂ ಪರಿಸರವನ್ನು ಅಲಂಕರಿಸುವುದು ಸರ್ವೋತ್ತಮವಾಗಿದೆ.ಇದ್ಯಾವುದೂ ಆಡಂಭರ ಹಾಗೂ ಅನಾಚಾರವಲ್ಲ.
ಸಲ್ಲಲ್ಲಾಹು ಅಲಾ ಮುಹಮ್ಮದ್ ......ಸಲ್ಲಲ್ಲಾಹು ಅಲೈಹಿ ವಸಲ್ಲಮ್
Comments