Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *19*


*▪ ಸಂಗಾತಿಗಾಗಿ ಜೀವಪರ್ಯಂತ ಶೋಕಾಚರಿಸುವ ಚಂದ್ರಮುಕುಟ ಪಕ್ಷಿ (ಹುದ್‌ಹುದ್)*

*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119

       ▪ಪವಿತ್ರ ಕುರ್‌ಆನಿನ ಸೂರಃ *ಅಲ್ ನಮ್‌ಲ್* ನಲ್ಲಿ ಉಲ್ಲೇಖಿಸಲ್ಪಟ್ಟ ಒಂದು ವಿಶೇಷ ಪಕ್ಷಿಯಾಗಿದೆ *ಹುದ್‌ಹುದ್* ಅಥವಾ ಚಂದ್ರಮುಕುಟ.
      ▪ಸಾಧಾರಣ ಗೋಚರಕ್ಕೆ *ಮರಕುಟಿಕ* ಪಕ್ಷಿಯಂತೆ ಕಾಣುವುದಾದರೂ ಇದು ನಿಜವಾಗಿ ಮರಕುಟಿಕ ಅಲ್ಲ. ಮರಕುಟಿಕನಿಗಿಂತ ವ್ಯತ್ಯಾಸವಾಗಿ ಇದರ ತಲೆಯಲ್ಲಿ ಬಹಳ ದೊಡ್ಡ ಸುಂದರವಾದ ಕಿರೀಟವಿದೆ.  ಉದ್ದವಾದ ಚೂಪಾದ ಕೊಕ್ಕಿದೆ. ಅಂತೆಯೇ ಜೀವನ ಶೈಲಿಯಲ್ಲೂ ತುಂಬಾ ವ್ಯತ್ಯಾಸವಿದೆ. ಒಟ್ಟಿನಲ್ಲಿ ಮರಕುಟಿಕವಾಗಿ ಇದಕ್ಕೆ ಯಾವುದೇ ಸಂಬಂಧ ಇಲ್ಲ. ಇಂಗ್ಲಿಷ್‌ನಲ್ಲಿ ಇದನ್ನು *HOOPOE* (ಹೂಪ್) ಎಂದೂ ಕನ್ನಡದಲ್ಲಿ *ಚಂದ್ರಮುಕುಟ* ಎಂದೂ ಕರೆಯುತ್ತಾರೆ. ಕುಳಿತಾಕ್ಷಣ ಅರ್ಧಚಂದ್ರಾಕೃತಿಯಲ್ಲಿ ಇದರ ಜುಟ್ಟು ಅಥವಾ ಕಿರೀಟ ತೆರೆದು ಕೊಳ್ಳುವುದರಿಂದ ಇದಕ್ಕೆ *ಚಂದ್ರಮುಕುಟ* ಎಂಬ ಹೆಸರು ಬಂತು. ಅಂತೆಯೇ ಇದು ಯಾವಾಗಲೂ *ಹೂಪ್..ಪ್..ಪ್.ಪ್.* ಎಂಬ ಶಬ್ದದಿಂದ ಕೂಗುವ ಕಾರಣದಿಂದ ಇದಕ್ಕೆ ಇಂಗ್ಲಿಷ್ ನಲ್ಲಿ *ಹೂಪ್*  (Hoopoe) ಎಂಬ ಹೆಸರು ಬಂತೆಂದು ಹೇಳಲಾಗುತ್ತದೆ. ಮರಕುಟಿಕನನ್ನು ಇಂಗ್ಲಿಷ್ ನಲ್ಲಿ *Woodpecker* ಎಂದು ಕರೆಯಲಾಗುತ್ತದೆ.
     ▪ಇದರಂತೆ ಕೆಲವು ಸ್ಥಳೀಯ ಕುರ್‌ಆನ್ ವ್ಯಾಖ್ಯಾನ ಗ್ರಂಥಗಳಲ್ಲಿ *ಸೂರಃ ಅಲ್ ನಮ್‌ಲ್* ನಲ್ಲಿ ಉಲ್ಲೇಖಿಸಲ್ಪಟ್ಟ  ಹುದ್‌ಹುದವನ್ನು *ಮರಕುಟಿಕ* ಎಂದು ಭಾಷಾಂತರಿಸಿರುವುದು ನಿಜಕ್ಕೂ ಅದು ಪ್ರಮಾದವೆಂದು ತೋರುತ್ತದೆ.
    ▪ಈ ಪಕ್ಷಿಯು ಯಾವಾಗಲೂ ಬಹಳ ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಯಾಕೆಂದರೆ, ಇದು ತನ್ನ ಗೂಡನ್ನು ಒಣ ಸಗಣಿ, ಒಣಗಿದ ಗೊಬ್ಬರ ಮುಂತಾದ ಕೆಟ್ಟ ವಾಸನೆಯಿರುವ ವಸ್ತುಗಳಿಂದ ಮಾಡುತ್ತದೆ. ಆದ್ದರಿಂದ ಆ ಗೂಡಿನಲ್ಲಿ ವಾಸಿಸುವ ಈ ಪಕ್ಷಿಯ ಶರೀರವೂ ಯಾವಾಗಲೂ ಕೆಟ್ಟ ವಾಸನೆಯಿಂದ ಕೂಡಿರುತ್ತದೆ.
    ▪ಸುಮಾರು ಹತ್ತು ಹದಿನೈದು ವರ್ಷ ತನಕ ಆಯುಷ್ಯವಿರುವ ಈ ಪಕ್ಷಿ ಐದರಿಂದ ಎಂಟರ ತನಕ ಮೊಟ್ಟೆಯಿಡುತ್ತದೆ. ಗರಿಷ್ಠ ಹದಿನೆಂಟು ದಿನಗಳ ತನಕ ಮೊಟ್ಟೆಗೆ ಕಾವು ಕೊಡುತ್ತದೆ. ತಾಯಿ ಪಕ್ಷಿ ಮೊಟ್ಟೆಗೆ ಕಾವು ಕೊಡುವ ವೇಳೆ ಗಂಡು *ಹುದ್‌ಹುದ್*  ಗೂಡಿಗೆ ಆಹಾರ ಸರಬರಾಜು ಮಾಡುತ್ತದೆ. ಮೊಟ್ಟೆ ಒಡೆದು ಬರುವ ಮರಿಯು ಬಹಳ ಸುಂದರ ಮತ್ತು ಕೋಮಲವಾಗಿರುತ್ತದೆ. ಬಹಳ ವೇಗವಾಗಿ ಹಾರಾಡುವ ಈ ಪಕ್ಷಿ ಗಂಟೆಗೆ ಸುಮಾರು ನಲುವತ್ತು ಕಿಲೋಮೀಟರ್ ವೇಗದಲ್ಲಿ ಹಾರಾಡುತ್ತದೆ.
   ▪ಕೃಷಿ ಗದ್ದೆಯಲ್ಲಿ ಇರುವ‌ ಹುಳಗಳು, ಕೀಟಗಳು ಮತ್ತು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ತನ್ನ ಚೂಪಾದ ಕೊಕ್ಕಿನಿಂದ ಹೆಕ್ಕಿ ತಿನ್ನುವುದರಲ್ಲಿ ಅಗ್ರಗಣ್ಯನಾದ ಈ ಪಕ್ಷಿಯನ್ನು *ರೈತನಮಿತ್ರ* ಎಂಬ ಉಪನಾಮದಿಂದ ಕರೆಯುತ್ತಾರೆ.
   ▪ಈ ಪಕ್ಷಿಯ ಬೇರೊಂದು ವಿಶೇಷತೆಯೆಂದರೆ, ಮನುಷ್ಯನು ಗಾಜಿನ ಬಾಟಲಿಯ ಒಳಗಿರುವ ನೀರನ್ನು ಹೇಗೆ ಸ್ಪಷ್ಟವಾಗಿ ಕಾಣುತ್ತಾನೋ ಅದೇ ರೀತಿ ಭೂಮಿಯ ಅಡಿ  ಭಾಗದಲ್ಲಿ ಎಲ್ಲಿ ಯಾವ ಜಾಗದಲ್ಲಿ ನೀರಿದೆ ಎಂಬುದನ್ನು ಇದು ಸುಲಭವಾಗಿ ಕಾಣುತ್ತದೆ. ಆ ಕಾರಣದಿಂದ ಚಕ್ರವರ್ತಿಯಾದ ಪ್ರವಾದಿ ಸುಲೈಮಾನ್ (ಅ) ರು ತನ್ನ ಸಂಚಾರದಲ್ಲಿ ತನಗೆ ನೀರಿನ ಅಗತ್ಯ ಬರುವಾಗ ನೀರು ಹುಡುಕಲು ಒಬ್ಬ ಸಹಾಯಕನಾಗಿಯೂ ಮಾರ್ಗದರ್ಶಿಯಾಗಿಯೂ ಈ ಪಕ್ಷಿಯನ್ನು ಇಟ್ಟಿದ್ದರೆಂದು ಈ ವಿಷಯವಾಗಿ ಬಂದ ಕುರ್‌ಆನಿನ ವ್ಯಾಖ್ಯಾನದಲ್ಲಿ ಹಲವಾರು ಕುರ್‌ಆನ್ ಮುಫಸ್ಸಿರುಗಳು ಅಭಿಪ್ರಾಯ ಪಟ್ಟಿದ್ದಾರೆ. ನೀರಿರುವ ಜಾಗವನ್ನು ಇದು ತನ್ನ ಕೊಕ್ಕಿನಿಂದ ಕುಟ್ಟಿ ತೋರಿಸುತ್ತಿತ್ತು. ನಂತರ ನಿಮಿಷದಲ್ಲೇ ಸುಲೈಮಾನ್ (ಅ) ರ ಕೆಲಸಗಾರರಾದ ಜಿನ್ನುಗಳು ಮತ್ತು ಶೈತಾನರು ಬಾವಿತೋಡಿ ನೀರು ತೆಗೆದು ಕೊಡುತ್ತಿದ್ದರು.
   ▪ಪವಿತ್ರ *ಬಯ್ತುಲ್  ಮುಖದ್ದಸ್* ನ  ಬೃಹತ್ ಕಾಮಗಾರಿಯ ವೇಳೆ ಚಕ್ರವರ್ತಿಯಾದ ಪ್ರವಾದಿ ಸುಲೈಮಾನ್ (ಅ) ರು ಒಮ್ಮೆ ಪವಿತ್ರ ಮಕ್ಕಾ ಹರಮ್ ಶರೀಫಿಗೆ ಹೋಗಿ ಹಜ್ಜ್ ನಿರ್ವಹಿಸಬೇಕೆಂದು ತೀರ್ಮಾನಿಸಿದರು. ಹೋಗುವಾಗ ತನ್ನ ಸೈನಿಕರು, ಅರಮನೆಯ ಕೆಲಸಗಾರರು, ಬೈತುಲ್ ಮುಖದ್ದಸ್ ಕಾಮಗಾರಿಯಲ್ಲಿ ಸಕ್ರಿಯರಾದ ಎಲ್ಲಾ ಕೆಲಸಗಾರರು, ಅಂತೆಯೇ ರಾತ್ರಿ ಹಗಲೆನ್ನದೆ ದುಡಿದ ಜಿನ್ನ್‌ಗಳು ಪಿಶಾಚಿಗಳು, ಶೈತಾನರು ಮಾತ್ರವಲ್ಲ ಅವರೊಂದಿಗಿದ್ದ ಎಲ್ಲಾ ಪಕ್ಷಿಗಳು ಮತ್ತು ಪ್ರಾಣಿಗಳನ್ನು ಅವರ ಜೊತೆಗೆ ಕರೆದುಕೊಂಡು ಹೋಗಿದ್ದರು. ಪ್ರವಾದಿ ಸುಲೈಮಾನ್ (ಅ) ರು ಮನುಷ್ಯನಿಂದ ಮಾಡಲು ಸಾದ್ಯವಾಗದ ಎಲ್ಲಾ ಕಷ್ಟದ ಕೆಲಸಗಳನ್ನು ಜಿನ್ನ್ ಮತ್ತು ಶೈತಾನರಿಂದ ಮಾಡಿಸುತ್ತಿದ್ದರು.
    ▪ ಗಾಳಿಯನ್ನು ತನಗೆ ಬೇಕಾದಂತೆ ಉಪಯೋಗ ಮಾಡುವ ಪವಾಡವನ್ನು ಅಲ್ಲಾಹನು ಅವರಿಗೆ ಕೊಟ್ಟಿದ್ದನೆಂದು ಪವಿತ್ರ ಕುರ್‌ಆನ್ ಹೇಳುತ್ತದೆ. ಅಂತೆಯೇ ಸಾವಿರಾರು ಕಿಲೋಮಿಟರ್ ತನಕ ದೂರವಿರುವ ಫಲಸ್ತೀನಿನಿಂದ ಮಕ್ಕಾ ನಗರಕ್ಕೆ ಲಕ್ಷೋಪಲಕ್ಷ ಜನರು ಮತ್ತು ಸಾವಿರಾರು ಜಾನುವಾರುಗಳ ಒಂದು ದಂಡನ್ನು ಗಾಳಿಯು ಕೆಲವೇ ಗಂಟೆಗಳಲ್ಲಿ ತಲುಪಿಸಿತು.
   ▪ ಪ್ರವಾದಿ ಸುಲೈಮಾನ್ (ಅ) ಮತ್ತು ಅವರ ಜೊತೆಗಿದ್ದವರು ಪವಿತ್ರ ಹರಮಿನಲ್ಲಿ ಹಲವಾರು ದಿನಗಳ ಕಾಲ ತಂಗಿದ್ದರು. ಈ ಸಮಯದಲ್ಲಿ ಚಕ್ರವರ್ತಿಯೂ ಲಕ್ಷಾಧಿಪತಿಯೂ ಆದ ಪ್ರವಾದಿ ಸುಲೈಮಾನ್ (ಅ) ರು ಹರಮ್ ಪರಿಸರದವರಿಗೂ, ತನ್ನೊಂದಿಗೆ ಬಂದವರಿಗೂ ಅಂತೆಯೇ ಇತರ ಯಾತ್ರಿಕರಿಗಾಗಿಯೂ ದಿನಾಲೂ ಐದು ಸಾವಿರ ಒಂಟೆ, ಐದು ಸಾವಿರ ಕೋಣ, ಮತ್ತು ಇಪ್ಪತ್ತು ಸಾವಿರ ಆಡುಗಳನ್ನು ಚೂರಿಹಾಕಿ ಪಾಕಮಾಡಿ ಸತ್ಕಾರ ಮಾಡುತ್ತಿದ್ದರು. ಮಾತ್ರವಲ್ಲ ಈ ಸತ್ಕಾರ ಪಾರ್ಟಿ ನಡೆಯುವ ಸಭೆಯಲ್ಲಿಯೇ ಒಂದು ಸಾವಿರ ವರ್ಷ ಕಳೆದು ಬರುವ ಒಬ್ಬರು ಪ್ರವಾದಿಯರ ಬಗ್ಗೆಯೂ ಭಾಷಣಮಾಡಿ ಅವರ ಗುಣಗಾನ ಹೇಳುತ್ತಿದ್ದರು. *"ಈ ಮಣ್ಣಿನಲ್ಲಿ ಇನ್ನು ಒಂದು ಸಾವಿರ ವರ್ಷಗಳ ನಂತರ ಒಬ್ಬರು ಮುಹಮ್ಮದ್ ಎಂಬ ಹೆಸರಿನ ಪ್ರವಾದಿ ಹುಟ್ಟಲಿದ್ದಾರೆ. ಅವರಿಲ್ಲದಿದ್ದರೆ ಈ ಪ್ರಪಂಚವೇ ಇರುತ್ತಿರಲಿಲ್ಲ. ಯಾರ ಅಕ್ಷೇಪಕ್ಕೋ ಯಾರ ಗುಣಗಾನಕ್ಕೋ ಬಲಿಪಶುವಾಗದ ಆ ಪ್ರವಾದಿಯನ್ನು ಕಣ್ಣಾರೆ ನೋಡಲು ಅಥವಾ ಕನಿಷ್ಠಪಕ್ಷ ಅವರ ಉಮ್ಮತಿಯಾಗಲು ಅವಕಾಶ ದೊರೆತವರು ಭಾಗ್ಯವಂತರು*" ಇದಾಗಿತ್ತು ಅವರ ಭಾಷಣದ ಸಂಕ್ಷಿಪ್ತ ರೂಪ.
     ▪ಒಟ್ಟಿನಲ್ಲಿ ಪ್ರವಾದಿ ಮುಹಮ್ಮದ್ (ಸ) ರ ಜನನಕ್ಕಿಂತ ಮೊದಲೇ ಅವರ ಗುಣಗಾಣ ಹೇಳಿ ಆಹಾರ ವಿತರಣೆ ಮಾಡುವ ಸಂಪ್ರದಾಯ ಪ್ರಾಚೀನ ಕಾಲದಲ್ಲೇ ಇತ್ತು ಎಂಬುದಕ್ಕೆ ಈ ಘಟನೆ ಆಧಾರವಾಗಿದೆ. ಇದು ಯಾವುದೇ ಚಿಣ್ಣರ ಲೋಕದ ಕತೆಯಲ್ಲ. ಪವಿತ್ರ ಕುರ್‌ಆನಿನ ಅಂಗೀಕೃತ ತಫ್‌ಸೀರುಗಳಾದ *ತಫ್ಸೀರ್ ಖಾಝಿನ್,* *ತಫ್ಸೀರ್ ಬಹ್‌ರುಲ್ ಮದೀದ್,* *ತಫ್ಸೀರ್ ಖಷ್ಷಾಫ್* ಮುಂತಾದ ಹಲವಾರು ತಫ್‌ಸೀರುಗಳಲ್ಲಿ ವರದಿಯಾದ ಸತ್ಯ ಘಟನೆಯಾಗಿದೆ. ದಿನಾಲು ಪಾಕಮಾಡುತ್ತಿದ್ದ ಒಂಟೆ, ಎತ್ತು, ಆಡು ಇವೆಲ್ಲವೂ ತಾನು ಹೊರಡುವಾಗ ಫಲಸ್ತೀನಿನ ತನ್ನ ರಾಜ ದರ್ಬಾರಿನಿಂದ ಗಾಳಿ ಮುಖಾಂತರ ಕೊಂಡು ಹೋದದ್ದೆಂದು ಓದುಗರು  ತಿಳಿಯಬೇಕಾಗಿದೆ.
   ▪ಪ್ರವಾದಿ ಸುಲೈಮಾನ್ (ಅ) ರು ಎಲ್ಲರಂತೆ ಒಬ್ಬ ಸಾಧಾರಣ ಚಕ್ರವರ್ತಿ ಆಗಿರಲಿಲ್ಲ. ಇಡೀ ಭೂಲೋಕದ ಚಕ್ರವರ್ತಿ ಆಗಿದ್ದರು. ಅಂದರೆ ಒಂದು ದಿನ ಐದು ಸಾವಿರ ಒಂಟೆ *ದ್ಸಬಹ್* ಮಾಡುವುದು ಎಂದರೆ ಅವರಿಗೆ ಹೋಲಿಸಿ ನೋಡಿದರೆ ಅದು ಅದ್ಭುತವೇನೂ ಅಲ್ಲ. ಅದು ಇಂದಿನ ನಮ್ಮ ಮನೆಯಲ್ಲಿ ಒಂದು ಕೋಳಿ ಚೂರಿಹಾಕಿ ಪದಾರ್ಥ ಮಾಡುವುದಕ್ಕೆ ಸಮಾನವೆಂದು ಹೇಳಿದರೂ ತಪ್ಪಾಗಲಾರದು. ಯಾಕೆಂದರೆ ಅವರು ಇಡೀ ಭೂಜಗತ್ತನ್ನು ಆಡಳಿತ ನಡೆಸಿದ ಒಬ್ಬ ಚಕ್ರವರ್ತಿ ಆಗಿದ್ದರು.
     ‌ ▪ಈ ಭೂಲೋಕವನ್ನು ಸಂಪೂರ್ಣ ಆಡಳಿತ ಮಾಡಿದ್ದು ಬರೇ ನಾಲ್ಕು ಚಕ್ರವರ್ತಿಗಳು ಮಾತ್ರ. ಅವರಲ್ಲಿ ಇಬ್ಬರು ಮುಸ್ಲಿಮರು ಮತ್ತು ಇನ್ನಿಬ್ಬರು ಅಮುಸ್ಲಿಮರು.

1 *ಪ್ರವಾದಿ ಸುಲೈಮಾನ್*.(ಮುಸ್ಲಿಮ್)
2 *ಝುಲ್‌ಖರ್ನಯಿನ್* (ಮುಸ್ಲಿಮ್)
3 *ನಮ್‌ರೂದ್* (ಅಮುಸ್ಲಿಮ್)
4 *ಬುಖ್‌ತ್‌ನಸರ್* (ಅಮುಸ್ಲಿಮ್)
    ▪ನಂತರ ಅಲ್ಲಿಂದ ಪ್ರವಾದಿ ಸುಲೈಮಾನ್ (ಅ) ರಿಗೆ ಯಮನ್ ದೇಶಕ್ಕೆ ಒಂದು ಸಂದರ್ಶನ ಮಾಡಬೇಕೆಂಬ ಹಂಬಲವಾಯಿತು. ಯಾವುದೇ ವಿಸ, ಟಿಕೆಟ್, ಸ್ಟ್ಯಾಂಪಿಂಗ್ ಇತ್ಯಾದಿಗಳ ಅಗತ್ಯವಿಲ್ಲದ ಆ ಕಾಲದಲ್ಲಿ ತನ್ನನ್ನೂ ತನ್ನೊಂದಿಗಿರುವವರನ್ನೂ ಯಮನ್ ದೇಶಕ್ಕೆ ತಲುಪಿಸಲು ಸುಲೈಮಾನ್ (ಅ) ರು ಗಾಳಿಗೆ ಆಜ್ಞೆ ಕೊಟ್ಟರು. ಮಕ್ಕಾದಿಂದ ಯಮನಿಗೆ ಸುಮಾರು ಒಂದು ತಿಂಗಳು ಒಂಟೆಯ ಮೂಲಕ ಸಂಚಾರ ಮಾಡುವ  ದೂರವನ್ನು ಗಾಳಿಯು ಕೆಲವೇ ಗಂಟೆಗಳಲ್ಲಿ ಸಂಚರಿಸಿ ತಲುಪಿಸಿತು. ಬೆಳಿಗ್ಗೆ ಮಕ್ಕಾದಿಂದ ಹೊರಟವರು ಮಧ್ಯಾಹ್ನಕ್ಕೆ ಮೊದಲೇ ಕೃಷಿ ಮತ್ತು ಹಣ್ಣು ಹಂಪಲುಗಳಿಂದ ಹಚ್ಚ ಹಸಿರಾದ ಯಮನಿನ *ಸನ್‌ಆಅ್* ಎಂಬ ಪ್ರದೇಶ ತಲುಪಿದಾಗ ಮೇಲಿನಿಂದ ಕೆಳಗೆ ನೋಡುವಾಗ ಕಾಣುವ ಹಚ್ಚ ಹಸಿರಿನ ವೈಭವಕ್ಕೆ ಪ್ರವಾದಿ ಸುಲೈಮಾನ್ (ರ) ರು ಅಚ್ಛರಿ ಗೊಂಡರು. ಕೂಡಲೇ ಗಾಳಿಗೆ ಅಲ್ಲಿ ಇಳಿಸಲು ಸೂಚನೆ ಕೊಟ್ಟರು.
   ▪ *ಸನ್‌ಆಅ್* ನ ಹಚ್ಚ ಹಸಿರು ಭೂಮಿಯಲ್ಲಿ ಇವತ್ತು ಸ್ಪಲ್ಪ ವಿಶ್ರಾಂತಿ ತೆಗೆದು ಮಧ್ಯಾಹ್ನದ ಊಟ ನಮಾಝ್ ಎಲ್ಲಾ ಮುಗಿಸಿ ಆರಾಮವಾಗಿ ಇಲ್ಲಿಂದ ಹೊರಡುವ ಎಂದು ಸುಲೈಮಾನ್ (ಅ) ರು ತೀರ್ಮಾನಿಸಿದರು. ಇದನ್ನು ತಿಳಿದ ಅವರ ಜೊತೆಗಿದ್ದ *ಹುದ್‌ಹುದ್* ಪಕ್ಷಿಯು ತಾನು ಮೊದಲು ಕಾಣದ ಊರು ಆದ್ದರಿಂದ ಪರಿಸರವನ್ನೆಲ್ಲಾ ಒಮ್ಮೆ ನೋಡಿ ಮಜಾ ಮಾಡಿ ಬರುವಾ ಎಂಬ ಇರಾದೆಯಿಂದ ಸುಲೈಮಾನ್ (ಅ) ರು ಅರಿಯದೆಯೇ ಮೆಲ್ಲನೆ ಮೇಲಕ್ಕೆ ಹಾರಿತು. ತುಂಬಾ ಮೇಲಕ್ಕೆ ತಲುಪಿದಾಗ ಬಹಳ ದೂರದಲ್ಲಿ ಇದಕ್ಕಿಂತಲೂ ಹಸಿರಾದ ಒಂದು ಉದ್ಯಾನವು ಇರುವುದು ಈ ಪಕ್ಷಿಯ ಗಮನಕ್ಕೆ ಬಂತು. *"ಒಂದು ಆ ಕಡೆ ಹೋಗಿ ನೋಡಿದರೇನು..?"* ಎಂದು ಮನಸ್ಸಲ್ಲಿ ಬಂತು. ಕೂಡಲೇ ಆ ಕಡೆ ಹಾರಿ ಕೊನೆಗೆ ಆ ಹಸಿರಾದ ಉದ್ಯಾನಕ್ಕೆ ತಲುಪಿತು. ಅಲ್ಲಿ ತಲುಪಿದಾಗ ಅಲ್ಲಿಯೂ ಆ ತೋಟದಲ್ಲಿ ಈ *ಹುದ್‌ಹುದ* ದಂತೆ ಬೇರೊಂದು *ಹುದ್‌ಹುದ* ವಾಸವಾಗಿತ್ತು. ಯಮನಿನ ಅತಿಥೇಯ *ಹುದ್‌ಹುದ* ವು ಸುಲೈಮಾನ್ (ಅ)ರವರ ಹುದ್‌ಹುದ ವನ್ನು ಬಹಳ ಗೌರವದಿಂದ ಬರಮಾಡಿಕೊಂಡು ಕೇಳಿತು. *"ನಿನ್ನ ಹೇಸರೇನು..? ನೀನು ಎಲ್ಲಿಂದ ಬರುತ್ತಿರುವಿ..?"* ಆಗ ಅತಿಥಿ ಹುದ್‌ಹುದ್ ಹೇಳಿತು. *"ನನ್ನ ಹೆಸರು ಯ‌ಅ್‌ಫೂರ್. ನಾನು ಫಲಸ್ತೀನಿನಿಂದ ಬರುತ್ತಿದ್ದೇನೆ. ಇಡೀ ಭೂಲೋಕದ ಚಕ್ರವರ್ತಿಯಾಗಿದ್ದಾರೆ ನನ್ನ ಯಜಮಾನ. ಒಳ್ಳೆ ಶ್ರೀಮಂತ ವ್ಯಕ್ತಿ.  ಈ ಭೂಲೋಕದಲ್ಲಿ ಅವರಿಗೆ ಸಮಾನವಾದ ಅರಸ ಬೇರೆ ಯಾರೂ ಇಲ್ಲ. ಜಿನ್ನ್, ಶೈತಾನ, ಮೃಗ, ಪಕ್ಷಿಗಳು, ಗಾಳಿ ಎಲ್ಲವೂ ಅವರ ಅಧೀನದಲ್ಲಿದೆ. ಮಾತ್ರವಲ್ಲ ಎಷ್ಟೋ ಲಕ್ಷೋಪಲಕ್ಷ ಸದಸ್ಯರನ್ನೊಳಗೊಂಡ ಒಂದು ಸಶಸ್ತ್ರ ಪಡೆಯೂ ಅವರೊಂದಿಗಿದೆ."*
ಇದನ್ನು ಕೇಳಿದಾಗ ಯಮನಿನ ಹುದ್‌ಹುದಕ್ಕೂ ತನ್ನ ಯಜಮಾನನ ಮನೆತನ ಮತ್ತು ಸಿರಿತನದ ಬಗ್ಗೆ ಒಂದು ಪಟಾಕಿ ಸಿಡಿಸಿದರೇನು..? ಎಂದು ತೋರಿತು. ಯಮನಿನ ಹುದ್‌ಹುದ ಹೇಳಿತು. *"ನನ್ನ ಹೆಸರು ನಿನ್ನಂತೆಯೇ ಯ‌ಅ‌್‌ಫೂರ್. ನಾನು  ಈ ಊರಿನವಳು. ಈ ಕಾಣುವ ಉದ್ಯಾನ ನನ್ನ ಮಾಲಿಕರದ್ದಾಗಿದೆ. ಅವರ ಹೆಸರು ಬಿಲ್‌ಖೀಸ್. ಹೆಂಗಸಾದರೂ ಒಳ್ಳೆ ಆಡಳಿತ. ಅವರಿಗೆ ಒಂದು ದೊಡ್ಡ ಅರಮನೆಯಿದೆ. ಅಲ್ಲದೆ ಅವರ ಅಧೀನದಲ್ಲಿ ತರಬೇತಿ ದೊರೆತ ಹನ್ನೆರಡು ಸಾವಿರ ಸೈನಿಕ ಕಮಾಂಡೋಗಳಿದ್ದಾರೆ. ಮಾತ್ರವಲ್ಲ ಒಬ್ಬೊಬ್ಬ ಕಮಾಂಡೋನ ಕೆಳಗೆ ಸಾಕಷ್ಟು ಸಂಖ್ಯೆಯ ಸೈನಿಕರಿದ್ದಾರೆ.ನಿನಗೆ ಸಂಶಯವಿದ್ದರೆ ಬಾ ನೋಡಿ ಬರುವ. ಇಲ್ಲೇ ಹತ್ತಿರದಲ್ಲಿ ಅವರ ಅರಮನೆಯಿದೆ."* ಅತಿಥಿ ಹುದ್‌ಹುದ್ ಹೇಳಿತು. *"ನಾನು ಬರುವುದಿಲ್ಲ. ಯಾಕೆಂದರೆ ನಾನು ಈಗ ಬಂದದ್ದೇ ನನ್ನ ಯಜಮಾನರಿಗೆ ಗೊತ್ತಿಲ್ಲ. ಈಗಲೇ ಅಸರ್ ನಮಾಝಿನ ಸಮಯವಾಯಿತು. ಲುಹರಿಗೆ ಏನು ಮಾಡಿದ್ದಾರಾ ಅಲ್ಲಾಹನೇ ಬಲ್ಲ. ಬಂದ ವಿಶಯ ಗೊತ್ತಾದರೆ ನನ್ನ ತಲೆ ಹೋಗಬಹುದು."* ಯಮನಿನ ಅತಿಥೇಯ ‌ಹುದ್‌ಹುದ್ ಹೇಳಿತು. *"ಹೆದರಬೇಡ. ಏನೇ ಆಗಲಿ ಬಂದಾಯಿತಲ್ವಾ... ಇನ್ನು ಹಾಗೆಯೇ ಹೋಗಬೇಡ. ಅರಮನೆಗೆ ಹೋಗಿ ನನ್ನ ಯಜಮಾನನನ್ನು ಸಂದರ್ಶಿಸಿಯೇ ಹೋಗಬೇಕು. ಇಲ್ಲಿ ಕಂಡ ಅದ್ಭುತಗಳನ್ನು ನಿನ್ನ ಯಜಮಾನರಿಗೆ ವಿವರಿಸಿ ಕೊಡುವಾಗ ನಿನಗೆ ಶಿಕ್ಷೆ ಲಭಿಸದು. ಮಾತ್ರವಲ್ಲ ಇದನ್ನು ಕೇಳುವಾಗ ಕುತೂಹಲವಾಗಿ ಅವರಿಗೂ ಈ ಕಡೆ ಬರಲು ಮನಸ್ಸು ಆಗಬಹುದು."* ಅಂತೆಯೇ ಬಿಲ್‌ಖೀಸ್ ರಾಣಿಯ ಅರಮನೆ ಮತ್ತು ಪರಿಸರವನ್ನು ಕಂಡು ಅತಿಥಿ ಹುದ್‌ಹುದ್ ಅಲ್ಲಿಂದ ಗುಡ್ ಬೈ ಹೇಳಿ ಹೊರಟಿತು.
   ▪ಇತ್ತ ಪ್ರವಾದಿ ಸುಲೈಮಾನ್ (ಅ) ರು ಲುಹ್‌ರ್ ನಮಾಝಿಗೆ ನೀರು ಬೇಕಾದಾಗ ನೀರಿರುವ ಜಾಗ ಪತ್ತೆ ಮಾಡಲು ಎಲ್ಲಾ ಕಸರತ್ತುಗಳು ಗೊತ್ತಿರುವ ಜಿನ್ನ್ ಮತ್ತು ಶೈತಾನರಲ್ಲಿ ಹೇಳಿದ್ದರು. ಆದರೆ ಆ ವಿಷಯದಲ್ಲಿ ಅವರು ಪರಾಭವಗೊಂಡರು. ಕೊನೆಗೆ ಹುದ್‌ಹುದ್‌ನ್ನು ಹುಡುಕದೆ ಗತ್ಯಂತರವಿಲ್ಲದೆಯಾದಾಗ ಪಕ್ಷಿಗಳ ನೇತಾರ ರಣಹದ್ದುವನ್ನು ಕರೆದು ಕೇಳಿದರು. *"ನಿನಗೆ ನಮ್ಮ ಹುದ್‌ಹುದದ ಬಗ್ಗೆ ಏನಾದರು ಗೊತ್ತಿದೆಯಾ..? ಎಲ್ಲಾದರು ಇವತ್ತು ಕಂಡಿದ್ದಿಯಾ..?"* ರಣಹದ್ದು ಹೇಳಿತು. *"ಇಲ್ಲ ಪ್ರವಾದಿಯವರೇ, ನಾನಿವತ್ತು ನೋಡಲೇ ಇಲ್ಲ."* 
       ▪ಬಹಳ ಕುಪಿತನಾದ ಪ್ರವಾದಿ  ಸುಲೈಮಾನ್ (ಅ) ರು ಕೂಡಲೇ ಗರುಡನನ್ನು ಕರೆದು ಹೇಳಿದರು. *"ನಾನೊಂದು ಸುತ್ತು ಸುತ್ತಾಡಿ ನೋಡಬೇಕು. ಒಂದು ಗಂಟೆಯ ಒಳಗಾಗಿ ಎಲ್ಲಿದ್ದರೂ ಆ ಹುದ್‌ಹುದನ್ನು ಪತ್ತೆಹಚ್ಚಿ ಇಲ್ಲಿ ಹಾಜರು ಪಡಿಸಬೇಕು. ಆ ಜವಾಬ್ದಾರಿ ನಿನ್ನದು. ಕಣ್ಮರೆಯಾದದ್ದಕ್ಕೆ ಸರಿಯಾದ ಕಾರಣ ಸಾಬೀತು ಪಡಿಸದೆ ಇದ್ದರೆ ನಾನದಕ್ಕೆ ಜೀವಪರ್ಯಂತ ಶಿಕ್ಷೆ ಕೊಡುವೆನು. ಕೆಲವೊಮ್ಮೆ ಅದರ ರುಂಡ ಮುಂಡ ಬೇರೆ ಬೇರೆ ಮಾಡುವೆನು."* ರಾಜಾಜ್ಞೆಯಾದ್ದರಿಂದ ಏನೂ ಮಾಡುವಂತಿಲ್ಲ. ಕೂಡಲೇ ಗರುಡ ತುಂಬಾ ಮೇಲಕ್ಕೆ ಹಾರಿ ಭೂಮಿಯ ನಾಲ್ಕು ಭಾಗಕ್ಕೂ ಕಣ್ಣು ಹಾಯಿಸಿತು. ಆಗ ದೂರದ ಯಮನಿನ ಭಾಗದಿಂದ ಕಾಣೆಯಾದ ಹುದ್‌ಹುದ್ ಹಾರಿ ಬರುತ್ತಿರುವುದು ಗರುಡನ ದೃಷ್ಠಿಗೆ ಬಿತ್ತು. ಕೂಡಲೇ ಆ ಕಡೆ ಹಾರಿ ಅದನ್ನು ತನ್ನ ಮುಷ್ಟಿಯಿಂದ ಹಿಡಿಯಿತು. ಭಯಭೀತಿಯಿಂದ ನಡುಗುತ್ತಿದ್ದ ಹುದ್‌ಹುದ್ ಗರುಡನಲ್ಲಿ ಹೇಳಿತು. *"ನೀನು ನನಗಿಂತ ಬಲಿಷ್ಠ ಪಕ್ಷಿ. ಆದರೆ ದಯಮಾಡಿ  ನನ್ನನ್ನು ಏನೂ ಮಾಡಬಾರದು. ಯಾವ ಕಾರಣಕ್ಕೂ ನನ್ನ ಮೇಲೆ ಆಕ್ರಮಣ ಮಾಡಬಾರದು."*
   ▪ಅಹಂಕಾರವಿಲ್ಲದೆ ಬಹಳ ಸಾಧುವಾಗಿ  ಕಂಡ ಹುದ್‌ಹುದ್‌‌ನಲ್ಲಿ ಗರುಡನಿಗೆ ಸ್ವಲ್ಪ ಕರುಣೆ ಬಂತು. ಆಗ ಗರುಡ ಹುದ್‌ಹುದ್ ನಲ್ಲಿ ಹೇಳಿತು. *"ಹಟಮಾರಿ ಹರಾಮಿ... ನೀನೆಲ್ಲಿದ್ದಿ..? ಪ್ರವಾದಿಯವರು ತುಂಬಾ ಗರಮ್ ಆಗಿದ್ದಾರೆ. ಮಾತ್ರವಲ್ಲ ನಿನಗೆ ಕಠಿಣವಾದ ಶಿಕ್ಷೆ ಅಥವಾ ನಿನ್ನ ರುಂಡ ಮುಂಡ ಬೇರೆ ಬೇರೆ ಮಾಡುತ್ತೇನೆಂದು ಆಣೆಹಾಕಿ ಹೇಳಿದ್ದಾರೆ."* ಆಗ ಹುದ್‌ಹುದ್ ಕೇಳಿತು *"ಅಷ್ಟೇ ಹೇಳಿದ್ದಾ...? ಅಥವಾ ಬೇರೆ ಏನಾದರು ರಿಯಾಯಿತಿ ಬಗ್ಗೆ ಮಾತನಾಡಿದ್ದಾರಾ.?"* ಆಗ ಗರುಡ ಹೇಳಿತು. *"ಒಂದು ರಿಯಾಯಿತಿ ಇದೆ. ಅದೇನೆಂದರೆ, ನೀನು ಈ ತಡವಾದ ಬಗ್ಗೆ ಸರಿಯಾದ ಕಾರಣ ಸಾಬೀತು ಪಡಿಸಿದರೆ ಈ ಶಿಕ್ಷೆಯಲ್ಲಿ ರಿಯಾಯಿತಿ ಲಭಿಸುತ್ತದೆ ಎಂದು ಹೇಳಿದ್ದಾರೆ"* ಇದು ಕೇಳಿದಾಗ ಹುದ್‌ಹುದ್  ಬಿಗಿಯಾಗಿ ಹಿಡಿದಿಟ್ಟಿದ್ದ ಶ್ವಾಸವನ್ನು ಬಿಟ್ಟಿತು.
    ▪ನಂತರ ಗರುಡನೊಂದಿಗೆ ಹಾರಿ ಹೋಗಿ ರಾಜಸನ್ನಿಧಿಗೆ ತಲುಪಿತು. ಅಲ್ಲಿ ಪ್ರವಾದಿ ಸುಲೈಮಾನ್ (ಅ) ರ ಎದುರಲ್ಲಿ ಸಾಷ್ಟಾಂಗ ಮಾಡಿ ಬಹಳ ಶಿಸ್ತಿನಿಂದ ನಿಂತ ಹುದ್‌ಹುದ್ ನಡೆದ ಎಲ್ಲಾ ಸಂಗತಿಗಳನ್ನು ಬಿಡಿಬಿಡಿಯಾಗಿ ವಿವರಿಸಿದಾಗ ಅವರು ಈ ಪಕ್ಷಿಗೆ ಮಾಫು ಕೊಟ್ಟರು. ನಂತರ ನಡೆದ ಘಟನೆ ಬಹಳ  ಸುದೀರ್ಘವಾದ್ದರಿಂದ ಓದುಗರ ಗಮನವನ್ನು ಆ ಕಡೆ ಸೆಳೆಯುವುದಿಲ್ಲ. ಪವಿತ್ರ ಕುರ್‌ಆನಿನ ಸೂರಃ *ಅಲ್ ನಮ್‌ಲ್* ನಲ್ಲಿ ಈ ಘಟನೆಯನ್ನು ವಿವರಿಸಲಾಗಿದೆ.
    ▪ಯಾರಿಗೂ ಯಾವುದೇ ತೊಂದರೆ ಅಥವಾ ಉಪದ್ರವ ಮಾಡದ, ಸ್ನೇಹಭಾವವುಳ್ಳ, ದಯಾಳುವಾದ ಈ ಜೀವಿಯನ್ನು ಕೊಲ್ಲುವುದು ಮತ್ತು ಅದರ ಮಾಂಸವನ್ನು ತಿನ್ನುವುದು ಇಸ್ಲಾಮಿನಲ್ಲಿ ಹರಾಮ್ ಆಗಿದೆ.
   ▪ಈ ಪಕ್ಷಿಗೂ ಪಾರಿವಾಳದಂತೆ ಜೀವಪರ್ಯಂತ ಬಾಳ ಸಂಗಾತಿ ಇರುತ್ತದೆ. ಸಂಗಾತಿ ಕಾಣೆಯಾದರೆ ಗಂಡು ಹುದ್‌ಹುದ್ ತನ್ನ ಬಾಳ ಸಂಗಾತಿಯನ್ನು ಮರಳಿ ಸಿಗುವ ತನಕ ಏನನ್ನೂ ತಿನ್ನದು. ಕುಡಿಯದು. ಅಲ್ಲದೆ ಹೊಟ್ಟೆಪಾಡಿಗೆ ಬೇಕಾಗಿ ಹೊರಗೆ ಕೂಡ ಹೋಗದು. ಮಾತ್ರವಲ್ಲ ಕಾಣೆಯಾದ ಬಾಳ ಸಂಗಾತಿ ಪತ್ತೆಯಾಗುವ ತನಕ ಬೇಸರದಿಂದ ಕೂಗುತ್ತಲೇ ಇರುತ್ತದೆ.
   ▪ಏನಾದರು ಅನಾಹುತದಲ್ಲಿ ಸಂಗಾತಿ ಸತ್ತರೆ ನಂತರ ತಾನು ಸಾಯುವ ತನಕ ಯಾವುದೇ ವಿನೋದ, ಮನರಂಜನೆಗಳಲ್ಲಿ ಭಾಗಿಯಾಗದು. ಯಾರೊಂದಿಗೂ ಅನೈತಿಕ ಲೈಂಗಿಕ ಚಟುವಟಿಕೆಯಲ್ಲಿ ಏರ್ಪಡದು. ನಿರಂತರ ಕೊರಗುತ್ತಲೇ ಇರುತ್ತದೆ. ಮಾತ್ರವಲ್ಲ ಹೊಟ್ಡೆ ತುಂಬಾ ತಿನ್ನದು. ತಿನ್ನುವುದಾದರೂ ಕುಡಿಯುವುದಾದರೂ ಜೀವ ಅಥವಾ *ರೂಹ್* ಹೋಗದಿರಲು ಕನಿಷ್ಠ ಪ್ರಮಾಣದಲ್ಲಿರುವ ಆಹಾರ ಸೇವನೆಮಾತ್ರ. ಸುಬ್‌ಹಾನಲ್ಲಾಹ್‌! ಈ ಪ್ರಕ್ರಿಯೆ ತನ್ನ ಮರಣದ ತನಕವೂ ಮುಂದುವರಿಯುತ್ತದೆ. ಒಟ್ಟಿನಲ್ಲಿ ಸರಿಯಾಗಿ ಪರಸ್ಪರ ಅರಿತುಕೊಂಡ ಒಂದು ಮಾರ್ಗದರ್ಶಿ ದಾಂಪತ್ಯ ಜೀವನವಾಗಿದೆ ಇದು. ರಾಜಕೀಯವಾಗಿಯೋ ಸಾಮಾಜಿಕವಾಗಿಯೋ ಉನ್ನತ ವ್ಯಕ್ತಿಯೊಬ್ಬರು ಇಂದು ಮರಣ ಹೊಂದಿದರೆ ಸಾಧಾರಣ ಒಂದು ವಾರ ಶೋಕಾಚರಣೆ ಇರುತ್ತದೆ. ಅದರೆ ಇದು ತನ್ನ ಜೀವಪರ್ಯಂತ ಶೋಕಾಚರಣೆ ಮಾಡುವುದಾದರೆ ಇದೆಂತಹಾ ವಿಸ್ಮಯ ತುಂಬಿದ ಜೀವ ಜಗತ್ತು..???
   ▪ಹಿಜ್‌ರಾ ನೂರ ತೊಂಬತ್ತರಲ್ಲಿ ಹುಟ್ಟಿ ಇನ್ನೂರ ಎಪ್ಪತ್ತಾರರಲ್ಲಿ ವಫಾತಾದ (190-276)  ಪ್ರಖ್ಯಾತ ಹದೀಸ್ ಪಂಡಿತ ಇಮಾಮ್ *ಅಬ್ದುಲ್ ಮಲಿಕ್ ಬಿನ್‌ ಮುಹಮ್ಮದ್ ಅಲ್ ರಖಾಷೀ* (ರ) ರವರನ್ನು ಅವರ ತಾಯಿ ತನ್ನ ಹೊಟ್ಟೆಯಲ್ಲಿ ಗರ್ಭಧರಿಸಿದ ವೇಳೆ ತಾಯಿಗೆ ತಾನು ಒಂದು ಹುದ್‌ಹುದ್ ಪಕ್ಷಿಯನ್ನು ಹೆರಿಗೆ ಮಾಡಿದ ಕನಸು ಬಿತ್ತು. ಮರುದಿನ ತಾನು ಕಂಡ ಕನಸನ್ನು ತನ್ನ ಊರಾದ *ಬಗ್‌ದಾದ್* ನಲ್ಲಿರುವ ಹಿರಿಯ ವಿದ್ವಾಂಸರೊಬ್ಬರಲ್ಲಿ ಹೋಗಿ ಹೇಳಿದರು. ಆಗ ಆ ವಿದ್ವಾಂಸರು ಹೇಳಿದರು. *"ನೀನು ಹೇಳುವುದು ನಿಜವಾದರೆ ನಿನಗೆ ಬುದ್ದಿವಂತನಾದ ಹೆಚ್ಚು ನಮಾಝು ಮಾಡುವ ಭಯ ಭಕ್ತಿ ಇರುವ ಆಲಿಮ್ ಆದ ಗಂಡು ಮಗುವೊಂದು ಹುಟ್ಟಲಿದೆ"* ಸುಬ್‌ಹಾನಲ್ಲಾಃ...!!! ಹೇಳಿದ ವ್ಯಾಖ್ಯಾನದಂತೆ ಎಂಬತ್ತ ಆರು ವರ್ಷ ಬದುಕಿದ ಈ ಜ್ಞಾನಸೂರ್ಯ ತೇಜಸ್ಸು ದಿನಾಲೂ ನಾಲ್ಕು ನೂರು (400) ರಕ‌ಅತ್ ನಮಾಝ್ ಮಾಡುತ್ತಿದ್ದರು. ಅಲ್ಲದೆ ವಫಾತ್ ಆಗುವಾಗ ಅವರಿಗೆ ಪ್ರವಾದಿ ವರ್ಯರ *ಅರುವತ್ತು ಸಾವಿರ ಹದೀಸ್*  ಕೂಡ ಕಂಠಪಾಠವಿತ್ತು. ಸುಬ್‌ಹಾನಲ್ಲಾಃ..!!
   ▪ಹುದ್‌ಹುದ ಪಕ್ಷಿಯ ಗರಿಯನ್ನು ಸುಟ್ಟು ಮನೆಯೊಳಗೆ ಹೊಗೆ ಹಾಕಿದರೆ ಸೊಳ್ಳೆ, ತಿಗಣೆ, ಹುಳು ಇತ್ಯಾದಿ ಯಾವುದೇ ಕೀಟಗಳ ತೊಂದರೆ ಇರಲಾರದು.
    ▪ಹುಚ್ಚು ಹಿಡಿದವನಿಗೆ ಈ ಪಕ್ಷಿಯ ಎಲುಬನ್ನು ಸುಟ್ಟು ಅದರಿಂದ ಅವನಿಗೆ ಹೊಗೆ ಹಿಡಿದರೆ ಅವನ ಹುಚ್ಚು ಬೆಟ್ಟ ಹತ್ತುತ್ತದೆ.
   ▪ನೆನಪುಶಕ್ತಿ ಕಡಿಮೆ ಇರುವವನು ಅಂತೆಯೇ ಕಂಠಪಾಠ ಮಾಡಿದ್ದು ಯಾವುದೂ ನೆನಪಿನಂಗಳದಲ್ಲಿ ಉಳಿಯುವುದಿಲ್ಲವೆಂದಾದರೆ ಈ ಪಕ್ಷಿಯ ಹೃದಯವನ್ನು ಸುಟ್ಟು ತಿಂದರೆ ಒಳ್ಳೆಯ ಫಲ ಕಾಣುತ್ತದೆ.
  ▪ಹುದ್‌ಹುದ್ ಪಕ್ಷಿಯ ಕಾಲಿನ ಉಗುರನ್ನು ಕತ್ತರಿಸಿ ಸಣ್ಣ ಮಗುವಿನ ಸೊಂಟಕ್ಕೆ ಅಥವಾ ಇತರ ಯಾವುದೇ ಜಾಗಕ್ಕೆ ಕಟ್ಟಿದರೆ ಆ ಮಗು ಯಾವ ಕಣ್ಣದೃಷ್ಟಿಗೂ ಬಲಿಯಾಗಲಾರದು.
   ▪ಒಬ್ಬನಿಗೆ ಹುದ್‌ಹುದ್ ಪಕ್ಷಿಯ ಕನಸು ಬಿದ್ದರೆ ಮುಂದಕ್ಕೆ ಅವನು ಜನರೆಡೆಯಲ್ಲಿ ಬಹಳ ಗೌರವಾನ್ವಿತ ವ್ಯಕ್ತಿ ಆಗುವನು ಎಂಬುದರ ನಿಶಾನೆಯಾಗಿದೆ.
ಕನಸು ಕಾಣುವ ಸಂದರ್ಭದಲ್ಲಿ ಕಾಣುವ ವ್ಯಕ್ತಿ ಏನಾದರು ಸಮಸ್ಯೆಯಲ್ಲಿ ಸಿಲುಕಿ ಪರಿಹಾರಕ್ಕೆ ಬೇಕಾಗಿ ಪರದಾಡುತ್ತಿರುವ ಸನ್ನಿವೇಶವಾಗಿದ್ದರೆ ಪ್ರಸ್ತುತ ಸಮಸ್ಯೆಗೆ ಹಸಿರು ನಿಶಾನೆ ಸಿಗಲಿದೆ ಎಂಬುದರ ಸಂಕೇತವಾಗಿದೆ.
    ▪ನೀರಿಗೆ ಬೇಕಾಗಿ ಬಾವಿ ತೆಗೆಯಲು ಉದ್ದೇಶಿಸುವ ಒಬ್ಬನಿಗೆ ಈ ಪಕ್ಷಿಯ ಕನಸು ಕಂಡರೆ ತೆಗೆಯುವ ಬಾವಿಯಲ್ಲಿ ಧಾರಾಕಾರವಾಗಿ ನೀರು ಸಿಗಲಿದೆ ಎಂಬುದರ ಸಂಕೇತವಾಗಿದೆ.
ಅಧಿಕಾರದಲ್ಲಿ ಇರುವ ಒಬ್ಬನು ಹುದ್‌ಹುದ ವನ್ನು ಕನಸಿನಲ್ಲಿ ಕಂಡರೆ ಅವನ ಅಧಿಕಾರ ಸ್ಥಾನ ಇನ್ನೂ ಜಾಸ್ತಿಯಾಗಲಿದೆ ಎಂಬುದರ ಸೂಚನೆಯಾಗಿದೆ.
  ▪ ಪ್ರವಾದಿ ಸುಲೈಮಾನ್ (ಅ) ಹುಟ್ಟಿದ ಊರಾದ ಜೆರುಸೆಲಮ್ ಇರುವ ಇಸ್ರೇಲ್ ರಾಷ್ಟ್ರದ ರಾಷ್ಟ್ರಪಕ್ಷಿ ಕೂಡ ಹುದ್‌ಹುದ ಆಗಿದೆ ಎಂಬುದು ಬಹಳ ಗಮನಾರ್ಹ ಸಂಗತಿ ಯಾಗಿದೆ. ಅಂತೆಯೇ *ಜಹಾನ್ಸ್ ಬರ್ಗ್* ವಿಶ್ವವಿದ್ಯಾನಿಲಯದ ಲಾಂಛನದಲ್ಲೂ ( LOGO) ಈ ಹುದ್‌ಹುದ್ ಜಾಗ ಕಾದಿರಿಸಿದೆ.

 ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌‌ರಫ್* ಮತ್ತು ತತ್ವಜ್ಞಾನಿ ಜಾಹಿಳ್‌ರ *ಕಿತಾಬುಲ್ ಹಯವಾನ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...