ಸ್ವಾತಂತ್ರ್ಯ ಸಮರದ ವಿಕ್ರಮ ನಾಯಕ
---------------------------------------
📝 *ಶರೀಫ್ ಎ.ಪಿ. ಹೊಸತೋಟ*
🍃🍃🍃🍃🍃🍃🍃🍃🍃🍃🍃
*ಬ್ರಿಟಿಷರಿಗೆ ತಮ್ಮ ವಸಾಹತು ವಿಸ್ತರಣೆಗೆ ಮಹಾತಡೆಗೋಡೆಯಾಗಿ, ಸಿಂಹ ಸ್ವಪ್ನವಾಗಿ ಕಾಡುತ್ತಿದ್ದ ಅಹಿಂಸಾತ್ಮಕ ಅಂದೋಲನದ ರೂವಾರಿ ಖಾನ್ ಅಬ್ದುಲ್ ಗಫಾರ್ ಖಾನ್*.
ಗಡಿನಾಡ ಗಾಂಧಿ ಎಂದು ಖ್ಯಾತರಾದ ಗಫರ್ ಖಾನ್ ಒಬ್ಬ ನಿಷ್ಠಾವಂತ ಮುಸ್ಲಿಂ. ಪ್ರವಾದಿ ವಚನಗಳನ್ನು ಎದೆಯಾಳದಲ್ಲಿರಿಸಿ ಅಹಿಂಸೆಯು ಪ್ರವಾದಿಗಳ ವಜ್ರಾಯುಧವೆಂದು ಸಾರಿ ಅಕ್ರಮಪ್ರಿಯರಾದ ಪಠಾಣರನ್ನು ಅಹಿಂಸಾ ಪ್ರಿಯರನ್ನಾಗಿ ಮಾರ್ಪಡಿಸಿದರು. ೨೦ರ ಹರೆಯದಲ್ಲೇ ತನ್ನ ಸಮುದಾಯದ ಸ್ತ್ರೀ-ಪುರುಷರಿಗಾಗಿ ಶಾಲೆಗಳನ್ನು ಕಟ್ಟುವ ಮೂಲಕ ಸಮಾಜದ ಉನ್ನತಿಗಾಗಿ ಅವರ ಪರಿಶ್ರಮ ಪ್ರಾರಂಭವಾಗಿತ್ತು. ಅಲ್ಲಿಂದ ಪ್ರಾರಂಭವಾದ ಅವರ ಸಮಾಜ ಸೇವಾ ಧೋರಣೆ ಮುಂದೆ ಬ್ರಿಟಿಷ್ ಸಾಮ್ರಾಜ್ಯಶಾಹಿಯಿಂದ ಭಾರತವನ್ನು ಮುಕ್ತಗೊಳಸಬೇಕೆಂಬ ಅದಮ್ಯ ಆಕಾಂಕ್ಷೆಯಾಗಿ ಬೆಳೆಯಿತು.ತನ್ನ ೧,೦೦,000 ಖುದಾಯಿ ಕಿದ್ಮತ್ಗಾರ್‌ಗಳನ್ನು (ದೇವರ ಸೇವಕರು) ಕಟ್ಟಿಕೊಂಡು ಬ್ರಿಟಿಷರ ವಿರುದ್ಧ ಶಾಂತಿಯುತ ಚಳುವಳಿಗೆ ಧುಮುಕುವುದರೊಂದಿಗೆ ಅವರ ಆಂದೋಲನ ಪ್ರಾರಂಭವಾಗಿಯಿತು.ಆ ಗಡಿನಾಡಲ್ಲಿ ಚಿತ್ರಹಿಂಸೆ, ಹೊಡೆತ, ವೇದನೆಗಳ ಮೂಲಕವೇ ಈ ಮಹಾನುಭಾವ, ಅವನ ಸಿದ್ಧಾಂತ, ಅವನ ಬೆನ್ನಿಗಿದ್ದ ಲಕ್ಷಾಂತರ ಬೆಂಬಲಿಗರು ಸೇರಿ ಕಟ್ಟಿದ್ದ ಅಹಿಸಾತ್ಮಕ ಆಂದೋಲನವು ಇತ್ತ ಭರತಖಂಡದ ಇನ್ನೊಂದು ಮೂಲೆಯಲ್ಲಿ ಮೋಹನದಾಸ ಕರಮಚಂದ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ಅಂತಹುದೇ ಚಳವಳಿಯೊಂದರ ಪ್ರತಿಬಂಬವಾಗಿತ್ತು. ಅಹಿಂಸಾ ಪಥವು ಬಾದ್‌ಶಹ ಖಾನ್‌ಗೆ ಸಹಜ ಆಯ್ಕೆಯಾಗಿತ್ತು. ನನ್ನಂತಹ ಒಬ್ಬ ಮುಸ್ಲಿಂ ಅಹಿಂಸೆಯ ತತ್ವವನ್ನು ಅಪ್ಪಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ ಎಂದಿದ್ದರು ಖಾನ್; ಏಕೆಂದರೆ ಇದು ೧೩೦೦ ವರ್ಷಗಳಷ್ಟು ಹಿಂದೆಯೇ ಪ್ರವಾದಿಗಳೇ ಹಾಕಿಕೊಟ್ಟ ಪಥ ಎಂದವರು ನಂಬಿದ್ದರು.ಖಾನ್ ಅವರು ಅಖಂಡ, ಜಾತ್ಯಾತೀತ ಭಾರತದ ಕನಸು ಕಂಡಿದ್ದರು; ದೇಶ ವಿಭಜನೆಯ ವಿರುದ್ಧ ವ್ಯಾಪಕವಾಗಿ ಧ್ವನಿಯೆತ್ತಿದ್ದರು. ತನ್ನದೇ ಕಾಂಗ್ರೆಸ್ ಪಕ್ಷ ದೇಶ ವಿಭಜನೆಯ ಪ್ರಸ್ತಾವವನ್ನು ಅಂಗೀಕರಿಸಿದಾಗ ಅವರಿಗೆ ದ್ರೋಹಕ್ಕೊಳಗಾದ ಭಾವವುಂಟಾಗಿತ್ತು. ಆದರೂ ಗಾಂಧಿಯವರೊಂದಿಗೆ ಅವರ ಸಖ್ಯ ಮುಂದುವರಿದಿತ್ತು. ಪಾಕಿಸ್ತಾನದ ಹೊಸ ಆಡಳಿತಾಂಗವು ಇವರ ಆಲೋಚನಾ ದೃಷ್ಟಿಯಿಂದ ಭೀತಗೊಂಡು ಇವರ ಚಳವಳಿಯನ್ನು ನಿರ್ದಯವಾಗಿ ದಮನಿಸಿತು. ರಾಷ್ಟ್ರೀಯ ನಾಯಕನೆನಿಸಿಕೊಳ್ಳಬೇಕಿದ್ದ ಖಾನರು ತಮ್ಮ ಬದುಕಿನ ಉಳಿದ ಬಹುತೇಕ ವರ್ಷಗಳನ್ನು ಗೃಹಬಂಧನದಲ್ಲೇ ಕಳೆಯಬೇಕಾಯಿತು. ಯಾರನ್ನು ನಂಬಿದರೋ ಅವರಿಂದಲೇ ತ್ಯಜಿಸಲ್ಪಟ್ಟು, ಯಾರಿಗೆ ದುಃಸ್ವಪ್ನವಾಗಿ ಕಾಡಿದರೋ ಅವರಿಂದ ಚಿತ್ರಹಿಂಸೆಗೊಳಪಟ್ಟು ಕೊನೆಗೆ ಜಲಾಲಬಾದ್‌ನ ಸಮಾಧಿಯಲ್ಲಿ ಚಿರನಿದ್ರೆಗೆ ಜಾರಿದರು.1919 ರ ರೌಲತ್ ಕಾಯ್ದೆಯ ವಿರುದ್ದ ನಡೆದ ಆಂದೋಲನದೊಂದಿಗೆ ಆರಂಭವಾದ ಮಹಾತ್ಮ ಗಾಂಧಿಯರೊಂದಿಗಿನ ನಂಟು ಸುದೀರ್ಘ ದಶಕಗಳವರೆಗೂ ಮುಂದುವರಿಯಿತು. ಖಿಲಾಫತ್ ಚಳುವಳಿಯಲ್ಲಿ ಅಂಗತ್ವ ಸ್ವೀಕರಿಸಿ ತಮ್ಮ ನಿಸ್ವಾರ್ಥ ಸೇವೆಯನ್ನು ದೇಶಕ್ಕೆ ಕರುಣಿಸಿ ಇತಿಹಾಸದ ಪುಟಗಳಲ್ಲಿ ಚಿರಸ್ಮರಣೀಯರಾದರು.
1969ರ ಜವಹರಲಾಲ್ ನೆಹರು ಪ್ರಶಸ್ತಿ 1987 ರಲ್ಲಿ ಭಾರತ ರತ್ನ ಪಡೆಯುವುದರೊಂದಿಗೆ ಭಾರತ ರತ್ನ ಪಡೆದ ಮೊದಲ ವಿದೇಶಿಯೆಂಬ ಖ್ಯಾತಿಗೂ ಖಾನರು ಭಾಜನರಾಗುತ್ತಾರೆ. *ಖೇದಕರವೆನ್ನಲಿ..ಇಂತಹ ಸಾವಿರಾರು ಮುಸ್ಲಿಂ ಸ್ವಾತಂತ್ರ್ಯ ಹೋರಾಟಗಾರರು ಪರಂಗಿಗಳ ವಿರುದ್ದದ ಕಾಳಗಗಳಲ್ಲಿ ಮಡಿದು ಮಣ್ಣು ಸೇರಿದರೆ ಇತಿಹಾಸ ಪುಟಗಳಿಂದ ಅವರ ನಾಮಗಳು ಮರೆಯಾಗಿರುವುದು ಜಾತ್ಯಾತೀತ ಭಾರತಕ್ಕಾದ ದೊಡ್ಡ ಅನ್ಯಾಯವಾಗಿದೆ.*
📒📒📒📒📒📒
*Team Writers*
*ANVARUL HUDA KODAGU*
Comments