Skip to main content

ಪೆರ್ನಾಲ್ ಸಂಭ್ರಮ ಧಾರ್ಮಿಕ ಚೌಕಟ್ಟು ಮೀರಿ ಆಚರಿಸುವುದು ಮುಸ್ಲಿಮರಿಗೆ ಭೂಷಣವಲ್

ಪೆರ್ನಾಲ್ ಸಂಭ್ರಮ ಧಾರ್ಮಿಕ ಚೌಕಟ್ಟು ಮೀರಿ ಆಚರಿಸುವುದು ಮುಸ್ಲಿಮರಿಗೆ ಭೂಷಣವಲ್ಲ

*ಪವಿತ್ರ ರಂಝಾನ್ ತಿಂಗಳು ವಿಶ್ವಾಸಿ ವೃಂದದೊಂದಿಗೆ ವಿದಾಯ ಹೇಳಿದಾಗ ಜಾಗತಿಕ ಮುಸ್ಲಿಂ ಸಮುದಾಯದ ಬಳಿಗೆ ಸಾಂತ್ವನ ಸ್ಪರ್ಶ ನೀಡುತ್ತಾ ಆಗಮಿಸುವ ಶವ್ವಾಲ್ ತಿಂಗಳು ರಂಝಾನ್ ವ್ರತಾಚರಣೆಯ ಸಮಾರೋಪವಾಗಿದೆ.*

*ಒಂದು ತಿಂಗಳುಗಳ ಕಾಲ ಪ್ರಭಾತದಿಂದ ಪ್ರದೋಷದ ತನಕ ಅಖಿಲ ಬ್ರಹ್ಮಾಂಡ ಸೃಷ್ಟಿ-ಸಂಹಾರ ಕರ್ತ ಅಲ್ಲಾಹುವಿನ ತೃಪ್ತಿಗಾಗಿ ಅನ್ನ ಪಾನೀಯಗಳನ್ನು ತ್ಯಜಿಸಿ ಕಡ್ಡಾಯ ವ್ರತಾನುಷ್ಠಾನ ಕೈಗೊಂಡು ಶುದ್ಧ ಹೃದಯವಂತರಾಗಿ ಧಾರ್ಮಿಕ ನವಚೈತನ್ಯ ದೊಂದಿಗೆ ಈದುಲ್ ಫಿತ್ರ್ ಎಂಬ ಮಹತ್ವಪೂರ್ಣ ಹಬ್ಬಾಚರಣೆ ಮಾಡುವಾಗ ರಂಝಾನ್ ತಿಂಗಳ ತಾಜಾ ಪವಿತ್ರತೆ ಮೇಳೈಸಿರಬೇಕಾದದ್ದು ಅನಿವಾರ್ಯವಾಗಿದೆ.*

*ಮಾನವರ ಸಂತೋಷ-ಸಂಭ್ರಮಗಳೆಲ್ಲವೂ ಇಸ್ಲಾಂ ಧರ್ಮದ ಚೌಕಟ್ಟನ್ನು ಮೀರಬಾರದೆಂಬ ಮಹೋನ್ನತ ಸಂದೇಶವನ್ನು ಈದುಲ್ ಫಿತ್ರ್ ಅಥವಾ ಪೆರ್ನಾಳ್ ಹಬ್ಬ ಜಗತ್ತಿಗೆ ಸಾರುತ್ತಿದೆ.*

*ರಂಝಾನ್ ತಿಂಗಳ ಕೊನೆಯ ದಿನದ  ಪ್ರಜ್ವಲ ಸೂರ್ಯ, ಪಶ್ಚಿಮ ಬಾಂದಳದಿಂದ ಮರೆಯಾದಾಗ ಶವ್ವಾಲ್ ತಿಂಗಳ ಬಾಲಚಂದಿರ ಪಶ್ಚಿಮ ಬಾನಂಗಳದಲ್ಲಿ ಬೆಳ್ಳಿ ಕಿರಣಗಳನ್ನು ಮೂಡಿಸುತ್ತಾ ಪ್ರತ್ಯಕ್ಷವಾಗುವಾಗ ಜಾಗತಿಕ ಮುಸ್ಲಿಂ ಸಮುದಾಯದ ಮೈಮನಗಳಲ್ಲಿ ಸಂಭ್ರಮ,ಸಡಗರದ ಅಲೆಗಳೇಳ ತೊಡಗುತ್ತದೆ.*
*ಸತ್ಯವಿಶ್ವಾಸಿಗಳ ತುಟಿಗಳಿಂದ ಹೊರಡುವ ಅಲ್ಲಾಹು ಅಕ್ಬರ್ ( ಅಲ್ಲಾಹು ಮಹೋನ್ನತನು ) ಎಂಬ ಮಧುರ ಧ್ವನಿಗಳು ದಿಗಂತ ಬೇಧಿಸುತ್ತಾ  ಸಾಗತೊಡಗುತ್ತವೆ.*

*ಶವ್ವಾಲ್ ಒಂದರ ಸೂರ್ಯನು ಪೂರ್ವದಿಕ್ಕಿನಲ್ಲಿ ವರ್ಣಚಿತ್ತಾರ ಬಿಡಿಸಿ ಪ್ರಪಂಚಕ್ಕೆ ಹೊಂಬೆಳಕು ಚೆಲ್ಲುತ್ತಾ ಧಾವಿಸಿ ಬರುವಾಗ ಮಕ್ಕಳು, ಪುರುಷರು, ಮಹಿಳೆಯರೆಲ್ಲ ಮಿಂದು, ಶುಭ್ರ ವಸ್ತ್ರಧಾರಿಗಳಾಗಿ ಈದುಲ್ ಫಿತ್ರ್ ಸಂಭ್ರಮವನ್ನು ಕೊಂಡಾಡಲು ಹಾತೊರೆಯುತ್ತಾರೆ.*

*ತಕ್ಬೀರ್ ಧ್ವನಿಗಳನ್ನು ಉಚ್ಚರಿಸುತ್ತಾ ಪುರುಷರು, ಬಾಲಕರು ಮಸೀದಿ ಅಥವಾ ಈದ್ಗಾದ ಕಡೆಗೆ ಆತ್ಮಾನುಭೂತಿಯ ಹೆಜ್ಜೆಗಳನ್ನು ಹಾಕುವಾಗ,ಮಹಿಳೆಯರು,ಯುವತಿಯರು,ಬಾಲಕಿಯರು ಮನೆಯಲ್ಲೇ ಈದುಲ್ ಫಿತ್ರ್ ನಮಾಝ್ ನ ಅನರ್ಘ್ಯ ನಿಮಿಷಗಳನ್ನು ಅನುಭವಿಸಿ ಆತ್ಮ ಸಂತೃಪ್ತಿ ಪಡೆಯುತ್ತಾರೆ.*

*ಮದರಂಗಿಯ ವರ್ಣಚಿತ್ತಾರಗಳನ್ನು ಕೈಗಳಿಗೆ ಲೇಪಿಸುತ್ತಾ ಆನಂದಾತಿರೇಕದ ಸಾಗರದಲ್ಲಿ ತೇಲಾಡುವ ಯುವತಿಯರು, ಈದುಲ್ ಫಿತ್ರ್ ಹಬ್ಬವನ್ನು ಮನದಣಿಯೇ ಆಚರಿಸಿ ಸಂಭ್ರಮ ಪಡುತ್ತಾರೆ.*

*ಈದುಲ್ ಫಿತ್ರ್ ಅಂಗವಾಗಿ ಅರ್ಹರು ಅರ್ಹರನ್ನು ಹುಡುಕಿ ಕಡ್ಡಾಯ ದಾನವಾದ ಫಿತ್ರ್ ಝಕಾತ್,ಪ್ರತಿಯೊಬ್ಬರ ಪರವಾಗಿ 2 ಕಿಲೋ 600 ಗ್ರಾಂ ಆಯಾ ಪ್ರದೇಶದ ಆಹಾರ  ಧಾನ್ಯಗಳನ್ನು ನೀಡುವ ಮೂಲಕ ವ್ರತಾಚರಣೆಯ ಸಂಪೂರ್ಣ ಪ್ರತಿಫಲ ಪಡೆದು ಆತ್ಮಸಂತೃಪ್ತಿ ಅನುಭವಿಸುವ ನಿಮಿಷಗಳನ್ನು ವರ್ಣಿಸಲಸಾಧ್ಯ.*

*ಸೂರ್ಯೋದಯದ ಬಳಿಕ ಅಲ್ಪ ಸಮಯ ಕಳೆದು ಆರಂಭವಾಗುವ ಈದುಲ್ ಫಿತ್ರ್ ನಮಾಝ್ ನಿರ್ವಹಿಸಿದ ಬಳಿಕ ಮಸೀದಿ, ಈದ್ಗಾಗಳಿಗೆ ತೆರಳಿದವರು ಪರಸ್ಪರ ಈದುಲ್ ಫಿತ್ರ್ ಶುಭಾಶಯಗಳನ್ನು ವಿನಿಮಯ ಮಾಡುತ್ತಾ ಹಬ್ಬದ ಆನಂದವನ್ನು ಅನುಭವಿಸುವ ನೋಟ ನಿಜಕ್ಕೂ ಕಣ್ಣಿಗೊಂದು ಹಬ್ಬ!*

*ಈದುಲ್ ಫಿತ್ರ್ ನಮಾಝ್ ಬಳಿಕ ಪ್ರತಿಯೊಬ್ಬರೂ ಮನೆಮನೆಗಳಿಗೆ ತೆರಳಿ ಹಬ್ಬದ ತಿಂಡಿ ತಿನಿಸುಗಳು, ಭೂರಿ ಭೋಜನವನ್ನು ಸವಿದು  ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವುದು ಎಲ್ಲೆಡೆ ನಡೆದು ಬರುತ್ತಿರುವ ಒಂದು ಉತ್ತಮ ಸಂಪ್ರದಾಯವಾಗಿದೆ.*

*ಯಾವುದಾದರೂ ಕಾರಣ ಗಳಿಂದಾಗಿ ಪರಸ್ಪರ ಕೋಪಿಸಿಕೊಂಡವರು ಕೂಡ ಈದುಲ್ ಫಿತ್ರ್ ಹಬ್ಬದಂದು ಎಲ್ಲವನ್ನೂ ಮರೆತು ಸಹೋದರತೆ ಮೆರೆಯುತ್ತಾರೆ.*
*ಆದರೆ ಈ ಬಗ್ಗೆ ಅಸಡ್ಡೆ ತೋರಿಸಿ ಹಿಂದಿನ ಅದೇ ವೈರತ್ವದಲ್ಲಿ ಮುಂದುವರಿಯುವ ಭಾಗ್ಯಹೀನರು ಕೂಡ ನಮ್ಮ ನಡುವೆಯಿದ್ದಾರೆನ್ನಲು ದುಃಖ ವಾಗುತ್ತಿದೆ.*

*ಇತರ ಸಮುದಾಯ ಬಾಂಧವರನ್ನು ಕೂಡ ಹಬ್ಬದ ಸಂದರ್ಭದಲ್ಲಿ ಮನೆಗೆ ಕರೆದು ಸತ್ಕರಿಸುವುದು ನಮ್ಮ ನಡುವೆ ಕಾಣುವ ಉತ್ತಮ ಸಂಪ್ರದಾಯವಾಗಿದೆ.*
*ಇತರ ಜನಸಮುದಾಯದವರು ಅನ್ಯರಲ್ಲ,ಮಾನವರು ಸಹೋದರರು ಎಂಬ ವಿಶ್ವ ಭ್ರಾತೃತ್ವ ಭಾವನೆಗಳನ್ನು ತೋರ್ಪಡಿಸುವ ಮೂಲಕ ಮುಸ್ಲಿಂ ಸಮುದಾಯ ಮಾನವ ಸೌಹಾರ್ದತೆಯ ಮಹೋನ್ನತ ಸಂದೇಶವನ್ನು ಸಾರಿ ,ಇಸ್ಲಾಂ ಧರ್ಮದ ಶಾಂತಿ, ಸೌಹಾರ್ದತೆಯ ಬೋಧನೆಗಳನ್ನು ಈ ವೇಳೆ ಮನುಕುಲಕ್ಕೆ ನೆನಪಿಸಲಾಗುತ್ತಿದೆ.*

*ಹಬ್ಬದ ಸಂಭ್ರಮದ ನಡುವೆ ವಿವಿಧ ಕಡೆಗೆ ಅನಗತ್ಯ ಸುತ್ತಾಟ ಇಂದಿನ ಒಂದು ಸರ್ವೇಸಾಮಾನ್ಯ ದೃಶ್ಯ.*
*ಯುವಕರು,ಬಾಲಕರು ಹೀಗೆ ಎಲ್ಲರೂ ಧಾರ್ಮಿಕ ಚೌಕಟ್ಟು ಮೀರಿ ಸುತ್ತಾಟ ನಡೆಸುವ ಮೂಲಕ ಹಬ್ಬದ ಪಾವಿತ್ರ್ಯತೆಗೆ ಧಕ್ಕೆ ತರಲೆತ್ನಿಸುವುದು ದೊಡ್ಡ ದುರಂತವೆನ್ನದೆ ವಿಧಿಯಿಲ್ಲ.*

*ಈದುಲ್ ಫಿತ್ರ್ ಆಗಲಿ ಇನ್ನಿತರ ಯಾವುದೇ ಹಬ್ಬಗಳಾದರೂ ಇಸ್ಲಾಂ ಧರ್ಮದ ಚೌಕಟ್ಟು ಮೀರಿ ಸಂಭ್ರಮ ಪಡೆಯುವಾಗ ಅದಕ್ಕೆ ಯಾವುದೇ ಪ್ರತಿಫಲ ವಿರುವುದಿಲ್ಲ.ಅದು ಅಲ್ಲಾಹುವಿನ ಕೋಪಕ್ಕೆ ಕಾರಣವಾಗುತ್ತದೆ.*
*ಅಲ್ಲಾಹು ಇಷ್ಟಪಡುವ ರೀತಿಯಲ್ಲಿ ದರ್ಗಾ ಝಿಯಾರತ್,ಕುಟುಂಬಿಕರ ಖಬ್ರ್ ಸಂದರ್ಶನ ಮೂಲಕ ಉತ್ತಮ ಕಾರ್ಯಗಳನ್ನು ಮಾಡುವ ಬದಲು, ತಲೆಗೆ ಹಸಿರು ರುಮಾಲುಗಳನ್ನು ಸುತ್ತಿ ಬೈಕ್,ಕಾರುಗಳಲ್ಲಿ ವಿಕೃತವಾಗಿ ವರ್ತಿಸುತ್ತಾ ಸಾಗುವ ಕೆಲವು ದಾರಿತಪ್ಪಿದ ಯುವಕರ ಗುಂಪುಗಳನ್ನು ಎಲ್ಲೆಡೆಗಳಲ್ಲೂ ಕಾಣಬಹುದು.*
*ನಿಜವಾಗಿ ಇದು ಇಸ್ಲಾಂ ಧರ್ಮದೊಂದಿಗೆ ತೋರುವ ಧಿಕ್ಕಾರವಾಗಿದೆ.*
*ಈ ಕೆಟ್ಟ ಸಂಪ್ರದಾಯಕ್ಕೆ ಇನ್ನಾದರೂ ಕಡಿವಾಣ ಹಾಕಿ,ಇಸ್ಲಾಮೀ ಹಬ್ಬಗಳ ಮಹತ್ವವನ್ನು ಎತ್ತಿ ತೋರಿಸಲು ಪ್ರತಿಯೊಬ್ಬರೂ ಮುಂದಾಗಬೇಕು.*

*ಸತ್ಯವಿಶ್ವಾಸಿಗಳು ನನಗಾಗಿ ಸಂತೋಷ ಪ್ರಕಟಮಾಡಿ ನನ್ನ  ವಿನೀತ ದಾಸರಾಗಿ ಪರಲೋಕ ಯಶಸ್ಸು ಪಡೆಯಬೇಕೆಂದು, ಅಲ್ಲಾಹು ನಮಗೆ ಕೊಡುಗೆಯಾಗಿ ನೀಡಿದ ಸಂಭ್ರಮವನ್ನು ,ಅನಿಸ್ಲಾಮಿಕ ಮಾಪಿಳೆಪಾಟ್, ಗಾನ ಮೇಳ ಮೊದಲಾದ ಮ್ಯೂಸಿಕ್ ಸಹಿತವಿರುವ ಅನಿಷ್ಟ ಸಂಪ್ರದಾಯಗಳ ಮೂಲಕ ಅಂದಗೆಡಿಸುವುದು ನೈಜ ಮುಸ್ಲಿಮರಿಗೆ ಭೂಷಣವಲ್ಲ.*
*ಅಲ್ಲಾಹು ಹಾಗೂ ಅಲ್ಲಾಹುವಿನ ಅಂತಿಮ ಪ್ರವಾದಿ ಲೋಕಾನುಗ್ರಹಿ ಮುಹಮ್ಮದ್ ಮುಸ್ತಫಾ ಸ್ವಲ್ಲಾಹು ಅಲೈಹಿವ ಸಲ್ಲಂ ತಂಙಳ್ ಇಷ್ಪಡುವ ರೀತಿಯಲ್ಲಿ ಇಸ್ಲಾಂ ಧರ್ಮದ ಚೌಕಟ್ಟನ್ನು ಮೀರದೆ ಹಬ್ಬಾಚರಣೆ ಮಾಡುವ ಮೂಲಕ ನಾವೆಲ್ಲರೂ ಈದುಲ್ ಫಿತ್ರ್ ಹಬ್ಬದ ಪಾವಿತ್ರ್ಯತೆಯನ್ನು ಕಾಪಾಡೋಣ.*

✍🏻 *ಕೆ.ಎ.ಅಬ್ದುಲ್ ಅಝೀಝ್ ಝುಹ್ ರಿ ಪುಣಚ*

🌍🌍🌍🌍🌍🌍🌍🌍🌍🌍🌍

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...