ಸ್ವರ್ಗದ ಬಾಗಿಲು
ಸ್ವರ್ಗಕ್ಕೆ ಎಂಟು ಬಾಗಿಲುಗಳಿವೆ. ರತ್ನ ಮತ್ತು ಸ್ವರ್ಣ ಮಿಶ್ರಿತ ಲೋಹದಿಂದ ಇದನ್ನು ನಿರ್ಮಿಸಲಾಗಿದ್ದು, ಲಾ ಇಲಾಹ ಇಲ್ಲಲ್ಲಾಹ್ ಮುಹಮ್ಮದುರ್ರಸೂಲುಲ್ಲಾಹ್ ಎಂದು ಒಂದನೇಯ ಬಾಗಿಲ ಮೇಲೆ ಬರೆಯಲ್ಪಟ್ಟಿದೆ. ಪ್ರವಾದಿಗಳು, ಮುರ್ಸಲ್'ಗಳು, ಹುತಾತ್ಮರು, ಕೊಡುಗೈದಾನಿಗಳು ಮುಂತಾದವರು ಇದರ ಹಕ್ಕುದಾರರು. ಎರಡನೇ ಬಾಗಿಲು ನಮಾಝ್'ಗಾರರಿಗೆ ಸೇರಿದ್ದು. ಇದನ್ನು ಐದು ಹೊತ್ತು ಚೆನ್ನಾಗಿ ವುಳೂ ಮಾಡಿ ಸ್ಥಿರವಾಗಿ ನಮಾಝ್ ನಿರ್ವಹಿಸಿದವರು ಪಡೆಯುತ್ತಾರೆ. ಮೂರನೇ ಬಾಗಿಲು ಕೊಡುಗೈ ದಾನಿಗಳಿಗೆ, ನಾಲ್ಕನೇಯದು ಒಳಿತಿನ ಬೋಧಕರು ಮತ್ತು ಕೆಡುಕಿನ ವಿರೋಧಕರಿಗೆ, ಐದನೇಯ ಬಾಗಿಲು ದೇಹಿಚ್ಚೆಯ ಮೇಲೆ ನಿಯಂತ್ರಣ ಸಾಧಿಸುವವರಿಗೆ, ಆರನೇಯದು ಹಜ್ಜ್ ಉಮ್ರಾ ನಿರ್ವಹಿಸುವವರಿಗೆ, ಏಳನೇಯದು ಯುದ್ದ ಮಾಡುವವರಿಗೆ ಮತ್ತು ಎಂಟನೇಯ ಬಾಗಿಲು ನಿಷಿದ್ಧ ಕಾರ್ಯಗಳಿಂದ ದೂರವಿದ್ದು ಕೊಂಡು ಕುಟುಂಬವನ್ನು ನಿಕಟಗೊಳಿಸುವ ಹೆತ್ತವರಿಗೆ ಪುಣ್ಯ ಮಾಡುವ ಸಜ್ಜನರಿಗೆ ದೊರೆಯುತ್ತದೆ.
ಒಟ್ಟು 8 ವಿಧ ಸ್ವರ್ಗಗಳಿವೆ. 1. ದಾರುಲ್ ಜಲಾಲ್ 2. ದಾರುಸ್ಸಲಾಮ್ 3. ಜನ್ನತುಲ್ ಮಹ್'ವಾ 4. ಜನ್ನತುಲ್ ಖುಲ್ದ್ 5. ಜನ್ನತುನ'ಈಮ್ 6. ಜನ್ನತುಲ್ ಫಿರ್ಧೌಸ್ 7. ಜನ್ನತು ಅದ್'ನ್ 8. ದಾರುಲ್ ಕರಾರ್.
ಪವಿತ್ರ ಕುರ್'ಆನ್ ಸಜ್ಜನರಿಗೆ ತಯಾರಿಸಲಾದ ಸ್ವರ್ಗದ ಕುರಿತು ಹೇಳುವುದು ನೋಡಿರಿ,
*ಖಂಡಿತ ಧರ್ಮ ನಿಷ್ಠರು ಸ್ವರ್ಗೋದ್ಯಾನಗಳಲ್ಲಿಯೂ ಸುಖ ಸೌಭಾಗ್ಯಗಳಲ್ಲಿಯೂ ಇರುವರು.*
*ಅವರ ಪ್ರಭು ಅವರಿಗೆ ದಯಪಾಲಿಸಲಿರುವ ವಸ್ತುಗಳಿಂದ ಸುಖಾನುಭವ ಹೊಂದುವರು. ಮತ್ತು ಅವರ ಪ್ರಭು ಅವರನ್ನು ನರಕ ಶಿಕ್ಷೆಯಿಂದ ರಕ್ಷಿಸುವನು*
*ನೀವು ಮಾಡುತ್ತಲಿದ್ದ ಕರ್ಮಗಳ ಪ್ರತಿ ಫಲವಾಗಿ ಸಂತೋಷದಿಂದ ತಿನ್ನಿರಿ, ಕುಡಿಯಿರಿ(ಎಂದು ಅವರೊಂದಿಗೆ ಹೇಳಲ್ಪಡುವುದು)*
*ಅವರು ಸಾಲು ಸಾಲಾಗಿ ಇರಿಸಲಾಗಿರುವ ಪೀಠಗಳಲ್ಲಿ ಒರಗಿ ಕುಳಿತಿರುವರು ಮತ್ತು ವಿಶಾಲಾಕ್ಷಿಗಳಾದ ಸುಂದರಿಯರನ್ನು ಅವರಿಗೆ ನಾವು ವಿವಾಹ ಮಾಡಿಕೊಡುವೆವು*
*ಸತ್ಯವಿಶ್ವಾಸಿಗಳನ್ನೂ ಅವರನ್ನು ಸತ್ಯವಿಶ್ವಾಸದಲ್ಲಿ ಅವರ ಸಂತಾನಗಳನ್ನೂ ನಾವು ಅವರೊಂದಿಗೆ ಸ್ವರ್ಗದಲ್ಲಿ ಸೇರಿಸುವೆವು ಮತ್ತು ನಾವು ಅವರ ಕರ್ಮದಲ್ಲೇನೂ ಕಡಿತಗೊಳಿಸಲಾರೆವು. ಪ್ರತಿಯೊಬ್ಬನೂ ತನ್ನ ಸಂಪಾದನೆಗೆ ಅಡವಿಡಲ್ಪಟ್ಟವನಾಗಿದ್ದಾನೆ.*
*ಅವರು ಇಚ್ಚಿಸುವ ಹಣ್ಣುಗಳನ್ನೂ, ಮಾಂಸವನ್ನೂ ನಾವು ಅವರಿಗೆ ಯಥೇಚ್ಚವಾಗಿ ಒದಗಿಸುವೆವು*
*ಅವರು ಪರಸ್ಪರ ಪಾನಪಾತ್ರಗಳನ್ನು ಬದಲಾಯಿಸಿಕೊಳ್ಳುವರು. ಯಾವುದೇ ಅಸಂಬದ್ಧ ಮಾತಾಗಲೀ, ದುರ್ನಡೆಯಾಗಲೀ ಅಲ್ಲಿರಲಾರದು.*
*ಅವರಿಗಾಗಿಯೇ ಮೀಸಲಿರುವ ಬಾಲಕರು (ಅವರ ಸೇವೆಗಾಗಿ) ಅವರನ್ನು ಸುತ್ತುತ್ತಲಿರುವರು. ಅವರು ಚಿಪ್ಪಿಯೊಳಗಿನ ಮುತ್ತಿನಂತೆ ಸುಂದರರಾಗಿರುವರು*
*ಅವರು ಪರಸ್ಪರ ಪ್ರಶ್ನಿಸುತ್ತಾ ಅನ್ಯೋನ್ಯತೆಯಿಂದ ಅಭಿಮುಖರಾಗುವರು (ಸೂರಾ : ಅತ್ವ್ತೂರ್ 17 : 25)*
*ರತ್ನಗಳ ದಪ್ಪ ನಾರುಗಳಿಂದ ಹೊಸೆಯಲಾದ ಮಂಚಗಳಲ್ಲಿರುವರು*
*ಅವರದರಲ್ಲಿ ಎದುರುಬದುರಾಗಿ ಸುಖಾಸೀನರಾಗಿರುವರು*
*ಚಿರ ಬಾಲಕರು(ಸೇವೆಗಾಗಿ)ಅವರ ನಡುವೆ ಸುತ್ತುತ್ತಿರುವರು*(ಸೇವಕರಾಗಿ ಸ್ವರ್ಗದಲ್ಲೇ ಸೃಷ್ಟಿಯಾದ ಬಾಲಕರಿರುವರು. ಎಂದೆಂದಿಗೂ ಇವರು ಬಾಲಕರಾಗಿಯೇ ಇರುವುದರಿಂದ ಚಿರಬಾಲಕರು ಎನ್ನಲಾಗಿದೆ. ಅವರು ಚಿಪ್ಪಿನೊಳಗಿನ ಮುತ್ತಿನಂತೆ ಸುಂದರವಾಗಿರುವರು)
*ಉದಕದಿಂದ ಸುರೆ ತುಂಬಿಸಿಕೊಂಡ ಪಾತ್ರೆಗಳನ್ನು, ಹೂಜಿಗಳನ್ನು ಮತ್ತು ಪಾನ ಲೋಟಗಳನ್ನು ಹಿಡಿದುಕೊಂಡು ಓಡಾಡುತ್ತಿರುವರು(ಈ ಬಾಲಕರು)*
*ಅದನ್ನು ಕುಡಿದಾಗ ಅವರ ತಲೆ ತಿರುಗಲಾರದು ಮತ್ತು ಅವರಿಗೆ ಅಮಲೇರಲಾರದು*
*ಅವರು ಇಷ್ಟಪಟ್ಟು ಆಯ್ಕೆ ಮಾಡಿಕೊಳ್ಳುವಂತಹ ತರತರದ ಹಣ್ಣುಹಂಪಲುಗಳನ್ನು (ಆ ಬಾಲಕರು) ತಂದಿರಿಸುವರು.*
*ಅವರು ಆಸೆ ಪಡುವ ಪಕ್ಷಿಗಳ ಮಾಂಸದೊಂದಿಗೆ(ಆ ಬಾಲಕರು ಓಡಾಡುವರು)*
*ಅವರಿಗಾಗಿ ಸುರಸುಂದರ ಬೊಗಸೆ ಕಂಗಳ ಅಪ್ಸರೆಯರಿರುವರು.*
*ಅವರು ಚಿಪ್ಪಿಯೊಳಗೆ ಬಚ್ಚಿಡಲಾದ ಮುತ್ತುಗಳಂತಿರುವರು*
*ಇವೆಲ್ಲ ಅವರು ಭೂಲೋಕದಲ್ಲಿ ಮಾಡಿತ್ತಿದ್ದ ಸತ್ಕರ್ಮಗಳ ಪ್ರತಿಫಲಗಳು*
*ಅಲ್ಲಿ ಅವರು ಯಾವುದೇ ಅಸಭ್ಯ ಅಥವಾ ಪಾಪಕರ ಮಾತನ್ನು ಕೇಳಲಾರರು*
*ಸಲಾಂ ಸಲಾಂ ಎಂಬ ಮಾತಿನ ಹೊರತು (ಸೂರಾ : ಅಲ್ ವಾಕಿಅ 15 : 26)*
*ಅಲ್ಲಾಹನು ನಮ್ಮೆಲ್ಲರನ್ನೂ ಸ್ವರ್ಗ ಪ್ರವೇಶಿಸುವವರ ಸಾಲಿನಲ್ಲಿ ಸೇರಿಸಲಿ ಆಮೀನ್*
Comments