Skip to main content

ದಾನ ಕೊಟ್ಟ ದರಿದ್ರ

ದಾನ ಕೊಟ್ಟ ದರಿದ್ರ

✍ ಗಫೂರ್ ಬಾಯಾರ್
〰〰〰〰〰〰〰

ಒಮ್ಮೆ ಮದೀನಾದ ಮಸ್ಜಿದನ್ನಬವಿಯಲ್ಲಿ ದೀನೀ ದಅ್‌ವಾ‌ ನಡೆಸುತ್ತಿದ್ದ ಅಲ್ಲಾಹನ ಹಬೀಬಾದ ನಬಿ‌ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺರು ತಮ್ಮ ಅನುಯಾಯಿಗಳಾದ ಸ್ವಹಾಬಿಗಳೊಂದಿಗೆ
"ಯಾ ಸ್ವಹಾಬಾ..."
ಬಡವರಿಗೆ ನೆರವಾಗಲು ನಾವು ಸ್ವದಕಾ ನೀಡಬೇಕಾಗಿದೆ ಅದಕ್ಕಾಗಿ ನೀವುಗಳು ನಿಮ್ಮ ಕೈಲಾಗುವ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಸೃಷ್ಟಿಕರ್ತನಾದ ಅಲ್ಲಾಹನಿಗಾಗಿ ಮತ್ತು ಅವನ ಹಬೀಬಾದ ನಬಿ ರಸೂಲ್ ಕರೀಂ ﷺರಿಗಾಗಿ ಮತ್ತು ಅಲ್ಲಾಹನ ದೀನಿಗಾಗಿ ತಮ್ಮಿಂದ ಯಾವ‌ ರೀತಿಯಲ್ಲೆಲ್ಲ ನೆರವಾಗಬಹುದು ಎಂದು ಚಿಂತಿಸುತ್ತಾ ಅದಕ್ಕಾಗಿ ಕಾತರದಿಂದ ಕಾಯುತ್ತಿದ್ದ ನಕ್ಷತ್ರ ಸಮಾನರಾದ ಆ ಸ್ವಹಾಬಿಯರಲ್ಲಿ ಅಲ್ಲಾಹನ ರಸೂಲ್ ಕರೀಂ ﷺರು ಮನವಿ ಮಾಡಿದಾಗ ಆ‌ ಸ್ವಹಾಬಾಗಳ ಉತ್ಸಾಹ ಕೇಳಬೇಕೆ?

ಉತ್ಸಾಹದ ಚಿಲುಮೆಯಂತೆ ತಮ್ಮ ನಿವಾಸದತ್ತ ದೌಡಾಯಿಸಿದ ಆ ಸ್ವಹಾಬಾಗಳು ತಮ್ಮ ಮನೆಯಲ್ಲಿ ಏನೇನಿದೆಯೋ ಅವೆಲ್ಲವನ್ನೂ ತಂದು ಅಲ್ಲಾಹನ ರಸೂಲ್ ಕರೀಂ ﷺರ ಮುಂದೆ ಸಮರ್ಪಿಸಿದರು.

ಆ ಪೈಕಿ ಹಲವು ಸ್ವಹಾಬಿವರ್ಯರು ಹಣವನ್ನು ತಂದು ಕೊಟ್ಟರು. ಮತ್ತೆ ಕೆಲ ಸ್ವಹಾಬಾಗಳು ಖರ್ಜೂರ, ಗೋಧಿ ಮತ್ತಿತರ ಆಹಾರ ವಸ್ತುಗಳನ್ನು ತಂದು ಸಮರ್ಪಿಸಿದರು. ಹಣವಾಗಲಿ ಆಹಾರವಾಗಲೀ ಯಾವುದೂ ಮನೆಯಲ್ಲಿಲ್ಲದ ಸ್ವಹಾಬಾಗಳು ತಮ್ಮ ಮನೆಯಲ್ಲಿ ತಾವು ಉಪಯೋಗಿಸುತ್ತಿದ್ದ ಚಾಪೆ, ಹಾಸಿಗೆ, ತಲೆದಿಂಬು ಮತ್ತು ಪಾತ್ರೆಗಳನ್ನೇ ತಂದು ಅಲ್ಲಾಹನ ರಸೂಲ್ ಕರೀಂ ﷺರ ಮುಂದೆ ಸಮರ್ಪಿಸಿದರು.

ಆದರೆ ಎಡಗೈ ಮತ್ತು ಎರಡು ಕಾಲುಗಳೂ ಇಲ್ಲದ ಇಬ್ನು ಮುಖಯಿಲ್ (ರ) ಎಂಬ ಸ್ವಹಾಬಿವರ್ಯರು ಮಸೀದಿಗೆ ಬರಲಾಗದ ಕಾರಣ ತಮ್ಮ ಮನೆಯಂಗಳದಲ್ಲಿ ಕುಳಿತಿದ್ದರು. ಆಗ ಮಸೀದಿಯತ್ತ ವಸ್ತುಗಳೊಂದಿಗೆ ದೌಡಾಯಿಸುತ್ತಿರುವ ಸ್ವಹಾಬಾಗಳನ್ನು ತಡೆದು ನೀವೆಲ್ಲರೂ ಇದನ್ನು ಎಲ್ಲಿಗೆ ಒಯ್ಯುತ್ತಿದ್ದೀರಿ? ಎಂದು ಕೇಳಿದರು.

ಓರ್ವ ಸ್ವಹಾಬಿವರ್ಯರು‌ ಅಲ್ಲಾಹನ ರಸೂಲ್ ಕರೀಂ ﷺರವರು ದಾನ (ಸ್ವದಖಾ) ಕೊಡಲು ಮನವಿ ಮಾಡಿದ್ದಾರೆ ಹಾಗಾಗಿ ಇದನ್ನು ಸ್ವದಖಾ ನೀಡಲು ನಾವು ಒಯ್ಯುತ್ತಿದ್ದೇವೆ ಎಂದರು.

ಇದನ್ನು ಕೇಳಿದ ಇಬ್ನು ಮುಖಯಿಲ್ (ರ) ರವರ ಮುಖವೊಮ್ಮೆ ಸಂತಸದಿಂದ ಅರಳಿತಾದರೂ ತಕ್ಷಣವೇ ಸಂಕಟದಿಂದ ಬಾಡಿತು. ಕಾರಣ ಸ್ವರ್ಗದ ಚಿತ್ರವನ್ನು ಕಾಣುತ್ತಲೇ ಮರಣ ಹೊಂದಲಿರುವ ಸೌಭಾಗ್ಯ ಇದಾದರೂ ಸ್ವದಖಾ ನೀಡಲು ತನ್ನಲ್ಲಿ ಏನೂ ಇಲ್ಲವಲ್ಲ ಎಂದು ಕ್ಷಣಕಾಲ ಮರುಗಿದರಾದರೂ ತಕ್ಷಣವೇ ಅಲ್ಲಿಂದ ತೆವಳುತ್ತ ಹೊರಟ ಸಯ್ಯದುನಾ ಇಬ್ನು ಮುಖಯೀಲ್ (ರ‌) ರವರು ನೆರೆಯ ಯಹೂದಿಯೊಬ್ಬರ ಮನೆಗೆ ತೆರಳಿ ದಯವಿಟ್ಟು ನನಗೇನಾದರೂ ಒಂದು ಕೆಲಸ ಕೊಡುವಿರಾ? ಎಂದು ಕೇಳಿದರು.

ಆಗ ಆ ಯಹೂದಿಯು ಅಂಗವಿಕಲರಾದ ತಾವು ಏನು ಕೆಲಸ ಮಾಡಲು ಸಾಧ್ಯ? ಎಂದು ಕೇಳಿದಾಗ ಎಡಗೈ ಮತ್ತು ಎರಡೂ ಕಾಲುಗಳಿಲ್ಲದ ಇಬ್ನು ಮುಖಯಿಲ್ (ರ) ಹೇಳಿದರು ನಾನು ಈ ಖರ್ಜೂರದ ಮರಗಳಿಗೆ  ನೀರು ನೀರುಣಿಸಬಲ್ಲೆ ಎಂದರು.

ಇಬ್ನು ಮುಖಯಿಲ್ (ರ)ರವರ ಮಾತಿನಲ್ಲಿದ್ದ ಉತ್ಸಾಹ ಮತ್ತು ಮುಖದಲ್ಲಿ ಪ್ರಕಟವಾಗುತ್ತಿರುವ ಆಸಕ್ತಿಯನ್ನು ಗಮನಿಸಿದ ಆ ಯಹೂದಿಯು ಸಮ್ಮತಿಸಿ ಒಂದು ಹಗ್ಗ ಮತ್ತು ಒಂದು ಚರ್ಮದ ಪಾತ್ರೆಯನ್ನು ಕೊಟ್ಟನು.

ಯಹೂದಿಯಿಂದ ಹಗ್ಗ ಮತ್ತು ಚರ್ಮದ ಪಾತ್ರೆಯನ್ನು ಪಡೆದ ಇಬ್ನು ಮುಖಯಿಲ್ (ರ)ರವರು ತೆವಳುತ್ತಾ ಬಾವಿಯತ್ತ ತೆರಳಿ ಹಗ್ಗದಿಂದ ಚರ್ಮದ ಪಾತ್ರೆಯನ್ನು ಬಾವಿಗಿಳಿಸಿ ಬಲಗೈಯಿಂದ ಹಗ್ಗವನ್ನು ಎಳೆದು ತಮ್ಮ ಹಲ್ಲಿನಿಂದ ಕಚ್ಚಿ ಹಿಡಿಯುತ್ತಾ ನೀರೆಳೆದು ಖರ್ಜೂರದ ಮರಗಳಿಗೆ ನೀರುಣಿಸಲಾರಂಭಿಸಿದರು.

ಹೊತ್ತು ಸರಿಯಿತು. ಇಬ್ನು ಮುಖಯೀಲ್ (ರ) ಏನು ಮಾಡುತ್ತಿದ್ದಾರೆಂದು ನೋಡುವ ಸಲುವಾಗಿ ಬಾವಿಯ ಹತ್ತಿರ ಬಂದ ಯಹೂದಿಗೆ ಬಾವಿಯ ಸಮೀಪದಲ್ಲೆಲ್ಲೂ ಇಬ್ನು ಮುಖಯೀಲ್ (ರ)ರನ್ನು ಕಾಣಿಸಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ನೀರೆಳೆಯುವ ಹಗ್ಗ ರಕ್ತಮಯವಾಗಿರುವುದು ಕಾಣಿಸಿತು. ಇದನ್ನು ಕಂಡು ಗಾಬರಿಯಾದ ಯಹೂದಿಯು ಬಾವಿಯೊಳಗೆ ಇಣುಕಿ ನೋಡಿದನು ಆದರೆ ಬಾವಿಗೆ ಬಿದ್ದಿರುವ ಸೂಚನೆ ಕಾಣದಿದ್ದಾಗ ಇಬ್ನು ಮುಖಯೀಲ್.... ಇಬ್ನು ಮುಖಯೀಲ್.... ಎಂದು ಕೂಗುತ್ತಾ ತೋಟದ ತುಂಬಾ ಹುಡುಕಾಡಲಾರಂಭಿಸಿದನು.

ಕೊನೆಗೊಂದು ಮರದ ಕೆಳಗೆ ಕುಳಿತು ವಿಶ್ರಮಿಸುತ್ತಿರುವ ಇಬ್ನು ಮುಖಯೀಲ್ (ರ)ರನ್ನು ಕಂಡು ಅವರತ್ತ ಹೋದನು.

ಇಬ್ನು ಮುಖಯೀಲ್ (ರ)ರವರ ಕೈ ಮತ್ತು ಬಾಯಿಯಿಂದ ರಕ್ತವು ತೊಟ್ಟಿಕ್ಕುತ್ತಿತ್ತು. ಇದನ್ನು ಕಂಡ ಯಹೂದಿಯು ಯಾ ಇಬ್ನು ಮುಖಯೀಲ್ (ರ)... ನಿಮಗೆ ಹಣದ ಅವಶ್ಯಕತೆ ಇದ್ದರೆ ನನ್ನಲ್ಲಿ ನೇರವಾಗಿ ಹೇಳಬಹುದಿತ್ತಲ್ಲವೇ ಅಂಗವಿಕಲರಾದ ತಾವು ಈ ರೀತಿ ಕಷ್ಟಪಡಬೇಕಿತ್ತೇ ಎಂದು ಕೇಳಿದನು ಮರುಕದಿಂದ.

ಆಗ ಇಬ್ನು ಮುಖಯೀಲ್ (ರ) ಹೇಳಿದರು,

ಧಣಿಗಳೇ... ನನ್ನ ಸರ್ವಸ್ವಕ್ಕಿಂತಲೂ ಮಿಗಿಲಾಗಿ ನಾನು ಪ್ರೀತಿಸುವ ನನ್ನ ಪ್ರವಾದಿ ಪೈಗಂಬರ್ ﷺರವರು ಬಡವರಿಗೆ ನೆರವಾಗಲು ದಾನ ಕೇಳಿದ್ದಾರೆ ಹಾಗಾಗಿ ನಾನು ಸಹ ಏನನ್ನಾದರೂ ಸ್ವದಖಾ ನೀಡಬೇಕೆಂದು ನನಗನಿಸಿತು. ಆದರೆ ಆ ಹಣವು ನಾನು ಬೆವರು ಹರಿಸಿ ದುಡಿದ ಹಣವಾಗಿರಬೇಕೆಂಬ ಕಾರಣದಿಂದ ತಮ್ಮಲ್ಲಿ ನಾನು ಕೆಲಸ ಕೇಳಬೇಕಾಯಿತು ಎಂದರು. ಇದನ್ನು ಕೇಳಿದ ಯಹೂದಿಯು ಮನದಲ್ಲೇ ಅವರನ್ನು ಅಭಿನಂದಿಸುತ್ತಾ ನಾಲ್ಕು ದೀನಾರ್ ಕೊಟ್ಟು ಕಳುಹಿಸಿದನು.

ಆ ಹಣವನ್ನು ಪಡೆದ ಇಬ್ನು ಮುಖಯೀಲ್ (ರ) ತುಂಬು ಸಂತಸದಿಂದ ಅಲ್ಲಾಹನ ರಸೂಲ್ﷺರ ಕೈಗೊಪ್ಪಿಸುವ ತವಕದಿಂದ ಮಸ್ಜಿದುನ್ನಬವಿಯತ್ತ ತೆವಳುತ್ತಾ ಸಾಗಿದರು.

ಮಸ್ಜಿದುನ್ನಬವಿಯನ್ನು ತಲುಪುತ್ತಿದ್ದಂತೆ ಇಬ್ನು ಮುಖಯೀಲ್ (ರ)ರನ್ನು ಕಂಡ ಅಲ್ಲಾಹನ ಹಬೀಬಾದ ನಬಿ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺರವರು ಯಾ,‌ ಇಬ್ನು ಮುಖಯೀಲ್ (ರ) ಏಕೆ ತಮ್ಮ ಮೈಮೇಲೆ ಗಾಯಗಳಾಗಿವೆ? ಏನಾಯಿತು? ಯಾರಾದರೂ ಮರ್ದಿಸಿದರೇ? ಎಂದು ಕೇಳಿದರು.

ಆಗ ಇಬ್ನು ಮುಖಯೀಲ್ (ರ) ಹೇಳಿದರು, ಇಲ್ಲ ಯಾ ರಸೂಲಲ್ಲಾಹ್ ﷺ. ನನ್ನನ್ನು ಯಾರೂ ನೋಯಿಸಲಿಲ್ಲ. ನಾನು ಕೆಲಸ ಮಾಡುವಾಗ ಮೈ ಮೇಲೆ ತುಸು ಗಾಯವಾಯಿತು ಅಷ್ಟೇ ಎಂದರು.

ಆಗ ಪ್ರವಾದಿ ﷺ ಕೇಳಿದರು... ಏಕೆ ತಾವು ಇಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಿರುವಿರಿ?

ಯಾ‌ ರಸೂಲಲ್ಲಾಹ್... ﷺِ ತಾವು ಸ್ವದಖಾ ಕೇಳಿದಿರಿ ಎಂಬ ವಿಷಯ ತಿಳಿಯಿತು. ಮರಣಾಸನ್ನ ವೇಳೆಯಲ್ಲಿ ಸ್ವರ್ಗದ ಚಿತ್ರ ಕಾಣುತ್ತಲೇ ಮರಣ ಹೊಂದಬೇಕು ಹಾಗೂ ಖಬರಿನ ಬದುಕನ್ನು ಸ್ವರ್ಗದ ಹಾಸಿಗೆಯಲ್ಲಿ ಮಲಗಿ ವಿಶ್ರಮಿತ್ತಾ ಕಳೆಯಬೇಕೆಂಬ ಆಕಾಂಕ್ಷೆಯಿಂದ ಪರಿತಪಿಸುತ್ತಿರುವ ನಾನೂ ಸಹ ಏನಾದರೂ ಸ್ವದಖಾ ನೀಡಿ ಆ ಭಾಗ್ಯವನ್ನು ದಕ್ಕಿಸಿಕೊಳ್ಳಬೇಕೆಂಬ ಅತಿಯಾದ ಆಕಾಂಕ್ಷೆಯಿಂದ ಯಹೂದಿಯೊಬ್ಬನ ತೋಟಕ್ಕೆ ನೀರುಣಿಸುವಾಗ ನನ್ನ ಕೈ ಮತ್ತು ಬಾಯಿಗೆ ಗಾಯಗಳಾಯಿತು ಅಷ್ಟೇ ಎಂದರು.

ಇದನ್ನು ಕೇಳಿದ ಮುತ್ತು ನಬಿ ﷺ  ರವರು ಇಬ್ನು ಮುಖಯೀಲ್ (ರ)ರನ್ನು ಅಪ್ಪಿ ಹಿಡಿದು ಬೆನ್ನು ತಟ್ಟಿ ಸಂತೈಸುತ್ತಾ ಬಿಕ್ಕಿ ಬಿಕ್ಕಿ ಅಳಲಾರಂಭಿಸಿದರು.

*ಗೆಳೆಯರೇ... ಯಾವ ಕ್ಷಣದಲ್ಲಿ ಬೇಕಿದ್ದರೂ ಕೊನೆಯಾಗಬಹುದಾದ ನಶ್ವರವಾದ ಈ ಲೋಕದ ಕ್ಷಣಿಕ ಸುಖದ ಗುಂಗಿನಲ್ಲಿ ಮೈಮರೆತು ಸಾಕಷ್ಟು ಸಂಪತ್ತಿದ್ದರೂ ಸಹ ನಯಾ ಪೈಸೆಯನ್ನೂ ಅಲ್ಲಾಹನ ದೀನಿಗಾಗಿ ವ್ಯಯಿಸದೆ ಇನ್ನಷ್ಟು ಸಂಪಾದಿಸಿ ಕೂಡಿಡಲು ಹೆಣಗಾಡುವ ಅದೆಷ್ಟೋ ಮಂದಿ ಈಗಲೂ ಸಹ ನಮ್ಮ ನಡುವೆ ಇದ್ದಾರೆನ್ನುವುದು ಖೇದಕರ.*

_ಸೃಷ್ಟಿಕರ್ತನಾದ ಅಲ್ಲಾಹನ ರಸೂಲ್ ﷺರ ಅನುಯಾಯಿಗಳೂ, ನಕ್ಷತ್ರ ಸಮಾನರೂ ಆದ ಸ್ವಹಾಬಾಗಳೆಂಬ ಸರಿಸಾಟಿ ಇಲ್ಲದ ಅಮರ ಚೇತನಗಳ ಬದುಕು ಈ ರೀತಿಯಾಗಿತ್ತು ಎಂಬುದನ್ನು ನಾವೆಲ್ಲರೂ ಮನಗಾಣುವುದರೊಂದಿಗೆ ಅಲ್ಲಾಹನ ದೀನಿಗಾಗಿ ತಮ್ಮ ಸರ್ವಸ್ವವನ್ನು ಸಮರ್ಪಿಸಿ ಇತಿಹಾಸದ ಪುಟಗಳಲ್ಲಿ ಚಿರಂತನವಾಗಿ ಚಿರನೂತನವಾಗಿ ಚಿರಶಾಶ್ವತವಾಗಿ ಚಿರಸ್ಥಾಯಿಯಾದ ಆ ಅಮರ ಚೇತನಗಳ ಬದುಕನ್ನು ಅನುಸರಿಸುವುದರೊಂದಿಗೆ ಆ ಸ್ವಹಾಬಾಗಳು ಸಾಧಿಸಿ ತೋರಿಸಿದ ಆ ಹಾದಿಯಲ್ಲಿ ಅಚಂಚಲವಾದ ಮನಸ್ಸು ಮತ್ತು ತಖ್ವಾದೊಂದಿಗೆ ಮುನ್ನಡೆಯಬೇಕಾದುದು ಅನಿವಾರ್ಯ._

*"ಸರ್ವಶಕ್ತನಾದ ಅಲ್ಲಾಹನು ತನ್ನ ಔದಾರ್ಯದಿಂದಲೂ, ಮತ್ತು ಅವನ ಹಬೀಬಾದ ನಬಿ ಸಯ್ಯದುನಾ ಮುತ್ತು ಮುಹಮ್ಮದ್ ಮುಸ್ತಫಾ ﷺರ ಹಕ್ಕ್‌ಜಾಹ್ ಬರ್ಕತ್‌ನಿಂದಲೂ  ಸ್ವಹಾಬಾಗಳ ಬರ್ಕತ್‌ನಿಂದಲೂ ನಮ್ಮೆಲ್ಲರನ್ನೂ ಜನ್ನಾತುಲ್ ಫಿರ್ದೌಸೆಂಬ ಸ್ವರ್ಗದಲ್ಲಿ ಒಂದುಗೂಡಿಸಲಿ  ಆಮೀನ್*
💖💖💖💖💖💖💖💖

Comments

Popular posts from this blog

ಗ್ರಹಣ ನಮಾಜಿನ ರೂಪ

ಗ್ರಹಣ ನಮಾಜಿನ ರೂಪ *ಚಂದ್ರಗ್ರಹಣದ ಸುನ್ನತ್ ನಮಾಜು ಎರಡು ರಕಅತ್ ಅಲ್ಲಾಹನಿಗಾಗಿ ಜಮಾಅತ್ತಾಗಿ ನಾನು ನಿರ್ವಹಿಸುವೆನು* ಎಂದು ನಿಯ್ಯತ್ ಮಾಡಿ ಅಲ್ಲಾಹು ಅಕ್ಬರ್ ಎಂದು ಹೇಳಿ ನಮಾಜಿಗೆ ಪ್ರವೇಶಿಸುವು...

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ.

ಮುತ್ತು ನೆಬಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಂ. ಲೇ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಅಕ್ಕರೆಕೆರೆ. ಆಮಿನ ಬೀವಿ ರ.ಅ ಗರ್ಭಿಣಿಯಾಗಿರುವಾಗ ವ್ಯಾಪಾರಕ್ಕಾಗಿ ಸಿರಿಯಾಕ್ಕೆ ಹೋಗಿದ್ದ ಅಬ್ದುಲ್ಲಾಹ್ (ರ.ಅ) ಮರಳಿ ಬರುವಾಗ ಮದೀನದಲ್ಲಿ ವಫಾತಾದರು.ತಂದೆಯ ಮಾವಂದಿರರಾದ ಬನುನ್ನಜ್ಜಾರ್ ಗೋತ್ರದವರ ಬಳಿ ದಫನ ಮಾಡಲಾಯಿತು.ರಬೀವುಲ್ ಹನ್ನೆರಡು ಸೋಮವಾರ ಸುಬಹಿಯ ಸ್ವಲ್ಪ ಮುಂಚೆ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫ ಸ.ಅ ಮಕ್ಕಾದಲ್ಲಿ ಜನಿಸಿದರು.ಅಂದು ಕ್ರಿಸ್ತಶಕ 571 ಎಪ್ರಿಲ್ 21 ಆಗಿತ್ತು.ನೆಬಿ ಸ.ಅ ಜನಿಸಿದ ದಿನ ಅತ್ಯಂತ ಸಂತೋಷದಾಯಕವಾದ ದಿನವಾಗಿದೆ.ಮಾನವ ಶ್ರೇಷ್ಠರಾದ ಪ್ರವಾದಿ ಮುಹಮ್ಮದ್ ಸ.ಅ ರವರ ಮುಖಾಂತರ ಮಾನವ ಸಮೂಹವನ್ನು ಅಲ್ಲಾಹು ಅನುಗ್ರಹಿಸಿದ ಸುದಿನವಾಗಿದೆ ಅಂದು.ಮುಸಲ್ಮಾನರು ಈ ಅನುಗ್ರಹಕ್ಕೆ ಕ್ರತಜ್ಞತೆ ಸಲ್ಲಿಸಿ ಅಂದು ಮೀಲಾದುನ್ನಬಿ ಆಚರಣೆ ಮಾಡುತ್ತಾರೆ.ನೆಬಿ ಸ.ಅ ರವರ ಮದಹ್ ಕೀರ್ತನೆಗಳನ್ನು ಹೇಳಿ, ಹಾಡಿಹೊಗಳಿ ದಾನಧರ್ಮಗಳನ್ನು ನೀಡಿ ಸಂತೋಷ ಪ್ರಕಟಿಸುತ್ತಾರೆ.              ಭೂಮಿಯ ಮೇಲೆ ಜನ್ಮವೆತ್ತಿ ಬಂದ ಅತ್ಯಂತ ಉತ್ತಮನಾದ ಮನುಷ್ಯ ನೆಬಿ ಸ.ಅ ಆಗಿದ್ದಾರೆ.ಮುಂಜಿಕರ್ಮ ನಿರ್ವಹಿಸಲ್ಪಟ್ಟ,ಹೊಕ್ಕುಳ ಬಳ್ಳಿ ಕತ್ತರಿಸಲ್ಪಟ್ಟ,ಕಣ್ಣಿಗೆ ಸುರುಮ ಹಾಕಲ್ಪಟ್ಟ ಸ್ಥಿತಿಯಲ್ಲಿ ಸಂಪೂರ್ಣ ಸಂಶುದ್ಧವಾದ ರೀತಿಯಲ್ಲಾಗಿದೆ ಅವರು ಜನಿಸಿದ್ದು.ಅಬೂತಾಲಿಬರ ಮನೆಯಲ್ಲಾಗಿದೆ ಜನನ.ಹೆರಿಗೆ...

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ _✍🏻ಜಹಫರ್ ಸಾಧಿಕ್ ಕಟ್ಟದಪಡ್ಪು_ _ನಮ್ಮ ಸಮಾಜವು ನಮಗೆ ಜನ್ಮ ಕೊಟ್ಟ ತಂದೆ ತಾಯಿಯ ನಂತರ ಮಹತ್ತರವಾದ ಸ್ಥಾನವನ್ನು ಶಿಕ್ಷಕರಿಗೆ ನೀಡಿ ಗೌರವಿಸಿದೆ.  ಶಿಲ್ಪಿ...