Skip to main content

ಜೇನ್ನೊಣದ ರೋಮಾಂಚಕಾರಿ ಕತೆ


*ಜೇನ್ನೊಣದ ರೋಮಾಂಚಕಾರಿ ಕತೆ*

*ಸಂಘ ಬದುಕಿಗೆ ಶಿಸ್ತು ಕಲಿಸುವ ಜೇನ್ನೊಣ*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 55349919

  ▪ *ತನ್ನ ನಾಳಿನ* ಬದುಕು ಬಹಳ ಸಂತೋಷ ಮತ್ತು ನೆಮ್ಮದಿದಾಯಕವಾಗಿರಬೇಕೆಂಬ ಉದ್ದೇಶದಿಂದ ನಾಳೆಗೆ ಬೇಕಾಗಿ ಆಹಾರ ಶೇಖರಣೆ ಮಾಡಿಡುವ ಒಂದು ಅಸಾಮಾನ್ಯ ಜೀವಿಯಾಗಿದೆ ಜೇನ್ನೊಣ. 

   ▪ *ಪವಿತ್ರ* ಕುರ್‌ಆನಿನಲ್ಲಿ "ಅಲ್ ನಹ್‌ಲ್" ಎಂಬ ಅಧ್ಯಾಯವೇ ಈ ನೊಣದ ಹೆಸರಿನಲ್ಲಿದೆ. ಈ ಅಧ್ಯಾಯದಲ್ಲಿ *"ನಿನ್ನ ಯಜಮಾನ ಜೇನ್ನೊಣಗಳಿಗೆ ಪರ್ವತ ಪ್ರದೇಶಗಳಲ್ಲಿ, ಮರಗಳಲ್ಲಿ, ಅಂತೆಯೇ ಮನುಷ್ಯರು ನಿರ್ಮಿಸುವ ಬಿಡಾರಗಳಲ್ಲಿ ಗೂಡು ಕಟ್ಟಿ ನಂತರ ವಿವಿಧ ಫಲವಸ್ತುಗಳಿಂದ, ಹೂವುಗಳಿಂದ ಅದರ ಮಕರಂಧವನ್ನು ಹೀರಿ ಅಲ್ಲಾಹನು ಅನುಕೂಲಕರವಾಗಿ ಮಾಡಿಕೊಟ್ಟ ದಾರಿಗಳಲ್ಲಿ ಚಲಿಸಿ ಗೂಡು ತಲುಪಲು ಸಂದೇಶ ಕೊಟ್ಟಿರುತ್ತಾನೆ"* ಎಂಬ ಅಲ್ಲಾಹುವಿನ ಪವಿತ್ರ ವಚನವು ಈ ಪುಟ್ಟ ಜೀವಿಯ ಮಹತ್ವವನ್ನು ಎತ್ತಿ ತೋರಿಸುತ್ತದೆ. ಅದೂ ಅಲ್ಲದೆ, *"ಜೇನ್ನೊಣ ಹೊರತು ಇತರ ಎಲ್ಲಾ ನೊಣಗಳು ನರಕ ಪ್ರವೇಶಿಸುವುದು"* ಎಂಬ ಪವಿತ್ರ ಹದೀಸ್ ವಚನ ಕೂಡ ಇದರ ಮಹತ್ವ ಮತ್ತು ಸಿರಿತನಕ್ಕೆ ಎತ್ತಿ ಹಿಡಿದ ಮತ್ತೊಂದು ಕನ್ನಡಿಯಾಗಿದೆ. ಅಂತೆಯೇ ಅಲ್ಲಾಹುವಿನ ನಿಯಮಗಳನ್ನು ಸರಿಯಾಗಿ ಪಾಲಿಸಿ, ಅವನನ್ನು ಭಯಪಟ್ಟು, ಅವನು ತೋರಿಸಿಕೊಟ್ಟ ಮಾರ್ಗದಲ್ಲಿ ಜೀವಿಸುವ ಯಥಾರ್ಥ ಸತ್ಯವಿಶ್ವಾಸಿಯನ್ನು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರು ಜೇನು ನೊಣದೊಂದಿಗೆ ತುಲನೆ ಮಾಡಿದ ಹಲವಾರು ಸ್ವಹೀಹಾದ ಹದೀಸುಗಳು ಉಲ್ಲೇಖಿಸಲ್ಪಟ್ಟಿವೆ. ಒಟ್ಟಿನಲ್ಲಿ ಜೇನ್ನೊಣ ಇತರ ಕೀಟಗಳಿಗಿಂತ ಶ್ರೇಷ್ಠವಾದುದು ಎಂಬುವುದರಲ್ಲಿ ಎರಡು ಮಾತಿಲ್ಲ.

   ▪ *ಜೇನ್ನೊಣ* ಬಹಳ ಚುರುಕು ಮತ್ತು ತೀಕ್ಷ್ಣ ಬುದ್ಧಿ ಮತ್ತು ಧೈರ್ಯವಿರುವ ಒಂದು ವಿಶೇಷ ಕೀಟವಾಗಿದೆ. ಚಳಿಗಾಲ, ಮಳೆಗಾಲ, ಬೇಸಿಗೆಕಾಲ ಮುಂತಾಗಿ ವರ್ಷದಲ್ಲಿ ಬದಲಾಗುತ್ತಿರುವ ಋತುಗಳ ಬಗ್ಗೆ ಮೊದಲೇ ತಿಳಿವಳಿಕೆಯಿದ್ದು ಅದಕ್ಕೆ ಅನುಗುಣವಾಗಿ ತನ್ನ ಜೇನು ಸಂಪಾದನೆ ಮಾಡುವ ಪ್ರದೇಶವನ್ನು ಬದಲಾವಣೆ ಮಾಡಿಕೊಳ್ಳುವ ವಿವೇಕವುಳ್ಳ ಒಂದು ಜೀವಿ ಕೂಡ ಹೌದು. ಅಲ್ಲಾಹುವಿನ ಸಂದೇಶದಂತೆ ಹಲವಾರು ಕಿಲೋಮೀಟರ್‌ಗಳ ಸಂಚಾರ ಮಾಡಿ ಹಲವಾರು ಹೂವುಗಳಿಂದ ಮತ್ತು ಫಲ ವಸ್ತುಗಳಿಂದ ಹೀರಿ ತೆಗೆಯುವ ಮಕರಂಧವನ್ನು ತನ್ನ ಗೂಡು ತಲುಪಿದ ನಂತರ ತನ್ನ ದೇಹದಿಂದ ಹೊರ ಹಾಕುತ್ತದೆ.

   ▪  *ಒಂದು ತುತ್ತು* ಅನ್ನ ಮತ್ತು ಒಂದು ತುಂಡು ಬಟ್ಟೆಗೆ ಬೇಕಾಗಿ ರಾತ್ರಿ ಹಗಲೆನ್ನದೆ ದುಡಿಯುವ ಮನುಷ್ಯನ ಈ ಐಹಿಕ ಪ್ರಪಂಚವನ್ನು ಬಹಳ ಹೀನಾಯವಾಗಿ ಕಂಡ ವ್ಯಕ್ತಿಯಾಗಿದ್ದ ಸಹಾಬೀಶ್ರೇಷ್ಠ ಹಝ್ರತ್ ಇಮಾಮ್ ಅಲೀ (ರ) ಒಮ್ಮೆ ಹೇಳಿದರು. *"ಮನುಷ್ಯನು ಧರಿಸುವ ವಸ್ತ್ರದಲ್ಲಿ ಬಹಳ ಬೆಲೆ ಬಾಳುವ ಮತ್ತು ಆಡಂಭರವಾದ ರೇಷ್ಮೆ ಬಟ್ಟೆಯು, ರೇಷ್ಮೆ ಹುಳದ ಉಗುಳು ನೀರು ಆದರೆ, ಮನುಷ್ಯನು ಕುಡಿಯುವ ಪಾನೀಯದಲ್ಲಿ ಬಹಳ ಶ್ರೇಷ್ಠವಾದ ಜೇನು ತುಪ್ಪವು, ಜೇನು ನೊಣವು ತನ್ನ ಗುದದ್ವಾರದ ಮೂಲಕ ಹೊರ ಹಾಕುವುದಾಗಿದೆ."* ಇಮಾಮ್ ಅಲಿ (ರ) ಈ ಮಾತಿನ ಪ್ರಕಾರ ಜೇನ್ನೊಣ ಬಾಯಿಯಲ್ಲಿ ಹೀರಿ ತೆಗೆದ ಮಕರಂಧವನ್ನು ಗುದದ್ವಾರದ ಮೂಲಕ ಹೊರಹಾಕುವುದೆಂದು ಹಲವಾರು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ. 

   ▪ *ಜೇನು ನೊಣ* ಎರಡು ತರವಿದೆ. ಕಾಡು, ಬೆಟ್ಟ, ಮರಗಳಲ್ಲಿ ಗೂಡು ಕಟ್ಟುವುದು ಒಂದಾದರೆ, ಮತ್ತೊಂದು ಮನುಷ್ಯ ನಿರ್ಮಿತ ಗೂಡುಗಳಲ್ಲಿ ವಾಸಿಸುವುದಾಗಿದೆ. ಆದ್ದರಿಂದ ಈ ಎರಡು ಜಾತಿಗಳು ಸಂಗ್ರಹಿಸುವ ಜೇನು ಕೂಡ ಬಹಳ ವ್ಯತ್ಯಾಸವಾಗಿರುತ್ತದೆ. ಕಾಡು ಜೇನ್ನೊಣದ ಜೇನು, ಗ್ರಾಮ ಜೇನ್ನೊಣ ಸಂಗ್ರಹಿಸುವ ಜೇನಿಗಿಂತ ಬಹಳ ರುಚಿಕರವಾದದ್ದೂ ಶ್ರೇಷ್ಠವಾದದ್ದೂ ಆಗಿದೆ. ಅಂತೆಯೇ ಜೇನು ನೊಣ ಒಂದು ವರ್ಷದಲ್ಲಿ ಎರಡು ಸಲ ಅಂದರೆ ವಸಂತಕಾಲ ಮತ್ತು ಶರತ್ಕಾಲದಲ್ಲಿ ಜೇನು ಸಂಗ್ರಹಣೆ ಮಾಡುತ್ತದೆ. ವಸಂತಕಾಲದ ಜೇನು ಶರತ್ಕಾಲದ ಜೇನಿಗಿಂತ ಉತ್ತಮವಾದದ್ದಾಗಿದೆ. ಹಾಗೆಯೇ ಕಾಲ ಬದಲಾವಣೆ, ಜಾಗ ಬದಲಾವಣೆ, ಜೇನು ನೊಣದ ಪ್ರಾಯದ ಬದಲಾವಣೆ ಇತ್ಯಾದಿ ವ್ಯತ್ಯಾಸಗಳಿಗೆ ಅನುಗುಣವಾಗಿ ಜೇನಿನ ಬಣ್ಣದಲ್ಲೂ ಬಂಗಾರ ಬಣ್ಣ, ಹಳದಿ, ಕಪ್ಪು, ಕೆಂಪು, ಬಿಳಿ ಮುಂತಾದ ಬಣ್ಣ ವ್ಯತ್ಯಾಸವಿರುತ್ತದೆ. ಬಂಗಾರ ಬಣ್ಣದ ಜೇನು ಬಹಳ ಶ್ರೇಷ್ಠವಾದದ್ದಾಗಿದೆ. ಅಂತೆಯೇ ಈಜಿಪ್ಟಿನ ಜೇನು ವಿಶ್ವದಲ್ಲೇ ಅತೀ ಶ್ರೇಷ್ಠವಾದದ್ದಾಗಿದೆ. ಯಾಕೆಂದರೆ, ಅಲ್ಲಿನ ನೊಣಗಳು ಜೇನು ಸಂಗ್ರಹ ವೇಳೆಯಲ್ಲಿ ಕುಡಿಯುವ ನೀರು. ನೀರಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನೈಲ್ ನದಿಯ ಬಹಳ ಬರಕತ್ ಇರುವ ನೀರು ಆದದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆ. 

   ▪ *ಪ್ರವಾದಿ* ಸ್ವಲ್ಲಲ್ಲಾಹು ಅಲೈಹಿವ ಸಲ್ಲಮರ ಬಾಳ ಸಂಗಾತಿ ಬೀವಿ ಝೈನಬ್ (ರ) ರವರು ಒಮ್ಮೆ ಪ್ರವಾದಿಯವರಲ್ಲಿ ಬಂದು ಹೇಳಿದರು. "ನಾನಿವತ್ತು *ಉರ್‌ಫುತ್* ಎಂಬ ಹೆಸರಿನ ಜೇನನ್ನು ಸವಿದಾಗ ಅದರಲ್ಲಿ *ಉರ್‌ಫುತ್* ಮರದ ಮೇಣದ ಒಳ್ಳೆಯ ಪರಿಮಳ ನನ್ನ ಗಮನಕ್ಕೆ ಬಂತು." ಅಂದರೆ ಮರದ ಬದಲಾವಣೆ ಕೂಡ ಜೇನಿನ ರುಚಿಯಲ್ಲಿ ಪಾತ್ರ ವಹಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. *ಉರುಫತ್* ಒಂದು ಒಂದು ಮರವಾಗಿದೆ.

   ▪ *ಬಹಳ* ಶಿಸ್ತು ಬದ್ಧವಾದ ನಿಯಮ ಮತ್ತು ಕಟ್ಟುನಿಟ್ಟಾದ ಕಾನೂನು ವ್ಯವಸ್ಥೆಗಳನ್ನು ಹೊಂದಿದ ಒಂದು ಕುಟುಂಬವಾಗಿದೆ ಜೇನು ನೊಣದ್ದು. ಪವಿತ್ರ ಖುರ್‌ಆನಿನಲ್ಲಿ ಹೇಳಿದಂತೆ ಇವುಗಳಲ್ಲಿ ಕೆಲವು ಪರ್ವತ ಪ್ರದೇಶಗಳಲ್ಲೂ ಇನ್ನು ಕೆಲವು ಮರಗಳಲ್ಲೂ ಮತ್ತು ಕೆಲವು ಮನುಷ್ಯ ನಿರ್ಮಿತ ಗೂಡಿನಲ್ಲೂ ತನ್ನ ಜೇನು ಶೇಖರಣೆಗೆ ಗೂಡು ಕಟ್ಟುತ್ತದೆ. ವಿಷೇಶವೆಂದರೆ ಈ ಮೂರು ಜಾಗ ಅಲ್ಲದ ಮತ್ತೊಂದು ಕಡೆ ಜೇನುಗೂಡು ಕಾಣುವುದು ಬಹಳ ಅಪರೂಪವಾಗಿದೆ. ನಿರ್ಮಾಣದಲ್ಲಿ ಯಾವುದೇ ಕೊರತೆ ಅಥವಾ ನ್ಯೂನತೆ ಇಲ್ಲದ ನೂರಕ್ಕೆ ನೂರು ಪರಿಪೂರ್ಣವಾದ ಆರು ಭಾಗಗಳಿರುವ ಷಡ್ಭುಜ ಆಕೃತಿಯಲ್ಲಿರುವ ಇದರ ಗೂಡು ಯಾವ ವಾಸ್ತುಶಿಲ್ಪಿ ಅಥವಾ ವಿಜ್ಞಾನಿಯ ಬುದ್ದಿಗೂ ಎಟುಕದ ಒಂದಾಗಿದೆ. ಮಾತ್ರವಲ್ಲ ನೈಸರ್ಗಿಕವಾಗಿ ಬರುವ ಮಳೆ, ಗಾಳಿ, ಬಿಸಿಲು ಮುಂತಾದ ಎಲ್ಲಾ ಅನಾಹುತ ಮತ್ತು ದುರಂತಗಳಿಂದ ಪಾರಾಗುವ ರೀತಿಯಲ್ಲೂ ಆಗಿರುತ್ತದೆ ಇದರ ಅಧ್ಬುತವಾದ ನಿರ್ಮಾಣ. ಸುಬ್‌ಹಾನಲ್ಲಹ್..! ಈ ಪುಟ್ಟ ಕೀಟಕ್ಕೆ ಈ ವಿದ್ಯೆಯನ್ನು ಕಲಿಸಿ ಕೊಟ್ಟವನ್ಯಾರು...? ವಿಸ್ಮಯ ತುಂಬಿದ ಜೀವಜಗತ್ತಿನ ಒಡೆಯನಾದ ಅಲ್ಲಾಹುವಿನಿಂದ ನೇರವಾಗಿ ದೊರೆತ ಸಂದೇಶ ಮತ್ತು ಮಾರ್ಗದರ್ಶನದ ಫಲವಾಗಿದೆ ಇದು.

   ▪ *ಜೇನ್ನೊಣವು* ಜೇನು ಶೇಖರಣೆ ಮಾಡಲು ಬಯಸುವಾಗ ಮೊದಲಾಗಿ ಒಂದು ಸುರಕ್ಷಿತ ಮತ್ತು ಸ್ವಚ್ಛವಾದ ಜಾಗವನ್ನು ಹುಡುಕುತ್ತದೆ. ನಂತರ ಕಬ್ಬಿನ ಗಿಡದಂತಹ ಮರಗಳ ಕಾಂಡಗಳಲ್ಲಿ ಕಾಣಲ್ಪಡುವ ಮೇಣವನ್ನು ತಂದು ಆ ಮೇಣದಿಂದ ಗೂಡು ತಯಾರು ಮಾಡುತ್ತದೆ.

   ▪ *ಒಂದು ಜೇನು* ಒಕ್ಕೂಟದಲ್ಲಿ ಸುಮಾರು ಇಪ್ಪತ್ತು ಸಾವಿರದಿಂದ ಮೂವತ್ತು ಸಾವಿರ ತನಕ ಜೇನು ನೊಣಗಳು ಇರುತ್ತದೆ. ಅಂತೆಯೇ ಈ ಬೃಹತ್ ಒಕ್ಕೂಟಕ್ಕೆ ಒಂದು ಹೆಣ್ಣು ನೊಣ ನಾಯಕಿಯಾಗಿರುತ್ತದೆ. ರಾಣಿಯೆಂದು ಕರೆಯಲ್ಪಡುವ ಈ ನೊಣದ ತೀರುಮಾನವೇ ಅಂತಿಮ. ರಾಣಿಯಿಲ್ಲದ ಜೇನು ಕುಟುಂಬವೊಂದು ಅಸ್ತಿತ್ವದಲ್ಲಿ ಇರಲಾರದು. ಒಂದು ಜೇನು ನೊಣ ಒಕ್ಕೂಟದಲ್ಲಿ ಹಲವಾರು ಪಂಗಡಗಳಿರುತ್ತದೆ. ಒಂದೊಂದು ಪಂಗಡಕ್ಕೆ ದಿನನಿತ್ಯ ಮಾಡಬೇಕಾದ ಜವಾಬ್ದಾರಿ ಮತ್ತು ಹೊಣೆ ಇರುತ್ತದೆ. ಜೇನು ಹೊತ್ತು ತರುವ ವಿಭಾಗ, ಸ್ವಚ್ಚತಾ ವಿಭಾಗ, ಪಹರೆಗಾರರ ವಿಭಾಗ, ಗೂಡಿನ ದ್ವಾರದಲ್ಲಿರುವ ಕಾವಲುಗಾರರ ವಿಭಾಗ, ಸಣ್ಣ ಮರಿಗಳಿಗೆ ಆಹಾರ ಕೊಡುವ ವಿಭಾಗ, ಸತ್ತ ಶವವನ್ನು ಹೊರ ಹಾಕುವ ವಿಭಾಗ, ಶುಧ್ಧ ನೀರು ಸರಬರಾಜು ಮಾಡುವ ವಿಭಾಗ, ಸ್ವಚ್ಛ ಮಾಡುವ ವಿಭಾಗ, ಮೇಣ ತಂದು ಗೂಡು ನಿರ್ಮಾಣ ಮಾಡುವ ವಾಸ್ತುಶಿಲ್ಪಿಗಳ ವಿಭಾಗ ಇತ್ಯಾದಿ ಇತ್ಯಾದಿ... ಆದರೆ ಎಲ್ಲವೂ ನೇತಾರ ರಾಣಿ ನೊಣದ ಸಂಪೂರ್ಣ ಉಸ್ತುವಾರಿಯಲ್ಲಾಗಿರುತ್ತದೆ. ರಾಣಿ ನೊಣದ ತೀರುಮಾನಕ್ಕೆ ಬದ್ಧರಾಗದಿದ್ದಲ್ಲಿ ಮರಣದಂಡನೆಯೇ ಗತಿ. ಯಾವ ಕಾರಣಕ್ಕೂ ನಿಯಮ ತಪ್ಪಿ ನಡೆಯುವಂತಿಲ್ಲ. ಸ್ವಚ್ಚತೆಯಾಗಿರುತ್ತದೆ ಬಹಳ ಮುಖ್ಯವಾದ ವಿಷಯ. ಎಷ್ಟರ ತನಕವೆಂದರೆ ಮಲ ವಿಸರ್ಜನೆ ಮಾಡುವ ಸಮಯವಾದರೆ ಜೇನು ಗೂಡಿನಿಂದ ಹೊರಗೆ ಹೋಗಿ ಮಾಡಿ ಬರಬೇಕೆಂಬ ಕಠಿಣವಾದ ವ್ಯವಸ್ಥೆಯಿದೆ. ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ದಿನಾಲೂ ಕುಳಿತು ಕೊಳ್ಳಲು ಒಂದು ನಿಗದಿತ ಸ್ಥಳ ಮತ್ತು ವಿಭಾಗ ಇರುವಂತೆಯೇ ಈ ಬೃಹತ್ ಒಕ್ಕೂಟದಲ್ಲಿರುವ ನೊಣಗಳಿಗೂ ಗೂಡಲ್ಲಿ ನಿಗದಿತ ಸ್ಥಳವಿದೆ. ಅಂತೆಯೇ ಉಸ್ತುವಾರಿಯಿರುವ ರಾಣಿಗೆ ಕುಳಿತು ಕೊಳ್ಳಲು ಒಂದು ಪ್ರತ್ಯೇಕ ಜಾಗವನ್ನು ಗೂಡು ನಿರ್ಮಾಣ ವೇಳೆಯಲ್ಲಿಯೇ ಮಾಡಲಾಗುತ್ತದೆ. ಅಂತೆಯೇ ರಾಣಿ ನೊಣಕ್ಕೆ ಅಂಗರಕ್ಷಕರೂ ಇರುತ್ತಾರೆ. ಇನ್ನು ಅಕಸ್ಮಾತ್ ರಾಣಿಯೇ ನಿಯಮ ಉಲ್ಲಂಘನೆ ಮಾಡಿದರೆ ಅಂತಹಾ ಸಂದರ್ಭಗಳಲ್ಲಿ ಇತರ ಎಲ್ಲಾ ನೊಣಗಳು ಸೇರಿ ಅಧಿಕಾರದಲ್ಲಿ ಮುಂದುವರಿಯಲು ಅರ್ಹತೆಯಿಲ್ಲದ ರಾಣಿಯನ್ನು ಅಧಿಕಾರ ಕುರ್ಚಿಯಿಂದ ಕೆಳಗಿಳಿಸಿ ಕೊಂದು ಬಿಡುತ್ತದೆ!!!

*ಆ ಪಾನೀಯದಲ್ಲಿ ರೋಗ ಶಮನವಿದೆ*

   ▪ *ಒಂದು* ಜೇನು ಕುಟುಂಬದಲ್ಲಿ ಮೂರು ತರ ನೊಣಗಳಿರುತ್ತದೆ. ಒಂದು ರಾಣಿ ನೊಣ. ಈ ರಾಣಿ ನೊಣವು ಹೆಣ್ಣಾಗಿದ್ದು ಒಂದು ಒಕ್ಕೂಟದಲ್ಲಿ ಒಂದು ನೊಣ ಮಾತ್ರವಿರುತ್ತದೆ. ಶರೀರ ಪ್ರಕೃತಿಯಲ್ಲಿ ಇತರ ನೊಣಗಳಿಗಿಂತ ಇದು ದೃಡಕಾಯವಾಗಿರುತ್ತದೆ. ಅಂತೆಯೇ ಇತರ ಜೇನ್ನೊಣಗಳಿಗಿರುವಂತೆ ಇದಕ್ಕೆ ಕೊಂಡಿ ಇರುವುದಿಲ್ಲ. ಇದು ಸಾಧಾರಣ ಮೂರು ವಾರಕ್ಕೊಮ್ಮೆ ಆರು ಸಾವಿರದಿಂದ ಹನ್ನೆರಡು ಸಾವಿರ ತನಕ ಮೊಟ್ಟೆಯಿಡುತ್ತದೆ. ಈ ರಾಣಿಗೆ ಮೊಟ್ಟೆಯಿಟ್ಟು ಮರಿ ಮಾಡುವುದು ಮತ್ತು ಉಸ್ತುವಾರಿಯಲ್ಲದೆ ಪಬೇರೆ ಕೆಲಸವಿಲ್ಲ. ಮೊದಲೇ ಹೇಳಿದಂತೆ ಸಣ್ಣ ಮರಿಗಳಿಗೆ ಶುಶ್ರೂಷೆ ಮಾಡುವ ಜವಾಬ್ದಾರಿಯಿರುವ ವಿಭಾಗವು ರಾಣಿ ಜನ್ಮಕೊಟ್ಟ ಪುಟ್ಟ ಮರಿಗಳನ್ನು ಪೋಷಣೆ ಮಾಡುತ್ತದೆ. ಜೇನು ಗೂಡಿನ ಸಂಪೂರ್ಣ ಜವಾಬ್ದಾರಿಯಲ್ಲಿರುವ ಇದು ತನಗೆ ಮೊಟ್ಟೆಯಿಟ್ಟು ಸಂತಾನ ಮಾಡಬೇಕೆಂದು ಬಯಸುವಾಗ ತಾತ್ಕಾಲಿಕವಾಗಿ ಗೂಡಿನಿಂದ ಹೊರಹೋಗಿ ಅಂತರಿಕ್ಷದಲ್ಲಿ ಹಾರಾಡುತ್ತಿರುವ ಇತರ ಯಾವುದೋ ಒಕ್ಕೂಟದ ಗಂಡು ಜೇನು ನೊಣದೊಂದಿಗೆ ಲೈಂಗಿಕ ಸಂಪರ್ಕ ಮಾಡುತ್ತದೆ. ಅಧಿಕಾರದಲ್ಲಿರುವ  ತನ್ನ ವರ್ಚಸ್ಸಿಗೆ ಮತ್ತು ಅಭಿಮಾನಕ್ಕೆ ಯಾವುದೇ ಕೊರತೆ ಅಥವಾ ಧಕ್ಕೆ ಬರಬಾರದೆಂಬ ಉದ್ದೇಶದಿಂದ ಗೂಡಿನಲ್ಲೇ ಗಂಡು ನೊಣಗಳಿದ್ದರೂ ಹೊರಗೆ ಹೋಗಿ ಬೇರೊಂದು ಅನ್ಯ ಗಂಡಿನೊಂದಿಗೆ ಲೈಂಗಿಕ ಸಂಪರ್ಕ ಮಾಡುವುದರ ರಹಸ್ಯ.

   ▪ *ಎರಡನೆಯದ್ದು* ಮೇಲೆ ವಿವರಿಸಲಾದ ಕೆಲಸಗಳನ್ನು ಬಹಳ ಅಚ್ಚುಕಟ್ಟಾಗಿ ತಪ್ಪದೆ ನಿರ್ವಹಣೆ ಮಾಡುವ ಗಂಡು ಹೆಣ್ಣು ಅಲ್ಲದ ನಪುಂಸಕ ನೊಣಗಳು. ಅವುಗಳಾಗಿರುತ್ತದೆ ಈ ಜೇನು ಸಂಪಾದನೆಯಲ್ಲಿ ಸಜೀವ ಕಾರ್ಯಕರ್ತರು.

   ▪ *ಮೂರನೆಯದ್ದು* ಗಂಡು ನೊಣಗಳು. ಸುಮಾರು ಮೂವತ್ತು ಸಾವಿರ ನೊಣಗಳಿರುವ ಒಂದು ಕುಟುಂಬದಲ್ಲಿ ಈ ಗಂಡು ನೊಣಗಳು ಬರೀ ಐನೂರರಿಂದ ಒಂದು ಸಾವಿರ ತನಕವಿರುತ್ತದೆ. ಬಹಳ ಸ್ವಾರಸ್ಯಕರ ಸಂಗತಿಯೆಂದರೆ, ಈ ಅಸಾಮಿಗಳಿಗೆ ಯಾವುದೇ ಕೆಲಸವಿಲ್ಲ. ನಪುಂಸಕ ನೊಣಗಳು ಕಷ್ಟಪಟ್ಟು ತಂದು ತುಂಬಿಸುವ ಜೇನನ್ನು ಆರಾಮವಾಗಿ ತಿಂದು ಅತ್ತಿತ್ತ ಓಡಾಡುವುದು.

   ▪ *ರಾಣಿ ನೊಣವು* ಹೊರಗೆ ಹೋಗಿ ಲೈಂಗಿಕ ಸಂಪರ್ಕ ಮಾಡಿಕೊಂಡು ಗರ್ಭಧಾರಣೆಯಾಗಿ ಮೊಟ್ಟೆಯಿಡಲು ತಯಾರಾಗುವಾಗಲೇ ಹೊಸದಾಗಿ ಹುಟ್ಟುವ ಮರಿಗಳಿಗೆ ಗೂಡಿನಲ್ಲಿ ಜಾಗ ಸಾಕಾಗಲಾರದು, ಮತ್ತು ಸಂಗ್ರಹಿಸಿದ ಜೇನು ಸಾಕಾಗಲಾರದು ಎಂಬ ಭಯದಿಂದ ಸಕ್ರಿಯ ಕಾರ್ಯ ಕರ್ತರಾದ ನಪುಂಸಕ ನೊಣಗಳು ಈ ಸುಮಾರು ಒಂದು ಸಾವಿರ ತನಕ ಬರುವ ಗಂಡು ಸೋಮಾರಿ ನೊಣಗಳನ್ನು ಕೆಲವೇ ದಿನಗಳಲ್ಲಾಗಿ ಕೊಂದು ಬಿಡುತ್ತದೆ. ಅಂತೆಯೇ ಹೊಸತಾಗಿ ಹುಟ್ಡುವ ಮರಿಗಳಲ್ಲಿ ರಾಣಿನೊಣ ಹುಟ್ಟಿ ಒಂದು ಕುಟುಂಬದಲ್ಲೇ ಒಂದಕ್ಕಿಂತ ಹೆಚ್ಚು ರಾಣಿಗಳು ಉತ್ಪಾದನೆಯಾದರೆ ಅರ್ಹತೆ ಕಡಿಮೆಯಿರುವ ರಾಣಿಯನ್ನು ಇತರ ನೊಣಗಳು ಸೇರಿ ಕೊಲ್ಲುತ್ತದೆ. ಅಂದರೆ ಒಂದು ಸಂಘಟನೆಗೆ ಹಲವಾರು ನಾಯಕರಿದ್ದರೆ ಅದು ಯವತ್ತೂ ಯಶಸ್ವಿಯಾಗದು ಎಂಬ ಪಾಠವನ್ನು ಇದು ಕಲಿಸುತ್ತದೆ. ಸುಬ್‌ಹಾನಲ್ಲಾಹ್‌...!

   ▪ *ಮಕರಂಧವನ್ನು* ಹೀರಲು ಹೊರಟ ಜೇನು ನೊಣಗಳು ಅಲ್ಲಾಹುವಿನ ಆಜ್ಞೆಯಂತೆ ಮೊದಲಾಗಿ ತಮಗೆ ಬೇಕಾದಷ್ಟು ಹೀರಿ ಕುಡಿಯುತ್ತದೆ. ತನ್ನ ಹೊಟ್ಟೆ ತುಂಬಿದ ನಂತರ ಶೇಖರಣೆಗೆ ಬೇಕಾದ ಹನಿಯನ್ನು ಹೀರಿ ತೆಗೆದು ಹತ್ತಾರು ಮೈಲು ಸಂಚರಿಸಿ ತನ್ನ ಸುಸಜ್ಜಿತ ಗೂಡಿಗೆ ಬರುತ್ತದೆ. ಎಷ್ಟೇ ದೂರ ಸಂಚಾರ ಮಾಡಿದರೂ ಹೀರಿ ತೆಗೆದ ಹೂವಿನ ಮಕರಂಧ
ನಂತರ ಹೊರ ಹಾಕುವಾಗ ಅದು ಜೇನಾಗಿ ಪರಿವರ್ತನೆಯಾಗುತ್ತದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಎಷ್ಟೇ ಮೈಲಿ ದೂರ ಸಂಚಾರ ಮಾಡಿದರೂ ನಂತರ ಮಕರಂಧದೊಂದಿಗೆ ಗೂಡಿಗೆ ಹಿಂತಿರುವಾಗ ದಾರಿತಪ್ಪುವಂತಿಲ್ಲ. ಗಿಡಗಳಿಂದ ಹೀರಿದ ಮಕರಂಧವು ಎಂತಹಾ ಕಹಿಯಾದರೂ, ಹುಳಿಯಾದರೂ, ಸಿಹಿಯಾದರೂ ನಂತರ ಅದರ ಬಾಯಿಯಿಂದ ಹೊರ ಬರುವಾಗ ಸಿಹಿಯಾಗಿಯೇ ಹೊರ ಬರುತ್ತದೆ. ಸುಬ್‌ಹಾನಲ್ಲಾಹ್! ಇದೆಂತಹಾ ವಿಸ್ಮಯ ತುಂಬಿದ ಜೀವಜಗತ್ತು...?

   ▪ *"ಜೇನು ನೊಣದ ಹೊಟ್ಟೆಯಿಂದ ಹಲವಾರು ಬಣ್ಣಗಳಲ್ಲಾಗಿ  ಹೊರಬರುವ ಪಾನೀಯದಲ್ಲಿ (ಜೇನು) ರೋಗ ಶಮನವಿದೆ."* ಎಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಅಂತೆಯೇ *"ಜೇನುತುಪ್ಪ ಎಲ್ಲಾ ಖಾಯಿಲೆಗಳಿಗೆ ಔಷಧಿಯಾದರೆ ಹೃದಯ ಸಂಬಂಧವಾದ ಎಲ್ಲಾ ಮಾನಸಿಕ ರೋಗಗಳಿಗೆ ಪವಿತ್ರ ಕುರ್‌ಆನ್ ಔಷಧಿಯಾಗಿದೆ"* ಎಂದು ಪ್ರವಾದಿ ವಚನವು ಹೇಳುತ್ತದೆ. *"ಎಲ್ಲಾ ತಿಂಗಳಲ್ಲಿ ಕನಿಷ್ಠ ಮೂರು ದಿನ ಬೆಳಿಗ್ಗೆ ಹಸಿ ಹೊಟ್ಟೆಗೆ ಜೇನು ಸವಿಯುವ ಅಭ್ಯಾಸ ಮಾಡಿದವನಿಗೆ ಯಾವುದೇ ಮಾರಕವಾದ ಖಾಯಿಲೆ ಬಾರದು"* ಎಂಬ ಪ್ರವಾದಿಯವರ ಮತ್ತೊಂದು ಹದೀಸನ್ನು ಇಮಾಮ್ ಬಿನ್ ಮಾಜಃ ವರದಿ ಮಾಡಿದ್ದಾರೆ.

   ▪ *ಜೇನಿನಂತೆಯೇ* ಪ್ರವಾದಿ ಮುಹಮ್ಮದ್ (ಸ) ರು ಬಹಳ ಗಂಭೀರವಾಗಿ ಗಣನೆಗೆ ತೆಗೆದುಕೊಂಡ ಮತ್ತೊಂದು ವಸ್ತುವಾಗಿತ್ತು ಕರಿ ಜೀರಿಗೆ. *"ಕರಿ ಜೀರಿಗೆಯಲ್ಲಿ ಮರಣವಲ್ಲದ ಎಲ್ಲಾ ಖಾಯಿಲೆಗಳಿಗೂ ಚಿಕಿತ್ಸೆಯಿದೆ."* ಅಂತೆಯೇ *"ಜ್ವರ ಎಂಬುದು ನರಕದ ಆವಿಯಾಗಿದೆ. ಆದ್ದರಿಂದ ಜ್ವರ ಬಂದರೆ ಅದನ್ನು ನೀವು ತನ್ನೀರು ಹಾಕಿ (ತನ್ನೀರು ಸ್ನಾನ) ನಂದಿಸಿರಿ"* ಎಂಬ ಇಮಾಮ್ ಬುಖಾರಿಯವರು ವರದಿ ಮಾಡಿದ ಹದೀಸನ್ನು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತಿದ್ದೇನೆ. ಒಟ್ಟಿನಲ್ಲಿ ಜ್ವರ ಬಂದರೆ ಬಿಸಿನೀರ ಸ್ನಾನಕ್ಕಿಂತ ಸಾಮಾನ್ಯ ತನ್ನೀರ ಸ್ನಾನ ಉತ್ತಮವೆಂದು ತಿಳಿಯಬೇಕಾಗಿದೆ.

   ▪ *ಪ್ರವಾದಿ* ಮುಹಮ್ಮದ್ (ಸ) ರಿಗೆ ಜೇನು ಮತ್ತು 
ಸಿಹಿ ತಿಂಡಿಗಳೆಂದರೆ ಬಹಳ ಇಷ್ಟವಾಗಿತ್ತು. ಮಾತ್ರವಲ್ಲ ಬೆಳಿಗ್ಗೆ ಹಸಿಹೊಟ್ಟೆಗೆ ನೀರಿಗೆ ಜೇನು ಮಿಶ್ರಣ ಮಾಡಿ ಕುಡಿಯುತ್ತಿದ್ದರು. ದಿನಾಲೂ ಬೆಳಿಗ್ಗೆ ಹಸಿ ಹೊಟ್ಟೆಗೆ ಜೇನು ಸವಿಯುವ ಅಭ್ಯಾಸ ಮಾಡಿದವನಿಗೆ ಪ್ರಾಯವಾಗುವಾಗ ಬರುವ ಪಾರ್ಶ್ವವಾಯುವಿನಂತಹಾ ಖಾಯಿಲೆಗಳು ಬಾರದು.

   ▪ *ಯಾವುದೇ* ಭಕ್ಷ್ಯ
ವಸ್ತುವನ್ನು ಜೇನಿರುವ ಪಾತ್ರೆಯಲ್ಲಿ ಹಾಕಿದರೆ ಆ ವಸ್ತು ತಿಂಗಳುಗಟ್ಟಲೆ ಹಾಳಾಗದಂತೆ ಹಾಗೆಯೇ ಉಳಿಯುತ್ತದೆ. ಹಸಿ ಮಾಂಸವನ್ನು ಮೂರು ತಿಂಗಳಿಗೂ ಫಲ ವಸ್ತುಗಳನ್ನು ಆರು ತಿಂಗಳ ತನಕವೂ ಹಾಳಾಗದಂತೆ ಇಡಬಹುದು.

    ▪ *ಅಂತ್ಯದಿನ* ಸಮೀಪಿಸುವಾಗ ಐಹಿಕ ಜಗತ್ತಿನ ಅನುಗ್ರಹಗಳನ್ನು (ನಿಅ್‌ಮತ್) ಒಂದೊಂದಾಗಿ ಮೇಲೆತ್ತಲಾಗುವುದು. ಅದರಲ್ಲಿ ಪ್ರಪ್ರಥಮವಾಗಿ ಎತ್ತಲ್ಪಡುವ ನಿಅಮತ್ ಜೇನಾಗಿರುತ್ತದೆ.

   ▪ *ಪ್ರವಾದಿ* ಮುಹಮ್ಮದ್ (ಸ) ರು ಕೊಲ್ಲುವುದನ್ನು ನಿಷೇಧಿಸಿದ ಕೆಲವು ಜೀವಿಗಳಲ್ಲಿ ಒಂದು ಜೀವಿಯಾಗಿದೆ ಜೇನು ನೊಣ. ಕಾರಣವಿಲ್ಲದೆ ಇದನ್ನು ಕೊಲ್ಲುವುದು ನಿಷಿದ್ಧವಾಗಿರುತ್ತದೆ.

   ▪ *ಎಷ್ಟು ಬಾರಿ* ಓದಿದರೂ ಕಂಠಪಾಠವಾಗದ ಒಬ್ಬರು ಇಮಾಮ್ ಅಲೀ (ರ) ರ ಹತ್ತಿರ ಬಂದು ಹೇಳಿದರು. *"ಇಮಾಮರೇ..., ನನಗೆ ಎಷ್ಟು ಓದಿದರೂ ಕಲಿತರೂ ನೆನಪಲ್ಲಿ ನಿಲ್ಲುವುದಿಲ್ಲ. ಆದ್ದರಿಂದ ಅದಕ್ಕೆ ಏನಾದರೂ ಚಿಕಿತ್ಸೆ ಇದೆಯಾ..?"* ಇಮಾಮ್ ಅಲಿ (ರ) ಹೇಳಿದರು. *"ನೀವು ನಿಮ್ಮ ಬಾಳ ಸಂಗತಿಯ ಹತ್ತಿರ ಹೋಗಿ ಅವಳಿಂದ ಹಲಾಲಾದ ಮಹರಿನ ಹಣವಿದ್ದರೆ ಅದರಿಂದ ಎರಡು ದೀನಾರ್ ತೆಗೆದು ಆ ಹಣದಿಂದ ಜೇನುತುಪ್ಪ ಮತ್ತು ಹಾಲನ್ನು ಖರೀದಿಸಿ ಅದಕ್ಕೆ ನೈಸರ್ಗಿಕವಾಗಿ ದೊರಕುವ ಸ್ವಲ್ಪ ಮಳೆನೀರು ಶೇಖರಿಸಿ ಮಿಶ್ರಣ ಮಾಡಿ ಕೆಲವು ದಿನಗಳ ಕಾಲ ಬೆಳಗ್ಗೆ ಹಸಿ ಹೊಟ್ಟೆಗೆ ಕುಡಿಯಬೇಕು. ಒಳ್ಳೆಯ ಫಲ ಯಕಾಣುತ್ತದೆ."*

   ▪ *ಒಮ್ಮೆ* ಪ್ರವಾದಿ ಮುಹಮ್ಮದ್ (ಸ) ರ ಬಳಿ ಒಬ್ಬರು ಬಂದು ಹೇಳಿದರು. *"ಪ್ರವಾದಿಯವರೇ.., ನನ್ನ ಸಹೋದರನಿಗೆ ಏನೋ ಕಾರಣದಿಂದ ಹೊಟ್ಟೆಗೆ ಸರಿಯಿಲ್ಲದೆ ಅತಿಸಾರ (ಜುಲಾಬು) ಶುರುವಾಗಿದೆ. ಏನು ಮಾಡಬೇಕು..?"* ಆಗ *"ನೀನು ಅವನಿಗೆ ಜೇನು ಕುಡಿಸು. ಎಲ್ಲಾ ಸರಿಯಾಗುತ್ತದೆ."* ಎಂದು ಪ್ರವಾದಿಯವರು ಉತ್ತರ ಕೊಟ್ಟರು. ಮನೆಗೆ ಹೋಗಿ ರೋಗಿಯಾದ ಸಹೋದರನಿಗೆ ಪ್ರವಾದಿಯವರ ನಿರ್ದೇಶದಂತೆ ಜೇನು ಕುಡಿಸಿದೆ ಯಾವುದೇ ಫಲ ಕಾಣದಾಗ ಪುನಃ ಎರಡನೇ ಸಲ ಪ್ರವಾದಿವರ್ಯರ ಸನ್ನಿಧಿಗೆ ಬಂದು ಹೇಳಿದರು. *"ಜೇನು ಕುಡಿಸಿದೆ. ಆದರೆ ಯಾವುದೇ ಫಲವಿಲ್ಲ."* ಆದರೆ ಆಗಲೂ ಪ್ರವಾದಿಯವರ ಉತ್ತರ *"ಜೇನು ಕುಡಿಸು"* ಎಂದೇ ಆಗಿತ್ತು. ಅಂತೆಯೇ ಈ ವ್ಯಕ್ತಿ ಮೂರನೇ ಬಾರಿಯೂ ಸರಿಯಾಗಲಿಲ್ಲ ಎಂದು ಹೇಳಿದಾಗ ಕೊಟ್ಡ ಉತ್ತರ ಅದೇ ಆಗಿತ್ತು. ಕೊನೆಗೆ ನಾಲ್ಕನೇ ಬಾರಿ ಬಂದು *"ಮೂರು ಸಲ ಕುಡಿಸಿಯೂ ಪ್ರಯೋಜನವಿಲ್ಲ"* ಎಂದು ಹೇಳಿದಾಗ *"ಅಲ್ಲಾಹನು ಜೇನಿನಲ್ಲಿ ರೋಗ ಶಮನವಿದೆ ಎಂದು ಸತ್ಯ ಹೇಳುವಾಗ ನಿನ್ನ ಸಹೋದರನ ಹೊಟ್ಟೆ ಸುಳ್ಳು ಹೇಳುತ್ತದೆ. ಹೋಗಿ ಇನ್ನೊಮ್ಮೆ ಕುಡಿಸು, ಸರಿಯಾಗುತ್ತದೆ"* ಎಂಬ ಉತ್ತರ ಕೊಟ್ಟರು. ಕೊನೆಗೆ ನಾಲ್ಕನೆಯ ಬಾರಿ ಕುಡಿಸಿದಾಗ ಸುಬ್‌ಹಾನಲ್ಲಾಹ್! ವಾಸಿಯಾಯಿತು.

   ▪ *ಇಸ್ಲಾಮಿನ* ಎರಡನೇ ಖಲೀಫಃ ಹಝ್ರತ್ ಉಮರ್ (ರ) ರ ಪುತ್ರ ಹಝ್ರತ್ ಬಿನ್ ಉಮರ್ (ರ) ರು ಯಾವ ಖಾಯಿಲೆ ಬಂದರೂ ಜೇನು ಸೇವಿಸುತ್ತಿದ್ದರು. ಎಷ್ಟರ ತನಕವೆಂದರೆ; ಕುರು, ಬೊಕ್ಕೆ, ಗುಳ್ಳೆ ಮುಂತಾದವುಗಳಿಗೂ ಜೇನು ಹಚ್ಚಿ ಚಿಕಿತ್ಸೆ ಮಾಡುತ್ತಿದ್ದರು.

   ▪ *ಅತಿಸಾರ,* ಕಫ, ಗಂಟಲು ನೋವು, ಅಜೀರ್ಣ, ಕೆಮ್ಮು ಮುಂತಾದ ಖಾಯಿಲೆಗಳಿಗೆ ಜೇನು ಸವಿಯುವುದರಿಂದ ನಿಮಿಷದಲ್ಲೇ ಫಲ ಕಾಣುತ್ತದೆ.

   ▪ *ವಿಷಹಾವು,* ಚೇಳು ಮುಂತಾದ ವಿಷಜಂತುಗಳು ಕಡಿದರೆ, ಅಂತೆಯೇ ನಾಯಿ ಕಚ್ಚಿದರೆ ಜೇನು ಗೂಡಿನಿಂದ ತೆಗೆದ ಕ್ಷಣದಲ್ಲೇ ಬಿಸಿಯಾಗಿ ಸೇವಿಸುವುದರಿಂದ  ಒಳ್ಳೆಯ ಫಲ  ಕಾಣುತ್ತದೆ.

   ▪ *ಚಳಿಗಾಲ* ಮತ್ತು ಮಳೆಗಾಲದಲ್ಲಿ ನೆಗಡಿ ಕಾರಣ ಮೂಗು ಸೋರಿಕೆ ಇರುವುದಾದರೆ ಜೇನನ್ನು ಲಿಂಬೆ ರಸದೊಂದಿಗೆ ಮಿಶ್ರಣ ಮಾಡಿ ಕುಡಿದರೆ ಬಹಳ ಉತ್ತಮ ಫಲ ಸಿಗುತ್ತದೆ.

   ▪ *ಸಿಹಿ ತಿಂಡಿಗಳು* ಜಾಸ್ತಿಯಾಗಿ ತಿನ್ನುವವರಿಗೆ ಹಲ್ಲು ಹುಳು ತಿನ್ನುವುದು ಸ್ವಾಭಾವಿಕ. ಆದರೆ ದಿನಾಲೂ ಜೇನು ಸವಿಯುವವರ ಹಲ್ಲು ಅದಕ್ಕೆ ಬಲಿಯಾಗುವುದಿಲ್ಲ. ಮಾತ್ರವಲ್ಲ ಅವರ ಹಲ್ಲಿನ ದವಡೆಗಳು ಬಲಿಷ್ಠವಾಗಿ ಹಲ್ಲಿಗೆ ಶಕ್ತಿ ಕೂಡ ಕೊಡುತ್ತದೆ.

   ▪ *ಜೇನು ಹನಿ* ನೆಲಕ್ಕೆ ಬಿದ್ದರೆ ಅದು ಅತ್ತಿತ್ತ ಹರಡದೆ ಅಲ್ಲೇ ಗಟ್ಟಿಯಾಗುತ್ತದೆ. ಮಾತ್ರವಲ್ಲ ಸ್ವಲ್ಪ ಸಮಯದ ನಂತರ ಪಾದರಸದಂತೆ ಮಿನುಗುತ್ತದೆ.

   ▪ *ಜೇನು* ತೇವಾಂಶ ಕಡಿಮೆಯಿರುವ ಉಷ್ಣ ವಸ್ತುವಾಗಿದೆ. ಆದ್ದರಿಂದ ಜೇನು ಕುಡಿದರೆ ಬಾಯಾರಿಕೆ ಜಾಸ್ತಿಯಾಗುತ್ತದೆ. ವಾಂತಿಯಾಗುವವನಿಗೆ ಸ್ವಲ್ಪ ಕುಡಿಸಿದರೆ ವಾಂತಿ ಕೂಡಲೇ ನಿಲ್ಲುತ್ತದೆ.

  ▪ *ಒಲೆಯಲ್ಲಿಟ್ಟು* ಬಿಸಿ ಮಾಡಿದರೆ ಅದರ ರುಚಿ ಕಡಿಮೆಯಾಗುತ್ತದೆ. ಸತ್ತು ಮತ್ತು ಶಕ್ತಿ ನಷ್ಟವಾಗುತ್ತದೆ.

   ▪ *ಜೇನು* ನೊಣವನ್ನು ಕನಸಿನಲ್ಲಿ ಕಾಣುವುದು ಜೀವನದಲ್ಲಿ ಐಶ್ವರ್ಯ ಮತ್ತು ಸಮೃದ್ಧಿ ಉಂಟಾಗುವುದರ ಸೂಚನೆಯಾಗಿದೆ. ಒಬ್ಬನಿಗೆ ಅವನ ತಲೆಯ ಮೇಲೆ ಜೇನ್ನೊಣ ಕುಳಿತ ಕನಸು ಕಂಡರೆ ಅಧಿಕಾರದ ಗದ್ದುಗೆಗೆ  ಏರುವುದರ ನಿಶಾನೆಯಾಗಿದೆ.

   ▪ *ಒಬ್ಬನಿಗೆ* ಜೇನು   ಗೂಡಿನಿಂದ ಜೇನನ್ನು ಹೊರ ತೆಗೆಯುವ ಕನಸು ಕಂಡರೆ ಅವನಿಗೆ ಅವನರಿಯದ ಭಾಗದಿಂದ ಅಪಾರ ಸಂಪತ್ತು ದೊರಕಲಿದೆ ಎಂಬುದರ ನಿಶಾನೆಯಾಗಿದೆ.

   ▪ *ಜೇನನ್ನು* ಕನಸಲ್ಲಿ ಕಾಣುವುದೂ ಐಶ್ವರ್ಯದ ಸಂಕೇತವಾಗಿದೆ.‌ ಕಾಣುವ ವ್ಯಕ್ತಿ ಧರ್ಮದಲ್ಲಿ ಭಕ್ತಿ ಇರುವ ವ್ಯಕ್ತಿಯಾಗಿದ್ದರೆ ಅವನ ದೀನೀ ಚಲನವಲನಗಳು ಮತ್ತೂ ಅಭಿವೃದ್ಧಿಯಾಗಲಿದೆ ಎಂಬುದರ ನಿಶಾನೆಯಾಗಿದೆ.  ಸಾಧಾರಣ ವ್ಯಕ್ತಿಯಾಗಿದ್ದರೆ ಅವನನ್ನು ಸಂಪತ್ತು ಮತ್ತು ಐಶ್ವರ್ಯ ಹುಡುಕಿ ಬರಲಿದೆ ಎಂಬುದರ ನಿಶಾನೆಯಾಗಿದೆ. ರೋಗಿಯಾಗಿದ್ದರೆ ಅವನ ರೋಗ ಶಿಫಾ ಆಗಲಿದೆ ಎಂಬುದರ ಸಂಕೇತವಾಗಿದೆ.
  
   ▪ಸಂಗ್ರಹ; ಇಮಾಮ್ ದುಮೈರಿಯ *ಹಯಾತುಲ್ ಹಯವಾನ್,* ಇಮಾಮ್ ಅಬ್‌ಶೀಹಿಯ *ಮುಸ್‌ತತ್‌ರಫ್,* ತತ್ವಜ್ಞಾನಿ ಜಾಹಿಳ್‌ರವರ *ಕಿತಾಬುಲ್ ಹಯವಾನ್,* ಶೈಖ್ ತಂತಾವಿಯವರ *ತಫ್‌ಸೀರುಲ್ ಜವಾಹಿರ್,* ಮತ್ತು ಇಮಾಮ್ ಬಿನ್ ಹಜರ್ ಅಸ್‌ಖಲಾನಿಯ *ಫತ್‌ಹುಲ್ ಬಾರಿ* ಎಂಬ ಗ್ರಂಥಗಳು.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...