ಮೆಹಂದಿ ಮತ್ತು ವುಳೂ...
ಕೈಗೆ ಹಚ್ಚಿದರೆ ಬಳಿಕ ಸಿಪ್ಪೆ ಎಳೆದು ಬರುವ, ಶಾಪ್ ನಲ್ಲಿ ಸಿಗುವ ಕೋನ್ ಮೆಹಂದಿಯನ್ನು ಹಚ್ಚಬಹುದೇ..? ಇದು ಸ್ನಾನ ಮತ್ತು ವುಳೂಇನ ಸಿಂಧುತ್ವಕ್ಕೆ ಅಡ್ಡಿಯಾಗಬಹುದೇ..? ಸರಿಯಾಗಿ ಈ ಬಗ್ಗೆ ಮಾಹಿತಿ ನೀಡುವಿರಾ...?
➡ ವುಳೂಇನ ಅಂಗಾಂಗಗಳಲ್ಲಿ ನೀರಿನ ಸ್ಪರ್ಶವನ್ನು ತಡೆಯುವ ವಸ್ತುಗಳು ಇಲ್ಲದಿರುವುದು ವುಳೂಇನ ನಿಬಂಧನೆಯಾಗಿದೆ. ಪೈಂಟು, ಕ್ಯೂಟೆಕ್ಸು ಮುಂತಾದ ವಸ್ತುಗಳನ್ನು ಇದಕ್ಕೆ ಉದಾಹರಿಸಬಹುದು. ಇವು ವುಳೂವಿನ ಅಂಗಗಳಲ್ಲಿದ್ದರೆ ಒಳಗಿನ ಚರ್ಮಕ್ಕೆ ನೀರು ಸ್ಪರ್ಶವಾಗುವುದಿಲ್ಲ. ಆದ್ದರಿಂದಲೇ ಪೈಂಟು ತಾಗಿದರೆ ಸೀಮೆ ಎಣ್ಣೆಯಂತಹಾ ವಸ್ತುಗಳನ್ನು ಬಳಸಿ ಅದನ್ನು ನಿವಾರಿಸಿ ವುಳೂ ಮಾಡಬೇಕು.
ಮದುವೆಯಾದ ಮಹಿಳೆಯರಿಗೆ ಮೆಹಂದಿ ಹಚ್ಚುವುದು ಸುನ್ನತ್ತಿದೆ. ಕೈಗಳಿಗೆ ಮೆಹಂದಿ ಹಚ್ಚಿ ಬಳಿಕ ತೊಳೆದರೆ ಮೆಹಂದಿಯಲ್ಲಿರುವ ಬಣ್ಣವು ಚರ್ಮದಲ್ಲಿ ಉಳಿಯುತ್ತದೆ. ಈ ಬಣ್ಣವೂ ಚರ್ಮಕ್ಕೆ ನೀರು ಸ್ಪರ್ಶವಾಗುವುದನ್ನು ತಡೆಯುವುದಿಲ್ಲ. ಆದರೆ ಕೆಮಿಕಲ್ ಗಳನ್ನು ಬೆರೆಸಲಾದ ಕೆಲವು ಕೃತಕ ಮೆಹಂದಿಗಳು ಚರ್ಮಕ್ಕೆ ಬಣ್ಣವನ್ನು ನೀಡುವ ಬದಲು ತೆಳುವಾದ ಪೊರೆಯು ಚರ್ಮದ ಮೇಲೆ ಅಂಟಿಕೊಳ್ಳುವಂತೆ ಮಾಡಿಬಿಡುತ್ತವೆ. ಈ ಮೆಹಂದಿ ಹಚ್ಚಿ ಬಳಿಕ ಉಗುರಿನಲ್ಲಿ ಕೆರೆಯುವಾಗ ಈ ಪೊರೆಯೂ ಸಿಪ್ಪೆಯಂತೆ ಕಳಚಿ ಬರುತ್ತದೆ. ಇದರಿಂದ ಈ ಮೆಹಂದಿ ಚರ್ಮದ ಬಣ್ಣ ಬದಲಾವಣೆ ಮಾಡಿದ್ದಲ್ಲವೆಂದೂ ಬದಲಾಗಿ ಚರ್ಮಕ್ಕೆ ಒಂದು ಪೊರೆಯನ್ನು ಅಂಟಿಸಿಬಿಟ್ಟಿದೆಯೆಂದೂ ತಿಳಿಯಬಹುದು. ಇಂತಹಾ ತೆಳು ಪೊರೆಗಳು ಅಂಗಾಂಗಗಳಿಗೆ ನೀರು ಸ್ಪರ್ಶವಾಗಲು ಬಿಡುವುದಿಲ್ಲ. ಆದ್ದರಿಂದ ಇಂತಹಾ ಮೆಹಂದಿಯನ್ನು ಹಚ್ಚಿದ್ದಲ್ಲಿ ವುಳೂ ಹಾಗೂ ಸ್ನಾನಗಳು ಸಿಂಧುವಾಗುವುದಿಲ್ಲ.
➖➖➖➖➖➖➖➖➖➖➖

Comments