Skip to main content

ವಿಸ್ಮಯ ತುಂಬಿದ ಜೀವಜಗತ್ತು 👉 *16*



*ಬೆಚ್ಚಿಬೀಳಿಸುವ ಬೆಕ್ಕು ಪುರಾಣ!*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
     ▪ಬಹಳ ಚುರುಕು ಮತ್ತು ಉತ್ಸಾಹಿಯಾಗಿರುವ ಒಂದು ಮುದ್ದಾದ ಸಾಕು ಪ್ರಾಣಿಯಾಗಿರುತ್ತದೆ ಬೆಕ್ಕು. ಹಳೆಯ ಕಾಲದಲ್ಲಿ ಬೆಕ್ಕು ನಮ್ಮ ಮನೆಯ ಒಂದು ಕುಟುಂಬ ಸದಸ್ಯನಂತೆ ಇದ್ದರೆ ಈಗಿನ ಮಕ್ಕಳು ಮಾತ್ರ ಬೆಕ್ಕನ್ನು ಕಾಣುವಾಗ ಏನೋ ಕಾಡಿನಿಂದ ಬಂದ ಮೃಗವೆಂಬಂತೆ ಅದರೊಂದಿಗೆ ಬಹಳ ಅದ್ಭುತ ಮತ್ತು ಭಯದಿಂದ ವರ್ತಿಸುತ್ತಾರೆ. ಹಳೆಯ ತಲೆಮಾರು ಬೆಕ್ಕನ್ನು ಲಾಲಿಸುತ್ತಿರುವಾಗ ಈಗಿನ ಮಕ್ಕಳಿಗೆ ಬೆಕ್ಕೆಂದರೆ ಎಲ್ಲಿಲ್ಲದ ಭಯ.
      ▪ಸುಮಾರು ಹದಿನೈದು ವರ್ಷಗಳ ತನಕ ಬದುಕುವ ಈ ಕೋಮಲ ಪ್ರಾಣಿ ಗರ್ಭಧಾರಣೆಯಾಗಿ ಬರೇ ಐವತ್ತು ದಿನದಲ್ಲಿ ಮೂರರಿಂದ ಎಂಟರ ತನಕ ಮರಿಹಾಕುತ್ತದೆ. ಮಾತ್ರವಲ್ಲ ವರ್ಷದಲ್ಲಿ ಇದು ಎರಡು ಬಾರಿ ಮರಿ ಹಾಕುವ ಒಂದು ಪ್ರಾಣಿ ಕೂಡ ಆಗಿದೆ.
     ▪ಚಳಿಗಾಲದಲ್ಲಿ ಎರಡು ತಿಂಗಳು ಈ ಪ್ರಾಣಿಗೆ ಅತಿಯಾದ ಕಾಮೋದ್ರೇಕವಿರುತ್ತದೆ. ಆ ಸಮಯದಲ್ಲಿ ಅದು ಅತಿಯಾಗಿ ಕೂಗುವುದರೊಂದಿಗೆ ಅದರ ಸ್ವಭಾವ ಮತ್ತು ಚಲನ ವಲನದಲ್ಲೂ ಬಹಳ ವ್ಯತ್ಯಾಸವಿರುತ್ತದೆ. ಶಾರೀರಿಕ ಪ್ರಕೃತಿಯ ವ್ಯತ್ಯಾಸದಿಂದ ಉಂಟಾಗುವ ಒಂದು ಬದಲಾವಣೆಯಾಗಿದೆ ಇದು.
    ▪ಬೆಕ್ಕಿನ ಲೈಂಗಿಕ ಸಂಪರ್ಕ ಬಹಳ ರಹಸ್ಯವಾಗಿರುತ್ತದೆ. ನಾಯಿಯ ಲೈಂಗಿಕ ಸಂಪರ್ಕ ಮುಚ್ಚುಮರೆಯಿಲ್ಲದೆ ಬಹಳ ಬಹಿರಂಗವಾಗಿರುತ್ತದೆ. ಅದರ ಕಾರಣ *ಕಾವಲುಗಾರ ನಾಯಿ* ಎಂಬ ಈ ಮೊದಲೇ ಪ್ರಕಟವಾದ ಲೇಖನದಲ್ಲಿ ವಿವರಿಸಲಾಗಿದೆ.
    ▪ಮುಂಜಾನೆ ಮನೆ ಬಾಗಿಲಲ್ಲಿ ಕುಳಿತು ಬೆಕ್ಕು ತನ್ನ ಕೈಗಳಿಂದ ಅದರ ಮುಖ ತೊಳೆದರೆ ಅದು ಆದಿನ ಆ ಮನೆಗೆ ಅತಿಥಿಗಳು ಬರುವುದರ ನಿಶಾನೆಯಾಗಿದೆ ಎಂಬ ಮೂಢನಂಬಿಕೆ ಈಗಲೂ ಕೆಲವರಿಗಿದೆ. ಆದರೆ ಇಸ್ಲಾಮಿನಲ್ಲಿ ಅದಕ್ಕೆ ಯಾವುದೇ ಪುರಾವೆಯಿಲ್ಲ.
    ▪ ತಾಯಿ ಬೆಕ್ಕು ಕೆಲವೊಮ್ಮೆ ತನ್ನ ಪುಟ್ಟ ಮರಿಗಳನ್ನು ಕೊಂದು ತಿನ್ನುತ್ತದೆ. ಇದು ತನ್ನ ಮಕ್ಕಳಲ್ಲಿರುವ ಅತಿಯಾದ ಪ್ರೀತಿ ಮತ್ತು ಮಮತೆಯ ಕಾರಣವಾಗಿದೆಯೇ ವಿನಾ ಸಿಟ್ಟಿನಿಂದಲ್ಲ ಎಂದು ಹೇಳಲ್ಪಡುತ್ತದೆ. ಸುಬ್‌ಹಾನಲ್ಲಾಃ..!!
   ▪ಬೆಕ್ಕಿಗೆ ಒಂದು ಪಾತ್ರೆಯಲ್ಲಿ ಆಹಾರ ಮತ್ತು ಅದರೊಂದಿಗೆ ಬೇರೊಂದು ಪಾತ್ರೆಯಲ್ಲಿ ನೀರನ್ನು ಒಯ್ದು ಕೊಟ್ಟರೆ ಆಹಾರವನ್ನು ಮಾತ್ರ ತಿನ್ನುತ್ತದೆಯೇ ವಿನಾ ಎರಡನೇ ಪಾತ್ರೆಯಿಂದ ಎಂದೂ ನೀರು ಕುಡಿಯದು. ಯಾಕೆಂದರೆ ನೀರಿನೊಂದಿಗೆ ವಿಷ ಕಲಸಿ ಕೊಡುತ್ತೇವೆಂಬ ಸಂಶಯವಂತೆ ಈ ಪಾಪ ಬೆಕ್ಕಿಗೆ.
      ▪ಬೆಕ್ಕಿನ ಬೇರೊಂದು ವಿಷೇಶತೆ ಎಂದರೆ ಅದು ಮಲ, ಮೂತ್ರ ವಿಸರ್ಜನೆ ಮಾಡಿದರೆ ಅದನ್ನು ಮಣ್ಣು ಅಥವಾ ಮರಳಿನಿಂದ ಮುಚ್ಚಿ ಅದರ ವಾಸನೆ ಹೊರ ಬಾರದಂತೆ ಕಾಪಾಡುತ್ತದೆ. ಒಮ್ಮೆ ಮುಚ್ಚಿದ ನಂತರ ತನ್ನ  ಮೂಗಿನಿಂದ ಸೂಕ್ಷ್ಮವಾಗಿ ಮೂಸಿ ನೋಡುತ್ತದೆ. ಆಗ ವಾಸನೆ ಹೊರ ಬರುತ್ತದೆ ಎಂದಾದರೆ ಸಂಪೂರ್ಣ ಯಶಸ್ವಿಯಾಗುವ ತನಕ ತನ್ನ ಕೆಲಸವನ್ನು ಮುಂದುವರಿಸುತ್ತದೆ.
    ▪ಇಷ್ಟೆಲ್ಲಾ ಕಷ್ಟಬಂದು ಈ ತ್ಯಾಗ ಮಾಡುವುದರ ಹಿನ್ನೆಲೆ ಮತ್ತು ಅದರ ರಹಸ್ಯ ನಮಗೆ ಯಾರಿಗೂ ತಿಳಿಯದ ಒಂದಾಗಿದೆ. ಬೆಕ್ಕಿನ ಇಷ್ಟ ಭೋಜನವಾದ ಇಲಿಗೆ ಅಲ್ಲಾಹನು ಎಷ್ಟೋ ದೂರದಿಂದ ವಾಸನೆ ತಿಳಿಯುವ ಘ್ರಾಣಶಕ್ತಿಯನ್ನು ಕೊಟ್ಟಿದ್ದಾನೆ. ಬೆಕ್ಕೆಂದರೆ ಇಲಿಗೆ ಎಲ್ಲಿಲ್ಲದ ಭಯ. ಬೆಕ್ಕು ಒಂದು ಕಡೆ ವಿಸರ್ಜನೆ ಮಾಡಿ ಹೂಳದಿದ್ದರೆ ಬಲಿಷ್ಠ ಘ್ರಾಣ ಶಕ್ತಿಯಿರುವ ಇಲಿಯು ಇದನ್ನು ತಿಳಿದು ನನ್ನ ಭಕ್ಷಕ ಬೆಕ್ಕು ಈ ವಲಯದಲ್ಲಿ ಎಲ್ಲೋ ಇದ್ದಾನೆ ಎಂದು ಅರಿತು ನಂತರ ಆ ಕಡೆ ಬರಲಾರದು. ಆ ಕಾರಣದಿಂದಾಗಿರುತ್ತದೆ ಮಣ್ಣು ಮುಚ್ಚಿ ಹೂಳುವುದರ ಉದ್ದೇಶವೇ ವಿನಾ ನಮ್ಮ ಲಾಭಕ್ಕಲ್ಲ.
   ▪ಮನೆಯಲ್ಲಿ ಸಾಕು ಪ್ರಾಣಿಯಾಗಿರುವ ಈ ಉತ್ಸಾಹಿ ವಿನಯಶೀಲ ಪ್ರಾಣಿಗೆ ನಿದ್ದೆ ಬಹಳ ಜಾಸ್ತಿ. ಒಂದು ದಿನದ ಮೂರರಲ್ಲಿ ಎರಡು ಪಾಲು ನಿದ್ರೆಯಲ್ಲಿರುತ್ತದೆ.(ಹದಿನಾರು ಗಂಟೆ) ಯಾವತ್ತೂ ಒಕ್ಕೂಟವನ್ನು ಬಯಸದ ಈ ಬೆಕ್ಕಿಗೆ ಒಂಟಿತನವೇ ಇಷ್ಟ. ಒಬ್ಬನ ಮನೆಯಲ್ಲಿ ಸಾಕು ಬೆಕ್ಕೊಂದಿದ್ದರೆ ಆ ಮನೆಗೆ ಹೊರಗಿನಿಂದ ಬರುವ ಬೇರೆ ಯಾವ ಬೆಕ್ಕಿಗೂ ಈ ಬೆಕ್ಕು ಪ್ರವೇಷ ಅನುಮತಿ (ಪರವಾನಿಗೆ) ಕೊಡುವುದಿಲ್ಲ. ಇದು ನನ್ನಂತೆಯೇ ಬೆಕ್ಕುಜಾತಿ, ನನ್ನದೇ ಪಾರಂಪರ್ಯ ಎಂದು ಗೊತ್ತಿದ್ದೂ ಮಾಡುವ ಒಂದು ಅನ್ಯಾಯವಾಗಿದೆ. ಕೆಲವೊಮ್ಮೆ ತನಗೆ ಹುಟ್ಟಿದ ಮರಿಯೂ ಆಗಿರಬಹುದು. ಆದರೂ ತಾನು ಕಲಿತ ಎಲ್ಲಾ ಉಪಾಯ ಮತ್ತು ಕಸರತ್ತುಗಳನ್ನು ಉಪಯೋಗಿಸಿ ಬಂದ ಅತಿಥಿಯನ್ನು ಮನೆಯಿಂದ ಗಡಿಪಾರು ಮಾಡುತ್ತದೆ. ಇನ್ನು ಆ ಮನೆಯಲ್ಲಿ  ಒಂದಕ್ಕಿಂತ ಹೆಚ್ಚು ಬೆಕ್ಕುಗಳು ಖಾಯಂ ಸದಸ್ಯರಾಗಿರುವುದಾದರೆ ಹೊರಗಿನಿಂದ ಅದೃಷ್ಟವಶಾತ್ ಒಂದು ಬೆಕ್ಕು ದಾರಿತಪ್ಪಿ ಅತಿಥಿಯಾಗಿ ಆ ಮನೆಗೆ ಬಂದರೆ ಬಂದ ಅತಿಥಿಗೆ ಏಟಿನ ಒಳ್ಳೆ ಬಿಸಿ ಬಿಸಿ ಉಪಹಾರ ಕೊಟ್ಟು ಮುಂದೆಂದಿಗೂ ಈ ವಲಯದಲ್ಲಿ ನಿನ್ನನ್ನು ಕಾಣ ಬಾರದೆಂಬ ತಾಕೀತಿನೊಂದಿಗೆ ಜೀವಪರ್ಯಂತ ಬ್ಯಾನ್ ಹಾಕಿ ಅಟ್ಟಿಸಿ ಬಿಡುತ್ತದೆ. ನಮ್ಮೆಲ್ಲರ ಪುರಾತನ ಮನೆಗಳಲ್ಲಿ ಇಂತಹ ಸಂದರ್ಭಗಳಲ್ಲಿ ರಾತ್ರಿ ಮನೆ ಛಾವಣಿಯಲ್ಲಿ  ಪರಸ್ಪರ ಬೆಕ್ಕಿನ ಕದನವಾಗುತ್ತಿದ್ದಾಗ ಏನೋ ಯುದ್ಧ ಭೂಮಿಯಲ್ಲಿ ಯುಧ್ಧವಾಗುತ್ತಿದೆಯೋ ಎಂದು ಭಾಸವಾಗುತ್ತಿದ್ದದ್ದು ಈಗ ನೆನಪಾಗುತ್ತದೆ.
‌    ▪ಬುದ್ದಿವಂತ ಬೆಕ್ಕು ಇದೆಲ್ಲಾ ಮಾಡುವುದು ಯಾಕೆಂದರೆ, ನಾನಲ್ಲದ ಇನ್ನೊಬ್ಬ ಈ ಮನೆಗೆ ಬಂದು ಇಲ್ಲಿ ವಾಸಮಾಡಲು ಶುರುಮಾಡಿದರೆ ಕಾಲಕ್ರಮೇಣ ಅವನು ಇಲ್ಲಿನ ಖಾಯಂ ಸದಸ್ಯನಾಗುತ್ತಾನೆ. ಆಗ ನನ್ನ ಯಜಮಾನನಿಗೆ ಅಥವಾ ಮನೆಯವರಿಗೆ ನನ್ನಲ್ಲಿರುವ ಪ್ರೀತಿ, ಮಮತೆ, ಗೌರವ ನಷ್ಟವಾಗಿ ಬಂದ ಅತಿಥಿ ನನ್ನ ಯಜಮಾನನ ಬಲಗೈ *(ರೈಟ್ ಹ್ಯಾಂಡ್)* ಆಗಬಹುದು. ಅದು ನನ್ನ ಅನ್ನದ ಬಟ್ಟಲಿಗೆ ಬೀಳುವ ಕಲ್ಲು ಎಂದು ಹೆದರಿ ಈ ರಂಪಾಟ ನಡೆಸುತ್ತದೆ.
      ▪ತಾಯಿ ಬೆಕ್ಕು ಮರಿ ಹಾಕಿದ ಮೊದಲ ಒಂದೆರಡು ವಾರಗಳಲ್ಲಿ ತನ್ನ ಪುಟ್ಟ ಮರಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗಿ ತನ್ನ ವಾಸ ಜಾಗವನ್ನು ಆಗಾಗ್ಗೆ ಬದಲಾಯಿಸುತ್ತಿರುತ್ತದೆ. ಒಂದೇ ಜಾಗದಲ್ಲಿದ್ದರೆ ತನ್ನ ಮರಿಗಳ ಭದ್ರತೆಗೆ ಧಕ್ಕೆ ಬರಬಹುದು ಅಲ್ಲದೆ ಒಂದೇ ಸ್ತಳದಲ್ಲಿದ್ದರೆ ಆಕ್ರಮಣ ಮಾಡಲು ಬರುವವನಿಗೆ ಅಥವಾ ಮರಿಗಳನ್ನು ದೋಚಲು ಬರುವವನಿಗೆ ನಿಶ್ಚಿತ ಜಾಗವನ್ನು ಗುರಿಯಟ್ಟು ಬೇಕಾದ ಸಜ್ಜೀಕರಣದೊಂದಿಗೆ ಬರಲು ಸುಲಭವಾಗುತ್ತದೆ. ಆಗಾಗ್ಗೆ ಜಾಗ ಬದಲಾಯಿಸುವುದರಿಂದ ಭದ್ರತೆ ಮತ್ತು ಸುರಕ್ಷತೆಗೆ ದಕ್ಕೆ ಬರುವುದಿಲ್ಲ. ಇದನ್ನೆಲ್ಲಾ ಮನಗಂಡಾಗಿರುತ್ತದೆ ಈ ಮೂಕ ಬೆಕ್ಕು ಈ ಉಪಾಯ ಮಾಡುವುದಾಗಿದೆ.
    ▪ಇನ್ನು ಬೆಕ್ಕು ಮನೆ ಮಾಲಿಕನಿಗೆ ಅಥವಾ ಮನೆಯ ಇತರ ಸದಸ್ಯರಿಗೆ  ಇಷ್ಟವಾಗದ ಅಥವಾ ಅವರನ್ನು ಕೋಪಿಸುವ ಏನಾದರು ತಂಟೆ ಮಾಡಿದರೆ, ತಾನು ಮಾಡಿದ ತಪ್ಪಿನ ಅರಿವು ತನಗಾದರೆ ಕೂಡಲೇ ಅಲ್ಲಿಂದ ತಾತ್ಕಾಲಿಕ ಜಾಗ ಕಾಲಿಮಾಡಿ ದೂರಹೋಗಿ ಅವಿತುಕೊಳ್ಳುತ್ತದೆ. ಸ್ವಲ್ಪ ಕಳೆದ ನಂತರ ಮೆಲ್ಲನೆ ಬಂದು ಮಾಲಿಕನಿಗೆ ಪ್ರದಕ್ಷಿಣೆ ಮಾಡುತ್ತದೆ. ಅವನ ಮೊಣಕಾಲಿಗೆ ತನ್ನ ಶರೀರದಿಂದ ಒರೆಸುತ್ತದೆ. ನೋವಾಗದಂತೆ ಅವನ ಕಾಲಿಗೆ ಕಚ್ಚುತ್ತದೆ. ಬಾಲವನ್ನು ನೆಟ್ಟಗೆ ಮಾಡಿ ನಿಲ್ಲುತ್ತದೆ. ಬಹಳ ಸೌಮ್ಯವಾಗಿ ಕೂಗುತ್ತದೆ. ಹೀಗೆಲ್ಲಾ ಮಾಡಿ ಪುಸಲಾಯಿಸಿದರೆ ಯಜಮಾನನ ನಷ್ಟವಾದ ಪ್ರೀತಿ, ಮೆಚ್ಚುಗೆ ಮರು ಪಡೆಯಲಾಗುತ್ತದೆ ಎಂದು ಈ ಬೆಕ್ಕಿಗೆ ಕಲಿಸಿ ಕೊಟ್ಟವರಾರು..? ವಿಸ್ಮಯ ತುಂಬಿದ ಜೀವಜಗತ್ತಿನ ಒಡೆಯನಾದ ಅಲ್ಲಾಹನು ಅವನ ಮೂಕ ಸೃಷ್ಟಿಗಳಿಗೆ ಕಲಿಸಿ ಕೊಡುವ ಒಂದು ವಿದ್ಯೆಯಾಗಿದೆ ಇದು.
▪ ಕೆಲವು ವಿಷಯಗಳಲ್ಲಿ ಬೆಕ್ಕಿಗೆ ಮನುಷ್ಯನಾಗಿ ಬಹಳ ಸಮಾನತೆ ಇದೆ. ಬೆಕ್ಕು ಮನುಷ್ಯನಂತೆ ಸೀನುತ್ತದೆ. ಆಕಳಿಸುತ್ತದೆ. ತನ್ನ ಕೈಗಳಿಂದ ಪೆಟ್ಟು ಕೊಡುತ್ತದೆ. ಮುಖ ತೊಳೆಯುತ್ತದೆ.
  ▪ರಾತ್ರಿ ಕಣ್ಣು ಪ್ರಕಾಶಿಸುವ ನಾಲ್ಕು ಪ್ರಾಣಿಗಳಲ್ಲಿ ಒಂದಾಗಿದೆ ಬೆಕ್ಕು. ಮಾತ್ರವಲ್ಲ ಸಾಧಾರಣ ಕತ್ತಲೆಯಲ್ಲೂ ಕಾಣುವ ಅಥವಾ ಗೋಚರವಾಗುವ ದೃಷ್ಟಿಶಕ್ತಿಯನ್ನು ಅಲ್ಲಾಹನು ಇದಕ್ಕೆ ಕೊಟ್ಟಿದ್ದಾನೆ. *ಇಲಿಯ ಘ್ರಾಣಶಕ್ತಿ, ನಾಯಿಯ ಶ್ರವಣಶಕ್ತಿ, ಮತ್ತು ಬೆಕ್ಕಿನ ದೃಷ್ಟಿಶಕ್ತಿಗೆ ಸಮಾನವಾದದ್ದು ಬೇರೆ ಇಲ್ಲ.*
   ▪ಮನೆಯಲ್ಲಿ ಬೆಕ್ಕನ್ನು ಸಾಕುವುದು ಸುನ್ನತ್ತಾಗಿದೆ ಎಂದು ಕೆಲವು ಉಲಮಾಗಳು ಹೇಳಿದ್ದಾರೆ. ಅಲ್ಲದೆ ಬೆಕ್ಕು ಮನೆಗೆ ಐಶ್ವರ್ಯವೂ ಆಗಿದೆ. *ಅಬೂ ಹುರೈರಾ* ಎಂಬ ಸಾಹಾಬಿಶ್ರೇಷ್ಠ ಬೆಕ್ಕಿನೊಂದಿಗೆ ಬಹಳ ಪ್ರೀತಿಯಿಂದ ವರ್ತಿಸುತ್ತಿದ್ದರು. ಆ ಕಾರಣದಿಂದ ಅವರು *ಬೆಕ್ಕಿನ ತಂದೆ* ಎಂದು ಭಾಷಾರ್ಥವಿರುವ (ಅಬೂ ಹುರೈರ)ಎಂಬ ಗುಪ್ತ‌ನಾಮದಿಂದ ಗುರುತಿಸಲ್ಪಟ್ಟಿದ್ದರು. ನಿಜವಾಗಿ ಅವರ ಹೆಸರು ಅಬ್ದುಲ್ ರಹ್‌ಮಾನ್ ಎಂದಾಗಿತ್ತು.
   ▪ಪ್ರವಾದಿ ಮುಹಮ್ಮದ್‌ (ಸ) ರು ಮದೀನದಲ್ಲಿ *ಅನ್ಸಾರಿ* ಗಳ ಕೆಲವು ಮನೆಗಳಿಗೆ ಆಗಾಗ್ಗೆ ಅತಿಥಿಯಾಗಿ ಹೋಗುತ್ತಿದ್ದರು. ಆದರೆ ಅದೇ *ಅನ್ಸಾರ್* ಮನೆತನದ ಇತರ ಕೆಲವು ಮನೆಗಳಿಗೆ ಹೋಗುತ್ತಿರಲಿಲ್ಲ. ಕೊನೆಗೆ ಇದು  *ಅನ್ಸಾರ್* ವಿಭಾಗದಲ್ಲಿ ಒಂದು ಚರ್ಚಾ ವಿಷಯವಾಯಿತು. *"ಪ್ರವಾದಿಯವರು  ಕೆಲವು ಮನೆಗಳಿಗೆ ಬರುತ್ತಾರೆ. ಕೆಲವೆಡೆ ಬರುವುದಿಲ್ಲ"* ಒಟ್ಟಿನಲ್ಲಿ ಕೊನೆಗೆ ಪ್ರವಾದಿಯವರಲ್ಲಿ ಕೇಳುವಲ್ಲಿಗೆ ವಿಷಯ ಮುಟ್ಟಿತು. ಅಂತೆಯೇ *ಅನ್ಸಾರ್* ಗಳಲ್ಲಿ ಕೆಲವರು ಪ್ರವಾದಿ ಸನ್ನಿಧಿಗೆ ಹೋಗಿ ಕೇಳಿದರು. *"ಪ್ರವಾದಿಯವರೇ, ನೀವ್ಯಾಕೆ ಅನ್ಸಾರ್ ಮನೆತನದ ಕೆಲವು ಮನೆಗೆ ಹೋಗುತ್ತೀರಿ? ಅವರಂತೆಯೇ ಅನ್ಸಾರುಗಳಾದ ನಮ್ಮ ಮನೆಗೆ ಯಾಕೆ ಬರುವುದಿಲ್ಲ..?"* ಆಗ ಪ್ರವಾದಿಯವರು ಹೇಳಿದರು. *"ನಿಮ್ಮ ಮನೆಯಲ್ಲಿ ನಾಯಿಯಿದೆ. ಅಲ್ಲಿ ನಾಯಿ ಇಲ್ಲ."* ಆಗ ಅವರು ಕೇಳಿದರು. *"ಹಾಗಾದರೆ ಅವರ ಮನೆಯಲ್ಲಿ ಬೆಕ್ಕಿದೆಯಲ್ವಾ..?"* ಆಗ ಪ್ರವಾದಿವರ್ಯರು (ಸ) ಹೇಳಿದರು. *"ಬೆಕ್ಕಿದ್ದರೇನು ತೊಂದರೆ. ಅದೇನು ಕ್ರೂರ ವನ್ಯ ಮೃಗವಾ..? ಅದು  ಮನೆಯ ಕೈಯಾಳಾಗಿದೆ."*  ಈ ಹದೀಸನ್ನು ಇಮಾಮ್ *ಬೈಹಖೀ* ಸಮೇತ ಹಲವಾರು ಗಣ್ಯರು ಸಹಾಬಿ ಅಬೂಹುರೈರನ್ನು ಉಲ್ಲೇಖಿಸಿ ವರದಿ ಮಾಡಿದ್ದಾರೆ.
   ▪ಪ್ರವಾದಿ ಮುಹಮ್ಮದ್ (ಸ) ರವರು *ಉಝು* ಮಾಡುತ್ತಿರುವ ವೇಳೆ ಬಾಯಾರಿಕೆಯಾಗಿ ಬರುವ ಬೆಕ್ಕಿಗೆ ತಾನು *ಉಝು* ಮಾಡುವ ಪಾತ್ರೆಯನ್ನು ವಾಲಿಸಿ ನೀರು ಕುಡಿಯಲು ಸೌಕರ್ಯ ಮಾಡಿ ಕೊಡುತ್ತಿದ್ದರು. ನಂತರ ಪಾತ್ರೆಯಲ್ಲಿ ಬಾಕಿ ಉಳಿದ ನೀರಿನಿಂದ *ಉಝು* ಮಾಡುತ್ತಿದ್ದರೆಂದು ಪ್ರವಾದಿವರ್ಯರ ಬಾಳ ಸಂಗಾತಿ ಬೀವಿ ಆಯಿಶಾ(ರ) ಹೇಳಿದ್ದನ್ನು ಹಲವಾರು ಹದೀಸ್ ವರದಿಗಾರರು ವರದಿ ಮಾಡಿದ್ದಾರೆ.
   ▪ಸಹಾಬಿ *ಅನಸ್ ಬಿನ್ ಮಾಲಿಕ್* (ರ) ಹೇಳುತ್ತಾರೆ. *"ನಾನೊಮ್ಮೆ ಪ್ರವಾದಿ ವರ್ಯರೊಂದಿಗೆ ಮದೀನದ ಒಂದು ಕುಗ್ರಾಮವಾದ "ಬತ್‌ಆನ್" ಎಂಬ ಊರಿಗೆ ಯಾತ್ರೆ ಹೋಗಿದ್ದೆ. ನಮಾಝಿನ ಸಮಯವಾದಾಗ ಪ್ರವಾದಿಯವರು (ಸ) ನನ್ನಲ್ಲಿ ವುಝು ಮಾಡುವ ನೀರು ತಂದಿಡಲು  ಹೇಳಿದರು. ನಾನು ರೆಡಿ ಮಾಡಿ ಪ್ರವಾದಿಯವರ ಎದುರಲ್ಲಿಟ್ಟೆ. ಆಗ ಒಂದು ಬೆಕ್ಕು ಬಂದು ಪಾತ್ರೆಗೆ ಬಾಯಿ ಹಾಕಿ ನೀರು ಕುಡಿಯಿತು. ಇದನ್ನು ನೋಡಿದ ಪ್ರವಾದಿಯವರು ಬೆಕ್ಕು ನೀರು ಕುಡಿದು ಮುಗಿಯುವ ತನಕ ಕಾದು ಕುಳಿತು ನಂತರ ಅದರಲ್ಲಿ ಉಳಿದ ನೀರಿನಿಂದ ಉಝು ಮಾಡಿದರು.*"
    ▪ ಪ್ರವಾದಿಯವರು (ಸ) *ಉಝು* ಮಾಡಿದ ಬಳಿಕ ನಾನವರಲ್ಲಿ ಕೇಳಿದೆ. *"ಅಲ್ಲ ಪ್ರವಾದಿಯವರೇ.. ನೀವು ಬೆಕ್ಕು ಬಾಯಿ ಹಾಕಿದ ನೀರಿನಿಂದ ವುಝು ಮಾಡಿದ್ದಾ...?"* ಅದಕ್ಕೆ ಅವರು ಹೇಳಿದರು. *"ಅನಸ್...ಏನು ತೊಂದರೆ...? ಬೆಕ್ಕು ತ್ವಾಹಿರ್ (ಶುದ್ದಿ) ಆಗಿದೆ. ಬೆಕ್ಕು ಬಾಯಿ ಹಾಕಿದ ನೀರು ನಜಸ್ (ಮಲಿನ) ಆಗುವುದಿಲ್ಲ. ಮಾತ್ರವಲ್ಲ ಬೆಕ್ಕು ನಮ್ಮ ಮನೆಯ ಒಂದು ಸದಸ್ಯ ಕೂಡ ಆಗಿದೆ*" ಈ ಹದೀಸನ್ನು ಇಮಾಮ್ *ಬುಖಾರಿ* ವರದಿ ಮಾಡಿದ್ದಾರೆ.
    ▪ಬೆಕ್ಕು ನಜಸಾದ ಒಂದು ವಸ್ತುವನ್ನು ತಿನ್ನುವುದನ್ನು (ಉದಾಹರಣೆಗೆ ಒಂದು ಸತ್ತ ಹಾವು) ನಾವು ಕಂಡೆವು. ನಂತರ ಸುಮಾರು ಒಂದೆರಡು ಗಂಟೆ‌ ಆ ಬೆಕ್ಕು ನಮ್ಮ ಕಣ್ಣಿನಿಂದ ಅಪ್ರತ್ಯಕ್ಷವಾಯಿತು. ನಂತರ ಬಂದು ಕಡಿಮೆ ನೀರಿರುವ ಒಂದು ಪಾತ್ರೆಗೆ ಅದೇ ಹಾವು ತಿಂದ ಬಾಯಿಯನ್ನು ಹಾಕಿದರೆ  ಕರ್ಮಶಾಸ್ತ್ರ ನಿಯಮ ಪ್ರಕಾರ ಆ ನೀರು ನಜಸ್ ಆಗುವುದಿಲ್ಲ. ಯಾಕೆಂದರೆ ಬೆಕ್ಕು ಯಾವಾಗಲೂ ಬಾಯಿ ತೊಳೆಯುತ್ತಿರುವ ಒಂದು ಪ್ರಾಣಿಯಾಗಿದೆ. ನಜಸ್ ತಿಂದು ಮರೆಯಾದ ಸಮಯದಲ್ಲಿ ಮನೆ ಪರಿಸರದಲ್ಲಿರುವ ಕೆರೆ, ತೋಡು, ಹಳ್ಳ ಮುಂತಾದೆಡೆಗಳಲ್ಲಿರವ ನೀರಿನಲ್ಲಿ ಅದು ಬಾಯಿಯನ್ನು ಮಳುಗಿಸಿರಬಹುದೆಂಬ ಊಹೆ ಸಾಕು. ಖಚಿತತೆ ಬೇಕೆಂದಿಲ್ಲ.
   ▪ಬೆಕ್ಕು ಬಾಯಿಹಾಕಿದ ನೀರನ್ನು ಕುಡಿಯುವುದು ಮತ್ತು ಬೆಕ್ಕು ಬಾಯಿಹಾಕಿದ ಆಹಾರವನ್ನು ಸೇವಿಸುವುದನ್ನು  ಇಸ್ಲಾಮ್‌ ವಿರೋಧಿಸಿಲ್ಲ. ಮಾತ್ರವಲ್ಲ ಅದು ನಜಸ್ ಕೂಡ ಆಗುವುದಿಲ್ಲ.
▪ಬೆಕ್ಕನ್ನು ಸರಿಯಾದ ಕಾರಣವಿಲ್ಲದೆ ಕೊಲ್ಲುವುದು ಹರಾಮ್ ಆಗಿದೆ. ಮಾತ್ರವಲ್ಲ ಬೆಕ್ಕಿಗೆ ಹೊಡೆದು ಚಿತ್ರಹಿಂಸೆ ಕೊಡುವುದನ್ನೂ ಇಸ್ಲಾಮ್ ನಿಷೇಧಿಸಿದೆ. *"ಬೆಕ್ಕಿಗೆ ಆಹಾರ ಕೊಡದೆ ಅದನ್ನು ಗೂಡಿನಲ್ಲಿ ಕಟ್ಟಿಹಾಕಿ ಹಿಂಸಿಸಿದ ಮಹಿಳೆಯೊಬ್ಬಳು ನರಕದಲ್ಲಿ ತನ್ನ ಗುಹ್ಯಾಂಗಗಳನ್ನು ತನ್ನ ಹಲ್ಲುಗಳಿಂದ ಕಚ್ಚಿ ಸೀಳಿ ಶಿಕ್ಷೆ ಅನುಭವಿಸುತ್ತಿರುವ  ಭಯಾನಕ ದೃಶ್ಯವನ್ನು ನಾನು "ಮಿಅರಾಜ್" ನ ರಾತ್ರಿ ಕಂಡೆನು* ಎಂದು ಪ್ರವಾದಿ ಮುಹಮ್ಮದ್ (ಸ) ಹೇಳಿದ ಹದೀಸನ್ನು ಇಮಾಮ್ *ಬುಖಾರಿ* ವರದಿ ಮಾಡಿದ್ದಾರೆ.
*ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಅಡುಗೆ ಮನೆಯೊಳಗೆ ಬರುವ ಬೆಕ್ಕಿನ ಕಣ್ಣಿಗೆ ಪದಾರ್ಥ ಮಾಡಲು ಅರೆದಿಟ್ಟ ಮೆಣಸಿನ ನೀರನ್ನು ಚಿಮುಕಿಸುವ ನಮ್ಮ ಇಂದಿನ ಗ್ರಹಿಣಿಯರಿಗೆ ಇದೊಂದು ಪಾಠವಾಗಿರಲಿ.*
  ▪ಬೆಕ್ಕಿನ ಮಾಂಸ ಇಸ್ಲಾಮಿನಲ್ಲಿ ಭಕ್ಷ್ಯಯೋಗ್ಯವಲ್ಲ. ಮಾತ್ರವಲ್ಲ ಬೆಕ್ಕನ್ನು ಮಾರಾಟ (ವ್ಯಾಪಾರ) ಮಾಡುವುದನ್ನು ಪ್ರವಾದಿ ಮುಹಮ್ನದ್ (ಸ) ರು ವಿರೋಧಿಸಿದ್ದಾರೆ.
     ▪ಬೆಕ್ಕು *ತ್ವಾಹಿರ್* (ಶುದ್ದಿ) ಆದ ಪ್ರಾಣಿಯಾಗಿದೆ. ಒದ್ದೆಯಾದ ಕೈಯಿಂದ ಬೆಕ್ಕನ್ನು ಮುಟ್ಟಿದ ನಂತರ ನಮಾಝ್ ಮಾಡುವವನು ಕೈ ತೊಳೆಯಬೇಕೆಂದಿಲ್ಲ. ಆದರೆ ಬೆಕ್ಕಿನ ರೋಮ(ಕೂದಲು) ಅದು ಬದುಕಿರುವಾಗ ಅದರ ಶರೀರದಿಂದ ಬೇರ್ಪಡದೆ ಇದ್ದರೆ ಮಾತ್ರ *ತ್ವಾಹಿರ್* ಆಗಿರುತ್ತದೆ. ಆದರೆ ಬದುಕಿರುವ ಬೆಕ್ಕಿನಿಂದ ಉದುರುವ ರೋಮಗಳು *ನಜಸ್* (ಮಲಿನ) ಆಗುತ್ತದೆ. ಆದ್ದರಿಂದ ನಮಾಝ್ ಮಾಡುವ ಜಾಗದಲ್ಲಿ ಅಥವಾ ಅವನ ಶರೀರದಲ್ಲಿ ಬೆಕ್ಕಿನ ರೋಮವಿದ್ದರೆ ಅವನ ನಮಾಝ್ ಅಸಿಂದುವಾಗುತ್ತದೆ.  *ಭಕ್ಶ್ಯಯೋಗ್ಯವಾದ ಮೃಗ ಅಥವಾ ಪಕ್ಷಿಗಳ ರೋಮ ಅಥವಾ ಗರಿ ಅವು ಬದುಕಿರುವಾಗ ಉದುರಿದರೆ ತ್ವಾಹಿರ್ ಆಗಿರುತ್ತದೆ. ಅಂತೆಯೇ ಇಸ್ಲಾಮಿನ ನಿಯಮದಂತೆ ದ್ಸಬಹ್(ಚೂರಿ ಹಾಕುವುದು) ಮಾಡಲ್ಪಟ್ಟ ಮೃಗ , ಪಕ್ಷಿಗಳ ರೋಮ ಮತ್ತು ಗರಿಗಳು ತ್ವಾಹಿರ್ ಆಗಿರುತ್ತದೆ. ಆದರೆ ಭಕ್ಷ್ಯಯೋಗ್ಯವಲ್ಲದ ನಾಯಿ ಮತ್ತು ಹಂದಿಯ ಹೊರತು ಇತರ ಎಲ್ಲಾ ಜೀವಿಗಳ ರೋಮ ಮತ್ತು ಗರಿಗಳು ಅವುಗಳು ಬದುಕಿದ್ದು ಆ ಸಂದರ್ಭದಲ್ಲಿ ಅದರ ಶರೀರದಲ್ಲಿರುವುದಾದರೆ ಅದು ತ್ವಾಹಿರ್ ಆಗಿರುತ್ತದೆ. ಆದರೆ ಬದುಕಿದ್ದರೂ ಸತ್ತರೂ  ಭಕ್ಷ್ಯಯೋಗ್ಯವಲ್ಲದರ ರೋಮ ಅಥವಾ ಗರಿಗಳು ಅದರ ಶರೀರದಿಂದ ಬೇರ್ಪಡುವುದರೊಂದಿಗೆ ಅದು ನಜಸ್ ಅಥವಾ ಮಲಿನವಾಗುತ್ತದೆ* ಎಂದು ಸಾಂದರ್ಭಿಕವಾಗಿ ಓದುಗರ ಗಮನಕ್ಕೆ ತರುತ್ತಿದ್ದೇನೆ.
     ▪ಪ್ರವಾದಿ ನೂಹ್ (ಅ) ರ ಹಡಗಿನಲ್ಲಿ ಇಲಿಯ ಉಪದ್ರವ ಜಾಸ್ತಿಯಾದಾಗ ನೂಹ್ (ಅ) ರ ಅಪೇಕ್ಷೆಯಂತೆ ಅಲ್ಲಾಹನು ಸೃಷ್ಟಿಸಿದ ಒಂದು ಜೀವಿಯಾಗಿದೆ ಬೆಕ್ಕು ಎಂದು ಹೇಳಲಾಗುತ್ತದೆ. ಬಹಳ ಕೋಮಲ ಮತ್ತು ಶುಚಿಯಾಗಿರುವ ಈ ಸಾಕುಪ್ರಾಣಿ ಯಾವಾಗಲೂ ತನ್ನ ಜೊಲ್ಲರಸ ಬಳಸಿ ತನ್ನ ಮುಖವನ್ನು ಉಜ್ಜುತ್ತಾ ಇರುತ್ತದೆ. ಅಂತೆಯೇ ತನ್ನ ಶರೀರದ ಇತರ ಭಾಗಗಳಲ್ಲಿ ಕೊಳೆಯಾದರೂ ಅದನ್ನು ತನ್ನ ಕೈಗಳಿಂದ ಉಜ್ಜಿ ಸ್ವಚ್ಚತೆಯನ್ನು ಕಾಪಾಡುತ್ತದೆ.
     ▪ಬೆಕ್ಕನ್ನು ಅರಬಿ ಭಾಷೆಯಲ್ಲಿ  *ಸಿನ್ನೂರ್*,   *ಹಿರ್ರಃ**ಖಿತ್ತಃ*,     *ಳಯ್‌ವನ್*,    *ಖಯ್‌ದ‌ಅ್*,   *ಖಯ್‌ತ್ವಲ್* ಇತ್ಯಾದಿ ನಾಮಗಳಿಂದ ಕರೆಯಲಾಗುತ್ತದೆ.
    ▪ಒಮ್ಮೆ ಗ್ರಾಮವಾಸಿಯಾದ ಅರಬಿಯೊಬ್ಬನು *(ಅಅ್‌ರಾಬಿ, ಅಥವಾ ಹಳ್ಳಿಯವ)* ಒಂದು ದಾರಿಯಲ್ಲಿ ನಡೆದು ಹೋಗುತ್ತಿರುವಾಗ ರಸ್ತೆ ಬದಿಯಲ್ಲಿ ಅಲೆದಾಡುತ್ತಿದ್ದ ಬೆಕ್ಕೊಂದನ್ನು ಕಂಡಾಗ ಮೊದಲು ಬೆಕ್ಕನ್ನು ಕಂಡಿರದ ಈತ ಅದನ್ನು ತನ್ನ ಹೆಗಲಲ್ಲಿ ಎತ್ತಿಕೊಂಡು ಮುಂದಕ್ಕೆ ನಡೆದನು. ಸ್ವಲ್ಪ ದೂರಸರಿದಾಗ ಒಬ್ಬ ದಾರಿಹೋಕ ಕೇಳಿದ. "ಇದೆಲ್ಲಿಂದ *ಸಿನ್ನೂರ್* ಬಾರೀ ಮುದ್ದಾಗಿದೆ." ಹಾಗೆಯೇ ಗ್ರಾಮವಾಸಿ ಮತ್ತೂ ಸ್ವಲ್ಪ ಮುಂದೆ ಹೋದಾಗ ಮತ್ತೊಬ್ಬ ದಾರಿಹೋಕ ಸಿಕ್ಕಿದ. ಅವನು ಕೇಳಿದ. "ಮಾಶಾ ಅಲ್ಲಾಃ  ಬಹಳ ಚಂದದ *ಹಿರ್ರಃ* ಇದೆಲ್ಲಿಂದ..?."  ಮುಗಿಯಲಿಲ್ಲ ಸ್ವಲ್ಪ ಮುಂದೆ ಸಾಗಿದಾಗ ಮತ್ತೊಬ್ಬ ಸಂಚಾರಿ ಸಿಕ್ಕಿದ. ಅವನು ಬೆಕ್ಕನ್ನು  ನೋಡಿ "ಒಳ್ಳೆ ಚುರುಕಿನ *ಖಿತ್ತಃ* ಇದೆಲ್ಲಿಂದ ಸಿಕ್ಕಿತು ಮಾರಾಯ...?." ಎಂದು ಕೇಳಿ ಅಚ್ಚರಿ ವ್ಯಕ್ತಪಡಿಸಿದ. ಅರ್ಧ ಪರ್ಲಾಂಗು ಮುಂದೆ ಸಾಗಿದಾಗ ಮತ್ತೊಬ್ಬ ಎದುರಾದ. ಆತ ಹೇಳಿದ. "ಒಳ್ಳೆ *ಳಯ್‌ವನ್* ಬಹಳ ಮುದ್ದಾಗಿದೆ." ಅಲ್ಲೇ  ಮುಂದಕ್ಕೆ ಇನ್ನೊಂದು ಪರ್ಲಾಂಗಿನಲ್ಲಿ ಮತ್ತಿಬ್ಬರು ದಾರಿಹೋಕರು ಸಿಕ್ಕಿದರು. ಒಬ್ಬ "ಇದೆಂತಹಾ *ಖಯ್‌ದ‌ಅ್* ಬಹಳ ಚುರುಕು ಉಂಟಲ್ವಾ..?" ಎಂದು ಕೇಳಿದರೆ ಮತ್ತೊಬ್ಬ  *"ಖಯ್‌ತ್ವಲ್* ಅಲ್ವಾ ಇದು. ಎಲ್ಲಿಂದ ಸಿಕ್ಕಿತು...?" ಅಂತ ಕೇಳಿದ.
    ▪ *"ಒಟ್ಟಿನಲ್ಲಿ ಒಂದು ಪುಟ್ಟ ಪ್ರಾಣಿಯನ್ನು ಇಷ್ಟೆಲ್ಲಾ ಹೆಸರುಗಳಿಂದ ಕರೆಯಬೇಕಾದರೆ ಈ ಪ್ರಾಣಿಯ ಬೆಲೆ ಎಷ್ಟಾಗಿರಬಹುದು..? ದಾರಿ ಹೋಕರಲ್ಲಿ ಆರು ಮಂದಿ ಆರು ಹೆಸರಿನಿಂದ ಕರೆದರು. ಏನೇ ಆದರೂ ಇದೊಂದು ಬೆಲೆ ಬಾಳುವ ಮೃಗ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅಲ್ಲಾಹನು ನನಗೆ ಕರುಣಿಸಿದ ಮಹಾ ಭಾಗ್ಯವಾಗಿರಬಹುದು. ಏನೇ ಆಗಲಿ ಸಂತೆಗೆ ಹೋಗಿ ಒಳ್ಳೆಯ ದರಕ್ಕೆ ಮಾರಾಟಮಾಡಿ ಇನ್ನಾದರೂ ಈ ಬಡತನದಿಂದ ಮುಕ್ತನಾಗಿ ಸಾಯುವ ಮೊದಲು ಕೆಲವು ದಿನಗಳಾದರೂ ಐಶ್ವರ್ಯದಿಂದ ಬದುಕಬೇಕು"* ಎಂದು ಮನದಲ್ಲಿ ಲೆಕ್ಕಹಾಕಿ ಬಡಪಾಯಿ *ಅ‌ಅ್‌ರಾಬಿ* (ಗ್ರಾಮೀಣ)  ಜಾನುವಾರುಗಳನ್ನು ಮಾರಾಟ ಮಾಡುವ ವಾರದ ಸಂತೆಗೆ ಕೊಂಡುಹೋಗಿ ಅಲ್ಲಿ ಬೆಕ್ಕನ್ನು ಮಾರಾಟ ಪ್ರದರ್ಶನಕ್ಕೆ ಇಟ್ಟ.
     ▪ಕಿಕ್ಕಿರಿದ ಜಾನುವಾರು ಮಾರುಕಟ್ಟೆಯಲ್ಲಿ ಜನ ಜಂಗುಳಿಯ ಮಧ್ಯೆ ತುಂಬಾ ಹೊತ್ತು ಕುಳಿತರೂ ಈ ವ್ಯಕ್ತಿಯ ಬೀದಿ ಬೆಕ್ಕಿಗೆ ಯಾವ ಗಿರಾಕಿಯೂ ಬರಲಿಲ್ಲ. ಕೊನೆಗೆ ತುಂಬಾ ತಡವಾಗಿ ಸಂಜೆಯಾಗುವಾಗ ಒಬ್ಬ ಬಂದು ಕೇಳಿದ. *"ಬೆಕ್ಕು ಮಾರಾಟಕ್ಕಿರುವುದಾ...? ಎಷ್ಟು ಬೆಲೆ...?"*  ಗ್ರಾಮೀಣ ಹೇಳಿದ.  *"ಹೌದು... ನೂರು ದಿರ್‌ಹಮ್"* (ಇಂದಿನ ಲಕ್ಷೋಪಲಕ್ಷ) ಕೋಪಗೊಂಡ ಗ್ರಾಹಕ ಹೇಳಿದ. *"ಉಫ್... ಅರ್ಧ ದಿರ್‌ಹಮಿಗೂ ಯಾರಿಗೂ ಬೇಡದ ಈ ಬೀದಿ ಬೆಕ್ಕಿಗೆ ನೂರು ದಿರ್‌ಹಮ್....! ನಿನಗೆ ನಾಚಿಕೆ ಆಗುವುದಿಲ್ಲವೇ..?"*
     ▪ ಹಲವಾರು ಕನಸುಗಳನ್ನು ಹೊತ್ತು ಮಾರುಕಟ್ಟೆಗೆ ಬಂದ ಬಡಪಾಯಿ ಅರಬಿಯ ಪ್ರೆಷರ್ ಜಾಸ್ತಿಯಾಯಿತು. *"ಊರಲ್ಲಿ ಏಳೆಂಟು ಹೆಸರುಗಳಿಂದ ಕರೆಯಲ್ಪಡುವುದಾದರೂ ಮಾರುಕಟ್ಟೆಯಲ್ಲಿ ಮೂರು ಕಾಸಿಗೂ ಬೆಲೆ ಇಲ್ಲದ ಈ ಪ್ರಾಣಿಯ ಮೇಲೆ ಅಲ್ಲಾಹುವಿನ ಶಾಪವಿರಲಿ"* ಎಂದು ಹೇಳಿ ಬೆಕ್ಕನ್ನು ಕಸತೊಟ್ಟಿಗೆ ಎಸೆದು ಅಲ್ಲಿಂದ ಹೋದ.
  ▪ಈ ಸತ್ಯ ಕಥೆಯನ್ನು ಹಿಜ್‌ರಾ ಏಳುನೂರ ತೊಂಬತ್ತರಲ್ಲಿ ಜನಿಸಿದ ಪ್ರಖ್ಯಾತ ಪಂಡಿತ  ಇಮಾಮ್ *ಶಿಹಾಬುದ್ದೀನ್ ಅಲ್ ಅಬ್‌ಶೀಹೀ* ತನ್ನ ಪ್ರಸಿದ್ಧ ಗ್ರಂಥವಾದ *ಅಲ್ ಮುಸ್‌ತತ್‌ರಫ್* ನಲ್ಲಿ ಉಲ್ಲೇಖಿಸಿದ್ದಾರೆ.
   ▪ಆತ್ಮೀಯ ಲೋಕದ ತೇಜಸ್ಸು, ಜ್ಞಾನಸೂರ್ಯ ಮತ್ತು ಸೂಫೀವರ್ಯರೂ ಅಗಿದ್ದ ಶೈಖ್ *ಹಾತಿಮ್ ಬಿನ್ ಅಹ್‌ಮದ್ ಅಲ್ ಅಹ್‌ದಲ್* (ರ) ರವರ *(ಯಮನ್ ದೇಶದವರು)* ಮನೆಗೆ ಯಾವಾಗಲೂ ಊಟದ ಸಮಯವಾಗುವಾಗ ಒಂದು ಬೆಕ್ಕು ಬರುತ್ತಿತ್ತು. ಶೈಖ್ *ಹಾತಿಮ್* (ರ) ರು ಅದಕ್ಕೆ ಊಟ, ಮೀನುಮಾಂಸ, ಕೋಳಿಮಾಂಸ, ಮೊಟ್ಟೆ ಇತ್ಯಾದಿಗಳನ್ನು ಕೊಟ್ಟು ಬಹಳ ಪ್ರೀತಿ ಮತ್ತು ಮಮತೆಯಿಂದ ನೋಡುತ್ತಿದ್ದರು. ಅಲ್ಲದೆ ಮಹಾನುಭಾವರು ಆ ಬೆಕ್ಕಿಗೆ *ಲೂಲೂ* ಎಂದು ನಾಮಕರಣ ಕೂಡ ಮಾಡಿದ್ದರು. *ಲೂಲೂ* ಎಂದು ಶೈಖ್ ಕರೆದರೆ ಬೆಕ್ಕು ಎಲ್ಲಿದ್ದರೂ ಅವರ ಸನ್ನಿಧಿಗೆ ಬಂದು ಅವರ ಎದುರಲ್ಲಿ ಬಹಳ ಗೌರವದಿಂದ ಮೌನವಾಗಿ ಕುಳಿತು ಕೊಳ್ಳುತ್ತಿತ್ತು. *ಶೈಖ್ ಹಾತಿಮ್* (ರ) ರ ಚಾಕರನಿಗೆ (ಖಾದಿಮ್) ಇದೊಂದು ದೊಡ್ಡ ತಲೆನೋವಾಗಿತ್ತು. ಹೇಗಾದರು ಮಾಡಿ ಈ ಬೆಕ್ಕನ್ನು ಒಮ್ಮೆ ಸಮಯ ದೊರೆತರೆ ಕಷಾಪು ಮಾಡಬೇಕೆಂದು ಆತ ಲೆಕ್ಕ ಹಾಕಿದ್ದ.
     ▪ಒಂದು ದಿನ *ಶೈಖ್ ಹಾತಿಮ್ ಅಹ್‌ದಲ್* (ರ) ರು ಎಲ್ಲೋ ದೂರ ಯಾತ್ರೆಹೋದ ಸಮಯ ನೋಡಿ ಈತ ಈ ಸಾಧು ಬೆಕ್ಕನ್ನು ಕೊಂದು ಮನೆ ಮುಂಭಾಗದಲ್ಲಿರುವ ಕಸದ ಬುಟ್ಟಿಗೆ ಹಾಕಿದ. *ಶೈಖ್ ಹಾತಿಮ್ ಅಹ್‌ದಲ್* (ರ) ರು ಮನೆಗೆ ತಲುಪಿದರು. ಅಲ್ಲಾಹುವಿನ *ವಲಿಯ್ಯ್* ಆಗಿದ್ದ ಅವರಿಗೆ ಸೇವಕ ಮಾಡಿದ ಈ ಕೃತ್ಯದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಆದರೂ ಏನೂ ತಿಳಿಯದವರಂತೆ ಎರಡು ಮೂರು ದಿನ ಮೌನವಾದರು. ನಾಲ್ಕನೇ ದಿನ ಸೇವಕನಲ್ಲಿ ಕೇಳಿದರು. *"ನಮ್ಮ ಬೆಕ್ಕು ಲೂಲೂ ಎಲ್ಲಿದ್ದಾಳೆ...?"* ಸೇವಕ ಹೇಳಿದ. *"ಗೊತ್ತಿಲ್ಲ ಗುರುಗಳೇ... ಮೂರು ನಾಲ್ಕು ದಿನಗಳಿಂದ ಕಾಣುವುದೇ ಇಲ್ಲ. ನಾನು ಹುಡುಕುತ್ತಲೇ ಇದ್ದೇನೆ. ಎಲ್ಲಿ ಹೋಗಿದೆ ಅಂತ ಗೊತ್ತಿಲ್ಲ ಪಾಪ. ನೆನೆಸುವಾಗ ಬೇಸರವಾಗುತ್ತದೆ."* ಆಗ ಶೈಖ್‌ರವರು  *ಓಹೋ ನಿನಗೆ ಗೊತ್ತಿಲ್ಲ ಅಲ್ವಾ...?"* ಎಂದು ಹೇಳಿ *ಲೂಲೂ* *ಲೂಲೂ* *ಲೂಲೂ* ಎಂದು ಮೂರು ಬಾರಿ ಕರೆದರು. ಸುಬ್‌ಹಾನಲ್ಲಾಃ...!! ರುಂಡ ಮುಂಡ ಬೇರ್ಪಟ್ಟು ಕಸತೊಟ್ಟಿಯಲ್ಲಿದ್ದ ಬೆಕ್ಕು ಮಹಾನುಭಾವರ ಸನ್ನಿಧಿಯಲ್ಲಿ ಬಂದು ನಿಂತಿತು. ಶೈಖ್‌ರವರು ಇದು ಇಂದ್ರಜಾಲವಲ್ಲವೆಂದು ಅವನಿಗೆ ಮನವರಿಕೆ ಆಗಲು ಅದಕ್ಕೆ ಊಟ ಬಡಿಸಿ ಕೊಟ್ಟರು. ಮೊದಲಿನಂತೆಯೇ ಬೆಕ್ಕು *ಲೂಲೂ* ಊಟ ಮಾಡಿತು.
    ▪ಹಿಜ್‌ರಾ ಐದನೇ ಶತಮಾನದ ವಿದ್ವಾಂಸ ಇಮಾಮ್ *ಅಬಿಲ್ ಹಸನ್ ತ್ವಾಹಿರ್* (ರ) ವಿವರಿಸುತ್ತಾರೆ. "ನಾನೊಮ್ಮೆ ನನ್ನ ಸಂಗಡಿಗರೊಂದಿಗೆ ಈಜಿಪ್ಟಿನ ಒಂದು ಮಸೀದಿಯ ಛಾವಣಿಯಲ್ಲಿ ಊಟ ಮಡುತ್ತಿದ್ದೆನು. ಆಗ ಅಲ್ಲಿಗೆ ಒಂದು ಬೆಕ್ಕು ಬಂತು. ನಾವದಕ್ಕೆ ತಿನ್ನಲು ಒಂದು ತುಂಡು ರೊಟ್ಟಿ ಕೊಟ್ಟೆವು. ಆದರೆ ಅದು ಅದನ್ನು ತಿನ್ನದೆ ಹಾಗೆಯೇ ಬಾಯಿಯಿಂದ ಕಚ್ಚಿಕೊಂಡು ಹೋಯಿತು. ಸ್ವಲ್ಪ ಕಳೆದು ಮತ್ತೂ ಬಂತು. ಆಗಲೂ ಒಂದು ತುಂಡು ಕೊಟ್ಟೆವು. ಅದನ್ನೂ ತಿನ್ನದೆ ಹಾಗೆಯೇ ಕೊಂಡು ಹೋಯಿತು. ಒಟ್ಟಿನಲ್ಲಿ ಹಲವಾರು ಸಲ ಹೀಗೆಯೇ ಪುನರಾವರ್ತನೆ ಮಾಡಿದಾಗ ನಮಗೆ ಬಹಳ ಕುತೂಹಲವಾಯಿತು. ಕೊಂಡುಹೋಗುವ ರೊಟ್ಟಿಯನ್ನು ಏನು ಮಾಡುತ್ತದೆ ಎಂದು ತಿಳಿಯಲಿಕ್ಕಾಗಿ ನಾವದನ್ನು ಹಿಂಬಾಲಿಸಿ ನಡೆದೆವು. ಮಸಿದಿಯ ಹತ್ತಿರವಿರುವ ಜನವಾಸವಿಲ್ಲದ ಒಂದು ಜೋಪಡಿ ಮನೆಯಲ್ಲಿ ಕಣ್ಣು ಕಾಣದ ಪ್ರಾಯವಾದ ಮುದುಕ ಬೆಕ್ಕೊಂದು ಕಾಲು ನೆಲಕ್ಕೆ ಊರಿ ನಡೆಯಲಾಗದ ಅವಸ್ಥೆಯಲ್ಲಿತ್ತು. ಸುಬ್‌ಹಾನಲ್ಲಾಃ..! ಈ
ಕೊಂಡು ಹೋಗುವ ಆಹಾರ ಆ ಬೆಕ್ಕಿಗೆಂದು ತಿಳಿದಾಗ ನಮ್ಮ ಕಣ್ಣು ತುಂಬಿತು.
  *▪" ಕಾಲು ನೆಟ್ಟಗೆ ಇಟ್ಟು ನಡೆಯಲಾಗದ ಸ್ಥಿತಿಯಲ್ಲಿರುವ ಈ ಮೂಕನಾದ ಸಾಧು ಬೆಕ್ಕಿಗೂ ಅಲ್ಲಾಹನು ಆಹಾರವನ್ನು ಕುಳಿತಲ್ಲಿಗೇ  ಮುಟ್ಟಿಸುತ್ತಾನೆ ಎಂದಾದರೆ ನನ್ನಂಥಹಾ ಮನುಷ್ಯನನ್ನು ಅಲ್ಲಾಹನು ಎಂದೂ ಕೈಬಿಡಲಾರ"* ಎಂದು ಹೇಳಿ ಶೈಖ್ *ಅಬುಲ್ ಹಸನ್ ತ್ವಾಹಿರ್* (ರ) ರವರು ನಂತರ ತನ್ನ ವಫಾತಿನ ತನಕ ಯಾರಲ್ಲೂ ಯಾವುದೇ ಸಂಪರ್ಕವಿಲ್ಲದೆ ಏಕಾಂಗಿಯಾಗಿ ತನ್ನ ಮನೆಯಲ್ಲಿ ಒಬ್ಬ *ಝಾಹಿದ್* ಆಗಿ (ಪ್ರಪಂಚತ್ಯಾಗಿ) ಇದ್ದರೆಂದು ಪ್ರಖ್ಯಾತ ಇಸ್ಲಾಮೀ ಇತಿಹಾಸಗಾರನಾದ ಪಂಡಿತ *ಅಹ್‌ಮದ್ ಖಲ್ಲಿಖಾನ್* ತನ್ನ ಇತಿಹಾಸ ಗ್ರಂಥವಾದ *ವಫಯಾತುಲ್ ಅ‌ಅ್‌ಯಾನ್* ಎಂಬ ಗ್ರಂಥದಲ್ಲಿ ಹೇಳಿದ್ದಾರೆ.
    ▪ಪ್ರಖ್ಯಾತ ಸೂಫಿವರ್ಯ ಶೈಖ್ *ಅಹ್‌ಮದ್ ಅಲ್ ಕಬೀರ್ ಅಲ್ ರಿಫಾಯೀ* (ರ) ರವರು (512-578 ಹಿಜ್‌ರಾ) ಒಮ್ಮೆ ಇರಾಕಿನ ಒಂದು ಮಸೀದಿಯಲ್ಲಿ ತನ್ನ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಸ್ವಲ್ಪ ಸಮಯವಾದಾಗ ಮಸೀದಿಯಲ್ಲಿ ನಮಾಝಿಗೆ ಬಾಂಗು ಕರೆ ಮೊಳಗಿತು. ಶೈಖ್ ರಿಫಾಯಿಯವರು ಎಚ್ಚರವಾಗಿ ತನ್ನ ಪಕ್ಕಕ್ಕೆ ನೋಡಿದಾಗ ತನ್ನ ನಿಲುವಂಗಿಯ *(ಖಮೀಸ್)* ಮೇಲೆ ಒಂದು ಸಾಧು ಬೆಕ್ಕು ಬಂದು ಮಲಗಿತ್ತು. ಬೆಕ್ಕಿನೊಂದಿಗೂ ಮಮತೆ ಕಾಣಿಸಬೇಕೆಂದು ಈ ಜಗತ್ತಿಗೆ ಕಲಿಸಿಕೊಟ್ಟ ಪ್ರವಾದಿವರ್ಯರ ಸಂತತಿಯಲ್ಲಿ ಜನಿಸಿದ ಅವರ ಮೊಮ್ಮಗನಾದ ಶೈಖ್ ರಿಫಾಯಿಯವರು ಬೆಕ್ಕಿನ ನಿದ್ರೆಗೆ ತೊಂದರೆಯಾಗದಂತೆ ಅವರ ಖಮೀಸಿನ ಕೈಯನ್ನೇ ಒಂದು ಕತ್ತರಿಯಿಂದ ಕತ್ತರಿಸಿ ಏಕ ಕೈ ಖಮೀಸ್ ಧರಿಸಿ ನಮಾಝು ಮಾಡಿದರು. ನಮಾಝು ಮುಗಿದು ಕೊಠಡಿಗೆ ಬಂದಾಗ ಬೆಕ್ಕು ನಿದ್ರೆಯಿಂದ ಎಚ್ಚರವಾಗಿ ಜಾಗ ಕಾಲಿಮಾಡಿತ್ತು. ನಂತರ ಶೈಖ್ ರಿಫಾಯಿಯವರು ತುಂಡಾದ ಖಮೀಸಿನ ಕೈಯನ್ನು ಜೋಡಿಸಿ ಹೊಲಿದರು.
     *"ತುಂಡಾದ ನಿಲುವಂಗಿಯ ಕೈಯನ್ನು ಹೊಲಿದು ಜೋಡಿಸಿದಾಗ ನಿಲುವಂಗಿ ಮೊದಲಿನಂತೆಯೇ ಆಯಿತು. ಮಾತ್ರವಲ್ಲ ಸಾಧು ಬೆಕ್ಕಿನ ನಿದ್ದೆಗೆ ಯಾವುದೇ ತೊಂದರೆಯಾಗದೆ ಅದಕ್ಕೆ ಬೇಕಾದಷ್ಟು ನಿದ್ದೆಯೂ ಸಿಕ್ಕಿತು"* ಎಂದು ಶೈಖ್ ರಿಫಾಯಿ (ರ) ರು ನಂತರ ತನ್ನ ಸಂಗಡಿಗರಲ್ಲಿ ಹೇಳಿದರು.
   ▪ಇದು ಯಾವುದೇ ಚಿಣ್ಣರ ಲೋಕ ಅಥವಾ ಕಾಲ ಹರಣದ ಕಥೆಯಲ್ಲ. ಪ್ರಮುಖ ವಿದ್ವಾಂಸ *ಮುಅ್‌ಮಿನ್ ಬಿನ್ ಹಸನ್ ಅಲ್ ಶಬಲಂಜಿ* ಯವರು ತನ್ನ ಪ್ರಖ್ಯಾತ ಗ್ರಂಥವಾದ *ನೂರುಲ್ ಅಬ್‌ಸಾರ್ ಫೀ ಮನಾಖಿಬಿ ಆಲಿ ಬಯ್ತಿನ್ನಬಿಯ್ಯಿಲ್ ಮುಖ್‌ತಾರ್* ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
   ▪ಕುಷ್ಟರೋಗ ಇರುವವನು ಬೆಕ್ಕಿನ ರಕ್ತವನ್ನು ಕುಡಿದರೆ ಅವನ ಖಾಯಿಲೆ ವಾಸಿಯಾಗುತ್ತದೆ. ರಾತ್ರಿ ನಿದ್ದೆಯಲ್ಲಿ ಹೆದರಿಕೆ ಆಗುವವನ ಶರೀರದ ಯವುದಾದರೊಂದು ಭಾಗಕ್ಕೆ ಬೆಕ್ಕಿನ ಕೋರೆ ಹಲ್ಲನ್ನು ಕಟ್ಟಿದರೆ ಅವನ ಭಯ ಬೆಟ್ಟ ಹತ್ತುತ್ತದೆ.
    ▪ಬೆಕ್ಕಿನ ಪಿತ್ತಜನಕಾಂಗವನ್ನು ಜಜ್ಜಿ ನೀರುಮಾಡಿ ಅದನ್ನು ಕಣ್ಣಿಗೆ ಸುರುಮ ಹಾಕುವಂತೆ ಹಾಕಿದರೆ ಎಂತಹಾ ಅಮಾವಾಸ್ಯೆಯ ರಾತ್ರಿಯಲ್ಲೂ ಹಗಲಿನಂತೆ ಕಾಣುತ್ತದೆ. ಸುಬ್‌ಹಾನಲ್ಲಃ..!!
     ▪ಕಾಡು ಬೆಕ್ಕಿನ ಮಿದುಳನ್ನು ಜರ್ಜೀರ ಗಿಡದ ಎಲೆಯೊಂದಿಗೆ ಮಿಶ್ರಣ ಮಾಡಿ ಅದನ್ನು ನೀರಾಗುವ ತನಕ ಬೇಯಿಸಿ ಬೆಳಗ್ಗೆ ಹಸಿ ಹೊಟ್ಟೆಗೆ ಕುಡಿದರೆ  ಶಸ್ತ್ರಚಿಕಿತ್ಸೆ ಮಾಡಿ ತೆಗೆಯಬೇಕಾದ ಮೂತ್ರ ಕಲ್ಲಾದರೂ ನಿಮಿಷದಲ್ಲಿ ಹೊರ ಬರುತ್ತದೆ.
  ▪ ಒಬ್ಬನನ್ನು ಬೆಕ್ಕು ಕಚ್ಚುವ ಅಥವಾ ಪರಚುವ ಕನಸು ಬಿದ್ದರೆ ಆ ಒಂದು ವರ್ಷ ಅವನು ಹಲವಾರು ರೋಗಕ್ಕೆ ಬಲಿಯಾಗುವನು ಎಂಬುದರ  ನಿಶಾನೆಯಾಗಿದೆ.
       ▪ಹೊರಗಿನಿಂದ ಬೆಕ್ಕೊಂದು ನಮ್ಮ ಮನೆ ಪ್ರವೇಶಿಸುವ ಕನಸು ಬಿದ್ದರೆ ಆ ಮನೆ ಕಳ್ಳರ ದಾಳಿಗೆ ಬಲಿಯಾಗುವುದರ ಲಕ್ಷಣವಾಗಿದೆ.
   ▪ ಮನೆಯಲ್ಲಿ ಬೆಕ್ಕೊಂದು ಕೂಗದೆ ಮೌನವಾಗಿ ಒಂದು ಕಡೆ ಕುಳಿತಿರುವುದನ್ನು ಕನಸು ಕಂಡರೆ ಆ ವರ್ಷ ಆ ಮನೆಯಲ್ಲಿ ಬಹಳ ಆರಾಮ ಮತ್ತು ಸಂತೋಷವಿರುತ್ತದೆ ಎಂಬುದರ ಸಂಕೇತವಾಗಿದೆ.
    ▪  ‌ಸಂಗ್ರಹ : ಇಮಾಮ್ ದುಮೈರಿಯ *ಹಯಾತುಲ್ ಹಯವಾನ್* ಇಮಾಮ್ ಅಬ್‌ಷೀಹಿಯ *ಮುಸ್‌ತತ್‌ರಫ್*  ಇಮಾಮ್ ಶಬ್‌ಲಂಜಿಯವರ *ನೂರುಲ್ ಅಬ್‌ಸಾರ್* ಮತ್ತು ತತ್ವಜ್ಞಾನಿ ಜಾಹಿದ್‌ರ *ಕಿತಾಬುಲ್ ಹಯವಾನ್* ಎಂಬ ಗ್ರಂಥ.

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...