*ನಮಾಜು ಉಪೇಕ್ಷಿಸುವವನು ವ್ಯಭಿಚಾರಿಣಿ ಮಾಡಿದ ಪಾಪಕ್ಕಿಂತಲೂ ಮಹಾಪಾಪಿ....*
✍ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ.....
ಇಸ್ಲಾಮಿನ ಮೂಲಭೂತ ಪಂಚ ಕಾರ್ಯಗಳಲ್ಲೊಂದಾಗಿದೆ ನಮಾಜು.ಪ್ರಾಯಪೂರ್ತಿ ಬುದ್ಧಿ ಇರುವ ಹೈಳ್ ನಿಫಾಸಿನಿಂದ ಶುದ್ಧಿ ಇರುವ ಎಲ್ಲಾ ಮುಸ್ಲಿಮರ ಮೇಲೆ ಐದು ಸಮಯದ ನಮಾಜು ಕಡ್ಡಾಯವಾಗಿದೆ.ಏನೇ ರೋಗವಿರಲಿ,ಎಷ್ಟೇ ಪ್ರಾಯವಾಗಿರಲಿ ನಮಾಜು ಕಡ್ಡಾಯಗೊಳಿಸಲ್ಪಟ್ಟವನ ಶರೀರದಲ್ಲಿ ಜೀವ ಇರುವ ತನಕ ಅವನಿಗೆ ನಮಾಜಿನಿಂದ ವಿರಾಮ ಇಲ್ಲ..ಫರಲ್ ನಮಾಜು ನಿಂತು ನಿರ್ವಹಿಸುವುದು ಕಡ್ಡಾಯವಾಗಿದೆ.ನಿಂತು ನಮಾಜು ನಿರ್ವಹಿಸಲು ಅಶಕ್ತನಾದವನು ಕುಳಿತು,ಕುಳಿತು ನಿರ್ವಹಿಸಲು ಅಸಾಧ್ಯನಾದವನು ಸರಿದು ಮಲಗಿ,ಸರಿದು ಮಲಗಿ ನಿರ್ವಹಿಸಲು ಅಶಕ್ತನಾದವನು ಅಂಗಾತ ಮಲಗಿ ನಿರ್ವಹಿಸುವುದು ಕಡ್ಡಾಯವಾಗಿದೆ.
ಅದೂ ಅಸಾಧ್ಯವಾದವನು ಕಣ್ಣು ರೆಪ್ಪೆಗಳಿಂದ ಇಶಾರತ್ ಮಾಡುವ ಮೂಲಕ ನಮಾಜು ನಿರ್ವಹಿಸಬೇಕು.
ಒಟ್ಟಿನಲ್ಲಿ ಪ್ರಾಯಪೂರ್ತಿ ಬುದ್ಧಿ ಇರುವ ಹೈಳ್ ನಿಫಾಸಿನಿಂದ ಶುದ್ಧಿ ಇರುವವನು ಅವನಿಗೆ ಮರಣ ಸಂಭವಿಸುವ ತನಕ ನಮಾಜು ನಿರ್ವಹಿಸುವುದು ಕಡ್ಡಾಯವಾಗಿದೆ.
ಐದು ವಖ್ತ್ ನಮಾಜನ್ನು ಅದರ ನಿಶ್ಚಿತ ಸಮಯದ ಪ್ರಥಮ ಸಮಯದಲ್ಲಿ ನಿರ್ವಹಿಸಬೇಕು.ಯಾವುದೇ ಕಾರಣವಿಲ್ಲದೆ ನಿಶ್ಚಿತ ಸಮಯದಿಂದ ನಮಾಜನ್ನು ಮುಂದೂಡುವುದು ನಿಷಿದ್ಧವಾಗಿದೆ.
ಸಮಯಕ್ಕೆ ಸರಿಯಾಗಿ ನಮಾಜು ನಿರ್ವಹಿಸುವುದು ಅಲ್ಲಾಹನಿಗೆ ಅತಿಹೆಚ್ಚು ಇಷ್ಟವಾದ ಸತ್ಕರ್ಮವಾಗಿದೆಯೆಂದು ಪ್ರವಾದಿ (ಸ.ಅ) ಹೇಳಿದ್ದಾರೆ.
*ಐದು ವಖ್ತ್ ನಮಾಜು ಪಾಪಗಳಿಗೆ ಪರಿಹಾರ*
ಒಬ್ಬ ಮನುಷ್ಯನು ತನ್ನ ಮನೆಯ ಸಮೀಪದ ಕೊಲದಲ್ಲಿ,ಅಥವಾ ಹರಿಯುತ್ತಿರುವ ನದಿ ನೀರಿನಲ್ಲಿ ದಿವಸಕ್ಕೆ ಐದು ಸಲ ಸ್ನಾನ ಮಾಡಿದರೆ ಅವನ ಶರೀರದಲ್ಲಿ ಕೊಳಕುಗಳಿರಲು ಸಾಧ್ಯತೆ ಇದೆಯೇ?
ಇಲ್ಲ..ಅವನ ಶರೀರದಲ್ಲಿ ಕೊಳಕುಗಳಿರಲು ಸಾಧ್ಯವಿಲ್ಲ.ಅವನ ಶರೀರ ಶುಭ್ರವಾಗಿ ಕೊಳಕು ಮುಕ್ತವಾಗುತ್ತದೆ. ಇದೇ ರೀತಿ ಒಬ್ಬ ಮುಸ್ಲಿಮನು ದಿನಕ್ಕೆ ಐದು ಬಾರಿ ಕಡ್ಡಾಯಗೊಳಿಸಲ್ಪಟ್ಟ ನಮಾಜನ್ನು ನಿರ್ವಹಿಸಿದರೆ ಅವನ ಶರೀರವು ಪಾಪಗಳಿಂದ ಮುಕ್ತವಾಗಿ ಶುಭ್ರನಾಗುತ್ತಾನೆ ಎಂದು ಪ್ರವಾದಿ ಮುಹಮ್ಮದ್ ಮುಸ್ತಫ (ಸ.ಅ) ಹೇಳಿರುವರು.ಅವನ ಪಾಪಗಳು ಸಮುದ್ರದ ಅಲೆಗಳಿಂದುಂಟಾಗುವ ನೊರೆಗಳಷ್ಟಿದ್ದರೂ ಮರದಿಂದ ಒಣಗಿದ ಎಲೆಗಳು ಉದುರಿಬೀಳುವಂತೆ ಅವನ ಶರೀರದಿಂದ ಅವನ ಪಾಪಗಳು ದೈನಂದಿನ ಐದು ಸಮಯ ನಮಾಜು ನಿರ್ವಹಿಸುವುದರಿಂದ ಉದುರಿಹೋಗುತ್ತವೆ.ಅಲ್ಲಾಹು ಅವನ ಪಾಪಗಳನ್ನು ಮನ್ನಿಸುತ್ತಾನೆ..
*ಜಮಾಅತಾಗಿ ನಮಾಜು ನಿರ್ವಹಿಸುವುದರ ಶ್ರೇಷ್ಠತೆ*
ನಮಾಜನ್ನು ಜಮಾಅತಾಗಿ ನಿರ್ವಹಿಸುವುದರಿಂದ ಅಲ್ಲಾಹು ಅಪಾರ ಪುಣ್ಯಗಳನ್ನು ನೀಡುತ್ತಾನೆ.ಜಮಾಅತಾಗಿ ನಿರ್ವಹಿಸಲು ಕನಿಷ್ಠ ಎರಡು ಮಂದಿ ಸಾಕು.ಒಬ್ಬ ಇಮಾಮ್ ಮತ್ತೊಬ್ಬ ಮಅಮೂಮ್.ಎರಡೇ ಮಂದಿ ಇರುವಾಗ ಮಅಮೂಂ ಇಮಾಮಿನ ಬಲಬದಿಯಲ್ಲಿ ತುಸು ಹಿಂದೆ ಸರಿದು ನಿಲ್ಲಬೇಕು.ಎರಡೇ ಮಂದಿ ಜಮಾಅತಾಗಿ ನಮಾಜು ನಿರ್ವಹಿಸುತ್ತಿರುವ ಸಂದರ್ಭ ಮೂರನೇ ವ್ಯಕ್ತಿಯ ಆಗಮನವಾದರೆ ಇಮಾಮಿನ ಹಿಂದೆ ನಿಲ್ಲದೆ ಇಮಾಮಿನ ಬಲಬದಿಯಲ್ಲಿ ತುಸು ಹಿಂದೆ ಸರಿದು ನಿಲ್ಲಬೇಕು.ಬಳಿಕ ಮಅಮೂಮುಗಳಾದ ಎರಡು ಮಂದಿಯೂ ಮೂರು ಅಲುಗಾಟ ನಿರಂತರವಾಗದಂತೆ ಎಚ್ಚರವಹಿಸಿ ಇಮಾಮಿನ ಹಿಂದೆ ಸಾಲಾಗಿ ನಿಲ್ಲಬೇಕು.ಇದುವಾಗಿದೆ ಸರಿಯಾದ ಕ್ರಮ.
ಪ್ರಾರಂಭದಲ್ಲಿ ಮೂರು ಮಂದಿ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಒಬ್ಬ ಇಮಾಮಾಗಿಯೂ ಉಳಿದವರು ಮಹಮೂಮುಗಳಾಗಿಯೂ ಇಮಾಮಿನ ಹಿಂದೆ ಸಾಲಾಗಿ ನಿಲ್ಲಬೇಕು.
*ಜಮಾಅತಾಗಿ ನಮಾಜು ನಿರ್ವಹಿಸುವುದು ಒಬ್ಬಂಟಿಗನಾಗಿ ನಮಾಜು ನಿರ್ವಹಿಸುವುದಕ್ಕಿಂತ 27 ಪಟ್ಟು ಹೆಚ್ಚು ಪ್ರತಿಫಲ ಸಿಗುವ ಕಾರ್ಯವಾಗಿದೆ...*
ನೆಬಿ (ಸ.ಅ) ಹೇಳುತ್ತಾರೆ...
صلاةالجماعة أفضل من صلاةالفذ بسبع وعشرين درجة
ಜಮಾಅತಾಗಿ ನಮಾಜು ನಿರ್ವಹಣೆ ಒಬ್ಬಂಟಿಗನಾಗಿ 27 ಸಲ ನಮಾಜು ನಿರ್ವಹಿಸುವುದಕ್ಕಿಂತಲೂ ಶ್ರೇಷ್ಟವಾಗಿದೆ....
ಜಮಾಅತಾಗಿ ನಮಾಜು ನಿರ್ವಹಿಸುವುದರ ಮಹತ್ವ ಈ ಕೆಳಗಿನ ಘಟನೆಗಳಿಂದ ತಿಳಿದುಕೊಳ್ಳಬಹುದು.
ಒಮ್ಮೆ ಉಮರ್ (ರ.ಅ) ತೋಟವನ್ನು ಸಂದರ್ಶಿಸಿ ಹಿಂದಿರುಗುವಷ್ಟರಲ್ಲಿ ಅಸರ್ ನಮಾಜಿನ ಜಮಾಅತ್ ನಷ್ಟವಾಯಿತು.ಎಲ್ಲರೂ ಮಸೀದಿಯಲ್ಲಿನ ಅಸರ್ ಜಮಾಅತು ನಿರ್ವಹಿಸಿ ಮರಳುತ್ತಿರುವುದನ್ನು ಕಂಡ ಉಮರ್ (ರ.ಅ) ತುಂಬಾ ಬೇಸರದಿಂದ ಹೇಳಿದರು......
*ಇನ್ನಾಲಿಲ್ಲಾಹಿ ವಯಿನ್ನಾ ಇಲೈಹಿ ರಾಜಿಊನ್*
...ನಾನು ನನ್ನ ತೋಟವನ್ನು ಸಂದರ್ಶಿಸಲು ಹೋದಕಾರಣ ನನಗೆ ಅಸರ್ ಜಮಾಅತು ನಷ್ಟವಾಯಿತಲ್ಲಾ....ಆದುದರಿಂದ ನಿಮ್ಮನ್ನು ಸಾಕ್ಷಿಯಾಗಿಸಿ ನನ್ನ ತೋಟವನ್ನು ಬಡ ನಿರ್ಗತಿಕರಿಗೆ ದಾನವಾಗಿ ನೀಡುತ್ತಿದ್ದೇನೆ.ಇದರಿಂದಾದರೂ ಅಸರ್ ಜಮಾಅತ್ ನಷ್ಟವಾದುದಕ್ಕೆ ನನಗೆ ಪರಿಹಾರವಾಗಲಿ....
*ಮತ್ತೊಂದು ಸಂಭವ*
ಹಾತಮ್ಮುಲ್ ಅಸಮ್ಮ್ (ರ.ಅ) ಹೇಳುತ್ತಾರೆ...
ನನಗೆ ಒಮ್ಮೆ ಒಂದು ನಮಾಜಿನ ಜಮಾಅತ್ ನಷ್ಟವಾಯಿತು.ಇದರ ಕಾರಣ ತಿಳಿಯಲು ಅಬೂ ಇಸ್ಹಾಖ್ ಅನ್ನಜ್ಜಾರೀ ಮಾತ್ರ ನನ್ನ ಬಳಿ ಬಂದಿದ್ದರು.ಒಂದುವೇಳೆ ನನ್ನ ಮಕ್ಕಳಲ್ಲಿ ಯಾರಾದರೂ ಒಬ್ಬ ಮರಣಹೊಂದಿದ್ದರೆ ಹತ್ತು ಸಾವಿರಕ್ಕಿಂತಲೂ ಹೆಚ್ಚು ಜನರು ನನ್ನನ್ನು ಸಾಂತ್ವನಪಡಿಸಲು ಬರುತ್ತಿದ್ದರು.ಏನಿದು ಅವಸ್ಥೆ...
ಜನರಿಗೆ ದೀನಿನ ಕಾರ್ಯಕ್ಕಿಂತಲೂ ದುನ್ಯಾವಿನ ಕಾರ್ಯವೇ ದೊಡ್ಡದಾಗಿ ಬಿಟ್ಟಿದೆ....ಆದರೆ..........
ನನಗೆ ನನ್ನ ಎಲ್ಲಾ ಮಕ್ಕಳು ಮರಣಹೊಂದಿದರೂ ನನಗೆ ಈ ನಮಾಜಿನ ಜಮಾಅತ್ ನಷ್ಟವಾದ ದುಃಖಕ್ಕಿಂತಲೂ ಮಕ್ಕಳು ಮರಣಹೊಂದಿದ ದುಃಖ ದೊಡ್ಡ ವಿಷಯವೇ ಆಗುತ್ತಿರಲಿಲ್ಲ.
*ಇನ್ನೊಂದು ಘಟನೆ*
ಮುಹಮ್ಮದ್ ಇಬ್ನು ಸಮಾಅಃ (ರ.ಅ) ಹೇಳುತ್ತಾರೆ.
ನಾನು ನಲ್ವತ್ತು ವರ್ಷ ಜಮಾಅತಾಗಿ ನಮಾಜು ನಿರ್ವಹಿಸಿದ್ದೇನೆ.ಪ್ರಥಮ ತಕ್ಬೀರತುಲ್ ಇಹ್ರಾಮಿನಲ್ಲಿಯೇ ನಮಾಜಿನಲ್ಲಿ ಭಾಗಿಯಾಗುತ್ತಿದ್ದೆ.ಆದರೆ ಒಂದು ದಿವಸ ಒಂದು ನಮಾಜಿನ ತಕ್ಬೀರತುಲ್ ಇಹ್ರಾಂ ನನಗೆ ನಷ್ಟವಾಯಿತು.ಅಂದು ನನ್ನ ಪ್ರೀತಿಯ ಉಮ್ಮ ಮರಣಹೊಂದಿದ ದಿವಸವಾಗಿತ್ತು.ಅಂದಿನ ದಿವಸದ ಒಂದು ನಮಾಜಿನ ಜಮಾಅತ್ ಮಾತ್ರ ನನಗೆ ನಷ್ಟವಾಯಿತು.ಆದುದರಿಂದ ಆ ನಮಾಜಿನ ಜಮಾಅತಿನ ಶ್ರೇಷ್ಟತೆ ಲಭಿಸಲು ಆ ನಮಾಜನ್ನು 25 ಸಲ ನಿರ್ವಹಿಸಿದೆ.ತದನಂತರ ನನಗೆ ನಿದ್ರೆ ಆವರಿಸಿತು.ನಾನು ಅಲ್ಲಿಯೇ ನಿದ್ರೆಗೆ ಜಾರಿದೆ. ಆಗ ಕನಸಿನಲ್ಲಿ ನನಗೊಂದು ಅಶರೀರವಾಣಿ ಕೇಳಿಸಿತು.?!
ಓ ಮುಹಮ್ಮದ್...ನೀನು ನಿನಗೆ ನಷ್ಟಹೊಂದಿದ ಜಮಾಅತ್ ನಮಾಜಿನ ಪ್ರತಿಫಲವನ್ನು ಸರಿದೂಗಿಸಲು 25 ಸಲ ನಮಾಜು ನಿರ್ವಹಿಸಿದೆ....ಆದರೆ!!!!
ಜಮಾಅತಾಗಿ ನಮಾಜು ನಿರ್ವಹಿಸುವಾಗ ಮಲಕುಗಳು ಆಮೀನ್ ಹೇಳುತ್ತಾರೆ ಅಲ್ವಾ....ಆ ಭಾಗ್ಯ ನಿನಗೆ ಲಭಿಸಿದೆಯಾ? ಇಲ್ವಲ್ಲಾ...
*ನಮಾಜು ಉಪೇಕ್ಷಿಸಿದವ ವ್ಯಭಿಚಾರಿಣಿ ಮಾಡಿದ ಪಾಪಕ್ಕಿಂತಲೂ ಮಹಾಪಾಪಿ*
ನಮಾಜು ಸ್ವರ್ಗದ ಕೀಲಿಕೈ ಆಗಿದೆಯೆಂದು ನೆಬಿ ಸ.ಅ ಹೇಳಿದ್ದಾರೆ.ಸ್ವರ್ಗ ಪ್ರವೇಶ ಪಡೆಯಲು ನಮಾಜು ನಿರ್ವಹಣೆ ಅತ್ಯಗತ್ಯವಾಗಿದೆ.ನಮಾಜಿಲ್ಲದವ ಪರಾಭವ ಹೊಂದುವುದರಲ್ಲಿ ಯಾವುದೇ ಸಂಶಯವಿಲ್ಲ.ನಮಾಜು ಉಪೇಕ್ಷಿಸುವವನನ್ನು ಪರಲೋಕದಲ್ಲಿ ಅಲ್ಲಾಹು ಭೀಕರ ಶಿಕ್ಷೆಗೆ ಗುರಿಪಡಿಸುತ್ತಾನೆ.
ಒಮ್ಮೆ ಇಸ್ರಾಯೀಲ್ ಸಮುದಾಯದ ಒಬ್ಬಳು ಸ್ತ್ರೀ ತುಂಬಾ ದುಃಖದಿಂದ ಪ್ರವಾದಿ ಮೂಸ (ಅ.ಸ) ರ ಬಳಿ ಬಂದು ಓ ಅಲ್ಲಾಹನ ಪ್ರವಾದಿಯವರೇ....ನಾನು ಒಂದು ಮಹಾಪಾಪವನ್ನು ಮಾಡಿದ್ದೇನೆ.ಬಳಿಕ ಅದರಿಂದ ತೌಬ ಮಾಡಿದ್ದೇನೆ.ಮಾಡಿದ ತಪ್ಪಿನ ಅರಿವಾಗಿ ಇನ್ನೆಂದೂ ತಪ್ಪು ಮಾಡುವುದಿಲ್ಲ ಎಂದು ದ್ರಢಪ್ರತಿಜ್ಞೆ ಮಾಡಿ ಅಲ್ಲಾಹನಲ್ಲಿ ಆ ತಪ್ಪನ್ನು ಕ್ಷಮಿಸಲು ಬೇಡಿದ್ದೇನೆ.ತಾವು ಕೂಡಾ ನನಗಾಗಿ ನನ್ನ ಪಾಪವನ್ನು ಅಲ್ಲಾಹು ಕ್ಷಮಿಸಲು ನನ್ನ ತೌಬಾವನ್ನು ಸ್ವೀಕರಿಸಲು ಅಲ್ಲಾಹನಲ್ಲಿ ಪ್ರಾರ್ಥಿಸಿರಿ ಎಂದು ಹೇಳಿದಾಗ ಪ್ರವಾದಿ ಮೂಸಾ ನೆಬಿ (ಅ.ಸ) ನೀನು ಮಾಡಿದ ಪಾಪವಾದರೂ ಏನು? ಎಂದು ಕೇಳಿದಾಗ ಆ ಸ್ತ್ರೀ ಹೇಳುತ್ತಾಳೆ.ಓ ಅಲ್ಲಾಹನ ಪ್ರವಾದಿಯವರೇ. ನಾನು ವ್ಯಭಿಚಾರ ಮಾಡಿದೆ.ಅದರಿಂದ ನಾನು ಗರ್ಭಿಣಿಯಾದೆ. ಜನಿಸಿದ ಮಗುವನ್ನು ಕೊಂದಿದ್ದೇನೆ.ಇದು ನಾನು ಮಾಡಿದ ಪಾಪವೆಂದಳು.
ಇಷ್ಟು ಹೇಳಿದ್ದೇ ತಡ! ಮೂಸಾ ನೆಬಿ (ಅ.ಸ) ಓ ಕೆಟ್ಟ ಸ್ತ್ರೀಯೇ ಇಲ್ಲಿಂದ ಬೇಗ ತೊಲಗು. ನೀನು ಮಾಡಿದ ಪಾಪದ ನಿಮಿತ್ತ ಅಲ್ಲಾಹನ ಶಿಕ್ಷೆಗಳು ಬಂದೆರಗಬಹುದು.ಆಕಾಶದಿಂದ ಬೆಂಕಿ ಎರಗಿ ನಮ್ಮನ್ನು ನಾಶಮಾಡಬಹುದು.ಆದುದರಿಂದ ಬೇಗ ಇಲ್ಲಿಂದ ಜಾಗ ಖಾಲಿ ಮಾಡು.
ಎಂದು ಹೇಳಿದಾಗ ಆ ಸ್ತ್ರೀ ಬಹಳ ಬೇಸರದಿಂದ ರೋದಿಸುತ್ತಾ ಅಲ್ಲಿಂದ ಮರಳಿದಳು.ಅಷ್ಟರಲ್ಲಿ ಜಿಬ್ರೀಲ್ (ಅ.ಸ) ಆಗಮಿಸಿ ಮೂಸಾ ನೆಬಿ (ಅ.ಸ) ರವರೊಂದಿಗೆ ಓ ಮೂಸಾ ನೆಬಿಯೇ ಅಲ್ಲಾಹು ತಮಗೆ ತಿಳಿಸಲು ಹೇಳಿದ್ದಾರೆ....ಮಾಡಿದ ತಪ್ಪಿಗೆ ತೌಬ ಮಾಡಿ ಬಂದ ಸ್ತ್ರೀಯನ್ನು ಯಾಕೆ ಮರಳಿಸಿದಿರಿ..ಓಡಿಸಿದಿರಿ..ಅವಳು ಮಾಡಿದ ಪಾಪಗಳಿಗಿಂತಲೂ ದೊಡ್ಡ ಪಾಪ ಯಾವುದೆಂದು ತಮಗೆ ತಿಳಿದಿದೆಯೇ?...ಅವಳಿಗಿಂತ ಮಹಾಪಾಪಿ ಯಾರೆಂದು ತಮಗೆ ತಿಳಿದಿದೆಯಾ?...
ಮೂಸಾ ನೆಬಿ (ಅ.ಸ) ಕೇಳಿದರು.
ಅವಳಿಗಿಂತಲೂ ದೊಡ್ಡ ಪಾಪಿ ಯಾರು?...
ಜಿಬ್ರೀಲ್ (ಅ.ಸ) ಆಗ ಹೇಳಿದರು.
ಮನಪೂರ್ವಕ ನಮಾಜು ಉಪೇಕ್ಷಿಸುವವನು ಅವಳಿಗಿಂತಲೂ ದೊಡ್ಡ ಮಹಾಪಾಪಿ ಆಗಿದ್ದಾನೆ....
✍ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ..
+918105745760
Comments