Skip to main content

ಚಿನ್ನ ಮತ್ತು ಪ್ರಾಣ ಎರಡನ್ನೂ ಕಳಕೊಂಡ ನತದೃಷ್ಟರು ಇವರು ✍ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ

ಚಿನ್ನ ಮತ್ತು ಪ್ರಾಣ ಎರಡನ್ನೂ ಕಳಕೊಂಡ ನತದೃಷ್ಟರು ಇವರು
✍ಎಂ.ಎ.ಇಸ್ಮಾಈಲ್ ನಈಮಿ ಮಂಗಳಪೇಟೆ


ಒಮ್ಮೆ ಪ್ರವಾದಿ ಈಸಾ (ಅ) ರವರಲ್ಲಿ
ಓರ್ವ ವ್ಯಕ್ತಿ  "ನಾನು ನಿಮ್ಮ  ಸಹಚಾರಿಯಾಗಿ  ಜೊತೆಯಲ್ಲಿರುತ್ತೇನೆ "ಎಂದನು. ಈಸಾ (ಅ) ರವರು ಒಪ್ಪಿದರು.
ಹಾಗೆಯೇ ಅವರಿಬ್ಬರು ಸಾಗುತ್ತಾ ಒಂದು ನದಿಯ ದಡಕ್ಕೆ ತಲುಪಿದರು.ಇಬ್ಬರೂ ಅಲ್ಲಿ ಕುಳಿತು ಬುತ್ತಿಯಲ್ಲಿದ್ದ ರೊಟ್ಟಿಯನ್ನು ತಿಂದರು.ಅದರಲ್ಲಿ ಮೂರು ರೊಟ್ಟಿಗಳಿದ್ದವು.
 ಇಬ್ಬರು ಒಂದೊಂದು ರೊಟ್ಟಿಗಳನ್ನು ತಿಂದರು. ಒಂದು ರೊಟ್ಟಿ ಬಾಕಿ ಉಳಿಯಿತು.
 ಪ್ರವಾದಿ ಈಸಾ (ಅ) ರವರು ಅಲ್ಲಿಂದ ಎದ್ದು ಹತ್ತಿರದ  ನದಿಯ ನೀರು  ಕುಡಿಯಲು ಹೋದರು. ಮರಳಿ ಬಂದು ನೋಡಬೇಕಾದರೆ ಆ ರೊಟ್ಟಿಯು ಕಾಣೆಯಾಗಿತ್ತು.
  ಈಸಾ (ಅ) ರವರು ಆ ವ್ಯಕ್ತಿಯೊಂದಿಗೆ  ಕೇಳಿದರು,
" ಇಲ್ಲಿದ್ದ ರೊಟ್ಟಿ ಯಾರು  ತೆಗೆದರು?"
"ನನಗೆ ಗೊತ್ತಿಲ್ಲ" ಎಂದನು ಆತ.
 ಈಸಾ(ಅ) ಮುಂದೆ ಸಾಗಿದರು.  ಜೊತೆಯಲ್ಲಿ  ಅವನೂ ಇದ್ದನು. ಆಗ ಅವರು ಒಂದು ಜಿಂಕೆಯನ್ನು ಕಂಡರು.ಅದಕ್ಕೆ ಎರಡು ಮರಿಗಳಿದ್ದವು.  ಈಸಾ (ಅ) ರವರು ಒಂದನ್ನು ತನ್ನೆಡೆಗೆ ಕರೆದರು. ಜಿಂಕೆ ಮರಿ ಅವರ ಹತ್ತಿರ ಬಂದಾಗ ಅದನ್ನು ದ್ಸಬಹ್ ಮಾಡಿ, ಬೆಂಕಿಯಲ್ಲಿ ಹುರಿದು ಇಬ್ಬರೂ ತಿಂದರು.
ನಂತರ ಈಸಾ (ಅ) ರವರು ತಿಂದು ಜಗಿದು ಹಾಕಿದ ಎಲುಬಿನೊಂದಿಗೆ ಅಲ್ಲಾಹನ ಸಮ್ಮತಿಯ ಮೇರೆಗೆ ಎದ್ದೇಳು" ಎಂದು ಹೇಳಿದರು.ಜಿಂಕೆ ಮರಿ ತಟ್ಟನೆ ಎದ್ದು ನಿಂತು ಹೊರಟು ಹೋಯಿತು.ನಂತರ ಈಸಾ (ಅ) ರವರು ಕೇಳಿದರು, "ಈ ದೃಷ್ಟಾಂತವನ್ನು ನಿನಗೆ ತೋರಿಸಿಕೊಟ್ಟ ಅಲ್ಲಾಹನನ್ನು ಮುಂದಿಟ್ಟು ಕೇಳುತ್ತಿದ್ದೇನೆ, ಆ ರೊಟ್ಟಿಯನ್ನು ತಿಂದವರು ಯಾರು?"
 ಆತ " ನನಗೆ ಗೊತ್ತಿಲ್ಲ " ಎಂದು ಹೇಳಿದನು.
  ನಂತರ ಅವರಿಬ್ಬರು ಸಾಗುತ್ತಾ ಒಂದು ಹೊಳೆಯ ಬಳಿಗೆ ತಲುಪಿದರು. ಪ್ರವಾದಿ ಈಸಾ (ಅ) ರವರು ಅವನ ಕೈ ಹಿಡಿದು ನೀರಿನ ಮೇಲೆ ನಡೆದುಕೊಂಡು ಹೋದರು. ಹೊಳೆ ದಾಟಿದ ಬಳಿಕ ಈಸಾ (ಅ) ರವರು ಕೇಳಿದರು, " ಈ ದೃಷ್ಟಾಂತವನ್ನು ತೋರಿಸಿಕೊಟ್ಟ ಅಲ್ಲಾಹನನ್ನು ಮುಂದಿಟ್ಟು ನಾನು ಕೇಳುತ್ತಿದ್ದೇನೆ.  ಆ ರೊಟ್ಟಿಯನ್ನು ತಿಂದವರು ಯಾರು? " ಆಗಲೂ ಆತ, "ನನಗೆ ಗೊತ್ತಿಲ್ಲ" ಎಂದೇ ಉತ್ತರಿಸಿದ.
ನಂತರ ಅವರಿಬ್ಬರು ಒಂದು ಮರುಭೂಮಿಗೆ ತಲುಪಿದರು. ಅಲ್ಲಿ ಒಂದು ಸ್ಥಳದಲ್ಲಿ ಇಬ್ಬರೂ ಕುಳಿತುಕೊಂಡರು. ಪ್ರವಾದಿ ಈಸಾ (ಅ) ರವರು ಅಲ್ಲಿದ್ದ ಮರಳನ್ನು ರಾಶಿ ಮಾಡಿ, ಅಲ್ಲಾಹನ ಸಮ್ಮತಿಯ ಮೇರೆಗೆ ಇದು ಚಿನ್ನವಾಗಲಿ ಎಂದು ಹೇಳಿದರು.ಆ ಕ್ಷಣವೇ ಆ ಮರಳ ರಾಶಿ ಚಿನ್ನವಾಯಿತು. ಪ್ರವಾದಿ ಈಸಾ(ಅ) ರವರು ಆ ಚಿನ್ನದ ರಾಶಿಯನ್ನು ಮೂರಾಗಿ ವಿಂಗಡಿಸಿದರು.
  ನಂತರ ಹೇಳಿದರು, "ಈ ಮೂರು ರಾಶಿ ಚಿನ್ನಗಳಲ್ಲಿ ಒಂದು ನನಗೆ. ಮತ್ತೊಂದು ನಿನಗೆ. ಮೂರನೆಯದ್ದು ಆ ರೊಟ್ಟಿ ಕದ್ದವನಿಗೆ"
ಹಾಗೆ ಹೇಳಿದ್ದೇ ತಡ ಆತ,
" ಆ ರೊಟ್ಟಿ ಕದ್ದವನು ನಾನೇ" ಎಂದ.
  ಪ್ರವಾದಿ ಈಸಾ  (ರ) ಆ ಮೂರು ಚಿನ್ನದ ರಾಶಿಯನ್ನು ಅವನಿಗೆ ನೀಡುತ್ತಾ ಇದು ನಿನಗೇ ಇರಲಿ ಎಂದು ಹೇಳಿ ಅಲ್ಲಿಂದ ಹೊರಟು ಹೋದರು.ನಂತರ ಆ  ಮರುಭೂಮಿಗೆ ಇಬ್ಬರು ವ್ಯಕ್ತಿಗಳು ಬಂದು ತಲುಪುತ್ತಾರೆ.
ಅವನ ಬಳಿ ಇರುವ ಚಿನ್ನವನ್ನು ಕಂಡು  ಅವರಿಬ್ಬರು ಅವನನ್ನು ಕೊಲ್ಲಲು ಬಯಸುತ್ತಾರೆ.
ಆಗ ಅವನು ಹೇಳುತ್ತಾನೆ , "ಇದರಲ್ಲಿ ಒಂದೊಂದು ರಾಶಿಯನ್ನು ಪಡೆದು ನಾವು  ಮೂವರು ಸಮಾನವಾಗಿ ಹಂಚಿಕೊಳ್ಳೋಣ." ಅವರು ಒಪ್ಪಿಕೊಂಡರು.
  ನಂತರ ಅವರು ತಮ್ಮಲ್ಲಿ ಒಬ್ಬರನ್ನು ಊಟ ತರಲು ಪೇಟೆಗೆ ಕಳುಹಿಸಿದರು.ಪೇಟೆಗೆ ಬಂದಾತ ತನ್ನನ್ನೆ ಕೇಳಿಕೊಂಡ.
ನಾವು ಯಾಕೆ ಈ ಸಂಪತ್ತನ್ನು ಮೂರಾಗಿ ಹಂಚಬೇಕು?
ಆಹಾರದಲ್ಲಿ ವಿಷ ಬೆರೆಸಿ ಕೊಟ್ಟು ಅವರಿಬ್ಬರನ್ನು ಕೊಂದರೆ ಅಷ್ಟೂ ಸಂಪತ್ತನ್ನು ನನಗೆ ಪಡೆಯಬಹುದಲ್ಲವೇ?" ಆತ ಹಾಗೆ ಮಾಡಿದ ಕೂಡಾ.
ಇತ್ತ ಇವರಿಬ್ಬರು ," ನಾವು ಯಾಕೆ ಈ ಸಂಪತ್ತನ್ನು ಮೂರಾಗಿ ಹಂಚಬೇಕು.ಅವನು ಬಂದ ಕೂಡಲೇ ಅವನನ್ನು ಕೊಂದು ಬಿಡೋಣ. ನಂತರ ನಾವಿಬ್ಬರು ಇದನ್ನು ಸಮಾನವಾಗಿ ಹಂಚೋಣ" ಎಂದು ಹೇಳಿಕೊಂಡರು. ಅವನು ಪೇಟೆಯಿಂದ ಮರಳಿದಾಗ ಇಬ್ಬರೂ ಸೇರಿ ಅವನನ್ನು ಕೊಂದು ಬಿಟ್ಟರು.
ನಂತರ ಅವನು ತಂದ ವಿಷ ಬೆರೆಸಿದ ಆಹಾರ ಸೇವಿಸಿ ಅವರೂ ಪ್ರಾಣ ಕಳಕೊಂಡರು. ಆ ಮರುಭೂಮಿಯಲ್ಲಿ  ಅನಾಥವಾಗಿ ಉಳಿದ ಮೂರು ಚಿನ್ನದ ರಾಶಿಗಳ ಬಳಿ ಆ ಮೂರು ವ್ಯಕ್ತಿಗಳು ಶವವಾಗಿ ಬಿದ್ದುಕೊಂಡಿದ್ದರು.ಪ್ರವಾದಿ ಈಸಾ (ಅ) ರವರು ಆ ಚಿನ್ನದ ರಾಶಿಗಳ ಸನಿಹ ಸತ್ತು ಬಿದ್ದ ಆ ವ್ಯಕ್ತಿಗಳ ಬಳಿಯಿಂದ ಹಾದು ಬಂದರು. ಜೊತೆಗಿದ್ದ ಅನುಚರರೊಂದಿಗೆ ಹೇಳಿದರು," ಇಹಲೋಕವೆಂದರೆ ಇದುವೆ.ಆದ್ದರಿಂದ ಈ ಇಹಲೋಕದ ಬಗ್ಗೆ ಜಾಗರೂಕರಾಗಿರಿ"
ಈ ಸತ್ಯ ಕಥೆಯನ್ನು  ಮಹಾನ್ ದಾರ್ಶನಿಕ ಇಮಾಮ್ ಗಝಾಲಿ (ರ) ರವರು ತಮ್ಮ ಇಹ್ಯಾ ಉಲೂಮಿದ್ದೀನ್ ನಲ್ಲಿ ಉಲ್ಲೇಖಿಸಿದ್ದಾರೆ.


*ಪ್ರಸ್ತುತ ಸತ್ಯ ಕಥೆಯು ಕಳ್ಳತನ ಮಾಡಬಾರದು, ಸುಳ್ಳು ಹೇಳಬಾರದು,  ವಚನಭಂಗ ಮಾಡಬಾರದು, ವಂಚಿಸಬಾರದು, ಕೊಲೆ ಮಾಡಬಾರದು, ಅತಿಯಾದ ಐಹಿಕ ವ್ಯಾಮೋಹವನ್ನು ಹೊಂದಬಾರದು ಎಂಬ ಬಹುದೊಡ್ಡ ಪಾಠವನ್ನು ಸಾರುತ್ತದೆ.*

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...