*▪▪ಮಹಾ ವಂಚಕ ನರಿ▪▪*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪ನರಿಯು ವನ್ಯ ಜೀವಿಯಾದರೂ ಬಹಳ ಪುಕ್ಕಲುತನವಿರುವ ಒಂದು ಮೃಗವಾಗಿದೆ. ಕುತಂತ್ರ ಮತ್ತು ಕುಯುಕ್ತಿಗಳಿಂದಾಗಿ ಕಾಡಿನಲ್ಲಿ ದೊಡ್ಡ ಮೃಗಗಳೊಂದಿಗೆ ಇದಕ್ಕೆ ಒಳ್ಳೆಯ ಒಡನಾಟವಿದೆ. ವಂಚನೆ, ಕುತಂತ್ರ, ಕಾಪಟ್ಯ, ಇತ್ಯಾದಿ ವಿಷಯಗಳಲ್ಲಿ ಇದು ಬಹಳ ನಿಪುಣ.
▪ತನಗೆ ಹಸಿವಾಗಿ ಏನೂ ಸಿಗದಿದ್ದರೆ ತನ್ನ ಹೊಟ್ಟೆಯನ್ನು ಉಬ್ಬಿಸಿ ತನ್ನ ನಾಲ್ಕು ಕಾಲುಗಳನ್ನು ಮೇಲೆ ಮಾಡಿ ಶ್ವಾಸವನ್ನು ಒತ್ತಿ ಹಿಡಿದು ಅಂಗಾತ ಬೀಳುತ್ತದೆ. ಇದು ಸತ್ತ ಮೃಗವೆಂದು ಭಾವಿಸಿ ಇತರ ಮೃಗಗಳು ಇದರ ಹತ್ತಿರ ಬಂದರೆ ಅದರ ಮೇಲೆ ಬಿದ್ದು ಅದನ್ನು ಕೊಂದು ತಿನ್ನುತ್ತದೆ. ಸಿಂಹ,ಹುಲಿಯಂತಹಾ ಶವಗಳನ್ನು ತಿನ್ನದ ಮೃಗಗಳನ್ನು ಕಂಡರೂ ಹೀಗೆಯೇ ಬೀಳುತ್ತದೆ. ಸಿಂಹ ಅಥವಾ ಹುಲಿ ಹತ್ತಿರ ಬಂದು ನೋಡಿದಾಗ ಯಾವುದೇ ಕಂಪನವಿಲ್ಲದ್ದರಿಂದ ಸತ್ತ ಶವವಾಗಿರಬಹುದೆಂದು ಭಾವಿಸಿ ಹಾಗೆಯೇ ಬಿಟ್ಟು ಹೋಗುತ್ತದೆ. ಅವುಗಳು ದೂರ ಹೋದ ನಂತರ ಓಡಿ ಬಚಾವು ಆಗುತ್ತದೆ.
▪ಇದರ ಸೆಗಣಿ ಬಹಳ ಕೆಟ್ಟ ವಾಸನೆಯಿಂದ ಕೂಡಿದ್ದಾಗಿದೆ. ಕೆಟ್ಟ ವಾಸನೆಯಲ್ಲಿ ಕಾಡುಕೋಳಿಯ ಹಿಕ್ಕೆ ಯನ್ನು ಬಿಟ್ಟರೆ ನಂತರದ್ದು ನರಿಯದ್ದಾಗಿದೆ. ಸಿಂಹ, ಹುಲಿ ಅಲ್ಲದ ತೋಳದಂತಹಾ ಕ್ರೂರ ಮೃಗಗಳು ಇದನ್ನು ಅಕ್ರಮಣ ಮಾಡಲು ಬಂದರೆ ಸೆಗಣಿ ವಿಸರ್ಜನೆ ಮಾಡುತ್ತದೆ. ಅಸಹ್ಯ ವಾಸನೆಯಾದ್ದರಿಂದ ಆಕ್ರಮಣ ಮಾಡಲು ಬಂದ ಮೃಗ ಇದನ್ನು ಬಿಟ್ಟು ಹಾಗೆಯೇ ಓಡಿ ಹೋಗುತ್ತದೆ.
▪ ಗರ್ಭ ಧಾರಣೆಯಾಗಿ ಬರೇ ಒಂದು-ಒಂದುವರೆ ತಿಂಗಳಲ್ಲಿ ಮರಿ ಹಾಕುತ್ತದೆ. ಎರಡರಿಂದ ಆರರ ತನಕ ಮರಿಗಳನ್ನು ಹಾಕುವ ಈ ನರಿಯು ಸುಮಾರು ಹತ್ತು ಹದಿನೈದು ವರ್ಷಗಳ ತನಕ ಬದುಕುತ್ತದೆ.
▪ಈ ನರಿಯ ವಕ್ರ ಬುದ್ದಿಯ ಬಗ್ಗೆ ಇತಿಹಾಸದಲ್ಲಿ ಹಲವಾರು ಕತೆಗಳಿವೆ. ಒಮ್ಮೆ ನಮ್ಮ ಮದ್‌ಹಬಿನ ಇಮಾಮರಾದ ಇಮಾಮ್ ಶಾಫಿಈ (ರ) ಯವರು ಮತ್ತು ಅವರ ಕೆಲವು ಸಹಪಾಠಿಗಳು ಯಮನ್ ದೇಶದಲ್ಲಿ ಒಂದು ದೀರ್ಘ ಸಂಚಾರದಲ್ಲಿದ್ದರು. ಮಗ್ರಿಬ್ ನಮಾಝಿನ ಸಮಯವಾದಾಗ ಒಂದು ಕುಗ್ರಾಮ ತಲುಪಿದರು. ಮಗ್ರಿಬ್ ನಮಾಜ್ ಮುಗಿಸಿ ನಂತರ ರಾತ್ರಿ ಊಟ ಮಾಡಿ ಅಲ್ಲಿಂದ ಹೊರಡುವ ಎಂಬ ತೀರ್ಮಾನವನ್ನು ಮಾಡಿದ ಅವರು ತಮ್ಮೊಂದಿಗಿದ್ದ ಆಹಾರ ಪದಾರ್ಥಗಳು ಮತ್ತು ಇತರ ಗಂಟು ಮೂಟೆಗಳನ್ನು ಅಲ್ಲೇ ಒಂದು ಕಡೆ ಇಟ್ಟು ಇಮಾಮ್ ಶಾಫಿಈ (ರ) ರ ನೇತೃತ್ವದಲ್ಲಿ ಮಗ್ರಿಬ್ ನಮಾಜಿಗೆ ಕೈ ಕಟ್ಟಿದರು.
▪ಇವರು ತಂದ ಆಹಾರ ವಸ್ತುಗಳ ಪೈಕಿ ಎರಡು ಕೋಳಿಗಳೂ ಇದ್ದವು. ಇವರ ಚಲನ ವಲನಗಳನ್ನು ದೂರದಿಂದಲೇ ಗಮನಿಸುತ್ತಿದ್ದ ಗುಳ್ಳೆನರಿಯೊಂದು ಅವರು ನಮಾಝಿಗೆ ಕೈ ಕಟ್ಟಿದ ಕೂಡಲೇ ಎರಡು ಕೋಳಿಯಿಂದ ಒಂದನ್ನು ತನ್ನ ಬಾಯಿಯಿಂದ ಕಚ್ಚಿ ಕೊಂಡು ಹೋಯಿತು. ನಮಾಜು ಮುಗಿದು ನೋಡುವಾಗ ಒಂದು ಕೋಳಿ ಕಾಣೆ. ಇವರು ಬಹಳ ಬೇಸರದಿಂದಿರುವಾಗ ಅಲ್ಲೇ ದೂರದಲ್ಲಿ ಇದೇ ನರಿಯು ತನ್ನ ಬಾಯಿಯಲ್ಲಿ ಕೋಳಿಯಂತೆ ಗೋಚರಿಸುವ ಒಂದು ವಸ್ತುವನ್ನು ಕಚ್ಚಿ ನಿಂತಿರುವುದು ಕಂಡು ಬಂತು. *"ಇದು ನಮ್ಮ ಕೋಳಿ.. ಇದು ನಮ್ಮ ಕೋಳಿ.. ಸಿಕ್ಕಿತು.. ಸಿಕ್ಕಿತು.."* ಎಂದು ಇವರು ಹೇಳುತ್ತಿರುವಾಗ ಮೋಸಗಾರ ನರಿಯು ಆ ಕೋಳಿಯನ್ನು ಅಲ್ಲೇ ಹಾಕಿ ಮುಂದೆ ಹೋಯಿತು. ಇವರು ಬಹಳ ಸಂತೋಷದಿಂದ ಅದನ್ನು ತೆಗೆಯಲು ಆ ಕಡೆ ಹೋದಾಗ ಮತ್ತೊಂದು ದಾರಿಯಾಗಿ ಬಂದ ನರಿ ಅಲ್ಲಿದ್ದ ಎರಡನೇ ಕೋಳಿಯನ್ನೂ ದೋಚಿ ಪರಾರಿಯಾಯಿತು. ಮೊದಲನೇ ಕೋಳಿಯನ್ನು ತೆಗೆದು ನೋಡಿದಾಗ ಅದು ಕೋಳಿಯಾಗಿರಲಿಲ್ಲ. ಮೊದಲು ದೋಚಿದ ಕೋಳಿಯನ್ನು ತಿಂದು ಅದರ ಗರಿಗಳಿಂದ ಆವರಣ ಮಾಡಿದ ಒಂದು ಹೊದಿಕೆ ಮಾತ್ರವಾಗಿತ್ತದು. ಅದು ಹೋದ ಬೇಸರದಲ್ಲಿ ಇತ್ತ ಬಂದಾಗ ಎರಡನೇ ಕೋಳಿಯೂ ಮಾಯವಾಗಿತ್ತು.
▪ಗತಕಾಲದ ಗ್ರಂಥಗಳಲ್ಲಿ ಪ್ರಾಣಿಗಳ ಬಗ್ಗೆ ಕೆಲವು ಕತೆಗಳು ಕಂಡುಬರುತ್ತದೆ. ನರಿಯ ಕುಂಟು ಬುದ್ದಿಯನ್ನು ವಿವರಿಸುವ ಒಂದೆರಡು ಕತೆಗಳನ್ನು ಓದಿನೋಡಿ.
▪ಒಮ್ಮೆ ಒಂದು ಸಿಂಹ, ಒಂದು ನರಿ, ಮತ್ತು ಒಂದು ತೋಳ ಒಟ್ಟಾಗಿ ಬೇಟೆಯಾಡಲು ಹೋದರು. ಸಂಜೆಯಾದಾಗ ಒಂದು ಜಿಂಕೆ, ಒಂದು ಕತ್ತೆ, ಮತ್ತು ಒಂದು ಮೊಲವು ಬೇಟೆಗೆ ಸಿಕ್ಕಿತು. ಬೇಟೆಗೆ ಸಿಕ್ಕಿದ ಮೃಗಗಳನ್ನು ನ್ಯಾಯವಾದ ರೂಪದಲ್ಲಿ ಸಮಾನವಾಗಿ ಹಂಚಿಕೆ ಮಾಡಲು ಸಿಂಹವು ತೋಳನಲ್ಲಿ ಹೇಳಿತು. ಆಗ ತೋಳ ಬಹಳ ಖುಷಿಯಿಂದ ಹೇಳಿತು. *" ಪರವಾಗಿಲ್ಲ ನಾನು ಮಾಡುತ್ತೇನೆ. ಕತ್ತೆ ಕಾಡಿನ ರಾಜನಾದ ನಿಮಗೆ. ಮೊಲವು ನಮ್ಮ ನರಿಗೆ. ಬಾಕಿ ಇರುವ ಜಿಂಕೆ ನನಗೆ"* ಈ ಹಂಚಿಕೆಯಲ್ಲಿ ಕುಪಿತನಾದ ಸಿಂಹವು ತನ್ನ ಒಂದೇ ಪೆಟ್ಟಿನಲ್ಲಿ ತೋಳದ ರುಂಡ ಮತ್ತು ಮುಂಡವನ್ನು ಬೇರ್ಪಡಿಸಿತು. ನಂತರ ಸಿಂಹವು ಜಾಣ ನರಿಯತ್ತ ಮುಖಮಾಡಿ ಹೇಳಿತು. *"ಹಂಚಿಕೆ ಮಾಡುವುದರಲ್ಲಿ ಅವನ ತಿಳಿಗೇಡಿತನವೇ ಅವನ ಈ ಸಾವಿಗೆ ಕಾರಣವಾಯಿತು. ಈಗ ನೀನು ಒಂದು ನ್ಯಾಯಯುತವಾದ ಹಂಚಿಕೆ ಮಾಡಬೇಕು"* ನರಿ ಹೇಳಿತು. *" ಸರಿ ಪ್ರಭು... ನಾನು ಮಾಡುತ್ತೇನೆ. ಕತ್ತೆಯು ನಿಮ್ಮ ಮಧ್ಯಾಹ್ನದ ಭೋಜನಕ್ಕೆಇರಲಿ. ಜಿಂಕೆ ನಿಮ್ಮ ರಾತ್ರಿಯ ಉಪಹಾರವಾಗಲಿ. ಮೊಲ ಸಂಜೆಯ ತಿಂಡಿಯಾಗಿರಲಿ "* ನರಿಯ ಈ ಹಂಚಿಕೆಯಲ್ಲಿ ಬಹಳ ಸಂತೋಷಗೊಂಡ ಸಿಂಹ ನರಿಯಲ್ಲಿ ಹೇಳಿತು. *"ಅಲ್ಲಾ ಮಾರಾಯ ನಿನಗೆ ಈ ಪಾಲು ವಿದ್ಯೆ ಯಾರು ಕಲಿಸಿ ಕೊಟ್ಟದ್ದು...? ನೀನಿದು ಎಲ್ಲಿಂದ ಕಲಿತದ್ದು..? ಬಹಳ ಚೆನ್ನಾಗಿದೆ."* ನರಿ ಹೇಳಿತು. *"ಸ್ವಾಮೀ... ಯಾವುದೇ ಶಾಲೆ ಕಾಲೇಜಿನಿಂದ ಕಲಿತ ವಿದ್ಯೆ ಅಲ್ಲ ಇದು. ತೋಳದ ರುಂಡ ಮುಂಡದಿಂದ ಬೇರ್ಪಟ್ಟಾಗಲೇ ಕಲಿತ ಒಂದು ಸಾಂದರ್ಭಿಕ ಪಾಠವಾಗಿದೆ ಇದು."*
▪ ಹಿಜ್‌ರಾ ಆರನೇ ಶತಮಾನದ ವಿಶ್ವ ವಿಖ್ಯಾತ ಪಂಡಿತ ಅಲ್ಲಾಮಾ ಅಬುಲ್ ಫರಜ್ ಬಿನ್ ಜವ್‌ಝಿಯವರು ಈ ಕತೆಯನ್ನು ತನ್ನ ಪ್ರಖ್ಯಾತ ಗ್ರಂಥವಾದ *"ಅಲ್ ಅಝ್‌ಕಿಯಾ"* ದಲ್ಲಿ ಉಲ್ಲೇಖಿಸಿದ್ದಾರೆ.
▪ಒಮ್ಮೆ ಕಾಡಿನ ರಾಜನಾದ ಸಿಂಹಕ್ಕೆ ಏನೋ ಮಾರಕ ಖಾಯಿಲೆ ಬಂತು. ನರಿ ಹೊರತು ಕಾಡಿನ ಎಲ್ಲಾ ಜೀವಿಗಳೂ ರೋಗಿಯಾದ ಸಿಂಹವನ್ನು ಸಂದರ್ಶನ ಮಾಡಿದರು. ನರಿಯ ಗೈರು ಹಾಜರಿಯ ಬಗ್ಗೆ ತೋಳವು ಸಿಂಹನಲ್ಲಿ ಚಾಡಿ ಮಾಡಿತು. ಕೋಪಗೊಂಡ ಸಿಂಹ ನರಿಯನ್ನು ವಿಚಾರಣೆ ಮಾಡಲು ತನ್ನ ಸನ್ನಿಧಿಗೆ ಹಾಜರು ಪಡಿಸಲು ಹೇಳಿತು. ಸಿಂಹರಾಜನ ಸನ್ನಿಧಿಯಲ್ಲಿ ಹಾಜರಾದ ನರಿಯಲ್ಲಿ ಸಿಂಹವು ಕೇಳಿತು..? *"ನಾನಿಷ್ಟು ದಿನ ರೋಗ ಪೀಡಿತನಾಗಿ ಹಾಸಿಗೆಯಲ್ಲಿರುವಾಗ ನೀನೆಲ್ಲಿದ್ದಿ...? ಎಲ್ಲಾ ಮೃಗಗಳೂ ನನ್ನನ್ನು ನೋಡಲು ಬಂದರು. ಅದರೆ ನೀನು ಮಾತ್ರ ತಪ್ಪಿಸಿರುವೆ. ಏನು ಕಾರಣ..?"* ಜಾಣನಾದ ನರಿ ಹೇಳಿತು. *"ಓಹೋ ನಾನು ಮನೆಯಲ್ಲಿ ಆರಾಮವಾಗಿದ್ದಿ ಎಂದು ಭಾವಿಸಿದ್ದೀರಾ ನೀವು..? ನಾನು ನಿಮ್ಮ ಖಾಯಿಲೆಗೆ ಬೇಕಾದ ಔಷಧಿ ಹುಡುಕಿ ಹೋಗದ ಜಾಗ ಇಲ್ಲ. ಈ ದಿನಗಳಲ್ಲಿ ನಾನು ಎಷ್ಟು ತಜ್ಞರನ್ನು ಬೇಟಿಯಾಗಿದ್ದೇನೆಂದು ನನಗೇ ಗೊತ್ತು."*
▪ನರಿಯ ಈ ಉತ್ತರದಿಂದ ಬಹಳ ಸಂತೋಷಗೊಂಡ ಸಿಂಹ ಕೇಳಿತು. *"ಹಾಗಾದರೆ ಈಗ ಔಷಧಿ ದೊರಕಿತಾ..?"* ನರಿ ಹೇಳಿತು. *"ಹಾ ದೊರಕಿತು. ಒಬ್ಬ ಪರಿಣತ ವೈದ್ಯರು ಹೇಳುವುದೇನೆಂದರೆ, ತೋಳದ ಮೊಣಕಾಲಿನ ಒಳಗೆ ಒಂದು ಗುಂಡಿನಂತಹಾ ವಸ್ತು ಇದೆ. ಅದನ್ನು ತೆಗೆದು ತಿಂದರೆ ಖಾಯಿಲೆ ಗುಣವಾಗುವುದಲ್ಲದೆ ಜೀವಪರ್ಯಂತ ಮತ್ತೆಂದಿಗೂ ಆ ಖಾಯಿಲೆ ಮರುಕಳಿಸದು."* ಇಷ್ಟು ಹೇಳಿ ನರಿಯು ಅಲ್ಲಿಂದ ಹಿಂದೆ ಸರಿಯಿತು. ಸಿಂಹ ಕೂಡಲೇ ತೋಳವನ್ನು ಕರೆಯಿಸಿ ತನ್ನ ಚೂಪಾದ ಉಗುರಿರುವ ಬಲಷ್ಟವಾದ ಕಾಲಿನಿಂದ ತೋಳದ ಮೊಣಕಾಲಿಗೆ ಒಂದು ಏಟು ಕೊಟ್ಟಿತು. ಸಿಂಹದ ಏಟಿನಿಂದ ತೋಳದ ಕಾಲಿನಿಂದ ಧಾರಾಕಾರವಾಗಿ ರಕ್ತ ಹರಿಯ ತೊಡಗಿತು. ಕೆಲವು ದಿನಗಳ ಬಳಿಕ ತನ್ನ ಭೀಕರವಾಗಿ ಗಾಯಗೊಂಡ ಕಾಲಿನಲ್ಲಿ ಡೊಂಕು ಹಾಕಿ ನಡೆಯತ್ತಿದ್ದ ತೋಳನಲ್ಲಿ ನರಿ ಹೇಳಿತಂತೆ. *"ಓ ಹೆಡ್ಡಾ... ಯಾವಾಗಲೂ ರಾಜ ಸನ್ನಿಧಿಯಲ್ಲಿ ಮಾತನಾಡುವಾಗ ಆಲೋಚನೆ ಮಾಡಿ ಮಾತನಾಡಬೇಕು. ಮಲೆಮಂಗನಂತೆ ಆಗಬಾರದು. ಪೆದ್ದತನ ತೋರಿಸಬಾರದು. ಈಗ ನೋಡು ಏನಾಯಿತು...?"*
▪ಈ ನೀತಿ ಕತೆಯನ್ನು ಅಲ್ಲಾಮಾ ಹಾಫಿಲ್ ಅಬೂ ನಈಮಿಯವರು ತನ್ನ ಪ್ರಸಿದ್ಧ ಗ್ರಂಥವಾದ *ಹಿಲ್‌ಯತುಲ್ ಅವ್‌ಲಿಯಾಯಿ* ಯಲ್ಲಿ ಉಲ್ಲೇಖಿಸಿದ್ದಾರೆ.
▪ರಾತ್ರಿ ನಿದ್ದೆಯಲ್ಲಿ ಹೆದರಿಕೆಯಾಗಿ ಕೂಗುವುದು, ನಿದ್ದೆಯಲ್ಲಿ ಏನೆಲ್ಲಾ ಮಾತನಾಡುವುದು ಇತ್ಯಾದಿ ಖಾಯಿಲೆಯಿರುವ ಮಕ್ಕಳಿಗೆ ಅಂತೆಯೇ ಅಪಸ್ಮಾರ ಇರುವವರಿಗೆ ನರಿಯ ದಂತವನ್ನು ಅವರ ಸೊಂಟಕ್ಕೆ ಕಟ್ಟುವುದಾದರೆ ಈ ರೋಗವು ಸಂಪೂರ್ಣ ಗುಣವಾಗುತ್ತದೆ
▪ಪಾರ್ಶ್ವವಾಯು ಮತ್ತು ಕುಷ್ಠರೋಗ ಇರುವವರು ಇದರ ಮಾಂಸವನ್ನು ತಿನ್ನುವುದಾದರೆ ರೋಗದಲ್ಲಿ ಸ್ವಲ್ಪ ಸಮಾಧಾನವಿರುತ್ತದೆ.
▪ಜನಿಸುವಾಗಲೇ ತಲೆಯಲ್ಲಿ ಕೂದಲಿಲ್ಲದೆ ತಲೆ ಬೋಳಾಗಿ ಜನಿಸುವ ಮಕ್ಕಳಿಗೆ ನರಿಯ ರಕ್ತವನ್ನು ಅವರ ತಲೆಗೆ ಕೆಲವು ದಿನಗಳ ಕಾಲ ಲೇಪಿಸುವುದಾದರೆ ಕೂದಲು ಬರಲು ಶುರುವಾಗುತ್ತದೆ.
▪ಒಬ್ಬನಿಗೆ ನರಿಯ ಕನಸು ಬಿದ್ದರೆ ಅವನ ಮಾನಹಾನಿ ಆಗುವ ಯಾವುದಾದರು ಘಟನೆ ಆಗುವುದರ ಲಕ್ಷಣವಾಗಿದೆ.
▪ಮಾರಕ ರೋಗದಲ್ಲಿ ಬಳಲುತ್ತಿರುವ ಒಬ್ಬ ನರಿಯ ಹಾಲನ್ನು ಕುಡಿಯುವ ಕನಸು ಕಂಡರೆ ಅವನ ರೋಗ ಗುಣವಾಗುವುದರ ಸೂಚನೆಯಾಗಿದೆ.
▪ಒಬ್ಬನು ನರಿಯನ್ನು ಮುಟ್ಟುವ ಕನಸು ಕಂಡರೆ ಅವನಿಗೆ ಪಿಶಾಚಿಯ ಉಪದ್ರವ ಉಂಟಾಗುವುದರ ನಿಶಾನೆಯಾಗಿದೆ.
▪ನರಿಯ ಮಾಂಸ ಭಕ್ಷ್ಯಯೋಗ್ಯವಲ್ಲ. ಹರಾಂ.
▪ಸಂಗ್ರಹ: ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಮತ್ತು ಇಮಾಮ್ ಖಝ್'ವೀನಿಯವರ *ಅಜಾಯಿಬುಲ್ ಮಖ್‌ಲೂಕಾತ್* ಎಂಬ ಗ್ರಂಥ.
Comments