*ಸೂರ್ಯೋದಯಕ್ಕೆ ಮೊದಲೇ ನಿದ್ದೆಯಿಂದ ಎದ್ದೇಳುವ ಕಾಗೆ*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ತನ್ನ ನಾಳಿನ ಬದುಕು ನೆಮ್ಮದಿ ಮತ್ತು ಸುಖಕರವಾಗಿರಬೇಕೆಂಬ ಉದ್ದೇಶದಿಂದ ನಾಳೆಗೆ ಬೇಕಾಗಿ ಆಹಾರ ಶೇಖರಣೆ ಮಾಡಿಡುವ ಒಂದು ಜೀವಿಯಾಗಿದೆ ಕಾಗೆ. ಪ್ರಪಂಚದ ಎಲ್ಲಾ ಕಡೆಗಳಲ್ಲೂ ಇರುವ ಈ ಕಪ್ಪು ಬಣ್ಣದ ಪಕ್ಷಿಯ ಬಗ್ಗೆ ಗೊತ್ತಿಲ್ಲದವರು ಬಹುಶಃ ಯಾರೂ ಇರಲಿಕ್ಕಿಲ್ಲ.
▪ಶತಾಯುಷಿಯಾದ ಕಾಗೆಯ ಆಯುಷ್ಯದ ಬಗ್ಗೆ ಹಲವಾರು ಅಭಿಪ್ರಾಯಗಳಿದ್ದರೂ ಶತಕ ದಾಟೂವುದರಲ್ಲಿ ಯಾವುದೇ ಸಂಶಯವಿಲ್ಲ. ಮಾತ್ರವಲ್ಲ ಕೆಲವು ಬಿಳಿ ಮಿಶ್ರಿತ ಚುಕ್ಕೆ ಇರುವ ಕಪ್ಪು ಕಾಗೆಗಳು ಸಾವಿರ ವರ್ಷಗಳ ತನಕವೂ ಬದುಕುತ್ತದೆ. ಆ ಕಾರಣಕ್ಕಾಗಿರಬಹುದು ನಮ್ಮ ಹಿರಿಯರು ಹೇಳುತ್ತಿದ್ದದ್ದು *"ಅವನಿಗೆ ಕಾಗೆಯ ಆಯುಷ್ಯ"* ಎಂದು.
▪ *"ಒಬ್ಬನು ಅಲ್ಲಾಹನಿಗಾಗಿ ಒಂದು ದಿನದ ಐಚ್ಛಿಕ(ಸುನ್ನತ್) ವ್ರತ ಆಚರಿಸಿದರೆ ಒಂದು ಕಾಗೆಯು ಹುಟ್ಟಿ ಹಾರಲು ಆರಂಭಿಸಿದಂದಿನಿಂದ ಅದಕ್ಕೆ ಪ್ರಾಯವಾಗಿ ಸಾಯುವ ತನಕ ತನ್ನ ಜೀವಮಾನದಲ್ಲಿ ಅದು ಎಷ್ಟು ಮೈಲುಗಳು ಅಥವಾ ಎಷ್ಟು ದೂರ ಹಾರಾಡುತ್ತದೆಯೋ ಅಷ್ಟು ದೂರ ಅವನಿಂದ (ಐಚ್ಛಿಕ ವ್ರತ ಆಚರಿಸಿದಾತನಿಂದ) ಅಲ್ಲಾಹನು ನರಕವನ್ನು ದೂರ ಮಾಡುತ್ತಾನೆ"* ಎಂದು ಇಮಾಮ್ ತಬ್‌ರಾನಿಯವರು ತನ್ನ ಪ್ರಸಿದ್ಧ ಗ್ರಂಥವಾದ *"ಅಲ್ ಮುಅ್‌ಜಮ್ ಅಲ್ ಅವ್‌ಸತ್"* ನಲ್ಲಿ ಉಲ್ಲೇಖಿಸಿದ ಹದೀಸ್ ಕಾಗೆಗೆ ದೀರ್ಘವಾದ ಆಯುಷ್ಯವಿದೆ ಎಂಬುದಕ್ಕೆ ಮತ್ತೂ ಒತ್ತು ನೀಡುತ್ತದೆ.
▪ಕಾಗೆ ಮನೆ ಬಾಗಿಲಲ್ಲಿ ಬಂದು ಮೂರು ಸಲ ಕೂಗಿದರೆ ಅದು ಐಶ್ವರ್ಯ ಮತ್ತು ಶುಭ ಲಕ್ಷಣವೆಂದೂ, ಎರಡು ಸಲ ಕೂಗಿದರೆ ಅದು ಅನಾಹುತ ಬರುವ ಅಶುಭ ಲಕ್ಷಣವೆಂಬ ಮೂಡನಂಬಿಕೆ ಅರಬೀ ಸಮುದಾಯದ ಗ್ರಾಮವಾಸಿಗಳಲ್ಲಿ ಇರುವಂತೆ ಅದು ಎರಡಾದರೂ ಮೂರಾದರೂ ಮನೆಗೆ ನೆಂಟರು ಬರುವುದರ ಸೂಚನೆಯಾಗಿದೆ ಎಂಬ ನಂಬಿಕೆ ಅರಬೇತರರಲ್ಲಿ ಈಗಲೂ ಇದೆ.
▪ಕಾಗೆಯ ಲೈಂಗಿಕ ಸಂಪರ್ಕ ಯಾರಿಗೂ ಕಾಣದ ಹಾಗೆ ಬಹಳ ರಹಸ್ಯವಾಗಿರುತ್ತದೆ. ಹೆಣ್ಣು ಕಾಗೆ ಮೂರು ಅಥವಾ ನಾಲ್ಕು ಕೆಲವೊಮ್ಮೆ ಐದು ಮೊಟ್ಟೆಯಿಡುತ್ತದೆ. ತಾಯಿ ಕಾಗೆಯು ಮೊಟ್ಟೆಗೆ ಕಾವು ಕೊಡುವಾಗ ಗಂಡು ಕಾಗೆ ಗೂಡಿನಲ್ಲಿರುವ ಕಾಗೆಗೆ ಬೇಕಾದ ಆಹಾರ ಪದಾರ್ಥಗಳನ್ನು ತಂದು ಕೊಡುತ್ತದೆ.
▪ಮೊಟ್ಟೆಯೊಡೆದು ಮರಿ ಹೊರಬರುವಾಗ ಇದರ ಮರಿಯು ಕಾಣಲು ಅಸಹ್ಯವಾದ ರೂಪದಲ್ಲಿ ಬಹಳ ಕುರೂಪಿಯಾಗಿರುತ್ತದೆ. ಈ ಕುರೂಪಿಗಳನ್ನು ಕಾಣಲಾಗದೆ ತಾಯಿ ಕಾಗೆ ಮತ್ತು ಗಂಡು ಕಾಗೆ ತಮ್ಮ ಮರಿಗಳನ್ನು ಹಾಗೆಯೇ ಗೂಡಲ್ಲಿ ಬಿಟ್ಟು ಹೋಗುತ್ತದೆ. ಕೆಲವೊಮ್ಮೆ ಗೂಡಿನಿಂದ ಹೊರ ಹಾಕಿ ಅಲ್ಲಿಂದ ಪಾಲಾಯನ ಮಾಡುತ್ತದೆ. ಈ ವೇಳೆಯಲ್ಲಿ ಗೂಡಿನತ್ತ ಬರುವ ನೊಣ, ಸೊಳ್ಳೆ, ಇರುವೆ ಮುಂತಾದ ಕೀಟಗಳನ್ನು ಅಲ್ಲಾಹನು ಇದಕ್ಕೆ ಆಹಾರವಾಗಿ ಕೊಡುತ್ತಾನೆ. ನಂತರ ಕೆಲವು ದಿನಗಳು ಕಳೆಯುವಾಗ ಗಂಡು ಕಾಗೆ ಮತ್ತು ತಾಯಿ ಕಾಗೆ ತಮ್ಮ ಮರಿಯ ನೆನಪಾಗಿ ಅದನ್ನು ಹುಡುಕುತ್ತಾ ಬರುತ್ತದೆ. ಆಗ ಗರಿಯೆಲ್ಲಾ ಚಿಗುರಿ, ಕಾಲುಗಳೆಲ್ಲಾ ಬೆಳೆದು ಕಾಗೆ ಮರಿಯು ಒಂದು ಒಳ್ಳೆಯ ರೂಪಕ್ಕೆ ಬಂದಿರುತ್ತದೆ. ನಂತರ ಕೆಲವು ದಿನಗಳ ತನಕ ತಾಯಿ ಕಾಗೆ ಅದೇ ಗೂಡಿನಲ್ಲೇ ಇದ್ದು ಮರಿಗಳ ಶುಶ್ರೂಷೆ ಮಾಡುತ್ತದೆ. ಆಗಲೂ ಗಂಡು ಕಾಗೆ ಗೂಡಿಗೆ ಆಹಾರ ಸರಬುರಾಜು ಮಾಡುತ್ತಾ ಇರುತ್ತದೆ.
▪ಗೂಡಿನಲ್ಲಿ ಶುಶ್ರೂಷೆ ಮಾಡುತ್ತಿರುವಾಗ ಯಾರಾದರು ಆಕ್ರಮಣ ಮಾಡಲು ಬಂದರೆ ಗಂಡುಕಾಗೆ ಮತ್ತು ತಾಯಿಕಾಗೆ ಎರಡೂ ಸೇರಿ ತಮಗೆ ಎತ್ತಲು ತಾಕತ್ತಿರುವ ಕಲ್ಲುಗಳನ್ನು ಎತ್ತಿ ಮೇಲಕ್ಕೆ ಕೊಂಡು ಹೋಗಿ ಅಕ್ರಮಣ ಮಾಡುವವರ ಮೇಲೆ ಹಾಕುತ್ತದೆ. ಗೂಡಿನಲ್ಲಿ ತಾಯಿ ಕಾಗೆ ಮಾತ್ರ ಇರುವ ವೇಳೆಯಲ್ಲಿ ಈ ಆಕ್ರಮಣ ನಡೆಯುವುದಾದರೆ ತಾಯಿಕಾಗೆ ಸಾಧಾರಣ ಕಾಗೆಗಳು ಕೂಗುವುದಕ್ಕಿಂತ ಬೇರ್ಪಟ್ಟ ರೂಪದಲ್ಲಿ ಒಂದು ಭಯಾನಕ ಶೈಲಿಯಲ್ಲಿ ಕೂಗಿ ಪರಿಸರದಲ್ಲಿರುವ ಕಾಗೆಗಳಿಗೆ ಅಪಾಯದ ಸೂಚನೆ *(ರೆಡ್ ಅಲರ್ಟ್)* ಕೊಡುತ್ತದೆ. ಕೂಡಲೇ ಪರಿಸರದಲ್ಲಿರುವ ಎಲ್ಲಾ ಕಾಗೆಗಳು ಜಮಾಯಿಸಿ ಆಕ್ರಮಿಸುವವನನ್ನು ಓಡಿಸಿ ಬಿಡುತ್ತದೆ.
▪ಕಾಗೆಗೆ ಎಂದೂ ಬೇಟೆಯಾಡಿ ಒಂದು ಜೀವಿಯನ್ನು ಕೊಂದು ತಿನ್ನುವ ವಿದ್ಯೆ ಅಥವಾ ಅಭ್ಯಾಸವಿಲ್ಲ. ಸತ್ತ ಶವವಾಗಿರುತ್ತದೆ ಇದರ ಅಚ್ಚುಮೆಚ್ಚಿನ ಆಹಾರ. ಸಿಕ್ಕಿದರೆ ಗಂಭೀರ ಭೋಜನ. ಇನ್ನು ತಿನ್ನಲು ಏನೂ ಸಿಗದಿದ್ದರೆ ಒಣಗಿ ಒಣಗಿ ದ್ರವಿಸಿದ ಒಂದು ತುಂಡು ಎಲುಬು ಸಿಕ್ಕದರೂ ಅದನ್ನು ತಿಂದಾದರೂ ಹೊಟ್ಟೆ ತುಂಬಿಸುತ್ತದೆ.
▪ಮರ್ಯಾದೆ, ಸಭ್ಯತೆ, ಇತ್ಯಾದಿ ಯಾವುದೇ ಉತ್ತಮ ಗುಣನಡತೆ ಇಲ್ಲದ ಒಂದು ಒರಟು ಸ್ವಭಾವದ ಪಕ್ಷಿಯಾಗಿದೆ ಕಾಗೆ. ಪ್ರವಾದಿ ಇಬ್‌ರಾಹೀಮ್ (ಅ) ರನ್ನು ಅಹಂಕಾರಿಯಾದ ನಮ್‌ರೂದನು ಉರಿಯುತ್ತಿರುವ ಬೆಂಕಿಗೆ ಹಾಕಿದಾಗ ಈ ಖದೀಮ ಕಾಗೆಯು ತನ್ನ ಕೊಕ್ಕಿನಿಂದ ಸಾಧ್ಯವಾದ ಕಟ್ಟಿಗೆ ತುಂಡುಗಳನ್ನು ತಂದು ಉರಿಯುತ್ತಿರುವ ಬೆಂಕಿಗೆ ಹಾಕುತಿತ್ತು ಎಂದು ಕೆಲವು ಮುಫಸ್ಸಿರುಗಳು ಹೇಳಿದ್ದಾರೆ.
▪ ಪ್ರವಾದಿ ನೂಹ್ (ಅ) ರ ಹಡಗು ತಿಂಗಳುಗಟ್ಟಲೆ ಜಲ ಪ್ರವಾಹದ ಭೂಮಿಯಲ್ಲಿ ಸಂಚರಿಸಿ ಕೊನೆಗೆ ನೀರಿನ ಪ್ರವಾಹ ಕುಗ್ಗುತ್ತಾ ಬಂದರೂ ಆಕಾಶ ಮತ್ತು ಭೂಮಿಯ ಮಧ್ಯೆ ಸಂಪೂರ್ಣ ಮೋಡ ಮುಸುಕಿದ ವಾತಾವರಣವಿತ್ತು. ಕಪ್ಪಾದ ಈ ಭೀಕರ ವಾತಾವರಣದಲ್ಲಿ ಪ್ರವಾದಿ ನೂಹ್ (ಅ) ರಿಗೆ ಹಡಗನ್ನು ನೀರಿನಿಂದ ಬದಿಗೆ ತಂದು ನಿಲ್ಲಿಸುವ *(ಲ್ಯಾಂಡಿಂಗ್)* ಜಾಗ ಎಲ್ಲೆಂದು ತಿಳಿಯದೆ ಹೋಯಿತು. ಆಗ ಅವರು ಹಡಗಿನಲ್ಲಿರುವ ಕಾಗೆಯನ್ನು ಕರೆದು ಹೇಳಿದರು. *"ನೀನು ಸುತ್ತಮುತ್ತ ಒಂದು ಸುತ್ತು ಹಾರಾಡಿ ಎಲ್ಲಿಯಾದರೂ ನೀರು ಬತ್ತಿ ನೆಲ ಕಾಣುತ್ತದೆಯಾ ಎಂದು ನೋಡಿಬಾ."* ಹಾಗೆಯೇ ಈ ಮಹಾ ಜವಾಬ್ದಾರಿಯೊಂದಿಗೆ ಹೊರಟ ಈ ಪೋಕರಿ ಕಾಗೆ ಜವಾಬ್ದಾರಿ ನಿರ್ವಹಿಸದೆ ಎಲ್ಲೋ ಪ್ರವಾಹದಲ್ಲಿ ಸಿಲುಕಿ ನೀರಿನಲ್ಲಿ ತೇಲಿ ಬರುತ್ತಿರುವ ಸತ್ತ ಶವವೊಂದು ದೊರೆತಾಗ ಸಂತೋಷದಲ್ಲಿ ಸಡಗರವೇ ಸೈ... ಎಂಬಂತೆ ಆ ಶವವನ್ನು ತಿನ್ನುವುದರಲ್ಲಿ ತಲ್ಲೀನವಾಯಿತು. ಇಂತಹಾ ಸಂದಿಗ್ಧ ಪರಿಸ್ಥಿತಿಯಲ್ಲೂ ಜವಾಬ್ದಾರಿ ನಿರ್ವಹಿಸದ ಕಾಗೆಯನ್ನು ನೂಹ್ (ಅ) ರು ಶಪಿಸಿದರು. ಶ್ರೇಷ್ಠ ಪ್ರವಾದಿಯೊಬ್ಬರ ಶಾಪಕ್ಕೆ ಬಲಿಯಾದ ಈ ಕಾಗೆಯ ಕಾಲು ಕೂಡಲೇ ನಡೆಯಲಾಗದೆ ಡೊಂಕಾಯಿತು. ಅಲ್ಲದೆ ಎಲ್ಲಾ ಸಮಯದಲ್ಲೂ ಯಾರನ್ನು ಕಂಡರೂ ಸ್ವಂತ ನಿಯಂತ್ರಣವಿಲ್ಲದೆ ಭಯದಿಂದ ಓಡುವಂತಾಯಿತು. ಮಾತ್ರವಲ್ಲ ಅಂದಿನಿಂದ ಕಾಗೆ *"ಪಾಸಿಖಃ"* (ಕೆಟ್ಟವನು) ಎಂಬ ಕೆಟ್ಟ ಬಿರುದಿಗೆ ಕೂಡ ಪಾತ್ರವಾಯಿತು.
▪ಪ್ರವಾದಿ ನೂಹ್(ಅ) ರ ಶಾಪಕ್ಕೆ ಬಲಿಯಾದ ಈ ಕಾಗೆಯ ನಡೆತದಲ್ಲಿ ಇಂದೂ ಕೂಡ ಡೊಂಕು ಸ್ವಾಭಾವವಿದೆ. ನಡೆಯುವಾಗ ಏನೋ ಕಾಲಿಗೆ ಗಾಯವಾಗಿ ನಡೆಯುವಂತೆ ಕಾಣುತ್ತದೆ. ಅಲ್ಲದೆ ಯಾವತ್ತೂ ಹೆಚ್ಚು ಹೊತ್ತು ನೆಲದಲ್ಲಿ ನಿಲ್ಲದು. ಏನಾದರು ತಿನ್ನಲಿಕ್ಕೆ ಸಿಕ್ಕಿದರೆ ತಿನ್ನುವುದರ ಎಡೆಯಲ್ಲಿ ಆಗಾಗ್ಗೆ ತನ್ನ ಎಲ್ಲಾ ಭಾಗಕ್ಕೂ ಭಯದಿಂದ ನೋಡುತ್ತದೆ. ಮಹಾ ಅಂಜುಬುರುಕ ಈ ಕಾಗೆ ಸ್ವಲ್ಪ ತಿಂದು ನಂತರ ಮರದ ರೆಂಬೆಗಳ ಮೇಲೆ ಕೊಂಡು ಹೋಗಿ ತಿನ್ನುತ್ತದೆ. ಯವಾಗಲೂ ಸಮಾಧಾನ ಮತ್ತು ಆರಾಮದಲ್ಲಿ ತಿನ್ನುವಂತಿಲ್ಲ. ನೆಲದಲ್ಲಿ ಹೆಚ್ಚು ಹೊತ್ತು ನಿಲ್ಲದೆ ಕೂಡಲೇ ಹಾರಿಹೋಗುತ್ತದೆ. ಇದೆಲ್ಲಾ ಪ್ರವಾದಿ ನೂಹ್ (ಅ) ರ ಶಾಪದ ಫಲವಾಗಿದೆ ಎಂದು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
▪ಕಾಗೆಯ ಒಂದು ಒಳ್ಳೆಯ ಗುಣವೆಂದರೆ ಎಲ್ಲಾ ಪಕ್ಷಿಗಳಂತೆ ಸೂರ್ಯೋದಯದ ತನಕ ನಿದ್ರಿಸುವುದಿಲ್ಲ. ಸೂರ್ಯ ಉದಿಸುವುದಕ್ಕಿಂತ ಮೊದಲೇ ಪ್ರಭಾತ ಆದ ಕೂಡಲೇ ಹೊಟ್ಟೆಪಾಡಿಗಾಗಿ ತನ್ನ ದೈನಂದಿನ ಕಸಬಿಗೆ ಹೊರಡುತ್ತದೆ.
▪ ಕಾಗೆಯನ್ನು ಕಂಡಲ್ಲಿ ಕೊಲ್ಲಲು ಇಸ್ಲಾಮ್ ಆಜ್ಞಾಪಿಸುತ್ತದೆ. ಎಲ್ಲಿಯ ತನಕವೆಂದರೆ ಪವಿತ್ರ ಹರಮಿನಲ್ಲೂ ಕಾಗೆಯನ್ನು ಕೊಲ್ಲಬಹುದಾಗಿದೆ.
▪ *"ರಬ್‌ತಾ ಬಿಂತ್ ಮುಸ್ಲಿಮ್"* ಎಂಬ ಸಹಾಬೀ ವನಿತೆಯ ತಂದೆಯ ಹೆಸರು *"ಗುರಾಬ್"* (ಕಾಗೆ) ಎಂದಾಗಿತ್ತು. ಹುನೈನ್ ಯುದ್ದದಲ್ಲಿ ಹಾಜರಾದಾಗ ಈ ಗುರಾಬರಲ್ಲಿ ಪ್ರವಾದಿಯವರು *"ನಿಮ್ಮ ಹೆಸರೇನು"* ಎಂದು ಕೇಳಿದರು. ಆಗ ಅವರು *"ಗುರಾಬ್"* (ಕಾಗೆ) ಎಂದು ಉತ್ತರ ಕೊಟ್ಟರು. ಕೂಡಲೇ ಪ್ರವಾದಿ ವರ್ಯರು *"ಆಹಾರ ವಸ್ತುಗಳನ್ನು ನಾಶ ಮಾಡುವ ಮತ್ತು ಬಹಳ ನೀಚ ಸ್ವಭಾವದ ಈ ಕಾಗೆಯ ಹೆಸರನ್ನು ನಿಮಗೆ ಯಾರಿಟ್ಟದ್ದು..? ಆದ್ದರಿಂದ ಇಂದಿನಿಂದ ನಿಮ್ಮ ಹೆಸರು "ಗುರಾಬ್" ಗೆ ಬದಲಾಗಿ ನಾನು "ಮುಸ್ಲಿಮ್" ಎಂದು ಬದಲಾವಣೆ ಮಾಡಿದ್ದೇನೆ"* ಎಂದು ಹೇಳಿದರು.
▪ಒಮ್ಮೆ ಪ್ರವಾದಿಯವರು (ಸ) ಎಲ್ಲೋ ಹೊರಡಲು ಸಜ್ಜಾಗುವಾಗ ತನ್ನ ಕಾಲಿನ ಖುಫ್ಫ (ಕಾಲುಕವಚ) ಧರಿಸಲು ತೆಗೆದರು. ಪ್ರವಾದಿಯವರು ಒಂದು ಖುಫ್ಫವನ್ನು ಧರಿಸಿ ಎರಡನೇ ಖುಫ್ಫಕ್ಕೆ ಕೈ ಹಾಕಿದಾಗ ಹತ್ತಿರದಲ್ಲಿದ್ದ ಕಾಗೆಯೊಂದು ಎರಡನೇ ಖುಫ್ಫವನ್ನು ತೆಗೆದು ಹಾರಿಹೋಗಿ ಸ್ವಲ್ಪ ದೂರ ಕೊಂಡುಹೋಗಿ ಹಾಕಿತು. ನಂತರ ಪ್ರವಾದಿ (ಸ) ರು ಅದನ್ನು ತೆಗೆದು ಧರಿಸಲು ತಯಾರಾದಾಗ ಅದರೊಳಗಿಂದ ಒಂದು ಹಾವಿನ ಮರಿ ಹೊರ ಬಂತು. ಕೂಡಲೇ ಪ್ರವಾದಿ ವರ್ಯರು ಹೇಳಿದರು *"ಯಾವೊಬ್ಬನೂ ಶೂ, ಸೋಕ್ಸ್ ಇತ್ಯಾದಿಗಳನ್ನು ಧರಿಸುವಾಗ ಅದನ್ನು ಒಮ್ಮೆ ಅಲುಗಾಡಿಸದೆ ಧರಿಸ ಬಾರದು"* ಎಂದು. ಇಮಾಮ್ ಅಹ್ಮದ್ ಬಿನ್ ಹಂಬಲ್ (ರ) ರು ತನ್ನ ಪ್ರಸಿದ್ಧ ಗ್ರಂಥವಾದ *"ಅಲ್ ಝುಹ್‌ದ್"* ನಲ್ಲಿ ಈ ಘಟನೆಯನ್ನು ವರದಿ ಮಾಡಿದ್ದಾರೆ.
▪ ಮಾನವಪಿತ ಆದಮ್ (ಅ) ರು ಪವಿತ್ರ ಹಜ್ ಕರ್ಮ ನಿರ್ವಹಿಸಲು ಹೋದಾಗ ಮೊದಲೇ ಅಣ್ಣ ತಮ್ಮಂದಿರೆಡೆಯಲ್ಲಿ ಬೇರೂರಿದ್ದ ಅಸೂಯೆಯ ಕಾರಣದಿಂದ ಅವರ ಮಗನಾದ ಖಾಬೀಲನು ಹಾಬೀಲರನ್ನು ಕೊಂದನು. ನಂತರ ಸತ್ತ ಶರೀರವನ್ನು ಏನು ಮಾಡಬೇಕೆಂದು ತಿಳಿಯದೆ ಕಂಗಲಾದ ಆತ ಅದನ್ನು ಹೆಗಲಲ್ಲಿ ಹಾಕಿ ಎಷ್ಟೋ ದಿನಗಳ ಕಾಲ ನಡೆದನು. ತಂದೆ ಪ್ರವಾದಿ ಆದಮ್ (ಅ) ರು ಹಜ್ಜ್ ಮುಗಿದು ವಾಪಸ್ ಬರುವುದಕ್ಕಿಂತ ಮುಂಚೆ ಇದನ್ನು ಏನಾದರು ಮಾಡಿ ಕಾಣದಾಗೆ ಮಾಡುವುದಾಗಿತ್ತು ಅವನ ಉದ್ದೇಶ. ಹೀಗೆಯೇ ಹುಚ್ಚನಂತೆ ಒಂದು ಶವವನ್ನು ತನ್ನ ಹೆಗಲಲ್ಲಿ ಹಾಕಿ ಸರಿ ಸುಮಾರು ಒಂದು ವರ್ಷ ನಡೆದನು. ಕೊನೆಗೆ ಒಂದು ಕಾಗೆಯು ಬೇರೊಂದು ಕಾಗೆಯನ್ನು ಕೊಂದು ಭೂಮಿಯಲ್ಲಿ ತನ್ನ ಕೊಕ್ಕಿನಿಂದ ಹೊಂಡ ಮಾಡಿ ದಫನ ಮಾಡುವ ಭಯಾನಕ ದೃಷ್ಯವನ್ನು ಅಲ್ಲಾಹನು ಈತನಿಗೆ ಕಾಣಿಸಿ ಕೊಟ್ಟನು. ಇದು ಅಲ್ಲಾಹುವಿನ ಒಂದು ಡೊಡ್ಡ ತಂತ್ರವಾಗಿತ್ತು.(ಹಿಕ್‌ಮತ್) ಮಾನವನಿಗೆ ಮೊದಲಾಗಿ ಶವವನ್ನು ಹೇಗೆ ದಫನ ಮಾಡುವುದು ಎಂಬ ವಿದ್ಯೆಯನ್ನು ಕಲಿಸಿ ಕೊಡುವ ಮಹಾ ರಹಸ್ಯ.
▪ ಹಿಜ್‌ರಾ ಮುನ್ನುರ ಐವತ್ತನಾಲ್ಕರಲ್ಲಿ ಹುಟ್ಟಿ ನಾಲ್ಕು ನೂರ ಮುವತ್ತರಲ್ಲಿ ವಫಾತಾದ ಜಗತ್ತಿನ ಅತಿದೊಡ್ಡ ಖಗೋಳ ಶಾಸ್ತ್ರಜ್ಞ ಮತ್ತು ತತ್ವಜ್ಞಾನಿಯಾದ ಅಲ್ಲಾಮಾ *"ಬಿನ್ ಹಯ್‌ಸಮ್"* ರು ಹೇಳುತ್ತಾರೆ. *"ಜಗತ್ತಿನಲ್ಲಿ ಪ್ರಪ್ರಥಮವಾಗಿ ಭೂಮಿಯನ್ನು ಕೊರೆದು ಹೊಂಡ ಮಾಡಿ ಒಂದು ಶವವನ್ನು ದಫನ ಮಾಡಿದ ಈ ಕಾಗೆಯ ಸಂತತಿಗೆ ಅಲ್ಲಾಹನು ಬೇರೆ ಯಾವ ಜೀವಿಗೂ ಕೊಡದ ಬೇರೊಂದು ವಿಶೇಷತೆಯನ್ನು ಕೊಟ್ಟಿದ್ದಾನೆ. ಅದೇನೆಂದರೆ ಕಾಗೆಯ ಕೊಕ್ಕಿನ ಉದ್ದದಷ್ಟು ಅಂದರೆ ಎರಡು ಮೂರು ಇಂಚು ಅಂತರದಲ್ಲಿ ಭೂಮಿಯ ಒಳಗಿರುವ ಎಲ್ಲವನ್ನೂ ಕಾಗೆ ಸ್ಪಷ್ಟವಾಗಿ ಕಾಣುತ್ತದೆ. ಸುಬ್ಹಾನಲ್ಲಾಹ್...!!"*
▪ಬೇರೊಂದು ಗಮನಾರ್ಹ ವಿಷಯವೆಂದರೆ ಪ್ರವಾದಿ ಆದಮ್ (ಅ) ರು ಹಜ್ ನಿರ್ವಹಣೆಗೆ ಮಕ್ಕಾಕ್ಕೆ ಹೋಗಿ ಹಿಂತಿರುಗಿ ಬರುವ ತನಕ ತನ್ನ ಮುದ್ದಿನ ಕಂದನಾದ ಹಾಬೀಲನನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂದು ಅಣ್ಣನಾದ ಖಾಬೀಲನಲ್ಲಿ ಹೇಳಿದ್ದರು. ಆದರೆ ಕರಾರು ಉಲ್ಲಂಘನೆ ಮಾಡಿ ತಮ್ಮನನ್ನು ಕೊಂದು ಕೊನೆಗೆ ಏನೂ ತಿಳಿಯದವರಂತೆ ನಟನೆ ಮಾಡಿದ ಈತನಲ್ಲಿ ಅದಮ್ (ಅ) ರು *"ನನ್ನ ಕಂದ ಹಾಬೀಲ್ ಎಲ್ಲಿದ್ದಾನೆ..? ಅವನನ್ನು ನೀನು ಕೊಲೆ ಮಾಡಿದಿಯಾ..?"* ಎಂದು ಕೇಳಿದರಂತೆ. ಆಗ ಅವನು *"ಹೇ... ನಾನೇಕೆ ಕೊಲೆ ಮಾಡೋದು..? ಉಫ್.. ನನಗೆ ಗೊತ್ತೇ ಇಲ್ಲ."* ಎಂದು ಉತ್ತರಿಸಿದ. ಆಗ ಪ್ರವಾದಿ ಅದಮರು ಹೇಳಿದರಂತೆ. *"ನನ್ನ ಕೊಲ್ಲಲ್ಪಟ್ಟ ಕಂದನ ರಕ್ತವನ್ನು ಕುಡಿದು ಕೊಲೆಯ ಪುರಾವೆಯನ್ನು ನಷ್ಟ ಮಾಡಿದ ಈ ಭೂಮಿಯನ್ನು ನಾನು ಶಪಿಸುತ್ತೇನೆ."* ಉಲ್ಲೇಖನೀಯವೆಂದರೆ ಸುಬ್'ಹಾನಲ್ಲಾ..! ಅಂದಿನಿಂದ ಭೂಮಿಯು ಯಾರ ರಕ್ತವನ್ನೂ ಕುಡಿಯದಂತಾಯಿತು. ಹಾಬೀಲನ ಕೊಲೆಯಾದ ನಂತರ ಆದಮರು ಸುಮಾರು ನೂರು ವರ್ಷ ಬದುಕಿದ್ದರು. ಮಗನ ಅಗಲಿಕೆಯ ಬೇಸರ ಆದಮ್ (ಅ) ರ ಮುಖದಲ್ಲಿ ಈ ನೂರು ವರ್ಷವೂ ಇತ್ತೆಂದು ಚರಿತ್ರೆ ಹೇಳುತ್ತದೆ. ಮಾತ್ರವಲ್ಲ ಈ ಸಮಯದಲ್ಲಿ ಅವರನ್ನು ಯಾರೂ ಒಮ್ಮೆಯೂ ನಗು ಮುಖದಲ್ಲಿ ಕಂಡಿರಲಿಲ್ಲ...!!
▪ತಮ್ಮನನ್ನು ಕೊಲೆಮಾಡಿ ತಂದೆಯ ಶಾಪಕ್ಕೆ ಬಲಿಯಾದ ಖಾಬೀಲನು ಕೊಲೆಮಾಡಿದ ಊರಾದ ದಮಾಸ್ಕಸಿನಿಂದ ಯಮನಿನ "ಅದನ್" ಎಂಬ ಜಾಗಕ್ಕೆ ಪಾಲಾಯನ ಮಾಡಿದ್ದ. ಅಲ್ಲಿ ಆತ ಒಂದು ಕಡೆ ಕುಳಿತು ಆಲೋಚನೆ ಮಾಡುತ್ತಿರುವಾಗ ಇಬ್ಲೀಸನು ಪ್ರತ್ಯಕ್ಷನಾಗಿ ಈತನಲ್ಲಿ ಕೇಳಿದ. *"ಏನಾಯಿತು...? ಯಾಕೆ ಆಲೋಚನೆ...? ನಿನ್ನ ಕುರ್ಬಾನಿಯನ್ನು ಬೆಂಕಿಯು ತಿನ್ನದೆ ನಿನ್ನ ತಮ್ಮನ ಕುರ್ಬಾನಿಯನ್ನು ಸ್ವೀಕರಿಸಲು ಕಾರಣ ಏನು ಗೊತ್ತಾ...? ಅವನು ಮೊದಲಿನಿಂದಲೇ ಬೆಂಕಿಗೆ ಆರಾಧನೆ ಮಾಡುತ್ತಿದ್ದ. ಆ ಕಾರಣದಿಂದ ಅವನದನ್ನು ಬೆಂಕಿಯು ಸ್ವೀಕರಿಸಿತು. ನೀನೀಗ ಬೆಂಕಿಗೆ ಪೂಜೆ ಮಾಡಲು ಶುರು ಮಾಡಿದರೆ ನಿನ್ನ ತಂದೆ ನಿನ್ನ ಅಧೀನಕ್ಕೆ ತಾನಾಗಿಯೇ ಬರುತ್ತಾರೆ. ಒಂದು ಮಾಡಿ ನೋಡು".* ಸುಬ್'ಹಾನಲ್ಲಾ ...! ಇಬ್‌ಲೀಸನ ಫಿತ್‌ನದಲ್ಲಿ ವಂಚಿತನಾದ ಖಾಬೀಲ್ ಜಗತ್ತಿನ ಪ್ರಪ್ರಥಮ ಅಗ್ನಿ ಪೂಜೆಗೆ ಚಾಲನೆ ಕೊಟ್ಟನು....!! ಮಾತ್ರವಲ್ಲ ನಂತರ ಕ್ರಮೇಣ ಅಲ್ಲಿ ದೊಡ್ಡ ಬೆಂಕಿ ಆರಾಧನಾಲಯ ನಿರ್ಮಾಣವಾಯಿತು.
▪ಪ್ರಖ್ಯಾತ ತಾಬಿಈ ಆದ ಇಮಾಮ್ ಮುಖಾತಿಲ್ (ರ) ರು ಹೇಳುತ್ತಾರೆ. *"ಪ್ರಪಂಚದ ಈ ಪ್ರಪ್ರಥಮ ಕೊಲೆ ನಡೆಯುವುದಕ್ಕಿಂತ ಮೊದಲು ಎಲ್ಲಾ ವನ್ಯ ಮೃಗಗಳು ಮತ್ತು ಪಕ್ಷಿಗಳು ಮನುಷ್ಯರೊಂದಿಗೆ ಸಹಪಾಠಿಗಳಂತೆ ಬಹಳ ಹತ್ತಿರವಾಗಿ ಬೆರೆತು ಬಾಳುತ್ತಿತ್ತು. ಯಾವ ಸಿಂಹ ಅಥವಾ ಹುಲಿಯೂ ಯಾರನ್ನೂ ಅಕ್ರಮಣ ಮಾಡುತ್ತಿರಲಿಲ್ಲ. ಮಾನವನ ಈ ಹೇಯ ಕೃತ್ಯವನ್ನು ಕಂಡ ಇವುಗಳು ಮನುಷ್ಯರಿಂದ ದೂರವಾದರು. ಪ್ರಪಂಚವೇ ಬದಲಾಯಿತು. ಆ ತನಕ ಸಿಹಿಯಾಗಿದ್ದ ಸಮುದ್ರದ ಸಿಹಿನೀರು ಉಪ್ಪಾಯಿತು. ಸಿಹಿಯಾಗಿದ್ದ ಹಣ್ಣು ಹಂಪಲುಗಳಲ್ಲಿ ಕೆಲವು ಕಹಿಯಾಯಿತು. ದೂಳಿಲ್ಲದ ಭೂಮಿಯ ಮಣ್ಣಿನಿಂದ ದೂಳು ಬರಲು ಆರಂಭವಾಯಿತು.*
▪ಪ್ರಪಂಚದ ಈ ಪ್ರಪ್ರಥಮ ಕೊಲೆಯು ನಡೆದದ್ದು ಒಂದು ಮಂಗಳವಾರವಾಗಿತ್ತು. ಆದ್ದರಿಂದ ಅಶುಭವಾದ ಆ ದಿನದಂದು ಯಾವಾಗಲೂ ಒಂದು ಒಳ್ಳೆಯ ಕಾರ್ಯಕ್ಕೆ ಮುಹೂರ್ತ ಮಾಡುವುದು ಒಳ್ಳೆಯದಲ್ಲ ಎಂದು ಕೆಲವು ಉಲಮಾಗಳು ಅಭಿಪ್ರಾಯ ಪಟ್ಟಿದ್ದಾರೆ.
▪ ಮದ್ಯಪಾನಿಯಾದ ಒಬ್ಬನಿಗೆ ಯಾವ ರೀತಿಯಲ್ಲೂ ಮದ್ಯವನ್ನು ಬಿಡಲಾಗುವುದಿಲ್ಲ ಎಂದಾದರೆ ಕಾಗೆಯ ರಕ್ತವನ್ನು ಮದ್ಯಕ್ಕೆ ಮಿಶ್ರಣ ಮಾಡಿ ಅವನು ತಿಳಿಯದಂತೆ ಅವನಿಗೆ ಒಮ್ಮೆ ಕೊಟ್ಟರೆ ಮತ್ತೆ ಒಮ್ಮೆಯೂ ಆತ ಮದ್ಯ ಕುಡಿಯಲಾರ.
▪ಮೂಲವ್ಯಾದಿ ರೋಗ ಇರುವವರು ಕಾಗೆಯ ರಕ್ತವನ್ನು ಅಲ್ಲಿಗೆ ಕೆಲವು ದಿನಗಳ ಕಾಲ ಲೇಪಿಸಿದರೆ ಅದು ಸಂಪೂರ್ಣ ಗುಣವಾಗುತ್ತದೆ.
▪ಒಬ್ಬ ಬಿಳಿ ಮಿಶ್ರಿತ ಚುಕ್ಕೆ ಇರುವ ಕಾಗೆಯನ್ನು ಕನಸಲ್ಲಿ ಕಂಡರೆ ಅವನ ಆಯುಷ್ಯ ದೀರ್ಘವಿದೆ ಎಂಬುದರ ಸಂಕೇತವಾಗಿದೆ.
▪ಕಾಗೆ ಅವನೊಂದಿಗೆ ಸಂಭಾಷಣೆ ಮಾಡುವ ಕನಸು ಒಬ್ಬ ಕಂಡರೆ ಅವನಿಗೆ ಕೆಟ್ಟ ಸ್ವಭಾವದ ಮಕ್ಕಳಾಗುವ ನಿಶಾನೆಯಾಗಿದೆ.
▪ಕಾಗೆಯು ಭೂಮಿಯನ್ನು ತನ್ನ ಕೊಕ್ಕಿನಿಂದ ತೂತು ಮಾಡುವ ಕನಸು ಒಬ್ಬ ಕಂಡರೆ ಅವನು ಯಾರನ್ನಾದರು ಕೊಲೆ ಮಾಡುವ ಅಥವಾ ಏನಾದರು ದೊಡ್ಡ ತಪ್ಪು ಮಾಡುವುದರ ನಿಶಾನೆಯಾಗಿದೆ.
▪ಕಾಗೆಯ ಮಾಂಸವನ್ನು ತಿನ್ನುವುದು ಇಸ್ಲಾಮಿನಲ್ಲಿ ನಿಷಿದ್ಧ.
▪ಸಂಗ್ರಹ: ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಇಮಾಮ್ ಖಝ್‌ವೀನಿಯ *ಅಜಾಯಿಬುಲ್ ಮಖ್‌ಲೂಕಾತ್* ಅಂತೆಯೇ ಅಲ್ಲಾಮಾ ಬಿನ್ ಸೀರಿನ್(ರ) ರ *ತಫ್‌ಸೀರುಲ್ ಅಹ್‌ಲಾಮ್* ಎಂಬ ಗ್ರಂಥ.
Comments