*▪ದುಷ್ಟರ ಮಿತ್ರ ಶಿಷ್ಟರ ಶತ್ರು ಹಲ್ಲಿ*
*✒ಯೂಸುಫ್ ನಬ್‌ಹಾನಿ ಕುಕ್ಕಾಜೆ.*
📞00971 553499119
▪"ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು" ಎಂಬ ಗಾದೆಯಂತೆ ಹಲ್ಲಿ ಕಾಣಲು ಬಹಳ ಚಿಕ್ಕದಾದರೂ ಇದರ ಪೋಕರಿತನ ಇದಕ್ಕಿಂತ ನೂರು ಪಾಲು ಹೆಚ್ಚಿದೆ. ನಮ್ಮ ನೋಟಕ್ಕೆ ಬಹಳ ಸಾಧುವಾಗಿ ಕಂಡರೂ ಇದು ಬಹಳ ಅಪಾಯಕಾರಿ ಮತ್ತು ಹಾನಿಕರ ಜೀವಿ.
▪ ಬಡವನೆಂದೋ, ಶ್ರೀಮಂತನೆಂದೋ, ಮಸೀದಿಯೆಂದೋ, ಮಂದಿರವೆಂದೋ ಯಾವುದೇ ವ್ಯತ್ಯಾಸವಿಲ್ಲದೆ ಸಾಧಾರಣ ಎಲ್ಲಾ ಕಡೆಗಳಲ್ಲೂ ಕಾಣಲ್ಪಡುವ ಒಂದು ಜೀವಿಯಾಗಿದೆ ಹಲ್ಲಿ. ಬರೇ ಐದಾರು ವರ್ಷ ಆಯುಷ್ಯವಿರುವ ಈ ಜೀವಿಯನ್ನು ಕಂಡಲ್ಲಿ ಕೊಲ್ಲಲು ಪ್ರವಾದಿ ಮುಹಮ್ಮದ್ (ಸ) ರು ಆಜ್ಞಾಪಿಸಿದ್ದಾರೆ. ಮಾತ್ರವಲ್ಲ ಈ ಬಗ್ಗೆ ಡಝನುಗಟ್ಟಲೆ ಸಹೀಹಾದ ಹದೀಸುಗಳು ವರದಿಯಾಗಿದೆ.
▪ನೀಚ, ವಿಪತ್ತು ಮಾಡುವವ, ಉಪದ್ರವಕಾರಿ, ಪೋಕರಿ ಇತ್ಯಾದಿ ಅರ್ಥ ಬರುವ *"ಪಾಸಿಖಃ"* ಎಂಬ ಅರಬಿ ಪದದಲ್ಲಿ ಹಲ್ಲಿ ಮತ್ತು ಇಲಿಯನ್ನು ಪ್ರವಾದಿ (ಸ) ರು ಒಳಗೊಳ್ಳಿಸಿದ್ದಾರೆ.
▪ಖಲೀಲುಲ್ಲಾಹಿ ಇಬ್ರಾಹೀಮ್(ಅ) ರನ್ನು ಅವರ ಶತ್ರು ಸ್ವೇಚ್ಚಾಧಿಪತಿಯೂ ಅಹಂಕಾರಿಯೂ ಆದ ನಮ್‌ರೂದನು ಉರಿಯುತ್ತಿರುವ ಬೆಂಕಿಗೆ ಹಾಕಿದಾಗ ಜಗತ್ತಿನ ಎಲ್ಲಾ ಜೀವರಾಶಿಗಳು ಅದನ್ನು ನಂದಿಸಲು ಯತ್ನಿಸುತ್ತಿರುವಾಗ ಈ ಪೋಕರಿ ಹಲ್ಲಿ ಮಾತ್ರ ನಂದಿಸಬೇಕಾದ ಬೆಂಕಿಗೆ ತನ್ನ ಬಾಯಿಯಿಂದ ಊದಿ ಉತ್ತೇಜನ ನೀಡುತ್ತಿತ್ತು ಎಂದು ಪ್ರವಾದಿ ಮುಹಮ್ಮದ್ (ಸ) ರು ಹೇಳಿದ ಹದೀಸ್ ಪವಿತ್ರ ಕುರ್‌ಆನಿನ ನಂತರ ಮುಸ್ಲಿಮ್ ಜಗತ್ತು ಅಂಗೀಕರಿಸುವ ಇಮಾಮ್ ಬುಖಾರಿ ಮತ್ತು ಮುಸ್ಲಿಮ್ ಜಂಟಿಯಾಗಿ ವರದಿ ಮಾಡಿದ್ದಾರೆ.
▪ಹಲ್ಲಿಯನ್ನು ಪವಿತ್ರ ಕಅಬಾದ ಒಳಗಡೆ ಕಂಡರೂ ಕೊಲ್ಲದೆ ಬಿಡಬೇಡಿ ಎಂದು ಪ್ರವಾದಿ ಮುಹಮ್ಮದ್ (ಸ) ರು ಹೇಳಿದ್ದನ್ನು *ಇಬ್‌ನು ಅಬ್ಬಾಸ್* (ರ) ರಿಂದ ಇಮಾಮ್ ತಬ್‌ರಾನೀ ವರದಿ ಮಾಡಿದ್ದಾರೆ.
▪ಪ್ರವಾದಿ (ಸ) ರ ಬಾಳ ಸಂಗಾತಿ ಬೀವಿ ಆಯಿಶಾ (ರ) ರ ಮನೆಯಲ್ಲಿ ಕಬ್ಬಿಣದಿಂದ ತಯಾರು ಮಾಡಿದ ಡೊಡ್ಡ ಉದ್ದವಾದ ಸಲಾಕೆಯೊಂದಿತ್ತು. ಮನೆಗೆ ಬಂದ ಒಬ್ಬರು ಇದು ಯಾಕೆಂದು ಕೇಳಿದಾಗ *"ಇದು ಹಲ್ಲಿಯನ್ನು ಕೊಲ್ಲಲಿಕ್ಕೆ ಬೇಕಾಗಿ ಮಾಡಿಸಿದ್ದು. ಪ್ರವಾದಿ ಇಬ್‌ರಾಹೀಮ್ (ಅ) ರವರನ್ನು ನಮ್‌ರೂದನು ಬೆಂಕಿಗೆ ಹಾಕಿದಾಗ ಬೆಂಕಿಗೆ ಊದಿ ಪ್ರೋತ್ಸಾಹ ನೀಡಿದ ಹಲ್ಲಿಯನ್ನು ಕೊಲ್ಲಲು ಪ್ರವಾದಿ ಮುಹಮ್ಮದ್(ಸ) ರು ನಮ್ಮಲ್ಲಿ ಅಜ್ಞಾಪಿಸಿದ್ದಾರೆ"* ಎಂದು ಹೇಳಿದರು. ಇದನ್ನು ಇಮಾಮ್ *"ಬಿನ್ ಮಾಜಾ"* ವರದಿ ಮಾಡಿದ್ದಾರೆ. ಮಾತ್ರವಲ್ಲ ಇಮಾಮ್ ಅಹ್‌ಮದ್ ಬಿನ್ ಹಂಬಲ್ ರವರು ತನ್ನ ವಿಶ್ವ ವಿಖ್ಯಾತ ಗ್ರಂಥ ಮುಸ್‌ನದಿನಲ್ಲಿಯೂ ಇದನ್ನು ಉಲ್ಲೇಖಿಸಿದ್ದಾರೆ.
▪ಇಸ್ಲಾಮಿನ ಮೂರನೇ ಖಲೀಫರಾದ ಉಸ್ಮಾನ್ ಬಿನ್ ಅಫ್ಪಾನರ ತಂದೆಯ ಸಹೋದರ *"ಅಲ್ ಹಕಮ್ ಬಿನ್ ಅಬಿಲ್ ಆಸ್"* ಎಂಬವರು ಪ್ರವಾದಿಯವರು(ಸ) ತನ್ನ ಮನೆಯಲ್ಲಿ ತನ್ನ ಕುಟುಂಬದೊಂದಿಗೆ ಮಾತಾಡುವುದನ್ನು ಅಥವಾ ಇನ್ಯಾವುದೇ ಸಂಭಾಷಣೆಗಳನ್ನು ಕದ್ದಾಲಿಸಿ ನಂತರ ಅದನ್ನು ಜನರೆಡೆಯಲ್ಲಿ ಪ್ರಸಾರ ಮಾಡುವ ಒಬ್ಬ ವ್ಯಕ್ತಿಯಾಗಿದ್ದರು. ಅಂತೆಯೇ ಪ್ರವಾದಿ (ಸ) ರು ಮಾತಾಡುವಂತೆ ಮಾತನಾಡುವುದು, ಪ್ರವಾದಿವರ್ಯರು ನಡೆಯುವಂತೆ ನಡೆದು ತೋರಿಸಿ ಗೇಲಿ ಮಾಡುವುದಾಗಿತ್ತು ಇವರ ಕೆಲಸ. ಈ ಕಾರಣದಿಂದ ಈ ವ್ಯಕ್ತಿಯಲ್ಲಿಯೂ ಅವರ ಕುಟುಂಬದವರಲ್ಲಿಯೂ ಪ್ರವಾದಿ (ಸ )ರಿಗೆ ಅಸಾಧ್ಯ ದ್ವೇಷವಿತ್ತು. ಮಾತ್ರವಲ್ಲ ಇವರನ್ನು ತದನಂತರ ಮದೀನದಿಂದ ತಾಯಿಫ್‌ಗೆ ಗಡಿಪಾರು ಮಾಡಲಾಗಿತ್ತು. ನಂತರ ಮೂರನೇ ಖಲೀಫ ಉಸ್ಮಾನ್ ಬಿನ್ ಅಫ್ಪಾನ್ (ರ)ರ ಆಡಳಿತ ಕಾಲದಲ್ಲಾಗಿತ್ತು ಇವರು ಮದೀನಕ್ಕೆ ಪುನಃ ಮರಳಿ ಬರುವುದು.
▪ಸಹಾಬಿಗಳಿಗೆ ಮಕ್ಕಳು ಜನಿಸಿದರೆ ಹುಟ್ಟಿದ ಕೂಡಲೇ ಪ್ರವಾದಿ(ಸ) ರ ಹತ್ತಿರ ತಂದು ಅವರ ಪವಿತ್ರ ಕೈಯಲ್ಲಿ ಕೊಟ್ಟು ಬರಕತ್ತಿಗಾಗಿ ದುಆ ಮಾಡಿಸುವುದು ವಾಡಿಕೆಯಾಗಿತ್ತು. ಅಂತೆಯೇ ಈ ಗೇಲಿ ಮಾಡುತ್ತಿದ್ದ ವ್ಯಕ್ತಿಗೆ *ಮರ್ವಾನ್* ಎಂಬ ಹೆಸರಿನ ಒಂದು ಮಗು ಜನಿಸಿದಾಗ ಆ ಮಗುವನ್ನು ಆ ಪವಿತ್ರ ಸನ್ನಿಧಿಗೆ ತಂದಾಗ *"ಆ ಶಾಪಗ್ರಸ್ತ ಹಲ್ಲಿಯ ಮಗ ಈ ಶಾಪಗ್ರಸ್ತ ಹಲ್ಲಿ*" ಎಂದು ಮರ್ವಾನಿಗೆ ಸನ್ನೆ ಮಾಡಿ ಪ್ರವಾದಿವರ್ಯರು ಹೇಳಿದ್ದರು. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಹೇಯ ಮತ್ತು ನೀಚ ಕೃತ್ಯ ಮಾಡಿದ ಒಬ್ಬ ವ್ಯಕ್ತಿಯನ್ನು ಮತ್ತು ಅವರ ಸಂತಾನವನ್ನು ಪ್ರವಾದಿ (ಸ) ರು ಹಲ್ಲಿಯೊಂದಿಗೆ ಹೋಲಿಕೆ ಮಾಡಿದ್ದು ಎಂದಾದರೆ ಹಲ್ಲಿ ಎಷ್ಟು ನೀಚ ಜಂತು ಎಂದು ನಾವಿಲ್ಲಿ ಊಹಿಸಬಹುದು...!!
▪ಒಬ್ಬನು ಒಂದು ಹಲ್ಲಿಯನ್ನು ಕೊಂದರೆ ಅವನ ಏಳು ಪಾಪಗಳು ಮನ್ನಿಸಲ್ಪಡುತ್ತದೆ ಎಂದು ಪ್ರವಾದಿ (ಸ)ರು ಹೇಳಿದ್ದಾಗಿ ಬೀವಿ ಆಯಿಶಾ(ರ) ರು ವರದಿ ಮಾಡಿದ್ದನ್ನು ಇಮಾಮ್ ಹೈತಮಿಯವರು ತನ್ನ *"ಅಲ್ ಮಜಮಅ್ ಅಲ್ ಝವಾಯಿದ್"* ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.
▪ ಒಬ್ಬನು ಒಂದು ಹಲ್ಲಿಯನ್ನು ಕೊಂದರೆ ಸೈತಾನನನ್ನು ಕೊಲ್ಲುವುದಕ್ಕೆ ಸಮಾನವೆಂದು ಬೇರೊಂದು ಹದೀಸಿನಲ್ಲಿದೆ. *"ಒಬ್ಬನು ಒಂದು ಹಲ್ಲಿಯನ್ನು ತನ್ನ ಒಂದೇ ಹೊಡೆತದಲ್ಲಿ ಕೊಂದರೆ ಅವನಿಗೆ ನೂರು ಪ್ರತಿಫಲವಿದೆ. ಒಂದನೇ ಏಟಿಗೆ ಸಾಯದೆ ಎರಡನೇ ಏಟಿಗೆ ಸತ್ತರೆ ಒಂದನೇ ಹೊಡೆತದಲ್ಲಿ ಕೊಂದದ್ದಕ್ಕೆ ಸಿಗುವ ಪ್ರತಿಫಲ ಸಿಗುವುದಿಲ್ಲವೆಂದೂ ಮೂರನೇ ಹೊಡೆತಕ್ಕೆ ಸತ್ತರೆ ಪ್ರತಿಫಲ ಮತ್ತೂ ಕಡಿಮೆ ಆಗುತ್ತದೆ"* ಎಂದು ಪ್ರವಾದಿ ಮುಹಮ್ಮದ್ (ಸ) ರು ಹೇಳಿದ ಹದೀಸನ್ನು ಇಮಾಮ್ ಮಸ್ಲಿಮ್ ಮತ್ತು ತಿರ್ಮದೀ ವರದಿ ಮಾಡಿದ್ದಾರೆ.
▪ಒಂದನೇ ಹೊಡೆತದಲ್ಲಿ ಸತ್ತರೂ ಎರಡನೆಯದರಲ್ಲಿ ಸತ್ತರೂ ಅಥವಾ ಮೂರನೇ ಹೊಡೆತದಲ್ಲಿ ಸತ್ತರೂ ಸಾಯುವುದರಲ್ಲಿ ವ್ಯತ್ಯಾಸ ಇಲ್ಲವಲ್ಲಾ... ? ಮತ್ಯಾಕೆ ಪ್ರವಾದಿ (ಸ) ರು ಒಂದನೇ ಹೊಡೆತದ ಪ್ರತಿಫಲ ಎರಡನೇ ಹೊಡೆತಕ್ಕೂ ಮತ್ತೆ ಮೂರನೇ ಹೊಡೆತಕ್ಕೂ ಸಿಗಲಾರದು ಎಂದು ಹೇಳಿದ್ದು ಎಂಬ ಸಂಶಯ ಕೆಲವರಿಗೆ ಬರಬಹುದು. ಪ್ರವಾದಿ(ಸ) ರು ಅವನ ಸ್ನಾಯುಬಲ ಅಥವಾ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಿಕ್ಕಾಗಿ ಹೇಳಿದ್ದಾ...? ಅಲ್ಲ.. ನಿಜವಾಗಿಯೂ ಅಲ್ಲ.... ಅದಕ್ಕೆ ಇಮಾಮ್ ಇಝ್ಝುದ್ದೀನ್ ಬಿನ್ ಅಬ್ದುಸ್ಸಲಾಮ್ ರವರಂತಹ ಮಹಾನ್ ಉಲಮಾಗಳು ಹೇಳುವ ಉತ್ತರವೇನೆಂದರೆ, *"ಇಸ್ಲಾಮ್ ಬಹಳ ನಿಯಮ ಸಂಹಿತೆಯಿರುವ ಒಂದು ಧರ್ಮ. ಬೆಳಗ್ಗೆ ಎದ್ದು ರಾತ್ರಿ ಮಲಗುವ ತನಕವೂ ನಂತರ ಮಲಗಿ ಪುನಾ ಬೆಳಗ್ಗೆ ಎದ್ದೇಳುವ ತನಕ ಮಾತ್ರವಲ್ಲ ನಿದ್ದೆ ಮಾಡುವ ಸಮಯದಲ್ಲೂ ಹೆಚ್ಚೇಕೆ ಅವನ ಎಲ್ಲಾ ಚಲನವಲನಗಳಲ್ಲೂ ಇಸ್ಲಾಮಿನ ನೀತಿ ನಿಯಮಗಳಿವೆ."* "ನೀವು ಒಂದು ಜೀವಿಗೆ ಚೂರಿ ಹಾಕುವುದಾದರೆ ಅಥವಾ ಕೊಲ್ಲುವುದಾದರೆ ಉತ್ತಮ ರೀತಿಯಲ್ಲಿ ಕೊಲ್ಲಿರಿ" ಎಂದು ಪ್ರವಾದಿ (ಸ) ಹೇಳಿದ್ದಾರೆ. ಅಂದರೆ ಯಾವ ಕಾರಣಕ್ಕೂ ಯಾವ ವಿಷ ಸರ್ಪವನ್ನಾದರೂ ಬೆಂಕಿಯಲ್ಲಿ ಸುಟ್ಟು ಅಥವಾ ಇನ್ಯಾವುದೇ ಚಿತ್ರಹಿಂಸೆ ಕೊಟ್ಟು ಕೊಲ್ಲುವುದನ್ನು ಇಸ್ಲಾಮ್ ವಿರೋಧಿಸಿದೆ. *ದ್ಸಬಹ್* ಮಾಡಲ್ಪಡುವ ಪ್ರಾಣಿಗೆ ಪ್ರಾಣಸಂಕಟ ಕಡಿಮೆಯಾಗಲು ದ್ಸಬಹಿಗೆ ಮೊದಲು ಸಿಹಿನೀರು ಕುಡಿಸಬೇಕೆಂದೂ ಒಳ್ಳೆಯ ಹರಿತವಾದ ಕತ್ತಿಯಿಂದ ಚೂರಿ ಹಾಕಬೇಕೆಂದೂ ಇಸ್ಲಾಮ್ ಆಜ್ಞಾಪಿಸುತ್ತದೆ. ಅಂತೆಯೇ ಇಲಿ, ಸರ್ಪ, ಚೇಳು ಮುಂತಾದ ತೊಂದರೆ ಕೊಡುವ ಜೀವಿಯಾದರೂ ಸಾಧ್ಯವಾದಷ್ಟು ಒಂದೇ ಹೊಡೆತದಲ್ಲಿ ಕೊಲ್ಲಲು ಪ್ರಯತ್ನಿಸಬೇಕು. ಹಲವಾರು ಬಾರಿ ಹೊಡೆದು ಪ್ರಾಣ ಸಂಕಟ ಜಾಸ್ತಿಯಾಗುವಂತೆ ಹಿಂಸಿಸಬಾರದು.
▪ ನೂರು ಹಲ್ಲಿಯನ್ನು ಕೊಲ್ಲುವುದು ಅಥವಾ ನೂರು ಗುಲಾಮರನ್ನು ವಿಮೋಚನೆ ಮಾಡುವುದು ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ನನ್ನಲ್ಲಿ ಹೇಳುವುದಾದರೆ *"ನಾನು ನೂರು ಹಲ್ಲಿಯನ್ನು ಕೊಲ್ಲುವುದಕ್ಕೆ ಆದ್ಯತೆ ಕೊಡುವೆನು. ಅದು ನನಗೆ ಇಷ್ಟ."* ಎಂದು ಹಿಜ್‌ರಾ ಒಂದನೇ ಶತಮಾನದ ಪ್ರಖ್ಯಾತ ಪಂಡಿತ ಅಲ್ಲಾಮಾ *"ಅಬೂ ಸುಲೈಮಾನ್ ಯಹ್ಯಾ ಬಿನ್ ಯಾಅ್‌ಮುರ್"* ರವರು ಹೇಳಿದ್ದಾರೆ.
▪ಹಲ್ಲಿಯ ನೀತಿಗೆಟ್ಟ ಕೆಲಸ ಎಷ್ಟರ ತನಕವಿದೆಯೆಂದರೆ ಬನೂ ಇಸ್ರಾಯೀಲರು ಪವಿತ್ರ ಬಯ್ತುಲ್ ಮುಖದ್ದಸನ್ನು (ಮಸ್‌ಜಿದುಲ್ ಅಖ್‌ಸಾ) ಬೆಂಕಿಗಾಹುತಿ ಮಾಡಿದಾಗ ಇದು ಅಲ್ಲಿಯೂ ಬೆಂಕಿಗೆ ಊದಿ ಸಹಾಯ ಮಾಡಿತ್ತೆಂದು ಬೀವಿ ಆಯಿಶಾ (ರ) ರಿಂದ ವರದಿಯಾದ ಹದಿಸಿನಲ್ಲಿದೆ.
▪ಹಲ್ಲಿಯು ಮೊಟ್ಟಯಿಡುವ ಒಂದು ಜೀವಿ. ಹಲ್ಲಿ ಬಾಯಿ ಹಾಕಿದ ಅಥವಾ ಹಲ್ಲಿ ಬಿದ್ದ ಆಹಾರವನ್ನು ಯಾವತ್ತೂ ಸೇವಿಸಬಾರದು. ಅದರಲ್ಲಿ ಅಪಾಯಕಾರಿ ವಿಷವಿದೆ. ಅದು ನಮ್ಮ ಮನೆಯಿಂದ ಹೊರಗಿರುವಾಗ ಸರ್ಪದಂತಹಾ ವಿಷ ಹಾವಿನಿಂದ ಪರಸ್ಪರ ಬಾಯಿ ಜೋಡಿಸಿ ವಿಷಹೀರಿ ಮನೆಯೊಳಗಿರುವ ನಮ್ಮ ಆಹಾರ ಪದಾರ್ಥಗಳಿರುವ ಪಾತ್ರೆಗೆ ಉಗುಳುತ್ತದೆ. ಇದನ್ನು ಉಪಯೋಗಿಸುವವರಿಗೆ ವಾಂತಿ ಭೇದಿ ಶುರುವಾಗುವುದಲ್ಲದೆ ಕೆಲವೊಮ್ಮೆ ಜೀವಕ್ಕೇ ಹಾನಿಯಾಗಬಹುದು. ಆದ್ದರಿಂದಲೇ ಯಾವಾಗಲೂ ಆಹಾರ ಪದಾರ್ಥಗಳನ್ನು ಮುಚ್ಚಿಡಬೇಕೆಂದು ಪ್ರವಾದಿ ಮುಹಮ್ಮದ್ (ಸ)ರು ಆಜ್ಞಾಪಿಸಿದ್ದಾರೆ.
▪ ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಹಲ್ಲಿ ಕಿವುಡ. ಅದಕ್ಕೆ ಕಿವಿ ಕೇಳುವುದಿಲ್ಲ. ಖಲೀಲುಲ್ಲಾಹಿ ಇಬ್ರಾಹೀಮ್(ಅ) ರನ್ನು ಹಾಕಲ್ಪಟ್ಟ ಬೆಂಕಿಗೆ ಊದಿದ ಕಾರಣದಿಂದ ಶಾಪವೆಂಬಂತೆ ಕಿವುಡನಾಯಿತೆಂದು ಉಲಮಾಗಳ ಅಭಿಪ್ರಾಯ. ಆದರೆ ಕಣ್ಣು ಕಾಣುತ್ತದೆ. ಸೊಳ್ಳೆ, ತಿಗಣೆ, ಇತ್ಯಾದಿ ಆಗಿರುತ್ತದೆ ಇದರ ಮುಖ್ಯ ಆಹಾರ.
▪ಒಂದು ಮನೆಯಲ್ಲಿ ಝಅಫರಾನ್ (ಕುಂಕುಮ) ನಿಂದ ಹೊಗೆ ಹಾಕಿ ಅಥವಾ ಎಲ್ಲಾ ಕೋಣೆಗಳಲ್ಲೂ ಸ್ವಲ್ಪ ಸ್ವಲ್ಪ ಝಅಫರಾನನ್ನು ಇಡುವುದಾದರೆ ಅದರ ಪರಿಮಳಕ್ಕೆ ಆ ಮನೆಗೆ ಎಂದೂ ಹಲ್ಲಿ ಬಾರದು.
▪ಚಳಿಗಾಲದಲ್ಲಿ ಇದರ ಉಪದ್ರವ ಇರುವುದಿಲ್ಲ. ಯಾಕೆಂದರೆ ಇದಕ್ಕೆ ಚಳಿಯನ್ನು ಸಹಿಸುವ ಶಕ್ತಿ ಇಲ್ಲ. ಆ ನಾಲ್ಕು ತಿಂಗಳಲ್ಲಿ ಇದು ತನ್ನ ಗೂಡಿನಲ್ಲಿ ಏನನ್ನೂ ತಿನ್ನದೆ ಉಪವಾಸ ಹಿಡಿದು ಹಾಗೆಯೇ ಇರುತ್ತದೆ. ಸುಬ್'ಹಾನಲ್ಲಾ.!! ಮತ್ತೆ ಚಳಿ ಕಡಿಮೆಯಾಗುವಾಗ ಹೊರ ಬರುತ್ತದೆ.
▪ ಹಲ್ಲಿ ಮತ್ತು ಹಲ್ಲಿ ಜಾತಿಗೆ ಸೇರಿದ ಹರಣೆ, ಓತಿ, ಮುಂತಾದ ಹೊಟ್ಟೆಯ
ಸಹಾಯದಿಂದ ಚಲಿಸುವ ಎಲ್ಲಾ ಜೀವಿಗಳ (ಉಡ ಹೊರತು ) ಮಾಂಸವನ್ನು ತಿನ್ನುವುದು ಇಸ್ಲಾಮಿನಲ್ಲಿ ನಿಷಿದ್ದ.
▪ಸಂಗ್ರಹ: ಇಮಾಮ್ ದುಮೈರಿಯವರ *ಹಯಾತುಲ್ ಹಯವಾನ್* ಮತ್ತು ಇಮಾಮ್ ಬಿನ್ ಹಜರ್ ಅಲ್ ಅಸ್‌ಖಲಾನಿಯವರ *ಅಲ್ ಇಸಾಬಾ ಫೀ ಮಅ್‌ರಿಫತಿ ಅಲ್ ಸಹಾಬಾ* ಎಂಬ ಗ್ರಂಥ.
Comments