ಧಿಕ್ಕಾರಿಯ ದಾರುಣ ಅಂತ್ಯ
✍ - ಉಮ್ಮುಹಿಲಾಲ್ ಜೋಗಿಬೆಟ್ಟು
ಅನ್ಯಾಯವಾಗಿ ಹಲವಾರು ಧರ್ಮಪಂಡಿತರನ್ನು ನಿಷ್ಕಾರುಣ್ಯ ಕೊಲೆಗೈದ ಧಿಕ್ಕಾರಿಯಾದ ಹಜ್ಜಾಜ್ ಬಿನ್ ಯೂಸುಫ್ ಎಂಬೊಬ್ಬ ರಾಜನಿದ್ದ. ಧರ್ಮ ವಿರುದ್ಧ ಕಾನೂನುಗಳ ಬಗ್ಗೆ ಶಬ್ಧಿಸಿದ ಮಹಾನುಭಾವರಾದ ಸಈದ್ ಬಿನ್ ಜುಬೈರ್ ರಳಿಯಲ್ಲಾಹು ಅನ್ಹುರವರನ್ನು ಕೊಲ್ಲುವ ಇರಾದೆಯಿಂದ ಬಂಧಿಸಿ ಕರೆತರಲು ಆತ ಕಟ್ಟಾಜ್ಞೆ ಹೊರಡಿಸಿದ. ಎಲ್ಲಿ ಹುಡುಕಾಡಿದರೂ ಮಹಾನುಭಾವರನ್ನು ಪತ್ತೆಹಚ್ಚಲಾಗಲಿಲ್ಲ. ಅದಕ್ಕಾಗಿ ರಾಜ ಸುಮಾರು 20 ಸೈನಿಕರನ್ನೊಳಗೊಂಡ ತಂಡವೊಂದನ್ನು ಕಳುಹಿಸಿ ಕೊಟ್ಟ.
ಸೈನಿಕರು ನಡೆಯುತ್ತಾ ಕ್ರೈಸ್ತ ಆರಾಧನಾಲಯವೊಂದರ ಸಮೀಪ ತಲುಪಿ ಮಹಾನುಭಾವರ ಲಕ್ಷಣಗಳನ್ನು ತಿಳಿಸಿ ಅನ್ವೇಷಣೆ ನಡೆಸಿದಾಗ ಅಲ್ಲಿನ ಕ್ರೈಸ್ತ ಪುರೋಹಿತ ಅಲ್ಲೇ ಎತ್ತರದಲ್ಲಿದ್ದ ಮಲೆಯೊಂದನ್ನು ತೋರಿಸಿ ಅಲ್ಲಿ ಸಣ್ಣ ಗುಡಿಸಲಿನಲ್ಲಿ ವ್ಯಕ್ತಿಯೊಬ್ಬರಿದ್ದಾರೆ ಹೋಗಿ ನೋಡಿ” ಎಂದರು. ಭಟರು ಅಲ್ಲಿಗೆ ತಲುಪಿದಾಗ ಮಹಾನುಭಾವರು ಆ ಗುಡಿಸಲಿನಲ್ಲಿ ಆರಾಧನಾಮಗ್ನರಾಗಿ ಸುಜೂದ್‌ನಲ್ಲಿದ್ದಾರೆ. ಕಿಂಕರರು ಬಂದು "ರಾಜ ಹಜ್ಜಾಜ್‌ರ ಕಟ್ಟಪ್ಪಣೆ ಇದೆ. ನಿಮ್ಮನ್ನು ನಾವು ಕರೆದುಕೊಂಡು ಹೋಗುತ್ತೇವೆ" ಎಂದಾಗ ಮಹಾನರು ಅಲ್ಲಾಹನಿಗೆ ಸ್ತುತಿಸಿ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಮೇಲೆ ಸ್ವಲಾತ್ ಹೇಳುತ್ತಾ ಅವರೊಂದಿಗೆ ನಡೆಯಲಾರಂಭಿಸಿದರು.
ಸೂರ್ಯಾಸ್ತಮಾನ ಸಮಯವಾದ್ದರಿಂದ ವನ್ಯಮೃಗಗಳ ಭೀತಿಯಿಂದ ಅವರು ಕ್ರೈಸ್ತ ಪುರೋಹಿತನ ಮಾತಿನಂತೆ ಚರ್ಚ್‌ನಲ್ಲಿ ಅಂದು ರಾತ್ರಿ ತಂಗಲು ತೀರ್ಮಾನಿಸುತ್ತಾರೆ. ಸಈದ್ ಬಿನ್ ಜುಬೈರ್ ರಳಿಯಲ್ಲಾಹು ಅನ್ಹು ರವರು ಮಾತ್ರ ಅಲ್ಲಾಹನ ಬಗ್ಗೆ ಸಮರ್ಪಕ ವಿಶ್ವಾಸವರ್ಪಿಸದ ಜನರ ಆರಾಧನಾಲಯದೊಳಗೆ ಪ್ರವೇಶಿಸಲು ನಿರಾಕರಿಸುತ್ತಾರೆ. ಅದಕ್ಕೆ ಸೈನಿಕರು "ಬೇಡ, ನಿನ್ನದಿದು ಓಡಿ ಹೋಗುವ ತಂತ್ರ" ಎಂದಾಗ ಮಹಾನುಭಾವರು ಅಲ್ಲಾಹನಲ್ಲಿ ಆಣೆಯಿಟ್ಟು "ನಾನೆಲ್ಲಿಗೂ ಓಡಿ ಹೋಗಲಾರೆ" ಎನ್ನುತ್ತಾರೆ. ಇದು ಕೇಳಿ ಸೈನಿಕರು "ಹಾಗಾದರೆ ನಿನ್ನನ್ನು ವನ್ಯಮೃಗಗಳು ಭಕ್ಷಿಸಬಹುದು, ನಾವು ರಾಜನಿಂದ ಶಿಕ್ಷೆಗೆ ಗುರಿಯಾಗುವೆವು" ಎಂದರು. ಅದಕ್ಕೆ ಮಹಾನುಭಾವರು "ನೀವು ಆ ಚಿಂತೆ ಬಿಟ್ಟು ಬಿಡಿ, ಲೋಕರಕ್ಷಕನಾದ ಅಲ್ಲಾಹು ಅವನ ದಾಸನನ್ನು ಸರ್ವ ವನ್ಯಮೃಗಗಳಿಂದ, ವಿಷಜಂತುಗಳಿಂದ ರಕ್ಷಿಸುವನು" ಎಂದು ಹೇಳುತ್ತಾರೆ. ಸೈನಿಕರು ಪ್ರತಿಯಾಗಿ "ನೀನ್ಯಾರು? ಪ್ರವಾದಿಯೋ? ಈ ರೀತಿ ಹೇಳುತ್ತಿರುವೆಯಲ್ಲಾ.." ಎಂದು ಪ್ರಶ್ನಿಸುತ್ತಾರೆ. ಪ್ರತ್ಯುತ್ತರವಾಗಿ ಸಈದ್ ಬಿನ್ ಜುಬೈರ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ "ನಾನು ಪ್ರವಾದಿಯಲ್ಲ, ಅಲ್ಲಾಹನ ದಾಸ. ನಾನು ಕ್ರೈಸ್ತರ ಆರಾಧನಾಲಯದೊಳಕ್ಕೆ ಪ್ರವೇಶಿಸಲಾರೆ. ಆದರೆ ಅಲ್ಲಾಹನಾಣೆ, ನಾನು ಓಡಿ ಹೋಗಲಾರೆ". ಈ ಮಾತನ್ನು ಒಪ್ಪಿದ ಸೈನಿಕರು ಚರ್ಚ್‌ನೊಳಕ್ಕೆ ಹೋಗಿ ಬಾಗಿಲು ಭದ್ರಪಡಿಸಿ, ಮಂದಿರದ ಮಹಡಿಯ ಮೇಲೆ ನಿಂತು ಮಹಾನುಭಾವರನ್ನು ಏನು ಮಾಡುತ್ತಾರೆಂದು ಬಿಲ್ಲು ಬಾಣಗಳನ್ನು ಹಿಡಿದು ವೀಕ್ಷಿಸತೊಡಗುತ್ತಾರೆ.
ಸೈನಿಕರಿಗೆ ಆಶ್ಚರ್ಯಕರ ಘಟನೆಯೊಂದು ಸಂಭವಿಸುತ್ತದೆ. ಮಹಾನರು ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದಂತೆ ಕ್ರೂರಸಿಂಹವೊಂದು ಬಹಳ ತಾಳ್ಮೆಯಿಂದ ಅಲ್ಲಿಗೆ ಬಂದು ಪ್ರಭಾತದವರೆಗೂ ಅವರಿಗೆ ಕಾವಲು ನಿಲ್ಲುತ್ತದೆ. ಚಕಿತಗೊಂಡ ಸೈನಿಕರು ಸೂರ್ಯೋದಯವಾಗುತ್ತಿದ್ದಂತೆ ಬಾಗಿಲು ತೆರೆದು ಓಡಿ ಬಂದು ಮಹಾನುಭಾವರ ಕರಹಿಡಿದು ಚುಂಬಿಸುತ್ತಾರೆ. ಅವರ ಶರೀರ ಮತ್ತು ಅವರು ನಮಾಝಿಗೆ ನಿಂತ ಸ್ಥಳದ ಮಣ್ಣನ್ನು ತೆಗೆದು ಅವರವರ ಶರೀರಕ್ಕೆ ಬರಕತ್‌ಗಾಗಿ ಲೇಪಿಸಿಕೊಳ್ಳುತ್ತಾರೆ. ಭಟರು ಹೇಳುತ್ತಾರೆ "ನಾವು ರಾಜನ ಆಜ್ಞೆಗೆ ಮಣಿದು ತಮ್ಮನ್ನು ಹಿಡಿದುಕೊಂಡು ಹೋಗಲು ಬಂದ ಸೈನಿಕರು. ಪಾಪಿಗಳಾದ ನಮ್ಮನ್ನು ಕ್ಷಮಿಸಿ..ಮಹಾನರೇ, ಆದರೆ ಒಂದು ವಿಚಾರ, ತಾವು ತಮ್ಮನ್ನು ಕಂಡ ವಿಷಯ ರಾಜನಿಗೆ ಹೇಳಬಾರದು ಎನ್ನುವುದಾದರೆ ನಾವು ಅದಕ್ಕೆ ಸಿದ್ಧರಿದ್ದೇವೆ. ಆ ಕಾರಣದಿಂದ ನಾವು ಕೊಲ್ಲಲ್ಪಡುವುದಾದರೆ ಅದಕ್ಕೂ ಸಿದ್ಧ. ತಮ್ಮನ್ನು ಕೊಲ್ಲಲುದ್ದೇಶಿಸಿದ ಅಕ್ರಮಿ ರಾಜ ಹಜ್ಜಾಜನದ್ದು ಹತಭಾಗ್ಯವೇ ಸರಿ". ಆಗ ಮಹಾನರು "ಸಲ್ಲದು, ನನ್ನ ಕಾರಣದಿಂದ ಯಾರೂ ನೋವುಣ್ಣಬಾರದು, ಯಾರೂ ಶಿಕ್ಷಿಸಲ್ಪಡಬಾರದು. ಅಲ್ಲಾಹನ ವಿಧಿ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನೂ ನಿಮ್ಮೊಂದಿಗೆ ಬರುತ್ತೇನೆ" ಎನ್ನುತ್ತಾ ಭಟರನ್ನು ಹಿಂಬಾಲಿಸುತ್ತಾರೆ.
ಹೀಗೆ ಅವರೆಲ್ಲರೂ ಹಲವು ದಿನಗಳ ಕಾಲ ನಡೆದರು. ದಾರಿಮಧ್ಯೆ ಸಈದ್ ಬಿನ್ ಜುಬೈರ್ ರಳಿಯಲ್ಲಾಹು ಅನ್ಹು ಸಂಗಡಿಗರೊಂದಿಗೆ ಹೇಳುತ್ತಾರೆ "ಪ್ರಿಯ ಸ್ನೇಹಿತರೇ, ನನ್ನಿಂದೇನಾದರೂ ನಿಮ್ಮ ಮನಸ್ಸಿಗೆ ನೋವುಂಟಾಗಿದ್ದಲ್ಲಿ ನೀವು ದಯಮಾಡಿ ನನಗೆ ಕ್ಷಮಿಸಿ. ನನ್ನ ಮರಣ ಸಮೀಪಿಸಿದೆ ಎಂಬ ಅರಿವು ನನಗೆ ಲಭಿಸಿದೆ. ಅದಕ್ಕಾಗಿ ಈ ರಾತ್ರಿ ನನ್ನನ್ನು ಏಕಾಂತವಾಗಿ ಬಿಟ್ಟು ಬಿಡಿ. ನನಗೆ ಅಂತಿಮ ಯಾತ್ರೆಗೆ ತಯ್ಯಾರಾಗಬೇಕಿದೆ. ಸೃಷ್ಟಿಕರ್ತನಲ್ಲಿ ನನ್ನ ತಪ್ಪುಗಳನ್ನು ಹೇಳಿ ಕ್ಷಮೆ ಕೇಳಬೇಕಿದೆ. ನನ್ನ ಮರಣವೇದನೆ ಲಘೂಕರಿಸಲು ಅವನಲ್ಲಿ ವಿನಯಪೂರ್ವಕ ಅಪೇಕ್ಷಿಸಬೇಕಿದೆ. ಖಬ್ರ್‌ನಲ್ಲಿ ಮುಂಕರ್-ನಕೀರ್ ಮಲಕುಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲು ತೌಫೀಕ್ ಲಭಿಸಲು ಅವನೊಂದಿಗೆ ಬೇಡಬೇಕಿದೆ". ಇವಿಷ್ಟನ್ನು ಕೇಳಿದ ಸೈನಿಕರು ಅಳುತ್ತಾ "ಮಹಾನರೇ ತಮ್ಮಂತಹ ಶ್ರೇಷ್ಠರೇ ಇಷ್ಟು ಅಲ್ಲಾಹನನ್ನು ಭಯಪಟ್ಟು ಅಳುವುದಾದರೆ, ಒಂದಿನಿತೂ ಅರಿವಿಲ್ಲದ ನಾವೆಷ್ಟು ಅಳಬೇಕು?" ಎನ್ನುತ್ತಾರೆ. ಅಂತೆಯೇ ಮಹಾನರು ಅಂದು ರಾತ್ರಿಯಿಡೀ ಆರಾಧನಾಮಗ್ನರಾಗುತ್ತಾರೆ. ಅವರೆಲ್ಲರೂ ಮರುದಿನ ಪಟ್ಟಣ ತಲುಪಿದರು.
ಮಹಾನರನ್ನು ಭಟರು ಅರಮನೆಗೆ ತಂದು ರಾಜನ ಮುಂದೆ "ಮಹಾರಾಜರೇ, ತಾವುದ್ದೇಶಿಸಿದಂತಲ್ಲ ಈ ವ್ಯಕ್ತಿ" ಎನ್ನುತ್ತಾ ಯಾತ್ರೆ ಮಧ್ಯೆ ಸಂಭವಿಸಿದ ಮಹಾನರ ಅಸಾಧಾರಣ ಕರಾಮತ್‌ಗಳ ಕುರಿತು ವಿವರಿಸುತ್ತಾರೆ. ಸನ್ಮಾರ್ಗದ ಬೆಳಕು ಲಭಿಸದ ಕ್ರೂರಿ ರಾಜ ಹಜ್ಜಾಜ್ ಬಿನ್ ಯೂಸುಫ್ "ಅದ್ಯಾವುದನ್ನೂ ನಾನು ಕೇಳಿಲ್ಲ ತಾನೇ?" ಎನ್ನುತ್ತಾ ಮಹಾನರನ್ನು ಅವನ ಮುಂದೆ ಹಾಜರುಪಡಿಸುವಂತೆ ಆದೇಶಿಸುತ್ತಾನೆ.
ರಾಜ: ನಿನ್ನ ಹೆಸರೇನು?
ಮಹಾನರು: ಸಈದ್ ಬಿನ್ ಜುಬೈರ್.
ಇದು ರಾಜನಿಗೆ ರುಚಿಸಲಿಲ್ಲ.
ರಾಜ: ಸಈದ್ ಎಂದರೆ ವಿಜಯಿ ಎಂದಲ್ಲವೇ? ನೀನು ಶಖಿಯ್ಯ್ ಬ್ನು ಖುಸೈರ್.(ಪರಾಜಿತ ಎಂದರ್ಥ)
ಮಹಾನರು: ನನ್ನ ತಾಯಿ ನನಗಿಟ್ಟ ಹೆಸರು ಅದಾಗಿದೆ.
ರಾಜ: ನೀನು ಮತ್ತು ನಿನ್ನ ತಾಯಿ ಇಬ್ಬರೂ ಪರಾಜಿತರು.
ಮಹಾನರು: ಆ ಬಗ್ಗೆ ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ.
ರಾಜ: ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರ ಬಗ್ಗೆ ನಿನ್ನ ಅಭಿಪ್ರಾಯವೇನು?
ಮಹಾನರು: ಸತ್ಯ ಪ್ರವಾದಿ...,
ಎನ್ನುತ್ತಾ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಗುಣಗಾನ ಮಾಡುತ್ತಾರೆ.
ರಾಜ: ಅಬೂಬಕ್ಕರ್ ರಳಿಯಲ್ಲಾಹು ಅನ್ಹು ರವರ ಬಗ್ಗೆ ನಿನ್ನ ಅಭಿಪ್ರಾಯವೇನು?
ಮಹಾನರು: ಸೌರ್ ಗುಹೆಯಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಜೊತೆಗಿದ್ದ ಸಂಗಾತಿ. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಉಮ್ಮತ್ತಿನ ಪ್ರತಿನಿಧಿ.
ರಾಜ: ಉಮರ್ ರಳಿಯಲ್ಲಾಹು ಅನ್ಹು ರವರ ಬಗ್ಗೆ ನಿನ್ನ ಅಭಿಪ್ರಾಯವೇನು?
ಮಹಾನರು: ಇಸ್ಲಾಮ್‌ಗೆ ಧಾರಾಳ ಸಹಾಯ ನೀಡಿದ ಮಹಾನ್.
ರಾಜ: ಉಸ್ಮಾನ್ ರಳಿಯಲ್ಲಾಹು ಅನ್ಹು ರವರ ಬಗ್ಗೆ ನಿನ್ನ ಅಭಿಪ್ರಾಯವೇನು?
ಮಹಾನರು: ಇಸ್ಲಾಂಗೆ ಪ್ರವೇಶಿಸುವ ಮುಂಚೆಯೂ ನಂತರವೂ ತಪ್ಪೆಸಗದ ವ್ಯಕ್ತಿ, ದಾನಿ, ಅಕ್ರಮವಾಗಿ ಕೊಲ್ಲಲ್ಪಟ್ಟ ಮಹಾನ್.
ರಾಜ: ಅಲೀ ರಳಿಯಲ್ಲಾಹು ಅನ್ಹು ರವರ ಕುರಿತು ನಿನ್ನ ಅಭಿಪ್ರಾಯವೇನು?
ಮಹಾನರು: ಫಾತ್ವಿಮಾ ರಳಿಯಲ್ಲಾಹು ಅನ್ಹಾ ರವರ ಪತಿ, ಜ್ಞಾನ ಮತ್ತು ಸಹನೆಯ ಸಾಕಾರ ಮೂರ್ತಿ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಪ್ರೀತಿಯ ಅಳಿಯ.
ರಾಜ: ಮುಆವಿಯಾ ರಳಿಯಲ್ಲಾಹು ಅನ್ಹು ರವರ ಬಗ್ಗೆ ನಿನ್ನ ಅಭಿಪ್ರಾಯವೇನು?
ಮಹಾನರು: ಸ್ವಹಾಬಿವರ್ಯ, ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರಿಗೆ ವಹಿಯ್ಯ್ ಬರೆದು ಕೊಡುತ್ತಿದ್ದ ಮಹಾನ್.
ಎಲ್ಲದಕ್ಕೂ ದಿಟ್ಟ ಸಮರ್ಪಕ ಉತ್ತರ ನೀಡಿದ ಸಈದ್ ರಳಿಯಲ್ಲಾಹು ಅನ್ಹು ರವರ ಮಾತಿನಿಂದ ಹುಲುಕಡ್ಡಿಯಷ್ಟೂ ತಪ್ಪು ಲಭಿಸದಾದಾಗ ರಾಜನ ಕೋಪ ತಾರಕ್ಕೇರುತ್ತದೆ.
ರಾಜ: ನಿನಗೆ ನಾಶವಿರಲಿ.
ಮಹಾನರು: ನಾಶ ಸ್ವರ್ಗ ನಷ್ಟ ಹೊಂದಿ, ನರಕಕ್ಕೆ ಅರ್ಹನಾದವನಿಗಾಗಿದೆ.
ರಾಜ: ನಾನು ನಿನ್ನನ್ನು ಕೊಲ್ಲುವೆನು? ಯಾವ ರೀತಿ ಕೊಲ್ಲಲಿ?
ಮಹಾನರು: ನಿನ್ನಿಷ್ಟದಂತಿರಲಿ, ನಿನಗೆ ಯಾವ ರೀತಿ ಅಲ್ಲಾಹನಿಂದ ಪ್ರತೀಕಾರ ಬೇಕೋ, ಆ ರೀತಿ ಕೊಲ್ಲು. ಕಾರಣ ಅಂತ್ಯ ದಿನದಲ್ಲಿ ನನ್ನನ್ನು ಕೊಂದಂತೆ ನಿನ್ನನ್ನು ಅಲ್ಲಾಹು ಕೊಲ್ಲುವನು.
ರಾಜ: ನನ್ನಿಂದ ನೀನು ಕ್ಷಮೆ ಬಯಸುವೆಯಾ?
ಮಹಾನರು: ನಾನು ಕ್ಷಮೆ ಬಯಸುವುದಾದರೆ ಅದು ಅಲ್ಲಾಹನಿಂದ ಮಾತ್ರ.
ತಕ್ಷಣ ರಾಜನ ಆದೇಶ: ಚರ್ಮವೊಂದನ್ನು ಹರಡಿ, ಅವನನ್ನು ಮಲಗಿಸಿ, ಕೊಲ್ಲಿರಿ.
ಇದು ಕೇಳಿ ಮಹಾನರು ಮುಗುಳ್ನಕ್ಕರು. ಕೋಪಗೊಂಡ ರಾಜ ಸಈದ್ ಬಿನ್ ಜುಬೈರ್ ರಳಿಯಲ್ಲಾಹು ಅನ್ಹು ರನ್ನು ಕರೆದು ಕೇಳುತ್ತಾನೆ,"ಈ ಸನ್ನಿವೇಶದಲ್ಲಿ ನೀನು ನಗಲು ಕಾರಣವೇನು? ಇದು ನಗುವ ಸಂದರ್ಭವಲ್ಲ ಅಲ್ಲವೇ?"
ಮಹಾನರು: ನಿನ್ನ ಧೈರ್ಯ, ಮತ್ತು ಅಲ್ಲಾಹನ ಸಹನೆಯ ಬಗ್ಗೆ ಚಿಂತಿಸಿ ನನಗೆ ನಗು ಉಕ್ಕಿ ಬಂತು. ನಿನ್ನಂತಹ ಧಿಕ್ಕಾರಿ ಬೆಂಕಿಯುಂಡೆಯ ಮೇಲೆ ನಿಂತು ಆಡುತ್ತಿರುವುದನ್ನು ನೋಡುತ್ತಿರುವ ಅಲ್ಲಾಹನ ಸಂಯಮವೆಷ್ಟು ಅಪಾರ.
ರಾಜ "ಅಬ್ಬಬ್ಬಾ...ಇವನಿಗೆಂತಹ ಧೈರ್ಯ? ಇವನನ್ನು ಕೊಲ್ಲಿರಿ" ಎಂದು ಆಜ್ಞೆ ಕೊಟ್ಟ.
ಭಟರು ಮಹಾನರನ್ನು ಮಲಗಿಸಿದರು. ಮಹಾನುಭಾವರು ಖಿಬ್‌ಲಾಭಿಮುಖವಾಗಿ ತಿರುಗಿ, "ನನ್ನ ಸೃಷ್ಟಿಕರ್ತನ ಕಡೆ ನನ್ನ ಮುಖ ಸಮರ್ಪಿಸುತ್ತೇನೆ" ಎಂಬರ್ಥ ಬರುವ ಖುರ್‌ಆನ್ ಸೂಕ್ತ ಪಠಿಸುತ್ತಾರೆ. ರಾಜ ಭಟರೊಂದಿಗೆ "ಅವನನ್ನು ಖಿಬ್‌ಲಾದ ಕಡೆಗೆ ತಿರುಗ ಬಿಡದಿರಿ. ಬೇರೆ ಕಡೆಗೆ ತಿರುಗಿಸಿ" ಎಂದು ಆದೇಶವಿತ್ತನು. ಮಹಾನರು "ನೀವ್ಯಾವ ಕಡೆಗೆ ತಿರುಗಿದರೂ ತಮಗೆ ಅಲ್ಲಾಹನ ತೃಪ್ತಿಯಿದೆ" ಎಂಬರ್ಥ ಬರುವ ಖುರ್‌ಆನಿನ ಸೂಕ್ತ ಪಠಿಸುತ್ತಾರೆ. ರಾಜ "ಅವನನ್ನು ನೆಲದಲ್ಲಿ ದರದರನೆ ಎಳೆಯಿರಿ" ಎನ್ನುತ್ತಾನೆ ಕಿಂಕರರೊಂದಿಗೆ. ಆಗ ಮಹಾನರು, "ಮಣ್ಣಿನಿಂದಲೇ ಸೃಷ್ಟಿಸಿ, ಮಣ್ಣಿಗೇ ಮರಳಿಸಿ, ಮಣ್ಣಿನಿಂದಲೇ ಪುನರ್ಜನ್ಮ ನೀಡುವೆವು" ಎಂಬರ್ಥ ಬರುವ ಖುರ್‌ಆನಿನ ಸೂಕ್ತ ಪಠಿಸುತ್ತಾರೆ. ತಕ್ಷಣ ರಾಜನ ಆದೇಶ "ಅವನನ್ನು ಕೊಲ್ಲಿರಿ, ಅವನ ಕತ್ತು ಕೊಯ್ಯಿರಿ". ಭಟರು ಚೂಪಾದ ಕತ್ತಿಯಿಂದ ಮಹಾನರ ಕತ್ತು ಕೊಯ್ಯುವಾಗ ಮಹಾನರು ಪ್ರಾರ್ಥಿಸುತ್ತಾರೆ ಅಲ್ಲಾಹನೇ, ಇನ್ನು ಮುಂದೆ ಯಾವುದೇ ಒಬ್ಬ ಪಂಡಿತನ ಮೇಲೆ ಕೈ ಮಾಡಲು ಈ ಕ್ರೂರಿ ರಾಜನಿಗೆ ಅವಕಾಶ ಕೊಡದಿರು. ಲಾಇಲಾಹ ಇಲ್ಲಲ್ಲಾಹ್... ಎನ್ನುತ್ತಾ ಮಹಾನುಭಾವರು ವಫಾತಾಗುತ್ತಾರೆ (ಇನ್ನಾಲಿಲ್ಲಾಹಿ ವಇನ್ನಾ ಇಲೈಹಿ ರಾಜಿಊನ್).
ಇದಾಗಿ ಕೇವಲ 15 ದಿನಗಳಲ್ಲಿ ಮಹಾನರ ಪ್ರಾರ್ಥನೆಯ ಫಲವಾಗಿ ಹಜ್ಜಾಜ್ ಬಿನ್ ಯೂಸುಫನಿಗೆ ರೋಗವೊಂದು ಅಂಟಿಕೊಳ್ಳುತ್ತದೆ. "ಸಈದ್ ಬಿನ್ ಜುಬೈರ್ ನಿಂದ ನನ್ನನ್ನು ರಕ್ಷಿಸಿ ಜನರೇ" ಎಂದು ಆತ ಆಗಾಗ್ಗೆ ಬೊಬ್ಬಿರಿಯತೊಡಗುತ್ತಾನೆ. ಭಟರು ಏನಾಯಿತೆಂದು ಕೇಳುವಾಗ "ಸಈದ್ ಬಿನ್ ಜುಬೈರ್ ನನ್ನನ್ನು ಕತ್ತು ಹಿಸುಕಿ ಕೊಲ್ಲುತ್ತಿದ್ದಾನೆ" ಎನ್ನುತ್ತಾ ಆ ನತದೃಷ್ಟ ಪ್ರಾಣ ಬಿಡುತ್ತಾನೆ.
Comments