ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಬಂಧವೇ ಸ್ನೇಹ ಬಂಧ
_✍🏻 ಜಹಫರ್ ಸಾಧಿಕ್ ಕಟ್ಟದಪಡ್ಪು_
_ಸ್ನೇಹ ಎಂಬುವುದು ಎಲ್ಲಾ ಅರ್ಥಗಳಿಗೂ ಮೀರಿದಂತಹ ಬಂಧ, ನಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಹುಟ್ಟಬಹುದಾದ ಅಥವಾ ನಮ್ಮ ಅಭಿರುಚಿಯಿಂದ ನಾವೇ ಸೃಷ್ಟಿಸಿಕೊಳ್ಳಬಹುದಾದ ಒಂದು ಬಂಧವೇ ಸ್ನೇಹ ಎಂಬುವುದು. ಜಗತ್ತಿನಲ್ಲಿ ಜೀವಿಸುವಂತಹ ಪ್ರತಿಯೊಬ್ಬ ವ್ಯಕ್ತಿಯು ಸ್ನೇಹ ಸಂಬಂಧದ ಮೂಲಕ ಗೆಳೆತನದ ಸಿಹಿಯನ್ನು ಸವಿಯುತ್ತಾನೆ. ಜಗತ್ತಿನಲ್ಲಿ ಸ್ನೇಹವಿಲ್ಲದ ಯಾವುದೇ ಸಂಬಂಧವೇ ಇಲ್ಲ, ಬದುಕಿನ ಯಾವುದೇ ಸಂಬಂಧವಿರಲಿ ಒಂದು ಜೀವದ ಮಿಡಿತ ಇನ್ನೊಂದು ಜೀವದ ಮಿಡಿತಕ್ಕೆ ತಾಗಿದರೆ ಅಲ್ಲಿ ಸ್ನೇಹ ಎಂಬ ಬಂಧ ಉಂಟಾಗುತ್ತದೆ._
_ಜಗತ್ತಿನ ಪ್ರತಿಯೊಬ್ಬ ಮನುಷ್ಯರು ಸ್ನೇಹದ ಕಡಲಿನ ಪಯಣಿಗರು ಇದ್ದಂತೆ, ಯಾವುದಾದರೊಂದು ವಿಷಯದಲ್ಲಿ ಸ್ನೇಹದ ರುಚಿಯನ್ನು ಅನುಭವಿಸುವರು, ಸ್ನೇಹಕ್ಕೆ ಯಾವುದೇ ವಯೋಮಿತಿಯಲ್ಲ ಸಣ್ಣ ಪುಟ್ಟ ಮಕ್ಕಳಿಂದ ಹಿಡಿದು ವೃದ್ಧರಾಗಿರುವ ಮುದುಕರು ಕೂಡ ಸ್ನೇಹಿತರಾಗಿರುತ್ತಾರೆ. ತಮ್ಮ ತಮ್ಮ ವಯೋಮಾನಕ್ಕೆ ತಕ್ಕಂತೆ ಸ್ನೇಹವನ್ನು ಸವಿಯುತ್ತಾರೆ. ಸಣ್ಣ ಪುಟ್ಟ ಮಕ್ಕಳು ತಮ್ಮ ಬಳಿಯಿರುವ ಆಟಿಕೆ, ಚಾಕಲೇಟ್, ತಿಂಡಿ ತಿನಿಸುಗಳನ್ನು ಹಂಚಿಕೊಳ್ಳುತ್ತಿದ್ದರೆ.. ಯುವಜನರು ಸುತ್ತಾಟ, ಪಾರ್ಟಿ ಮೊದಲಾದವುಗಳಲ್ಲಿ ತಮ್ಮ ಸ್ನೇಹವನ್ನು ತೋರ್ಪಡಿಸಿಕೊಳ್ಳುತ್ತಾರೆ. ಅದೇ ರೀತಿ ವೃದ್ಧರು ವಾಕಿಂಗ್ ವೇಳೆಯಲ್ಲಿ ಗೆಳೆಯರ ಜೊತೆ ಕಾಲ ಕಳೆಯುತ್ತಾ ಸ್ನೇಹದ ಸುಖಾನುಭವವನ್ನು ಅನುಭವಿಸುತ್ತಾರೆ._
_ಸ್ವಾಮಿ ವಿವೇಕಾನಂದರು ಹೇಳಿದಂತೆ, "ಒಬ್ಬ ಉತ್ತಮ ಗೆಳೆಯ ಒಂದು ಗ್ರಂಥಾಲಯವಿದ್ದಂತೆ" ಒಬ್ಬ ಉತ್ತಮ ಗೆಳೆಯ ನಮ್ಮ ಇಡೀ ಜೀವನವನ್ನು ಬದಲಿಸಬಲ್ಲ, ಅಥವಾ ಸುಂದರವಾಗಿಸಬಲ್ಲ. ಸ್ನೇಹ ಸಂಬಂಧ ಮೂಲಕ ಗೆಳೆತನವಿರುವ ಗೆಳೆಯರಿಗೆ ಯಾವುದೇ ರಕ್ತ ಸಂಬಂಧ ಬೇಕಾಗಿಲ್ಲ. ಗೆಳೆಯರಿಂದ ಅಥವಾ ಗೆಳೆತನ ಬೆಳೆಸುವುದರಿಂದ ನಮ್ಮ ಜೀವನದುದ್ದಕ್ಕೂ ಹಲವು ರೀತಿಯ ಉಪಯೋಗಗಳು ಇರುತ್ತವೆ, ಉದಾಹರಣೆಗೆ ನಾವು ಸಂಕಷ್ಟಗಳನ್ನು ಎದುರಿಸುತ್ತಿರುವಾಗ ನಮಗೆ ನಮ್ಮ ಮನದಲ್ಲಿ ಮೊದಲಿಗನಾಗಿ ಧಾವಿಸಿ ಬರುವುದು ನಾವು ಇಷ್ಟ ಪಟ್ಟ ನಮ್ಮ ಗೆಳೆಯರಾಗಿದ್ದಾರೆ. ನಮ್ಮ ಜೀವನದಲ್ಲಿ ಏನಾದರು ಸಮಸ್ಯೆಗಳಿದ್ದರೆ ಅದನ್ನು ಬಗೆ ಹರಿಸಲು ಸಹಾಯ ಮಾಡುವವರು ಗೆಳೆಯರು. ನಾವು ಯಾವುದಾದರೊಂದು ಕೆಲಸ ಕಾರ್ಯಕ್ಕೆ ಕೈ ಹಾಕಿದಾಗ ನಮಗೆ ಧೈರ್ಯ, ಸ್ಪೂರ್ತಿ ನೀಡಿ ಪ್ರೋತ್ಸಾಹಿಸುವವರು ಸ್ನೇಹಿತರಾಗಿದ್ದಾರೆ. ಯಾರೊಂದಿಗೂ ಹಂಚಿಕೊಳ್ಳಲಾಗದ ಕೆಲವೊಂದು ವಿಚಾರಗಳನ್ನು ಸ್ನೇಹಿತರ ಜೊತೆ ಹಂಚಿಕೊಳ್ಳಬಹುದು. ಯಾರ ಜೊತೆ ಬೆರೆಯುವಾಗ ನಾವು ನಮ್ಮತ್ತನವನ್ನು ಕಳೆದುಕೊಳ್ಳುವುದಿಲ್ಲವೋ ಅವರಾಗಿದ್ದಾರೆ ನಿಜವಾದ ಸ್ನೇಹಿತರು._
_ಕೆಲವು ವ್ಯಕ್ತಿಗಳಿಗೆ ಬೆರಳೆಣಿಕೆಯಷ್ಟು ಗೆಳೆಯರಿರುತ್ತಾರೆ. ಇನ್ನೂ ಕೆಲವರಿಗೆ ಅಪಾರ ಸಂಖ್ಯೆಯ ಗೆಳೆಯರಿರುತ್ತಾರೆ. "ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ" ಎಂಬ ಮಾತಿನಂತೆ ನಮ್ಮ ಗೆಳೆತನ ಆದಷ್ಟು ಉತ್ತಮ ವ್ಯಕ್ತಿಗಳ ಜೊತೆ ಬೆಳೆಸಬೇಕು. ಕೆಟ್ಟ ವ್ಯಕ್ತಿಗಳ ಜೊತೆ ಗೆಳೆತನ ಬೆಳೆಸಿದರೆ ನಾವು ಕೂಡ ಅವರಂತೆಯೇ ಕೆಟ್ಟವರಾಗಬಹುದು. ಶತ್ರುಗಳನ್ನು ಹುಟ್ಟಿಸಲು ನಾವು ಕಷ್ಟಪಡಬೇಕಾಗಿಲ್ಲ. ಆದರೆ, ಗೆಳೆತನ ಹಾಗಲ್ಲ ಇತರರ ಜೊತೆ ಗೆಳೆತನ ಬೆಳೆಸಲು ಕಷ್ಟ ಪಡಬೇಕಾಗುತ್ತದೆ._
_ಸ್ನೇಹದಲ್ಲಿ ನಂಬಿಕೆ, ಪ್ರಾಮಾಣಿಕತೆ ಮುಖ್ಯವಾಗಿದೆ. ನಾವು ಎಂದಿಗೂ ತೋರ್ಪಡಿಕೆಯ ಸ್ನೇಹವನ್ನು ಬೆಳೆಸಬಾರದು. ಗೆಳೆಯರು ತಪ್ಪು ಮಾಡಿದಾಗ ಅವರನ್ನು ದ್ವೇಷಿಸದೆ ಪ್ರೀತಿಯಿಂದ ಬುದ್ಧಿ ಮಾತು ಹೇಳಬೇಕು. ಅವರ ಜೊತೆ ಉತ್ತಮ ಬಾಂಧವ್ಯ ಹೊಂದಬೇಕು. ಆಗ ಮಾತ್ರ ಗೆಳೆತನ ಉತ್ತಮವಾಗಿರಲು ಸಾಧ್ಯ!_
*_ನನ್ನ ಎಲ್ಲಾ ಪ್ರೀತಿಯ ಗೆಳೆಯರಿಗೂ ಸ್ನೇಹಿತರ ದಿನಾಚರಣೆಯ ಶುಭಾಶಯಗಳು_*
Comments