ಟಿಪ್ಪು ಸುಲ್ತಾನ್ (ಖ.ಸಿ) ಮಹಾನ್ ದೇಶಪ್ರೇಮಿ
✍🏻ಹಾರಿಸ್ ಪೆರಿಯಪಾದೆ
{ಭಾಗ 2}
*ಟಿಪ್ಪು ಸುಲ್ತಾನರ(ಖ.ಸಿ) ಮಂಗಳೂರು ಯುದ್ಧ*
ಮಂಗಳೂರಿನ ಮೂಲಕ ಮೈಸೂರು ರಾಜ್ಯವನ್ನು ಕಬಳಿಸುವ ಹಂಚಿಕೆಯಲ್ಲಿ ಬ್ರಿಟಿಷರು ಮಂಗಳೂರನ್ನು ಮುತ್ತಿದ್ದರು. ವಿಷಯ ತಿಳಿದ ಟಿಪ್ಪು ಸುಲ್ತಾನ್ (ಖ.ಸಿ) ಶ್ರೀರಂಗಪಟ್ಟಣದಿಂದ ಸೈನ್ಯ ಸಮೇತ ಮಂಗಳೂರಿಗೆ ಯಾತ್ರೆ ಬೆಳೆಸಿದರು, ಆಂಗ್ಲರ ದಾಳಿಯಿಂದ ತತ್ತರಿಸಿದ ಕರಾವಳಿಯ ಜನತೆ ಟಿಪ್ಪುರವರನ್ನು
ಬರಮಾಡಿ ಪೂರ್ಣ ಸಹಕಾರ ಕೊಟ್ಟರು. ದೀರ್ಘ ಪ್ರಯಾಣದ ಬಳಲಿಕೆಯನ್ನು ಲೆಕ್ಕಿಸದೆ ಬ್ರಿಟಿಷರ ಮೇಲೆರಗಿ ಟಿಪ್ಪು ಸುಲ್ತಾನರ(ಖ.ಸಿ) ಸೈನ್ಯವು ಬ್ರಿಟಿಷರನ್ನು ಹೊಡೆದೋಡಿಸಿತು. ಬ್ರಿಟಿಷರು ದಿಕ್ಕಾಪಾಲಾಗಿ ಚದುರಿದರು. ತಮ್ಮ ಆಯುಧ ವಾಹನಗಳನ್ನು ತ್ಯಜಿಸಿ ಜೀವಗಳ್ಳರಾಗಿ ಪಲಾಯನಗೈದರು. ನಲವತ್ತಾರು ಅಧಿಕಾರಿಗಳು, 680ಬ್ರಿಟಿಷ್ ಸೈನಿಕರು ದಂಡ ನಾಯಕರು, ಆರು ಸಾವಿರದಷ್ಟು ಸಿಪಾಯಿಗಳು ಟಿಪ್ಪು ಸುಲ್ತಾನರ(ಖ.ಸಿ) ವಶವಾದರು.
*ಎರಡನೇ ಮೈಸೂರು ಯುದ್ಧ*
ಅನಾಮಧೇಯ ಮೈಸೂರಿಗೆ ಹೈದರಾಲಿಯವರಿಂದ ಅಂತರರಾಷ್ಟ್ರೀಯ ಮನ್ನಣೆ ದೊರಕುವಂತಾಯಿತು.
ಜೋನ್ ಪಿದ್ರೊಡ ಎಂಬವ ತನ್ನ ಮೇಲಾಧಿಕಾರಿಗೆ ಪತ್ರವೊಂದರಲ್ಲಿ "ಹೈದರಾಲಿಯು ಭೂಬಲದಲ್ಲಿ ಪ್ರಚಂಡ ನಾಗಿದ್ದಾನೆ. ಜಲಬಲದಲ್ಲೂ ಅಷ್ಟೇ ಬಲಶಾಲಿಯಾಗುತ್ತಿದ್ದಾನೆ.
ಆತನ ನೌಕಾದಳದ ಸಂರಕ್ಷಣೆಗಾಗಿ ಏಷ್ಯಾದಲ್ಲೇ ಬಲಯುತವಾದ ನೌಕಾ ತಾಣ ನಿರ್ಮಾಣವಾಗುತ್ತಿದೆ. ಹೈದರನನ್ನು ಎದುರಿಸಿ ನಾವು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದೇವೆ." ಈ ರೀತಿಯಾಗಿ ಹೈದರಾಲಿಯವರ ಸಾಮರ್ಥ್ಯವನ್ನು ವಿವರಿಸಿದ್ದಾನೆ.
ಎರಡನೆಯ ಮೈಸೂರು ಯುದ್ಧದಲ್ಲಿ ಹೈದರಾಲಿಯು ವೀರಾವೇಶದಿಂದ ಹೋರಾಡುತ್ತಾರೆ. ಈ ಸಂದರ್ಭದಲ್ಲಿ ಅಕಾಲ ಕಾಯಿಲೆಗೊಳಗಾಗಿ ವೀರ ಮರಣವನ್ನಪ್ಪುತ್ತಾರೆ. ಆ ಸಂದರ್ಭದಲ್ಲಿ ಮಗ ಟಿಪ್ಪು ಸುಲ್ತಾನರೊಂದಿಗೆ(ಖ.ಸಿ) "ಮಗನೇ ಈ ಸಾಮ್ರಾಜ್ಯವನ್ನು ನಿನಗೊಪ್ಪಿಸುತ್ತಿದ್ದೇನೆ. ಇದನ್ನು ನಾನು ತನ್ನ ಪೂರ್ವಜರಿಂದ ಪಡೆದುದಲ್ಲ. ಯಾದವೀ ಕಲಹದಿಂದ ಪಡೆದುಕೊಂಡ ಸಾಮ್ರಾಜ್ಯದ ಅಡಿಪಾಯ ಯಾವಾಗಲೂ ಬಿರುಕು ಬಿಟ್ಟಿರುತ್ತದೆ. ಈ ನಾಡಿನ ಆಂತರಿಕ ವ್ಯವಹಾರಗಳ ಬಗ್ಗೆ ನೀನು ಭಯಪಡಬೇಕಾಗಿಲ್ಲ. ಆದರೆ ನೀನು ದೂರದೃಷ್ಟಿ ಹೊಂದಿರಬೇಕು. ಔರಂಗಜೇಬನ ಪತನ ನಂತರ ಏಷ್ಯಾ ಖಂಡದಲ್ಲಿ ಭಾರತದ ಸ್ಥಾನ ಕುಸಿದಿದೆ. ಈ ನಮ್ಮ ಭೂಮಿ ಹಲವು ಪ್ರಾಂತ್ಯಗಳಾಗಿ ವಿಭಜನೆಗೊಂಡಿದೆ. ಅವರು ಪರಸ್ಪರ ಕಚ್ಚಾಡುತ್ತಿದ್ದಾರೆ. ಜನರ ದೇಶಪ್ರೇಮ ನಶಿಸಿಹೋಗಿದೆ. ಈ ಸಾಮ್ರಾಜ್ಯವನ್ನು ಉಳಿಸಲು ಎಲ್ಲ ಶಕ್ತಿಗಳನ್ನು ಒಗ್ಗೂಡಿಸುವ ನಿನ್ನ ಈ ಯೋಜನೆಗೆ ದೊಡ್ಡ
ಅಡಚಣೆ ಯುರೋಪಿಯನ್ನರು. ಭಾರತದ ಬಗ್ಗೆ ಅವರಿಗೆ ಇರುವ ಅಸೂಯೆಯನ್ನು ನೀನು ಸೋಲಿಸಲೇಬೇಕು. ಬ್ರಿಟಿಷರನ್ನು ನಿರಂತರ ಸಮರಗಳಿಂದ ಬಲಗೊಳಿಸುವ ಅಗತ್ಯವಿದೆ" ಎಂದು ಹೈದರಾಲಿಯವರು ಟಿಪ್ಪು ಸುಲ್ತಾನರನ್ನು (ಖ.ಸಿ) ಬ್ರಿಟಿಷರ ವಿರುದ್ಧ ಹೋರಾಡಲು ಪ್ರಚೋದಿಸುತ್ತಾರೆ.
(ಮುಂದುವರಿಯುವುದು)
*✍🏻ಹಾರಿಸ್ ಪೆರಿಯಪಾದೆ*
Comments