ಕುರ್ ಆನ್ ಇಲ್ಲದ ಹೃದಯವು ಜನರಿಲ್ಲದ ಪಾಳು ಮನೆಯಂತೆ
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)
ಪ್ರವಾದಿ ಮುಹಮ್ಮದ್ ಮುಸ್ತಫಾﷺ ರವರ ಶ್ರೇಷ್ಠ ಮುಹ್ ಜಿಝತ್ ಪವಿತ್ರ ಕುರ್ ಆನ್. ಅಂತ್ಯ ದಿನದ ತನಕ ಒಂದೇ ಒಂದು ಅಕ್ಷರ ವ್ಯತ್ಯಾಸವಿಲ್ಲದೆ ಅಲ್ಲಾಹನೇ ಸಂರಕ್ಷಿಸುವ ಪವಿತ್ರ ವಚನಗಳವು. ಜಗತ್ತಿನಲ್ಲಿ ಹಲವಾರು ಕ್ರಾಂತಿಗಳಿಗೆ ಕುರ್ ಆನ್ ಕಾರಣವಾಗಿದೆ. ಧರ್ಮವೇನೆಂದು ತಿಳಿಯದ ವಿಗ್ರಹ ಆರಾಧನೆಯಲ್ಲಿ ಮುಳುಗಿದ ಒಂದಿಡೀ ಸಮೂಹವನ್ನು ಉನ್ನತ ಸಮೂಹ ಎಂದು ಹೊಗಳಲ್ಪಡುವ ತನಕ ಎತ್ತರಕ್ಕೆ ಕೊಂಡೊಯ್ದದ್ದು ಕುರ್ ಆನಿನ ಆವರ್ಣನೀಯ ಶಕ್ತಿಗೊಂದು ಉದಾಹರಣೆ ಮಾತ್ರ. ಜಗತ್ತಿನ ಬುದ್ದಿಜೀವಿಗಳೆಲ್ಲಾ ಕುರ್ ಆನಿನ ಕಡೆಗೆ ಓಗೊಡುತ್ತಿದ್ದಾರೆ. ವೈಜ್ಞಾನಿಕ ರಂಗದ ಪ್ರತಿ ಸಂಶೋಧನೆಗಳಿಗೂ ಕುರ್ ಆನಿನ ಸೂಕ್ತಗಳು ಪ್ರೇರಣೆಯಾಗುತ್ತಿವೆ. ಕುರ್ ಆನನ್ನು ಮಣಿಸಲು ಬಂದವರನ್ನೆಲ್ಲಾ ಮೂಲೆಗೆಸೆದಿದೆ.
ಈ ರೀತಿ ತನ್ನ ಅಜೇಯತೆಯನ್ನು ನಿತ್ಯ ನಿರಂತರವಾಗಿ ಸಾರುತ್ತಿರುವ ಕುರ್ ಆನಿನ ಅನುಯಾಯಿಗಳಾದ ನಾವು ಚಿಂತಿಸಬೇಕಾ ಸಂಗತಿಯೊಂದಿದೆ. ಅದೇನೆಂದರೆ ಬೆಳೆದು ಬರುತ್ತಿರುವ ನಮ್ಮ ಮಕ್ಕಳಿಗೆ ಹಾಗೂ ಯುವಕ-ಯುವತಿಯರಿಗೆ ಕುರ್ ಆನಿನೊಂದಿಗಿರುವ ಸಂಪರ್ಕವು ಕಡಿಮೆಯಾಗುತ್ತಿದೆಯೇ ಎಂದು ಆತಂಕವಾಗಿದೆ. ಆಧುನಿಕ ಸಂವಿಧಾನದ ಭರಾಟೆಯಲ್ಲಿ ನಮ್ಮ ಯುವ ಜನತೆಯು ಕುರ್ ಆನ್ ಓದಲು ಆಲಸ್ಯತನವನ್ನು ತೋರುತ್ತಿರುವುದು ಚಿಂತಿಸಲೇಬೇಕಾದ ಸಂಗತಿಯಾಗಿದೆ. ಕೆಲ ವ್ಯಕ್ತಿಗಳು ಅದರಲ್ಲೂ ಪ್ರತ್ಯೇಕವಾಗಿ ಯುವಕ - ಯುವತಿಯರು ದಿನದ 24 ಗಂಟೆಯೂ ಅನಗತ್ಯವಾಗಿ ವಾಟ್ಸಾಪ್ ಫೇಸ್ಬುಕ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಪೋಲು ಮಾಡುತ್ತಾರೆ. ಅದೇ ರೀತಿ ಕ್ರಿಕೇಟ್ ಹಾಗೂ ಇತರ ಯಾವುದೇ ಅನಾವಶ್ಯಕ ಚಟುವಟಿಕೆಗಳಿಗೆ ಸಮಯವಿದೆ.
ಅಲ್ಲಾಹುﷻವಿನ ಪರಿಶುದ್ಧ ಕಲಾಮಾದ ಕುರ್ ಆನ್ ದಿನಕ್ಕೆ ಕನಿಷ್ಠ ಒಂದು ಬಾರಿಯಾದರೂ ಓದಲು ನಮಗೆ ಸಮಯವಿಲ್ಲ ಯಾಕೆ.? ಇದೆಲ್ಲವೂ ನಾವು ಚಿಂತಿಸಲೇಬೇಕಾದ ವಿಷಯವಾಗಿದೆ.
ಮದ್ರಸಾ ಕಲಿಕೆಯ ನಂತರ ಕುರ್ ಆನ್ ಪಾರಾಯಣವನ್ನು ನಿತ್ಯ ರೂಡಿಯಾಗಿಸುವ ಯುವಕ ಯುವತಿಯರು ಕಡಿಮೆಯಾಗುತ್ತಿದ್ಧಾರೆ. ಲೌಕಿಕ ಶಿಕ್ಷಣಕ್ಕೆ ಕೊಡುವಷ್ಟು ಕಾಳಜಿಯನ್ನು ಅಲ್ಲಾಹುವಿನﷻ ಪವಿತ್ರ ಕಲಾಮಾದ ಕುರ್ ಆನಿಗೆ ಕೊಡುವುದಿಲ್ಲ.
ಇದು ಖಂಡಿತವಾಗಿಯೂ ಅಪಾಯಕಾರಿಯಾದ ವಿಷಯವಾಗಿದೆ. ನಾವು ಇದನ್ನು ತಿದ್ದಲೇಬೇಕಾಗಿದೆ. ಕುರ್ ಆನಿನೊಂದಿಗೆ ನಮಗೆ ನಂಟು ಬೆಳೆಯಬೇಕು. ಮದ್ರಸಾ ಕಲಿಕೆಯ ವೇಳೆ ಕಲಿತ ಹಲವಾರು ಸೂರತ್ ಗಳನ್ನು ನಮ್ಮ ಯುವಕ - ಯುವತಿಯರು ಮರೆತಿದ್ದಾರೆ ಎಂಬುವುದು ಬಹುದೊಡ್ಡ ಖೇದಕರವಾದ ವಿಷಯ. ಆಂಗ್ಲ, ಕನ್ನಡ ಬಾಷೆಯನ್ನು ಸಲೀಸಾಗಿ ಓದಲು ಹಿಂಜರಿಯದ ಯುವಕ ಯುವತಿಯರು, ಕುರ್ ಆನ್ ಓದಲು ಹಿಂಜರಿಯುತ್ತಾರೆ. ಕಾರಣ ಹರ್ ಫ್ ತಪ್ಪಬಹುದೆಂಬ ನಿಟ್ಟಿನಲ್ಲಿ ಕುರ್ ಆನನ್ನು ಓದಲು ಸಂಕೋಚಪಡುವವರಿದ್ದಾರೆ.
ಯಾಕೆ ನಮಗೂ ಕುರ್ ಆನನ್ನು ಸಲೀಸಾಗಿ ಓದಲು ಸಾಧ್ಯವಿಲ್ಲ ವೆಂಬುವುದನ್ನು ಚಿಂತಿಸಲೇಬೇಕಾಗಿದೆ.
ಕುರ್ ಆನ್ ಓದಲು ಸಂಕೋಚ ಪಡಬೇಡಿ. ಕುರ್ ಆನನ್ನು ಓದಲು ಗೊತ್ತಿಲ್ಲದವರು ಒಂದೊಂದು ಹರ್ ಫನ್ನು ನೋಡಿದರೂ ಪುಣ್ಯವಿದೆ. ಕುರ್ ಆನನ್ನು ಕಂಠಪಾಠ ಮಾಡಿ ಅದನ್ನು ಮರೆಯುವುದು ಪಾಪಕೃತ್ಯವಾಗಿದೆ.
ಕುರ್ ಆನ್ ಹಿಫ್ಳ್ ನ ವಿಷಯವು ಅತೀ ಪ್ರಾಧಾನ್ಯತೆಯೊಂದಿಗೆ ನಾವು ಕಾಣಬೇಕು. ಸಣ್ಣ ಪ್ರಾಯದಲ್ಲೇ ಮಕ್ಕಳನ್ನು ಹಿಫ್ಳುಲ್ ಕುರ್ ಆನ್ ಸಂಸ್ಥೆಗೆ ಸೇರಿಸಲು ಪಾಲಕರು ಮನಸ್ಸು ಮಾಡಬೇಕು. ಪ್ರತಿ ಕುಟುಂಬದಲ್ಲೊಬ್ಬರನ್ನಾದರೂ ಹಾಫಿಲ್ ಮಾಡಲು ಪ್ರಯತ್ನಿಸಬೇಕು.
ನಮ್ಮ ಮನೆಯಲ್ಲಿ ಸುಬಹ್ ಹಾಗೂ ಮಗ್ರಿಬ್ ನಮಾಝಿನ ವೇಳೆ ಕನಿಷ್ಠ ಪಕ್ಷ ಎರಡು ಹೊತ್ತಿಗಾದರೂ ಕುರ್ ಆನ್ ಓದಲು ಪ್ರಯತ್ನಿಸಬೇಕು.
ಕುರ್ ಆನ್ ಇಲ್ಲದ ಮನೆಯಲ್ಲಿ ಬರಕತ್ ಇರುವುದಿಲ್ಲ.
ಆದ್ದರಿಂದ ಸಾಧ್ಯವಾದಷ್ಟು ಕುರ್ ಆನ್ ಓದಲು ಇಂದಿನಿಂದಲೇ ಪ್ರಯತ್ನಿಸುವ ಇಂಷಾಅಲ್ಲಾಹ್...
ಪ್ರವಾದಿ ಮುಹಮ್ಮದ್ ಮುಸ್ತಫಾ ﷺ ರವರು ಹೇಳುತ್ತಾರೆ "ಕುರ್ ಆನ್ ಕಂಠಪಾಠವಿಲ್ಲದ ಹೃದಯವು ಪಾಳು ಮನೆಯಂತೆ"
ಅಂದರೆ ಆ ಹೃದಯಕ್ಕೆ ಶೈತಾನನಿಗೆ ಪ್ರವೇಶಿಸಲು ಯಾವುದೇ ಪ್ರಯಾಸವಿರಲಾರದು. ಆದ್ದರಿಂದ ನಾವೆಲ್ಲರೂ ಸಾಧವಾದಷ್ಟು ಕುರ್ ಆನನ್ನು ಕಂಠಪಾಠ ಮಾಡಲು ಶ್ರಮಿಸಬೇಕು ಇಂಷಾಅಲ್ಲಾಹ್..
ಮರೆತು ಹೋಗಿದ್ದರೆ ಪುನಃ ಸ್ಮೃತಿ ಪಟಲದಲ್ಲಿ ಜೀವಂತಗೊಳಿಸಲು ಪ್ರಯತ್ನಿಸಬೇಕು..
ಅಲ್ಲಾಹು ನಮಗೆಲ್ಲರಿಗೂ ಅನುಗ್ರಹಿಸಲಿ.ಆಮೀನ್ ಯಾ ರಬ್ಬಲ್ ಆಲಮೀನ್.
(ಮುಗಿಯಿತು.)
ನಮ್ಮೆಲ್ಲರ ಹಬೀಬ್ ಮುತ್ತು ನಬಿ ಮುಹಮ್ಮದ್ ಮುಸ್ತಫಾﷺ ತಂಗಳ ಮೇಲೆ 10 ಸ್ವಲಾತ್ ಹೇಳುವ
اَللَّهُمَّ صَلِّ عَلَى سَيِّدِنَا مُحَمَّدٍ وَعَلَى آلِهِ وَصَحْبِهِ وَسَلِّمْ
✍🏻 ಎಂ.ಫಯಾಝ್
ಬೀಸಿರೋಡು(ಪಿಸಿ)
Comments