Skip to main content

ವಿಸ್ಮಯ ತುಂಬಿದ ಜೀವಜಗತ್ತು 26

ವಿಸ್ಮಯ ತುಂಬಿದ ಜೀವಜಗತ್ತು 👉 26

*ರೋಮಾಂಚಕಾರಿ ಮೇಕೆ ಪುರಾಣ*
ಭಾಗ 👉 2

*ಆಡು ಮೇಯಿಸಿ ಸಹನೆ ಕಲಿಯಿರಿ*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971553499119

   ▪"ಅಲ್ಲಾಹನು ನಿಯುಕ್ತಗೊಳಿಸಿದ ಎಲ್ಲಾ ಪ್ರವಾದಿಗಳೂ ಆಡು ಮೇಯಿಸಿದ್ದರು" ಎಂದು ಪ್ರವಾದಿಯವರು ಒಮ್ಮೆ ಸಹಾಬಿಗಳಲ್ಲಿ ಹೇಳಿದರು. ಆಗ ಸಹಾಬಿಗಳು ಕೇಳಿದರು. *"ಪ್ರವಾದಿಯವರೇ, ಹಾಗಾದರೆ ನೀವು ಕೂಡ ಮೇಯಿಸಿದ್ದೀರಾ..?"* "ಹೌದು... ನಾನೂ ನನ್ನ ಬಾಲ್ಯದಲ್ಲಿ ಆಡು ಮೇಯಿಸಿದ್ದೇನೆ" ಎಂದರು ಪ್ರವಾದಿಯವರು.
   ▪ಆಡು ಕುರಿಗಳೊಂದಿಗೆ ಬೆರೆತು ಅವುಗಳನ್ನು ಮೇಯಿಸುವ ಕೆಲಸ ನಿರ್ವಹಿಸುವವನು ವಿನಯವಂತನಾಗುವನು. ದುಡುಕು ಅಹಂಗಳು ಮಾಯವಾಗಿ ಸಹನೆ, ತಾಳ್ಮೆಗಳಾಗಿ ಮೃದು ಸ್ವಭಾವವು ಅವನಲ್ಲಿ ರೂಪುಗೊಳ್ಳುವುದು. ಧಿಕ್ಕಾರಿ ಜನತೆಯನ್ನು ಸದ್ಗುಣಗಳ ಸರಿದಾರಿಯತ್ತ ಕರೆತಂದ ಎಲ್ಲಾ ಪ್ರವಾದಿಗಳನ್ನು ಅವರ ಪ್ರವಾದಿತ್ವಕ್ಕೆ ಮೊದಲೇ ಅಲ್ಲಾಹನು ಈ ಕೆಲಸ ಕೊಟ್ಟು ತರಬೇತಿ ಮಾಡಿರುವುದರ ಹಿಂದೆ ಈ ಯುಕ್ತಿಯು ಅಡಗಿರಬಹುದು.
   ▪ಪ್ರವಾದಿ ಮುಹಮ್ಮದ್ (ಸ) ರು ಆಡು ಸಾಕಣೆ ಮಾಡುತ್ತಿದ್ದರು. ಆದರೆ ಆಡು ಸಂಗ್ರಹಣೆಯಲ್ಲಿ ಆಡುಗಳ ಸಂಖ್ಯೆ ನೂರನ್ನು ದಾಟುತ್ತಿರಲಿಲ್ಲ. ನೂರು  ದಾಟಿದರೆ ತಕ್ಷಣ ಹೆಚ್ಚಿನದ್ದನ್ನು ದ್ಸಬಹ್ ಮಾಡಿ ಆತಿಥ್ಯ ನೀಡುತ್ತಿದ್ದರು. ನೂರು ದಾಟಿ ಆಡುಗಳ ಸಂಖ್ಯೆ ಹೆಚ್ಚಿ ಐಹಿಕ ಜಗತ್ತಿನ ಸಂಪತ್ತಿನತ್ತ ಗಮನ ಹರಿಯದಿರಲಿ ಎಂಬ ಪಾಠವನ್ನು ಈ ಮೂಲಕ ಪ್ರವಾದಿಯವರು ನೀಡಿದ್ದರು.
   ▪ಕುರಿಯ ಹಾಲನ್ನು ಶಾಯಿಯಂತೆ ಉಪಯೋಗಿಸಿ ಒಂದು ಗಟ್ಟಿಯಾದ ಕಾಗದದ ಮೇಲೆ ಬರೆದರೆ ಆ ಬರೆದ ಅಕ್ಷರ ನಮ್ಮ ಕಣ್ಣಿಗೆ ಗೋಚರವಾಗುವುದಿಲ್ಲ.  ಆದರೆ ಅದನ್ನು ತಿಳಿ ನೀರಿಗೆ ಮುಳುಗಿಸಿದರೆ ಆ ಅಕ್ಷರ ಚೆನ್ನಾಗಿ ಬಿಳಿಯಾಗಿ ಪಳಪಳ ಮಿನುಗುತ್ತದೆ. ಸುಬ್‌ಹಾನಲ್ಲಾಹ್! ಇದೆಂತಹಾ ಅಧ್ಬುತ...?
   ▪ಗರ್ಭಿಣಿಯಾದ ಹೆಣ್ಣೊಬ್ಬಳು ಕುರಿಯ ಚರ್ಮವನ್ನು ತನ್ನ ಶರೀರದ ಮೇಲೆ ಹೊದಿಸಿದರೆ ಅವಳಿಗೆ ಗರ್ಭಪಾತವಾಗುತ್ತದೆ
  ▪ಸಹಾಬಿಯೊಬ್ಬರು ಹುನೈನ್ ಯುದ್ದದ ದಿನ ಯುದ್ದ ರಣಾಗಂಣದಲ್ಲಿ ಬಹಳ ನೂಕುನುಗ್ಗಲು ಇದ್ದುದರಿಂದ ಅವರಿಗೆ ತಿಳಿಯದೆ ಅಕಸ್ಮಾತ್ತಾಗಿ ಪ್ರವಾದಿ ಮುಹಮ್ಮದ್ (ಸ) ರ ಕಾಲ ಮೇಲೆ ತುಳಿದು ಹೋಯಿತು. ಈ ಸಹಾಬಿ ಧರಿಸಿದ್ದ ಪಾದರಕ್ಷೆಯಾದರೆ ಬಹಳ ಗಟ್ಟಿಯಾದ ಭಾರ ಕೂಡಿದ್ದೂ ಆಗಿತ್ತು. ತುಳಿದ ರಭಸಕ್ಕೆ ಪ್ರವಾದಿಯವರಿಗೆ ಸಹಿಸಲಾಗದ ನೋವಾದಾಗ ಆ ಸಹಾಬಿಯನ್ನು ತಳ್ಳಿ ತನ್ನ ಕೈಯಲ್ಲಿದ್ದ ಚಾವಟಿಯಿಂದ ಅವರಿಗೆ ಒಂದು ಪೆಟ್ಟು ಕೊಟ್ಟರು.
   ▪ ಈ ಸಹಾಬಿಯು ಮನೆ ತಲುಪಿದಾಗ ಈ ನಡೆದ ಘಟನೆಯನ್ನು ಆಲೋಚಿಸಿ ಬಹಳ ಗೊಂದಲಕ್ಕೊಳಗಾದರು. "ಪ್ರವಾದಿಯವರನ್ನು ತುಳಿದ ನನ್ನ  ಗತಿಯೇನಾಗಬಹುದು.? ನನಗೆ ಏನಾಗುತ್ತದಾ..? ಇತ್ಯಾದಿ ಇತ್ಯಾದಿ ಅಲೋಚನೆಗಳನ್ನು ಮಾಡುತ್ತಾ ರಾತ್ತಿ ಬೆಳಗಾಗುವ ತನಕ ನಿದ್ದೆ ಮಾಡದೆ ಹಾಗೆಯೇ ಚಾಪೆಯಲ್ಲಿ ಕುಳಿತು ಹೇಗಾದರು ಮುಂಜಾನೆಯ ಸೂರ್ಯ ಉದಯಿಸಿತು.
   ▪ನಂತರ ನಡೆದ ಸಂಗತಿಯನ್ನು ಅವರೇ ಹೇಳುತ್ತಾರೆ. *"ನಾನು ಮುಂಜಾನೆ ಬಹಳ ಬೇಸರದಿಂದ ಮನೆಯ ಬಾಗಿಲು ತೆರೆದು ಹೊರಗಡೆ ನೋಡುವಾಗ ಒಬ್ಬರು ಅಪರಿಚಿತರು ಬಹಿರಂಗವಾಗಿ ಹೇಳುತ್ತಿದ್ದಾರೆ. "ನಿನ್ನೆ ಪ್ರವಾದಿಯವರ ಕಾಲಿಗೆ ತುಳಿದ ವ್ಯಕ್ತಿ ಯಾರು...? ಅವರು ಎಲ್ಲಿದ್ದಾರೆ..?"* ನಾನು  ಹೇಳಿದೆ. *"ಅದು ನಾನೆ"* ಬಂದ ವ್ಯಕ್ತಿ ಹೇಳಿದರು. *"ನಿಮ್ಮನ್ನು ಪ್ರವಾದಿವರ್ಯರು ಕಾಯುತ್ತಿದ್ದಾರೆ."* ಹಾಗೆಯೇ ನಾನು ಬಹಳ ಬೇಸರ ಮತ್ತು ಭಯದಿಂದ ಅವರೊಂದಿಗೆ ಪ್ರವಾದಿಯವರ ಸನ್ನಿಧಿಗೆ ಹೋದೆ. ಅಲ್ಲಿ ತಲುಪಿದ ಕೂಡಲೇ ಆ ಕಾರುಣ್ಯದ ಮುತ್ತು ನನ್ನಲ್ಲಿ ಕೇಳಿದರು..? *"ನೀವಾ ನನಗೆ ನಿನ್ನೆ ಆ ಜನ ಜಂಗುಳಿಯಲ್ಲಿ ತುಳಿದು ನೋವು ಮಾಡಿದ್ದು..?"* ನಾನು ಹೇಳಿದೆ. *"ಹೌದು ಪ್ರವಾದಿಯವರೇ..., ಅದು ನಾನೆ"*  ಆಗ ಅವರು ಹೇಳಿದರು. *"ನೀವು ತುಳಿದದ್ದು ಮನಃಪೂರ್ವಕವಾಗಿ ಅಲ್ಲ. ಅಕಸ್ಮಾತ್ ತಿಳಿಯದೆ ಆಗಿತ್ತು. ಆದರೆ ನಿಮ್ಮ ಆ ಭಾರವಿರುವ ದೊಡ್ಡ ಪಾದರಕ್ಷೆಯಲ್ಲಿ ತುಳಿದಾಗ ನನಗೆ ಸಹಿಸಲಾರದ ನೋವಾಯಿತು. ನಾನು ತಕ್ಷಣ ನನ್ನ ಕೈಯಲ್ಲಿದ್ದ ಚಾವಟಿಯಿಂದ ನಿಮಗೆ ಹೊಡೆದು ಬೇಸರ ಮತ್ತು ನೋವು ಮಾಡಿದ್ದೇನೆ. ಆ ಕೃತ್ಯಕ್ಕೆ ಪರಿಹಾರವಾಗಿ ನಿಮಗೆ ನಾನು 80 ಆಡುಗಳನ್ನು ಕೊಡುತ್ತಿದ್ದೇನೆ. ನೀವದನ್ನು ಸ್ವೀಕರಿಸಬೇಕು."* ಆ ಕರುಣಾ ಸಾಗರದ ಆ ಮಹಾ ಕೊಡುಗೆಯನ್ನು ಸ್ವೀಕರಿಸದೆ ನನಗೆ ಬೇರೆ ಮಾರ್ಗ ಇರಲಿಲ್ಲ. ನಾನದನ್ನು ಸ್ವೀಕರಿಸಿದೆನು."
  ▪ಸೊಂಟ ನೋವಿನಿಂದ ಬಳಲುವವರು ನಮ್ಮಲ್ಲಿ ಇರುವುದು ಸಾಧಾರಣ. ಕಪ್ಪು ಬಣ್ಣದ ಗಂಡು ಕುರಿಯಾಡಿನ ಪೃಷ್ಠ ಬಾಗವನ್ನು ತೆಗೆದು ಮೂರು ತುಂಡು ಮಾಡಬೇಕು. ಅದನ್ನು ಚೆನ್ನಾಗಿ ಬೇಯಿಸಿ ಸೂಪ್ ಮಾಡಬೇಕು. ನಂತರ ಅದನ್ನು ಬೆಳಿಗ್ಗೆ ಬರೀ ಹೊಟ್ಟೆಗೆ ಕುಡಿಯಬೇಕು. ಹೀಗೆಯೇ ಮೂರು ತುಂಡಿನಲ್ಲಿ ಮೂರು ದಿನ ಮಾಡಿ ಕುಡಿದರೆ ಈ ರೋಗಕ್ಕೆ ಒಳ್ಳೆಯ ಫಲ ಸಿಗುತ್ತದೆ. ಇದು ಪ್ರವಾದಿ ಮುಹಮ್ಮದ್ (ಸ) ರ ಚಿಕಿತ್ಸಾ ರೂಪವಾಗಿದೆ. ಈ ಹದೀಸನ್ನು ಇಮಾಮ್ ಬಿನ್ ಮಾಜ ವರದಿ ಮಾಡಿದ್ದಾರೆ.
   ▪ ಹಿಜ್‌ರಾ ಆರನೇ ಶತಮಾನದ ಇರಾಕಿನ ಪ್ರಖ್ಯಾತ ವೈದ್ಯರಾದ *ಅಬ್ದುಲ್ ಲತೀಫ್ ಅಲ್ ಬಗ್‌ದಾದಿ* ಯವರು ಹೇಳುತ್ತಾರೆ. *"ಈ ಪ್ರವಾದೀ ಚಿಕಿತ್ಸೆಯು ಬಹಳ ಫಲವತ್ತಾದ ಒಂದಾಗಿದೆ. ರೋಗ ಎಷ್ಟು ಹಳೆಯದಾದರೂ ಎಷ್ಟೋ ವರ್ಷಗಳಿಂದ ಸೊಂಟ ನೋವಿನಿಂದ ಬಳಲುತ್ತಿರುವುದಾದರೂ ಒಳ್ಳೆಯ ಗುಣ ಸಿಗುತ್ತದೆ"*
   ▪ಒಂದು ಬಕ್ರೀದ್ ಹಬ್ಬದ ದಿನದಂದು ಬೆಳಿಗ್ಗೆ ಸೂರ್ಯ ಉದಯಕ್ಕೆ ಮುಂಚೆ ಪ್ರವಾದಿ ಮುಹಮ್ಮದ್ (ಸ) ರು ಮದೀನಾ ಮನವ್ವರದ ಅನ್ಸಾರುಗಳ ತುಂಬಾ  ಮನೆ ಇರುವ ಒಂದು ಗಲ್ಲಿಯಲ್ಲಿ ಹೋಗುತ್ತಿರುವಾಗ ಪ್ರವಾದಿಯವರಿಗೆ ಒಳ್ಳೆಯ ಆಡು ಮಾಂಸ ಪದಾರ್ಥದ ಗಮಗಮ ಪರಿಮಳ ಬಂತು. ಕೂಡಲೇ ಪ್ರವಾದಿಯವರು ಜೋರಾಗಿ ಕೇಳಿದರು. *"ಇಲ್ಲಿ ಯಾರು ಇಷ್ಟು ಬೇಗ ದ್ಸಬಹ್ ಮಾಡಿ ಪದಾರ್ಥ ಮಾಡುವುದು..?"* ಆಗ ಅನ್ಸಾರುಗಳ ಒಂದು ಮನೆಯಿಂದ ಒಬ್ಬರು ಹೊರಬಂದು ಹೇಳಿದರು. *"ಅದು ನಾನು ಪ್ರವಾದಿಯವರೇ.. ದೊಡ್ಡ ಪೆರುನಾಲ್ ನಮಾಝಿಗೆ ಮೊದಲೇ ಚೂರಿಹಾಕಿ, ಪಲ್ಯ ಮಾಡಿ, ಕುಟುಂಬದವರಿಗೆ ಕೊಟ್ಟು ನಂತರ ಮಸೀದಿಗೆ ಹೋಗ ಬಯಸಿದ್ದೇನೆ."* ಪ್ರವಾದಿಯವರು ಹೇಳಿದರು. *"ಅದು ಸರಿಯಾಗದು. ಸಮಯ ಅಗುವುದಕ್ಕಿಂತ ಮೊದಲೇ ಉಝ್‌ಹಿಯ್ಯ‌ತ್ ಮಾಡುವುದಾ..?ನೀನು ಬೇರೊಂದನ್ನು ನಮಾಝ್ ಮುಗಿದ ನಂತರ ಚೂರಿಹಾಕು."* ಆಗ ಆ ಸಹಾಬಿಯಾದ ವ್ಯಕ್ತಿ ಹೇಳಿದರು. *"ನನ್ನಲ್ಲಿ ಇನ್ನು ಉಝ್‌ಹಿಯ್ಯತಿಗೆ  ದ್ಸಬಹ್ ಮಾಡಲು ಪ್ರಾಯ ತಲುಪಿದ ಆಡು ಇಲ್ಲ. ಇರುವುದಾದರೆ ಬರೀ ಆರು ತಿಂಗಳು ಪ್ರಾಯವಿರುವ ಕುರಿ ಮರಿ ಮಾತ್ರ. ಅದು ಸರಿಯಾಗುತ್ತದಾ..?"* ಪ್ರವಾದಿಯವರು  *"ತೊಂದರೆಯಿಲ್ಲ. ನೀನು ಪೆರ್ನಾಳ್ ನಮಾಝ್ ಮುಗಿದ ನಂತರ ಬಂದು ಅದನ್ನು ದ್ಸಬಹ್ ಮಾಡು. ಈ ರಿಯಾಯಿತಿ ನಿನಗೆ ಮಾತ್ರ. ನಿನ್ನ ನಂತರ ನೀನಲ್ಲದ ಬೇರೆ ಯಾವೊಬ್ಬನಿಗೂ ಈ ರಿಯಾಯಿತಿ ಇಲ್ಲ"* ಎಂದು ಹೇಳಿ ಅಲ್ಲಿಂದ ಹೋದರು.
   ▪ಬಕ್ರೀದ್ ದಿನದಂದು ಬಲಿಕೊಡುವ (ಉಲುಹಿಯ್ಯತ್) ಮೃಗ ಮೇಕೆ ಆಡಾದರೆ ಅದಕ್ಕೆ ಎರಡು ವರ್ಷ ಪ್ರಾಯವಾಗಿರಬೇಕು. ಕುರಿ ಆಡಾದರೆ (ನೆಯ್ಯಾಡ್) ಒಂದು ವರ್ಷ ಪ್ರಾಯವಾದರೆ ಸಾಕು.

   ▪ಒಮ್ಮೆ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಮತ್ತು ಅಬೂಬಕರ್ ಸಿದ್ದೀಕ್ (ರ) ರವರು ಮಕ್ಕಾ ಮುಶ್ರಿಕರ ಉಪಟಳಗಳಿಂದ ರಕ್ಷಣೆ ಹೊಂದಲು ಮಕ್ಕಾ ನಗರದ ಒಂದು ಒಳ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಒಬ್ಬ ಸಾಧು ಗುಲಾಮನು ಆಡು ಮೇಯಿಸುತ್ತಿದ್ದನು. ತುಂಬಾ ಹೊತ್ತಿನಿಂದ ನಡೆದು ಆಯಾಸಗೊಂಡಿದ್ದ ಇವರು ಆಡು ಮೇಯಿಸುವವನಲ್ಲಿ *“ಹುಡುಗಾ..., ನಮಗೆ ತುಂಬಾ ಬಾಯಾರಿಕೆ ಆಗುತ್ತಿದೆ. ಕುಡಿಯಲಿಕ್ಕೆ ಸ್ವಲ್ಪ ಹಾಲು ಸಿಗಬಹುದಾ...?"* ಎಂದು ಕೇಳಿದರು. *"ಈಗ ಹಾಲು ಕೊಡುವ ಆಡುಗಳು ಇಲ್ಲಿ ಇಲ್ಲ. ಮರಿ ಹಾಕಿದ್ದ ಆಡುಗಳಿಂದ ಈಗ ಹಾಲು ಕರೆಯುವುದಿಲ್ಲ. ಅವುಗಳು ಹಾಲು ಕೊಡುವುದನ್ನು ನಿಲ್ಲಿಸಿ ತಿಂಗಳುಗಳಾಗಿವೆ. ಉಳಿದವೆಲ್ಲ ಪ್ರಾಯ ತಲುಪದ ಸಣ್ಣ ಮರಿಗಳಷ್ಟೆ.”* ಎಂದು ಗುಲಾಮ ಉತ್ತರ ನೀಡಿದ.
   ▪ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಗುಲಾಮ ಬಾಲಕನಲ್ಲಿ *"ಮರಿಯಾದರೆ ಮರಿ ಆಗಲಿ. ನೀನೊಂದು ಹೆಣ್ಣು ಮರಿಯಾಡನ್ನು ತೆಗೆದುಕೊಂಡು ಬಾ.."* ಎಂದು ಹೇಳಿದರು. ಗುಲಾಮ ಪ್ರಾಯ ತಲುಪದ ಸಣ್ಣ ಹೆಣ್ಣು ಮರಿಯಾಡನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಎದುರಲ್ಲಿ ತಂದು ನಿಲ್ಲಿಸಿದ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅದರ ಕೆಚ್ಚಲಿಗೆ ಕೈಯಿಟ್ಟು ಒಮ್ಮೆ ಸವರಿದರು. ಸವರಿದ್ದೇ ತಡ, ಕೆಚ್ಚಲು ತುಂಬಾ ಹಾಲು ತುಂಬಿತು. ನಂತರ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಪಾತ್ರೆ ತುಂಬಾ ಹಾಲು ಕರೆದು ಮೊದಲಾಗಿ ಅಬೂಬಕರ್ ಸಿದ್ದೀಕ್ (ರ) ರಿಗೆ ಕುಡಿಯಲು ಕೊಟ್ಟರು. ಅದಾದ ನಂತರ ಎರಡನೇ ಬಾರಿ ಅದೇ ಪಾತ್ರೆಗೆ ಹಾಲು ಕರೆದು ಆಡು ಮೇಯಿಸುವ ಗುಲಾಮನಿಗೆ ಕೊಟ್ಟರು. ಕೊನೆಯ ಬಾರಿಯಲ್ಲಿ ತಾವು ಕುಡಿದರು. 
   ▪ಒಟ್ಟಿನಲ್ಲಿ ಈ ಎಲ್ಲಾ ಅದ್ಭುತ ಪವಾಡಗಳನ್ನು ಕಣ್ಣಾರೆ ಕಾಣುತ್ತಿರುವ ಆಡು ಮೇಯಿಸುವ ಗುಲಾಮ ಮೂಕ ವಿಸ್ಮಿತನಾಗಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಲ್ಲಿ ಕೇಳಿದ. *"ನಿಜವಾಗಿ ನೀವು ಯಾರೆಂದು ನನಗೆ ಗೊತ್ತಿಲ್ಲ. ನಾನು ನಿಮ್ಮನ್ನು ಈ ಪರಿಸರದಲ್ಲಿ ಎಲ್ಲೂ ಕಂಡಿಲ್ಲ. ಏನಿದ್ದರೂ ನೀವು ಬಹಳ ಒಳ್ಳೆಯ ವ್ಯಕ್ತಿಯೆಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ನೀವು ಯಾರೆಂದು ನನಗೆ ತಿಳಿಸಿಕೊಡುವಿರಾ.?"* 
   ▪ಪ್ರವಾದಿ (ಸ) ರು ಅವನಲ್ಲಿ  ಒಂದು ಪ್ರಶ್ನೆ ಹಾಕಿದರು. *"ನಾನೀಗ ನನ್ನ ರಹಸ್ಯ ಹೇಳಿದರೆ ನೀನು ನಂಬುವೆಯಾ..?"* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಪ್ರಶ್ನೆಗೆ  ಗುಲಾಮ *"ಖಂಡಿತಾ ನಾನು ನಂಬುತ್ತೇನೆ"* ಎಂದು ಉತ್ತರಕೊಟ್ಟ. ಪ್ರವಾದಿವರ್ಯರು (ಸ) *"ನನ್ನ ಹೆಸರು ಮುಹಮ್ಮದ್. ನಾನು ಅಲ್ಲಾಹನಿಂದ ನಿಯುಕ್ತನಾದ ಒಬ್ಬ ಪ್ರವಾದಿಯಾಗಿದ್ದೇನೆ. ನಿನಗೆ ಆ ಬಗ್ಗೆ ಯಾವುದೇ ವಾರ್ತೆ ಈತನಕ ಸಿಗಲಿಲ್ಲವೇ...?"* ಎಂದು ಕೇಳಿದರು.
ಗುಲಾಮ ಹೇಳಿದ. *"ಇಲ್ಲ... ಸಿಗಲಿಲ್ಲ... ಊರಲ್ಲೆಲ್ಲ ಖುರೈಶಿಗಳು ಈಗ ಹೇಳುತ್ತಿರುವ ನೂತನ ಪ್ರವಾದಿ ನೀವೇಯಾ..?"* ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು  ಹೇಳಿದರು. *"ಹೌದು.. ಅದು ನಾನೆ."* 
   ▪ *"ಹಾಗಾದರೆ ನಾನು ತಡ ಮಾಡುವುದಿಲ್ಲ. ನಾನೀಗಲೇ ಇಸ್ಲಾಮ್ ಸ್ವೀಕರಿಸಿ ಮುಸ್ಲಿಮ್ ಆಗುತ್ತೇನೆ. ಆಗಬಹುದಲ್ಲವೇ...?"*  ಬಹಳ ತೆರೆದ ಮನಸ್ಸಿನಿಂದ ಗುಲಾಮ  ಹೇಳಿದ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಅವನಲ್ಲಿ *"ನೀನೀಗ ಗಡಿಬಿಡಿ ಮಾಡಬೇಡ. ಈಗಿನ ಸನ್ನಿವೇಶ ಚೆನ್ನಾಗಿಲ್ಲ. ಅಲ್ಲದೆ ನೀನೊಬ್ಬ ಗುಲಾಮ. ಬೇಜಾರು ಮಾಡಬೇಡ. ನಮಗೆ ಹತ್ತಿರದಲ್ಲೇ ಇಸ್ಲಾಮಿನ ಬಹಿರಂಗ ಪ್ರಚಾರ ಮಾಡುವ ಅವಕಾಶ ಬರುತ್ತದೆ. ಆಗ ನೀನು ನನ್ನನ್ನು  ಸಮೀಪಿಸು."* ಎಂದು ಹೇಳಿ ಅಲ್ಲಿಂದ ಹೊರಟರು. 
   ▪ಒಮ್ಮೆ ಪ್ರವಾದಿ ಮುಹಮ್ಮದ್ (ಸ) ರು ಒಂದು ಕಡೆ ನಮಾಝ್ ಮಾಡುತ್ತಿರುವಾಗ ಒಂದು ಆಡಿನ ಮರಿ ಪ್ರವಾದಿಯವರ ಎದುರಿಗೆ ಬಂದು ಅವರು ನಮಾಝು ಮಾಡುವುದರೆಡೆಯಲ್ಲೇ ಅವರೆದುರಲ್ಲಿ ದಾಟಿಹೋಗಲು ನೋಡಿತು. ಆಗ ಪ್ರವಾದಿಯವರು ಅದನ್ನು ಎದುರಲ್ಲಿ ದಾಟದಂತೆ ತಡೆದು ಹಿಂದಕ್ಕೆ ತಳ್ಳಿದರು. ಈ ಘಟನೆ ಸಹಾಬಿ ಬಿನ್ ಅಬ್ಬಾಸ್ ರಿಂದ ಉಲ್ಲೇಖಿಸಲ್ಪಟ್ಟ ಒಂದು ಹದೀಸಿನಲ್ಲಿದೆ.
   ▪ ಒಮ್ಮೆ *ಝೈನಬ್ ಬಿಂತ್ ಹಾರಿಸ್* ಎಂಬ ಯಹೂದಿ ಮಹಿಳೆ ಆಡಿನ ಮಾಂಸಕ್ಕೆ ವಿಷ ಮಿಷ್ರಣ ಮಾಡಿ ಬೇಯಿಸಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರಿಗೆ ಕಾಣಿಕೆಯಾಗಿ ಕೊಟ್ಟಳು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ಮತ್ತು ಕೆಲವು ಸಹಾಬಿಗಳು ಅದನ್ನು ಸೇವಿಸಿದರು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಆ ಮಾಂಸವನ್ನು ಬಾಯಿಗಿಟ್ಟ ಕೂಡಲೇ ಅದನ್ನು ಉಗುಳಿ *"ಈ ಮಾಂಸದ ತುಂಡು ತಾನು ವಿಷಪೂರಿತನೆಂದು ನನ್ನಲ್ಲಿ ಹೇಳುತ್ತಿದೆ, ಆದ್ದರಿಂದ ಯಾರೂ ಇದನ್ನು ತಿನ್ನಬೇಡಿ"* ಎಂದರು. ಆದರೆ ಅದಾಗಲೇ ಆ ಮಾಂಸ *ಬಿಶ್‌ರ್ ಬಿನ್ ಅಲ್ ಬರಾಅ್* ಎಂಬ ಸ್ವಹಾಬಿಯ ಹೊಟ್ಟೆ ಸೇರಿತ್ತು. ತಿಂದು ಸ್ವಲ್ಪ ಸಮಯ ಕಳೆದಾಗ ಅವರು ಮರಣ ಹೊಂದಿದರು. ಕೂಡಲೇ ಆ ಬಗ್ಗೆ ಆ ಯಹೂದಿ ಮಹಿಳೆಯನ್ನು ವಿಚಾರಣೆ ಮಾಡಲಾಯಿತು. *"ನಾನು ಈ ಪ್ರವಾದಿಯನ್ನು ಅಸಲಿ ಪ್ರವಾದಿಯೋ ಅಥವಾ ನಕಲಿಯೋ ಎಂದು ಪರೀಕ್ಷೆ ಮಾಡಲು ಹೀಗೆ ಮಾಡಿದ್ದೇನೆ. ಅವರು ನಿಜವಾದ ಪ್ರವಾದಿ ಎಂದಾದರೆ  ಯಾವ ವಿಷವೂ ಅವರಿಗೆ ತೊಂದರೆ ನೀಡದು. ಇನ್ನು ಸುಳ್ಳು ಹೇಳುವ ಕಳ್ಳ ನಕಲಿ ಪ್ರವಾದಿಯಾದರೆ ವಿಷ ತಿಂದು ಸತ್ತರೇನು ತೊಂದರೆ...?"* ಎಂದು ವಿಚಾರಣೆ ವೇಳೆ ಆ ಮಹಿಳೆ ಉತ್ತರಿಸಿದಳು. ನಂತರ ಆ ಯಹೂದಿ ಮಹಿಳೆ ಸತ್ಯವನ್ನರಿತ ಕಾರಣ ಇಸ್ಲಾಮಿಗೆ ಬಂದರೆಂದು ಬಲವಾದ ಅಭಿಪ್ರಾಯವಿದೆ.
▪ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಒಂದು ಕಡೆ ಕುಳಿತಿರುವಾಗ ಅವರ ಎದುರಲ್ಲಿ ಹೆಣ್ಣು ಕುರಿಯೊಂದು ನಡೆದು ಹೋಗುತ್ತಿತ್ತು. ಆಗ ಅದರತ್ತ ಕೈತೋರಿಸಿ ಪ್ರವಾದಿಸ್ವಲ್ಲಲ್ಲಾಹು ಅಲೈಹಿವಸಲ್ಲಮರು *"ಈ ಮೃಗ ಮತ್ತು ಇದರ ಸಂತಾನದಲ್ಲಿ ಬಹಳ ಬರಕತ್ ಇದೆ"* ಎಂದರು. ಅಬೂಹುರೈರ (ರ) ರಿಂದ ಉಲ್ಲೇಖಿಸಲಾದ ಹದೀಸ್ ವಚನವಿದು.
   ▪ಖೈಬರ್ ಯುದ್ಧದ ದಿನ ಖೈಬರ್ ಕೋಟೆಯ ಸಮೀಪದ ಹುಲ್ಲುಗಾವಲಿನಲ್ಲಿ ಆಡು ಮೇಯಿಸುತ್ತಿದ್ದ *ಅಸ್‌ವದ್ ಅಲ್ ಹಬಶೀ* ಎಂಬ ವ್ಯಕ್ತಿ ಪ್ರವಾದಿ ಮುಹಮ್ಮದ್ (ಸ) ರ ಬಳಿ ಬಂದು ಹೇಳಿದರು. *"ಪ್ರವಾದಿಯವರೇ..., ನನಗೆ ಇಸ್ಲಾಮಿಗೆ ಬರಲು ಮನಸ್ಸಾಗುತ್ತಿದೆ. ಆದ್ದರಿಂದ ನನಗೆ ಅದಕ್ಕಿರುವ ಸೌಕರ್ಯ ಮಾಡಿಕೊಡಿ. ನಾನು ಈಗಲೇ ಇಸ್ಲಾಮ್ ಸ್ವೀಕರಿಸುತ್ತೇನೆ."*
   ▪ಪ್ರವಾದಿಯವರು ಕೂಡಲೇ ಅವರಿಗೆ *ಶಹಾದತ್ ಕಲಿಮ* ಹೇಳಿಕೊಟ್ಟು ಇಸ್ಲಾಮಿಗೆ ಬರಮಾಡಿಕೊಂಡರು. ಇಸ್ಲಾಮಿಗೆ ಬಂದ ಆ ಕಪ್ಪು ಬಣ್ಣದ ನೀಗ್ರೋ ವ್ಯಕ್ತಿ ಪ್ರವಾದಿಯವರಲ್ಲಿ ಹೇಳಿದರು. *"ಪ್ರವಾದಿಯವರೇ.., ನಾನೊಬ್ಬ ಕೂಲಿ ಕಾರ್ಮಿಕ. ನನಗೆ "ಆಮಿರ್" ಎಂಬ ಒಬ್ಬ ಯಹೂದಿ ವ್ಯಕ್ತಿಯ ಈ ಕಾಣುವ ಆಡುಗಳನ್ನು ಮೇಯಿಸುವ ಕೆಲಸ. ಇದು ಅವರ ಸೊತ್ತು. ನನ್ನದಲ್ಲ. ಅವರು ನನ್ನ ಮೇಲೆ ನಂಬಿಕೆಯಿಟ್ಟು ಇದರ ಸಂಪೂರ್ಣ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಈಗ ಈ ಅಮಾನತು ಸಂಪತ್ತನ್ನು ನಾನು ಏನು ಮಾಡಬೇಕು..?"*
   ▪ಪ್ರವಾದಿಯವರು ಹೇಳಿದರು. *"ಗಾಬರಿಪಡಬೇಡ. ನೀನು ಒಂದು ಹಿಡಿ ಮಣ್ಣು ತೆಗೆದು ಅವುಗಳ  ಮುಖಕ್ಕೆ ಎಸೆಯು. ಆಗ ಅವುಗಳು ನೀನಿಲ್ಲದೆಯೇ ಅದರ ಮನೆಗೆ ದಾರಿ ಹುಡುಕಿ ಹೋಗುತ್ತದೆ."*
   ▪ಪ್ರವಾದಿಯವರು ಹೇಳಿದಂತೆ ಹಬಶಿಯವರು ಒಂದು ಹಿಡಿ ಮಣ್ಣು ತೆಗೆದು ಅವುಗಳ ಗುಂಪಿಗೆ ಎಸೆದು ಹೇಳಿದರು. *"ನೀವು ಬಂದಲ್ಲಿಗೇ ಹೋಗಿರಿ. ಇನ್ನು ನಾನು ನಿಮ್ಮ ಸಹವಾಸಕ್ಕೆ ಇಲ್ಲ. ನಾನು ಇಸ್ಲಾಮ್ ಸ್ವೀಕರಿಸಿದ್ದೇನೆ."*
     ▪ಸುಬ್‌ಹಾನಲ್ಲಾಹ್! ಇದು ಹೇಳಿದ್ದೇ ತಡ ಆಡುಗಳು ಮೇಯಿಸುವವನಿಲ್ಲದೆಯೇ ನೇರವಾಗಿ ತಮ್ಮ ವಾಸಸ್ಥಾನವಾದ ಯಹೂದಿಯ ಮನೆಯತ್ತ ಹೋಯಿತು. ಇತ್ತ ಹಬಶಿಯವರು ನಿಮಿಷಗಳ ಮೊದಲು ಲಭಿಸಿದ ಶುಭ್ರವಾದ ಈಮಾನಿನ ಕಾಂತಿಯಿಂದ ಖೈಬರ್ ಯುದ್ಧ ಭೂಮಿಗೆ ಜಿಗಿದರು. ಕ್ಷಣದಲ್ಲೇ ಮುಶ್ರಿಕರು ಎಸೆದ ಒಂದು ದೊಡ್ಡ ಕಲ್ಲಿನ ರಭಸಕ್ಕೆ ತೀವ್ರ ಗಾಯಗೊಂಡ ಅವರು ಅಲ್ಲೇ ರಕ್ತಸಾಕ್ಷಿಯಾದರು.
   ▪ಈ ತನಕ ಯಾವುದೇ ನಮಾಝು ಮಾಡದ, ಉಪವಾಸ ಏನೆಂದು ಗೊತ್ತಿಲ್ಲದ, ಮಾತ್ರವಲ್ಲ ಜೀವನದಲ್ಲಿ ಯವುದೇ ಒಂದೇ ಒಂದು ಸತ್ಕರ್ಮ ಮಾಡದ, ಯಾವುದೇ ತಯಾರಿಯಿಲ್ಲದೆ ಆಡು ಮೇಯಿಸುವಲ್ಲಿಂದ ಯುದ್ಧ ರಣ ಭೂಮಿಗೆ ಧುಮುಕಿ ಮೃತರಾದ ಅವರ ಜನಾಝವನ್ನು ಇತರ ಸಹಾಬಿಗಳು ಅವರು ಧರಿಸಿದ್ದ ಸಾಧಾರಣ ಬಟ್ಟೆಯಲ್ಲಿ ಹೊದಿಕೆ ಮಾಡಿ ಪ್ರವಾದಿಯವರ ಎದುರಿಗೆ ತಂದಿಟ್ಟರು. ಪ್ರವಾದಿ ಮುಹಮ್ಮದ್ (ಸ) ರು ರಕ್ತದಲ್ಲಿ ಮುಳುಗಿದ್ದ ಆ ಶರೀರವನ್ನು ಒಮ್ಮೆ ನೋಡಿ ಕೂಡಲೇ ತಲೆ ತಿರುಗಿಸಿದರು.
   ▪ಇದನ್ನು ಕಂಡ ಸಹಾಬಿಗಳು ಪ್ರವಾದಿಯವರಲ್ಲಿ ಕೇಳಿದರು. *"ಪ್ರವಾದಿಯವರೇ.., ನೀವು ಹಬಶಿಯವರ ಮೃತ ಶರೀರವನ್ನು ಒಮ್ಮೆಲೇ ನೋಡಿ ತಲೆ ತಿರುಗಿಸಲು ಕಾರಣವೇನು...?"* ಪ್ರವಾದಿಯವರು ಹೇಳಿದರು . *"ಏನಿಲ್ಲ... ನಾನು ಅವರತ್ತ ನೋಡುವಾಗ ಅವರೊಂದಿಗೆ ಸ್ವರ್ಗದಲ್ಲಿ ಅವರ ಬಾಳ ಸಂಗಾತಿಯಾಗಲಿರುವ "ಹೂರುಲ್‌ಯೀನ್" ತರುಣಿಯರು ಅವರ ಮುಖದಲ್ಲಿದ್ದ ಮಣ್ಣನ್ನು ಉಜ್ಜಿ ಸ್ವಚ್ಛ ಮಾಡುತ್ತಿದ್ದರು. ಅವರನ್ನು ನೋಡಿದಾಗ ನಾನು ತಲೆ ತಿರುಗಿಸಿದೆ."*
   ▪ಪ್ರವಾದಿ ಮೂಸಾ (ಅ) ರವರು ಒಮ್ಮೆ ಒಂದು ಬಯಲು ಪ್ರದೇಶದಲ್ಲಿ ಸಂಚಾರ ಮಾಡುತ್ತಿದ್ದರು. ದಾರಿಮಧ್ಯೆ ಒಬ್ಬ ಒಂದೆಡೆ ಕುಳಿತು ಬಹಳ ದುಃಖದಲ್ಲಿ ದುಆ ಮಾಡುತ್ತಿದ್ದ. ಅವನ ನರಳಾಟ ಕಂಡು ಮೂಸಾ (ಅ) ಅಲ್ಲಾಹನಲ್ಲಿ ಹೇಳಿದರು. *"ಅಲ್ಲಾಹ್... ನನಗೆ ಇವನನ್ನು ಕಾಣುವಾಗ ಬೇಸರವಾಗುತ್ತದೆ. ಇವನ ಬೇಡಿಕೆ ಮತ್ತು ಅಗತ್ಯಗಳನ್ನು ಪೂರೈಕೆ ಮಾಡುವ ಅಧಿಕಾರ ನನ್ನ ಕೈಯಲ್ಲಿರುತ್ತಿದ್ದರೆ ನಾನು ಯಾವಾಗಲೋ ಅದನ್ನು ಪೂರೈಸುತ್ತಿದ್ದೆ."* ಕೂಡಲೇ ಅಲ್ಲಾಹನಿಂದ ಮೂಸಾ (ಅ) ರಿಗೆ ಸಂದೇಶ ಬಂತು. *"ಮೂಸಾರವರೇ.., ಅವನು ನನ್ನಲ್ಲಿ ಪ್ರಾಥಿಸುತ್ತಿರುವುದನ್ನು ಮಾತ್ರ ನೀವು ನೊಡುತ್ತಿದ್ದೀರಿ. ಆದರೆ ಅವನ ಹೃದಯ ಅವನ ಮನೆಯಲ್ಲಿರುವ ಕೆಲವು ಆಡಿನ ಜತೆಗಿದೆ. ಅದನ್ನು ಯಾರಾದರೂ ಕದ್ದು ಕೊಂಡು ಹೊಗುವರಾ ಎಂಬ ಭಯದಲ್ಲಿದ್ದಾನೆ ಆತ."* ಕೂಡಲೇ ಮೂಸಾ (ಅ) ರು ಅವನಿಗೆ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೇ ಅವನು ತನ್ನು ಮನಸ್ಸನ್ನು ಆಡಿನಿಂದ ಬಿಟ್ಟು ಅಲ್ಲಾಹನತ್ತ ತಿರುಗಿಸಿದನು. ಕೂಡಲೇ ಅವನ ದುಆಕ್ಕೆ ಉತ್ತರ ಲಭಿಸಿತು.
   ▪ಆಡು ಗುಂಪಿನ ಮಧ್ಯದಲ್ಲಿ (ಎಡೆಯಲ್ಲಿ) ನಡೆಯುವುದು, ಕುಳಿತುಕೊಂಡು ತಲೆಕಟ್ಟು ಕಟ್ಟುವುದು, ನಿಂತುಕೊಂಡು ಪ್ಯಾಂಟ್ ಧರಿಸುವುದು, ಮನೆ ಹೊಸ್ತಿಲಲ್ಲಿ ಕುಳಿತು ಕೊಳ್ಳುವುದು, ಎಡಗೈಯಲ್ಲಿ ಆಹಾರ ಸೇವನೆ ಮಾಡುವುದು, ಕಬರಸ್ತಾನಿನಲ್ಲಿ ನಗುವುದು, ಕಬರಿನ ಮೇಲೆ ಬರೆದಿಟ್ಟ ನಾಮಫಲಕವನ್ನು ಓದುವುದು, ಉಟ್ಟ ಲುಂಗಿ ಅಥವಾ ಇತರ ಬಟ್ಟಯಿಂದ ಉಟ್ಟಲ್ಲಿಂದಲೇ ಮುಖ ಉಜ್ಜುವುದು, ಮೊಟ್ಟೆಯ ಸಿಪ್ಪೆಯ ಮೇಲೆ ನಡೆಯುವುದು ಇತ್ಯಾದಿ ಕೆಲಸ ಮಾಡುವವರಿಗೆ ನೆನಪು ಶಕ್ತಿ ಕಡಿಮೆಯಾಗುವುದು ಮತ್ತು ದುಃಖ ದುಮ್ಮಾನ ಜಾಸ್ತಿಯಾಗುವುದು.
   ▪ಮೇಕೆಯಾಡಿನ ಪಿತ್ತಕೋಶವನ್ನು ಜಜ್ಜಿ ಪುಡಿಮಾಡಿ ಕಣ್ಣಿಗೆ ಹಾಕಿದರೆ ರಾತ್ರಿ ಬೆಳಕು ನೋಡಲಾಗದಿರುವುದಕ್ಕೆ ಮತ್ತು ಕಣ್ಣು ಬಲೆಕಟ್ಟುವುದಕ್ಕೆ ಬಹಳ ಒಳ್ಳೆಯದು.
   ▪ಚಾಟಿಯೇಟು ಕಾರಣ ನೋವುಣ್ಣುತ್ತಿರುವವನ ಶರೀರಕ್ಕೆ ಆಡನ್ನು ದ್ಸಬಹ್ ಮಾಡಿದ ತಕ್ಷಣ ಸುಲಿದ ಚರ್ಮವನ್ನು ಹೊದಿಸಿದರೆ ನೋವು ಕಡಿಮೆಯಾಗುತ್ತದೆ.
   ▪ಬಿಳಿ ಮೇಕೆಯ ಕೊಂಬನ್ನು ಗುದ್ದಿ ಚೆನ್ನಾಗಿ ಪುಡಿಮಾಡಿ ಒಂದು ಬಟ್ಟೆಯಲ್ಲಿ ಕಟ್ಟಿ ನಿದ್ರಿಸುವವನ ತಲೆಯ ಅಡಿಯಲ್ಲಿ ಇಟ್ಟರೆ ಅವನಿಗೆ ಬಹಳ ಸುಖವಾದ ಗಾಢ ನಿದ್ದೆ ಬರುತ್ತದೆ.
      ▪ಗಂಡು ಕುರಿಯ ಕೊಂಬನ್ನು ಫಲ ಕೊಡದ ಮರದ ಬುಡದಲ್ಲಿ ದಫನ ಮಾಡಿದರೆ ಒಳ್ಳೆಯ ಫಲ ಕೊಡುವುದು.
   ▪ ಶರೀರದ ಯಾವುದಾದರೊಂದು ಭಾಗದ ರೋಮವನ್ನು ಕಿತ್ತು ನಂತರ ಹೆಣ್ಣು ಮೇಕೆಯ ಪಿತ್ತಕೋಶ ಮತ್ತು ಅಮೋನಿಯಮನ್ನು ಮಿಶ್ರಣ ಮಾಡಿ ಚೆನ್ನಾಗಿ ಜಜ್ಜಿ ಅಲ್ಲಿಗೆ ಲೇಪಿಸಿದರೆ ಮತ್ತೆಂದಿಗೂ ಆ ಜಾಗದಲ್ಲಿ ಕೂದಲು ಬೆಳೆಯುವುದಿಲ್ಲ.
   ▪ಕಿವಿ ಸೋರುವಿಕೆ ಮತ್ತು ಶ್ರವಣಶಕ್ತಿ ಕಡಿಮೆ ಇರುವವನು ಮೇಕೆಯಾಡು ಮತ್ತು ಪಶುವಿನ ಪಿತ್ತಕೋಶವನ್ನು ಜಜ್ಜಿ ನೀರುಮಾಡಿ ಕೆಲವು ದಿನಗಳ ಕಾಲ ಕಿವಿಗೆ ಎರಡೆರಡು ಬಿಂದು ಹಾಕಿದರೆ ಅಥವಾ ಒಂದು ಬಟ್ಟೆ ತುಂಡನ್ನು ಅದರಲ್ಲಿ ನೆನೆಯಿಸಿ ಕಿವಿಯ ಒಳಗೆ ಇಟ್ಟರೆ ತುಂಬಾ ಫಲ ಕಾಣುತ್ತದೆ.
   ▪ಹೆಣ್ಣು ಕುರಿಯ ಪಿತ್ತಕೋಶವನ್ನು ತೆಂಗಿನ ಎಣ್ಣೆಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ ಕಣ್ಣಿನ ಹುಬ್ಬಿನ ಮೇಲೆ ಸವರಿದರೆ ಅಲ್ಲಿ ಕೂದಲು ಬಹಳ ಕಪ್ಪು ಮತ್ತು ಜಾಸ್ತಿಯಾಗುತ್ತದೆ. 
   ▪ಹೆಣ್ಣು ಮೇಕೆಯ ಕಾಲನ್ನು ಬಿಸಿ ನೀರಿನಲ್ಲಿ ತೊಳೆದು ನಂತರ ಅದೇ ನೀರಿನಲ್ಲಿ ಸ್ವಲ್ಪ ಸಮಯ ಇಟ್ಟು ನಂತರ ಆ ನೀರನ್ನು ಮೂತ್ರ ಸೋರಿಕೆ ರೋಗ ಇರುವವನಿಗೆ ಕುಡಿಸಿದರೆ ಅವನ ರೋಗ ಹೀಗೆಯೇ ಕೆಲವು ದಿನಗಳ ಕಾಲ ಮಾಡುವುದಾದರೆ ಸಂಪೂರ್ಣ ವಾಸಿಯಾಗುವುದು.

   ▪ಒಬ್ಬನಿಗೆ ಅವನು ಗಂಡು ಕುರಿಯೊಂದನ್ನು ಉಳ್‌ಹಿಯ್ಯತ್‌ಗೆ ಬೇಕಾಗಿ ದ್ಸಬಹ್ ಮಾಡಿದ ಕನಸು ಬಿದ್ದರೆ ಅವನು ಎಲ್ಲಾ ಬೇಜಾರು, ದುಃಖ, ದುಮ್ಮಾನಗಳಿಂದ ಮುಕ್ತನಾಗುವುದರ ನಿಶಾನೆಯಾಗಿದೆ.
   ▪ಈ ಕನಸು ಕಂಡವನು ಜೈಲು ವಾಸಿಯಾಗಿದ್ದರೆ ಜೈಲಿನಿಂದ ವಿಮೋಚನೆಯಾಗುವ ಸಂಕೇತವಾಗಿದೆ. ಇನ್ನು ರೋಗಿಯಾಗಿದ್ದರೆ ಆ ರೋಗದಿಂದ ಮುಕ್ತನಾಗುವುದರ ನಿಶಾನೆಯಾಗಿದೆ. ಪವಿತ್ರ ಹಜ್ಜ್ ಕರ್ಮ ನಿರ್ವಹಿಸದವನಾಗಿದ್ದರೆ ಮುಂದಕ್ಕೆ ಹಜ್ಜ್ ನಿರ್ವಹಿಸುವ ಭಾಗ್ಯ ದೊರಕುವುದು ಎಂಬುದರ ಸಂಕೇತವಾಗಿದೆ.  ಅಂತೆಯೇ ಸಾಲಗಾರನಾಗಿದ್ದರೆ ಅವನ ಸಾಲವು ಹತ್ತಿರದಲ್ಲೇ ಸಂದಾಯವಾಗುವುದರ ಲಕ್ಷಣವಾಗಿದೆ.
  ▪ಒಬ್ಬನಿಗೆ ಹೆಣ್ಣುಕುರಿಯೊಂದು ಅವನ ಮನೆಗೆ ನುಗ್ಗಿದ ಕನಸು ಬಿದ್ದರೆ ಅವನ ಆ ವರ್ಷ ಸಮೃದ್ಧಿ ಮತ್ತು ಐಶ್ವರ್ಯ ಭರಿತವಾಗಿರುತ್ತದೆ ಎಂಬುದರ ಸೂಚನೆಯಾಗಿರುತ್ತದೆ.
   ▪ ಅವನ ಮನೆಯಲ್ಲಿರುವ ಹೆಣ್ಣುಕುರಿ ಗಂಡುಕುರಿಯಾಗಿ ಮಾರ್ಪಟ್ಟ ಕನಸು ಬಿದ್ದರೆ ಮುಂದಕ್ಕೆ ಅವನ ಹೆಂಡತಿ ಗರ್ಭಿಣಿಯಾಗಳು ಎಂಬುದರ ನಿಶಾನೆಯಾಗಿದೆ.
   ▪ಗರ್ಭಿಣಿಯಾದ ಕುರಿಯನ್ನು ಕನಸಲ್ಲಿ ಕಾಣುವುದು ಜೀವನದಲ್ಲಿ ನೆಮ್ಮದಿ ಉಂಟಾಗುವುದರ ಸಂಕೇತವಾಗಿದೆ.
  ▪ಒಬ್ಬನು ಆಡಿನ ಒಂದು ಗುಂಪನ್ನು ಕನಸಲ್ಲಿ ಕಂಡರೆ ಅವನ ಮುಂದಿನ ಬದುಕಿನಲ್ಲಿ ಅಥವಾ ಜೀವನದಲ್ಲಿ ನೆಮ್ಮದಿ ಮತ್ತು ಆರಾಮವಿದೆ ಎಂಬುದರ ನಿಶಾನೆಯಾಗಿದೆ.
   ▪ *"ಒಬ್ಬನ ಎದುರಲ್ಲಿ ಆಡೊಂದು ನಡೆದುಕೊಂಡು ಹೋಗುತ್ತಾ ಇದೆ. ಇವನಾದರೆ ಅದನ್ನು ಹಿಂಬಾಲಿಸಿ ನಡೆಯುತ್ತಿದ್ದಾನೆ. ಆದರೆ ಹೇಗೆ ನಡೆದರೂ ಆಡಿನ ಹತ್ತಿರ ತಲುಪಲು ಸಾಧ್ಯವಾಗುವುದಿಲ್ಲ."* ಹೀಗೆ ಒಂದು ಕನಸು ಒಬ್ಬನಿಗೆ ಬಿದ್ದರೆ ಅವನ ಮುಂದಿನ ಬದುಕು ಬಹಳ ಕಷ್ಟದಿಂದ ಸಾಗುವುದು ಎಂಬುದರ ಲಕ್ಷಣವಾಗಿದೆ.
   ▪ಒಬ್ಬನಿಗೆ ಆಡಿನ ಹಾಲು ಕರೆಯುವ ಕನಸು ಬಿದ್ದರೆ ಅವನ ಆ ವರ್ಷ ಬಹಳ ಸಂತೋಷವಾಗಿರುವುದು. ಅಂತೆಯೇ ಆಡಿನ ಹಾಲು ಕುಡಿಯುವ ಕನಸು ಕಂಡರೆ ಅವನ ಆಯುಷ್ಯ ದೀರ್ಘ ಮತ್ತು ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷವಿದೆ ಎಂಬುದರ ನಿಶಾನೆಯಾಗಿದೆ.
   ▪ಮನೆಯೊಳಗೆ ಒಂದು ಕುರಿಯನ್ನು ಚರ್ಮ ಸುಲಿಯಲ್ಪಟ್ಟ ರೂಪದಲ್ಲಿ ತೂಗುಹಾಕಿ ಕನಸಲ್ಲಿ ಕಂಡರೆ ಆ ಮನೆಯಲ್ಲಿ ಹತ್ತಿರದಲ್ಲಿ ಒಬ್ಬರು ಮರಣ ಹೊಂದುವರು ಎಂಬುದರ ಸೂಚನೆಯಾಗಿದೆ. ಚರ್ಮ ಸುಲಿಯಲ್ಪಟ್ಟದ್ದು ಸಣ್ಣ ಮೇಕೆ ಮರಿಯಾದರೆ ಅವನ ಒಂದು ಮಗು ಮರಣ ಹೊಂದುವ ನಿಶಾನೆಯಾಗಿದೆ.

ಸಂಗ್ರಹ : ಇಮಾಮ್ ದುಮೈರಿಯ ಹಯಾತುಲ್ ಹಯವಾನ್, ಇಮಾಮ್ ಅಬ್‌ಷೀಹಿಯ ಮುಸ್‌ತತ್‌ರಫ್ ಮತ್ತು ತತ್ವಜ್ಞಾನಿ ಜಾಹಿಳ್‌ರ ಕಿತಾಬುಲ್ ಹಯವಾನ್ ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...