ಇಸ್ಲಾಂ, ತಲಾಖ್ ನ್ನು ಪ್ರೋತ್ಸಾಹಿಸುವ ಧರ್ಮವೆಂದೂ, ಇಸ್ಲಾಮಿನಲ್ಲಿ ತಲಾಖ್ ದುರ್ಬಳಕೆ ಅಧಿಕವೆಂದೂ, ಇಸ್ಲಾಂ ಮಹಿಳಾ ವಿರೋಧಿ ಎಂದೆಲ್ಲಾ ಕೆಲವರು ಆರೋಪಿಸುತ್ತಾರೆ. ಅದಕ್ಕವರು ಕೊಡುವ ಸಬೂಬು, ಇಸ್ಲಾಮಿನಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಖ್.
*ಎಲ್ಲಾ ಧರ್ಮದಲ್ಲೂ ವಿಚ್ಚೇದನ ದುರ್ಬಳಕೆ ಆಗುತ್ತಿರುವಾಗ, ಮುಸ್ಲಿಮರಲ್ಲಿ ಮಾತ್ರ ಅಧಿಕವೆಂಬ ವಾದದಲ್ಲಿ ಹುರುಳಿಲ್ಲ. ಮುಸ್ಲಿಮರಲ್ಲಿ ಕೆಳವರಿಂದಾಗುವ ತಲಾಖ್ ದುರ್ಬಳಕೆಗೆ ಇಸ್ಲಾಮಿನ ಕಾನೂನನ್ನು ದೂರುವುದಾದರೆ, ಮುಸ್ಲಿಮರಿಗಿಂತಲೂ ಹೆಚ್ಚಾಗಿ ಮುಸ್ಲಿಮೇತರರಲ್ಲಿ ಆಗುತ್ತಿರುವ ವಿಚ್ಚೇದನದ ದುರ್ಬಳಕೆಗೆ ಯಾರನ್ನು ದೂರಬೇಕು?.*
(ಇತ್ತೀಚೆಗೆ ಹೊರಬಂದ ವಿಶ್ವವಾಣಿಯ ಸಮೀಕ್ಷೆಯ ಪ್ರಕಾರ, ಭಾರತದಲ್ಲಿ ವಿಚ್ಚೇದಿತ ಮಹಿಳೆಯರಲ್ಲಿ ಶೇ, 68 ಹಿಂದೂ ಗಳಾಗಿದ್ದರೆ, ಮುಸ್ಲಿಮರ ಸಂಖ್ಯೆ ಶೇಕಡ 23.3 ಮಾತ್ರ.)
*ಇನ್ನು ಮುಸ್ಲಿಮರಲ್ಲಿನ ತಲಾಖ್ ದುರ್ಬಳಕೆಗೆ ಇಸ್ಲಾಮಿನ ಕಾನೂನು ಕಾರಣವಾಗುವುದಾದರೆ, ತಲಾಖ್ ಅತ್ಯಂತ ಹೆಚ್ಚು ದುರ್ಬಳಕೆ ಆಗಬೇಕಾದದ್ದು ಮತ್ತು ಮಹಿಳೆಯರು ಅತ್ಯಂತ ಹೆಚ್ಚು ದೌರ್ಜನ್ಯಕ್ಕೊಳಗಾಗ ಬೇಕಾದದ್ದು ಇಸ್ಲಾಮಿಕ್ ಶರಿಹತ್ ಕಾನೂನು ಜಾರಿಯಲ್ಲಿರುವ ಸೌದಿ ಅರೇಬಿಯಾದಂತಹ ರಾಷ್ಟ್ರದಲ್ಲಿ. ಆದರೆ, ಅಲ್ಲಿನ ಮಹಿಳೆಯರು ಇತರ ರಾಷ್ಟ್ರಗಳಲ್ಲಿನ ಮಹಿಳೆಯರಿಗಿಂತಲೂ ಹೆಚ್ಚು ಸುರಕ್ಷಿತರು, ಮತ್ತು ಸಂತೃಪ್ತರು. ಅಲ್ಲಿ ವಿಚ್ಚೇದನಕ್ಕಾಗಿ ಮನವಿ ಮಾಡುವ ಸ್ತ್ರೀಯರ ಸಂಖ್ಯೆಗಿಂತಲೂ, ತಲಾಖ್ ಉಚ್ಚರಿಸುವ ಪುರುಷರ ಸಂಖ್ಯೆ ಅದೆಷ್ಟೋ ಕಡಿಮೆಯೇ.*
ಇಸ್ಲಾಮಿಕ್ ಶರಿಹತ್ ಕಾನೂನು ಜಾರಿ ಯಲ್ಲಿರುವ (ಸೌದಿ ಅರೇಬಿಯಾ ದಂತಹ) ರಾಷ್ಟ್ರದಲ್ಲಿ, ಪುರುಷ ನಾದವನು ತಲಾಖ್ ಉಚ್ಚರಿಸುವುದು ಅಷ್ಟೊಂದು ಸುಲಭವಲ್ಲ.
*ಇಸ್ಲಾಮಿನಲ್ಲಿ ವರದಕ್ಷಿಣೆಗೆ ವಿರೋಧವಿದೆ, ವಧು ದಕ್ಷಿಣೆ (ಮಹರ್) ಕಡ್ಡಾಯವಾಗಿದೆ. ಒಬ್ಬ ಪುರುಷ ಮದುವೆಯಾಗಬೇಕಾದರೆ, ಹೆಣ್ಣಿಗೆ ಕಡ್ಡಾಯವಾಗಿ "ಮಹರ್" (ವಧು ದಕ್ಷಿಣೆ) ಕೊಡಬೇಕು. ಮಹರ್ ಅದು ಮಹಿಳೆಯ ಹಕ್ಕು. ಅದರಲ್ಲಿ ಆಕೆ ತನಗೆ ಬೇಕಾದಷ್ಟು ಕೇಳಿ ಪಡೆಯಲು ಸ್ವತಂತ್ರಳು.*
ಉದಾಹರಣೆಗೆ, ಒಂದು ಹೆಣ್ಣು ಮಹರ್ (ವಧು ದಕ್ಷಿಣೆ) ರೂಪದಲ್ಲಿ 2-3 ಲಕ್ಷಕ್ಕೆ ಬೇಡಿಕೆ ಇಡುತ್ತಾಳೆಂದು ಇಟ್ಟುಕೊಳ್ಳಿ. ಈ ಬೇಡಿಕೆಯನ್ನು ಪೂರೈಸಲು ಅವಳ ಭಾವಿ ಪತಿಯಾಗುವವನು ಸಾಕಷ್ಟು ಕಷ್ಟ ಬಂದಿರುತ್ತಾನೆ. ಎಲ್ಲವನ್ನೂ ಸಹಿಸಿ, 2-3 ಲಕ್ಷ ಹೊಂದಿಸಿ ಮದುವೆಯಾಗುವ ಪುರುಷ, ನಂತರ ಯಾವ ಕಾರಣಕ್ಕೂ ಆಕೆಯನ್ನು ತಲಾಖ್ ಹೇಳಲು ಬಯಸುವುದಿಲ್ಲ. ಅದೆಂತಹ ಸಮಸ್ಯೆಯಿದ್ದರೂ ಹೊಂದಿಕೊಂಡು ಹೋಗಲು ಇಚ್ಚಿಸುತ್ತಾನೆ. ಒಂದುವೇಳೆ ತಲಾಖ್ ನಡೆದರೆ, ಮರು ಮದುವೆಯಾಗಲು ತಾನು ಇನ್ನಷ್ಟು ಮಹರ್ ಸಂಪಾದಿಸಲು ಕಷ್ಟಪಡಬೇಕಾಗುತ್ತದೆ, ಅದರಿಂದ ಇನ್ನಷ್ಟು ಸಂಕಷ್ಟಕ್ಕೊಳಗಾಗುವುದು ತಾನೇ ಎಂಬ ಅರಿವು ಆತನಲ್ಲಿ ಇರುತ್ತದೆ. ಹಾಗಾಗಿ, ತಲಾಖ್ ನ ದುರುದ್ದೇಶ ಆತನ ಬಳಿ ಸುಳಿಯಲು ಸಾಧ್ಯವೇ ಇಲ್ಲ. ಅದಕ್ಕೆ ವಾಟ್ಸಪ್, ಫೇಸ್ಬುಕ್ ಅಥವಾ, ಇನ್ನಿತರ ರೂಪದ ತಲಾಖ್ ಎಂಬ ವ್ಯತ್ಯಾಸವೇನೂ ಇರುವುದಿಲ್ಲ. ಎಲ್ಲವೂ ಒಂದೇ ರೀತಿ. ತಲಾಖ್ ಅದೆಷ್ಟು ಸುಲಲಿತವಾಗಿದ್ದರೂ, ಇಸ್ಲಾಮಿಕ್ ಸಮಾಜದಲ್ಲಿ ಅದು ದುರುಪಯೋಗದಿರಲು ಈ ಅಂಶಗಳೇ ಪ್ರಮುಖ ಕಾರಣ.
*ಶರಿಹತ್ ಕಾನೂನು ಜಾರಿಯಲ್ಲಿರುವ ಮುಸ್ಲಿಂ ರಾಷ್ಟ್ರಗಳಲ್ಲಿ, ಕಾರಣಾಂತರಗಳಿಂದ ತಲಾಖ್ ನಡೆದರೂ, ಅಥವಾ ಕಾರಣ ರಹಿತವಾಗಿ ತಲಾಖ್ ನಡೆದರೂ, ಅದರಿಂದ ಹೆಣ್ಣಿನ ಬಾಳು ದುಸ್ಥರವಾಗುವಂತಹ ಪ್ರಮೇಯವೇ ಬರುವುದಿಲ್ಲ. ಯಾಕೆಂದರೆ, ಮದುವೆ ಸಂದರ್ಭದಲ್ಲಿ ಲಕ್ಷಲಕ್ಷ ಮಹರ್ ಪಡೆಯುವ ಹೆಣ್ಣು, ನಂತರ ತಲಾಖ್ ಹೇಳಲ್ಪಟ್ಟರೆ, ಪಡೆದ ಮಹರನ್ನು (ವಧು ದಕ್ಷಿಣೆ) ಹಿಂತಿರುಗಿಸಬೇಕಾಗಿಲ್ಲ. ತದನಂತರ, ಆಕೆಗೆ ಮರು ಮದುವೆಯಾಗುವ ಅವಕಾಶವಿದ್ದು, ಅದರಲ್ಲೂ ಮತ್ತೊಮ್ಮೆ ಮಹರ್ (ವಧು ದಕ್ಷಿಣೆ) ಪಡೆಯುವ ಅವಕಾಶವನ್ನು ಪಡೆಯುತ್ತಾಳೆ. ಇದರಿಂದ ಹೆಣ್ಣು ಇನ್ನಷ್ಟು ಸುಸ್ಥಿತಿಗೆ ತಲುಪುತ್ತಾಳೆಯೇ ಹೊರತು, ತಲಾಖ್ ನಿಂದ ಹೆಣ್ಣಿನ ಜೀವಜ ದುಸ್ಥರವಾಗುವಂತಹ ಪ್ರಮೇಯವೇ ಉದ್ಭವಿಸುವುದಿಲ್ಲ.*
ಇಸ್ಲಾಮಿನಲ್ಲಿ, ಪುರುಷನಿಗೆ ತನ್ನ ಹೆಂಡತಿಯನ್ನು ತಲಾಖ್ ಹೇಳಲು ಅವಕಾಶ ವಿದ್ದಂತೆ, ಹೆಣ್ಣಿಗೂ ತನ್ನ ಗಂಡನನ್ನು ವಿಚ್ಚೇದಿಸುವ ಸಮಾನ ಅವಕಾಶವಿದೆ. ಆದರೆ, ಅದು ಪುರುಷನಿಗೆ ಇರುವಂತೆ ನೇರ ವಿಚ್ಛೇದಿಸುವ ಅವಕಾಶವಲ್ಲ. ತನ್ನ ಗಂಡನನ್ನು ವಿಚ್ಚೇದಿಸಬೇಕಾದರೆ, ಆಕೆಗೆ ಕೆಲವೊಂದು ಷರತ್ತುಗಳು ಅನ್ವಯವಾಗುತ್ತದೆ. ಇದು ಪಕ್ಷಪಾತ ಧೋರಣೆಯಲ್ಲವೇ ಎಂದು ಕೇಳಬಹುದು. ಅದಕ್ಕೂ ಇಸ್ಲಾಮಿನಲ್ಲಿ ಸೂಕ್ತವಾದ ಕಾರಣವೂ ಇದೆ.
*ಮಹಿಳೆಯರು ಪುರುಷರಂತಲ್ಲ. ಅವರಲ್ಲಿ ದುಡುಕು ಸ್ವಭಾವ ಸ್ಪಲ್ಪ ಜಾಸ್ತಿ. ಸಣ್ಣಪುಟ್ಟ ವಿಷಯಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರಲ್ಲಿ ಮಹಿಳೆಯರ ಸಂಖ್ಯೆಯೇ ಅಧಿಕ. ಅದು ಅವರ ದುಡುಕು ಸ್ವಭಾವದ ಪರಿಣಾಮ. ಒಂದು ವೇಳೆ ಮಹಿಳೆಗೆ ತನ್ನ ಗಂಡನನ್ನು ನೇರ ವಿಚ್ಚೇದಿಸುವ ಅವಕಾಶವಿದ್ದಿದ್ದರೆ, ಸಣ್ಣಪುಟ್ಟ ವಿಷಯಕ್ಕೂ ದುಡುಕಿ, ಗಂಡನನ್ನು ವಿಚ್ಚೇದಿಸುವಂತಹ ಅಪಾಯವನ್ನು ನಿರಾಕರಿಸುವಂತಿರಲಿಲ್ಲ.*
ಇನ್ನು ಈ ಕಾರಣವನ್ನು ಬದಿಗಿಟ್ಟರೂ, ಷರತ್ತು ರಹಿತವಾದ, ನೇರ ವಿಚ್ಚೇದನದ ಅವಕಾಶವೇನಾದರು ಮಹಿಳೆಗೆ ಇದ್ದಿದ್ದರೆ, ಹಣದ ಆಸೆಗಾಗಿ, ವಿನಾಕಾರಣ ಪತಿಯನ್ನು ವಿಚ್ಚೇದಿಸಿ, ಮರು ಮದುವೆಯಾಗಿ, ಮತ್ತೊಮ್ಮೆ "ಮಹರ್" (ವಧು ದಕ್ಷಿಣೆ) ಪಡೆಯುವ ಅವಕಾಶವನ್ನು ಆಕೆ ದುರುಪಯೋಗ ಪಡಿಸುವ ಸಾಧ್ಯತೆಯೂ ಇತ್ತು.
*ತಲಾಖ್ ಸುಲಲಿತವಾಗಿದೆ ಎಂದು, ಪುರುಷನಾದವನು ತನ್ನ ಪತ್ನಿಯನ್ನು ಬೇಕಾಬಿಟ್ಟಿಯಾಗಿ ತಲಾಖ್ ಹೇಳುವಂತೆಯೂ ಇಲ್ಲ, ಮತ್ತೊಮ್ಮೆ ಮಹರ್ ಪಡೆಯಬಹುದೆಂಬ ದುರುದ್ದೇಶದಿಂದ ಮಹಿಳೆ, ತನಗಿರುವ ವಿಚ್ಚೇದನದ ಅವಕಾಶವನ್ನು ದುರುಪಯೋಗ ಪಡಿಸುವಂತೆಯೂ ಇಲ್ಲ. ಈರ್ವರಿಗೂ, ಪರಸ್ಪರರಿಗೆ ಅನ್ಯಾಯವೆಸಗಳು ಅವಕಾಶವಿಲ್ಲದಂತಹ, ಅಷ್ಟೊಂದು ಸುಭದ್ರವಾದ, ಸುವ್ಯವಸ್ಥಿತವಾದ ಕಾನೂನಾಗಿದೆ ಇಸ್ಲಾಮಿನದ್ದು.*
ಇನ್ನು ಭಾರತದಂತಹ ರಾಷ್ಟ್ರದಲ್ಲಿ ವಿಚ್ಚೇದನ ಹೆಚ್ಚಾಗಿ ದುರುಪಯೋಗ ವಾಗುವುದು ಹಣ ಮತ್ತು ಹೆಣ್ಣಿಗಾಗಿ. ಹಣದ ದಾಹವನ್ನು ತಡೆಯಲು ವರದಕ್ಷಿಣೆ ಪದ್ಧತಿಗೆ ನಿಷೇಧ ಹೇರಬೇಕು ಮತ್ತು ಕಠಿಣವಾದ ಶಿಕ್ಷೆಯನ್ನು ವಿಧಿಸಬೇಕು. ಹೆಣ್ಣಿಗಾಗಿ ವಿಚ್ಚೇದಿಸುವುದನ್ನು ತಡೆಯಲು ಮಹರ್ (ವಧು ದಕ್ಷಿಣೆ) ಪದ್ಧತಿಯನ್ನು ಕಡ್ಡಾಯಗೊಳಿಸಬೇಕು ಮತ್ತು ಪರಿಣಾಮಕಾರಿ ಯಾಗಿರಬೇಕು. ಅದರೊಂದಿಗೆ, ಮಹಿಳಾ ಸಂರಕ್ಷಣೆಗಾಗಿ ಸುಭದ್ರವಾದ ಕಾನೂನನ್ನು ರೂಪಿಸಬೇಕು. ಇದ್ಯಾವುದನ್ನೂ ಮಾಡದ ಹೊರತು, ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಯುವ ಭರವಸೆಯು, ಕನಸಾಗಿಯೇ ಉಳಿಯುವುದರಲ್ಲಿ ಸಂಶಯವಿಲ್ಲ.
*ರೋಗಕ್ಕೆ ಮದ್ದು ಮಾಡಿದಂತೆ, ರೋಗ ಹರಡಲು ಕಾರಣವಾಗುವಂತಹ ಅಂಶವನ್ನು ಪತ್ತೆ ಹಚ್ಚಿ, ಅದನ್ನು ತಡೆಗಟ್ಟುವ ಕೆಲಸವನ್ನು ಕೂಡಾ ಮಾಡುವುದು ಎಷ್ಟು ಮುಖ್ಯವೋ, ಅದರಂತೆ, ವಿಚ್ಛೇದನಕ್ಕೆ ಕಾರಣವಾಗುವ ಅಂಶಗಳನ್ನು ಪತ್ತೆಹಚ್ಚಿ ಮೊದಲು ಅದನ್ನು ನಿಯಂತ್ರಿಸಿದರೆ, ವಿಚ್ಛೇದನದಿಂದ ಮಹಿಳೆಯರಿಗಾಗುವ ಅನ್ಯಾಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.*
ಇಲ್ಲದಿದ್ದರೆ, ರೋಗ ಉಲ್ಬಣಕ್ಕೆ ಡಾಕ್ಟರ್ ಮತ್ತು ಮದ್ದನ್ನು ದೂರಿದಂತೆ, ಇಲ್ಲಿನ ಅವ್ಯವಸ್ಥೆಯ ಕಾರಣದಿಂದ ಮಹಿಳೆಯರ ಮೇಲಾಗುವ ದೌರ್ಜನ್ಯಕ್ಕೆ ಧರ್ಮದ ಕಾನೂನನ್ನು ದೂರುವಂತಹ ಗತಿಕೇಡಲ್ಲದೆ ಇನ್ನೇನೂ ಬರಲಾರದು.
*ಮುಹಮ್ಮದ್ ಇಕ್ಬಾಲ್, ಮಂಗಳಪೇಟೆ.*
Comments